Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಐದು ಕೋಟಿ ಬಡ ಬಾಂಗ್ಲಾದೇಶಿಯರ ಬಂಧು ಸರ್ಕಾರದ ಕಣ್ಣಿಗೆ ಮಾತ್ರ ಶತ್ರುವಾಗಿ ಕಾಣುತ್ತಿದ್ದಾರೆಯೇ?

ಐದು ಕೋಟಿ ಬಡ ಬಾಂಗ್ಲಾದೇಶಿಯರ ಬಂಧು ಸರ್ಕಾರದ ಕಣ್ಣಿಗೆ ಮಾತ್ರ ಶತ್ರುವಾಗಿ ಕಾಣುತ್ತಿದ್ದಾರೆಯೇ?

1. ನೊಬೆಲ್ ಪುರಸ್ಕಾರ

2. ಅಮೆರಿಕ ಅಧ್ಯಕ್ಷರ ಪದಕ

3. ಅಮೆರಿಕ ಕಾಂಗ್ರೆಸ್ಸಿನ (ಸಂಸತ್ತಿನ) ಪದಕ

ಈ ಮೂರೂ ಪ್ರತಿಷ್ಠಿತ ಪುರಸ್ಕಾರಗಳನ್ನು ಇದುವರೆಗೂ ಪಡೆದವರು ಇಬ್ಬರು ಮಾತ್ರ! ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಬಾಂಗ್ಲಾದೇಶದ ಪ್ರತಿಷ್ಠಿತ ಗ್ರಾಮೀಣ ಬ್ಯಾಂಕಿನ ಸ್ಥಾಪಕ ಹಾಗೂ ಕಿರು ಸಾಲಗಳ ಹರಿಕಾರ ಡಾ. ಮಹಮ್ಮದ್ ಯೂನಸ್! ಈ ಒಂದು ಅಂಶವೇ ಸಾಕು, ಡಾ. ಯೂನಸ್ ಅವರ ಯೋಗ್ಯಾಯೋಗ್ಯತೆಯನ್ನು ಜಗತ್ತಿಗೆ ಪರಿಚಯಿಸಲು. ಅವರು 1983ರಲ್ಲಿ ಆರಂಭಿಸಿದ ಗ್ರಾಮೀಣ ಬ್ಯಾಂಕಿನ ಸಾಲ ನೀಡಿಕೆ ಕಾರ್ಯಕ್ರಮ ಇವತ್ತು ಜಾಗತಿಕ ಚಳವಳಿಯಾಗಿ ಮಾರ್ಪಟ್ಟಿದೆ. ಅದರ ವಿವಿಧ ರೂಪಗಳು ಇಂದು 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚಾಲ್ತಿಗೆ ಬಂದಿವೆ. ಅತಿ ಕಡಿಮೆಯೆಂದರೆ ಸಾವಿರ, ಸಾವಿರದ ಐನೂರು ರೂಪಾಯಿಯಿಂದ ಆರಂಭವಾಗುವ ಸಾಲದ ಸಹಾಯದಿಂದ ಸುಮಾರು ಐದು ಕೋಟಿ ಬಾಂಗ್ಲಾದೇಶಿಯರು ಇಂದು ಬಡತನದ ಬೇಗೆಯಿಂದ ಹೊರಬಂದಿದ್ದಾರೆ.

ಡಾ. ಮಹಮ್ಮದ್ ಯೂನಸ್ ಜನಿಸಿದ್ದು ಜೂನ್  28, 1940ರಂದು, ಅಂದಿನ ಪೂರ್ವ ಬಂಗಾಳದ ಭಾಗವಾಗಿದ್ದ ಚಿತ್ತಗಾಂಗ್‌ನ ‘ಬಥುವಾ’ ಎನ್ನುವ ಹಳ್ಳಿಯಲ್ಲಿ. 14 ಜನ ಮಕ್ಕಳಲ್ಲಿ ಯೂನಸ್ ಮೂರನೆಯವರು. ಅಕ್ಕಸಾಲಿಗರಾಗಿದ್ದ ಯೂನಸ್‌ರ ತಂದೆ, ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿದವರು. ಆದರೆ ಯೂನಸ್‌ರ ಜೀವನದ ಮೇಲೆ ಅಗಾಧ ಪರಿಣಾಮ ಬೀರಿದ್ದು ಅವರ ತಾಯಿ ಸೂಫಿಯಾ ಖಾತುನ್. ಮನೆ ಬಾಗಿಲಿಗೆ ಬಂದ ಯಾವ ಬಡವರನ್ನೂ ಆಕೆ ಬರಿಗೈಯಲ್ಲಿ ಕಳುಹಿಸಿದ್ದನ್ನು ಯೂನಸ್ ನೋಡಿರಲಿಲ್ಲ. ತಾಯಿಯಲ್ಲಿದ್ದ ಈ ವಿಶಾಲ ಗುಣವೇ ಮಗನಲ್ಲೂ ಭದ್ರವಾಗಿ ಬೇರೂರಿತು. ಬಡತನವನ್ನು ನಿರ್ಮೂಲನೆ ಮಾಡಬೇಕು ಎಂಬ ಯೂನಸ್‌ರ ಕನಸಿಗೆ ಇದೇ ಗುಣ ಛಲದ ರೂಪ ಕೊಟ್ಟಿತು. ಬಾಲ್ಯವನ್ನು ಅದೇ ಹಳ್ಳಿಯಲ್ಲಿ ಕಳೆದ ಯೂನಸ್, 1947ರಲ್ಲಿ ತಮ್ಮ ಕುಟುಂಬದೊಂದಿಗೆ ಚಿತ್ತಗಾಂಗ್‌ನತ್ತ ಹೆಜ್ಜೆಯಿಟ್ಟರು.

1974. ದೊಡ್ಡ ಕನಸು ಹೊತ್ತು ನಗರಕ್ಕೆ ಬಂದಿದ್ದ ಆ ಹುಡುಗ, ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞನಾಗಿದ್ದ. ಹೀಗೊಂದು ದಿನ ತಮ್ಮ ವಿದ್ಯಾರ್ಥಿಗಳೊಂದಿಗೆ ರೋಬ್ರಾ ಎನ್ನುವ ಸನಿಹದ ಹಳ್ಳಿಗೆ ಅಧ್ಯಯನ ಪ್ರವಾಸಕ್ಕೆ ಹೋದಾಗ ಪ್ರೊ. ಯೂನಸ್‌ರ ದೃಷ್ಟಿಗೆ ‘ಬಿದಿರಿನ ಸ್ಟೂಲ್‌’ (ಕಾಲುಮಣೆ) ಹೆಣೆಯುತ್ತಾ ಕುಳಿತಿದ್ದ ವೃದ್ಧೆಯೊಬ್ಬಳು ಕಂಡಳು. ಆ ವೃದ್ಧೆ, ಒಂದು ಸ್ಟೂಲ್‌ಗೆ ಬೇಕಾಗುವ ಕಚ್ಚಾ ಬಿದಿರಿಗೆ 15ಪೈಸೆ(ಬಾಂಗ್ಲಾದೇಶಿ) ಸಾಲ ಪಡೆದು, ನಂತರ ಮಧ್ಯವರ್ತಿಗಳಿಗೂ ಹಣ ಕೊಟ್ಟು, ಕೊನೆಗೆ ಮಾರಾಟವಾದ ನಂತರ ತನ್ನ ಕೈಗೆ ಸಿಗುವ ಹಣ ಬಹಳ ಕಡಿಮೆ ಎಂದು ಅವರ ಮುಂದೆ ಅಳಲು ತೋಡಿಕೊಂಡಳು. ಅದು ಆಕೆಯೊಬ್ಬಳದ್ದೇ ಕಥೆಯಲ್ಲ ಎನ್ನುವುದು ಯೂನಸ್‌ರಿಗೆ ಸ್ವಲ್ಪ ಹೊತ್ತಿನಲ್ಲೇ ಅರಿವಾಯಿತು. ಬಿದಿರು ಸ್ಟೂಲ್ ಹೆಣೆಯುವ ಆ ಊರಿನ ಹೆಣ್ಣುಮಕ್ಕಳೆಲ್ಲರೂ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆದು, ಕೊನೆಗೆ ತಮ್ಮ ಕೈಗೆ ಬಂದ ಹಣವನ್ನೆಲ್ಲ ಸಾಲ ಕೊಟ್ಟವನಿಗೇ ಹಿಂದಿರುಗಿಸುತ್ತಿದ್ದರು! ಸಾಂಪ್ರದಾಯಿಕ ಬ್ಯಾಂಕ್‌ಗಳಂತೂ ಸಾಲದ ಕಂತು ತಪ್ಪಿಸುತ್ತಾರೆ ಎನ್ನುವ ಕಾರಣಕ್ಕೆ ಇಂಥವರಿಗೆ ಕಿರುಸಾಲ ಕೊಡಲು ಹಿಂದೇಟು ಹಾಕುತ್ತಿದ್ದವು.

ಇದನ್ನೆಲ್ಲ ನೋಡಿದ ಮೇಲೆ, ತಾವು ಕಲಿಸುವ ಅರ್ಥಶಾಸ್ತ್ರದಲ್ಲಿ ಏನೋ ದೊಡ್ಡ ಲೋಪವಿದೆ ಎಂದು ಯೂನಸ್‌ರಿಗೆ ಅನಿಸತೊಡಗಿತು! ಅವಕಾಶ ದೊರೆತರೆ ಖಂಡಿತವಾಗಿಯೂ ಬಡವರು ಸಾಲ ಹಿಂದಿರುಗಿಸುತ್ತಾರೆ ಎನ್ನುವ ಭರವಸೆಯಿಂದ ಕೂಡಲೇ ಅವರು ಆ ಹಳ್ಳಿಯ 42 ಹೆಂಗಸರಿಗೆ ತಮ್ಮ ಜೇಬಿನಿಂದಲೇ ಸಾಲ ಕೊಟ್ಟರು. ಅವರ ಭರವಸೆ ನಿಜವಾಯಿತು ಕೂಡ!

ನಂತರದ ದಿನಗಳಲ್ಲಿ ಬ್ಯಾಂಕ್‌ಗಳು ಮತ್ತು ಸರ್ಕಾರದ ಎಚ್ಚರಿಕೆಯನ್ನು ಧಿಕ್ಕರಿಸಿದ ಯೂನಸ್ ಬಡವರಿಗೆ ಕಿರುಸಾಲ ಕೊಡಲು ಶುರುಮಾಡಿದರು. 1983ರಲ್ಲಿ ನಂಬಿಕೆ ಹಾಗೂ ಒಗ್ಗಟ್ಟಿನ ತತ್ವದ ಮೇಲೆ “ಗ್ರಾಮೀಣ ಬ್ಯಾಂಕ್‌” ಅನ್ನು ಸ್ಥಾಪಿಸಿದರು.

ಬಾಂಗ್ಲಾದೇಶದಲ್ಲಿಂದು ಗ್ರಾಮೀಣ ಬ್ಯಾಂಕ್‌ನ 2,564 ಶಾಖೆಗಳಿವೆ. 19,800 ಸಾವಿರ ಜನರಿಗೆ ಅದು ಉದ್ಯೋಗ ನೀಡಿದೆ. 81,367 ಹಳ್ಳಿಗಳಲ್ಲಿ 83 ಲಕ್ಷ ಬಡವರಿಗೆ ಸಾಲ ಕೊಟ್ಟಿರುವ ಆ ಬ್ಯಾಂಕ್, ಪ್ರತಿ ದಿನವೂ ವಾರದ ಕಂತುಗಳ ರೂಪದಲ್ಲಿ 15 ಲಕ್ಷ ರುಪಾಯಿ ಕಲೆ ಹಾಕುತ್ತದೆ. ಅದರ ಸಾಲಗಾರರಲ್ಲಿ 97 ಪ್ರತಿಶತ ಮಹಿಳೆಯರೇ ಇದ್ದಾರೆ. ಆ ಬ್ಯಾಂಕ್‌ಗೆ ಪ್ರತಿ ದಿನ ಆಗುವ ಮರುಪಾವತಿ ಪ್ರಮಾಣಕ್ಕೆ ಸಡ್ಡು ಹೊಡೆಯಲು ಯಾವ ಬ್ಯಾಂಕ್ ವ್ಯವಸ್ಥೆಗೂ ಇದುವರೆಗೂ ಸಾಧ್ಯವಾಗಿಲ್ಲ! ಗ್ರಾಮೀಣ ಬ್ಯಾಂಕ್‌ನ ವಿಧಾನಗಳನ್ನೀಗ ಸುಮಾರು 58 ರಾಷ್ಟ್ರಗಳು ಅಳವಡಿಸಿಕೊಂಡಿವೆ. ಅಮೆರಿಕ, ಕೆನಡಾ, ಫ್ರಾನ್ಸ್, ನೆದರ್‌ಲ್ಯಾಂಡ್ ಮತ್ತು ನಾರ್ವೆಯಂಥ ಮುಂದುವರಿದ ರಾಷ್ಟ್ರಗಳೂ ಕೂಡ!

“ಬಡವರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒದಗಿಸುವುದು, ಸಾಲ ಕೊಡುವವರ ಹಣದಾಹದಿಂದ ಬಡವರನ್ನು ರಕ್ಷಿಸುವುದು, ಬಾಂಗ್ಲಾದ ಗ್ರಾಮೀಣ ಪ್ರದೇಶಗಳಲ್ಲಿ ಸ್ವ-ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವುದು, ‘ಕಡಿಮೆ ಆದಾಯ, ಕಡಿಮೆ ಉಳಿತಾಯ ಮತ್ತು ಕಡಿಮೆ ಹೂಡಿಕೆ’ ಎನ್ನುವ ಹಳೆಯ ವಿಷವರ್ತುಲವನ್ನು ಅಳಿಸಿ ಹಾಕುವುದು ಗ್ರಾಮೀಣ ಬ್ಯಾಂಕ್‌ನ ಮುಖ್ಯ ಗುರಿ” ಎನ್ನುತ್ತಾರೆ ಯೂನಸ್.

“ಗ್ರಾಮೀಣ ಬ್ಯಾಂಕಿಗೆ” ಗ್ರಾಮೀಣ ಭಾಗದ ಜನರೇ ಮಾಲೀಕರು. ಏಕೆಂದರೆ, ಆ ಬ್ಯಾಂಕಿನಲ್ಲಿ ಸರ್ಕಾರದ ಷೇರು ಕೇವಲ 10 ಪ್ರತಿಶತದಷ್ಟಿದ್ದರೆ, ಸಾಲಗಾರರ ಷೇರು 90 ಪ್ರತಿಶತದಷ್ಟಿದೆ!

ಹೀಗೆ ಬಡತನವೆಂಬ ಶತ್ರುವಿನ ವಿರುದ್ಧ ಹೋರಾಡುತ್ತಾ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟ ಡಾ. ಮಹಮ್ಮದ್  ಯೂನಸ್‌ರಂಥ ವ್ಯಕ್ತಿಯನ್ನು ಸರ್ಕಾರವೇಕೆ ಇಂದು ಶತ್ರುವಿನಿಂತೆ ಕಾಣುತ್ತಿದೆ?!

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಮಹಮ್ಮದ್ ಯೂನಸ್ ಅವರನ್ನು ಎರಡನೇ ಬಾರಿಗೆ ವಿಚಾರಣೆಗೆ ಗುರಿಪಡಿಸಲು ಹೊರಟಿದ್ದಾರೆ! ಹಸೀನಾ ಅವರು ಮೊದಲಿಗೆ ಕೆಂಗಣ್ಣು ಬೀರಿದ್ದು 2010, ಡಿಸೆಂಬರ್‌ನಲ್ಲಿ. ಅದಕ್ಕೆ ಕಾರಣವಾಗಿದ್ದು ನಾರ್ವೆ ದೇಶದ ಟಾಮ್ ಹೀನ್‌ಮನ್ ಎಂಬಾತ “Caught in Micro Debt’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ. ಅದು 2010, ನವೆಂಬರ್ 30ರಂದು ನಾರ್ವೆಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಯಿತು. ಅದರಲ್ಲಿ, ‘ಗ್ರಾಮೀಣ ಬ್ಯಾಂಕ್‌’ನ ಅಂಗಸಂಸ್ಥೆಯಾಗಿರುವ ‘ಗ್ರಾಮೀಣ ಕಲ್ಯಾಣ’ದಲ್ಲಿ ಡಾ. ಮಹಮ್ಮದ್ ಯೂನಸ್ ಸುಮಾರು 100 ದಶಲಕ್ಷ ಡಾಲರ್ ಹಣವನ್ನು 1996ರಲ್ಲಿ ಹೂಡಿದ್ದಾರೆ ಎಂದು ಗುರುತರ ಆರೋಪ ಮಾಡಲಾಯಿತು. ಈ ಬಗ್ಗೆ ನಾರ್ವೆ ಸರ್ಕಾರ ಒಂದು ಸಮಗ್ರ ತನಿಖೆಗೆ ಆದೇಶ ನೀಡಿತು. ತನಿಖೆಯಲ್ಲಿ ಡಾ. ಯೂನಸ್ ಅಮಾಯಕರು ಹಾಗೂ ನಿರ್ದೋಷಿ, ಎಂದು ಸಾಬೀತಾಯಿತು.

ಆದರೇನಂತೆ…

ಬಾಂಗ್ಲಾ ಪ್ರಧಾನಿಗೆ ಒಂದು ಕುಂಟುನೆಪ ಬೇಕಿತ್ತು ಅಷ್ಟೇ. ಡಾ. ಯೂನಸ್ ಅವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ಮುಂದಾದರು. ಟಾಮ್ ಹೀನ್‌ಮನ್ ಮಾಡಿದ ಆರೋಪ ಹಾಗೂ ಸಾಕ್ಷ್ಯಚಿತ್ರದ ನೆಪದಲ್ಲಿ ಡಾ. ಯೂನಸ್ ಮೇಲೆ ಆಕ್ರಮಣಕ್ಕೆ ಮುಂದಾದರು. ಕಾನೂನಿನ ಅನ್ವಯ ನಿವೃತ್ತಿ ವಯೋವಾನ 60. ಆದರೆ ಡಾ. ಯೂನಸ್ ಇನ್ನೂ ಗ್ರಾಮೀಣ ಬ್ಯಾಂಕ್‌ನ ಚುಕ್ಕಾಣಿ ಹಿಡಿದುಕೊಂಡಿದ್ದಾರೆ ಎಂದು ವಜಾ ಮಾಡಿಬಿಟ್ಟರು! ಗ್ರಾಮೀಣ ಬ್ಯಾಂಕಿನ ಸಾಲ ಸೌಲಭ್ಯ ಪಡೆದಿರುವ 83 ಲಕ್ಷ ಜನರಿಂದ ಆಯ್ಕೆಯಾಗಿದ್ದ 9 ಜನ ಬ್ಯಾಂಕ್ ನಿರ್ದೇಶಕರು ಡಾ. ಯೂನಸ್ ಹುದ್ದೆಯಲ್ಲಿ ಮುಂದುವರಿಯುವಂತೆ ಅನುಮತಿ ನೀಡಿದ್ದರೂ ಸರ್ಕಾರ ಮಾತ್ರ ತಲೆದಂಡ ಪಡೆದುಕೊಂಡಿತು.

ಸರ್ಕಾರ ಅಷ್ಟಕ್ಕೇ ತೃಪ್ತಿಗೊಳ್ಳಲಿಲ್ಲ!

ಬಾಂಗ್ಲಾದೇಶದ ಏಕಮಾತ್ರ ನೊಬೆಲ್ ಪುರಸ್ಕೃತರಾಗಿದ್ದರೂ ಡಾ. ಮಹಮ್ಮದ್ ಯೂನಸ್ ಹಾಗೂ ಗ್ರಾಮೀಣ ಬ್ಯಾಂಕಿನ ಮೇಲೆ ಪ್ರಧಾನಿ ಹಸೀನಾ ಒತ್ತಡ ಹೇರಲಾಂಭಿಸಿದರು. ಬ್ಯಾಂಕಿನ ನಿರ್ದೇಶಕ ಅಧಿಕಾರವನ್ನು ಕಡಿತಗೊಳಿಸಲು ಮುಂದಾಗಿದ್ದು ಮಾತ್ರವಲ್ಲ, ಬ್ಯಾಂಕನ್ನು ಹದಿನೈದು ಭಾಗಗಳಾಗಿ ವಿಂಗಡಿಸಿಬಿಟ್ಟರು. ಬ್ಯಾಂಕಿನ ಮೇಲೆ ಪೂರ್ಣ ಪ್ರಮಾಣದ ಪ್ರತೀಕಾರ ತೆಗೆದುಕೊಂಡ ನಂತರ ಮತ್ತೆ ಡಾ. ಯೂನಸ್ ಮೇಲೆ ಹರಿಹಾಯತೊಡಗಿದರು. ಈಗ ಹಸೀನಾರ ದ್ವೇಷ ಇನ್ನೂ ವಿಕೃತ ರೂಪಕ್ಕೆ ತಿರುಗಿದೆ. ಡಾ. ಯೂನಸ್‌ರನ್ನು ಮತ್ತೆ ವಿಚಾರಣೆಗೆ ಗುರಿಪಡಿಸಲು ಮುಂದಾಗಿದ್ದಾರೆ. ಅದು ಎಂಥಾ ಕ್ಷುಲ್ಲಕ ಕಾರಣಕ್ಕಾಗಿ ಗೊತ್ತಾ? ಸರ್ಕಾರದ ಸೂಕ್ತ ಅನುಮತಿ ಪಡೆಯದೇ ನೊಬೆಲ್ ಪುರಸ್ಕಾರ ಹಾಗೂ ಬರೆದ ಪುಸ್ತಕಗಳಿಗೆ ಬಂದ ಗೌರವಧನವನ್ನು ಡಾ. ಯೂನಸ್ ಪಡೆದುಕೊಂಡಿದ್ದಾರೆಂದು! 83 ಲಕ್ಷ ಬಡ ಬಾಂಗ್ಲಾದೇಶಿ ಮಹಿಳೆಯರಿಗೆ ಸಾಲ ನೀಡಿ ಬದುಕು ರೂಪಿಸಿಕೂಳ್ಳಲು ಶ್ರಮಿಸಿದ ವ್ಯಕ್ತಿ ಇವತ್ತು ಒಬ್ಬ ಆರೋಪಿಯಾಗಿ ಕಟಕಟೆ ಮುಂದೆ ನಿಲ್ಲುವಂತಾಗಿದೆ!

ಇಷ್ಟಕ್ಕೂ ಡಾ. ಯೂನಸ್ ಮಾಡಿದ ತಪ್ಪಾದರೂ ಏನು?

ಪ್ರಧಾನಿ ಹಸೀನಾ ಇಷ್ಟೆಲ್ಲಾ ದ್ವೇಷ ಕಾರಲು, ಪ್ರತೀಕಾರ ತೆಗೆದುಕೊಳ್ಳಲು ಮುಂದಾಗಿರುವುದಕ್ಕೆ ಯೂನಸ್ ಅಂತಹ ಮಹಾಪರಾಧವನ್ನೇನು ಎಸಗಿದ್ದಾರೆ? ಇದೆಲ್ಲ ಆರಂಭವಾಗಿದ್ದು 2007ರಲ್ಲಿ. ಆಗ ಮಿಲಿಟರಿಯ ಸುಪರ್ದಿನ ಹಂಗಾಮಿ ಸರ್ಕಾರ ಬಾಂಗ್ಲಾದಲ್ಲಿತ್ತು. ಅವಾಮಿ ಲೀಗ್‌ನ ಶೇಖ್ ಹಸೀನಾ ಹಾಗೂ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯ ಮುಖ್ಯಸ್ಥೆ ಬೇಗಂ ಖಲೀದಾ ಜಿಯಾ ನಡುವೆ ತೀವ್ರ ಸಂಘರ್ಷ ನಡೆಯುತ್ತಿತ್ತು. ಇಡೀ ಬಾಂಗ್ಲಾದೇಶ ಈ ಇಬ್ಬರು ನಾಯಕಿಯರ ತಿಕ್ಕಾಟಕ್ಕೆ ಒತ್ತೆಯಾಗಿತ್ತು. ಅದು ತಿಳಿಗೊಳ್ಳುವ, ಪರಿಸ್ಥಿತಿ ಸುಧಾರಿಸುವ, ರಾಜಕೀಯ ಮತ್ತೆ ಸರಿದಾರಿಗೆ ಬರುವ ಯಾವ ಲಕ್ಷಣವೂ ಕಾಣಲಿಲ್ಲ. ಆಗ ಡಾ. ಮಹಮದ್ ಯೂನಸ್ ಪತ್ರಿಕೆಗಳಿಗೆ ಒಂದು ಬಹಿರಂಗ ಪತ್ರ ಬರೆದರು. 2006ರಲ್ಲಿ ನೊಬೆಲ್ ಪುರಸ್ಕಾರ ಪಡೆದಿದ್ದ ಡಾ. ಯೂನಸ್ ಆಗ ದೇಶಾದ್ಯಂತ ಬಹಳ ಜನಪ್ರಿಯ ವ್ಯಕ್ತಿಯಾಗಿದ್ದರು. ಆ ಜನಪ್ರಿಯತೆಯನ್ನು ಬಳಸಿಕೊಂಡು ಜನಜಾಗೃತಿ ಮೂಡಿಸುವ, ರಾಜಕೀಯ ಬದಲಾವಣೆ ತರುವ ಮನಸ್ಸಾಯಿತು. ಆ ಪತ್ರದಲ್ಲಿ, ತಾವೊಂದು ರಾಜಕೀಯ ಪಕ್ಷವನ್ನು ಆರಂಭಿಸುವ ಇರಾದೆಯನ್ನು ವ್ಯಕ್ತಪಡಿಸಿದರು. ಹಾಗಂತ ಪಕ್ಷ ಉದಯವಾಗಲೇ ಇಲ್ಲ. ಆದರೆ ಎರಡು ವರ್ಷಗಳ ನಂತರ ಜನಾದೇಶ ಪಡೆದು ಅಧಿಕಾರಕ್ಕೆ ಬಂದ ಅವಾಮಿ ಲೀಗ್‌ನ ಶೇಖ್ ಹಸೀನಾ ಮಾತ್ರ ಕುಪಿತಗೊಂಡಿದ್ದರು. ವಿರೋಧಿ ರಾಜಕೀಯ ಕಾರ್ಯಕರ್ತರನ್ನು ಮಿಲಿಟರಿ ಬಂಧಿಸಲು ಆರಂಭಿಸಿದಾಗ ಡಾ. ಯೂನಸ್ ಮಧ್ಯ ಪ್ರವೇಶಿಸಿದರು. ಇವೆಲ್ಲ ತುಂಬಾ ಬೆಲೆ ತೆರಬೇಕಾದ ತಪ್ಪು ಲೆಕ್ಕಾಚಾರಗಳಾಗಿ ಬಿಟ್ಟವು. ಡಾ. ಯೂನಸ್‌ರ ಒಂದೊಂದು ರಾಜಕೀಯ ನಡೆಯನ್ನೂ ಹಸೀನಾ ತಮ್ಮ ವಿರುದ್ಧದ ಪಿತೂರಿ ಎಂಬಂತೆ ಭಾವಿಸತೊಡಗಿದರು. ಅದರ ಪರಿಣಾಮವಾಗಿ ಇಂದು ಡಾ. ಯೂನಸ್ ಎರಡನೇ ಬಾರಿಗೆ ವಿಚಾರಣೆ ಎದುರಿಸಬೇಕಾಗಿ ಬಂದಿದೆ. ಈ ಮಧ್ಯೆ, ಸಲಿಂಗಕಾಮಿಗಳ ಹಕ್ಕನ್ನು ಬೆಂಬಲಿಸಿದರೆಂಬ ಕಾರಣಕ್ಕೆ ಇಮಾಮ್‌ಗಳು, ಮುಲ್ಲಾಗಳು ಮುನಿದು ಯೂನಸ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಹೀಗೆ ಎಲ್ಲರ ನಿಷ್ಠುರವನ್ನು ಕಟ್ಟಿಕೊಂಡಿರುವ ಡಾ. ಯೂನಸ್‌ರನ್ನು ವೈರಿಯಂತೆ ನೋಡಲಾಗುತ್ತಿದೆ. ಇಡೀ ಜೀವನವನ್ನು ಬಡವರ ಶ್ರೇಯೋಭಿವೃದ್ಧಿಗಾಗಿ ಮುಡಿಪಾಗಿಟ್ಟ ವ್ಯಕ್ತಿಗೆ ಇಂಥ ಪರಿಸ್ಥಿತಿ ಬಂದಿರುವುದು ಒಂದು ಕ್ರೂರ ಅಣಕವಲ್ಲವೆ?

5 Responses to “ಐದು ಕೋಟಿ ಬಡ ಬಾಂಗ್ಲಾದೇಶಿಯರ ಬಂಧು ಸರ್ಕಾರದ ಕಣ್ಣಿಗೆ ಮಾತ್ರ ಶತ್ರುವಾಗಿ ಕಾಣುತ್ತಿದ್ದಾರೆಯೇ?”

  1. Sandeep Kote says:

    great article

  2. kitty says:

    ITS THE WAY OF TREATING NOBLES LIKE A TERRORIST..
    ITS IN EVERYWHERE….
    TILL THE MAN OPPOSES IT FROM BOTTOM OF THE SOCIETY….

  3. Nagaraj Badiger says:

    Inspiring information.

  4. Sateesh Rajegowda says:

    One of the best article in your shelf. Hats Off to you.

  5. Sachin Patwardhan says:

    Very Nice article Pratap..