Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಫಾರ್ಮುಲಾ ಒನ್, ಇವರು ದ್ರೋಣಾರ್ಜುನ್!

ಫಾರ್ಮುಲಾ ಒನ್, ಇವರು ದ್ರೋಣಾರ್ಜುನ್!

Brawn GP

ಇದ್ಯಾವುದಪ್ಪಾ ‘ಬ್ರಾನ್ ಜಿಪಿ’? 2009ನೇ ಸಾಲಿನ ಫಾರ್ಮುಲಾ-1 ತಂಡಗಳ ಪಟ್ಟಿ ಬಿಡುಗಡೆಯಾದಾಗ ಹೀಗೊಂದು ಆಶ್ಚರ್ಯ ಕಾದಿತ್ತು. ಹೋಂಡಾ ಕಂಪನಿ ಫಾರ್ಮುಲಾ ಒನ್‌ಗೆ ವಿದಾಯ ಹೇಳಿತ್ತು. ಅದರ ಸ್ಥಾನದಲ್ಲಿ ‘ಬ್ರಾನ್ ಜಿಪಿ’ ಎಂಬ ಹೊಸ ತಂಡದ ಹೆಸರಿತ್ತು. ಅದರ ಇಬ್ಬರು ಡ್ರೈವರ್‌ಗಳು-ಜೆನ್‌ಸನ್ ಬಟನ್ ಹಾಗೂ ರೂಬೆನ್ಸ್ ಬ್ಯಾರಿಕೆಲೋ. 2000ನೇ ಸಾಲಿನಲ್ಲಿ ಫಾರ್ಮುಲಾ ಒನ್‌ಗೆ ಕಾಲಿಟ್ಟಾಗ ಜೆನ್‌ಸನ್ ಬಟನ್ ಭಾರೀ ಭರವಸೆ ಮೂಡಿಸಿದ್ದರಾದರೂ ತದನಂತರ ಎಲ್ಲೋ ಕಳೆದುಹೋಗಿಬಿಟ್ಟಿದ್ದರು. ಅದರಲ್ಲೂ ಸ್ವದೇಶದವರೇ ಆದ ಲೂಯಿಸ್ ಹ್ಯಾಮಿಲ್ಟನ್ 2008ನೇ ಸಾಲಿನ ಫಾರ್ಮುಲಾ-1 ಚಾಂಪಿಯನ್ ಆದ ನಂತರವಂತೂ ಬ್ರಿಟಿಷ್ ಮಾಧ್ಯಮಗಳೇ ಬಟನ್‌ರನ್ನು ಮರೆತುಬಿಟ್ಟಿದ್ದವು. ಇತ್ತ ರೂಬೆನ್ಸ್ ಬ್ಯಾರಿಕೆಲೋ ‘ಫೆರಾರಿ’ಯಲ್ಲಿ ಇರುವವರೆಗೂ ಶೂಮಾಕರ್ ನೆರಳಿನಲ್ಲೇ ಇದ್ದರು, ಫೆರಾರಿ ಬಿಟ್ಟ ನಂತರ ವಿಳಾಸವೇ ಇಲ್ಲದ ವ್ಯಕ್ತಿಯಾಗಿ ಬಿಟ್ಟಿದ್ದರು. ಇಂತಹ ಇಬ್ಬರು ಡ್ರೈವರ್‌ಗಳನ್ನಿಟ್ಟುಕೊಂಡಿದ್ದ ‘ಬ್ರಾನ್ ಜಿಪಿ’ ಬಗ್ಗೆ ಯಾರು, ಯಾವ ಭರವಸೆ ಇಟ್ಟುಕೊಳ್ಳಲು ಸಾಧ್ಯವಿತ್ತು ಹೇಳಿ? ಅದರಲ್ಲೂ ಹೋಂಡಾದಂತಹ ವಿಶ್ವವಿಖ್ಯಾತ ಅಟೊಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೇ ಹಿಂದೆ ಸರಿದು ಬಿಸಾಡಿದ್ದ ಕಾರಿನ ಬಗ್ಗೆ ಭರವಸೆ ಇಟ್ಟುಕೊಳ್ಳುವುದಕ್ಕಾದರೂ ಹೇಗೆ ಸಾಧ್ಯವಿತ್ತು?
2009, ಮಾರ್ಚ್ 29.

ವರ್ಷದ ಮೊದಲ ಗ್ರ್ಯಾಂಡ್ ಪ್ರೀ ಆಸ್ಟ್ರೇಲಿಯಾದಲ್ಲಿ ಏರ್ಪಾಡಾ ಗಿತ್ತು. ಈ ಬಾರಿ ಚಾಂಪಿಯನ್ ಆಗುವುದು ಫೆರಾರಿಯೋ, ಮೆಕ್‌ಲಾರೆನ್ನೋ, ರೆಡ್‌ಬುಲ್ಲೋ ಎಂದು ಲೆಕ್ಕಾಚಾರದಲ್ಲಿ ತೊಡಗಿರುವಾಗಲೇ ಮೊದಲ ಗ್ರ್ಯಾಂಡ್ ಪ್ರೀ ಮುಗಿಯಿತು. ಎಲ್ಲರಿಗೂ ದಿಗ್ಭ್ರಮೆ! 1ನೇ ಸ್ಥಾನದಲ್ಲಿ ಜೆನ್‌ಸನ್ ಬಟನ್ ಹಾಗೂ ಬ್ಯಾರಿಕೆಲೋ 2ನೇ ಸ್ಥಾನದಲ್ಲಿ!! ಈ ಫಲಿತಾಂಶವನ್ನು ಒಪ್ಪಿಕೊಳ್ಳಲು ಫಾರ್ಮುಲಾ ಒನ್ ಅನ್ನು ನಿನ್ನೆ-ಮೊನ್ನೆ ನೋಡಲು ಆರಂಭಿಸಿದವರಿಗೂ ಕಷ್ಟವಾಗತೊಡಗಿತು. ಖಂಡಿತ ಇದೊಂದು ಊhಛಿ ಎಂದೇ ಎಲ್ಲರೂ ತಮ್ಮನ್ನು ಸಮಾಧಾನಪಡಿಸಿಕೊಂಡರು.

ಆದರೆ…

Fairy Tale ಒಂದೇ ರೇಸ್‌ಗೆ ಮುಗಿದು ಹೋಗಲಿಲ್ಲ. ಬ್ರಾನ್‌ನ ಭ್ರಾಮಕ ಕಥೆ ಮುಂದುವರಿಯಿತು. ಮುಂದಿನ ಮಲೇಷಿಯಾ ಗ್ರ್ಯಾಂಡ್ ಪ್ರೀನಲ್ಲೂ ಬಟನ್ ಮೊದಲಿಗರಾಗಿ ಗುರಿ ಮುಟ್ಟಿದರು. ಮೂರನೇ ರೇಸ್ ಆದ ಚೈನೀಸ್ ಗ್ರ್ಯಾಂಡ್ ಪ್ರೀನಲ್ಲಿ ‘ರೆಡ್‌ಬುಲ್’ ತಂಡದ ಸೆಬಾಸ್ಟಿಯನ್ ವೆಟೆಲ್ ಗೆದ್ದರಾದರೂ ತದನಂತರ ನಡೆದ ಬಹ್ರೇನ್, ಸ್ಪ್ಯಾನಿಶ್, ಮೊನಾಕ್ಕೊ, ಟರ್ಕಿಸ್ ಗ್ರ್ಯಾಂಡ್ ಪ್ರೀನಲ್ಲೂ ಬಟನ್ ಮೊದಲ ಸ್ಥಾನ ಗಳಿಸಿದರು. ಹೀಗೆ ಮೊದಲ 7 ರೇಸ್‌ಗಳಲ್ಲಿ ಬ್ರಾನ್ ಹಾಗೂ ಬಟನ್ 6ನ್ನು ಗೆದ್ದುಕೊಂಡರು! ಜೆನ್‌ಸನ್ ಬಟನ್ 2009ನೇ ಸಾಲಿನ ಚಾಂಪಿಯನ್ ಆಗುವುದು ಖಚಿತ, ಬ್ರಾನ್‌ಗೆ ಕನ್‌ಸ್ಟ್ರಕ್ಟರ್‍ಸ್ (ತಯಾರಕರ) ಚಾಂಪಿಯನ್‌ಶಿಪ್ ಸಿಗುವುದೂ ಖಂಡಿತ ಎಂಬ ವಾತಾವರಣ ಸೃಷ್ಟಿಯಾಯಿತು. ಇದನ್ನು ನೋಡಿ ಫೆರಾರಿ, ಮೆಕ್‌ಲಾರೆನ್, ರೆನಾಲ್ಟ್, ರೆಡ್‌ಬುಲ್ ತಂಡಗಳು ಸಾವರಿಸಿಕೊಳ್ಳುವುದಕ್ಕೂ ಹೆಣಗತೊಡಗಿದರೆ, ಫಾರ್ಮುಲಾ ಒನ್‌ನ ಸಾಂಪ್ರಾದಾಯಿಕ ವೀಕ್ಷಕರು, ಕಟ್ಟಾ ಅಭಿಮಾನಿಗಳು ದಿಗ್ಭ್ರಮೆಗೊಳಗಾಗತೊಡಗಿದರು. ಏನಾಗುತ್ತಿದೆ ಎಂಬುದೇ ತಿಳಿಯ ದಾಗತೊಡಗಿತು. ಫಾರ್ಮುಲಾ ಒನ್ ಟ್ರ್ಯಾಕ್ ಮೇಲೆ ಬಟನ್ ಹಾಗೂ ಬ್ಯಾರಿಕೆಲೋ ಬ್ರಾನ್ ಕಾರುಗಳನ್ನು ಚಾಲನೆ ಮಾಡಲು ಆರಂಭಿಸಿದರೆ ನಾವೇನು 1968ರಲ್ಲಿ ಬಿಡುಗಡೆಯಾಗಿದ್ದ ‘The Love Bug’ ಹಾಗೂ 2005ರಲ್ಲಿ ಬಿಡುಗಡೆಯಾದ ‘Herbie Fully Loaded’ ಚಿತ್ರಗಳನ್ನು ನೋಡುತ್ತಿದ್ದೇವೆಯೋ ಎಂಬ ಗೊಂದಲ ಕಾಡುತ್ತಿತ್ತು. ಅವೇನು ಮ್ಯಾಜಿಕ್ ಕಾರುಗಳೋ ಎಂಬ ಅನುಮಾನ ಆರಂಭವಾಗಿತ್ತು. ರೆನಾಲ್ಟ್ ಟೀಮ್‌ನ ಮುಖ್ಯಸ್ಥ ಫ್ಲಾವಿಯೋ ಬ್ರಿಯಟೋರ್ ಎಷ್ಟು ಕುಪಿತಗೊಂಡರೆಂದರೆ, “It would be a tragedy if the world championship is won by a car driven by somebody who’s slow as a roadside milepost, or a retired crock” ಎಂದು ಜೆನ್‌ಸನ್ ಬಟನ್ ಅವರ ಚಾಲನಾ ಸಾಮರ್ಥ್ಯದ ಮೇಲೇ ಹರಿಹಾಯ್ದರು. ಅಕ್ಟೋಬರ್‌ನಲ್ಲಿ ಎಲ್ಲ ಗ್ರ್ಯಾಂಡ್ ಪ್ರೀಗಳೂ ಮುಗಿದಾಗ ಜೆನ್‌ಸನ್ ಬಟನ್ ಮೊದಲ, ಬ್ಯಾರಿಕೆಲೋ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಬ್ರಾನ್‌ಗೆ ಡ್ರೈವರ್‍ಸ್ ಚಾಂಪಿಯನ್‌ಶಿಪ್ ಜತೆ ಕನ್‌ಸ್ಟ್ರಕ್ಟರ್‍ಸ್ ಚಾಂಪಿಯನ್‌ಶಿಪ್ ಕೂಡ ದಕ್ಕಿತ್ತು!

ಇಂಥದ್ದೊಂದು ಸಾಧನೆ ಸಾಧ್ಯವಾಗಿದ್ದಾದರೂ ಹೇಗೆ?

ಆ ಯಶಸ್ಸಿನ ನಿಜವಾದ ಹೀರೋ ಜೆನ್‌ಸನ್ ಬಟನ್ ಅಲ್ಲ, ರಾಸ್ ಬ್ರಾನ್! 2009ನೇ ಸಾಲಿನಲ್ಲಿ ಸೃಷ್ಟಿಯಾಗಿದ್ದು ಭ್ರಮೆಯೂ ಅಲ್ಲ, ಭ್ರಾಮಕ ಸನ್ನಿವೇಶವೂ ಆಗಿರಲಿಲ್ಲ. ರಾಸ್ ಬ್ರಾನ್ ಅಂತಹ ಕಾರನ್ನು ಸಿದ್ಧಪಡಿಸಿದ್ದರು. ಅವರೇನು ಸಾಮಾನ್ಯ ವ್ಯಕ್ತಿಯಲ್ಲ. ಜರ್ಮನಿಯ ಮೈಕೆಲ್ ಶೂಮಾಕರ್ 7 ಬಾರಿ ವಿಶ್ವಚಾಂಪಿಯನ್ ಆಗಿದ್ದರ ಹಿಂದೆಯೂ ರಾಸ್ ಬ್ರಾನ್ ಇದ್ದರು! ಅವರಿಬ್ಬರದ್ದೂ ದ್ರೋಣ ಹಾಗೂ ಅರ್ಜುನನ ಸಂಬಂಧ. ರಾಸ್ ಬ್ರಾನ್ ಬ್ರಿಟನ್‌ನವರು. 1971ರಲ್ಲಿ 16 ವರ್ಷದ ಬ್ರಾನ್ ಬ್ರಿಟನ್ ಅಣುಶಕ್ತಿ ಪ್ರಾಧಿಕಾರದಲ್ಲಿ ಟ್ರೈನಿ ಎಂಜಿನಿಯರ್ ಆಗಿ ಸೇರಿಕೊಂಡಿದ್ದರು. ಆರು ವರ್ಷ ಅಲ್ಲಿಯೇ ಕೆಲಸ ಮಾಡಿದರು. ಆದರೆ ಮನಸ್ಸೇಕೋ ಕ್ರೀಡೆಯತ್ತ ಹೊರಳಿತು. 1977ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ  ‘ವಿಲಿಯಮ್ಸ್’ ತಂಡವನ್ನು ಸೇರಿದರು. ತಮ್ಮ ಜಾಣ್ಮೆಯಿಂದ ಸತತ ಎರಡು ವರ್ಷ ಕನ್‌ಸ್ಟ್ರಕ್ಟರ್‍ಸ್ ಚಾಂಪಿಯನ್‌ಶಿಪ್ ಗೆಲ್ಲುವ ಮಟ್ಟಕ್ಕೆ ಕಾರನ್ನು ಅಭಿವೃದ್ಧಿಪಡಿಸಿದರು. ಒಂದೇ ವರ್ಷದಲ್ಲಿ ಮ್ಯಾನೇಜರ್ ಆಗಿ ಬಡ್ತಿ ಪಡೆದುಕೊಂಡರು. ಬ್ರಾನ್ ಅಭಿವೃದ್ಧಿಪಡಿಸಿದ ಜಾಗ್ವಾರ್ XJR-14  ಎಂಬ ಮತ್ತೊಂದು ಕಾರು 1991ರ ವರ್ಲ್ಡ್ ಸ್ಪೋರ್ಟ್ಸ್ ಕಾರ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಇದನ್ನು ಗಮನಿಸುತ್ತಾ ಬಂದಿದ್ದರು ಫ್ಲಾವಿಯೋ ಬ್ರಿಯಾಟೋರ್. ಆಗ ಅವರು ‘ಬೆನೆಟನ್’ ಎಂಬ ಫಾರ್ಮುಲಾ-1 ತಂಡದ ಮುಖ್ಯಸ್ಥರಾಗಿದ್ದರು. ಅವರು ರಾಸ್ ಬ್ರಾನ್‌ರನ್ನು ತಮ್ಮ ಕಂಪನಿಗೆ ಸೆಳೆದುಕೊಂಡರು. ಅಲ್ಲಿ ಬ್ರಾನ್ ಮತ್ತೊಂದು ಕಾರನ್ನು ಸಿದ್ಧಪಡಿಸಿದರು. 1994, 1995ರಲ್ಲಿ ಮೈಕೆಲ್ ಶೂಮಾಕರ್ ಫಾರ್ಮುಲಾ-೧ ವಿಶ್ವಚಾಂಪಿಯನ್ ಆಗಿದ್ದೇ ಬ್ರಾನ್ ರೂಪಿಸಿದ ಕಾರಿನಿಂದಾಗಿ! 1995ರಲ್ಲಿ ಫೆರಾರಿ ಮುಖ್ಯಸ್ಥ ಲುಕಾ ಡಿ ಮೊಂಟೆಜೋಮೆಲೋ ವಿಶ್ವಚಾಂಪಿಯನ್ ಶೂಮಾಕರ್‌ನ ಬಳಿಗೆ ಬಂದು ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಆಹ್ವಾನ ನೀಡಿದಾಗ ಶೂಮಾಕರ್ ಹಾಕಿದ ಮೊದಲ ಷರತ್ತು ಏನು ಗೊತ್ತೆ?

“ ನನ್ನ ಜತೆ ರಾಸ್ ಬ್ರಾನ್ ಅವರನ್ನೂ ಸೇರಿಸಿಕೊಳ್ಳಬೇಕು”!

ಹೀಗಾಗಿ ರಾಸ್ ಬ್ರಾನ್ 1996ರಲ್ಲಿ ತಾಂತ್ರಿಕ ನಿರ್ದೇಶಕರಾಗಿ ಫೆರಾರಿಯನ್ನು ಸೇರಿಕೊಂಡರು. ಆ ಸಂದರ್ಭದಲ್ಲಿ ವಿಲಿಯಮ್ಸ್ ಹಾಗೂ ಮೆಕ್‌ಲಾರೆನ್ ಚಾಂಪಿಯನ್ ತಂಡಗಳಾಗಿದ್ದವು. ಅಷ್ಟು ಒಳ್ಳೆಯ ಕಾರುಗಳು ಅವುಗಳ ಬಳಿಯಿದ್ದವು. ಆದರೇನಂತೆ ಮೂರು ವರ್ಷಗಳ ನಂತರ ಫೆರಾರಿ ಮತ್ತೆ ಕನ್‌ಸ್ಟ್ರಕ್ಟರ್‍ಸ್ ಚಾಂಪಿಯನ್‌ಶಿಪ್ ಪಡೆದುಕೊಂಡಿತು. ರಾಸ್ ಬ್ರಾನ್ ಅಂತಹ ಕಾರು ರೂಪಿಸಿದರು. ಅದರ ಮರು ವರ್ಷ ಶೂಮಾಕರ್ ಡ್ರೈವರ್‍ಸ್ ಚಾಂಪಿಯನ್ ಆದರೆ, ಫೆರಾರಿ ಕನ್‌ಸ್ಟ್ರಕ್ಟರ್‍ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಅದರೊಂದಿಗೆ ಶೂಮಾಕರ್-ಬ್ರಾನ್ ಮ್ಯಾಜಿಕ್ ಆರಂಭವಾಯಿತು. 2001, 2002, 2003, 2004 ಹೀಗೆ ಸತತ ಐದು ಬಾರಿ ಶೂಮಾಕರ್ ವಿಶ್ವಚಾಂಪಿಯನ್ ಆದರು. ಫೆರಾರಿ ಅಷ್ಟೂ ಬಾರಿ ಕನ್‌ಸ್ಟ್ರಕ್ಟರ್‍ಸ್ ಚಾಂಪಿಯನ್‌ಶಿಪ್ ಕೂಡ ಪಡೆದುಕೊಂಡಿತು. ಈ ಎಲ್ಲ ಸಾಧನೆಗಳಲ್ಲೂ ರಾಸ್ ಬ್ರಾನ್ ಪಾತ್ರ ಬಹುಮುಖ್ಯವಾಗಿತ್ತು. 1998ರ ಹಂಗರಿ ಗ್ರ್ಯಾಂಡ್ ಪ್ರೀನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳಿ. ಅರ್ಹತಾ ಸುತ್ತಿನ ನಂತರ ಶೂಮಾಕರ್ ೧೬ನೇ ಸ್ಥಾನದಿಂದ ರೇಸ್ ಆರಂಭಿಸಬೇಕಾಗಿ ಬಂತು. ಗೆಲ್ಲುವ ಮಾತುಹಾಗಿರಲಿ, ಮೊದಲ 5 ಸ್ಥಾನಗಳಲ್ಲಿ ಒಂದನ್ನು ಗಳಿಸುವುದೂ ಕಷ್ಟವೆನಿಸಿತು. ಆಗ ರಾಸ್ ಬ್ರಾನ್ ತಲೆ ಚುರುಕುಗೊಂಡಿತು. ಹಂಗರಿಯಲ್ಲಿ ಸಾಂಪ್ರದಾಯಿಕವಾಗಿ 2 ಪಿಟ್ ಸ್ಟಾಪ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ 2ಕ್ಕೆ ಬದಲು 3 ಪಿಟ್‌ಸ್ಟಾಪ್ ತೆಗೆದುಕೊಳ್ಳುವ ತಂತ್ರ ರೂಪಿಸಿದರು ಬ್ರಾನ್. ಅಂದರೆ ಪಿಟ್ ಸ್ಟಾಪ್ ಸಂಖ್ಯೆ ಹೆಚ್ಚು ಮಾಡಿ, ಇಂಧನ ಪ್ರಮಾಣವನ್ನು ಕಡಿತಗೊಳಿಸಿ, ಕಾರು ಹಗುರವಾದಾಗ ವೇಗವಾಗಿ ಚಾಲನೆ ಮಾಡುವುದು. ನಿಜಕ್ಕೂ ಅದೊಂದು ಗ್ಯಾಂಬಲ್ ಆಗಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬ್ರಾನ್ ಏನೇ ತಂತ್ರ ರೂಪಿಸಿದರೂ ಶೂಮಾಕರ್ ಅದನ್ನು ಕಾರ್ಯಗತಗೊಳಿಸುತ್ತಿದ್ದರು. ಫೆರಾರಿಯ ಯಶಸ್ಸು ಇದ್ದಿದ್ದೇ ಇಲ್ಲಿ. ಆಶ್ಚರ್ಯವೆಂಬಂತೆ ಗ್ಯಾಂಬಲ್ ಫಲ ಕೊಟ್ಟಿತು. ಶೂಮಾಕರ್ ಮೊದಲಿಗರಾಗಿ ಗುರಿಮುಟ್ಟಿದರು!

೨೦೦೬ರಲ್ಲಿ ಶೂಮಾಕರ್ ಫಾರ್ಮುಲಾ-೧ಗೇ ವಿದಾಯ ಹೇಳಿದರು.

ನಿಜಹೇಳಬೇಕೆಂದರೆ ಫೆರಾರಿಯ ಬಾಸ್ ಲುಕಾ ಡಿ ಮೊಂಟೆಜೋಮೆಲೋ ಶುಮಿಗೆ ಅಂತಹ ಅನಿವಾರ್ಯತೆಯನ್ನು ತಂದೊಡ್ಡಿದ್ದರು. ಶೂಮಾಕರ್ ವಿದಾಯದ ಬೆನ್ನಲ್ಲೇ ರಾಸ್ ಬ್ರಾನ್ ಕೂಡ ಫಾರ್ಮುಲಾ-1ಗೆ ಗುಡ್‌ಬೈ ಎಂದರು. 2007ರಲ್ಲಿ ರಷ್ಯಾ, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡ ಬ್ರಾನ್, ನಿವೃತ್ತಿ ಜೀವನವನ್ನು ಕಳೆಯಲಾರಂಭಿಸಿದರು. ಒಂದು ವರ್ಷದ ನಂತರ ವಾಪಸ್ ಬಂದು ಮತ್ತೆ ಫೆರಾರಿ ಸೇರುವ ಇಚ್ಛೆ ವ್ಯಕ್ತಪಡಿಸಿದರು. ಅಷ್ಟರಲ್ಲಿ ಫೆರಾರಿಯ ಫಾರ್ಮುಲಾ-1ನ ಮುಖ್ಯಸ್ಥ ಜೀನ್ ಟೋಡ್ ಕೂಡ ನಿವೃತ್ತರಾಗಿದ್ದರು. ಆ ಸ್ಥಾನವನ್ನು ತನಗೆ ಕೊಡಬೇಕೆಂದು ಬ್ರಾನ್ ಬೇಡಿಕೆಯಿಟ್ಟರು. ಆದರೆ ಫೆರಾರಿ ಇಟಲಿ ಮೂಲದ ಕಂಪನಿಯಾದ್ದರಿಂದ ಬ್ರಾನ್‌ಗೆ ಬಾಸ್ ಸ್ಥಾನ ಕೊಡಲಿಲ್ಲ. ಬದಲಿಗೆ ಇಟಲಿಯವರೇ ಆದ ಸ್ಟಿಫಾನೋ ಡೊಮಿನಿಸೆಲಿ ಅವರನ್ನು ಆ ಸ್ಥಾನಕ್ಕೆ ತಂದುಕೂರಿಸಿದರು. ಆದರೇನಂತೆ ಆಗ ಹೋಂಡಾ ತಂಡದ ಬಾಸ್ ಆಗಿದ್ದ ನಿಕ್ ಫ್ರೈ, ‘ನೀನು ಬರುವುದಾದರೆ ನನ್ನ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ’ ಎಂದರು. ಏಕೆಂದರೆ ಬ್ರಾನ್ ಅವರ ಸಾಮರ್ಥ್ಯ ಏನೆಂದು ಫ್ರೈಗೆ ಗೊತ್ತಿತ್ತು. ಅವರ ಆಹ್ವಾನವನ್ನು ಒಪ್ಪಿಕೊಂಡ ಬ್ರಾನ್ ೨೦೦೮ರಲ್ಲಿ ಹೋಂಡಾ ತಂಡದ ಬಾಸ್ ಆಗಿ ಬಂದರು. ಆ ವೇಳೆಗೆ ಕಾಲ ಮಿಂಚಿತ್ತು. “ಈಗಿರುವ ಕಾರು ಯಾವ ಉಪಯೋಗಕ್ಕೂ ಬಾರದು, ಅದನ್ನು ಸರಿಪಡಿಸುವುದಕ್ಕೆಂದು ಸಮಯ ವ್ಯರ್ಥ ಮಾಡುವ ಬದಲು 2009ನೇ ಸಾಲಿನ ರೇಸ್ ಬಗ್ಗೆ ಗಮನಹರಿಸೋಣ. ಮುಂದಿನ ವರ್ಷ ಫಾರ್ಮುಲಾ-೧ನ ನಿಯಮಗಳಲ್ಲಿ ಗಣನೀಯ ಬದಲಾವಣೆಗಳಾಗಲಿವೆ. ಓವರ್‌ಟೇಕ್ ಮಾಡಲು ಅನುಕೂಲ ಮಾಡಿಕೊಡುವುದಕ್ಕಾಗಿ ಕಾರಿನ ಶೇಪ್ ಕೂಡ ಮಾರ್ಪಾಡಾಗಲಿದೆ. ನಾವು ಈಗಿನಿಂದಲೇ ಅದಕ್ಕೆ ತಯಾರಿ ಮಾಡೋಣ” ಎಂದರು ಬ್ರಾನ್.  ಒಂದೆಡೆ ಹೋಂಡಾ ಕಾರು 2008 ಸಾಲಿನಲ್ಲಿ ನಮ್ಮ ‘ಫೋರ್ಸ್ ಇಂಡಿಯಾ’ ಕಾರಿಗಿಂತ ಹಿಂದೆ ಬೀಳತೊಡಗಿದರೂ, ಇನ್ನೊಂದೆಡೆ ಮುಂದಿನ ಸೀಝನ್‌ನ ಕಾರಿನ ಸಿದ್ಧತೆ ನಡೆಯಲಾರಂಭಿಸಿತು. ಏಳುನೂರು ಜನರ ತಂಡ ಹಗಲೂ ರಾತ್ರಿ ಹೊಸ ಕಾರಿನ ಬಗ್ಗೆ ತಲೆಕೆಡಿಸಿಕೊಳ್ಳತೊಡಗಿತು. 2008 ಸಾಲಿನ ಫಂಡ್ ಅನ್ನೂ ಬ್ರಾನ್, ಹೊಸ ಕಾರಿನ ಅಭಿವೃದ್ಧಿಗೆ ವಿನಿಯೋಗಿಸತೊಡಗಿದರು. ಆದರೆ ಚಾಂಪಿಯನ್ ಕಾರು ಪೂರ್ಣಗೊಂಡಿತು ಎನ್ನುವಷ್ಟರಲ್ಲಿ ಆರ್ಥಿಕ ಹಿನ್ನಡೆ(ರಿಸೇಶನ್) ಶುರುವಾಯಿತು. ಬ್ಯಾಂಕ್‌ಗಳು ನಷ್ಟ ಅನುಭವಿಸಲಾರಂಭಿಸಿದವು, ಸಾಲ ನಿಂತುಹೋಯಿತು, ಕಾರು ಮಾರಾಟ ಕುಸಿಯಿತು. ಹೋಂಡಾ ಕಂಪನಿ ಫಾರ್ಮುಲಾ-1ನಿಂದಲೇ ಹಿಂದೆ ಸರಿಯುವ ಯೋಚನೆ ಮಾಡತೊಡಗಿತು. 2008 ಮುಗಿದು 2009ರ ಸೀಝನ್ ಇನ್ನೇನು ಆರಂಭವಾಗಬೇಕು, ಹೋಂಡಾ ಕಂಪನಿ ಆಘಾತಕಾರಿ ನಿರ್ಧಾರ ಕೈಗೊಂಡಿತು. ತನ್ನ ತಂಡವನ್ನೇ ಹಿಂತೆಗೆದುಕೊಂಡಿತು. ಚಾಂಪಿಯನ್ ಕಾರು ಸಿದ್ಧಗೊಂಡಿದ್ದರೂ ಕದನದಿಂದಲೇ ದೂರಸರಿಯಿತು. ಅದೊಂದು ತೀರಾ ಸಂದಿಗ್ಧ ಸನ್ನಿವೇಶ. ಡ್ರೈವರ್ ಜೆನ್‌ಸನ್ ಬಟನ್ ಕೂಡ ತೀವ್ರವಾಗಿ ನಿರಾಸೆಗೊಂಡಿದ್ದರು. 700 ಜನರ ಕೆಲಸಕ್ಕೂ ಕುತ್ತು ಬಂತು. ಯಾರಾದರೂ ಖರೀದಿಸುವವರಿದ್ದರೆ ತಾನು ತಂಡವನ್ನು ಮಾರಾಟ ಮಾಡಲು ಸಿದ್ಧ ಎಂದು ಹೋಂಡಾ ಘೋಷಣೆಯನ್ನೂ ಮಾಡಿತು. ‘ವರ್ಜಿನ್ ಏರ್‌ವೇಸ್’ ರಿಚರ್ಡ್ ಬ್ರ್ಯಾನ್ಸನ್ ಖರೀದಿಗೆ ಮುಂದಾದರಾದರೂ ಕೊನೆ ಕ್ಷಣದಲ್ಲಿ ಕಾರಿನ ಸಾಮರ್ಥ್ಯದ ಬಗ್ಗೆ ಅನುಮಾನ, ಬಂಡವಾಳ ತೊಡಗಿಸುವ ಬಗ್ಗೆ ಅಳುಕು ವ್ಯಕ್ತಪಡಿಸಿದರು. ಇತ್ತ ಫೆಬ್ರವರಿಯಲ್ಲೇ ಎಲ್ಲ ತಂಡಗಳೂ ಕಾರಿನ ಟೆಸ್ಟಿಂಗ್ ಆರಂಭಿಸಿದ್ದವು. ಹೋಂಡಾದ ಮೀನಮೇಷದಿಂದ ಮೊದಲು 2 ಟೆಸ್ಟಿಂಗ್‌ಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ. 2009, ಮಾರ್ಚ್ 10ರಂದು ತಂಡಗಳ ಘೋಷಣೆ ಮಾಡಬೇಕು. ಆದರೆ ಹೋಂಡಾ ತಂಡ ಭಾಗವಹಿಸುವ ಬಗ್ಗೆಯೇ ಖಾತ್ರಿಯಿಲ್ಲ. ಆದರೇನಂತೆ ಖರೀದಿಸಲು ಯಾರೂ ಮುಂದಾಗದ್ದನ್ನು ಕಂಡು ಬ್ರಾನ್ ವಿಚಲಿತರಾಗಲಿಲ್ಲ, ಯಾರಿಗೆಷ್ಟೇ ಅನುಮಾನಗಳಿದ್ದರೂ ಅವರಿಗೆ ಮಾತ್ರ ತನ್ನ ಕಾರಿನ ಬಗ್ಗೆ ಅಪಾರ ಭರವಸೆಯಿತ್ತು. ಮಾರ್ಚ್ ೬ರಂದು ಆಶ್ಚರ್ಯಕರ ಸುದ್ದಿ ಬಂತು. ರಾಸ್ ಬ್ರಾನ್ ಸ್ವತಃ ತಂಡವನ್ನು ಖರೀದಿಸಿದ್ದರು!! ಹೋಂಡಾ ತಂಡ ‘ಬ್ರಾನ್ ಜಿಪಿ’ ಅವತಾರ ತಳೆಯಿತು. ೨೦೦೯, ಮಾರ್ಚ್ ೨೯ರಂದು ನಡೆದ ವರ್ಷದ ಮೊದಲ ಗ್ರ್ಯಾಂಡ್ ಪ್ರೀನಲ್ಲಿ ಜಗತ್ತನ್ನೇ ನಿಬ್ಬೆರಗಾಗಿಸಿದರು ಬ್ರಾನ್!

ಒಬ್ಬ ಡ್ರೈವರ್‌ನ ಕನಸಿನ ಕಾರನ್ನು ರೂಪಿಸುವ ತಾಕತ್ತು ಬಹುಶಃ ಅವರಲ್ಲಿ ಮಾತ್ರ ಇದೆ.

ಈ ವರ್ಷ ಮತ್ತೊಂದು ಸಿಹಿ ಸುದ್ದಿ ಬಂದಿದೆ. ರಾಸ್ ಬ್ರಾನ್ ಹಾಗೂ ಶೂಮಾಕರ್ ಮತ್ತೆ ಜತೆಗೂಡಿದ್ದಾರೆ! ನಾಲ್ಕು ವರ್ಷಗಳ ನಂತರ ಶೂಮಾಕರ್ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಅದೂ ತನ್ನ ನೆಚ್ಚಿನ ಬ್ರಾನ್ ಅವರೊಂದಿಗೆ. ಈ ಬಾರಿ ಬ್ರಾನ್ ಕಾರಿನಲ್ಲಿ ಬಟನ್ ಮತ್ತು ಬ್ಯಾರಿಕೆಲೋ ಬದಲು ಶೂಮಾಕರ್ ಹಾಗೂ ನಿಕೋ ರಾಸ್‌ಬರ್ಗ್ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ನಾಳೆಯಿಂದ (ಮಾರ್ಚ್ 14) ಶೂಮಾಕರ್ ಅಭಿಮಾನಿಗಳಿಗೆ ಮತ್ತೆ ರಸದೌತಣ ಆರಂಭ… ಆತನ 41 ವರ್ಷ ವಯಸ್ಸನ್ನು ನೋಡಿದಾಗ ಖಂಡಿತ ಅನುಮಾನ ಗಳೇಳಬಹುದು. ಬ್ರಾನ್-ಶುಮಿ ಒಂದಾದರೂ ಈ ಬಾರಿ ಪ್ರಾರಂಭದಲ್ಲೇ ಹಳೆಯ ಮ್ಯಾಜಿಕ್ಕನ್ನು ಪುನರಾವರ್ತನೆ ಮಾಡಲು ಸಾಧ್ಯವಾಗದೇ ಹೋಗಬಹುದು, ಆತ ಈ ಬಾರಿ ಚಾಂಪಿಯನ್ ಶಿಪ್ ಗೆಲ್ಲದಿರಬಹುದು, ಆತನ ರಿಫ್ಲೆಕ್ಸಸ್ ಕಡಿಮೆಯಾಗಿರಬಹುದು. ಆದರೆ ಮುಂದಿನ  ಮೂರು ವರ್ಷಗಳಲ್ಲಿ ( ಶುಮಿ ‘ಬ್ರಾನ್ ಜಿಪಿ’ ಜತೆ 3 ವರ್ಷಗಳ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿದ್ದಾರೆ) ಗೆಲ್ಲುವುದಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅದೂ ರಾಸ್ ಬ್ರಾನ್ ಅವರಂತಹ ಜೀನಿಯಸ್ ಎಂಜಿನಿಯರ್, ಶೂಮಾಕರ್‌ನಂಥ ಚಾಂಪಿಯನ್ ಡ್ರೈವರ್ ಒಂದುಗೂಡಿರುವಾಗ… ಈ ಬಾರಿ ನಮ್ಮ ಕರುಣ್ ಚಾಂದೋಕ್ ಕೂಡ ಕಣಕ್ಕಿಳಿಯುತ್ತಿದ್ದಾರೆ.

Get ready to watch…!

4 Responses to “ಫಾರ್ಮುಲಾ ಒನ್, ಇವರು ದ್ರೋಣಾರ್ಜುನ್!”

  1. Anand hegde says:

    hi….i heard that schumi is joining mercedes..
    hats off to SCHUMI-BRAWN…

  2. harsha says:

    Sounds Interesting!
    Gud Article

  3. Lathesh Salian says:

    Wishing Best of Luck to Karun!!!
    He might have failed to perform in first race, but we can expect some magic form him in Australian Grand Prix !!!.

  4. shiv says:

    PÁåA¥À¸ï£À ºÁgÀqÀĪÀ amÉÖUÀ¼ÀÄ,vÀÄn vÀÄnAiÀÄ UÀÄlÄÖUÀ¼ÀÄ,NzÀĪÀ ¸ÀÖAmïUÀ¼ÀÄ,PÉ®¸À«®èzÉà ªÀiÁrzÀ £ÉÊmïOmïUÀ¼ÀÄ,¹°èAiÀiÁV DrzÀ Â¥sóÉÊmïUÀ¼ÀÄ……………… ªÀÄÄVzÀÄ ºÉÆÃzÀ £ÀªÀÄä PÁ¯ÉÃeï qÉÃAiÀiïì