Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೀಪದ ಹಬ್ಬದ ಕತ್ತಲಿನಲ್ಲಿ ಕೇಳಿಬಂತು ಕೆಲ್ಲರ್‌ಳ ದನಿ!

ದೀಪದ ಹಬ್ಬದ ಕತ್ತಲಿನಲ್ಲಿ ಕೇಳಿಬಂತು ಕೆಲ್ಲರ್‌ಳ ದನಿ!

ದೀಪಾವಳಿ ಬಂದು ಹೋಯಿತು, ಆದರೆ ಪಟಾಕಿಯ ಕ್ರೂರ ಮುಖವಷ್ಟೇ ಕಾಡುತ್ತಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ದೃಷ್ಟಿಭಾಗ್ಯ ಕಳೆದುಕೊಂಡು ಮಲಗಿರುವ ಮಕ್ಕಳ ಆಕ್ರಂದನ ಮನವನ್ನೇ ಕಲಕುತ್ತಿದೆ. ಹದಿನೆಂಟು ತಿಂಗಳು ತುಂಬಿದ್ದಾಗ ದೃಷ್ಟಿ ಕಳೆದುಕೊಂಡ ಖ್ಯಾತ ದಂತಕಥೆ ಹೆಲೆನ್ ಕೆಲ್ಲರ್‌ಳ “Three Days to See” ಪ್ರಬಂಧ ನೆನಪಾಗುತ್ತಿದೆ.

“ಇಂತಹ ಮೈನವಿರೇಳಿಸುವ ಕಥೆಗಳನ್ನು ನಾವೆಲ್ಲರೂ ಕೇಳಿಯೇ ಕೇಳಿರುತ್ತೇವೆ. ಹೀರೊ ಸಾಯುವು ದಕ್ಕೆ ಇಂತಿಷ್ಟೇ ಸಮಯ ಉಳಿದಿರುತ್ತದೆ. ಆ ಸಮಯ ಕೆಲವೊಮ್ಮೆ ಒಂದು ವರ್ಷದಷ್ಟು ದೀರ್ಘವೂ ಆಗಿರ ಬಹುದು, ಇಪ್ಪತ್ನಾಲ್ಕು ಗಂಟೆಗಳಷ್ಟು ಕ್ಷಣಿಕವೂ ಆಗಿರಬಹುದು. ಆ ಅವಧಿಯಲ್ಲಿ ಹೀರೊ ಏನು ಮಾಡಲಿದ್ದಾನೆ, ಹೇಗೆ ಸಂಕಷ್ಟದಿಂದ ಪಾರಾಗುತ್ತಾನೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ, ಉತ್ಸಾಹ  ನಮ್ಮೆಲ್ಲರಿಗೂ ಇರುತ್ತದೆ. ಅಷ್ಟೇ ಅಲ್ಲ, ಒಂದು ವೇಳೆ ನಾವೇ ಅಂತಹ ಪರಿಸ್ಥಿತಿಯಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆವು, ಯಾವ ರೀತಿ ಎದುರಿಸುತ್ತಿದ್ದೆವು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿ ನಮ್ಮನ್ನೂ ಚಿಂತೆಗೆ ಹಚ್ಚಬಲ್ಲದು ಆ ಕಥೆ. ಅಷ್ಟಕ್ಕೂ ನಾಳೆ ಅನ್ನೋದು ಕನಸುಗಳ ಗೊಂಚಲು.

ವಿಶಾಲವಾದ ಬದುಕಿನ ಹರವಿನಲ್ಲಿ ಈ ‘ನಾಳೆ’ ರಮ್ಯ ಅನು ಭೂತಿಗಳ ಭಂಡಾರ. ಒಂದು ವೇಳೆ  ‘ನಾಳೆ’ ಎಂಬುದು ಇಲ್ಲದಿದ್ದರೆ ಅಥವಾ ಇಂದೇ ನಮ್ಮ ಬದುಕಿನ ಕೊನೆಯ ಪಯಣ ಎಂಬ ದಟ್ಟ ವಾಸ್ತವ ಆವರಿಸಿಕೊಂಡರೆ ಬದುಕೇ ಬದಲಾಗಿ ಬಿಡುತ್ತದೆ. ನಾವು ಬದುಕನ್ನು ನೋಡುವ, ಅನುಭವಿಸುವ, ಪ್ರೀತಿಸುವ ವಿಧಾನವೂ ಏಕಾಏಕಿ ಬದಲಾಗುತ್ತದೆ. ಕಲ್ಲು ಹೃದಯಗಳೂ ಕರಗಿ ಬಿಡುತ್ತವೆ. ಸಮಯದ ಸೆರಗಿನಲ್ಲಿ ಆಲಸ್ಯವನ್ನು ಮರೆಮಾಚಲು ಅವಕಾಶವೇ ಇಲ್ಲದಂತಾಗುತ್ತದೆ. ಇದ್ದ ಹಾಗೇ ಬದುಕುವ ಉಡಾಫೆಯ ಜಾಗದಲ್ಲಿ ಇಲ್ಲದ್ದನ್ನು ಅನುಭವಿಸುವ ಆತುರ ಆವರಿಸುತ್ತದೆ. ಈ ಆತುರ ಬದುಕನ್ನು ಹದವಾಗಿಸುತ್ತದೆ. ಬದುಕಿನ ಹಂದರದಲ್ಲಿನ ಓರೆಕೋರೆಗಳು ಮುಚ್ಚಿಕೊಂಡು ಅದರ ಮೌಲ್ಯ ಇಮ್ಮಡಿಸುತ್ತದೆ. ಪ್ರತಿಕ್ಷಣವನ್ನೂ ಸಾರ್ಥಕವಾಗಿ ಕಳೆಯುವ ಅನಿವಾರ್ಯತೆ ಎದುರಾಗಿ ಬದುಕು ಪರಿಪೂರ್ಣತೆಯೆಡೆಗೆ ಸಾಗುತ್ತದೆ. ಆ ಕೊನೆಯ ಕ್ಷಣಗಳಲ್ಲಿ ನಾವು ನೋಡದ, ಅನುಭವಿಸದ, ತಿಳಿದು ಕೊಳ್ಳದ ಸತ್ಯಗಳನ್ನು ಬೊಗಸೆ ತುಂಬಾ ತುಂಬಿಕೊಂಡು ಆಸ್ವಾದಿಸಿ ಬಿಡುವ ತವಕ ಮನೆ ಮಾಡುತ್ತದೆ. ನಿನ್ನೆಯ ತಪ್ಪಿಗೆ, ನೋವಿಗೆ ಇಂದೇ ಮುಲಾಮು ಹಾಕುತ್ತೇವೆ. ಸಾವಿನ ನೆರಳು ಬದುಕಿನ ನಿಜಾರ್ಥವನ್ನು ಬಿಚ್ಚಿಬಿಡುತ್ತದೆ. ಆದರೆ ಇದು ಕಥೆಗಳಲ್ಲಿ ಮಾತ್ರ ಕಾಣಬಹುದಾದ ಕಲ್ಪನೆ.

After all,, ಕಥೆಗಳಲ್ಲಿ ಮಾತ್ರ ಕೊನೇ ಕ್ಷಣದಲ್ಲಿ ಆ Stroke of fortune ಅಂತಾರಲ್ಲ ಅದರಿಂದಾಗಿ ಹೀರೊ ಬದುಕುಳಿಯುವುದು ಸಾಧ್ಯ.

ನಾವೆಲ್ಲರೂ ಜೀವನವನ್ನು ಭಾರೀ ಹಗುರವಾಗಿ ತೆಗೆದು ಕೊಳ್ಳುತ್ತೇವೆ. ಹುಟ್ಟಿದ ಮೇಲೆ ಎಂದಾದರೂ ಸಾಯಲೇಬೇಕು. ಅಲ್ಲಿಯ ತನಕ  “ಮಸ್ತಿ ಮಾಡೋಣ ಬಾ” ಎಂಬ ಧೋರಣೆ ಯಲ್ಲಿಯೇ ಎಲ್ಲರೂ ಬದುಕು ದೂಡುತ್ತಾರೆ. ಈ ಉಡಾಫೆ ಸ್ವಸ್ಥ ಮನುಷ್ಯನ ಜೀವನದ ಎಲ್ಲ ರಂಗಗಳಲ್ಲಿಯೂ ಕಾಣಬಹುದು. ಬದುಕು ಸಾದರಪಡಿಸುವ ಬೆಳಕಿನ, ಬಣ್ಣದ ಚಿತ್ತಾರದಲ್ಲಿ ಕತ್ತಲಿನ ಅರ್ಥ ಕಳೆದುಹೋಗುತ್ತದೆ. ಸಪ್ತಸ್ವರಗಳ ನಿನಾದದಲ್ಲಿ ಗಾಢ ಮೌನದ ಮೌಲ್ಯ ಮರೆಯಾಗುತ್ತದೆ. ನಾವು ಎಲ್ಲವನ್ನೂ ನೋಡ ಬಹುದು, ಎಲ್ಲವನ್ನೂ ಕೇಳಬಹುದು ಎಂಬ ಭ್ರಮೆಯಲ್ಲಿ ನೋಡ ಬೇಕಾದುದನ್ನು ನೋಡದೆ, ಕೇಳಬೇಕಾದುದನ್ನು ಕೇಳದೆ ಇರುವ ಸಂಭವವೇ ಹೆಚ್ಚು. ನಿಜ ಹೇಳಿ, ನಮ್ಮಲ್ಲಿ ಎಷ್ಟು ಜನ ಸುತ್ತಲಿನ ಪರಿಸರದ ವೈಶಿಷ್ಟ್ಯಗಳನ್ನು ಸ್ಮೃತಿಪಟಲದಲ್ಲಿ ಸೆರೆಹಿಡಿಯುತ್ತೇವೆ? ಎಷ್ಟು ಜನರು ಹಕ್ಕಿಗಳ ಇಂಚರ ಪ್ರಪಂಚವನ್ನು ಪ್ರವೇಶಿಸುತ್ತೇವೆ? ಹೂತೋಟಗಳಿಗೆ ನಿತ್ಯ ಭೇಟಿ ಕೊಟ್ಟರೂ ಅರಳಿ ನಿಂತ ಹೂಗಳ ಸೌಂದರ್ಯವನ್ನು ಎಷ್ಟು ಮಂದಿ ಸವಿಯುತ್ತಾರೆ? ಸಂಗೀತ ಕೇಳುವ ಎಷ್ಟು  ಕಿವಿಗಳು ನಾದಲೋಕದ ಒಳಪ್ರವೇಶಿಸಿ ಅವು ನೀಡುವ ಪುಳಕವನ್ನು ಅನುಭವಿಸುತ್ತವೆ?

ನನಗಂತೂ ಆ ಭಾಗ್ಯ ಇಲ್ಲ!

ಅದಕ್ಕಾಗಿಯೇ ಇಷ್ಟೆಲ್ಲ ಪ್ರಶ್ನೆ. ಒಮ್ಮೆ ನನ್ನ ಆಪ್ತ ಗೆಳತಿಯೊಬ್ಬಳು ಕಾಡು ಸುತ್ತಿಕೊಂಡು ಮನೆಗೆ ಬಂದಿದ್ದಳು. “ಕಾಡಿನಲ್ಲಿ ಏನನ್ನು ಕಂಡೆ” ಎಂದು ಆಕೆಯನ್ನು ಪ್ರಶ್ನಿಸಿದೆ. “Nothing in particular”, ಅಂಥದ್ದೇನೂ ಕಾಣಲಿಲ್ಲ ಎಂದಳು! ಆದರೆ ಕಣ್ಣಿಲ್ಲದ ನಾನೇ ತೋಟಕ್ಕೆ ಹೋದಾಗ ಏನೆಲ್ಲ ಕಾಣುತ್ತೇನೆ, ಅನುಭವಿಸುತ್ತೇನೆ. ಆದರೆ ದೃಷ್ಟಿ ಭಾಗ್ಯ ಇರುವ ಮಂದಿಗೆ ಇದೇಕೆ ಕಾಣುವುದಿಲ್ಲ ಅನಿಸುತ್ತದೆ. ಸ್ಪರ್ಶದಿಂದಲೇ ಎಲೆಗಳ ರಚನೆ, ಹೂ ಪಕಳೆಗಳ ಮಾಟ, ಚಳಿಗಾಲದ ನಿದ್ದೆಯ ನಂತರ ವಸಂತಾಗಮನಕ್ಕೆ ಮೈಕೊಡವಿಕೊಂಡು ಏಳುವ ಗಿಡಮರಗಳ ವೈಶಿಷ್ಟ್ಯವನ್ನು ಹಿಡಿದಿಟ್ಟುಕೊಳ್ಳುತ್ತೇನೆ. ತನ್ನಷ್ಟಕ್ಕೆ ತಾನು ಹರಿಯುವ ಝರಿಗಳಿಗೆ ಕೈಯೊಡ್ಡಿ ನೀರಿನ ಕಲರವಕ್ಕೆ ಮನಸೋತಿದ್ದೇನೆ. ವಿಶಾಲವಾದ ಹುಲ್ಲು ಹಾಸಿನ ಮೇಲೆ ಮೈಚಾಚಿ ಹಂಸತೂಲಿಕಾತಲ್ಪದ ವೈಭೋಗಕ್ಕೆ ತಿಲಾಂಜಲಿ ಇತ್ತಿದ್ದೇನೆ. ಅಂಧಕಾರದಲ್ಲಿದ್ದುಕೊಂಡೇ ಪಡೆವ ಈ ಅನುಭವ ಬೆಳಕಿನ ಪ್ರಪಂಚದಲ್ಲಿ ಇನ್ನೆಂಥಾ ಸುಖ ತರಬಹುದು ಎಂದು ಹಪಹಪಿಸಿದ್ದೇನೆ. ಬಣ್ಣದ ಚಿತ್ತಾರದಲ್ಲಿ ಕ್ಷಣವಾದರೂ ಕಳೆದು ಹೋಗುವ ಮನಸ್ಸಾಗುತ್ತದೆ. ಆದರೆ ಕಣ್ಣಿ ರುವ ಮಂದಿ ಇದನ್ನೆಲ್ಲ ಏಕೆ ಕಾಣುವುದಿಲ್ಲ, ಏಕೆ ಆಸ್ವಾದಿಸುವುದಿಲ್ಲ ಎಂದೂ ಕೊರಗುತ್ತೇನೆ. ದೃಷ್ಟಿ ಕೊಡುವ ಅನುಭೂತಿ, ಅದು ತೆರೆದಿಡುವ ಹೊಸ ಪ್ರಪಂಚ ಏಕೆ ಸಾಮಾನ್ಯರಿಗೂ ಅರ್ಥವಾಗುವುದಿಲ್ಲ ಎಂದೆನಿಸುತ್ತದೆ. ಪ್ರಾಯಶಃ, ಬದುಕಿನ ಪ್ರೌಢ ಘಟ್ಟದಲ್ಲಿ ಪ್ರತಿಯೊಬ್ಬರೂ ಕುರುಡು, ಕಿವುಡಾದರೆ ಆಗ ಅವರಿಗೆ ಬೆಳಕು ಮತ್ತು ಸ್ವರಗಳ ಮಹತ್ವದ ಅರಿವು ಮೂಡುತ್ತದೇನೋ ಎಂಬ ಭಾವನೆ ನನ್ನಲ್ಲಿ ಸುಳಿಯುತ್ತದೆ. ಕೆಲವೊಮ್ಮೆ ನನ್ನ ಹೃದಯ ಮೂಕವಾಗಿ ರೋದಿಸುತ್ತದೆ. ಕಣ್ಣೇ ಇಲ್ಲದ ನನಗೆ ಸ್ಪರ್ಶದಿಂದಲೇ ಇಂತಹ ಅನುಭವ ಸಿಗುವುದಾದರೆ ಆ ನೋಟದಲ್ಲಿ ಅದೆಂಥ ಸುಖವಿದ್ದೀತು?

ಹೇ ದೇವರೇ, ನನಗೆ ಮೂರೇ ಮೂರು ದಿನ ದೃಷ್ಟಿ ಕೊಡು!

ಹಾಗೊಂದು ವೇಳೆ ಯಾವುದಾದರೂ ಪವಾಡ ಸಂಭವಿಸಿ ನನಗೆ ಮೂರು ದಿನಗಳ ಕಾಲ ದೃಷ್ಟಿಯನ್ನು ದಯಪಾಲಿಸಿದರೆ ನಾನೇನನ್ನು ನೋಡಲು ಬಯಸುತ್ತೇನೆ ಗೊತ್ತೆ? ಮೊದಲನೆ ದಿನ ನನ್ನ ಬದುಕನ್ನು ಅರ್ಥಪೂರ್ಣವಾಗಿಸಿದ ಎಲ್ಲರನ್ನೂ ನೋಡ ಬೇಕು. ಮೊಟ್ಟಮೊದಲಿಗೆ ನನ್ನ ಬದುಕಿನ ಕದ ತಟ್ಟಿ ಹೊರಜಗತ್ತನ್ನು ತೆರೆದಿಟ್ಟ ನನ್ನ ಟೀಚರ್ ಆನ್ ಸುಲ್ಲಿವನ್ ಮ್ಯಾಸಿಯ ಮುಖವನ್ನು ದಿಟ್ಟಿಸಿ ನೋಡಬೇಕು. ನನ್ನ ಕಣ್ಣುಗುಡ್ಡೆಯೊಳಗೆ ಆಕೆಯ ಮುಖವನ್ನು ಸೆರೆ ಹಿಡಿದುಕೊಂಡು ದೃಷ್ಟಿ ಹೋದ ನಂತರವೂ ಕಲ್ಪಿಸಿಕೊಂಡು ಧನ್ಯತೆಯಿಂದ ಬೀಗುವುದಕ್ಕಲ್ಲ. ಆ ಮುಖದಲ್ಲಿ ಆಕೆಯ ತಾಳ್ಮೆ, ಅನುಕಂಪದ ಜೀವಂತ ಗುರುತುಗಳನ್ನು ನಾನು ಕಾಣಬೇಕು. ಆಕೆಯ ಕಣ್ಣುಗಳಲ್ಲಿ ಸೋಲಿನ ಸವಾಲನ್ನೂ ಹಿಮ್ಮೆಟ್ಟಿಸುವ ಗಟ್ಟಿತನವಿದೆಯಲ್ಲಾ ಅದನ್ನು ನೋಡಬೇಕು. ಆತ್ಮದ ಕಿಟಕಿಯಾದ ಕಣ್ಣಿನಿಂದ ಸ್ನೇಹಿತೆಯ ಹೃದಯವನ್ನು ಇಣುಕಿ ನೋಡುವ ಅನುಭವ ಹೇಗಿರುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಬೆರಳುಗಳ ತುದಿಯಿಂದ ಮುಖವನ್ನು ಸ್ಪರ್ಶಿಸಿ ಆಕಾರವನ್ನು ಕಲ್ಪಿಸಿಕೊಂಡದ್ದಷ್ಟೇ ನನಗೆ ಗೊತ್ತು. ಹಾಗೆ ಸ್ಪರ್ಶಿಸುವುದರಿಂದಲೇ ಅವರ ದುಃಖ-ದುಮ್ಮಾನ, ನೋವು-ನಲಿವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಅವರು ಹೇಗಿದ್ದಾರೆಂಬುದನ್ನು ಕಲ್ಪಿಸಿಕೊಳ್ಳಲು ನನ್ನಿಂದಾಗದು. ಅಂಥ ಭಾಗ್ಯ ನನಗಿಲ್ಲ. ಆದರೆ ನೋಡುವ ನೋಟದಲ್ಲೇ ಅರ್ಥಮಾಡಿಕೊಳ್ಳುವ, ಹೃದಯವನ್ನು ಹೊಕ್ಕಿ ನೋಡುವ, ಮುಖದ ಹಾವ-ಭಾವಗಳಲ್ಲಿ ಮನಸ್ಸನ್ನು ಅರಿಯುವ ಅನುಭವ ಹೇಗಿರಬಹುದು? ದೇವರು ನನಗೆ ಮೂರು ದಿನ ದೃಷ್ಟಿಕೊಟ್ಟರೆ ಮೊದಲನೇ ದಿನ ಈ ಅನುಭವಗಳನ್ನು ಪಡೆಯುತ್ತೇನೆ.

ಮರುದಿನ ಬೆಳಗ್ಗೆ ಎದ್ದಾಗ ಮೊದಲು ಸೂರ್ಯನ ಉದಯ, ಹೊತ್ತು ಜಾರಿದ ಮೇಲೆ ಕತ್ತಲು ಆವರಿಸುವ ಪರಿ, ಅದರಿಂದ ಸಿಗುವ ಸುಖ ನನಗೆ ಬೇಕು. ನಿದ್ರೆಯಲ್ಲಿರುವ ಭುವಿಯನ್ನು ಏಳಿಸುವಾಗ ಸೂರ್ಯ ಚೆಲ್ಲುವ ಬೆಳಕಿನ ವೈಭವವನ್ನು ನನ್ನ ಕಣ್ಣುಗಳಲ್ಲಿ ಸೆರೆಹಿಡಿಯಬೇಕು. ಆ ದಿನ ನಾನು ಜಗತ್ತನ್ನೇ ಕಾಣಬೇಕು. ಜಗತ್ತಿನ ಅದ್ಭುತ ಸೃಷ್ಟಿಗಳನ್ನು ಕಂಡು ಬೆಚ್ಚಿ ಬೆರಗಾಗಬೇಕು. ಮೂರನೇ ದಿನ ಬೆಳಗಾದಾಗಲೂ ಸೂರ್ಯನ ಪ್ರಖರತೆಯಲ್ಲಿ ಹೊಸ ಹರ್ಷವನ್ನು ಕಾಣಲು ಪ್ರಯತ್ನಿಸುತ್ತೇನೆ. ಆದರೆ ಮೂರನೆಯ ದಿನ ರಾತ್ರಿ ಬರುವ ಕತ್ತಲು ಮತ್ತೆ ಬದುಕನ್ನು ಅಂಧಕಾರಕ್ಕೆ ತಳ್ಳುತ್ತದೆ, ನನ್ನ ಬದುಕಲ್ಲಿ ಮತ್ತೆಂದೂ ಸೂರ್ಯ ಉದಯಿಸುವುದಿಲ್ಲ ಎಂಬುದನ್ನು ಊಹಿಸಿಕೊಂಡಾಗ……..”

1933ರಲ್ಲಿ ‘Atlantic Monthly’ ಪತ್ರಿಕೆಯಲ್ಲಿ ಹೆಲೆನ್ ಕೆಲ್ಲರ್ ತೋಡಿಕೊಂಡಿದ್ದ ಮನದಾಳದ ಈ ಬೇಗುದಿ ಎಂಥ ಕಟುಕರ ಮನಸೂ ಒಮ್ಮೆ ಕಲಕಿ ಬಿಡುತ್ತದೆ. ಆದರೆ ಹೆಲೆನ್ ಕೆಲ್ಲರ್ ಹುಟ್ಟು ಕುರುಡಿಯಲ್ಲ. 1880, ಜೂನ್ 27ರಂದು ಜನಿಸಿದ ಆಕೆ ಕ್ಯಾಪ್ಟನ್ ಅರ್ಥರ್ ಎಚ್. ಕೆಲ್ಲರ್ ಅವರ ಮಗಳು. ಆಕೆ ಕೂಡ ಹದಿನೆಂಟು ತಿಂಗಳು ತುಂಬುವವರೆಗೂ ಎಲ್ಲ ಮಕ್ಕಳಂತೆಯೇ ಇದ್ದಳು. ಆದರೆ ಅನಾರೋಗ್ಯ ಆಕೆಯನ್ನು ಶಾಶ್ವತವಾಗಿ ಕುರುಡು, ಕಿವುಡಾಗಿಸಿತು. ಆರು ವರ್ಷ ತುಂಬುವವರೆಗೂ ಹೆಲೆನ್‌ಳೊಂದಿಗೆ communicate ಮಾಡುತ್ತಿದ್ದುದು ಮನೆಯ ಅಡುಗೆಯವಳ ಪುತ್ರಿ ಮಾರ್ಥಾ ವಾಷಿಂಗ್ಟನ್ ಮಾತ್ರ. ಹೆಲೆನ್‌ಳೊಂದಿಗೆ communicate ಮಾಡುವ ಸಲುವಾಗಿ ಆಕೆಯೇ 60 ಸಂeಗಳನ್ನು ರೂಪಿಸಿದ್ದಳು. ಆದರೆ ಆಕೆಯ ಬದುಕಿಗೆ ಹೊಸ ದಿಕ್ಕು, ಅರ್ಥ ನೀಡಿದ್ದು ಆಕೆಯ ಟೀಚರ್ ಆನ್ ಸುಲ್ಲಿವನ್ ಮ್ಯಾಸಿ. ಮೊದಲಿಗೆ ಹೆಲೆನ್‌ಳನ್ನು ಮನೆಯವರಿಂದ ಬೇರ್ಪಡಿದ ಆನ್, ಆಕೆಯ ತುಂಟತನಕ್ಕೆ ಕಡಿವಾಣ ಹಾಕಿ ಶಿಸ್ತನ್ನು ತುಂಬಿದರು. ಆದರೂ ಹೆಲೆನ್‌ಳೊಂದಿಗೆ ಹೇಗೆ ಸಂವಹನ ಮಾಡಬೇಕೆಂಬುದೇ ತಿಳಿಯ ದಾಯಿತು. ಒಮ್ಮೆ ಅಂಗೈ ಮೇಲೆ ತಣ್ಣೀರನ್ನು ಸುರಿಯುತ್ತಾ ಇರುವಾಗ ಅದು ‘water’ ಎಂಬ ಅರಿವು ಹೆಲೆನ್‌ಗಾಗುತ್ತದೆ! ಆನಂತರ ಅದಕ್ಕೇನೆನ್ನುತ್ತಾರೆ, ಇದಕ್ಕೇನೆನ್ನುತ್ತಾರೆ ಎಂದು ಒಂದರ ಹಿಂದೆ ಮತ್ತೊಂದು ಪ್ರಶ್ನೆಗಳನ್ನು ಹಾಕುತ್ತಾ ಹೋದ ಹೆಲೆನ್, ಆನ್ ಅವರನ್ನು ಸುಸ್ತಾಗಿಸುತ್ತಾಳೆ. ಹೀಗೆ ಅರಿವು ತಂದುಕೊಂಡ ಹೆಲೆನ್ ಅಮೆರಿಕದ ಮೊಟ್ಟ ಮೊದಲ ಕುರುಡು-ಕಿವುಡು ಪದವೀಧರೆ ಎನಿಸಿಕೊಳ್ಳುತ್ತಾಳೆ! ಅಷ್ಟೇ ಅಲ್ಲ “ಕುರುಡು-ಕಿವುಡು ಮಕ್ಕಳು” ಎಂಬ ವಿಷಯದ ಮೇಲೆ ಮಹಾಪ್ರಬಂಧ ಬರೆದು ಡಾಕ್ಟರೇಟ್ ಪದವಿಯನ್ನೂ ಪಡೆಯುತ್ತಾಳೆ. ಇಪ್ಪತ್ಮೂರನೇ ವಯಸ್ಸಿಗೆ “The Story of My Life” ಎಂಬ ಆತ್ಮಕಥೆ, 1927ರಲ್ಲಿ “Light in my Darkness” ಎಂಬ ಎರಡನೇ ಆತ್ಮಕಥೆ ಬರೆದ ಆಕೆ ಒಟ್ಟು 12 ಪುಸ್ತಕಗಳನ್ನು ಬರೆದಿದ್ದಾಳೆ. 1962ರಲ್ಲಿ ಬಿಡುಗಡೆಯಾದ ಆಸ್ಕರ್ ವಿಜೇತ  “The Miracle Worker” ಚಿತ್ರಕ್ಕೆ ಆಕೆಯ ಜೀವನವೇ ಪ್ರೇರಣೆ. ಸಂಜಯ್ ಲೀಲಾ ಬನ್ಸಾಲಿ ರೂಪಿಸಿದ, ಅಮಿತಾಭ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ನಟಿಸಿದ ‘ಬ್ಲ್ಯಾಕ್’ ಚಿತ್ರಕ್ಕೂ ಅದೇ ಪ್ರೇರಣೆ.

ಹೌದು, ಹೆಲೆನ್ ಕೆಲ್ಲರ್‌ಳಿಂದ ನಾವು ಕಲಿಯಬೇಕಾದುದೂ ಸಾಕಷ್ಟಿದೆ.

ದೇವರು ಏನು ಕೊಟ್ಟಿದ್ದಾನೋ ಅದರಲ್ಲಿಯೇ ಖುಷಿ ಪಡ ಬೇಕು ಎಂಬುದು  ಇರುವುದನ್ನು ಕಳೆದುಕೊಳ್ಳುವವರೆಗೂ ನಮಗೆ ಗೊತ್ತಾಗುವುದಿಲ್ಲ, ಹಾಸಿಗೆ ಹಿಡಿಯುವವರೆಗೂ ಆರೋಗ್ಯದ ಬೆಲೆ ತಿಳಿಯುವುದಿಲ್ಲ, ಹಾಗೇ ಕಣ್ಣಿದ್ದವರಿಗೆ ದೃಷ್ಟಿಯ ಬೆಲೆ ಗೊತ್ತಾಗು ವುದಿಲ್ಲ. ಬಹುಶಃ ನಮಗೆ ಅಂಧಕಾರದ ಅರಿವಿಲ್ಲ ದಿರುವುದೇ ಈ ಪ್ರವೃತ್ತಿಗೆ ಕಾರಣವಿರಬಹುದು. ಕಣ್ಣಿನಲ್ಲಿ ಸಾಧ್ಯ ವಾದಷ್ಟು ಬಿಂಬಗಳನ್ನು ತುಂಬಿಕೊಂಡು, ಅರ್ಥಪೂರ್ಣ ನೋಟವನ್ನೇ ಕಳೆದುಕೊಂಡು ಬಿಟ್ಟಿರುತ್ತೇವೆ. ದೃಷ್ಟಿ ದೈವೀದತ್ತವಾಗಿ ಬಂದ ವರ ಎಂಬ ಭ್ರಮೆಯಲ್ಲಿ ಅದು ಬದುಕಿನ ಪರಿಪೂರ್ಣತೆಗೆ ಒಂದು ಸಾಧನ ಎಂಬ ವಾಸ್ತವವನ್ನೇ ಮರೆತಿರುತ್ತೇವೆ.

ನರಕಚತುರ್ದಶಿಯ ಮರುದಿನ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ದೃಷ್ಟಿ ಕಳೆದುಕೊಂಡು ಮಲಗಿದ್ದ ಮಕ್ಕಳನ್ನು ನೋಡಿ ದಾಗ ಹೆಲೆನ್ ಕೆಲ್ಲರ್ ಕಥೆ ನೆನಪಾಯಿತು. ಈ ಮಕ್ಕಳ ದೈನ್ಯ ಸ್ಥಿತಿಯ ಚಿತ್ರಣವನ್ನು ಮುಂದಿರಿಸಿಕೊಂಡಾಗಲೆಲ್ಲ ಹೆಲೆನ್ ಕೆಲ್ಲರ್, ‘ನನಗೆ ಮೂರು ದಿನಗಳ ಮಟ್ಟಿಗೆ ದೃಷ್ಟಿ ಕೊಡು ದೇವರೇ..’ ಎಂದು ಬರೆದುಕೊಂಡಿದ್ದು ನೆನಪಾಗಿ ಹೃದಯ ಹಿಂಡುತ್ತದೆ. ಕಣ್ಣುಗಳನ್ನು ಕಳೆದುಕೊಂಡು ಮಲಗಿರುವ ಈ ಚಿಕ್ಕ ಮಕ್ಕಳ ಎದುರಿಗೆ ಇನ್ನೂ ಅದೆಷ್ಟೋ ವರ್ಷಗಳ, ಹಲ ದಶಕಗಳ ದೀಪಾವಳಿ ಇದೆ. ವರ್ಷ ಜಾರುತ್ತಲೇ ಇನ್ನೊಂದು ದೀಪಾವಳಿ ಬರುತ್ತದೆ. ಆದರೆ ಇವರ ಪಾಲಿಗೆ ಸಂಭ್ರಮ ಮಾತ್ರ ಮರುಕಳಿಸುವುದಿಲ್ಲ. ಇಕ್ಕಟ್ಟಾದ ಶಹರದ ಬೀದಿಗಳಲ್ಲಿ ಒಂದು ರಾಕೆಟ್ ಚಿಮ್ಮುವ, ಇನ್ನೊಂದು ಪಟಾಕಿ ಬಾಂಬು ಢಮ್ಮೆನ್ನುವ ಆ ಕ್ಷಣದ ಪುಳಕಕ್ಕೆ ಮೈಮನವೊಡ್ಡಲು ಹೋಗಿ ಒಂದಿಡೀ ಬದುಕಿನ ಕಚಗುಳಿಯನ್ನೇ ಕಮರಿಸಿಕೊಂಡುಬಿಟ್ಟವಲ್ಲ ಈ ಜೀವಗಳು?

ದಿನವೂ ಕಣ್ಣು ಕುಕ್ಕುವ ಕೃತ್ರಿಮ ಬೆಳಕುಗಳ ಮಧ್ಯೆಯೇ ಜೀವಿಸುವ ನಾವು ಆ ಸಂಭ್ರಮದ ದಿನಗಳಲ್ಲಿ ಮನೆ ತುಂಬ ಹಣತೆ ಬೆಳಗಿಸಿಡುವುದರಲ್ಲಿ, ಬಾಗಿಲಿಗೊಂದು ಆಕಾಶಬುಟ್ಟಿ ಕಟ್ಟುವುದರಲ್ಲಿ, ಒಂದು ಹೂಕುಂಡದ ಸುರುಸುರು, ನಕ್ಷತ್ರಕಡ್ಡಿಯ ಚಟಪಟ ದಲ್ಲಿ ಬೇಕಾದಷ್ಟು ಹಬ್ಬದ ಸಂಭ್ರಮವನ್ನು ಬಾಚಿಕೊಳ್ಳಬಹುದಲ್ಲವೇ? ಬದುಕಿನ ಕತ್ತಲೆ ಕಳೆದು ಬೆಳಕು ಬರಲಿ ಎಂಬ ಸಂಕೇತ ದಿಂದ ಆಚರಿಸುವ ಹಬ್ಬದ ದಿನವೇ ಹುಚ್ಚು ರೋಮಾಂಚನ ಅಪ್ಪಿ ಕೊಳ್ಳಲು ಹೋಗಿ ಜೀವನವನ್ನು ಅಂಧಕಾರಕ್ಕೆ ಬೀಳಿಸಿಕೊಳ್ಳುವುದ ಕ್ಕಿಂತ ಕ್ರೂರ ವ್ಯಂಗ್ಯ ಇನ್ಯಾವುದಿದೆ?

ಮುಂದಿನ ದೀಪಾವಳಿಯ ವೇಳೆಗಾದರೂ ಜನರ ಮನದಲ್ಲಿ ಹೀಗೊಂದು ಅರಿವು ಆವರಿಸಿಕೊಳ್ಳಲಿ.

ತಮಸೋಮಾ ಜ್ಯೋತಿರ್ಗಮಯ…

2 Responses to “ದೀಪದ ಹಬ್ಬದ ಕತ್ತಲಿನಲ್ಲಿ ಕೇಳಿಬಂತು ಕೆಲ್ಲರ್‌ಳ ದನಿ!”

  1. shivaraj says:

    awesome……..

  2. NIVEDITA says:

    “Three days to see”, I had read this article in RD 2002 and it had impressed me a lot. I translated the whole article in kannada just to feel and sense the depth of each word in that article. Somehow this article taught me one more great lesson of life——— As I happened to meet a popular writer and used to think that great writings come out of a great individuals(personalities). But I was wrong ,writing is different writer is different. one should never try to look for the same good qualities in writer , he/she is like anybody else “imperfect” and which is quiet normal.
    I stopped adoring writers, I read and appreciate it (only their work). Unfortunately my translated article remained with that writer and might have vanished in the garbage as well which is really hurting.