Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಡಿನೋಟಿಫೈ ಯುಗದಲ್ಲಿ ಭೂದಾನದ ಪುಟ ತಿರುವಿದಾಗ…

ಡಿನೋಟಿಫೈ ಯುಗದಲ್ಲಿ ಭೂದಾನದ ಪುಟ ತಿರುವಿದಾಗ…

ವೇದಾಂತಗಳೇನೋ ತುಂಬಾ ಇವೆ. ಕಾಲಾನುಕ್ರಮ ದಿಂದಲೂ ಪ್ರಮುಖ ಸಂಘರ್ಷಕ್ಕೆಲ್ಲ ಕಾರಣವಾಗಿದ್ದೇ ಇದು ಎಂಬ ದೃಷ್ಟಾಂತಗಳೂ ಪುರಾಣ ಕತೆಗಳಲ್ಲಿ, ಶ್ರದ್ಧೆಯ ಕಾವ್ಯಗಳಲ್ಲಿ ಸಾಕಷ್ಟು ಸಿಗುತ್ತವೆ. ಅವೆಲ್ಲ ಓದಿ ಸೊಗಸುವುದಕ್ಕೆ ಮಾತ್ರ ಲಾಯಕ್ಕೇನೊ ಎಂಬ ಹತಾಶೆಯೊಂದು ಆವರಿಸುತ್ತಿದೆ. ಅವನ್ನೆಲ್ಲ ನೆನಪಿಸಿಕೊಳ್ಳುತ್ತ ಹೋದರೆ ಈ ಕ್ಷಣಕ್ಕೆ ಅದು ಕೈಲಾಗದವರು ಹೇಳುವ ಕತೆಯೇನೋ ಎಂದು ಅನ್ನಿಸುವ ಎಲ್ಲ ಅಪಾಯಗಳೂ ಇವೆ.

ಇಲ್ಲಿ ಕನವರಿಸಿಕೊಳ್ಳುತ್ತಿರುವುದು ಭೂಮಿಯ ಬಗ್ಗೆ, ನೆಲದ ಬಗ್ಗೆ. ಅದಕ್ಕಾಗಿಯೇ ಯುದ್ಧಗಳಾಗಿದ್ದು, ರಕ್ತಪಾತಗಳಾಗಿದ್ದು ಎಂದು ಇತಿಹಾಸ ಹೇಳುತ್ತದೆ. ಅದರ ಅತಿಯಾದ ವ್ಯಾಮೋಹಕ್ಕೆ ಬಿದ್ದಾಗಲೇ ನೈತಿಕತೆ, ಮಾನ ಮರ್‍ಯಾದೆಗಳ ಅರ್ಥ ಕ್ಷಯಿಸಿದ್ದು ಎಂದು ಮಹಾ ಕಾವ್ಯಗಳೂ ಹೇಳುತ್ತವೆ. ‘ಸೂಜಿಮೊನೆಯಷ್ಟೂ ಜಾಗ ಕೊಡಲಾರೆ’ ಎಂಬ ಕೌರವರ ಯಾವತ್ತಿನದೋ ಅಟ್ಟಹಾಸ ಇಂದಿಗೂ ಭಾರತದ ಕಿವಿಯಲ್ಲಿ ಮಾರ್ದನಿಸಿಕೊಂಡಿದೆ.

ತನ್ನದು ಅಂತ ಒಂದು ನೆಲ, ಅದರ ಮೇಲೊಂದು ಮನೆ, ಮನೆಯ ಖಜಾನೆಯಲ್ಲೊಂದಿಷ್ಟು ದುಡ್ಡು ಎಂದು ಎಲ್ಲರೂ ಬಯಸುತ್ತಾರೆ ನಿಜ. ಹೀಗೆ ಮಾತನಾಡದೇ ಸಂತನ ರೀತಿ ಇರಬೇಕು ಎಂಬ ಉಪದೇಶ ಕೊಟ್ಟರೆ ಅದಕ್ಕೇನೂ ಬೆಲೆಯಿರುವುದಿಲ್ಲ ಬಿಡಿ. ಆದರೆ ಈ ಆಸೆ ದುರಾಸೆಯಾಗಿ ಮುಂದುವರಿದರೆ ಏನಾಗುತ್ತದೆ ಎಂಬುದಕ್ಕೆ ಮಹಾಭಾರತವನ್ನು ತಡಕಬೇಕಿಲ್ಲ. ಅವೇ ಮಹಾಭಾರತ ಹಾಗೂ ರಾಮಾಯಣದ ಕತೆಗಳನ್ನೇ ಹೇಳಿಕೊಂಡು ಬಂದ ಸಂಘಟನೆಯೊಂದರಿಂದ ಹೊರಹೊಮ್ಮಿ, ಮಾತೃಭೂಮಿಯ ಬಗ್ಗೆ ಭಾವಪರವಶವಾಗಿ ಮಾತನಾಡುತ್ತ ಅಧಿಕಾರಕ್ಕೆ ಬಂದು, ಈಗ ಕೇವಲ ‘ಭೂಮಿ’ಯ ಬಗ್ಗೆ ಮಾತ್ರ ಪ್ರೀತಿ ಮೆರೆಯುತ್ತಿರುವ ಕರ್ನಾ ಟಕದ ಮುಖ್ಯಮಂತ್ರಿಯವರನ್ನು ನೋಡಿದರೆ ಸಾಕು.

ಮಹಾಭಾರತದ ರಾಜಕಾರಣದಲ್ಲಿ ‘ಒಂದಿಂಚು ಭೂಮಿಯನ್ನು ಕೊಡೆವು’ ಎಂಬ ಕೂಗಿನಲ್ಲಿದ್ದ ಅಷ್ಟೂ ದರ್ಪ, ಕ್ರೌರ್‍ಯ, ಸಂಚುಗಳೆಲ್ಲ ಇವತ್ತಿನ ರಾಜಕಾರಣದಲ್ಲಿ ‘ಡಿನೋಟಿಫಿಕೇಷನ್’ ಎಂಬ ಒಂದು ಪದದಲ್ಲಿ ಬೆರೆತುಹೋದಂತೆ ಕಾಣುತ್ತಿದೆ. ಒಬ್ಬ ಸಾಮಾನ್ಯ ಪ್ರಜೆ ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಸೈಟು ಕೊಳ್ಳಲು ಎಷ್ಟೆಲ್ಲ ಸುತ್ತಬೇಕೋ, ಏನೆಲ್ಲ ಬಸವಳಿಯಬೇಕೋ ಅದು ರಾಜಕಾರಣಿಗಳ ಪಾಲಿಗೆ ಚಿಟಿಕೆ ಹೊಡೆಯುವ ಕೆಲಸವಷ್ಟೆ. ಕಾಗದದ ಮೇಲಿನ ಆದೇಶ ಪ್ರತಿಗೆ ಇವರು ಹಾಕಿದ ಸಹಿಯ ಇಂಕು ಆರುವುದಕ್ಕೆ ಮುಂಚೆಯೇ ಅಲ್ಲೆಲ್ಲೋ ಸರಕಾರಿ ಭೂಮಿ ಡಿನೋಟಿಫೈ ಆಗಿರುತ್ತದೆ. ಸಾಮಾನ್ಯ ಪ್ರಜೆ ತನ್ನ ತಲೆಯ ಮೇಲೊಂದು ಸ್ವಂತ ಸೂರು ಬಯಸಿ ಚಪ್ಪಲಿ ಸವೆಸುತ್ತಿರುವಾಗಲೇ ರಾಜಕಾರಣಿಗಳ ಹೆಂಡತಿ, ಮಕ್ಕಳು, ಸಂಬಂಧಿಕರು, ಭಟ್ಟಂಗಿಗಳ ಹೆಸರಿಗೆ ಒಂದೆರಡು ದಿನಗಳಲ್ಲೇ ಜಮೀನು ನೋಂದಾವಣಿಯಾಗಿರುತ್ತದೆ.

ಇವತ್ತು ದೇಶದೆಲ್ಲೆಡೆ ನಡೆಯುತ್ತಿರುವಂತೆ ಕರ್ನಾಟಕದಲ್ಲೂ ಕೈಗಾರಿಕಾ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲೇ ಭೂ ಸ್ವಾಧೀನ ಆಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ವಿಶೇಷ ವಿತ್ತ ವಲಯ ಅನಿವಾರ್‍ಯ ಎಂದ ದೊಡ್ಡದನಿಯ ಮಧ್ಯದಲ್ಲಿ ಬಲವಂತವಾಗಿ ಭೂಮಿ ಕಳೆದು ಕೊಳ್ಳುತ್ತಿರುವವರ ಆರ್ತನಾದ ಕೇಳುತ್ತಿಲ್ಲ ಎಂಬುದೂ ವಾಸ್ತವ. ಇವತ್ತಿನ ಕರ್ನಾಟಕದ ವಿದ್ಯಮಾನಗಳನ್ನೇ ಗಮನಿಸುತ್ತಿದ್ದರೆ ಹೀಗೆ ಸ್ವಾಧೀನಗೊಂಡ ಭೂಮಿಯೆಲ್ಲ ಮುಂದೊಮ್ಮೆ ನಿಜಕ್ಕೂ ಕೈಗಾರಿಕೆಗ ಳಿಗೆ ಬಳಕೆಯಾಗುತ್ತದೆಯೋ ಎಂಬ ಅನುಮಾನ ಬಲವಾಗಿಯೇ ಕಾಡುತ್ತಿದೆ. ಬಿಡಿಎ ಹಾಗೂ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರಗಳ ಭೂಮಿಯನ್ನು ವ್ಯವಸ್ಥಿತವಾಗಿ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿರುವ ರಾಜಕಾರಣಿಗಳ ಹಗರಣ ಹೊರಬೀಳುತ್ತಿರುವುದು ನೋಡಿದರೆ ಸ್ವಾಧೀನಗೊಂಡ ಭೂಮಿಯೂ ರಾಜಕಾರಣಿಗಳ ಬಿಲ್ಡಿಂಗು, ರೆಸಾರ್ಟ್‌ಗಳು ತಲೆ ಏಳುವುದಕ್ಕೆ ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಸಿಗುತ್ತಿಲ್ಲ. ಕರ್ನಾಟಕದ ಭೂ ಹಗರಣದಲ್ಲಿ ಡಿನೋಟಿಫಿಕೇಶನ್ ಹೆಸರಿನಲ್ಲಿ ಭೂಮಿ ಲೂಟಿ ಮಾಡಿದವರಲ್ಲಿ ಮುಖ್ಯಮಂತ್ರಿ ಸಂಪುಟ ಸದಸ್ಯರ ಹೆಸರುಗಳ ಪಟ್ಟಿಯೂ ಹೆಚ್ಚಿದೆ. ಆಳುವವರು ತಮ್ಮ ಅಧಿಕಾರ ಬಲದಿಂದ ಸುಲಭವಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇತ್ತ, ಛಾನ್ಸು ಸಿಕ್ಕಿದರೆ ನಾವೂ ಒಂದು ಕೈ ನೋಡುವವರೇ ಎಂಬ ಮನಸ್ಥಿತಿ ಪ್ರತಿಪಕ್ಷ ಪಾಳಯದಲ್ಲೂ ಇದ್ದೇ ಇದೆ ಬಿಡಿ. ‘ಡಿನೋಟಿಫಿಕೇಶನ್‌ಗಾಗಿ ಮುಖ್ಯಮಂತ್ರಿ ಬಳಿ ನೀವೂ ಒಂದು ಶಿಫಾರಸು ಮಾಡಿದ್ದು ಬೆಳಕಿಗೆ ಬಂದಿದೆಯಲ್ಲ’ ಎಂದು ಮಾಧ್ಯಮ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರೆ, ‘ಅದರಲ್ಲಿ ತಪ್ಪೇನು? ವಿವೇಚನೆ ಅವರಿಗೆ ಬಿಟ್ಟಿದ್ದು, ಅದಕ್ಕೇನೂ ಪ್ರಭಾವ ಉಪಯೋಗಿಸಿಲ್ಲ’ ಎಂಬ ಸುಭಗ ಉತ್ತರ ಬಂದಿದೆ.

ಮುಖ್ಯಮಂತ್ರಿಯವರೂ ಅಷ್ಟೆ. ಹಿಂದಿನವರು ಮಾಡದೇ ಇರು ವುದನ್ನೇನು ನಾನು ಮಾಡಿದ್ದೇನೆಯೇ ಎಂದು ಸಮರ್ಥಿಸಿಕೊಂಡೇ ಖುರ್ಚಿಯನ್ನು ಉಳಿಸಿಕೊಂಡಿದ್ದಾರೆ. ಎಲ್ಲ ಅಕ್ರಮಗಳನ್ನು ತಡೆದು ಒಳ್ಳೆಯ ಆಡಳಿತ ನೀಡಲಿ ಎಂದೇ ಪರ್‍ಯಾಯವೊಂದನ್ನು ಯೋಚಿಸಿ ಇವರಿಗೆ ಮತ ನೀಡಿದ್ದವರಿಗೆಲ್ಲ ಸರಕಾರದ ಈ ನಡವಳಿಕೆಯೇ ಅತ್ಯಂತ ಅಸಹ್ಯ ತರಿಸಿದ್ದು. ಇವರ ಬಗ್ಗೆ ಏನೆಂದು ಬರೆಯೋದು? ಏನಂತ ಬಯ್ಯೋದು? ಎಲ್ಲರೂ ಖದೀಮರು ಎಂಬ ನಿರಾಸೆ ಆವರಿಸಿರುವ ಈ ಗಳಿಗೆಯಲ್ಲಿ ಯಾರನ್ನು ಹಳಿದರೂ ಅದು ನಮ್ಮನ್ನು ಇನ್ನಷ್ಟು ಅಸಹಾಯಕತೆ, ಹತಾಶೆಗೆ ದೂಡುತ್ತದೆಯೇ ಹೊರತು ಮತ್ತೇನೂ ಪ್ರಯೋಜನ ಕಾಣುತ್ತಿಲ್ಲ. ಗೌಡರ ಮಕ್ಕಳೇನು ಕಮ್ಮಿ, ಕಾಂಗ್ರೆಸ್ಸಿಗರೇನು ಮಾಡಿಕೊಂಡಿಲ್ಲವಾ, ಬಿಜೆಪಿ ಬಾಚಿಕೊಂಡಿದ್ದೆಷ್ಟು ಎಂಬುದಷ್ಟೇ ರಾಜಕೀಯ ಗದ್ದಲವಾಗಿಹೋಗಿರುವಾಗ ಕೊನೆಪಕ್ಷ ನಾವಾದರೂ ಹೊಸಗಾಳಿಯೊಂದಕ್ಕೆ ಇದರ ಹೊರಗಡೆ ಮುಖ ಚಾಚಬೇಕು ಎಂದೆನಿಸುತ್ತದೆ. ಹಿಂದಿನವರು ಮಾಡಿದ್ದೇನು ಎಂದು ಅಬ್ಬರಿಸಿದರೆ ಕೇವಲ ಕುಮಾರಸ್ವಾಮಿ, ಸಿದ್ದರಾಮಯ್ಯ ವಗೈರೆಗಳಷ್ಟೇ ನಮ್ಮ ಮಹಾ ಪರಂಪರೆಯೇನು? ಒಳ್ಳೆಯದನ್ನು ಮಾಡುವುದಕ್ಕೂ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ರಾಷ್ಟ್ರೀಯ ವಾದ, ದೇಶ ಪ್ರೇಮದ ಮಾತನಾಡುವವರು ಅಂಥ ವಿಶಾಲ ವ್ಯಾಪ್ತಿಯಿಂದಲೇ ಮಾದರಿಗಳನ್ನು ಹುಡುಕಿಕೊಳ್ಳಬೇಕಲ್ಲವೇ?

ಕರ್ನಾಟಕವನ್ನೇ ತಮ್ಮ ಹೆಸರಿಗೆ ಬರೆಸಿಕೊಂಡುಬಿಡುವ ರಾಜ ಕಾರಣಿಗಳ ಧಾವಂತ, ಮಹಾರಾಷ್ಟ್ರದಲ್ಲಿ ದೇಶಕ್ಕಾಗಿ ಮಡಿದ ಯೋಧರ ಕುಟುಂಬಕ್ಕೆ ಸಲ್ಲಬೇಕಾದ ಆಸ್ತಿಗೂ ಕೈಹಾಕಲು ಹೋಗಿ ನಿರ್ಗಮಿಸಬೇಕಾದ ಮುಖ್ಯಮಂತ್ರಿಯ ಪ್ರಕರಣ, ದೇಶವನ್ನು ದಂಗು ಬಡಿಸಿರುವ ಲಕ್ಷ ಕೋಟಿ ರೂಪಾಯಿಗಳ ಸ್ಪೆಕ್ಟ್ರಮ್ ಹಗರಣ, ಕಾಮನ್‌ವೆಲ್ತ್ ಹೆಸರಿನ ಇನ್ನೊಂದು ಭಾರಿ ಹಗರಣ ಇವನ್ನೆಲ್ಲ ಕಳವಳದ ಕಣ್ಣಿನಿಂದ ನೋಡಬೇಕಾದ ಈ ಹೊತ್ತಿನಲ್ಲಿ ಇವರೆಲ್ಲರಿಗೆ ವ್ಯತಿರಿಕ್ತವಾದ ದಾರಿಯಲ್ಲಿ ನಡೆದು ದೇಶದ ಇತಿಹಾಸದಲ್ಲಿ ಚಿರಸ್ಥಾಯಿಯಾದ ಒಬ್ಬ ಪುಣ್ಯಾತ್ಮನನ್ನು ನೆನಪಿಸಿಕೊಂಡು ಹಾಗಾ ದರೂ ಹೃದಯ ಹಗುರಾಗಿಸಿಕೊಳ್ಳೋಣ ಎನಿಸುತ್ತಿದೆ.

ವಿನೋಬಾ ಭಾವೆ!

ಇವತ್ತು ಅದ್ಯಾವ ಭೂಮಿ, ಯಾವ ಸಂಪತ್ತನ್ನು ತಮ್ಮ ಹೆಂಡತಿ ಮಕ್ಕಳ ಹೆಸರಿಗೆ ಮಾಡಿಕೊಂಡರೆ ತಾವು ಗೆದ್ದಂತೆ ಎಂದು ರಾಜ ಕಾರಣಿಗಳು ಅಂದುಕೊಂಡಿದ್ದಾರೋ ಅದನ್ನೇ ಇಲ್ಲದವರಿಗೆ ಹಂಚು ವಲ್ಲಿ ನಿಜವಾದ ಸ್ವರ್ಗವಿದೆ ಎಂಬುದನ್ನು ಅರಿತುಕೊಂಡು ಆ ದಾರಿಯಲ್ಲಿ ನಡೆದವರು ಅವರು. ಶ್ರೀಮಂತರು ಸ್ವ ಇಚ್ಛೆಯಿಂದ ತಮ್ಮ ಜಮೀನು ತ್ಯಾಗ ಮಾಡಿಕೊಡುವ ವಿಸ್ಮಯಕಾರಿ ಸಾಮಾಜಿಕ ಆಂದೋಲನಕ್ಕೆ ನೇತೃತ್ವ ಒದಗಿಸಿದ, ಸಮಾಜದ ಸುಖದಲ್ಲಿ ತನ್ನ ನಗೆಯರಳಿಸಿಕೊಂಡವರು ವಿನಾಯಕ ನರಹರಿ ಭಾವೆ. ಅಹಿಂಸೆಯ ಮಾರ್ಗದಲ್ಲಿ ನಡೆಯುತ್ತಿದ್ದ ಈ ಕರ್ಮಿಯನ್ನು ಗಾಂಧೀಜಿ ಅವರು ಪ್ರೀತಿಯಿಂದ ‘ವಿನೋಬಾ’ ಎಂದು ಕರೆದರು.

ಅದು ೧೯೫೧ರ ಸಮಯ. ಸ್ವಾತಂತ್ರ್ಯ ಬಂದ ಹೊಸ್ತಿಲು. ಸಹಜವಾಗಿಯೇ ಈ ರಾಷ್ಟ್ರವೆಂಬ ಮನೆ ಅಸ್ತವ್ಯಸ್ತವಾಗಿತ್ತು. ಅದನ್ನು ಸರಿಪಡಿಸುವ ದಾರಿಯಲ್ಲಿ ಗಾಂಧಿಗೂ ಮಾರ್ಕ್ಸ್‌ಗೂ ಸಂಘರ್ಷ ಹೊತ್ತಿಕೊಂಡಿತ್ತು. ಅರ್ಥಾತ್, ಬಂದೂಕಿನ ಮೂಲಕ ಸಮಾನತೆ ಸಾಧಿಸುತ್ತೇನೆ ಅಂತ ಹೊರಟ ಕಮ್ಯುನಿಸ್ಟರು. ಇನ್ನೊಂದೆಡೆ ಗಾಂಧೀ ಜಿಯ ಅಹಿಂಸೆಯೇ ನಮ್ಮ ಮಾರ್ಗ ಎಂದು ಪ್ರಜಾಸತ್ತಾತ್ಮಕ ಹಾದಿ ಹಿಡಿದವರ ಪಡೆ.

ನಾಗ್ಪುರದ ಪವ್ನಾರ್ ಬಳಿ ವಿನೋಬಾರ ಆಶ್ರಮವಿತ್ತು. ಆರ್ಥಿಕ ವಾಗಿ ಎಲ್ಲರೂ ಬಲಗೊಳ್ಳಬೇಕು ಎಂಬ ಆಶಯದ ‘ಸರ್ವೋ ದಯ’ದ ಸಭೆಗಳಿಗೆ ಅವರು ದೇಶದ ನಾನಾ ಭಾಗಗಳಿಗೆ ಸಂಚರಿ ಸುತ್ತಿದ್ದರು. ಸರ್ವೋದಯದ ಮೂರನೇ ವಾರ್ಷಿಕ ಸಮ್ಮೇಳನ ಹೈದರಾಬಾದ್‌ನ ಸಮೀಪದ ಶಿವರಾಮಪಲ್ಲಿಯಲ್ಲಿ ನಡೆಯಿತು. ಹೈದರಾಬಾದ್‌ಗೆ ಮುನ್ನೂರು ಮೈಲಿ ಕಾಲ್ನಡಿಗೆಯಲ್ಲೇ ಸಂಚರಿಸುವ ನಿರ್ಧಾರ ತೆಗೆದುಕೊಂಡರು ವಿನೋಬಾ. ತೆಲಂಗಾಣ ಪ್ರಾಂತ್ಯದಲ್ಲಿ ಕಮ್ಯುನಿಸ್ಟರ ದಂಗೆಯ ಪ್ರಕ್ಷುಬ್ಧ ಸ್ಥಿತಿ ಅವರ ಅರಿವಿಗೆ ಬರತೊಡಗಿತು. ಅದಕ್ಕೆ ಕಾರಣವೂ ಸ್ಪಷ್ಟವಿತ್ತು. ಜಮೀನ್ದಾರರ ಬಿಗಿ ಹಿಡಿತದಲ್ಲಿದ್ದ ಭೂಮಿಗಾಗಿ ರೈತರು ಬಯಸಿದ್ದರು. ಇವರಿಗೆ ಕಮ್ಯುನಿಸ್ಟ್ ಸಿದ್ಧಾಂತವು ರಾಜಕೀಯವಾಗಿ ನೆರವು ನೀಡಿದ್ದರಿಂದ ಹೋರಾಟದ ಹೆಜ್ಜೆ ಹೆಜ್ಜೆಗೂ ರಕ್ತ ಮೆತ್ತಿಕೊಂಡಿತ್ತು.

ಸರ್ವೋದಯ ಸಮ್ಮೇಳನದ ಮುಕ್ತಾಯದ ದಿನ ವಿನೋಬಾ ಘೋಷಿಸಿದರು- ‘ಪವ್ನಾರ್‌ಗೆ ಹಿಂತಿರುಗಿ ಕೆಲ ದಿನಗಳ ನಂತರ ಮತ್ತೆ ನನ್ನ ಸಹವರ್ತಿಗಳೊಂದಿಗೆ ಹಿಂತಿರುಗುತ್ತೇನೆ. ತೆಲಂಗಾಣದ ಕಮ್ಯುನಿಸ್ಟ್ ಹಿಂಸೆಯ ಊರುಗಳಿಗೆ ಶಾಂತಿಯ ಸಂದೇಶ ಹೊತ್ತು ಸಾಗುತ್ತೇನೆ’ ಎಂದು. ಆ ಮಾತಿನಂತೆ ತೆಲಂಗಾಣಕ್ಕೆ ಕಾಲಿಡುತ್ತಲೇ ವಿನೋಬಾ ಅವರಿಗೆ ಪರಿಸ್ಥಿತಿಯ ಸೂಕ್ಷ್ಮ ಅರ್ಥವಾಗಿಬಿಟ್ಟಿತು. ಇಲ್ಲಿ ಕೇವಲ ಶಾಂತಿ ಕಾಪಾಡಿ ಎಂಬ ಅಹಿಂಸೆಯ ಉಪದೇಶದಿಂದ ಪ್ರಯೋಜನವಿಲ್ಲ, ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಯಾರಿ ಗಿಲ್ಲ ಎಂಬುದು ಅವರಿಗೆ ಮನವರಿಕೆಯಾದಂತಿತ್ತು. ಹೀಗಾಗಿಯೇ ರಚನಾತ್ಮಕವಾದ ಏನನ್ನಾದರೂ ಈ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕೈಗೊಳ್ಳಬೇಕು ಎಂದು ಅವರಂದುಕೊಂಡರು. ಅತ್ತ ಪೊಲೀಸರು ಇತ್ತ ಮಾರ್ಕ್ಸ್‌ವಾದಿ ಕಾರ್‍ಯಕರ್ತರ ನಡುವೆ ಸಿಲುಕಿ ಒದ್ದಾಡುತ್ತಿದ್ದ ರೈತರ ಬವಣೆ ಅವರ ಕಣ್ಣಿಗೆ ಕಟ್ಟಿತ್ತು.

ಏಪ್ರಿಲ್ 18, 1951. ಕಮ್ಯುನಿಸ್ಟ್ ಚಟುವಟಿಕೆಯ ಕೇಂದ್ರವಾಗಿದ್ದ ನಲಗೊಂಡ ಜಿಲ್ಲೆಯ ಪೊಚಂಪಲ್ಲಿ ಎಂಬ ಹಳ್ಳಿಗೆ ವಿನೋಬಾ ಪ್ರವೇಶಿಸಿದರು. ಏಳುನೂರು ಕುಟುಂಬಗಳನ್ನು ಒಳಗೊಂಡಿದ್ದ ದೊಡ್ಡ ಹಳ್ಳಿ ಅದು. ಅಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಭೂರಹಿತರು. ಅಲ್ಲಿನ ಅಸ್ಪೃಶ್ಯರ ಕಾಲೊನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಅವರ ಸಂದರ್ಶನಕ್ಕೆ ಬಂದರು. ಹಾಗೆ ಬಂದವರು ವಿನೋಬಾ ಮುಂದೆ ೮೦ ಎಕರೆ ಜಮೀನಿಗಾಗಿ ಬೇಡಿಕೆ ಇಟ್ಟರು. 40 ಎಕರೆ ನೀರಾವರಿ ಹಾಗೂ ೪೦ ಎಕರೆ ಒಣ ಭೂಮಿ ದೊರೆತರೆ ಅದು 40 ಕುಟುಂಬಗಳಿಗೆ ಜೀವನೋಪಾಯಕ್ಕೆ ಸಾಕಾಗು ತ್ತದೆ ಎಂದು ಮನದಿಂಗಿತ ಹಂಚಿಕೊಂಡರು. ಅವರ ಸುಖ ದುಃಖ ವಿಚಾರಿಸಿಕೊಳ್ಳಲು ಅಲ್ಲಿಗೆ ತೆರಳಿದ್ದ ವಿನೋಬಾ ಅವರೇನೂ ಸರಕಾ ರದ ಪ್ರತಿ ನಿಧಿಗಳಲ್ಲವಲ್ಲ? ಹೀಗಾಗಿಯೇ ವಿನೋಬಾ ಯೋಚಿಸಿ ಕೇಳಿದರು, ‘ಒಂದೊಮ್ಮೆ ಸರಕಾರದಿಂದ ಈ ಅವಶ್ಯ ಭೂಮಿಯನ್ನು ಪಡೆಯಲಾಗಲಿಲ್ಲ ಎಂದಿಟ್ಟುಕೊಳ್ಳೋಣ. ಸರಕಾರದ ಗೋಜು ಬಿಟ್ಟು ಈ ಹಳ್ಳಿಯ ಮಟ್ಟದಲ್ಲೇ ಏನಾದರೊಂದು ಮಾಡಲಾಗದೇ?’

ಒಂದು ಒಳ್ಳೆಯ ಉದ್ದೇಶವಿಟ್ಟುಕೊಂಡು ಮಾಡಬೇಕೆಂದುಕೊಂಡ ಕೆಲಸಕ್ಕೆ ಬಹುಶಃ ತಾನಾಗಿಯೇ ಕಾಲ ಕೂಡಿಬರುತ್ತದೆಯೇನೋ ಎನಿಸುತ್ತದೆ. ಇದ್ದಕ್ಕಿದ್ದಂತೆ ಜನರ ನಡುವೆಯಿಂದ ಎದ್ದುನಿಂತ ವ್ಯಕ್ತಿ ಯೊಬ್ಬ ‘ನಾನು ಈ ಜನರಿಗೆ ನೂರು ಎಕರೆ ಭೂಮಿ ದಾನ ಮಾಡು ತ್ತೇನೆ ’ ಎಂದು ಹೇಳಿದ. ಸ್ಥಳೀಯ ಭೂಮಾಲಿಕರಾಗಿದ್ದ ಆ ವ್ಯಕ್ತಿಯ ಹೆಸರು ರಾಮಚಂದ್ರ ರೆಡ್ಡಿ.

‘ಭೂದಾನ’ವೆಂಬ ಒಂದು ಅತ್ಯುನ್ನತ ಆಂದೋಲನ ಮೊಳಕೆ ಒಡೆದಿದ್ದು ಹಾಗೆ. ಭಾರತದ ಭೂ ಹಂಚಿಕೆ ಸಮಸ್ಯೆಗೆ ಇದೇ ಮಾದರಿ ಯಾಗಬಾರದೇಕೆ ಎಂಬ ಯೋಚನೆಯೊಂದು ಆಗಲೇ ವಿನೋಬಾರ ಮನದಲ್ಲಿ ಕುಡಿಯೊಡೆಯಿತು. ಯಾವುದೇ ಬಲವಂತದ ಕ್ರಮ ಅನುಸರಿಸದೇ ಭೂಮಾಲಿಕರ ಮನ ಒಲಿಸುವ ಮೂಲಕ ಭೂರಹಿತ ರೈತರಿಗೆ ಜಮೀನು ಕೊಡಿಸುವುದೇ ಅದರ ಸ್ವರೂಪವಾಯಿತು.

ಭೂದಾನದ ಮೂಲಕ ಇಲ್ಲದವರಿಗೆ ಜಮೀನು ಕೊಡಿಸುವು ದಕ್ಕಾಗಿ ದೇಶಾದ್ಯಂತ ಪ್ರವಾಸ ಮಾಡಿದರು ವಿನೋಬಾ. ನಿಧಾನವಾಗಿ ಭೂದಾನ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ‘ಗ್ರಾಮ ದಾನ’ವಾಗಿ ಬದಲಾಯಿತು. ಅಂದರೆ ಪ್ರತಿ ವೈಯಕ್ತಿಕ ಶ್ರೀಮಂತ ಜಮೀನ್ದಾರನನ್ನು ಮನವೊಲಿಸುತ್ತ ಹೋಗುವುದಕ್ಕೆ ಬದಲು ಒಂದು ಗ್ರಾಮದಲ್ಲಿ ಹೆಚ್ಚಿನ ಭೂಮಿ ಹೊಂದಿದವರ ಪೈಕಿ ಶೇ.೭೫ ಮಂದಿ ಯನ್ನು ಸ್ವ ಇಚ್ಛೆಯಿಂದ ಭೂದಾನ ಮಾಡುವಂತೆ ಪ್ರೇರೇಪಿಸಿ ಅದನ್ನು ಭೂರಹಿತರ ನಡುವೆ ಸಮಾನವಾಗಿ ಹಂಚುವುದು. ಈ ಹಂತದಲ್ಲೇ ವೈಯಕ್ತಿಕ ಭೂದಾನ ಪ್ರಕ್ರಿಯೆ ಅಲಕ್ಷ್ಯಕ್ಕೊಳಗಾಗಿ ಒಟ್ಟಾರೆ ಆಂದೋಲನ ಮಾಸತೊಡಗಿತು ಎಂಬ ಆರೋಪವೂ ಇದೆ.

ಭೂದಾನವಾಗಲೀ, ಗ್ರಾಮದಾನವಾಗಲೀ ಕೇವಲ ಭೂಮಿ ಪಡೆಯುವ ಮತ್ತು ಅದನ್ನು ಇಲ್ಲದವರಿಗೆ ಹಂಚುವ ಪ್ರಕ್ರಿಯೆಯಾಗಿ ಉಳಿಯಲಿಲ್ಲ ಎಂಬುದು ಗಮನಿಸಬೇಕಾದದ್ದು. ‘ಭೂದಾನ’ ಎಂಬ ಪದದೊಳಗೆ ಅದು ಧ್ವನಿಸುವುದಕ್ಕಿಂತ ಹೆಚ್ಚಿನ ಚಟುವಟಿಕೆಗಳು ಕುಡಿಯೊಡೆದಿದ್ದವು. ವಿಶಾಲ ಸಂರಚನೆಯ ಸೇವಾಕಾರ್‍ಯವಾಗಿ ಅದು ರೂಪು ತಾಳಿತ್ತು. ಈ ಆಂದೋಲನದ ಒಳಗೇ ಇತರ ಪರಿಕಲ್ಪನೆಗಳಾದ ಸಂಪತ್ತುದಾನ, ಶ್ರಮದಾನ, ಜೀವನದಾನ (ಭೂದಾನ ಚಳವಳಿಯ ಆಶಯಗಳಿಗೆ ಜೀವನಪೂರ್ತಿ ತನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂಬ ಕಾರ್‍ಯಕರ್ತರ ಅರ್ಪಣೆ), ಅಹಿಂಸೆಯ ಆಶೋತ್ತರಗಳನ್ನು ಕಾಪಿಡುವ ಶಾಂತಿಸೇನೆ ಹಾಗೂ ಸಾಧನ್‌ದಾನ (ಕೃಷಿ ಚಟುವಟಿಕೆಗಳಿಗೆ ಅಗತ್ಯ ವಾದ ಸಲಕರಣೆಗಳನ್ನು ದಾನ ಮಾಡುವುದು) ಇವೆಲ್ಲ ಒಡಮೂಡಿದವು.

ಭೂಮಿ ಒದಗಿಸುವ ಆಶಯವನ್ನು ಹೊತ್ತ ಆಂದೋಲನವು ಅದಕ್ಕೆ ಪೂರಕವಾದ ಇಷ್ಟೊಂದು ಅಂಶಗಳನ್ನು ಹೊಂದಿದ್ದರಿಂದಲೇ ಅದು ಜಗತ್ತೇ ಒಮ್ಮೆ ಇತ್ತ ತಿರುಗುವಂತೆ ಮಾಡಿತು. ೧೯೫೭ರ ಸಮಯಕ್ಕಾಗಲೇ ಭೂದಾನದ ಪ್ರಮುಖ ಆಶಯವಾದ ಸ್ವ ಇಚ್ಛೆಯಿಂದ ಭೂಮಿ ತ್ಯಾಗ ಮಾಡುವಂತೆ ಪ್ರೇರೇಪಿಸುವ ಪ್ರಯತ್ನ ಮುಕ್ಕಾಗುತ್ತ ಬಂತು. ವಿನೋಬಾ ಅಂದುಕೊಂಡಂತೆ ಭೂರಹಿತರಿಗೆ ಒಟ್ಟು ಐದು ಕೋಟಿ ಎಕರೆ ಭೂಮಿ ಪಡೆಯುವ ಗುರಿಯನ್ನೇನೂ ತಲುಪಲಾಗಲಿಲ್ಲ. ಒಟ್ಟಾಗಿದ್ದು ಐದು ಲಕ್ಷ ಎಕರೆಗಳಷ್ಟೇ ಆದರೂ ಅದೇನೂ ಕಡಿಮೆ ಸಾಧನೆಯಲ್ಲ. ಆ ಆಂದೋಲನ ಬಿಟ್ಟುಹೋದ ಉನ್ನತ ಆದರ್ಶವಂತೂ ಇತಿಹಾಸದಲ್ಲಿ ಚಿರಸ್ಥಾಯಿ. ಅಲ್ಲದೇ ಈ ಆಂದೋಲನ ರೈತನಿಗೆ ಭೂಮಿಯ ವ್ಯಾವಹಾರಿಕ ಮಾಲೀಕತ್ವವನ್ನೂ ಪ್ರತಿಪಾದಿಸಿತ್ತು ಎಂಬುದು ಗಮನಾರ್ಹ. ಕೈಗಾರಿಕೆಗೆ ಭೂಮಿ ಕೊಟ್ಟರೆ ಅದರ ಷೇರು ರೈತನಿಗೆ ಸಿಕ್ಕಿ ಲಾಭವಾದಾಗಲೆಲ್ಲ ನಿರಂತರ ವಾಗಿ ಪಾಲು ಹರಿದುಬರುವ ಪರಿಕಲ್ಪನೆ ಇದು.

ಭಾರತದ ರಾಜಕೀಯದಲ್ಲಿ ಸಮಾಜವಾದಿ ಜಯಪ್ರಕಾಶ ನಾರಾಯಣ ಭೂದಾನ ಚಳವಳಿಯಿಂದ ಭಾರಿ ಪ್ರಭಾವಿತರಾಗಿದ್ದರು. ಸರ್ವೋದಯ ಸಮಾಜ ಸ್ಥಾಪನೆಗೆ ವಿನೋಬಾ ತುಳಿದ ಹಾದಿಯೇ ಪ್ರಾಯೋಗಿಕವಾದದ್ದು ಎಂಬ ಅಭಿಪ್ರಾಯ ಅವರದಾಗಿತ್ತು. ಭಾರ ತದ ಹೊರಗಿನಿಂದಲೂ ಅನೇಕರನ್ನು ಈ ಆಂದೋಲನ ಆಕರ್ಷಿಸಿತ್ತು. ಭೂದಾನ ಆಂದೋಲನದಿಂದ ಸ್ಫೂರ್ತಿ ಪಡೆದ ಬ್ರಿಟಿಷ್ ಕೈಗಾರಿ ಕೋದ್ಯಮಿ ಅರ್ನೆಸ್ಟ್ ಬಾರ್ಡರ್ ತನ್ನ ಕಂಪನಿಯ ಕಾರ್ಮಿಕರಿಗೆ ಶೇ. 90ರ ಷೇರು ನೀಡಿ ಗಾಂಧಿ ಮಾದರಿಯ ಟ್ರಸ್ಟ್ ಪರಿಕಲ್ಪನೆಗೆ ತಲೆಬಾಗಿದ.

ಕೆಲ ಪ್ರಾಯೋಗಿಕ ಇತಿಮಿತಿಗಳ ನಡುವೆಯೂ ಭೂದಾನ ಒಂದು ಸಾಮಾಜಿಕ ಶ್ರೇಷ್ಠತೆಯ ಮುದ್ರೆ ಒತ್ತಿ ಹೋಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ೧೯೮೨ರಲ್ಲಿ ಭೂದಾನದ ಪ್ರವರ್ತಕ ವಿನೋಬಾ ಮರಣಿಸಿದರು. ಕೊನೆಗೂ ಇತಿಹಾಸ ಕೃತಜ್ಞತೆಯಿಂದ ನೆನಪಿನಲ್ಲಿಟ್ಟುಕೊಳ್ಳುವುದು ಯಾರಿಗೋ ಭೂಮಿ ಕೊಡಿಸಲು ಊರೆಲ್ಲ ಸುತ್ತಿದ ವಿನೋಬಾರಂಥ ಒಂದು ಆತ್ಮವನ್ನೇ ಹೊರತು, ‘ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ’ ಮೆರೆದು ಮಣ್ಣಾಗುವ ವ್ಯಕ್ತಿಗಳನ್ನಲ್ಲ.

5 Responses to “ಡಿನೋಟಿಫೈ ಯುಗದಲ್ಲಿ ಭೂದಾನದ ಪುಟ ತಿರುವಿದಾಗ…”

  1. VIkam says:

    This writing style makes me feel this is not written by Pratap… This lacks Pratap’s fingerprint!!!

  2. Vinayak says:

    Today I have seen super symbol film by Upendra, I hope that will not be the scene where in chief (cheap) minister will sell whole of karnataka.

  3. shashi jenny says:

    Now all kanndigas will donate land to our chief ministers’ family.History reverts.

  4. Prathap says:

    Nice article


    Sent on a phone using T9space.com

  5. SEDAM says:

    Denotification done by previous government… JD’s and Congress ex-CM’s and EX-Ministers. Yeddyurappa followed same thing but he did only one mistake is he given land for his sons for industrial purpose. I don’t think he did mistake but people will not agree . But he agreed de-notication issue saying followed same rules and regulation by previous government and given land and whatever land allocated for his sons he returned to government.
    In his government starting from 5 independent MLA, own party MLA’s, reddy’s brothers , kumar swamy ..all given one after one problem , now governor and congress giving problems . He is doing good job and he will do also. If you see previous government BJP brought many good schemes for middle class family and farmers but people are suddenly taking decision without seeing actual issue. He learned many things still now, he will do good job but opposite party politics one after another always giving problems and headche.