Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕುರುಡಾಗಿರುವುದು ನ್ಯಾಯವೋ, ನ್ಯಾಯದಾನ ಮಾಡುವವರೋ?

ಕುರುಡಾಗಿರುವುದು ನ್ಯಾಯವೋ, ನ್ಯಾಯದಾನ ಮಾಡುವವರೋ?

lawyers
“ವಕೀಲರಿಂದ ನ್ಯಾಯಾಲಯಗಳ ಕಲಾಪ ಬಹಿಷ್ಕಾರ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನಕರನ್ ವಿರುದ್ಧ ಅವಾಚ್ಯ ಪದಗಳ ನಿಂದನೆ, ನ್ಯಾಯಮೂರ್ತಿ ವಿ. ಗೋಪಾಲಗೌಡರ ಮೇಲೆ ಹಲ್ಲೆ, ಕಲಾಪಕ್ಕೂ ಅಡ್ಡಿ, ತಳ್ಳಾಟ- ನೂಕಾಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ….” ಇಂತಹ ಮುಖಪುಟದ ವರದಿಗಳು, “ನ್ಯಾಯ ಕುರುಡಾಯಿತು”, “ಗೂಂಡಾಗಿರಿ”, “ಜಡ್ಜ್‌ಗಳ ಮೇಲೆ ವಕೀಲರ ಹಲ್ಲೆ”, “ನ್ಯಾಯ ಮೂರ್ತಿಗೇ ಗೂಸಾ”, ಮುಂತಾದ ಶೀರ್ಷಿಕೆಗಳನ್ನು ನೋಡಿದ ನೀವು ನಮ್ಮ ಕರ್ನಾಟಕ ಹೈಕೋರ್ಟ್ ವಕೀಲರೆಂದರೆ ಖಂಡಿತ ಗೂಂಡಾಗಳು ಎಂಬ ನಿರ್ಧಾರಕ್ಕೆ ಬಂದಿರಬಹುದಲ್ಲವೆ?! ಎಲ್ಲರೂ ವಕೀಲರನ್ನು, ವಕೀಲರ ಸಂಘವನ್ನು ದೂರುತ್ತಿದ್ದಾರೆ. ನ್ಯಾಯಾಂಗಕ್ಕೆ ಕಳಂಕ ಅಂಟಿಸಿದರು ಎಂಬಂತೆ ವಕೀಲರನ್ನು ಚಿತ್ರಿಸುತ್ತಿದ್ದಾರೆ.

ಅಂತಹ ಯಾವ ತಪ್ಪು ಕಳೆದ ಸೋಮವಾರ ನಡೆದುಹೋಯಿತು? ನ್ಯಾಯಾಂಗಕ್ಕೇ ಕಳಂಕ ತರುವಂತಹ ಅದ್ಯಾವ ತಪ್ಪನ್ನು ವಕೀಲರು ಮಾಡಿದ್ದಾರೆ? ಸೋಮವಾರ ನಡೆದ ಘಟನೆಗೆ ಮೂಲತಃ ಯಾರು ಕಾರಣ? ವಕೀಲರೋ, ನ್ಯಾಯಾಧೀಶರೋ? ಗಲಾಟೆ ಆರಂಭವಾಗಿ ದ್ದಾದರೂ ಏಕೆ?

1. ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್, 2. ಪಂಜಾಬ್-ಹರ್ಯಾಣ ಹೈಕೋರ್ಟ್ ಮು.ನ್ಯಾ. ಟಿ.ಎಸ್. ಠಾಕೂರ್, 3. ಕೋಲ್ಕತಾ ಹೈಕೋರ್ಟ್ ಮು.ನ್ಯಾ. ಎಸ್.ಎಸ್. ನಿಜ್ಜರ್, 4. ಗುಜರಾತ್ ಹೈಕೋರ್ಟ್ ಮು.ನ್ಯಾ. ಕೆ.ಎಸ್. ರಾಧಾಕೃಷ್ಣನ್ ಹಾಗೂ 5. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್.

ಈ ಐವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಶಿಫಾರಸು ಮಾಡಲಾಯಿತು. ಅದರ ಬೆನ್ನಲ್ಲೇ ಅಕ್ರಮ ಆಸ್ತಿ ಗಳಿಕೆ ಆರೋಪ ಪಿ.ಡಿ. ದಿನಕರನ್ ಅವರನ್ನು ಪೀಡಿಸತೊಡಗಿತು. ದಿನಕರನ್ ಈ ಹಿಂದೆ ನ್ಯಾಯಾಧೀಶ ರಾಗಿ ಸೇವೆ ಸಲ್ಲಿಸುತ್ತಿದ್ದ ಮದ್ರಾಸ್ ಹೈಕೋರ್ಟ್‌ನ ವಕೀಲರ ಸಂಘ ಬಡ್ತಿ ನೀಡದಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಅವರಿಗೆ ಮನವಿ ಮಾಡಿಕೊಂಡಿತು. ರಾಮ್ ಜೇಠ್ಮಲಾನಿ, ಫಾಲಿ ನಾರಿಮನ್, ಶಾಂತಿಭೂಷಣ್, ಅನಿಲ್ ದಿವಾನ್ ಮುಂತಾದ ಪ್ರತಿಷ್ಠಿತ ವಕೀಲರೂ ದಿನಕರನ್‌ಗೆ ಬಡ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಾಗಾಗಿ ಬಡ್ತಿಗೆ ಶಿಫಾರಸು ಮಾಡಿದ್ದ ಸುಪ್ರೀಂಕೋರ್ಟ್ ಸಮಿತಿಯೇ, ತಿರುನಲ್ಲೂರು ಜಿಲ್ಲಾಧಿಕಾರಿಗೆ ಆರೋಪದ ಬಗ್ಗೆ ಪರಾಮರ್ಶೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತು. ದಿನಕರನ್ ತಿರುನಲ್ಲೂರು ಜಿಲ್ಲೆಯಲ್ಲಿ 500 ಎಕರೆಗೂ ಹೆಚ್ಚು ಜಮೀನು ಹೊಂದಿರುವುದು ಮೇಲ್ನೋಟಕ್ಕೆ ತಿಳಿದುಬಂತು. ದಿನಕರನ್‌ಗೆ ಬಡ್ತಿ ನೀಡುವ ವಿಚಾರದ ಬಗ್ಗೆ ಮರು ಆಲೋಚನೆ ಮಾಡಲೇಬೇಕಾಯಿತು. ಈ ಮಧ್ಯೆ, ತಮಿಳುನಾಡು ವಕೀಲರು ಉಗ್ರ ಪ್ರತಿಭಟನೆಯನ್ನೂ ಮಾಡಿದರು. ಹೀಗೆ ಕ್ರಮ ತೆಗೆದುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ್ದ ಮುಖ್ಯನಾಯಮೂರ್ತಿ ಬಾಲಕೃಷ್ಣನ್, ಉಳಿದ ನಾಲ್ವರಿಗೆ ಮಾತ್ರ ಬಡ್ತಿ ನೀಡಿರುವ ಹಾಗೂ ದಿನಕರನ್ ಬಡ್ತಿ ಯನ್ನು ತಡೆಹಿಡಿದಿರುವ ವಿಚಾರವನ್ನು ಮೊನ್ನೆ ನವೆಂಬರ್ 1ರಂದು ಪತ್ರಕರ್ತರ ಮುಂದೆ ಪರೋಕ್ಷ ವಾಗಿ ಒಪ್ಪಿಕೊಂಡರು.

ಇಷ್ಟಾಗಿಯೂ ದಿನಕರನ್ ಮಾತ್ರ ಎಂದಿನಂತೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯಭಾರ ಮುಂದುವರಿಸಿದರು!!

ಈ ಹಿನ್ನೆಲೆಯಲ್ಲಿ ನವೆಂಬರ್ 4ರಂದು ಸಭೆ ನಡೆಸಿದ ನಮ್ಮ ಬೆಂಗಳೂರು ವಕೀಲರ ಸಂಘ, ‘ನ್ಯಾಯಾಂಗ ಯಾವತ್ತೂ ಅನುಮಾನ, ಅಪನಂಬಿಕೆಗಳಿಂದ ಮುಕ್ತವಾಗಿರಬೇಕು. ಗಂಭೀರ ಆರೋಪಕ್ಕೊಳಗಾಗಿದ್ದರೂ ಮುಖ್ಯನ್ಯಾಯಮೂರ್ತಿ ದಿನಕರನ್ ಅವರು ಕಲಾಪ ಮುಂದುವರಿಸುತ್ತಿರುವುದು ಉಚಿತವಲ್ಲ. ಆ ಕಾರಣಕ್ಕಾಗಿ ನವೆಂಬರ್ 9, ಸೋಮವಾರದಂದು ಕಲಾಪ ಬಹಿಷ್ಕರಿಸಿ ಮುಖ್ಯನ್ಯಾಯಮೂರ್ತಿಯವರ ಧೋರಣೆಗೆ ವಿರೋಧ ವ್ಯಕ್ತಪಡಿಸುವ ನಿರ್ಧಾರವನ್ನು ನಿಲುವಳಿ ಅಂಗೀಕಾರದ ಮೂಲಕ ಕೈಗೊಂಡಿತು’. ಅದಕ್ಕೂ ಮೊದಲು, ಅಂದರೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಬೆನ್ನಲ್ಲೇ ಎರಡು ಬಾರಿ ಸಭೆ ಸೇರಿದ್ದ ವಕೀಲರ ಸಂಘ, ‘ಆರೋಪಮುಕ್ತರಾಗುವವರೆಗೂ ಕಲಾಪದಿಂದ ದೂರವಿರಿ’ ಎಂದು ದಿನಕರನ್‌ಗೆ ಸಭ್ಯವಾಗಿಯೇ ಮನವಿ ಮಾಡಿಕೊಂಡಿತ್ತು. ಅವರ ಮನವಿಗೆ ಯಾವ ಬೆಲೆಯೂ ಸಿಗದೇ ಹೋಗಿದ್ದು ಹಾಗೂ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಬಡ್ತಿಯನ್ನು ತಡೆಹಿಡಿದ ನಂತರವೂ ದಿನಕರನ್ ಕಲಾಪ ಮುಂದುವರಿಸಿದ್ದು ಸಹಜವಾಗಿಯೇ ವಕೀಲರಿಗೆ ಬೇಸರ ತಂದಿತು. ಒಂದು ದಿನ ಕಲಾಪ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದು ಈ ಕಾರಣಕ್ಕಾಗಿಯೇ. ಆದರೆ ವಕೀಲರ ಸಂಘ ಕಲಾಪ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡ ಸುದ್ದಿ ಹೊರಬೀಳುತ್ತಲೇ ಎಂ.ಪಿ. ಗುಂಡಪ್ಪ ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಎದ್ದುಬಂದ! “ನನ್ನ ಪ್ರಕರಣದ ವಿಚಾರಣೆ ಸೋಮವಾರ ಇದ್ದು, ವಕೀಲರು ಕಲಾಪ ಬಹಿಷ್ಕರಿಸುವುದರಿಂದ ಸಾರ್ವಜನಿಕರಿಗೆ ಅನನುಕೂಲವಾಗುತ್ತದೆ”ಎಂದು ಏಕನ್ಯಾಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ!! (ಎಂ.ಪಿ. ಗುಂಡಪ್ಪ. ರಿಟ್ ಪಿಟಿಶನ್ ನಂಬರ್ 32599/2009). ಆ ಅರ್ಜಿ ಶುಕ್ರವಾರ(ನವೆಂಬರ್ 6) ಮಧ್ಯಾಹ್ನ ವಿಚಾರಣೆಗೆ ಬಂತು. ಅದನ್ನು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ’ (PIL) ಎಂದು ಪರಿಗಣಿಸಲಾಯಿತು. ಸಾಮಾನ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುವುದು ವಿಭಾಗೀಯ ಪೀಠ. ಹಾಗಾಗಿ ಗುಂಡಪ್ಪ ಹಾಕಿದ ಅರ್ಜಿ ವಿಚಾರಣೆ ಗೆಂದೇ ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ವನ್ನು ರಚನೆ ಮಾಡಲಾಯಿತು. ಶನಿವಾರ(ನ. 7) ಬೆಳಗ್ಗೆ 10 ಗಂಟೆಗೆ ವಿಚಾರಣೆ ಆರಂಭಿಸಿದ ಈ ಪೀಠ, ಹೈಕೋರ್ಟ್ ಕಲಾಪ ಬಹಿಷ್ಕರಿಸುವ ವಕೀಲರ ಸಂಘದ ನಿರ್ಣಯಕ್ಕೆ ತಡೆಯಾe ನೀಡಿತು!!

ಏಕನ್ಯಾಯಪೀಠದ ಮುಂದೆ ಗುಂಡಪ್ಪನವರ ಅರ್ಜಿ ವಿಚಾರಣೆಗೆ ಬಂದಿದ್ದು ನವೆಂಬರ್ 6ರ ಮಧ್ಯಾಹ್ನ. ಅದನ್ನು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ’ ಎಂದು ಪರಿಗಣಿಸಿ, ವಿಭಾಗೀಯ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದಾದರೂ ಆರ್ಡರ್ ಟೈಪ್ ಆಗಿ ಪ್ರಕಟವಾಗುವ ವೇಳೆಗೆ ಸಂಜೆ 6.45 ಗಂಟೆ ಕಳೆದಿತ್ತು! ಅದು ಅರ್ಜಿದಾರನಿಗೆ ಸಿಗಬೇಕು. ತದನಂತರ ಮುಂದಿನ ಪ್ರಕ್ರಿಯೆ ಆರಂಭವಾಗಬೇಕು. ಆದರೆ ಗುಂಡಪ್ಪನವರ ಅರ್ಜಿ ವಿಚಾರಣೆ, 150 ಪುಟದ ಆದೇಶ ಪ್ರಕಟ, ವಿಭಾಗೀಯ ಪೀಠ ರಚನೆ, ಮರುದಿನವೇ ವಿಚಾರಣೆ ಇವಿಷ್ಟೂ ಕೆಲವೇ ಗಂಟೆಗಳಲ್ಲಿ ಹೇಗೆ ನಡೆದುಹೋದವು?! ಜನರಿಗೆ ನ್ಯಾಯ ಕೊಡಬೇಕಾಗಿದ್ದು ನ್ಯಾಯಾಂಗ ಹಾಗೂ ನ್ಯಾಯಾಧೀಶರು. ಒಂದು ವೇಳೆ ಅವರಿಗೆ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಗುಂಡಪ್ಪನವರ ಅರ್ಜಿಯಂತೆ ಇತರ ಪ್ರಕರಣಗಳ ವಿಚಾರಣೆ ನಡೆಸಿದ್ದರೆ ಇಂದು ಹೈಕೋರ್ಟ್ ಮುಂದೆ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ಚಾತಕಪಕ್ಷಿಗಳಂತೆ ಇತ್ಯರ್ಥಕ್ಕಾಗಿ ಕಾದುಕುಳಿತುಕೊಳ್ಳುವ ಅಗತ್ಯ ಬರುತ್ತಿತ್ತೆ? ಹಾಗಾದರೆ ಗುಂಡಪ್ಪನವರ ಅರ್ಜಿಗೇಕೆ ವಿಶೇಷ ‘ಟ್ರೀಟ್ ಮೆಂಟ್’?!

ಸಾಮಾನ್ಯವಾಗಿ ಶನಿವಾರ ಕೋರ್ಟ್ ಕಲಾಪ ಇರುವುದಿಲ್ಲ. ಹೈಕೋರ್ಟ್ ಉದ್ಯೋಗಿಗಳು, ನ್ಯಾಯಾಧೀಶರು ಕೋರ್ಟ್‌ಗೆ ಬರುತ್ತಾರಾದರೂ ಕಲಾಪ ನಡೆಯುವುದಿಲ್ಲ. ಗುಂಡಪ್ಪನ ಅರ್ಜಿ ವಿಷಯದಲ್ಲಿ ಮಾತ್ರ ಕೆಲವೇ ಗಂಟೆಗಳ ಅಂತರದಲ್ಲಿ ಆರ್ಡರ್ ಪಾಸು ಮಾಡಿ, ವಿಶೇಷ ವಿಭಾಗೀಯ ಪೀಠ ರಚನೆ ಮಾಡಿ, ಕಲಾಪವಿಲ್ಲದ ದಿನ ವಿಚಾರಣೆ ನಡೆಸಿ, ತಡೆಯಾe ನೀಡಿದ್ದನ್ನು ನೋಡಿದರೆ ಯಾರಿಗಾದರೂ ಅನುಮಾನ ಕಾಡದೇ ಇರದೆ? ಗುಂಡಪ್ಪ ಎಂಬ ಸಾಮಾನ್ಯನ ಬಗ್ಗೆ ನಮ್ಮ ನ್ಯಾಯಾಧೀಶರಿಗೆ ಅದ್ಯಾವಾಗ ಪ್ರೀತಿ, ಕಾಳಜಿ ಉಕ್ಕಿ ಬಂತು? ಅಥವಾ ಗುಂಡಪ್ಪ ನಾಮ್‌ಕೆವಾಸ್ತೆ ಆರ್ಜಿಹಾಕಿದ್ದು, ಅದರ ಹಿಂದೆ ಇನ್ನಾವ ಉದ್ದೇಶಗಳಿದ್ದವೋ?! ಅಷ್ಟಕ್ಕೂ ಗುಂಡಪ್ಪ ಹಾಕಿದ್ದ ಅರ್ಜಿಯಲ್ಲಿ ವಕೀಲರ ಸಂಘ ತೆಗೆದುಕೊಂಡಿದ್ದ ನಿರ್ಣಯದ ದಿನಾಂಕವನ್ನೇ ತಪ್ಪಾಗಿ ಉಲ್ಲೇಖಿಸಲಾಗಿತ್ತು! ಅಷ್ಟೇ ಸಾಕು, ಗುಂಡಪ್ಪನ ಹಿಂದೆ ಕಾಣದ ಕೈಗಳಿದ್ದವು ಎಂದು ಅನುಮಾನ ಪಡಲು. ಜಡ್ಜ್‌ಗಳ ಸಹಕಾರವಿಲ್ಲದೆ ಅಷ್ಟೊಂದು ಶೀಘ್ರವಾಗಿ ಪೀಠ ಸ್ಥಾಪನೆಯಾಗಲು, ವಿಚಾರಣೆ ನಡೆಸಿ, ಆದೇಶ ನೀಡಲು ಸಾಧ್ಯವಿತ್ತೆ? ಅಷ್ಟು ಆತುರದಲ್ಲಿ ಇಷ್ಟೆಲ್ಲಾ ಮಾಡದಿದ್ದರೆ ಯಾರ ತಲೆಯಾದರೂ ಉದುರಿ ಹೋಗುತ್ತಿತ್ತೆ? ಇಲ್ಲೇ ಏನೋ ಇದೆ, ‘Something was Fishy’ ಎಂದು ಎಂತಹ ದಡ್ಡರಿಗೂ ಅರ್ಥವಾಗುತ್ತದೆ.

ಆ ಕಾರಣಕ್ಕಾಗಿಯೇ ವಕೀಲರ ಸಂಘ ತಡೆಯಾeಯ ಹೊರತಾಗಿಯೂ ನವೆಂಬರ್ 9ರಂದು ಕಲಾಪ ಬಹಿಷ್ಕರಿಸುವ ಮತ್ತು ಪ್ರತಿಭಟನೆ ನಡೆಸುವ ಕಾರ್ಯಕ್ಕೆ ಕೈಹಾಕಿತ್ತು. ಪ್ರತಿಭಟನೆ ಹಾಗೂ ಕಲಾಪ ಬಹಿಷ್ಕಾರ ಪ್ರಾರಂಭದಲ್ಲಿ ಸೌಹಾರ್ದಯುತವಾಗಿಯೇ ಇತ್ತು. ಕೋರ್ಟ್ ಹಾಲ್‌ಗಳಿಗೆ ಹೋಗಿ ಕಲಾಪ ಸ್ಥಗಿತಗೊಳಿಸುವಂತೆ ವಕೀಲರು ಮಾಡಿದ ಮನವಿಗೆ ಬಹುತೇಕ ಎಲ್ಲ ನ್ಯಾಯಾಧೀಶರೂ ಸ್ಪಂದಿಸಿದರು. ಆದರೆ ಕೋರ್ಟ್ ನಂಬರ್ ೨ರಲ್ಲಿದ್ದ ನ್ಯಾಯಮೂರ್ತಿ ವಿ. ಗೋಪಾಲಗೌಡ ಹಾಗೂ ಬಿ.ವಿ. ನಾಗರತ್ನ ಅವರು ಮನವಿಯ ಹೊರತಾಗಿಯೂ ಕುಳಿತಲ್ಲಿಂದ ಕದಲಲಿಲ್ಲ. ಮುಖ್ಯ ನ್ಯಾಯಮೂರ್ತಿಯೇ ಎದ್ದುಹೋಗಿರುವಾಗ ಇವರೂ ಜಾಗ ಖಾಲಿ ಮಾಡಬಹುದಿತ್ತಲ್ಲವೆ? ಪರಿಸ್ಥಿತಿ ಕೈಮೀರಿ ವಿಕೋಪಕ್ಕೆ ತಲುಪಿದ್ದು ಆನಂತರವೇ. ಒಂದು ವೇಳೆ, ವಕೀಲರ ಬಹಿಷ್ಕಾರದಿಂದ ಒಂದು ದಿನದ ಕಲಾಪ ನಿಂತು ಹೋಗಿದ್ದರೆ ಯಾವ ಮಹಾ ನಷ್ಟವಾಗುತ್ತಿತ್ತು? ಈ ಜಡ್ಜ್‌ಗಳು ಏಕಾಏಕಿ ರಜೆ ಹಾಕಿ ಕಲಾಪಕ್ಕೆ ಚಕ್ಕರ್ ಹೊಡೆಯುವುದೇ ಇಲ್ಲವೆ? ಆಗ ಸಾರ್ವಜನಿಕರಿಗೆ ಅನನುಕೂಲವಾಗಿಲ್ಲವೆ? ಕಲಾಪ ಬಹಿಷ್ಕರಿಸುವ ನಿರ್ಣಯದ ಯಾವ ಭಾಗದಲ್ಲೂ ವಕೀಲರ ಸಂಘ ದಿನಕರನ್ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿಯಷ್ಟೇ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟಾಗಿಯೂ ತಡೆಯಾe ತರುವಂಥದ್ದೇನಿತ್ತು? ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ದಿನಕರನ್‌ಗೆ ಬಡ್ತಿ ನೀಡು ವಂತೆ ಶಿಫಾರಸು ಮಾಡಿದ್ದ ಸಮಿತಿಯೇ ತಮಿಳುನಾಡು ವಕೀಲರು ಸಲ್ಲಿಸಿದ ಅಫಿಡವಿಟ್ ನಂತರ, ‘ಆರೋಪ ಮೇಲ್ನೋಟಕ್ಕೇ ಸಾಬೀತಾಗುತ್ತದೆ. ತನಿಖೆ ನಡೆಯಬೇಕು’ ಎಂದು ಹೇಳಿದ ನಂತರವೂ ದಿನಕರನ್ ಕಾರ್ಯಭಾರ ಮುಂದುವರಿಸಿದ್ದೇಕೆ? ನ್ಯಾಯಾಧೀಶರ ಪ್ರಾಮಾಣಿಕತೆಯ ಬಗ್ಗೆಯೇ ಅನುಮಾನಗಳೆದ್ದಿರುವಾಗ ಆತ ನ್ಯಾಯದಾನದ ಜವಾಬ್ದಾರಿಯನ್ನು ನಿರ್ವಹಿಸುವುದು ಎಷ್ಟು ಸರಿ? ಸಾರ್ವಜನಿಕರೆದುರು ಆರೋಪಿಯಾಗಿ ನಿಂತಿರುವ ವ್ಯಕ್ತಿ ನ್ಯಾಯದಾನ ಮಾಡುವ ಸ್ಥಾನ ಅಲಂಕರಿಸುವುದು ತಪ್ಪಲ್ಲವೆ? ಜನರಿಗೆ ಆತನ ಮೇಲೆ ವಿಶ್ವಾಸವೇ ಇಲ್ಲದಿರುವಾಗ ನ್ಯಾಯದಾನ ಮಾಡುವುದನ್ನು ಒಪ್ಪಲಾದೀತೆ? ನ್ಯಾಯಾಂಗವೆಂಬುದು ನ್ಯಾಯದಾನ ಮಾಡುವ ಒಂದು ವ್ಯವಸ್ಥೆಯೇ ಹೊರತು, ಅದೇ ನ್ಯಾಯವಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೇಲೆ ಕಳಂಕವುಂಟಾಗಬಾರದು ಎಂದು ವಕೀಲರು ಒಂದು ದಿನದ ಪ್ರತಿಭಟನೆಗೆ ಮುಂದಾಗಿದ್ದರು. ಜನರಿಗೆ ಅನನು ಕೂಲವಾಗುತ್ತದೆ ಎನ್ನಲು ಅವರೇನು ವಾರವಿಡೀ ಕಲಾಪ ಬಹಿಷ್ಕರಿಸು ವುದಾಗಿ ಹೇಳಿದ್ದರೆ?

ನ್ಯಾ. ದಿನಕರನ್ ಅವರು ಕಳಂಕರಹಿತರಾಗಿದ್ದರೆ ನಾಲ್ವರಿಗೆ ಓಕೆ ಹೇಳಿ, ದಿನಕರನ್ ನೇಮಕವನ್ನು ಮಾತ್ರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ತಡೆಹಿಡಿದಿರುವುದೇಕೆ? ಎಲ್ಲವೂ ಸರಿಯಾಗಿಯೇ ಇದ್ದರೆ, ದಿನಕರನ್ ನಡೆದುಬಂದ ಹಾದಿ ಸೂರ್ಯ-ಚಂದ್ರರಷ್ಟೇ ಬಿಳಿಯಾಗಿದ್ದಿದ್ದರೆ ಇಂಥದ್ದೊಂದು ತಡೆಯನ್ನು ಒಡ್ಡುವ ಅಗತ್ಯ ಬರುತ್ತಿತ್ತೆ? ಆರೋಪ ಹೊತ್ತ ನಂತರ ದಿನಕರನ್ ನಡೆದುಕೊಂಡ ರೀತಿಯಾದರೂ ಎಂಥದ್ದು? ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಾಗ “ನಿಮ್ಮ ಮೇಲಿರುವ ಆರೋಪಗಳ ಬಗ್ಗೆ ಏನನ್ನುತ್ತೀರಿ?” ಎಂದು ಪಿಟಿಐನ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಅಕ್ಟೋಬರ್ ೨೪ರಂದು) ದಿಲ್ಲಿ ವರದಿಗಾರ ಪ್ರಶ್ನಿಸಿದಾಗ, “ಮೌನವೇ ನನ್ನ ಏಕೈಕ ಶಕ್ತಿ. ನಾನು ಏನೂ ಹೇಳಲಾರೆ” ಎಂದು ಮೌನಕ್ಕೆ ಶರಣು ಹೋಗಿದ್ದರು. “ವಿಜಯ ಕರ್ನಾಟಕ”ದ ಮೈಸೂರಿನ ಓದುಗರಾದ ವಕೀಲ ಪಿ.ಜೆ ರಾಘವೇಂದ್ರ ಎಂಬುವರು ದಿನಕರನ್ “ಮೌನ”ವನ್ನು ‘ವಾಚಕರ ವಿಜಯ’ದಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದರು.

“… ಮೌನಂ ಸಮ್ಮತಿ ಲಕ್ಷಣಂ!

ರಾಮಾಯಣದ ಒಂದು ಘಟನೆ: ಸೀತಾಪಹರಣವಾದ ಸಂದರ್ಭ ದಲ್ಲಿ ಸೇತುವೆ ನಿರ್ಮಾಣ ಮಾಡುವಾಗ ಶ್ರೀರಾಮಚಂದ್ರನ ಕಾಲಡಿಯಲ್ಲಿ ಕಪ್ಪೆಯೊಂದು ಸಿಲುಕಿಕೊಂಡು ನರಳುತ್ತಿತ್ತು. ಅದನ್ನು ನೋಡಿ ಶ್ರೀರಾಮ ಪ್ರಶ್ನಿಸಿದನಂತೆ-ನೀನೇಕೆ ಕೂಗಿಕೊಳ್ಳದೇ ಸುಮ್ಮನೆ ನನ್ನ ಕಾಲಡಿಯಲ್ಲಿ ಸಿಲುಕಿಕೊಂಡು ನರಳುತ್ತಿದ್ದೆ? ಅದಕ್ಕೆ ಕಪ್ಪೆ ಹೇಳಿತು- ಬೇರೆ ಯಾರಾದರೂ ನನ್ನನ್ನು ತುಳಿದಿದ್ದರೆ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೆ. ನೀನೇ ನನ್ನನ್ನು ತುಳಿದಿರುವಾಗ ನಾನು ಯಾರಲ್ಲಿ ಮೊರೆಯಿಡಲಿ?”

ಜನತೆ ಅಕ್ರಮವೆಸಗಿದರೆ ನ್ಯಾಯಮೂರ್ತಿಗಳಲ್ಲಿ ಮೊರೆಯಿಡ ಬಹುದು. ಆದರೆ ನ್ಯಾಯಮೂರ್ತಿಯೇ ಅಕ್ರಮವೆಸಗಿದರೆ? ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ (ಹವಾಲಾ ಹಗರಣ) ಹಾಗೂ ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಬಿ. ಸೋಮಶೇಖರ್ (ಪ್ರಶ್ನೆ ಪತ್ರಿಕೆ ಹಗರಣ) ಅವರಂತಹ ರಾಜಕಾರಣಿಗಳೇ ಆರೋಪ ಮುಕ್ತರಾಗುವವರೆಗೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತು ಹೊರಬಂದಿದ್ದರು. ನಾವೆಲ್ಲ ಸದಾ ಶಪಿಸುವ ರಾಜಕಾರಣಿಗಳಲ್ಲೇ ಸಾರ್ವಜನಿಕ ಜೀವನದಲ್ಲಿ ಮೌಲ್ಯವನ್ನು ಎತ್ತಿಹಿಡಿದ ಇಂತಹ ನಾಯಕರಿದ್ದಾರೆ. ಇನ್ನು ನ್ಯಾಯದಾನ ಮಾಡಬೇಕಾದ ಒಬ್ಬ ಜಡ್ಜ್ ಕಳಂಕಕ್ಕೊಳಗಾದರೂ ಸೀಟು ಬಿಡುವುದಿಲ್ಲ ಎಂದರೆ ಹೇಗೆ?

ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಸಾಕ್ಷಿಪ್ರeಯನ್ನು ಎತ್ತಿಹಿಡಿಯುವ ಕೆಲಸವನ್ನು ಬೆಂಗಳೂರು ವಕೀಲರು ಮಾಡಿದ್ದಾರೆ. ನ್ಯಾಯವಾದಿಗಳೇ ನ್ಯಾಯವನ್ನು ಎತ್ತಿಹಿಡಿಯಲು, ನ್ಯಾಯಾಂಗದ ಮೇಲೆ ಸಮಾಜ ಕ್ಕಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ತಡೆಯಲು ಪ್ರಯತ್ನಿಸಿದ್ದಾರೆ. ಈ ಹಂತದಲ್ಲಿ ಜರುಗಿದ ಒಂದು ಸಣ್ಣ ಅಹಿತಕರ ಘಟನೆಗಾಗಿ ಅವರನ್ನು ಗೂಂಡಾಗಳೆಂದು ದೂರಿದರೆ ಅದು ನಮ್ಮ ಅeನವಷ್ಟೇ. ಅಷ್ಟಕ್ಕೂ ದಿನಕರನ್ ಅವರನ್ನು ಕಟಕಟೆಗೆ ತಂದು ನಿಲ್ಲಿಸಿರುವುದು, ಇಕ್ಕಟ್ಟಿಗೆ ಸಿಲುಕಿಸಿರುವುದು, ನ್ಯಾಯವನ್ನು ಎತ್ತಿಹಿಡಿಯಲು, ನ್ಯಾಯಾಂಗದ ಘನತೆಯನ್ನು ಕಾಪಾಡಲು ಪ್ರಯತ್ನಿಸುತ್ತಿರುವುದು ಯಾವ ಪೊಲೀ ಸರು, ಆದಾಯ ತೆರಿಗೆ ಇಲಾಖೆಯವರೂ, ಗುಪ್ತಚರ ಸಂಸ್ಥೆಗಳೂ ಅಲ್ಲ, ಮದ್ರಾಸ್ ಹಾಗೂ ಬೆಂಗಳೂರು ವಕೀಲರ ಸಂಘಗಳು. ಅವರನ್ನೇಕೆ ದೂಷಿಸಬೇಕು? ಅವತ್ತು ಬೊಫೋರ್ಸ್ ಹಗರಣ ಬಯಲಿಗೆ ಬಂದಾಗ ‘ಗಲಿ ಗಲೀ ಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ’ ಅಂತ ಜನ ಮಾತನಾಡಿಕೊಂಡರು. ರಾಜೀವ್‌ಗಾಂಧಿ ಕಳ್ಳನೋ ಅಲ್ಲವೋ ಎಂಬುದನ್ನು ಇಲ್ಲಿಯವರೆಗೂ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಆದರೆ 1989ರ ಚುನಾವಣೆಯಲ್ಲಿ ಜನ ರಾಜೀವ್‌ಗಾಂಧಿಗೆ ಪಾಠ ಕಲಿಸಿದ್ದನ್ನು ಮರೆಯಲು ಸಾಧ್ಯವೆ? ಇಂತಹ ಸೂಕ್ಷ್ಮ ಮುಖ್ಯ ನ್ಯಾಯಾಧೀಶರಿಗೆ ಅರ್ಥವಾಗಲಿಲ್ಲ ಎಂದರೆ ಯಾರ ತಪ್ಪು? ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸ, ಗೌರವವನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿ ನ್ಯಾಯದಾನ ಮಾಡುವವರಲ್ಲಿ ಮೊದಲು ಇರಬೇಕು.

ಅಲ್ವಾ?

4 Responses to “ಕುರುಡಾಗಿರುವುದು ನ್ಯಾಯವೋ, ನ್ಯಾಯದಾನ ಮಾಡುವವರೋ?”

  1. Veda Bhat (Shilpa) says:

    This is a classic case of Bar versus Bench. CJ Dinakaran should have avoided the court proceedings till his name is cleared from land grabing allegations. “Caesar’s wife must be above suspicion” should apply to CJ Dinakaran case. Fault lies with supreme court collegium which is going slow on acting against CJ Dinakaran , who is facing charges of amassing wealth disproportionate to his known source of Income. Excellent article by pratap simha .Keep it up.

  2. Veda Bhat (Shilpa) says:

    This is a classic case of Bar versus Bench. CJ Dinakaran should have avoided the court proceedings till his name is cleared from land grabing allegations. “Caesar’s wife must be above suspicion” should apply to CJ Dinakaran case. Fault lies with supreme court collegium which is going slow on acting against CJ Dinakaran , who is facing charges of amassing wealth disproportionate to his known source of Income. Excellent article by pratap simha .Keep it up.

  3. Meena says:

    hie pratap,

    Here in this article you have well described about individual issue n the person responsible of it, which gives VK readers a correct information.

    Apart from that I felt in this article the “Root cause” is not mentioned or discussed. Until unless we cant find the Root cause for any issue we can’t find out the solution for it.. is nt it.

    The Rootcause here could be .. “The Law. ” our Law is outdated for current situation, n the existing every law has dozens of provisions Therefore no politician , highly influence person and wealthy person will get punished in our country.

    In our country there is urgency to implement strict law especially towards corruption.
    From past few decades wealth is accumulating in few people’s hand ie., mainly with politicians , Govt Officials, n Private entities., and leading towards Un-Even distribution of wealth in our country.,

    Why the Govt can’t take steps for a special assessment of those people who are having more wealth than their earning capacity. after some particular period. ??

    Here in this issue. ..Being a judge he knows the loopholes in Law n he had taken wise decision.. to be silent. as everyone knows about our country’s investigation / judgment does not have any time bound n as public memory is very short,everyone will forget abt this in forthcoming days. n he may continue in the position…
    n this may be continued.. till our country implement a strict rule / Law.

    Regards n all the best for your future writings.

    Meena.