Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಶತಮಾನದ ಸೆಣಸಿನಲ್ಲಿ ಗೆದ್ದವನು ಸಾವಿಗೆ ಶರಣಾದ ಕ್ಷಣದಲ್ಲಿ

ಶತಮಾನದ ಸೆಣಸಿನಲ್ಲಿ ಗೆದ್ದವನು ಸಾವಿಗೆ ಶರಣಾದ ಕ್ಷಣದಲ್ಲಿ


The Fight of the Century!

ಇಲ್ಲಾ ಇಲ್ಲಾ, ಇದಕ್ಕಿಂತ Thrilla in Manila’ವೇ ಅತ್ಯಂತ ಸಂಘರ್ಷದಿಂದ ಕೂಡಿತ್ತು, ಅದೇ ಅತ್ಯುತ್ತಮ ಸೆಣಸಾಟ ಎನ್ನುವವರು ಸಾಕಷ್ಟಿದ್ದಾರೆ, ಪರಿಣತರಲ್ಲೂ ಏಕಮತವಿಲ್ಲ, ಇಂದಿಗೂ ಆ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸರಿಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಆ ಎರಡು ಸಂಘರ್ಷಗಳನ್ನು ಇವತ್ತು ನೀವು ನೋಡಿದರೂ ಮನಿಲಾದಲ್ಲಿ ನಡೆದ ಜಿದ್ದಾಜಿದ್ದಿಯೇ ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ರೋಚಕ ಹೋರಾಟವೆಂದು ನಿಮ್ಮ ಮನಸ್ಸಿಗನಿಸುತ್ತದೆ. ಅಂದು ಬಾಕ್ಸಿಂಗ್ ರಿಂಗ್್ನೊಳಗೆ ಪರಸ್ಪರರ ರಕ್ತಹೀರುವಂತೆ ಕಾದಾಡಿದ ಮಹಮ್ಮದ್ ಅಲಿ ಹಾಗೂ ಜೋ ಫ್ರೇಝಿಯರ್ ಪಂದ್ಯದ ನಂತರ ನೀಡಿದ ಹೇಳಿಕೆಗಳೂ ಆ ಅಭಿಪ್ರಾಯವನ್ನು ಗಟ್ಟಿಗೊಳಿಸುತ್ತವೆ.

ಮಹಮ್ಮದ್ ಅಲಿ: ಅದು ಸಾವಿನಂತೆಯೇ ಇತ್ತು. Closest thing to dyin’ that I know of!

ಜೋ ಫ್ರೇಝಿಯರ್: ಅಲಿ ನನ್ನನ್ನು ಅಲುಗಾಡಿ ಸಿಬಿಟ್ಟ. ನಾವಿಬ್ಬರೂ ವೀರಸೇನಾನಿಗಳಾಗಿದ್ದೆವು. ಆತನಿಂದ ನಾನು ಯಾವ ರಿಯಾಯಿತಿಯನ್ನೂ ಬಯಸಲಿಲ್ಲ, ಆತನೂ ಕೇಳಲಿಲ್ಲ. ಆತನನ್ನು ಕಂಡರೆ ನನಗಾಗುವುದಿಲ್ಲ. ಆದರೆ ಬಾಕ್ಸಿಂಗ್ ರಿಂಗ್್ನೊಳಗೆ ಅವನೊಬ್ಬ ಧಾಡಸಿ ವ್ಯಕ್ತಿ. ಮನಿಲಾದಲ್ಲಿ ನಾನು ಅವನಿಗೆ ಕೊಟ್ಟ ಪಂಚ್್ಗಳು ಕಟ್ಟಡಗಳನ್ನೇ ಕೆಳಗುರುಳಿಸುವಂತಿದ್ದವು. ಅಲಿ ಅವನ್ನೆಲ್ಲ ಮೈಮೇಲೆ ಹಾಕಿಸಿಕೊಂಡರೂ ಸಾವರಿಸಿಕೊಂಡು ಮತ್ತೆ ಮೇಲೆದ್ದು ಬರುತ್ತಿದ್ದ. ಅವನೊಳಗಿದ್ದ ಆ ದೈತ್ಯ ವ್ಯಕ್ತಿಯನ್ನು ನಾನು ಗೌರವಿಸಲೇಬೇಕು.

ಮಹಮ್ಮದ್ ಅಲಿ: ನಾವು ಮನಿಲಾಕ್ಕೆ ಚಾಂಪಿಯನ್ನರಂತೆ ಹೋಗಿ, ವೃದ್ಧರಂತೆ ವಾಪಸ್ಸಾದೆವು!

ಜೋ ಫ್ರೇಝಿಯರ್: ನಾನು ಇಲ್ಲದಿದ್ದರೆ ಅಲಿ, ಅಲಿಯಾಗಿರುತ್ತಿರಲಿಲ್ಲ. ನಾವಿಬ್ಬರು 3 ಬಾರಿ ಸೆಣಸಿದೆವು. ಅಲಿ 2 ಸಲ, ನಾನು ಒಮ್ಮೆ ಗೆದ್ದೆ. ಆದರೆ ಈಗ ಅಲಿಯ ಅವಸ್ಥೆಯನ್ನು ನೋಡಿದರೆ ಮೂರನ್ನೂ ಗೆದ್ದವರು ಯಾರು ಎಂದು ಗೊತ್ತಾಗುತ್ತದೆ!!

ಹೌದು, ‘Thrilla in Manila’ ಅನ್ನು ಯು ಟೂಬ್್ನಿಂದ ಡೌನ್್ಲೋಡ್ ಮಾಡಿ ನೋಡಿ, ಅದೇ ಜಗತ್ತಿನ ಅತ್ಯಂತ ದೊಡ್ಡ ಸೆಣಸಾಟ ಎಂದು ನೀವೂ ಒಪ್ಪಿಕೊಳ್ಳುತ್ತೀರಿ.

ಆದರೂ

1971, ಮಾರ್ಚ್ 8ರಂದು ನ್ಯೂಯಾರ್ಕ್್ನ ವಿಶ್ವವಿಖ್ಯಾತ ‘ಮ್ಯಾಡಿಸನ್ ಸ್ಕೆ ್ವರ್ ಗಾರ್ಡನ್್’ನಲ್ಲಿ ನಡೆದ ಪಂದ್ಯವೇ ‘The Fight of The Century’.. 1960ರ ಒಲಿಂಪಿಕ್ಸ್್ನಲ್ಲೇ ಚಿನ್ನದ ಪದಕ ಪಡೆದಿದ್ದ ಕ್ಯಾಸಿಯಸ್ ಕ್ಲೇ ಅಲಿಯಾಸ್ ಮಹಮ್ಮದ್ ಅಲಿ 1967ರಲ್ಲಿ ಅಮೆರಿಕದ ಸರ್ಕಾರದಿಂದ ನಿಷೇಧಕ್ಕೊಳಗಾಗುವ ಮುನ್ನ ಸತತವಾಗಿ ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡು ಬಂದಿದ್ದ. ಟೋನಿ ಎಸ್ಪರ್ಟಿ, ಜಿಮ್ ರಾಬಿನ್ಸನ್, ಡಾನಿ ಫ್ಲೀಮನ್, ಡಗ್ ಜೋನ್ಸ್, ಹೆನ್ರಿ ಕೂಪರ್ ಎಲ್ಲರನ್ನೂ ಮಣಿಸಿದ್ದ ಅಲಿ, ಅಮೆರಿಕ ಸರ್ಕಾರದ ನೀತಿಯನ್ನು ವಿರೋಧಿಸಿದ ಸಲುವಾಗಿ, ವಿಯೆಟ್ನಾಂ ಯುದ್ಧಕ್ಕೆ ಹೋಗಲು ನಿರಾಕರಿಸಿದ ಕಾರಣಕ್ಕಾಗಿ 25ನೇ ವರ್ಷಕ್ಕೇ ಬಾಕ್ಸಿಂಗ್್ನಿಂದ ನಿಷೇಧಕ್ಕೊಳಗಾಗಬೇಕಾಯಿತು. 43 ತಿಂಗಳ ವನವಾಸ ಆರಂಭವಾಯಿತು. ಇತ್ತ 23 ವರ್ಷದ ಜೋ ಫ್ರೇಝಿಯರ್ ಹೆವಿವೆಯ್ಟ್ ಬಾಕ್ಸಿಂಗ್ ಅಂಗಣದಲ್ಲಿ ಸದ್ದು ಮಾಡಲಾರಂಭಿಸಿದ. ಎಲ್ಲರನ್ನೂ ಮಣಿಸಲು ಪ್ರಾರಂಭ ಮಾಡಿದ. ಜೋ ಜತೆ ಸೆಣೆಸಿದವರಿಗೆಲ್ಲ ಸೋಲು ಅನಿವಾರ್ಯ ಸಂಗತಿಯಾಯಿತು. 1970, ಫೆಬ್ರವರಿ 16. ಹಾಲಿ ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಚಾಂಪಿಯನ್ ಜಿಮ್ಮಿ ಎಲ್ಲಿಸ್-ಜೋ ಫ್ರೇಝಿಯರ್ ನಡುವೆ ಪಂದ್ಯ ಏರ್ಪಾಡಾಯಿತು. ಐದು ಸುತ್ತಿನಲ್ಲೇ ಜಿಮ್ಮಿ ಎಲ್ಲಿಸ್್ನನ್ನು ಕೆಳಗುರುಳಿಸಿ ಮೊದಲ ಭಾರಿಗೆ ಚಾಂಪಿಯನ್ ಎನಿಸಿದ. ಆ ಪಂದ್ಯ ಫ್ರೇಝಿಯರ್್ಗೆ ವಿಶ್ವ ಹೆವಿವೆಯ್ಟ್ ಚಾಂಪಿಯನ್ ಎಂಬ ನೈಜ ಮನ್ನಣೆಯನ್ನು ತಂದುಕೊಟ್ಟಿತು.

ಆದರೆ…

ಅದಾಗಲೇ ಜಗದೇಕವೀರನೆನಿಸಿದ್ದ ಮಹಮ್ಮದ್ ಅಲಿಯನ್ನು ಮಣಿಸದ ಹೊರತು ವಿಶ್ವ ಹೆವಿವೆಯ್ಟ್ ಚಾಂಪಿಯನ್ ಎಂಬ ಪಟ್ಟಕ್ಕೆ ಯಾವ ಬೆಲೆಯೂ ಇಲ್ಲ ಎಂಬುದು ಫ್ರೇಝಿಯರ್್ಗೆ ಅರಿವಾಯಿತು. ಅದೇ ವೇಳೆ ಮಹಮ್ಮದ್ ಅಲಿ ಮೇಲಿನ ನಿಷೇಧವನ್ನು ಅಮೆರಿಕ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ದಟ್ಟವಾಗತೊಡಗಿತು. ಅಲಿಯನ್ನು ಸೋಲಿಸದೇ ನಿಜವಾದ ಚಾಂಪಿಯನ್ ಆಗಲು ಸಾಧ್ಯವಿಲ್ಲ, ಜಗತ್ತು ತನ್ನನ್ನು ಚಾಂಪಿಯನ್ ಎಂದು ಒಪ್ಪಿಕೊಳ್ಳುವುದಿಲ್ಲವೆಂದು ಫ್ರೇಝಿಯರ್ ಕೂಡ ಅಂಥದ್ದೊಂದು ಹೋರಾಟಕ್ಕಾಗಿ ಪರಿತಪಿಸತೊಡಗಿದ. ಜತೆಗೆ ನಿಷೇಧ ಹಿಂತೆಗೆದುಕೊಂಡ ಕೂಡಲೇ ಅಲಿ ಸವಾಲೆಸೆಯುವುದೂ ನಿಚ್ಚಳವಾಗಿತ್ತು. ಅದುವರೆಗೂ ಯಾರ ಎದುರೂ ಸೋಲದ ಅಲಿಯನ್ನು ಮಣಿಸುವುದು ಸುಲಭದ ಮಾತಾಗಿರಲಿಲ್ಲ. ಆರು ಅಡಿ 3 ಅಂಗುಲ ಎತ್ತರದ ಅಲಿಗೆ 5 ಅಡಿ 11 ಅಂಗುಲ ಎತ್ತರದ ಫ್ರೇಝಿಯರ್ ಎದುರು ಸ್ವಾಭಾವಿಕವಾಗಿ ಅನುಕೂಲಗಳಿದ್ದವು. ಬಾಕ್ಸಿಂಗ್ ಇತಿಹಾಸದಲ್ಲೇ ಅತ್ಯಂತ ಆಕ್ರಮಣಕಾರಿ ಬಾಕ್ಸರ್ ಎನಿಸಿದ್ದ ಅಲಿಗೆ ಕೊನೆಗೂ 1970, ಅಕ್ಟೋಬರ್್ನಲ್ಲಿ ಅಮೆರಿಕದ ಜಾರ್ಜಿಯಾ ರಾಜ್ಯ ಬಾಕ್ಸಿಂಗ್ ಲೈಸೆನ್ಸ್ ನೀಡಿತು. ಅದೇ ಅಕ್ಟೋಬರ್ 26ರಂದು ನಡೆದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಜೆರಿ ಕ್ವಾರಿಯನ್ನು ಮೂರನೇ ಸುತ್ತಿನಲ್ಲೇ ಸೋಲಿಸಿದ ಅಲಿ, ಫ್ರೇಝಿಯರ್್ಗೆ ನಡುಕ ಹುಟ್ಟುವಂಥ ಪುನರಾಗಮನ ಮಾಡಿದ! ಇಡೀ ಜಗತ್ತು ಅಲಿ-ಫ್ರೇಝಿಯರ್ ಕಾದಾಟವನ್ನು ಕಾಣಲು ಕಾತರದಿಂದ ಕಾಯತೊಡಗಿತು. 1968ರಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್್ನಲ್ಲಿ ಫ್ರೇಝಿಯರ್ ಬಸ್ಟರ್ ಮಥಾಯಿಸ್್ನನ್ನು ಸೋಲಿಸಿದಾಗಲೇ ಅಲಿ ಜತೆಗಿನ ಸೆಣಸಾಟವನ್ನು ಕಾಣಲು ಜಗತ್ತು ತಯಾರಿ ನಡೆಸತೊಡಗಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳು ಅಲಿಯ ಪುನರಾಗಮನವನ್ನು ವಿಳಂಬಗೊಳಿಸಿದವು. ಆದರೇನಂತೆ ಜಾರ್ಜಿಯಾ ಅಲಿಗೆ ಬಾಕ್ಸಿಂಗ್ ಲೈಸೆನ್ಸ್ ನೀಡಿದ ನಂತರ ಅಮೆರಿಕದ ಒಂದೊಂದು ರಾಜ್ಯಗಳೂ ಸರಿದಾರಿಗೆ ಬರತೊಡಗಿದವು. ಅಲಿ ಕ್ವಾರಿಯನ್ನು ಸೋಲಿಸಿದರೆ ಫ್ರೇಝಿಯರ್ ಲೈಟ್ ಹೆವಿವೆಯ್ಟ್ ಚಾಂಪಿಯನ್ ಬಾಬ್ ಫಾಸ್ಟರ್್ನನ್ನು ಎರಡೇ ಸುತ್ತಿನಲ್ಲಿ ಹೊಡೆದುರುಳಿಸಿದ. ಹಾಗಾಗಿ ಅಲಿ-ಫ್ರೇಝಿಯರ್ ಕದನದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಸೃಷ್ಟಿಯಾದವು.

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್!

ನ್ಯೂಯಾರ್ಕ್್ನ ಈ ಸ್ಥಳ ದಂತಕಥೆಗಳಿಗೆ ಜನ್ಮವಿತ್ತ ಭೂಮಿ. ಮಹಮ್ಮದ್ ಅಲಿ, ಜೋ ಫ್ರೇಝಿಯರ್, ಇವಾಂಡರ್ ಹೋಲಿಫೀಲ್ಡ್, ಜೋ ಲೂಯಿಸ್, ಡುರಾನ್, ರೇ ಲಿಯೋನಾರ್ಡ್, ಜೋನ್ಸ್ ಜೂನಿಯರ್ ಇವರೆಲ್ಲರೂ ಹೋರಾಡಿದ, ಜಗದ್ವಿಖ್ಯಾತಿ ಗಳಿಸಿದ ಸ್ಥಳವದು. 1971, ಮಾರ್ಚ್ 8ರಂದು ಮಹಮ್ಮದ್ ಅಲಿ-ಜೋ ಫ್ರೇಝಿಯರ್ ಮುಖಾಮುಖಿಯಾಗುವುದು ಪಕ್ಕಾ ಆಯಿತು. 31-0 ದಾಖಲೆ ಹೊಂದಿದ್ದ ಅಲಿ, 26-0 ದಾಖಲೆ ಹೊಂದಿದ್ದ ಫ್ರೇಝಿಯರ್. ಇಬ್ಬರನ್ನೂ ಅದುವರೆಗೂ ಯಾರಿಂದಲೂ ಮಣಿಸಲಾಗಿರಲಿಲ್ಲ. ಪಂದ್ಯಕ್ಕೂ ಮೊದಲು ಅಂದರೆ 1971, ಮಾರ್ಚ್ 5ರಂದು ಇಬ್ಬರೂ ದೈತ್ಯರನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು. ‘ಈ ಭುವಿಯ ಇತಿಹಾಸದಲ್ಲಿ ಇಂಥದ್ದೊಂದು ಕಾದಾಟ ಹಿಂದೆಂದೂ ನಡೆದಿರಲಿಕ್ಕಿಲ್ಲ’ ಎಂದ ಅಲಿ. ‘ಹತ್ತನೇ ಸುತ್ತಿನ ನಂತರ ಕೆಲವೇ ಸಮಯವಷ್ಟೇ ಉಳಿದಿರುತ್ತದೆ ಈ ಪೆದ್ದ ಶಾಶ್ವತವಾಗಿ ಕೆಳಗುರುಳಲು’ ಎಂದ ಫ್ರೇಝಿಯರ್ ಅಲಿಯ ಸಾಮರ್ಥ್ಯಕ್ಕೇ ಸವಾಲೆಸೆದ.

ಹಾಗಾಗಿ ಅದು ‘The Fight of The Century’ ಎಂಬ ಹೆಸರು ಪಡೆಯಿತು!

ಅಂದು ಜಯಿಸಿದವರು ಅವಿವಾದಿತ ವಿಶ್ವ ಹೆವಿವೆಯ್ಟ್ ಚಾಂಪಿಯನ್ ಆಗುವುದು ಖಚಿತವೆನಿಸಿತು. ಒಂದೆಡೆ ಹಾಲಿ ವಿಶ್ವ ಚಾಂಪಿಯನ್ ಜೋ ಫ್ರೇಝಿಯರ್, ಇನ್ನೊಂದೆಡೆ 1967ರಲ್ಲಿ ನಿಷೇಧಕ್ಕೊಳಗಾದರೂ ವಿಶ್ವಚಾಂಪಿಯನ್್ಶಿಪ್್ನಲ್ಲಿ ಹಿಂದೆಂದೂ ಸೋಲು ಕಾಣದ ಅಲಿ. ಪಂದ್ಯ ಆರಂಭವಾಯಿತು.

ಮೊದಲ ಸುತ್ತು

ಆಶ್ಚರ್ಯವೆಂದರೆ ಆಕ್ರಮಣಕಾರಿ ಆಟಕ್ಕೆ ಹೆಸರಾದ ಅಲಿಗೆ ಬದಲು ಜೋ ಫ್ರೇಝಿಯರ್್ನೇ ದಾಳಿಮಾಡಲು ಆರಂಭಿಸುತ್ತಾನೆ. ಒಂದೆರಡು ಗುದ್ದುಹಾಕುವುದರಲ್ಲಿ ಫ್ರೇಝಿಯರ್ ಯಶಸ್ವಿಯಾದರೆ ಅಲಿಗೆ ಒಂದು ಗುದ್ದು ಹಾಕುವುದಕ್ಕೂ ಆಗುವುದಿಲ್ಲ. ಬಹಳ ಕಾಲದ ನಂತರ ನೋಡಿದ ಅತ್ಯಂತ ಕುತೂಹಲಕಾರಿ ಮೊದಲ ಸುತ್ತು ಎಂದು ವೀಕ್ಷಕ ವಿವರಣೆಕಾರರು ವ್ಯಾಖ್ಯಾನ ಮಾಡುತ್ತಾರೆ.

ಎರಡನೇ ಸುತ್ತು

ಅಷ್ಟೇನು ಸಭ್ಯ ವರ್ತನೆಗೆ ಹೆಸರಾಗದ ಮಹಮ್ಮದ್ ಅಲಿ ಎಂದಿನ ವರಸೆ ತೋರತೊಡಗಿದ. ‘Dirty Clay’, ‘Clay as Clay can’ ಎಂಬ ಕುಖ್ಯಾತಿ ಪಡೆದಿದ್ದ ಅಲಿ ಬೈಗುಳಗಳ ಮೂಲಕ ಫ್ರೇಝಿಯರ್್ನನ್ನು ಕೆರಳಿಸಲು, ಅಧೀರನನ್ನಾಗಿ ಮಾಡಲು ಯತ್ನಿಸಿದ. ಮಧ್ಯಪ್ರವೇಶಿಸಿದ ರೆಫರಿ ಎಚ್ಚರಿಕೆ ನೀಡಿದರೂ ನಿಯಮಕ್ಕೆ ವಿರುದ್ಧವಾಗಿ ಫ್ರೇಝಿಯರ್್ನ ತಲೆಯನ್ನು ಕೆಳಕ್ಕೆ ತಳ್ಳಲು, ಕೈಗಳನ್ನು ಬಂಧಿಸಲು, ತಿರುಚಲು ಆರಂಭಿಸಿದ. ಫ್ರೇಝಿಯರ್ ಬಾಯಿಂದ ರಕ್ತ ಹರಿಯಲಾರಂಭಿಸಿತು.

ಮೂರನೇ ಸುತ್ತು

ಅಲಿ ಫ್ರೇಝಿಯರ್್ಗೆ, ಫ್ರೇಝಿಯರ್ ಅಲಿಗೆ ಗುದ್ದುಹಾಕಲು ಪ್ರಾರಂಭಿಸಿದರು. ಫ್ರೇಝಿಯರ್್ನ ಎಡಗೈ ಹೊಡೆತಕ್ಕೆ ಅಲಿಯ ಬಳಿ ಉತ್ತರವಿರಲಿಲ್ಲ.

ನಾಲ್ಕನೇ ಸುತ್ತು

ಕುಖ್ಯಾತಿಗೆ ಹೆಸರಾಗಿದ್ದ ವೀಕ್ಷಕ ವಿವರಣೆಕಾರರೂ ತಮ್ಮ ಎಂದಿನ ವರಸೆ ತೋರಲಾಂಭಿಸಿದರು, ಅಲಿ ಬಹಳ ಮುಂದಿದ್ದಾನೆ ಎಂದು ಬೊಬ್ಬೆ ಹಾಕುವ ಮೂಲಕ ಫ್ರೇಝಿಯರ್್ನ ಆತ್ಮಸ್ಥೈರ್ಯವನ್ನು ಉಡುಗಿಸಲು ಆರಂಭಿಸಿದರು.

ಐದು, ಆರು, ಏಳನೇ ಸುತ್ತಿನಲ್ಲಿ ತೀವ್ರ ಹೋರಾಟ ನಡೆಯಿತು, ಅಲಿ ಜೀವಮಾನದ ಮೊದಲ ಸೋಲು ಕಾಣುವ ಸಂಕೇತಗಳು ಸಿಗಲಾರಂಭಿಸಿದವು. ಪ್ರೇಕ್ಷಕರು, ‘ಜೋ, ಜೋ, ಜೋ’ ಎಂದು ಚೀರಲಾರಂಭಿಸಿದರು. ಆದರೆ, ಹತ್ತನೇ ಸುತ್ತಿನಲ್ಲಿ ಫ್ರೇಝಿಯರ್ ಕಣ್ಣಿಗೆ ಕುರುಡಾಗುವಂಥ ಪೆಟ್ಟು ಬಿತ್ತು, ಅಲಿಯ ಕೈ ಮೇಲಾಗುವ ಸಾಧ್ಯತೆ ಹೆಚ್ಚಾಗತೊಡಗಿತು. ಆದರೂ ಫ್ರೇಝಿಯರ್ ತೀವ್ರ ಪೈಪೋಟಿ ನೀಡಿದ. ಆತನ ಒಂದು ದೌರ್ಬಲ್ಯವೆಂದರೆ ಎದುರಾಳಿಯನ್ನು ಒಂದೇ ಪೆಟ್ಟಿಗೆ ನೆಲಕ್ಕುರುಳಿರುವ ಮುಷ್ಠಿ ಬಲದ ಕೊರತೆ. ಹಾಗಾಗಿ ಪಂದ್ಯ 15ನೇ ಸುತ್ತಿನವರೆಗೂ ಮುಂದುವರಿಯಿತು. ಕೊನೆ ಸುತ್ತಿನಲ್ಲಿ ಫ್ರೇಝಿಯರ್ ಕೊಟ್ಟ ಮಾರಕ ಪೆಟ್ಟು ಅಲಿಯನ್ನು ಕೆಳಗುರುಳಿಸಿತು.

ಜೋ ಅವಿವಾದಿತ ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದ!

ಅದರೊಂದಿಗೆ ಇಬ್ಬರ ನಡುವೆ ಶಾಶ್ವತವಾದ ವೈರತ್ವವೊಂದು ಆರಂಭವಾಯಿತು. 1973ರಲ್ಲಿ ಜಾರ್ಜ್ ಫೋರ್ಮನ್ ಎದುರು ಸೋತು ಜೋ ಚಾಂಪಿಯನ್ ಪಟ್ಟ ಕಳೆದುಕೊಂಡರೂ ಅಲಿ ಜತೆಗಿನ ವೈರತ್ವ ಮಾತ್ರ ಮುಂದುವರಿಯಿತು. 1974ರಲ್ಲಿ ಅಲಿ-ಫ್ರೇಝಿಯರ್ ಮತ್ತೆ ಮುಖಾಮುಖಿಯಾದರು, ಆದರೆ ಚಾಂಪಿಯನ್ ಪಟ್ಟಕ್ಕಲ್ಲ. ಈ ಬಾರಿ 12 ಸುತ್ತುಗಳವರೆಗೂ ನಡೆದ ಸೆಣಸಾಟದಲ್ಲಿ ಅಲಿ ಗೆದ್ದ. ವೈರತ್ವ, ವೈಷಮ್ಯ ಮತ್ತೂ ಹೆಚ್ಚಾಯಿತು. 1974ರಲ್ಲಿ ಜಾರ್ಜ್ ಫೋರ್ಮನ್್ನನ್ನು ಮಣಿಸಿದ ಫ್ರೇಝಿಯರ್ ಹಾಗೂ ಅಲಿ ನಡುವೆ 1975, ಅಕ್ಟೋಬರ್ 1ರಂದು ಫಿಲಿಪ್ಪೀನ್ಸ್್ನ ಮನಿಲಾದಲ್ಲಿ ಪಂದ್ಯವೊಂದು ಆಯೋಜನೆಯಾಯಿತು. ಅದೇ ‘ಥ್ರಿಲ್ಲಾ ಇನ್ ಮನಿಲಾ’! ‘ಒಂದು ವೇಳೆ ನಾನು ಅಲಿ ಒಂದೇ ತಾಯಿಯ ಹೊಟ್ಟೆಯಲ್ಲಿ ಅವಳಿಗಳಾಗಿದ್ದರೆ ಅವನ ಕುತ್ತಿಗೆಯನ್ನು ಅಲ್ಲೇ ಬಿಗಿಯುತ್ತಿದ್ದೆ’ ಎಂದು ಫ್ರೇಝಿಯರ್ ತನ್ನ ಕಡುವೈರತ್ವವನ್ನು ಹೊರ ಹಾಕಿದರೆ, ‘ಗೋರಿಲ್ಲಾ, ಜಗತ್ತಿನ ಅತ್ಯಂತ ಕುರೂಪಿ ವ್ಯಕ್ತಿ’ ಎಂದೆಲ್ಲ ಅಲಿ ಫ್ರೇಝಿಯರ್್ನನ್ನು ನಿಂದಿಸಿದ. ”Thrilla in Manila’ 14ನೇ ಸುತ್ತಿನವರೆಗೂ ಮುಂದುವರಿಯಿತು. ಫ್ರೇಝಿಯರ್್ನ ಕಣ್ಣುಗಳು ಹೆಚ್ಚೂಕಡಿಮೆ ಕುರುಡಾಗಿ ಬಿಟ್ಟವು. ಆ ಹಂತದಲ್ಲಿ ಆತನ ತರಬೇತುದಾರ ಪಂದ್ಯದಿಂದ ಹಿಂದೆ ಸರಿಯುವಂತೆ ಮಾಡಿದ. ಹಾಗಾಗಿ ಅಲಿಯನ್ನು ವಿಜಯಿ ಎಂದು ಘೋಷಿಸಲಾಯಿತು. ಆದರೇನಂತೆ ಪಂದ್ಯದ ನಂತರ ‘It was like death’ ಎಂದ ಅಲಿಯೇ ಭಯಭೀತನಾಗಿದ್ದಿದ್ದು, ಮಾನಸಿಕವಾಗಿ ಶರಣಾಗಿದ್ದು ಖಚಿತವಾಯಿತು.

ಇದೇನೇ ಇರಲಿ, ಬಾಕ್ಸಿಂಗ್ ಎಂಬ ಹಿಂಸೆಯ ಕ್ರೀಡೆಯಲ್ಲಿ ತೊಡಗಿದವರೂ Stardom, Cult Figure ಸ್ಥಾನ ಪಡೆದುಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟವರು ಜೋ ಗನ್ಸ್, ಜೋ ಲೂಯಿಸ್, ಜೋ ಫ್ರೇಝಿಯರ್, ಜಾರ್ಜ್ ಫೋರ್ಮನ್, ಜಾಕ್ ಡೆಂಪ್ಸಿ, ಮೈಕ್ ಟೈಸನ್, ಮಹಮ್ಮದ್ ಅಲಿಯವರಂಥ ವೀರಕಲಿಗಳು. ಅಂತಹ ದಿಗ್ಗಜರಲ್ಲಿ ಒಬ್ಬರಾಗಿದ್ದ ಜೋ ಫ್ರೇಝಿಯರ್ ಕಳೆದ ಸೋಮವಾರ ಯಕೃತ್ತಿನ ಕ್ಯಾನ್ಸರ್್ಗೆ ಬಲಿಯಾಗಿದ್ದಾರೆ.

May his soul rest in peace!

13 Responses to “ಶತಮಾನದ ಸೆಣಸಿನಲ್ಲಿ ಗೆದ್ದವನು ಸಾವಿಗೆ ಶರಣಾದ ಕ್ಷಣದಲ್ಲಿ”

  1. Super article pratap sir. Please write about ballary by election.

  2. RajeevReddy says:

    Dir Pratap nice artikcal

  3. MS says:

    Very nice article. Please write about Peter Roebuck also.

  4. Raghu says:

    Nice Article…. Pratap…… and thank u for the information….

  5. Umesh JR says:

    Useless article……………. We never this s frm u….

  6. HAPPY ANNIVERSARY SIR………….

  7. Akhilesh Bhat says:

    Thrilling……Much more sporty!!!!
    I like the way you present…………..Thank You Sir.

  8. Rohit says:

    Article was quite informative,interesting….while reading i felt backgroundalli scrren play aagtidiyeno antha…superb…

  9. rajesh says:

    yep…

  10. santosh ch says:

    i am waiting to watch that fight

  11. vasudeva mysore says:

    Why fight is not going against RB

  12. MANJU says:

    NICE ARTICLE