Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಂತಹ ವ್ಯಕ್ತಿಗಳ ಸಂತತಿ ಇನ್ನೂ ಹೆಚ್ಚಾಗಲಿ!

ಇಂತಹ ವ್ಯಕ್ತಿಗಳ ಸಂತತಿ ಇನ್ನೂ ಹೆಚ್ಚಾಗಲಿ!

ಬೆಂಗಳೂರಿನ ಗಿರಿನಗರದಲ್ಲಿರುವ ಸ್ನೇಹಿತರಾದ ಸತೀಶ್ ವಿಠಲ್ ತಮ್ಮ ಸ್ನೇಹಿತನ ವಿವಾಹಕ್ಕೆಂದು ಬಿಹಾರಕ್ಕೆ ಹೋಗಿದ್ದಾಗ ಸಂಭವಿಸಿದ ಘಟನೆಗಳನ್ನು ಬಹಳ ಮಜಬೂತಾಗಿ ವಿವರಿಸುತ್ತಾರೆ.

ಸಾರ್, ನಮ್ ಫ್ರೆಂಡ್ ಮೊದಲೇ ಹೇಳಿದ್ದ ಯಾರ ಜತೆಗೂ ವಾದಕ್ಕಿಳಿಯಬೇಡ, ಕಾಯಿದೆ-ಕಾನೂನಿನ ಮಾತನಾಡಬೇಡ, ಸೀಟು ಕೇಳಿದ್ರೆ ಬಿಟ್ಟುಕೊಡು. ಕರ್ನಾಟಕದ ಹಾಗಲ್ಲ, ಕೊಂದೇ ಬಿಡುತ್ತಾರೆ ಹುಷಾರ್ ಎಂದಿದ್ದ. ಅಲ್ಲಿ ಬಸ್ ಸರ್ವೀಸೇ ಇಲ್ಲ ಎನ್ನಬಹುದು. ಜನ ಓಡಾಡುವುದೆಲ್ಲ ರೈಲಲ್ಲೇ. ನಾವು ವಾಪಸ್ ಬೆಂಗಳೂರಿಗೆ ಬರುವುದಕ್ಕೆ ರಿಸರ್ವೇಶನ್ ಮಾಡಿಸಿದ್ದೆವು. ರೈಲು ಎಲ್ಲೆಂದರಲ್ಲಿ ನಿಲ್ಲುತ್ತದೆ, ಜನ ಮನಸ್ಸಿಗೆ ಬಂದಂತೆ ರೈಲನ್ನೇರಿ ಕುಳಿತುಕೊಳ್ಳುತ್ತಾರೆ. ರಿಸರ್ವೇಶನ್ ಮಾಡಿಸಿದ್ದೇವೆ ಎಂದರೆ, ‘ನಿನ್ನ ಬಳಿ ದುಡ್ಡಿದೆ, ರಿಸರ್ವೇಶನ್ ಮಾಡಿಸಿದ್ದೀಯಾ. ನನ್ಹತ್ರ ದುಡ್ಡಿದ್ರೆ ನಾನೂ ಮಾಡಿಸ್ತಿದ್ದೆ. ಇದೇನು ನಿನ್ನಪ್ಪನ ಟ್ರೈನಾ?’ ಎನ್ನುತ್ತಾರೆ. ಚೈನು ಎಳೆದ ಕೂಡಲೇ ಟ್ರೈನ್ ನಿಲ್ಲಲೇ ಬೇಕು, ಇಲ್ಲದಿದ್ದರೆ ಡೈವರ್‌ಗೇ ಒದೆ ಬೀಳುತ್ತದೆ. ಅಲ್ಲಿನ ರಾಜಕಾರಣಿಗಳನ್ನು ನೋಡಿ, ಕೇಂದ್ರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈಲ್ವೆ ಖಾತೆ ನಮಗೇ ಬೇಕು ಎನ್ನುತ್ತಾರೆ. ಜನಕ್ಕೆ ಪ್ರಯಾಣ ವ್ಯವಸ್ಥೆ ಮಾಡಿಕೊಟ್ಟರೆ ವೋಟು ಗ್ಯಾರಂಟಿ. ಬಿಹಾರದಷ್ಟು ವರ್ಸ್ಟ್ ಯಾವ ರಾಜ್ಯವೂ ಇಲ್ಲಾ ಸಾರ್.

ಅಲ್ಲಿಗೆ ಹೋಗಿ ಬಂದವರೆಲ್ಲಾ ಒಂದೊಂದು ಸ್ಟೋರಿ ಹೇಳುತ್ತಿದ್ದರು.

ಅವರ ಮಾತಿನಲ್ಲೂ ಅರ್ಥವಿತ್ತು. ಬಾಬು ಜಗಜೀವನ್ ರಾಮ್, ಲಲಿತ್ ನಾರಾಯಣ ಮಿಶ್ರಾ, ಕೇದಾರ್ ಪಾಂಡೆ, ಜಾರ್ಜ್ ಫರ್ನಾಂಡಿಸ್, ರಾಮ್ ವಿಲಾಸ್ ಪಾಸ್ವಾನ್, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಹೀಗೆ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಅತಿ ಹೆಚ್ಚು ರೈಲ್ವೆ ಮಂತ್ರಿಗಳಾಗಿರುವುದು ಬಿಹಾರಿಗಳೇ. ಅದರಲ್ಲೂ ಲಾಲು ಎಂಬ ಮಹಾನುಭಾವ ಬಿಹಾರ ವನ್ನು ಕೆಟ್ಟಕಾರಣಗಳಿಗಾಗಿ ದಂತಕಥೆಯಾಗಿ ಮಾಡಿಬಿಟ್ಟಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ವಿಧವಿಧವಾದ ಜೋಕುಗಳಿಗೆ ವಸ್ತುವಾಗುವ ಮೊದಲೇ 15 ವರ್ಷ ಬಿಹಾರ ವನ್ನಾಳಿದ ಲಾಲು ಭಾರತದಲ್ಲಿ ಜೋಕಿನ ದೊಡ್ಡ ವಸ್ತುವಾಗಿದ್ದರು. ಸರ್ದಾರ್ಜಿ, ಸಂತಾ-ಬಂತಾ ಬಿಟ್ಟರೆ ಲಾಲು ಅವರೇ ಜೋಕುಗಳ ದೊಡ್ಡ ಹೀರೋ.

ಒಮ್ಮೆ ಬಿಹಾರ ಮುಖ್ಯಮಂತ್ರಿ ಲಾಲು, ಜಪಾನಿ ನಿಯೋಗಕ್ಕೆ ಆತಿಥ್ಯ ನೀಡಿದ್ದರು. ಬಿಹಾರದ ಜತೆ ವ್ಯಾಪಾರ ಸಂಬಂಧ ವೃದ್ಧಿಸುವ ಬಗ್ಗೆ ಚಿಂತಿಸಲು ನಿಯೋಗ ಬಂದಿತ್ತು. ರಾಜ್ಯವನ್ನೆಲ್ಲಾ ನೋಡಿ ಬಂದ ನಿಯೋಗ, “ಬಿಹಾರ ನಿಜಕ್ಕೂ ಒಂದು ಅತ್ಯದ್ಭುತ ರಾಜ್ಯ. ನಮಗೆ 3 ವರ್ಷಗಳನ್ನು ಕೊಡಿ, ಬಿಹಾರವನ್ನು ಜಪಾನ್‌ನಂತೆ ಆರ್ಥಿಕ ಸೂಪರ್ ಪವರ್ ಮಾಡಿಬಿಡುತ್ತೇವೆ” ಎಂದಿತು. ಆ ಮಾತನ್ನು ಕೇಳಿ ಆಶ್ಚರ್ಯಚಕಿತರಾದ ಲಾಲು ಹೇಳಿದರು- “ಜಪಾನಿಯರಾದ ನೀವು ನಿಜಕ್ಕೂ ಕೈಲಾಗದವರು. ನನಗೆ ಮೂರು ದಿನ ಕೊಡಿ, ಜಪಾನನ್ನೇ ಮತ್ತೊಂದು ಬಿಹಾರವನ್ನಾಗಿ ಮಾಡಿಬಿಡುತ್ತೇನೆ”!

ಇನ್ನೊಂದು ಜೋಕು ಕೇಳಿ.

ಬಿಹಾರದಲ್ಲಿ ಫ್ರೆಂಚ್ ಟಾಯ್ಲೆಟ್‌ಗೆ ಏನನ್ನುತ್ತಾರೆ?
La Loo!

2005, ನವೆಂಬರ್ 24ರಂದು ನಿತೀಶ್ ಕುಮಾರ್ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ಬಿಹಾರವೆಂದರೆ ಯಾರ ಬಾಯಿಂದಲೂ ಒಳ್ಳೆಯ ಮಾತು ಹೊರಬರುತ್ತಿರಲಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯನ್ನು ಕೈಗೊಂಡಿದ್ದಾಗ, ಅದರಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಐಐಟಿ ಕಾನ್ಪುರ ಪದವೀಧರ ಸತ್ಯೇಂದ್ರ ದುಬೆಯನ್ನು ೨೦೦೩ರಲ್ಲಿ ಹತ್ಯೆಗೈದ ನಂತರವಂತೂ ಬಿಹಾರವೆಂದರೆ ಎಲ್ಲರೂ ಭಯಪಡುವಂತಾಗಿತ್ತು. ಅಂತಹ ಬಿಹಾರ ಐದು ವರ್ಷ ಗಳಲ್ಲಿ ಬದಲಾಗಿ ಬಿಟ್ಟಿತೆ? ಯಾವ ಕಾರಣಗಳಿಗಾಗಿ ಅದು ಸುದ್ದಿ ಮಾಡುತ್ತಿತ್ತೋ ಅಂತಹ ಅಪರಾಧ ಪ್ರಕರಣಗಳು ನಿಜಕ್ಕೂ ನಿಂತು ಹೋಗಿವೆಯೇ?

ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ 45 ಸಾವಿರ ಕ್ರಿಮಿನಲ್‌ಗಳನ್ನು ವಿಚಾರಣೆಗೆ  ಒಳಪಡಿಸಿ, ಶಿಕ್ಷೆಗೆ ಗುರಿಪಡಿಸಿದೆ. ಆ ಮೂಲಕ ಕಾನೂನು ವ್ಯವಸ್ಥೆಯನ್ನು ಮರುಸ್ಥಾಪಿಸಿದೆ. ನ್ಯಾಯಾಂಗ ವ್ಯವ ಸ್ಥೆಯೂ ಮತ್ತೆ ಕ್ರಿಯಾಶೀಲಗೊಳ್ಳುವಂತೆ ಮಾಡಿದೆ. 1990ರಿಂದ 2005ರವರೆಗೂ ನಡೆದ ಲಾಲು-ರಾಬ್ಡಿ ಆಡಳಿತ ಯಾವ ಮಟ್ಟಕ್ಕೆ ತಲುಪಿತ್ತೆಂದರೆ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ಸಂಬಳವೇ ನಿಂತುಹೋಗಿತ್ತು. ಹೊಸ ನೇಮಕಗಳಂತೂ ದೂರದ ಮಾತಾಗಿದ್ದವು. ಹಾಗಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು. ಪದವಿ, ಸ್ನಾತಕೋತ್ತರ ಪದವಿಯ ಮಾತು ಹಾಗಿರಲಿ, ಪ್ರಾಥಮಿಕ ಶಿಕ್ಷಣವೇ ಕನಸಾಗಿತ್ತು. 2005ರಲ್ಲಿ ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುವಷ್ಟರಲ್ಲಿ 1 ಲಕ್ಷ ಪ್ರಾಥಮಿಕ, ಮಾಧ್ಯಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡುವ ಘೋಷಣೆ ಮಾಡಿದರು. ಹಾಲಿ ಶಿಕ್ಷಕರಿಗೆ ಸಂಬಳ ಕೊಡುವ ತಾಕತ್ತಿಲ್ಲದಿರುವಾಗ ಹೊಸ ನೇಮಕ, ಅದೂ 1 ಲಕ್ಷ ಶಿಕ್ಷಕರ ನೇಮಕ ಸಾಧ್ಯವೆ ಎಂದು ನಕ್ಕವರೇ ಹೆಚ್ಚು. ಸರಕಾರದ ಘೋಷಣೆಯನ್ನು ನಂಬುವುದಕ್ಕೂ ಸಾಧ್ಯವಿರಲಿಲ್ಲ. ಆದರೆ ಎನ್‌ಡಿಎ ತನ್ನ ವಾಗ್ದಾನವನ್ನು ಪೂರೈಸಿತು. ಇತರ ರಾಜ್ಯಗಳ ಕಂಪನಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಸುಶಿಕ್ಷಿತ ಬಿಹಾರಿ ಗಳಲ್ಲಿ ಕೆಲವರು ಮತ್ತೆ ಬಿಹಾರಕ್ಕೆ ಹಿಂದಿರುಗುವ ಹಂತಕ್ಕೆ ಬಂದರು. ಸರಕಾರ 5 ಸಾವಿರವನ್ನಾದರೂ ಕೊಡಲಿ, 7 ಸಾವಿರವನ್ನಾದರೂ ನೀಡಲಿ, ಬಿಹಾರಿಗಳಿಗೆ ಬೇಕಿದ್ದುದು ಸ್ವರಾಜ್ಯದಲ್ಲಿ ಉದ್ಯೋಗವೇ ಹೊರತು, ಸಂಬಳದ ಪ್ರಮಾಣವಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷವಾಗುವ ವೇಳೆಗೆ ದ್ವಿತೀಯ ಪಿಯುಸಿ ಪೂರೈಸಿದ್ದ 18ರಿಂದ 50 ವರ್ಷ ವಯೋಮಾನದವರೆಗೂ ಎಲ್ಲರಿಗೂ ಒಂದಲ್ಲ ಒಂದು ಕೆಲಸಗಳು ಸಿಗಲಾರಂಭಿಸಿದವು. ಒಂದು ಕಾಲದಲ್ಲಿ ಮಹಿಳಾ ಮೀಸಲಿನ ಕಟ್ಟಾವಿರೋಧಿಯಾಗಿದ್ದ ನಿತೀಶ್ ಕುಮಾರ್, ಹೆಣ್ಣುಮಕ್ಕಳಿಗೆ ಉದ್ಯೋಗ, ಚುನಾವಣೆ ಎಲ್ಲದರಲ್ಲೂ 50 ಪರ್ಸೆಂಟ್ ಮೀಸಲು ಜಾರಿಗೆ ತಂದರು. ಅಂದರೆ ಪ್ರತಿ ಕುಟುಂಬ ದಲ್ಲಿ ಕನಿಷ್ಠ ಒಬ್ಬರಿಗೆ ಉದ್ಯೋಗ ದೊರೆಯಿತು. ಶಿಕ್ಷಣ ವ್ಯವಸ್ಥೆ ಯಲ್ಲೇ ನಂಬಿಕೆ ಕಳೆದುಕೊಂಡಿದ್ದ ಜನ ಮತ್ತೆ ಮಕ್ಕಳನ್ನು ಶಾಲೆಗೆ ಕಳುಹಿಸಲಾರಂಭಿಸಿದರು.

“ಬಿಹಾರಿ ಅಸ್ಮಿತಾ”!

ಇತ್ತೀಚೆಗೆ ಮಾಧ್ಯಮಗಳಲ್ಲಿ ಇಂಥದ್ದೊಂದು ಮಾತು ಕೇಳಿ ಬರಲಾರಂಭಿಸಿದೆ. ಸುಲಿಗೆ, ದರೋಡೆ, ಡಕಾಯಿತಿಗೆ ಹೆಸರಾಗಿದ್ದ ಬಿಹಾರಿಗಳಲ್ಲಿ ‘ಅಸ್ಮಿತಾ’(ಹೆಮ್ಮೆ) ಜಾಗೃತಗೊಂಡಿರುವುದನ್ನು ಇಂದು ಕಾಣಬಹುದಾಗಿದೆ. ನಾವು ಬಿಹಾರಿಗಳು ಎಂದು ಹೆಮ್ಮೆ ಯಿಂದ ಹೇಳಿಕೊಳ್ಳುವ ಧೈರ್ಯತೋರುವಷ್ಟರ ಮಟ್ಟಿಗೆ ನಿತೀಶ್ ಕುಮಾರ್ ಬದಲಾವಣೆ ತಂದಿದ್ದಾರೆ.  MY=ಮುಸ್ಲಿಂ+ಯಾದವ್ ಎಂಬ ಜಾತಿ ರಾಜಕೀಯದ ಮೂಲಕ 15 ವರ್ಷಗಳ ಕಾಲ ಬಿಹಾರವನ್ನಾಳಿದ ಹಾಗೂ ಸಮಾಜವನ್ನೊಡೆದ ಲಾಲು ಪ್ರಸಾದ್ ಯಾದವ್ ಉಂಟುಮಾಡಿದ್ದ ಹಾನಿಯನ್ನು ೫ ವರ್ಷಗಳಲ್ಲಿ ಬದಲಾವಣೆಯ ಹಾದಿಯತ್ತ ಕೊಂಡೊಯ್ಯುವಲ್ಲಿ ನಿತೀಶ್ ಯಶಸ್ವಿಯಾಗಿದ್ದಾರೆ. ಅವರ ಬಿಹಾರಿ ಅಸ್ಮಿತಾದ ಹಿಂದಿರುವುದು ಜಾತಿ, ಧರ್ಮವನ್ನು ಮೀರಿದ ಬಿಹಾರಿಗಳೆಲ್ಲ ಒಂದೇ ಎಂಬ ಭಾವನೆ ಮೂಡಿಸುವ ಉದ್ದೇಶ. ಬಿಹಾರ ಚುನಾವಣಾ ಪ್ರಚಾ ರಾಂದೋಲನಕ್ಕೆ ತೆರಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಆರೋಪ ಮಾಡಲು ಎಷ್ಟು ತಡಕಾಡುತ್ತಿದ್ದಾರೆಂದರೆ, ಕೇಂದ್ರದ ಸಹಾಯ ಧನವನ್ನು ವಿನಿಯೋಗ ಮಾಡಿಕೊಂಡಿಲ್ಲ ಎಂಬ ಕ್ಷುಲ್ಲಕ ಆರೋಪ ಮಾಡುವಂತಾಗಿದೆ ಅವರ ಪರಿಸ್ಥಿತಿ.

ಹೌದು, ಬಿಹಾರದಲ್ಲಿ ಬದಲಾವಣೆ ಕಾಣುತ್ತಿದೆ, ಆ ಬದಲಾವಣೆಯ ಹರಿಕಾರ ಮತ್ತಾರೂ ಅಲ್ಲ ನಿತೀಶ್ ಕುಮಾರ್.

1970ರ ಅವಧಿಯಲ್ಲಿ ನಿತೀಶ್ ಕುಮಾರ್ ಪಾಟನಾದಲ್ಲಿ ಎಂಜಿ ನಿಯರಿಂಗ್ ಓದುತ್ತಿದ್ದರು. ಆ ಸಮಯದಲ್ಲಿ ಅವರು ಸೋಶಿ ಯಲಿಸ್ಟ್ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಹಿಂದುಳಿದ ಜಾತಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲು ನೀಡುವುದರ ಸಂಬಂಧ ಅಲಿಪ್ತ ನಿಲುವು ತಾಳಿ ಈ ಸಂದರ್ಭದಲ್ಲಿ ಪ್ರಬಂಧ ಬರೆದಿದ್ದರು. ಜಾತಿ ಐಡೆಂಟಿಟಿಯಲ್ಲಿ ರಾಜಕೀಯ ಪಾತ್ರದ ಕುರಿತು ನಿತೀಶ್ ಅವರು ಹೊಂದಿದ್ದ ತಿಳಿವಳಿಕೆಯನ್ನು ಇದು ಸೂಚಿಸುತ್ತದೆ. ಲಾಲು ಪ್ರಸಾದ್ ಯಾದವ್ ಮತ್ತು ರಾಬ್ಡಿ ದೇವಿ ಆಡಳಿತದ ಅವಧಿಯಲ್ಲಿ ಅಂದರೆ ೧೯೯೦ರಿಂದ ೨೦೦೫ರ ಸಮಯದಲ್ಲಿ ಬ್ರಾಹ್ಮಣ ವಿರೋಧಿ ವಾಕ್ಚಾತುರ್ಯವು ಯಾದವರ ಪ್ರಾಬಲ್ಯಕ್ಕೆ ದಾರಿ ಮಾಡಿಕೊಟ್ಟಿತು. ಕೆಳಮಟ್ಟದ ಶೂದ್ರರನ್ನು ಈ ಅವಧಿಯಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಯಿತು. ನಿತೀಶ್ ಕುಮಾರ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದರು. ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆ ಗಳು 2006ರ ಏಪ್ರಿಲ್‌ನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಅವರು ಎರಡು ಪ್ರಮುಖವಾದ ಮತ್ತು ಐತಿಹಾಸಿಕವಾದ ಕ್ರಮಗಳನ್ನು ಕೈಗೊಂಡರು. ಒಟ್ಟು ಸ್ಥಾನಗಳಲ್ಲಿ ಅರ್ಧ ಭಾಗವನ್ನು ಮಹಿಳೆಯರಿಗೆ ಮೀಸಲಾಗಿಟ್ಟರು. ಹಾಗೇ ಹಿಂದುಳಿದ ಜಾತಿಗಳಿಗೆ ಮೀಸಲಾಗಿರುವ ಸ್ಥಾನಗಳನ್ನು ಹಿಂದುಳಿದ ಜಾತಿಗಳಲ್ಲಿರುವ ಮೇಲ್ವರ್ಗ ಹಾಗೂ ಕೆಳವರ್ಗಗಳಿಗೆ ಸಮಾನವಾಗಿ ವಿಭಾಗಿಸಿದರು. ನಿತೀಶ್ ಕುಮಾರ್ ಅವರ ಈ ಕ್ರಮದಿಂದಾಗಿ ಹಿಂದುಳಿದ ವರ್ಗ ಗಳಲ್ಲಿದ್ದ ಕೆಳಮಟ್ಟದ ಜಾತಿಗಳನ್ನು ಸಬಲಗೊಳಿಸಿದಂತಾಯಿತು. ಯಾದವರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಜಾತಿಗಳು ಮೇಲ ಕ್ಕೇಳಲು ಸಾಧ್ಯವಾಯಿತು. ಇದು ಯಾದವರಿಗೆ ನೀಡಿದ ಬಹು ದೊಡ್ಡ ಹೊಡೆತ. ಸಾಮಾಜಿಕ ಚಲನೆಯನ್ನು ಉಂಟು ಮಾಡುವ ನಿಟ್ಟಿನಲ್ಲಿ ಅದೇ ರೀತಿ ದಲಿತ ಜಾತಿಗಳನ್ನೂ ವಿಭಾಗಿಸಿದರು.

ಇನ್ನು ಒಟ್ಟು ಮತಗಳಲ್ಲಿ ಶೇ.16.5ರಷ್ಟು ಮುಸ್ಲಿಂ ಮತಗಳಿವೆ. ಭಾರತೀಯ ಜನತಾ ಪಕ್ಷದಂತಹ ಪ್ರಮುಖ ರಾಜಕೀಯ ಪಕ್ಷದ ಜತೆ ನಿತೀಶ್ ಮೈತ್ರಿ ಮಾಡಿಕೊಂಡಿದ್ದಾದಲ್ಲಿ ಮುಸ್ಲಿಂ ಮತಗಳು ಕಡಿಮೆ ಪ್ರಮಾಣದಲ್ಲಿ ಬೀಳುವ ಸಾಧ್ಯತೆಗಳಿವೆ. ಹಾಗಂತ ಬಿಜೆಪಿ ತನ್ನ ಅಜೆಂಡಾ ಪರಿಪಾಲಿಸುವುದಕ್ಕೆ ನಿತೀಶ್ ಅವಕಾಶ ನೀಡಿಲ್ಲ. ಜತೆಗೆ ಜನ ಹೇಳುವುದೇನೆಂದರೆ, ಬಿಜೆಪಿಯ ಬಿಹಾರ ಘಟಕವು ಕೇಸರೀಕರಣ ರಹಿತವಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಬಿಹಾರ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಅವರು ಆಡಳಿತಾತ್ಮಕ ಸಾಮರ್ಥ್ಯದ ವಿಷಯದಲ್ಲಿ ನಿತೀಶ್ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ವಿತರಿಸಲಾಗುತ್ತಿದೆ. ಈಗ ಇದನ್ನು ವಿದ್ಯಾರ್ಥಿಗಳಿಗೂ ವಿತರಿಸುವ ಕ್ರಮ ಕೈಗೊಳ್ಳಲಾಗಿದೆ. ಸೈಕಲ್‌ಗಳು ಮಹಿಳಾ ಸ್ವಾತಂತ್ರ್ಯದ ಸಂಕೇತವಾಗಿದೆ. ರಸ್ತೆಗಳು ನಿಜಕ್ಕೂ ಕಣ್ಣಿಗೆ ಕಾಣಿಸುವಂತಾಗಿವೆ. ಬೃಹತ್ ಪ್ರಮಾಣದಲ್ಲಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ನಿತೀಶ್ ಕುಮಾರ್ ಹೇರಳವಾಗಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ನಿತೀಶ್ ಅವರು ಕೈಗೊಂಡಿರುವ ಈ ಕಾರ್ಯವನ್ನು ಅವರ ವಿರೋಧಿಗಳು ಕೂಡ ಅಲ್ಲಗಳೆಯುತ್ತಿಲ್ಲ.

ನಿತೀಶ್ ಅವರದ್ದು ಸುದೀರ್ಘವಾದ ರಾಜಕೀಯ ಯಾನ.

1989-90ರಲ್ಲಿ ವಿ.ಪಿ. ಸಿಂಗ್ ಸರಕಾರದಲ್ಲಿ ಕೃಷಿ ಖಾತೆ ಸಹಾಯಕ ಸಚಿವರಾಗಿ, ಆ ಬಳಿಕ ರೈಲ್ವೆ ಸಚಿವರಾಗಿ, ನಂತರ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಭೂ ಸಾರಿಗೆ ಸಚಿವರಾಗಿ ನಿತೀಶ್ ಕಾರ್ಯನಿರ್ವಹಿಸಿದ್ದಾರೆ. ಈಗ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಈ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಅವರನ್ನು ಸುತ್ತುವರಿದಿಲ್ಲ. ಅವರು ಭ್ರಷ್ಟಾಚಾರ ಮುಕ್ತ ರಾಜ ಕಾರಣಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ‘ಮಿಸ್ಟರ್ ಕ್ಲೀನ್’ ಎಂದು ಕರೆಯಲಾಗುತ್ತದೆ.

ಪ್ರಸ್ತುತ ಬಿಹಾರ ಚುನಾವಣೆ ನಡೆಯುತ್ತಿದೆ, ನವೆಂಬರ್ 24 ರಂದು ಪ್ರಕಟವಾಗಲಿರುವ ಫಲಿತಾಂಶ ಏನಾಗುತ್ತದೋ ಗೊತ್ತಿಲ್ಲ, ಆದರೆ ನಿತೀಶ್ ಕುಮಾರ್ ಅವರಂತಹ ರಾಜಕಾರಣಿಗಳ ಸಂತತಿ ಬೆಳೆದರೆ ಈ ದೇಶಕ್ಕೆ ಹಿತ…

8 Responses to “ಇಂತಹ ವ್ಯಕ್ತಿಗಳ ಸಂತತಿ ಇನ್ನೂ ಹೆಚ್ಚಾಗಲಿ!”

 1. Pandiyan says:

  Hi Pratap,

  Finally Bihar peoples are won again by providing there vote to Second Vajpayee. Hope this will happen in Karnataka also.

 2. Kausthubha says:

  awesome……really inspiring for stupids like mr.yeddy!

 3. Vinayak says:

  I love the unity of people back in Bihar, will unite in karnataka this time to bring in change. Change is the only constant thing in life.

 4. Vineeth says:

  @pandiyan,
  I won’t agree with you about the term you used 2nd Vajpeyee.. Why because there is no comparison for Shri Atal Bihari Vajpeyee.. Those 6 years of his ruling India will never forget.. He has a Great placement in Every Indians heart. Don’t compare him for any person.. please.. its a request..
  @ prathap,
  Sir, awesome article,
  We need more Modi and nitish kumaars in our country for see another good ruling..

 5. keerthinath says:

  ONCE AGAIN AN AWESOME ARTICLE…
  THANK U PRATAP …

 6. chethan(coorg;somwarpet) says:

  Finally Bihar is out of La loo’s Hand.

  When we will get Mukti from Yeddi’s Govt in karnataka? Do we really find any good leader for a change….?

 7. ಪ್ರತಾಪಸಿಂಹ ಅವರೆ ನಿಮ್ಮ ಲೇಖನಗಳು ವಿಜಯಕರ್ನಾಟಕದಲ್ಲಿ ಪ್ರಕಟವಾಗ್ತಾ ಇಲ್ಲ ಏಕೆ?

 8. raju yadav says:

  its,,,nice ,sir……write once again about bihar and lalu…….