Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹುಟ್ಟುಹಬ್ಬದ ಶುಭಾಶಯ ಹೇಳಲು ನೀನೇ ಇಲ್ಲವಲ್ಲಾ!

ಹುಟ್ಟುಹಬ್ಬದ ಶುಭಾಶಯ ಹೇಳಲು ನೀನೇ ಇಲ್ಲವಲ್ಲಾ!

1.ಅಯರ್ಟನ್ ಸೆನ್ನಾ
2. ಮೈಕೆಲ್ ಶುಮಾಕರ್
3. ಜಿಮ್ ಕ್ಲಾರ್ಕ್
4. ನಿಗೆಲ್ ಮ್ಯಾನ್‌ಸೆಲ್
5. ರಾನಿ ಪೀಟರ್ಸನ್
6. ಜುವಾನ್ ಮ್ಯಾನ್ಯುಯೆಲ್ ಫ್ಯಾಂಜಿಯೋ
7. ಮಿಕ ಹೈಕಿನೆನ್
8. ಫರ್ನಾಂಡೋ ಅಲೊನ್ಸೊ
9. ಜಾಕಿ ಸ್ಟಿವರ್ಟ್
10. ಜೋಕೆನ್ ರಿಂಡ್ಟ್
ವಿಶ್ವದ ಅತ್ಯಂತ ವೇಗದ ಸಾರ್ವಕಾಲಿಕ ಚಾಲಕರನ್ನು ಈ ರೀತಿ ಪಟ್ಟಿ ಮಾಡುತ್ತಾ ಹೋಗಬಹುದಾದರೂ ಕಾಲಾಂತರದಲ್ಲಿ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗಿ, ಹೊಸ ತಾರೆಗಳು ಉದಯವಾಗಿ ಪಟ್ಟಿಯನ್ನು ಸೇರಿ  ಹೆಸರುಗಳನ್ನು ಸ್ಥಾನಪಲ್ಲಟ ಮಾಡುತ್ತಲೇ ಇರುತ್ತಾರೆ. ಆದರೆ ಕಳೆದ 15 ವರ್ಷಗಳಿಂದ ಯಾರೂ ಪಲ್ಲಟ ಮಾಡಲಾಗದ ಏಕೈಕ ಸ್ಥಾನವೆಂದರೆ ಮೊದಲನೆಯದ್ದು. ಇವತ್ತಿಗೂ “Who is the fastest F1 driver of all time?” ಎಂದು ಕ್ವಿಝ್ ಸ್ಪರ್ಧೆಯಲ್ಲಿ ಕೇಳಿದರೆ 7 ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೈಕೆಲ್ ಶುಮಾಕರ್ ಬದಲು ನೀವು “ಆಯರ್ಟನ್ ಸೆನ್ನಾ” ಎಂದೇ ಹೇಳಬೇಕಾಗುತ್ತದೆ. ದಾಖಲೆಗಳೆಲ್ಲ ತೆಂಡೂಲ್ಕರ್ ಹೆಸರಲ್ಲಿದ್ದರೂ ಡಾನ್ ಬ್ರಾಡ್ಮನ್ ಅವರೇ ಇಂದಿಗೂ ಏಕೆ ಗ್ರೇಟ್ ಆಗುತ್ತಾರೋ ಹಾಗೆಯೇ.

ಜುವಾನ್ ಮ್ಯಾನ್ಯುಯೆಲ್ ಫ್ಯಾಂಜಿಯೋ ಅಂದ ಕೂಡಲೇ “Pele of Formula One”,  ಜಿಮ್ ಕ್ಲಾರ್ಕ್ ಹೆಸರೆತ್ತಿದರೆ “Stunning versatility”, ಜಾಕಿ ಸ್ಟಿವರ್ಟ್ ಎಂದರೆ “Blinding fast”, ಅಲನ್ ಪ್ರಾಸ್ಟ್ ಎಂದರೆ “Rare intelligence”, ಮೈಕೆಲ್ ಶುಮಾಕರ್ ಹೆಸರೆತ್ತಿದರೆ “Flawed Genius”-ಹೀಗೆ ಒಬೊಬ್ಬರ ಹೆಸರು ಕೇಳಿದಾಗಲೂ ಒಂದೊಂದು ವಿಶೇಷಣಗಳು ನಾಲಗೆಯಿಂದ ಜಾರಿ ಹೊರಬರುತ್ತವೆ. ಆದರೆ ಅಯರ್ಟನ್ ಸೆನ್ನಾನನ್ನು ಫಾರ್ಮುಲಾ-1ನ ರೋಮ್ಯಾಂಟಿಕ್ ಹೀರೋ ಅನ್ನಬೇಕೋ, ಒಂದು ಕ್ರೀಡೆಯ ಕ್ಷಿತಿಜವನ್ನೇ ಎತ್ತರಿಸಿದಾತ ಎನ್ನುವುದೋ, ‘Remorseless’, “Intimidating’ ಡ್ರೈವರ್ ಎಂದು ಕರೆಯಬೇಕೋ ಅಥವಾ 1994, ಮೇ 1ರಂದು ನಡೆದ ದುರ್ಘಟನೆಯನ್ನು ನೆನಪಿಸಿಕೊಂಡು ಅಳಬೇಕೋ ಗೊತ್ತಾಗುವುದಿಲ್ಲ.

ಅವನು “Passion” ಅನ್ನೇ “Profession” ಮಾಡಿಕೊಂಡ ವನು.

ಆಯರ್ಟನ್ ಡ ಸಿಲ್ವಾ ಜನಿಸಿದ್ದು 1960, ಮಾರ್ಚ್ 21ರಂದು, ಬ್ರೆಝಿಲ್‌ನ ಸಾವೋ ಪೌಲೋದಲ್ಲಿ. ಅವರದ್ದು ಶ್ರೀಮಂತ ಕುಟುಂಬ. ಅಪ್ಪ ಮಿಲ್ಟನ್ ಡ ಸಿಲ್ವಾ ಒಬ್ಬ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದರು. ಜತೆಗೆ ಜಮೀನ್ದಾರ ಬೇರೆ. ಯಾವುದಕ್ಕೂ ಕೊರತೆಯಿರಲಿಲ್ಲ. ಮೊದಲ ಮಗಳು ವಿವಿಯಾನೆಗೆಂದು ಅಪ್ಪ 1 ಎಚ್‌ಪಿ ಸಾಮರ್ಥ್ಯದ ‘ಕಾರ್ಟ್’ ಅನ್ನು ಖರೀದಿ ಮಾಡಿ ತಂದರು. ಆಗ ಆಯರ್ಟನ್‌ಗೆ 4 ವರ್ಷ. ಜತೆಗೆ ಕೆಲವು ಪುಟ್ಟ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುವ Motor skills disorder ಆತನಲ್ಲಿತ್ತು. ಇಷ್ಟಾಗಿಯೂ ಅಕ್ಕನಿಗಾಗಿ ತಂದಿದ್ದ ಕಾರ್ಟ್ ಆಯರ್ಟನ್ನನ ಕೈವಶವಾಯಿತು. ಸ್ವತಃ ಮೋಟಾರ್ ರೇಸಿಂಗ್ ಅಭಿಮಾನಿಯಾಗಿದ್ದ ಮಿಲ್ಟನ್‌ಗೆ ಮಗನ ಆಸಕ್ತಿಯ ಅರಿವಾಯಿತು. ಕಾರ್ಟ್ ಚಾಲನೆಯ ವಿಷಯದಲ್ಲಿ ಆತ ತೋರುತ್ತಿದ್ದ ಆತ್ಮವಿಶ್ವಾಸ, ಶ್ರದ್ಧೆಗಳು ಅಪ್ಪನನ್ನು ಹುರಿದುಂಬಿಸಿದವು. ಪ್ರತಿ ವಾರಾಂತ್ಯ ಬಂದಾಗಲೂ ಮಗನನ್ನು ಸ್ಥಳೀಯ ಕ್ರೀಡಾಂಗಣಗಳಿಗೆ ಕರೆದೊಯ್ಯಲಾರಂಭಿಸಿದರು. ಅದೇ ವೇಳೆಗೆ ಬ್ರೆಝಿಲ್‌ನವರೇ ಆಗಿದ್ದ ಎಮರ್ಸನ್ ಫಿಟ್ಟಿಪಾಲ್ಡಿ ಕೂಡ ರೇಸಿಂಗ್‌ನಲ್ಲಿ ಹೆಸರು ಮಾಡಲಾರಂಭಿಸಿದ್ದರು. ಇವು ಆಯರ್ಟನ್‌ನನ್ನು ಮತ್ತಷ್ಟು ಹುರಿದುಂಬಿಸಿದವು. ಅಪ್ಪ ಹತ್ತನೇ ಹುಟ್ಟುಹಬ್ಬಕ್ಕೆ 100 ಸಿಸಿ ಕಾರ್ಟ್ ಅನ್ನು ಉಡುಗೊರೆಯಾಗಿ ಕೊಟ್ಟರು. ಆದರೆ ಆ ಕಾಲದಲ್ಲಿ ರೇಸಿಂಗ್‌ನಲ್ಲಿ ಪಾಲ್ಗೊಳ್ಳಲು ಕನಿಷ್ಠ ವಯೋಮಾನ 13 ವರ್ಷವಾಗಿತ್ತು. ಈ ಮಧ್ಯೆ, 1972ರಲ್ಲಿ ಎಮರ್ಸನ್ ಫಿಟ್ಟಿಪಾಲ್ಡಿ ಫಾರ್ಮುಲಾ-1ನಲ್ಲಿ ವಿಶ್ವಚಾಂಪಿಯನ್ ಆದ ಮೊಟ್ಟಮೊದಲ ಬ್ರೆಝಿಲಿಯನ್ ಎನಿಸಿದರು. ಅಲ್ಲದೆ ಸಾವೋ ಪೌಲೋಕ್ಕೆ ಸನಿಹದಲ್ಲೇ ‘ಇಂಟರ್‌ಲಾಗೋಸ್’ನಲ್ಲಿ ಫಾರ್ಮುಲಾ-1 ಟ್ರ್ಯಾಕ್ ಕೂಡ ನಿರ್ಮಾಣವಾಯಿತು. ಹಾಲಿ ಚಾಂಪಿಯನ್ ಫಿಟ್ಟಿಪಾಲ್ಡಿ ಅಲ್ಲಿಯೂ ಗೆದ್ದರು. ಇಡೀ ದೇಶವೇ ಸಂಭ್ರಮವನ್ನಾಚ ರಿಸಿತು.

ಆಯರ್ಟನ್‌ನ ತುಡಿತ ಇನ್ನಷ್ಟು ಹೆಚ್ಚಾಯಿತು.

ಹದಿಮೂರು ವರ್ಷ ತುಂಬುವವರೆಗೂ ಕಾದ ಆಯರ್ಟನ್, ಇಂಟರ್‌ಲಾಗೋಸ್‌ನ ಆವರಣದಲ್ಲೇ ಇದ್ದ ಕಾರ್ಟಿಂಗ್ ಟ್ರ್ಯಾಕ್‌ನಲ್ಲೇ ಮೊದಲ ಯತ್ನವನ್ನೂ ಮಾಡಿದ. 1977ರಲ್ಲಿ ದಕ್ಷಿಣ ಅಮೆರಿಕ ಕಾರ್ಟ್ ಚಾಂಪಿಯನ್‌ಶಿಪ್ ಗೆದ್ದಿದ್ದಲ್ಲದೆ ಮರು ವರ್ಷ ಅದೇ ಸಾಧನೆಯನ್ನು ಪುನರಾವರ್ತಿಸಿದ. ಆನಂತರ ಯಾವುದೇ ಡ್ರೈವರ್‌ಗೂ ಕಲಿಕೆಯ ತಾಣವಾಗಿದ್ದ ಯುರೋಪ್ ಹಾಗೂ ಅತ್ಯಂತ ದೊಡ್ಡ ಸವಾಲಾಗಿದ್ದ ಲೀ ಮಾನ್ಸ್‌ನಲ್ಲಿ ನಡೆಯುವ ವಿಶ್ವಚಾಂಪಿಯನ್‌ಶಿಪ್‌ನತ್ತ ಮುಖ ಮಾಡಿದ. ಆಯರ್ಟನ್‌ನಲ್ಲಿ ಪ್ರತಿಭೆಯಿರುವುದನ್ನು ಗುರುತಿಸಿದ ‘ವ್ಯಾನ್ ಡೈಮೆನ್’ ತಂಡ ತನ್ನ ಹೊಸ ಕಾರನ್ನು ನೀಡಿತು. ಮಳೆ ಸುರಿದು ಹಸಿಯಾದ ಟ್ರ್ಯಾಕ್‌ಗಳು ಒಬ್ಬ ಡ್ರೈವರ್‌ನ ಪ್ರತಿಭೆಯನ್ನೇ ಒರೆಗೆ ಹಚ್ಚುತ್ತವೆ. ಅಂತಹ ಹಸಿ ಟ್ರ್ಯಾಕ್‌ನಲ್ಲಿ ಎರಡು ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಆಯರ್ಟನ್ ತನ್ನ ಪ್ರತಿಭೆಯನ್ನೇನೋ ಸಾಬೀತುಪಡಿಸಿದ. ಆದರೆ ರೇಸಿಂಗ್ ಎಂಬುದು ತುಂಬಾ ದುಬಾರಿ ಸ್ಪರ್ಧೆಯಾಗಿದ್ದು ಪ್ರಾಯೋಜಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಆದರೆ ಕಾರ್ಟಿಂಗ್‌ಗಿಂತ ಉನ್ನತ ಮಟ್ಟದ ರೇಸಿಂಗ್ ಸ್ಪರ್ಧೆಗಳಲ್ಲಿ ಬಹಳಷ್ಟು ಜನ ಬ್ರೆಝಿಲಿಯನ್ ಡ್ರೈವರ್‌ಗಳು ಭಾಗವಹಿಸುತ್ತಿದ್ದ ಕಾರಣ ಆಯರ್ಟನ್‌ಗೆ ಪ್ರಾಯೋಜಕರೇ ಇಲ್ಲದಂತಾಗಿದ್ದರು. “ದುಡ್ಡಿದ್ದರೆ ಒಬ್ಬ ಕಳಪೆ ಡ್ರೈವರ್‌ಗೂ ಒಳ್ಳೆಯ ಕಾರುಗಳು ಸಿಗುತ್ತವೆ. ಆದರೆ ದುಡ್ಡಿಲ್ಲ ಅಂದರೆ ಎಂತಹ ಒಳ್ಳೆಯ ಡ್ರೈವರ್ ಕೂಡ ಅಸಹಾಯಕನಾಗಬೇಕಾಗುತ್ತದೆ” ಎಂದು ಹತಾಶೆ ವ್ಯಕ್ತಪಡಿಸಿದ ಆಯರ್ಟನ್, ರೇಸಿಂಗ್‌ಗೇ ನಮಸ್ಕಾರ ಹಾಕಿ ಬ್ರೆಝಿಲ್‌ಗೆ ಮರಳಿ ಅಪ್ಪನ ಉದ್ಯಮದಲ್ಲಿ ತೊಡಗಿಸಿಕೊಂಡ.

ಆದರೆ ಒಳಗಿನ ತುಡಿತ ಬಿಡಬೇಕಲ್ಲ?

ಮರಳಿ ಬಂದ ನಾಲ್ಕೇ ತಿಂಗಳಲ್ಲಿ ಮತ್ತೆ ಮೋಟಾರ್ ರೇಸಿಂಗ್‌ನತ್ತ ಮುಖ ಮಾಡಿದ. ಆದರೆ ಮುನಿಸಿಕೊಂಡ ಪತ್ನಿ ವಿಚ್ಛೇದನ ನೀಡುವಂತೆ ಆಗ್ರಹಿಸಿದಳು. ಅವತ್ತು ಹೆಂಡತಿ ಮತ್ತು ರೇಸಿಂಗ್ ಎರಡರ ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಆಯರ್ಟನ್ ಹುಟ್ಟಿದ್ದೇ ರೇಸಿಂಗ್‌ಗಾಗಿ. ಹಾಗಾಗಿ ಹೆಂಡತಿಗೆ ವಿಚ್ಛೇದನೆ ನೀಡಿ ಬ್ರಿಟನ್‌ಗೆ ಮರಳಿದ. ಬ್ರೆಝಿಲ್‌ನಲ್ಲಿ ‘ಡ ಸಿಲ್ವಾ’ ಎಂಬ ಸರ್‌ನೇಮ್ ತುಂಬಾ ಸಾಮಾನ್ಯವಾಗಿತ್ತು. ಹಾಗಾಗಿ ಅಪ್ಪನ ಕಡೆಯಿಂದ ಬಂದಿದ್ದ ‘ಡ ಸಿಲ್ವಾ’ಗೆ ಕೊಕ್ ನೀಡಿದ ಆಯರ್ಟನ್, ಅಮ್ಮನ ಕಡೆಯ ‘ಸೆನ್ನಾ’ ಸರ್‌ನೇಮ್ ಅಳವಡಿಸಿಕೊಂಡ. ಹೀಗೆ ಅಯರ್ಟನ್ ಡ ಸಿಲ್ವಾ, ಆಯರ್ಟನ್ ಸೆನ್ನಾ ಆದ. ಆತ 1984ರಲ್ಲಿ ಫಾರ್ಮುಲಾ-1ಗೆ ಪದಾರ್ಪಣೆಯನ್ನೇನೋ ಮಾಡಿದ. ಆದರೆ ಒಬ್ಬ ಡ್ರೈವರ್ ಎಷ್ಟೇ ಪ್ರತಿಭಾವಂತನಾಗಿದ್ದರೂ ಕಳಪೆ ಕಾರು ಇಟ್ಟುಕೊಂಡು ಏನೂ ಮಾಡಲು ಸಾಧ್ಯವಿಲ್ಲ. ಸೆನ್ನಾ ಕಥೆಯೂ ಹಾಗೇ ಆಯಿತು. ಅಲನ್ ಪ್ರಾಸ್ಟ್, ನಿಕಿ ಲೌಡಾ, ನಿಗೆಲ್ ಮ್ಯಾನ್‌ಸೆಲ್ ಮುಂತಾದ ದಿಗ್ಗಜರ ಜತೆ ಮೇಲಾಟ ನಡೆಸುವ ಮಾತು ಹಾಗಿರಲಿ, Qualify ಆಗುವುದಕ್ಕೂ ಹೆಣಗಬೇಕಾಯಿತು. ಆ ಕಾರಣಕ್ಕಾಗಿ ಕಾಂಟ್ರ್ಯಾಕ್ಟ್  ಮುರಿದು ‘ಲೋಟಸ್’ ತಂಡವನ್ನು ಸೇರಿಕೊಂಡ ಸೆನ್ನಾ, ಎಸ್ಟೋರಿಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಕೌಶಲದ ಪ್ರದರ್ಶನ ಮಾಡಿದ. ಸ್ಪ್ಯಾನಿಶ್ ಹಾಗೂ ಬೆಲ್ಜಿಯಂ ಗ್ರ್ಯಾಂಡ್ ಪ್ರೀನಲ್ಲಿ ಗೆಲುವು ಸಾಧಿಸಿದರೂ ಅರ್ಧಪತನದತ್ತ ಸಾಗುತ್ತಿದ್ದ ‘ಲೋಟಸ್’ ತಂಡವನ್ನು ಮೇಲೆತ್ತಲಾಗಲಿಲ್ಲ. ಒಳ್ಳೆಯ ಕಾರನ್ನರಸಿಕೊಂಡು 1988ರಲ್ಲಿ ‘ಮೆಕ್‌ಲಾರೆನ್’ನ ಕದ ತಟ್ಟಿದ.  ಆತನ ಬದ್ಧ ವೈರಿ ಅಲನ್ ಪ್ರಾಸ್ಟ್ ಅಲ್ಲಿ ಸಹ ಚಾಲಕನಾಗಿದ್ದ!

ಮುಂದಿನದ್ದು ಜಗತ್ತು ಕಂಡ ಅದ್ಭುತ ಸ್ಪರ್ಧೆ.

ಅದಾಗಲೇ ಎರಡು ಬಾರಿ ವಿಶ್ವಚಾಂಪಿಯನ್ ಆಗಿದ್ದ ಪ್ರಾಸ್ಟ್ ಮತ್ತು ಆತನ ಕಟ್ಟಾ ಎದುರಾಳಿ ಸೆನ್ನಾ ಒಂದೇ ತಂಡದಲ್ಲಿರುವುದು ಫಾರ್ಮುಲಾ-1ನ ಮಟ್ಟಿಗೆ ಒಳ್ಳೆಯ ಲಕ್ಷಣವಾಗಿರಲಿಲ್ಲ. ಇಬ್ಬರ ಮಧ್ಯೆಯೇ ಸೆಣಸಾಟ ಆರಂಭವಾಯಿತು. ಅದು ಪೋರ್ಚುಗೀಸ್ ಗ್ರ್ಯಾಂಡ್ ಪ್ರೀ ವೇಳೆ ಬೀದಿಗೆ ಬಂತು. ಪ್ರಾರಂಭದಲ್ಲಿ ತನಗಿಂತ ಸ್ವಲ್ಪ ವೇಗವಾಗಿ ಚಾಲನೆ ಮಾಡಿದ ಪ್ರಾಸ್ಟ್‌ನನ್ನು ಕಂಡು ರೊಚ್ಚಿಗೆದ್ದ ಸೆನ್ನಾ ಮೊದಲ ತಿರುವಿನಲ್ಲೇ ಹಿಂದೆ ಹಾಕಿದ. ಅದರಿಂದ ಕುಪಿತನಾದ ಪ್ರಾಸ್ಟ್ ಮೊದಲ ಸುತ್ತಿನ ಕೊನೆಯ ಹಂತದಲ್ಲಿ ಸೆನ್ನಾನನ್ನು ಹಿಂದೆಹಾಕಿ ಮುಂದೆ ಸಾಗಿದ. ಸೆನ್ನಾ ಸುಮ್ಮನಾಗಲಿಲ್ಲ. ಪ್ರಾಸ್ಟ್‌ನನ್ನು ಟ್ರ್ಯಾಕ್‌ನಲ್ಲೇ ಅಡ್ಡಗಟ್ಟಿದ. ಕೊನೆಗೆ ಟ್ರ್ಯಾಕ್ ಬಿಟ್ಟುಹೋಗುವಂತೆ ಮಾಡಿದ. ಆತನ ಇಂತಹ ಅಪಾಯಕಾರಿ “Manoeuvring” ಬಗ್ಗೆ ಕುಪಿತಗೊಂಡ ಎಫ್‌ಐಎ(ಫೆಡೆರೇಶನ್ ಆಫ್ ಇಂಟರ್‌ನ್ಯಾಷನಲ್ ಆಟೊಮೊಬೈಲ್ಸ್) ಸೆನ್ನಾಗೆ ಎಚ್ಚರಿಕೆ ನೀಡಿತು. ಪ್ರಾಸ್ಟ್‌ನ ಕ್ಷಮೆಯಾಚಿಸಬೇಕಾಗಿ ಬಂತು. ಆದರೇನಂತೆ, ಅವರಿಬ್ಬರ ನಡುವಿನ ತಿಕ್ಕಾಟದಿಂದ ಫಾರ್ಮುಲಾ-೧ ರಂಗೇರಿತು. ಆ ಸಾಲಿನ ಒಟ್ಟು 16 ಗ್ರ್ಯಾಂಡ್ ಪ್ರೀಗಳಲ್ಲಿ ಮೆಕ್‌ಲಾರೆನ್ ೧೫ರಲ್ಲಿ ಜಯ ಗಳಿಸಿತು. ಸೆನ್ನಾ ೮ರಲ್ಲಿ, ಪ್ರಾಸ್ಟ್ ೭ರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು. ಹೀಗೆ  ಮೊದಲ ಬಾರಿಗೆ ಸೆನ್ನಾ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ.

ಇಬ್ಬರ ನಡುವಿನ ತಿಕ್ಕಾಟ ಮಾತ್ರ ಇನ್ನೂ ಹೆಚ್ಚಾಯಿತು. 1989ನೇ ಸಾಲಿನ ಮೊದಲ 4 ರೇಸ್‌ಗಳಲ್ಲಿ 3ರಲ್ಲಿ ಜಯಗಳಿಸಿದ ಸೆನ್ನಾ ವಿರುದ್ಧ ಪ್ರಾಸ್ಟ್ ಟೀಕಾ ಪ್ರಹಾರ ಮಾಡಲಾರಂಭಿಸಿದ. ಮುಂದಿನ ೪ ರೇಸ್‌ಗಳಲ್ಲಿ ಸರಿಯಾದ ಫಲಿತಾಂಶ ಬಾರದೆ ಹೋಗಿದ್ದು  ಹಾಗೂ ಬ್ರೆಝಿಲ್ ಮತ್ತು ಪೋರ್ಚುಗಲ್ ಗ್ರ್ಯಾಂಡ್ ಪ್ರೀನಲ್ಲಿ ಅನುಭವಿಸಿದ ಅಪಘಾತದ ಕಾರಣ ಚಾಂಪಿಯನ್‌ಶಿಪ್ ಪ್ರಾಸ್ಟ್ ಪರ ವಾಲತೊಡಗಿತು. ಡ್ರೈವರ್‍ಸ್ ಚಾಂಪಿಯನ್‌ಶಿಪ್‌ಗಾಗಿನ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಜಪಾನಿನ ಸುಝುಕೋ ಗ್ರ್ಯಾಂಡ್ ಪ್ರೀನಲ್ಲಿ ಸೆನ್ನಾ ಗೆಲ್ಲಲೇಬೇಕಾಯಿತು. ಮೊದಲೇ ಸಿಟ್ಟಿಗೆದ್ದಿದ್ದ ಸೆನ್ನಾ, ಈ ಬಾರಿ ಪ್ರಾಸ್ಟ್‌ನ ಕಾರಿಗೆ ಡಿಕ್ಕಿ ಹೊಡೆಸಿ ಆತನ ಸ್ಪರ್ಧೆಯನ್ನೇ ಮೊಟಕುಗೊಳಿಸಿದ. ಕುಪಿತಗೊಂಡ ಎಫ್‌ಐಎ ಸೆನ್ನಾನನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಿತು, ಜತೆಗೆ ಕೆಲಕಾಲ ಡ್ರೈವಿಂಗ್ ಲೆಸೆನ್ಸ್ ಅನ್ನೂ ಕಿತ್ತುಕೊಂಡಿತು. ಹೀಗಾಗಿ  1989ರಲ್ಲಿ ಸೆನ್ನಾ ಅತಿ ಹೆಚ್ಚು ರೇಸ್‌ಗಳನ್ನು ಗೆದ್ದರೂ ಪಾಯಿಂಟ್ ಆಧಾರದಲ್ಲಿ ಚಾಂಪಿಯನ್‌ಶಿಪ್ ಪ್ರಾಸ್ಟ್ ಪಾಲಾಯಿತು. ಜತೆಗೆ ಇಬ್ಬರ ನಡುವಿನ ಸಂಬಂಧ ಸರಿಪಡಿಸಲಾರದಷ್ಟು ಹಳಸಿತು. ಪ್ರಾಸ್ಟ್ ಮೆಕ್‌ಲಾರೆನ್ ಬಿಟ್ಟು ಫೆರಾರಿ ಸೇರಿದ. ಇಬ್ಬರ ನಡುವಿನ ಸಂಘರ್ಷ 1990ರಲ್ಲೂ ಮುಂದುವರಿಯಿತು. ಆರು ಬಾರಿ ಮೊದಲ, 2 ಬಾರಿ ಎರಡನೇ ಹಾಗೂ 3 ಬಾರಿ ಮೂರನೇ ಸ್ಥಾನ ಪಡೆದುಕೊಂಡ ಸೆನ್ನಾ 1990ರಲ್ಲಿ 2ನೇ ಬಾರಿಗೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ. 1991ರ ಸಾಲಿನಲ್ಲಿ ಪ್ರಾಸ್ಟ್ ಜತೆಗೆ ಮ್ಯಾನ್‌ಸೆಲ್‌ನೊಂದಿಗೂ ಸೆಣಸಾಟ ಆರಂಭವಾಯಿತು. ವೇಗದ ಚಾಲನೆ ಹಾಗೂ ಕಸರತ್ತಿನ ಮೂಲಕ ಸೆನ್ನಾ ಎಲ್ಲ ಡ್ರೈವರ್‌ಗಳನ್ನೂ ಬೆದರಿಸಲಾರಂಭಿಸಿದ. ೧೯೯೧ರಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆದ. ಆದರೆ 1992ರ ವೇಳೆಗೆ ಹೋಂಡಾ ಕಂಪನಿ ಮೆಕ್‌ಲಾರೆನ್‌ಗೆ ಎಂಜಿನ್ ಪೂರೈಕೆ ನಿಲ್ಲಿಸಿದ ಕಾರಣ ಹಾಗೂ ರೆನಾಲ್ಟ್ ತಂಡ ಅದ್ಭುತ ಪ್ರಗತಿ ತೋರುವುದರೊಂದಿಗೆ ಸೆನ್ನಾನ ಕೈಕಟ್ಟಿದಂತಾಯಿತು, ಚಾಂಪಿಯನ್‌ಶಿಪ್‌ಗಳೂ ಕೈತಪ್ಪಿಹೋಗಲಾರಂಭಿಸಿದವು. 1993 ರಲ್ಲಿ ಪ್ರಾಸ್ಟ್ ಮತ್ತೆ ವಿಶ್ವಚಾಂಪಿಯನ್ ಆಗುವುದರೊಂದಿಗೆ ಸೆನ್ನಾ ಮತ್ತೂ ಚಿಂತಿತನಾದ. ಹಾಗಾಗಿ ಮೆಕ್‌ಲಾರೆನ್ ತೊರೆದು ವಿಲಿಯಮ್ಸ್ ತಂಡವನ್ನು ಸೇರಿಕೊಂಡ. ಆತನ ‘Limitless talent’ ಹಾಗೂ ‘Indomitable will’ ಪ್ರಾಸ್ಟ್ ಜತೆ ಮತ್ತೊಂದು ಮಹಾಸಮರಕ್ಕೆ ಸಿದ್ಧಗೊಂಡಿತು. ಜತೆಗೆ ಮಿಕ ಹೈಕಿನೆನ್ ಮತ್ತು ಮೈಕೆಲ್ ಶುಮಾಕರ್ ರೂಪದಲ್ಲಿ ಹೊಸ ಸ್ಪರ್ಧಿಗಳೂ ಸಿದ್ಧರಾಗಿ ನಿಂತಿದ್ದರು.

ಆದರೆ ಸೆನ್ನಾ ಮತ್ತು ಶುಮಿಯ ಸೆಣಸಾಟವನ್ನು ನೋಡುವ ಭಾಗ್ಯ ನಮಗಿರಲಿಲ್ಲವೋ ಏನೋ!

ಆಯರ್ಟನ್ ಸೆನ್ನಾ ಅಂದರೆ ಭಯ ಎಂಬುದೇ ಗೊತ್ತಿಲ್ಲದವನು ಎಂಬ ಬಲವಾದ ನಂಬಿಕೆ ಎಲ್ಲರಲ್ಲೂ ಇತ್ತು. ಆದರೆ ಸೆನ್ನಾ ಒಂದು ಹಂತದಲ್ಲಿ ರೇಸ್‌ನಿಂದಲೇ ನಿವೃತ್ತನಾಗುವ ಯೋಚನೆ ಮಾಡಿದ್ದ. ವಿಲಿಯಮ್ಸ್‌ಗೆ ಆಗಮಿಸಿದ ನಂತರ ಸೆನ್ನಾನನ್ನೂ ಅಳುಕು ಕಾಡತೊಡಗಿತ್ತು. 1994ರ ಸಾಲಿನ ಮೊದಲ ಎರಡು ರೇಸ್‌ಗಳನ್ನೂ ಮೈಕೆಲ್ ಶುಮಾಕರ್ ಗೆದ್ದಿದ್ದ. ಅದರಿಂದ ಸೆನ್ನಾ ಮೇಲಿನ ಒತ್ತಡ ಹೆಚ್ಚಾಗಿತ್ತು. ಶುಮಾಕರ್ ಓಡಿಸುತ್ತಿರುವುದು illegal car ಎಂಬುದು ಸೆನ್ನಾಗೆ ತಿಳಿದಿದ್ದರೂ ತಗಾದೆ ತೆಗೆದರೆ ತಾನು ಭಯಭೀತನಾಗಿದ್ದೇನೆ ಎಂದು ಉಳಿದವರು ಭಾವಿಸುತ್ತಾರೆ ಎಂಬ ಭಾವನೆ ಅವನಲ್ಲಿತ್ತು. ಹಾಗಾಗಿ ಮೂರನೇ ಗ್ರ್ಯಾಂಡ್ ಪ್ರೀ ನಡೆಯಲಿದ್ದ ಐಮೋಲಾದಲ್ಲಿ ಗೆಲುವು ಸಾಧಿಸುವ ಮೂಲಕ ಶುಮಾಕರ್‌ನ ಓಟಕ್ಕೆ ಕಡಿವಾಣ ಹಾಕಿ, ತನ್ನ ಮೇಲುಗೈ ಅನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಾದ ಅನಿವಾರ್ಯತೆಯಲ್ಲಿದ್ದ. ಒಂದು ವೇಳೆ ಮೊದಲ ಎರಡು ರೇಸ್‌ಗಳಲ್ಲಿ ಗೆಲುವು ಸಾಧಿಸಿದ್ದರೆ ರೋಲ್ಯಾಂಡ್ ರಾಟ್ಝೆನ್‌ಬರ್ಗ್ ಸಾವಿನ ನಂತರ ರೇಸ್‌ನಿಂದ ಹಿಂದೆ ಸರಿಯುತ್ತಿದ್ದನೇನೋ.

ಅವತ್ತು ನಡೆದಿದ್ದಿಷ್ಟೇ.

1994, ಏಪ್ರಿಲ್ 29, ಮಧ್ಯಾಹ್ನ 1 ಗಂಟೆಗೆ ಐಮೋಲಾದಲ್ಲಿ ಮೊದಲ ಅರ್ಹತಾ ಸುತ್ತು ಆರಂಭವಾಯಿತು. ಹಾಗೆ ಆರಂಭ ವಾಗಿ 14 ನಿಮಿಷಗಳಾಗಿವೆ. ಅತ್ಯಂತ ವೇಗದ ಸುತ್ತು ಹಾಕಿದ ಸೆನ್ನಾ ಪಿಟ್‌ಗೆ ಮರಳುತ್ತಿದ್ದರೆ ಆತನ ಕಣ್ಣ ಮುಂದೆಯೇ, 140 ಮೈಲು ವೇಗದಲ್ಲಿದ್ದ ರೂಬೆನ್ ಬ್ಯಾರಿಕೆಲೋ ಕಾರು ಸಿಮೆಂಟ್ ಗೋಡೆಗೆ ಬಡಿದು ಛಿದ್ರವಾಯಿತು. ಸೆನ್ನಾ ನಡುಗಿ ಹೋದ. ತನ್ನ ಕಾರನ್ನು ನಿಲ್ಲಿಸಿದವನೇ ಆಸ್ಪತ್ರೆಗೆ ಓಡಿಹೋದ. ಅಷ್ಟಕ್ಕೂ ಬ್ಯಾರಿಕೆಲೋ ಸೆನ್ನಾನ ಪಟ್ಟ ಶಿಷ್ಯ, ಜತೆಗೆ ಸಹ ಬ್ರೆಝಿಲಿಯನ್. ಬ್ಯಾರಿಕೆಲೋಗೆ ಪ್ರe ಬಂದು ಕಣ್ಣುತೆರೆದರೆ ಮೊದಲು ಕಂಡಿದ್ದು ಸೆನ್ನಾ ಮುಖ. ಆ ಮುಖದಲ್ಲಿ ಹಿಂದೆಂದೂ, ಯಾರಿಗೂ ಕಾಣದಿದ್ದ ಕಣ್ಣೀರು ತುಂಬಿಕೊಂಡಿದ್ದವು!

1.40ಕ್ಕೆ ಮತ್ತೆ ಅರ್ಹತಾ ಸುತ್ತು ಆರಂಭವಾಯಿತು. ಗಂಟೆಗೆ  138 ಮೈಲು ವೇಗ ಹಾಗೂ ಸರಾಸರಿ 1 ನಿಮಿಷ 21 ಸೆಕೆಂಡ್‌ಗಳಲ್ಲಿ ಪ್ರತಿ ಸುತ್ತು ಹಾಕಿದ ಸೆನ್ನಾ ದಿಗ್ಬ್ರಮೆಯಿಂದ ಹೊರಬಂದಿರುವುದು ಮಾತ್ರವಲ್ಲ, ತಾನು ಸಾವಿಗೂ ಹೆದರದವನು ಎಂಬುದನ್ನು ಸಾಬೀತುಪಡಿಸಿದ. ಮರುದಿನ ಮತ್ತೆ ಅದೇ ಸಮಯಕ್ಕೆ ಎರಡನೇ ಅರ್ಹತಾ ಸುತ್ತು ಆರಂಭವಾಯಿತು. ಬ್ಯಾರಿಕೆಲೋ ಸಾವಿನಿಂದ ತಪ್ಪಿಸಿಕೊಂಡು 24 ಗಂಟೆಗಳು ಕಳೆಯುವಷ್ಟರಲ್ಲಿ ಆಸ್ಟ್ರಿಯಾದ ರೋಲ್ಯಾಂಡ್ ರಾಟ್ಝೆನ್‌ಬರ್ಗ್‌ನ ಕಾರು 200 ಮೈಲು ವೇಗದಲ್ಲಿ ಗೋಡೆಗೆ ಅಪ್ಪಳಿಸಿತು. ಮುಂದಿನ ಸರದಿ ತನ್ನದೆಂದು ಸಿದ್ಧನಾಗಿ ಮಾನಿಟರ್ ನೋಡುತ್ತಾ ಕುಳಿತಿದ್ದ ಸೆನ್ನಾ ಒಂದು ಕ್ಷಣಕ್ಕೆ ಮುಖವನ್ನೇ ಮುಚ್ಚಿಕೊಂಡ. ನಂತರ ಸಾವರಿಸಿಕೊಂಡು ರೇಸ್ ವೇಳೆ ವಿಶೇಷ ಸೇವೆಗೆಂದೇ ಇರುವ ಅಧಿಕೃತ ಕಾರನ್ನು ದುರ್ಘಟನೆ ನಡೆದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ರಾಟ್ಝೆನ್‌ಬರ್ಗ್‌ನನ್ನು ರಕ್ಷಿಸಲು ಮುಂದಾದ. ರಾಟ್ಝೆನ್‌ಬರ್ಗ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಸೆನ್ನಾಗೆ ವಾಸ್ತವ ಗೊತ್ತಾಗಿ ಹೋಗಿತ್ತು. ಅಂತಿಮ ಘೋಷಣೆಯನ್ನಷ್ಟೇ ಎದುರು ನೋಡುತ್ತಿದ್ದ. ಮಧ್ಯಾಹ್ನ 2 ಗಂಟೆ 15 ನಿಮಿಷಕ್ಕೆ ರಾಟ್ಝೆನ್‌ಬರ್ಗ್ ಆಗಲಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಸೆನ್ನಾ ಕುಗ್ಗಿಹೋದ. ಫಾರ್ಮುಲಾ-೧ನಲ್ಲಿ  ‘Pole position’ ಪಡೆದವರು ಪತ್ರಿಕಾ ಗೋಷ್ಠಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅರ್ಹತಾ ಸುತ್ತುಗಳಲ್ಲಿ ಮೊದಲ ಸ್ಥಾನ ಗಳಿಸಿದ್ದ ಸೆನ್ನಾ ಪತ್ರಿಕಾಗೋಷ್ಠಿ ನಡೆಸಲು ನಿರಾಕರಿಸಿದ. ಸೆನ್ನಾಗೆ ದಂಡ ಹಾಕಬೇಕೆಂಬ ಮಾತು ಕೇಳಿ ಬಂತು, ಅನುಮತಿಯಿಲ್ಲದೆ ಅಧಿಕೃತ ಕಾರನ್ನು ರಾಟ್ಝೆನ್‌ಬರ್ಗ್‌ನನ್ನು ರಕ್ಷಿಸಲು ಕೊಂಡೊಯ್ದಿದ್ದೂ ಫಾರ್ಮುಲಾ-1 ನಿಯಮಗಳ ಉಲ್ಲಂಘನೆಯಾಗಿತ್ತು. ಆ ಕಾರಣಕ್ಕೂ ಸೆನ್ನಾಗೆ ದಂಡ ವಿಧಿಸುವಂತೆ ಸ್ಟಿವರ್ಡ್‌ಗಳು ಶಿಫಾರಸು ಮಾಡಿದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಸೆನ್ನಾ. ಒಬ್ಬ ಸಹ ಚಾಲಕ ಸತ್ತಿರುವಾಗ ರೇಸ್ ಮಾಡುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿಕೆ ನೀಡಿದ. ಆದರೂ ಒಬ್ಬ ಡ್ರೈವರ್ ಆಗಿ ರೇಸ್ ಮಾಡಬೇಕಾಗಿದ್ದು ಅವನ ಕರ್ತವ್ಯವಾಗಿತ್ತು.

1994, ಮೇ.1ರಂದು ಮಧ್ಯಾಹ್ನ 2 ಗಂಟೆಗೆ ರೇಸ್ ಆರಂಭವಾಯಿತು. ಸೆನ್ನಾ ಮುಂದೆ ಮುಂದೆ ಸಾಗಿದರೆ ಶುಮಾಕರ್, ಗೆರಾರ್ಡ್ ಬರ್ಗರ್, ಡ್ಯಾಮೋನ್ ಹಿಲ್ ಹಿಂಬಾಲಿಸತೊಡಗಿದರು. ಹಾಗೆ ಸಾಗುತ್ತಿದ್ದ ಆಯರ್ಟನ್ ಸೆನ್ನಾ ಕಾರು 217 ಕಿ.ಮೀ. ವೇಗದಲ್ಲಿ ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆಯಿತು. ಮೂರ್ಛೆಹೋಗಿದ್ದ ಸೆನ್ನಾನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಪ್ರಾಣ ಉಳಿಯಲಿಲ್ಲ. 1994, ಮೇ 1ರಂದು ಸೆನ್ನಾ ನಮ್ಮಿಂದ ದೂರವಾದ. ದುರ್ಘಟನೆಗೆ ಕಾರಣವೇನೆಂದು ತಿಳಿದುಕೊಳ್ಳುವ ಸಲುವಾಗಿ ನಜ್ಜುಗುಜ್ಜಾಗಿದ್ದ ಆತನ ಕಾರನ್ನು ತಕಾಡಿದರೆ ಅದರಲ್ಲಿ ಸಿಕ್ಕಿದ್ದು ಆಸ್ಟ್ರೀಯಾದ ಬಾವುಟ!

ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರೀ ಗೆದ್ದು, ರಾಟ್ಝೆನ್‌ಬರ್ಗ್‌ಗೆ ಶ್ರದ್ಧಾಂಜಲಿ ಅರ್ಪಿಸಲು ಹೊರಟಿದ್ದ ಸೆನ್ನಾನನ್ನೇ ಸಾವು ಬಲಿ ತೆಗೆದುಕೊಂಡಿತ್ತು!

ಫಾರ್ಮುಲಾ-1 ಟ್ರ್ಯಾಕ್ ಮೇಲೆ ಕರುಣೆ, ಅನುಕಂಪಗಳೇ ಇಲ್ಲದವನಂತೆ ವರ್ತಿಸುತ್ತಿದ್ದ ಆತನನ್ನು ಎಲ್ಲರೂ ಕ್ರೂರಿ ಎಂದೇ ಭಾವಿಸಿದ್ದರು. ದುರದೃಷ್ಟವಶಾತ್, ಬ್ರೆಝಿಲ್‌ನ ಬೀದಿ ಮಕ್ಕಳ ಕಲ್ಯಾಣಕ್ಕಾಗಿ ಗೌಪ್ಯವಾಗಿ ಲಕ್ಷಾಂತರ ಡಾಲರ್‌ಗಳನ್ನು ಮುಡಿಪಾಗಿಟ್ಟಿದ್ದ  ಆತನ ಮರುಗುವ ಹೃದಯದ ಪರಿಚಯವಾಗಿದ್ದೇ ಆತ ಸತ್ತ ನಂತರ. ಅವತ್ತು ಅಲನ್ ಪ್ರಾಸ್ಟ್, ಡ್ಯಾಮೋನ್ ಹಿಲ್, ಎಮರ್ಸನ್ ಫಿಟ್ಟಿಪಾಲ್ಡಿ ಸೆನ್ನಾನ ಶವಪೆಟ್ಟಿಗೆ ಹೊತ್ತು ನಿಂತಿದ್ದರು.

ಮುಂದಿನ ಭಾನುವಾರದಿಂದ(ಮಾ-29) ಈ ಸಾಲಿನ ಫಾರ್ಮುಲಾ-1 ರೇಸ್ ಆರಂಭವಾಗುತ್ತದೆ.

ಆದರೆ ‘Oh! Since Senna doesn’t race anymore… it’s not Sunday anymore’ ಎಂಬ ಗಾಯಕ ಸೆಸಾರೆ ಕ್ರೆಮೋನಿನಿ ಅವರ ಹಾಡು ಅಕ್ಷರಃ ಸತ್ಯವೆನಿಸುತ್ತಿದೆ. ಆದರೇನಂತೆ, ಒಂದು ವೇಳೆ ಸ್ವರ್ಗದಲ್ಲೇನಾದರೂ ರೇಸ್ ಟ್ರ್ಯಾಕ್ ಇದ್ದರೆ ಜಿಮ್ ಕ್ಲಾರ್ಕ್, ಜೋಕೆನ್ ರಿಂಡ್ಟ್, ಗೈಲ್ಸ್ ವಿಲಿನ್ಯೂ, ರಾನಿ ಪೀಟರ್ಸನ್‌ಗೆ ಅಲ್ಲೂ ನರಕ ಸೃಷ್ಟಿಸಿರುತ್ತಾನೆ ಸೆನ್ನಾ!

ಮೈಕೆಲ್ ಜಾಕ್ಸನ್, ಆಯರ್ಟನ್ ಸೆನ್ನಾ ನಮ್ಮ ತಲೆಮಾರಿನವರ ಹೀರೋಗಳು. ಒಬ್ಬ ತ್ರಾಣ ಕಳೆದುಕೊಂಡಿದ್ದಾನೆ, ಇನ್ನೊಬ್ಬ 34ನೇ ವರ್ಷಕ್ಕೆ ದೂರವಾಗಿದ್ದಾನೆ. ಇವತ್ತು ಸೆನ್ನಾನ ಜನ್ಮದಿನ(ಮಾರ್ಚ್ 21). ಒಂದು ವೇಳೆ, ಆತ ಬದುಕಿರುತ್ತಿದ್ದರೆ ಇವತ್ತಿಗೆ 49 ವರ್ಷ ತುಂಬಿ 50ಕ್ಕೆ ಕಾಲಿಡುತ್ತಿದ್ದ. ಆದರೆ ‘ಹ್ಯಾಪಿ ಬರ್ತ್ ಡೇ ಹೇಳುವ ಭಾಗ್ಯ ನಮಗಿಲ್ಲ.

ಅಷ್ಟಕ್ಕೂ ಗಾಯಕ ಕ್ರಿಸ್ಟೋಫರ್ ಆಂಟನ್ ರಿಯಾ ಹೇಳಿದಂತೆ, Nothing lasts forever, but somethings end too soon”.

16 Responses to “ಹುಟ್ಟುಹಬ್ಬದ ಶುಭಾಶಯ ಹೇಳಲು ನೀನೇ ಇಲ್ಲವಲ್ಲಾ!”

 1. ravi says:

  Very Good article, we know full details about Senna from this article!!! Really nice article!

 2. only few people are lucky enough to have ‘passion’ as their ‘profession’, like you……..
  really ‘a heart touching article’.hats off to Senna….

 3. Venkatesh says:

  ಪ್ರತಾಪ್ ಜಿ, ’ಅಯರ್ಟನ್ ಸೆನ್ನಾ’ ಪರಿಚಯ ಮಾಡುತ್ತಾ ವಿವರವಾದ ಸು೦ದರ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.
  ನಾನು ಇದುವರೆಗೂ ಮೈಕೆಲ್ ಶೂಮಾಕರ್ರೇ ಅತ್ಯುತ್ತಮ, ನ೦.೧ ಅ೦ದುಕೊ೦ಡಿದ್ದೆ.

 4. DR JAGANNATH says:

  dear pratap
  its a nice article where in it tells people that if you want to achieve anything you should have passion in the field in which we have to achieve.

 5. sanjeev kumar sirnoorkar says:

  hi pratap
  very nice article
  infact it will clearly shows your committment
  hats of……….un explanable!!!!!!!
  thank you

 6. Bhaskar says:

  ಉತ್ತಮವಾದ ಮಹಿತಿ ತುಂಬಿದ ಲೇಖನ. ಇದರಿಂದ ಫಾರ್ಮುಲಾ-೧ ರೇಸ್ ನೋಡುವ ಬಗ್ಗೆ ನನಗೆ ಆಸಕ್ತಿ ಹೆಚ್ಚಾಗಿದೆ. ದಯವಿಟ್ಟು ತಿಳಿಸು ಯಾವ ಚಾನೆಲ್ ನಲ್ಲಿ ನೇರಪ್ರಸಾರ ಲಭ್ಯವಿದೆ.

 7. raveesh bhat says:

  nice one sir… tumba hottu senna gungininda horabaralu sadya yagilla..

 8. Basanna says:

  I remember this accident being shown in News Channels. I was 7th std chap at that time. But i didn’t know the drivers name, who had such a kind heart…

  Thanks for the article Pratap

 9. Vijaykumar says:

  Nice article pratap

  Very much informative!

 10. Pavan says:

  Nice article sir..!! I had heard about senna and Schumacher speaking couple of times in the magazine. He didnt had the finest cars but still considered as the fastest man in the circuit. Schumacher had the previelage of the best enginners from the ferrari..!!! Thanks for writing about him..!!

 11. indy says:

  hi pratap

  why is your last weeks article still not uploaded??

 12. Chethan, Coorg says:

  Senna,,ಮರುಗುವ ಹೃದಯದ ಪರಿಚಯವಾಗಿದ್ದೇ ಆತ ಸತ್ತ ನಂತರ!… E maatu Tumba janarige anvahisutade. Badukiruvaga yaru yenu madolla… 🙁

 13. ravi says:

  # 06,

  Hi Bhaskar its coming on Star Sports, Usually on qualifying rounds on Saturday s and main race on Sundays. Next race on 5th April 09!

 14. ajit says:

  i thought that u write only about politics but after this article i can say that ur 360′ wather, thinker and best writer

 15. Yogesh says:

  According to poll conducted on December 15 I came to know that Ayrton Senna has been voted the greatest Formula One driver of all time by other grand prix racers.

  Though Senna emerged ahead of Michael Schumacher but its very difficult to accept Senna as greatest formula one driver of all time. Though Bradman may be a ahead of Sachin, but for our generation Michael Schumacher and Sachin Tendulkar are all time greatest.

 16. Abhay says:

  Fantastic article! Was expecting this from you for a long long time. It’s not about money, it’s not about fame but will. How many of us are blessed to live and die in something that we cherish doing our whole life?

  http://www.youtube.com/watch?v=7kUNTtvMOtQ