Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅವನು ನಿಜಕ್ಕೂ ಬೇರೆ ಗ್ರಹದಿಂದ ಬಂದವನು!

ಅವನು ನಿಜಕ್ಕೂ ಬೇರೆ ಗ್ರಹದಿಂದ ಬಂದವನು!

Trickeries ಅಂತಾರಲ್ಲ, ಬ್ರೆಝಿಲ್್ನ ರೊನಾಲ್ಡೀನೋ ಥರ ನಿಂತಲ್ಲೇ ಕಾಲನ್ನು ಅಲುಗಿಸುತ್ತಾ ಎದುರಾಳಿ ತಂಡದ ರಕ್ಷಣಾ ಆಟಗಾರರನ್ನು ಮಂಗ ಮಾಡುವುದು, ದಾರಿ, ದಿಕ್ಕು ತಪ್ಪಿಸಿ”ಡಿ’ನೊಳಕ್ಕೆ ನುಗ್ಗುವುದು, ಗೋಲು ಹೊಡೆಯುವುದು ಇವು ಆತನ ಆಟದಲ್ಲಿ ಕಾಣುವುದಿಲ್ಲ. ಒಬ್ಬ ಆಕ್ರಮಣಕಾರಿ ಫುಟ್ಬಾಲ್ ಸ್ಟ್ರೈಕರ್್ಗೆ ಅತ್ಯಗತ್ಯವಾದ Dribbling, Pass, Shootಗಳಲ್ಲಿ ಆತ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನೂ ಅಲ್ಲ. ಇಬ್ರಹ್ಮೋವಿಚ್, ಎಟೋ ಥರ ಅತ್ಯಂತ ಮಾರಕ ಗೋಲು ಹೊಡೆಯುವವನೂ ಆತನಲ್ಲ. ಬ್ರೆಜಿಲ್್ನ ದಂತಕಥೆ ಲೂಯಿಸ್ ರೊನಾಲ್ಡೋ ಥರ ಫಿನಿಶಿಂಗ್ ಕೂಡ ಇಲ್ಲ.

ಹಾಗಿದ್ದರೂ”ಲೂಯಿಸ್ ಲಯೋನೆಲ್ ಆ್ಯಂಡ್ರೆಸ್ ಮೆಸ್ಸಿ’ಯನ್ನು ಒಬ್ಬ ಮಹಾನ್ ಫುಟ್ಬಾಲ್ ತಾರೆಯನ್ನಾಗಿ ಮಾಡಿರುವುದಾದರೂ ಏನು?

ಕ್ರಿಶ್ಚಿಯಾನೋ ರೊನಾಲ್ಡೋನಂತೆ ಆತನ ಫ್ರೀ ಕಿಕ್್ಗಳಲ್ಲಿ ಅದ್ಭುತ ಫ್ಲೈಟ್ ಇಲ್ಲ, ಝಾವಿಯಂಥ ಪರಿಣಾಮಕಾರಿ ಪಾಸಿಂಗ್ ಇಲ್ಲ, ಆಂಡ್ರೆ ಇನಿಯೆಸ್ಟಾ ಥರ ಎಕ್ಸ್್ಟ್ರಾರ್ಡಿನರಿ ಡಿಬ್ಲಿಂಗ್ ಸ್ಕಿಲ್ ಕೂಡ ಇಲ್ಲ, ಡ್ರೋಗ್ಬಾ ಥರ ಎದುರಾಳಿಗಳನ್ನು, ರಕ್ಷಣಾ ಆಟಗಾರರನ್ನು, ಸವಾಲೆಸೆದವರನ್ನು ತಳ್ಳಿ ಮುನ್ನಡೆಯುವಷ್ಟು ಫಿಜಿಕಲಿ ಸ್ಟ್ರಾಂಗ್ ಸಹ ಅಲ್ಲ. ಈ ಮೇಲಿನ ಯಾವ ಅಂಶದಲ್ಲೂ ಮೆಸ್ಸಿ ನೂರಕ್ಕೆ ನೂರು ಪರ್ಸೆಂಟ್ ಇಲ್ಲ, ಕೆಲವೊಂದು 80, ಮತ್ತೆ ಕೆಲವು 90 ಇರಬಹುದು. ಆದರೆ ಹೆಚ್ಚಿರಬಹುದು, ಸ್ವಲ್ಪ ಕಡಿಮೆ ಇರಬಹುದು, ಈ ಎಲ್ಲ ಸಾಮರ್ಥ್ಯಗಳೂ, ಸ್ಕಿಲ್್ಗಳೂ ಲಯೋನೆಲ್ ಮೆಸ್ಸಿಯಲ್ಲಿ ಸೇರಿಕೊಂಡಿರುವುದೇ ಇವತ್ತು ಆತ ವಿಶ್ವದ ಅಗ್ರಮಾನ್ಯ ಫುಟ್ಬಾಲ್ ಆಟಗಾರನನ್ನಾಗಿ ಹೊರಹೊಮ್ಮಲು ಕಾರಣವಾಗಿರುವುದು! ಆತ ಎದುರಾಳಿ ಪಾಳಯಕ್ಕೆ ನುಗ್ಗುತ್ತಿದ್ದರೆ, ದೇಹ ಒಂದು ಕಡೆ ವಾಲಿದ್ದರೆ ಬಾಲು ಇನ್ನೊಂದೆಡೆಗೆ ಗುರಿಯಾಗಿರುತ್ತದೆ. ಅವನು ಬೀಟ್ (ಬಾಲನ್ನು ಕಿತ್ತುಕೊಂಡು ಮುನ್ನಡೆದರೆ) ಮಾಡಿದರೆ, ಮತ್ತೆ ಅವನನ್ನು ಕ್ಯಾಚ್ (ಹಿಡಿಯಲು) ಮಾಡಲು ಯಾರಿಗೂ ಸಾಧ್ಯವಿಲ್ಲ. ಆಕಾರದಲ್ಲೇ ಎದುರಾಳಿಗಳನ್ನು ನಡುಗಿಸುವಂಥ ಅಜಾನುಬಾಹು ಅಲ್ಲ. ಆದರೆ, He evades defenders! ಆಟಗಾರರ ಮಧ್ಯದಲ್ಲೇ ನುಸುಳಿಕೊಂಡು, ತಪ್ಪಿಸಿಕೊಂಡು ಹೋಗಿ ಬಾಲ್ ಪಾಸ್ ಮಾಡುತ್ತಾನೆ, ಇಲ್ಲವೇ ಗೋಲು ಹೊಡೆಯುತ್ತಾನೆ.

First Touch!

ಫುಟ್ಬಾಲ್ ಪರಿಭಾಷೆಯ ಈ ಫಸ್ಟ್ ಟಚ್ ಏನೆಂದು ನಿಮಗೆ ಖಂಡಿತ ತಿಳಿದಿರುತ್ತದೆ. ಗಾಳಿಯಲ್ಲಿ ಅಥವಾ ನೆಲದಲ್ಲಿ ದೂರದಿಂದ ಮಾಡಿದ ಪಾಸ್್ಗಳನ್ನು ಮೊದಲ ಸ್ಪರ್ಶದಲ್ಲೇ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರೆ, ಸೆಕೆಂಡ್ ಟಚ್್ನಲ್ಲಿ ಬಾಲನ್ನು ನಿಮಗೆ ಬೇಕಾದಂತೆ ನಡೆಸಿಕೊಳ್ಳಬಹುದು. ಲಯೋನೆಲ್ ಮೆಸ್ಸಿಯ ದೊಡ್ಡ ಸ್ಟ್ರೆಂಥ್ ಏನೆಂದರೆ ಈ ಫಸ್ಟ್ ಟಚ್. ಬಹುಶಃ ಫ್ರಾನ್ಸ್್ನ ದಂತಕಥೆ ಝೆನೆಡಿನ್ ಝಿಡಾನ್ ಬಿಟ್ಟರೆ ಹಾಲಿ ಆಟಗಾರರಲ್ಲಿ ಮೆಸ್ಸಿಯೇ ಇದರಲ್ಲಿ ಅಗ್ರಗಣ್ಯ. ರ್ಯಾಪಿಡ್ ಚೇಂಜ್ ಆಫ್ ಡೈರೆಕ್ಷನ್ ಜತೆ ಆಕ್ಸಿಲರೇಷನ್ ಹಾಗೂ ಬಾಲಿನ ಮೇಲಿನ ಹಿಡಿತ ಅವನ ಬಹುದೊಡ್ಡ ಸಾಮರ್ಥ್ಯ. ಕ್ರಿಶ್ಚಿಯಾನೋ ರೊನಾಲ್ಡೋ, ಡೆವಿಡ್ ವಿಯಾ, ಸೆರ್ಗಿಯೋ ಆಗ್ವೆರಾ, ನೇಮರ್, ರೂನಿ ಇಂಥ ಈ ಕಾಲದ ತಾರೆಗಳಿಗಿಂತ ಮೆಸ್ಸಿ ಏಕೆ ವಿಭಿನ್ನ ಅನ್ನಿಸುತ್ತಾನೆ ಎಂದರೆ ಇದೇ ಕಾರಣಕ್ಕೆ. ಒಂದೇ ವರ್ಷದಲ್ಲಿ 85 ಗೋಲು ಹೊಡೆಯುವ ಮೂಲಕ ನಲವತ್ತು ವರ್ಷಗಳ(1972) ಹಿಂದೆ ಗರ್ಡ್ ಮುಲ್ಲರ್ ಸ್ಥಾಪಿಸಿದ್ದ ಅತಿ ಹೆಚ್ಚು ಗೋಲುಗಳ ದಾಖಲೆಯನ್ನು 2012ರಲ್ಲಿ ಮೆಸ್ಸಿ ಮುರಿದಿರುವುದೂ ಇದೇ ಕಾರಣಕ್ಕೇ! ಇಂತಹ ಸಾಧನೆಯನ್ನು ಪೀಲೆಗೂ ಮಾಡಲಾಗಿರಲಿಲ್ಲ, ಮರಡೋನಾಗೂ ಸಾಧ್ಯವಾಗಿರಲಿಲ್ಲ. ಐದಡಿ ಆರಿಂಚಿನ ಮೆಸ್ಸಿ ಕಳೆದ ಭಾನುವಾರ 86ನೇ ಗೋಲು ಬಾರಿಸುವುದರೊಂದಿಗೆ ವಿಶ್ವದಾಖಲೆ ಸ್ಥಾಪಿಸಿದರೆ, ಈ ಮಧ್ಯೆ ಮತ್ತೆ ನಾಲ್ಕು ಗೋಲು ಹೊಡೆಯುವುದರೊಂದಿಗೆ ದಾಖಲೆಯನ್ನು 90ಕ್ಕೆ ಎತ್ತರಿಸಿದ್ದಾನೆ! ಇನ್ನೂ ಒಂದು ಪಂದ್ಯ ಬಾಕಿಯಿದ್ದು ಕನಿಷ್ಠ ಮತ್ತೆರಡು ಗೋಲುಗಳು ಗ್ಯಾರಂಟಿ. ಕಳೆದ ಮೂರು ವರ್ಷಗಳಿಂದಲೂ ಫೀಫಾ ವರ್ಷದ ಶ್ರೇಷ್ಠ ಕ್ರೀಡಾ ತಾರೆ ಪುರಸ್ಕಾರ ಪಡೆದಿರುವ ಮೆಸ್ಸಿಯನ್ನು ಇಂದು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ.

ಹಾಗಂತ ಲಿಯೋನೆಲ್ ಮೆಸ್ಸಿ ಎಂದ ಕೂಡಲೇ ಒಬ್ಬ ಮಾಂತ್ರಿಕ ಆಟಗಾರ ಮಾತ್ರ ಎಂದು ಭಾವಿಸಬೇಡಿ!

ಇವತ್ತು ಮೆಸ್ಸಿಗೆ 25 ವರ್ಷ. ನಿಮಗೆ ಗೊತ್ತಾ, 2007ರಲ್ಲೇ, ಅಂದರೆ ಕೇವಲ 19 ವರ್ಷದವನಿರುವಾಗಲೇ”ಲಿಯೋ ಮೆಸ್ಸಿ ಫೌಂಡೇಷನ್್’ ಸ್ಥಾಪಿಸಿ”ದುರ್ಬಲ’ ಮಕ್ಕಳ ಸಹಾಯಕ್ಕೆ ಮುಂದಾದ. ಅವರ ತರಬೇತಿ, ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಆತನ ದಾನ-ದತ್ತಿ ಸಂಸ್ಥೆ ನೆರವಾಗತೊಡಗಿತು. ಹತ್ತೊಂಬತ್ತು ವರ್ಷವೆಂದರೆ ಎಂಥವರೂ ತಮ್ಮ ಭವಿಷ್ಯದ ಬಗ್ಗೆಯಷ್ಟೇ ಚಿಂತಿತರಾಗುವ ವಯಸ್ಸು, ಆದರೆ ಮೆಸ್ಸಿ ಭಿನ್ನವಾಗಿ ಯೋಚಿಸುವುದಕ್ಕೂ ಒಂದು ಕಾರಣವಿತ್ತು!

ಅದೇನು ಗೊತ್ತಾ?

1987, ಜೂನ್ 24ರಂದು ಅರ್ಜೆಂಟೀನಾದ ರೊಸಾರಿಯೋದಲ್ಲಿ ಜನಿಸಿದ ಮೆಸ್ಸಿ ತಂದೆ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆಗೆಲಸದಾಕೆ, ತೀರಾ ಬಡ ಹಿನ್ನೆಲೆ. ಅಲ್ಲಿನ ಸ್ಥಳೀಯ Newell’s Old Boys ಫುಟ್ಬಾಲ್ ಕ್ಲಬ್ ಪರ ಎಂಟನೇ ವರ್ಷಕ್ಕೇ ಫುಟ್ಬಾಲ್ ಆಡಲು ಆರಂಭಿಸಿದ ಮೆಸ್ಸಿ ಒಂದು ವಿಚಿತ್ರ ಸಮಸ್ಯೆಯಿಂದ ಬಳಲತೊಡಗಿದ. ಅವನ ಓರಗೆಯ ಮಕ್ಕಳಿಗಿಂತ ಅಸಹಜ ಎನಿಸುವಷ್ಟು ಅವನ ದೈಹಿಕ ಬೆಳವಣಿಗೆ ಕುಬ್ಜವಾಗಿತ್ತು. ಆತನಿಗೆ 13 ವರ್ಷವಾಗಿದ್ದಾಗ ಕೇವಲ 4 ಅಡಿ 6 ಅಂಗುಲ ಎತ್ತರವಿದ್ದ. ವೈದ್ಯರು ತಪಾಸಣೆಗೆ ಒಳಪಡಿಸಿದಾಗ ಆತ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನ್್ಗಳ ಕೊರತೆಯಿಂದ ಬಳಲುತ್ತಿದ್ದ. ಹಾಗಾಗಿ ಆತನ ವಯೋವಾನದವರಿಗಿಂತ ಸುಮಾರು ಒಂದು ಅಡಿ ಕುಳ್ಳನಾಗಿದ್ದ ಅಂಶ ತಿಳಿಯಿತು. ಅದೊಂದು ತೀರಾ ವಿರಳವಾದ ಸಮಸ್ಯೆಯಾಗಿತ್ತು. ಎರಡು ಕೋಟಿ ಜನರಲ್ಲಿ ಒಬ್ಬರಿಗೆ ಬರುವಂಥ ಸಮಸ್ಯೆ ದುರದೃಷ್ಟವಶಾತ್ ಮೆಸ್ಸಿಗೂ ಅಂಟಿಕೊಂಡಿತ್ತು. ಕನಿಷ್ಠ ಮುಂದಿನ ಮೂರರಿಂದ ಐದು ವರ್ಷದವರೆಗೂ ದಿನಕ್ಕೊಂದರಂತೆ ಹಾರ್ಮೋನ್ ಹೆಚ್ಚಿಸುವ ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಅದು ತೀರಾ ದುಬಾರಿ ಔಷಧವಾಗಿತ್ತು. ಆತನ ಕ್ಲಬ್ ಪ್ರಾರಂಭದಲ್ಲಿ ವೆಚ್ಚ ಭರಿಸಲು ಒಪ್ಪಿತಾದರೂ ಸರಿಯಾಗಿ ಹಣಪಾವತಿಸದ ಕಾರಣ ಇನ್ಶೂರೆನ್ಸ್ ಪಾಲಿಸಿ ಮೂಲೆ ಸೇರಿ, ಲಿಯೋನೆಲ್ ಮೆಸ್ಸಿ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪಿತು.

ಆದರೆ ವಿಧಿಯ ಯೋಚನೆ ಬೇರೆಯೇ ಆಗಿತ್ತು!

ಈ ಹುಡುಗ ಓಮರ್ ಸಿವೋರಿ ಹಾಗೂ ಡೀಗೋ ಮರಡೋನಾ ಅವರ ಸಮ್ಮಿಶ್ರದಂಥ ಆಟವನ್ನು ಹೊಂದಿದ್ದಾನೆ ಎಂದು ವಿಶ್ಲೇಷಕರು ಹೇಳಿದರೂ ಅರ್ಜೆಂಟೀನಾದ ಮತ್ತೊಂದು ಪ್ರಸಿದ್ಧ ಕ್ಲಬ್”ರಿವರ್ ಪ್ಲೇಟ್್’ ಮೆಸ್ಸಿಯನ್ನು ದೂರ ತಳ್ಳಿತು. ಆಗ ನೆರವಿಗೆ ಬಂದಿದ್ದು ಸ್ಪ್ಯಾನಿಶ್ ಲಾ ಲಿಗಾ ತಂಡ”ಬಾರ್ಸಿಲೋನಾ’! ಬಾರ್ಸಿಲೋನಾದ ಕೋಚ್ ಮೆಸ್ಸಿಯ ಆಟವನ್ನು ಕಂಡು ಎಷ್ಟು ಆಕರ್ಷಿತರಾದರೆಂದರೆ ಟಿಶ್ಯೂ ಪೇಪರ್ ಮೇಲೆ “Admit him‘ ಎಂದು ಬರೆದು ಬಾರ್ಸಿಲೋನಾಗೆ ಕಳುಹಿಸಿದ್ದರು. ಹೀಗೆ ಬಾರ್ಸಿಲೋನಾ ಆತನ ಚಿಕಿತ್ಸೆಯ ವೆಚ್ಚ ಭರಿಸಿದ್ದು ಮಾತ್ರವಲ್ಲ, ಸ್ಪೇನ್್ಗೆ ಕರೆತಂದು ಮೆಸ್ಸಿ ಎಂಬ ಮಾಂತ್ರಿಕನನ್ನು ಸಿದ್ಧಪಡಿಸಿತು.

“Leo’ Messi

ಆತನನ್ನು”ಲಿಯೋ’ ಮೆಸ್ಸಿ ಎಂದು ಕರೆಯುತ್ತಾರೆ. ಅದಕ್ಕೂ ಒಂದು ಹಿನ್ನೆಲೆಯಿದೆ. ಲ್ಯಾಟಿನ್್ನಲ್ಲಿ ಲಿಯೋ ಎಂದರೆ ಸಿಂಹ, ಜತೆಗೆ ಲಿಯೋ ಎಂಬುದು ಒಂದು ನಕ್ಷತ್ರಪುಂಜವೂ ಹೌದು. ಆದ ಕಾರಣಕ್ಕೇ ಮೆಸ್ಸಿ ಪ್ರತಿನಿಧಿಸುವ ಬಾರ್ಸಿಲೋನಾದ ಕಟ್ಟಾ ಎದುರಾಳಿ ರಿಯಲ್ ಮ್ಯಾಡ್ರಿಡ್ ತಂಡದ ತಾರೆ ಅರ್ಜನ್ ರಾಬೆನ್, “Messi is on another planet‘ಎಂದು ಹೊಗಳಿದ್ದು! ಫುಟ್ಬಾಲ್ ಬಲ್ಲ ಎಲ್ಲರೂ ಈ ಮಾತನ್ನು ಒಪ್ಪಲೇಬೇಕು, ಒಪ್ಪುತ್ತಾರೆ, ಅಲ್ಲವೆ?

6 Responses to “ಅವನು ನಿಜಕ್ಕೂ ಬೇರೆ ಗ್ರಹದಿಂದ ಬಂದವನು!”

  1. Super article pratap sir
    realy “Messi is on another planet”
    thanks U for write about my favourate player’s life story.

  2. Yes sir.he is one of the best football player.the gift of the another planet.

  3. Samarth Nadig says:

    Pratap Simha sir…I am a football fan and Messi’s die hard fan…that was a superb article…i still have that cutting….
    Dhanyavadagalu… 🙂

  4. maantu says:

    nice

  5. nandakumar says:

    Yes…Absolutely…. U have top writing skill.. i love ur article…

  6. santu says:

    Sir, I am a greate follower of EPL and La Liga. I completely agree that Messi is a greate player there is no doubt on this. Still i feel Cristiano Ronaldo is complete player than Messi. Thank you