Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪಂಚಾಯಿತಿ ಚುನಾವಣೆ ಬಂದಾಗ ‘ನಾಲ್ವರು’ ನೆನಪಾದರು!

ಪಂಚಾಯಿತಿ ಚುನಾವಣೆ ಬಂದಾಗ ‘ನಾಲ್ವರು’ ನೆನಪಾದರು!

Direct democracy! ಅದನ್ನು Athenian democracy ಎಂದೂ ಕರೆಯುತ್ತಾರೆ. ಕಾರಣ, ಪ್ರಜಾಪ್ರಭುತ್ವದ ಮೊದಲ ಪ್ರಯೋಗ ನಡೆದಿದ್ದೇ ಗ್ರೀಸ್‌ನ ಅಥೆನ್ಸ್‌ನಲ್ಲಿ, ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ. ಈ ಡೈರೆಕ್ಟ್ ಡೆಮಾಕ್ರಸಿ ಅಥವಾ ನೇರ ಪ್ರಜಾಪ್ರಭುತ್ವ ಎಂದರೆ ಜನರಿಂದ ಕೂಡಿರುವ, ತಮಗೆ ಬೇಕಾದ ನೀತಿ-ನಿಯಮಗಳನ್ನು ಜನರೇ ರೂಪಿಸಿಕೊಳ್ಳುವ ಒಂದು ಸರಕಾರ. ಇನ್ನೂ ಸರಳವಾಗಿ ಹೇಳಬೇಕೆಂದರೆ ಇಲ್ಲಿ ಶಾಸಕ, ಸಂಸದರಂಥ ಜನಪ್ರತಿನಿಧಿಗಳಿರುವುದಿಲ್ಲ. ಹದಿನೆಂಟು ವರ್ಷ ವಯೋಮಾನ ಮೀರಿದ ಎಲ್ಲರೂ ಇದರ ಸದಸ್ಯರೇ. ಇದೊಂದು ಗ್ರಾಮ ಮಟ್ಟದ ಪುಟ್ಟ ವ್ಯವಸ್ಥೆ. ವರ್ಷಕ್ಮೊಮ್ಮೆ, ಎರಡು ಬಾರಿ ಅಥವಾ ಇನ್ನೂ ಹೆಚ್ಚು ಸಲ ಗ್ರಾಮಸ್ಥರೆಲ್ಲ ಒಟ್ಟಿಗೆ ಸಭೆ ಸೇರುತ್ತಾರೆ. ಕಂದಾಯ, ಇತರ ಮೂಲಗಳಿಂದ ಬಂದ ಆದಾಯ ಎಷ್ಟು ಎಂದು ಲೆಕ್ಕಹಾಕುತ್ತಾರೆ. ಗ್ರಾಮಕ್ಕೆ ಏನೆಲ್ಲ ಸೌಕರ್ಯಗಳ ಅವಶ್ಯಕತೆ ಇದೆ, ಬಂದ ಆದಾಯದಲ್ಲಿ ಏನೆಲ್ಲ ಸೌಲಭ್ಯಗಳನ್ನು ಕಲ್ಪಿಸಬಹುದು ಎಂದು ಕುಳಿತು ಪರಾಮರ್ಶೆ ನಡೆಸುತ್ತಾರೆ. ಗ್ರಾಮಸಭೆಯಲ್ಲೇ ನಿರ್ಧಾರವನ್ನೂ ಕೈಗೊಳ್ಳುತ್ತಾರೆ, ಕೂಡಲೇ ಕಾಮಗಾರಿಯೂ ಆರಂಭವಾಗುತ್ತದೆ. ನಿಮ್ಮ ಊರಿನ ಅಗತ್ಯವನ್ನು ಈಡೇರಿಸಿಕೊಳ್ಳಲು ನೀವು ಯಾರದ್ದೋ ಅಪ್ಪಣೆಗಾಗಿ ಕಾಯಬೇಕಿಲ್ಲ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಇಂಥದ್ದೊಂದು ಕಲ್ಪನೆ ಗ್ರೀಕರಿಗೆ ಹೊಳೆದಿತ್ತು.

ಆನಂತರ ಬಂದಿದ್ದೇ Representative Democracy ಅಥವಾ ಪ್ರತಿನಿಧಿ ಪ್ರಜಾಪ್ರಭುತ್ವ. ಗ್ರಾಮದ ಸಮಸ್ಯೆಗಳನ್ನು ಗ್ರಾಮ ಮಟ್ಟ ದಲ್ಲಿ ಪರಿಹರಿಸಿಕೊಳ್ಳುವುದು ಸರಿ. ಸಾವಿರಾರು, ಲಕ್ಷಾಂತರ ಮಂದಿ ಇರುವ ದೊಡ್ಡ ದೊಡ್ಡ ಪೇಟೆ, ಪಟ್ಟಣಗಳ ಗತಿಯೇನು? ಹಾಗಾಗಿ ಜನರು ತಮ್ಮ ಪರವಾಗಿ ಹಕ್ಕು ಪ್ರತಿಪಾದನೆ ಮಾಡಲು, ಕುಂದುಕೊರತೆಗಳ ಬಗ್ಗೆ ಗಮನ ಸೆಳೆದು ಪರಿಹರಿಸಲು ಶಾಸಕ, ಸಂಸದರ ರೂಪದಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಬಂತು. ಕಾಲಾಂತರದಲ್ಲಿ ಪ್ರತಿನಿಧಿ ಪ್ರಜಾಪ್ರಭುತ್ವ ಉಚ್ಛ್ರಾಯ ಸ್ಥಿತಿಗೆ ತಲುಪಿ, ನೇರ ಪ್ರಜಾಪ್ರಭುತ್ವ ಮರೆಯಾಗತೊಡಗಿತು.

ಆಗ ಮತ್ತೆ ವಟ ವಟ ಆರಂಭವಾಯಿತು.

ಪ್ರತಿನಿಧಿ ಪ್ರಜಾತಂತ್ರವಿದ್ದಾಗ್ಯೂ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳುವ ವ್ಯವಸ್ಥೆ ಬೇಕು. ಶಾಸಕರು, ಸಂಸದರು ಕೈಗೆ ಸಿಗುವುದಿಲ್ಲ, ಅವರಿಗೆ ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲ, ಸಮಸ್ಯೆಗೆ ಕೂಡಲೇ ಸ್ಪಂದಿಸುವುದಿಲ್ಲ ಎಂಬ ದೂರುಗಳು ದೊಡ್ಡದಾಗುತ್ತಾ ಹೋದವು. ಅಷ್ಟಕ್ಕೂ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಜನಪ್ರತಿನಿಧಿಗಳೂ ಕೂಡ ಜನರ ನಡುವೆಯೇ ವಾಸ ಮಾಡಿಕೊಂಡಿರಬೇಕು. ಊರಿಗೆ ನೀರಿನ ಸಮಸ್ಯೆಯುಂಟಾದರೆ ಆ ಸಮಸ್ಯೆ ಜನಪ್ರತಿನಿಧಿಯನ್ನೂ ಕಾಡಿದರೆ ಮಾತ್ರ ಆತ ಕೂಡಲೇ ಸ್ಪಂದಿಸುತ್ತಾನೆ. ಆತನ ಮಗ ಸ್ಥಳೀಯ ಶಾಲೆಯಲ್ಲಿ ಕಲಿಯುತ್ತಿದ್ದರಷ್ಟೇ ಇತರ ಮಕ್ಕಳ ಗೋಳು ಅರ್ಥವಾಗುತ್ತದೆ. ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ‘ಗ್ರಾಮ್ ಸ್ವರಾಜ್’ (Village self-rule) ಏನಿದೆಯಲ್ಲಾ ಅದು ಮತ್ತ್ಯಾವುದೂ ಅಲ್ಲ ಇದೇ. ತಮ್ಮನ್ನು ತಾವೇ ಆಳಿಕೊಳ್ಳುವ, ತಮ್ಮ ಕುಂದು-ಕೊರತೆಗಳಿಗೇ ತಾವೇ ಪರಿಹಾರ ಕಂಡುಕೊಳ್ಳುವ ಹಕ್ಕನ್ನು ಜನರಿಗೇ ನೀಡುವುದು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು, ಪ್ರತಿನಿಧಿ ಪ್ರಜಾಪ್ರಭುತ್ವವನ್ನು ಜಾರಿಗೆ ತಂದ ಮೇಲೂ ಪಂಚಾಯತ್ ರಾಜ್ ವ್ಯವಸ್ಥೆಯನ್ನು (1959ರಲ್ಲಿ) ರೂಪಿಸಿದ್ದು ಇದೇ ಕಾರಣಕ್ಕೆ. ಈ ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತಂದಿದ್ದು ಕೇಂದ್ರ ಸರಕಾರವಾದರೂ ಎಲ್ಲ ರಾಜ್ಯಗಳಲ್ಲೂ ಒಂದೇ ತೆರನಾದ ವ್ಯವಸ್ಥೆ ಇಲ್ಲ. ಒಂದೊಂದು ರಾಜ್ಯಗಳಲ್ಲೂ ಅದು ಭಿನ್ನವಾಗುತ್ತಾ ಹೋಗುತ್ತದೆ. ಆದರೂ 1987ರಲ್ಲಿ ಆಗಿನ ಜನತಾ ಸರಕಾರ ಜಾರಿಗೆ ತಂದ ನಮ್ಮ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಕಾಯಿದೆ ದೇಶದಲ್ಲಿ ಅತ್ಯುತ್ತಮ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಸರ್, ಇಡೀ ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ಯಾರಿಗೆ ಸಲ್ಲಬೇಕು?”-ಹಾಗಂತ ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ. ಸೋಮಶೇಖರ್ ಅವರನ್ನು ಪ್ರಶ್ನಿಸಿದಾಗ, ಒಂದೊಂದೇ ಸಂಗತಿಗಳು ಹೊರಬರತೊಡಗಿದವು.

ಅಂಥದ್ದೊಂದು ಕನಸು ಕಂಡವರು ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ.

ಎಸ್. ನಿಜಲಿಂಗಪ್ಪನವರ ಸಂಪುಟದಲ್ಲಿ 1962ರಿಂದ 65ರವ ರೆಗೂ ಸಹಕಾರ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಹೆಗಡೆಯವರು ಗೃಹ, ಅಬಕಾರಿ, ಕಂದಾ ಯ ಮುಂತಾದ ಕೆಲವು ಮಹತ್ವದ ಖಾತೆಗಳಿಗೆ ಸಂಬಂಧ ಪಟ್ಟ ಇಲಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜವಾಬ್ದಾರಿಗಳನ್ನು ವಿಕೇಂದ್ರೀಕರಣಗೊಳಿಸಲು ಮುಂದಾಗಿದ್ದರು. ಆ ಕಾಲದಲ್ಲಿ ಯಾವುದಾದರೂ ಹೊಸ ವ್ಯವಸ್ಥೆ, ಬದಲಾವಣೆಯನ್ನು ತರಬೇಕಾ ದರೆ ಮೊದಲು ಆಡಳಿತ ಪಕ್ಷದ ಶಾಸಕಾಂಗ ಸಭೆಯ ಮುಂದಿಡ ಬೇಕಿತ್ತು. ಅಲ್ಲಿ ಒಪ್ಪಿಗೆ ದೊರೆತರೆ ಮಾತ್ರ ವಿಧಾನಸಭೆಯಲ್ಲಿ ಮಂಡನೆಯಾಗುತ್ತಿತ್ತು. ಆದರೆ ಶಾಸಕರ ಅಧಿಕಾರ, ಹಸ್ತಕ್ಷೇಪಕ್ಕೇ ಚರಮಗೀತೆ ಹಾಡುವ ಅಪಾಯ ಹೊಂದಿದ್ದ ಹೆಗಡೆಯವರ ಪಂಚಾಯತ್ ರಾಜ್ ಕಲ್ಪನೆಯನ್ನು ಶಾಸಕಾಂಗ ಸಭೆ ಚಿವುಟಿ ಹಾಕಿತು. 1969ರಲ್ಲಿ ಬಂಡಾಯ ಕಾಂಗ್ರೆಸ್(ಎಸ್) ಸೇರಿದ ಹೆಗಡೆ, ತುರ್ತುಪರಿಸ್ಥಿತಿ ನಂತರ ಜನತಾ ಪರಿವಾರದ ಜತೆಗೂಡಿದರು. ಜನತಾ ಪರಿವಾರ ೧೯೮೩ರಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರಕಾರ ರಚನೆ ಮಾಡಿದಾಗ ಮುಖ್ಯಮಂತ್ರಿ ಸ್ಥಾನ ಹೆಗಡೆಯವರಿಗೊಲಿಯಿತು.

ಅಬ್ದುಲ್ ನಜೀರ್ ಸಾಬ್ ಜನಿಸಿದ್ದು ೧೯೩೪, ಡಿಸೆಂಬರ್ ೨೫ರಂದು. ಒಬ್ಬ ಸಾತ್ವಿಕ ರಾಜಕಾರಣಿ. ತಮ್ಮ ಕಲ್ಪನೆಯ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಬೇಕಾದರೆ ಒಬ್ಬ ಯೋಗ್ಯ, ಪ್ರಾಮಾಣಿಕ, ಪರಿಶ್ರಮಿ ಮಂತ್ರಿಯ ಅಗತ್ಯವಿದೆಯೆಂದ ರಿತ ಹೆಗಡೆಯವರು, ಮುಖ್ಯಮಂತ್ರಿಯಾದ ಕೂಡಲೇ ನಜೀರ್ ಸಾಬ್‌ರನ್ನು ಸಂಪುಟಕ್ಕೆ ತೆಗೆದುಕೊಂಡರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯನ್ನು ನೀಡಿದರು. ಅಧಿಕಾರ ವಹಿಸಿಕೊಂಡ ನಜೀರ್ ಸಾಬ್, ಪ್ರತಿ ಗ್ರಾಮಕ್ಕೂ ಕುಡಿಯುವ ಶುದ್ಧ ನೀರು ಪೂರೈಕೆ ಹಾಗೂ ಅಧಿಕಾರ ವಿಕೇಂದ್ರೀಕರಣ ನನ್ನ ಗುರಿ ಎಂದರು. ಅದೇ ಸಮಯಕ್ಕೆ ಮದ್ರಾಸಿನ (ಚೆನ್ನೈ) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಹ್ಯಾಂಡ್ ಪಂಪ್ (ಬೋರ್‌ವೆಲ್) ಆವಿಷ್ಕಾರ ಮಾಡಿ ಪೇಟೆಂಟ್ ಮುಕ್ತ (ಅನ್ ಪೆಂಟೆಡ್ ಇನ್‌ವೆನ್ಷನ್) ಮಾಡಿತ್ತು! ಅದರ ಜತೆ ಮಾತುಕತೆ ನಡೆಸಿ ವಿನ್ಯಾಸ ಮತ್ತು ಉಪಕರಣಗಳನ್ನು ತರಿಸಿಕೊಂಡ ನಜೀರ್ ಸಾಬ್, 500-600 ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಕನಿಷ್ಠ ಎರಡು, ಅದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಿಗೆ ತಲಾ ಒಂದು ಬೋರ್‌ವೆಲ್‌ಗಳನ್ನು ಸಮರೋಪಾದಿಯಲ್ಲಿ ಕೊರೆಸಿದರು. ನೀರಿಗಾಗಿ ತಲೆ ಮೇಲೊಂದು, ಸೊಂಟದಲ್ಲೊಂದು ಬಿಂದಿಗೆ ಹಿಡಿದು ಬಾವಿ ಹುಡುಕಿಕೊಂಡು ಮೈಲು ದೂರ ಹೋಗುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಊರೊಳಗೇ ಶುದ್ಧ ಕುಡಿಯುವ ನೀರು ಲಭ್ಯವಾಯಿತು. ಬೋರ್‌ವೆಲ್ ಆಧಾರಿತ ಕಿರು ನೀರು ಸರಬರಾಜು ಯೋಜನೆಗಳೂ ಆರಂಭವಾದವು. ಇಂಥದ್ದೊಂದು ಪಯೋನಿಯರಿಂಗ್ ವರ್ಕ್‌ನಿಂದಾಗಿ ನಜೀರ್ ಸಾಬ್, ‘ನೀರ್ ಸಾಬ್’ರಾದರು. ಇತ್ತ ಮೌಲ್ಯಾಧಾರಿತ ರಾಜಕಾರಣವೆಂಬ ಹೊಸ ಚಳವಳಿಯನ್ನೇ ಆರಂಭಿಸಿದ್ದ ರಾಮಕೃಷ್ಣ ಹೆಗಡೆಯವರಿಗೆ 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಮರು ಜನಾದೇಶ ಸಿಕ್ಕ ನಂತರವಂತೂ ಅವರ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಾಯಿತು. ಶಾಸಕರ ಮೇಲಿನ ಹಿಡಿತವನ್ನೂ ಹೆಚ್ಚಿಸಿಕೊಂಡರು.

ಅದರ ಫಲವೇ ೧೯೮೭ರ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ.

ಇಲ್ಲಿ ಅಧಿಕಾರ ಎರಡು ಹಂತದಲ್ಲಿ ವಿಕೇಂದ್ರೀಕರಣಗೊಂಡಿತು. ಜಿಲ್ಲಾ ಪರಿಷತ್ ಹಾಗೂ ಮಂಡಲ ಪಂಚಾಯತ್. ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ ರಾಜ್ಯ ಸಚಿವರ(ಮಿನಿಸ್ಟರ್ ಆಫ್ ಸ್ಟೇಟ್) ಸ್ಥಾನಮಾನ ನೀಡಲಾಯಿತು. ಅವರನ್ನು ಜಿಲ್ಲೆಯ ಮುಖ್ಯಮಂತ್ರಿ ಎಂಬಂತೆ ಬಿಂಬಿಸಲಾಯಿತು. ಜಿಲ್ಲಾ ಪರಿಷತ್ತುಗಳ ಮುಖ್ಯ ಕಾರ್ಯದರ್ಶಿಗೆ ಜಿಲ್ಲಾಧಿಕಾರಿಗಿಂತಲೂ ಹೆಚ್ಚಿನ ಅಧಿಕಾರ ಕೊಡಲಾಯಿತು. ಆ ಮೂಲಕ ಎಲ್ಲ ಕೆಲಸಕ್ಕೂ ರಾಜ್ಯಮಟ್ಟಕ್ಕೆ ಬಾರದೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವಂತೆ ಮಾಡಲಾಯಿತು. ಹೀಗಾಗಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧಿಕಾರ ಕಳೆದುಕೊಂಡರು! ಅವರ ಲಂಚಗುಳಿತನ, ದಗಲ್ಬಾಜಿತನ, ವಶೀಲಿಗೆ ಕಡಿವಾಣ ಬಿತ್ತು. ಇತ್ತ ಮಂಡಲ ಪಂಚಾಯಿತಿ ಅಧ್ಯಕ್ಷನನ್ನು “ಪ್ರಧಾನ” ಎಂದು ಕರೆಯಲಾಯಿತು. ಒಂದರ್ಥದಲ್ಲಿ ಆತ ಗ್ರಾಮ ಪ್ರಧಾನಿಯಂತೆ ಹೊರಹೊಮ್ಮತೊಡಗಿದ. ಸಿಬ್ಬಂದಿಗೆ ರಜೆ ನೀಡುವ ಅಧಿಕಾರವೂ ಜಿಲ್ಲಾ ಪರಿಷತ್ ಅಧ್ಯಕ್ಷ ಹಾಗೂ ಪ್ರಧಾನನಿಗೆ ಸಿಕ್ಕಿತು. ಅದನ್ನು ನಜೀರ್ ಸಾಬ್, “ಜನರ ಕೈಗೇ ಅಧಿಕಾರ”(Power to the people) ಎಂದರು. ಕಂದಾಯ, ಸಾರಿಗೆ, ಪೊಲೀಸ್, ನೋಂದಣಿ, ಬೃಹತ್ ಉದ್ದಿಮೆ, ನೀರಾವರಿ, ಲೋಕೋಪಯೋಗಿ ಮುಂತಾದ ಕೆಲವೇ ಇಲಾಖೆಗಳನ್ನು ಬಿಟ್ಟು ಉಳಿದೆಲ್ಲ ಇಲಾಖೆಗಳೂ ಪರಿಷತ್‌ನ ನಿಯಂತ್ರಣಕ್ಕೆ ಬಂದವು. ಹದಿನೆಂಟು ವರ್ಷ ಮೀರಿದ ಗ್ರಾಮದ ಎಲ್ಲರೂ ಗ್ರಾಮಸಭೆಗಳ ಸದಸ್ಯರಾದರು. ಸರಕಾರಿ ಯೋಜನೆಗಳ ಫಲಾನುಭವಿಗಳನ್ನು (Beneficiaries) ಗ್ರಾಮಸಭೆಗಳಲ್ಲೇ ನಿರ್ಧರಿಸಿ ಸರಕಾರಕ್ಕೆ ಶಿಫಾರಸು ಮಾಡುವ ಹಕ್ಕು ದೊರೆಯಿತು. ಆಶ್ರಯ ಮನೆ, ನೀರು, ವಿದ್ಯುತ್ ಹಂಚುವ(ಭಾಗ್ಯ ಜ್ಯೋತಿ) ಜವಾಬ್ದಾರಿಯೂ ಪಂಚಾಯಿತಿಗಳಿಗೆ ಸಿಕ್ಕಿತು, ಎಮ್ಮೆಲ್ಲೆಗಳ ಬಾಲ ತುಂಡಾಯಿತು. ಪ್ರಧಾನಿ ರಾಜೀವ್ ಗಾಂಧಿಯವರೇ ಮೆಚ್ಚುವಂಥ ವ್ಯವಸ್ಥೆಯನ್ನು ನಜೀರ್ ಸಾಬ್ ರೂಪಿಸಿದರು, ಹೆಗಡೆ ಜಾರಿಗೆ ತಂದರು. ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ತಿಳಿದುಕೊಳ್ಳಬೇಕಾದರೆ ಅಬ್ದುಲ್ ನಜೀರ್ ಸಾಬ್ ಅವರ ಬದುಕು-ಸಾಧನೆಯನ್ನು ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳಬೇಕೆಂದರೆ ಮನು ಬಳಿಗಾರ್ ಅವರು ಬರೆದಿರುವ ‘ಅಬ್ದುಲ್ ನಜೀರ್ ಸಾಬ್’ ಪುಸ್ತಕವನ್ನು ಓದಬೇಕು. ದುರದೃಷ್ಟಕರ ಸಂಗತಿಯೆಂದರೆ ಅದನ್ನು ಪ್ರಕಟಿಸಿರುವುದು ಕರ್ನಾಟಕ ವಿಧಾನ ಮಂಡಲ ಗ್ರಂಥಾಲಯ ಸಮಿತಿ. ಹಾಗಾಗಿ ಬುಕ್‌ಸ್ಟಾಲ್‌ಗಳಲ್ಲಿ ಲಭ್ಯವಿಲ್ಲ. ಇದೇನೇ ಇರಲಿ, ಮನಮೋಹನ್ ಸಿಂಗ್ ಎಂಬ ಅರ್ಥಶಾಸ್ತ್ರಜ್ಞನ ಹಿಂದೆ ಪ್ರಧಾನಿ ನರಸಿಂಹರಾವ್ ಎಂಬ ದೈತ್ಯಶಕ್ತಿ ಹೇಗಿತ್ತೋ, ನಜೀರ್ ಸಾಬ್ ಯಶಸ್ಸಿನ ಹಿಂದೆ ರಾಮಕೃಷ್ಣ ಹೆಗಡೆ ಎಂಬ ಪ್ರೇರಕ, ರಕ್ಷಕ ಶಕ್ತಿ ಇತ್ತು. ನಜೀರ್ ಸಾಬ್ ಕೂಡ ಅತ್ಯಂತ ಸೆಕ್ಯುಲರ್ ಮನುಷ್ಯ ಹಾಗೂ ಜಾತಿ-ಮತಗಳನ್ನು ಮೀರಿ ರಾಷ್ಟ್ರ ಹಾಗೂ ಜನಹಿತ ಚಿಂತನೆ ಮಾಡಿದ ದೇಶಪ್ರೇಮಿ. ಅಂತಹವರು ಅತ್ಯುತ್ತಮ ವ್ಯವಸ್ಥೆಯನ್ನು ರೂಪಿಸಿದರೂ, ಅದು ಪ್ರಾರಂಭದಲ್ಲಿ ಒಂದಿಷ್ಟು ಆಶಾವಾದ, ಭರವಸೆಯನ್ನು ಹುಟ್ಟುಹಾಕಿದರೂ ಕಾಲಾಂತರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಷ್ಟಾಗಿ ಪರಿಣಾಮ ಬೀರಲಿಲ್ಲ.

ಏಕೆ?

ಜಿಲ್ಲಾ ಪರಿಷತ್ ಅಧ್ಯಕ್ಷನೇ ಜಿಲ್ಲಾ ಮಂತ್ರಿಯಂತಾದ ಕೂಡಲೇ ಜನ ತಮ್ಮ ಚಿಕ್ಕ-ಪುಟ್ಟ ಕೆಲಸಕ್ಕೂ ಸಂಸದರು, ಶಾಸಕರನ್ನು ದುಂಬಾಲು ಬೀಳುವುದು ತಪ್ಪಿತು. ಆಗ ಶುರುವಾಯಿತು ಸಂಘರ್ಷ. ಈ ಶಾಸಕ ಮಹಾಶಯರು ಯಾವ ಮಟ್ಟಕ್ಕಿಳಿದರೆಂದರೆ ಗ್ರಾಮಸಭೆಗಳು ಇಂಥವರಿಗೆ ಆಶ್ರಯ ಮನೆ ನೀಡಬೇಕೆಂದು ಶಿಫಾರಸು ಮಾಡಿದ ನಂತರ ಅದನ್ನು ಯಾರೂ, ಯಾವ ಹಂತದಲ್ಲೂ ಬದಲಾಯಿಸಬಾರದು ಎಂಬ ಪಂಚಾಯತ್ ರಾಜ್ ಕಾಯಿದೆಗೇ ತಿದ್ದುಪಡಿ ತಂದು ಪಟ್ಟಿ ಬದಲಾಯಿಸುವ ಹಕ್ಕನ್ನು ಕಸಿದುಕೊಂಡರು. ಇಂತಹ ಅಪಸವ್ಯಗಳ ನಡುವೆಯೂ ರಾಮಕೃಷ್ಣ ಹೆಗಡೆ-ನಜೀರ್ ಸಾಬ್ ನಂತರ ಒಂದಿಬ್ಬರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸಲು, ಅಧಿಕಾರ ವಿಕೇಂದ್ರೀಕರಣವನ್ನು ಬಲಗೊಳಿಸಲು ಪ್ರಯತ್ನ ಮಾಡಿದರು. ಅವರಲ್ಲಿ ಒಬ್ಬರು ಎಂ.ವೈ. ಘೋರ್ಪಡೆ. ಕೃಷ್ಣಾ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಎಂ.ವೈ. ಘೋರ್ಪಡೆಯವರ ಕನಸಿನ ಕೂಸೇ “ಬೇಲೂರು ಘೋಷಣೆ”. 2004, ಜನವರಿ 23ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಮ್ಮುಖದಲ್ಲಿ ಧಾರವಾಡ ಸಮೀಪದ ಬೇಲೂರಿನಲ್ಲಿ ಘೋಷಣೆಯನ್ನು ಓದಿ ಹೇಳಲಾಯಿತು. ಪ್ರಾಥಮಿಕ ಶಾಲೆಗಳು, ಗ್ರಾಮೀಣ, ಗ್ರಂಥಾಲಯಗಳು, ವಯಸ್ಕರ ಶಿಕ್ಷಣ ಕೇಂದ್ರಗಳು, ಅಂಗನವಾಡಿಗಳು, ನ್ಯಾಯ ಬೆಲೆ ಅಂಗಡಿಗಳು ಮುಂತಾದುವುಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತರುವ, ಆಡಳಿತ ಸ್ವಾತಂತ್ರ್ಯ ನೀಡುವ ವಾಗ್ದಾನ ಮಾಡಲಾಯಿತು. ರಾಜ್ಯ ಸರಕಾರದ ಒಟ್ಟು 42 ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ 29 ವಿಷಯಗಳನ್ನೂ ಪರಿಷತ್ ಹಾಗೂ ಪಂಚಾಯಿತಿಗಳಿಗೆ ವರ್ಗಾಯಿಸುವ ಭರವಸೆ ನೀಡಲಾಯಿತು. ಗ್ರಾಮ ಸ್ವರಾಜ್ಯ ಸ್ಥಾಪನೆಯ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಯೋಚನೆಯಾಗಿತ್ತು. ಆದರೆ ಘೋರ್ಪಡೆಯವರ ಕನಸು ಈವರೆಗೂ ಈಡೇರಿಲ್ಲ. ಈ ಮಧ್ಯೆ, ಮರುಭೂಮಿಯಲ್ಲಿ ನೀರು ಕಂಡಂತೆ ಶೋಭಾ ಕರಂದ್ಲಾಜೆಯವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆಯಾಗಿ ಆಗಮಿಸಿದರು. ಶುದ್ಧಹಸ್ತರು ಎಂದು ಯಾರಿಗೂ ಸರ್ಟಿಫಿಕೇಟ್ ಕೊಡುವಂತಹ ಪರಿಸ್ಥಿತಿ ಈಗಿಲ್ಲದಿದ್ದರೂ ಯಡಿಯೂರಪ್ಪ ಸರಕಾರದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ ಸಚಿವೆ ಆಕೆ ಎಂಬ ಬಗ್ಗೆ ಅನುಮಾನವಿಲ್ಲ. ನಾನಾ ಯೋಜನೆಗಳಿಗಾಗಿ ಕೇಂದ್ರ ಸರಕಾರ ನೀಡುವ ನಿಧಿಯನ್ನು ಸದ್ವಿನಿಯೋಗ ಮಾಡಿ ಕೊಂಡಿದ್ದಕ್ಕಾಗಿ ಕರ್ನಾಟಕಕ್ಕೆ ಮೊನ್ನೆ ಅವಾರ್ಡ್ ಬಂತು ಗೊತ್ತಲ್ಲವೆ? ಪ್ರಶಸ್ತಿ ಸ್ವೀಕರಿಸಿದ್ದು ಜಗದೀಶ ಶೆಟ್ಟರ್ ಅವರಾದರೂ, ಅದರ ಕೀರ್ತಿ ಸಲ್ಲಬೇಕಾಗಿದ್ದು ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರಿಗೆ. ನಮ್ಮ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದು 23 ವರ್ಷಗಳಾದರೂ ಜಿಲ್ಲಾ ಪರಿಷತ್ ಹಾಗೂ ಪಂಚಾಯಿತಿಗಳಿಗೆ ತಮ್ಮದೇ ಆದ ಉದ್ಯೋಗಿಗಳಿರಲಿಲ್ಲ! ಇತರ ಇಲಾಖೆಗಳಿಂದ ಡೆಪ್ಯುಟೇಶನ್ ಮೇಲೆ ಬಂದ ಎರವಲು ಉದ್ಯೋಗಿಗಳೇ ತುಂಬಿರುತ್ತಿದ್ದರು. ಆದರೆ ಗ್ರಾಮೀಣಾಭಿವೃದ್ಧಿ ಸಚಿವೆಯಾದ ನಂತರ ಶೋಭಾ ಕರಂದ್ಲಾಜೆಯವರು, ರಾಜ್ಯ ಪಂಚಾಯತ್ ರಾಜ್ ಇತಿಹಾಸದಲ್ಲೇ ಮೊದಲ ಬಾರಿಗೆ 5,474 ಗ್ರಾಮ ಪಂಚಾಯಿತಿಗಳಿಗೆ 2,500 ಡೆವೆಲಪ್‌ಮೆಂಟ್ ಆಫೀಸರ್‌ಗಳನ್ನು ನೇಮಕ ಮಾಡಿಕೊಂಡರು. ಆದರೆ ಆಯ್ಕೆಯಾದವರು ತರಬೇತಿಗೆ ತೆರಳುವ ವೇಳೆ ಶೋಭಾ ಕುರ್ಚಿಯನ್ನೇ ಕಳೆದುಕೊಂಡಿದ್ದರು! ಆದರೇನಂತೆ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಿದರು. ಪಂಚಾಯಿತಿ ಚುನಾವಣೆ ಎಂದಾಕ್ಷಣ ಈ ನಾಲ್ವರು ನೆನಪಾದರು. ಅಷ್ಟಕ್ಕೂ ಒಂದು ಒಳ್ಳೆಯ ವ್ಯವಸ್ಥೆಯನ್ನು ರೂಪಿಸಲು, ಜಾರಿಗೆ ತರಲು ಪ್ರಾಮಾಣಿಕ ಕಾಳಜಿ ಇರುವವರು ಬೇಕಾಗುತ್ತಾರೆ.

ಆದರೆ…

ಇವತ್ತು ಪಂಚಾಯಿತಿ ಚುನಾವಣೆಗೆ ಕಾಫಿ ತೋಟ ಮಾರಿದ, ವಾಹನ ಮಾರಿ ಸ್ಪರ್ಧಿಸಿದವರ ಸುದ್ದಿಗಳು ಪ್ರಕಟವಾಗುತ್ತಿವೆ. ಇವರೇನು ಮನೆ-ಮಠ ಮಾರಿ ಸಮಾಜದ ಉದ್ಧಾರಕ್ಕೆ ಹೊರಟಿದ್ದಾರೆ ಎಂದುಕೊಂಡಿರುವಿರೇನು? ಗೆದ್ದರೆ ಇದಕ್ಕಿಂತ ಒಳ್ಳೆಯ ಮನೆ ಕಟ್ಟಿಸಬಹುದು, ಕಾರು ತೆಗೆದುಕೊಳ್ಳಬಹುದು, ಟರ್ಮ್ ಮುಗಿದ ಮೇಲೂ ಹಾಯಾಗಿ ಜೀವನ ನಡೆಸಬಹುದು ಎಂಬ (ದು)ದೂರಾಲೋಚನೆ!

“Democracy is BUY the people, OFF the people and FAR the people” ಎಂದು ಜಾರ್ಜ್ ಬರ್ನಾರ್ಡ್ ಷಾ ಒಮ್ಮೆ ಅಣಕಿಸಿದ್ದರು. ನಮ್ಮ ಗ್ರಾಮ ಪಂಚಾಯಿತಿ ರಾಜಕಾರಣವೂ ಅವರ ಮಾತನ್ನು ನಿಜವಾಗಿಸುವ ಮಟ್ಟಕ್ಕಿಳಿದಿದೆ ನೋಡಿ…

7 Responses to “ಪಂಚಾಯಿತಿ ಚುನಾವಣೆ ಬಂದಾಗ ‘ನಾಲ್ವರು’ ನೆನಪಾದರು!”

  1. Manju says:

    Good article. I feel this is the only way to implement the democracy .. !!

  2. hem says:

    Nice one.

  3. geetanjali says:

    thank u sir 4 such a informative article………….actually i do stydy pud administration subject, in that grama panchayay topic is also there .till now i was just knowing about the book matter.but after reading this article i got know much about history of grama panchayat……….thanks a lot 4 this article…..now i can search still more information grama panchayat………………………………………………….keep writting simha sir

  4. Ashwini says:

    Hi Pratapji,
    iam ashwini.P from dharwad . i really like your articles very much. in 2001, i think u started to write a article in vijaya karnataka news paper. iam reading your articles since that year when u started to write. iam huge big fan of u. i know u have lots of fans.but still add me as your one of the fan. n about your articles its really fantastic to read always your articles. after reading your every single article i always used to say “Yes iam really agree with this what he write”. i can’t comment or i can’t be Describe about your article Because iam not so much Intelligent to describe your articles. but really i pray to god by heart that u never n never stop to writing, it should be continue for long n long.
    i hope if u get a time then pls reply to this little fan.i will wait for your reply
    Bye

  5. Arpana Hegde says:

    The article was very informative. I was not knowing the origin of Panchayat election. The writer, who used to speak about integrity , now- a-days appreciating positive aspects of the people in the society. That shows as a writer you have become more matured.

    As par as I know Panchayat presidents or members hardly make money through what position they acquired. By selling their agriculture land, they might be satisfying their need for power or their need for social recognition. Money sanctioned for the work till it reaches Panchayat level, it will be very less and villagers will be knowing for what work money sanctioned. So the chances of money getting misused is rare and if it get misuused also it won’t be huge amount.

  6. Chethan, Coorg says:

    Yes, it is true. Now a days politics is running with money and Goondas. I feel pitty beacause why this is more in India. Politics is a word which is giving many meaning to the people. Let us wait where indian politics takes us.

    Today to win a Panchayat election, one need to spend minimum 50k – 1,00,000-/- As people are getting more educate why this still exists. By the wat it is getting more and more.

  7. Kumar says:

    Lekhan tumba chennagide
    Nam Nazir Sahebranna nenapu madiddakke tumba dhanyavadagalu
    Eegin generation ge avra bagge hechu mahiti illa dayavittu avar bagge ondu lekhan tavu bari beku ant nanna dondu chikka prarthane