Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಭಾರತೀಯರು ಮಾತ್ರವಲ್ಲ, ಜಗತ್ತೇ ನಿಮ್ಮನ್ನು ‘ಲವ್’ ಮಾಡುತ್ತೆ!

ಭಾರತೀಯರು ಮಾತ್ರವಲ್ಲ, ಜಗತ್ತೇ ನಿಮ್ಮನ್ನು ‘ಲವ್’ ಮಾಡುತ್ತೆ!

ಮೊನ್ನೆ ಜನವರಿ ೧೨ರಂದು ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ತಮ್ಮ ಕೊನೆಯ ಪತ್ರಿಕಾಗೋಷ್ಠಿ ಕರೆದಿದ್ದರು.

ಸಹಜವಾಗಿಯೇ ಎಲ್ಲ ತೆರನಾದ ಟೀಕೆ, ವಾಗ್ಬಾಣಗಳನ್ನು ಬುಷ್ ಎದುರಿಸಬೇಕಾಯಿತು. “ನೂತನ ಅಧ್ಯಕ್ಷರು ಜಾಗತಿಕ ಮಟ್ಟದಲ್ಲಿ ಅಮೆರಿಕದ ನೈತಿಕ ಸ್ಥಾನಮಾನವನ್ನು ಮರು ಸ್ಥಾಪಿಸಬೇಕಾದ ಅಗತ್ಯವಿದೆ” ಎಂದ ಪತ್ರಕರ್ತರೊಬ್ಬರು, ಜಾರ್ಜ್ ಬುಷ್ ಆಡಳಿತದಡಿ ಅಮೆರಿಕದ ಪ್ರತಿಷ್ಠೆಗೆ ಭಾರೀ ಧಕ್ಕೆಯಾಗಿದೆ ಎಂದು ಪರೋಕ್ಷವಾಗಿ ಚುಚ್ಚಿದರು.


ಅದಕ್ಕೆ ಜಾರ್ಜ್ ಬುಷ್ ಹೇಳಿದ್ದೇನು ಗೊತ್ತೆ?

“ಕೆಲವು  ಶ್ರೀಮಂತ ವರ್ಗದವರು ನನ್ನನ್ನು ಟೀಕೆ ಮಾಡಬಹುದು. ಆದರೆ ಅಫ್ರಿಕಾಕ್ಕೆ ಹೋಗು, ಅಮೆರಿಕದ ಔದಾರ್ಯತೆ ಮತ್ತು ಅನುಕಂಪದ ಬಗ್ಗೆ ಕೇಳು. ಭಾರತಕ್ಕೆ ತೆರಳು, ಅಮೆರಿಕದ ಬಗ್ಗೆ ಅಭಿಪ್ರಾಯ ಕೇಳು. India loves me”!

ಭಾರತ, ಆಫ್ರಿಕಾದವರು ಮಾತ್ರವೇಕೆ ಹಾಸ್ಯಪ್ರe ಇರುವ ಯಾರು ತಾನೇ ಬುಷ್ ಅವರನ್ನು ಇಷ್ಟಪಡುವುದಿಲ್ಲ ನೀವೇ ಹೇಳಿ?!

ಒಮ್ಮೆ ಐನ್‌ಸ್ಟೀನ್ ಸತ್ತು ಸ್ವರ್ಗಕ್ಕೆ ಹೋಗುತ್ತಾರೆ.

ಹಾಗೆ ಹೋದಾಗ ಸ್ವರ್ಗದ ದ್ವಾರಪಾಲಕ ಸೈಂಟ್ ಪೀಟರ್ ಗೇಟಿನ ಮುಂದೆಯೇ ನಿಂತಿದ್ದರು. ಐನ್‌ಸ್ಟೀನ್ ಅವರನ್ನು ನೋಡಿದ ಕೂಡಲೇ ಆತ ಯಾರೆಂದು ಪೀಟರ್‌ಗೆ ಗೊತ್ತಾಯಿತು. ಆದರೂ, “ನೀನು ಐನ್‌ಸ್ಟೀನ್ ಥರಾ ಕಾಣುತ್ತೀಯಾ. ಆದರೆ ಸ್ವರ್ಗದೊಳಕ್ಕೆ ಕಾಲಿಡಲು ಜನ ಏನು ಬೇಕಾದರೂ ಮಾಡಲು, ಯಾವ ಮಟ್ಟಕ್ಕಿಳಿಯಲೂ ಸಿದ್ಧರಿದ್ದಾರೆ. ಹಾಗಾಗಿ ನೀನೇ ಐನ್‌ಸ್ಟೀನ್ ಎಂದು ಹೇಗೆ ಸಾಬೀತು ಮಾಡುತ್ತೀಯಾ?” ಎಂದು ಕೇಳಿದರು. ಒಂದೆರಡು ಕ್ಷಣ ಯೋಚಿಸಿದ ಐನ್‌ಸ್ಟೀನ್, ನನಗೊಂದು ಕಪ್ಪು ಬೋರ್ಡ್ ಹಾಗೂ ಚಾಕ್‌ಪೀಸ್ ಕೊಡು ಎಂದರು. ಸೈಂಟ್ ಪೀಟರ್ ತನ್ನ ಕೈಯನ್ನು ಮುಂದೆ ಚಾಚಿ ಮುಷ್ಟಿಯನ್ನು ತೆರೆದರು. ತಕ್ಷಣ ಕಪ್ಪು ಬೋರ್ಡ್ ಹಾಗೂ ಚಾಕ್‌ಪೀಸ್ ಹೊರಬಂತು. ಅದನ್ನು ತೆಗೆದುಕೊಂಡ ಐನ್‌ಸ್ಟೀನ್ ಗಣಿತದ ಸೂತ್ರಗಳು ಹಾಗೂ ತನ್ನ ಸಾಪೇಕ್ಷ ಸಿದ್ಧಾಂತದ (ಥಿಯರಿ ಆಫ್ ರಿಲೇಟಿವಿಟಿ) ಸಂeಗಳನ್ನು ಬರೆದರು.

ಆತನೇ ನಿಜವಾದ ಐನ್‌ಸ್ಟೀನ್ ಎಂದು ಸೈಂಟ್ ಪೀಟರ್‌ಗೆ ಮನವರಿಕೆಯಾಯಿತು. ‘ಒಳಕ್ಕೆ ಬಾ’ ಎಂದು ಕರೆದರು.

ಐನ್‌ಸ್ಟೀನ್ ಹಿಂದೆಯೇ ಖ್ಯಾತ ಕಲಾಕಾರ ಪಿಕಾಸೋ ನಿಂತಿದ್ದರು.  ‘ನೀನೇ ಪಿಕಾಸೋ ಎಂದು ಹೇಗೆ ಸಾಬೀತು ಮಾಡುತ್ತೀಯಾ?’ ಎಂದು ಸೈಂಟ್ ಪೀಟರ್ ಪಿಕಾಸೋಗೂ ಪ್ರಶ್ನೆ ಹಾಕಿದರು. ಐನ್‌ಸ್ಟೀನ್‌ಗೆ ಕೊಟ್ಟ ಕಪ್ಪು ಬೋರ್ಡ್ ಹಾಗೂ ಚಾಕ್‌ಪೀಸನ್ನು ನನಗೂ ಕೊಡು ಎಂದು ಕೇಳಿದರು. ‘ಆಯ್ತು’ ಎಂಬ ಉತ್ತರ ಬಂತು. ಬೋರ್ಡ್ ಮೇಲಿದ್ದ ಗಣಿ ತದ ಸೂತ್ರಗಳನ್ನು ಅಳಿಸಿದ ಪಿಕಾಸೋ, ಒಂದು ಅದ್ಭುತ ಚಿತ್ರ ಬರೆದರು. ಅದನ್ನು ನೋಡಿದ ಪೀಟರ್‌ಗೆ ‘ಆತನೇ ಪಿಕಾಸೋ’ ಎಂದು ಖಾತ್ರಿಯಾಯಿತು. ‘ಒಳಕ್ಕೆ ಬಾ’ ಎಂದರು.

ಹಾಗೆ ಒಳ ಕರೆದು ತಿರುಗಿ ನೋಡುವಷ್ಟರಲ್ಲಿ ಜಾರ್ಜ್ ಬುಷ್ ನಿಂತಿದ್ದಾರೆ!

ಸೈಂಟ್ ಪೀಟರ್‌ಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. “ಐನ್‌ಸ್ಟೀನ್ ಹಾಗೂ ಪಿಕಾಸೋ ತಾವ್ಯಾರು ಎಂಬುದನ್ನು ಈಗಷ್ಟೇ ಸಾಬೀತುಪಡಿಸಿದರು. ನೀನೇ ಜಾರ್ಜ್ ಬುಷ್ ಎಂದು ಹೇಗೆ ಮನವರಿಕೆ ಮಾಡಿಕೊಡುತ್ತೀಯಾ?” ಎಂದು ತಲೆಕೆರೆದುಕೊಂಡು, ಕಣ್ಣುಜ್ಜಿಕೊಂಡು ನೋಡುತ್ತಾ ಕೇಳಿ ದರು. ಆದರೆ  ಆಶ್ಚರ್ಯಚಕಿತರಾಗಿ ಸೈಂಟ್ ಪೀಟರ್ ಅವರತ್ತ ನೋಡಿದ ಬುಷ್, “ಯಾರವರು ಐನ್‌ಸ್ಟೀನ್ ಹಾಗೂ ಪಿಕಾಸೋ?!” ಎಂದರು. ಸೈಂಟ್ ಪೀಟರ್ ಮರು ಮಾತನಾಡಲಿಲ್ಲ, “ಒಳಕ್ಕೆ ಬಾ, ಬುಷ್” ಎಂದರು.

ಅಂದರೆ ಐನ್‌ಸ್ಟೀನ್ ಹಾಗೂ ಪಿಕಾಸೋ ಅವರನ್ನು ಗುರು ತಿಸದ ದಡ್ಡನೊಬ್ಬನಿದ್ದರೆ ಅದು ಜಾರ್ಜ್ ಬುಷ್ ಅವರೇ ಆಗಿರಬೇಕು ಎಂಬ ಸತ್ಯ ಸೈಂಟ್ ಪೀಟರ್‌ಗೂ ಗೊತ್ತಿತ್ತು!

ಇಂತಹ ಜಾರ್ಜ್ ಬುಷ್, ೨೦೦೦, ನವೆಂಬರ್ ಮೊದಲ ಮಂಗಳವಾರ ನಡೆದ ಚುನಾವಣೆಯಲ್ಲಿ ಗೆದ್ದು ಅಮೆರಿಕದ ಅಧ್ಯಕ್ಷನಾಗಿ ನಿಯುಕ್ತಿಗೊಂಡರು. ಅಮೆರಿಕದ ಸಂವಿಧಾನದ ಪ್ರಕಾರ ಅಧಿಕಾರ ವಹಿಸಿಕೊಳ್ಳಲು ಜನವರಿ ೨೦ರವರೆಗೂ ಕಾಯಬೇಕಿತ್ತು. ಈ ನಡುವೆ ನೂತನ ಅಧ್ಯಕ್ಷರ ಮುಂದಿನ ವಾಸ ಸ್ಥಳವಾದ ಶ್ವೇತಭವನವನ್ನು ಪರಿಚಯ ಮಾಡಿಕೊಡುವ ಸಲುವಾಗಿ ಆಗಿನ ಹಾಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬುಷ್‌ಗೆ ಆಹ್ವಾನ ನೀಡಿದರು. ಅತ್ಯುತ್ಸಾಹದಿಂದ ಆಗಮಿಸಿದ ಬುಷ್‌ಗೆ ಶ್ವೇತಭವನದ ಒಂದೊಂದು ಕೊಠಡಿಗಳನ್ನೂ ತೋರಿಸುತ್ತಾ ಹೊರಟರು ಕ್ಲಿಂಟನ್. ಸುತ್ತಾಡಿ ಸುತ್ತಾಡಿ ಬಳಲಿದ ಬುಷ್‌ಗೆ ಮೂತ್ರವಿಸರ್ಜನೆ ಮಾಡಬೇಕೆನಿಸುತ್ತದೆ. ‘ನಿಮ್ಮ ಖಾಸಗಿ ಶೌಚಾಲಯವನ್ನು ಉಪಯೋಗಿಸಬಹುದೇ?’ ಎಂದು ಕ್ಲಿಂಟನ್‌ರನ್ನು ಕೇಳಿದರು. ಅದಕ್ಕೇನಂತೆ ಎಂದ ಕ್ಲಿಂಟನ್ ದಾರಿ ತೋರಿಸಿದರು. ಶೌಚಾಲಯದೊಳಕ್ಕೆ ಹೋದ ಬುಷ್‌ಗೆ ಆಶ್ಚರ್ಯವೋ ಆಶ್ಚರ್ಯ. ಅದರೊಳಗೆ ಚಿನ್ನದ ‘ಯೂರಿನಲ್’ (ಮೂತ್ರವಿಸರ್ಜನೆ ಮಾಡುವ ಸ್ಥಳ) ಇತ್ತು!  ಬುಷ್ ಎಷ್ಟು ಸಂತಸಗೊಂಡರೆಂದರೆ ಶೌಚಾಲಯದಿಂದ ಹೊರಬಂದ ಕೂಡಲೇ, ‘ನೀನೇ ಯೋಚನೆ ಮಾಡು, ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಶ್ವೇತಭವನಕ್ಕೆ ಬಂದ ಮೇಲೆ ಚಿನ್ನದ ಯೂರಿನಲ್ ಅನ್ನೂ ಮೂತ್ರ ಮಾಡಲು ಬಳಸಿಕೊಳ್ಳಬಹುದು. ಅಹಾ, ಎಂಥಾ ಸುಖ!’ ಎಂದು ಪತ್ನಿ ಲಾರಾ ಬುಷ್ ಕಿವಿಯಲ್ಲಿ ಪಿಸುಗುಟ್ಟಿದರು.

ಮಧ್ಯಾಹ್ನದ ಊಟವನ್ನು ಶ್ವೇತಭವನದಲ್ಲೇ ಆಯೋಜಿಸ ಲಾಗಿತ್ತು. ಕ್ಲಿಂಟನ್ ಪತ್ನಿ ಹಿಲರಿ ಹಾಗೂ ಬುಷ್ ಪತ್ನಿ ಲಾರಾ ಒಟ್ಟಿಗೆ ಕುಳಿತು ಊಟಮಾಡುತ್ತಿದ್ದರು. ‘ನಿನಗೆ ಗೊತ್ತಾ, ಅಧ್ಯಕ್ಷರ ಖಾಸಗಿ ಶೌಚಾಲಯದಲ್ಲಿ ಚಿನ್ನದ ಯೂರಿನಲ್  ಇರುವುದನ್ನು ಕಂಡು ಬುಷ್‌ಗೆ ಭಾರೀ ಖುಷಿಯಾಗಿದೆ’ ಎಂದು ಹಿಲರಿಗೆ ಹೇಳಿದರು ಲಾರಾ. ಕೂಡಲೇ ಹಿಲರಿಗೆ ಅರ್ಥವಾಯಿತು. ನಕ್ಕು ಸುಮ್ಮನಾದರು. ರಾತ್ರಿ ಮಲಗಲು ಅಣಿಯಾಗುತ್ತಿದ್ದ ಬಿಲ್ ಕ್ಲಿಂಟನ್‌ರನ್ನು ನೋಡುತ್ತಾ ಹಿಲರಿ ನಗಲಾರಂಭಿಸಿದರು. ಏಕೆ ಸುಮ್ಮನೆ ನಗುತ್ತಿದ್ದಾಳಲ್ಲಾ ಎಂದು ಆಶ್ಚರ್ಯಗೊಂಡ ಕ್ಲಿಂಟನ್ ಕಾರಣವೇನೆಂದು ಕೇಳಿದರು.
“ನಿನ್ನ ಸ್ಯಾಕ್ಸೊಫೋನ್‌ನಲ್ಲಿ ಮೂತ್ರ ಮಾಡಿದ್ದು ಯಾರು ಅಂತ ನನಗೆ ಗೊತ್ತು”ಎಂದರು ಹಿಲರಿ!

ಜಾರ್ಜ್ ಬುಷ್ ಬಗ್ಗೆ ಸುಖಾಸುಮ್ಮನೆ ಇಂತಹ ಜೋಕುಗಳು ಹುಟ್ಟಿದ್ದಲ್ಲ.

ಜೋಕು ಕಟ್ಟಲು ಅವರೇ ಅವಕಾಶ ಮಾಡಿಕೊಡುತ್ತಾರೆ, ಅವರ ಮುಖದ ಹಾವಭಾವಗಳಂತೂ ಕೆಲವೊಮ್ಮೆ ಥೇಟು ಮಂಗನಂತೆಯೇ ಇರುತ್ತವೆ. ಆ ಕಾರಣಕ್ಕಾಗಿಯೇ ಬುಷ್ ಅವರನ್ನು ‘ಮಂಕಿ ಬಾಯ್’ ಎನ್ನುತ್ತಾರೆ. ಅವರ ಕಿರಿಯ ಸಹೋದರ ಜೆಬ್ ಬುಷ್‌ಗೆ ಮಾಧ್ಯಮಗಳು ‘ಮಿನಿ ಮಂಕಿ’ ಎಂಬ ಹೆಸರಿಟ್ಟಿವೆ. ಇನ್ನು ಅವರ ಇಂಗ್ಲಿಷೋ, ಕೆಲವೊಮ್ಮೆ ಹೊಸ ಶಬ್ದಗಳನ್ನೇ ಸೃಷ್ಟಿಸಿ ಬಿಡುತ್ತಾರೆ. ಒಮ್ಮೆಯಂತೂ “They misunderestimated me” ಎನ್ನುವ ಮೂಲಕ ಇಂಗ್ಲಿಷನ್ನೇ ಕೊಲೆಗೈದಿದ್ದರು. ಇಂತಹ ಅನಾಹುತಗಳನ್ನು ಪಟ್ಟಿಮಾಡಿ ಇಂಟರ್‌ನೆಟ್‌ನಲ್ಲಿ “ಬುಷ್‌ಯಿಸಂ” ಎಂಬ ಪದಕೋಶವನ್ನೇ ಆರಂಭಿಸಲಾಗಿದೆ. ಪದಗಳಷ್ಟೇ ಅಲ್ಲ, ಬಹಳಷ್ಟು ಸಂದರ್ಭದಲ್ಲಿ ವಾಕ್ಯದ ಅರ್ಥ, ಅಂದವನ್ನೂ ಕೆಡಿಸಿ ಹಾಕುತ್ತಾರೆ.
1-&  I know how hard it is for you to put food on your family!
2-  I know the human being and fish can coexist peacefully.
3- There’s an old saying in Tennessee — I know it’s in Texas, probably in Tennessee — that says, fool me once, shame on — shame on you. Fool me — you can’t get fooled again!

ಇವು ಕೆಲವು ಝಲಕ್‌ಗಳಷ್ಟೇ. ಇಂತಹ ಅಗಣಿತ ಅನಾಹುತಗಳನ್ನು ಪಟ್ಟಿಮಾಡಬಹುದು.
ಒಂದು ಸಾರಿ ರಕ್ಷಣಾ ಸಚಿವ ಡೊನಾಲ್ಡ್ ರಮ್ಸ್‌ಫೆಲ್ಡ್ ಅಧ್ಯಕ್ಷ ಬುಷ್‌ಗೆ ದೈನಂದಿನ ಘಟನೆಗಳ ವರದಿಯನ್ನೊಪ್ಪಿಸು ತ್ತಿದ್ದರು.
ರಮ್ಸ್‌ಫೆಲ್ಡ್: “ನಿನ್ನೆ ಮೂರು ‘ಬ್ರೆಝಿಲಿಯನ್’ ಸೈನಿಕರು ಹತರಾಗಿದ್ದಾರೆ”.
ಬುಷ್: ಅಯ್ಯೋ, ‘That’s terrible!’
ಹಾಗಂತ ಹೇಳಿದ ಬುಷ್ ಅವರ ಮುಖಭಾವವನ್ನು ಕಂಡು ಶ್ವೇತಭವನದ ಅಧಿಕಾರಿಗಳು ದಿಗ್ಬ್ರಮೆಗೊಳಗಾದರು. ಇತ್ತ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದ ಬುಷ್ ನಿಧಾನವಾಗಿ ಸಾವರಿಸಿಕೊಂಡು ಕೇಳಿದರು-“ಒಂದು ‘ಬ್ರೆಝಿಲಿಯನ್’ ಅಂದರೆ ಎಷ್ಟು?”!

ಮಿಲಿಯನ್, ಬಿಲಿಯನ್, ಟ್ರಿಲಿಯನ್‌ನಂತೆ ‘ಬ್ರೆಝಿಲಿ ಯನ್’ ಎಂಬುದೂ ಕೂಡ ಇಂತಿಷ್ಟು ಸಂಖ್ಯೆ ಎಂದು ಭಾವಿಸಿದ್ದರು ಬುಷ್!!

ಇಷ್ಟೇ ಅಲ್ಲ, ಜಾರ್ಜ್ ಬುಷ್ ಅವರ ಜನಪ್ರಿಯತೆಯ ಬಗ್ಗೆಯೂ ಜೋಕುಗಳಿವೆ.

ಜನ ತಮ್ಮ ಆಡಳಿತದ ಬಗ್ಗೆ ಏನನುತ್ತಾರೆ ಎಂಬುದನ್ನು ಖುದ್ದಾಗಿ ಕೇಳಿಸಿಕೊಳ್ಳಬೇಕೆಂದು ಬುಷ್‌ಗನಿಸುತ್ತದೆ. ಅಂಗರಕ್ಷಕರನ್ನು ಬಿಟ್ಟು ವೇಷ ಮರೆಸಿಕೊಂಡು ಪಟ್ಟಣಕ್ಕೆ ಹೋದರು. ಅಲ್ಲೊಂದು ಬಾರ್ ಇತ್ತು. ಒಳ ನುಗ್ಗಿದ  ಬುಷ್, ಮದ್ಯವನ್ನು ಸುರಿದು ಕೊಡುತ್ತಿದ್ದ ವಯೋವೃದ್ಧ ಬಾರ್‌ಮ್ಯಾನ್ ಬಳಿಗೆ ಬಂದು ಮಾತು ಆರಂಭಿಸಿದರು.
ಬುಷ್: ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಬಗ್ಗೆ ನಿಮಗೇನನ್ನಿಸುತ್ತದೆ?
ಬಾರ್‌ಮ್ಯಾನ್: ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನಿನಗೆ ತಿಳಿದುಕೊಳ್ಳಲೇಬೇಕು ಎಂದನಿಸುತ್ತಿದೆಯೇ?
ಬುಷ್: ಹೌದೌದು.
ಆದರೆ, ಆ ಕಡೆ, ಈ ಕಡೆ ನೋಡಿ ಜನರು ತುಂಬಿ ತುಳುಕುತ್ತಿರುವುದನ್ನು ಖಾತ್ರಿಪಡಿಸಿಕೊಂಡ ಬಾರ್ ಮ್ಯಾನ್ ಅಭಿಪ್ರಾಯ ಹೇಳಲು ಹಿಂಜರಿದ. ‘ಇಲ್ಲಿ ಹೇಳುವುದ ಕ್ಕಾಗುವುದಿಲ್ಲ. ಯಾರಾದರೂ ಕದ್ದು ಕೇಳಿಸಿಕೊಳ್ಳಬಹುದು. ನನಗೆ ಈ ಕೆಲಸ ತೀರಾ ಅನಿವಾರ್ಯವಾಗಿದೆ. ನಿವೃತ್ತಿ ವೇತನವೂ ಬರುತ್ತಿಲ್ಲ, ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಾಳೆ. ಹಾಗಿರುವಾಗ ನಾನು ನಿಜ ಹೇಳಿ ಕೆಲಸ ಕಳೆದುಕೊಂಡರೆ ನಮ್ಮ ಅಧ್ಯಕ್ಷರೇನೂ ನನ್ನ ಸಹಾಯಕ್ಕೆ ಬರುವುದಿಲ್ಲ. ಆದರೆ ನಿನಗೆ ನನ್ನ ಅಭಿಪ್ರಾಯವನ್ನು ತಿಳಿದುಕೊಳ್ಳಲೇಬೇಕು ಎಂಬ ಇಚ್ಛೆಯಿದ್ದರೆ ರಾತ್ರಿ ೨ ಗಂಟೆಗೆ ಕೆಲಸ ಮುಗಿಯುತ್ತದೆ. ರಸ್ತೆಯ ಕೊನೆಯಲ್ಲಿ ನಿಂತಿರು’ ಎಂದ ಬಾರ್‌ಮ್ಯಾನ್. ಸ್ವಲ್ವ ಹೊತ್ತು ಮಾತು ಮುಂದುವರಿಸಿದ ಬುಷ್‌ಗೆ ಆ ಪಟ್ಟಣದ ಅರ್ಧಕ್ಕರ್ಧ ಜನ ನಿರುದ್ಯೋಗಿಗಳಾಗಿದ್ದಾರೆ ಎಂದು ತಿಳಿದು ಬರುತ್ತದೆ. ಒಂದೆರಡು ಪೆಗ್ ಹಾಕಿದ ಬುಷ್, ರಾತ್ರಿ ೨ ಗಂಟೆಯಾದರೂ ರಸ್ತೆಯ ಕೊನೆಯಲ್ಲಿ ಕಾದುಕುಳಿತಿದ್ದರು. ಅಷ್ಟರಲ್ಲಿ ಬಾರ್‌ಮ್ಯಾನ್ ಬರುತ್ತಿರುವುದು ಕಂಡಿತು.
ಬಾರ್‌ಮ್ಯಾನ್: ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ಬಗ್ಗೆ ತಿಳಿದುಕೊಳ್ಳಬೇಕೆಂದು ಈಗಲೂ ಅನಿಸುತ್ತಿದೆಯೇ?
ಬುಷ್: ಖಂಡಿತ ಹೌದು.
ಮತ್ತೆ ಆ ಕಡೆ, ಈ ಕಡೆ ನೋಡಿದ ಬಾರ್‌ಮ್ಯಾನ್, ‘ನನ್ನ ಅಭಿಪ್ರಾಯವನ್ನು ಯಾರಾದರೂ ಕದ್ದು ಆಲಿಸುವುದು ನನಗಿಷ್ಟವಿಲ್ಲ. ಇನ್ನೂ ಸ್ವಲ್ಪ ದೂರ ಹೋಗೋಣ’ ಎಂದ. ಬುಷ್‌ಗೆ ಚಿಂತೆ ಕಾಡತೊಡಗಿತು. ತಮ್ಮ ಸರಕಾರದ ಕೆಟ್ಟ ಆಡಳಿತ, ನಿರುದ್ಯೋಗ ಸಮಸ್ಯೆ, ಶೈಕ್ಷಣಿಕ ವೆಚ್ಚ ಕಡಿತ ಮುಂತಾದವುಗಳಿಂದಾಗಿ ಜನ ಬೇಸತ್ತಿದ್ದಾರೆ ಎಂಬುದನ್ನು ಮೊದಲೇ ತಿಳಿದಿದ್ದ ಬುಷ್‌ಗೆ ಆತಂಕ ಹೆಚ್ಚಾಗತೊಡಗಿತು. ಆದರೂ ಅಭಿಪ್ರಾಯ ತಿಳಿದುಕೊಳ್ಳಬೇಕೆಂಬ ಉತ್ಸಾಹದಿಂದ ಬಾರ್‌ಮ್ಯಾನ್ ಜತೆ ಹೆಜ್ಜೆಹಾಕಿದರು. ಮುಂದೆ ಮುಂದೆ ನಡೆದುಕೊಂಡು ಬಂದ ಇಬ್ಬರೂ ಒಂದು ಪೊದೆಯ ಬಳಿಗೆ ಬಂದರು. ಮರಗಳ ಎಡೆಯಿಂದ ಅತ್ತಿಂದಿತ್ತ ದೃಷ್ಟಿ ಹಾಯಿಸಿದ ಬಾರ್‌ಮ್ಯಾನ್ ಮತ್ತೆ ಕೇಳಿದ, ‘ನಿಜಕ್ಕೂ ನನ್ನ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕಾ?’
ಬುಷ್: ಹೌದು.
ನಾನಿಲ್ಲಿ ಏನನ್ನೂ ಹೇಳುವುದಕ್ಕಾಗುವುದಿಲ್ಲ. ಯಾರು ಎಲ್ಲಿ ಕದ್ದು ಕೇಳಿಸಿಕೊಳ್ಳುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಅಗೋ, ಅಲ್ಲಿ ಕಾಣುತ್ತಿರುವ ಬೆಟ್ಟದ ಮೇಲಕ್ಕೆ ಹೋಗೋಣ ಎಂದ. ಬುಷ್‌ಗೆ ಪೀಕಲಾಟ ಆರಂಭವಾಯಿತು. ಆದರೂ ಬಾರ್‌ಮ್ಯಾನ್ ಜತೆ ಮತ್ತೆ ಹೆಜ್ಜೆಹಾಕಿದರು. ಇಬ್ಬರೂ ಬೆಟ್ಟದ ತುತ್ತ ತುದಿಯನ್ನು ತಲುಪಿದರು. ಅಲ್ಲಿಂದ ನೂರಾರು ಮೈಲು ದೂರ ನೋಡಿದರೂ ಒಂದೇ ಒಂದು ನರಪ್ರಾಣಿಯೂ ಕಾಣುವಂತಿರಲಿಲ್ಲ. ಹಾಗಿದ್ದರೂ ಬಾರ್‌ಮ್ಯಾನ್ ಮತ್ತೆ ಕೇಳಿದ-‘ಈಗಲೂ ಬುಷ್ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕಾ?
ಬುಷ್: ಹೌದೂ….
ಹಾಗಾದರೆ ಹತ್ತಿರ ಬಾ ಎಂದು ಕರೆದ ಬಾರ್‌ಮ್ಯಾನ್, “ನಿನಗೆ ಗೊತ್ತಾ…ಬುಷ್ ಅಷ್ಟೇನೂ ಕೆಟ್ಟ ವ್ಯಕ್ತಿಯಲ್ಲ” ಎಂದು ಕಿವಿಯಲ್ಲಿ ಉಸುರಿದ!!
ಆತನ ಮಾತಿನ ಅರ್ಥವಿಷ್ಟೇ- ಒಂದು ವೇಳೆ ‘ಬುಷ್ ಅಷ್ಟೇನೂ ಕೆಟ್ಟವರಲ್ಲ” ಎಂಬ ಇದೇ ಮಾತನ್ನು ಯಾರಿಗಾದರೂ ಕೇಳಿಸುವಂತೆ ಹೇಳಿದ್ದರೆ ಒಂದೋ ಜನರೇ ಬಾರ್‌ಮ್ಯಾನ್‌ನನ್ನು ತದಕಿ ಬಿಡುತ್ತಿದ್ದರು, ಇಲ್ಲವೇ ಆತನ ಕೆಲಸಕ್ಕೆ ಕುತ್ತು ಬರುತ್ತಿತ್ತು. ಏಕೆಂದರೆ ಜಾರ್ಜ್ ಬುಷ್ ಬಗ್ಗೆ ಅಷ್ಟೊಂದು ಆಕ್ರೋಶ ಜನರಲ್ಲಿತ್ತು.

ಒಂದು ಒಳ್ಳೆಯ ಜೋಕನ್ನು ಸೃಷ್ಟಿಸುವುದು, ಜೋಕ್ ಕಟ್ ಮಾಡುವುದು ಎಷ್ಟು ಮುಖ್ಯವೋ, ಜೋಕಿಗೆ ಒಂದು ಒಳ್ಳೆಯ ವಸ್ತು ಸಿಗುವುದು ಅದಕ್ಕಿಂತ ಮುಖ್ಯ. ಅಷ್ಟಕ್ಕೂ ಜೋಕಿಗೆ ವಸ್ತುವೇ ಇಲ್ಲವೆಂದರೆ ಹಾಸ್ಯ ಹುಟ್ಟುವುದಾದರೂ ಹೇಗೆ? ಕಳೆದ ಎಂಟು ವರ್ಷಗಳಲ್ಲಿ ಬುಷ್ ಇಂತಹ ಸಾಕಷ್ಟು ಜೋಕುಗಳಿಗೆ ಸ್ವತಃ ವಸ್ತುವಾಗಿದ್ದಾರೆ ಹಾಗೂ ಜೋಕುಗಳಿಗೆ ಸಾಕಷ್ಟು ವಸ್ತುಗಳನ್ನೂ ನೀಡಿದ್ದಾರೆ. ತಲೆ ಸುತ್ತು ಬಂದು ಬಿದ್ದು ಜಜ್ಜಿದ ಸೇಬಿನಂತೆ ಮುಖ ಮಾಡಿಕೊಂಡಿದ್ದರಿಂದ ಹಿಡಿದು, ಬ್ರಿಟನ್ ರಾಣಿಗೆ ಕಣ್ಣು ಹೊಡೆದು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದ ಅವರ ಮಂಗನಾಟಗಳು ಭಾರತೀಯರು, ಆಫ್ರಿಕನ್ನರು ಮಾತ್ರವಲ್ಲ, ಜಗತ್ತಿನ ಎಲ್ಲ ದೇಶ, ಭಾಷೆಗಳ ಜನರಿಗೂ ಮನರಂಜನೆ ನೀಡಿವೆ. ಇಂತಹ ಜಾರ್ಜ್ ಬುಷ್  ಅವರ ಆಡಳಿತ ಇನ್ನೆರಡು ದಿನಗಳಲ್ಲಿ ಕೊನೆಗೊಳ್ಳಲಿದೆ. ಜನವರಿ ಇಪ್ಪತ್ತರಂದು ಬರಾಕ್ ಒಬಾಮ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಬಗ್ಗೆ ಜಗತ್ತಿನಾದ್ಯಂತ ಸಾಕಷ್ಟು ಭರವಸೆ ವ್ಯಕ್ತವಾಗಿದೆ. ಒಂದೇ ಒಂದು ನಿರ್ಧಾರ, ಕ್ರಮ ಕೈಗೊಳ್ಳುವ ಮೊದಲೇ ಒಬಾಮಾಗೆ ಮಾಧ್ಯಮಗಳು ‘ಪಾಸಿಟಿವ್ ರೇಟಿಂಗ್’ ನೀಡುತ್ತಿವೆ. ಆದರೆ ಬುಷ್ ಅವರನ್ನು ಈ ಪರಿ ತೆಗಳಲು ಕಾರಣವಾದರೂ ಏನು?

ಜೋಕು ಒತ್ತಟ್ಟಿಗಿರಲಿ, ೮ ವರ್ಷಗಳ ಅಧ್ಯಕ್ಷಾವಧಿಯಲ್ಲಿ ಜಾರ್ಜ್ ಬುಷ್ ಜಗತ್ತಿಗೆ ಯಾವ ಕೊಡುಗೆಯನ್ನೂ ನೀಡಲಿ ಲ್ಲವೆ? ಮುಸ್ಲಿಂ ರಾಷ್ಟ್ರಗಳು ದ್ವೇಷಿಸುತ್ತವೆ ಎಂಬ ಕಾರಣಕ್ಕೆ ನಾವೂ ಬುಷ್ ಅವರನ್ನು ಟೀಕೆ ಮಾಡಬೇಕೆ? ಬುಷ್ ಋಣಭಾರ ಭಾರತಕ್ಕಿದೆಯೇ?

Wait, more will unfold…

7 Responses to “ಭಾರತೀಯರು ಮಾತ್ರವಲ್ಲ, ಜಗತ್ತೇ ನಿಮ್ಮನ್ನು ‘ಲವ್’ ಮಾಡುತ್ತೆ!”

 1. ಹಲೋ….ಪ್ರತಾಪ್
  ಲೇಖನ ಓದಿ ನಗು ಬಂತು……..ಬುಷ್ ನ್ನು ಪಾಪ ಅನಿಸಿತು……..ಆದರೆ ನಿಮ್ಮ ಖಾರವಾದ ಲೇಖನಗಳೇ ಹೆಚ್ಚು ಇಷ್ಟವಾಗುವುದು. ಅದುವೇ ಹೆಚ್ಚು ಪರಿಣಾಮಕಾರಿ.
  ಸಾಪ್ತಾಹಿಕ ವಿಜಯದಲ್ಲಿ ಬಂದ ನಿಮ್ಮ ಲೇಖನ ಓದಲಾಗಲಿಲ್ಲ…….ಪೇಪರ್ ಸಿಗಲಿಲ್ಲ. ಅದನ್ನೂ ನೀವಿಲ್ಲಿ ಹಾಕಿದರೆ ಒಳ್ಳೆಯದಿತ್ತು. ಇಲ್ಲವಾದರೆ ಇನ್ಯಾರ ಬಳಿಯಿಂದಲಾದರೂ ಸಂಗ್ರಹಿಸಬೇಕಷ್ಟೆ.

 2. ravi says:

  Nice article! I came to know some new jokes about Bush!

 3. bani says:

  olleya lekhana kottiddeeri simha….. kaytha irtheve nim lekhanakke.

 4. ವೆಂಕಟೇಶ್, ಅಮೇರಿಕಾ. says:

  ಬುಷ್ ಅವರ ಬಗ್ಗೆ ಹಲವು ಜೋಕ್ ಗಳನ್ನೂ ತಿಳಿಸಿ ನಮ್ಮ ಮುಖದಲ್ಲಿ ನಗೆ ಮೂಡಿಸಿದಿರಿ. ಸರಳವಾಗಿ, ಸುಂದರವಾಗಿ ಲೇಖನ ಮೂಡಿಬಂದಿದೆ, ಧನ್ಯವಾದಗಳು, ಪ್ರತಾಪ್ ಜಿ.

  ಇಂಟರ್ನೆಟ್ ನಲ್ಲಿಯೂ ಈ ಬುಷ್ ಬಗ್ಗೆ ಹಲವು ವ್ಯಂಗ ಚಿತ್ರಗಳು, ತಮಾಷೆ/ವಿಡಿಯೋ ಗಳು ಸಿಗುತ್ತವೆ. ಬುಷ್ ತಮ್ಮನ್ನು ತಾವೇ ಹಲವು ಬಾರಿ ಹಾಸ್ಯ ಮಾಡಿಕೊಳ್ಳುತ್ತಿದ್ದರು.

  ಇವತ್ತು (ಜನವರಿ ೨೦) ಒಬಾಮ ಅದ್ಯಕ್ಷಗಿರಿ ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಬುಷ್ ಏಕಾಂಗಿಯಾಗಿ ಕಾಣಿಸುತ್ತಿದ್ದರು. ಅದನ್ನು ಲೈವ್ ನೋಡಿದ ನನಗೆ ಅವರ ಮುಖ ನೋಡಿ ಪಾಪ ಅನ್ನಿಸಿತು.
  ಆದರೆ ಮತಾಂತರಕ್ಕೆ ಪ್ರಚೋದನೆ ಮಾಡಿ, ಭಾರತದಲ್ಲಿ ಹೊಸ ಮಿಷನರಿಗಳನ್ನು ಸೃಷ್ಟಿ ಮಾಡಿದ್ದು ನೆನೆಸಿ ಕೊಂಡಾಗ ಸಿಟ್ಟು ಬಂತು!

 5. Siddu says:

  Hello Pratap,
  This guy is a joke and in my opinion you have wasted your precious time and even more precious talent of writing thought provoking columns that you are usually good at by writing about a President who was slightly popular than Richard Nixon, the worst and most disgraced of all the American Presidents at the time of leaving the office.

  Please don’t waste your time and talent, we have better things to think and read about.

  Siddu
  NY,USA.

 6. ಯೋಗೇಶ್ ಗೌಡ ಆರ್ says:

  ಶೀರ್ಷಿಕೆ ನೋಡಿ ಗಾಬರಿಯಾದರು ಲೇಖನ ಓದಬೇಕಾದರೆ ನಕ್ಕಿದ್ದಂತು ನಿಜ. ಕೈನಲ್ಲಿ ಖಡ್ಗ ಇಟ್ಟುಕೊಂಡು ಬಾಯಲ್ಲಿ ಬೆಂಕಿ ಉಗುಳೋ ರೀತಿ ಬರೆಯೊ ನಿಮ್ಮ Style ಬಿಟ್ಟು ಹಾಸ್ಯವಾಗಿ ಬರೆದು, ಜನರನ್ನ ನಗುಸೋಕು ಬರುತ್ತೆ ಅನ್ನೋದನ್ನ ನಿಮ್ಮ ವಿರೋಧಿಗಳಿಗೆ ತೋರಿಸಿದ್ದಿರ. ಇನ್ನು ನಿಮ್ಮ ಕೊನೆ ಪ್ರಶ್ನೆಗಳಿಗೆ “ಇಲ್ಲ” ಅನ್ನೊ ಉತ್ತರನೆ ಸರಿ.ಬುಷ್ ಏನೇ ಮಾಡಿದ್ದರು ಅದು ಅಮೆರಿಕದ ಹಿತಾಸಕ್ತಿ ಇಂದ ಮಾತ್ರ. ಭಾರತಕ್ಕೆ ಏನೇ ಮಾಡಿದ್ದರು ನಮಗಿಂತ ಅವರಿಗೆ ಹೆಚ್ಚು ಲಾಭವಾಗಿರೊದು.

 7. Kumar says:

  superb….