Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸೋತೆನೆಂದೆನಬೇಡ ಎಂದೇ ಕೊನೆತನಕ ಬಾಳಿದ ಸಂತ!

ಸೋತೆನೆಂದೆನಬೇಡ ಎಂದೇ ಕೊನೆತನಕ ಬಾಳಿದ ಸಂತ!


ಆಗಷ್ಟೇ ಡಿವಿಜಿ 80ಕ್ಕೆ ಕಾಲಿಟ್ಟಿದ್ದರು.

ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಒಟ್ಟು ಸೇರಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಒಂದು ಸನ್ಮಾನ ಸಮಾ ರಂಭವನ್ನು ಆಯೋಜನೆ ಮಾಡಿದ್ದರು. ಬರವಣಿಗೆಯಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆರ್ಥಿಕತೆ ಅಷ್ಟೇ ದೊಡ್ಡ ಸಮಸ್ಯೆಯಾಗಿ ಡಿವಿಜಿ ಅವರನ್ನು ಕಾಡುತ್ತಿತ್ತು. ಅದು ಸ್ನೇಹಿತರೆಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಸ್ವಲ್ಪವಾದರೂ ಸಹಾಯವಾಗಲಿ, ಗೌರವಧನ ನೀಡೋಣ ಎಂದು ಒಂದಿಷ್ಟು ಹಣವನ್ನು ಒಟ್ಟುಹಾಕಿದ್ದರು. ಕಾರ್ಯಕ್ರಮದ ವೇಳೆ ಗೌರವ ಹಾಗೂ ಪ್ರೀತಿಪೂರ್ವಕವಾಗಿ ಅದನ್ನು ಡಿವಿಜಿಯವರಿಗೆ ಅರ್ಪಿಸಲಾಯಿತು. ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ-ಒಂದು ಲಕ್ಷ ರೂಪಾಯಿ!

ನೀವೇ ಯೋಚನೆ ಮಾಡಿ, ನಲವತ್ಮೂರು ವರ್ಷಗಳ ಹಿಂದೆ ಒಂದು ಲಕ್ಷ ರೂಪಾಯಿ?!

ಡಿವಿಜಿಯವರ ಮನೆಯಿದ್ದಿದ್ದು ಬೆಂಗಳೂರಿನ ಬಸವನಗುಡಿಯ ನಾಗಸಂದ್ರ ರಸ್ತೆಯಲ್ಲಿ(ಈಗಿನ ಡಿವಿಜಿ ರಸ್ತೆ). ಅಲ್ಲೊಂದು ದಿನಸಿ ಅಂಗಡಿಯಿತ್ತು. ಡಿವಿಜಿಯವರು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದುದು ಅಲ್ಲಿಯೇ. ಸನ್ಮಾನ ಸಮಾರಂಭದ ಮರುದಿನ ಡಿವಿಜಿ ಮನೆಗೆಲಸದ ಹುಡುಗ ಕರುಬಯ್ಯ ಚೀಟಿ ಹಿಡಿದುಕೊಂಡು ದಿನಸಿ ಅಂಗಡಿಗೆ ಬಂದ. ಸುಧಾ ಪತ್ರಿಕೆಯ ಸಂಪಾದಕರಾಗಿದ್ದ ಇ.ಆರ್. ಸೇತುರಾಮ್ ಅಲ್ಲೇ ಸಿಗರೇಟು ಸೇದುತ್ತಾ ನಿಂತಿದ್ದರು. ಆ ಹುಡುಗ ಡಿವಿಜಿ ಮನೆಯವನು ಎಂದು ಗೊತ್ತಾಯಿತು. ಚೀಟಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿತು. ಅಂಗಡಿಯಾತನ ಬಳಿ ಕೇಳಿಯೇ ಬಿಟ್ಟರು.

‘ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ಕಾಫಿ ಪುಡಿ, ಸಕ್ಕರೆ ಕೊಟ್ಟರೆ ನಾಳೆ ಬಿಲ್ ಕೊಡುತ್ತೇನೆ’

ಮುಂದೊಂದು ದಿನ ಈ ಘಟನೆಯ ಬಗ್ಗೆ ಸೇತುರಾಮ್ ಹೀಗೆ ಬರೆಯುತ್ತಾರೆ-‘ನಿನ್ನೆ ಒಂದು ಲಕ್ಷ ರೂಪಾಯಿ ಕೊಟ್ಟಾಗ ಅದು ನನ್ನದಲ್ಲ ಎಂದು ಕೊಟ್ಟವರು, ಆ ಬಗ್ಗೆ ಯಾವ ಬೇಸರವೂ ಇಲ್ಲದವರು ಡಿವಿಜಿ. ಇವತ್ತು ಕಾಫಿ ಪುಡಿ ಖರ್ಚಿಗೂ ಅವರ ಬಳಿ ದುಡ್ಡಿಲ್ಲ. ಇದು ಅವರ ನಿಸ್ಪೃಹತೆಯನ್ನು ತೋರಿಸುತ್ತದೆ’.

ಹೌದು, ಸನ್ಮಾನದ ಸಂದರ್ಭದಲ್ಲಿ ಡಿವಿಜಿಗೆ 1 ಲಕ್ಷ ರೂ. ನೀಡಿದ್ದು ನಿಜ.

ಅದನ್ನು ನೋಡಿ ಹಿರಿಹಿರಿ ಹಿಗ್ಗಲಿಲ್ಲ. ಬಹುಶಃ ಮೊತ್ತ ಈ ಪರಿ ಇರಬಹುದೆಂದು ಅವರು ಊಹಿಸಿದ್ದಿಲ್ಲವಾದರೂ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಡಿವಿಜಿಗೆ ಮೊದಲೇ ಗೊತ್ತಾಗಿತ್ತು. ಏನನ್ನೂ ಕೊಡಕೂಡದು, ನಾನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಇಷ್ಟಾಗಿಯೂ ಒಂದು ಲಕ್ಷವನ್ನು ಕೈಗಿತ್ತಾಗ ಅದರಲ್ಲಿ ಚಿಕ್ಕಾಸನ್ನೂ ತೆಗೆದುಕೊಳ್ಳದೆ ಇಡಿಯಾಗಿ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಅಭಿವೃದ್ಧಿಗೆ ಕೊಟ್ಟು ವೇದಿಕೆಯಿಂದ ಕೆಳಗಿಳಿದಿದ್ದರು ಡಿವಿಜಿ! ಇವತ್ತು Paid News ಹಾಗೂ Paid Journalistಗಳ ಬಗ್ಗೆ, ಅದನ್ನು ತಡೆಯುವ ಪರಿಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಅವತ್ತು ಕೈಗಿತ್ತ 1 ಲಕ್ಷ, ಇವತ್ತಿನ ಕೋಟಿಗೂ ಮೀರಿದ ಮೊತ್ತ. ಬಡತನ ಬೆನ್ನಿಗೆ ಅಂಟಿಕೊಂಡಿದ್ದ ಸಂದರ್ಭದಲ್ಲೂ ಡಿವಿಜಿ ದುಡ್ಡಿನ ಮುಂದೆ ಶರಣಾಗಲಿಲ್ಲ.

ಬೆಂಗಳೂರಿನ ಸುಲ್ತಾನ್‌ಪೇಟೆ ಗಣಪತಿ ಗಲಾಟೆ ಬಗ್ಗೆ ನೀವು ಕೇಳಿರಬಹುದು.

ಮೈಸೂರಿನ ಆಗಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾ ಯಿಲ್ ಹಾಗೂ ಡಿವಿಜಿ ತುಂಬಾ ಆಪ್ತ ಸ್ನೇಹಿತರು. ಎಲ್ಲ ವಿಚಾರಗಳ ಬಗ್ಗೆ ಒಟ್ಟಿಗೆ ಕುಳಿತು ಹರಟುತ್ತಿದ್ದರು. ಈ ಮಧ್ಯೆ ಸುಲ್ತಾನ್‌ಪೇಟೆಯಲ್ಲಿ ಕೋಮು ಗಲಭೆ ಶುರುವಾಯಿತು. ಅಲ್ಲೊಂದು ಗಣಪತಿಯ ಶಿಲಾಮೂರ್ತಿಯಿತ್ತು.(ಈಗಲೂ ಇದೆ). ಮಕ್ಕಳು ಶಾಲೆಗೆ ಹೋಗುವಾಗ ಕೈಮುಗಿದು ಹೋಗುತ್ತಿ ದ್ದರು, ಪೂಜೆ ಕೂಡ ನಡೆಯುತ್ತಿತ್ತು. ಸ್ಥಳೀಯ ಪ್ರಭಾವಿ ವ್ಯಕ್ತಿ ಅಬ್ಬಾಸ್ ಖಾನ್ ಎಂಬವರು ಅದು ತಮ್ಮ ಮನೆ ಎದುರು ಇದೆ ಎಂಬ ಕಾರಣಕ್ಕೆ ಗಣಪತಿಯನ್ನೇ ಎತ್ತಂಗಡಿ ಮಾಡಿಸಿದರು. ಗಲಾಟೆ ಆರಂಭವಾಯಿತು. ಸಮಸ್ಯೆಯನ್ನು ನ್ಯಾಯಯುತವಾಗಿ ಪರಿಹರಿಸುವ ಬದಲು ದಿವಾನ್ ಮಿರ್ಜಾ ಇಸ್ಮಾಯಿಲ್ ಪಕ್ಷಪಾತ ದಿಂದ ನಡೆದುಕೊಂಡರು. ಅದು ಡಿವಿಜಿಗೆ ಹಿಡಿಸಲಿಲ್ಲ. ಅವರ ನಿಲುವಿನ ವಿರುದ್ಧ ಪತ್ರಿಕೆಯಲ್ಲಿ ಟೀಕಾಪ್ರಹಾರ ಮಾಡಿದರು. ಅಷ್ಟೇ ಅಲ್ಲ ಮಿರ್ಜಾ ಇಸ್ಮಾಯಿಲ್ ಜತೆ ಮಾತನಾಡುವುದನ್ನೂ ನಿಲ್ಲಿಸಿಬಿಟ್ಟರು. ಸರಕಾರ ಹಾಗೂ ಮಿರ್ಜಾ ನಡೆದುಕೊಂಡ ರೀತಿ ಬಗ್ಗೆ ವಿಶ್ವೇಶ್ವರಯ್ಯನವರ ನೇತೃತ್ವದ ತನಿಖಾ ಸಮಿತಿ ಕೂಡ ಟೀಕೆಯಿಂದ ಕೂಡಿದ ವರದಿ ನೀಡಿತು. ಈ ನಡುವೆ ಗಣಪತಿ ಗಲಾಟೆಗೆ ಮಿರ್ಜಾ ಹಾಗೂ ಡಿವಿಜಿ ಸ್ನೇಹವೇ ಬಲಿಯಾಗ ಬೇಕಾಯಿತು. ಇಸ್ಮಾಯಿಲ್ ಅವರು ವಿದೇಶಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಆಟಿಕೆಗಳನ್ನು ತಂದು ತಮ್ಮ ಮಕ್ಕಳಿಗೆ ಉಡುಗೊರೆಯಾಗಿ ನೀಡಲು ಬಂದಾಗ ಡಿವಿಜಿ ತಿರಸ್ಕರಿಸಿಬಿಟ್ಟರು. ಇದನ್ನೆಲ್ಲಾ ಗಮನಿಸುತ್ತಿದ್ದ ಇಂಗ್ಲಿಷ್‌ನ ಮಹಾನ್ ವಿದ್ವಾಂಸ ‘ರೈಟ್ ಆನರೇಬಲ್ ವಿ.ಎಸ್. ಶ್ರೀನಿವಾಸಶಾಸ್ತ್ರಿ’ಯವರು ಇಬ್ಬರ ನಡುವೆ ರೆಫರಿ ಕೆಲಸ ಮಾಡಿ ಮತ್ತೆ ಮಿರ್ಜಾ ಹಾಗೂ ಡಿ.ವಿ.ಜಿ ನಡುವೆ ಸ್ನೇಹ ಕುದುರಿಸಿಕೊಟ್ಟರು. ತದನಂತರ ಜೈಪುರಕ್ಕೆ ಹೋಗಿದ್ದಾಗ ಮಿರ್ಜಾ ಇಸ್ಮಾಯಿಲ್ ಅವರು ಗಣಪತಿ ವಿಗ್ರಹವನ್ನು ಆರ್ಡರ್ ಮಾಡಿ ಡಿವಿಜಿಗೆ ತಂದುಕೊಟ್ಟರು.

ಆಳುವ ದೊರೆಯನ್ನೇ ಎದುರುಹಾಕಿಕೊಳ್ಳುವ, ಖಂಡಿಸುವ ತಾಕತ್ತು, ಧಾಡಸಿತನ ಅವರಲ್ಲಿತ್ತು. ಅವರ ಸಮಗ್ರತೆ, ಪ್ರಾಮಾಣಿಕತೆ ಗಳು ಅವರಿಗೆ ಅಂತಹ ಧೈರ್ಯವನ್ನು ತಂದುಕೊಟ್ಟಿದ್ದವು.

ಒಮ್ಮೆ ಹೀಗೂ ಆಯಿತು. ಅದು ವಿಶ್ವೇಶ್ವರಯ್ಯನವರು ದಿವಾನ ರಾಗಿದ್ದ ಕಾಲ. ಮೈಸೂರಿನ ದಸರೆಗೆ ಬಂದು ಸುದ್ದಿ ಮಾಡುವಂತೆ ಪತ್ರಕರ್ತರ ತಂಡವೊಂದನ್ನು ಸರಕಾರ ಆಹ್ವಾನಿಸಿತು. ಡಿವಿಜಿ ‘ಕರ್ನಾಟಕ’ ಎಂಬ ಇಂಗ್ಲಿಷ್ ಪತ್ರಿಕೆಯ ವರದಿಗಾರರಾಗಿದ್ದರು, ಅವರಿಗೂ ಆಹ್ವಾನ ಬಂದಿತ್ತು. ವಾಪಸ್ ಬಂದ ಮೇಲೆ ದಿವಾನರ ಆಫೀಸಿನಿಂದ ಒಂದು ಚೆಕ್ ಬಂತು. ಏಕೆಂದು  ವಿಚಾರಿಸಿದರೆ, ‘ನೀವು ಬಂದು ವರದಿ ಮಾಡಿದ್ದಕ್ಕೆ ಪ್ರತಿಯಾಗಿ ಸರಕಾರ ನೀಡಿದ ಕಾಣಿಕೆ’ ಎಂಬ ವಿವರಣೆ ಸಿಕ್ಕಿತು. ಅದಕ್ಕೆ ಡಿವಿಜಿ ಆಕ್ಷೇಪ ವ್ಯಕ್ತಪಡಿಸಿದರು. “ದೊಡ್ಡ ದೊಡ್ಡ ಪತ್ರಿಕೆಯವರೇ ತೆಗೆದುಕೊಂಡಿದ್ದಾರೆ ಸಾರ್” ಎಂಬ ಸಮಜಾಯಿಷಿ ಬಂತು. “ಪತ್ರಕರ್ತರು ಯಾರಿಂದಲೂ ದುಡ್ಡು ತೆಗೆದುಕೊಳ್ಳಬಾರದು. ಹಾಗೊಂದು ವೇಳೆ ಹಣ ತೆಗೆದುಕೊಂಡರೆಂದಾದರೆ ಅವರು ನಿಮ್ಮ ಮೂಗಿನ ನೇರಕ್ಕೆ ವರದಿ ಮಾಡಬೇಕಾಗುತ್ತದೆ. ವಸ್ತುನಿಷ್ಠವಾಗಿ ಬರೆಯುವ ಸ್ವಾತಂತ್ರ್ಯವನ್ನು ಕಳೆದುಕೊಂಡಂತಾಗುತ್ತದೆ. ನಾನು ಗುಣ-ದೋಷಗಳೆರಡನ್ನೂ ಬರೆದಿದ್ದೇನೆ” ಎಂದ ಡಿವಿಜಿ ಚೆಕ್ಕನ್ನು ಹಿಂದಿರುಗಿಸಿ ಬಂದರು. ಯಾವ ‘ಲೆಕ್ಕಾಚಾರ’ಗಳೂ ತಮ್ಮ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರಲು ಅವರು ಬಿಟ್ಟಿರಲಿಲ್ಲ. ಡಿವಿಜಿ, ಪಾವೆಂ, ತಿ.ತಾ. ಶರ್ಮ, ರಾಜರತ್ನಂ ಅವರಂತಹ ಮಹನೀಯರುಗಳಿಂದಾಗಿಯೇ ನಮ್ಮ ಕನ್ನಡ ಪತ್ರಿಕೋದ್ಯಮಕ್ಕೆ ದೊಡ್ಡ ಹೆಸರು ಬಂದಿದ್ದು.

ಅದು ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದ ಕಾಲ. ಜಿ.ವಿ.ಕೆ. ರಾವ್ ಮುಖ್ಯ ಕಾರ್ಯದರ್ಶಿ ಆಗಿದ್ದರು. ಡಿವಿಜಿಗೆ 80 ದಾಟಿತ್ತು. ಹಿರಿಯ ಸಾಹಿತಿಯಾದ ಅವರಿಗೆ ಮಾಸಾಶನ ನೀಡಬೇಕೆಂದು ಸರಕಾರ ನಿರ್ಧರಿಸಿತು. ಸರಕಾರಕ್ಕೆ ಪತ್ರ ಬರೆದ ಡಿವಿಜಿ, “ಸಾಹಿತಿಯ ಜೀವನ ಅವನ ಸಂಪಾದನೆಯಿಂದಲೇ ನಡೆಯಬೇಕು. ಸರಕಾರ ಬೇಕಾದರೆ ಪುಸ್ತಕವನ್ನು ಖರೀದಿಸ ಬಹುದು. ಆದರೆ ಆತ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಕಾರದ ಹಣವನ್ನು ಈ ರೀತಿ ಪೋಲು ಮಾಡಬಾರದು” ಎಂದು ಮಾಸಾಶನವನ್ನು ತಿರಸ್ಕರಿಸಿದರು. ಹಾಗಂತ ಡಿವಿಜಿಯವರ ಆರ್ಥಿಕ ಪರಿಸ್ಥಿತಿ ಎಂದೂ ಸುಧಾರಿಸಿದ್ದಿಲ್ಲ. ಅದನ್ನು ಯಾರ ಬಳಿಯಲ್ಲಾದರೂ ದೀನವಾಗಿ ತೋಡಿಕೊಂಡಿದ್ದರೆ ಅದು ತಮ್ಮ ಪುತ್ರ ಬಿ.ಜಿ.ಎಲ್. ಸ್ವಾಮಿಯವರ ಮುಂದೆ ಮಾತ್ರ. ಆದಷ್ಟು ಬೇಗ, ಆದಷ್ಟು ಹೆಚ್ಚು ಹಣ ಕಳುಹಿಸು ಎಂದು ಡಿವಿಜಿ ಹೀಗೆ ಬರೆಯುತ್ತಾರೆ-“You know the maintenance of this Chatram called our family depends on your cheque. In all seriousness, I would ask you to look upon this monthly expenditure of yours as an act of Dharma. And when you are so generous, you will be adding grace to it. If you also act with all possible quickness”.

ಹಾಮಾ ನಾಯಕರಿಗೂ ಡಿವಿಜಿಗೂ ಒಮ್ಮೆ ಸ್ನೇಹದ ಜಟಾಪಟಿ ನಡೆದಿತ್ತು.

ಹಾಮಾ ನಾಯಕರು ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ನಾಡಿನಾಚೆಗೂ ಪರಿಚಯವಾಗಲೆಂದು ಗೋವಿಂದ ಪೈ, ಕುವೆಂಪು, ಬಿಎಂಶ್ರೀ ಮುಂತಾದ ಕೆಲವು ಕನ್ನಡ ಲೇಖಕರ ಬಗ್ಗೆ ಒಳ್ಳೆಯ ಇಂಗ್ಲಿಷ್ ಪುಸ್ತಕಗಳನ್ನು ಬರೆಸಿದರು. ವಿ. ಸೀತಾರಾಮಯ್ಯನವರನ್ನು ಡಿವಿಜಿಯವರ ಬಗ್ಗೆ ಬರೆಯಲು ಹಚ್ಚಿದ್ದರು. ಅದು ಡಿವಿಜಿಗೆ ಹೇಗೋ ಗೊತ್ತಾಯಿತು. ಇತ್ತ ನಿಮ್ಮ ಬಗ್ಗೆ ಇಂಥದ್ದೊಂದು ಪುಸ್ತಕ ಬರುತ್ತಿದೆ ಎಂದು ಹಾಮಾನಾ ಕೂಡ ಡಿವಿಜಿಗೆ ಪತ್ರ ಬರೆದರು. “ನಾನೇನು ಮಹಾನ್ ಕೆಲಸ ಮಾಡಿಲ್ಲ. ನನ್ನ ಹುಚ್ಚಾಟಕ್ಕೆ ನಾನು ಬರೆದಿದ್ದೇನೆ. ನಾನೊಬ್ಬ ಖಾಸಗಿ ವ್ಯಕ್ತಿ, ನನ್ನನ್ನು ನನ್ನ ಪಾಡಿಗೆ ಬಿಡಬೇಕು. ಇದೆಲ್ಲ ಸರಿಯಲ್ಲ” ಎಂದು ಮಾರುತ್ತರ ಬರೆದ ಡಿವಿಜಿ ಪುಸ್ತಕ ಬರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ನೀವು ಈಗ ಸಾರ್ವಜನಿಕ ವ್ಯಕ್ತಿಯಾಗಿದ್ದೀರಿ. ನೀವು ಕನ್ನಡದ ಆಸ್ತಿ. ನಮಗೆ ಇಷ್ಟಬಂದ ಹಾಗೆ ಬರೆದುಕೊಳ್ಳು ತ್ತೀವಿ’ ಎಂದ ಹಾಮಾ ನಾಯಕರು ಸ್ನೇಹದ ಗಲಾಟೆ ಮಾಡಿ ಗೆದ್ದರು!

ಸರಕಾರ ಹಾಗೂ ಬೆಂಗಳೂರು ಕಾರ್ಪೊರೇಶನ್ ನಾಗಸಂದ್ರ ರಸ್ತೆಗೆ ತಮ್ಮ ಹೆಸರನ್ನು ಇಡಲು  ಹೊರಟಾಗ, ‘ಜನರಿಗೆ ಪರಿಚಿತವಾಗಿರುವ, ಪ್ರಸಿದ್ಧವಾಗಿರುವ ಹೆಸರನ್ನು ಬದಲಿಸಿ ಬೇರೊಂದನ್ನು ಇಡಬಾರದು’ ಎಂದು ಡಿವಿಜಿ ಸ್ವತಃ ವಿರೋಧಿಸಿದ್ದರು ಎಂದರೆ ನಂಬುತ್ತೀರಾ?!

ಡಿವಿಜಿಯವರಲ್ಲಿದ್ದ ಹಾಸ್ಯಪ್ರeಯಂತೂ ಅಪರಿಮಿತ. ಅವರ ಆರೋಗ್ಯ, ಬಡತನಗಳೂ ಆಗಾಗ್ಗೆ ಹಾಸ್ಯದ ವಸ್ತುವಾಗುತ್ತಿದ್ದವು. ಎಂಬತ್ತನೇ ವರ್ಷದ ಆಚರಣೆ ಮಾಡಬೇಕೆಂದಾಗಲೂ ಅದಕ್ಕೆ ವಿರೋಧಿಸಿದ್ದರು. “ನಿಮಗೇನಾದರೂ ಸನ್ಮಾನ ಮಾಡಲೇಬೇಕೆಂಬ ಇಚ್ಛೆಯಿದ್ದರೆ ತಳ್ಳುಗಾಡಿಯ(ವಿಕಲಚೇತನ ಭಿಕ್ಷುಕರನ್ನು ಎಳೆದು ಕೊಂಡು ಹೋಗುವ ಬೇರಿಂಗ್ ಗಾಡಿ) ಮೇಲೆ ನನ್ನನ್ನು ಕೂರಿಸಿ ಕೋಟೆ ವೆಂಕಟ್ರಮಣ ದೇವಸ್ಥಾನದಿಂದ ವಿಕ್ಟೋರಿಯಾ ಆಸ್ಪತ್ರೆಯವರೆಗೂ ಎಳೆದುಕೊಂಡು ಹೋಗಿ… ಶಂಖ, ಜಾಗಟೆ, ಗರುಡಗಂಬ ಇಟ್ಟುಕೊಳ್ಳಿ (ಅವರಿಗೆ ದಾಸಯ್ಯರೆಂದರೆ ಬಹಳ ಇಷ್ಟ)… ಸಾಧ್ಯವಾದರೆ ಸ್ಲೋಗನ್ ಕೂಗಿ. ‘Down with old age,  Up with youth’… ನಾನು ‘ಕಣ್ಣಿಲ್ಲದವರಿಗೆ ನೀನೇ ಶಿವ, ಕಾಲಿಲ್ಲದವರಿಗೆ ನೀನೇ ಶಿವ’(ಆಗ ಅವರಿಗೆ ಕ್ಯಾಟರ್‍ಯಾಕ್ಟ್ ಆಗಿತ್ತು) ಎಂದು ಹಾಡುತ್ತಾ ಗಾಡಿಯಲ್ಲಿ ಬರುತ್ತೇನೆ…” ಎಂದು ಹಾಸ್ಯದಿಂದ ಹೇಳಿದ್ದರು. ಬನ್ನೂರಿನಲ್ಲಿ ಆಯೋಜನೆಯಾಗಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಏನಾದರೂ ಸಂದೇಶ ಬರೆದು ಕೊಡಿ ಎಂದು ಬಹುವಾಗಿ ಪೀಡಿಸಿದಾಗ

ಗುಂಡಪ್ಪನಾದೊಡೇಂ
ಕುಂಡೆಯದು ನೋಯದೆ

ಎಂದು ಬರೆದುಕೊಟ್ಟು, ನಿಮಗೆ ಧೈರ್ಯವಿದ್ದರೆ ವೇದಿಕೆ ಯಲ್ಲಿ ಓದಿ ಎಂದು ಹೇಳಿದ್ದರು. ಆಗ ಡಿವಿಜಿ ಅವರಿಗೆ ಪೈಲ್ಸ್ (ಮೂಲವ್ಯಾಧಿ)ಆಗಿತ್ತು! ‘ಆನಂದ ಮಾರ್ಗ’ದ ಸದಸ್ಯರು ಬಂದು ಅಧ್ಯಾತ್ಮದ ಬಗ್ಗೆ ಒಂದು ಭಾಷಣ ಮಾಡಬೇಕೆಂದು ವಿನಂತಿ ಮಾಡಿಕೊಂಡರು. ನನಗೆ ಮೈ ಸರಿಯಿಲ್ಲ ಬರುವುದಕ್ಕಾಗುವುದಿಲ್ಲ ಎಂದು ಹೇಳಿದರೂ ಅವರು ಬಿಡಲಿಲ್ಲ, ತುಂಬಾ ಒತ್ತಾಯ ಮಾಡಿದರು. ಅದಕ್ಕೆ, Just as your god experiences are your own, my arthritis is my own. Incommunicable ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು ಡಿವಿಜಿ. ಅವರಿಗೆ ಈ ದೇಶದ ಭವಿಷ್ಯದ ಪರಿಸ್ಥಿತಿಯ ಬಗ್ಗೆಯೂ ಅಷ್ಟೇ ಅರಿವಿತ್ತು. God save us from servile and apish imitation of the Westerners. God help us to assimilate the practical and rationalistic spirit of the west and to avoid the extreme individualism, the extreme socialism and the ugly offsprings of its rank materialism ಎಂದು 1911ರಲ್ಲೇ ಹೇಳಿದ್ದರು. ಅವರ ‘ಮಂಕುತಿಮ್ಮನ ಕಗ್ಗ’ವನ್ನು ಓದಿದ್ದೀರಾ?

ಸತ್ತೆನೆಂದೆನಬೇಡ
ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆನ್ನುವುದೊಂದು ತೆರೆ ಇಳಿತ, ತೆರೆಯೇರು
ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ…

ಎಂತಹ ಅರ್ಥಗರ್ಭಿತ ಸಾಲುಗಳಿವು ಅಲ್ಲವೆ? ಡಿವಿಜಿಯವರು ಶ್ರೇಷ್ಠ ಸಾಹಿತಿಯೂ ಆಗಿದ್ದರು, ಅಷ್ಟೇ ಶ್ರೇಷ್ಠ ಪತ್ರಕರ್ತರೂ ಎಂದನಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಅವರೂ ಒಬ್ಬರು. ಅವರೇ ಪ್ರೇರಕರು ಎಂದರೂ ತಪ್ಪಲ್ಲ. ಮೊನ್ನೆ ಮಾರ್ಚ್ 17ರಂದು ಡಿವಿಜಿಯವರ 123ನೇ ಜನ್ಮದಿನವಿತ್ತು. ತುಂಬು ಬದುಕಿನ ಜತೆ ಬದುಕಿನ ತುಂಬಾ ಚಿರಕಾಲ ನೆನಪಿಟ್ಟು ಕೊಳ್ಳುವಂತಹ ಸಾಹಿತ್ಯವನ್ನು ರಚನೆ ಮಾಡಿದ ವ್ಯಕ್ತಿತ್ವ ಅವರದ್ದು. ಅಂತಹ ಮಹಾನ್ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ, “ಬ್ರಹ್ಮಪಟ್ಟಣದ ಭಿಕ್ಷುಕನೊಡನೆ…’ ಎಂಬ ಕೃತಿಯನ್ನು ಸಿದ್ಧಪಡಿಸುತ್ತಿದ್ದಾರೆ ಶತಾವಧಾನಿ ಆರ್. ಗಣೇಶ್. ಅವರೂ ಕೂಡ ನಾವೆಲ್ಲ ಹೆಮ್ಮೆಪಟ್ಟುಕೊಳ್ಳಬೇಕಾದ ವ್ಯಕ್ತಿ. ಅವಧಾನದಂತಹ ಬುದ್ಧಿಗೆ ತ್ರಾಸಕೊಡುವ ಕಠಿಣ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಡಿವಿಜಿ ಜನ್ಮದಿನ ಕಳೆದು ಇವತ್ತಿಗೆ ಮೂರು ದಿನಗಳಾದವು. ಶತಾವಧಾನಿ ಗಣೇಶ್ ಅವರ ಪುಸ್ತಕದ ನೆಪದಲ್ಲಾದರೂ ಡಿವಿಜಿಯನ್ನು ನೆನಪಿಸಿಕೊಳ್ಳಬೇಕೆನಿಸಿತು. ಅಷ್ಟಕ್ಕೂ ಬದುಕು-ಬರವಣಿಗೆಗೂ ಒಂದಕ್ಕೊಂದು ಸಂಬಂಧವಿಲ್ಲ ಎನ್ನುವವರ ನಡುವೆ ಇರುವ ಈ ಸಂದರ್ಭದಲ್ಲಿ ಡಿವಿಜಿ ಅಚ್ಚರಿ ಹುಟ್ಟಿಸುತ್ತಾರೆ.

17 Responses to “ಸೋತೆನೆಂದೆನಬೇಡ ಎಂದೇ ಕೊನೆತನಕ ಬಾಳಿದ ಸಂತ!”

 1. chethan says:

  nice article pratap, i’m a big fan of dvg. Nice to read abt him..

 2. ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು ?|
  ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||
  ಸೄಷ್ಟಿ ಕೋಟೆಯಲಿ ನೀನೊಂದಿಟಿಗೆ ; ಸೊಟ್ಟಾಗೆ |
  ಪೆಟ್ಟು ತಿನ್ನುವೆ ಜೋಕೆ- ಮಂಕುತಿಮ್ಮ ||

  ಕಟ್ಟಡವು ಯಾವ ರೂಪದಲ್ಲಿ ಬರುವುದೆಂದು ಇಟ್ಟಿಗೆಗೆ ಹೇಗೆ ತಿಳಿಯುತ್ತದೆ ?ಇಟ್ಟಿಗೆ ಗಟ್ಟಿಯಾಗಿ ನಿಲ್ಲದಿದ್ದರೆ,ಗೋಡೆಯಲ್ಲಿ ಬಿರುಕುಂಟಾಗುತ್ತದೆ,ಜಗತ್ತು ಎನ್ನುವ ಈ ಕೋಟೆಯಲ್ಲಿ,ನೀನು ಒಂದು ಇಟ್ಟಿಗೆ ಮಾತ್ರ,ಇಟ್ಟಿಗೆ ಸರಿಯಾಗಿ ನಿಲ್ಲದೆ ಗೋಡೆ ಸೊಟ್ಟಾದರೆ,ಅದನ್ನು ನೆಟ್ಟಗೆ ಮಾಡಲು, ನಿನ್ನನ್ನು ಹೊಡೆಯುತ್ತಾರೆ,ಹುಶಾರಾಗಿದ್ದು,ಗೋಡೆ ಸೊಟ್ಟಗಾಗದಿರುವಂತೆ ನೀನು ನಿಲ್ಲು.ಎಂತಹ ಅರ್ಥಗರ್ಭಿತ ಸಾಲುಗಳು….ನಮೋನ್ನಮಹ D.V.G

 3. Manthan says:

  Hi Pratap,

  Excellent article, “ಆತ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಕಾರದ ಹಣವನ್ನು ಈ ರೀತಿ ಪೋಲು ಮಾಡಬಾರದು” shame on those who die to live with government money, So called BIG PEOPLE who used huge amount of Government money for renovation of home… etc etc…
  Much things to comment on but ………

  Thanks

  Manthan

 4. shoban says:

  very nice olle msg namma hi tec pragatipara lekakrige

 5. Viveka Shankara says:

  ಋಜುತ್ವದ ಉಪಮೆ ಸನ್ಮಾನ್ಯ ಡಿ.ವಿ.ಗುಂಡಪ್ಪ ನವರು ಈ ಶತಮಾನದ ಮಹರ್ಷಿಗಳು. ಭಗವಾನ್ ಶ್ರೀ ಕೃಷ್ಣ ತಾನು ನಡೆದಂತೆ ಶ್ರೀಮದ್ ಭಗವದ್ಗೀತೆಯಲ್ಲಿ ಹೇಳಿದ, ಅದೇ ರೀತಿ ಸನ್ಮಾನ್ಯ ಡಿ.ವಿ.ಗುಂಡಪ್ಪ ನವರು ತಮ್ಮ ಬದುಕನ್ನೇ ರಸಪಾಕವಾಗಿ ಕನ್ನಡದ ಭಗವದ್ಗೀತೆಯಾದ “ಕಗ್ಗ” ದಲ್ಲಿ ಚೆಲ್ಲಿದ್ದಾರೆ. ಅದರ ಜೋಡಣೆ, ನಿಜಕ್ಕೂ ಅವಿಸ್ಮರಣೀಯ , ಸನ್ಮಾನ್ಯರು ಸದಾಕಾಲ ಕನ್ನಡಿಗರೇ ಗುರುಗಳು. ಇವರ ಈ ಸಾಲು ( ಕಗ್ಗದ ಪ್ರತಿ ಪದವು, ಪ್ರತಿ ಸಾಲು ಅನರ್ಘ್ಯ ರತ್ನಗಳು , ನನಗೆ ಇದು ಹೃದಯಸ್ಪರ್ಶಿ )
  ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
  ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ |
  ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
  ಎಲ್ಲರೊಳಗೊಂದಾಗು ಮಂಕುತಿಮ್ಮ ||

  ಎಂಬುದು ಪ್ರತಿಯೊಬ್ಬರ ಜೀವನದರ್ಶವಾದರೆ !!!!!

  ಇಂತಿ,

 6. harsha says:

  nice article, honesty… it has become a thing of the past!

 7. parashuram chowdki says:

  hai sar article ,very nice

 8. geetanjali says:

  dvg obba saahiti antha allarigu gottidda vishaya……..adare avaru anthaha sarala, sajjana,swabhimani vyakti antha e lekhna ododa mele gottaitu thank u simha sir thank u 4 revealing about such a big personality through

 9. Chethan, Coorg says:

  Very few people like Mr. DVG. I appriciate your personalities

 10. Alwayz Khushii says:

  tumba olle article…

 11. Anil Raj says:

  He is a man.
  I always believe that everybody can easily differentiate between what is good and what is bad. The good person is only him who walks through that right path.

 12. Ravi says:

  Mr. DVG..

  What you can say about his Mankutimmana Kagga’s. Incredible.

 13. Vishwanath Gudsi says:

  Nice article

 14. rohith says:

  very nice i read DVG’s articles but i dont know about his personal life thank u for giving more information about DVG these kind of article very assential in theese days thank u very much
  i want some information about vajramuni ( film actor) from you please

 15. Sushanth b k says:

  Really gr8 personality…

 16. chayadevi says:

  Good information. I would like to know is there any book on Sri. DVG(in kannada)

 17. umesh pawar says:

  shiritan yembudu haleyakalad sanpradaya aadare ee kalad shiritan shiritan yembudu arth ve illa