Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ರಾಯರನು ನೆನೆ ನೆನೆದು…

ರಾಯರನು ನೆನೆ ನೆನೆದು…

PVN
ಅವರು 1990ರ ಹೊತ್ತಿಗಾಗಲೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದರು. ರಾಜಧಾನಿ ದಿಲ್ಲಿಯಲ್ಲಿದ್ದ ತಮ್ಮ ಬಂಗಲೆಯನ್ನು ಬಿಟ್ಟು ಹೈದರಾಬಾದ್‌ಗೆ ತೆರಳಲು ಅಣಿಯಾಗಿದ್ದರು. ಹಾಗೆಂದುಕೊಂಡು ಗಂಟುಮೂಟೆ ಕಟ್ಟಿ ರೆಡಿಯಾಗಿ 18 ತಿಂಗಳುಗಳೇ ಆಗಿದ್ದವು. ಇನ್ನೇನೂ ಸಾಮಾನು ಸರಂಜಾಮು ಹಾಗೂ ಪುಸ್ತಕ ಭಂಡಾರದೊಂದಿಗೆ ಕಾಲ್ಕೀಳಬೇಕು ಅಷ್ಟರಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು. 1984ರಲ್ಲಿ ಇಂದಿರಾ ಹತ್ಯೆಯಾಗಿದ್ದರು, 1991ರಲ್ಲಿ ರಾಜೀವ್ ಬಲಿಯಾದರು. ಅದರೊಂದಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಳಿತಪ್ಪಿದಂತಾಯಿತು. ಪಕ್ಷವನ್ನು ಮತ್ತೆ ಹಳಿಗೆ ತರಲು ಒಬ್ಬ ಅನುಭವಿ ನಾಯಕನ ತುರ್ತು ಅಗತ್ಯ ಎದುರಾಯಿತು. ಇಂತಹ ಅನಿವಾರ್ಯತೆಯೇ ಪಾಮುಲಪರ್ತಿ ವೆಂಕಟ ನರಸಿಂಹರಾವ್‌ಗೆ ವರದಾನವಾಯಿತು. ಇಷ್ಟಕ್ಕೂ ಏಳು ಭಾರತೀಯ ಭಾಷೆಗಳು. ಜತೆಗೆ ಇಂಗ್ಲಿಷ್, ಫ್ರೆಂಚ್, ಆರೇಬಿಕ್, ಸ್ಪ್ಯಾನಿಶ್ ಹಾಗೂ ಪರ್ಷಿಯನ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದ ಅವರನ್ನು ಒಬ್ಬ ವಿದ್ವಾಂಸರೆನ್ನಲು ಯಾವ ಅಡ್ಡಿಯೂ ಇಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ, ಕೇಂದ್ರ ಗೃಹ, ರಕ್ಷಣೆ ಹಾಗೂ ವಿದೇಶಾಂಗ ಸಚಿವರೂ ಆಗಿ ಅಗಾಧ ರಾಜಕೀಯ ಅನುಭವವೂ ಅವರಿಗಿತ್ತು.

ಇನ್ನು ಒಂದು ವಾರದಲ್ಲಿ ಎಪ್ಪತ್ತನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು, (ಅವರು ಜನಿಸಿದ್ದು ಜೂನ್ 28, 1921) ಅಷ್ಟರಲ್ಲಿ ದೊಡ್ಡ ಉಡುಗೊರೆಯೇ ಅರಸಿಕೊಂಡು ಬಂತು. 1991, ಜೂನ್ 21ರಂದು ದೇಶದ ಒಂಬತ್ತನೇ ಪ್ರಧಾನಿಯಾಗಿ ನರಸಿಂಹರಾವ್ ಅಧಿಕಾರ ವಹಿಸಿಕೊಂಡರು. ಹಾಗಂತ ಆ ಗಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ಭಾರತ ಅತ್ಯಂತ ಕ್ಲಿಷ್ಟಕರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಒಂದೆಡೆ ಹಣದುಬ್ಬರ ಪ್ರಮಾಣ ಶೇ. 17ಕ್ಕೇರಿತ್ತು. ವಿದೇಶಿ ಸಾಲ 50 ಶತಕೋಟಿ ಪೌಂಡ್‌ಗಳಿಗೇರಿತ್ತು. ಇನ್ನೊಂದೆಡೆ ಭಾರತದ ಬಳಿ ಇದ್ದಿದ್ದು ಕೇವಲ ಒಂದು ಶತಕೋಟಿ ವಿದೇಶಿ ವಿನಿಮಯ ಮೀಸಲು ನಿಧಿ! ಅಂದರೆ ಮುಂದಿನ ಮೂರು ವಾರಗಳಿಗಾಗುವಷ್ಟು ಆಮದು ಬೆಲೆಯನ್ನು ತೆರುವಷ್ಟೂ ದುಡ್ಡು ಭಾರತದ ಬಳಿಯಿರಲಿಲ್ಲ!! ಇನ್ನೆರಡು ವಾರಗಳಲ್ಲಿ ದಿವಾಳಿಯಾಗಿದ್ದೇವೆ ಎಂದು ಘೋಷಿಸಿಕೊಳ್ಳಬೇಕಾದ ಹೀನಾಯ ಸ್ಥಿತಿ ನಮ್ಮದಾಗಿತ್ತು.
ರಾವ್ ಖರ್ಚು ಕಡಿತದ ಮಾತನಾಡಿದರು, ಬಡ್ಡಿ ದರವನ್ನು ಹೆಚ್ಚಿಸಿದರು, ರೂಪಾಯಿಯ ಮೌಲ್ಯ ಕಡಿತ ಮಾಡಿದರು, ಕೃಷಿ ಸಬ್ಸಿಡಿಗೂ ಕತ್ತರಿ ಹಾಕಿದರು, ನಿಯಂತ್ರಣ ಹಾಗೂ ನಿಗಾ ಕಾರ್ಯವನ್ನು ಹೆಚ್ಚಿಸಿದರು, ರಕ್ಷಣಾ ವೆಚ್ಚವನ್ನೂ ಕಡಿಮೆ ಮಾಡಿದರು, ಬ್ಯಾಂಕ್‌ಗಳೂ ಸೇರಿದಂತೆ ಸರಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಅರ್ಧದಷ್ಟನ್ನು ಖಾಸಗೀಕರಣ ಮಾಡಿದರು. ಇವೆಲ್ಲವೂ ಉದಾರೀಕರಣವೆಂಬ ದೀರ್ಘಕಾಲಿಕ ಪ್ರಕ್ರಿಯೆಯ ಭಾಗಗಳು ಎಂದು ಘೋಷಿಸಿದರು. ಅಧಿಕೃತವಾಗಿ ಲೈಸೆನ್ಸ್-ಪರ್ಮಿಟ್ ರಾಜ್‌ಗೆ ತೆರೆಯೆಳೆದರು. ನೀವೊಂದು ಉದ್ದಿಮೆ ಪ್ರಾರಂಭಿಸಬೇಕಾದರೆ ಸರಕಾರದ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ ಎಂದರು, ಇಂತಿಷ್ಟೇ ಉತ್ಪಾದನೆ ಮಾಡಬೇಕೆಂಬ ನಿರ್ಬಂಧವೂ ಇಲ್ಲ ಎಂದರು. ಎಲ್ಲವನ್ನೂ ಉದ್ಯಮಿಗಳು, ಮಾರುಕಟ್ಟೆ ಶಕ್ತಿಗಳ ವಿವೇಚನೆಗೆ ಬಿಟ್ಟರು. ಆ ಮೂಲಕ ಉತ್ಪಾದನೆ ಹೆಚ್ಚಳಕ್ಕೆ, ತೀವ್ರ ಸ್ಪರ್ಧೆಗೆ ಅನುವು ಮಾಡಿಕೊಟ್ಟರು. ಒಬ್ಬ ಕಾಂಗ್ರೆಸ್ ಪ್ರಧಾನಿಯಾಗಿ, ನೆಹರೂ ಪ್ರಣೀತ ಅರೆ ಸಮಾಜವಾದವನ್ನು (Quasi Socialism) ತಿಪ್ಪೆಗೆ ಎಸೆಯುವುದು, ಇಂದಿರಾ ಗಾಂಧಿಯವರು ಹುಟ್ಟುಹಾಕಿದ್ದ ‘ಬಾಬು ಸಂಸ್ಕೃತಿ’ಗೆ ತಿಲಾಂಜಲಿ ನೀಡುವುದು ಸಾಮಾನ್ಯ ಮಾತೇನು?

ಅವತ್ತು ನರಸಿಂಹರಾವ್ ಮಾಡಿದ ಗ್ಯಾಂಬಲ್ ಫಲ ಕೊಟ್ಟಿತು.

ಇಂದು ಚೀನಾದ ಜತೆ ಭಾರತ ಕೂಡ ೨೧ನೇ ಶತಮಾನದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದರೆ ಅದಕ್ಕೆ ಮೂಲತಃ ನರಸಿಂಹರಾವ್ ಕಾರಣ. ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ‘ಭಾರತದ ಉದಾರೀಕರಣ ನೀತಿಗಳ ಪಿತಾಮಹ’ ಎಂದು ಕರೆಯಬಹುದು. ಆದರೆ ರಾಜಕೀಯ eನವೇ ಇಲ್ಲದಿದ್ದ ಮನಮೋಹನ್ ಸಿಂಗ್ ಅವರನ್ನು 1991ರಲ್ಲಿ ವಿತ್ತ ಸಚಿವರನ್ನಾಗಿ ಮಾಡಿ, ಬೆಂಗಾವಲಿಗೆ ನಿಂತು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ರಾವ್‌ಗೆ ಕೀರ್ತಿ ಸಲ್ಲಬೇಕು. ಇವತ್ತು ನಾವು ನೀವೆಲ್ಲ ಬಳಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮುಂತಾದ ‘ಪ್ಲಾಸ್ಟಿಕ್ ಮನಿ’, ಸೆಲ್‌ಫೋನ್‌ಗಳು ಭಾರತಕ್ಕೆ ಬಂದಿದ್ದು ಯಾರಿಂದ?

ಆರ್ಥಿಕ ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಜಾರಿಗೆ ತರುವುದರ ಜತೆಯಲ್ಲೇ ಕ್ರಮೇಣವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆಗೂ ರಾವ್ ಕದ ತೆರೆದರು. ೪೯-೫೧ ಅನುಪಾತದಲ್ಲಿ ಹೂಡಿಕೆ ಮಾಡಲು ಒಂದೊಂದೇ ಅವಕಾಶಗಳನ್ನು ನೀಡತೊಡಗಿದರು. ಇದರಿಂದ ಆಟೋಮೊಬೈಲ್, ಟೆಲಿಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್‍ಸ್ ಹಾಗೂ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಅಪಾರ ಅನುಕೂಲವಾಯಿತು. ವಿದೇಶಿ ತಂತ್ರeನ ಆಯಾಚಿತವಾಗಿ ನಮಗೆ ದೊರೆಯಿತು. ಜಾಗತೀಕರಣದಿಂದ ಬಂದಿದ್ದು ಬರೀ Zero Technology ಎಂಬ ಪೊಳ್ಳುವಾದ ಬೇಡ. Broad band Technology ಬಂದಿದ್ದೇ ಜಾಗತೀಕರಣದ ನಂತರ. ಕ್ಷಣಮಾತ್ರದಲ್ಲಿ ಹಣ ವರ್ಗಾವಣೆ ಮಾಡುವಂತಹ ಬ್ಯಾಂಕಿಂಗ್ ವ್ಯವಸ್ಥೆ, ಇನ್ಷೂರೆನ್ಸ್, ಇಂಟರ್‌ನೆಟ್, ಕಾರು, ಖಾಸಗಿ ಏರ್‌ಲೈನ್ಸ್‌ಗಳ ಹಿಂದೆಯೂ ರಾವ್ ದೂರದೃಷ್ಟಿಯಿದೆ. ಇಲ್ಲದಿದ್ದರೆ ಅಂಬಾಸೆಡರ್, ಮಾರುತಿ, ಯೆಝಡಿ, ಎನ್ಫೀಲ್ಡ್‌ಗಳೇ ಇಂದಿಗೂ ನಮ್ಮ ರಸ್ತೆಗಳನ್ನು ಅಲಂಕರಿಸಿರುತ್ತಿದ್ದವು! 30ರಿಂದ 40 ಸಾವಿರ ರೂ. ನೀಡಬೇಕಿದ್ದ ಕಲರ್ ಟಿವಿಗಳು ಇಂದು 7 ಸಾವಿರ ರೂ.ಗೆ ಲಭ್ಯವಾಗಿದ್ದರೆ, ಒಂದೂವರೆ ಲಕ್ಷವಿದ್ದ ಕಂಪ್ಯೂಟರ್ ಬೆಲೆ 12-14 ಸಾವಿರಕ್ಕಿಳಿದಿದ್ದರೆ ಅದಕ್ಕೆ, ಅಂದು ರಾವ್ ಜಾರಿಗೆ ತಂದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ನೀತಿಗಳೇ ಕಾರಣ.

ರಾವ್ ಅವರನ್ನು ಬರೀ ಒಬ್ಬ ಸುಧಾರಣಾವಾದಿ ಎಂದು ಭಾವಿಸಬೇಡಿ.

ಬಹುಶಃ ಅವರಷ್ಟು ಚೆನ್ನಾಗಿ ಎದುರಾಳಿಗಳನ್ನು ಹಣಿಯಲು ಯಾರಿಗೂ ಸಾಧ್ಯವಿಲ್ಲ. ಅದೆಂಥದೋ ‘ಜೈನ್ ಹವಾಲಾ’ ಎಂಬ ಹಗರಣ ಸೃಷ್ಟಿಸಿ ‘ಜೈನ್ ಡೈರಿ’ ಎಂಬ ಕಾಲ್ಪನಿಕ ಡೈರಿ ಮೂಲಕ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಆಡ್ವಾಣಿಯವರ ಮೇಲೆಯೇ ಗೂಬೆ ಕೂರಿಸಿ ದೋಷಮುಕ್ತರಾಗುವವರೆಗೂ ಹುದ್ದೆ ತ್ಯಜಿಸುವಂತೆ ಮಾಡಿದ್ದರು! ಅರ್ಜುನ್ ಸಿಂಗ್, ಎನ್.ಡಿ. ತಿವಾರಿ, ಮಾಧವರಾವ್ ಸಿಂಧಿಯಾ, ಶರದ್ ಪವಾರ್ ಅವರಂತಹ ನಾಯಕರನ್ನೂ ಅರಗಿಸಿಕೊಂಡರು. ಬಾಬರಿ ಮಸೀದಿ ಧ್ವಂಸ, ಲಾತೂರ್ ಭೂಕಂಪ, ಮುಂಬೈ ಸ್ಫೋಟ, ಭಯೋತ್ಪಾದನೆ, ಕಾಶ್ಮೀರ ಸಮಸ್ಯೆಗಳ ಹೊರತಾಗಿಯೂ 5 ವರ್ಷ ಅಧಿಕಾರ ನಡೆಸಿದರು. ಲಖೂಭಾಯ್ ಪಾಠಕ್, ಸೇಂಟ್ ಕೀಟ್ಸ್, ಜೆಎಂಎಂ ಲಂಚ ಪ್ರಕರಣ, ಫೋರ್ಜರಿ, ಯೂರಿಯಾ ಹಗರಣ, ಸಕ್ಕರೆ ಹಗರಣ, ಷೇರುಪೇಟೆ ಹಗರಣಗಳನ್ನಿಟ್ಟುಕೊಂಡು ರಾವ್ ಅವರನ್ನು ನಾವು ಜರಿಯಲೂಬಹುದು. ಆದರೆ ಇನ್ನು ಒಂದು ವಾರದಲ್ಲಿ ನಾವೆಲ್ಲ ಗೌಜು, ಗಮ್ಮತ್ತಿನೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. ನಮಗೆಲ್ಲ ಉದ್ಯೋಗ, ಕಿಸೆಗೆ ಹಣ ತಂದುಕೊಟ್ಟಿರುವುದು ನಮ್ಮ ಸದೃಢ ಅರ್ಥವ್ಯವಸ್ಥೆ. ಆ ಅರ್ಥವ್ಯವಸ್ಥೆಯ ಹಿಂದೆ ಪಿ.ವಿ. ನರಸಿಂಹರಾವ್ ಎಂಬ ಮುತ್ಸದ್ದಿಯ ದೂರದೃಷ್ಟಿಯಿದೆ. ನಾಡಿದ್ದು ಡಿಸೆಂಬರ್ 23ಕ್ಕೆ ರಾವ್ ನಮ್ಮನ್ನಗಲಿ 5 ವರ್ಷಗಳು ತುಂಬಲಿವೆ. ನಾವು ಅವರನ್ನೆಂದೂ ಪ್ರೀತಿಸಲೂ ಇಲ್ಲ, ಆರಾಧಿಸಲೂ ಇಲ್ಲ. ಕನಿಷ್ಠ ನೆನಪನ್ನಾದರೂ ಮಾಡಿಕೊಳ್ಳೋಣವೆನಿಸಿತು.

Rao

ನರಸಿಂಹರಾವ್ ಅವರು ಆರೆಸ್ಸೆಸ್‌ನಂಥ ಬಲಪಂಥೀಯ ಗುಂಪಿನ ಕುರಿತು ಸಹಾನುಭೂತಿ ಹೊಂದಿದ್ದರು ಎಂಬುದು ಅವರ ಮೇಲಿನ ಆಕ್ಷೇಪ. ಬಾಬರಿ ಧ್ವಂಸದ ವೇಳೆಯಲ್ಲೂ ಅವರು ತಾಟಸ್ಥ್ಯ ಕಾಯ್ದುಕೊಂಡು ಶೀಘ್ರ ನಿರ್ಣಯದಿಂದ ದೂರ ಉಳಿಯುವ ಮೂಲಕ ಪರೋಕ್ಷವಾಗಿ ಘಟನೆಗೆ ಬೆಂಬಲ ಸೂಚಿಸಿದರು ಎಂಬ ವಾದವಿದೆ. ಅವರ ಅಧಿಕಾರಾವಧಿಯಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರೊಂದಿಗೆ ಅವರದ್ದು ಆಪ್ತಸಖ್ಯ. ‘ಆ ಮನುಷ್ಯನ ಧೋತಿ ಎಳೆದು ನೋಡಿ. ಅದರಡಿಯಲ್ಲಿ ಖಾಕಿ ಚೆಡ್ಡಿಯಿದೆ’ ಎಂಬುದು ಅವರ ಮೇಲಿದ್ದ ಟೀಕೆ.

ವಿಶ್ವಸಂಸ್ಥೆಯಲ್ಲಿ ನಿಶ್ಶಸ್ತ್ರೀಕರಣ ಕುರಿತು ನಡೆದ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ರಾವ್ ಆಯ್ಕೆ ಮಾಡಿಕೊಂಡಿದ್ದು ಪ್ರತಿಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು. ಅಣ್ವಸ್ತ್ರ ಹೊಂದುವುದರ ಪರವಿದ್ದದ್ದು ಇವರಿಬ್ಬರನ್ನೂ ಹತ್ತಿರ ತಂದಿತ್ತು. ಸಮಾರಂಭವೊಂದರಲ್ಲಿ ‘ವಾಜಪೇಯಿ ಅವರು ರಾಜಕೀಯದ ಗುರು’ ಎಂದು ನರಸಿಂಹ್‌ರಾವ್ ಪ್ರಶಂಸಿಸಿದಾಗ, ‘ರಾವ್ ಅವರು ಗುರುಗಳಿಗೇ ಗುರು’ ಎಂದು ವಾಜಪೇಯಿ ಪ್ರತಿಕ್ರಿಯಿಸಿದ್ದರು. ನರಸಿಂಹರಾವ್ ಅವರ ನಿಧನದ ನಂತರ ವಾಜಪೇಯಿ ಅವರು ಒಂದು ವಿಷಯ ಬಹಿರಂಗಗೊಳಿಸಿದರು- ೧೯೯೬ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ನರಸಿಂಹರಾವ್ ಒಂದು ಚಿಕ್ಕ ಚೀಟಿ ನೀಡಿದರು. ಅದರಲ್ಲಿ ಹೀಗೆ ಬರೆಯಲಾಗಿತ್ತು- ‘ಬಾಂಬ್ ರೆಡಿಯಾಗಿದೆ, ಹೋಗಿ ಟೆಸ್ಟ್ ಮಾಡಿ’ (ಅಣ್ವಸ್ತ್ರ ಪರೀಕ್ಷೆ ಬಗ್ಗೆ ಉಲ್ಲೇಖವಾಗಿತ್ತು).

ನೆಹರು-ಗಾಂಧಿ ಪರಿವಾರಕ್ಕೆ ಸೇರಿಲ್ಲದಿದ್ದರೂ ಪ್ರಧಾನಿಯಾಗಿ ೫ ವರ್ಷ ಪೂರೈಸಿದ ಏಕೈಕ ಕಾಂಗ್ರೆಸ್ಸಿಗ ನರಸಿಂಹರಾವ್. ದುರಂತವೆಂದರೆ, ಶ್ರದ್ಧಾಂಜಲಿಗಾಗಿ ಈ ಕಾಂಗ್ರೆಸ್ಸಿಗನ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕಚೇರಿಯೊಳಗೆ ಇಡಲು ಅವಕಾಶ ನಿರಾಕರಿಸಲಾಯಿತು. ರಾವ್ ಅವರನ್ನು ಸ್ಥಾನ ಪಲ್ಲಟಗೊಳಿಸಲು ಮೊದಲಿನಿಂದಲೂ ಪಕ್ಷದಲ್ಲಿ ಪ್ರಯತ್ನ ಸಾಗಿಬಂದಿತ್ತು. ೧೯೯೮ರಲ್ಲಿ ಸೀತಾರಾಂ ಕೇಸರಿ, ರಾವ್‌ಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲು ನಿರಾಕರಿದರು.

ಆತ ಕೋಟೇಶ್ವರ!
ಪಿವಿಎನ್ ಮಾಡಿದ ಕೆಲ ‘ಕೋಟ್’ಗಳು ಇವತ್ತಿಗೂ ಚಲಾವಣೆ ಯಲ್ಲಿವೆ. ಕಾನೂನು-ವಿಚಾರಣೆಯ ವಿಷಯ ಬಂದಾಗಲೆಲ್ಲ ‘ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್ ಆಫ್ ಆಕ್ಷನ್’ ಎಂದು ಎಲ್ಲರೂ ಹೇಳುತ್ತಾರಲ್ಲ? ಆ ಆಣಿಮುತ್ತನ್ನು ಉದು ರಿಸಿದ್ದು ನರಸಿಂಹರಾವ್. ಬಹುಶಃ, ಅವರು ಮಾಡಿದ ಕೋಟ್‌ಗಳಲ್ಲೇ ಅವರ ಹುಟ್ಟಾಗುಣವೆಂಬಂತಿದ್ದ ನಿರಾಳತೆಯೂ ಬಿಂಬಿತವಾಗಿದೆ. ಕಾನೂನು ತನ್ನ ದಾರಿ ನೋಡಿಕೊಳ್ಳುತ್ತದೆ ಬಿಡಿ ಎಂಬರ್ಥದ ಹೇಳಿಕೆಯ ನಿಟ್ಟಿನಲ್ಲೇ ಅವರ ಬೇರೆ ಆಲೋಚನೆ ಗಳೂ ಹುರಿಗಟ್ಟಿದ್ದವು. ‘ಏನಾಗಬೇಕೋ ಅದು ಆಗುತ್ತದೆ ಬಿಡು’ ಎಂಬ ಮನೋಭಾವ ಅವರ ಆಣಿಮುತ್ತುಗಳ ಉದ್ದಕ್ಕೂ ವ್ಯಕ್ತವಾಗಿದೆ. ‘ಕೆಲ ಸಮಸ್ಯೆಗಳಿಗೆ ಕಾಲವೇ ಪರಿಹಾರ’ ಎಂದು ಅವರು ಪದೇ ಪದೆ ಹೇಳುತ್ತಿದ್ದರು. ಅವರ ಇನ್ನೊಂದು ಪ್ರಸಿದ್ಧ ಹೇಳಿಕೆ ಎಂದರೆ, ‘ನಿರ್ಣಯ ತೆಗೆದುಕೊಳ್ಳದೇ ಇರುವುದೂ ಒಂದು ನಿರ್ಣಯವೇ. ಹೀಗಾಗಿ ನಾನು ಏನೂ ನಿರ್ಣಯಿಸಿಲ್ಲ ಎಂದರೆ ಆ ಬಗ್ಗೆ ಯೋಚಿಸಿಯೇ ಇಲ್ಲ ಎಂದೇನೂ ಅರ್ಥವಲ್ಲ’. ಇದೇ ಜಾಡಿನ ಇನ್ನೊಂದು ಹೇಳಿಕೆ, ‘ಕ್ರಿಯೆಗಿಳಿಯದಿರುವುದೂ ಒಂದು ಕ್ರಿಯೆಯೇ!’

ನರಸಿಂಹರಾವ್ ಅವರು ರಾಜಕಾರಣದಿಂದ ದೂರ ಸರಿದು, ಮೋತಿಲಾಲ್ ನೆಹರು ಮಾರ್ಗದ ತಮ್ಮ ನಿವಾಸದಲ್ಲಿ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದ ಪತ್ರಕರ್ತ, ‘ಇಂಡಿಯನ್ ಎಕ್ಸ್‌ಪ್ರೆಸ್’ ಸಂಪಾದಕ ಶೇಖರ್ ಗುಪ್ತ ಅವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ರಾವ್ ವ್ಯಕ್ತಿತ್ವದ ಹಲವು ಆಯಾಮಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಅಯೋಧ್ಯೆಯ ವಿಚಾರದಲ್ಲಿ ಹೇಳಬೇಕಿರುವುದನ್ನೆಲ್ಲ ಆಯೋ ಗದ ಮುಂದೆ ಹೇಳಿಯಾಗಿದೆ ಎಂಬ ಅವರ ಬಿಗಿಪಟ್ಟಿನ ನಡುವೆಯೂ ಶೇಖರ್ ಒಮ್ಮೆ ರಾವ್ ಅವರನ್ನು ಚುಚ್ಚುತ್ತಾರೆ. ‘ಕೇಂದ್ರ ಪಡೆ ದೊಂಬಿ ನಿರತ ಕರ ಸೇವಕರತ್ತ ಗುಂಡುಹಾರಿಸುವಂತೆ ನೀವೇಕೆ ಆದೇಶಿಸಲಿಲ್ಲ?’ ಎಂಬ ಶೇಖರ್ ಪ್ರಶ್ನೆಗೆ ರಾವ್ ನೀಡಿದ ಉತ್ತರ ಒಂದು ಹೊಸ ಆಯಾಮವನ್ನು ತೆರೆದಿಡುತ್ತದೆಯಲ್ಲದೇ ಬೆನ್ನ ಹುರಿಗುಂಟ ಒಂದು ಚಳಕನ್ನೂ ಮೂಡಿಸುತ್ತದೆ. ‘ರಾಂ ರಾಂ ಎಂದು ಉನ್ಮತ್ತರಾಗಿ ಹೇಳುತ್ತಿದ್ದ ಜನರತ್ತ ಗುಂಡು ಹಾರಿಸಲು ಕಳುಹಿಸಿದವರಲ್ಲೇ ಕೆಲವರು ‘ರಾಂ ರಾಂ’ ಪಾಳಯವನ್ನು ಸೇರಿದ್ದರೆ…. ಆಗ ಭಾರತದ ತುಂಬೆಲ್ಲ ಬೆಂಕಿ ಹೊತ್ತಿಕೊಳ್ಳು ತ್ತಿತ್ತಲ್ಲವೇ?’ ಅಂತ ಗಂಭೀರವಾಗಿ ಹೇಳಿದ್ದರು ಪಿವಿಎನ್.

ಶೇಖರ್ ಗುಪ್ತ ಅವರಿಗೆ ತುಂಬ ತಟ್ಟಿದ ಪಿವಿಎನ್ ಮಾತು ಇದು. ‘ಕೆಲವರು ಹೇಳ್ತಾರೆ ನಾನು ಕೋಳಿ ಕದ್ದೆ ಅಂತ. ಇನ್ನು ಕೆಲ ವರು, ಛೆ ಹಂಗೇನೂ ಇಲ್ಲ; ಅವರು ಕದ್ದಿದ್ದು ಮೊಟ್ಟೆ ಅಂತ. ಒಟ್ಟಿನಲ್ಲಿ ನಾನು ಕಳ್ಳ ಅನ್ನೋದರ ಬಗ್ಗೆ ಯಾರಲ್ಲೂ ಭಿನ್ನಾಭಿ ಪ್ರಾಯ ಇಲ್ಲ’ ಹೀಗೆಂದವರೇ ಒಂದು ವಿಷಣ್ಣ ನಗೆ ನಕ್ಕಿದ್ದರಂತೆ ಪಿವಿಎನ್.

ಪಿವಿಎನ್ ಹಾಸ್ಯಪ್ರಜ್ಞೆ ಹೇಗಿತ್ತು ಎಂಬ ಬಗ್ಗೆ ಇತ್ತೀಚಿನ ಅಂಕಣ ವೊಂದರಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ, ಟಿಜೆಎಸ್ ಜಾರ್ಜ್. ಒಮ್ಮೆ ಪುಸ್ತಕ ಬಿಡುಗಡೆ ಕಾರ್‍ಯಕ್ರಮದಲ್ಲಿ ರಾವ್ ಅವರು ಭಾಗವಹಿಸಬೇಕಿತ್ತು. ಆ ಸಂದರ್ಭದಲ್ಲಿ ತಮ್ಮ ಅನುಪಸ್ಥಿತಿ ವಿವರಿಸಿ ಅವರೊಂದು ಪತ್ರ ಕಳುಹಿಸಿದ್ದರು. ‘ಕಾರ್‍ಯಕ್ರಮದಲ್ಲಿ ಹಾಜರಿರಲು ನನಗೆ ಸಾಧ್ಯವಾಗುತ್ತಿಲ್ಲ. ಕಿತ್ತು ತಿನ್ನುವ ಬೆನ್ನುನೋವಿ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇದಕ್ಕೆ ಸುಲಭದ ಚಿಕಿತ್ಸೆ. ಅದೆಂದರೆ ಸಪಾಟು ಹಾಸಿಗೆಯ ಮೇಲೆ ಮಲಗಿರುವುದು. ಎಷ್ಟು ದಿನ ಅಂತ ಗೊತ್ತಿಲ್ಲ. ಹೀಗಾಗಿ ನಾನು ಎಲ್ಲಿಗಾದರೂ ಹೋಗಬೇ ಕೆಂದರೆ ಹಾಸಿಗೆ ಸಮೇತವೇ ಹೋಗಬೇಕು. ಮಹಾವಿಷ್ಣು ಹಾವಿನ ಹಾಸಿಗೆಯೊಂದಿಗೇ ಚಲಿಸುತ್ತಿದ್ದನಂತೆ. ಆದರೆ, ನಾನು ಮನುಷ್ಯನಾಗಿ ಇದುವರೆಗೆ ಅನುಭವಿಸಿರುವ ಫಜೀತಿಯೇ ಸಾಕಾಗಿರುವುದರಿಂದ ದೈವತ್ವದಿಂದ ದೂರ ಇರುವುದು ಲೇಸೆಂದು ತೀರ್ಮಾನಿಸಿದ್ದೇನೆ

11 Responses to “ರಾಯರನು ನೆನೆ ನೆನೆದು…”

 1. narahari says:

  thumba channagide

 2. rajesh biradar says:

  thank u for writing the story on the great hero.

 3. akash says:

  sir I know that you will write very good but also make sure that you will also take reaction on them .Whatever you give writing more people not see ,but when you take action on them everybody will see you .Sir thus I want you be good writing and in taking action .Make our country as a model country

 4. Tukaram says:

  Hi Pratap

  Thurs Day article’nninda ‘deshada nyayanga’vyavastenu sariyagilla annodu prove agide.avre kalla hanakke kai hakidre e deshana yava vyavaste kapadutto………..? ‘dalitara’ hesaralli deshana looti mado neecharige dhikkaravirali……….

  dhanyavadagalondige.
  Tukarm

 5. Mukund says:

  Pratap,

  Greate, I know P V N is the Hero of 6th Dec 92.

  Mukund V Desai

 6. kiran says:

  sir from past one year i am reading your articles and i have become a follower of you,sir every time i suggest my friends to read your articles, but problem is that some of my friends donot know kannada,so if u can publish the articles in either hindi or english it would be helpful to the people who dont know kannada………

 7. Mallikarjuna hampali says:

  Good article.. Rao also known for his slow decision making. He strongly believed in “Not talking decision ” is also a decision

 8. Akash G says:

  Actuallu .. i missed this article… just now seen… superb.. Really superb.. keep it up Prathap bhai(Anna)..

 9. Akash G says:

  Prathap.. one request from my side….. please try to give replay for every Feed back (if possible)… So that your fans will be very happy(me too)..

 10. Raghunandan says:

  awesome note on the legend

 11. Hemanth P R says:

  Thanks for your use full information Simha sir…