Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದರ್ಪ ಮೆರೆದ ಇಂದಿರೆಯೊಳಗೊಬ್ಬ ದುರ್ಗೆಯೂ ಇದ್ದಳು!

ದರ್ಪ ಮೆರೆದ ಇಂದಿರೆಯೊಳಗೊಬ್ಬ ದುರ್ಗೆಯೂ ಇದ್ದಳು!

Indiraಆಕೆಯನ್ನು ತೆಗಳಬೇಕು ಎಂದುಕೊಂಡರೆ ನೂರಾರು ಕಾರಣಗಳು ಸಿಗುತ್ತವೆ. ತುರ್ತು ಪರಿಸ್ಥಿತಿಯನ್ನು ನೆನಪಿಸಿ ಕೊಳ್ಳಬಹುದು, ಆಪರೇಶನ್ ಬ್ಲೂಸ್ಟಾರ್ ಕಣ್ಣಮುಂದೆ ಬರುತ್ತದೆ, ಆಡಳಿತದ ದುರುಪಯೋಗ, ದರ್ಪ ಎದ್ದು ಕಾಣುತ್ತದೆ, ರಾಜಕೀಯ ಪ್ರತೀಕಾರ ಎದ್ದು ನಿಲ್ಲುತ್ತದೆ. ಈ ಕಾರಣಗಳಿಗಾಗಿ ಆಕೆಯನ್ನು ಸಾಕಷ್ಟು ಬಾರಿ ಕಟಕಟೆಗೆ ತಂದುನಿಲ್ಲಿಸಿದ್ದೂ ಆಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ಮನದ ಯಾವುದೋ ಮೂಲೆಯಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಗೌರವ ಮೂಡುತ್ತದೆ. ಅವರೆಂತಹ ಗಟ್ಟಿಗಿತ್ತಿ ಎಂಬುದಕ್ಕೆ ಬಾಂಗ್ಲಾ ಯುದ್ಧವೊಂದೇ ಸಾಕು. ಅದು ಬರೀ ಒಂದು ಯುದ್ಧವಾಗಿರಲಿಲ್ಲ, ಪೌರುಷ ಪ್ರದರ್ಶನದ ವೇದಿಕೆಯೂ ಅಲ್ಲವಾಗಿತ್ತು. ನಿಜವಾದ ಇಂದಿರಾಗಾಂಧಿ ಯಾರು ಎಂಬುದನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟ ಯುದ್ಧವದು.

“ಉರ್ದು ಹಾಗೂ ಉರ್ದುವೊಂದೇ ಪಾಕಿಸ್ತಾನದ ಅಧಿಕೃತ ಭಾಷೆ” ಎಂದು 1948ರಲ್ಲಿ ಮಹಮದ್ ಅಲಿ ಜಿನ್ನಾ ಘೋಷಣೆ ಮಾಡಿದ ಮರುಕ್ಷಣದಲ್ಲೇ ಪಾಕಿಸ್ತಾನ ಮತ್ತೊಂದು ವಿಭಜನೆಗೆ ಸಿದ್ಧವಾಗತೊಡಗಿತ್ತು. ಪಂಜಾಬ್, ಹೈದರಾಬಾದ್, ಕರಾಚಿ, ಲಾಹೋರ್, ಬಲೂಚಿಸ್ತಾನ, ವಜೀರಿ ಸ್ತಾನಗಳನ್ನೊಳಗೊಂಡ ‘ಪಶ್ಚಿಮ ಪಾಕಿಸ್ತಾನ’ದಲ್ಲಿ ಉರ್ದು ಪ್ರಮುಖ ಭಾಷೆಯಾಗಿದ್ದರೂ ಬಂಗಾಳಕೊಲ್ಲಿಯ ತೀರದಲ್ಲಿದ್ದ ‘ಪೂರ್ವ ಪಾಕಿಸ್ತಾನ’(ಬಾಂಗ್ಲಾದೇಶ) ಹಾಗೂ ಬಂಗಾಳಿ ಭಾಷೆಗೂ ಅವಿನಾಭಾವ ಸಂಬಂಧ. ಮೊದಲೇ ಸಾಹಿತ್ಯ, ಕವಿತೆ, ಕಾವ್ಯ ಪ್ರೇಮಿಗಳಾದ ಪೂರ್ವ ಪಾಕಿಸ್ತಾನಿಯರಿಗೆ ತಮ್ಮ ಮಾತೃ ಭಾಷೆಯಾದ ಬಂಗಾಳಿಯ ಬಗ್ಗೆ ಬಹು ಗೌರವ, ಪ್ರೀತಿಗಳಿದ್ದವು. ಹಾಗಿರುವಾಗ ‘ಉರ್ದುವೊಂದೇ ಅಧಿಕೃತ ಭಾಷೆ’ ಎಂದರೆ ಸುಮ್ಮನಾದಾರೆ?

ಅಂದೇ ಭಿನ್ನಾಭಿಪ್ರಾಯ ಆರಂಭವಾಯಿತು.

ಇತ್ತ ಜಿನ್ನಾ ಮರಣ, ಮೊದಲ ಪ್ರಧಾನಿ ಲಿಯಾಕತ್ ಅಲಿ ಖಾನ್ ಕೊಲೆ ನಂತರ ಮಿಲಿಟರಿ ಆಡಳಿತಗಾರರ ಕಪಿಮುಷ್ಟಿಗೆ ಸಿಲುಕಿದ ಪಾಕಿಸ್ತಾನ ಅಧಃಪತನದತ್ತ ಸಾಗುತ್ತಾ ನಡೆಯಿತು. ಭಾಷೆ, ಸಂಸ್ಕೃತಿ, ರಾಜಕೀಯ ಧೋರಣೆಗಳು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದವು. “ಪೂರ್ವ ಪಾಕಿಸ್ತಾನಿಯರು ಇಂದಿಗೂ ಹಿಂದೂ ಸಂಸ್ಕೃತಿ ಮತ್ತು ಪ್ರಭಾವದಲ್ಲೇ ಇದ್ದಾರೆ. ಅದೇ ಪ್ರತ್ಯೇಕತೆಗೆ ಮುಖ್ಯ ಕಾರಣ” ಎನ್ನುತ್ತಿದ್ದ ಮಿಲಿಟರಿ ಆಡಳಿತಗಾರ ಅಯೂಬ್ ಖಾನ್ ಹಾಗೂ ಆತನ ನಂತರ ಅಧಿಕಾರಕ್ಕೇರಿದ ಯಾಹ್ಯಾ ಖಾನ್ ಅವರ ಆಡಳಿತ ವೈಖರಿ ಪೂರ್ವಪಾಕಿಸ್ತಾನ ಮಾನಸಿಕವಾಗಿ ಮತ್ತೂ ದೂರ ಸರಿಯುವಂತೆ ಮಾಡಿತು. ಈ ಮಧ್ಯೆ, 1970ರಲ್ಲಿ ಬೀಸಿದ ಚಂಡಮಾರುತ ಪೂರ್ವ ಪಾಕಿಸ್ತಾನವನ್ನು ಹೆಚ್ಚೂಕಡಿಮೆ ಸಂಪೂರ್ಣವಾಗಿ ದುಃಸ್ಥಿತಿಗೆ ದೂಡಿತು. ಆಡಳಿತದ ಚುಕ್ಕಾಣಿ ಹಿಡಿದಿದ್ದ ಯಾಹ್ಯಾಖಾನ್ ಪರಿಹಾರ ಕಾರ್ಯಾಚರಣೆ ವೇಳೆ ತೋರಿದ ತಾರತಮ್ಯ ಷೇಖ್ ಮುಜೀಬುರ್ ರೆಹಮಾನ್ ಅವರ ‘ಅವಾಮಿ ಲೀಗ್’ ಪಕ್ಷ ‘ಬಾಂಗ್ಲಾ ಮುಕ್ತಿವಾಹಿನಿ’ ಎಂಬ ಪಡೆ ರಚಿಸಿಕೊಂಡು ಸ್ವಾತಂತ್ರ್ಯ ಹೋರಾಟ ಆರಂಭಿಸುವಂತೆ ಮಾಡಿತು. ಈ ಎಲ್ಲ ಭಿನ್ನಾಭಿಪ್ರಾಯಗಳ ಕ್ಲೈಮಾಕ್ಸ್ ಅನ್ನು 1970ರಲ್ಲಿ ನಡೆದ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ಕಾಣಬಹುದು. ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯ ಒಟ್ಟು ಸದಸ್ಯ ಬಲ 313. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆ ಯಾರು ಗೆಲ್ಲುತ್ತಾರೋ ಆ ಪಕ್ಷದ ನಾಯಕ ಮುಂದಿನ ಪ್ರಧಾನಿಯಾಗಲಿದ್ದ. ಪೂರ್ವ ಪಾಕಿಸ್ತಾನ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿತ್ತಾದರೂ ಸಾಮಾನ್ಯವಾಗಿ ಪಶ್ಚಿಮ ಪಾಕಿಸ್ತಾನಕ್ಕೆ ಸೇರಿದ ವ್ಯಕ್ತಿಯೇ ಪಾಕಿಸ್ತಾನದ ಪ್ರಧಾನಿಯಾಗುತ್ತಿದ್ದರು. 1970, ಡಿಸೆಂಬರ್ ೭ರಂದು ನಡೆದ ಚುನಾವಣೆಯಲ್ಲಿ ಷೇಖ್ ಮುಜೀಬುರ್ ರೆಹಮಾನ್ ಅವರ ಅವಾಮಿ ಲೀಗ್ ಪೂರ್ವ ಪಾಕಿಸ್ತಾನದ ಒಟ್ಟು 162 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆದ್ದುಕೊಂಡಿತು. ಮೊಟ್ಟಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಪೂರ್ವಪಾಕಿಸ್ತಾನಕ್ಕೆ ಸೇರಿದ ನಾಯಕನ ಕೈಸೇರುವ ಸಂದರ್ಭ ಎದುರಾಯಿತು. ಮೂಲತಃ ಸಿಂಧಿಯಾಗಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ(ಪಿಪಿಪಿ) ನಾಯಕ ಝುಲ್ಫಿಕರ್ ಅಲಿ ಭುಟ್ಟೋ ತಗಾದೆ ತೆಗೆದರು. ಮುಜಿಬುರ್ ರೆಹಮಾನ್ ಪ್ರಧಾನಿಯಾಗಲು ಅಡ್ಡಗಾಲು ಹಾಕಿದರು. ಈ ಹಿನ್ನೆಲೆಯಲ್ಲಿ ಭುಟ್ಟೋ, ಮಿಲಿಟರಿ ನಾಯಕ(ಪಾಕ್ ಅಧ್ಯಕ್ಷ) ಜನರಲ್ ಯಾಹ್ಯಾಖಾನ್ ಮತ್ತು ಮುಜಿಬುರ್ ರೆಹಮಾನ್ 1971, ಮಾರ್ಚ್ 3ರಂದು ಢಾಕಾದಲ್ಲಿ ಸಭೆ ಸೇರಿದರು. ಮಾತುಕತೆ ವಿಫಲಗೊಂಡಿತು. ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ್ದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಪ್ರತಿಭಟನೆ, ಧರಣಿಗೆ ಅವಾಮಿ ಲೀಗ್ ಕರೆಕೊಟ್ಟಿತು. ಮತ್ತೆ ಪ್ರತ್ಯೇಕತೆಯ ಕೂಗು ಕೇಳಲಾರಂಭಿಸಿತು. ಸಿಟ್ಟಿಗೆದ್ದ ಯಾಹ್ಯಾಖಾನ್ ಬಾಂಗ್ಲಾಕ್ಕೆ ಸೇನೆಯನ್ನು ಕಳುಹಿಸಿ ಬಂದೂಕಿನ ಮೂಲಕ ಹೋರಾಟವನ್ನು ಹತ್ತಿಕ್ಕಲು ಹೊರಟರು. ಮುಜಿಬುರ್ ರೆಹಮಾನ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಅವಾಮಿ ಲೀಗ್ ಕಾರ್ಯಕರ್ತರನ್ನು ಹೆಕ್ಕಿ ಕೊಲ್ಲುವ ಕಾರ್ಯ ಆರಂಭವಾಯಿತು. ಆಗ ಪೂರ್ವಪಾಕಿಸ್ತಾನದಲ್ಲಿ ೨೪ ಪರ್ಸೆಂಟ್ ಹಿಂದೂಗಳೂ ಇದ್ದರು. ಅವರೂ ಹಿಂಸೆಗೆ ತುತ್ತಾದರು. ಭಯಭೀತರಾದ ಜನ ಭಾರತಕ್ಕೆ ಪಲಾಯನ ಮಾಡತೊಡಗಿದರು. ಕೋಟಿಗೂ ಮೀರಿದ ಬಾಂಗ್ಲಾದೇಶಿಯರು ಪಶ್ಚಿಮ ಬಂಗಾಳ, ತ್ರಿಪುರಾ, ಅಸ್ಸಾಂ ಮುಂತಾದ ನಮ್ಮ ರಾಜ್ಯಗಳಿಗೆ ಓಡಿಬಂದರು. ಕಾರ್ಯಾಚರಣೆ ಮಾಡುತ್ತಿದ್ದುದು ಪಾಕಿಸ್ತಾನವಾದರೂ ನಿರಾಶ್ರಿತರ ಪೋಷಣೆ ಜವಾಬ್ದಾರಿ ಭಾರತದ ಹೆಗಲೇರಿತು.

ಇಂದಿರಾ ದುರ್ಗೆಯಾಗಿದ್ದು ಆ ಘಟನೆಯ ನಂತರವೇ!

1971ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತ್ತು. ಆಕೆ 1971, ಮಾರ್ಚ್ 17ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಮರು ಆಯ್ಕೆಯಾದರು. ಹೀಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಇಂದಿರಾಗಾಂಧಿ ಮೇ 15, 16ರಂದು ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮುಂತಾದ ಗಡಿ ರಾಜ್ಯಗಳಿಗೆ ಭೇಟಿಕೊಟ್ಟು ಬಾಂಗ್ಲಾ ನಿರಾಶ್ರಿತರ ಆಗಮನದಿಂದಾಗಿ ಸೃಷ್ಟಿಯಾಗಿ ರುವ ಸಮಸ್ಯೆ ಮತ್ತು ಸಂಕಷ್ಟಗಳನ್ನು ಖುದ್ದು ನೋಡಿಬಂದರು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿದೆ, ನಿಶಸ್ತ್ರಧಾರಿ ಬಂಗಾಳಿಯರ ಮೇಲೆ ಪಾಕ್ ಸೇನೆ ಹೇಗೆ ದೌರ್ಜನ್ಯವೆಸಗುತ್ತಿದೆ ಎಂಬುದನ್ನು 1971, ಮೇ 24ರಂದು ನಮ್ಮ ಸಂಸತ್ತಿನಲ್ಲಿ ವಿವರಿಸಿದರು. ಬಳಿಕ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ಇಂದಿರಾ ಪತ್ರವೊಂದನ್ನು ಬರೆದರು-“ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಚಂಡಮಾರುತದಿಂದಾಗಿ ಸೃಷ್ಟಿಯಾಗಿರುವ ಸಮಸ್ಯೆ ಭಾರತಕ್ಕೆ ದೊಡ್ಡ ತಲೆವೋವಾಗಿದೆ. ನಿರಾಶ್ರಿತರು ಭಾರತಕ್ಕೆ ಹೊರೆಯಾಗುತ್ತಿದ್ದಾರೆ. ಇದರ ಬಗ್ಗೆ ಏನಾದರೂ ಕ್ರಮಕೈಗೊಳ್ಳಬೇಕು”.

“ಅದು ಪಾಕಿಸ್ತಾನದ ಆಂತರಿಕ ಸಮಸ್ಯೆ” ಎಂಬ ಉತ್ತರ ಬಂತು!

“ಅದರ ಪರಿಣಾಮಗಳು ಗಡಿಯಾಚೆಗೂ ದಾಟುತ್ತಿವೆ” ಎಂಬ ಪ್ರತಿ ಪ್ರಶ್ನೆಗೆ ಅಮೆರಿಕದ ನಿರ್ಲಕ್ಷ್ಯವೇ ಉತ್ತರವಾಯಿತು. “ಪ್ರಜಾಪ್ರಭುತ್ವವನ್ನು ತುಳಿಯುತ್ತಿದ್ದರೂ ನಮ್ಮ ಸರಕಾರ ಖಂಡಿಸುವಲ್ಲಿ ವಿಫಲವಾಗಿದೆ. ಪೂರ್ವಪಾಕಿಸ್ತಾನದಲ್ಲಿ ನಡೆ ಯುತ್ತಿರುವ ದೌರ್ಜನ್ಯವನ್ನು ಖಂಡಿಸುವಲ್ಲಿಯೂ ನಾವು ವಿಫಲವಾಗಿದ್ದೇವೆ” ಎಂದು ಬಾಂಗ್ಲಾದಲ್ಲಿದ್ದ ಅಮೆರಿಕದ ರಾಯಭಾರ ಕಚೇರಿಯೇ ತನ್ನ ಸರಕಾರಕ್ಕೆ ಮಂಗಳಾರತಿ ಮಾಡಿತು. ಆದರೂ ನಿಕ್ಸನ್ ತಲೆಕೆಡಿಸಿಕೊಳ್ಳಲಿಲ್ಲ. ಕೊನೆಗೆ ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ಎಲ್.ಕೆ. ಝಾ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಅವರಿಗೆ, “ನಾವು ನಿರಾಶ್ರಿತರಿಗೆ ಶಸ್ತ್ರಾಸ್ತ್ರ ನೀಡಿ ಗೆರಿಲ್ಲಾಗಳ ರೂಪದಲ್ಲಿ ಮತ್ತೆ ಬಾಂಗ್ಲಾಕ್ಕೆ ಕಳುಹಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. “ಹಾಗೆ ಮಾಡಿದರೆ ನಿಮಗೆ ನೀಡುತ್ತಿರುವ ಸಾಲವನ್ನು ನಿಲ್ಲಿಸಬೇಕಾಗುತ್ತದೆ” ಎಂದು ಕಿಸ್ಸಿಂಜರ್ ಧಮಕಿ ಹಾಕಿದರು. ಇಷ್ಟಾಗಿಯೂ ನಮ್ಮ ಪ್ರಧಾನಿ ಇಂದಿರಾಗಾಂಧಿಯವರು ಧೃತಿಗೆಡಲಿಲ್ಲ.

1971, ಆಗಸ್ಟ್ 9ರಂದು ಸೋವಿಯತ್ ರಷ್ಯಾ ಜತೆ ‘ಸ್ನೇಹ ಮತ್ತು ಸಹಕಾರ’ ಒಪ್ಪಂದ ಮಾಡಿಕೊಂಡರು. ಇದು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ರಷ್ಯಾ ಭಾರತಕ್ಕೆ ನೀಡಿದ ಮುಕ್ತ ಅವಕಾಶ ಎಂದು ಅಮೆರಿಕ ಭಾವಿಸಿತು. ಭಾರತೀಯರಿಗೆ ಕುಮ್ಮಕ್ಕು ನೀಡಬೇಡಿ ಎಂದು ನಿಕ್ಸನ್ ರಷ್ಯಾಕ್ಕೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲ, ನಿಕ್ಸನ್ ನಿರ್ದೇಶನದ ಮೇರೆಗೆ ವಿಶ್ವಸಂಸ್ಥೆಯಲ್ಲಿದ್ದ ಚೀನಾದ ಪ್ರತಿನಿಧಿ ಹುವಾಂಗ್ ಹುವಾ ಅವರನ್ನು ಭೇಟಿ ಮಾಡಿದ ಹೆನ್ರಿ ಕಿಸಿಂಜರ್, ಅಮೆರಿಕ-ಚೀನಾ-ಪಾಕಿಸ್ತಾನದ ನಡುವೆ ಒಂದು ಒಳ ಒಪ್ಪಂದ ಮಾಡಿಕೊಂಡರು. ಅಂದರೆ ಭಾರತವೇನಾದರೂ ಪೂರ್ವದಲ್ಲಿ (ಬಾಂಗ್ಲಾ) ಪಾಕಿಸ್ತಾನದ ಮೇಲೆ ಯುದ್ಧ ಸಾರಿದರೆ ಲದ್ದಾಕ್ ಹಾಗೂ ಈಶಾನ್ಯ ಭಾಗದಲ್ಲಿ ಚೀನಾ ಭಾರತದ ಮೇಲೆ ಯುದ್ಧಸಾರಬೇಕು. ಆ ಸಂದರ್ಭದಲ್ಲಿ ರಷ್ಯಾವೇನಾದರೂ ಚೀನಾದ ಮೇಲೆ ಆಕ್ರಮಣ ಮಾಡಿದರೆ ಅಮೆರಿಕ ರಷ್ಯಾಕ್ಕೆ ಪಾಠ ಕಲಿಸಬೇಕು ಎಂಬುದೇ ಆ ಒಳ ಒಪ್ಪಂದ! ಇದಕ್ಕೂ ಮೊದಲು ಒಂದು ಘಟನೆ ನಡೆದಿತ್ತು. 1971, ಜುಲೈನಲ್ಲಿ ಪಾಕಿಸ್ತಾನದ ಸಹಾಯದ ಮೂಲಕ ಚೀನಾಕ್ಕೆ ಗೌಪ್ಯ ಭೇಟಿ ಕೊಟ್ಟಿದ್ದ ಹೆನ್ರಿ ಕಿಸಿಂಜರ್ ಹಾಗೂ ಚೀನಿ ಪ್ರಧಾನಿ ಚೌಎನ್‌ಲೈ ನಡುವೆ ಕೂಡ ಇಂಥದ್ದೇ ವಿಷಯ ಚರ್ಚೆಯಾಗಿತ್ತು. ಆಗ ಚೌಎನ್‌ಲೈ ತಮ್ಮ ನಿಲುವನ್ನು ಹೀಗೆ ಸ್ಪಷ್ಟಪಡಿಸಿದ್ದರು-“ನಮ್ಮ ಅಭಿಪ್ರಾಯವೇನೆಂದರೆ, ಭಾರತ ಇದೇ ರೀತಿ ಜಾಗತಿಕ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಪಾಕಿಸ್ತಾನದ ವಿರುದ್ಧ ಕಟು ನೀತಿ ಮುಂದುವರಿಸಿದರೆ ನಾವು ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ನಮ್ಮ ನಿಲುವು ಜಗತ್ತಿಗೂ ತಿಳಿದಿದೆ. ಒಂದು ವೇಳೆ ಭಾರತ ಯುದ್ಧದ ವಾತಾವರಣ ನಿರ್ಮಿಸಿದರೆ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ”. ಆ ಮಾತು ಕೇಳಿದ್ದೇ ತಡೆ, “ನಾವೂ ಕೂಡ ಪಾಕಿಸ್ತಾನದ ಪರವಿದ್ದೇವೆ” ಎಂದು ಕಿಸಿಂಜರ್ ಪ್ರತಿಕ್ರಿಯಿಸಿದ್ದರು. ಹೀಗೆ ಭಾರತವೇನಾದರೂ ಪಾಕಿಸ್ತಾನದ ತಂಟೆಗೆ ಹೋದರೆ ಅಮೆರಿಕ-ಚೀನಾಗಳು ನಮ್ಮ ಮೇಲೆ ಮುಗಿಬೀಳುವ ಅಪಾಯವಿತ್ತು!

ಊಹೂಂ! ಇಂದಿರಾಗಾಂಧಿಯವರು ಯಾವುದಕ್ಕೂ ಜಗ್ಗುವ ಸ್ಥಿತಿಯಲ್ಲಿರಲಿಲ್ಲ!

ಯುದ್ಧ ಸಾರುವ ಎಲ್ಲ ಸೂಚನೆಗಳನ್ನೂ ನೀಡಿದರು. ಪಾಕಿಸ್ತಾನಕ್ಕೆ ಭಾರತ ಪಾಠ ಕಲಿಸುವುದು ಖಚಿತ ಎಂದು ಸ್ಪಷ್ಟವಾಯಿತು. ನಿಕ್ಸನ್ ಪಟ್ಟು ಸಡಿಲಿಸಲೇಬೇಕಾಯಿತು. ಆಗ ನಿಕ್ಸನ್-ಕಿಸ್ಸಿಂಜರ್ ಹಾಗೂ ಪ್ರಧಾನಿ ಇಂದಿರಾ ಗಾಂಧಿಯವರ ನಡುವೆ ಒಂದು ಗೌಪ್ಯ ಸಭೆ ನಡೆದಿದ್ದನ್ನು ದಿಲ್ಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಾಜೀಂ ದರ್ ಸಾಚಾರ್ ತಮ್ಮ ಲೇಖನವೊಂದರಲ್ಲಿ ಹೊರಗೆಡವಿದ್ದಾರೆ.

ಅದು ಸಮರ ನಿಲುಗಡೆ ಬಗ್ಗೆ ಚರ್ಚಿಸುವ ‘ಬ್ರೇಕ್‌ಫಾಸ್ಟ್’ ಮೀಟಿಂಗ್.

ಜನರಲ್ ಸ್ಯಾಮ್ ಮಾಣಿಕ್‌ಷಾ ಅವರಿಗೆ ಫೋನ್ ಮಾಡಿದ ಇಂದಿರಾಗಾಂಧಿಯವರು, “ಬೆಳಗಿನ ಉಪಾಹಾರಕ್ಕೆ ಮನೆಗೆ ಬನ್ನಿ, ಬರುವಾಗ ಯೂನಿಫಾರ್ಮ್ ಹಾಕಿಕೊಂಡು ಬನ್ನಿ” ಎಂದರು! ಬ್ರೇಕ್‌ಫಾಸ್ಟ್‌ಗೂ ಯೂನಿಫಾರ್ಮ್‌ಗೂ ಏನು ಸಂಬಂಧ? ಮಾಣಿಕ್‌ಷಾಗೆ ಗೊಂದಲವುಂಟಾಯಿತು. ತಾನು ಸರಿಯಾಗಿ ಕೇಳಿಸಿ ಕೊಂಡೆನೋ ಇಲ್ಲವೋ ಎಂಬ ಅನುಮಾನದಿಂದ ‘ಏನೂ’ ಎಂದು ಮತ್ತೆ ಕೇಳಿದರು. “ಹೌದು, ನೀವು ಸಮವಸ್ತ್ರ ಧರಿಸಿಕೊಂಡು ಬರಬೇಕು” ಎಂದರು ಇಂದಿರಾಗಾಂಧಿ. ಜತೆಗೆ ಉಪಾಹಾರದಲ್ಲಿ ಪಾಲ್ಗೊಳ್ಳಲಿರುವ ಇತರ ಅತಿಥಿಗಳಾರು ಎಂಬುದನ್ನೂ ಬಹಿರಂಗ ಪಡಿಸಲಿಲ್ಲ. ಮಾಣಿಕ್‌ಷಾ ಬ್ರೇಕ್‌ಫಾಸ್ಟ್‌ಗೆ ಹೋದರು. ಸ್ವಲ್ಪ ಸಮಯದಲ್ಲೇ ನಿಕ್ಸನ್ ಹಾಗೂ ಕಿಸಿಂಜರ್ ಕೂಡ ಆಗಮಿಸಿದರು. ಮಾತುಕತೆ ಆರಂಭವಾಯಿತು.

ಇಂದಿರಾಗಾಂಧಿ: ಬಾಂಗ್ಲಾದಲ್ಲಿ ಹಿಂಸಾಚಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ನೀವು ಕಡಿವಾಣ ಹಾಕಲೇಬೇಕು. ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿದೆ. ಅದು ಹೇಗಿದೆಯೆಂದರೆ ಭಾರತ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ. ಬಾಂಗ್ಲಾದಲ್ಲಿ ನಡೆ ಯುತ್ತಿರುವ ಹಿಂಸಾಚಾರದಿಂದಾಗಿ ಜನ ಸಾಮೂಹಿಕವಾಗಿ ಭಾರತಕ್ಕೆ ವಲಸೆ ಬರುತ್ತಿದ್ದಾರೆ. ಪಾಕಿಸ್ತಾನವನ್ನು ನೀವು ಹದ್ದುಬಸ್ತಿ ನಲ್ಲಿಡಬೇಕು.

ಇಷ್ಟಾಗಿಯೂ ನಿಕ್ಸನ್ ಆಗಲಿ, ಕಿಸ್ಸಿಂಜರ್ ಆಗಲಿ ಬಾಯ್ಬಿಡ ಲಿಲ್ಲ. ನೇರ ಉತ್ತರವನ್ನೂ ನೀಡುತ್ತಿಲ್ಲ. ಗಂಭೀರ ಪರಿಸ್ಥಿತಿ ಸೃಷ್ಟಿಯಾಗಿದ್ದರೂ ಅದನ್ನು ನಿರ್ಲಕ್ಷಿಸುವಂತಹ ಹಾವಭಾವ ತೋರುತ್ತಾ ಕುಳಿತಿದ್ದರು. ಇಂದಿರಾಗಾಂಧಿಯವರು ಮತ್ತೆ ಮನವಿ ಮಾಡಿಕೊಂಡರು. ತುಸು ಕೋಪಿಸಿಕೊಂಡ ನಿಕ್ಸನ್, “ಅಮೆರಿಕ ಏನೂ ಮಾಡಲು ಸಾಧ್ಯವಿಲ್ಲ” ಎಂದರು. ಇಂತಹ ಪ್ರತಿಕ್ರಿಯೆಯಿಂದ ದಿಗ್ಭ್ರಮೆಗೊಂಡ ಇಂದಿರಾಗಾಂಧಿಯವರು, “ನೀವು ಪಾಕಿಸ್ತಾನವನ್ನು ಹದ್ದುಬಸ್ತಿನಲ್ಲಿಡಬೇಕು. ಇಲ್ಲವೆಂದಾದರೆ ನಾನೇನಾದರೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಬಹಳ ವಿಧೇಯರಾಗಿಯೇ ಹೇಳಿದರು. ಅದನ್ನು ಕೇಳುತ್ತಲೇ, “ಏನು ಮಾಡಬೇಕೆಂದುಕೊಂಡಿದ್ದೀರಿ” ಎಂದು ನಿಕ್ಸನ್ ಪ್ರಶ್ನಿಸಿದರು. ಎದ್ದುನಿಂತ ಇಂದಿರಾಗಾಂಧಿ, ಸಮವಸ್ತ್ರ ತೊಟ್ಟು ನಿಂತಿದ್ದ ಜನರಲ್ ಸ್ಯಾಮ್ ಮಾಣಿಕ್‌ಷಾ ಅವರತ್ತ ಕೈತೋರುತ್ತಾ, “ನಿಮಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲವೆಂದಾದರೆ ಆತನಿಗೆ ಆ ಕೆಲಸ ಮಾಡಲು ಹೇಳುತ್ತೇನೆ” ಎಂದರು!!

ಒಂದು ಕ್ಷಣ ಎಲ್ಲವೂ ಮೌನ.

ಮಾಣಿಕ್‌ಷಾಗೆ ಮುಂದಿನ ಜವಾಬ್ದಾರಿ ಏನೆಂದು ಅರ್ಥವಾ ಗಿತ್ತು. ಯುದ್ಧ ಸಿದ್ಧತೆ ಆರಂಭವಾಯಿತು. “The Indians are bastards anyway. They are plotting a war” ಎಂದು ಕಿಸಿಂಜರ್ ಹೇಳಿದ್ದು, ಇಂದಿರಾಗಾಂಧಿಯವರ ಬಗ್ಗೆ ನಿಕ್ಸನ್ “Witch, Bitch” ಎಂಬ ಅಸಭ್ಯ ಪದಗಳನ್ನು ಬಳಸಿದ್ದು ಆನಂತರವೇ. ಇತ್ತ ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾ ಮುಕ್ತಿವಾಹಿನಿ ಹೇರಿದ್ದ ಒತ್ತಡದ ಮೇಲಿನ ಗಮನವನ್ನು ಬೇರೆಡೆ ಸೆಳೆಯುವ ಹಾಗೂ ಭಾರತದ ಸೇನೆಯನ್ನು ದಿಕ್ಕೆಡಿಸುವ ಸಲುವಾಗಿ 1971, ಡಿಸೆಂಬರ್ 3ರಂದು ಪಂಜಾಬ್ ಮತ್ತು ಕಾಶ್ಮೀರದಲ್ಲಿದ್ದ ಭಾರತದ 6 ವಾಯುನೆಲೆಗಳ ಮೇಲೆ ಪಾಕಿಸ್ತಾನವೇ ಮೊದಲು ಆಕ್ರಮಣ ಮಾಡಿತು! ಇಂದಿರಾಗಾಂಧಿಯವರು ಕೂಡಲೇ ಯುದ್ಧಸಾರಿದರು. ಪಾಕಿಸ್ತಾನದ ಒಂದೊಂದು ವಸ್ತ್ರಗಳೂ ಕಳಚಿ ಬೀಳತೊಡಗಿದವು. ಪೂರ್ವ ಪಾಕಿಸ್ತಾನ ಕೆಲವೇ ದಿನಗಳಲ್ಲಿ ಸೋತು ಶರಣಾಗಲಿದೆ, ಹಾಗಾಗಿ ಯುದ್ಧ ನೌಕೆ “ಯುಎಸ್‌ಎಸ್ ಎಂಟರ್‌ಪ್ರೈಸಸ್” ಅನ್ನು ಕೂಡಲೇ ಬಂಗಾಳಕೊಲ್ಲಿಯತ್ತ ಕಳುಹಿಸಬೇಕೆಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸೂಚಿಸಿತು.

ಆಗ ನಡೆದ ಮತ್ತೊಂದು ಕುತೂಹಲಕಾರಿ ಘಟನೆಯನ್ನು ಕ್ಲಾಡ್ ಆರ್ಪಿ ದಾಖಲಿಸಿದ್ದಾರೆ.

ಅಮೆರಿಕದ ಪಡೆಗಳು ಆಗಮಿಸುವ ಸುದ್ದಿ ದಟ್ಟವಾಗಿ ಹಬ್ಬಿರುವ ಸಂದರ್ಭದಲ್ಲೇ ಇಂದಿರಾಗಾಂಧಿಯವರಿಗೆ ಯುದ್ಧದ ಒಟ್ಟಾರೆ ಮಾಹಿತಿ ನೀಡುವ ಸಭೆಯೊಂದು ನಡೆಯುತ್ತಿರುತ್ತದೆ. ಜನರಲ್ ಮಾಣಿಕ್‌ಷಾ ಹಾಗೂ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಎಸ್.ಎಂ. ನಂದಾ ಉಪಸ್ಥಿತರಿರುತ್ತಾರೆ. ಮಾತುಕತೆ, ಚರ್ಚೆ, ಮಾಹಿತಿ ನೀಡಿಕೆ ಆರಂಭವಾಯಿತು. ಮಧ್ಯೆ ಬಾಯಿಹಾಕಿದ ಅಡ್ಮಿರಲ್ ನಂದಾ, “ಮೇಡಮ್, ಅಮೆರಿಕದ ೮ನೇ ಸೇನಾ ತುಕಡಿ ಬಂಗಾಳ ಕೊಲ್ಲಿಗೆ ಆಗಮಿಸುತ್ತಿದೆ” ಎಂದರು. ಇಂದಿರಾಗಾಂಧಿಯವರು ಪ್ರತಿಕ್ರಿಯಿಸಲಿಲ್ಲ. ಮಾತುಕತೆ ಮುಂದುವರಿಯಿತು. ಮತ್ತೆ ರಾಗ ಎಳೆದ ನಂದ, “ಮೇಡಮ್ ನಾನು ನಿಮಗೆ ತಿಳಿಸಬೇಕು-ಅಮೆರಿಕದ ೮ನೇ ಸೇನಾ ತುಕಡಿ ಬಂಗಾಳಕೊಲ್ಲಿಯತ್ತ ಬರುತ್ತಿದೆ” ಎನ್ನುವಷ್ಟರಲ್ಲಿ ಅರ್ಧಕ್ಕೇ ತಡೆದ ಇಂದಿರಾಗಾಂಧಿ, “ಅಡ್ಮಿರಲ್ ನೀವು ಹೇಳಿದ್ದನ್ನು ಮೊದಲ ಬಾರಿಗೇ ನಾನು ಕೇಳಿಸಿಕೊಂಡಿದ್ದೇನೆ. ಚರ್ಚೆ ಮುಂದು ವರಿಯಲಿ” ಎಂದರು!!
ಆಕೆಯ ಎದೆಗಾರಿಕೆಯನ್ನು ಕಂಡು ಸೇನಾಧಿಕಾರಿಗಳೇ ದಂಗಾಗಿ ಹೋದರು.

ಪ್ರಧಾನಿಯವರ ಇಂತಹ ದೃಢನಿಲುವು ಹಾಗೂ ಛಲ ನಮ್ಮ ಸೇನಾಪಡೆಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿದವು. ಯುದ್ಧ ಆರಂಭವಾಗಿ ಎರಡು ವಾರ ತುಂಬುವ ಮೊದಲೇ ನಮ್ಮ ಸೇನೆ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಝಿ 1971, ಡಿಸೆಂಬರ್ 16ರಂದು ಶರಣಾಗತಿ ಒಪ್ಪಂದಕ್ಕೆ ಸಹಿಹಾಕುವುದರೊಂದಿಗೆ ಬಾಂಗ್ಲಾದೇಶ ಸೃಷ್ಟಿಯಾಯಿತು. ಈ ಯುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ಘನತೆಯನ್ನೂ ಹೆಚ್ಚಿಸಿತು. ಇದೆಲ್ಲಾ ಸಾಧ್ಯವಾಗಿದ್ದು ಇಂದಿರಾಗಾಂಧಿಯವರಿಂದ. ಅಷ್ಟಕ್ಕೂ ಬರೀ ರಣರಂಗದಲ್ಲಿ ನಡೆದ ಯುದ್ಧ ಅದಾಗಿರಲಿಲ್ಲ. ಅವತ್ತು ಇಂದಿರಾಗಾಂಧಿಯವರು ರಾಜತಾಂತ್ರಿಕ ಹೋರಾಟ, ಒತ್ತಡ ತಂತ್ರ, ಬೆದರಿಕೆ ಯಾವುದಕ್ಕೂ ಜಗ್ಗಿರಲಿಲ್ಲ. ತಂತ್ರಕ್ಕೆ ಪ್ರತಿ ತಂತ್ರ, ಪಟ್ಟಿಗೆ ಪ್ರತಿಪಟ್ಟು ಹಾಕಿ ಪಾಕ್ ಮತ್ತು ಅಮೆರಿಕವನ್ನು ಕೆಡವಿದ್ದರು. ಅಧ್ಯಕ್ಷ ನಿಕ್ಸನ್ ಖಾಸಗಿಯಾಗಿ ಮಾತನಾಡುವಾಗ ಇಂದಿರಾಗಾಂಧಿಯವರ ವಿರುದ್ಧ ಅತ್ಯಂತ ಹೀನಾತಿಹೀನ ಪದಗಳನ್ನು ಬಳಸಿದ್ದಾ ರೆಂದರೆ ಇಂದಿರಾಗಾಂಧಿ ಹೇಗೆ ನಡೆದುಕೊಂಡಿರಬೇಕು, ಅವರ ಗಟ್ಟಿತನ ಹೇಗಿತ್ತು ಎಂಬುದನ್ನು ಊಹಿಸಿ. 1974ರಲ್ಲಿ ಭಾರತ ನಡೆಸಿದ ಮೊದಲ ಅಣುಪರೀಕ್ಷೆಗೆ ಅನುಮತಿ ಕೊಟ್ಟವರೂ ಅವರೇ. ಬ್ಯಾಂಕುಗಳ ರಾಷ್ಟ್ರೀಕರಣದಂತಹ ದೂರದೃಷ್ಟಿಯುಳ್ಳ ನಿರ್ಧಾರ ಕೈಗೊಳ್ಳುವ ಮೂಲಕ ಭಾರತದ ಅರ್ಥವ್ಯವಸ್ಥೆ ಹಾಗೂ ನಮ್ಮೆಲ್ಲರ ಭವಿಷ್ಯವನ್ನು ಭದ್ರಗೊಳಿಸಿದ ಮಹಾನ್ ಮಹಿಳೆ ಆಕೆ. ವಂಶಾಡಳಿತ ಹುಟ್ಟುಹಾಕಿದ್ದೂ ಆಕೆಯೇ ಎಂದು ನಾವು ದೂರಬಹುದು. ಅದೆಲ್ಲ ಟೀಕೆ ಮಾಡುವುದಕ್ಕಷ್ಟೇ ಚೆನ್ನ. ಗಾಂಧಿ-ನೆಹರು ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಮತ್ತೊಂದು ಜನತಾಪರಿವಾರವಾಗುತ್ತಿತ್ತು ಎಂಬುದು ಅಷ್ಟೇ ಸತ್ಯ. ಆಕೆಯ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಆಪರೇಶನ್ ಬ್ಲೂಸ್ಟಾರ್‌ನಂತಹ ಕಾರ್ಯಾಚರಣೆಗೆ ಕೈಹಾಕುವ ಧೈರ್ಯತೋರುತ್ತಿರಲಿಲ್ಲ. ಅಣಕವೆಂದರೆ, ಗಾಂಧಿ-ನೆಹರು ಕುಟುಂಬ ಇಂದಿರಾ ಆರಂಭಿಸಿದ ವಂಶಾಡಳಿತವನ್ನು ಮುಂದುವರಿಸಿಕೊಂಡು ಬಂದಿತೇ ಹೊರತು ಆಕೆಯಲ್ಲಿದ್ದ ಎದೆಗಾರಿಕೆಯನ್ನು ಯಾರೂ ಬೆಳೆಸಿಕೊಳ್ಳಲಿಲ್ಲ.

ದುರದೃಷ್ಟವಶಾತ್, ಇಂದಿರಾಗಾಂಧಿಯವರು ತಮ್ಮ ಅಂಗ ರಕ್ಷಕರ ಗುಂಡಿಗೆ ಬಲಿಯಾಗಿ ಇಂದಿಗೆ 25 ವರ್ಷಗಳಾದವು. ಏಕೋ ಅವರನ್ನು ನೆನಪಿಸಿಕೊಳ್ಳಬೇಕೆನಿಸಿತು. ಈಗ ಸಂಭವಿಸುತ್ತಿರುವ ಭಯೋತ್ಪಾದಕ ದಾಳಿಗಳು, ಪಾಕಿಸ್ತಾನದ ಉಪಟಳ, ಚೀನಾದ ಬೆದರಿಕೆ ಮುಂತಾದುವುಗಳನ್ನು ಗಮನಿಸಿದಾಗ ‘India is missing Indira’ ಎಂದನಿಸುತ್ತಿದೆ.

ಒಪ್ಪಿ, ಬಿಡಿ…

14 Responses to “ದರ್ಪ ಮೆರೆದ ಇಂದಿರೆಯೊಳಗೊಬ್ಬ ದುರ್ಗೆಯೂ ಇದ್ದಳು!”

  1. i completely agree with you.i am feeling to know more and more about her………

  2. Deepak kumar says:

    this very god article about Smt Indira ganghi

  3. Reddi says:

    Superb article and we need leader who can solve all these kind of Indian problem.

  4. yogesh says:

    From your previous article we came to know that Bangladesh is as dangerous as pakistan. Indirectly Indira created another neighbour enemy country. In that situation Indira would have stopped illegal immigrants entring into our country.

  5. shantu says:

    sir….
    excellent….
    keep writing and inspire us…

  6. Mahabaleshwar Hegde says:

    Super article with sufficient informations. We knew this but, way you presented is excellent.

  7. Mahabaleshwar Hegde says:

    We wish this week you should write about the hell things happening in Karnataka Reddy politics

  8. savitha says:

    hey.. very good one.. few days back i was reading a book about her, where the writer potrayed as a humble mother.. who was forced to take hasty decisions.. despite of her misdeeds.. she is known for wat she is.. a man’s soul in a woman’s body.. just need to wait n see wil do we get any leader who is as efficient as her..

  9. malathi says:

    One of the most charismatic leaders India has ever known. Always wonder how she would have tackled the current situation
    Good article

    malathi S

  10. Jagadish Namboodiri says:

    We need someone like Indira now at the helm for India… otherwise Pak form one side, China from other side and our own Muslim “Bhai’s” will take us for a ride in US and Taliban funded Hi-tech jumbo jet

  11. Basavalinga says:

    indiralanta nayaki innu namma deshakke sigodu kashta avlobba hennu adree navu avlige hennu annalu sankoch agta ide yakandre gandu madalarada kelasagalannu avalu maduttiddalu adakke avalannu gandu endare tappagalla

  12. Raelly great article ,hats of you Pratap. After reading this article only i realized the truth of the history.

  13. gururaj says:

    hi..
    Mr.Pratap really nice article.Smt Indira Gandhi is role model.I want know more about her please suggest me any book about her.And all the best for you.

  14. Mrs. Vani says:

    Yes Pratap sir, India missed Indira…..?