Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಗೋಧ್ರಾ ದುರಂತ, ಗುಜರಾತ್ ಹಿಂಸಾಚಾರ ಎರಡನ್ನೂ ಮರೆಯಬೇಕಾದ ಕಾಲ ಬಂತೇ?

ಗೋಧ್ರಾ ದುರಂತ, ಗುಜರಾತ್ ಹಿಂಸಾಚಾರ ಎರಡನ್ನೂ ಮರೆಯಬೇಕಾದ ಕಾಲ ಬಂತೇ?

ಇಂಥದ್ದೊಂದು ಸಕಾರಾತ್ಮಕ ಬೆಳವಣಿಗೆ ಕನಿಷ್ಠ ಗುಜರಾತ್‌ನಲ್ಲಂತೂ ಕಂಡುಬರುತ್ತಿದೆ!

ಅದಕ್ಕೂ ಮೊದಲು ಹತ್ತು ವರ್ಷಗಳ ಕಾಲ ಹಿಂದು-ಮುಸ್ಲಿಮರು ಪರಸ್ಪರ ಮುಖ ನೋಡಿಕೊಳ್ಳದಷ್ಟು ದೂರವಾಗುವಂತೆ ಮಾಡಿದ ಘಟನೆಯನ್ನು ಗಮನಿಸೋಣ. 2001, ಅಕ್ಟೋಬರ್ 7ರಂದು ಗುಜರಾತ್‌ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಇನ್ನೂ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿಯೇ ಇರಲಿಲ್ಲ. ಸಂವಿಧಾನದ ನಿಯಮದಂತೆ ಚುನಾವಣೆಯಲ್ಲಿ ಆರಿಸಿಬರುವ ಸಲುವಾಗಿ 2002, ಫೆಬ್ರವರಿ 19ರಂದು ರಾಜ್‌ಕೋಟ್‌ನಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಫೆಬ್ರವರಿ 24ರಂದು ಫಲಿತಾಂಶ ಪ್ರಕಟವಾಯಿತು. ಮೋದಿ ಗೆಲುವು ಸಾಧಿಸಿದರು. ಇದಾಗಿ ಮೂರು ದಿನಗಳಲ್ಲಿಯೇ ಅಂದರೆ, 2002, ಫೆಬ್ರವರಿ 27ರಂದು ಫೈಜಾಬಾದ್‌ನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆಯಿತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 58 ಜನರು ಸಜೀವ ದಹನವಾದರು.

ಇಷ್ಟಕ್ಕೂ ಅಂದು ನಡೆದಿದ್ದಾದರೂ ಏನು?

7.42: ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲು ಗೋಧ್ರಾ ನಿಲ್ದಾಣಕ್ಕೆ ಆಗಮನ.

7.47: ಮುಂದಕ್ಕೆ ಹೊರಡಲು ಪ್ರಾರಂಭ. ಆದರೆ ರೈಲ್ವೆ ನಿಲ್ದಾಣದಲ್ಲಿ ಹೊತ್ತು ಮಾರುವವರು ಕಲ್ಲುತೂರಾಟ ಆರಂಭಿಸುತ್ತಾರೆ.

7.50: ರೈಲಿನ ಚೈನು ಎಳೆಯಲಾಗುತ್ತದೆ.

8.00: ಎರಡನೇ ಬಾರಿಗೆ ಚೈನನ್ನು ಎಳೆಯುತ್ತಾರೆ.

8.07: ರೈಲನ್ನು ಸುತ್ತುವರಿದ ದೊಡ್ಡ ಗುಂಪೊಂದು ಎಸ್-6 ಬೋಗಿಗೆ ಬೆಂಕಿ ಹಚ್ಚಿತು.

ಈ ಘಟನೆಯ ಬಗ್ಗೆ ಸತ್ಯಶೋಧನೆ ಮಾಡುವ ಸಲುವಾಗಿ ಸಂಪಾದಕರ ತಂಡವೊಂದು ಗುಜರಾತಿಗೆ ತೆರಳಿತು. ಅದನ್ನು “ಸೆಕ್ಯುಲರ್ ಮಿಷನ್‌” ಎಂದು ಕರೆಯಬಹುದು. ಏಕೆಂದರೆ ಮುಂಬೈನ ಮಿಡ್ ಡೇ ಪತ್ರಿಕೆಯ ಆಗಿನ ಸಂಪಾದಕ ಆಕಾರ್ ಪಟೇಲ್(ಮುಸ್ಲಿಂ), ಖ್ಯಾತ ಪತ್ರಕರ್ತ ಬಿ.ಜಿ. ವರ್ಗೀಸ್(ಕ್ರೈಸ್ತ) ಹಾಗೂ ದಿಲೀಪ್ ಪಡಗಾಂವ್‌ಕರ್(ಹಿಂದು) ಆ ತಂಡದಲ್ಲಿದ್ದರು.

“ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಸಾಗುತ್ತಿತ್ತು. ಹಾಗೆ ಸಾಗುತ್ತಿದ್ದ ರೈಲಿಗೆ ಫೆಬ್ರವರಿ 27ರ ಬೆಳಗ್ಗೆ 8 ಗಂಟೆಗೆ ಗೋಧ್ರಾ ಬಳಿ ಬೆಂಕಿ ಹಚ್ಚಲಾಯಿತು. ಸ್ಥಳೀಯ ವರದಿಗಾರರು ಕೂಡಲೇ ಸ್ಥಳಕ್ಕೆ ಧಾವಿಸಿ ಸುದ್ದಿ ಮಾಡಿದರು. ಬಹುಶಃ ಈ ಘಟನೆಯನ್ನು ಮೊದಲು ವರದಿ ಮಾಡಿದ್ದು ಆಜ್‌ತಕ್ ಟಿವಿ, ಝೀ ಟಿವಿಯ ಸ್ಥಳೀಯ ಕ್ಯಾಮರಾಮನ್ ಗೋಧ್ರಾಕ್ಕೆ ಧಾವಿಸಿ ವೀಡಿಯೊ ಚಿತ್ರಣಗಳನ್ನು ತೆಗೆದು, ಕೂಡಲೇ ಅಹಮದಾಬಾದ್‌ಗೆ ಕಳುಹಿಸಿದರು. ಎರಡು ಗಂಟೆಯ ವೇಳೆಗೆ ಪ್ರಸಾರವನ್ನೂ ಮಾಡಲಾಯಿತು. ಇತ್ತ ದೂರದರ್ಶನ ಸೇರಿದಂತೆ ಇತರ ಚಾನೆಲ್‌ಗಳು ತಮ್ಮ ಕ್ಯಾಮರಾಮನ್‌ಗಳನ್ನು ಕಳುಹಿಸಿದವು. ಈ ಮಧ್ಯೆ ಅನಾಮಧೇಯ ಇ-ಮೇಲೊಂದು ಎಲ್ಲರಿಗೂ ಬರಲಾರಂಭಿಸಿತು. ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದ ಸ್ಥಳೀಯ ವರದಿಗಾರರಾದ ಅನಿಲ್ ಮತ್ತು ನೀಲಮ್ ಸೋನಿ ಎಂಬವರ ವೃತ್ತಿ ಮತ್ತು ದೂರವಾಣಿ ಸಂಖ್ಯೆಗಳನ್ನು ಆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅದರಲ್ಲಿ ಕರಸೇವಕರು ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದ ಅಲ್ಪಸಂಖ್ಯಾತ ಸಮುದಾಯದವರ ನಡುವೆ ಘರ್ಷಣೆಯೊಂದು ನಡೆಯಿತು. ಅಲ್ಲದೆ ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳ ಮೇಲೆ ಕರಸೇವಕರು ಲೈಂಗಿಕ ದೌರ್ಜನ್ಯ ನಡೆಸಿದ ಕಾರಣ ಕೋಪೋದ್ರಿಕ್ತ ಅಲ್ಪಸಂಖ್ಯಾತರು ಕರಸೇವಕರಿದ್ದ ಎಸ್-6 ಬೋಗಿಯ ಮೇಲೆ ಕಲ್ಲುತೂರಾಟ ಆರಂಭಿಸಿದರು. ಕೊನೆಗೆ ಬೆಂಕಿ ಹಚ್ಚಲಾಯಿತು.”

ಇದು ಸಂಪಾದಕರ ತಂಡ ನೀಡಿದ ವರದಿ!

ಆದರೆ ಇ-ಮೇಲನ್ನು ಕಳುಹಿಸಲು ಆರಂಭಿಸಿದ್ದು ಯಾರು, ಯಾವಾಗ ಎಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಈ ಬಗ್ಗೆ ಅನಿಲ್ ಮತ್ತು ನೀಲಮ್ ಸೋನಿಯವರನ್ನೇ ಪ್ರಶ್ನಿಸಿದಾಗ, ನಾವು ಅಂತಹ ಯಾವುದೇ ವರದಿಯನ್ನೂ ಮಾಡಿಲ್ಲ ಎಂದರು. ನಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪ್ರತಿಪಾದಿಸಿದರು. ಹಾಗಾದರೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರಿಗೆ ಕಳುಹಿಸಲಾದ ಇ-ಮೇಲ್ ಸೃಷ್ಟಿಯಾಗಿದ್ದು ಹೇಗೆ? ಅಷ್ಟೊಂದು ಶೀಘ್ರವಾಗಿ ಸುಳ್ಳಿನ ಸರಮಾಲೆಯನ್ನು ಹರಡಲು ಯತ್ನಿಸಿದ್ದು ಯಾವ ಉದ್ದೇಶಕ್ಕಾಗಿ? ಯಾರ ಹಿತಾಸಕ್ತಿಗಾಗಿ? ಅದಿರಲಿ, ಕರಸೇವಕರು ಅತ್ಯಾಚಾರವೆಸಗಿದ್ದಾರೆನ್ನಲಾದ 16 ವರ್ಷದ ಮುಸ್ಲಿಂ ಯುವತಿ ಎಲ್ಲಿ ಹೋದಳು? ಈ ಬಗ್ಗೆ ಯಾವ ಉತ್ತರವೂ ಇಲ್ಲ.

ಇಷ್ಟಾಗಿಯೂ “2002, ಫೆಬ್ರವರಿ 27ರ ರಾತ್ರಿ ಉನ್ನತ ಅಧಿಕಾರಿಗಳನ್ನು ಕರೆಸಿಕೊಂಡು ಮೋದಿ, ಹಿಂದೂಗಳ ಪ್ರತೀಕಾರ ಹೋರಾಟದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ನಿರ್ದೇಶನ ನೀಡಿದರು. ಇಂತಹ ಮಾಹಿತಿಯನ್ನು ನೀಡಿದ್ದು ಮೋದಿ ಸಂಪುಟದಲ್ಲಿದ್ದ ಸಚಿವರೊಬ್ಬರು” ಎಂದು ಔಟ್‌ಲುಕ್ ಪತ್ರಿಕೆ ಪ್ರತಿಪಾದಿಸಿತು. ಆದರೆ ನಡೆದಿದ್ದೇನು?

1. ಗೋಧ್ರಾ ದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಇಡೀ ರಾಜ್ಯಾದ್ಯಂತ ಮುನ್ನೆಚ್ಚರಿಕೆ ನೀಡಲಾಯಿತು.

2. ಪರಿಸ್ಥಿತಿ ಉದ್ವಿಗ್ನಗೊಳ್ಳುವುದನ್ನು ತಡೆಯುವ ಸಲುವಾಗಿ ಸುಟ್ಟು ಕರಕಲಾದ ದೇಹಗಳನ್ನು ಅಹಮದಾಬಾದ್‌ಗೆ ತಾರದೆ ದೂರದ ಸ್ಥಳದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಬೇಕೆಂದು ಸೂಚಿಸಲಾಯಿತು.

3. ಗೋಧ್ರಾದಲ್ಲಿ ಫೆಬ್ರವರಿ 27ರಂದೇ ಕರ್ಫ್ಯೂ ವಿಧಿಸಿದರೆ, ಮರುದಿನ ವಡೋದರಾ, ಅಹಮದಾಬಾದ್‌ನಗರ, ಸಬರ್‌ಕಾಂತಾ ಸೇರಿದಂತೆ ರಾಜ್ಯದ ಎಲ್ಲ ಸೂಕ್ಷ್ಮ ಪ್ರದೇಶಗಳಿಗೂ ಕರ್ಫ್ಯೂವನ್ನು ವಿಸ್ತರಿಸಲಾಯಿತು. ಮಾರ್ಚ್ 1ರ ವೇಳೆಗೆ ಹೆಚ್ಚೂಕಡಿಮೆ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿತ್ತು.

4. ಶೀಘ್ರ ಪ್ರಹಾರದಳವನ್ನು ಕರೆಸಿ ಅಹಮದಾಬಾದ್, ವಡೋದರಾ ಮತ್ತು ಗೋಧ್ರಾಗಳಲ್ಲಿ ನಿಯೋಜನೆ ಮಾಡಲಾಯಿತು.

5. ಫೆಬ್ರವರಿ 28ರಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ ಮೋದಿ ಸೇನೆಯನ್ನು ಕಳುಹಿಸಿಕೊಡುವಂತೆ ಕೋರಿದರು. ಏಕೆಂದರೆ ಅಹಮದಾಬಾದ್‌ನಲ್ಲಿ ಸೇನಾ ಪಡೆಯ ಯಾವ ತುಕಡಿಗಳೂ ಇರಲಿಲ್ಲ. ಗಡಿಯಲ್ಲಿದ್ದ ಸೈನಿಕರನ್ನು ಅಹಮದಾಬಾದ್, ವಡೋದರಾ ಹಾಗೂ ರಾಜ್‌ಕೋಟ್‌ಗಳಿಗೆ ವಿಮಾನದ ಮೂಲಕ ಕರೆತರಲಾಯಿತು.

9. ಕಂಡಲ್ಲಿ ಗುಂಡು ಆದೇಶವನ್ನು ನೀಡಲಾಯಿತು.

ಇತ್ತ 2002, ಏಪ್ರಿಲ್‌ನಲ್ಲಿ ಗೋವಾದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭವಾಯಿತು. ಏಪ್ರಿಲ್ 12ರಂದು ಗೋವಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಗುಜರಾತ್ ಹಿಂಸಾಚಾರದ ಬಗ್ಗೆ ಮಾತನಾಡಿದರು.

“ಭಾರತದ ಜಾತ್ಯತೀತತೆಯೇ ಅಪಾಯದಲ್ಲಿದೆ ಎಂಬ ಆರೋಪಗಳು ಇಂದು ಕೇಳಿಬರುತ್ತಿವೆ. ನಮ್ಮ ವಿರುದ್ಧ ಆರೋಪಿಸುತ್ತಿರುವ ಈ ವ್ಯಕ್ತಿಗಳು ಯಾರು? ಈ ವ್ಯಕ್ತಿಗಳ ಪ್ರಕಾರ ಜಾತ್ಯತೀತತೆಯ ಅರ್ಥವೇನು? ಮುಸ್ಲಿಮರು ಮತ್ತು ಕ್ರೈಸ್ತರು ಕಾಲಿಡುವ ಮೊದಲೇ ಈ ದೇಶ ಜಾತ್ಯತೀತವಾಗಿತ್ತು. ಮುಸ್ಲಿಮರು ಮತ್ತು ಕ್ರೈಸ್ತರು ಬಂದ ಮೇಲೆ ಭಾರತ ಜಾತ್ಯತೀತ ರಾಷ್ಟ್ರವಾಗಲಿಲ್ಲ. ಈ ದೇಶಕ್ಕೆ ಆಗಮಿಸಿದ ಅನ್ಯ ಧರ್ಮೀಯರಿಗೆ ಅವರವರ ನಂಬಿಕೆ, ಆಚಾರ ವಿಚಾರಗಳನ್ನು ಅನುಸರಿಸಲು, ಆರಾಧಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಅವರನ್ನು ಯಾರೂ ಬಲಪ್ರಯೋಗದ ಮೂಲಕ ಮತಾಂತರಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಬಲಾತ್ಕಾರವಾಗಿ ಮತಾಂತರ ಮಾಡುವ ಸಂಸ್ಕೃತಿ ನಮ್ಮ ದೇಶದಲ್ಲಿರಲಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಘಟನೆಗಳು ನಡೆಯುತ್ತವೆ. ಅವು ಕೈಮೀರಿ ದೊಡ್ಡ ತಿಕ್ಕಾಟಗಳೂ ಆಗಬಹುದು. ಆದರೆ ಎಲ್ಲ ಘಟನೆಗಳ ಮೂಲಕ್ಕೆ ಹೋಗಿ ನೋಡಿದರೆ ಅವು ಹೆಚ್ಚುತ್ತಿರುವ ಅಸಹನೆಯ ಫಲವಾಗಿರುತ್ತವೆ.

ಗುಜರಾತ್‌ನಲ್ಲಿ ನಡೆದಿದ್ದಾದರೂ ಏನು?

ಒಂದುವೇಳೆ ಅಮಾಯಕ ಕರಸೇವಕರನ್ನು ಸಾಬರ್‌ಮತಿ ರೈಲಿನ ಬೋಗಿಗಳಲ್ಲಿ ಜೀವಂತವಾಗಿ ಸುಟ್ಟುಹಾಕುವ ಪಿತೂರಿ ರೂಪಿಸದೆ ಹೋಗಿದ್ದಿದ್ದರೆ ಗುಜರಾತ್ ಹಿಂಸಾಚಾರವೇ ಸಂಭವಿಸುತ್ತಿರಲಿಲ್ಲ. ಆದರೆ ಅದಾಗಲಿಲ್ಲ. ಕರಸೇವಕರನ್ನು ಸಜೀವವಾಗಿ ದಹನ ಮಾಡಲಾಯಿತು. ಇದಕ್ಕೆ ಕಾರಣಕರ್ತರಾರು? ಸರಕಾರ ಈ ಬಗ್ಗೆ ತನಿಖೆ ನಡೆಸುತ್ತಿದೆ. ಗೂಢಚರ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿವೆ. ಆದರೆ ಗುಜರಾತ್ ದುರಂತಕ್ಕೆ ಎಡೆಮಾಡಿಕೊಟ್ಟ ಮೂಲ ಕಾರಣವನ್ನು ನಾವು ಮರೆಯಬಾರದು. ಗೋಧ್ರಾ ನಂತರದ ಹಿಂಸಾಚಾರವನ್ನು ಖಂಡಿತ ಖಂಡಿಸಲೇಬೇಕು. ಆದರೆ ಬೋಗಿಗೆ ಬೆಂಕಿ ಇಟ್ಟವರಾರು? ಆ ಬೆಂಕಿ ಹರಡಿದ್ದು ಹೇಗೆ?

ನಮ್ಮದು ಬಹುಧರ್ಮೀಯ ರಾಷ್ಟ್ರ. ಹಲವಾರು ಭಾಷೆಗಳು ನಮ್ಮ ದೇಶದಲ್ಲಿವೆ. ಒಬ್ಬೊಬ್ಬರು ಒಂದೊಂದು ದೇವರನ್ನು ಆರಾಧಿಸುತ್ತಾರೆ. ನಾವು ಶಾಂತಿಯುತ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಧರ್ಮಗಳಿಗೆ ಸಮಾನ ಗೌರವ ನೀಡಬೇಕೆಂದು ನಾವು ನಂಬಿದ್ದೇವೆ. ಯಾರು ಕೂಡ ಭಾರತದ ಜಾತ್ಯತೀತತೆಯ ಬಗ್ಗೆ ಪ್ರಶ್ನಿಸಬಾರದು. ನಮ್ಮ ಪಾಲಿಗೆ ಗೋವಾದಿಂದ ಗುವಾಹಟಿಯವರೆಗೂ ಭಾರತದ ಮಣ್ಣು ಒಂದೇ. ಈ ನೆಲದಲ್ಲಿ ವಾಸಿಸುತ್ತಿರುವವರೆಲ್ಲ ಒಂದೇ. ನಮಗೆ ಧಾರ್ಮಿಕ ತೀವ್ರವಾದದಲ್ಲಿ ನಂಬಿಕೆ ಇಲ್ಲ. ಇಂದು ಭಯೋತ್ಪಾದನೆ ನಮ್ಮ ದೇಶಕ್ಕೆ ಅತಿ ದೊಡ್ಡ ಬೆದರಿಕೆಯಾಗಿದೆ. ನಾನು ಜಗತ್ತಿನ ಯಾವ ರಾಷ್ಟ್ರಕ್ಕೆ ಹೋದರೂ ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದವರು ಉಗ್ರ ಇಸ್ಲಾಂ ಭಯೋತ್ಪಾದನೆಯ ಬೀಜ ಬಿತ್ತುತ್ತಿದೆಯೆಂದು ದೂರುತ್ತಾರೆ. ಇಸ್ಲಾಂನಲ್ಲಿ ಎರಡು ಮುಖಗಳಿವೆ. ಒಂದು ಅನ್ಯಧರ್ಮೀಯರ ಬಗ್ಗೆ ಸಹಿಷ್ಣು ಭಾವನೆ ಹೊಂದಿದೆ. ಸತ್ಯ ಮಾರ್ಗವನ್ನು ತುಳಿಯಬೇಕೆಂದು, ಪರಸ್ಪರ ಪ್ರೀತಿ, ಅನುಕಂಪ ಮತ್ತು ಸಂವೇದನೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳುತ್ತದೆ. ಆದರೆ ಇಂದು ಇಸ್ಲಾಂ ಹೆಸರಿನಲ್ಲಿ ತಲೆಯೆತ್ತುತ್ತಿರುವ ಭಯೋತ್ಪಾದನೆಯಲ್ಲಿ ಸಹಿಷ್ಣುತೆಗೆ ಜಾಗವೇ ಇಲ್ಲ. ಅವರು ಜಿಹಾದ್‌ನ ಕಹಳೆಯೂದಿದ್ದಾರೆ. ಇಡಿ ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮಾತನ್ನಾಡುತ್ತಿದ್ದಾರೆ. ಎಲ್ಲೆಲ್ಲಿ ಮುಸ್ಲಿಮರಿದ್ದಾರೋ ಅಲ್ಲೆಲ್ಲಾ ಅವರು ಇತರರೊಂದಿಗೆ ಬೆರೆತು ಬದುಕುವುದಕ್ಕೆ ಸಿದ್ಧರಿಲ್ಲ. ತಮ್ಮ ತತ್ವಗಳನ್ನು ಶಾಂತಿಯುತವಾಗಿ ಪ್ರಚಾರ ಮಾಡುವ ಬದಲಾಗಿ ಬೆದರಿಕೆ ಮತ್ತು ಭಯೋತ್ಪಾದನೆಯ ಮೂಲಕ ಹರಡಲು ಯತ್ನಿಸುತ್ತಿದ್ದಾರೆ. ಈ ಅಪಾಯದ ಬಗ್ಗೆ ಜಗತ್ತು ಎಚ್ಚೆತ್ತುಕೊಂಡಿದೆ. ಭಯೋತ್ಪಾದನೆಯ ಬಗ್ಗೆ ನಿರ್ಲಕ್ಷ್ಯ ತಳೆಯುವ ಮೂಲಕ ನಾವೆಂಥ ಘೋರ ಅಪರಾಧವೆಸಗಿದೆವು ಎಂದು ಜಗತ್ತಿನ ರಾಷ್ಟ್ರಗಳು ಅರ್ಥಮಾಡಿಕೊಳ್ಳಲಾರಂಭಿಸಿವೆ. ಈಗ ಎಚ್ಚೆತ್ತು ಸಂಘಟಿತವಾಗುತ್ತಿವೆ. ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ವಾನುಮತ ರೂಪಿಸಲು ಯತ್ನಿಸಲಾಗುತ್ತಿದೆ.

ಆದರೆ ನಾವು ಅವರಿಗೆ ನಮ್ಮ ಅನುಭವವನ್ನು ಹೇಳುತ್ತಿದ್ದೇವೆ. ನಮ್ಮ ದೇಶದಲ್ಲಿ ನಾವೆಂದೂ ಅನ್ಯ ಧರ್ಮೀಯರನ್ನು ಬಲಾತ್ಕಾರಪಡಿಸಿಲ್ಲ. ನಾವು ಅಥವಾ ಅವರು ಎಂಬ ತಾರತಮ್ಯವನ್ನೂ ಮಾಡಿಲ್ಲ. ನಾವು ಪೂಜಿಸುವ ವಿಧಾನ ಬೇರೆ ಬೇರೆಯಾಗಿರಬಹುದು. ಆದರೆ ದೇವರು ಒಬ್ಬನೇ. ಈ ಕಾರಣಕ್ಕಾಗಿಯೇ ಭಾರತದ ಪ್ರತಿಷ್ಠೆ ಹೆಚ್ಚಾಗುತ್ತಿದೆ”.

ಹಾಗೆಂದು ಹೇಳಿ ಅಟಲ್ ಮಾತು ಮುಗಿಸಿದರು.

ಆದರೆ ಗುಜರಾತ್ ವಿರುದ್ಧದ ಪ್ರಚಾರಾಂದೋಲನ, ಮೋದಿ ವಿರುದ್ಧದ ಟೀಕೆಗಳು ಮಾತ್ರ ಇನ್ನೂ ಜೋರಾದವು. ಆದರೇನಂತೆ ಇಂದು ಗುಜರಾತ್ ಮುಸಲ್ಮಾನರ ಮನದಲ್ಲೇ ಬದಲಾವಣೆಯ ಗಾಳಿ ಬೀಸಿರುವುದು ಗೋಚರವಾಗುತ್ತಿದೆ. ಮೊನ್ನೆ ಫೆಬ್ರವರಿ 20ರಂದು ಗುಲ್ಬರ್ಗ್ ಸೊಸೈಟಿಯ 12 ಜನರು ಅಹಮದಾಬಾದ್ ಪೊಲೀಸ್ ಕಮೀಷನರ್‌ರನ್ನು ಭೇಟಿಯಾಗಿ ಮನವಿಯೊಂದನ್ನು ಸಲ್ಲಿಸಿದ್ದರು. ಪ್ರತಿ ವರ್ಷ ಫೆಬ್ರವರಿ 28 ಬಂದರೆ ಸೆಕ್ಯುಲರ್ ಸೋಗು ಹಾಕಿಕೊಂಡಿರುವ ಒಂದಿಷ್ಟು ಎನ್‌ಜಿಓಗಳು ಗುಲ್ಬರ್ಗ್ ಸೊಸೈಟಿಯಲ್ಲಿ ಸಭೆಯೊಂದನ್ನು ನಡೆಸುತ್ತಿದ್ದವು. ಕೋಮುಗಲಭೆಯಲ್ಲಿ ಬಲಿಯಾದ ಗುಲ್ಬರ್ಗ್ ಸೊಸೈಟಿಯ 69 ನತದೃಷ್ಟರ ಕುಟುಂಬಗಳ ಆಸ್ತಿಯನ್ನು ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಿ ಆ ಜಾಗವನ್ನು ಮ್ಯೂಸಿಯಮ್ ಆಗಿ ಪರಿವರ್ತಿಸುವುದಾಗಿ ಕಳೆದ 10 ವರ್ಷಗಳಿಂದಲೂ ಹುಸಿ ಭರವಸೆಯನ್ನು ಕೊಡುತ್ತಲೇ ಬಂದಿದ್ದರು. ಆ ಸತ್ಯ ಮುಸ್ಲಿಮರಿಗೆ ಕೊನೆಗೂ ಅರಿವಾಗಿದೆ. ಗುಜರಾತ್ ಹಿಂಸಾಚಾರವೆನ್ನುವುದು ಎನ್‌ಜಿಓಗಳಿಗೆ, ಸೆಕ್ಯುಲರ್‌ವಾದಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಇರುವ ಒಂದು ಮಾರ್ಗ ಹಾಗೂ ಅದು ಹಾಗೆಯೇ ಇರಬೇಕು ಎಂಬುದು ಗೊತ್ತಾಗಿದೆ. ಅದರಲ್ಲೂ ತೀಸ್ತಾ ಸೇತಲ್ವಾಡಳ ಬಣ್ಣ ಬಯಲಾಗಿದೆ. ಆ ಕಾರಣಕ್ಕೆ ಪೊಲೀಸ್ ಕಮೀಷನ್ನರನ್ನು ಭೇಟಿಯಾದ 12 ಜನರು ಈ ವರ್ಷ ಫೆಬ್ರವರಿ 28ರಂದು ಸಭೆ ನಡೆಸಲು ಅವಕಾಶ ನೀಡಕೂಡದೆಂದು ಮನವಿ ಮಾಡಿದ್ದರು. ಅವರಲ್ಲಿ ಗುಲ್ಬರ್ಗ್ ಸೊಸೈಟಿ ದುರಂತದ ಸಾಕ್ಷಿಗಳಾಗಿರುವ ಸಯಿದಾ ಖಾನ್ ಪಠಾಣ್ ಹಾಗೂ ಇಮ್ತಿಯಾಜ್‌ಖಾನ್ ಪಠಾಣ್ ಕೂಡ ಸೇರಿದ್ದಾರೆ. ಹೊರಗಿನವರು ಗುಲ್ಬರ್ಗ್ ಸೊಸೈಟಿಗೆ ಕಾಲಿಡದಂತೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದೂ ಅವರು ಮನವಿ ಮಾಡಿದ್ದರು. ಮುಸ್ಲಿಮರೇ ತಿರುಗಿಬಿದ್ದ ಕಾರಣ  ಹೆದರಿದ ತೀಸ್ತಾ ಹಾಗೂ ಎನ್‌ಜಿಓಗಳು ಈ ಬಾರಿ ಗುಲ್ಬರ್ಗ್ ಸೊಸೈಟಿಗೆ ಕಾಲಿಟ್ಟಿಲ್ಲ.

ಇದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ.

ಪರಸ್ಪರ ಅಪನಂಬಿಕೆ, ಅವಿಶ್ವಾಸ, ದ್ವೇಷವನ್ನು ದೂರಮಾಡಿ ಹಿಂದು-ಮುಸ್ಲಿಮ್ ಸಮುದಾಯಗಳನ್ನು ಒಂದು ಮಾಡಲು ಇದು ಸಕಾಲ. ಹಾಗಂತ ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಇಂದು ಮುಸ್ಲಿಂ ಸಮುದಾಯವೇ ಸಂಧಾನ, ಸಾಮರಸ್ಯದ ಸಂಜ್ಞೆ ಕೊಡುತ್ತಿದೆ. ಅದಕ್ಕೆ ಗುಜರಾತ್ ಸರ್ಕಾರ ಹಾಗೂ ಹಿಂದು ಸಮುದಾಯ ಸರಿಯಾಗಿ ಸ್ಪಂದಿಸಬೇಕು. ಮೋದಿ ಅವರು ಬರೀ ಸದ್ಭಾವನಾ ಸಭೆಗಳನ್ನು ಆಯೋಜಿಸಿದರಷ್ಟೇ ಸಾಲದು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ, ಅವರ ಬದುಕನ್ನು ಸುಸ್ಥಿತಿಗೆ ತರುವ ಕೆಲಸ ಮಾಡಬೇಕು, ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು. ಅಷ್ಟು ಮಾತ್ರವಲ್ಲ ಗುಜರಾತ್ ಹಿಂಸಾಚಾರದಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೇಳಿದರೂ ನರೇಂದ್ರ ಮೋದಿಯವರು ಅದಕ್ಕೆ ನೈತಿಕ ಹೊಣೆ ಹೊರಬೇಕು ಹಾಗೂ ಹಾಗೆ ಹೊಣೆ ಹೊತ್ತಾಗ ಮಾತ್ರ ಪರಿಸ್ಥಿತಿ ತಿಳಿಗೊಳ್ಳಲು ಸಾಧ್ಯ.

ನಿಮಗೂ ಹಾಗನಿಸುವುದಿಲ್ಲವೇ?

2 Responses to “ಗೋಧ್ರಾ ದುರಂತ, ಗುಜರಾತ್ ಹಿಂಸಾಚಾರ ಎರಡನ್ನೂ ಮರೆಯಬೇಕಾದ ಕಾಲ ಬಂತೇ?”

  1. Dheeraj M Pai says:

    Sir we also feel the same
    let all those so called “secularist” perish
    let people respect country more than their relegion
    let people demand development than their communalism as in gujarat
    Thank you sir article was very nice

  2. anvith says:

    i don’t feel MODIJI should apologize and what is wrong we know what happened in Gujarat apologies will just be used by sickular media upliftment and making minorities realize how lucky they are to be in this HOLY MOTHERLAND will solve the problem