Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹಸಿರು ಬಿತ್ತಿ ಹಸಿವು ನೀಗಿಸಿದ ಬೋರ್ಲಾಗ್

ಹಸಿರು ಬಿತ್ತಿ ಹಸಿವು ನೀಗಿಸಿದ ಬೋರ್ಲಾಗ್

Norman Borlaug“ನೂರಾರು ಭಾರತೀಯ ವಿeನಿಗಳು, ನೀತಿ ನಿರೂಪಕರು, ಕೋಟ್ಯಂತರ ರೈತರ ಹೆಸರಿನಲ್ಲಿ ನಾನು ಈ ಪುರಸ್ಕಾರವನ್ನು ಸ್ವೀಕರಿಸುತ್ತೇನೆ. ಅವರೆಲ್ಲರ ಸಹಾಯ, ಸಹಕಾರವಿಲ್ಲದಿದ್ದರೆ ‘ಹಸಿರು ಕ್ರಾಂತಿ’ ಅಸಾಧ್ಯದ ಮಾತಾಗುತ್ತಿತ್ತು. ಅದರಲ್ಲೂ ನನ್ನ ಪ್ರೀತಿಯ ಭಾರತದಿಂದ ಈ ಗೌರವ ಪಡೆದುಕೊಳ್ಳಲು ನಾನು ತುಂಬಾ ಆಭಾರಿಯಾಗಿದ್ದೇನೆ”. 2006ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಗಳ ಪರವಾಗಿ ಮೆಕ್ಸಿಕೋದಲ್ಲಿ ನಮ್ಮ ರಾಯಭಾರಿ ಆರ್.ಕೆ. ಭಾಟಿಯಾ ನೀಡುವಾಗ ಡಾ. ನಾರ್ಮನ್ ಅರ್ನೆಸ್ಟ್ ಬೋರ್ಲಾಗ್ ಆಡಿದ ಮಾತುಗಳಿವು! ಡಾ. ಬೋರ್ಲಾಗ್ ಭಾರತಕ್ಕೆ ಆಭಾರಿಯಾಗುವುದಕ್ಕಿಂತ, ಭಾರತೀಯರಾದ ನಾವು ಅವರಿಗೆ ಋಣಿಗಳಾಗಿರಬೇಕು. ಈ ಮಾತು ಖಂಡಿತ ಅತಿಶಯೋಕ್ತಿಯೆನಿಸುವುದಿಲ್ಲ.

Public Law 480

Food for Peace

ಈ ಎರಡೂ ಒಂದೇ. ಹೀಗೆನ್ನುವುದಕ್ಕಿಂತ “PL 480″ ಎಂದರೆ ಭಾರತೀಯರಾದ ನಮಗೆ ತಟ್ಟನೆ ಇತಿಹಾಸ ನೆನಪಾಗುತ್ತದೆ, ಪರಿಸ್ಥಿತಿ ಕಣ್ಣಮುಂದೆ ಬಂದು ನಿಲ್ಲುತ್ತದೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದಿತ್ತು. ಸ್ವ-ಆಡಳಿತ ನಡೆಸುವ ಹಕ್ಕು-ಅಧಿಕಾರ ಬಂತಾದರೂ ಆಹಾರದ ವಿಷಯದಲ್ಲಿ ನಾವು ಸ್ವಾವಲಂಬಿಗಳಾಗಿರಲಿಲ್ಲ. ಬ್ರಿಟಿಷರು ನಮ್ಮನ್ನಾಳುತ್ತಿದ್ದ ಕಾಲದಲ್ಲೂ ಅದೇ ಪರಿಸ್ಥಿತಿ ಇತ್ತು. ಬಂಗಾಳದ ಮಹಾಕ್ಷಾಮ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿದೆ. ನಮಗೆ ಸ್ವಾತಂತ್ರ್ಯ ಬಂದಾಗ ಭಾರತದ ಒಟ್ಟು ಗೋಧಿ ಉತ್ಪಾದನೆ 6.46 ದಶಲಕ್ಷ ಟನ್‌ಗಳಾಗಿದ್ದವು. ಪ್ರತಿ ಹೆಕ್ಟೇರ್ ಭೂಮಿಯಲ್ಲಿ ಸರಾಸರಿ 663 ಕೆ.ಜಿ. ಗೋಧಿ ಬೆಳೆಯಲಾಗುತ್ತಿತ್ತು. ಭಾರತದ ಬಹುತೇಕ ಮಂದಿ ಉಪಯೋಗಿಸುವುದೇ ಗೋಧಿ. ಹಾಗಾಗಿ ದೇಶದ ಜನಸಂಖ್ಯೆಗೆ ಸಾಕಾಗುವಷ್ಟು ಗೋಧಿ ನಮ್ಮಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ. ಜಗತ್ತಿನ ಬಹುತೇಕ ಭಾಗಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಎರಡನೇ ಮಹಾಯುದ್ಧದ ನಂತರ ಜಗತ್ತಿಗೆ ಎದುರಾದ ಮೊದಲ ಮಹಾಸಮಸ್ಯೆಯೇ ಆಹಾರ ಕೊರತೆ. ಈ ಹಿನ್ನೆಲೆಯಲ್ಲಿ ಹೊರರಾಷ್ಟ್ರಗಳು ಅಮೆರಿಕದ ಗೋಧಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಸಲುವಾಗಿ ಅಧ್ಯಕ್ಷ ಡ್ವಿಟ್ ಡೆವಿಡ್ ಐಸೆನ್ ಹೋವರ್ ಒಂದು ಕಾಯಿದೆಯನ್ನು ಜಾರಿಗೆ ತಂದರು.

ಅದೇ Public Law 480.

1954, ಜುಲೈ 10ರಂದು ‘ಕೃಷಿ ವ್ಯಾಪಾರ ಅಭಿವೃದ್ಧಿ ಸಹಾಯ ಕಾಯಿದೆ’ಯಡಿ ಜಾರಿಗೆ ತರಲಾದ ಈ ಯೋಜನೆ ಯನ್ನು ಸಂಕ್ಷಿಪ್ತವಾಗಿ “ಪಿ.ಎಲ್-೪೮೦” ಎನ್ನುತ್ತಾರೆ. ಮುಂದೆ ಅಮೆರಿಕದ ಅಧ್ಯಕ್ಷರಾದ ಜಾನ್ ಎಫ್. ಕೆನಡಿ, ಆಹಾರದ ಮಹತ್ವವನ್ನು ಗುರುತಿಸಿ  1961ರಲ್ಲಿ ‘ಆಹಾರವೇ ಶಕ್ತಿ’, ‘ಆಹಾರವೇ ಸ್ವಾತಂತ್ರ್ಯ’ ಎಂದರು. ಕೊನೆಗೆ ಆಹಾರದಿಂದಲೇ ಜಗತ್ತಿನ ಶಾಂತಿ ಸಾಧ್ಯ ಎಂಬರ್ಥದಲ್ಲಿ ಅದಕ್ಕೆ “Food for Peace” ಎಂದು ಕರೆದರು. ತೀವ್ರ ಆಹಾರ ಕೊರತೆಯನ್ನು ಅನುಭವಿಸುತ್ತಿದ್ದ ಭಾರತ ಕೂಡ, “ಪಿ.ಎಲ್-480″ ಯೋಜನೆಯಡಿ ತನ್ನ ಬಟ್ಟಲನ್ನು ತುಂಬಿಸಿಕೊಳ್ಳುತ್ತಿತ್ತು! ಗೋಧಿ ಜತೆ ಅಕ್ಕಿಯನ್ನೂ ಆಮದು ಮಾಡಿಕೊಳ್ಳಲಾರಂಭಿಸಿತ್ತು. ಇದು ಭಾರತವೊಂದಕ್ಕೇ ಸೀಮಿತವಾದ ಸಮಸ್ಯೆಯಾಗಿರಲಿಲ್ಲ. ಈಜಿಪ್ಟ್, ಪಾಕಿಸ್ತಾನ, ಬಾಂಗ್ಲಾದೇಶ, ಮೆಕ್ಸಿಕೊ, ಆಫ್ರಿಕಾ ಹೀಗೆ ಎಲ್ಲ ರಾಷ್ಟ್ರಗಳು ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದವು.

ನಾರ್ಮನ್ ಅರ್ನೆಸ್ಟ್ ಬೋರ್ಲಾಗ್ ಜನಿಸಿದ್ದು 1914, ಮಾರ್ಚ್ 25ರಂದು. ಅಮೆರಿಕದ ಅಯೋವಾ ರಾಜ್ಯದ ಕ್ರೆಸ್ಕೋ ಎಂಬಲ್ಲಿ. ಮಿನೆಸೊಟಾ ವಿಶ್ವವಿದ್ಯಾಲಯದಲ್ಲಿ ಅರಣ್ಯ ಅಭಿವೃದ್ಧಿ ವಿಷಯದಲ್ಲಿ ಪದವಿ ಪಡೆದುಕೊಂಡರು. ಆನಂತರ ಮೆಸಾಚುಸೆಟ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿದರಾದರೂ ಕೆಲ ಕಾಲದಲ್ಲೇ ಕೆಲಸ ಹೋಯಿತು. ಮತ್ತೆ ಕಾಲೇಜು ಮೆಟ್ಟಿಲು ಹತ್ತಿದ ಬೋರ್ಲಾಗ್, ಸ್ನಾತಕೋತ್ತರ ಪದವಿ ಪಡೆದು, ಸಸ್ಯರೋಗ ಶಾಸ್ತ್ರದಲ್ಲಿ ಡಾಕ್ಟರೇಟ್ ಕೂಡ ಪಡೆದುಕೊಂಡರು. ಮೂರು ವರ್ಷಗಳ ಸಂಶೋಧನೆಯ ನಂತರ 1943ರಲ್ಲಿ ರಾಕ್‌ಫೆಲ್ಲರ್ ಫೌಂಡೇಶನ್ ಸೇರಿಕೊಂಡರು. ಅದು ಮೆಕ್ಸಿಕೋದ ಕೃಷಿ ಸಚಿವಾಲಯದ ಸಹಕಾರದೊಂದಿಗೆ ಯೋಜನೆಯೊಂದನ್ನು ಹಮ್ಮಿಕೊಂಡಿತ್ತು. ಮೆಕ್ಸಿಕೋದ ಕೃಷಿಕರು ಒಂದು ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲಿನ ಗೋಧಿ ಪೈರು ತೀರ ಉದ್ದುದ್ದ ಬೆಳೆಯುತ್ತಿತ್ತು, ಬೆಳೆದು ಸಮತೋಲನ ತಪ್ಪಿ ನೆಲಕ್ಕೆ ಬೀಳುತ್ತಿತ್ತು. ಹಾಗೆ ಬಿದ್ದಾಗ ಪೈರಿಗೆ ಗೆದ್ದಲು ಅಂಟಿಕೊಳ್ಳುತ್ತಿತ್ತು. ಅದು ಮೆಕ್ಸಿಕೋದ ಆಹಾರ ಕೊರತೆ ಸಮಸ್ಯೆಗೆ ಮುಖ್ಯ ಕಾರಣವಾಗಿತ್ತು. ರಾಕ್‌ಫೆಲ್ಲರ್ ಫೌಂಡೇಶನ್ ಸೇರಿದ್ದ ಬೋರ್ಲಾಗ್‌ಗೆ ಮೆಕ್ಸಿಕೋಕ್ಕೆ ಹೋಗಿ ಸಂಶೋಧನೆ ನಡೆಸಿ, ಪರಿಹಾರ ಕಂಡುಹಿಡಿಯುವ ಜವಾಬ್ದಾರಿ ಹೆಗಲೇರಿತು.

ಹೀಗೆ International Maize and Wheat Improvement Center (CIMMYT)ನಲ್ಲಿ ಬೋರ್ಲಾಗ್ ಹಾಗೂ ಸಹೋದ್ಯೋಗಿಗಳು ಸಂಶೋಧನೆ ಆರಂಭಿಸಿದರು.

ಗೆದ್ದಲು ನಿರೋಧ ಹಾಗೂ ಬರಗಾಲವನ್ನೂ ತಡೆದು ಕೊಳ್ಳುವ ಸಾಮರ್ಥ್ಯವಿರುವ ಗೋಧಿ ತಳಿಯೊಂದನ್ನು ರೂಪಿಸುವಲ್ಲಿ ಯಶಸ್ವಿಯಾದ ಅವರು, ಗಿಡ್ಡ ತಳಿಯ ಜಪಾನಿ ಗೋಧಿ ಸಸಿ ಜತೆ ಕಸಿ (ಕ್ರಾಸ್) ಮಾಡಿ ನೂತನ ಬೆರಕೆ ತಳಿಯೊಂದನ್ನು ರೂಪಿಸಿದರು. ಅದು ಗೆದ್ದಲು ನಿರೋಧಕ, ರೋಗ ನಿರೋಧಕ ಮಾತ್ರವಲ್ಲ, ಗಿಡ್ಡದಾಗಿದ್ದರಿಂದ ಬಲವಾದ ಗಾಳಿಯನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಜತೆಗೆ ಅತಿಹೆಚ್ಚು ಇಳುವರಿಯನ್ನೂ ನೀಡುತ್ತಿತ್ತು. ಇಂತಹ ತಳಿ ಸಂಶೋಧನೆಯ ಫಲವಾಗಿ ತೀವ್ರ ಕೊರತೆ ಅನುಭವಿಸುತ್ತಿದ್ದ ಮೆಕ್ಸಿಕೋ ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಯಿತು! ಇತ್ತ 1960ರ ದಶಕದ ಆರಂಭದೊಂದಿಗೆ ಭಾರತೀಯ ಉಪಖಂಡದಲ್ಲಿ ತೀವ್ರ ಬರಗಾಲವೂ ಶುರುವಾಗಿತ್ತು. ಭಾರತದ ಗೋಧಿ ಬೆಳೆಗಾರರೂ ಕೂಡ ಮೆಕ್ಸಿಕೋ ರೈತರಂತೆ ಕೆಲವು ಏಕರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಭಾರತದ ಗೋಧಿ ತಳಿಗಳು ಎತ್ತರಕ್ಕೆ ಬೆಳೆದು, ತೆನೆ ಮೂಡಿದ ಕೂಡಲೇ ಬಾಗಿ ನೆಲಕ್ಕೆ ಬೀಳುತ್ತಿದ್ದವು. ಅದು ಕ್ರಿಮಿಕೀಟಗಳ ದಾಳಿಗೆ, ರೋಗರುಜಿನಗಳಿಗೆ ದಾರಿ ಮಾಡಿಕೊಡುತ್ತಿತ್ತು. ಅಂತಿಮವಾಗಿ ಫಸಲು ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿತ್ತು. ಆದಕಾರಣ ನಾರ್ಮನ್ ಬೋರ್ಲಾಗ್ ಮಾದರಿಯ ಭಾರೀ ಇಳುವರಿ ನೀಡುವ ಗೋಧಿಯನ್ನು ಭಾರತದಲ್ಲೂ ಬೆಳೆಯಬೇಕೆಂಬ ಮಾತು ಕೇಳಿಬಂತು. ಅದರ ಫಲವಾಗಿ 1961ರಲ್ಲಿ ಭಾರತ ಸರಕಾರ ಆಯೋಗವೊಂದನ್ನು ನೇಮಕ ಮಾಡಿತು. ಅದರಲ್ಲಿ ಖ್ಯಾತ ಕೃಷಿ ವಿeನಿ ಡಾ. ಎಂ.ಎಸ್. ಸ್ವಾಮಿನಾಥನ್ ಇದ್ದರು. ಈ ಮಧ್ಯೆ, ಆಹಾರ ಕೊರತೆ ಎದುರಿಸುತ್ತಿರುವ ಹಾಗೂ ಬರಪೀಡಿತ ದೇಶಗಳಿಗೆ ‘ನಾರ್ಮನ್ ಬೋರ್ಲಾಗ್ ಮಾದರಿ’ಯ ರೋಗ ಹಾಗೂ ಬರ ನಿರೋಧಕ ಗೋಧಿ ತಳಿಗಳನ್ನು ಏಕೆ ನೀಡಬಾರದು ಎಂದು ಬೋರ್ಲಾಗ್ ಹಾಗೂ ರಾಕ್‌ಫೆಲ್ಲರ್ ಸಂಸ್ಥೆಗನಿಸಿತು. 1963ರಲ್ಲಿ CIMMYT ಬೋರ್ಲಾಗ್ ಅವರನ್ನು ಭಾರತ ಮತ್ತು ಪಾಕಿಸ್ತಾನಕ್ಕೆ ಕಳುಹಿಸಿತು. ಆದರೆ ಬೋರ್ಲಾಗ್ ಮಾದರಿಯ ಗೋಧಿಯನ್ನು ಬೆಳೆಯಲು ಆರಂಭಿಸಿದರೆ ಸ್ಥಳೀಯ ತಳಿ, ಬೆಳೆಗಳು ನಾಶಗೊಳ್ಳುತ್ತವೆ ಎಂಬ ದೊಡ್ಡ ಬೊಬ್ಬೆ ಆರಂಭವಾಯಿತು. ಹಾಗಾಗಿ ಸರಕಾರವೂ ಹಿಂದೇಟು ಹಾಕುವಂತಾಯಿತು. ಬೋರ್ಲಾಗ್ ಎಷ್ಟೇ ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಆದರೇನಂತೆ 1965ರಲ್ಲಿ ಭಾರತೀಯ ಉಪಖಂಡದ ಬರ ಇನ್ನೂ ತೀವ್ರಗೊಂಡಿತು. ಸರಕಾರ ಏನಾದರೂ ಮಾಡಲೇಬೇಕಾಗಿ ಬಂತು. ಕೊನೆಗೂ ಭಾರತ ಮತ್ತು ಪಾಕಿಸ್ತಾನ ಸರಕಾರಗಳೆರಡೂ ಗೋಧಿ ಬೀಜ ಆಮದಿಗೆ ಒಪ್ಪಿಗೆ ನೀಡಿದವು. ಮೂವತ್ತೈದು ಟ್ರಕ್ ಗೋಧಿಯನ್ನು CIMMYT ಮೆಕ್ಸಿಕೋದಿಂದ ಅಮೆರಿಕದ ಲಾಸ್ ಏಂಜಲಿಸ್ ಬಂದರಿಗೆ ಕಳುಹಿಸಿತು. ಆದರೆ ಬೀಜ ಆಮದಿಗೆ ಅವಕಾಶವಿಲ್ಲ ಎಂದು ಅಮೆರಿಕದ ಗಡಿಭದ್ರತಾ ಅಧಿಕಾರಿಗಳು ಅಡ್ಡಗಾಲು ಹಾಕಿದರು. ಮತ್ತೆ ಬೋರ್ಲಾಗ್ ಪ್ರಯತ್ನದಿಂದಾಗಿ ಗೋಧಿ ಬೀಜ ಬಂದರಿನಿಂದ ಭಾರತಕ್ಕೆ ಹಡಗಿನಲ್ಲಿ ಹೊರಟವು.

“ಎಲ್ಲ ಸಮಸ್ಯೆ ಮುಗಿಯಿತು. ಇನ್ನು ಭಾರತದ ರೈತರು ನಿರಾತಂಕವಾಗಿ ಭಾರೀ ಇಳುವರಿ ನೀಡುವ ಗೋಧಿಯನ್ನು ಬೆಳೆಯಬಹುದು ಎಂದು ನಾನು ರಾತ್ರಿ ಮಲಗಿಕೊಂಡೆ. ಆದರೆ ಬೆಳಗಾಗುವಷ್ಟರಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ಯುದ್ಧ ಆರಂಭವಾಗಿತ್ತು.”

ಎಂದು ತಮಗಾದ ಅನುಭವವನ್ನು ಹೇಳಿಕೊಂಡಿದ್ದರು ಬೋರ್ಲಾಗ್. ಅಂದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ೧೯೬೫ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ಆರಂಭಿಸಿದ್ದವು. ಅಂದು ಬೋರ್ಲಾಗ್ ಮತ್ತು ಮೆಕ್ಸಿಕೋದಲ್ಲಿ ತರಬೇತಿ ಪಡೆದಿದ್ದ ಸ್ಥಳೀಯ ಭಾರತೀಯ ವಿeನಿಗಳು  ಯುದ್ಧದ ಕಾವು ಮತ್ತು ಫಿರಂಗಿಗಳ ಸದ್ದಿನ ನಡುವೆಯೂ ಪಂಜಾಬ್‌ನ ಗದ್ದೆಗಳಲ್ಲಿ ಗೋಧಿ ನಾಟಿ ಮಾಡಿದರು. ಕಟಾವಿಗೆ ಬಂದಾಗ ಅಷ್ಟೇನೂ ಒಳ್ಳೆಯ ಫಸಲು ಬಂದಿರಲಿಲ್ಲ. ಆದರೂ ಒಟ್ಟಾರೆ ಫಸಲಿನಲ್ಲಿ ಶೇ.70ರಷ್ಟು ವೃದ್ಧಿಯಾಗಿತ್ತು!! ಅದು ತಕ್ಕಮಟ್ಟಿಗೆ ಬರ ಹಾಗೂ ಯುದ್ಧಕಾಲದ ತುರ್ತುಪರಿಸ್ಥಿತಿಯಿಂದ ಉಂಟಾಗಿದ್ದ ಹಸಿವೆಯನ್ನು ನೀಗಿಸಿತು. ಇಷ್ಟಾಗಿಯೂ ಶತಶತಮಾನಗಳ ಕಾಲ ಅಕ್ಕಿ ತಿಂದುಕೊಂಡು ಬಂದಿದ್ದ ಕೇರಳಿಯರಿಗೆ 1966ರಲ್ಲಿ ಯುದ್ಧ ಸನ್ನಿವೇಶದಲ್ಲಿ ಗೋಧಿ ನೀಡಿದಾಗ ದೊಡ್ಡ ಹಿಂಸಾಚಾರವೇ ಸಂಭವಿಸಿತು. ಬಹಳ ವಿರೋಧ ವ್ಯಕ್ತವಾಗತೊಡಗಿತು. ಆದರೆ ಯುದ್ಧಕಾಲದ ತುರ್ತುಪರಿಸ್ಥಿತಿಯನ್ನು ಬಳಸಿಕೊಂಡು ಬೋರ್ಲಾಗ್ ಮಾದರಿ ಗೋಧಿ ಬೆಳೆಯಲು ಸರಕಾರ ಅವಕಾಶ ಕಲ್ಪಿಸಿತು. 1966-67ರಲ್ಲಿ ‘ಭಾರೀ ಇಳುವರಿ ತಳಿಗಳ ಯೋಜನೆ’ (High Yielding Varieties Programme-HYVP) ಅಡಿ ಲೆರ್ಮಾ, ರೋಜೋ 64-ಎ, ಸೊನೊರಾ 63, ಮಯೋ 64 ಮತ್ತು ಎಸ್ 227 ಎಂಬ ಐದು ಕಸಿ ತಳಿಗಳನ್ನು ಒಟ್ಟು 12.8 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಕೇವಲ 0.54 ದಶಲಕ್ಷ ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಯಿತು. ಈ ಬಾರಿ ಫಸಲಿನ ಪ್ರಮಾಣದಲ್ಲಿ ಶೇ. ೯೮ರಷ್ಟು ಪ್ರಗತಿ ಕಂಡುಬಂತು! ಮರು ವರ್ಷ ಭಾರತ ಮೆಕ್ಸಿಕೋದಿಂದ 18 ಸಾವಿರ ಟನ್ ಗೋಧಿ ಬೀಜ ಆಮದು ಮಾಡಿಕೊಂಡು ಕೃಷಿ ಆರಂಭಿಸಿತು. 1968ರ ವೇಳೆಗೆ ಪಾಕಿಸ್ತಾನ ಆಹಾರ ಸ್ವಾವಲಂಬನೆ ಸಾಧಿಸಿದರೆ, 1965ರಲ್ಲಿ 12.3 ದಶಲಕ್ಷ ಟನ್ ಇದ್ದ ಭಾರತದ ಒಟ್ಟು ಗೋಧಿ ಉತ್ಪಾದನೆ 1970ರ ವೇಳೆಗೆ 21.1ದಶಲಕ್ಷ ಟನ್‌ಗೇರಿತು. ಭಾರತ ಆಹಾರ ಸ್ವಾವಲಂಬನೆ ಸಾಧಿಸಿದ್ದು ಮಾತ್ರವಲ್ಲ, 1980ರ ದಶಕದ ವೇಳೆಗೆ ರಫ್ತು ಮಾಡುವ ರಾಷ್ಟ್ರಗಳ ಸಾಲಿಗೆ ಸೇರಿತು!

ಡಾ. ನಾರ್ಮನ್ ಬೋರ್ಲಾಗ್ ಅವರ ಈ ದೈತ್ಯ ಸಾಧನೆ ಯನ್ನು “ಹಸಿರು ಕ್ರಾಂತಿ” ಎಂದು ಕೊಂಡಾಡಲಾಯಿತು!!

ಇವತ್ತು ಭಾರತದ ಒಟ್ಟು ಗೋಧಿ ಉತ್ಪಾದನೆ 78 ದಶಲಕ್ಷ ಟನ್‌ಗೇರಿದೆ. ಇದೆಲ್ಲಾ ಸಾಧ್ಯವಾಗಿದ್ದು ಬೋರ್ಲಾಗ್ ಅವರಿಂದ. ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರು “ಎರಡನೇ ಹಸಿರು ಕ್ರಾಂತಿ”ಯ ಮಾತನಾಡುತ್ತಿದ್ದಾರೆ. ಆದರೆ ಅವತ್ತು ಬೋರ್ಲಾಗ್ ಭಾರತಕ್ಕೆ ಬಂದು ಹೊಸ ತಳಿಗಳನ್ನು ಪರಿಚಯಿಸಿದಾಗ ನಮ್ಮ ಪತ್ರಕರ್ತ ಮಹಾಶಯರು, ಆಡ ಳಿತಾಶಾಹಿಗಳು, ಪರಿಸರವಾದಿಗಳು ಅದೆಂತಹ ಮಾತುಗಳನ್ನಾಡಿದ್ದರೆಂದರೆ  “When would India get rid of this man?”(ಈ ಮನುಷ್ಯನಿಂದ ಭಾರತ ಬಿಡುಗಡೆಗೊಳ್ಳುವುದು ಯಾವಾಗ?) ಎಂದು ಟೀಕಾಪ್ರಹಾರ ಮಾಡಿದ್ದರು!

2006ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆಯುವಾಗ ಈ ಮೇಲಿನ ಘಟನೆಯನ್ನು ನೆನಪಿಸಿಕೊಂಡ ಬೋರ್ಲಾಗ್, “ಈ ಟೀಕಾಕಾರರು ಎಂತಹವರೆಂದರೆ ತಮ್ಮ ಜೀವಮಾನದಲ್ಲಿ ಒಂದು ಟನ್ ಆಹಾರೋತ್ಪಾದನೆ ಮಾಡದ ವ್ಯಕ್ತಿಗಳು! ಇವರಿಗೆ ಪುಸ್ತಕದ eನ ಬಹಳಷ್ಟಿದೆ, ಆದರೆ ಇವರೆಂದೂ ಒಂದು ಟನ್ ಆಹಾರ ಉತ್ಪಾದನೆ ಮಾಡಿದವರಲ್ಲ. ಎಲ್ಲ ಥರದ ಅಡ್ಡಿಗಳನ್ನೂ ಒಡ್ಡುತ್ತಿರುವವರು  ಇಂಥವರೇ. ಅವರಲ್ಲಿ ಬಹಳಷ್ಟು ಜನರು ಭಾರತದಲ್ಲಿದ್ದಾರೆ. ರಾಜಕೀಯ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಲು  ಇವರು ಬಿಡುತ್ತಿಲ್ಲ. ಐದಾರು ದಶಕಗಳ ಹಿಂದಕ್ಕೆ ಹೋಗಿ… ೧೯೫೦ರ ದಶಕದಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ 200 ಕೋಟಿಯಾಗಿತ್ತು. ಈಗ 670 ಕೋಟಿ ಮೀರಿದೆ. ಅಂದು ಎಷ್ಟು ಸಾಕಾಗಿತ್ತೋ ಅಷ್ಟು ಆಹಾರ ಇಂದು ಏನೇನೂ ಅಲ್ಲ. ಆದರೂ ಇವರೆಲ್ಲ ಪುಸ್ತಕದ ಬದನೆಕಾಯಿಯ ಬಗ್ಗೆಯೇ ಯೋಚಿಸುತ್ತಿದ್ದಾರೆ. ಅಷ್ಟಕ್ಕೂ ಇವರೆಂದೂ ಹಸಿವು ಹಾಗೂ ನೋವನ್ನು ನೋಡಿದವರಲ್ಲ” ಎಂದು ತಮ್ಮ ಪರಿಶ್ರಮದ ಹೊರತಾಗಿಯೂ ಎದುರಾದ ವಿರೋಧ, ಅಪಾದನೆಗಳ ಬಗ್ಗೆ ಈ ರೀತಿ ಮಾರುತ್ತರ ನೀಡಿದ್ದರು. “ಈ ಅನುಮಾನ ಪಿಶಾಚಿಗಳು ಭಾರತ ಹಾಗೂ ಹೊರಗಡೆ ಎಲ್ಲಡೆಗಳಲ್ಲೂ ಇದ್ದರು. 1960, 70ರ ದಶಕದಲ್ಲಿ ಭಾರತದ ಆಹಾರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳುತ್ತಿದ್ದರು. ಅದೂ ಭಾರತ ಬರ ಎದುರಿಸುತ್ತಿದ್ದ ಕಾಲದಲ್ಲಿ. ಆದರೆ ನಾವು ಅಸಾಧ್ಯವನ್ನು ಸಾಧಿಸಿ ತೋರಿಸಿದೆವು”. ಮುಂದುವರಿದು ಹೇಳುತ್ತಾ- 1. ಬಿತ್ತನೆಗಿಂತ 6 ವಾರ ಮೊದಲೇ ರೈತರಿಗೆ ರಸಗೊಬ್ಬರ ಪೂರೈಕೆ. 2. ರೈತರಿಗೆ ಕೃಷಿ ಸಾಲ. 3. ಬೆಳೆಗೆ ಉತ್ತಮ ಬೆಲೆ. ಇವುಗಳನ್ನು ಜಾರಿಗೆ ತರಬೇಕು ಎಂದು 1960ರ ದಶಕದಲ್ಲಿ ಹೇಳಿದೆ. ಇವು ನನ್ನ ಘೋಷ ವಾಕ್ಯಗಳಾಗಿದ್ದವು. ಆದರೆ ಇಂದಿಗೂ ಭಾರತದ ರೈತರಿಗೆ ರಸಗೊಬ್ಬರ, ಸೂಕ್ತ ಬೆಲೆ ಸಿಗುತ್ತಿಲ್ಲ. ಒಂದು ವೇಳೆ ನಾನೇನಾದರೂ ಭಾರತದ ಲೋಕಸಭೆಯ ಸದಸ್ಯನಾಗಿದ್ದರೆ “ರಸಗೊಬ್ಬರ, ರಸಗೊಬ್ಬರ, ರಸಗೊಬ್ಬರ, ಸೂಕ್ತ ಬೆಲೆ, ಸೂಕ್ತ ಬೆಲೆ, ಸಾಲ ಸೌಲಭ್ಯ, ಸಾಲ ಸೌಲಭ್ಯ” ಎಂದು ಪದೇ ಪದೆ ಕೂಗಿ ಹೇಳುತ್ತೇನೆ ಎಂದರು. ಒಬ್ಬ ಅಮೆರಿಕದ ಪ್ರಜೆಗೆ ಭಾರತೀಯ ರೈತರ ಮೇಲೆ ಎಂತಹ ಕಾಳಜಿಯಿತ್ತು ನೋಡಿ… ಡಾ. ನಾರ್ಮನ್ ಬೋರ್ಲಾಗ್ ಅವರು ಹೆಚ್ಚಿನ ಇಳುವರಿ ತರುವ ತಮ್ಮ ಗೋಧಿ ತಳಿಗಳ ಮೂಲಕ ಜಗತ್ತಿನಾದ್ಯಂತ ೨೫ ಕೋಟಿ ಜನರ ಪ್ರಾಣ ಉಳಿಸಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಆ ಕಾರಣಕ್ಕಾಗಿಯೇ 1970ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂತು. 57 ವಿವಿಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. 12 ರಾಷ್ಟ್ರಗಳ ವಿeನ ಅಕಾಡೆಮಿಗಳಲ್ಲಿ ಅವರು ಸದಸ್ಯರಾಗಿದ್ದರು.

ಡಾ. ನಾರ್ಮನ್ ಬೋರ್ಲಾಗ್  ಉಲ್ಲೇಖಿಸಿದ ಅನುಮಾನ ಪಿಶಾಚಿಗಳು ಈಗಲೂ ಭಾರತದಲ್ಲಿದ್ದಾರೆ. ಜೈವಿಕ ತಂತ್ರeನ, ಸಂಸ್ಕರಿತ ತಳಿ, ಅವುಗಳ ಸಮಸ್ಯೆ, ಪರಿಸರ ಹಾನಿ ಅಂತ ಜೋರಾಗಿ ಬೊಬ್ಬೆ ಹಾಕಿ, ಹೊಟ್ಟೆಹೊರೆದುಕೊಂಡು ಸತ್ತವರು, ಇನ್ನೂ ಹಣ ಗಳಿಸುತ್ತಿರುವವರನ್ನು ನಾವು ನೋಡುತ್ತಲೇ ಇದ್ದೇವೆ. ಯಾವುದೇ ಹೊಸ ತಂತ್ರeನ, ಸಂಶೋಧನೆ, ಪ್ರಗತಿಯ ಜತೆಗೆ ಒಂದಿಷ್ಟು ಪ್ರತಿಕೂಲ ಪರಿಣಾಮಗಳೂ ಇರುತ್ತದೆ. ಹಾಗಂತ ಜನ ಹಸಿವಿನಿಂದ ನರಳುತ್ತಿರುವಾಗ ತಳಿ ಸಂಸ್ಕರಣೆ ಎಂದು ತಗಾದೆ ತೆಗೆದುಕೊಂಡು ಕುಳಿತರೆ ಬಡವರ ಹೊಟ್ಟೆ ತುಂಬೀತೆ? ನಮ್ಮಲ್ಲಿ ಇಷ್ಟೆಲ್ಲಾ ವಿವಿಗಳಿವೆ. ಯಾವ ವಿವಿ ಮನುಕುಲದ ಒಳಿತಿಗಾಗಿ ಯಾವ ಸಂಶೋಧನೆ ಮಾಡಿದೆ? ಯಾವ ಜನಪರ ಸಂಶೋಧನೆಯಲ್ಲಿ ತೊಡಗಿವೆ? ಮೈಸೂರು ವಿವಿಯಲ್ಲಿರುವವರು ಗುಲ್ಬರ್ಗಾದ ಜನರಿಗೆ ಅನುಕೂಲವಾಗುವ ಸಂಶೋಧನೆಯನ್ನೇ ಮಾಡುವುದಿಲ್ಲ. ಬೆಂಗಳೂರು ವಿವಿ, ಪಕ್ಕದ ಕೋಲಾರದ ಜನರ ಒಳಿತಿನ ಬಗ್ಗೆ ಚಿಂತಿಸುವುದಿಲ್ಲ. ಅಷ್ಟೇಕೆ, ಅನ್ವಯಿಕ ಸಂಶೋಧನೆ(Applied Research) ಬಗ್ಗೆ ಯಾವ ವಿವಿಗಳೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಿರುವಾಗ ಒಬ್ಬ ಅಮೆರಿಕದ ಪ್ರಜೆಯಾಗಿ ಡಾ. ನಾರ್ಮನ್ ಬೋರ್ಲಾಗ್ ಭಾರತೀಯರಾದ ನಮ್ಮನ್ನು ಆಹಾರ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕಾದರೆ ಅವರಲ್ಲಿ ಹೃದಯವೈಶಾಲ್ಯತೆ ಎಷ್ಟಿರಬೇಕು? ಮಾನ್ಸಾಂಟೋ, ಕಾರ್ಗಿಲ್ ಎಂದು, ಬಹು ರಾಷ್ಟ್ರೀಯ ಕಂಪನಿಗಳ ಹುನ್ನಾರ ಎಂದು ಕೆಲವರು ಮೈಪರ ಚಿಕೊಳ್ಳುವುದರಲ್ಲಿ ಜೀವನವನ್ನು ಕಳೆಯುತ್ತಾರೆ. ಆದರೆ ಡಾ. ಬೋರ್ಲಾಗ್ ಬಡರಾಷ್ಟ್ರಗಳ ಹಸಿದ ಹೊಟ್ಟೆಗಳಿಗೆ ಕೂಳು ಕೊಡಲು ಜೀವನವಿಡೀ ಶ್ರಮಿಸಿದರು. ಮಾನವ ಸಮಸ್ಯೆಯನ್ನು ಕೊನೆಗಾಣಿಸಬೇಕು ಎಂದು ಸಂಶೋಧನೆ ಮಾಡಿದರು. ನಾವು ತಿನ್ನುವ ಪ್ರತಿ ಗೋಧಿ ಕಾಳಿನ ಹಿಂದೆ ಅವರ ಪರಿಶ್ರಮವಿದೆ.

ಕಳೆದ ಶನಿವಾರ(ಸೆಪ್ಟೆಂಬರ್ 12) 95 ವರ್ಷದ ಡಾ. ಬೋರ್ಲಾಗ್ ಅಮೆರಿಕದ ಟೆಕ್ಸಾಸ್‌ನಲ್ಲಿ ತೀರಿಕೊಂಡರು. ನಮ್ಮ ಹೊಟ್ಟೆ ತುಂಬಿಸಿದ ಅವರಿಗೆ ಚಿರಋಣಿಗಳಾಗಿರೋಣ.

8 Responses to “ಹಸಿರು ಬಿತ್ತಿ ಹಸಿವು ನೀಗಿಸಿದ ಬೋರ್ಲಾಗ್”

 1. Karthik says:

  Thank you very much for introducing a legend. We would really appreciate if you can let us the name of the person who said – “When would India get rid of this man?”. We will at least know how efficient we are in pulling our own’s legs.

 2. lodyaashi says:

  ಆತ್ಮೀಯ ಪ್ರತಾಪರೆ,

  ಒಳ್ಳೆ ಲೇಖನ ಪ್ರಕಟಿಸಿದ್ದೀರಿ.

  ಕೇವಲ ಒಬ್ಬ ವ್ಯಕ್ತಿಯಿಂದ ಎಂತೆಂತಹ ಸಾಧನೆಗಳು ಸಾದ್ಯ!!!
  ಜನ ಸಾಮಾನ್ಯರ ಕಷ್ಟಕ್ಕೆ ಸಹಾಯ ಆಗೋ ಇಂತಹ ಮಹನೀಯರಿಗೆ ಸೂಕ್ತ ಪ್ರೋತ್ಸಾಹ ನಮ್ಮ ನೆಲದಲ್ಲಿ ಸಿಗಬೇಕು.

 3. savitha says:

  “aadu muttada soppilla, prataparige etukada vishayavilla”.. wonderful writing prat..

 4. vishwas says:

  hello sir i have become a great fan of yours!!!!!
  lookin forward to read much more articles written by you…

  love you sir!!!

 5. Meena Spoorthy says:

  hie Pratap.

  Your article about Borlang, who is main responsible for Green revolution in India was worth reading, But you could have mentioned few words about our politician, who really supported him, because I believe without our leaders support that man would not have succeeded in his mission. Generally all news creating , making people, media focus on the negative side of our politician, completely ignores the possitive aspects given by them. criticizing is good but the appreciating good things has to be there unfortunately we won’t do that. In very least we get to know by media about the real , possitive efforts given by our leaders. can’t you [we] make a change here…. by thinking out of box..

  Thanks N Regards
  Mina.

 6. Abhinandan says:

  ಕೋಟ್ಯಾಂತರ ಜನರ ಹಸಿವು ನೀಗಿಸಿದ Norman Borlaug ಅವರಿಗೆ ನಾನು ಚಿರಋಣಿ

 7. Rakesh Shankar says:

  let’s salute Dr.Norman Borlaug who made us self efficient in wheat production then….
  Thanx sir for letting us know more details about ‘Green Revolution’ and the man behind it…….

 8. MAHESH G BASAVARAJU says:

  I would like to request you,please write regarding the daily wages people in Grampanchayat and other departments in karnataka govenament.Because in rural areas in villeges,they are the important persons keep the villeges clean and supply the water etc.Why I am requesting because there salaries less than the minimum wages suggested by the govt labour department(read in Vijaya Karnataka labour minister told the different wages in the newspapaer).All the Govt did the same thing
  to this poor people.I asked some person in the villege(chamarajangar District),he served more than 20years as a waterman in Gram panchayat and he is getting Rs1600/- per month.It is actually less than the amount set by the governament and how the governaments are set wage setup to the private sector?.I am not asking goverament make them permanent but please consider their srevice and the proper salary.These people donot have strength and support to fight against the Governament.

  Please write one article to help this more than 17000 poor people and save their family