Date : 22-01-2013, Tuesday | 5 Comments
Is Muhammad Tahir-ul Qadri replicating the “Arab Spring” in Pakistan?
Cleric brings whiff of “Arab Spring” to Pakistan
Is Pakistan in for an “Arab Spring”?
ಕಳೆದ ಸೋಮವಾರದಿಂದ ಇಂಥ ಹತ್ತಾರು ಹೆಡ್‌ಲೈನ್‌ಗಳನ್ನು ಪತ್ರಿಕೆಗಳಲ್ಲಿ ಓದಿರುತ್ತೀರಿ, ಟೀವಿ ಚಾನೆಲ್‌ಗಳಲ್ಲಿ ನೋಡಿರುತ್ತೀರಿ, ಚರ್ಚೆಗಳಲ್ಲಿ ಕೇಳಿರುತ್ತೀರಿ, ಇದೇನಿದು ಎಂದು ಕುತೂಹಲಕ್ಕೊಳಗಾಗಿರುತ್ತೀರಿ, ನಮ್ಮ ಇಬ್ಬರು ಸೈನಿಕರನ್ನು ಬರ್ಬರವಾಗಿ ಹತ್ಯೆಗೈದಿರುವುದರ ಬಗೆಗಿನ ಕೋಪದ ನಡುವೆಯೂ ಏನು ನಡೆಯುತ್ತಿದೆ ಎಂದು ಆಶ್ಚರ್ಯ ಪಟ್ಟಿರುತ್ತೀರಿ.
ಇಷ್ಟಕ್ಕೂ ಪಾಕಿಸ್ತಾನದಲ್ಲಿ ನಡೆಯುತ್ತಿರುವುದಾದರೂ ಏನು?
ಜನವರಿ 15ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಬೃಹತ್ ರ್ಯಾಲಿಯೊಂದಕ್ಕೆ ಮೌಲಾನಾ ಮೊಹಮದ್ ತಾಹಿರುಲ್ ಖಾದ್ರಿ ಕರೆ ನೀಡಿದ್ದರು. ಅಷ್ಟರೊಳಗೆ ಪಾಕಿಸ್ತಾನ ಸರ್ಕಾರ ರಾಜಿನಾಮೆ ಇತ್ತು ಕೆಳಗಿಳಿಯಬೇಕು, ಹಾಲಿ ಚುನಾವಣಾ ಆಯೋಗವನ್ನು ಬರ್ಖಾಸ್ತು ಮಾಡಬೇಕು, ಮುಂಬರುವ ಚುನಾವಣೆಗಳನ್ನು ಮುಂದೂಡಬೇಕು, ಮಧ್ಯಂತರ ಸರ್ಕಾರ ಸ್ಥಾಪನೆಯಾಗಬೇಕು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಾದ ಅರ್ಹತೆಯನ್ನು ನಿಗದಿಪಡಿಸಬೇಕು, ಇಲ್ಲವಾದರೆ ಬೇಡಿಕೆ ಈಡೇರುವವರೆಗೂ ಧರಣಿ ಕೂರುವುದಾಗಿ ಖಾದ್ರಿ ಬೆದರಿಕೆ ಹಾಕಿದರು. ಇಂಥದ್ದೊಂದು ಕರೆ ಕೊಟ್ಟಿದ್ದೇ ತಡ, ಪಾಕಿಸ್ತಾನದಲ್ಲಿ “Arab Spring” “Million Man March” ಎಂದೆಲ್ಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಭಾರತೀಯ ಮಾಧ್ಯಮಗಳೂ ವ್ಯಾಖ್ಯಾನ ಮಾಡಿದವು. ಇತ್ತ ಖಾದ್ರಿಯವರಿಗೆ ಪಾಕಿಸ್ತಾನಿ ಸೇನೆಯ ಪರೋಕ್ಷ ಬೆಂಬಲವೂ ಇತ್ತು. ರ್ಯಾಲಿಗೆ ಭಾರೀ ಜನಸಾಗರ ಹರಿದುಬರದಿದ್ದರೂ Arab Sprin ನಂಥ ಚಳವಳಿ ಪಾಕಿಸ್ತಾನದಲ್ಲಿ ರೂಪುಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದಿರಲಿ, ಈ Arab Sprin ಅಂದರೇನು?
ವಸಂತ ಕಾಲ ಬಂದಾಗ
ಮಾವು ಚಿಗುರಲೇ ಬೇಕು
ಕೋಗಿಲೆ ಹಾಡಲೇಬೇಕು
ಎಂಬ ಹಾಡನ್ನು ನಾವೆಲ್ಲ ಕೇಳಿದ್ದೇವೆ. ಚಳಿಗಾಲ ಮುಗಿದ ನಂತರ ಬರುವ ಕಾಲವೇ ಈ “Spring’ (ವಸಂತ ಕಾಲ). ಆಗ Rejuvenation ಅನ್ನು ಕಾಣುತ್ತೇವೆ. ಒಂದು ಕೆಟ್ಟಕಾಲದಿಂದ ಒಳ್ಳೆಯ ಕಾಲದತ್ತ ಸಾಗುವುದು ಎನ್ನಬಹುದು. “Prague Spring’ ಎಂಬ ಪದಪುಂಜ 1968ರಲ್ಲೇ ಕೇಳಿಬಂದಿತ್ತು. ಅಲೆಗ್ಸಾಂಡರ್ ಡುಸೆಕ್ ಅವರು ಸೋವಿಯತ್ ಒಕ್ಕೂಟದ ಕರಿನೆರಳು ಹಾಗೂ ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿದ್ದ ಝೆಕಸ್ಲೊವಾಕಿಯಾವನ್ನು ಅದರಿಂದ ಹೊರಗೆಳೆದು ಸುಧಾರಣೆಗಳನ್ನು ತಂದು ಜನರಿಗೆ ಹಕ್ಕುಗಳನ್ನು ನೀಡಲು ಪ್ರಯತ್ನಿಸಿದ ಪರ್ವವನ್ನು ‘ಪ್ರೇಗ್ ಸ್ಪ್ರಿಂಗ್’ ಎಂದು ಕರೆದರೆ, ನಿರಂಕುಶಪ್ರಭುಗಳು, ಸರ್ವಾಧಿಕಾರಿಗಳು, ರಾಜಾಡಳಿತಗಳ ದಬ್ಬಾಳಿಕೆಯ ವಿರುದ್ಧ 2010, ಡಿಸೆಂಬರ್ 18ರಂದು ಮುಸ್ಲಿಂ ರಾಷ್ಟ್ರಗಳಲ್ಲಿ ಆರಂಭವಾದ ಪ್ರದರ್ಶನ, ಪ್ರತಿಭಟನೆ, ಮುಷ್ಕರ, ಮುತ್ತಿಗೆಗಳು “Arab Spring’ಎಂಬ ಹೆಸರು ಪಡೆದವು. ಇಂಥದ್ದೊಂದು ಪ್ರತಿಭಟನೆ, ಕ್ರಾಂತಿಯ ಮೊದಲ ಜ್ವಾಲೆ ಕಂಡುಬಂದಿದ್ದು ಟುನೀಷಿಯಾದಲ್ಲಿ. ಅಲ್ಲಿನ ಅಧ್ಯಕ್ಷ ಝಿನ್-ಎಲ್-ಅಬಿದಿನ್ ಬೆನ್ ಅಲಿಯನ್ನು ಕಿತ್ತೊಗೆದು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಜನ ಮುಂದಾದರು, ಅದರಲ್ಲಿ ಯಶಸ್ವಿಯೂ ಆದರು. ಅದನ್ನು “Jasmine Revolution’ಎಂದು ಕರೆಯಲಾಯಿತು. ಅದಕ್ಕೆ ಸಮಾನಾಂತರವಾಗಿ ಈಜಿಪ್ತ್, ಲಿಬಿಯಾ, ಯೆಮನ್‌ನಲ್ಲಿ ಎದ್ದ ಕ್ರಾಂತಿ ಅಲ್ಲಿನ ಆಡಳಿತಗಾರರನ್ನು ಗದ್ದುಗೆಯಿಂದ ಹೊರದಬ್ಬಿದರೆ, ಒಮಾನ್, ಬಹ್ರೇನ್, ಸಿರಿಯಾ, ಅಲ್ಜೀರಿಯಾ, ಇರಾಕ್, ಜೋರ್ಡಾನ್, ಕುವೈತ್, ಮೊರಾಕ್ಕೊ, ಸುಡಾನ್, ಲೆಬನಾನ್‌ಗಳಲ್ಲಿ ಸರ್ಕಾರ ವಿರೋಧಿ ಧ್ವನಿ, ಪ್ರತಿಭಟನೆಗಳು ಕಂಡುಬಂದವು. ಇವೆಲ್ಲ ಒಟ್ಟಾರೆಯಾಗಿ ‘ಅರಬ್ ಸ್ಪ್ರಿಂಗ್’ ಎನಿಸಿವೆ. ರಾಜಧಾನಿ ಕೈರೋದ ತಾಹ್ರಿರ್ ವೃತ್ತದಲ್ಲಿ ನೆರೆದ ಲಕ್ಷಾಂತರ ಜನ ಮೂವತ್ತು ವರ್ಷಗಳಿಂದ ಈಜಿಪ್ತನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಹೋಸ್ನಿ ಮುಬಾರಕ್ ಎಂಬ ಬಲಿಷ್ಠ ಸರ್ವಾಧಿಕಾರಿಯನ್ನೇ ಕಿತ್ತೊಗೆದುಬಿಟ್ಟರು, 42 ವರ್ಷಗಳಿಂದ ಲಿಬಿಯಾವನ್ನಾಳುತ್ತಿದ್ದ ಮುಅಮ್ಮರ್ ಗಡಾಫಿಯನ್ನು ಅಮೆರಿಕ-ಬ್ರಿಟನ್-ಫ್ರಾನ್ಸ್ ಸಹಾಯದಿಂದ ಕೊಂದೇ ಬಿಟ್ಟರು.
ಅದಿರಲಿ, ಇಸ್ಲಾಮಿಕ್ ರಾಷ್ಟ್ರಗಳಲ್ಲೇ ಇಂಥ ಬೆಳವಣಿಗೆಗಳು ಕಂಡುಬರುತ್ತಿರುವುದೇಕೆ?
ಆಫ್ಘಾನಿಸ್ತಾನ, ಬ್ರೂನಿ, ಇರಾನ್, ಮಾರಿಷಸ್, ಪಾಕಿಸ್ತಾನ, ಸೌದಿ ಅರೇಬಿಯಾ, ಯೆಮನ್, ಅಲ್ಜೀರಿಯಾ, ಬಹ್ರೇನ್, ಬಾಂಗ್ಲಾದೇಶ, ಈಜಿಪ್ತ್, ಇರಾಕ್, ಕುವೈತ್, ಲಿಬಿಯಾ, ಮಲೇಷ್ಯಾ, ಮಾಲ್ಡೀವ್ಸ್, ಮೊರಾಕ್ಕೊ, ಒಮಾನ್, ಪ್ಯಾಲೆಸ್ತೀನ್, ಸೊಮಾಲಿಯಾ, ಸುಡಾನ್, ಸಿರಿಯಾ, ಟುನೀಷಿಯಾ, ಯುಎಇ, ಇಂಡೋನೇಷಿಯಾ ಹೀಗೆ 26 ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳಿವೆ. ಇವುಗಳಲ್ಲಿ ಸದೃಢ ಪ್ರಜಾತಂತ್ರ, ಇರುವ ಒಂದು ರಾಷ್ಟ್ರವನ್ನು ತೋರಿಸಿ ನೋಡೋಣ? ಹಾಗಾಗಿ ಜನರಲ್ಲಿ ಹತಾಶೆ, ನಿರಾಸೆ, ಅತೃಪ್ತಿಗಳು ಮನೆಮಾಡಿವೆ. ಅದರ ಪರಿಣಾಮವಾಗಿ ಪ್ರತಿಭಟನೆಗಳೇಳುತ್ತಿವೆ. ಸರ್ವಾಧಿಕಾರಿಗಳನ್ನು, ನಿರಂಕುಶಪ್ರಭುಗಳನ್ನು ಕಿತ್ತೊಗೆಯಬೇಕೆಂಬ ಅವರ ಉದ್ದೇಶ ಖಂಡಿತ ಸರಿಯಾಗಿಯೇ ಇದೆ. ಆದರೆ ಅಬಿದಿನ್ ಬೆನ್ ಅಲಿಯನ್ನು ಕಿತ್ತೊಗೆದ ಮಾತ್ರಕ್ಕೆ ಟುನೀಷಿಯಾ ನೆಮ್ಮದಿಯಾಯಿತೆ? ಗಡಾಫಿಯನ್ನು ಕೊಂದ ನಂತರ ಲಿಬಿಯಾದಲ್ಲಿ ಜನತಂತ್ರ ನೆಲಸಿತೆ? ಹೋಸ್ನಿ ಮುಬಾರಕ್‌ರನ್ನು ಜೈಲಿಗಟ್ಟಿದ ನಂತರ ಈಜಿಪ್ತ್ ಶಾಂತವಾಯಿತೆ?
ಅಲ್ಲಿ ಆಗಿದ್ದಾದರೂ ಏನು? ಸಾಧನೆಯಾದ ಉದ್ದೇಶವಾದರೂ ಯಾವುದು?
ಹೋಸ್ನಿ ಮುಬಾರಕ್‌ರನ್ನು ಹೊರದಬ್ಬುವಾಗ ಕೈಜೋಡಿಸಿದ್ದು 1928ರಲ್ಲೇ ಸ್ಥಾಪನೆಯಾಗಿದ್ದ ‘ಮುಸ್ಲಿಂ ಬ್ರದರ್‌ಹುಡ್’ ಎಂಬ ಕಟ್ಟರ್‌ವಾದಿ ಸಂಘಟನೆ. ಜಿಹಾದೇ ನಮ್ಮ ಮಾರ್ಗ ಎನ್ನುವ ಈ ಸಂಘಟನೆ ಇವತ್ತು ಈಜಿಪ್ತ್‌ನ ಜುಟ್ಟು ಹಿಡಿದುಕೊಂಡಿದೆ. ನೈಜ ಪ್ರಜಾತಂತ್ರ ಸ್ಥಾಪನೆಯ ಕಥೆ ಬಿಡಿ, ಅಧ್ಯಕ್ಷೀಯ ಚುನಾವಣೆ ಎಂಬ ಕಪಟ ನಾಟಕವಾಡಿ ಈಜಿಪ್ತನ್ನು ಧರ್ಮಾಂಧತೆಯ ಕೂಪಕ್ಕೆ ತಳ್ಳಿ, ಧರ್ಮವೇ ಎಲ್ಲದಕ್ಕೂ ಪರಿಹಾರ ಎನ್ನುತ್ತಿದೆ. ಆದರೆ ಅಂದು ಜನ ಬೀದಿಗಿಳಿದಿದ್ದು ಸ್ವಾಭಿಮಾನ, ಆತ್ಮಗೌರವ, ಸ್ವ-ಆಡಳಿತ ಹಾಗೂ ಸ್ವಾತಂತ್ರ್ಯಕ್ಕಾಗಿ. ಕೊನೆಗೆ ದೊರೆತಿದ್ದು, ಮಗದೊಂದು ರೀತಿಯ ದಬ್ಬಾಳಿಕೆ, ಹತ್ತಿಕ್ಕುವಿಕೆ. ಇತ್ತ ಗಡಾಫಿಯ ಆಡಳಿತವನ್ನು ಕೊನೆಗಾಣಿಸಲು ಸಹಾಯ ಮಾಡಿದ್ದೇ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್. ಅದಕ್ಕೆ ಪ್ರತಿಯಾಗಿ ಸಿಕ್ಕಿದ್ದೇನು? ಅಮೆರಿಕದ ರಾಯಭಾರಿ ಕ್ರಿಸ್ಟೋಫರ್ ಸ್ಟೀವನ್ಸ್‌ರನ್ನೇ ಸುಟ್ಟುಹಾಕಿದರು! ಏಕಿಂಥ ಘಟನೆಗಳು ಸಂಭವಿಸುತ್ತಿವೆ ಅಂದುಕೊಂಡಿರಿ? ‘ಅರಬ್ ಸ್ಪ್ರಿಂಗ್’ ಎಂಬುದು ಕೆಟ್ಟಿದ್ದರಿಂದ ಒಳಿತಿನೆಡೆಗೆ ಸಾಗುವ ಕ್ರಾಂತಿಯಾಗಲಿಲ್ಲ. ಬದಲಿಗೆ ಮೂಲಭೂತವಾದಿಗಳು ಗದ್ದುಗೆ ಹಿಡಿಯುವ ಮಾರ್ಗವಾಗಿ ಬಿಟ್ಟಿತು. ಸರ್ವಾಧಿಕಾರಿಗಳಿದ್ದಾಗ ಅಲ್‌ಖೈದಾದಂಥ ಸಂಘಟನೆಗಳಿಗೆ ಜಾಗವಿರಲಿಲ್ಲ. ಈಗ ಆಗಿರುವುದೇನು? ಅಲ್‌ಖೈದಾ ಇನ್ ದಿ ಇಸ್ಲಾಮಿಕ್ ಮಗ್ರೇಬ್ (AQIM) ಎಂಬ ಜಿಹಾದಿ ಸಂಘಟನೆ ಮಾಲಿ ರಾಷ್ಟ್ರದಲ್ಲಿ ಬೇರುಬಿಟ್ಟಿದ್ದರೆ ಜಭತ್ ಅಲ್ ನುಸ್ರಾ ಎಂಬ ಅಲ್‌ಖೈದಾಗೆ ಸೇರಿದ ಭಯೋತ್ಪಾದಕ ಸಂಘಟನೆ ಕ್ರಾಂತಿಯ ಹೆಸರಿನಲ್ಲಿ ಸಿರಿಯಾವನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಅಲ್‌ಖೈದಾವಂತೂ ಈಜಿಪ್ತ್, ಟುನೀಷಿಯಾ, ಲಿಬಿಯಾಗಳಿಗೆ ವ್ಯಾಪಿಸಿಬಿಟ್ಟಿದೆ. ಅಣಕವೆಂದರೆ ಬೆನ್ ಅಲಿ, ಮುಬಾರಕ್, ಗಡಾಫಿ ಇರುವವರೆಗೂ ಇಂಥ ಸಂಘಟನೆಗಳು ತಲೆಯೆತ್ತಲೂ ಬಿಟ್ಟಿರಲಿಲ್ಲ, ಧಾರ್ಮಿಕ ಮೂಲಭೂತವಾದಕ್ಕೂ ಎಡೆಮಾಡಿಕೊಟ್ಟಿರಲಿಲ್ಲ. ಹಾಗಾಗಿ ಪ್ರಸ್ತುತ ಕಂಡುಬರುತ್ತಿರುವ ಚಳವಳಿಯನ್ನು Arab Uprising, Arab Awakening, Arab Sprin ಎಂದು ಯಾರೇನೇ, ಎಷ್ಟೇ ಬೊಬ್ಬೆ ಹಾಕಿದರೂ ಅರಬ್ ಸ್ಪ್ರಿಂಗ್‌ನಿಂದ ನೆಲೆಗೊಳ್ಳುತ್ತಿರುವುದು ಶಾಂತಿಯಲ್ಲ, ಇಸ್ಲಾಮಿಕ್ ತೀವ್ರವಾದ. ಇಂಥ ತೀವ್ರವಾದಿಗಳು ಒಡಲಲ್ಲಿ ಕ್ರೈಸ್ತ ಹಾಗೂ ಅನ್ಯಧರ್ಮ ವಿರೋಧಿಗಳು, ಪಾಶ್ಚಿಮಾತ್ಯ ದ್ವೇಷಿಗಳಾಗಿದ್ದಾರೆ. ನೇಟೋದ ಸದಸ್ಯ ರಾಷ್ಟ್ರವಾಗಿದ್ದರೂ ಇವತ್ತಿಗೂ ಏಕೆ ಇಸ್ಲಾಮಿಕ್ ರಾಷ್ಟ್ರ ಟರ್ಕಿಯನ್ನು ಐರೋಪ್ಯ ಒಕ್ಕೂಟಕ್ಕೆ ಸೇರಿಸಿಕೊಂಡಿಲ್ಲ ಗೊತ್ತೇ? ಐರೋಪ್ಯ ಒಕ್ಕೂಟದೊಳಗೆ ದೇಶದೇಶಗಳ ಗಡಿಗಳು ಹೆಚ್ಚೂ ಕಡಿಮೆ ನಿರ್ಬಂಧ ಮುಕ್ತವಾಗಿವೆ, ಟರ್ಕಿಯನ್ನು ಸೇರಿಸಿಕೊಂಡರೆ ಅಂಥದ್ದೇ ಸ್ಥಾನಮಾನ ಕೊಡಬೇಕಾಗುತ್ತದೆ, ಅದರಿಂದ ಮೂಲಭೂತವಾದಿಗಳು ಯುರೋಪ್‌ಗೂ ಕಾಲಿಡುತ್ತಾರೆ ಎಂಬ ಭಯ.
ಹಾಗಂತ…
ಪಾಕಿಸ್ತಾನದ ತಾಹಿರುಲ್ ಖಾದ್ರಿಯವರ ಉದ್ದೇಶ ಸರಿಯಿಲ್ಲ ಎಂದರ್ಥವಲ್ಲ. ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೂ ಬೃಹತ್ ರ್ಯಾಲಿ ನಡೆಸಿರುವ ಅವರ ಉದ್ದೇಶ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ನೇತೃತ್ವದ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವುದೇ ಆಗಿದೆ. ಅವರೊಬ್ಬ ಅದ್ಭುತ ವಾಗ್ಮಿ. ಅವರು ಭ್ರಷ್ಟಾಚಾರದ ವಿರೋಧಿ ಮಾತ್ರವಲ್ಲ ಭಯೋತ್ಪಾದನೆಯನ್ನೂ ಖಡಾಖಂಡಿತವಾಗಿ ವಿರೋಧಿಸುತ್ತಾರೆ. ಭಯೋತ್ಪಾದನೆ ವಿರುದ್ಧ 600 ಪುಟದ ಫತ್ವಾವನ್ನೇ ಹೊರಡಿಸಿದ್ದಾರೆ. ಕಳೆದ ವರ್ಷ ಭಾರತಕ್ಕೂ ಬಂದಿದ್ದ ಖಾದ್ರಿ, ಆಧ್ಯಾತ್ಮ, ಭಕ್ತಿ ಪರಂಪರೆಯ ಸೂಫಿಯಿಸಂನ ಅನುಯಾಯಿ. ಇವರ ಮಾತುಗಳು ಪ್ರಖರವಾದರೂ ಪಕ್ಷಪಾತಿಯಲ್ಲ. ಹಾಗಾಗಿಯೇ ಪಾಕಿಸ್ತಾನದ ಯುವಜನತೆ ಖಾದ್ರಿಯವರ ಬೆಂಬಲಕ್ಕೆ ನಿಂತಿದೆ.
ಅಂದಮಾತ್ರಕ್ಕೆ…
ಭಾರತ ನೆಮ್ಮದಿಯ ನಿಟ್ಟುಸಿರು ಬಿಡಬಹುದೇ? ಇಷ್ಟಕ್ಕೂ ಖಾದ್ರಿಯವರ ಹಿಂದಿರುವುದು ಪಾಕಿಸ್ತಾನದ ರೋಗಗ್ರಸ್ತ ಸೇನೆ. ಕಳೆದ ಅರವತ್ತೈದು ವರ್ಷಗಳ ಇತಿಹಾಸದಲ್ಲಿ ಅರ್ಧದಷ್ಟು ಕಾಲ ಪಾಕಿಸ್ತಾನವನ್ನು ಆಳಿರುವುದು ಹಾಗೂ ಅಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳುವುದಕ್ಕೆ ಕಂಟಕವಾಗಿರುವುದೇ ಈ ಸೇನೆ. ಹಾಗಾಗಿ ಸೇನೆಯ ಉದ್ದೇಶದ ಬಗ್ಗೆ ಅನುಮಾನ ಪಡಲೇಬೇಕಾಗಿದೆ. ಒಂದೆಡೆ ಖಾದ್ರಿಗೆ ತೆರೆಮರೆಯಲ್ಲಿ ಬೆಂಬಲ ಕೊಡುತ್ತಿರುವ ಸೇನೆ, ಗಡಿಯಲ್ಲಿ ನಮ್ಮ ಇಬ್ಬರು ಸೈನಿಕರನ್ನು ಬರ್ಬರವಾಗಿ ಹತ್ಯೆಗೈಯುವ ಮೂಲಕ ಭಾರತವಿರೋಧಿ ಭಾವನೆಯನ್ನೂ ಎಬ್ಬಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಖಾದ್ರಿಯವರ ಉದ್ದೇಶ ಎಷ್ಟೇ ಒಳ್ಳೆಯದಾಗಿದ್ದರೂ ಪಾಕಿಸ್ತಾನದಲ್ಲಿ ಎದ್ದಿರುವ ಹೊಸ ಕ್ರಾಂತಿ ಅರಬ್ ಸ್ಪ್ರಿಂಗ್‌ನಂತಾದರೆ ಆ ಧಾರ್ಮಿಕ ತೀವ್ರವಾದದ ಅಲೆ ಭಾರತಕ್ಕೂ ಅಪ್ಪಳಿಸುವುದಿಲ್ಲ ಎಂಬುದಕ್ಕೆ ಖಾತ್ರಿಯೇನು?
ಒಳà³à²³à³† ಆರà³à²Ÿà²¿à²•ಲೠಸರ೅ ಬೆತà³à²¤à²²à³† ಜಗತà³à²¤à³ ಕನà³à²¨à²¡ ಓದà³à²—ರ ಸಾಮಾನà³à²¯ ಜà³à²žà²¾à²¨ ಹೆಚಿಸà³à²¤à³à²¤à³†… ಕೀಪೠರೈಟಿ೦ಗೠಸರೠ🙂
True words… pratap
True words…
definetly sir, pak doesn’t want peace with india but want piece of indians
definetly sir