Date : 01-05-2009, Friday | 13 Comments
ಕಳೆದ ಜನವರಿಗೂ ಮೊದಲೇ ಗುಸು ಗುಸು ಆರಂಭವಾಗಿತ್ತು. ಕಲ್ಯಾಣ್ ಸಿಂಗ್ ಪಕ್ಷ ಬಿಡುತ್ತಾರಂತೆ, ಪಕ್ಷದ ಇತರ ನಾಯಕರ ಧೋರಣೆಗಳ ಬಗ್ಗೆ ಬೇಸತ್ತಿ ದ್ದಾರಂತೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರ ನ್ನಾಗಿ ಮಾಡಿದ್ದರೂ ತಕ್ಕ ಮನ್ನಣೆ ನೀಡುತ್ತಿಲ್ಲವಂತೆ, ಅವರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆಯಂತೆ, ಪರ್ಯಾಯ ಮಾರ್ಗ ಹುಡುಕಲಾರಂಭಿಸಿದ್ದಾರಂತೆ, ಮುಲಾಯಂ ಸಿಂಗ್ ಜತೆ ಈಗಾಗಲೇ ಗೌಪ್ಯ ಮಾತುಕತೆ ನಡೆಸಿದ್ದಾರಂತೆ, ಸದ್ಯದಲ್ಲೇ ಸಮಾಜ ವಾದಿ ಪಕ್ಷವನ್ನು ಸೇರಿಕೊಳ್ಳುತ್ತಾರಂತೆ…
ಇಂತಹ ಯಾವ ವದಂತಿಗಳನ್ನೂ ತಳ್ಳಿಹಾಕುವಂತಿರಲಿಲ್ಲ.
1999ರಲ್ಲೇ ಒಮ್ಮೆ ಬಿಜೆಪಿಯನ್ನು ತೊರೆದು, ರಾಷ್ಟ್ರೀಯ ಕ್ರಾಂತಿ ಪಾರ್ಟಿ ಎಂಬ ತಮ್ಮದೇ ಆದ ಪಕ್ಷವನ್ನೂ ಕಟ್ಟಿ ಚುನಾವಣೆಗಿಳಿದಿದ್ದ ಕಲ್ಯಾಣ್ ಸಿಂಗ್ ಮತ್ತೆ ಪಕ್ಷ ಬಿಡುತ್ತಾರಂತೆ ಎಂದರೆ ಯಾರು ತಾನೇ ನಂಬದೇ ಇರಲು ಸಾಧ್ಯ? ಕೊನೆಗೂ ವದಂತಿಗಳನ್ನು ನಂಬುವಂತಹ ಕಾಲ ಬಂತು. ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಬಿಜೆಪಿಯ ಹಾಲಿ ಸಂಸದ. ಆದರೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಂತರ ಬುಲಂದ್‌ಶಹರ್ ಅನ್ನು ಮೀಸಲು ಕ್ಷೇತ್ರವೆಂದು ಘೋಷಣೆ ಮಾಡಲಾಗಿದ್ದು, 2004ರಲ್ಲಿ ಮೀಸಲು ಕ್ಷೇತ್ರವಾಗಿದ್ದ ಖುರ್ಜಾದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಅಶೋಕ್ ಪ್ರಧಾನ್ ಅವರಿಗೆ ಬುಲಂದ್‌ಶಹರ್‌ನ ಟಿಕೆಟ್ ನೀಡಲು ಕಳೆದ ಜನವರಿ 20ರಂದು ಬಿಜೆಪಿ ನಿರ್ಧಾರ ಕೈಗೊಂಡಿತು. ಇದು ಕಲ್ಯಾಣ್ ಅವರನ್ನು ಕುಪಿತಗೊಳಿಸಿತು. ಅಶೋಕ್ ಪ್ರಧಾನ್ ಹೇಳಿ ಕೇಳಿ ಕಲ್ಯಾಣ್ ಸಿಂಗ್ ಅವರ ಕಟ್ಟಾ ವೈರಿ. ಜತೆಗೆ 2007ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ರಾಜ್‌ವೀರ್ ಸಿಂಗ್ ಸೋಲಿಗೆ ಅಶೋಕ್ ಪ್ರಧಾನ್ ಅವರೇ ಕಾರಣ ಎಂಬ ಸಿಟ್ಟೂ ಕಲ್ಯಾಣ್ ಸಿಂಗ್‌ಗಿತ್ತು. ಹಾಗಿರುವಾಗ ಕಲ್ಯಾಣ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಟಿಕೆಟ್ ಅನ್ನು ಅವರ ಒಪ್ಪಿಗೆ ಇಲ್ಲದೆ, ಅವರ ಕಟ್ಟಾವೈರಿಗೇ ನೀಡಿದರೆ ಸುಮ್ಮನಿರುತ್ತಾರೆಯೇ? ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದರೂ ಮಾತಿಗೆ ಬೆಲೆ ಕೊಡದ ಬಿಜೆಪಿ ರಾಜ್ಯ ಘಟಕದ ನಾಯಕರ ಧೋರಣೆ ಕಲ್ಯಾಣ್ ಸಿಂಗ್ ಅವರಿಗೆ ಬೇಸರ ತಂದಿತು. ಮರುದಿನವೇ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಜತೆ ಕಲ್ಯಾಣ್ ಸಿಂಗ್ ಖಾಸಗಿಯಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದರು. ಹಾಗಾಗಿ ಗುಸು ಗುಸು ಕೂಡ ಆರಂಭವಾಯಿತು. ಇತ್ತ ಕಲ್ಯಾಣ್ ಸಿಂಗ್ ಜತೆ ಕೈಜೋಡಿಸುವ ಊಹಾಪೋಹಾಗಳನ್ನು ಮುಲಾಯಂ ತಳ್ಳಿಹಾಕಿದರಾದರೂ, ಒಂದು ವೇಳೆ ಕಲ್ಯಾಣ್ ಸಿಂಗ್ ಮಗ ರಾಜ್‌ವೀರ್ ಸಿಂಗ್ ಅವರು ಮನವಿ ಮಾಡಿಕೊಂಡರೆ ಪಕ್ಷದ ಟಿಕೆಟ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದರು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಒಂದೆಡೆ ಕಲ್ಯಾಣ್ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದರೆ, ಇನ್ನೊಂದೆಡೆ ಅವರ ಪುತ್ರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದರು. ಹಾಗೆ ಸೇರಿಸಿಕೊಂಡರೂ ಮರುಕ್ಷಣವೇ ಸಮಾಜವಾದಿ ಪಕ್ಷಕ್ಕೆ ಪೀಕಲಾಟ ಪ್ರಾರಂಭವಾಯಿತು. ಬಾಬರಿ ಮಸೀದಿ ನೆಲಸಮಕ್ಕೆ ಕಾರಣರೆಂಬ ಆರೋಪ ಹೊತ್ತಿರುವ ಕಲ್ಯಾಣ್ ಸಿಂಗ್ ಅವರ ಜತೆ ಕೈಜೋಡಿಸಿದ್ದರಿಂದ ತನ್ನ ಕಟ್ಟಾ ಬೆಂಬಲಿಗರಾದ ಮುಸ್ಲಿಮರು ಎಲ್ಲಿ ಮುನಿಸಿಕೊಂಡಾರೋ ಎಂಬ ಭಯ ಕಾಡತೊಡಗಿತು. ಆದಕಾರಣ, ಕಳೆದ ಫೆಬ್ರವರಿ ೪ರಂದು ಬಹಿರಂಗ ಹೇಳಿಕೆಯೊಂದನ್ನು ಹೊರಡಿಸಿದ ಸಮಾಜವಾದಿ ಪಕ್ಷ, ‘ಕಲ್ಯಾಣ್ ಸಿಂಗ್ ಜತೆ ನಾವು ಮೈತ್ರಿಮಾಡಿಕೊಂಡಿಲ್ಲ. ಅದು ಬರೀ ಫ್ರೆಂಡ್‌ಶಿಪ್ ಅಷ್ಟೇ. ಆದರೂ ಕಲ್ಯಾಣ್ ಸಿಂಗ್ ಅವರು ಬಾಬರಿ ಮಸೀದಿ ನೆಲಸಮದ ಬಗ್ಗೆ ಷರತ್ತುರಹಿತ ಕ್ಷಮೆ ಕೇಳಬೇಕೆಂದು ಒತ್ತಾಯಿಸಿತು’.
ಕಲ್ಯಾಣ್ ಅನಿವಾರ್ಯತೆಗೆ ಬಿದ್ದರು.
ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಅನಿವಾರ್ಯವಾಗಿ ಕೆಲವನ್ನು ಹೇಳಬೇಕಾಗಿ ಬಂತು. ಫೆಬ್ರವರಿ ೪ರಂದೇ ಲಿಖಿತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅವರು, ‘1992, ಡಿಸೆಂಬರ್ 6ರ ಬಾಬರಿ ಮಸೀದಿ ಧ್ವಂಸಕ್ಕೆ ನಾನು ನೈತಿಕ ಹೊಣೆ ಹೊರುತ್ತೇನೆ’ ಎಂದರು. ಮುಂದುವರಿದು, ‘ನೈತಿಕ ಹೊಣೆಹೊತ್ತು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದೆ’ ಎಂದ ಕಲ್ಯಾಣ್, ‘ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧರ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಹುದಾದ ಹಕ್ಕಿದೆ. ಮುಸ್ಲಿಮರಿಗೆ ಇಸ್ಲಾಂ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಹುದಾದ ಹಕ್ಕು ಹೇಗಿದೆಯೋ ಹಿಂದೂಗಳಿಗೂ ಅಂತಹ ಹಕ್ಕಿದೆ’ ಎಂದುಬಿಟ್ಟರು.
ಹಾಗೆ, ಅವರು ‘ನೈತಿಕ ಹೊಣೆ ಹೊರುತ್ತೇನೆ’ ಎಂದರೇ ಹೊರತು “ಕ್ಷಮೆ”ಯಾಚಿಸಲಿಲ್ಲ!!
ಆಗಿನ್ನೂ ಲೋಕಸಭೆ ಚುನಾವಣೆ ಘೋಷಣೆಯಾಗಿರಲಿಲ್ಲ. ಹಾಗಾಗಿ ವಿನಾಕಾರಣ ಹುಳುಕು ಹುಡುಕುವ ಮಾಧ್ಯಮಗಳೂ ಅಷ್ಟಾಗಿ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಈಗ ಚುನಾವಣಾ ಸಮರದ ಅರ್ಧದಲ್ಲಿದ್ದೇವೆ. ಬಾಬರಿ ಮಸೀದಿ ವಿವಾದ ಮತ್ತೆ ಮತ್ತೆ ಪ್ರಸ್ತಾಪವಾಗ ತೊಡಗಿದೆ. ಲಾಲು, ಪಾಸ್ವಾನ್‌ಗಳು ಬಾಬರಿ ಮಸೀದಿ ನೆಲಸಮಕ್ಕೆ ಕಾಂಗ್ರೆಸ್ಸೇ ಕಾರಣ ಎನ್ನತೊಡಗಿದ್ದಾರೆ. ಕಾಂಗ್ರೆಸ್ ಕಲ್ಯಾಣ್ ಸಿಂಗ್ ಅವರತ್ತ ಬೆರಳು ತೋರಿ ಸಮಾಜವಾದಿ ಪಕ್ಷದ ಕಾಲು ಎಳೆಯುತ್ತಿದೆ. ಇಟಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿರುವ ಕಲ್ಯಾಣ್ ಸಿಂಗ್‌ಗೆ ಸಮಾಜವಾದಿ ಪಕ್ಷ ಬೆಂಬಲ ನೀಡಿದೆ. ಹಾಗಾಗಿ ಮತ್ತೆ ಕ್ಷಮೆಯಾಚಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ೧೭ರಂದು ಕಲ್ಯಾಣ್ ಸಿಂಗ್ ಮತ್ತೆ ಬಾಬರಿ ವಿಚಾರವಾಗಿ ಅಲಿಘಡದಲ್ಲಿ ಮಾತನಾಡಿದ್ದಾರೆ. “ಹದಿನಾರನೇ ಶತಮಾನದ ಮಸೀದಿಯನ್ನು ನೆಲಸಮ ಮಾಡುವುದನ್ನು ತಡೆಯಲು ನಾನು ಬಯಸಿದ್ದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಬಾಬರಿ ಮಸೀದಿ ನೆಲಸಮವಾಗಿ ೧೬ ವರ್ಷಗಳ ನಂತರ ಹೇಳಿರುವರಾದರೂ ಕ್ಷಮೆ ಯಾಚಿಸಿಲ್ಲ”(Over 16 years after Babri Masjid was demolished, former Uttar Pradesh chief minister Kalyan Singh today said he very much wanted to prevent the razing of the 16th century mosque, but stopped short of apologising for failing to do so.)-ಹಾಗಂತ ಬರೆದಿದೆ ‘ಹಿಂದೂಸ್ಥಾನ್ ಟೈಮ್ಸ್’ ಪತ್ರಿಕೆ. “ಯಾವ ಮುಖ್ಯಮಂತ್ರಿಯೂ ಬಾಬರಿ ಮಸೀದಿ ನೆಲಸಮದಂತಹ ಘಟನೆ ನಡೆಯುವುದನ್ನು ಬಯಸುವುದಿಲ್ಲ, ನಾನೂ ಕೂಡ” ಎಂದಿದ್ದಾರೆ. “ಬಾಬರಿ ಮಸೀದಿ ನೆಲಸಮಕ್ಕೆ ನಾನು ನೈತಿಕ ಹೊಣೆ ಹೊರುತ್ತೇನೆ, ಮಸೀದಿಯನ್ನು ರಕ್ಷಿಸಲಾಗದ್ದಕ್ಕೆ ವಿಷಾಧಿಸುತ್ತೇನೆ” ಎಂದೂ ಹೇಳಿದ್ದಾರೆ. ಆದರೆ ಮತ್ತೂ ಕ್ಷಮೆಯಾಚಿಸಿಲ್ಲ!! ಕಲ್ಯಾಣ್ ಸಿಂಗ್ ಬಗ್ಗೆ ಹೆಮ್ಮೆಯಾಗುವುದೇ ಆ ಕಾರಣಕ್ಕೆ. ಅವರಿಂದು ಬಿಜೆಪಿಗೆ ಬೇಡವಾಗಿರಬಹುದು, ಹೊರೆಯೆನಿಸಿ ಹೊರಹೋಗುವಂತೆ ಮಾಡಿರಬಹುದು. ಆದರೂ ಒಬ್ಬ ಕಟ್ಟಾ ರಾಮಭಕ್ತನಿಗೆ ಕಲ್ಯಾಣ್ ಸಿಂಗ್ ಬಹಳ ದೊಡ್ಡ ವ್ಯಕ್ತಿಯೆನಿಸುತ್ತಾರೆ.
ಅಷ್ಟಕ್ಕೂ ಅವರು ರಾಮನಿಗಾಗಿ ಕುರ್ಚಿಯನ್ನೇ ಬಿಟ್ಟುಕೊಟ್ಟವರು!
೧೯೯೨ರಲ್ಲಿ ನಡೆದಿದ್ದೇನು ಎಂಬುದನ್ನು ನೆನಪಿಸಿಕೊಳ್ಳಿ. ಅದಕ್ಕಿಂತ ಮೊದಲು ರಾಜೀವ್ ಗಾಂಧಿಯವರ ಕೊಡುಗೆಯನ್ನೂ eಪಕ ಮಾಡಿಕೊಳ್ಳಿ. 1985ರಲ್ಲಿ ಶಾಬಾನು ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಆಕೆಗೆ ಜೀವನಾಂಶ ನೀಡುವಂತೆ ವಿಚ್ಛೇದನೆ ನೀಡಿದ ಆಕೆಯ ಪತಿಗೆ ಆದೇಶ ನೀಡಿತು. ಆದರೆ ಜೀವನಾಂಶ ನೀಡುವುದು ಷರಿಯಾಕ್ಕೆ (ಇಸ್ಲಾಂ ಕಾಯಿದೆ)ವಿರುದ್ಧ ಎಂದು ಮುಸ್ಲಿಂ ಮೂಲಭೂತವಾದಿಗಳು ತಗಾದೆ ತೆಗೆದರು. ಒತ್ತಡಕ್ಕೆ ಬೆದರಿದ ಪ್ರಧಾನಿ ರಾಜೀವ್ ಗಾಂಧಿಯವರು ಸಂವಿಧಾನಕ್ಕೇ ತಿದ್ದುಪಡಿ ತಂದು, ಷರಿಯಾಕ್ಕೆ ಅನುಗುಣವಾಗಿ ಜೀವನಾಂಶ ಕೊಡದೇ ಇರುವುದಕ್ಕೆ ಕಾನೂನಿನ ಅಂಕಿತ ಹಾಕಿದರು. ಇದನ್ನೇ ನೆಪವಾಗಿಟ್ಟುಕೊಂಡ ಹಿಂದೂಗಳೂ ಕೂಡ ಅಯೋಧ್ಯೆಯ ರಾಮಮಂದಿರದ ಬೀಗ ತೆಗೆದು ನಿತ್ಯವೂ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯ ಮಾಡತೊಡಗಿದರು. ರಾಜೀವ್ ಸಂದಿಗ್ಧತೆಗೆ ಸಿಲುಕಿದರು. ಮುಸ್ಲಿಮರ ಒತ್ತಾಯಕ್ಕೆ ಮಣಿದಿದ್ದ ಅವರು, ಹಿಂದೂಗಳನ್ನೂ ಸಮಾಧಾನಪಡಿಸಬೇಕಿತ್ತು. ಜತೆಗೆ ಹಿಂದೂಗಳ ಒತ್ತಾಯವೂ ಒಪ್ಪುವಂಥದ್ದೇ ಆಗಿತ್ತು. ಅಷ್ಟಕ್ಕೂ ಬಾಬರಿ ಮಸೀದಿಯೇನು ಮೆಕ್ಕಾ, ಮದೀನಾ, ಅಲ್‌ಅಕ್ಷಾ, ಹಝರತ್‌ಬಾಲ್‌ಗಳಂತೆ ಇಸ್ಲಾಂನ ಪವಿತ್ರ ಸ್ಥಳವೇನೂ ಆಗಿರಲಿಲ್ಲ. ಮಿಗಿಲಾಗಿ, ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳೇ ನಮ್ಮ ದೇಶಕ್ಕೆ Alien Religions. ಸುಮಾರು ಒಂದು ಸಾವಿರ ವರ್ಷಗಳ ಕಾಲ ಭಾರತವನ್ನಾಳಿದ ಮುಸ್ಲಿಂ ಆಡಳಿತಗಾರರು ನಮ್ಮ ಎಷ್ಟೋ ದೇವಾಲಯಗಳನ್ನು ಹಾಳುಗೆಡವಿದ್ದರು. ಅದರಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರವೂ ಒಂದಾಗಿತ್ತು. ಎಲ್ಲ ರಾಜರನ್ನೂ ಸೋಲಿಸುತ್ತಾ ಆಯೋಧ್ಯೆಗೆ ಬಂದ(1528ರಲ್ಲಿ)ಬಾಬರನ ಸೇನಾಧಿಪತಿ ಮಿರ್ ಬಾಕಿ, ಅಲ್ಲಿನ ಅತಿದೊಡ್ಡ ದೇವಾಲಯವಾಗಿದ್ದ ರಾಮಜನ್ಮಭೂಮಿಯ ಶ್ರೀರಾಮಚಂದ್ರ ದೇವಾಲಯದ ಮೇಲೆ ಬಲವಂತವಾಗಿ ನಿರ್ಮಾಣ ಮಾಡಲಾಗಿದ್ದ ಕಟ್ಟಡವೇ ಬಾಬರಿ edifice. ಅದನ್ನು ನಾಲ್ಕು ಶತಮಾನಗಳ ಹಿಂದೆ ಕಟ್ಟಿದ್ದು ಅನ್ನುವುದನ್ನು ಬಿಟ್ಟರೆ ಬೇರಾವ ಧಾರ್ಮಿಕ ಮಹತ್ವಗಳೂ ಬಾಬರಿ ಕಟ್ಟಡಕ್ಕಿರಲಿಲ್ಲ. ಗುಜರಾತ್‌ನಲ್ಲಿ ರಸ್ತೆ ಅಗಲಿಕರಣದ ಸಲುವಾಗಿ ಕೆಲ ತಿಂಗಳುಗಳ ಹಿಂದೆ ೨೦೦ಕ್ಕೂ ಹೆಚ್ಚು ದೇವಾಲಯಗಳನ್ನೇ ನೆಲಸಮ ಮಾಡಿದ್ದಾರೆ. ಹಾಗಿರುವಾಗ ಯಾವನೋ ಒಬ್ಬ ವಿದೇಶದಿಂದ ಬಂದ ಆಕ್ರಮಣಕಾರಿಯ ಸೇನಾಧಿಪತಿ ಕಟ್ಟಿದ ಕಟ್ಟಡದಲ್ಲಿ ಯಾವ ಪಾವಿತ್ರ್ಯವನ್ನು ಹುಡುಕಲು ಸಾಧ್ಯ? ಅಲ್ಲಿ ನಮಾಜ್ ಕೂಡ ನಡೆಯುತ್ತಿರಲಿಲ್ಲ. ಪವಿತ್ರ ಸ್ಥಳ ಎನ್ನಲು ಯಾವ ಮುಸ್ಲಿಮರೂ ಅಲ್ಲಿಗೆ ಯಾತ್ರೆ ಹೋಗುತ್ತಿರಲಿಲ್ಲ. ಇತ್ತ ಹಿಂದೂಗಳು ಬಾಬರ್ ಮಾಡಿದ ಐತಿಹಾಸಿಕ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಬಂದಿದ್ದರು. ಈ ಮಧ್ಯೆ ಸ್ವಾತಂತ್ರ್ಯ ಬಂದ ನಂತರ, ‘ವರ್ಷಕ್ಕೊಮ್ಮೆ’ ಕಟ್ಟಡದ ಬಾಗಿಲು ತೆರೆದು ಪೂಜೆ ಸಲ್ಲಿಸಲು 1949ರಲ್ಲಿ ಹಿಂದೂಗಳಿಗೆ ಅವಕಾಶವನ್ನೂ ಮಾಡಿಕೊಡಲಾಗಿತ್ತು. ಹಾಗಾಗಿ ಶಾಬಾನು ಪ್ರಕರಣದ ನಂತರ, ಅದನ್ನೇ ನೆಪವಾಗಿಟ್ಟುಕೊಂಡ ಹಿಂದೂಗಳು ಬೀಗ ತೆಗೆದು ನಿತ್ಯ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು. 1986ರಲ್ಲಿ ರಾಜೀವ್ ಗಾಂಧಿಯವರು ಧೈರ್ಯಯುತ ನಿರ್ಧಾರ ತೆಗೆದುಕೊಂಡು, ಬೀಗ ತೆಗೆಸಿ ಪೂಜೆಗೆ ಅವಕಾಶ ಮಾಡಿಕೊಟ್ಟರು. ಆದರೆ ಕೆಲವರಿಗೆ ಇದು ಪಥ್ಯವಾಗಲಿಲ್ಲ. ರಾಜೀವ್ ಗಾಂಧಿಯವರು ಹಿಂದೂ ಪರ ನಿರ್ಧಾರ ಕೈಗೊಂಡಿದ್ದಾರೆ ಎಂದು ಬೊಬ್ಬೆಹಾಕಲಾರಂಭಿಸಿದರು. ಇತ್ತ ಅದುವರೆಗೂ ಬೀಗ ತೆಗೆದು ಪೂಜೆ ಮಾಡಲು ಅವಕಾಶ ನೀಡಿ ಎಂದು ಒತ್ತಾಯಿಸುತ್ತಿದ್ದ ಹಿಂದೂಗಳು, ಅದರಲ್ಲೂ ಆ ವಿವಾದವನ್ನು ರಾಜಕೀಯ ಹೋರಾಟವಾಗಿ ತೆಗೆದುಕೊಂಡ ಬಿಜೆಪಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಬೇಡಿಕೆ ಇಡಲಾರಂಭಿಸಿತು.
ಅಲ್ಲಿಗೆ ವಿವಾದ ದೊಡ್ಡದಾಯಿತು.
ಇಂತಹ ವಿವಾದವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಬಿಜೆಪಿ, ೧೯೮೪ರಲ್ಲಿದ್ದ ಎರಡು ಸ್ಥಾನಗಳನ್ನು 1989ರ ಚುನಾವಣೆಯಲ್ಲಿ 86ಕ್ಕೇರಿಸಿಕೊಂಡಿತು. 1991ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಹಿಮಾಚಲಪ್ರದೇಶ ರಾಜ್ಯ ವಿಧಾನಸಭೆಗಳಲ್ಲಿ ಬಹುಮತ ಪಡೆದು ಅಧಿಕಾರಕ್ಕೂ ಏರಿತು. ಹಾಗೆ ಅಧಿಕಾರಕ್ಕೇರಿದಾಗ 1991, ಜೂನ್ 24ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದವರೇ ಕಲ್ಯಾಣ್ ಸಿಂಗ್. ಆದರೆ ಅಧಿಕಾರಕ್ಕೇರಿದ ಮೇಲೆ ಅವರು ಗುರಿಯನ್ನು ಮರೆಯಲಿಲ್ಲ. 1992, ಡಿಸೆಂಬರ್ 6ರಂದು ಕರಸೇವೆ ಹಮ್ಮಿಕೊಳ್ಳುವುದಾಗಿ ಆರೆಸ್ಸೆಸ್, ವಿಎಚ್‌ಪಿ, ಬಜರಂಗದಳ ಹಾಗೂ ಇತರ ರಾಷ್ಟ್ರವಾದಿ ಮತ್ತು ಹಿಂದೂ ಸಂಘಟನೆಗಳು ಘೋಷಣೆ ಮಾಡಿದಾಗ ಮಸೀದಿಯ ಉಳಿವಿನ ಬಗ್ಗೆ ಆತಂಕ ಸೃಷ್ಟಿಯಾಗಿತ್ತು. ಅಂದೇ ಕೇಂದ್ರ ಸರಕಾರ ಉತ್ತರ ಪ್ರದೇಶ ಸರಕಾರವನ್ನು ಕಿತ್ತೊಗೆಯುವ ಸಾಧ್ಯತೆಯೂ ನಿರ್ಮಾಣವಾಗಿತ್ತು. ಆದರೆ ಕಲ್ಯಾಣ್ ಸಿಂಗ್ ಬುದ್ಧಿವಂತಿಕೆ ತೋರಿದರು. ಅದೆಷ್ಟೇ ಬೆಲೆ ತೆತ್ತಾದರೂ ಸರಿ, ಮಸೀದಿಯನ್ನು ರಕ್ಷಣೆ ಮಾಡುತ್ತೇನೆ ಎಂದು ಸುಪ್ರೀಂಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟು ಬಂದರು. ಹಾಗೆ ಬರೆದುಕೊಟ್ಟಿದ್ದರಿಂದಾಗಿ ಅವರ ಸರಕಾರವೂ ಉಳಿಯಿತು, ಕರಸೇವೆಗೂ ಹಾದಿ ಸುಗಮವಾಯಿತು. 1992, ಡಿಸೆಂಬರ್ 6ರಂದು ಏನಾಯಿತು ಎಂಬುದು ನಿಮಗೆಲ್ಲ ತಿಳಿದಿದೆ. ಅವತ್ತು ಬಾಬರಿ ಮಸೀದಿ ನೆಲಸಮವಾಗುವುದನ್ನೇ ನೋಡುತ್ತಾ ಕುಳಿತಿದ್ದ ಕಲ್ಯಾಣ್ ಸಿಂಗ್, ಕೆಳಗೆ ಬಿದ್ದು ತಾತ್ಕಾಲಿಕ ರಾಮಮಂದಿರ ನಿರ್ಮಾಣವಾಗುತ್ತಲೇ, ‘ಮಸೀದಿಯನ್ನು ರಕ್ಷಿಸಲು ನನ್ನಿಂದಾಗ ಲಿಲ್ಲ’ ಎಂದು ‘ನೈತಿಕ ಹೊಣೆಹೊತ್ತು’ ರಾಜೀನಾಮೆ ನೀಡಿದರು!
ಅವತ್ತು ಒಂದು Causeಗಾಗಿ ಕಲ್ಯಾಣ್ ಸಿಂಗ್ ಕುರ್ಚಿ ಯನ್ನೇ ತ್ಯಾಗ ಮಾಡಿದರು. ಒಂದು ಮಂತ್ರಿ ಸ್ಥಾನ ಕೊಡಿ, ಪಕ್ಷವನ್ನೇ ಒಡೆದು ಇಂತಿಷ್ಟು ಎಮ್ಮೆಯ್ಲೆಗಳನ್ನು ಕರೆದುಕೊಂಡು ಬರುತ್ತೇನೆ ಎಂದು ಕುಮಾರಸ್ವಾಮಿಯವರ ಮನೆಯ ಕದತಟ್ಟಿದ್ದ ಯಡಿಯೂರಪ್ಪನವರು, ಒಂದು ಕುರ್ಚಿಗಾಗಿ ಸಿದ್ಧಾಂತವನ್ನೇ ಬಲಿಕೊಡಲು ಹೊರಟಿರುವ ಈಗಿನ ಬಿಜೆಪಿ ನಾಯಕರೆಲ್ಲಿ, ಪಕ್ಷದಿಂದ ಹೊರಹಾಕಿದರೂ ಬಾಬರಿ ನೆಲಸಮದ ಸಲುವಾಗಿ ಕ್ಷಮೆಯಾಚಿಸಲು ಒಲ್ಲದ ಕಲ್ಯಾಣ್ ಸಿಂಗ್ ಎಲ್ಲಿ?! ಈ ವಿಷಯದಲ್ಲಿ ಕಲ್ಯಾಣ್ ಸಿಂಗ್ ಮುಂದೆ ಲಾಲ್ ಕೃಷ್ಣ ಆಡ್ವಾಣಿ ಹಾಗೂ ವಾಜಪೇಯಿ ಕೂಡ ಚಿಕ್ಕವರೆನಿಸಿ ಬಿಡುತ್ತಾರೆ! ಅಯೋಧ್ಯೆಯ ವಿವಾದವನ್ನು ಒಂದು ಯಶಸ್ವಿ ಚಳವಳಿಯನ್ನಾಗಿ ಪರಿವರ್ತಿಸಿ ಬಿಜೆಪಿಯ ಬಲ ಹೆಚ್ಚಿಸಿದ್ದು ಆಡ್ವಾಣಿಯವರಾದರೂ, ಅದರ ಸಂಪೂರ್ಣ ಲಾಭ ಪಡೆದಿದ್ದು ಅಟಲ್ ಬಿಹಾರಿ ವಾಜಪೇಯಿಯವರಾದರೂ ಕಲ್ಯಾಣ್ ಸಿಂಗ್ ಇವರಿಬ್ಬರಿಗಿಂತಲೂ ದೊಡ್ಡ ವ್ಯಕ್ತಿಯೆನಿಸಿಸುತ್ತಾರೆ. ನೀವೇ ಯೋಚನೆ ಮಾಡಿ, ಅಯೋಧ್ಯೆ ವಿವಾದದಿಂದಾಗಿ ಬಿಜೆಪಿಗೆ ದೊರೆತ ಅಧಿಕಾರವನ್ನು ಅನುಭವಿಸಿದ ಪ್ರಧಾನಿ ವಾಜಪೇಯಿ, ಆಯೋಧ್ಯೆ ಚಳವಳಿಗೆ ಎಂದೂ ಪೂರ್ಣಮನಸ್ಸಿನಿಂದ ಧುಮುಕಿದ ವರೂ ಅಲ್ಲ, ಸಕ್ರಿಯವಾಗಿ ಪಾಲ್ಗೊಂಡವರೂ ಅಲ್ಲ. ಉಗ್ರವಾದಿ ಧೋರಣೆಯಿಂದ ಬಂದ ಅಧಿಕಾರವನ್ನು ಸೌಮ್ಯವಾದಿ ಹೆಸರಿನಿಂದ ಅನುಭವಿಸಿದರಷ್ಟೇ. ಬಾಬರಿ ಮಸೀದಿ ನೆಲಸಮವನ್ನು ಅವರೆಂದೂ ಒಪ್ಪಲಿಲ್ಲ. ಇತ್ತ “It was the saddest day of my life” ಎಂದು ಲಿಬರ್‍ಹಾನ್ ಆಯೋಗದ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಲೇ ಬಂದಿರುವ ಲಾಲ್ ಕೃಷ್ಣ ಆಡ್ವಾಣಿಯವರ ಧೂರ್ತ ಬುದ್ಧಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಾಕಿಸ್ತಾನಕ್ಕೆ ಹೋಗಿ ದೇಶ ಒಡೆದ ಜಿನ್ನಾ ಅವರನ್ನೇ ಸೆಕ್ಯುಲರ್ ಎನ್ನುತ್ತಾರೆಂದರೆ ಆಡ್ವಾಣಿ ಯವರೆಷ್ಟು ಅವಕಾಶವಾದಿ ಎಂಬುದು ಗೊತ್ತಾಗುತ್ತದೆ.
ಆದರೆ Cause ವಿಷಯದಲ್ಲಿ ಕಲ್ಯಾಣ್ ಸಿಂಗ್ ಅವರೆಂದೂ ಇಬ್ಬಂದಿ ನಿಲುವು ತಳೆದವರಲ್ಲ.
ಅಂದು 1991ರಲ್ಲಿ ಅಧಿಕಾರ ಸಿಕ್ಕಿದ ಮೇಲೆ ಕಲ್ಯಾಣ್ ಸಿಂಗ್ ಕೂಡ, ರಾಮಮಂದಿರ ನಿರ್ಮಾಣ ಉದ್ದೇಶದ ಬಗ್ಗೆ ವಿಳಂಬ ಧೋರಣೆ ತಳೆಯಬಹುದಿತ್ತು. ಕರಸೇವೆಯನ್ನು ವಿಳಂಬ ಗೊಳಿಸುವಂತೆ ಮಾಡಿ ಇನ್ನಷ್ಟು ಕಾಲ ಅಧಿಕಾರವನ್ನನುಭವಿಸ ಬಹುದಿತ್ತು. ಆದರೆ ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷ ತುಂಬುವ ಮೊದಲೇ ತ್ಯಾಗಕ್ಕೆ ಸಿದ್ಧರಾದರು. ಸುಪ್ರೀಂಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟು ಬಂದ ಕಲ್ಯಾಣ್ ಸಿಂಗ್, ಪರಿಸ್ಥಿತಿ ಎಷ್ಟೇ ಕೈಮೀರಿ ಹೋದರೂ ಯಾವ ಕಾರಣಕ್ಕೂ ಕರಸೇವಕರ ಮೇಲೆ ಗೋಲಿಬಾರ್ ಮಾಡಬಾರದು ಎಂದು ಪೊಲೀಸರಿಗೆ ಕಟ್ಟುನಿಟ್ಟಾದ ಆe ನೀಡಿದ್ದರು. ಹಾಗಾಗಿಯೇ ಸುಪ್ರೀಂಕೋರ್ಟ್ ಕಲ್ಯಾಣ್ ಸಿಂಗ್ ಅವರನ್ನೂ ಪಿತೂರಿದಾರರ ಪಟ್ಟಿಯಲ್ಲಿ ಸೇರಿಸಿತು, ವಿಚಾರಣೆಗೆ ಗುರಿಪಡಿಸಿತು. ಈ ಮಧ್ಯೆ 1997ರಲ್ಲಿ ಮತ್ತೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ವಿರುದ್ಧ ಕಲ್‌ರಾಜ್ ಮಿಶ್ರಾ ಹಾಗೂ ಲಾಲ್‌ಜಿ ಟಂಡನ್ ಎಂಬ ತಮ್ಮ ಇಬ್ಬರು ಚೇಲಾಗಳನ್ನು ಹುರಿದುಂಬಿಸಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ ಬಂಡಾಯಕ್ಕೆ ಕಾರಣರಾದರು. 1999, ನವೆಂಬರ್ 12ರಂದು ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿದ ಕಲ್ಯಾಣ್ ಸಿಂಗ್ ಪಕ್ಷವನ್ನೇ ತೊರೆದು ಬೇರೆ ಪಕ್ಷ ಕಟ್ಟಿಕೊಂಡರು. ಆದರೆ ಬಾಬರಿ ಭೂತ ಅವರನ್ನು ಬಿಡಲಿಲ್ಲ. ಅಂದರೆ ಬಾಬರಿ ಮಸೀದಿ ಧ್ವಂಸ ಪಿತೂರಿಯಲ್ಲಿ ಕಲ್ಯಾಣ್ ಸಿಂಗ್ ಭಾಗಿಯಾಗಿದ್ದಾರೆಂದು ಘೋಷಿಸಿದ ಸುಪ್ರೀಂಕೋರ್ಟ್, 1 ಸಾವಿರ ರೂ. ದಂಡ ಹಾಗೂ ಒಂದು ದಿನ ಜೈಲು ಶಿಕ್ಷೆ ವಿಧಿಸಿತು. ಹೇಗಿದೆ ನೋಡಿ, ಅಯೋಧ್ಯೆ ಚಳವಳಿಯಿಂದ ಪ್ರಧಾನಿ ಗಾದಿ ದಕ್ಕಿದ್ದು ವಾಜಪೇಯಿಯವರಿಗೆ, ಉಪಪ್ರಧಾನಿ ಸ್ಥಾನ ಅಲಂಕರಿಸಿದ್ದು ಆಡ್ವಾಣಿ. ಆದರೆ ಜೈಲಿಗೆ ಹೋಗಬೇಕಾಗಿ ಬಂದಿದ್ದು ಕಲ್ಯಾಣ್ ಸಿಂಗ್!!
ಇಷ್ಟಾಗಿಯೂ ಕಡೆಗೆ ಕಲ್ಯಾಣ್ ಪಕ್ಷಕ್ಕೇ ಬೇಡವಾದರು.
ಯಾವುದೇ ಒಂದು ಪಕ್ಷ ಉಳಿದು, ಬೆಳೆಯಬೇಕಾದರೆ ಎಲ್ಲ ಥರದ ನಾಯಕರೂ ಬೇಕು. ಅವರನ್ನು ಮೂರು ವಿಧವಾಗಿ ವಿಂಗಡಿಸಬಹುದು. ಮೊದಲನೆಯದಾಗಿ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂಬ ಟ್ರಿಕ್ ಹೇಳಿಕೊಡುವವರು ಬೇಕು. ಅಂದರೆ ಕಾರ್ಯತಂತ್ರ ರೂಪಿಸುವಂತಹವರು ಅತ್ಯಗತ್ಯ. ಎರಡನೆಯದಾಗಿ, ಪಕ್ಷ ಗೆದ್ದ ನಂತರ ಹೇಗೆ ಅಧಿಕಾರ ನಡೆಸಬೇಕು, ಆಡಳಿತವನ್ನು ಸಂಭಾಳಿಸುವುದು ಹೇಗೆ, ಯಾವ ರೀತಿ ಜನಪರ ಕೆಲಸ ಮಾಡಬೇಕು ಎಂದು ಹೇಳಿಕೊಡುವವರೂ ಅಷ್ಟೇ ಮುಖ್ಯ. ಇವರಿಬ್ಬರಷ್ಟೇ ಮುಖ್ಯವಾದುದು ‘Public Face’. ಜನ ಮತ್ತು ಸರಕಾರದ ನಡುವಿನ ಸೇತುವೆಯಾಗಿ ಇವರಿರುತ್ತಾರೆ. ಟೀವಿ, ಪತ್ರಿಕೆ, ಪತ್ರಿಕಾಗೋಷ್ಠಿಗಳಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವುದು, ಸೈದ್ಧಾಂತಿಕ ತಳಹದಿಯ ಹಾಗೂ ನಿಷ್ಠೆಯ ಬಗ್ಗೆ ವಿವರಿಸುವುದು ಇವರ ಕೆಲಸ. ಜನಾಭಿಪ್ರಾಯವನ್ನು ಸರಕಾರಕ್ಕೆ ಮುಟ್ಟಿಸುವುದು, ಎಚ್ಚರಿಸುವುದು, ದಾರಿ ತಪ್ಪದಂತೆ ಸಲಹೆ ನೀಡುವ ಕೆಲಸವನ್ನೂ ಮಾಡುತ್ತಾರೆ. ಜತೆಗೆ ಕಾರ್ಯಕರ್ತರ ಅಳಲನ್ನು ಆಲಿಸುವ, ಸ್ಪಂದಿಸುವ ಮೂಲಕ ಪಕ್ಷದ ಸಂಘಟನೆಯನ್ನು ಗಟ್ಟಿಯಾಗಿಟ್ಟುಕೊಳ್ಳುವ ಜವಾಬ್ದಾರಿಯನ್ನೂ ನಿರ್ವಹಿಸುತ್ತಾರೆ. ಆದರೆ 1998ರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಇವಿಷ್ಟೂ ಸ್ಥಾನಗಳನ್ನು ಮರೆತು, ಅವುಗಳಿಗೆ ನೀಡಬೇಕಾದ ಗೌರವ ಸ್ಥಾನಮಾನ ನೀಡದೆ ಅಧಿಕಾರದ ಮದದಲ್ಲಿ ಮೆರೆಯಿತು. ಕಾರ್ಯಕರ್ತರ ಅಭಿಪ್ರಾಯ ಕೇಳದೆ ಪ್ರಮೋದ್ ಮಹಾಜನ್, ವೆಂಕಯ್ಯನಾಯ್ಡು ಅವರಂತಹ ‘ಫಿಕ್ಸರ್’ಗಳ ಮಾತು ಕೇಳಿದ ಕಾರಣ ೨೦೦೪ರ ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಪಕ್ಷವೇ ಅಸ್ಥಿರಗೊಳ್ಳುವಂತಹ ಪರಿಸ್ಥಿತಿ ಸೃಷ್ಟಿಸಿಕೊಂಡಿತು. ಈ ನಡುವೆ ಕಲ್ಯಾಣ್ ಸಿಂಗ್, ಸಾಧ್ವಿ ರಿತಂಬರ, ವಿನಯ್ ಕಟಿಯಾರ್, ಉಮಾಭಾರತಿ ಅವರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಬಳಸಿಕೊಂಡು ಬಿಸಾಕಿತು.
ಇಷ್ಟಾಗಿಯೂ ಉಮಾಭಾರತಿಯವರಾಗಲಿ, ಕಲ್ಯಾಣ್ ಸಿಂಗ್ ಆಗಲಿ ಆಯೋಧ್ಯೆ ವಿಷಯದಲ್ಲಿ ತಮ್ಮ ಬದ್ಧತೆಯನ್ನು ಮರೆಯ ಲಿಲ್ಲ.
ಬಾಬರಿ ಮಸೀದಿ ನೆಲಸಮದ ಬಗ್ಗೆ ತನಿಖೆ ನಡೆಸುತ್ತಿದ್ದ ಲಿಬರ್‍ಹಾನ್ ಆಯೋಗದ ಮುಂದೆ 2004, ಡಿಸೆಂಬರ್ 2ರಂದು ಕಲ್ಯಾಣ್ ಸಲ್ಲಿಸಿರುವ 27 ಪುಟದ ಅಫಿಡವಿಟ್ ಅವರ ವ್ಯಕ್ತಿತ್ವಕ್ಕೆ ಕನ್ನಡಿಯಾಗಿದೆ. “1992, ಡಿಸೆಂಬರ್ 6ರಂದು ಏನು ನಡೆಯಿತೋ ಅದು, “Was an act of God”, ಅದರ ಬಗ್ಗೆ ನನ್ನಲ್ಲಿ ಯಾವ ಪಶ್ಚಾತ್ತಾಪ, ದುಃಖ, ನೋವೂ ಇಲ್ಲ” ಎಂದಿದ್ದಾರೆ! “ಗುಲಾಮಗಿರಿ ಹಾಗೂ ಕಳಂಕದ ಸಂಕೇತವಾಗಿದ್ದ ಕಟ್ಟಡವನ್ನು 1992, ಡಿಸೆಂಬರ್ 6ರಂದು ರಾಮಭಕ್ತರು ಹಾಗೂ ದೇಶಭಕ್ತರು ನೆಲಸಮ ಮಾಡಿದ್ದಾರೆ ಎಂದು ಇತಿಹಾಸಕಾರರು ಬರೆಯಲಿದ್ದಾರೆ. ಆ ವಿವಾದಿತ ಕಟ್ಟಡ ರಾಮಮಂದಿರವಾಗಿತ್ತು ಹಾಗೂ ಅದು ಎಂದೆಂದೂ ರಾಮ ಮಂದಿರವೇ ಆಗಿರುತ್ತದೆ” ಎಂದು ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಬಿಜೆಪಿ ರಾಮನನ್ನೇ ಕೈಬಿಟ್ಟಿದೆ. ಆದರೆ ಕಲ್ಯಾಣ್ ಸಿಂಗ್ ಬಿಜೆಪಿಯಿಂದ ದೂರವಾಗಿದ್ದರೂ ರಾಮನ ಮೇಲಿನ ನಿಷ್ಠೆಯನ್ನು ಬದಲಿಸಿಕೊಂಡಿಲ್ಲ. ರಾಜಕೀಯ ಲಾಭಕ್ಕಾಗಿ ಆಡ್ವಾಣಿಯವರಂತೆ ಕಲ್ಯಾಣ್ ಕೂಡ ಮೊಸಳೆ ಕಣ್ಣೀರು ಸುರಿಸಬಹುದಿತ್ತು. ಮುಸ್ಲಿಮರ ಕ್ಷಮೆಯಾಚಿಸಬಹುದಿತ್ತು. ಕಲ್ಯಾಣ್ ಮನಸ್ಸು ಮಾಡಿದ್ದರೆ ಬಾಬರಿ ಮಸೀದಿ ನೆಲಸಮದ ಹಿಂದಿರುವ ಸತ್ಯ ಹಾಗೂ ತೆರೆಮರೆಯ ಕೈಗಳನ್ನು ಬಯಲು ಮಾಡಬಹುದಿತ್ತು. ಕೆಸರೆರಚಾಟಕ್ಕೂ ಕೈಹಾಕ ಬಹುದಿತ್ತು. ಆದರೆ ವೈಯಕ್ತಿಕ ನೋವು, ಬೇಸರ, ಮುನಿಸನ್ನು ರಾಮನ(Cause) ಮೇಲೆ ತೋರಿಸಿಲ್ಲ. ಅಂತಹ ನಿಸ್ವಾರ್ಥರು ಕರ್ನಾಟಕ ಬಿಜೆಪಿಯಲ್ಲೂ ಸಾಕಷ್ಟಿದ್ದಾರೆ. ದುರದೃಷ್ಟವಶಾತ್ ಆಪರೇಶನ್ ಕಮಲದ ಹೆಸರಿನಲ್ಲಿ ಭ್ರಷ್ಟಾತಿಭ್ರಷ್ಟರನ್ನು, ಜಾತಿ ಹುಳು ಗಳನ್ನು ಬಿಜೆಪಿಗೆ ಕರೆತರುತ್ತಿರುವವರಿಗೆ ಪಕ್ಷಕ್ಕಾಗಿ ದುಡಿದವರು, Causeಗಾಗಿ ಜೀವ ತೇದವರು ಬೇಕಿಲ್ಲ.
ಇದೇನೇ ಇರಲಿ, ಸಮಾಜವಾದಿ ಪಕ್ಷದ ಸಂಗ ಮಾಡಿರುವ ಕಲ್ಯಾಣ್ ಸಿಂಗ್‌ಗೆ ಈಗಾಗಲೇ 77 ವರ್ಷ. ಇಟಾದಿಂದ ಲೋಕ ಸಭೆಗೆ ಸ್ಪರ್ಧಿಸಿರುವರಾದರೂ ಕಾಲು ಮುರಿದುಕೊಂಡು ಹಾಸಿಗೆ ಹಿಡಿದಿದ್ದಾರೆ. ಅವರ ರಾಜಕೀಯ ಜೀವನ ಹೆಚ್ಚೂಕಡಿಮೆ ಮುಗಿದಿದೆ. ಬಾಬರಿ ಮಸೀದಿ ನೆಲಸಮದ ಬಗ್ಗೆ ಮತ್ತೆ ಎದ್ದಿರುವ ವಿವಾದದ ನೆಪದಲ್ಲಾದರೂ ಆ ಹಿಂದುಳಿದ ವರ್ಗದ ಹಿಂದೂ ನಾಯಕನನ್ನು ನೆನಪಿಸಿಕೊಳ್ಳಬೇಕೆನಿಸಿತು.
ಅಷ್ಟೇ.
hi pratap,
cool article…..
Thanks for giving complete information on Kalyan Singh.
Hi Pratap,
Thanks for complete information on Kalyan Singh.
hi pratap
nice article……..
ya thats simply true………bjp is not at all as the bjp we have seen earlier……they have changed their mindset according to the situations pakka “SAMAYASADHAKARU” but you did a great work by writing very good article on kalyan singh. This will give the real picture of that great person. thaks
vande bharta mataram
It is disgusting to see the way Sonia gandhi and company pvt.limited (Reg) is trying to project Rahul and Priyanka as the incarnations of Rajiv and Indira. That Priyanka’s nose resembles that of Indira’s or Rahul’s dimple is a replica of Rajiv’s are some examples for this agenda. The other day Priyanka is reported to have worn her grandmother’s saree. So What? Both Priyanka and Rahul are eligible only to become second division clerks in a govt.office, not as PMs. I am waiting for your article on this agenda of Sonia gandhi and Company Pvt.Ltd
Nice article sir………..
its mind blowing, facts based article..
Namaskara sir……..,
” yaruyene andru… kekehakidaru pratasimha pratapasimhane”
thank u for this article
bye sir
supriya
ಒಳà³à²³à³†à²¯ ಲೇಖನ. ಜನಕà³à²•ೆ ಗೊತà³à²¤à²¿à²²à³à²²à²¦, ಸಾಮಾನà³à²¯à²µà²¾à²—ಿ ಗೊತà³à²¤à²¾à²—ದ ವಿಷಯಗಳನà³à²¨à³ ತಿಳಿಸಲೠನೀವೠಮಾಡà³à²¤à³à²¤à²¿à²°à³à²µ ಪà³à²°à²¯à²¤à³à²¨ ಶà³à²²à²¾à²˜à²¨à³€à²¯!
BJP ಕಲà³à²¯à²¾à²£à³ ಸಿಂಗà³, ಸಾಧà³à²µà²¿ ರಿತಂಬರ, ವಿನಯೠಕಟಿಯಾರà³, ಉಮಾà²à²¾à²°à²¤à²¿ ಅವರಂತಹ ಹಿಂದà³à²³à²¿à²¦ ವರà³à²—ಗಳ ನಾಯಕರನà³à²¨à³ ಬಳಸಿಕೊಂಡೠಬಿಸಾಕಿತೠ– this is 100% true Pratap.
This article so was vry close to reality …. hands off ..
Hi Prartap,
Nice article
Thank you sir once again a true story about a karsevak (not a fraud like dvs & bsy )