Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಬೆಹನ್‌ಜಿಯ ಪರ್ದಾನಿ ಕನಸು!

ಬೆಹನ್‌ಜಿಯ ಪರ್ದಾನಿ ಕನಸು!

ಠಾಕೂರ್, ಬನಿಯಾ, ಬ್ರಾಹ್ಮಣ್ ಚೋರ್
ಬಾಕಿ ಸಬ್ ಹೈ ದುಶ್ವರ್
ತಿಲಕ್, ತರಾಜು ಔರ್ ತಲ್ವಾರ್
ಇನ್‌ಕೋ ಮಾರೋ ಜೂತಾ ಚಾರ್

ಹಾಗಂತ ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಠಾಕೂರರ ವಿರುದ್ಧ ದ್ವೇಷ ಕಾರಿಕೊಳ್ಳುತ್ತಿದ್ದ ಕುಮಾರಿ ಮಾಯಾವತಿ ಅವರಿಗೆ, ಬರೀ ಮೇಲ್ಜಾತಿ ದೂಷಣೆ ಹಾಗೂ ದಲಿತರ ಮತ ಗಳಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅರಿವಾದ ಕೂಡಲೇ ಅದೆಷ್ಟು ಚೆನ್ನಾಗಿ ಬಣ್ಣ ಬದಲಾಯಿಸಿದರೆಂದರೆ –


ಹಾಥಿ ನಹೀ ಗಣೇಶ್ ಹೈ
ಬ್ರಹ್ಮ ವಿಷ್ಣು ಮಹೇಶ್ ಹೈ
ಬ್ರಾಹ್ಮಣ್ ಶಂಖ್ ಬಜಾಯೇಗಾ
ಹಾಥಿ ಬಡ್ತಾ ಜಾಯೇಗಾ

-ಎಂದು ಬಿಟ್ಟರು. ಇಂತಹ ‘ಮಾಯಾ’ವತಿ ಮತ್ತು ಬಿಜೆಪಿ ನಾಯಕ ಲಾಲ್ ಕೃಷ್ಣ ಆಡ್ವಾಣಿಯವರ ನಡುವೆ ಪ್ರಧಾನಿ ಯಾರಾಗಬೇಕೆಂದು ಆಯ್ಕೆ ಮಾಡಬೇಕಾಗಿ ಬಂದರೆ “ನಾನು ಮಾಯಾವತಿಯವರನ್ನೇ ಆಯ್ಕೆ ಮಾಡುತ್ತೇನೆ” ಎಂದು ಮುನಿಸಿಕೊಂಡಿರುವ ಬಿಜೆಪಿಯ ಮಾಜಿ ನಾಯಕಿ ಉಮಾಭಾರತಿಯವರು ಅಕ್ಟೋಬರ್ ೫ರಂದು ಹೇಳಿಕೆ ನೀಡಿದ್ದಾರೆ!! ಗಂಟೆಗೊಂದು, ಗಳಿಗೆ ಗೊಂದು ರೀತಿ ವರ್ತಿಸುವ ಈ ಇಬ್ಬರು ಮಹಿಳಾ ನಾಯಕಿಯರ ಗುಣ-ಲಕ್ಷಣಗಳನ್ನು, ನಡೆದುಕೊಂಡು ಬಂದಿರುವ ರೀತಿಯನ್ನು, ಅನುಸರಿಸುತ್ತಾ ಬಂದಿ ರುವ ನೀತಿಯನ್ನು ಗಮನಿಸುತ್ತಾ ಬಂದವರಿಗೆ ಉಮಾಭಾರತಿ ಯವರು ನೀಡಿರುವ ಹೇಳಿಕೆಯಿಂದ ಯಾವುದೇ ಆಶ್ಚರ್ಯವುಂಟಾಗುವುದಿಲ್ಲ. ಇದೇನೇ ಇರಲಿ, ಆಡ್ವಾಣಿ ಮುಂದಿನ ಪ್ರಧಾನಿಯಾಗುತ್ತಾರೋ ಇಲ್ಲವೋ ಎಂಬುದನ್ನು ದೇಶದ ಮತದಾರ ಇನ್ನು ಕೆಲವೇ ತಿಂಗಳುಗಳಲ್ಲಿ ನಿರ್ಧರಿಸಲಿದ್ದಾನೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರು ನಿಜಕ್ಕೂ ಈ ದೇಶದ ಪ್ರಧಾನಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ? ಇಂತಹ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಒಂದಿಷ್ಟು ಚಿಂತನೆ ನಡೆಸಬೇಕಾದ ಪರಿಸ್ಥಿತಿ  ಖಂಡಿತ ಎದುರಾಗಿದೆ. ಅಷ್ಟಕ್ಕೂ ಅಣು ಒಪ್ಪಂದದ ಸಲುವಾಗಿ ಕಳೆದ ಜುಲೈ ೨೨ರಂದು ನಡೆದ ವಿಶ್ವಾಸಮತ ಗೊತ್ತುವಳಿಯಲ್ಲಿ ಕಾಂಗ್ರೆಸ್ಸನ್ನು ಹೇಗಾದರೂ ಮಾಡಿ ಸೋಲಿಸಲು ಹಾಗೂ ಬಿಜೆಪಿಗೆ ಲಾಭವಾಗದಂತೆ ತಡೆಯಲು ಹವಣಿಸುತ್ತಿದ್ದ ಕಮ್ಯುನಿಸ್ಟರು ಮಾಯಾವತಿಯವರ ತಲೆಗೆ “ಪ್ರಧಾನಿ” ವೈರಸ್ ಬಿಟ್ಟ ನಂತರ ಆಕೆ ನೆಮ್ಮದಿಯಿಂದ ನಿದ್ರೆ ಮಾಡುತ್ತಿಲ್ಲ! ೨೦೦೮, ಆಗಸ್ಟ್ ೧೮ರ “ಇಂಡಿಯಾ ಟುಡೆ” ಮ್ಯಾಗಝಿನ್‌ಗೆ ಸಂದರ್ಶನವೊಂದನ್ನು ನೀಡಿರುವ ಮಾಯಾವತಿಯವರು “ನಾನು ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ. ಅದರ ಬೆನ್ನಲ್ಲೇ ನಡೆದ ಬಿಎಸ್‌ಪಿ ರ್‍ಯಾಲಿಯಲ್ಲಿ “ಈಗಾ ಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಉತ್ತರಾಧಿಕಾರಿಯನ್ನು ಗುರುತು ಮಾಡಿದ್ದೇನೆ” ಎಂದು ಘೋಷಣೆಯನ್ನೂ ಮಾಡಿದ್ದಾರೆ. ತಮ್ಮ ಮುಂದಿನ ಗುರಿ ಪ್ರಧಾನಿ ಹುದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಖಂಡಿತ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ.

ಆದರೆ ಪ್ರಧಾನಿ ಸ್ಥಾನಕ್ಕೆ ಅದರದ್ದೇ ಘನತೆ, ಗೌರವ ವಿದೆ. ಅಂತಹ ಸ್ಥಾನಕ್ಕೆ ಮಾಯಾವತಿಯವರನ್ನು ಯಾವ ಕಾರಣಕ್ಕಾಗಿ ಆಯ್ಕೆ ಮಾಡಬೇಕು? ಅಷ್ಟಕ್ಕೂ ಪ್ರಧಾನಿಯಾ ಗುವ ಅರ್ಹತೆ ಮಾಯಾವತಿಯವರಲ್ಲಿದೆಯೇ?

ಈ ದೇಶ ಕಂಡ ದೊಡ್ಡ ದಲಿತ ನಾಯಕರಲ್ಲಿ ಮೂವರು ಮುಖ್ಯವಾಗಿ ಕಾಣುತ್ತಾರೆ. ನಮ್ಮ ದೇಶದಲ್ಲಿಯೇ ಅತಿ ಹೆಚ್ಚು ಡಿಗ್ರಿಗಳನ್ನು ಹೊಂದಿದ್ದ ಡಾ. ಬಿ.ಆರ್. ಅಂಬೇಡ್ಕರ್, ಜಗಜೀವನ್‌ರಾಮ್ ಮತ್ತು ಕಾನ್ಷಿರಾಮ್. ದಲಿತರ ಶ್ರೇಯೋಭಿವೃದ್ಧಿಯಾಗಬೇಕು, ದಲಿತರನ್ನು ಒಗ್ಗೂಡಿಸಬೇಕು, ದಲಿತರಿಗೆ ವಿದ್ಯಾರ್ಜನೆ ಮಾಡಿಸಬೇಕು ಎಂಬುದನ್ನು ಮೊದಲು ಮನಗಂಡಿದ್ದೇ ಅಂಬೇಡ್ಕರ್. ದಲಿತರು ಕೇರಿ ಬಿಟ್ಟು ಸಮಾಜದ ಮುಖ್ಯವಾಹಿನಿಯನ್ನು ಸೇರಬೇಕಾದರೆ ಅವರಿಗೆ ವಿದ್ಯೆಯನ್ನು ನೀಡಬೇಕೆಂಬುದನ್ನು ಅರಿತ ಅಂಬೇಡ್ಕರ್, ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಮೀಸಲು ವ್ಯವಸ್ಥೆಯನ್ನು ಜಾರಿಗೆ ತಂದರು. ಆ ಮೂಲಕ ದಲಿತರ ಶೈಕ್ಷಣಿಕ ಹಾಗೂ ಆರ್ಥಿಕ ಮಟ್ಟವನ್ನು ಎತ್ತರಿಸಲು ಹೊರಟರೇ ಹೊರತು, ಅವರೆಂದೂ ಮೇಲ್ಜಾತಿಯವರ ವಿರುದ್ಧ ದಲಿತರನ್ನು ಎತ್ತಿಕಟ್ಟಲಿಲ್ಲ. ಅಂಬೇಡ್ಕರ್ ಅವರಲ್ಲಿ ಅಂತಹ ಪ್ರಬುದ್ಧತೆ ಇತ್ತು. ಇನ್ನು ಜಗಜೀವನ್‌ರಾಮ್ ಒಬ್ಬ ಪ್ರಮುಖ ದಲಿತ ನಾಯಕನೆನಿಸಿಕೊಂಡರೂ, ಪ್ರಧಾನಿಯಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದರೂ ರಾಜಕೀಯ ಜಾಣ್ಮೆಯ ಕೊರತೆಯಿಂದಾಗಿ ಅಧಿಕಾರ ಚಲಾಯಿಸುವ ಸ್ಥಾನಕ್ಕೇರಲಿಲ್ಲ, ದಲಿತರ ಏಳಿಗೆಗಾಗಿ ಏನನ್ನೂ ಮಾಡಲಾಗಲಿಲ್ಲ. ಆದರೆ ಅಂಬೇಡ್ಕರ್ ನಂತರ ದಲಿತರ ಸಂಘಟನೆಯ ಅಗತ್ಯವನ್ನು ಮನಗಂಡಿದ್ದು ಹಾಗೂ ಕಾರ್ಯಪ್ರವೃತ್ತರಾಗಿದ್ದು ಕಾನ್ಷಿರಾಮ್. ಶತಶತ ಮಾನಗಳಿಂದ ಮೇಲ್ಜಾತಿಯವರು ನಡೆಸಿಕೊಂಡು ಬಂದಿದ್ದ ದಬ್ಬಾಳಿಕೆಯ ಲೆಕ್ಕವನ್ನು ಒಮ್ಮೆಲೇ ಚುಕ್ತಾ ಮಾಡಿಬಿಡ ಬೇಕೆಂಬಂತೆ ದಲಿತರನ್ನು ಪ್ರಚೋದಿಸಲು, ಎತ್ತಿಕಟ್ಟಲು, ಆ ಮೂಲಕ ಒಗ್ಗೂಡಿಸಲು ಪ್ರಯತ್ನಿಸಿದ ಕಾನ್ಷಿರಾಮ್ ಅವರ ಧೋರಣೆಯನ್ನು ಒಪ್ಪುವುದು ಖಂಡಿತ ಕಷ್ಟವಾಗುತ್ತದೆ. ಆದರೆ ಕಾನ್ಷಿರಾಮ್ ಅವರಲ್ಲಿದ್ದ ಒಂದು ಒಳ್ಳೆಯ ಗುಣವೆಂದರೆ ಅವರಿಗೆ ದಲಿತರಿಗೆ ಅಧಿಕಾರ ತಂದುಕೊಡಬೇಕೆಂಬ ಉತ್ಕಟ ಇಚ್ಛೆ ಇತ್ತೇ ಹೊರತು ವೈಯಕ್ತಿಕ ಮಹತ್ವಾಕಾಂಕ್ಷೆಗಳಿರಲಿಲ್ಲ. ಹಾಗಾಗಿ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕಿಯಾಗಿದ್ದ ಮಾಯಾವತಿಯವರನ್ನು ತಮ್ಮ ಉತ್ತರಾಧಿಕಾರಿ ಹಾಗೂ ಅಧಿಕಾರದ ಹಕ್ಕುದಾರಳನ್ನಾಗಿ ಮಾಡಿದರು. ಆದರೆ ದುರದೃಷ್ಟವಶಾತ್, ಮಾಯಾವತಿಯವರಲ್ಲಿ ದಲಿತರ ಬಗ್ಗೆ ನೈಜ ಕಾಳಜಿಗಿಂತ ಅಧಿಕಾರದಾಸೆಯೇ ಹೆಚ್ಚಾಗಿತ್ತು. ಯಾವ ಬಿಜೆಪಿಯನ್ನು ಬ್ರಾಹ್ಮಣರ, ಮೇಲ್ಜಾತಿಯವರ ಪಕ್ಷ ಎಂದು ದೂರುತ್ತಿದ್ದರೋ ಅದೇ ಬಿಜೆಪಿ ಜತೆ ಕೈಜೋಡಿಸಿ ಮೂರು ಬಾರಿ ಮುಖ್ಯಮಂತ್ರಿಯಾದರು! ಆದರೆ ಬಿಜೆಪಿಯ ಸರದಿ ಬಂದಾಗ ಬೆಂಬಲ ನೀಡುವ ಬದಲು ಮಾತಿಗೆ ತಪ್ಪುವ ಮೂಲಕ ತಾವೊಬ್ಬ ವಿಶ್ವಾಸಕ್ಕೆ ಅರ್ಹರಾದ ನಾಯಕಿಯಲ್ಲ ಎಂಬುದನ್ನು ಪದೇ ಪದೆ ಸಾಬೀತು ಮಾಡಿದರು.

ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಶುದ್ಧಹಸ್ತ ಹಾಗೂ ತತ್ತ್ವಬದ್ಧತೆ ತೀರಾ ಮುಖ್ಯ. ಮಾಯಾವತಿಯವರಲ್ಲಿ ಇವ್ಯಾವುವೂ ಇಲ್ಲ, ಇವುಗಳಿಗೆ ಯಾವ ಬೆಲೆಯನ್ನೂ ಕೊಡುವುದಿಲ್ಲ. ಮಾಯಾವತಿಯವರ ಈ ಗುಣ ಎಲ್ಲರಿಗೂ ಗೊತ್ತು. ಆದರೆ ಯಾರೂ ಏಕೆ ಧ್ವನಿಯೆತ್ತುವುದಿಲ್ಲ ಎಂದರೆ ಎಲ್ಲಿ ದಲಿತರು ಮುನಿಸಿಕೊಂಡಾರೋ, ಎಲ್ಲಿ ದಲಿತರ ಮತಗಳು ಕೈತಪ್ಪಿ ಹೋದಾವೋ ಎಂಬ ಭಯ. ಆದರೆ  ಮಾಯಾವತಿಯವರ ವಿರುದ್ಧ ಧ್ವನಿಯೆತ್ತುವ ಧೈರ್ಯ ತೋರಿದ ಏಕೈಕ ವ್ಯಕ್ತಿ ರಾಮ್‌ವಿಲಾಸ್ ಪಾಸ್ವಾನ್. “ಆಕೆಯ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ, ತನಿಖೆಗಳು ನಡೆಯುತ್ತಿವೆ, ಅಂಬಾನಿಗಳಂತೆ ತೆರಿಗೆ ಪಾವತಿ ಮಾಡುವ ಆಕೆ ‘ದಲಿತ್ ಕಿ ಬೇಟಿ’ಯಲ್ಲ, ‘ದೌಲತ್ ಕಿ ಬೇಟಿ” ಎಂದು ದಲಿತ ನಾಯಕರೇ ಆಗಿರುವ ಪಾಸ್ವಾನ್ ಹೇಳಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಬಡ ಗುಮಾಸ್ತನ ಮಗಳಾಗಿ ಜನಿಸಿದ ಮಾಯಾವತಿಯವರು, ೨೦೦೪ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗದ ಮುಂದೆ ಸ್ವತಃ ಘೋಷಿಸಿಕೊಂಡ ತಮ್ಮ ಒಟ್ಟು ಮೌಲ್ಯ ೧೬ ಕೋಟಿ ರೂ.! ೨೦೦೭ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆಗೆ ಈ ಮೌಲ್ಯ ೫೨ ಕೋಟಿಗೇರಿತ್ತು!! ೨೦೦೭-೦೮ನೇ ಸಾಲಿನಲ್ಲಿ ಮಾಯಾವತಿಯವರು ಪಾವತಿ ಮಾಡಿರುವ ತೆರಿಗೆ ೨೬ ಕೋಟಿ!!! ಈ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುತ್ತಿರುವವರ ಸಾಲಿನಲ್ಲಿ ನಿಂತಿದ್ದಾರೆ. ಬರುತ್ತಿರುವ ಆದಾಯಕ್ಕೂ ಕೂಡಿ ಹಾಕಿರುವ  ಆಸ್ತಿಗೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಇನ್‌ಕಮ್ ಟ್ಯಾಕ್ಸ್ ಇಲಾಖೆಯವರು ವಿಚಾರಣೆಗೆ ಬಂದಾಗ ‘ಇದೆಲ್ಲ ಹಿತೈಷಿಗಳು ನೀಡಿದ ಉಡುಗೊರೆಯ ರೂಪದಲ್ಲಿ ಬಂದ ಸ್ವತ್ತು’ ಎಂದು ಸಮಜಾಯಿಷಿ ಕೊಟ್ಟಿದ್ದರು ಮಾಯಾ! ಬರೀ ಹಣ ಕೂಡಿಹಾಕಿರುವ ವಿಷಯವೊಂದೇ ಆಗಿದ್ದರೆ ಸುಮ್ಮನಿರಬಹುದಿತ್ತು.

ಆದರೆ ಮಾಯಾವತಿಯವರು ತಮ್ಮನ್ನು ಆಯ್ಕೆ ಮಾಡಿದ ದಲಿತರು ಹಾಗೂ ಇತರರ ಶ್ರೇಯೋಭಿವೃದ್ಧಿಗಾಗಿ ಮಾಡಿರುವುದಾದರೂ ಏನನ್ನು?

೨೦೦೭ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚನೆ ಮಾಡಿದ ಆಕೆ ಮುಖ್ಯಮಂತ್ರಿಯಾದ ನಂತರ, ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆಯನ್ನು ಸರಿಪಡಿಸಿದ್ದಾರೆಯೇ? ಯಾವುದಾದರೂ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿ ದ್ದಾರೆಯೇ? ಉತ್ತರ ಪ್ರದೇಶದಲ್ಲಿ ಬಂಡವಾಳ ತೊಡಗಿ ಸಲು ಯಾವುದಾದರೂ ಕಂಪನಿಗಳು ಮುಂದೆ ಬಂದಿದ್ದಾ ವೆಯೇ? ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತಡೆಹಾಕಿದ್ದಾರೆಯೇ? ಇಷ್ಟಾಗಿಯೂ ಮಹಿಳೆ ಅಥವಾ ದಲಿತ ಮಹಿಳೆಯೊಬ್ಬರು ದೇಶದ ಪ್ರಧಾನಿ ಯಾಗಬೇಕು ಎನ್ನುತ್ತಾ ಮಾಯಾವತಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದ್ದಾರಲ್ಲಾ, ಅದು ಎಷ್ಟರಮಟ್ಟಿಗೆ ಸರಿ? ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದರು. ಅಂದಮಾತ್ರಕ್ಕೆ ಭಾರತದ ಮಹಿಳೆಯರ ಬವಣೆ ತಪ್ಪಿತೇ? ಬೇನಜೀರ್ ಪಾಕಿಸ್ತಾನವನ್ನು ಆಳಿದರು. ಅಲ್ಲಿನ ಮಹಿಳೆ ಯರು ಉದ್ಧಾರವಾದರೆ? ಬಾಂಗ್ಲಾದೇಶವನ್ನು ಸರದಿಯ ಆಧಾರದ ಮೇಲೆ ಆಳಿದ ಬೇಗಂ ಖಲೀದಾ ಜಿಯಾ, ಶೇಖ್ ಹಸೀನಾ ಹಾಗೂ ಶ್ರೀಲಂಕಾವನ್ನು ಆಳಿದ ಸಿರಿಮಾವೋ ಭಂಡಾರನಾಯಿಕೆ ಹಾಗೂ ಚಂದ್ರಿಕಾ ಕುಮಾರತುಂಗ ಅವರವರ ದೇಶವನ್ನು ಉದ್ಧಾರ ಮಾಡಿದರೆ? ಅದಿರಲಿ, ಕೆ.ಆರ್. ನಾರಾಯಣನ್ ರಾಷ್ಟ್ರಪತಿಯಾದ ಮಾತ್ರಕ್ಕೆ ಭಾರತದ ದಲಿತರೆಲ್ಲ ಉದ್ಧಾರವಾದರೆ? ಅಷ್ಟಕ್ಕೂ ದಲಿತರೊಬ್ಬರು ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಯಾದರೆ ಆ ಜನಾಂಗದ ಉದ್ಧಾರವಾಗುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ, ಯಾವ ಮೇಲ್ಪಂಕ್ತಿಗಳೂ ಕಾಣುತ್ತಿಲ್ಲ. ಮಿಗಿಲಾಗಿ, ಯಾವ ಠಾಕೂರರನ್ನು ಕಳ್ಳರು, ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಮಾಯಾವತಿ ಕರೆ ನೀಡುತ್ತಿದ್ದರೋ ಅಂತಹ ಠಾಕೂರ್ ಜನಾಂಗಕ್ಕೆ ಸೇರಿದ್ದ ವಿ.ಪಿ. ಸಿಂಗ್ ಹಾಗೂ ಅರ್ಜುನ್ ಸಿಂಗ್ ಅವರಿಂದ  ದಲಿತರಿಗೆ ಕಾನ್ಷಿರಾಮ್ ಹಾಗೂ ಮಾಯಾವತಿಯವರಿಗಿಂತಲೂ ಹೆಚ್ಚು ಲಾಭ ವಾಗಿದೆ. ಇಂದು ದಲಿತರು ಅನುಭವಿಸುತ್ತಿರುವ ಹಿಂದೆಂದೂ ಕಂಡು-ಕೇಳರಿಯದ ಪ್ರಮಾಣದ ಮೀಸಲು ಸೌಲಭ್ಯವನ್ನು ಕಲ್ಪಿಸಿದ್ದೇ ವಿ.ಪಿ. ಸಿಂಗ್-ಅರ್ಜುನ್ ಸಿಂಗ್. ಆದರೆ ಮಾಯಾವತಿಯವರು ತಮಗೆ ವೋಟು ಕೊಟ್ಟ ದಲಿತರಿಗೆ ಮಾಡಿದ್ದೇನು? ಮಾಯಾವತಿ ಅವರ ಮಾದರಿಯ ಅಭಿವೃದ್ಧಿಯೆಂದರೆ ಅಂಬೇಡ್ಕರ್ ಹೆಸರು ಹೇಳಿಕೊಂಡು ಮತ ಕೇಳುವುದು ಹಾಗೂ ತಮ್ಮ ಮತ್ತು ಕಾನ್ಷಿರಾಮ್ ಅವರ ಪ್ರತಿಮೆಗಳನ್ನು ಬೀದಿಗೊಂದು ಪ್ರತಿಷ್ಠಾಪಿಸುವುದು. ಅಷ್ಟಕ್ಕೂ ಬದುಕಿರುವಾಗಲೇ, ತನ್ನ ಪುತ್ಥಳಿಯನ್ನು ತಾನೇ ಅನಾವರಣ ಮಾಡಿದ ಉದಾಹರಣೆ ಜಗತ್ತಿನ ಎಲ್ಲಾದರೂ ಇದ್ದರೆ ಅದು ಉತ್ತರ ಪ್ರದೇಶದಲ್ಲಿ ಮಾತ್ರ! ಅಂತಹ ಮಹಾನ್ ಕೆಲಸ ಮಾಡಿರುವ ಜಗತ್ತಿನ ಏಕೈಕ ನಾಯಕಿ ಮಾಯಾವತಿಯವರು ಮಾತ್ರ!!

ಆದರೂ ಇಂತಹ ಮಾಯಾವತಿಯವರು “ನಾನು ಸೋನಿಯಾ ಗಾಂಧಿಯವರಿಗಿಂತಲೂ ದೊಡ್ಡ ನಾಯಕಿ” ಎಂದು ಸ್ವತಃ ಘೋಷಣೆ ಮಾಡಿಕೊಂಡಿದ್ದಾರೆ.

ಅಂದರೆ ಉತ್ತರ ಪ್ರದೇಶ ೧೫ ಪರ್ಸೆಂಟ್ ದಲಿತ ವೋಟುಗಳ ಅನಭಿಷಿಕ್ತ ಹಕ್ಕುದಾರಳೆಂಬ ಏಕೈಕ ಕಾರಣಕ್ಕೆ ಆಕೆ ದೇಶದ ಅತಿದೊಡ್ಡ ನಾಯಕಿಯಾಗಿ ಬಿಡುತ್ತಾರೆಯೇ? ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಬಿಜೆಪಿ, ಕಾಂಗ್ರೆಸ್‌ಗಳ ನಡುವೆ ಚತುಷ್ಕೋನ ಸ್ಪರ್ಧೆ ನಡೆಯುತ್ತದೆ. ಜತೆಗೆ ಅಜಿತ್‌ಸಿಂಗ್ ಅವರ ರಾಷ್ಟ್ರೀಯ ಲೋಕದಳವೂ ಕೆಲವು ಭಾಗಗಳಲ್ಲಿ ಬಲಿಷ್ಠವಾಗಿದೆ. ಹಾಗಾಗಿ ಯಾರಿಗೆ ೨೫ ಪರ್ಸೆಂಟ್ ವೋಟು ದಕ್ಕುತ್ತದೆಯೋ ಅವರೇ ಅಧಿಕಾರಕ್ಕೇರುತ್ತಾರೆ. ಇಂತಹ ಪರ್ಸೆಂಟೇಜ್ ಲೆಕ್ಕಾಚಾರದಲ್ಲಿ ಸತೀಶ್ ಚಂದ್ರ ಶರ್ಮಾ ಎಂಬ ಬ್ರಾಹ್ಮಣನ ಸಹಾಯ ಪಡೆದುಕೊಂಡ ಮಾಯಾವತಿಯವರು ಮೇಲುಗೈ ಸಾಧಿಸಿರಬಹುದು. ಆದರೆ ಇಡೀ ಉತ್ತರ ಪ್ರದೇಶ ಒಪ್ಪುವಂತಹ ನಾಯಕಿಯಾಗಿಯೇ ಅವರು ಹೊರಹೊಮ್ಮಿಲ್ಲ. ಇನ್ನು ಉತ್ತರ ಪ್ರದೇಶದಾಚೆಗೆ ದಲಿತರೇ ಮಾಯಾವತಿಯವರಿಗೆ ಕಿಮ್ಮತ್ತು ನೀಡಿಲ್ಲ. ಪಂಜಾಬ್‌ನಲ್ಲಿ ಗಣನೀಯ ಸಂಖ್ಯೆಯ ದಲಿತರಿದ್ದರೂ ಆಕೆಗೆ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ, ಹಿಂದುಳಿದ ಜಾತಿ/ವರ್ಗದವರೇ ಹೆಚ್ಚಿರುವ ಬಿಹಾರ, ಮಹಾರಾಷ್ಟ್ರದಲ್ಲೂ ಅದೇ ಕಥೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕಾಲೆಳೆಯಬಹುದೇ ಹೊರತು ಖಾತೆ ತೆರೆಯಲು ಬಿಎಸ್ಪಿಗೆ ಸಾಧ್ಯವಿಲ್ಲ. ಹಾಗಿದ್ದರೂ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ!
ಇಷ್ಟಾಗಿಯೂ, ೫೪೫ ಸದಸ್ಯರ ಲೋಕಸಭೆಯಲ್ಲಿ ೧೬ ಸಂಸದರನ್ನು ಹೊಂದಿದ್ದ ದೇವೇಗೌಡರೇ ಪ್ರಧಾನಿ ಯಾಗಬಹುದಾದರೆ ೧೭ ಸಂಸದರನ್ನು ಹೊಂದಿರುವ ಮಾಯಾವತಿಯವರೇಕೆ ಪ್ರಧಾನಿಯಾಗಬಾರದು? ಎಂದು ಖಂಡಿತ ಕೇಳಬಹುದು. ಒಂದು ವೇಳೆ ಆಕೆಯೇನಾದರೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿ, ಹದಗೆಟ್ಟಿರುವ ಅಲ್ಲಿನ ಕಾನೂನು ವ್ಯವಸ್ಥೆಯನ್ನು ಸರಿಪಡಿಸಿ, ಮಾದರಿ ರಾಜ್ಯವನ್ನಾಗಿ ಮಾಡದಿದ್ದರೂ ಪರ ವಾಗಿಲ್ಲ, ನಾಗರಿಕ ರಾಜ್ಯವನ್ನಾಗಿ ಪರಿವರ್ತಿಸಿ, ರಾಜ್ಯವನ್ನು ಕನಿಷ್ಠ ಪ್ರಗತಿಯ ಹಾದಿಯತ್ತಲಾದರೂ ಕೊಂಡೊಯ್ದು, ಆನಂತರ ಪ್ರಧಾನಿಯಾಗುವ ಕನಸು, ಬಯಕೆಯನ್ನು ವ್ಯಕ್ತಪಡಿಸಿದ್ದರೆ ಯಾರೂ ಬೇಡವೆನ್ನುತ್ತಿರಲಿಲ್ಲ. ಆದರೆ ನಮ್ಮ ದೇಶದ ಅತಿದೊಡ್ಡ ರಾಜ್ಯವನ್ನೇ ಆಳಲಾಗದ ಮಾಯಾವತಿ, ದೇಶವನ್ನು ಹೇಗೆತಾನೆ ಆಳಿಯಾರು? ಮಾಯಾವತಿಯವರಂತಹ ಭ್ರಷ್ಟಾಚಾರ ಆರೋಪವನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಾಯಕಿಯ ರೂಪದಲ್ಲಿ ದಲಿತರ ಸಶಕ್ತೀಕರಣವನ್ನು ನೋಡುವುದು ಎಷ್ಟು ಸರಿ? ಮಿಗಿಲಾಗಿ ನಮಗೆ ಬೇಕಾಗಿರುವುದು ಯಾವುದೋ ಕೇವಲ ಒಂದು ಜಾತಿ, ವರ್ಗದ ಉದ್ಧಾರವಲ್ಲ, ದೇಶದ ಒಟ್ಟಾರೆ ಎಂಪವರ್‌ಮೆಂಟ್. ನಮಗೆ ಅಗತ್ಯವಿರುವುದು ಪುತ್ಥಳಿ ನಿರ್ಮಿಸುವ ಮಾಯಾವತಿಯವರಾಗಲಿ ಅಥವಾ ಮಾಯಾವತಿಯವರ ಪುತ್ಥಳಿಗಳಾಗಲಿ ಅಲ್ಲ, ಫ್ಲೈಓವರ್‌ಗಳು, ಒಳ್ಳೆಯ ರಸ್ತೆಗಳು. ನಮಗೆ ತ್ವರಿತವಾಗಿರುವುದು ಮಾಯಾವತಿಯವರ ಕಿವಿಯಲ್ಲಿ ಫಳ ಫಳ ಹೊಳೆಯುತ್ತಿರುವ ಡೈಮಂಡ್ ಓಲೆಗಳಲ್ಲ, ಬೆಳಕು ನೀಡುವ ವಿದ್ಯುತ್ ಸ್ಥಾವರಗಳು. ನಮ್ಮ ಗುರಿ ಮಾಯಾವತಿಯವರನ್ನು ಪ್ರಧಾನಿ ಮಾಡಿ, ನಮ್ಮದೆಂಥ ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಜಗತ್ತಿಗೆ ತೋರಿಸುವುದಲ್ಲ, ಆರ್ಥಿಕ ಸುಧಾರಣೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ. ನಾವು ಬಯಸಬೇಕಾಗಿರುವುದು ನಮ್ಮನ್ನೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅರ್ಹತೆ ಹೊಂದಿರುವ ಹಾಗೂ ವಿದೇಶಾಂಗ ನೀತಿಯನ್ನು ದೇಶದ ಪ್ರಗತಿಗೆ ಪೂರಕ ವಾಗುವಂತೆ ಮಾಡುವ ಸಾಮರ್ಥ್ಯ ಹೊಂದಿರುವ ನಾಯಕ ನನ್ನು. ನಮಗೆ ಬೇಕಿರುವುದು ಭಾರತಕ್ಕೊಬ್ಬ ಬಲಿಷ್ಠ ಪ್ರಧಾನಿಯೇ ಹೊರತು, ದಲಿತ, ಬ್ರಾಹ್ಮಣ, ಬನಿಯಾ, ಠಾಕೂರ್, ಮರಾಠ ಪ್ರಧಾನಿಯಲ್ಲ.

ಸೂಪರ್‌ಪವರ್ ಆಗುವತ್ತ ದಾಪುಗಾಲಿಡುತ್ತಿರುವ ಭಾರತದಂತಹ ರಾಷ್ಟ್ರದ ಪ್ರಧಾನಿಯನ್ನು ಆಯ್ಕೆ ಮಾಡುವು ದಕ್ಕೆ ಕೇವಲ ಜಾತಿಯೊಂದನ್ನೇ ಅರ್ಹತೆಯನ್ನಾಗಿಸಿಕೊಳ್ಳುವು ದು ಎಷ್ಟು ಸರಿ? ಅದಕ್ಕೊಂದಿಷ್ಟು ಅರ್ಹತೆಗಳು ಬೇಡವೆ?

ಅಮೆರಿಕದ ಡೆಮೋಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಯಾಗಿರುವ ಬರಾಕ್ ಒಬಾಮ, ತಾನೊಬ್ಬ “ಕಾಲೇ ಕಾ ಬೇಟಾ”, ಆ ಕಾರಣಕ್ಕಾಗಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆಯೇ? “ಅರ್ಹತೆಗೆ ಮಣೆ ಹಾಕಿ, ನಿಮ್ಮ ಕನಸನ್ನು ಸಾಕಾರಗೊಳಿಸುತ್ತೇನೆ” ಎಂದು ಜನರನ್ನು ಕೇಳಿಕೊಳ್ಳುತ್ತಿದ್ದಾರೆ, ಮನವೊಲಿಸುತ್ತಿದ್ದಾರೆ. ಹಾಗಾಗಿ ಸಮೀಕ್ಷೆಗಳಲ್ಲಿ ಒಬಾಮ ಅವರು ಮೆಕೇನ್‌ಗಿಂತ ೫ ಪರ್ಸೆಂಟ್ ವೋಟುಗಳಲ್ಲಿ ಮುಂದಿದ್ದಾರೆ. ಹಾಗೆ ಒಬಾಮ ಅವರಂತೆ ಅರ್ಹತೆಗೆ ಮನ್ನಣೆ ನೀಡಿ ಎಂದು ಕೇಳಿಕೊಳ್ಳುವ ಆತ್ಮವಿಶ್ವಾಸಭರಿತ ನಾಯಕ ನಮಗೆ ಬೇಕೇ ಹೊರತು ಜಾತಿವಾದಿಗಳಲ್ಲ.  ‘ಮುಝೆ ಪರ್ದಾನ್ ಮಂತ್ರಿ ಬನ್‌ನೇ ಸೇ ಕೋಯಿ ನಹಿ ರೋಕ್ ಸಕ್ತಾ’ ಅಂತ ಹೇಳುವ ಮಾಯಾವತಿಯವರು ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು.

ಇನ್ನು ಬಿಜೆಪಿ ಜತೆ ಮುನಿಸಿಕೊಂಡು ಬಾಲ ಸುಟ್ಟ ಬೆಕ್ಕಿನಂತಾಗಿರುವ ಉಮಾಭಾರತಿಯವರ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಬಿಡಿ.

16 Responses to “ಬೆಹನ್‌ಜಿಯ ಪರ್ದಾನಿ ಕನಸು!”

 1. gururaj says:

  good one ಪ್ರತಾಪ್. ಮೊನ್ನೆ ಅಣು ಒಪ್ಪ೦ದದ ಘಟನೆಯ ವೇಳೆಗೆ ಕಾ೦ಗ್ರೆಸ್ಸ್ ಸರಕಾರ ಸಫಲವಾದಾಗ “ಮಾಯಾ”ವತಿಯವರ ಬಾಯಿ೦ದ ಬ೦ದ ಮೊದಲಮಾತುಗಳು :”ದಲಿತ ಮಹಿಳೆಯೊಬ್ಬಳು ಪ್ರಧಾನಿಯಾಗಬಾರದೆ೦ದು ದಲಿತ ವಿರೋಧಿಗಳೆಲ್ಲರೂ ಒಟ್ಟಾದರು..!”. ಈ ಮಾತುಗಳನ್ನು ಕೇಳಿದವರ್ಯಾರೇ ಆಗಲಿ ಮಾಯಾವತಿಯ ಅಧಿಕಾರ ದಾಹ ಗುರುತಿಸಬಹುದು

 2. Kiran says:

  Maya went on a ramp to explain how the nuclear deal is anti-Muslim. The problem with the second generation political parties is- they assume to be spokespersons for entire communities.

  Left, Laloo and others grab the representative-ness of poor and muslims, while Mayawati has assumed the role of saviour of the Dalits, even though many Dalits may be cringing at her tactics and a lot of it is about uplift of her own family than of Dalits in general.

  No wonder she has a band of crony-capital-connections to ‘enable’ certain business persons by certain economic policy making.

  It is all a matter of reaping political dividends to play a Dalit card, the Muslim card or the economic reforms card.

  Your last line should be read by Umabharathi. If she realizes we expect a welcomeback.

 3. ವೆಂಕಟೇಶ್ says:

  ಒಳ್ಳೆಯ ಲೇಖನ ಕೊಟ್ಟಿದ್ದಕ್ಕಾಗಿ ಪ್ರತಾಪ್ ಸಿಂಹರವರಿಗೆ ವಂದನೆಗಳು. ಮಾಯಾವತಿಯ ಬಗ್ಗೆ ಹಲವು ಹೊಸ ವಿಷಯಗಳು ಗೊತ್ತಾದವು. ಬಡ ಮೇಷ್ಟರ ಮಗಳಾದವಳಿಗೆ ಅಷ್ಟು ಹಣ ಎಲ್ಲಿಂದ ಬಂತು? ಯಾಕೆ ವಿಚಾರಣೆ ಮಾಡುವುದಿಲ್ಲ? ನಿಯತ್ತಾಗಿ ಟ್ಯಾಕ್ಸ್ ಕಟ್ಟುವ ನೌಕರಿ ಮಾಡುವವರಿಗೆ ಒಂದಿಲ್ಲೊಂದು ಕಾರಣದಿಂದ ತೊಂದರೆ ಕೊಡುವ ಇನ್ಕಮ್ ಟ್ಯಾಕ್ಸ್ ಮಹಾಶಯರು ಇಂಥವರ ವಿಷಯದಲ್ಲಿ ಯಾಕೆ ಪಕ್ಷಪಾತ ತೋರುತ್ತಿದ್ದಾರೆ?
  ನಮ್ಮ ದೇಶದಲ್ಲಿ ದಲಿತರು, ಅಲ್ಪ ಸಂಖ್ಯಾತರು ಏನು ಮಾಡಿದರೂ ಸರಿಯೆ?
  ಮುಂದೊಂದು ದಿನ ಇವರನ್ನು ಯಾವುದೆಕಾರಣಕ್ಕೂ ದಂಡಿಸುವ ಹಾಗಿಲ್ಲ ಅಂತ ಕಾನೂನು ತಂದರೂ ಹೆಚ್ಚಲ್ಲ. ಕಾರಣ ದಲಿತರು, ಅಲ್ಪಸಂಖ್ಯಾತರ ಒಟ್ಟು ಓಟು ಸೇರಿದರೆ ಸುಮಾರು ೩೦% ಆಗುತ್ತದೆ.
  ‘ಸಾಲಿಡ್ ಒಟ್ ಬ್ಯಾಂಕ್’ ಅಲ್ಲವೆ?

 4. Hi Pratap,

  Once again a very good article. Too Good.
  Eshte aadru ee deshada kate eshtene. Ella Vote Bank… Ashte.

  -Raghavendra Shet

 5. Murthy D R says:

  Unfortunately, Anything is possible in my poor India… [:(]

 6. Ashwini Bhat says:

  Good writing… When we the people of INDIA will think beyond this castism… Is this impossible…? Is there anyway to come out of this dirty vote bank politics..? Why even educated ppl also think d same way..?

 7. ಸದಾನಂದ ಹೆಗಡೆ says:

  ‘ಪ್ರಧಾನ ಮಂತ್ರಿ’ ಅಂತ ಸ್ಪಷ್ಟವಾಗಿ ಹೇಳಲಿಕ್ಕೆ ಬಾರದವಳು ಕೂಡ ಪ್ರಧಾನಿ ಆಗಬಹುದು. It happens only in India!
  ನಮ್ಮ ದೇವೇಗೌಡರೇ ಪ್ರಧಾನ ಮಂತ್ರಿ ಆದಮೇಲೆ ಮಾಯಾವತಿ ಅಂಥವಳು ಕೂಡ ‘ಪರ್ದಾನಿ’ ಆಗಬಹುದು ಬಿಡಿ.
  ವಿದೇಶದಲ್ಲಿ ‘ನಮ್ಮ ಭಾರತ’ ಅಂತ ಜಂಭದಿಂದ ಹೇಳಿಕೊಳ್ಳುತ್ತೇವೆ. ಆದರೆ ಭಾರತದಲ್ಲಿ ನೋಡಿದರೆ ಎಲ್ಲ ಗಬ್ಬೆದ್ದು ಹೋಗುತ್ತಿದೆ. ಹಾಡುಹಗಲೇ ದರೋಡೆ, ಅತ್ಯಾಚಾರ, ಮತಾಂತರ, ಕೊಲೆ, ದೊಂಬಿ, ಬಹುಸಂಖ್ಯಾತ ಹಿಂದೂಗಳನ್ನೇ ಮೆಟ್ಟಿ ಬೇರೆಯವರು ಆಳುತ್ತಿರುವುದು, ಹಿಂದಿನಿಂದ ಚೂರಿ ಹಾಕುವ ಹಿಂದೂಗಳು, ಕೆಟ್ಟ ರಾಜಕಾರಣಿಗಳು, ದೇಶದ ತುಂಬ ತುಂಬುತ್ತಿರುವ ಆರಾಜಕತೆ……….

  ಇವೆಲ್ಲವುಗಳ ಮಧ್ಯೆ ‘ನಮಗೇನೂ ಆಗೇ ಇಲ್ಲ’ ಎನ್ನೋ ಹಾಗೆ ಬಾಳುತ್ತಿರುವ ಹಿಂದೂಗಳನ್ನು ನೋಡಿದಾಗ,
  ನಗಬೇಕೋ, ಅಳಬೇಕೋ, ಸಿಟ್ಟು ಮಾಡಿಕೊಳ್ಳಬೇಕೋ, ಬೇಜಾರು ಮಾಡಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ.
  ಇಡೀ ಪ್ರಪಂಚ ನಮ್ಮ ಮೂರ್ಖತನವನ್ನು ನೋಡುತ್ತಿದೆ ಅನ್ನುವುದು ಮಾತ್ರ ನೆನಪಿರಲಿ.

 8. shripathi bhat says:

  Dear Pratap sir,
  Once again thank you for giving one more good article . yes all these only happens in India. This is very unfortunate to say that our politicians are still asking the votes by taking advantages of cast system. This is very shameful. UPA govenment simply wasting the time by talking about minority, dalits, secularism, 123 agreement. They looking still unaware about Terrorist attacks in Delhi, gujarath, terrorist arrest in Karnataka. My kind request to our politicians is that please behave in standard manner . Don’t divide the nation based on casts. This is matter of whole nation. It is good to keep in mind that you are representing your nation…..

 9. gururaj m s says:

  dear pratap
  thanks alot for giving one more good article.

 10. ಚಿನ್ಮಯ says:

  ಮಾಯಾವತಿಯಂತಹ ಸುಳ್ಳು ಜಾತಿವಾದಿಗಳು ನಮ್ಮ ದೇಶಕ್ಕೆ ಎಲ್ಲರಿಗಿಂತ ದೊಡ್ಡ ಅಪಾಯವನ್ನು ತಂದೊದ್ದುವವರು ..ಅಂಥವರನ್ನು ರಾಜಕೀಯದಿಂದ ದೂರ ಇಡಬೇಕು ..ಉತ್ತಮ ಬರಹಕ್ಕೆ ಧನ್ಯವಾದಗಳು ..ಪ್ರತಾಪ್

 11. ವೆಂಕಟ್ says:

  ನಿಮ್ಮ ಬರಹ ಅತಿಸುಂದರ, ಅದರ ಬಗ್ಗೆ ನಾನು ಮತ್ತೆ ಹೇಳುವ ಅಗತ್ಯವಿಲ್ಲ.

  ಆದರೆ…….., ಪ್ಲೀಸ್…….. ಪ್ರತಾಪಸಿಂಹ, ವಿಜಯ ಕರ್ನಾಟಕ ಸೈಟ್ ತೆರೆದುಕೊಳ್ತಾಯಿಲ್ಲ. ಏನಾದರೂ ಮಾಡಿ ಸರಿ ಮಾಡಬಾರದೇ? ಉಪಸಂಪಾದಕರಾದ ತಮಗೂ ನಮ್ಮ ಬಗ್ಗೆ ಕಳಕಳಿ ಇಲ್ಲವೇ?
  ಇದರ ಹಿಂದಿನ ಉದ್ದೇಶ ಏನು? ಪತ್ರಿಕೆಯ ಹಂಚಿಕೆ ಜಾಸ್ತಿಮಾಡಲೆಂದೇ? ನಾವು ವಿದೇಶದಲ್ಲಿ ಇದ್ದವರು ಹೇಗೆ ಓದಲು ಸಾಧ್ಯ? ಕರ್ನಾಟಕದ ಸುಪ್ರಸಿದ್ದ ಪತ್ರಿಕೆಯೇ ಹೀಗಾದರೆ ವಿದೇಶೀ ಕನ್ನಡ ಅಭಿಮಾನಿಗಳ ಕಥೆ ಏನು?

 12. pratap simha says:

  Dear Venkat, there is some prob with network n it’s a recurring problem! I have already complained abt it with concerned people. But if it falls dumb ears wht can I do?

  They have brought new server, hope they will set right the prob soon.

 13. avinash baburao says:

  to PRATAP SIMHA SIR………………why adiga is bad???????????/R U perfect …is u r pejavara swami is perfect????????adiga has correctly pointed out wrong things in india…..ie poverty,social inequality,brutal caste system,discrimination…when pejavara swamy tells tat MANUSMRITI is PERFECT!!!!!!!!!!!U ppl never make any arguements!!!!!!!!!!!!what t hell is tis???????????
  Kindly reply sir
  is MANUSMRITI IS RIGHT?????????IT IS T BOOK TO BE JUSTIFIED?????????WHICH DIDVIDED T PPL FOR 3000 YEARS>>>WHY THESE THINGS NEVER COME TO U R MIND???????????WHY R U BLAMING GREAT GREAT ARVIND ADIGA WHO HAS DONATED HIS PRIZE MONEY TO HIS SCHOLL TO HELP POOR CHILDREN>>>>>>>>>>>HE IS REALLY GREAT>>>>>>>>>>>..AND ALSO IN MANTRALAYA THERE IS SEPARATE FOOD GIVING FOR BRAHNINS AND NON BRAHMINS??????!!!!!!WHY THESE THINGS NEVER COME TO U R MIND???????!!!!!!!!!WHY U R NOT WRITING AGAINST THESE THINGS???????WHICH R REALLY DESTROYING HINDUISM!!!!THATS WHY PERIYAR TOLD “””GOD HAS NOT CREATED CASTE SYSTEM BUT HE CANT DESTROY IT””””!!!!!!!!!!!!AND ALSO “”””THE DEATH OF HINDUISM IS DEATH OF CASTE SYSTEM””””””””””””!!!!!!!!!!!!!CANT U SEE RIGHT THING IN THAT>>>>>>>>>PLZ REPLY SIR>>>>>>>>>>>

 14. preethamms@ymail.com says:

  dalitara virodhiya maatugalu barhada roopadalli bandide aste

 15. shivanaga gm says:

  ee deshadalli 60 varsha aaliruva nimma congress party bjp pakshagalu janarige madiruvudadaru yenu vomme yochsi swamy hagaranagale inc and bjp ya abiruddi kaaryagalu mr prathapi mind your own langauge when you talk about mayawathi because she is going to become a prime minister of india

 16. shivanaga gm says:

  mr prathapi mayawathi power yenu antha thilkobekadre wait mado swalpa time, avara bagge mathado yogyathe ningilla manuvadigalu neevu naavu ambedkar vaadigalu you are stupid hindhu we are gentle budhist