Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಿಮಗೆ ನಾಚಿಕೆಯೇ ಇಲ್ಲವೆ ಜಯಲಲಿತಾ?

ನಿಮಗೆ ನಾಚಿಕೆಯೇ ಇಲ್ಲವೆ ಜಯಲಲಿತಾ?

“ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಳಿನಿ, ರಾಬರ್ಟ್ ಪ್ಯಾಸ್, ಜಯಕುಮಾರ್ ಹಾಗೂ ರವಿಚಂದ್ರನ್ ಮುಂತಾದ ನಾಲ್ವರ ಜತೆಗೆ ಮುರುಗನ್, ಪೆರಾರಿವಾಲನ್ ಹಾಗೂ ಸಂತನ್‌ರನ್ನೂ ಬಿಡುಗಡೆ ಮಾಡಲು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಕ್ರಮಕ್ಕಾಗಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು. ಒಂದು ವೇಳೆ, 3 ದಿನಗಳೊಳಗಾಗಿ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಭಾರತೀಯ ಸಂವಿಧಾನ ರಾಜ್ಯಕ್ಕೆ ನೀಡಿರುವ ಹಕ್ಕಿನಡಿ ಎಲ್ಲ 7 ಅಪರಾಧಿಗಳನ್ನೂ ಬಿಡುಗಡೆ ಮಾಡಲಾಗುವುದು”!

ಹಾಗಂತ ಮೊನ್ನೆ ಬುಧವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ರಾಜ್ಯ ವಿಧಾನಸಭೆಯಲ್ಲಿ ಘೋಷಣೆ ಮಾಡಿಬಿಟ್ಟರು!

ಅದೃಷ್ಟವಶಾತ್, ರಾಜೀವ್ ಗಾಂಧಿ ಹಂತಕರಾದ ಮುರುಗನ್, ಪೆರಾರಿವಾಲನ್ ಹಾಗೂ ಸಂತನ್ ಬಿಡುಗಡೆಗೆ ಗುರುವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 6ಕ್ಕೆ ನಿಗದಿಪಡಿಸಿದೆ. ಅಂದು ಸುಪ್ರೀಂಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಆದರೆ ಜಯಲಲಿತಾ ತೆಗೆದುಕೊಂಡ ನಿರ್ಧಾರ ಮಾತ್ರ ರಾಜಕಾರಣ, ರಾಜಕಾರಣಿಗಳ ಬಗ್ಗೆ ತೀರಾ ಜುಗುಪ್ಸೆ, ಅಸಹ್ಯ ಹುಟ್ಟಿಸುವಂತಿದೆ. ಪ್ರಧಾನಿ, ಸಿಎಂ ಗಾದಿಗಾಗಿ, ರಾಜಕೀಯ ಲಾಭಕ್ಕಾಗಿ, ಓಲೈಕೆ ಸಲುವಾಗಿ ನಮ್ಮ ರಾಜಕಾರಣಿಗಳು ತತ್ವ ಸಿದ್ಧಾಂತಗಳ ಜತೆ ರಾಜೀ ಮಾಡಿಕೊಳ್ಳುವುದನ್ನು, ಸಣ್ಣತನ ತೋರುವುದನ್ನು, ಪರಸ್ಪರರನ್ನು ಹಣಿಯಲು ಮುಂದಾಗುವುದನ್ನು, ಕೆಳಮಟ್ಟಕ್ಕಿಳಿಯುವುದನ್ನು ನೋಡಿದ್ದೇವೆ. ಆದರೆ ಜಯಲಲಿತಾ ಮಟ್ಟಕ್ಕಿಳಿಯಲು ಬಹುಶಃ ಯಾರಿಗೂ ಸಾಧ್ಯವಿಲ್ಲ.

ನೀವೇ ಹೇಳಿ, ಒಬ್ಬ ಪ್ರಧಾನಿಯನ್ನೇ ಕೊಂದವರನ್ನು ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಲು ಮುಂದಾದ ಈಕೆಯೆಂಥಾ ಲಜ್ಜೆಗೇಡಿ ನಾಯಕಿ?

“ಪ್ರಧಾನಿಮಂತ್ರಿಯ ಹಂತಕರನ್ನೇ ಬಿಡುಗಡೆ ಮಾಡಿದರೆ ಇನ್ನು ಜನಸಾಮಾನ್ಯರಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ? ನಮ್ಮ ದೇಶದಲ್ಲಿ ಪ್ರಧಾನಿಗೂ ನ್ಯಾಯ ಸಿಗುವುದಿಲ್ಲವೆ?” ಎಂದು ರಾಹುಲ್ ಗಾಂಧಿಯವರು ಮನನೊಂದು ಹೇಳಬೇಕಾದಂಥ ದೈನೇಸಿಸ್ಥಿತಿಯನ್ನು ತಂದಿಟ್ಟ ಈ ಜಯಲಲಿತಾಗೆ ಕನಿಷ್ಠ ಅಂಜಿಕೆ, ನಾಚಿಕೆಗಳೇ ಇಲ್ಲವೆ? ದೇಶದ ಹಿತಾಸಕ್ತಿಯನ್ನೇ ಬಲಿಕೊಡುವ ತಮಿಳುನಾಡಿನ ಈ ದರಿದ್ರ ರಾಜಕೀಯಕ್ಕೆ ಕೊನೆಯೆಂದು? ಈ ಮುರುಗನ್, ಪೆರಾರಿವಾಲನ್, ಸಂತನ್‌ರೇನು ತಮಿಳುನಾಡಿನ ಹೆಮ್ಮೆಯ ಪುತ್ರರಾ? ಯಾವ ಘನ ಉದ್ದೇಶಕ್ಕಾಗಿ ಇವರು ರಾಜೀವ್ ಅವರನ್ನು ಕೊಂದರು? ಇಷ್ಟಕ್ಕೂ ಕೊಲ್ಲುವಂಥ ಯಾವ ತಪ್ಪನ್ನು ರಾಜೀವ್ ಗಾಂಧಿಯವರು ಮಾಡಿದ್ದರು?

ಪ್ರತ್ಯೇಕ ತಮಿಳು ರಾಷ್ಟ್ರ ಸ್ಥಾಪನೆಯ ಗುರಿ ಇಟ್ಟುಕೊಂಡಿದ್ದ ಎಲ್‌ಟಿಟಿಇ 1983ರ ವೇಳೆಗೆ ಶ್ರೀಲಂಕಾ ಸರ್ಕಾರಕ್ಕೆ ದೊಡ್ಡ ತಲೆನೋವಾಗತೊಡಗಿತು. ನಿತ್ಯವೂ ದಾಳಿಗಳಾಗತೊಡಗಿದವು. ಹೊಟ್ಟೆಪಾಡಿಗೆ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಈ ದ್ವೀಪ ರಾಷ್ಟ್ರ, ಎಲ್‌ಟಿಟಿಇಯ ಭಯೋತ್ಪಾದನೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಆಗ ಸಹಾಯಕ್ಕಾಗಿ ನೆರೆಯ ಭಾರತಕ್ಕೆ ಮೊರೆಯಿಟ್ಟಿತು. 1987, ಜುಲೈ 27ರಂದು ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಶ್ರೀಲಂಕಾ ಅಧ್ಯಕ್ಷ ಜೆ.ಆರ್. ಜಯವರ್ಧನೆ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಅದರ ಅಂಗವಾಗಿ ಶ್ರೀಲಂಕಾದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಗಾಗಿ ಭಾರತ ತನ್ನ ಶಾಂತಿ ಪಾಲನಾ ಪಡೆಯನ್ನು (ಐಕಿಓಋ) ಕಳುಹಿಸಿತು. ಒತ್ತಡಕ್ಕೆ ಸಿಲುಕಿದ ಎಲ್‌ಟಿಟಿಇ ಪ್ರಾರಂಭದಲ್ಲಿ ಶಸ್ತ್ರಾಸ್ತ್ರಗಳ ಶರಣಾಗತಿಗೆ ಒಪ್ಪಿತು. ಆದರೆ ಅದು ತಾತ್ಕಾಲಿಕ ಸಮಯ ಪಡೆದುಕೊಳ್ಳುವ ತಂತ್ರವಾಗಿತ್ತು ಅಷ್ಟೇ. ಒಳಗಿಂದೊಳಗೇ ತನ್ನ ಬಂಡುಕೋರ ಪಡೆಯನ್ನು ಶಸ್ತ್ರಸಜ್ಜಿತಗೊಳಿಸಿದ ಎಲ್‌ಟಿಟಿಇ, ಹೋರಾಟದ ಮೂಲಕವೇ ಗುರಿ ಸಾಧಿಸುವ ಘೋಷಣೆ ಮಾಡಿತು. ಆಗ ಭಾರತೀಯ ಶಾಂತಿಪಾಲನಾ ಪಡೆ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಂತಾಯಿತು. ಎಲ್‌ಟಿಟಿಇಯ ಗೆರಿಲ್ಲಾ ದಾಳಿಗೆ ಸಿಲುಕಿದ ಭಾರತೀಯ ಪಡೆ ತನ್ನ 1200 ಸೈನಿಕರನ್ನು ಕಳೆದುಕೊಂಡರೆ, ಶ್ರೀಲಂಕಾದ 5 ಸಾವಿರ ಸೈನಿಕರು ಹತರಾದರು. ಆದರೂ ಪ್ರಧಾನಿ ರಾಜೀವ್ ಗಾಂಧಿ ನಮ್ಮ ಶಾಂತಿಪಾಲನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿಲ್ಲ. 1989ರಲ್ಲಿ ಸರ್ಕಾರ ಬಿದ್ದು ವಿ.ಪಿ. ಸಿಂಗ್ ಪ್ರಧಾನಿಯಾದರು. ಅವರು ನಮ್ಮ ಪಡೆಯನ್ನು ಹಿಂದಕ್ಕೆ ಕರೆಸಿಕೊಂಡರು. ಆಗ ಎಲ್‌ಟಿಟಿಇ ನಿಟ್ಟುಸಿರುಬಿಟ್ಟಿತು. ಜತೆಗೆ ತನ್ನ ಪಡೆಯನ್ನು ಇನ್ನೂ ಬಲಪಡಿಸಿಕೊಂಡು ಹೋರಾಟವನ್ನು ತೀವ್ರಗೊಳಿಸಿತು. ಇತ್ತ ವಿ.ಪಿ. ಸಿಂಗ್ ಹಾಗೂ ಚಂದ್ರಶೇಖರ್ ಸರ್ಕಾರಗಳು ಬಿದ್ದು ಎರಡು ವರ್ಷಗಳಲ್ಲೇ ಅಂದರೆ 1991ರಲ್ಲಿ ಮತ್ತೆ ಚುನಾವಣೆ ಏರ್ಪಾಡಾಯಿತು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಯಿತು. ರಾಜೀವ್ ಗಾಂಧಿಯವರು ಪ್ರಧಾನಿಯಾದ ಕೂಡಲೇ ಮತ್ತೆ ನಮ್ಮ ಶಾಂತಿ ಪಾಲನಾ ಪಡೆಗಳನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಾರೆ ಎಂಬುದು ಎಲ್‌ಟಿಟಿಇಗೆ ಗೊತ್ತಾಯಿತು. ಒಮ್ಮೆ ಪ್ರಧಾನಿಯಾದರೆ ಅವರನ್ನು ಕೊಲ್ಲುವುದು ಬಹಳ ಕಷ್ಟ ಎಂಬುದೂ ಅರಿವಾಯಿತು. ಹಾಗಾಗಿ ಶ್ರೀಪೆರಂಬದೂರಿಗೆ ಪ್ರಚಾರಕ್ಕೆ ಬಂದಾಗಲೇ ಮುಗಿಸಲು ಮುಂದಾದರು. ಈ ಕಾರ್ಯವನ್ನು ಎಲ್‌ಟಿಟಿಇ ನಾಯಕ ಪ್ರಭಾಕರನ್ ವಹಿಸಿದ್ದು ಒಕ್ಕಣ್ಣು ಶಿವರಸನ್ ಹಾಗೂ ಮುರುಗನ್‌ಗೆ. ಮರುಗನ್ ಜತೆ ಬಹಳ ಕ್ರೀಯಾಶೀಲವಾಗಿ ಭಾಗಿಯಾಗಿದ್ದೇ ಈ ಪೆರಾರಿವಾಲನ್ ಹಾಗೂ ಸಂತನ್. ಈ ಮೂವರು ಚಾಂಡಾಲರಿಗೆ 1999ರಲ್ಲೇ ಗಲ್ಲುಶಿಕ್ಷೆಯನ್ನು ಘೋಷಣೆ ಮಾಡಲಾಯಿತು. 2000ದಲ್ಲಿ ರಾಷ್ಟ್ರಪತಿ ಬಳಿ ಕ್ಷಮಾದಾನಕ್ಕೆ ಅರ್ಜಿ ಹೋಯಿತು. ಆದರೆ ನಮ್ಮ ರಾಷ್ಟ್ರಪತಿ ಮಹೋದಯರುಗಳು ಅರ್ಜಿಯನ್ನು ಪೃಷ್ಠದಡಿ ಹಾಕಿಕೊಂಡು ಕುಳಿತರು. 2011ರಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹನ್ನೊಂದೂವರೆ ವರ್ಷಗಳ ನಂತರ ತಿರಸ್ಕಾರ ಮಾಡಿದರು. ಇದರ ವಿರುದ್ಧ ಮತ್ತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಲಾಯಿತು. ಮೊನ್ನೆ ಮಂಗಳವಾರ ತೀರ್ಪು ನೀಡಿದ ಸುಪ್ರೀಂಕೋರ್ಟ್, ಕ್ಷಮಾದಾನ ಅರ್ಜಿಯ ಮೇಲೆ ನಿರ್ಧಾರ ತೆಗೆದುಕೊಳ್ಳಲು 11 ವರ್ಷಗಳಷ್ಟು ಸುದೀರ್ಘ ವಿಳಂಬ ಮಾಡಿದ್ದು ಸಲ್ಲ ಎಂದು ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತು.

ಆಗ ಜಯಲಲಿತಾ ಅವರಲ್ಲಿನ ಅವಕಾಶವಾದಿ ರಾಜಕಾರಣಿ ಜಾಗೃತನಾದ!

ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸುಪ್ರೀಂಕೋರ್ಟ್ ತೀರ್ಪನ್ನೇ ನೆಪವಾಗಿಟ್ಟುಕೊಂಡು ಎಲ್ಲ 7 ಅಪರಾಧಿಗಳಿಗೆ ಕ್ಷಮೆ ಕೊಟ್ಟು ತಕ್ಷಣವೇ ಬಿಡುಗಡೆ ಮಾಡಲು ಮುಂದಾದರು. ಇತ್ತ ಚುನಾವಣೆ ಮುಂದಿರುವುದರಿಂದ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ವಿರೋಧಿಸಿದರೆ ತಮಿಳರ ವಿರೋಧಿ ಎನಿಸಿಕೊಳ್ಳಬೇಕಾಗುತ್ತದೆ. ಜಯಲಲಿತಾ ಅವರ ಪ್ರಮುಖ ಎದುರಾಳಿಯಾದ ಡಿಎಂಕೆ ಹಾಗೂ ನಟ ವಿಜಯ್‌ಕಾಂತರ ಡಿಎಂಡಿಕೆ ಕೂಡ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿವೆ. ವಿರೋಧಿಸುವಂತೆಯೂ ಇಲ್ಲ, ಬೆಂಬಲಿಸದೇ ಗತಿಯೂ ಇಲ್ಲ. ಬೆಂಬಲಿಸಿದರೆ ನೈತಿಕವಾಗಿ ತಪ್ಪಿದಂತಾಗುತ್ತದೆ, ಜತೆಗೆ ರಾಜಕೀಯ ಲಾಭವೆಲ್ಲ ಜಯಲಲಿತಾ ಪಾಲಾಗುತ್ತದೆ. ವಿರೋಧಿಸಿದರಂತೂ ಕಥೆ ಮುಗಿಯಿತು. ರಾಜಕೀಯ ದೃಷ್ಟಿಯಲ್ಲಿ ಇದು ಖಂಡಿತ ಜಯಲಲಿತಾ ಬಿಟ್ಟ ಬ್ರಹ್ಮಾಸ್ತ್ರ. ಆದರೆ ನೈತಿಕವಾಗಿ ಆಕೆ ಅಧಃಪತನಕ್ಕಿಳಿದಿದ್ದಾರೆ ಅಷ್ಟೇ.

ಹಾಗಾದರೆ ರಾಜಕೀಯ ಲಾಭಕ್ಕಾಗಿ ಈಕೆ ಏನು ಮಾಡುವುದಕ್ಕೂ ಹೇಸದ ಮಹಿಳೆಯೇ? ಅಲ್ಲಾ, ನಮ್ಮ ದೇಶದ ಮಾಜಿ ಪ್ರಧಾನಿಯನ್ನು ಕೊಲ್ಲುವುದು ಸಾಮಾನ್ಯ ಅಪರಾಧವೆ? ಪ್ರಧಾನಿಯನ್ನೇ ಕೊಂದವರ ಬಗ್ಗೆಯೂ ಮರುಕ ಇಟ್ಟುಕೊಂಡಿರುವ ತಮಿಳಿಗರದ್ದು ಇದೆಂಥಾ ಮನಸ್ಥಿತಿ? ಪ್ರತಿ ಜಿಲ್ಲೆಗೂ ಒಂದೊಂದು ನವೋದಯ ಶಾಲೆ ತೆರೆದು ಬಡ ಪ್ರತಿಭಾನ್ವಿತ ಮಕ್ಕಳಿಗೆ ಭವಿಷ್ಯ ಸೃಷ್ಟಿಸಿಕೊಟ್ಟ, ಮತದಾನದ ವಯೋವುತಿಯನ್ನು 21ರಿಂದ 18ಕ್ಕಿಳಿಸಿ ಯುವಕರು ರಾಜಕೀಯದಲ್ಲಿ ಪಾಲ್ಗೊಳ್ಳುವ ಹಾಗೂ ದೇಶದ ಭವಿಷ್ಯ ನಿರ್ಧರಿಸುವ ಅವಕಾಶ ಮಾಡಿಕೊಟ್ಟ ಈ ದೇಶದ ಜನಪ್ರಿಯ ಮಾಜಿ ಪ್ರಧಾನಿಯ ಜೀವಕ್ಕಿಂತ ಚಾಂಡಾಲರೇ ಇವರಿಗೆ ಮುಖ್ಯವಾದರೆ?

ಅವತ್ತು ರಾಜೀವ್ ಗಾಂಧಿ ಏಕಾಗಿ ನಮ್ಮ ಶಾಂತಿ ಪಾಲನಾ ಪಡೆಗಳನ್ನು ಶ್ರೀಲಂಕಾಕ್ಕೆ ಕಳುಹಿಸಿದ್ದರು ಅಂದುಕೊಂಡಿರಿ?

ಒಂದು ವೇಳೆ, ಅಂದು ಭಾರತ ತನ್ನ ಪಡೆಗಳನ್ನು ಕಳುಹಿಸಿಕೊಡದಿದ್ದರೆ ನಮ್ಮ ಬದ್ಧ ವೈರಿಗಳಾದ ಪಾಕಿಸ್ತಾನ ಹಾಗೂ ಚೀನಾ ಕಳುಹಿಸಿಕೊಡುತ್ತಿದ್ದವು. ಈ ಎರಡೂ ರಾಷ್ಟ್ರಗಳು ತುದಿಗಾಲಿನಲ್ಲಿದ್ದವು. ಅಂದು ನಮ್ಮ ಶಾಂತಿ ಪಾಲನಾ ಪಡೆ ಕಳುಹಿಸಿಕೊಡುವ ಮೂಲಕ ಚೀನಾ ಹಾಗೂ ಪಾಕಿಸ್ತಾನ ಹಿಂದು ಮಹಾ ಸಾಗರಕ್ಕೆ(ಇಂಡಿಯನ್ ಓಶನ್) ಕಾಲಿಡದಂತೆ ರಾಜೀವ್ ಗಾಂಧಿ ನೋಡಿಕೊಂಡರು. ಈ ಮಾತಿನಲ್ಲಿ ನಿಮಗೆ ನಂಬಿಕೆ ಇಲ್ಲವೆಂದಾದರೆ 2008-09ರಲ್ಲಿ ಆಗಿದ್ದೇನು? ಅಂದು ಶ್ರೀಲಂಕಾ ಸೇನೆ ಎಲ್‌ಟಿಟಿಇ ವಿರುದ್ಧ ವ್ಯಾಪಕ ಮಿಲಿಟರಿ ಕಾರ್ಯಾಚರಣೆಗೆ ಮುಂದಾದಾಗ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿತು. ಆಗ ಯುಪಿಎ ಸರ್ಕಾರಕ್ಕೆ ಡಿಎಂಕೆ ಬೆಂಬಲ ಬಹುಮುಖ್ಯವಾಗಿತ್ತು. ಇಂತಹ ತಮಿಳು ಬ್ಲ್ಯಾಕ್‌ಮೇಲ್‌ಗೆ ಬಾಗಿದ ಮನಮೋಹನ್ ಸಿಂಗ್ ಸರ್ಕಾರ ಮನವಿಗೆ ಓಗೊಡಲಿಲ್ಲ. ಆಗ ಚೀನಾ ಶ್ರೀಲಂಕಾದ ಸಹಾಯಕ್ಕೆ ಮುಂದಾಯಿತು. ಎಲ್‌ಟಿಟಿಇ ಅನ್ನು ಹತ್ತಿಕ್ಕಿದ ಶ್ರೀಲಂಕಾ ಸರ್ಕಾರ, ಸಮಸ್ಯೆಯಿಂದ ಹೊರಬಂದಿದೆ. ಜೊತೆಗೆ ಸಹಾಯಕ್ಕೆ ಪ್ರತಿಯಾಗಿ ಚೀನಾಕ್ಕೆ ಆಭಾರಿಯಾಗಿದೆ. ಇಂದು ಶ್ರೀಲಂಕಾದಲ್ಲಿ ಹೊಸ ಸರ್ಕಾರ ಬಂದ ಕೂಡಲೇ ಮೊದಲ ಆಹ್ವಾನ ಹೋಗುವುದು ಚೀನಾಕ್ಕೆ. ಈ ಮೊದಲು ನೆರೆಯ ಹಿರಿಯಣ್ಣ ಭಾರತಕ್ಕೆ ಬರುತ್ತಿತ್ತು. ಶ್ರೀಲಂಕಾದ ಬಂದರು ನವೀಕರಣ, ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಚೀನಾ ಹಿಂದು ಮಹಾಸಾಗರಕ್ಕೆ ಬಂದು ಕುಳಿತಿದೆ. ಹೀಗೆ ಪಾಕಿಸ್ತಾನದ ಗ್ವದಾರ್ ಬಂದರು ನವೀಕರಣದ ಹೆಸರಿನಲ್ಲಿ ಅರಬ್ಬೀ ಸಮುದ್ರ, ಬಾಂಗ್ಲಾ-ಬರ್ಮಾ ಬಂದರು ನಿರ್ಮಾಣದ ಹೆಸರಿನಲ್ಲಿ ಬಂಗಾಳಕೊಲ್ಲಿಗೆ ಆಗಮಿಸಿದ್ದ ಚೀನಾ, ಈಗ ಹಿಂದು ಮಹಾಸಾಗರಕ್ಕೆ ಆಗಮಿಸುವ ಮೂಲಕ ಮೂರೂ ಸಮುದ್ರ ಮಾರ್ಗದಿಂದಲೂ ಭಾರತವನ್ನು ಸುತ್ತುವರೆದಂತಾಗಿದೆ. ಈಗ ಹೇಳಿ, ರಾಜೀವ್ ಗಾಂಧಿಯವರು ಅಂದು ಮಾಡಿದ್ದು ತಪ್ಪಾ? ಇಲ್ಲವೆಂದಾದರೆ ಯಾವ ಘನ ಮಾಡಿದರೆಂದು ಚಾಂಡಾಲರನ್ನು ಬಿಡುಗಡೆ ಮಾಡಲು ಜಯಲಲಿತಾ ಹೊರಟಿದ್ದಾರೆ? ತಮಿಳುನಾಡಿನ ಇಂಥ ರಾಜಕಾರಣಕ್ಕೆ ಎಷ್ಟು ದಿನ ದೇಶದ ಹಿತ ಬಲಿಕೊಡಬೇಕು ಹೇಳಿ?

ಒಂದು ಕಾಲದಲ್ಲಿ ಎಲ್‌ಟಿಟಿಇಯಿಂದ ಜೀವ ಬೆದರಿಕೆಗೆ ಒಳಗಾಗಿದ್ದ ವ್ಯಕ್ತಿ ಜಯಲಲಿತಾ. ಮತಪೆಟ್ಟಿಗೆಗಾಗಿ ಇಂದು ಆಕೆಯೇ ವಿಛ್ಛಿದ್ರಕಾರಕ ಶಕ್ತಿಗಳ ಬೆಂಬಲಕ್ಕೆ ಬಂದಿರುವುದು ಎಂಥ ದುರಂತ ನೋಡಿ? ಈಕೆ ಅತ್ಯಂತ ಐಲು ಮನಸ್ಥಿತಿಯ ಮಹಿಳೆ. ಡಿಎಂಕೆ ಇದ್ದಾಗ ಅಷ್ಟಾಗಿ ಕಾವೇರಿ ಗಲಾಟೆಯಾಗುವುದಿಲ್ಲ. ಈಕೆ ಬಂದರೆ ಕ್ಯಾತೆ. 1998ರಲ್ಲಿ ಅಟಲ್ ಸರ್ಕಾರ ಒಂದು ವೋಟಿನಿಂದ ಬೀಳುವ ಮೊದಲು ಈಕೆ ಆಡಿದ ನಾಟಕವೇನು ಕಡಿಮೆಯದ್ದೇ? ಬೆಂಬಲ ಕೊಡುತ್ತೇನೆ ಎಂದುಕೊಂಡೇ ಪತ್ರ ನೀಡುವುದಕ್ಕೆ ವಾರವಿಡೀ ಸತಾಯಿಸಿ ಕೊನೆಗೆ ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಮೋದ್ ಮಹಾಜನ್‌ರನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳದೆ ವಾಪಸ್ಸಟ್ಟಿದ್ದರು. ಇಷ್ಟಾಗಿಯೂ ಬಿಜೆಪಿ ಬುದ್ಧಿ ಕಲಿಯಲಿಲ್ಲ. ಬಿಜೆಪಿಯವರು ರೂಪಿಸಿದ ಪೋಟಾ ಕಾಯಿದೆಯನ್ನೇ ಬಳಸಿಕೊಂಡು ಬಿಜೆಪಿಯ ಸಹಯೋಗಿ ಎಂಡಿಎಂಕೆ ನೇತಾರ ವೈಕೋರನ್ನು ಜಯಲಲಿತಾ 17 ತಿಂಗಳ ಕಾಲ ಜೈಲಲ್ಲಿಟ್ಟರೂ ವಾಜಪೇಯಿ ಸರ್ಕಾರ ಕಳ್ಳಬೆಕ್ಕಿನಂತೆ ಸುಮ್ಮನೆ ಕುಳಿತಿತ್ತು. ಇಂಥ ಧೋರಣೆಯಿಂದ 2004ರಲ್ಲಿ ಡಿಎಂಕೆಯಂಥ ನಿಷ್ಠ ಸಹಯೋಗಿಯನ್ನು ಬಿಟ್ಟ ಬಿಜೆಪಿ, ಈ ಅಮ್ಮನ ಹಿಂದೆ ಹೋಗದಿದ್ದರೆ 2004ರಲ್ಲೂ ಮತ್ತೆ ಅಧಿಕಾರಕ್ಕೇರಬಹುದಿತ್ತು. 2004ರಲ್ಲಿ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ತಮಿಳುನಾಡು-ಪಾಂಡಿಚೆರಿಯ 40ಕ್ಕೆ 40 ಸ್ಥಾನಗಳನ್ನೂ ಗೆದ್ದುಕೊಂಡಿದ್ದವು! ಈಕೆಯ ಪದಕೋಶದಲ್ಲಿ ನಿಷ್ಠೆ ಅನ್ನೋದೆ ಇಲ್ಲ. 2011ರಲ್ಲಿ ವಿಜಯ್‌ಕಾಂತ್ ಅವರ ಡಿಎಂಡಿಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದ ಜಯಲಲಿತಾ, ಸ್ವಂತ ಬಲದಿಂದಲೇ ಬಹುಮತ ಸಿಕ್ಕ ಕೂಡಲೇ ಡಿಎಂಡಿಕೆಯನ್ನು ಡಂಪ್ ಮಾಡಿದರು. ಇನ್ನೊಂದು ವಿಷಯ ಕೇಳಿ: 2012ರಲ್ಲಿ ಒಂದು ದಿನ ರಾತ್ರೋರಾತ್ರಿ ತನ್ನ ಆಪ್ತೆ ಶಶಿಕಲಾ ಹಾಗೂ ದತ್ತುಪುತ್ರನನ್ನು ಮನೆಯಿಂದ ಹೊರಹಾಕಿದ್ದು ನೆನಪಿದೆಯಲ್ಲವೆ? ಶಶಿಕಲಾ ತಮಗೆ ಸ್ಲೋ ಪಾಯ್ಸನ್ ಹಾಕಿ ಕೊಂದು, ತಾನೇ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ ಎಂಬುದರ ಸುಳಿವು ಕೊಟ್ಟಿದ್ದೇ ನರೇಂದ್ರ ಮೋದಿ! ಅದು ನಿಜವೆಂಬುದನ್ನು ಖಾತ್ರಿ ಮಾಡಿಕೊಂಡ ಜಯಲಲಿತಾ, ಶಶಿಕಲಾರನ್ನು ಹೊರಹಾಕಿದರು, ಮೋದಿ ಬಗ್ಗೆ ಬಹಳ ಕೃತಜ್ಞತೆ ಬೆಳೆಸಿಕೊಂಡರು. ಆದರೆ ಯಾವಾಗ ಮೋದಿ ಪ್ರಧಾನಿಯಾಗುವ ಲಕ್ಷಣ ಕಂಡುಬಂತೋ, ಯಾವಾಗ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿತೋ ಕನಿಷ್ಠ ಅಭಿನಂದಿಸುವ ಸೌಜನ್ಯವನ್ನೂ ಆಕೆ ತೋರಲಿಲ್ಲ. ಆದರೆ ಮೋದಿ ಆಕೆಗಿಂತ ಬುದ್ಧಿವಂತ. ತಮಿಳುನಾಡಿನಲ್ಲಿ ಎನ್‌ಡಿಎನ ಹಳೆಯ ದೋಸ್ತ್‌ಗಳಾದ ಪಿಎಂಕೆ, ಎಂಡಿಎಂಕೆಗಳನ್ನು ತೆಕ್ಕೆಗೆ ಸೆಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಗೆಲ್ಲುವ ಯಾವ ಸಾಧ್ಯತೆಯೂ ಇಲ್ಲದಿದ್ದರೂ ಈಗಾಗಲೇ ಆ ರಾಜ್ಯದಲ್ಲಿ 3 ರ್ಯಾಲಿ ನಡೆಸುವ ಮೂಲಕ ಹವಾ ಎಬ್ಬಿಸುತ್ತಿದ್ದಾರೆ.

ಇದೇನೇ ಇರಲಿ, ಚುನಾವಣಾ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವಾಕೆ ತಾನು ಎಂಬುದನ್ನು ಜಯಲಲಿತಾ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಅಷ್ಟೇ. ಆಟಲ್ ಬಿಹಾರಿ ವಾಜಪೇಯಿಯವರ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳೆರಡೂ ನೆರೆಹೊರೆಯವರ ಜತೆಗಿನ ವಿದೇಶಾಂಗ ನೀತಿಯಲ್ಲಿ ಎಡವಿದವು. ನೇಪಾಳ ಇಂದು ಚೀನಾಕ್ಕೆ ಹತ್ತಿರವಾಗಿದೆ. ಬಾಂಗ್ಲಾ-ಬರ್ಮಾಗಳೂ ಚೀನಾಕ್ಕೆ ಆಪ್ತವಾಗಿವೆ. ಸಣ್ಣ ಮಾಲ್ಡೀವ್ಸ್ ಕೂಡ ಭಾರತಕ್ಕೆ ಕ್ಯಾರೇ ಎನ್ನುತ್ತಿಲ್ಲ. ಶ್ರೀಲಂಕಾದ ವಿಷಯದಲ್ಲಿ ಈಗಾಗಲೇ ಎಡವಿದ್ದೇವೆ. ಮತ್ತೆ ಮತ್ತೆ ತಪ್ಪೆಸಗಬಾರದೆಂದರೆ ತಮಿಳುನಾಡಿನ ಈ ಕೊಳಕು ರಾಜಕಾರಣಕ್ಕೆ ತೆರೆ ಎಳೆಯಬೇಕು. ಇಲ್ಲವಾದರೆ ಕಾಶ್ಮೀರಿಗನೆಂಬ ಕಾರಣಕ್ಕೆ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೆಂದು ಜಮ್ಮು ಕಾಶ್ಮೀರ ಸರ್ಕಾರ ಮಾಡಿಕೊಂಡಿದ್ದ ಮನವಿ, ಖಾಲಿಸ್ತಾನ್ ಭಯೋತ್ಪಾದಕ ಬುಲ್ಲರ್‌ಗೆ ಕ್ಷಮಾದಾನ ನೀಡಬೇಕೆಂಬ ಅಕಾಲಿದಳದ ಒತ್ತಡಗಳಿಗೂ ಮಣಿಯಬೇಕಾಗುತ್ತದೆ, ಎಚ್ಚರ!

8 Responses to “ನಿಮಗೆ ನಾಚಿಕೆಯೇ ಇಲ್ಲವೆ ಜಯಲಲಿತಾ?”

 1. NAGESH BHAT Y says:

  Pratap Sir….

  Aa amman Hanebarahana yelru odho hage bardidira….Adru avlu Tamilanadinda Odidmelene Tamilnadu and Kaveri Galate Saryagodu…. Yenantira Annayya…..?!

 2. Shiv says:

  Good one sir….

 3. shalini says:

  sooperrr sir… ur scoldings are the best part…:)

 4. There is also chance to kill rahul Gandhi . .may be jayllaitha has given deal to rajeev Gandhi killers. Rahul Gandhi should increase security. Amendment should take place. Best lawyer can handle this case in supreme court

 5. Samarth says:

  Great Article Pratap

 6. Dr. Jyotirling Savle says:

  Very good article. But, please do not use words like ‘pushta’ & ‘chandala’. We know they are condemnable. They should be condemned. I am not telling not to condemn them. Condemn them but retain your gentlemanliness.

 7. vasanth kumar says:

  Hmmm bloody politics

 8. Natio says:

  Hello Pratap,

  Please read through my attempt at translating this article of yours into English:
  http://rajivkillers.blogspot.in/