Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೇಶ ಯಾವುದಾದರೂ ಅಮ್ಮನ ಪ್ರೀತಿ ಒಂದೇ!

ದೇಶ ಯಾವುದಾದರೂ ಅಮ್ಮನ ಪ್ರೀತಿ ಒಂದೇ!


ಹನ್ನೆರಡು ವರ್ಷದ ಬಾಲಕಿ ಮಜ್ದಾ ಆರೀಫ್. ಆಕೆಯ ಸಹೋದರ ಸಮಿ ಐದು ವರ್ಷ ಚಿಕ್ಕವನು. ಇಬ್ಬರೂ ಕೆನಡಾ ಸಂಸತ್ ಭವನದ ಸಭಾಂಗಣದಲ್ಲಿ ಕಣ್ಣರಳಿಸಿಕೊಂಡು ಕಾಯುತ್ತಿದ್ದಾರೆ. ಜನಸಂದಣಿಯ ಮಧ್ಯೆ ಮೇಟುಗಾಲಿನಲ್ಲಿ ನಿಂತು ಇಣುಕಿ ಇಣುಕಿ ನೋಡುತ್ತಿದ್ದಾರೆ. ಹಾಗೆ ಕಾಯುತ್ತಾ, ಇದಿರು ನೋಡುತ್ತಾ ೪೫ ನಿಮಿಷಗಳು ಕಳೆದರೂ ಅಮ್ಮ ಮಾತ್ರ ಕಣ್ಣಿಗೆ ಕಾಣಿಸುತಿಲ್ಲ.

“ಎಲ್ಲಿ ಅಮ್ಮ”?

ಲಂಡನ್‌ನಿಂದ ಆಗಮಿಸಿದ್ದ ತನ್ನ ಅಂಕಲ್ ಸಿದ್ದಿಕ್ ಲೆಹ್ಮರ್‌ನನ್ನು ಕೇಳುತ್ತಾನೆ ಸಮಿ. “ಸಹನೆಯಿಂದಿರು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲಿಗೆ ಬರುತ್ತಾಳೆ” ಎಂದು ಆತ ಸಮಾಧಾನಪಡಿಸುತ್ತಾನೆ. ಅಷ್ಟರಲ್ಲಿ, “ನೋಡಲ್ಲಿ….” ಎನ್ನುತ್ತಾಳೆ ಮಜ್ದಾ. ನಲವತ್ತೊಂದು ಜನರ ಜತೆ ಅಮ್ಮ ನಗುನಗುತ್ತಾ ಬರುತ್ತಿದ್ದಾಳೆ. ಅವರೆಲ್ಲ ಕೆನಡಾ ಸರಕಾರದ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರು. ಅವರ ಬದುಕಿನ ಹಿಂದೆ ಒಂದೊಂದು ಪ್ರಚಂಡ ಕಥೆಗಳಿದ್ದವು. ಕೆನಡಾ ಸಚಿವರು ಒಂದೊಂದೇ ಕಥೆಗಳನ್ನು, ಅವರು ತೋರಿದ ಸಾಹಸವನ್ನು ತೆರೆದಿಡಲು ಆರಂಭಿಸಿದರು. ಚಂಡಮಾರುತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾದ ಮೀನುಗಾರರ ಹಡಗುಗಳು, ಉಕ್ಕಿ ಹರಿದ ನದಿಗಳು, ಲಂಗುಲಗಾಮಿಲ್ಲದೆ ದಾಳಿಯಿಟ್ಟ ಪ್ರಾಣಿಗಳು, ಮನೆಗೆ ನುಗ್ಗಿದ ಘಟನೆಗಳು ಹಾಗೂ ಅವುಗಳನ್ನು ಎದುರಿಸಿ ಶೌರ್ಯ ಮೆರೆದ ಕಲಿಗಳ ಕಥೆಗಳನ್ನು ಹೇಳುತ್ತಿದ್ದರೆ ನೆರೆದಿದ್ದ ಮಕ್ಕಳು ಕಣ್ಣನ್ನು ಅಗಲ ಮಾಡಿಕೊಂಡು ನೋಡುತ್ತಿವೆ. ಈ ನಡುವೆ ಮಜ್ದಾ ಮತ್ತು ಸಮಿಯ ಅಮ್ಮ ಖೈರಾ ಆಕಿಫ್ ಕಥೆ ಆರಂಭವಾಗುತ್ತದೆ. ಆಕೆ ಸಾವು-ಬದುಕಿನೊಂದಿಗೆ ನಡೆಸಿದ ಹೋರಾಟದ ಬಗ್ಗೆ ಸಚಿವರು ಹೇಳಲಾರಂಭಿಸುತ್ತಾರೆ.

“ಆ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ನಾನು ಕೆನಡಾದ ಮಾಂಟ್ರಿಯಲ್‌ಗೆ ಬಂದಾಗ ಆಕೆ ಬದುಕುಳಿಯುವ ಯಾವ ಭರವಸೆಯೂ ಇರಲಿಲ್ಲ. ಒಂದೆರಡು ದಿನವಿದ್ದು ಆಕೆಯ ಅಂತ್ಯ ಸಂಸ್ಕಾರಕ್ಕೆ ತಯಾರಿ ಮಾಡಿ ಹೋಗೋಣ ಎಂದುಕೊಂಡಿದ್ದೆ. ಈಗ ನೋಡವಳನು…. ಅಂತಹ ನರಕವನ್ನು ದಾಟಿ ಬಂದಿದ್ದಾಳೆ ಎಂದೇ ಅನಿಸುವುದಿಲ್ಲ”- ಸಿದ್ದಿಕ್ ನೆನಪುಗಳನ್ನು ಮೆಲುಕು ಹಾಕಲಾರಂಭಿಸಿದರು.

ಖೈರಾ ಆಕಿಫ್‌ಗಳ ಕಥೆಯೇ ಹಾಗಿದೆ.

ಆಕೆ ಮೂಲತಃ ಮೊರಾಕ್ಕೊದವಳು. ಮದುವೆಯಾಗಿತ್ತು, ಇಬ್ಬರು ಮಕ್ಕಳೂ ಇದ್ದರು-ಮಜ್ದಾ ಆರೀಫ್ ಹಾಗೂ ಸಮಿ. ವೈವಾಹಿಕ ಜೀವನದಲ್ಲಿ ಕ್ರಮೇಣ ಬಿರುಕುಗಳು ಕಾಣಲಾ ರಂಭಿಸಿದವು. ಕೊನೆಗೆ ವಿಚ್ಛೇದನೆ ಪಡೆದುಕೊಂಡ ಖೈರಾ, ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆನಡಾದ ಮಾಂಟ್ರಿಯಲ್‌ಗೆ ಆಗಮಿಸಿದಳು. ಬದುಕು ಸಮಸ್ಥಿತಿಗೆ ಬರತೊಡಗಿತು. ಅಷ್ಟರಲ್ಲಿ ಮತ್ತೊಂದು ವಿಘ್ನ ಎದುರಾಯಿತು. ೨೦೦೬, ಸೆಪ್ಟೆಂಬರ್ ೭. ಇಬ್ಬರು ಮಕ್ಕಳ ಜತೆ ಖೈರಾ ಮಲಗಿದ್ದಾಳೆ, ಮಧ್ಯ ರಾತ್ರಿ ಕಳೆದಿದೆ, ಯಾಕೋ ಎಚ್ಚರವಾಯಿತು. ಕಣ್ಣು ಬಿಟ್ಟರೆ ನಾನೆಲ್ಲಿದ್ದೇನೆ ಎಂಬ ಪ್ರಶ್ನೆ ಕಾಡತೊಡಗಿತು. ಏನೋ ಸುಟ್ಟ ವಾಸನೆ ಬರುತ್ತಿದೆ. ಎದ್ದು ಬಾಗಿಲು ತೆರೆದಳು, ಕೆಮ್ಮು ಒತ್ತಿಕೊಂಡು ಬರಲಾರಂಭಿಸಿತು. ಅಪಾರ್ಟ್‌ಮೆಂಟ್‌ಗೆ ಬೆಂಕಿ ಬಿದ್ದಿತ್ತು, ದೋಷಪೂರಿತ ಕರೆಂಟ್ ವೈರ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಕೆಳಗೆ ಓಡೋಣವೆಂದರೆ ಮುಂಭಾಗವೇ ಹೊತ್ತಿ ಉರಿಯುತ್ತಿದೆ.

ಹೆಲ್ಪ್… ಹೆಲ್ಪ್…

ಕಿಟಕಿಯಿಂದಾಚೆ ಇಣುಕಿ ಕೂಗತೊಡಗಿದಳು. ಆಗ ಬೆಳಗಿನ ಜಾವ 3 ಗಂಟೆ 30 ನಿಮಿಷ. ಯಾರು ತಾನೇ ಎಚ್ಚರದಿಂದಿ ರುತ್ತಾರೆ? ಇನ್ನೂ ಕಾಲಹರಣ ಮಾಡಿದರೆ ಮಕ್ಕಳು ಬೆಡ್‌ರೂಮ್‌ನಲ್ಲೇ ಸುಟ್ಟು ಕರಕಲಾಗುತ್ತಾರೆ ಎಂದು ಗೊತ್ತಾಯಿತು. ಅಷ್ಟರಲ್ಲಿ ಬೆಂಕಿ ಮನೆಯೊಳಕ್ಕೂ ಹಬ್ಬಿತ್ತು. ಉರಿವ ಜ್ವಾಲೆಯ ಮಧ್ಯದಲ್ಲೇ ಕೊಠಡಿಗೆ ಧಾವಿಸಿದ ಆಕೆ, ಸಮಿಯನ್ನು ಹೊದಿಕೆಯಲ್ಲಿ ಸುತ್ತಿ ಎರಡನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಹಾಕಿದಳು. ನಿದ್ರೆಯಲ್ಲಿದ್ದ ಸಮಿ ಕಣ್ಣು ತೆರೆಯುವಷ್ಟದಲ್ಲಿ ನೆಲದ ಮೇಲಿದ್ದ. ಕೂಡಲೇ ಮಜ್ದಾ ಮಲಗಿದ್ದ ಕೋಣೆಗೆ ಓಡಿದಳು. ಅವಳನ್ನೂ ಎತ್ತಿಕೊಂಡು ಬಂದು ಧುತ್ತನೆ ಕೆಳಗೆಸೆದಳು. ಅಷ್ಟರಲ್ಲಿ ನೆರೆಹೊರೆಯವರು ಎಚ್ಚರಗೊಂಡು ತುರ್ತು ಸಹಾಯಕ್ಕೆ ಕರೆ ಮಾಡಿದ್ದರು. ಇತ್ತ ಎರಡನೇ ಮಹಡಿಯಲ್ಲೇ ಇದ್ದ ಖೈರಾಗೂ ಕೂಡ ಕೆಳಕ್ಕೆ ಧುಮುಕದೆ ಬೇರೆ ವಿಧಿಯಿರಲಿಲ್ಲ. ಬದುಕುಳಿಯಬೇಕಾದರೆ ನೆಗೆಯುವುದೇ ಯೋಗ್ಯ ಮಾರ್ಗ ಎಂದು ಆಕೆಗೂ ಅನಿಸಿತು. ಐದು ವರ್ಷಗಳ ಹಿಂದೆ ಯಾವ ಕಾರಣಕ್ಕಾಗಿ (ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ) ಕೆನಡಾಕ್ಕೆ ಬಂದಿದ್ದೆನೋ ಅದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದನಿಸಿತು. ಆದರೆ ನೆಗೆಯೋಣವೆಂದರೆ ತನ್ನ ಕಾಲನ್ನೇ ಮುಂದಿಡಲಾಗುತ್ತಿಲ್ಲ. ಆಕೆ ಧರಿಸಿದ್ದ ನೈಲಾನ್ ಪ್ಯಾಂಟ್‌ಗೂ ಬೆಂಕಿ ಹಿಡಿದಿತ್ತು! ಹಾಗೂ ಹೀಗೂ ಮಾಡಿ ಕಿಟಕಿಯಿಂದ ಕಾಲುಗಳನ್ನು ಹೊರಹಾಕಿದ ಖೈರಾ ಕೆಳಜಾರಿದಳು. ಸಾವು ಸನ್ನಿಹಿತವಾಗಿದೆ ಎಂದನಿಸಿದಾಗ ಜೀವನ ನಿಮ್ಮ ಕಣ್ಣೆದುರೇ ಕಮರಿಹೋಗುತ್ತದೆ ಎಂಬುದು ಎಲ್ಲ ಸಂದರ್ಭದಲ್ಲೂ ನಿಜವಲ್ಲ ಎಂಬುದು ಆಕೆಯ ಘಟನೆಯಲ್ಲಿ ಸಾಬೀತಾಯಿತು. ಆ ಕ್ಷಣದಲ್ಲಿ ಆಕೆಗೆ ಆತಂಕವಿದ್ದಿದ್ದು ಒಂದೇ-ಮಕ್ಕಳ ಸೇಫ್ಟಿ. ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ, ಬೆಂಕಿ ಮೈ ಸುಡುತ್ತಿದೆ, ಬೆಂಕಿಯನ್ನು ನಂದಿಸಲು ನೆರೆಹೊರೆಯವರು ಆಕೆಯನ್ನು ಹುಲ್ಲಿನಲ್ಲಿ ಉರುಳಾಡಿಸುತ್ತಿದ್ದಾರೆ, ಅಷ್ಟರಲ್ಲಿ ಆಂಬುಲೆನ್ಸ್ ಬಂದಿದೆ, ರಕ್ಷಣಾ ಕಾರ್ಯಕರ್ತರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ, ತುಟಿ ಸೀಳಿ ಹೋಗಿದೆ, ಆದರೂ ಆಕೆ ಎಡೆಬಿಡದೆ ಕೇಳುತ್ತಿದ್ದಾಳೆ- “ನನ್ನ ಮಕ್ಕಳು ಸುರಕ್ಷಿತವಾಗಿದ್ದಾರಾ?!” ಅಣಕವೆಂದರೆ ಮಕ್ಕಳ ಬಗ್ಗೆ ಚಿಂತಿಸುತ್ತಿದ್ದ ಆಕೆ ಬದುಕುಳಿಯುವುದೇ ಒಂದು ದೊಡ್ಡ ಪ್ರಶ್ನೆಯಾಗಿತ್ತು. ಹತ್ತಿರ ಬಂದು ಮುಖಭಾಗಿಸಿದ ಡಾ. ಲೂಯಿಸ್ ಡುರಾನ್‌ಸಿಯು  “ಡೋಂಟ್ ವರಿ, ನೀನು ಸರಿಯಾದ ಕೆಲಸವನ್ನೇ ಮಾಡಿದ್ದೀಯಾ…” ಎಂದು ಆಕೆಯ ಕಿವಿಯಲ್ಲಿ ಪಿಸುಗುಟ್ಟಿದರು.

ಮುಂದಿನ 52 ದಿನಗಳ ಕಾಲ ಖೈರಾ ಆಕಿಫ್ ಕೃತಕ ಕೋಮಾಕ್ಕೆ(ಅರೆಪ್ರeವಸ್ಥೆಗೆ) ಜಾರಿದಳು!

ದೇಹ ಊದಿಕೊಂಡಿತ್ತು, ಗಂಟಲೊಳಗೆ ಪೈಪು ಹಾಕಿ ಉಸಿರಾಟ, ಔಷಧ ಸೇವನೆಗೆ ವ್ಯವಸ್ಥೆ ಮಾಡಲಾಗಿತ್ತು. ಐವತ್ತು ಭಾಗ ಸುಟ್ಟ ಗಾಯಗಳಿಂದ ಕೂಡಿತ್ತು. ಅದು ಎಷ್ಟು ತೀವ್ರವಾಗಿತ್ತು ಎಂದರೆ ವೈದ್ಯರು ಗಾಯ ಬಹುಬೇಗ ವಾಸಿಯಾಗುವುದಕ್ಕಾಗಿ ಬಯೋ-ಎಂಜಿನಿಯರಿಂಗ್ ಕಾಲೇಜಿನಿಂದ ಕೃತಕವಾಗಿ ರೂಪಿಸಿದ್ದ ಚರ್ಮವನ್ನು ತರಿಸಿ ಅಂಟಿಸಿದರು. ಆಸ್ಪತ್ರೆ ಒಂಥರಾ ನರಕವಾಯಿತು. ಹತ್ತಾರು ಭಾರಿ ಇನ್ಫೆಕ್ಷನ್‌ಗೆ (ಸೋಂಕು) ಒಳಗಾದಳು. ಕೈ-ಕಾಲುಗಳ ಮೂಳೆಗಳು ಸೆಟೆಯದಂತೆ ನರ್ಸ್ ಗಳು ಲಘು ವ್ಯಾಯಾಮ ಮಾಡಿಸಲಾರಂಭಿಸಿದರು. ಚರ್ಮ ಹಾಗೂ ಗಾಯಗಳಿಗೆ ಸೋಂಕು ತಗುಲದಂತೆ ನೋಡಿಕೊಳ್ಳಲು ಹರಸಾಹಸ ಮಾಡಬೇಕಾಯಿತು. ಆಕೆಯ ಜೀವವನ್ನು ಉಳಿಸಬೇಕು, ಮತ್ತೆ ಮೊದಲಿನ ಸ್ಥಿತಿಗೆ ತರಬೇಕು ಎಂದು ವೈದ್ಯರು ಪ್ರಯತ್ನಿಸ ತೊಡಗಿದರು.

ಖೈರಾಳ ಜೀವನದಲ್ಲಿ ಮೂರು ವ್ಯಕ್ತಿಗಳು ಬಹುಮುಖ್ಯರಾಗಿದ್ದರು. ಅಪ್ಪ ಅಬ್ದುಲ್ಲಾ ಆಕಿಫ್. ಆತನೆಂದರೆ ಆಕೆಗೆ ಅತೀವ ಪ್ರೀತಿ-ಗೌರವ. ಆತ 2003ರಲ್ಲಿ ತೀರಿಕೊಂಡಿದ್ದ. ಮತ್ತೊಬ್ಬಳು ಸ್ನೇಹಿತೆ ಲೈಲಾ ತೇಜ್. ಇನ್ನೊಬ್ಬಳು ಸಹೋದ್ಯೋಗಿ. ಆಕೆ ಖೈರಾಳಿದ್ದ ಕಚೇರಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಖೈರಾಳನ್ನು ನೋಡಲು ಆಕೆ ಆಗಾಗ್ಗೆ ಆಗಮಿಸುತ್ತಿದ್ದಳು. ಮಾನಸಿಕವಾಗಿ ಚೇತರಿಸಿಕೊಳ್ಳಲೆಂದು ಆಫೀಸ್ ಗಾಸಿಪ್‌ಗಳನ್ನು ಹೇಳುತ್ತಿದ್ದಳು. ದಿನ ಕಳೆದಂತೆ ಸ್ವಲ್ಪ ಸ್ವಲ್ಪ ಚೇತರಿಕೆ ಕಾಣತೊಡಗಿತು. ಹಕ್ಕಿಗಳ ಚಿಲಿಪಿಲಿ ಧ್ವನಿ ಕೇಳಿಸತೊಡಗಿತು, ಹಳೆಯ ನೆನಪುಗಳು ಮತ್ತೆ ಕಣ್ಣಮುಂದೆ ಬಂದು ನಿಲ್ಲಲಾರಂಭಿಸಿದವು, ಬಾಲ್ಯದಲ್ಲಿ ಅಪ್ಪ ಹೇಳುತ್ತಿದ್ದ ಕಥೆಗಳು, ಸ್ಪ್ಯಾನಿಶ್ ಕವಿತೆಗಳು ನೆನಪಾಗತೊಡಗಿದವು, ಅವುಗಳ ಅರ್ಥ ತಿಳಿಯದಾದರೂ ಭಾಷೆಯ ಮಧುರ ಲಯ ಜೋಗುಳ ದಂತೆ ಭಾಸವಾಗತೊಡಗಿತು.

ಅವಳನ್ನು ಕೃತಕ ಕೋಮಾದಿಂದ ಹೊರತರಲು ಇದು ಸಕಾಲ ಎಂದು ವೈದ್ಯರಿಗನಿಸಿತು. ಆದರೆ ವಾಸ್ತವಕ್ಕೆ ಕರೆತಂದ ಕೂಡಲೇ ಆಕೆಗೆ ಅದು ತೀವ್ರ ಬೇಸರ ತಂದಿತು. ಆಕೆ ಕೇಳಿದ ಮೊದಲ ಪ್ರಶ್ನೆ-“ಅಪ್ಪ ಎಲ್ಲಿ?”  ಕಲ್ಪನಾಲೋಕದಿಂದ ಹೊರತಂದ ಕೂಡಲೇ ನರಕಕ್ಕೆ ಆಗಮಿಸಿದ ಭಾವನೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯ ಜ್ವಾಲೆ, ಅಪಾರ್ಟ್‌ಮೆಂಟ್‌ನಿಂದ ಮಕ್ಕಳು ಕೆಳಕ್ಕೆ ಬೀಳುತ್ತಿರುವ ದೃಶ್ಯಗಳು ಗೋಚರಿಸಲಾರಂಭಿಸಿದವು. ತನ್ನ ಮಕ್ಕಳನ್ನು ಸ್ವತಃ ನೋಡಿ, ಅವರು ಆರೋಗ್ಯವಾಗಿದ್ದಾರಾ ಎಂದು ಖಾತ್ರಿಪಡಿಸಿಕೊಳ್ಳಬೇಕೆನಿಸಿತು. ಹೌದು, ಅವತ್ತು ಖೈರಾ ತೋರಿದ ಧೈರ್ಯ ಹಾಗೂ ಸಮಯಪ್ರeಯಿಂದಾಗಿ ಮಕ್ಕಳಿಬ್ಬರೂ ಸುರಕ್ಷಿತವಾಗಿದ್ದರು! ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಯಾವುದೇ ತೀವ್ರ ಅಪಾಯ ಹಾಗೂ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಮಕ್ಕಳು ಕಣ್ಣಮುಂದೆ ಬಂದರೂ ಅವರನ್ನು ಆಲಂಗಿಸುವ ಸ್ಥಿತಿಯಲ್ಲೂ ಖೈರಾ ಇರಲಿಲ್ಲ. 10 ಕಡೆ ಸ್ಕಿನ್ ಗ್ರಾಫ್ಟಿಂಗ್(ಚರ್ಮವನ್ನು ಒಂದೆಡೆ ಕಿತ್ತು ಇನ್ನೊಂದೆಡೆ ಅಂಟಿಸುವುದು- ಚರ್ಮ ಕಸಿ) ಮಾಡಲಾಗಿತ್ತು, ನಿತ್ಯವೂ ಅವುಗಳಿಗೆ ಡ್ರೆಸ್ಸಿಂಗ್ ಮಾಡಬೇಕಿತ್ತು, ಅದು ಪ್ರಾಣಾಂತಿಕ ನೋವು ಕೊಡುತ್ತಿತ್ತು.

2007, ಮೇನಲ್ಲಿ ಆಕೆಯನ್ನು ನಡೆದಾಡಿಸುವ ಕೆಲಸ ಆರಂಭವಾಯಿತು. ಅದಂತೂ ತೀವ್ರ ನೋವು ಕೊಡಲಾರಂಭಿಸಿತು. ಮಲಗಿದ್ದಲ್ಲೇ ಮಲಗಿ ಮೂಳೆಗಳು ಸೆಟೆದುಕೊಂಡಿದ್ದವು. ಆಸ್ಪತ್ರೆಯೆಂಬುದು ಗುಣಮುಖಗೊಳ್ಳುವ ಕೇಂದ್ರದ ಬದಲು ಜೈಲಿನಂತೆ ಭಾಸವಾಗತೊಡಗಿತು. ಆದರೆ ನೋವು ಅಂತ ಸುಮ್ಮನೆ ಕುಳಿತರೆ ಹೆಳವಳಾಗಿ ಶಾಶ್ವತವಾಗಿ ಹಾಸಿಗೆ ಮೇಲಿರಬೇಕಾದ ಅಪಾಯ ಮುಂದಿತ್ತು. ಯಾವ ಮಕ್ಕಳಿಗೆ ಕೈ ತುತ್ತು ಕೊಟ್ಟಿದ್ದೆನೋ, ಬಟ್ಟೆ ತೊಡಿಸುತ್ತಿದ್ದೆನೋ, ದುಃಸ್ವಪ್ನಗಳು ಬಿದ್ದಾಗ ಬಾಚಿತಬ್ಬಿಕೊಂಡು ಮಲಗುತಿದ್ದೆನೋ ಅಂತಹ ಕರುಳ ಕುಡಿಗಳಿಂದ ಇನ್ನೂ ದೂರವಿರಲು ಸಾಧ್ಯವಿಲ್ಲ ಎಂಬ ಆಲೋಚನೆ ನರಕದಿಂದ ಮುಕ್ತಿಪಡೆಯುವಂತೆ ಆಕೆಯನ್ನು ಪ್ರೇರೇಸಿದವು. ಅಷ್ಟೇ ಅಲ್ಲ, ಅತ್ಯಂತ ಶೀಘ್ರವಾಗಿ ಗುಣಮುಖಳೂ ಆದಳು. ೨೦೦೭, ಜುಲೈ ೨೫ರಂದು ಆಸ್ಪತ್ರೆಯಿಂದ ಹೊರಟ ಖೈರಾ, ನೇರವಾಗಿ ತನ್ನ ಅಪಾರ್ಟ್‌ಮೆಂಟ್ ಇದ್ದ ಸ್ಥಳಕ್ಕೆ ಆಗಮಿಸಿದಳು, ಆದರೆ ಮಜ್ದಾ ಆಗಲಿ, ಸಮಿಯಾಗಲಿ ಅಲ್ಲಿರಲಿಲ್ಲ. ತನ್ನ ಮಾಜಿ ಪತಿ ಅವರಿಬ್ಬರನ್ನೂ ಮೊರಾಕ್ಕೊಕ್ಕೆ ಕರೆದುಕೊಂಡು ಹೋಗಿದ್ದ! ಮಕ್ಕಳನ್ನು ಕಾಣಬೇಕೆಂಬ ತುಡಿತ ಇನ್ನೂ ಹೆಚ್ಚಾಯಿತು. ಸುಮಾರು ೯ ವಾರಗಳ ಕಾಲ ಏಕಾಂಗಿಯಾಗಿ ಅಪಾರ್ಟ್‌ಮೆಂಟ್  ಮೆಟ್ಟಿಲು ಏರುವುದು, ಇಳಿಯುವುದು ಮಾಡಿದ ಖೈರಾ ಸ್ವತಃ ಊಟ ಮಾಡುವುದು, ನಿತ್ಯ ಕೆಲಸ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರು. ಮಕ್ಕಳನ್ನು ಸೇರಿಕೊಳ್ಳಲು  ಇದು ಸಕಾಲ ಎನಿಸಿತು.

2007, ಸೆಪ್ಟೆಂಬರ್ 8.

ಮೊರಾಕ್ಕೋದ ಕ್ಯಾಸಾಬ್ಲಾಂಕಾದಲ್ಲಿದ್ದ ತನ್ನ ಮಾಜಿ ಪತಿಯ ಬಾಗಿಲ ಮುಂದೆ ನಿಂತಿದ್ದಳು ಖೈರಾ! ಕೈಯಲ್ಲಿ ಎರಡು ಸೂಟ್‌ಕೇಸ್‌ಗಳಿದ್ದವು, ಅವುಗಳ ತುಂಬಾ ಗಿಫ್ಟ್‌ಗಳಿದ್ದವು. ಆಕೆಯನ್ನು ನೋಡಿದ ಕೂಡಲೇ “ಮಮಾ” ಎಂದು ಚೀರಿದ ಸಮಿ, “ನನ್ನನ್ನು ಹಿಡಿ ನೋಡೋಣ…” ಎಂದು ಓಡಲಾರಂಭಿಸಿದ, ಬಾಲ್ಯದಲ್ಲಿ ತನ್ನ ಹಿಂದೆ ಓಡಿ ಬರುತ್ತಿದ್ದ ಅಮ್ಮ ಇವಳೇನಾ ಎಂದು ಖಾತ್ರಿಪಡಿಸಿಕೊಳ್ಳಲು. ಅವತ್ತು ಖೈರಾ ಖುಷಿಯಿಂದ ಓಡತೊಡಗಿದಳು, ಕಳೆದುಹೋಗಿದ್ದ ಬದುಕು ಮತ್ತೆ ಸಿಕ್ಕಿತ್ತು….

ಖ್ಯಾತ “ರೀಡರ್ಸ್ ಡೈಜೆಸ್ಟ್” ಮ್ಯಾಗಝಿನ್ 2009, ನವೆಂಬರ್ ಸಂಚಿಕೆಯಲ್ಲಿ ಇಂಥದ್ದೊಂದು ನೈಜ ಘಟನೆಯ ಬಗ್ಗೆ ಬೆಳಕು ಚೆಲ್ಲಿತ್ತು. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ‘ಮದರ್‍ಸ್ ಡೇ’ ಎಂದು ಆಚರಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ, ಖೈರಾ ಎಂಬ ಮಹಾತಾಯಿಯ ನಿಸ್ವಾರ್ಥ ಪ್ರೀತಿಯ ಬಗ್ಗೆ ನಿಮ್ಮ ಗಮನ ಸೆಳೆಯಬೇಕೆನಿಸಿತು. “ಅಮ್ಮ ಸತ್ಯ, ಅಪ್ಪ ನಂಬಿಕೆಯಷ್ಟೇ” ಅನ್ನೋ ಮಾತೇ ಇದೆ. ಈ ಅಮ್ಮ ಎಂಬವಳು ದೇಶ, ಭಾಷೆ, ಮತ-ಧರ್ಮಗಳನ್ನು ಮೀರಿದ ಒಂದು ಶಕ್ತಿ. ಮಕ್ಕಳಿಗಾಗಿ ಪ್ರಾಣವನ್ನೇ ಕೊಟ್ಟಾಳು…. ಖೈರಾ ಆಕಿಫ್ ಎಂಬ ಅಮ್ಮನ ಶೌರ್ಯದ ಹಿಂದೆ ಇರುವುದೂ ಮಕ್ಕಳ ಮೇಲಿನ ಉತ್ಕಟ ಪ್ರೀತಿ, ತ್ಯಾಗ ಹಾಗೂ ಸಂತೃಪ್ತ ಭಾವನೆಯೇ. ದೇವರು ತಾನು ಎಲ್ಲಾ ಕಡೆ ಇರುವುದಕ್ಕಾಗುವುದಿಲ್ಲ ಎಂಬ ಕಾರಣಕ್ಕೆ ಅಮ್ಮನನ್ನು ಸೃಷ್ಟಿಸಿದ್ದಾನೆ ಎಂಬ ಮಾತಿದೆ. ನಾಳೆ ಅವಳಿಗೊಂದು ಕೃತಜ್ಞತೆ ಅರ್ಪಿಸುವುದನ್ನು ಮರೆಯದಿರಿ.

Happy Mother’s Day!

9 Responses to “ದೇಶ ಯಾವುದಾದರೂ ಅಮ್ಮನ ಪ್ರೀತಿ ಒಂದೇ!”

  1. nivedita says:

    Hello! Mr. Pratapsimha,
    Why r u becoming one cut /copy/ paste writer, this is’t good for u, u have lot more capacity I believe, come out with original writings.
    By the way I hope u respect Indian rich heritage and cultural values.
    our culture says” Mathru devo bhava” , this god should be worshiped each and everyday , there is no need to follow this modern culture of remembering and wishing once a year to our mothers, right?

  2. Raghu says:

    Prathap ammandira kastagala bagge bari bekittu

  3. Arpana Hegde says:

    Yep… What you narrated is about selfless and unconditional love… Hard to find on earth. Howver we belive in it whenever we look at our mother. Being a mother is a great job. I am finding it difficult to manage my first child .. naughty and aggressive one. But I know i will learn it through my initial mistakes..

  4. Shiva kumar says:

    good one sir…

    mother, is none other than the god…………

  5. moksha says:

    Hey,
    Whats wrong with you?
    I thought translated article appears only in VK’s OP-Ed!!!
    Why disappoint your fans like this??
    ;( ;( ;(

  6. geetanjali says:

    taayige mother’s day dinane……….kritagnyate arpisabeku annodu nanageno sari annisalilla taayi preetige avala tyagakke prati dina prati kshana kritagnyate sallisidaru kadime……………..

  7. geetanjali says:

    taayi preetige aval tyagakke prati dina prati kshana krityagnate sallisidiru kadime………adakkagi mother’s day anta paticular dina bekagilla what i feel……….

  8. Arun says:

    tayi pritige koneilla mattu satiyu illa.

  9. Arun says:

    tayi preetige koneye illa mattu satiyu illa.