Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಂಡು ಹಿಡಿದಿದ್ದು ಖಾರೆ, ವಿಶ್ವಾಸ ಉಳಿಸಿದ್ದು ಬಿಸ್ವಾಸ್!

ಕಂಡು ಹಿಡಿದಿದ್ದು ಖಾರೆ, ವಿಶ್ವಾಸ ಉಳಿಸಿದ್ದು ಬಿಸ್ವಾಸ್!

ಅಮಿತ್ ಖಾರೆ

ಉಪೇನ್ ಬಿಸ್ವಾಸ್

ಕಳೆದ ವಾರ ಈ ಎರಡು ಹೆಸರುಗಳು ಬಹು ಚರ್ಚೆಗೆ, ಮೆಚ್ಚುಗೆಗೆ, ವಿಶ್ವಾಸಕ್ಕೆ ಪಾತ್ರವಾದವು. ವ್ಯವಸ್ಥೆ ಮೇಲೆ ಜನ ಇನ್ನೂ ನಂಬಿಕೆ ಇಟ್ಟುಕೊಳ್ಳಬಹುದು ಎಂಬ ಭಾವನೆ ಮೂಡಿಸಿದವು. ಇತ್ತೀಚಿನ ದಿನಗಳಲ್ಲಿ ಆಶೋಕ್ ಖೇಮ್ಕಾ ಹಾಗೂ ದುರ್ಗಾ ಸಿಂಗ್ ನಾಗಪಾಲ್‌ರಂಥ ಆಡಳಿತಶಾಹಿಗಳೂ ಸಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಆದರೆ ಅಮಿತ್ ಖಾರೆ ಹಾಗೂ ಉಪೇನ್ ಬಿಸ್ವಾರದ್ದು Time Tested  ಅನ್ನೋ ಹಾಗೆ 17 ವರ್ಷಗಳಷ್ಟು ಸುದೀರ್ಘ ಅವಧಿಯ, ಪ್ರತಿಹಂತದಲ್ಲಿಯೂ ಪರೀಕ್ಷೆಗೆ ಒಳಗಾಗಿ ವಿಶ್ವಾಸ ಗಳಿಸಿದಂಥ ಪಾತ್ರ. ಇಷ್ಟಕ್ಕೂ ಅವರು ಮಾಡಿದ ಸಾಧನೆ, ದೇಶಕ್ಕೆ ಕೊಟ್ಟ ಕೊಡುಗೆ ಏನಂದುಕೊಂಡಿದ್ದೀರಿ?

ಮೇವು ಹಗರಣ!

ಹೀಗೂ ಒಂದು ಹಗರಣ ಸೃಷ್ಟಿಸಬಹುದು, ಹೀಗೂ ದುಡ್ಡು ಮಾಡಬಹುದು ಎಂದು ಬಿಹಾರದಲ್ಲಿ ಮೊದಲು ತೋರಿಸಿದ್ದು 1983-84ರಲ್ಲಿ. ಪ್ರಸ್ತುತ ಜಾರ್ಖಂಡ್‌ನ ರಾಜಧಾನಿಯಾಗಿರುವ ರಾಂಚಿ ಆ ಕಾಲಕ್ಕೆ ಬಿಹಾರದ ಪ್ರಮುಖ ನಗರಗಳಲ್ಲಿ ಒಂದಾಗಿತ್ತು ಅಷ್ಟೇ. ಬಿಹಾರ ಪಶುಸಂಗೋಪನೆ ಇಲಾಖೆಯ ಪ್ರಾದೇಶಿಕ ಕಚೇರಿ ಅಲ್ಲಿತ್ತು. ಅಲ್ಲಿನ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಎತ್ತುಗಳನ್ನು ಖರೀದಿಸಿ, ಆಹಾರ ಸಮೇತ ಜನರಿಗೆ ವಿತರಣೆ ಮಾಡುತ್ತಿತ್ತು. ಆ ಕಾರಣಕ್ಕಾಗಿ 15 ಲಕ್ಷ ಕೂಡ ಮಂಜೂರಾಯಿತು. ಆ ಹಣದಲ್ಲಿ ಎತ್ತುಗಳ ಖರೀದಿ, ವಿತರಣೆ ಎಲ್ಲವೂ ನಡೆದುಹೋದವು, ಆದರೆ ಕಡತಗಳಲ್ಲಿ ಮಾತ್ರ! ಇಲಾಖೆಯ ಅಧಿಕಾರಿಗಳು ರಶೀದಿಗಳನ್ನು ಸೃಷ್ಟಿಸಿ ಸರ್ಕಾರದ ಹಣ ನುಂಗಿದರೇ ಹೊರತು ವಾಸ್ತವದಲ್ಲಿ ಒಂದು ಎತ್ತನ್ನೂ ಖರೀದಿ ಮಾಡಲಿಲ್ಲ, ಜನರಿಗೆ ಕೊಡಲಿಲ್ಲ. 1990ರ ವೇಳೆಗೆ ಈ ದಂಧೆ ತನ್ನ ಕಬಂಧ ಬಾಹುಗಳನ್ನೂ ಇನ್ನೂ ವಿಸ್ತರಿಸಿಕೊಂಡಿತು. ಎತ್ತುಗಳನ್ನು ಖರೀದಿ ಮಾಡುವ ಸಲುವಾಗಿ ಸ್ಕೂಟರ್, ಕಾರು, ಜೀಪುಗಳಲ್ಲಿ ತೆರಳಿರುವ, ಖರೀದಿಸಿದ ಎತ್ತುಗಳನ್ನು ಸಾಗಿಸಲು ಲಾರಿ ಬಳಸಿದ್ದಕ್ಕೆ ಖರ್ಚಾದ ವೆಚ್ಚಗಳ ನಕಲಿ ರಶೀದಿಗಳೂ ಸೃಷ್ಟಿಯಾಗಿ ಬಿಟ್ಟಿದ್ದವು. ಎತ್ತುಗಳನ್ನು 250ರಿಂದ 675 ಕಿ.ಮೀ. ದೂರದಿಂದ ಸಾಗಿಸಿಕೊಂಡ ಬಂದ ರಂಗಿನ ಬಿಲ್ಲುಗಳಿದ್ದವು. ಹಾಗಾಗಿ ಅವುಗಳ ಮೊತ್ತ ಬರೋಬ್ಬರಿ 30 ಕೋಟಿಯಾಗಿತ್ತು! ಇದು 1990ರಲ್ಲಿ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ(ಸಿಎಜಿ) ಗಮನಕ್ಕೆ ಬಂತು. ಆದರೇನಂತೆ 1990 ಮಾರ್ಚ್‌ನಲ್ಲಿ ಬಿಹಾರದ ಮುಖ್ಯಮಂತ್ರಿಯಾದ ನಂತರ ಲಾಲು ತಿನ್ನಲು ಆರಂಭಿಸಿದ ‘ಪ್ರಸಾದ’ದ ಪ್ರಮಾಣ ಬೇರೆಯೇ ಮಟ್ಟಕ್ಕೇರಿತು. ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಮೊತ್ತವನ್ನೂ ಮೀರಿ ಸರ್ಕಾರದ ಬೊಕ್ಕಸಕ್ಕೆ ಕೈ ಹಾಕಿತು. 1990-91ರಲ್ಲಿ ಪಶುಸಂಗೋಪನೆ ಖಾತೆಗೆ ಬಜೆಟ್‌ನಲ್ಲಿ ನೀಡಿದ್ದು 54.92 ಕೋಟಿ, ಆದರೆ ವಾಸ್ತವದಲ್ಲಿ ಖಜಾನೆಯಿಂದ ಬಾಚಿದ್ದು 84.21 ಕೋಟಿ. ಸುಮಾರು 30 ಕೋಟಿಯನ್ನು ಹೆಚ್ಚುವರಿಯಾಗಿ ದೋಚಿದ್ದರು. 1990ರಿಂದ 1995ರ ಅವಧಿಯಲ್ಲಿ ಬಜೆಟ್ ಮೀಸಲು 74.40 ಕೋಟಿಯವರೆಗೂ ಏರಿದರೆ, ವಾಸ್ತವದಲ್ಲಿ ಖಜಾನೆಯಿಂದ ಖಾಲಿಯಾಗಿದ್ದು 245 ಕೋಟಿವರೆಗೂ! ಎರಡು ಸಾವಿರ ಕೋಳಿಗಳಿಗೆ 5 ಕೋಟಿ ಮೇವು ತಿನ್ನಿಸಿದ್ದರು ಎಂದರೆ ನಂಬುತ್ತೀರಾ?!

1996, ಜನವರಿ 27ರಂದು ದಕ್ಷಿಣ ಬಿಹಾರದ ಪಶ್ಚಿಮ ಸಿಂಘ್‌ಭುಮ್‌ನ ಡಿಸಿಯಾಗಿದ್ದ ಅಮಿತ್ ಖಾರೆ ಪಶುಸಂಗೋಪನೆ ಇಲಾಖೆಗೆ ಅಚಾನಕ್ ಭೇಟಿ ನೀಡಿದಾಗ ನಕಲಿ ಬಿಲ್‌ಗಳು ಎಲ್ಲೆಡೆ ಅಂಗಾತ ಬಿದ್ದಿದ್ದವು, ನೋಟುಗಳೂ ಹರಡಿಕೊಂಡಿದ್ದವು. ಕಚೇರಿಯನ್ನು ಬಂದ್ ಮಾಡಿ, ಸೀಲ್ ಹಾಕಿದ ಅಮಿತ್ ಖಾರೆ, ಇನ್ನು ಮುಂದೆ ಯಾವುದೇ ಬಿಲ್ ಪಾವತಿ ಮಾಡಬಾರದೆಂದು ಆದೇಶಿಸಿದರು. ಅದರೊಂದಿಗೆ 950 ಕೋಟಿಯ ಬೃಹತ್ ಹಗರಣವೊಂದು ತೆರೆದುಕೊಳ್ಳುತ್ತಾ ಹೋಯಿತು. 1.76 ಲಕ್ಷ ಕೋಟಿಗಳ 2ಜಿ, 1.86 ಲಕ್ಷ ಕೋಟಿಯ ಕಲ್ಲಿದ್ದಲು, ಇನ್ನೂ ಸಂಪೂರ್ಣವಾಗಿ ಬೆಳಕಿಗೆ ಬರಬೇಕಿರುವ ಹತ್ತಾರು ಲಕ್ಷ ಕೋಟಿ ರೂಗಳನ್ನು ಮೀರುವ ಅಂದಾಜಿರುವ ಥೋರಿಯಂ ಹಗರಣಗಳನ್ನು ಸೃಷ್ಟಿಸಿರುವ ಕಾಂಗ್ರೆಸ್‌ನ ಮುಂದೆ ಲಾಲುರ 950 ಕೋಟಿ ಹಗರಣ ಇಂದು ಯಕಶ್ಚಿತ್ ಎಂದು ಕಾಣಿಸಬಹುದು. ಆದರೆ ನಮ್ಮ ಪ್ರಧಾನಿಯೇ ತಿನ್ನುತ್ತಾನೆ, ನಾವೇಕೆ ಕೇರ್ ಮಾಡಬೇಕು ಎಂಬ ಭಂಡ ಧೈರ್ಯ, ನಿರ್ಲಜ್ಜತನವನ್ನು ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಿಗೂ ತಂದುಕೊಟ್ಟ ರಾಜೀವ್ ಗಾಂಧಿಯವರ 64 ಕೋಟಿ ಭೋಫೋರ್ಸ್ ಹಗರಣ ಕಂಡು ಹೌಹಾರಿದ್ದ ಜನರಿಗೆ 950 ಕೋಟಿ ಹಗರಣ ಇನ್ನೆಂಥ ಆಘಾತ ತಂದಿರಬಹುದು ಯೋಚಿಸಿ?!

ಇದೇನೇ ಇರಲಿ, 1985ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಅಮಿತ್ ಖಾರೆಗೆ, ತಮ್ಮ ಜಿಲ್ಲೆಯ ಪಶುಸಂಗೋಪನೆ ಇಲಾಖೆ ಸೂಕ್ತ ದಾಖಲೆ ಕೊಡದೆ ಒಮ್ಮೆ 10 ಹಾಗೂ ಮತ್ತೊಮ್ಮೆ 9 ಕೋಟಿಗಳನ್ನು ಖಜಾನೆಯಿಂದ ತೆಗೆದುಕೊಂಡಿರುವುದು ಕಂಡಿತು. ಇದರ ಬಗ್ಗೆ ಪದೆ ಪದೇ ಮಾಹಿತಿ ಕೇಳಿದರೂ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆಯಾಗಲಿ, ವಿವರಣೆಯಾಗಲಿ ಬರಲಿಲ್ಲ. ಜಿಲ್ಲಾ ಪಶುಸಂಗೋಪನೆ ಅಧಿಕಾರಿ ಆದಿಯಾಗಿ ಎಲ್ಲರೂ ಪರಾರಿಯಾಗಿ ಬಿಟ್ಟರು. ಈ ಬಗ್ಗೆ ಖಾರೆ, ರಾಜ್ಯ ವಿತ್ತ ಆಯುಕ್ತರಿಗೆ ದೂರು ನೀಡಿದರು. ಈ ಮಧ್ಯೆ, ಏಷ್ಯನ್ ಏಜ್ ಪತ್ರಿಕೆಯ ವರದಿಗಾರ ರವಿ ಎಸ್. ಝಾ ತನಿಖಾ ವರದಿಗಳನ್ನು ಪ್ರಕಟಿಸಲಾರಂಭಿಸಿದರು. ಈ ಬೃಹತ್ ಹಗರಣದಲ್ಲಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪರೋಕ್ಷ ಪಾತ್ರವಿದೆ ಎಂಬ ಸ್ಫೋಟಕ ಮಾಹಿತಿ ಹೊರಹಾಕಿದರು. ಈ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಲಾಲು ಸಮಿತಿ ರಚನೆ ಮಾಡಿದರೂ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಲಾರಂಭಿಸಿದವು. ಈ ಮಧ್ಯೆ, ಲಾಲು ರಚಿಸಿದ ಸಮಿತಿಯ ಸದಸ್ಯರೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂತು. ಆದರೆ ಯಾವಾಗ ಆಗಿನ ರಾಜ್ಯ ಬಿಜೆಪಿ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೋ ಅದರ ಬೆನ್ನಲ್ಲೇ ಬಿಹಾರ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆದೇಶಿಸಿತು. ಲಾಲು ಅವರ ಗ್ರಹಚಾರ ಕೆಡತೊಡಗಿತು.

ಅದರೊಂದಿಗೆ ಉಪೇನ್ ಬಿಸ್ವಾಸ್ ಪ್ರವೇಶವಾಯಿತು.

ಲಾಲು ಯಾರನ್ನು ‘ಮನೋರೋಗಿ’, ‘ಹುಚ್ಚ’ ಎಂದು ಕರೆದರೋ ಅವರೇ ಈ ಉಪೇನ್ ಬಿಸ್ವಾಸ್. ಅವರು ಸಿಬಿಐನ ಪೂರ್ವ ವಲಯದ ನಿರ್ದೇಶಕರಾಗಿದ್ದರು. ಸಿಬಿಐ ತನ್ನ ತನಿಖೆ ಆರಂಭಿಸಿದ ಬೆನ್ನಲ್ಲೇ ಬಿಹಾರ ಸರ್ಕಾರದ ಅಧಿಕಾರಿಗಳು ದಾಖಲೆಗಳನ್ನು ತಡಕಾಡುವುದಕ್ಕೆ ಅಡ್ಡಿಪಡಿಸಲಾರಂಭಿಸಿದರು. ಬಿಹಾರ ವಿಧಾನಸಭೆ ಸದಸ್ಯರಂತೂ ಸಿಬಿಐ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಲು ಮುಂದಾದರು. ಆದರೆ ಬಿಸ್ವಾಸ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ತನಿಖೆ ಪ್ರಗತಿ ಕಂಡಂತೆ ಮುಖ್ಯಮಂತ್ರಿ ಲಾಲು ಕೂಡ ಹಗರಣದಲ್ಲಿ ಭಾಗಿಯಾಗಿರುವ ಸ್ಪಷ್ಟ ಸೂಚನೆಗಳು ಸಿಗಲಾರಂಭಿಸಿದವು. ಮುಖ್ಯಮಂತ್ರಿಯನ್ನೇ ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡಬೇಕೆಂದು 1997, ಮೇ 10ರಂದು ಬಿಸ್ವಾಸ್ ರಾಜ್ಯಪಾಲರ ಅನುಮತಿ ಕೋರಿದರು. ಇತ್ತ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಸಿಬಿಐ ಯಾರನ್ನು ಸಾಕ್ಷಿಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿತ್ತೋ ಅಂತಹ ಆರೋಪಿ ಹರೀಶ್ ಖಾಂಡೇವಾಲ್ ಅದೇ ದಿನ ಕೊಲೆಯಾಗಿ ಬಿಟ್ಟರು. ಈ ಮಧ್ಯೆ, ಮುಖ್ಯಮಂತ್ರಿಯನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲ ಎ.ಆರ್. ಕಿದ್ವಾಯಿ ಮೀನಮೇಷ ಎಣಿಸತೊಡಗಿದರು. ಯಾವಾಗ ರಾಜ್ಯ ಹೈಕೋರ್ಟ್ ಸಿಟ್ಟಿಗೆದ್ದಿತೋ ಆ ಕೂಡಲೇ ಅನುಮತಿ ದೊರೆಯಿತು. ಆದರೆ ಲಾಲು ಸಿಟ್ಟಿನಿಂದ ಕುದಿಯತೊಡಗಿದರು. ‘ಒಬ್ಬ ಪೊಲೀಸ್ ಅಧಿಕಾರಿ ಮುಖ್ಯಮಂತ್ರಿಯನ್ನು ವಿಚಾರಣೆ ಮಾಡುವುದೆಂದರೇನು? ಲಗ್ತಾ ಹೈ ಕಿ ಯೇ ಆದ್ಮಿ (ಬಿಸ್ವಾಸ್) ಪೂರಾ ಪಾಗಲ್ ಹೇ. ಆತ ಅಧಿಕಾರಿಗಳನ್ನು ವಿಚಾರಣೆ ಮಾಡಬೇಕೇ ಹೊರತು ಮುಖ್ಯಮಂತ್ರಿಯನ್ನಲ್ಲ’ ಎಂದು ಅಬ್ಬರಿಸಿದರು.

ಆದರೆ…

ಬಿಸ್ವಾಸ್ ನಡುಗಲಿಲ್ಲ. ಸತತ 8 ಗಂಟೆಗಳ ಕಾಲ ಲಾಲು ಅವರನ್ನು ವಿಚಾರಣೆಗೆ ಗುರಿಪಡಿಸಿದರು, ಪ್ರಶ್ನೆಗಳ ಮಳೆ ಸುರಿಸಿದರು. ವಿಚಾರಣೆಯನ್ನು ರೆಕಾರ್ಡ್ ಮಾಡಿಕೊಳ್ಳುವುದಕ್ಕೆ ಲಾಲು ಅಡ್ಡಿಪಡಿಸಿದರೂ, ಈ ಬಿಸ್ವಾಸ್ ಮೇಲೆ ನನಗೆ ವಿಶ್ವಾಸವಿಲ್ಲ ಎಂದರೂ ಕ್ಯಾರೇ ಅನ್ನಲಿಲ್ಲ. ಆದರೆ ಕಥೆ ಅಲ್ಲಿಗೇ ಮುಗಿಯಲಿಲ್ಲ. 1996, ಅಕ್ಟೋಬರ್ 5. ಮೇವು ಹಗರಣದ ವಿಚಾರಣೆ ನಡೆಸುತ್ತಿದ್ದ ವಿಭಾಗೀಯ ಪೀಠದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಎಸ್.ಎನ್. ಝಾ ಹಾಗೂ ನ್ಯಾಯಮೂರ್ತಿ ಎಸ್.ಜೆ. ಮುಖೋಪಾಧ್ಯಾಯ ಅವರು ಸಿಬಿಐ ಮುಖ್ಯ ಕಚೇರಿಯೇ ತನಿಖೆಯನ್ನು ಹಾಳುಗೆಡವುತ್ತಿದೆ ಎಂದು ಬಿಟ್ಟರು. ತಟ್ಟನೆ ಎದ್ದುನಿಂತ ಬಿಸ್ವಾಸ್, ಸಿಬಿಐ ಮುಖ್ಯ ಕಚೇರಿ ಕೋರ್ಟ್ ಮುಂದೆ ಸಲ್ಲಿಸಿರುವುದು ತಾನು ಕೊಟ್ಟ ವರದಿಯನ್ನಲ್ಲ, ತನ್ನ ಡೆಪ್ಯೂಟಿ ರಂಜಿತ್ ಸಿನ್ಹಾ ಕಳುಹಿಸಿರುವುದು ಎನ್ನುವ ಮೂಲಕ ತಲ್ಲಣವನ್ನೇ ಸೃಷ್ಟಿಸಿದರು. ಬಿಸ್ವಾಸ್ ಹೇಳಿಕೆಯ ನಂತರ ‘ಸಿನ್ಹಾ ವರದಿ ಅರೆಬರೆ ಹಾಗೂ ಗೋಜಲು. ಸಿನ್ಹಾ ವರದಿಗೂ ಬಿಸ್ವಾಸ್ ವರದಿಗೂ ಆಶ್ಚರ್ಯಕರ ವ್ಯತ್ಯಾಸಗಳಿರುವುದೇಕೆ?’ ಎಂದು ನ್ಯಾಯಪೀಠ ಪ್ರಶ್ನಿಸಿತು.

ಆ ಪ್ರಶ್ನೆ ಕೇಳಿದ್ದೇಕೆ ಗೊತ್ತೆ?

ವಿಭಾಗೀಯ ಪೀಠದ ಮುಂದೆ ಸಲ್ಲಿಸಲಾಗಿದ್ದ ವರದಿಯನ್ನು ನ್ಯಾಯಮೂರ್ತಿಗಳು ತಡಕಾಡುತ್ತಿದ್ದಾಗ ಬಾಹ್ಯ ಹೊದಿಕೆಯ ಮೇಲಷ್ಟೇ ಬಿಸ್ವಾಸ್ ಸಹಿ ಇತ್ತು. ಆದರೆ ಬಿಸ್ವಾಸ್ ಪ್ರತಿ ಪುಟದ ಮೇಲೂ ಸಹಿ ಹಾಕಬೇಕಿತ್ತು. ಅದನ್ನು ಗಮನಿಸಿದಾಗ ನ್ಯಾಯಮೂರ್ತಿಗಳಿಗೆ ಅನುಮಾನ ಕಾಡತೊಡಗಿತು. ಹೀಗೇಕೆ ಎಂದು ಪ್ರಶ್ನಿಸಿದಾಗ ಸತ್ಯ ಹೊರಬರತೊಡಗಿತು. ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲು ವರದಿಯನ್ನು ಮುಖ್ಯ ಕಚೇರಿಗೆ ಕಳುಹಿಸಬೇಕೆಂದು ಆಗಿನ ಸಿಬಿಐ ನಿರ್ದೇಶಕ ಜೋಗಿಂದರ್ ಸಿಂಗ್ ಬಿಸ್ವಾಸ್‌ಗೆ ಸೂಚಿಸಿದ್ದರು. ಏಕೆಂದರೆ ಆಗ ಅಧಿಕಾರದಲ್ಲಿದ್ದ ಐ.ಕೆ. ಗುಜ್ರಾಲ್ ಸರ್ಕಾರದ ಉಳಿವಿಗೆ ಲಾಲು ಪ್ರಸಾದ್ ಯಾದವ್ ಬೆಂಬಲ ಅನಿವಾರ್ಯವಾಗಿತ್ತು. ಹಾಗಾಗಿ ಸಿಬಿಐ ಮುಖ್ಯ ಕಚೇರಿಯಿಂದ ವಾಪಸಾಗುವ ವೇಳೆ ವರದಿಯೇ ಬದಲಾಗಿತ್ತು. ಬಿಸ್ವಾಸ್ ನಂತರದ ಕೆಳಹಂತದ ಸಿಬಿಐ ಅಧಿಕಾರಿ ರಂಜಿತ್ ಸಿನ್ಹಾ ಸರ್ಕಾರದ ಅಣತಿಗೆ ತಕ್ಕಂಥ ವರದಿ ರೂಪಿಸಿ ಕೊಟ್ಟಿದ್ದರು. ಆ ವರದಿಗೆ ಸಹಿ ಹಾಕುವುದು ಬಿಸ್ವಾಸ್‌ಗೂ ಅನಿವಾರ್ಯವಾಗಿತ್ತು. ಹಾಕದಿದ್ದರೆ ಕರ್ತವ್ಯ ಚ್ಯುತಿಯಾಗುತ್ತಿತ್ತು. ಹಾಗಾಗಿ ಎಂದಿನಂತೆ ಪ್ರತಿಪುಟಕ್ಕೂ ಸಹಿ ಹಾಕುವ ಬದಲು, ಬರೀ ಹೊದಿಕೆಗಷ್ಟೇ ಸಹಿ ಮಾಡಿದ್ದ ಬಿಸ್ವಾಸ್ ಆ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸಿದರು ಹಾಗೂ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದರು. ಆ ಕಾರಣಕ್ಕಾಗಿಯೇ ನ್ಯಾಯಾಲಯ ಬಿಸ್ವಾಸ್ ಅವರನ್ನು ತನಿಖೆಯಲ್ಲಿ ಮುಂದುವರಿಸಿತು. ಇತ್ತ ಪ್ರಾಣಾಪಾಯಕ್ಕೆ ಒಳಗಾಗಿರುವ ಬಿಸ್ವಾಸ್ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಸುಶೀಲ್ ಕುಮಾರ್ ಮೋದಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಇದೆಲ್ಲದರ ಫಲವಾಗಿ 55 ಜನರ ಮೇಲೆ ಜಾರ್ಜ್ ಶೀಟ್ ಹಾಕಲಾಯಿತು. ಲಾಲು ಜೈಲನ್ನೂ ಸೇರಿದರು. ನಂತರವೂ ಕಳ್ಳಾಟ ನಿಲ್ಲಲಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು, ಲಾಲು ಕೇಂದ್ರ ಸಚಿವರಾದ ಮೇಲೆ ತನಿಖೆಯನ್ನು ವಿಳಂಬ ಮಾಡಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನಿಸಿತು. ಆದರೆ ಆ ವೇಳೆಗಾಗಲೇ ಬಿಸ್ವಾಸ್ ತನಿಖೆಯನ್ನು ತಾರ್ಕಿಕ ಅಂತ್ಯದತ್ತ ಕೊಂಡೊಯ್ದಿದ್ದರು, ಬಲವಾದ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಸಲ್ಲಿಸಲಾಗಿತ್ತು.

17 ವರ್ಷಗಳ ನಂತರವಾದರೂ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಆರ್‌ಜೆಡಿಯ ಲಾಲು ಮತ್ತು ಕಾಂಗ್ರೆಸ್‌ನ ಜಗನ್ನಾಥ್ ಮಿಶ್ರಾ ಇಂದು ಜೈಲು ಸೇರಿದ್ದರೆ ಅದಕ್ಕೆ ಅಂದು ಬಿಸ್ವಾಸ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತನಿಖೆ ಮಾಡಿದ ಕಾರಣದಿಂದಲೇ. ಬಹಳ ಆಶ್ಚರ್ಯಕರ ಸಂಗತಿಯೊಂದಿದೆ ಕೇಳಿ: ಅವತ್ತು ಸಿಬಿಐ ತನಿಖೆಯನ್ನೇ ಹಾಳುಗೆಡವಲು ಕಳಪೆ ವರದಿ ಕೊಟ್ಟು ನ್ಯಾಯಾಲಯವನ್ನೇ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ರಂಜಿತ್ ಸಿನ್ಹಾರನ್ನು ಪ್ರತಿಪಕ್ಷವಾದ ಬಿಜೆಪಿಯ ವಿರೋಧದ ನಡುವೆಯೂ ಕಾಂಗ್ರೆಸ್ ಇಂದು ಸಿಬಿಐ ಡೈರೆಕ್ಟರ್ ಮಾಡಿದೆ! ಅಷ್ಟೇ ಅಲ್ಲ ಸ್ವಾಮಿ, ಜಾಮೀನು ಸಿಗದ ಅಪರಾಧ ಮಾಡಿದ್ದರೂ ಕೋರ್ಟ್ ಮುಂದೆ ಶರಣಾಗುವುದಕ್ಕೂ ಮಾಫಿ ಮಾಡುವಂಥ – Blanket Bail ಅನ್ನು (ನಿರೀಕ್ಷಣಾ ಜಾಮೀನು) ಲಾಲು ಪ್ರಸಾದ್ ಯಾದವ್‌ಗೆ ನೀಡಬೇಕೆಂದು ಪದೆ ಪದೇ ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ್ದ ಲಾಲು ವಕೀಲ ಕಪಿಲ್ ಸಿಬಲ್ ಇಂದು ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಕಾನೂನು ಸಚಿವ!! ಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗುವುದು ಖಚಿತ ಎಂದು ಗೊತ್ತಾದ ಕೂಡಲೇ ಅದರಿಂದ ಲಾಲು ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯನ್ನು ಸಿದ್ಧಪಡಿಸಿದ್ದೂ ಈ ಮಹಾಶಯರೇ!!

ಇಂಥವರ ಮಧ್ಯೆ ಇದ್ದೂ ಕರ್ತವ್ಯ ಪಾಲನೆ ಮಾಡಿದ, ಆಡಳಿತದಲ್ಲಿ ನೈತಿಕತೆ ಎತ್ತಿ ಹಿಡಿದ ಉಪೇನ್ ಬಿಸ್ವಾಸ್ ಎಂಥ ಗಟ್ಟಿಗ ಎಂದನಿಸುವುದಿಲ್ಲವೆ?

20 Responses to “ಕಂಡು ಹಿಡಿದಿದ್ದು ಖಾರೆ, ವಿಶ್ವಾಸ ಉಳಿಸಿದ್ದು ಬಿಸ್ವಾಸ್!”

 1. Sunil V Sanglekar says:

  Sir naanu nimma KATTA ABBIMAANI.

 2. Bheemsain Tekkalaki says:

  Didnt know many of the above facts. Thanks sir

 3. magendran says:

  simply great.

 4. NA .Raju says:

  Hi pratapsimha idu ondu exmpal congresss intha aneka hagaranagalu idru nam jana vote yake aktare ? adevaru yavaga bhudhi kodthano gotilla.adre evathina patrike nodi bhala besaravaitu karnatadalli muslim jana onde badavaru congressge kanuthe muslim kutumbakke 50savira maduve ge kodtharante nam Bjp mla galu badukidare athva satidaro evathu esto brahmina kutumbagalu devarapooje madi baro dakshinadalli jeevana madtaedare. esto janakke dina kooli madidre anna ellaandra illa bere jatiyalli badavaru evarige kanutilla .liqaer rate 40% subregister rate jasti madi aduddu tagondogi annabhghya madi evathu madhaymavargi estu thondre antha evarige kanthilla e bjp jds mla galige enmadbeku antha nive eli.
  Congress vote gagi evathu adina britishur madida divedent rules evathu jatiesarlli muslims ge sapot madutaede edu estu sari sir .t/q leterswrong idre very sorry.

 5. shiva sidvir says:

  2 saavira koli, 5 koti mevu, “dhanyanade deva”

 6. guru says:

  sir, write about veerendra heggade and his good works, some people r using some electronic media to tarnish the institute, please think about it, we all respect him very much,

 7. shwetha says:

  it was very informative.evattin samajakke Bisvas and amith khaare antavara agatya tuma ede.tnks pratap to share ds imp msg wt us.

 8. Kiran Kumar says:

  Heartly wishe to Biswaas…..

 9. DharmaRaj says:

  Hats of U Sir…..

 10. Anupama k u says:

  One day truth will come out,thank u for the good article.

 11. Praveen j says:

  This kapil sibal introduced many new rules in educational field. Which ruined standard of iit’s and Nit’s during his period of edn minister

 12. Vasudev Nayak says:

  Great. Hats off to Kare and Biswas. SATHYAM AVA JAYATHE. JAIHIND

 13. Prakash says:

  Thank you for sharing the truth. But at the end you mentioned about Kapil Sibal. He was a lawyer for Lalu prasad yadav. If you are blaming on Kapil Sibal for appearing on behalf of Lalu even after knowing Lalu is culprit, then I think you should also know and mention about what Ram Jetmalani has done. His clients were

  – B.S. Yeddyurappa
  – He defended the killers of Indira Gandhi, Rajiv Gandhi in court.
  – He defended Kasab
  – Ram Jethmalani defended Home Minister P Chidambaram and Sushil Kumar Shinde on the Telangana court cases.

  Kapil mahashayara bagge heluva modalu ee nimma BJP MP mahashayara bagge enu helutteeri swami.

 14. praveen says:

  buddhigedigala kaialli sarkar,kidagedigaligella sahakar. deshad parastiti bihar rajyana kannare nodid mele tiliyutte ….hmmm

 15. kitty says:

  its one of the great decision

 16. Malingaray.Kalasgonda. says:

  great person Bishwas! Jai Hind!

 17. Malingaray.Kalasgonda. says:

  Mr.Biswas is a great Administrative Officer! very necessary to contemporary India. Thank U sir.

 18. NAGARAJ SINDAGERI says:

  ya really .. one hertly salute to ಉಪೇನ್ ಬಿಸ್ವಾಸ್ .

 19. Kisna says:

  Sir, The thing that stands out in all your articles are the solid research to find facts. Your articles make us to do something.

 20. chavan says:

  Gali gali may shore hai, kapil sibal chore hai…