Date : 04-03-2014, Tuesday | 17 Comments
ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ
ಜಲವಿದ್ಯುತ್ ಉತ್ಪಾದನೆ
ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ
ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ ಪೂಜಾರಿಯೊಬ್ಬರ ಮಗ.
ಅವರೇ ಜೆ.ಎನ್. ಟಾಟಾ ಅಥವಾ ಜೆಮ್‌ಸೆಟ್‌ಜಿ ನಸರ್‌ವಾನ್‌ಜಿ ಟಾಟಾ
ಅವರ ಒಂದೊಂದು ಕನಸ್ಸಿನ ಹಿಂದೆಯೂ ಒಂದೊಂದು ಘಟನೆಗಳಿವೆ. ಒಮ್ಮೆ ಅವರು ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಹೋಗಿದ್ದರು, ಜವಳಿ ತಯಾರಿಸುವ ಯಂತ್ರದ ಖರೀದಿಗಾಗಿ. ಅದೇ ಮ್ಯಾಂಚೆಸ್ಟರ್‌ನಲ್ಲಿ ಥಾಮಸ್ ಕಾರ್ಲೈಲ್‌ನ ಭಾಷಣವಿತ್ತು. ಅದನ್ನು ಆಲಿಸಲು ಜೆ.ಎನ್. ಟಾಟಾ ಕೂಡ ಹೋಗಿದ್ದರು. ಭಾಷಣವೇನೋ ಮುಗಿಯಿತು, ಆದರೆ ಹೊರಬರುವಷ್ಟರಲ್ಲಿ ಟಾಟಾ ಕಂಗಳಲ್ಲಿ ಭಾರತದ ಕೈಗಾರಿಕಾ ಕ್ಷೇತ್ರಕ್ಕೇ ಒಂದು ಮಹತ್ತರ ತಿರುವು ನೀಡುವಂಥ ಕನಸೊಂದು ಮೂಡಿತ್ತು. ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪನೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಇವತ್ತು ಒಂದು ವೆಲ್ಡಿಂಗ್ ಅಂಗಡಿ ಆರಂಭಿಸುವುದಕ್ಕೇ ಹಿಂದೂ ಮುಂದೂ ಯೋಚನೆ ಮಾಡಬೇಕು. ಅಂಥದ್ದರಲ್ಲಿ 1880ರಲ್ಲೇ ಭಾರೀ ಬಂಡವಾಳ ಹೂಡಿಕೆ ಬೇಕಾದ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಟಾಟಾ ಯೋಚಿಸಿದರು.
ಒಬ್ಬನೇ ಮಗನಾದ ಜೆ.ಎನ್. ಟಾಟಾಗೆ ತಂದೆಯಂತೆ ಅರ್ಚಕನಾಗಬಹುದಿತ್ತು. ಆದರೆ ಅವರು ವ್ಯಾಪಾರೋದ್ಯಮದತ್ತ ಆಕರ್ಷಿತರಾದರು. 1868ರಲ್ಲಿ ಖಾಸಗಿ ವ್ಯಾಪಾರ ಸಂಸ್ಥೆಯೊಂದನ್ನು ಪ್ರಾರಂಭಿಸಿದಾಗ ಜೆ.ಎನ್. ಟಾಟಾಗೆ 29 ವರ್ಷ. ಕೈಯಲ್ಲಿದ್ದುದು 21 ಸಾವಿರ ರೂ. ಆದರೆ ಪರಿಶ್ರಮಕ್ಕೆ, ದೂರದೃಷ್ಟಿಗೆ, ಹಂಬಲಕ್ಕೆ, ಸಾಧಿಸುವ ಛಲಕ್ಕೆ ಎಂದಿಗೂ ಕೊರತೆಯಿರಲಿಲ್ಲ. ಇತ್ತ ಬ್ರಿಟಿಷರು ನಮ್ಮ ಗುಡಿಕೈಗಾರಿಕೆಗಳನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುತ್ತಿದ್ದರು. ಏಕೆಂದರೆ ಬ್ರಿಟನ್ನಿನಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಭಾರತದಲ್ಲಿ ಮಾರುಕಟ್ಟೆ ಬೇಕಿತ್ತು. ಇಂತಹ ಘೋರ ಅನ್ಯಾಯದ ಬಗ್ಗೆ ಜೆ.ಎನ್. ಟಾಟಾ ಹೋರಾಟಕ್ಕಿಳಿಯಲಿಲ್ಲ. ಆದರೆ ಯೂರೋಪ್ ಪ್ರವಾಸ ಕೈಗೊಂಡರು. ಜವಳಿ ಉದ್ಯಮಕ್ಕೆ ಹೆಸರಾಗಿದ್ದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಭೇಟಿ ನೀಡಿದರು. ಕಾರ್ಖಾನೆಗಳನ್ನು ಜಾಲಾಡಿದರು. ಸ್ವದೇಶಕ್ಕೆ ಮರಳಿದ್ದೇ ತಡ, 1877ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ‘ಎಂಪ್ರೆಸ್ ಮಿಲ್ಸ್’ ಕಾರ್ಖಾನೆ ಪ್ರಾರಂಭ ಮಾಡಿದರು. ಹೀಗೆ ಆಧುನಿಕ ತಂತ್ರಜ್ಞಾನ ಭಾರತಕ್ಕೆ ಬಂತು. ಅದು “ಸ್ವದೇಶಿ ಮಿಲ್’ಗಳೆಂದೇ ಖ್ಯಾತಿ ಪಡೆಯಿತು. ದೇಶದಲ್ಲೇ ಹತ್ತಿ ಬಟ್ಟೆಗಳು ಸಿದ್ಧಗೊಳ್ಳತೊಡಗಿದವು. ವಿದೇಶಿ ಸರಕುಗಳನ್ನು ತಿರಸ್ಕರಿಸಿ ಎಂಬ ಕರೆಯನ್ನು ಟಾಟಾ ನೀಡಿದ ವಿಧಾನ ಅದು. ಸ್ವದೇಶಿ ಚಳವಳಿಯನ್ನು ಕೃತಿಯಲ್ಲಿ ತೋರಿದ ಕೀರ್ತಿ ಜೆ.ಎನ್. ಟಾಟಾಗೆ ಸಲ್ಲಬೇಕು.
ಇನ್ನೊಂದು ಘಟನೆ ಕೇಳಿ, ಒಮ್ಮೆ ತಮ್ಮ ಇಬ್ಬರು ಬ್ರಿಟಿಷ್ ಸ್ನೇಹಿತರ ಜತೆ ಜೆ.ಎನ್. ಟಾಟಾ ಪ್ರತಿಷ್ಠಿತ ಹೋಟೆಲ್ಲೊಂದಕ್ಕೆ ಹೊರಟಿದ್ದರು. ಶ್ವೇತವರ್ಣೀಯರಾದ ಬ್ರಿಟಿಷರಿಗೇನೋ ನಗುಮುಖದ ಸ್ವಾಗತ ದೊರೆಯಿತು. ಆದರೆ ಭಾರತೀಯನೆಂಬ ಏಕೈಕ ಕಾರಣಕ್ಕೆ ಟಾಟಾ ಅವರನ್ನು ಹೊರದಬ್ಬಲಾಯಿತು. ಅದರ ಮೆಟ್ಟಿಲಿನಿಂದ ಕೆಳಗಿಳಿಯುವಾಗಲೇ ವಿಶ್ವದರ್ಜೆಯ ಹೋಟೆಲ್‌ಗಳನ್ನು ನಿರ್ಮಿಸುವ, ನಡೆಸುವ ತಾಕತ್ತು ಭಾರತೀಯರಿಗೂ ಇದೆ ಎಂಬುದನ್ನು ಸಾಬೀತುಪಡಿಸುವ ಸಂಕಲ್ಪ ಮಾಡಿದರು. 1902ರಲ್ಲಿ ‘ತಾಜ್ ಗ್ರೂಪ್ ಆಫ್ ಹೋಟೆಲ್ಸ್’ ಪ್ರಾರಂಭವಾಯಿತು. 1903ರಲ್ಲಿ ‘ಹೋಟೆಲ್ ತಾಜ್‌ಮಹಲ್’ ಸಿದ್ಧಗೊಂಡಾಗ ಟಾಟಾ ಬರೀ ಆಡುವವರಲ್ಲ, ಮಾಡಿಯೂ ತೋರುವವರು ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಹಾಗಂತ ಟಾಟಾ ಕೇವಲ ಒಬ್ಬ ಶುದ್ಧ ಉದ್ಯಮಿಯಾಗಿರಲಿಲ್ಲ. ಆಳುವ ಸರ್ಕಾರಕ್ಕೇ ಇರದಿದ್ದ ಸಾಮಾಜಿಕ ಕಾಳಜಿ ಅವರಲ್ಲಿತ್ತು. ಆದ್ದರಿಂದಲೇ 1886ರಷ್ಟು ಹಿಂದೆಯೇ ‘ನಿವೃತ್ತಿ ವೇತನ ನಿಧಿ’ಯನ್ನು ಆರಂಭಿಸಿದರು. 1895ರಲ್ಲಿ ಅಪಘಾತ ಪರಿಹಾರ ಯೋಜನೆ ಆರಂಭವಾಯಿತು. ಇಂತಹ ಪ್ರಯತ್ನ ಭಾರತದಲ್ಲೇ ಮೊದಲನೆಯದಾಗಿತ್ತು. 1892ರಲ್ಲೇ ಟಾಟಾ ದಾನ ದತ್ತಿ ಸಂಸ್ಥೆ ಸ್ಥಾಪನೆ ಮಾಡಿ, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಸ್ಕಾಲರ್‌ಷಿಪ್ ಆರಂಭಿಸಿದರು. ಒಂದು ಕಾಲಕ್ಕೆ ಎಂತಹ ಪರಿಸ್ಥಿತಿ ಸೃಷ್ಟಿಯಾಯಿತೆಂದರೆ ಪ್ರತಿಷ್ಠಿತ ಭಾರತೀಯ ನಾಗರೀಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೊರಬರುತ್ತಿದ್ದ ಐವರಲ್ಲಿ ಇಬ್ಬರು ಟಾಟಾ ವಿದ್ಯಾರ್ಥಿವೇತನ ಪಡೆದವರಾಗಿರುತ್ತಿದ್ದರು!
ಈ ನಡುವೆ 1893ರಲ್ಲಿ ‘ಎಂಪ್ರೆಸ್ ಆಫ್ ಇಂಡಿಯಾ’ ಹಡಗು ಜಪಾನ್‌ನಿಂದ ಅಮೆರಿಕದತ್ತ ಪಯಣ ಆರಂಭಿಸಿತ್ತು. ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಸ್ಥಾಪಿಸುವ ಆಸೆಯಿಂದ ತಾಂತ್ರಿಕ ಸಹಕಾರ ಯಾಚಿಸುವ ಸಲುವಾಗಿ ಟಾಟಾ ಅಮೆರಿಕಕ್ಕೆ ಹೊರಟು ನಿಂತಿದ್ದರು. ಇತ್ತ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ವಾಮಿ ವಿವೇಕಾನಂದರೂ ಅದೇ ಹಡಗೇರಿದ್ದರು! ಅಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಅಮೆರಿಕವನ್ನು ಸೇರುವ ವೇಳೆಗೆ ಜೆ.ಎನ್. ಟಾಟಾ ವಿವೇಕಾನಂದರ ಸ್ವಾವಲಂಬನೆ ತತ್ವಕ್ಕೆ ಮಾರು ಹೋಗಿದ್ದರು. ಅದು ಹೊಸ ಶಕೆಯ ಆರಂಭಕ್ಕೆ ನಾಂದಿಯಾಯಿತು. ವಿವೇಕಾನಂದರ ಆಶಯದಂತೆ ಎಲ್ಲ ವಿಧದ ವೈಜ್ಞಾನಿಕ ಸಂಶೋಧನೆಗೆ ಅವಕಾಶ ಕಲ್ಪಿಸುವ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು. ಭಾರತಕ್ಕೆ ವಾಪಸ್ಸಾದ ಟಾಟಾ, 1898 ಡಿಸೆಂಬರ್ 31ರಂದು ಲಾರ್ಡ್ ಕರ್ಝನ್ ಮುಂದೆ ರೂಪುರೇಷೆಯನ್ನಿಟ್ಟರು. ಆದರೆ ಆತ ಅಡ್ಡಗಾಲು ಹಾಕಿದ. ಆದರೂ ಛಲ ಬಿಡದ ಟಾಟಾ ಬ್ರಿಟನ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತಾವವನ್ನಿಟ್ಟರು. ಮನವಿಯ ಮೇರೆಗೆ ಕೂಡಲೇ ಭಾರತ ಪ್ರವಾಸ ಕೈಗೊಂಡ ನೊಬೆಲ್ ಪ್ರಶಸ್ತಿ ವಿಜೇತ ವಿಲಿಯಂ ರಾಂಸೆ ಬೆಂಗಳೂರಿನ ಮಲ್ಲೇಶ್ವರ ಬಳಿ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ವನ್ನು ನಿರ್ಮಿಸಲು ಸಮ್ಮತಿ ಸೂಚಿಸಿದ.
ದುರದೃಷ್ಟವಶಾತ್ ಆಸೆ ಕೈಗೂಡುವ ಮೊದಲೇ 1904, ಮೇ 19ರಂದು ಜೆ.ಎನ್. ಟಾಟಾ ನಮ್ಮನ್ನಗಲಿದರು. ಆದರೇನಂತೆ ಅವರ ಉತ್ತರಾಧಿಕಾರಿಗಳಾಗಿ ಬಂದ ಸರ್ ದೊರಾಬ್ಜಿ ಟಾಟಾ, ಜೆ.ಆರ್.ಡಿ. (ಜಹಾಂಗೀರ್ ರತನ್‌ಜಿ ದಾದಾ ಭಾಯಿ ಟಾಟಾ) ಟಾಟಾ, ಜೆ.ಎನ್. ಟಾಟಾರ ಪರಂಪರೆಯನ್ನು ಮುಂದುವರಿಸಿದರು. 1907ರಲ್ಲಿ ಬಿಹಾರದ ಜೆಮ್‌ಷೆಡ್‌ಪುರದಲ್ಲಿ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ಟೆಸ್ಕೋ) ಸ್ಥಾಪನೆ ಮಾಡುವುದರೊಂದಿಗೆ ಜೆ.ಎನ್. ಟಾಟಾ ಅವರ ಕನಸುಗಳಲ್ಲೊಂದನ್ನು ಸಾಕಾರಗೊಳಿಸಿದರು.
1910ರಲ್ಲಿ ಟಾಟಾ ಜಲವಿದ್ಯುತ್ ಪೂರೈಕೆ ಕಂಪನಿ ಜನ್ಮ ತಳೆಯುವುದರೊಂದಿಗೆ ಬಾಂಬೆಗೆ ಕೈಗೆಟುಕುವ ಬೆಲೆಯಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಕನಸೂ ಈಡೇರಿತು. ಅಷ್ಟೇ ಅಲ್ಲ, 1911ರಲ್ಲಿ ಬೆಂಗಳೂರಿನ ಮಲ್ಲೇಶ್ವರ ಬಳಿ 372 ಎಕರೆ ವಿಸ್ತಾರದಲ್ಲಿ ಭವ್ಯ ಭಾರತೀಯ ವಿಜ್ಞಾನ ಮಂದಿರ ಹೊರಹೊಮ್ಮಿತು. ಅದು ಈ ದೇಶದ ವೈಜ್ಞಾನಿಕ ಶಕೆಯನ್ನೇ ಆರಂಭಿಸಿತು. ಈ ದೇಶ ಕಂಡ ಮಹಾನ್ ವಿಜ್ಞಾನಿಗಳಾದ ಸಿ.ವಿ. ರಾಮನ್, ಹೋಮಿ ಜೆ. ಭಾಭಾ, ವಿಕ್ರಂ ಸಾರಾಭಾಯ್, ಜೆ.ಸಿ. ಘೋಷ್, ಎಂ.ಎಸ್ ಥಾಕರ್, ಎಸ್. ಭಗವಂತಮ್, ಸತೀಶ್ ಧವನ್, ಸಿ.ಎನ್.ಆರ್. ರಾವ್ ಮತ್ತು ನಮ್ಮ ರಾಜಾರಾಮಣ್ಣ ಇವರೆಲ್ಲರೂ ಟಾಟಾ ಕೂಸಾದ ಐಐಎಸ್‌ಸಿನ ಜತೆ ಗುರುತಿಸಿಕೊಂಡವರೇ ಆಗಿದ್ದಾರೆ.
ಇತ್ತ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ನೆಹರು ಪ್ರಧಾನಿ ಗದ್ದುಗೆಯ ಕನಸು ಕಾಣುತ್ತಿದ್ದರು. ‘ರಾಷ್ಟ್ರಪಿತ’ ಗಾಂಧೀಜಿ ಕೋಮು ಸೌಹಾರ್ದತೆಯ ಮಂತ್ರ ಪಠಿಸುತ್ತಿದ್ದರು. ಆದರೆ ಜೆ.ಆರ್.ಡಿ. ಮತ್ತು ಅವರ ಪ್ರಾಣ ಸ್ನೇಹಿತ ಹೋಮಿ ಜೆ. ಭಾಭಾ ‘ಅಣು ತಂತ್ರಜ್ಞಾನ’ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಲಂಡನ್‌ನ ಕಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡುತ್ತಿದ್ದ ರಾಜಾರಾಮಣ್ಣನವರನ್ನು ಭೇಟಿ ಮಾಡಿದ ಹೋಮಿ ಭಾಭಾ, ನ್ಯೂಕ್ಲಿಯರ್ ಸೈನ್ಸ್ ಓದುವಂತೆ ಪ್ರೇರೇಪಣೆ ನೀಡಿದರು. ಅಷ್ಟೇ ಅಲ್ಲ, ಜೆ.ಎನ್. ಟಾಟಾ ಸ್ಕಾಲರ್‌ಷಿಪ್ ಕೊಡಿಸಿ ರಾಜಾರಾಮಣ್ಣನವರನ್ನು ಅಣುವಿಜ್ಞಾನಿಯಾಗಿಸಿ ಸ್ವದೇಶಕ್ಕೆ ಕರೆತಂದರು. ಅದೇ ರಾಮಣ್ಣ ಈ ದೇಶದ ನಿಜವಾದ ಅಣುಜನಕರಾದರು!
ಕೇವಲ ಅಮೆರಿಕ, ರಷ್ಯಾಗಳಿಗೆ ಸಾಧ್ಯವಿದ್ದ ‘ನ್ಯೂಕ್ಲಿಯರ್ ರಿಯಾಕ್ಟರ್’ ಅನ್ನು ನಾವೇ ರೂಪಿಸುತ್ತೇವೆ ಎಂದು ಹೋಮಿ ಭಾಭಾ ಮುಂದಾದಾಗ ಸಕಲ ಪ್ರೋತ್ಸಾಹ ನೀಡುವುದನ್ನು ಬಿಟ್ಟು ಪ್ರಧಾನಿ ನೆಹರು ವಿರೋಧ ವ್ಯಕ್ತಪಡಿಸಿದರು. ಆದರೂ ಜೆ.ಆರ್.ಡಿ. ಟಾಟಾ ಧೃತಿಗೆಡಲಿಲ್ಲ. ಅಂತಹ ತಂತ್ರಜ್ಞಾನ ರೂಪಿಸಲು ಬೇಕಾಗಿದ್ದ ಸಕಲ ಸವಲತ್ತುಗಳನ್ನು, ಹಣಕಾಸು ಸೌಲಭ್ಯವನ್ನು ಸ್ವತಃ ಪೂರೈಸಿದರು. ಆ ಪ್ರಯತ್ನದ ಫಲವಾಗಿ ಮೊದಲ ಅಣು ರಿಯಾಕ್ಟರ್ ರೂಪುಗೊಂಡಿತು. ಅದು ದೇಶದ ಅಣ್ವಸ್ತ್ರ ತಯಾರಿಕೆಗೆ ಭಾಷ್ಯ ಬರೆಯಿತು. ಇಂದು ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಿದ್ದರೆ, ನಮ್ಮ ದೇಶದ ವಿರುದ್ಧ ದಾಳಿ ಮಾಡಲು ಶತ್ರುಗಳು ಹಿಂದೇಟು ಹಾಕುತ್ತಿದ್ದರೆ ಅದಕ್ಕೆ ಟಾಟಾ ಕಂಪನಿ ಕೂಡ ಕಾರಣ. ಅದು ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದ ಕಂಪನಿ.
ಒಂದಾನೊಂದು ಕಾಲದಲ್ಲಿ ಅಮೆರಿಕದಲ್ಲೊಂದು ಮಾತಿತ್ತು-“What is good for General Motors is good for America”. ಆದರೆ ನಮ್ಮ ಟಾಟಾ ಮಾತ್ರ “What is good for India is good for TATA” ಎಂದು ಭಾವಿಸಿರುವ ಕಂಪನಿ. ಅಂಥ ಕಂಪನಿಯನ್ನು ಹುಟ್ಟುಹಾಕಿದ, “ವ್ಯಾಪಾರಂ ದ್ರೋಹ ಚಿಂತನಂ” ಎನ್ನುವವರ ಮಧ್ಯೆ “ವ್ಯಾಪಾರಂ ದೇಶ ಚಿಂತನಂ” ಎಂಬ ಧ್ಯೇಯವನ್ನಿಟ್ಟುಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಜೆ.ಎನ್. ಟಾಟಾ ಜನಿಸಿದ್ದು 1839, ಮಾರ್ಚ್ 3ರಂದು. ಇಂದಿಗೆ 175 ವರ್ಷಗಳಾದವು. ಭಾರತೀಯ ಕೈಗಾರಿಕೋದ್ಯಮದ ಪಿತಾಮಹ ಎಂದೇ ಖ್ಯಾತರಾಗಿರುವ ಅವರನ್ನು ಮರೆಯಲಾದೀತೇ?
Super sir
Thanks for reminding history and igniting fire
Awesome Topic
nice n well written. My suggestion to pratap sir is to please bring out android application for ur articles n books,it will be worthy n useful.
Salute sir
ಅತà³à²¯à³à²¤à³à²¤à²® ಬರಹ, ಅಣೠವಿಜà³à²žà²¾à²¨à²•à³à²•ೂ ಅಂದಿನ ಪà³à²°à²¦à²¾à²¨à²¿ ಕೊಳà³à²³à²¿ ಇಡಲೠಪà³à²°à²¯à²¤à³à²¨à²¿à²¸à²¿à²¦à³à²¦ ವಿಷಯ ತಿಳಿದೠಬೇಸರವಾಯಿತà³. ಖà³à²·à²¿à²¯à²¾à²¦ ಸಂಗತಿ ಎಂದರೆ ನನà³à²¨ ಜನà³à²® ದಿನಾಂಕ ಕೂಡ ೩ ಮಾರà³à²šà³ 🙂
dear pratap,
I appreciate your writing skills & like too. your effort to educate society is liked by me and my group of ppl.
continue writing about these kind of inspiring individuals who changed our lives
Thanks & best wishes.
its really nice article not only this every article of yours is uniqe n thought provoking thanku for giving us such motivational articles
Am your fan from vk betthale jagatthu keep writing sir thank you.
Excellent article…. even while achieving all these they had lot of challenges but they have over come all these….
Incredible life story..
Awesome write up….
Hi Pratap,
Thanks for such a nice article on TATA.
Very nice sir
Supeer Sir….
I am a great fan of you and i enjoy reading your articles.
since i have started to prepare for civil services examinations, i am referring to your articles for G.K and current affairs but i am not able to download Bettale Jagattu books from part 1 to part 4 from your website. I request you to please rectify this and make them available for download.
Looking forward for a reply from you.
Thank you.
Super.. it’s very good article for young people… thank u