Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅಂಥ ಶಿಕ್ಷೆ ಕೊಡಲು ಅವಳು ಮಾಡಿದ ತಪ್ಪಾದರೂ ಏನು?

ಅಂಥ ಶಿಕ್ಷೆ ಕೊಡಲು ಅವಳು ಮಾಡಿದ ತಪ್ಪಾದರೂ ಏನು?

ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಡೆವಿಡ್ ಬೆಕಮ್, ಹಾಲಿವುಡ್ ತಾರೆಗಳಾದ ಸ್ಕಾರ್ಲೆಟ್ ಜೊಹಾನ್ಸನ್. ಟೋನಿ ರಾಬಿನ್ಸನ್, ಜೋಆನ್ನಾ ಲುಮ್ಲೆ ಅಂತಹ ಖ್ಯಾತನಾಮರೇ ಆಕೆಯ ಅಭಿಮಾನಿಗಳಾಗಿದ್ದಾರೆ, ಆಕೆಯ ಪರವಾಗಿ ಆಗಾಗ್ಗೆ ಧ್ವನಿಯೆತ್ತುತ್ತಾರೆ. ಆಕೆಯನ್ನು ಭೇಟಿ ಮಾಡಲು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯೇ ಅಣಿಯಾಗುತ್ತಿದ್ದಾರೆ. ಹಾಗಿರುವಾಗ ಒಬ್ಬ ಭಾವುಕ ಅಭಿಮಾನಿ ಜೀವದ ಹಂಗುತೊರೆದು ತನ್ನ ಆರಾಧ್ಯ ದೈವವನ್ನು ಕಾಣಲು ಬಂದಿದ್ದರಲ್ಲಿ ಯಾವ ಆಶ್ಚರ್ಯವಿದೆ?

ಮೊನ್ನೆ ಮೇ 3ರಂದು ನಡೆದಿದ್ದು ಇಷ್ಟೇ.

ಐವತ್ನಾಲ್ಕು ವರ್ಷದ ಜಾನ್ ವಿಲಿಯಂ ಯೆಟ್ಟಾವ್ ಮೂಲತಃ ಅಮೆರಿಕದವರು. ಪ್ರಸ್ತುತ ಮ್ಯಾನ್ಮಾರ್ (ಬರ್ಮಾ)ದಲ್ಲಿದ್ದಾರೆ. ಆತ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಜೀವವನ್ನೇ ಮುಡಿಪಾಗಿಟ್ಟಿರುವ ಡಾ ಆಂಗ್ ಸಾನ್ ಸೂಕಿಯ ಕಟ್ಟಾ ಅಭಿಮಾನಿ. 2009, ಮೇ 3ರಂದು ಆತನಿಗೊಂದು ಕನಸು ಬಿತ್ತು. ಯಾವುದನ್ನು ಆತ ಊಹಿಸುವುದಕ್ಕೂ ಹೆದರುತ್ತಿದ್ದನೋ ಅಂತಹ ಘಟನೆ ಕನಸಿನಲ್ಲಿ ನಡೆದುಹೋಯಿತು, ತನ್ನ ನೆಚ್ಚಿನ ನಾಯಕಿ ಸೂಕಿಯನ್ನು ಹತ್ಯೆಗೈಯ್ಯುವುದನ್ನು ಕಂಡ. ಮನಸ್ಸು ತಡೆಯದಾಯಿತು. ನಡುರಾತ್ರಿಯಲ್ಲೇ ಬರ್ಮಾ ರಾಜಧಾನಿ ಯಾಂಗಾನ್(ರಂಗೂನ್)ನಲ್ಲಿರುವ ಸೂಕಿಯ ಮನೆಯತ್ತ ಕಾಲು ಹಾಕಿದ. ಆದರೆ ಸೂಕಿಯನ್ನು ಗೃಹ ಬಂಧನದಲ್ಲಿಡಲಾಗಿದ್ದು, ಸುತ್ತ ಮಿಲಿಟರಿ ಪಹರೆಯಿದೆ. ಇಷ್ಟಾಗಿಯೂ ಮನೆಯನ್ನು ಆವರಿಸಿರುವ ಸರೋವರವನ್ನು ಈಜಿ ನಿವಾಸದೊಳಕ್ಕೆ ಕಾಲಿಟ್ಟ. ಆದರೆ ಕೊರೆಯುವ ಚಳಿ ಹಾಗೂ ನಡುರಾತ್ರಿಯಲ್ಲಿ ನೀರಿಗಿಳಿದ ಪರಿಣಾಮ ಆತನ ಕಾಲುಗಳು ಸೆಟೆದುಕೊಂಡು ಬಿಟ್ಟವು. ಅಂತಹ ಪರಿಸ್ಥಿತಿಯಲ್ಲಿ ತನ್ನ ಅಭಿಮಾನಿಯನ್ನು ಕಂಡ ಸೂಕಿಯ ಮನಸ್ಸು ತಡೆಯ ದಾಯಿತು. ಅಪಾಯದ ಅರಿವಿದ್ದಾಗ್ಯೂ ಅಂದು ತನ್ನ ಮನೆಯೊಳಗೆ ತಂಗಲು ಆತನಿಗೆ ಅವಕಾಶ ಮಾಡಿಕೊಟ್ಟಳು. ಆದರೆ ಮನೆಯಿಂದ ಆಚೆ ಹೋಗುವಾಗ ಜಾನ್ ಯೆಟ್ಟಾವ್ ಕಾವಲುಗಾರರಿಗೆ ಸಿಕ್ಕಿ ಬಿದ್ದ. ಗೃಹಬಂಧನ ಶಿಕ್ಷೆಯ ನಿಯಮಗಳನ್ನು ಉಲ್ಲಂಘಿಸಿ ಸೂಕಿ ಅನ್ಯನಿಗೆ ಆಶ್ರಯ ನೀಡಿದ್ದು ಮಿಲಿಟರಿ ಆಡಳಿತದ ಕಣ್ಣನ್ನು ಕೆಂಪಾಗಿಸಿತು. ಹಾಗಾಗಿ ಮೇ ೧೩ರಂದು ಸೂಕಿಯನ್ನೇ ಬಂಧಿಸಿದ ಮಿಲಿಟರಿ ಸರಕಾರ, ಮೇ. ೧೮ರಿಂದ ಆಕೆಯನ್ನು ವಿಚಾರಣೆಗೆ ಗುರಿಪಡಿಸಿದೆ. ಐದು ವರ್ಷಗಳ ಕಾಲ ಜೈಲಿಗೆ ತಳ್ಳುವ ಸಾಧ್ಯತೆ ದಟ್ಟವಾಗಿದೆ.

ಅವಳಿಗೇ ಏಕೆ ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ?

ಒಂದು ದಿನವನ್ನು ಸಂಪೂರ್ಣವಾಗಿ ಮನೆಯೊಳಗೆ ಕಳೆಯುವುದೇ ನಮಗೆ ಕಷ್ಟವಾಗುತ್ತದೆ. ಆದರೆ ಸೂಕಿ ಕಳೆದ 20 ವರ್ಷಗಳಲ್ಲಿ 13 ವರ್ಷಗಳನ್ನು ಜೈಲು ಹಾಗೂ ಗೃಹ ಬಂಧನದಲ್ಲೇ ಕಳೆದಿದ್ದಾಳೆ. ಆದರೂ ಅವಳ ಗೋಳಿಗೇಕೆ ಕೊನೆಯಿಲ್ಲ? ಅವಳೇನು ತಪ್ಪು ಮಾಡಿದ್ದಾಳೆ? ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡ, ಇಬ್ಬರು ಮಕ್ಕಳು, ಕೈ ತುಂಬಾ ಸಂಬಳ ತಂದುಕೊಡುವ ಕೆಲಸ ಎಲ್ಲವನ್ನೂ ಬಿಟ್ಟು ಬ್ರಿಟನ್‌ನಿಂದ ಬರ್ಮಾಕ್ಕೆ ಮರಳಿ, ಆಕೆ ಏಕಾಗಿ ಹೀನಾತಿ ಹೀನ ಬದುಕು ಸಾಗಿಸುತ್ತಿದ್ದಾಳೆ?

ಇವತ್ತು ನಂಬಿದ ಧ್ಯೇಯಕ್ಕೆ ಬದ್ಧರಾಗಿರುವ, ಜೀವನವನ್ನೇ ಒಂದು ಪ್ರೇರಣೆ ಹಾಗೂ ಮಾದರಿಯಾಗಿಸಿಕೊಂಡಿರುವ ಕೆಲವೇ ಕೆಲವು ಜೀವಂತ ಉದಾಹರಣೆಗಳಲ್ಲಿ ಸೂಕಿ ಒಬ್ಬಳು. ಅವಳು ಜನಿಸಿದ್ದು ಜೂನ್ 19, 1945ರಲ್ಲಿ. ಅಪ್ಪ ಜನರಲ್ ಆಂಗ್ ಸಾನ್. ಬ್ರಿಟಿಷರ ಆಡಳಿತಕ್ಕೊಳಗಾಗಿದ್ದ ಬರ್ಮಾದ ಮೇಲೆ ಎರಡನೇ ಮಹಾಯುದ್ಧದಲ್ಲಿ ಆಕ್ರಮಣಗೈದ ಜಪಾನ್ ಅನ್ನು ಹಿಮ್ಮೆಟ್ಟಿಸಿದ ೩೦ ವೀರ ಸೈನಿಕರಲ್ಲಿ ಆತನೂ ಒಬ್ಬ. ಅಂತಹ ವೀರತ್ವ ತೋರಿದ ಆಂಗ್ ಸಾನ್, ಜಪಾನನ್ನು ತಡೆದ ಸಾಧನೆಗೆ ಪ್ರತಿಯಾಗಿ ನಮಗೆ ಸ್ವಾತಂತ್ರ್ಯ ಕೊಡಿ ಎಂದು ಬ್ರಿಟಿಷರನ್ನು ಒತ್ತಾಯಿಸಿದರು. ಅದರಲ್ಲಿ ಯಶಸ್ವಿಯಾದರು. ಹೀಗೆ ಸ್ವತಂತ್ರ ಬರ್ಮಾ ಸ್ಥಾಪನೆಯಾಗಿ ಅದರ ಮೊದಲ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಿಲಿಟರಿಯಲ್ಲೇ ಇದ್ದ ಅಧಿಕಾರದಾಹಿಗಳು ಜನರಲ್ ಆಂಗ್ ಸಾನ್ ಅವರನ್ನು ಹತ್ಯೆಗೈದರು. ಅಪ್ಪ ಯಾರೆಂದು ಗುರುತು ಹಿಡಿಯುವ ವಯಸ್ಸಿಗೂ ಮೊದಲೇ ಸೂಕಿ ತಬ್ಬಲಿಯಾದಳು. ಆ ಘಟನೆ ಅವಳ ಮುಂದಿನ ಜೀವನದ ಮೇಲೆ ಗಾಢ ಪರಿಣಾಮ ಬೀರಿತು. ಈ ಸೂಕಿಗೂ ಭಾರತಕ್ಕೂ ಅವಿನಾಭಾವ ಸಂಬಂಧ. ೧೯೬೦ರಲ್ಲಿ ಸೂಕಿಯ ಅಮ್ಮ ಡಾ ಖಿನ್ ಕಿ ಅವರನ್ನು ಭಾರತದ ರಾಯಭಾರಿಯನ್ನಾಗಿ ಬರ್ಮಾ ಸರಕಾರ ನಿಯುಕ್ತಿ ಗೊಳಿಸಿತು. ಆಗ ಸೂಕಿಗೆ 15 ವರ್ಷ. ಅಮ್ಮನ ಜತೆ ನಮ್ಮ ದಿಲ್ಲಿಗೆ ಬಂದಳು. ದಿಲ್ಲಿಯ ‘ಲೇಡಿ ಶ್ರೀರಾಮ್ ಕಾಲೇಜ್’ ಸೇರಿದಳು. ಮಹಾತ್ಮ ಗಾಂಧಿಯವರ ಬಗ್ಗೆ ತಿಳಿದುಕೊಂಡಿದ್ದು ಭಾರತಕ್ಕೆ ಬಂದ ಮೇಲೆಯೇ. ಅದು ಆಕೆಯ ಮೇಲೆ ಎಂತಹ ಪರಿಣಾಮ ಬೀರಿತು ಎಂದರೆ ಆಕೆ ಕೂಡ ಮುಂದೆ ಅಹಿಂಸಾ ಮಾರ್ಗವನ್ನೇ ತುಳಿದಳು. ಅದೇನೆ ಇರಲಿ, ಲೇಡಿ ಶ್ರೀರಾಮ್ ಕಾಲೇಜು ಸೇರಿದ ಸೂಕಿ, ೧೯೬೪ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದಳು. ಪದವಿ ಪಡೆದುಕೊಂಡಳು. ವಿಶ್ವಸಂಸ್ಥೆಯ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಉದ್ಯೋಗಕ್ಕೂ ಸೇರಿದಳು. ಡಾ. ಮೈಕೆಲ್ ಏರಿಸ್ ಪರಿಚಿತರಾಗಿದ್ದು ಅದೇ ಸಂದರ್ಭದಲ್ಲಿ. ಪರಿಚಯ ಪ್ರೇಮಕ್ಕೆ ತಿರುಗಿತು. ಆದರೆ ವಿವಾಹವಾಗಬೇಕೆಂದಾದರೆ ನನ್ನದೊಂದು ಬಯಕೆಗೆ ಒಪ್ಪಿ ಕೊಳ್ಳಬೇಕು ಎಂದು ಸೂಕಿ ಪೂರ್ವ ಷರತ್ತು ಹಾಕಿದಳು!

“ಒಂದು ವೇಳೆ ನನ್ನ ದೇಶಬಾಂಧವರಿಗೆ ನನ್ನ ಅಗತ್ಯ ಎದುರಾದರೆ ಕರ್ತವ್ಯಕ್ಕೆ ಹಾಜರಾಗಲು ಅಡ್ಡಿಪಡಿಸಬಾರದು, ಬೆಂಬಲಕ್ಕೆ ನಿಲ್ಲಬೇಕು”.

ಅದಕ್ಕೇ ಅವಳು ನಮಗೆ ಇಷ್ಟವಾಗುವುದು. ಭವ್ಯ ಬದುಕು ಕಟ್ಟಿಕೊಳ್ಳಬೇಕಾದ ಸಂದರ್ಭದಲ್ಲೂ ತಾಯ್ನಾಡಿನವರ ಆರ್ದ್ರನಾದ ಅವಳಿಗೆ ಕೇಳುತ್ತಿತ್ತು. ಇತ್ತ 1972ರಲ್ಲಿ ವಿವಾಹ ಬಂಧನಕ್ಕೊಳಗಾದ ಸೂಕಿಗೆ ಇಬ್ಬರು ಗಂಡು ಮಕ್ಕಳೂ ಜನಿಸಿದರು. ಈ ಮಧ್ಯೆ ಜಪಾನಿ ಭಾಷೆ ಕಲಿಯಲು, ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಸೂಕಿ ಜಪಾನ್‌ನ ಕ್ಯೂಟೋ ವಿವಿಗೆ ತೆರಳಿದರೆ, ಪತಿ ಡಾ. ಏರಿಸ್ ಬುದ್ದಿಸಂ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಭಾರತದ ಶಿಮ್ಲಾಕ್ಕೆ ಬಂದರು. ಹೀಗೆ ತಾತ್ಕಾಲಿಕ ಅವಧಿಗೆ ದೂರವಾದ ಈ ದಂಪತಿ, 1987ರಲ್ಲಿ ಸೂಕಿ ಭಾರತಕ್ಕೆ ಮರಳುವುದರೊಂದಿಗೆ ಮತ್ತೆ ಒಂದಾದರು. “ಬ್ರಿಟಿಷ್ ಆಡಳಿತದ ವೇಳೆ ಭಾರತೀಯ ಬೌದ್ಧಿಕ ಪರಂಪರೆ” ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಲು ಸೂಕಿಗೆ ಸ್ಕಾಲರ್‌ಶಿಪ್ ಕೂಡ ದೊರೆಯಿತು. ಸ್ವಾಮಿ ವಿವೇಕಾನಂದ, ಶ್ರೀ ಅರವಿಂದೋ, ಟಾಗೋರ್, ಗಾಂಧಿ ಮುಂತಾದವರ ಸಾಧನೆ, ಕೊಡುಗೆಯನ್ನು ಅರಿತು ಕೊಳ್ಳುವ, ಪ್ರೇರೇಪಿತಳಾಗುವ ಅವಕಾಶ ಸೂಕಿಗೆ ಸಿಕ್ಕಿತು. “ಇಂಗ್ಲಿಷ್ ಭಾಷೆಯ ಮೇಲೆ ಸಾಧಿಸಿದ್ದ ಪ್ರಭುತ್ವದ ಬಲದಿಂದ ಈ ವ್ಯಕ್ತಿಗಳು ತಮ್ಮ ಚಿಂತನೆಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ಅವರು ಪಾಶ್ಚಿಮಾತ್ಯ ಭಾಷೆ, ನುಡಿಗಟ್ಟುಗಳನ್ನು ಅಷ್ಟು ಚೆನ್ನಾಗಿ ಕರಗತ ಮಾಡಿಕೊಂಡಿದ್ದ ಹಾಗೂ ಅದ್ಭುತವಾಗಿ ಪ್ರಯೋಗಿಸುವ ಸಾಮರ್ಥ್ಯ ಹೊಂದಿದ್ದರಿಂದಾಗಿ ಅವರ ಚಿಂತನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ಜಗತ್ತು ಒಪ್ಪಿಕೊಂಡಿತು” ಎಂದು ಆಕೆ ತನ್ನ ಸಂಶೋಧನಾ ಪ್ರಬಂಧದಲ್ಲಿ ಬರೆಯುತ್ತಾಳೆ. ಹೀಗೆ ಬಂದ ಕೆಲಸ ಮುಗಿಸಿ ಸೂಕಿ ಹಾಗೂ ಡಾ. ಏರಿಸ್ ೧೯೮೮ರಲ್ಲಿ ಬ್ರಿಟನ್‌ಗೆ ಮರಳಿದರು.

ಆದರೆ ವಿಧಿಯ ಯೋಚನೆ ಬೇರೆಯೇ ಆಗಿತ್ತು.

1988, ಮಾರ್ಚ್‌ನಲ್ಲಿ ಅಮ್ಮ ಡಾ ಖಿನ್ ಕಿಗೆ ಹೃದಯಾ ಘಾತವಾಗಿ ಹಾಸಿಗೆ ಹಿಡಿದಳು. ಸೂಕಿ ಇಂಗ್ಲೆಂಡ್ ಬಿಟ್ಟು ಬರ್ಮಾಕ್ಕೆ ಬಂದಳು. ಹೀಗೆ ಅಮ್ಮನ ಆರೈಕೆ ಮಾಡುತ್ತಿರು ವಾಗಲೇ ಮಿಲಿಟರಿ ಸರ್ವಾಧಿಕಾರಿ ಜನರಲ್ ನೆ  ವಿನ್ ಪದತ್ಯಾಗ ಮಾಡಿದರು. 1962ರಿಂದಲೂ ಬರ್ಮಾದಲ್ಲಿ ಮಿಲಿಟರಿ ಆಡಳಿತವಿತ್ತು. ಅದರ ವಿರುದ್ಧ ಹೋರಾಟವೂ ನಡೆಯುತ್ತಿತ್ತು. ಆದರೆ ಜನರಲ್ ನೆ ವಿನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇಡೀ ಬರ್ಮಾದ ವಿದ್ಯಾರ್ಥಿವೃಂದವೇ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಒತ್ತಾಯಿಸಿ ಬೀದಿಗಿಳಿಯಿತು. ಸಾರ್ವಜನಿಕರೂ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು. ಆದರೆ ರೊಚ್ಚಿಗೆದ್ದ ಸೇನೆ 1988, ಆಗಸ್ಟ್ 8ರಂದು ಪ್ರತಿಭಟನಾಕಾರರ ಮೇಲೆ ಗುಂಡುಹಾರಿಸಿ ಸಾವಿರಾರು ಜನರನ್ನು ಹತ್ಯೆಗೈಯ್ಯಿತು. ಅದು ಆಕೆಗೆ ಎಷ್ಟು ನೋವು ತಂದಿತೆಂದರೆ ಅಮ್ಮನನ್ನು ಹಾಸಿಗೆಯಲ್ಲೇ ಬಿಟ್ಟ ಸೂಕಿ ಬೀದಿಗಿಳಿದಳು. 1998, ಆಗಸ್ಟ್ 26ರಂದು ರಾಜಧಾನಿ ರಂಗೂನ್‌ನಲ್ಲಿ ವಿಶ್ವವಿಖ್ಯಾತ ಶ್ವೆಡಗಾನ್ ಪಗೋಡಾ(ಆರಾಧನಾ ಕೇಂದ್ರ)ದ ಮುಂದೆ ಲಕ್ಷಾಂತರ ದೇಶವಾಸಿಗಳನ್ನುದ್ದೇಶಿಸಿ ಭಾಷಣ ಮಾಡಿದಳು.  “ಆಂಗ್ ಸಾನ್‌ನ ಮಗಳಾಗಿ ಪ್ರಸ್ತುತ ನಡೆಯುತ್ತಿರುವ ಘೋರ ಅನ್ಯಾಯದ ವಿರುದ್ಧ ಧ್ವನಿಯೆತ್ತದೇ ಇರಲು ನನ್ನಿಂದ ಸಾಧ್ಯವಿಲ್ಲ” ಎಂದಳು. ರಾಷ್ಟ್ರಮುಕ್ತಿಗಾಗಿನ ಎರಡನೇ ಸಮರವಿದು ಎಂದು ಘೋಷಣೆ ಮಾಡಿದಳು. ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಎಂಬ ಪಕ್ಷವನ್ನೂ ಕಟ್ಟಿ ಹೋರಾಟಕ್ಕೆ ನಿಂತಳು.

ಇಂತಹ ಸೂಕಿ ಹೋರಾಟಕ್ಕಿಳಿದ ಒಂದು ವರ್ಷದೊಳಗೇಹತ್ಯೆಯಾಗುವ ಹಂತಕ್ಕೆ ಬಂದಿದ್ದಳು!

ಅವತ್ತು 1989, ಏಪ್ರಿಲ್ 5. ಪ್ರಜಾಪ್ರಭುತ್ವದ ಧ್ವನಿಯೆತ್ತಿದವರನ್ನೆಲ್ಲಾ ಸೇನೆ ಕೊಂದುಹಾಕುತ್ತಿತ್ತು. ಪ್ರತಿಭಟನೆಯೊಂದು ನಡೆಯುತ್ತಿದ್ದ ಸ್ಥಳಕ್ಕೆ ಕೆಲವು ಬೆಂಬಲಿಗರೊಡನೆ ಆಗಮಿಸಿದ ಸೂಕಿ, ರಸ್ತೆಗಿಳಿದಳು. ಆಕೆಯನ್ನು ಕಂಡ ಸೇನಾಧಿಕಾರಿಯೊಬ್ಬ ಪಿಸ್ತೂಲನ್ನು ಹೊರಗೆಳೆದ. ಅಷ್ಟರಲ್ಲಿ ಗುಂಡಿಗೆ ಎದುರಾಗಿ ನಿಂತಿರುವುದು ಸೂಕಿಯೆಂದು ಅರಿತುಕೊಂಡ ಹಿರಿಯ ಸೇನಾಧಿಕಾರಿ ಗುಂಡು ಹಾರಿಸದಂತೆ ಕೂಡಲೇ ಕೆಳ ಅಧಿಕಾರಿಗೆ ಆದೇಶ ನೀಡಿದ. ಒಂದು ಕ್ಷಣ ವಿಳಂಬವಾಗಿದ್ದರೂ ಸೂಕಿ ಅಂದೇ ಮಣ್ಣಾಗಿರುತ್ತಿದ್ದಳು. ಆದರೆ ಅಂದು,  ‘ಕೊಲ್ಲುವುದಾದರೆ ನನ್ನನ್ನೇ ಕೊಲ್ಲಿ, ನನ್ನನ್ನು ಕೊಲ್ಲುವುದು ಉದ್ದೇಶವಾಗಿದ್ದರೆ ಜತೆಯಲ್ಲಿದ್ದವರೇಕೆ ಬಲಿಯಾಗಬೇಕು’ ಎಂದ ಸೂಕಿ, ಹೆದರಿ ನಡುಗುವ ಬದಲು ಜತೆಯಲ್ಲಿದ್ದವರನ್ನು ದೂರ ಸರಿಸಿ ಗುರಿಗೆ ಎದುರಾಗಿ ನಿಂತಿದ್ದಳು. ಅಷ್ಟಕ್ಕೂ ಆಕೆ ಜಪಾನಿ ಸೇನೆಯನ್ನೇ ಹಿಮ್ಮೆಟ್ಟಿಸಿದ ಜನರಲ್ ಆಂಗ್ ಸಾನ್‌ನ ಮಗಳು. ಅದಕ್ಕೇ ಆಕೆಯನ್ನು Iron Lady of Burma ಅನ್ನುವುದು.

ಇತ್ತ ಬೀದಿಗಿಳಿದ ಸೂಕಿಗೆ ಸಿಕ್ಕ ಜನಬೆಂಬಲವನ್ನು ಕಂಡು ದಂಗಾದ ಮಿಲಿಟರಿಗೆ ದಿಕ್ಕುತೋಚದಂತಾಯಿತು. 1989, ಜುಲೈ 20ರಂದು ಸೂಕಿಯನ್ನು ಬಂಧಿಸಿದ ಮಿಲಿಟರಿ, ಜೈಲಿಗೆ ತಳ್ಳಿತು. ಅವತ್ತಿನಿಂದ ಇವತ್ತಿನವರೆಗೂ ಸೂಕಿ 13 ವರ್ಷಗಳ ಕಾಲ ಜೈಲುವಾಸ ಹಾಗೂ ಗೃಹಬಂಧನವನ್ನು ಅನುಭವಿಸಿದ್ದಾಳೆ. 1990ರಲ್ಲಿ ನಡೆದ ಚುನಾವಣೆ ವೇಳೆ ಸೂಕಿ ಜೈಲಿನಲ್ಲಿದ್ದರೂ ಆಕೆಯ ಎನ್‌ಎಲ್‌ಡಿ ಪಕ್ಷ ಒಟ್ಟು ಸ್ಥಾನಗಳಲ್ಲಿ ಶೇ.82 ಸೀಟುಗಳನ್ನು ಗೆದ್ದುಕೊಂಡಿತು. ಆದರೂ ಮಿಲಿಟರಿ ಅಧಿಕಾರ ಹಸ್ತಾಂತರ ಮಾಡಲಿಲ್ಲ. ೧೯೯೧ರಲ್ಲಿ ಸೂಕಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂತು. ಆದರೆ ಆಕೆಯದ್ದಾಗಲಿ, ಬರ್ಮಾದ ಪರಿಸ್ಥಿತಿಯಾಗಲಿ ಬದಲಾಗಲಿಲ್ಲ. ಈ ಮಧ್ಯೆ ಅಮ್ಮನೂ ಕಣ್ಣುಮುಚ್ಚಿದಳು. ಇನ್ನೊಂದೆಡೆ ಪತಿ ಏರಿಸ್‌ಗೆ ಕ್ಯಾನ್ಸರ್ ಕಾಣಿಸಿಕೊಂಡಿತು. ಜೈಲಿನಲ್ಲಿದ್ದ ಪತ್ನಿಯನ್ನು ನೋಡಬೇಕೆಂದು ಆತನ ಮನಸು ಹಾತೊರೆಯತೊಡಗಿತು. ಆದರೆ ಮಿಲಿಟರಿ ಅದೆಷ್ಟು ಕ್ರೂರವಾಗಿ ನಡೆದುಕೊಂಡಿತೆಂದರೆ ಬರ್ಮಾಕ್ಕೆ ಬರಲು ಏರಿಸ್‌ಗೆ ಅನುಮತಿ(ವೀಸಾ)ಯನ್ನೇ ನೀಡಲಿಲ್ಲ. ಇಡೀ ಅಂತಾರಾಷ್ಟ್ರೀಯ ಸಮುದಾಯ ಕರೆ ಕೊಟ್ಟರೂ ಜಗ್ಗಲಿಲ್ಲ. ಇತ್ತ ಪತಿಯ ಮೇಲಿನ ಪ್ರೀತಿಯಿಂದ ಸೂಕಿಯೇ ಇಂಗ್ಲೆಂಡ್‌ಗೆ ತೆರಳುತ್ತಾಳೆ, ಹಾಗೆ ತೆರಳಿದರೆ ವಾಪಸ್ ಬರಲು ಅನುಮತಿ ನೀಡದಿದ್ದರಾಯಿತು, ತಲೆನೋವೇ ತಪ್ಪಿದಂತಾಗುತ್ತದೆ ಎಂದು ಸೇನೆ ಭಾವಿಸಿತು. ಹಾಗಾಗಿ ‘ಸೂಕಿ ಬೇಕಾದರೆ ಇಂಗ್ಲೆಂಡ್‌ಗೆ ಹೋಗಿಬರಬಹುದು’ ಎಂದು ಆಮಿಷ ತೋರಿತು. ಆದರೆ ಸೂಕಿಗೆ ಸೇನೆಯ ದುರುದ್ದೇಶದ ಅರಿವಾಗಿತ್ತು. ಇಂಗ್ಲೆಂಡ್‌ಗೆ ಹೋಗಲೊಪ್ಪಲಿಲ್ಲ. ಅಷ್ಟಕ್ಕೂ ಆಕೆಗೆ ಗಂಡನ ಮುಖ ನೋಡು ವುದಕ್ಕಿಂತ ದೇಶವಾಸಿಗಳ ಮುಖದಲ್ಲಿ ನಗು ನೋಡುವುದು ಮುಖ್ಯವಾಗಿತ್ತು. ಇನ್ನೊಂದೆಡೆ ಏರಿಸ್ ಹಾಸಿಗೆ ಹಿಡಿದರು. ಆದರೂ ಸೂಕಿ ಮೌನವಾಗಿ ನೋವು ನುಂಗಿದಳೇ ಹೊರತು, ಗಂಡನ ಮೇಲಿನ ಪ್ರೀತಿಗಾಗಿ ದೇಶವಾಸಿಗಳನ್ನು ತೊರೆಯಲಿಲ್ಲ. ಅವತ್ತು ಜಗತ್ತಿನ ಯಾವುದೇ ಸಾಮಾನ್ಯ ಹೆಣ್ಣಾಗಿದ್ದರೂ ಭಾವುಕಳಾಗಿ ಪತಿಯನ್ನು ಕಾಣಲು ಹೊರಡುತ್ತಿದ್ದಳು. ವಯ ಸ್ಸಾದ ಅಮ್ಮನ ಆರೈಕೆಗಾಗಿ ಇಂಗ್ಲೆಂಡ್‌ನಿಂದ ಓಡಿಬಂದಿದ್ದ ಸೂಕಿ, ಅಂತ್ಯ ಕಾಲದಲ್ಲಿ ಗಂಡನ ಬಳಿಯಿರಲು ಇಂಗ್ಲೆಂಡ್‌ಗೆ ಮರಳಲಿಲ್ಲ! 1999, ಮಾರ್ಚ್ 27ರಂದು ಏರಿಸ್ ಕ್ಯಾನ್ಸರ್ ನಿಂದ ತೀರಿಕೊಂಡರು. ಆದರೂ ಸೂಕಿ ಅಂತ್ಯಕ್ರಿಯೆಗೆ ಹೋಗಲಿಲ್ಲ. ಹಾಗೆ ಹೋದರೆ ಮತ್ತೆಂದೂ ಬರ್ಮಾಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಆಕೆಗೆ ಗೊತ್ತಿತ್ತು.

ಪ್ರಜಾಪ್ರಭುತ್ವದ ಇಂತಹ ಅದಮ್ಯಚೇತನ ಜಗತ್ತಿನಲ್ಲಿರು ವುದೇ ಒಂದು ಹೆಮ್ಮೆ. ಆಕೆ ಗಂಡನನ್ನೂ ಕಳೆದುಕೊಂಡಿದ್ದಾಳೆ, ಇಂಗ್ಲೆಂಡ್‌ನಲ್ಲಿರುವ ಮಕ್ಕಳನ್ನೂ ಮರೆತುಬಿಟ್ಟಿದ್ದಾಳೆ. ಪ್ರಜಾ ಪ್ರಭುತ್ವವೆಂಬ ಮರೀಚಿಕೆಯ ಹಿಂದೆ ಬಿದ್ದಿದ್ದಾಳೆ. ಬರ್ಮಾಕ್ಕೆ ಯಾವಾಗ ಮಿಲಿಟರಿಯಿಂದ ಮುಕ್ತಿ ಸಿಗಬಹುದು ಎಂದು ಜಗತ್ತಿನ ಆ ಸೃಷ್ಟಿಕರ್ತನಿಗೂ ಖಚಿತವಾಗಿ ಗೊತ್ತಿಲ್ಲ. ಇಂದಲ್ಲ ನಾಳೆ ಬರಬಹುದು ಎಂಬುದಕ್ಕೂ ಯಾವ ಆಧಾರಗಳಿಲ್ಲ. ಬಂಗಾಳ ಕೊಲ್ಲಿಯ ಒಂದು ಮೂಲೆಯಲ್ಲಿರುವ ಬರ್ಮಾ ದಲ್ಲಿ ಅಮೆರಿಕದ ಯಾವ ಹಿತಾಸಕ್ತಿಗಳೂ ಇಲ್ಲ, ಹಾಗಾಗಿ ಅದು ತಲೆಕೆಡಿಸಿಕೊಳ್ಳುವುದಿಲ್ಲ. 1989ರಲ್ಲಿ ಪ್ರಜಾಪ್ರಭುತ್ವದಪರ ಹೋರಾಟಕ್ಕಿಳಿದವರನ್ನು ತಿಯಾನನ್ ಮನ್ ಸ್ಕ್ವೇರ್‌ನಲ್ಲಿ ಕ್ರೂರವಾಗಿ ಹತ್ಯೆಗೈದ  ನೆರೆಯ ಚೀನಾಕ್ಕಂತೂ ಪ್ರಜಾಪ್ರಭುತ್ವವೆಂಬುದೇ ಒಂದು ವೈರಿ. ಅಷ್ಟೇಕೆ ಮ್ಯಾನ್ಮಾರ್‌ನ ಮಿಲಿಟರಿ ದಬ್ಬಾಳಿಕೆಯನ್ನು ಪೋಷಿಸುತ್ತಿರುವುದೇ ಚೀನಾ. ಪ್ರಾರಂಭದಲ್ಲಿ ಸೂಕಿಗೆ ಬೆಂಬಲ ನೀಡಿದ ಭಾರತ ತನ್ನ ಈಶಾನ್ಯ ರಾಜ್ಯಗಳಲ್ಲಿನ ಉಲ್ಫಾ ಹಾಗೂ ಮತ್ತಿತರ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಬೇಕಾದರೆ ಬರ್ಮಾದ ಜತೆ ಕೈಜೋಡಿಸಲೇಬೇಕಾದ ಅನಿ ವಾರ್ಯತೆಯಲ್ಲಿದೆ. ಹಾಗಿರುವಾಗ ಸೂಕಿ ಹೋರಾಟಕ್ಕೆ ಯಶಸ್ಸು ಹೇಗೆತಾನೇ ಲಭ್ಯವಾದೀತು?!

ಇಂತಹ ಸಂದಿಗ್ಧ ಸಂದರ್ಭದಲ್ಲೇ ಜಾನ್ ಯೆಟ್ಟಾವ್‌ಗೆ ಆಶ್ರಯ ನೀಡಿ ಸೂಕಿ ಮತ್ತೆ ಜೈಲು ಸೇರಿದ್ದಾಳೆ, ಮತ್ತೈದು ವರ್ಷಗಳ ಸಜೆಗೆ ಸಿದ್ಧವಾಗುತ್ತಿದ್ದಾಳೆ. ಆದರೆ ಪ್ರಜಾಪ್ರಭುತ್ವ ವೆಂಬ ಒಂದು ಉದ್ದೇಶ ಸಾಧನೆಗಾಗಿ ಒಬ್ಬ ಹೆಣ್ಣುಮಗಳು 20 ವರ್ಷಗಳ ಕಾಲ ಅವಿರತವಾಗಿ ಹೋರಾಡುವುದೆಂದರೆ, ಗಂಡ-ಮಕ್ಕಳನ್ನೇ ತ್ಯಾಗ ಮಾಡುವುದೆಂದರೆ ಸಾಮಾನ್ಯ ಮಾತೇ? ಹದಿಮೂರು ವರ್ಷಗಳ ಕಾಲ ಜೈಲುವಾಸ ಅನು ಭವಿಸುವುದೆಂದರೆ ಸಣ್ಣ ವಿಷಯವೇ? ಇಷ್ಟಾಗಿಯೂ ಛಲ ಬಿಟ್ಟಿಲ್ಲ ಎಂದರೆ ಆಶ್ವರ್ಯವಾಗದೇ ಇದ್ದೀತೆ? ಅದೂ ಅಂತ್ಯವೇ ಕಾಣದಿರದಂತಹ ಹೋರಾಟವನ್ನು ಮುಂದುವ ರಿಸುವುದೆಂದರೆ ಅದೆಂತಹ ಛಲ?

೨೦೦೪ರಲ್ಲಿ “ಸರಕಾರ ರಚಿಸಲು ತನ್ನನ್ನು ಆಹ್ವಾನಿಸಿ” ಎಂದು  ಕೇಳಲು ರಾಷ್ಟ್ರಪತಿ ಕಲಾಂ ಬಳಿಗೆ ಹೋಗಿ ಮಂಗಳಾರತಿ ಮಾಡಿಸಿಕೊಂಡು ಹೊರಬಂದು ನಾಟಕವಾಡಿದಾಕೆಯನ್ನು ನಾವು ಮಹಾನ್ ತ್ಯಾಗಮಯಿ ಎನ್ನುತ್ತೇವೆ! ಮೊನ್ನೆತಾನೇ ಗೆದ್ದಿರುವ, I….do swear in the name of my “father” Or “grand father ಎನ್ನಬೇಕಾಗಿರುವ ಸುಪ್ಪತ್ತಿಗೆಯಲ್ಲಿ ಹುಟ್ಟಿದ ನಮ್ಮ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಗಳು ಯುವನಾಯಕರು ಎಂದು ಬಿಂಬಿಸುತ್ತಿವೆ, ಈ ದೇಶ ಇವರಿಂದಲೇ ಉದ್ಧಾರವಾಗು ವುದು ಎಂಬಂತೆ ವ್ಯಾಖ್ಯಾನ ಮಾಡುತ್ತಿವೆ. ಒಂದು ಸೋಲು ಬಿಜೆಪಿಯಂತಹ ಸಿದ್ಧಾಂತವಾದಿ ಹಾಗೂ Cadre Based  ಪಕ್ಷವನ್ನೇ ಅಧೀರಗೊಳಿಸಿದೆ, ಅದರ ಘಟಾನುಘಟಿ ನಾಯಕ ರನ್ನೇ ಹೇಡಿಗಳನ್ನಾಗಿಸಿದೆ.

ಇಂತಹವರ ನಡುವೆ, “It is not power that corrupts, but fear. Fear of losing power corrupts those who wield it and fear of the scourge of power corrupts those who are subject to it” ಎನ್ನುವ ಸೂಕಿ ಎಂಬ ಗಟ್ಟಿಗಿತ್ತಿಯಿದ್ದಾಳೆ. ನಮ್ಮಲ್ಲಿ ಒಬ್ಬ ಕೊಲೆಗಡುಕ, ಅತ್ಯಾಚಾರಿಗೆ ಜೀವಾವಧಿ ಎಂದರೆ ೧೪ ವರ್ಷ ಶಿಕ್ಷೆ ಕೊಡುತ್ತಾರೆ. ಆತ ಹೆಚ್ಚೆಂದರೆ 9ರಿಂದ 10 ವರ್ಷಗಳನ್ನಷ್ಟೇ ಜೈಲಲ್ಲಿ ಕಳೆಯುತ್ತಾನೆ. ಆದರೆ ಯಾವ ತಪ್ಪೂ ಮಾಡದ, ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಧ್ವನಿಯೆತ್ತಿದ್ದಕ್ಕಾಗಿ ಸೂಕಿ 13 ವರ್ಷ ಜೈಲುವಾಸ ಅನುಭವಿಸಿ, ಮತ್ತೈದು ವರ್ಷದ ಸಜೆ ಅನುಭವಿಸುವ ಅಪಾಯದಲ್ಲಿದ್ದಾಳೆ. ಜತೆಗೆ ಮಿಲಿಟರಿ ಕಪಿಮುಷ್ಟಿಯಿಂದ ಸ್ವಾತಂತ್ರ್ಯ ಸಿಗುವ ಯಾವ ಲಕ್ಷಣಗಳು ಇಲ್ಲದಿದ್ದರೂ ಹೋರಾಟವನ್ನು ಮುಂದುವರಿಸುತ್ತಿದ್ದಾಳೆ. ಮುಂದೊಂದು ದಿನ ಬರ್ಮಾ ಒಂದು ಪ್ರಜಾತಾಂತ್ರಿಕ ರಾಷ್ಟ್ರ ವಾಗಿ ಹೊರಹೊಮ್ಮಿದರೂ ಅದನ್ನು ಕಾಣುವ ಅದೃಷ್ಟ ಬಹುಶಃ ಸೂಕಿಗೆ ಇಲ್ಲದೇ ಹೋಗಬಹುದು. ಆದರೆ ಸ್ವಾತಂತ್ರ್ಯ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ನಂಬಿಕೆ, ವಿಶ್ವಾಸವಿಟ್ಟಿರುವವರ ಮನದಲ್ಲಿ ಆಕೆ ಸದಾ ಜೀವಂತವಾಗಿರುತ್ತಾಳೆ.

17 Responses to “ಅಂಥ ಶಿಕ್ಷೆ ಕೊಡಲು ಅವಳು ಮಾಡಿದ ತಪ್ಪಾದರೂ ಏನು?”

 1. It is an inspirational article for all of the Indian citizens. When she is doing so much to her country we have to at least exercise our voting during election.

 2. harsha says:

  Thanks for a Good Article, good to know about her in detail.

 3. Vinay says:

  Hi, Pratap, Nice article..

 4. sundeep says:

  Hi Pratap,
  I am very big fan of your articles.All are vey inspiring and very truthful.Could help me in getting the english translation of all your articles.Some of my frineds are non- kannadigas I wanted show them your article.

 5. Shami. says:

  Suu kyi anno hesaru kelidhe… Nobel shanthi prashasti bandidhu gothithu .. adre aa mahan mahile hindhe estella kastagallu,vethegallu edhe annodanna kelli thumba bejar aythu.

  Kelav samaya nav est assahayakar agthivalla .yavad sari yavadu thappu annodu spastavagi namma kann mundhe edru kooda enu madoke agolla….!

 6. Mallikarjun says:

  Hi its really a nice article…v must feel proud for her…my hatsoff to that great woman…no one wil take such a risk and play with their own life…let v wish soo ki…to get success in establishment of democracy in burma…

 7. bethur says:

  pratap this is really nice one.you got write to more articles on world leaders

 8. M Reddy says:

  ನೀವು ಯಾವುದೇ topic ಕೈಗೆತ್ತಿಕೊಂದ್ರು ಅದನ್ನು ಜನರ ಹೃದಯಕ್ಕೆ ತಳಪಿಸುವ ಸಾಮರ್ಥ್ಯ ಹೊಂದಿದ್ದೀರಿ. ನಿಮ್ಮ ಪ್ರತಿಯೊಂದು article ಗಳೂ ನಮಗೆ ತುಂಬಾ ಪ್ರೀತಿ ಪಾತ್ರವಾಗಿರುತ್ತವೆ …ನಿಮಗೆ ಅಬಿನಂಧನೆಗಳು. ನಿಮ್ಮ್ಮ ಪ್ರತಿ ಶೀರ್ಷಿಕೆಗಾಗಿ ಕಾಯುವ ನಿಮ್ಮ್ಮ ಅಭಿಮಾನಿಗಳಿಗೆ ಈ ಶೀರ್ಷಿಕೆ ಮತ್ತೊಂದು ರಸದೌಥನ. ಧನ್ಯವಾಧಗಳು ….. ನಿಮ್ಮ MHM ರೆಡ್ಡಿ

 9. Mukund V Desai says:

  Pratap,

  Really greate, India should help her.

 10. Chethan, Coorg says:

  I have heard few things about her before, your information added more to it. There is lot more things to learn everyday and i am proud that i am educating every moment. “U R GREAT SOOKYI”

 11. ವಿಶ್ವನಾಥ್ says:

  ಅವರ ತ್ಯಾಗಕೆ, ಹೋರಾಟಕೆ, ಕಣ್ಣ ಹನಿಗಳೇ ಕಾಣಿಕೆ ……

  ಪ್ರತಾಪ್ ನಿಮ್ಮಲ್ಲಿ ಒಂದು ಚಿಕ್ಕ ಬಿನ್ನಹ ..
  ಇಂಥವರನ್ನು ರಾಜಕೀಯ ನಾಯಕರೊಂದಿಗೆ ಹೋಲಿಸಬೇಡಿ.
  ಹೋರಾಟ ಬೇರೆ ರಾಜಕೀಯ ಬೇರೆ …ಹೋರಾಟದ ಸ್ವಾರ್ಥ ಲಾಭ ಪಡೆಯುವುದೇ ರಾಜಕೀಯ ಎಂದು ತಿಳಿದಿದ್ದಾರೆ ಇಂದಿನ ರಾಜಕಾರಣಿಗಳು.
  ಬಿಜೆಪಿಯ ಸೋಲು ಅವರ ಸಿದ್ದಾಂತ ಸಮರ್ಪಕವಲ್ಲ ಎಂಬುವುದನ್ನು ಬಿಂಬಿಸುತ್ತದೆ. ವಿಶಾಲವಾದ ಚಿಂತನೆಗಳು ಮಾತ್ರ ಉತ್ತಮ ಸಿದ್ದಾಂತ ಎನ್ನಿಸಿಕೊಳ್ಳುತ್ತವೆ ಹಾಗು ಉತ್ತಮ ಸಿದ್ದಾಂತಗಳು ಸೋಲುವುದಿಲ್ಲ. ನಿಮ್ಮ ಹಿಂದಿನ ಲೇಖನ ಅದರಬಗ್ಗೆ ಬೆಳಕು ಚಲ್ಲಿದೆ, ತಮ್ಮ ತಪ್ಪನ್ನು ತಿದ್ದಿಕೊಂಡರೆ ಅವರಿಗೆ ಗೆಲುವು ಖಚಿತ.

  ನಂಬಿದ ಧ್ಯೇಯ, ಆದರ್ಶಗಳಿಗಾಗಿ ಬಾಳುತಿರುವ ಎಲ್ಲರ ಒಳಿತಿಗಾಗಿ ಹೋರಾಡುತ್ತಿರುವ ಇಂಥವರಿಗೆ ನಮ್ಮ ದೇಶ ಸಹಾಯ ಮಾಡುತ್ತಿಲ್ಲ ಎಂಬ ವಿಷಯ ಮತ್ತಷ್ಟು ಖೇದಕರ. ಯಾವ ದೇಶವು ತನ್ನ ಸ್ವಾರ್ಥ ಲಾಭವಿಲ್ಲದೆ ಇತರರಿಗೆ ಸಹಾಯ ಮಾಡುವುದಿಲ್ಲ ಎಂಬ ಮಾತು ಸತ್ಯ.

  ‘ಕೊಲ್ಲುವುದಾದರೆ ನನ್ನನ್ನೇ ಕೊಲ್ಲಿ, ನನ್ನನ್ನು ಕೊಲ್ಲುವುದು ಉದ್ದೇಶವಾಗಿದ್ದರೆ ಜತೆಯಲ್ಲಿದ್ದವರೇಕೆ ಬಲಿಯಾಗಬೇಕು’ ಎಂದ ಮಾತು ಅವರ ವೀರತ್ವದ ಪ್ರತೀಕ. ಯಾವ ಮಿಲಿಟರಿಯು ಅದಕ್ಕೆ ಉತ್ತರ ನೀಡಲಾರದು.

  “It is not power that corrupts, but fear. Fear of losing power corrupts those who wield it and fear of the scourge of power corrupts those who are subject to it” ಎನ್ನುವ ಅವರ ಮಾತು ಅಕ್ಷರಸಹ ಸತ್ಯ. ನಮ್ಮ ದೇಶದಮಟ್ಟಿಗೆ ಇನ್ನೂ ಸತ್ಯ ಇರುವ ಕೆಲವೇ ಉತ್ತಮ ರಾಜಕಾರಣಿಗಳು ಹಾಳಾಗುತ್ತಿರುವುದು ಅಧಿಕಾರ ಕಳೆದುಕೊಳ್ಳುವ ಭಯದಿಂದ.

  ವಯಕ್ತಿಕ ಜೀವನದಲ್ಲಿ ಮಾಡಿರುವ ತ್ಯಾಗ ಇವರನ್ನು ಮಹಾತ್ಮರ ಸಾಲಿನಲ್ಲಿ ನಿಲ್ಲಿಸಿತ್ತದೆ. ವಿವಾಹದ ಸಮಯದಲ್ಲಿ ಇವರು ಹಾಕಿದ್ದ ಷರತ್ತು ದೇಶದ ಬಗೆಗಿನ ‘Passion’ ಅನ್ನು ತೋರಿಸುತ್ತದೆ.

  ಪತಿ ಏರಿಸ್‌ ಅಂತ್ಯ ಕಾಲದಲ್ಲಿ ಅವರಿಗೂ ಹಾಗು ಸುಕಿಯವರಿಗು ನೀಡಲಾದ ನೈತಿಕ ಹಿಂಸೆ ಮನಸನ್ನು ಕಲಕಿಸುತ್ತದೆ, ಲೇಖನದ ಆ ಭಾಗವನ್ನು ಓದುವಾಗ ಮನಸ್ಸು ಉದ್ವೇಗದಿಂದ ಕಂಪಿಸುತ್ತದೆ ಹಾಗು ಕಣ್ಣುಗಳು ಮಂಜಾಗುತ್ತವೆ.

  ಸೂಕಿ ಜೀವಿತಾವಧಿಯಲ್ಲೇ ಬರ್ಮಾ ಪ್ರಜಾಪ್ರಭುತ್ವ ರಾಷ್ಟ್ರವಾಗಲಿ ಎಂದು ಆಶಿಸೋಣ.

 12. david says:

  you write only about the anti minority why?

 13. david says:

  apart from this article i read many of other article why you always write pro bjp-rss

 14. Nagaraj K. says:

  Democracy is the only way to build a comfortable system or a nation. we are all come across personalities such as Gandhi, Nelson Mandela, who reached their goals by traveling on PEACE , here she dedicated her life to mother land. it is a admirable duty that we still have a human being ready to give up every thing because of her own people.
  WE FEEL PROUD.

  Thanks to U

 15. sridhar says:

  Dear Sir,
  Your very recent article is a clear indication of your humane concern about the society we are living in. I have a request to you.
  Off late very recently there was a discussion of ‘charche’ about ‘matantara’ conversion held in Mysore. One of the greatest scholars and orators Sri. K.S. Narayanachar, who is a frontier in preserving the ‘Sanatana Dharma’ is being attacked in Mysore right now by a local newspaper in collaboration with the so called secularists and buddhijeevigalu instigating unnesessary discussions with the public and also threatening to cause stir among people. PLEASE REACT TO THIS AND PROTEST and try to get some more deatails regarding this. Perhaps you may even get something serious to write about.

  Thanking you,
  Sridhar

 16. Reddi says:

  hey david, he is writing about truth not anti-minority, you people are spend your life in mathandar(convertion).

 17. Reddi says:

  hey david, he is writing about truth not anti-minority, you people are spending your life in mathandar(convertion).