Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪ್ರತಿಭಾ ದುಬಾರಿ, ಮತ್ತೆ ಬರಲಿ ಕಲಾಂ ಮಾದರಿ!

ಪ್ರತಿಭಾ ದುಬಾರಿ, ಮತ್ತೆ ಬರಲಿ ಕಲಾಂ ಮಾದರಿ!

 

ನಮ್ಮ ಮಾಧ್ಯಮಗಳೇಕೆ ಈ ಪರಿ ನಕಾರಾತ್ಮಕವಾಗಿಬಿಟ್ಟಿವೆ? ಭಾರತೀಯರಾದ ನಾವು ನಮ್ಮ ಶಕ್ತಿ ಸಾಮರ್ಥ್ಯ ಮತ್ತು ಸಾಧನೆಗೇ ಮನ್ನಣೆಕೊಡಲು ಏಕೆ ಹಿಂದೇಟು ಹಾಕುತ್ತೇವೆ? ನಮ್ಮದು ಎಂತಹ ಮಹಾನ್ ದೇಶ, ಅತ್ಯದ್ಭುತ ಸಾಹಸಗಾಥೆಗಳು ನಮ್ಮಲ್ಲಿವೆ. ಆದರೂ ಅವುಗಳನ್ನು ಗುರುತಿಸಲು, ಒಪ್ಪಿಕೊಳ್ಳಲು ನಾವೇಕೆ ಸಿದ್ಧರಿಲ್ಲ? ಹಾಲಿನ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲಿಯೇ ಮುಂದು. ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ವಿಚಾರದಲ್ಲೂ ನಾವು ಜಗತ್ತಿನಲ್ಲಿಯೇ ನಂಬರ್ 1. ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ಅಕ್ಕಿ ಉತ್ಪಾದನೆಯಲ್ಲೂ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ. ಡಾ. ಎಚ್. ಸುದರ್ಶನ್ ಅವರನ್ನು ನೋಡಿ, ಬುಡಕಟ್ಟು ಜನಾಂಗದವರ ಗ್ರಾಮವನ್ನು ಒಂದು ಸ್ವಾವಲಂಬಿ ನಾಡಾಗಿಸಿದ್ದಾರೆ. ಇಂಥ ಕೋಟ್ಯಂತರ ಯಶೋಗಾಥೆಗಳಿವೆ. ಆದರೂ ನಮ್ಮ ಮಾಧ್ಯಮಗಳು ಮಾತ್ರ ಕೆಟ್ಟ ಸುದ್ದಿ, ಕೆಟ್ಟ ವೈಫಲ್ಯ, ಅವಘಡಗಳ ಬಗ್ಗೆ ಆಸಕ್ತಿ, ಗೀಳು ಬೆಳೆಸಿಕೊಂಡಿವೆ. ನಾನೊಮ್ಮೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್್ಗೆ ಹೋಗಿದ್ದೆ. ಅದೇ ದಿನ ಇಸ್ರೇಲ್್ನಾದ್ಯಂತ ಹಲವಾರು ಬಾಂಬ್ ದಾಳಿಗಳು, ದುರ್ಘಟನೆಗಳು ಸಂಭವಿಸಿದ್ದವು. ಸಾಕಷ್ಟು ಜನರ ಸಾವುನೋವುಗಳಾಗಿದ್ದವು. ಹಮಾಸ್  ಸಂಘಟನೆಯ ಭಯೋತ್ಪಾದಕರು ದಾಳಿಗೈದಿದ್ದರು. ಆಶ್ಚರ್ಯವೆಂದರೆ ಮರುದಿನ ಇಸ್ರೇಲಿ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಮೊದಲ ಪುಟದಲ್ಲಿ ಐದು ವರ್ಷಗಳಲ್ಲಿ ಮರುಭೂಮಿಯೊಂದನ್ನು ಹೂದೋಟವಾಗಿಸಿದ್ದ ಯಹೂದಿಯೊಬ್ಬನ ಫೋಟೋವಿತ್ತು. ಬೆಳಗ್ಗೆ ಎದ್ದ ಕೂಡಲೇ ಎಂಥವರಿಗೂ ಪ್ರೇರಣೆ ಕೊಡುವ ಫೋಟೋ ಅದಾಗಿತ್ತು. ಬಾಂಬ್ ಸ್ಫೋಟದ, ಸತ್ತವರ ಚಿತ್ರ ಮತ್ತು ಸುದ್ದಿಗಳು ಒಳಪುಟಗಳಲ್ಲಿ ಇತರೆ ವರದಿಗಳ ಮಧ್ಯೆ ಸೇರಿಹೋಗಿದ್ದವು. ನಮ್ಮ ಭಾರತದಲ್ಲಿ ಸಾವು, ಸಂಕಷ್ಟ, ರೋಗರುಜಿನ, ಆಕ್ರಮಣ, ದಾಳಿಗಳ ಸುದ್ದಿಗಳನ್ನೇ ಮುಖಪುಟದಲ್ಲಿ ಕಾಣುತ್ತೇವೆ.

ನಾವೇಕೆ ಇಷ್ಟೊಂದು ಋಣಾತ್ಮಕ?

 ಮತ್ತೊಂದು ಪ್ರಶ್ನೆ: ನಾವು ಒಂದು ರಾಷ್ಟ್ರವಾಗಿ ಏಕೆ ವಿದೇಶಿ ವಸ್ತುಗಳ ಬಗ್ಗೆ ಮೋಹ ಬೆಳೆಸಿಕೊಂಡಿದ್ದೇವೆ? ನಮಗೆ ವಿದೇಶಿ ಟಿವಿ, ವಿದೇಶಿ ಶರ್ಟ್್ಗಳೇ ಬೇಕು. ಏಕೆ ವಿದೇಶಿ ತಂತ್ರಜ್ಞಾನವೇ ಆಗಬೇಕು? ಎಲ್ಲವೂ ಆಮದು ವಸ್ತುಗಳೇ ಆಗಿರಬೇಕೆಂಬ ಗೀಳೇಕೆ? ಸ್ವಾವಲಂಬನೆಯಿಂದ ಸ್ವಾಭಿಮಾನ ಬರುತ್ತದೆ ಎಂಬುದು ನಮಗೆ ಅರ್ಥವೇ ಆಗುವುದಿಲ್ಲವೆ? ನಾನು ಹೈದರಾಬಾದ್್ನಲ್ಲಿ ಉಪನ್ಯಾಸವೊಂದನ್ನು ಕೊಡುತ್ತಿದ್ದಾಗ, 14 ವರ್ಷದ ಬಾಲಕಿಯೊಬ್ಬಳು ಬಂದು ನನ್ನ ಹಸ್ತಾಕ್ಷರ ಕೇಳಿದಳು. ನಿನ್ನ ಜೀವನದ ಗುರಿಯೇನು ಎಂದು ನಾನವಳನ್ನು ಕೇಳಿದಾಗ, ‘ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬದುಕ ಬಯಸುತ್ತೇನೆ’ ಎಂದಳು. ಅವಳಿಗಾಗಿ ನಾನು ಮತ್ತು ನೀವು ಬಲಿಷ್ಠ ಭಾರತವನ್ನು ಕಟ್ಟಬೇಕು. ಭಾರತ ಹಿಂದುಳಿದ ರಾಷ್ಟ್ರವಲ್ಲ, ಅದೂ ಅತ್ಯಂತ ಮುಂದುವರಿದ ರಾಷ್ಟ್ರ ಎಂದು ನೀವು ಘೋಷಿಸಬೇಕು. ನಿಮ್ಮ ಬಳಿ 10 ನಿಮಿಷ ಕಾಲಾವಕಾಶವಿದೆಯೇ? ಈ ದೇಶಕ್ಕಾಗಿ ನಿಮ್ಮಲ್ಲಿ 10 ನಿಮಿಷ ಸಮಯವಿದೆಯೇ?

ಹಾಗಿದ್ದರೆ ಮಾತ್ರ ಕೇಳಿ, ಇಲ್ಲವಾದರೆ ನಿಮ್ಮಿಷ್ಟ…

ನೀವು ಹೇಳುತ್ತೀರಿ, ನಮ್ಮದು ಅದಕ್ಷ ಸರ್ಕಾರ. ನೀವು ಹೇಳುತ್ತೀರಿ, ನಮ್ಮ ಕಾನೂನುಗಳು ಒಬೀರಾಯನ ಕಾಲದವು. ನೀವು ಹೇಳುತ್ತೀರಿ, ನಮ್ಮ ನಗರಪಾಲಿಕೆಯವರು ಕಸವನ್ನೇ ವಿಲೇವಾರಿ ಮಾಡುವುದಿಲ್ಲ. ನೀವು ಹೇಳುತ್ತೀರಿ, ನಿಮ್ಮ ಮನೆಯ ಫೋನ್ ಹಾಳಾಗಿದೆ, ಮಿಂಚಂಚೆಗಳು ತಲುಪುವುದಿಲ್ಲ. ನೀವು ಹೇಳುತ್ತೀರಿ, ನಮ್ಮ ದೇಶ ನಾಯಿಪಾಲಾಗಿ, ಕೊಚ್ಚೆ ಗುಂಡಿಯಾಗಿದೆ. ನೀವು ಹೇಳುತ್ತೀರಿ, ಹೇಳುತ್ತಲೇ ಇರುತ್ತೀರಿ. ಆದರೆ ಅದನ್ನು ಸರಿಪಡಿಸಲು ನೀವೇನು ಮಾಡುತ್ತಿದ್ದೀರಿ?

ಇಂಥ ಭಾಷಣ ಕೇಳಿ 5 ವರ್ಷಗಳೇ ಕಳೆದವು ಅಲ್ವಾ?

2007, ಜುಲೈ 24ರಂದು ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಭವನವನ್ನು ತೊರೆದ ನಂತರ ಒಂದು ಪ್ರೇರಕ ಶಕ್ತಿಯೇ ಹೊರಟು ಹೋದಂತಾಯಿತು. ಹೊಸ ಸರ್ಕಾರಗಳು ರಚನೆಯಾಗುವಾಗ, ಹಾಲಿ ಸರ್ಕಾರ ಸಂಕಷ್ಟಕ್ಕೆ ಸಿಕ್ಕಾಗ, ಬಿದ್ದುಹೋಗುವಾಗ ಮಾತ್ರ ಸುದ್ದಿಯಾಗುತ್ತಿದ್ದ, ಉಳಿದಂತೆ ಭೂತಬಂಗಲೆಯಂತಿರುತ್ತಿದ್ದ ರಾಷ್ಟ್ರಪತಿ ಭವನವನ್ನೂ ಚಟುವಟಿಕೆಯ ಕೇಂದ್ರವಾಗಿಸಿದ, ದೇಶವಾಸಿಗಳು ತಮ್ಮ ನೋವನ್ನು ಆಲಿಸುವ ದೈವವೊಂದಿದೆ ಎಂಬಂತೆ ರಾಷ್ಟ್ರಪತಿ ಭವನದತ್ತ ಮುಖಮಾಡುವಂತೆ ಮಾಡಿದ ವ್ಯಕ್ತಿ ಕಲಾಂ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಸ್. ರಾಧಾಕೃಷ್ಣನ್ ಹೊರತುಪಡಿಸಿ ರಾಷ್ಟ್ರಪತಿಯೊಬ್ಬರ ಹೆಸರು ರಾಷ್ಟ್ರವಾಸಿಗಳ ನಾಲಗೆ ತುದಿಯಲ್ಲಿ ಹರಿದಾಡಿದ್ದರೆ ಅದು ಕಲಾಂ ಬಿಟ್ಟರೆ ಬೇರಾರದ್ದು ಹೇಳಿ ನೋಡೋಣ? ಈ ದೇಶದ ಉದ್ದಗಲವನ್ನು ಕಲಾಂ ಕ್ರಮಿಸಿದಷ್ಟು ಯಾರು ತಿರುಗಿದ್ದಾರೆ? ರಾಷ್ಟ್ರಪತಿಗಳನ್ನು ಬಿಡಿ, ಪ್ರಧಾನಿ ಮನಮೋಹನ್ ಸಿಂಗ್ ಕಳೆದ 8 ವರ್ಷಗಳಲ್ಲಿ ಕಲಾಂರಷ್ಟು ದೇಶ ಪರಿಕ್ರಮಣ ಮಾಡಿದ್ದಾರೆಯೇ? ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ಪದ್ಮಾ ಅವಾರ್ಡ್್ಗಳ ಪ್ರಧಾನ ಸಮಾರಂಭ, ಆರ್ಜುನ್, ದ್ರೋಣಾಚಾರ್ಯ, ರಾಜೀವ್ ಖೇಲ್್ರತ್ನ ಮುಂತಾದ ಪ್ರಶಸ್ತಿಗಳನ್ನು ಕೊಡಮಾಡುವಾಗ, ಗಣರಾಜ್ಯೋತ್ಸವದ ದಿನ, ಸಂಸತ್ ಅಧಿವೇಶನದ ಆರಂಭ ದಿನ ಮಾತ್ರ ಈ ನಮ್ಮ ಸೋಕಾಲ್ಡ್ ರಾಷ್ಟ್ರಪತಿಗಳು ದೇಶವಾಸಿಗಳಿಗೆ ತಮ್ಮ ಮುಖದರ್ಶನ ಮಾಡಿಸುತ್ತಾರೆ. ಆದರೆ ಕಲಾಂ ರಾಷ್ಟ್ರಪತಿ ಭವನ ತೊರೆದು 5 ವರ್ಷಗಳಾಗುತ್ತಾ ಬಂದಿದ್ದರೂ ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದಾರೆ, ಹೆಚ್ಚು ಕ್ರಿಯಾಶೀಲರಾಗಿದ್ದಾರೆ, ಆ ಕಾರಣಕ್ಕೆ ಹಾಲಿ ರಾಷ್ಟ್ರಪತಿ, ಪ್ರಧಾನಿಗಿಂತಲೂ ಅತಿ ಹೆಚ್ಚು ಕಾರ್ಯಕ್ರಮಗಳಿಗೆ ಆಹ್ವಾನಿತರಾಗುತ್ತಾರೆ. ಇದು ಏನನ್ನು ಸೂಚಿಸುತ್ತದೆ? ಒಬ್ಬ ರಾಷ್ಟ್ರಪತಿಯಾದವರು ಹೇಗಿರಬೇಕು ಹಾಗು ಪ್ರತಿಭಾ ಪಾಟೀಲ್ ಹೇಗಿದ್ದರು? ಸ್ವಂತ ಮಗ ಹಾಗು ಸಂಬಂಧಿಕರೇ ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಾಗ ನೈತಿಕ ಸ್ಥೈರ್ಯ ಎಲ್ಲಿಂದ ತಾನೇ ಬಂದೀತು? ಹಾಗಾಗಿಯೇ ಕೇಂದ್ರದಲ್ಲಿ ಹಗರಣಗಳ ನಂತರ ಹಗರಣಗಳು ಸಂಭವಿಸುತ್ತಿದ್ದರೂ, ದೇಶದ ಮರ್ಯಾದೆ ಹರಾಜಾಗುತ್ತಿದ್ದರೂ ರೋಮ್ ಹೊತ್ತಿ ಉರಿಯುದ್ದರೆ ರಾಜ ನೀರೋ ಪೀಟಿಲು ಕುಯ್ಯುತ್ತಿದ್ದ ಎಂಬಂತೆಯೇ ಪ್ರತಿಭಾ ಪಾಟೀಲರಿದ್ದರು. ದೇಶದ ಬೊಕ್ಕಸಕ್ಕೆ 205ಕೋಟಿ ನಷ್ಟ ಉಂಟುಮಾಡಿದ ಪಾಟೀಲರ ಪ್ರತಿಭೆಗೂ ಕಲಾಂಗೂ ಅದೆಷ್ಟು ಅಂತರ ಅಲ್ಲವೇ?

ಕಳೆದ ಐದು ವರ್ಷಗಳಲ್ಲಿ ರಾಷ್ಟ್ರಪತಿ ಎಂಬವರೊಬ್ಬರಿದ್ದಾರೆ ಎಂದು ನಿಮಗನಿಸಿತ್ತೇ ಹೇಳಿ?

ಇತ್ತೀಚೆಗೆ ಸಂಸತ್್ನ ಬಜೆಟ್ ಅಧಿವೇಶನ ಆರಂಭವಾದ ದಿನ ಬೆಳಗ್ಗೆ ಪತ್ರಿಕೆಗಳನ್ನು ತೆರೆದಾಗ ‘ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ಇಂದು ಕಡೇ ಭಾಷಣ’ ಎಂಬ ಸುದ್ದಿಯೊಂದಿತ್ತು. ಮುಂಬರುವ ಜುಲೈ 24ರಂದು ಪ್ರತಿಭಾ ಪಾಟೀಲ್ ಅವರ ಕಾರ್ಯಾವಧಿ ಪೂರ್ಣಗೊಳ್ಳಲಿದ್ದು, ಜುಲೈ 25ಕ್ಕೆ ಹೊಸ ರಾಷ್ಟ್ರಪತಿ ಪದಗ್ರಹಣ ಮಾಡಲಿದ್ದಾರೆ. ಗ್ಝಿಝಿ ಜ್ಡಜ ್ಠಜಡಠಜ್ಛಡಿ ಡ್ಟಿ  ಪ್ರತಿಭಾ ಪಾಟೀಲ್, ಆ ಸುದ್ದಿ ಕೊಂಚ ನಿರಾಳ, ಹೊಸ ಆಶಾಭಾವನೆಯನ್ನು ಖಂಡಿತ ಹುಟ್ಟುಹಾಕಿದೆ. ಅದಕ್ಕೆ ಪೂರ್ವಭಾವಿಯಾಗಿ ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೇರಿದ್ದು ಇಂಥದ್ದೊಂದು ಆಶಾಭಾವನೆಯ ಉಗಮಕ್ಕೆ ಕಾರಣವಾಗಿದೆ.

ಏಕೆ ಗೊತ್ತಾ?

ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಕಾಂಗ್ರೆಸ್ ಬಹಳ ಭರವಸೆ ಇಟ್ಟುಕೊಂಡಿತ್ತು. ಮುಸ್ಲಿಮರಿಗೆ ವಿಶೇಷ ಮೀಸಲಾತಿ ನೀಡುವ ಭರವಸೆ ನೀಡಿದ ಕಾಂಗ್ರೆಸ್, ಶೇ.18ರಷ್ಟಿರುವ ಮುಸ್ಲಿಂ ಮತಗಳು ತನಗೆ ಸಾರಾಸಗಟಾಗಿ ದೊರೆತರೆ ಎಸ್ಪಿ, ಬಿಎಸ್ಪಿ, ಬಿಜೆಪಿ ಸೇರಿದ ಚತುಷ್ಕೋನ ಸ್ಪರ್ಧೆಯಲ್ಲಿ ತಾನೇ ಅಧಿಕಾರ ಹಿಡಿಯಬಹುದು ಎಂದು ಅದು ಭಾವಿಸಿತ್ತು. ಒಂದು ವೇಳೆ, ಲೆಕ್ಕಾಚಾರಗಳು ತಲೆಕೆಳಗಾಗಿ ಸಮಾಜವಾದಿ ಪಕ್ಷ 125ರಿಂದ 150 ಸ್ಥಾನಗಳನ್ನು ಗಳಿಸಬಹುದು, ತಾನು 100ರ ಗಡಿದಾಟಿ ಕನಿಷ್ಠ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇನೆ ಹಾಗೂ ಎಸ್ಪಿ ಸರ್ಕಾರ ರಚನೆಗೆ ತನ್ನ ಬೆಂಬಲದ ಅಗತ್ಯ ಎದುರಾಗಿಯೇ ಆಗುತ್ತದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಇಟ್ಟುಕೊಂಡಿತ್ತು. ಅದರ ಜತೆಗೆ ತಾನು 100ರ ಗಡಿ ದಾಟಿ, ಬಿಎಸ್ಪಿಯೂ 100ರ ಆಸುಪಾಸಿಗೆ ಬಂದರೂ ಅದರ ಬೆಂಬಲ ಪಡೆದು ತಾನು ಸರ್ಕಾರ ರಚಿಸಬಹುದು. ಅದು ವ್ಯತ್ಯಾಸವಾದರೂ ಎಸ್ಪಿ, ಬಿಎಸ್ಪಿ ಯಾವುದೇ ಪಕ್ಷಗಳು ಸರ್ಕಾರ ರಚಿಸಬೇಕಾದರೂ ತನ್ನ ಬೆಂಬಲ ಬೇಕೇ ಬೇಕಾಗುತ್ತದೆ ಎಂದುಕೊಂಡಿತ್ತು. ಆಗ ಉಪದ್ರವ ಕೊಡುತ್ತಿರುವ ತೃಣಮೂಲ ಕಾಂಗ್ರೆಸ್್ನ ಮಮತಾ ಬ್ಯಾನರ್ಜಿಯವರಿಗೆ ಸಡ್ಡು ಹೊಡೆಯಬಹುದು. ಅವರು ಬೆಂಬಲ ಹಿಂತೆಗೆದುಕೊಂಡರೂ ಎಸ್ಪಿ, ಬಿಎಸ್ಪಿಗಳು ಅನಿವಾರ್ಯವಾಗಿ ಬೆಂಬಲ ಕೊಟ್ಟೇ ಕೊಡುತ್ತವೆ ಎಂಬ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಮತದಾರನ ಯೋಚನೆಯೇ ಬೇರೆಯಾಗಿತ್ತು. ಎಸ್ಪಿಗೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಬೇಕಾದ ಬಹುಮತ ದೊರೆತಿದ್ದಲ್ಲದೆ, ಕಾಂಗ್ರೆಸ್ ಸಾಧನೆ ಕಳೆದ ಚುನಾವಣೆಗಿಂತಲೂ ಕಳಪೆಯಾಯಿತು. ಆದಕಾರಣ ಮಮತಾ ಬ್ಯಾನರ್ಜಿಯವರ ಕಾಲು ಹಿಡಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ಮಮತಾ ಮಾತ್ರ ಯುಪಿಎಯಿಂದ ಕಾಲು ತೆಗೆಯಲು ತವಕಿಸುತ್ತಲೇ ಇದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಭೂತಪೂರ್ವ ಗೆಲುವು ಕೇಂದ್ರ ರಾಜಕೀಯದಲ್ಲಿ ಹೊಸ ಹೊಂದಾಣಿಕೆಗಳಿಗೆ ದಾರಿಮಾಡಿಕೊಡುವ ಎಲ್ಲ ಲಕ್ಷಣ ತೋರುತ್ತಿದೆ. ಅದರಲ್ಲೂ ಮಾರ್ಚ್ 6ರ ಫಲಿತಾಂಶ ಯಾರಿಗಾದರೂ ಅಪಾಯ ತಂದೊಡ್ಡಿದ್ದರೆ ಅದು ಯುಪಿಎ ಸರ್ಕಾರಕ್ಕೆ. ಈ ಮಧ್ಯೆ, ಕೇಂದ್ರ ರೇಲ್ವೆ ಬಜೆಟ್ ಹಾಗೂ ಪ್ರಯಾಣ ದರ ಹೆಚ್ಚಳದ ಬಗ್ಗೆ ಮಮತಾ ಬ್ಯಾನರ್ಜಿ ಸುಖಾಸುಮ್ಮನೆ ಅಪಸ್ವರ ಎತ್ತಿರುವುದರ ಹಿಂದೆಯೂ ಬೇರೆಯದ್ದೇ ಲೆಕ್ಕಾಚಾರಗಳಿವೆ. ಕಳೆದ ಫೆಬ್ರವರಿಯಲ್ಲಿ ಹೊರಬಿದ್ದ ‘ಇಂಡಿಯಾ ಟುಡೆ’ ಸಮೀಕ್ಷೆ ಕೂಡ, ಒಂದು ವೇಳೆ ಈಗಲೇ ಸಾರ್ವತ್ರಿಕ ಚುನಾವಣೆಗಳು ನಡೆದರೆ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳು ಅತಿ ಹೆಚ್ಚು ಸ್ಥಾನ ಗಳಿಸುತ್ತವೆ ಎಂದಿದೆ. ಅದರ ಬೆನ್ನಲ್ಲೇ ರಾಷ್ಟ್ರೀಯ ಉಗ್ರ ನಿಗ್ರಹ ಕೇಂದ್ರ (ಃಈಖಿಈ) ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೃತೀಯ ರಂಗ ರಚನೆಯ ಅಗತ್ಯದ ಬಗ್ಗೆ ಮಾತನಾಡಿದ್ದಾರೆ.  ಃಈಖಿಈಗೆ ವಿರೋಧ ವ್ಯಕ್ತಪಡಿಸುವ ಮೂಲಕ ತೃಣಮೂಲ ಕಾಂಗ್ರೆಸ್ ಕೂಡ ವಿರೋಧಿ ಪಾಳಯವನ್ನು ಸೇರಿದೆ. ಅಖಿಲೇಶ್ ಯಾದವ್ ಕೂಡ ತೃತೀಯ ರಂಗ ರಚನೆಯ ಬಗ್ಗೆ ಆಸಕ್ತಿ ತೋರಿದ್ದಾರೆ. ಲಂಕಾ ಯುದ್ಧ ದೌರ್ಜನ್ಯಗಳನ್ನು ಕೈಗೆತ್ತಿಕೊಂಡು ಜಯಲಲಿತಾ ಕೂಡ ಕೇಂದ್ರದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದ್ದಾರೆ. ಒಟ್ಟಾರೆಯಾಗಿ ನೋಡಿದರೆ ಮುಲಾಯಂ, ಮಮತಾ, ಜಯಲಲಿತಾ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್ ಮುಂತಾದ ಬಲಿಷ್ಠ ವ್ಯಕ್ತಿಗಳು ಒಟ್ಟು ಸೇರಿ ತೃತೀಯ ರಂಗ ರಚನೆಗೆ ಮುಂದಾಗುವ ಎಲ್ಲ ಸಾಧ್ಯತೆಗಳೂ ಇವೆ. ಇದರ ಮೊದಲ ಸಂಕೇತ ಹೊರಬೀಳುವುದು ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ. ಹೊಸ ರಾಷ್ಟ್ರಪತಿ ಯಾರಾಗಬೇಕೆಂಬ ವಿಷಯದಲ್ಲಿ ಕಾಂಗ್ರೆಸ್್ನ ಯುಪಿಎ ಆಗಲಿ, ಬಿಜೆಪಿಯ ಎನ್್ಡಿಎ ಆಗಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಲಿ, ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕಾಗಲಿ ಸಾಧ್ಯವಿಲ್ಲ. ಮಮತಾ ದೂರ ಸರಿದರೆ ಸಂಸತ್ತಿನ ಎರಡೂ ಸದನಗಳಲ್ಲಿ ಕಾಂಗ್ರೆಸ್್ನ ಬಹುಮತವಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ತೃತೀಯ ರಂಗ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲೂಬಹುದು, ಗೆಲುವನ್ನೂ ಸಾಧಿಸಬಹುದು. ಆ ಕಾರಣಕ್ಕಾಗಿಯೇ ಹೊಸ ಭರವಸೆ ಮೂಡಿದೆ.

ಒಂದು ವೇಳೆ, ತೃತೀಯ ರಂಗ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾದರೆ ಅವರು ಯಾರಾಗಬಹುದು?

2002ರಲ್ಲಿ ಎನ್್ಡಿಎ ಅಬ್ದುಲ್ ಕಲಾಂ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರೂ ಕಲಾಂ ಹೆಸರನ್ನು ಮೊದಲು ತೇಲಿಬಿಟ್ಟಿದ್ದೇ ಮುಲಾಯಂ ಸಿಂಗ್ ಯಾದವ್! ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಖುಷಿಯಿಂದಲೇ ಕಲಾಂ ಅವರನ್ನು ಒಪ್ಪಿಕೊಂಡರು. ಐಟಿಜಿಛ್ಛಡಿ, 1998ರಲ್ಲಿ ನಡೆದ ಪೋಖ್ರಾನ್ ಅಣುಪರೀಕ್ಷೆಯ ನೇತೃತ್ವವನ್ನು ಕಲಾಂಗೆ ವಹಿಸಿದ್ದೇ ವಾಜಪೇಯಿ. ಎರಡನೇ ಬಾರಿಗೆ ಮತ್ತೆ ರಾಷ್ಟ್ರಪತಿಯಾಗಬೇಕೆಂದು ಸಾರ್ವಜನಿಕವಾಗಿ ಇಚ್ಛೆ ಹೊರಹಾಕಿದ್ದ ಕೆ.ಆರ್. ನಾರಾಯಣನ್, ಕಣಕ್ಕಿಳಿಯದೇ ಇರುವ ನಿರ್ಧಾರ ತೆಗೆದುಕೊಂಡಿದ್ದೇ ಮುಲಾಯಂ ಕಲಾಂಗೆ ಬೆಂಬಲ ವ್ಯಕ್ತಪಡಿಸಿದ ನಂತರ. ಈಗ ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೇರುವುದರೊಂದಿಗೆ ಮುಲಾಯಂ ಕೈ ಬಲಗೊಂಡಿದೆ. ಮಮತಾ, ಸಮಾಜವಾದಿ ಪಕ್ಷ, ತೆಲುಗುದೇಶಂನ ಚಂದ್ರಬಾಬು ನಾಯ್ಡು ಎಲ್ಲರಿಗೂ ಮುಸ್ಲಿಂ ಮತಗಳು ಬೇಕು. ಹಾಗಾಗಿ ಅವರು ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಮೂಲಕ ಮುಸಲ್ಮಾನರನ್ನು ಮೆಚ್ಚಿಸಲು ಮುಂದಾಗುತ್ತಾರೆ. ಅಂಥ ಸಂದರ್ಭದಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ಕಲಾಂಗಿಂತ ಬೇರಿನ್ನಾರಿದ್ದಾರೆ? ಕಳೆದ ಭಾರಿ ಬಿಜೆಪಿ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಕಣಕ್ಕಿಳಿಸುವ ಮೂರ್ಖತನ ತೋರದೆ ಕಲಾಂ ಅವರನ್ನೇ ಮುಂದುಮಾಡಿದ್ದರೆ ಆಗಲೇ ಎರಡನೇ ಸಲಕ್ಕೆ ರಾಷ್ಟ್ರಪತಿಯಾಗಿರುತ್ತಿದ್ದರು. ಇದೇನೇ ಇರಲಿ, ಒಂದು ವೇಳೆ ಕಲಾಂರನ್ನು ತೃತೀಯ ರಂಗ ಕಣಕ್ಕಿಳಿಸಲು ಮುಂದಾದರೆ ಕಾಂಗ್ರೆಸ್ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ಮುಂದುಮಾಡಬಹುದು. ಹಮೀದ್ ಅನ್ಸಾರಿ ಕೂಡ ಯೋಗ್ಯ ವ್ಯಕ್ತಿಯೇ. ಆದರೆ ಕಳೆದ 5 ವರ್ಷಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಕಲಾಂ ಅನುಪಸ್ಥಿತಿ ಕಾಡಿದಷ್ಟು ಯಾರೂ ನಮ್ಮನ್ನು ಕಾಡಿಲ್ಲ. ಕಲಾಂ ಈ ದೇಶದ ರಾಷ್ಟ್ರಪತಿ ಎಂದು ಹೇಳಿಕೊಳ್ಳುವುದಕ್ಕೇ ಹೆಮ್ಮೆಯೆನಿಸುತ್ತದೆ. ಮುಲಾಯಂ, ಮಮತಾ, ಜಯಲಲಿತಾ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್ ಕಲಾಂ ಅವರನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತಾಗಲಿ, ಆಗ ಬಿಜೆಪಿ ಬೆಂಬಲವೂ ದೊರಕುತ್ತದೆ, ದೇಶದ ಪ್ರೇರಕ ಶಕ್ತಿ ಮತ್ತೆ ರಾಷ್ಟ್ರಪತಿ ಭವನ ಸೇರುತ್ತದೆ.

Bring Back Kalam!

52 Responses to “ಪ್ರತಿಭಾ ದುಬಾರಿ, ಮತ್ತೆ ಬರಲಿ ಕಲಾಂ ಮಾದರಿ!”

  1. abhilash says:

    realy tru sir

  2. narasimha hk says:

    ಶ್ರೀ ಕಲಾಂ ರವರು ಮತ್ತೊಮ್ಮೆ ರಾಷ್ಟ್ರಪತಿ ಆಗುವದು ಈ ದೇಶಕ್ಕೆ ಒಳ್ಳೆಯದು