Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆತ ರೇಸಿಗಿಳಿದರೆ ಅಭಿಮಾನಿಗಳು ರೋಮಾಂಚನದಲ್ಲಿ ಉಸಿರು ಬಿಗಿಹಿಡಿದುಕೊಳ್ಳಬೇಕಿತ್ತು, ಈಗ ಆತಂಕದಲ್ಲಿ ಉಸಿರು ಬಿಗಿಹಿಡಿದುಕೊಳ್ಳುವಂತಾಗಿದೆ!

ಆತ ರೇಸಿಗಿಳಿದರೆ ಅಭಿಮಾನಿಗಳು ರೋಮಾಂಚನದಲ್ಲಿ ಉಸಿರು ಬಿಗಿಹಿಡಿದುಕೊಳ್ಳಬೇಕಿತ್ತು, ಈಗ ಆತಂಕದಲ್ಲಿ ಉಸಿರು ಬಿಗಿಹಿಡಿದುಕೊಳ್ಳುವಂತಾಗಿದೆ!

1994, ಏಪ್ರಿಲ್ 29, ಮಧ್ಯಾಹ್ನ 1 ಗಂಟೆಗೆ ಐಮೋಲಾದಲ್ಲಿ ಮೊದಲ ಅರ್ಹತಾ ಸುತ್ತು ಆರಂಭವಾಯಿತು. ಹಾಗೆ ಆರಂಭವಾಗಿ 14 ನಿಮಿಷಗಳಾಗಿವೆ. ಅತ್ಯಂತ ವೇಗದ ಸುತ್ತು ಹಾಕಿದ ಸೆನ್ನಾ ಪಿಟ್‌ಗೆ ಮರಳುತ್ತಿದ್ದರೆ ಆತನ ಕಣ್ಣ ಮುಂದೆಯೇ, 140 ಮೈಲು ವೇಗದಲ್ಲಿದ್ದ ರೂಬೆನ್ ಬ್ಯಾರಿಕೆಲೋ ಕಾರು ಸಿಮೆಂಟ್ ಗೋಡೆಗೆ ಬಡಿದು ಛಿದ್ರವಾಯಿತು. ಸೆನ್ನಾ ನಡುಗಿ ಹೋದ. ತನ್ನ ಕಾರನ್ನು ನಿಲ್ಲಿಸಿದವನೇ ಆಸ್ಪತ್ರೆಗೆ ಓಡಿಹೋದ. ಅಷ್ಟಕ್ಕೂ ಬ್ಯಾರಿಕೆಲೋ ಸೆನ್ನಾನ ಪಟ್ಟ ಶಿಷ್ಯ, ಜತೆಗೆ ಸಹ ಬ್ರೆಝಿಲಿಯನ್. ಬ್ಯಾರಿಕೆಲೋಗೆ ಪ್ರಜ್ಞೆ ಬಂದು ಕಣ್ಣುತೆರೆದರೆ ಮೊದಲು ಕಂಡಿದ್ದು ಸೆನ್ನಾ ಮುಖ. ಆ ಮುಖದಲ್ಲಿ ಹಿಂದೆಂದೂ, ಯಾರಿಗೂ ಕಾಣದಿದ್ದ ಕಣ್ಣೀರು ತುಂಬಿಕೊಂಡಿತ್ತು!

1.40ಕ್ಕೆ ಮತ್ತೆ ಅರ್ಹತಾ ಸುತ್ತು ಆರಂಭವಾಯಿತು. ಗಂಟೆಗೆ 138 ಮೈಲು ವೇಗ ಹಾಗೂ ಸರಾಸರಿ 1 ನಿಮಿಷ 21 ಸೆಕೆಂಡ್‌ಗಳಲ್ಲಿ ಪ್ರತಿ ಸುತ್ತು ಹಾಕಿದ ಸೆನ್ನಾ ದಿಗ್ಭ್ರಮೆಯಿಂದ ಹೊರಬಂದಿರುವುದು ಮಾತ್ರವಲ್ಲ, ತಾನು ಸಾವಿಗೂ ಹೆದರದವನು ಎಂಬುದನ್ನು ಸಾಬೀತುಪಡಿಸಿದ. ಮರುದಿನ ಮತ್ತೆ ಅದೇ ಸಮಯಕ್ಕೆ ಎರಡನೇ ಅರ್ಹತಾ ಸುತ್ತು ಆರಂಭವಾಯಿತು. ಬ್ಯಾರಿಕೆಲೋ ಸಾವಿನಿಂದ ತಪ್ಪಿಸಿಕೊಂಡು 24 ಗಂಟೆಗಳು ಕಳೆಯುವಷ್ಟರಲ್ಲಿ ಆಸ್ಟ್ರಿಯಾದ ರೋಲ್ಯಾಂಡ್ ರಾಟ್ಝೆನ್‌ಬರ್ಗ್‌ನ ಕಾರು 200 ಮೈಲು ವೇಗದಲ್ಲಿ ಗೋಡೆಗೆ ಅಪ್ಪಳಿಸಿತು. ಮುಂದಿನ ಸರದಿ ತನ್ನದೆಂದು ಸಿದ್ಧನಾಗಿ ಮಾನಿಟರ್ ನೋಡುತ್ತಾ ಕುಳಿತಿದ್ದ ಸೆನ್ನಾ ಒಂದು ಕ್ಷಣಕ್ಕೆ ಮುಖವನ್ನೇ ಮುಚ್ಚಿಕೊಂಡ. ನಂತರ ಸಾವರಿಸಿಕೊಂಡು ರೇಸ್ ವೇಳೆ ವಿಶೇಷ ಸೇವೆಗೆಂದೇ ಇರುವ ಅಧಿಕೃತ ಕಾರನ್ನು ದುರ್ಘಟನೆ ನಡೆದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ರಾಟ್ಝೆನ್‌ಬರ್ಗ್‌ನನ್ನು ರಕ್ಷಿಸಲು ಮುಂದಾದ. ರಾಟ್ಝೆನ್‌ಬರ್ಗ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಸೆನ್ನಾಗೆ ವಾಸ್ತವ ಗೊತ್ತಾಗಿ ಹೋಗಿತ್ತು. ಅಂತಿಮ ಘೋಷಣೆಯನ್ನಷ್ಟೇ ಎದುರು ನೋಡುತ್ತಿದ್ದ. ಮಧ್ಯಾಹ್ನ 2 ಗಂಟೆ 15 ನಿಮಿಷಕ್ಕೆ ರಾಟ್ಝೆನ್‌ಬರ್ಗ್ ಆಗಲಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಸೆನ್ನಾ ಕುಗ್ಗಿಹೋದ. ಫಾರ್ಮುಲಾ- 1ನಲ್ಲಿ “Pole position” ಪಡೆದವರು ಪತ್ರಿಕಾಗೋಷ್ಠಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಸೆನ್ನಾ ಪತ್ರಿಕಾಗೋಷ್ಠಿ ನಡೆಸಲು ನಿರಾಕರಿಸಿದ. ಸೆನ್ನಾಗೆ ದಂಡ ಹಾಕಬೇಕೆಂಬ ಮಾತು ಕೇಳಿ ಬಂತು. ಅನುಮತಿಯಿಲ್ಲದೆ ಅಧಿಕೃತ ಕಾರನ್ನು ರಾಟ್ಝೆನ್‌ಬರ್ಗ್‌ನನ್ನು ರಕ್ಷಿಸಲು ಕೊಂಡೊಯ್ದಿದ್ದೂ ಫಾರ್ಮುಲಾ-1 ನಿಯಮಗಳ ಉಲ್ಲಂಘನೆಯಾಗಿತ್ತು. ಆ ಕಾರಣಕ್ಕೂ ಸೆನ್ನಾಗೆ ದಂಡ ವಿಧಿಸುವಂತೆ ಸ್ಟಿವರ್ಡ್‌ಗಳು ಶಿಫಾರಸು ಮಾಡಿದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಸೆನ್ನಾ. ಒಬ್ಬ ಸಹ ಚಾಲಕ ಸತ್ತಿರುವಾಗ ರೇಸ್ ಮಾಡುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿಕೆ ನೀಡಿದ. ಆದರೂ ಒಬ್ಬ ಡ್ರೈವರ್ ಆಗಿ ರೇಸ್ ಮಾಡಬೇಕಾಗಿದ್ದು ಅವನ ಕರ್ತವ್ಯವಾಗಿತ್ತು.

1994, ಮೇ.1ರಂದು ಮಧ್ಯಾಹ್ನ 2 ಗಂಟೆಗೆ ರೇಸ್ ಆರಂಭವಾಯಿತು. ಸೆನ್ನಾ ಮುಂದೆ ಮುಂದೆ ಸಾಗಿದರೆ ಶುಮಾಕರ್, ಗೆರಾರ್ಡ್ ಬರ್ಗರ್, ಡ್ಯಾಮೋನ್ ಹಿಲ್ ಹಿಂಬಾಲಿಸತೊಡಗಿದರು. ಹಾಗೆ ಸಾಗುತ್ತಿದ್ದ ಆಯರ್ಟನ್ ಸೆನ್ನಾ ಕಾರು 217 ಕಿ.ಮೀ. ವೇಗದಲ್ಲಿ ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆಯಿತು. ಮೂರ್ಛೆ ಹೋಗಿದ್ದ ಸೆನ್ನಾನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಪ್ರಾಣ ಉಳಿಯಲಿಲ್ಲ. 1994, ಮೇ 1ರಂದು ಸೆನ್ನಾ ನಮ್ಮಿಂದ ದೂರವಾದ. ದುರ್ಘಟನೆಗೆ ಕಾರಣವೇನೆಂದು ತಿಳಿದುಕೊಳ್ಳುವ ಸಲುವಾಗಿ ನಜ್ಜುಗುಜ್ಜಾಗಿದ್ದ ಆತನ ಕಾರನ್ನು ತಡಕಾಡಿದರೆ ಅದರಲ್ಲಿ ಸಿಕ್ಕಿದ್ದು ಆಸ್ಟ್ರೀಯಾದ ಬಾವುಟ! ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರೀ ಗೆದ್ದು, ರಾಟ್ಝೆನ್‌ಬರ್ಗ್‌ಗೆ ಶ್ರದ್ಧಾಂಜಲಿ ಅರ್ಪಿಸಲು ಹೊರಟಿದ್ದ ಸೆನ್ನಾನನ್ನೇ ಸಾವು ಬಲಿ ತೆಗೆದುಕೊಂಡಿತ್ತು

1. ಅಯರ್ಟನ್ ಸೆನ್ನಾ

2. ಮೈಕೆಲ್ ಶುಮಾಕರ್

ಇವತ್ತಿಗೂ ವಿಶ್ವದ ಅತ್ಯಂತ ವೇಗದ ಸಾರ್ವಕಾಲಿಕ ಚಾಲಕರು ಯಾರೆಂದರೆ ಮೊದಲ ಎರಡು ಸ್ಥಾನಗಳಲ್ಲಿ ಕೇಳಿಬರುವ ಹೆಸರುಗಳು ಇವೇ. ಅಂದು ಯಾವ ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರೀ ವಿಶ್ವದ ಅತ್ಯಂತ ವೇಗದ ಚಾಲಕ ಸೆನ್ನಾನನ್ನು ಕಿತ್ತುಕೊಂಡಿತ್ತೋ ಅದೇ ಗ್ರ್ಯಾಂಡ್ ಪ್ರೀಯನ್ನು ಗೆಲ್ಲುವುದರೊಂದಿಗೆ ಹಾಗೂ 1994ರಲ್ಲಿ ಡ್ರೈವರ್ಸ್ ಚಾಂಪಿಯನ್‌ಶಿಪ್ ಅನ್ನೂ ಮೊದಲ ಬಾರಿಗೆ ತನ್ನದಾಗಿಸಿಕೊಳ್ಳುವುದರೊಂದಿಗೆ ಮೈಕೆಲ್ ಶುಮಾಕರ್ ರೂಪದಲ್ಲಿ ಮತ್ತೊಬ್ಬ ತಾರೆಯೂ ಹೊರಹೊಮ್ಮಿದ. 1995ರಲ್ಲೂ ಸಾಧನೆಯನ್ನು ಪುನರಾವರ್ತಿಸಿದ. ಶುಮಾಕರ್ ಅಪ್ಪ  bricklaye. ಅಂದರೆ ಇಟ್ಟಿಗೆ ಕೆಲಸದವನು. ಕೆರ್ಪೆನ್‌ನಲ್ಲಿನ ಕಾರ್ಟ್ ಟ್ರ್ಯಾಕ್ (Kart track)ನ ನಿರ್ವಹಣೆಯನ್ನೂ ಮಾಡುತ್ತಿದ್ದ. ತಾಯಿ ಕ್ಯಾಂಟೀನೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಹೀಗೆ ತೀರಾ ಬಡತನದ ಹಿನ್ನೆಲೆಯಿಂದ ಬಂದ ಶುಮಾಕರ್‌ಗೆ ಅತ್ಯಂತ ದುಬಾರಿಯಾದ ಕಾರ್ಟ್ ರೇಸಿಂಗ್‌ನ ಗೀಳು ಅಂಟಿಕೊಂಡಿತು. ಅಪ್ಪನೇ ಒಂದು ಕಾರ್ಟ್ ರೂಪಿಸಿದ. ಅದು ಸೈಕಲ್‌ನಂತೆ ಕಾಲಿಂದ ತುಳಿಯುವ ಕಾರ್ಟ್ ಆಗಿತ್ತು. ಅದಕ್ಕೆ ಎಂಜಿನನ್ನು ಜೋಡಿಸಲಾಗಿತ್ತು. ನಾಲ್ಕನೇ ವರ್ಷಕ್ಕೆ ಕಾರ್ಟ್ ಚಾಲನೆ ಮಾಡಲು ಆರಂಭಿಸಿದ ಶುಮಾಕರ್ 6ನೇ ವರ್ಷಕ್ಕೆ ಕಾರ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿದ. ಹೊಸ ಯಶೋಗಾಥೆಯೇ ಆರಂಭವಾಯಿತು. ಕಾರಿನ ವೇಗದ ಮಿತಿಯನ್ನು ಕೊನೆಯ ಹಂತದವರೆಗೂ ಏರಿಸುವ, ಅತ್ಯಂತ ವೇಗವಾಗಿ ಲ್ಯಾಪ್ (ಸುತ್ತು) ಪೂರೈಸುವ ಆತನ ಸಾಮರ್ಥ್ಯ ಫಾರ್ಮುಲಾ-1ಗೆ ಹೇಳಿ ಮಾಡಿಸಿದಂತಿತ್ತು. ಜತೆಗೆ ಒದ್ದೆ ರಸ್ತೆಯಲ್ಲೂ ಕಾರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯದಿಂದಾಗಿ rain kin ಅಥವಾ rain master ಎಂಬ ಹೆಸರನ್ನೂ ಗಳಿಸಿದ. ಈ ಮಧ್ಯೆ, ‘ಜೋರ್ಡಾನ್-ಫೋರ್ಡ್‌’ ಕಂಪನಿಯ ಪ್ರಮುಖ ಚಾಲಕನಾಗಿದ್ದ ಬರ್ಟ್ ರ್ಯಾಂಟ್ ಗಕೋಟ್ ಜೈಲು ಸೇರಿದ ಕಾರಣ ಹೊಸ ಡ್ರೈವರ್‌ಗಾಗಿ ತಡಕಾಡುತ್ತಿದ್ದರು. ಎಂದೂ ಫಾರ್ಮುಲಾ-1 ಕಾರನ್ನೇ ಚಾಲನೆ ಮಾಡದ ಶುಮಾಕರ್‌ನನ್ನು ಆತನ ಪ್ರತಿಭೆಯ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಲಾಯಿತು. ಹೀಗೆ 1991ರಲ್ಲಿ ನಡೆದ ಬೆಲ್ಜಿಯಂ ಗ್ರ್ಯಾಂಡ್ ಪ್ರೀನಲ್ಲಿ ಶುಮಾಕರ್ ಫಾರ್ಮುಲಾ -1ಗೆ ಪದಾರ್ಪಣೆ ಮಾಡಿದ.

ಇತ್ತ 1979ರಿಂದ 1996ರಲ್ಲಿ ಶುಮಾಕರ್ ಆಗಮಿಸುವವರೆಗೂ ಫೆರಾರಿ ಕಂಪನಿ ಒಂದೇ ಒಂದು ‘ಡ್ರೈವರ್ ಚಾಂಪಿಯನ್‌ಶಿಪ್‌’ ಗೆದ್ದಿರಲಿಲ್ಲ. ಆದರೆ ಶುಮಾಕರ್ ಹಾಗೂ ಆತನ ಸ್ನೇಹಿತ ಬ್ರಿಟನ್‌ನ ರಾಸ್ ಬ್ರೌನ್ ಹಗಲೂ -ರಾತ್ರಿ ಮೆಕ್ಯಾನಿಕ್‌ಗಳ ಜತೆ ಕುಳಿತು ಫೆರಾರಿ ಕಾರನ್ನು ಆಧುನೀಕರಣಗೊಳಿಸಿದರು.

ಅವರಿಬ್ಬರದ್ದೂ ಒಂದು ರೀತಿಯ Duet!   ರಾಸ್ ಬ್ರೌನ್ ಒಬ್ಬ ಅದ್ಭುತ ತಂತ್ರಜ್ಞ.  (strategist).ಇತ್ತ ಶುಮಾಕರ್ ವೇಗದ ಮಿತಿಯನ್ನು ಕೊನೆಯ ಹಂತದವರೆಗೂ ಏರಿಸಿ ಅತ್ಯಂತ ವೇಗದ ಸುತ್ತುಗಳನ್ನು (Fastest laps)ಹುಟ್ಟುಹಾಕಬಲ್ಲವನಾಗಿದ್ದ. ಇವರಿಬ್ಬರೂ ಸೇರಿ ರೂಪಿಸಿದ್ದೇ pitstop  Strategy. ಅಂದರೆ ಎದುರಾಳಿ ಡ್ರೈವರ್ ಮುಂದಿರುವಾಗ ಆತನ ಹಿಂದೆಯೇ ಕಾರು ಚಾಲನೆ ಮಾಡುತ್ತಿದ್ದ ಶುಮಾಕರ್. ಎದುರಾಳಿ ಇಂಧನ ತುಂಬಿಸಿಕೊಳ್ಳಲು ಪಿಟ್‌ಸ್ಟಾಪ್ ತೆಗೆದುಕೊಂಡಾಗ clear ಆಗುವ ಮುಂದಿನ ಹಾದಿ ಹಾಗೂ ಇಂಧನ ತುಂಬಿಸಿಕೊಂಡ ನಂತರ ಭಾರವಾಗುವ ಕಾರಿನ ವೇಗವನ್ನು ಹೆಚ್ಚಿಸಿಕೊಳ್ಳಲು ಎದುರಾಳಿ ಹೆಣಗುತ್ತಿರುವಾಗ ಸಂದರ್ಭದ ಲಾಭ ಪಡೆದು ಅತ್ಯಂತ ವೇಗವಾಗಿ ಆರೆಂಟು ಲ್ಯಾಪ್‌ಗಳನ್ನು ಪೂರೈಸುತ್ತಿದ್ದ. ಹೀಗೆ ತನಗೂ ಹಾಗೂ ಎದುರಾಳಿಗೂ ನಡುವೆ ಸೃಷ್ಟಿಯಾಗುವ ಹಲವು ಸೆಕೆಂಡ್‌ಗಳ ಅಂತರದಲ್ಲಿ ತಾನು ಪಿಟ್‌ಸ್ಟಾಪ್ ತೆಗೆದುಕೊಂಡು ಮುನ್ನಡೆ ಸಾಧಿಸುತ್ತಿದ್ದ. ಇಂತಹ ತಂತ್ರವೇ ಹೆಚ್ಚಿನ ಸಂದರ್ಭಗಳಲ್ಲಿ ಶುಮಾಕರ್‌ನ ಗೆಲುವಿಗೆ ಕಾರಣವಾಗುತ್ತಿತ್ತು. 1991ರಲ್ಲಿ ಫಾರ್ಮುಲಾ-1 ರೇಸಿಂಗ್‌ಗಿಳಿದ ಶುಮಾಕರ್ ತನ್ನ 17 ವರ್ಷಗಳ ಕ್ರೀಡಾ ಜೀವನದಲ್ಲಿ 246 ರೇಸ್‌ಗಳಲ್ಲಿ 91 ಬಾರಿ ಮೊದಲಿಗನಾಗಿ ಗುರಿ ಮುಟ್ಟಿದ್ದಾನೆ. ಇಂತಹ ಸಾಧನೆಗೈದ ಏಕೈಕ ವ್ಯಕ್ತಿ ಆತ ಮಾತ್ರ. ಚಾಂಪಿಯನ್ ಆಗಿ ಹೊರಹೊಮ್ಮಿದ ಆತ ಜಗತ್ತಿಗೆ ಮೊದಲ ಬಿಲಿಯನೇರ್ ಕ್ರೀಡಾಪಟುವೂ ಹೌದು. ಆತನ ವಾರ್ಷಿಕ ಸಂಬಳ 53 ದಶಲಕ್ಷ ಪೌಂಡ್! ಇಷ್ಟಾಗಿಯೂ ಯಶಸ್ಸು ಎಂದಿಗೂ ಶುಮಾಕರ್‌ನ ನೆತ್ತಿಗೇರಲಿಲ್ಲ. 1995ರಲ್ಲಿ ಕೊರಿನ್ನಾಳನ್ನು ವಿವಾಹವಾದ ಆತ ಒಬ್ಬಳಿಗೇ ನಿಷ್ಠನಾಗಿದ್ದಾನೆ. ಇದು ಯಶಸ್ವಿ ಕ್ರೀಡಾ ತಾರೆಗಳಲ್ಲಿ ಅತ್ಯಂತ ವಿರಳವೆನಿಸುವ ಸಂಗತಿ. ಇಂತಹ ಶುಮಾಕರ್ 2004ರಲ್ಲಿ ಅಮ್ಮ ತೀರಿಕೊಂಡಾಗ ಅರ್ಧದಿಂದಲೇ ರೇಸ್‌ನಿಂದ ಹೊರಬಂದರೂ ಮೊದಲಿಗನಾಗಿ ಗುರಿಮುಟ್ಟಿ ಅಂತ್ಯಸಂಸ್ಕಾರಕ್ಕೆ ಹೋಗುವ ಮೂಲಕ ಗಟ್ಟಿತನವನ್ನೂ ತೋರಿದ್ದ.

ಶುಮಾಕರ್ ಹಲವು ಬಾರಿ ವಿವಾದಕ್ಕೊಳಗಾಗಿದ್ದೂ ಇದೆ. 1997ರಲ್ಲಿ ಡ್ಯಾಮನ್ ಹಿಲ್ ಹಾಗೂ ಜಾಕ್ ವಿಲಿನ್ಯೂ ಅವರ ಕಾರುಗಳನ್ನು ಹಾದಿ ತಪ್ಪುವಂತೆ ಮಾಡಿ ಧ್ವಂಸಗೊಳಿಸಲು ಯತ್ನಿಸಿದ್ದೂ ಇದೆ. ಆದರೆ ಇಂತಹ ತಂತ್ರಗಳಲ್ಲಿ ತಪ್ಪೇನೂ ಇಲ್ಲ. ಖ್ಯಾತ ಫಾರ್ಮುಲಾ-1 ಚಾಂಪಿಯನ್ ನಿಕಿ ಲೌಡಾ ಅವರೇ ತಪ್ಪಿಲ್ಲ ಎನ್ನುತ್ತಾರೆ. ಇದೇನೇ ಇರಲಿ, 1998ರ ಹಂಗರಿ ಗ್ರ್ಯಾಂಡ್ ಪ್ರೀನಲ್ಲಿ ಶುಮಾಕರ್ 19 ಸುತ್ತುಗಳಲ್ಲಿ 25 ಸೆಕೆಂಡ್‌ಗಳನ್ನು make up  ಮಾಡಿದರೆ ಮಾತ್ರ ಗೆಲ್ಲಲು ಸಾಧ್ಯವಿತ್ತು. ಹಾಗಂತ ರಾಸ್ ಬ್ರೌನ್ ಹೇಳಿದ್ದರು. ಶುಮಾಕರ್ ಸಾಧಿಸಿ ತೋರಿದ! ಅಲ್ಲದೇ ಅದೇ ವರ್ಷ ಬ್ರಿಟಿಷ್ ಗ್ರ್ಯಾಂಡ್ ಪ್ರೀನಲ್ಲಿ ದಂಡ ಹಾಕಿಸಿಕೊಂಡು ಪಿಟ್‌ನಿಂದ (Pitlane)ರೇಸ್ ಆರಂಭಿಸಿ ಗೆದ್ದಿದ್ದನ್ನು ವರ್ಣಿಸಲು ಸಾಧ್ಯವಿಲ್ಲ. ಅಂತಹ ಸಾಧನೆಗೈದ ಏಕೈಕ ಡ್ರೈವರ್ ಶುಮಾಕರ್.

ಆದಾಗ್ಯೂ, 2006, ಅಕ್ಟೋಬರ್ 1ರಂದು ಚೈನೀಸ್ ಗ್ರ್ಯಾಂಡ್ ಪ್ರೀನಲ್ಲಿ ಗೆಲುವು ಸಾಧಿಸುವ ಮೂಲಕ 8ನೇ ಬಾರಿಗೆ ‘ಡ್ರೈವರ್ಸ್ ಚಾಂಪಿಯನ್‌ಶಿಪ್‌’ ಗೆಲ್ಲುವ ಹೊಸ್ತಿಲಿಗೆ ಬಂದಿದ್ದ ಶುಮಾಕರ್ ಪಾಲಿಗೆ ಆತನ ಕ್ರೀಡಾ ಜೀವನ ಕಡೆಯ ಎರಡು ಗ್ರ್ಯಾಂಡ್ ಪ್ರೀಗಳು ಮುಳುವಾದವು. 2006 ಅಕ್ಟೋಬರ್ 8 ರಂದು ನಡೆದ ಜಪಾನ್ ಗ್ರ್ಯಾಂಡ್ ಪ್ರೀನಲ್ಲಿ ಎಲ್ಲರಿಗಿಂತ ಮುಂದಿದ್ದರೂ ಎಂಜಿನ್ ಕೈ ಕೊಟ್ಟು ರೇಸಿಂಗ್‌ನಿಂದಲೇ ಹೊರನಡೆಯಬೇಕಾಯಿತು. ಅಕ್ಟೋಬರ್ 22ರಂದು 10ನೇ ಸ್ಥಾನದಿಂದ ರೇಸಿಂಗ್ ಆರಂಭಿಸಿದ ಶುಮಾಕರ್ ಮೊದಲನೇ ಲ್ಯಾಪ್‌ನ ಅಂತ್ಯದ ವೇಳೆಗೆ 7ನೇ ಸ್ಥಾನಕ್ಕೆ ಬಂದಿದ್ದ. ಆರನೇ ಸ್ಥಾನದಲ್ಲಿದ್ದ ಚೆನ್ ಕಾರ್ಲೋ ಫಿಸಿಕೆಲಾ ಅವರನ್ನು ಹಿಂದೆ ಹಾಕಿದ ಮರುಕ್ಷಣವೇ ಕಾರಿನ ಟಯರ್ ಛಿದ್ರವಾಯಿತು. ಸ್ಪರ್ಧೆ ಪ್ರಾರಂಭವಾಗಿ 15 ನಿಮಿಷಗಳಲ್ಲೇ ಶುಮಾಕರ್‌ನ ಕೊನೆಯ ರೇಸ್ ದುರದೃಷ್ಟಕರವಾಗಿ ಕೊನೆಗೊಳ್ಳುವಂತಾಯಿತು. ಆದರೂ ಪಿಟ್‌ಗೆ ತೆರಳಿ, ಟಯರ್ ಬದಲಾಯಿಸಿಕೊಂಡು ಕೊನೆಯವನಾಗಿ ಮತ್ತೆ ರೇಸ್ ಆರಂಭಿಸಿದ ಶುಮಾಕರ್, 71 ಲ್ಯಾಪ್‌ಗಳಲ್ಲಿ ಕೊನೆಯ ಐದು ಲ್ಯಾಪ್‌ಗಳಿರುವಾಗ ಕಿಮಿ ರಾಯ್ಕೆನನ್ ಜತೆಗೆ ಸೆಣಸಾಟಕ್ಕಿಳಿದ ಕ್ಷಣ ಎಂತಹವರೂ ಉಸಿರು ಬಿಗಿಹಿಡಿದುಕೊಳ್ಳುವಂತ್ತಿತ್ತು.

ಇಂತಹ ಶುಮಾಕರ್ ಜನಿಸಿದ್ದು 1969 ಜನವರಿ 3 ರಂದು. ಕಳೆದ ವಾರ ಆತನ 45ನೇ ಹುಟ್ಟುಹಬ್ಬವಿತ್ತು. ಆದರೆ ಈ ಬಾರಿ ಹುಟ್ಟುಹಬ್ಬದ ಆಚರಣೆಯ ಬದಲು ಆತಂಕವೇ ಆವರಿಸಿಕೊಂಡಿತ್ತು. ಫ್ರಾನ್ಸ್‌ನ ಆಲ್ಪೈನ್ ಬಳಿ ಸ್ಕೀಯಿಂಗ್ ವೇಳೆಯಲ್ಲಿ ತಲೆಗೆ ತೀವ್ರ ಪೆಟ್ಟು ತಿಂದಿರುವ ಶುಮಾಕರ್, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ವೈದ್ಯರು ಅವರು ಬದುಕುಳಿಯುವ ಬಗ್ಗೆ ಯಾವುದನ್ನೂ ಖಚಿತವಾಗಿ ಹೇಳುತ್ತಿಲ್ಲ. ಅತ್ಯಂತ ದುರಂತಮಯ ರೀತಿಯಲ್ಲಿ ವಿಶ್ವದ ಅತ್ಯಂತ ವೇಗದ ಚಾಲಕ ಆಯರ್ಟನ್ ಸೆನ್ನಾನನ್ನು ಕಳೆದುಕೊಂಡಾಗಿದೆ. ಎರಡನೇ ಅತ್ಯಂತ ವೇಗದ ಡ್ರೈವರ್ ಶುಮಾಕರ್ ಬದುಕು ಅತಂತ್ರವಾಗಿದೆ. ಆತ ರೇಸಿಗಿಳಿದರೆ ಅಭಿಮಾನಿಗಳು ರೋಮಾಂಚನದಲ್ಲಿ ಉಸಿರು ಬಿಗಿಹಿಡಿದುಕೊಳ್ಳಬೇಕಿತ್ತು, ಈಗ ಆತಂಕದಲ್ಲಿ ಉಸಿರು ಬಿಗಿಹಿಡಿದುಕೊಳ್ಳುವಂತಾಗಿದೆ!

2 Responses to “ಆತ ರೇಸಿಗಿಳಿದರೆ ಅಭಿಮಾನಿಗಳು ರೋಮಾಂಚನದಲ್ಲಿ ಉಸಿರು ಬಿಗಿಹಿಡಿದುಕೊಳ್ಳಬೇಕಿತ್ತು, ಈಗ ಆತಂಕದಲ್ಲಿ ಉಸಿರು ಬಿಗಿಹಿಡಿದುಕೊಳ್ಳುವಂತಾಗಿದೆ!”

  1. UJWALA DEVADAS PAI says:

    VERY NICE ARTICLE

  2. prasanna says:

    nice very good..article..