Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಏನು ಬರೆಯಲಿ ಚೆನ್ನ, ಹೇಗೆ ತೋರಲಿ ನಿನ್ನ?

ಏನು ಬರೆಯಲಿ ಚೆನ್ನ, ಹೇಗೆ ತೋರಲಿ ನಿನ್ನ?

chennabasava
ಏನು ಬರೆಯಲಿ ಚೆನ್ನ
ಹೇಗೆ ತೋರಲಿ ನಿನ್ನ
ಸಂಪನ್ನ ಸದ್ಗುಣದ ಪೂರ್ಣರೂಪ
ಸೋತುಹೋಗುವ ಸ್ವರ ಓತು ಕಾಣದ ಮನ
ಸೊರಗಿ ಸೊಕ್ಕುವ ವಾಕ್ಯ-ವ್ಯಾಕರಣದಲಿ
ಕರಗಿ ಕಾಳಿಕೆ ಹಿಡಿವ ಶಬ್ದ ಶಾಹಿಯಲಿ
ನಿಶ್ಶಬ್ದನೇ ನಿನ್ನ ಹೇಗೆ ಬರೆಯಲಿ?

ಅವರ ಸಾಧನೆ, ನಾಡು- ನುಡಿ-ಭಾಷೆಗೆ ನೀಡಿದ ಕೊಡುಗೆ, ಬಡ-ನಿರ್ಗತಿಕ ಮಕ್ಕಳ ವಿದ್ಯಾರ್ಜನೆಗೆ ಕೊಟ್ಟ ಕಾಣಿಕೆಯನ್ನು ಸ್ತುತಿಸುವ ಇಂತಹ ನೂರಾರು ಪದ್ಯಗಳೇ ರಚನೆಯಾಗಿವೆ. ‘ಅಪ್ಪಾವರಿದ್ದಾರಲ್ರಿ, ಹೈದರಾಬಾದ್ ನಿಜಾಮನ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಹೇಳಿ ಕೊಡುತ್ತಿದ್ದರು’ ಎಂದು ಅಲ್ಲಿನ ಜನ ಹೇಳುತ್ತಾರೆ. ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಆಂಧ್ರದ ಗಡಿಯಿದೆ, ಮತ್ತೊಂದು ಕಡೆ ಮಹಾರಾಷ್ಟ್ರವಿದೆ. ಆದರೆ ಬೀದರ್ ಜಿಲ್ಲೆಯ ಜನರಾಡುವ ಕನ್ನಡ ಮಾತ್ರ ಕಲಬೆರಕೆಯಾಗಿಲ್ಲ. ಅವರ ಮಾತಿನಲ್ಲಿ ಅನ್ಯ ಭಾಷೆಯ ಕೆಲಪದಗಳು ಸೇರಿಕೊಂಡಿದ್ದರೂ ಅವುಗಳಲ್ಲೂ ಕನ್ನಡದ ಸೊಗಡೇ ಕಾಣುತ್ತದೆ. ಹಾಗಾಗಿ ಅಪ್ಪಾ ಅವರ ಬಗ್ಗೆ ಜನರಾಡುವ ಮಾತುಗಳಲ್ಲಿ ಸತ್ಯವಿದೆ, ಅದು ಆಧಾರವಿಲ್ಲದ ದಂತಕಥೆ ಎಂದನಿಸುವುದಿಲ್ಲ.

ಅಪ್ಪಾವರೆಂದರೆ ೧೦೯ ವರ್ಷ ಬಾಳಿ, ಬೀದರನ್ನು ಬೆಳಗಿ ಲಿಂಗೈಕ್ಯರಾಗಿರುವ ಭಾಲ್ಕಿ ಹಿರೇಮಠದ ಮಠಾಧೀಶರಾದ ಡಾ. ಚನ್ನಬಸವ ಪಟ್ಟದ್ದೇವರು.

ಮಠ-ಮಂದಿರಗಳು ಕನ್ನಡಿಗರಾದ ನಮಗೆ ಅಪರಿಚಿತವೇನಲ್ಲ ಬಿಡಿ. ಎಲ್ಲಾ ಜಾತಿಗಳೂ ಇಂದು ಮಠಗಳನ್ನು ಹೊಂದಿವೆ. ಕರ್ನಾಟಕದ ಉದ್ದಗಲಕ್ಕೂ ಮಠಗಳಿವೆ. ಅವು ಸಾಕಷ್ಟು ಒಳ್ಳೆಯ ಕೆಲಸವನ್ನೂ ಮಾಡುತ್ತಿವೆ. ಅವು ಎಷ್ಟೇ ಘನ ಕಾರ್ಯ ಮಾಡುತ್ತಿದ್ದರೂ, ದೂರದಲ್ಲಿ ನಿಂತು ನೋಡುವವರಿಗೆ ಎಷ್ಟೇ ಚೆನ್ನಾಗಿ ಕಂಡರೂ ಹತ್ತಿರಕ್ಕೆ ಹೋಗಿ ಗಮನಿಸಿದರೆ, ಒಬ್ಬೊಬ್ಬರದ್ದೇ ಅಭಿಪ್ರಾಯ ಕೇಳುತ್ತಾ ಹೋದರೆ ಸ್ಥಳೀಯರ ಟೀಕೆಯಿಂದ ಮುಕ್ತವಾಗಿರುವ ಮಠಗಳು ಖಂಡಿತ ಕಾಣಸಿಗುವುದಿಲ್ಲ. ಶಿಕ್ಷಣದ ವಾಣಿಜ್ಯೀಕರಣದ ಆರೋಪದಿಂದ ಯಾವ ಮಠಗಳೂ ಹೊರತಾಗಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆದರೆ ಬೀದರ್‌ನಿಂದ 40 ಕಿ.ಮೀ. ದೂರದಲ್ಲಿರುವ ಭಾಲ್ಕಿ ತಾಲೂಕಿಗೆ ಹೋದರೆ ಅಲ್ಲಿನ ಹಿರೇಮಠ ಸಂಸ್ಥಾನದ ಬಗ್ಗೆ ಸಣ್ಣ ಅಪಸ್ವರವೂ ಕೇಳುವುದಿಲ್ಲ. ಈ ಮಾತು ಅತಿಶಯೋಕ್ತಿಯಲ್ಲ. ಇಡೀ ಹೈದರಾಬಾದ್ ಕರ್ನಾಟಕಕ್ಕೆ (ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಕೊಪ್ಪಳ) ಕಳಸಪ್ರಾಯವಾದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದವರು ಡಾ. ಚನ್ನಬಸವ ಪಟ್ಟದ್ದೇವರು. ಅವರ ಮೂಲ ಹೆಸರು ಮಹಾರುದ್ರ. ಬದುಕೂ ಹಾಗೆಯೇ ಇದೆ. ನಾಲ್ಕನೇ ವಯಸ್ಸಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡು, ಅವರಿವರ ಆಶ್ರಯ, ಒಪ್ಪೊತ್ತಿನ ಕೂಳು ತಿಂದು ಬದುಕು ಕಟ್ಟಿಕೊಂಡವರು. ಇತ್ತ ೧೯೦೪ರಲ್ಲಿ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದ ಹಾನಗಲ್ ಕುಮಾರಸ್ವಾಮಿಗಳು, ಗುರುವರ್ಗವನ್ನು ಸುಧಾರಿಸಲು, ಧಾರ್ಮಿಕ ತರಬೇತಿ ನೀಡಲು ೧೯೦೯ರಲ್ಲಿ ಶಿವಯೋಗ ಮಂದಿರವನ್ನು ಆರಂಭಿಸಿದರು. ಭಾಷಣಕಾರರು, ಕೀರ್ತನಕಾರರು, ಪುರಾಣಿಕರು, ಲೇಖಕರು, ಯೋಗಿಗಳು, ಸಂಗೀತಜ್ಞರು ಮಾತ್ರವಲ್ಲದೆ ನಮ್ಮ ದಕ್ಷಿಣ ಭಾರತದ ಬಹುತೇಕ ವೀರಶೈವ ಮಠಾಧೀಶರು ರೂಪುಗೊಂಡಿದ್ದೇ ಶಿವಯೋಗ ಮಂದಿರದಲ್ಲಿ. ಇಳಕಲ್ ಮಹಾಂತ ಸ್ವಾಮಿಗಳು, ತೋಂಟದ ಸಿದ್ಧಲಿಂಗ ಸ್ವಾಮಿಗಳು, ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ, ಗಾನಯೋಗಿ ಪಂಚಾಕ್ಷರಿ ಗವಾಯಿಗಳು ತಯಾರಾಗಿದ್ದು ಇಲ್ಲಿಯೇ. ಮಹಾರುದ್ರ ಭಾಲ್ಕಿಯ ಚನ್ನಬಸವ ಪಟ್ಟದ್ದೇವರಾಗಿ ರೂಪು ಗೊಂಡಿದ್ದೂ ಇಲ್ಲೇ.

ಒಂದು ದಿನ ಮಹಾರುದ್ರನನ್ನು ಕರೆಸಿಕೊಂಡ ಕುಮಾರಸ್ವಾಮಿ ಗಳು, ‘ನೀನು ಭಾಲ್ಕಿಗೆ ಹೋಗಬೇಕು. ಅಲ್ಲಿನ ಮಠದ ಆಡಳಿತವನ್ನು ನಿರ್ವಹಿಸಬೇಕು’ ಎಂದಾಗ, ‘ನನಗೆ ಅಧಿಕಾರ ಬೇಡ, ಸೇವೆ ಮಾಡಬೇಕೆಂದವನಿಗೆ ಅಧಿಕಾರವೇಕೆ?’ ಎಂದು ನಯವಾಗಿ ತಿರಸ್ಕರಿಸಿದರು. ಆದರೆ ಗುರುಗಳು ಗದರಿಸಿದಾಗ ಮಾತಿಗೆ ಮಣಿದು ಭಾಲ್ಕಿಗೆ ಆಗಮಿಸಿದರು. ಕೊನೆಗೆ ಭಾಲ್ಕಿಯ ಮಠಾಧೀಶರಾಗಬೇಕು ಎಂದು ಕುಮಾರಸ್ವಾಮಿಗಳು ಆeಪಿಸಿ ದರು. ಅದಕ್ಕನುಗುಣವಾಗಿ 1924, ಫೆಬ್ರವರಿಯಲ್ಲಿ ಕಾಶಿ ಮತ್ತು ರಂಭಾಪುರಿ ಜಗದ್ಗುರುಗಳು ಹಾಗೂ ಕುಮಾರಸ್ವಾಮಿಗಳ ಸಮ್ಮುಖದಲ್ಲಿ ಪಟ್ಟಾಭಿಷೇಕ ನಡೆಯಿತು. ಹೀಗೆ ಮಹಾರುದ್ರ, ಚನ್ನಬಸವ ಪಟ್ಟದ್ದೇವರಾದರು. ಅಂದು ಹರಸಲು ಬಂದಿದ್ದ ಕುಮಾರಸ್ವಾಮಿಗಳು, “ನೀನು ಮಠದ ಗುಲಾಮನಾಗಬೇಡ, ಕನ್ನಡ ಭಾಷೆಯ ಪ್ರಸಾರ ಮತ್ತು ವಚನಗಳ ಪ್ರಸಾರ ನಿನ್ನ ಜೀವನದ ಗುರಿಯಾಗಿರಲಿ” ಎಂದು ಕಿವಿಮಾತು ಹೇಳಿದರು. ಅದೇ ಚನ್ನಬಸವ ಪಟ್ಟದ್ದೇವರಿಗೆ ದಾರಿದೀವಿಗೆಯಾಯಿತು. ನಿಮಗೆಲ್ಲ ಗೊತ್ತೇ ಇದೆ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ ಬಂದರೂ ಹೈದರಾಬಾದ್ ಕರ್ನಾಟಕ ನಿಜಾಮನಿಂದ ಸ್ವತಂತ್ರಗೊಳ್ಳಲು ಇನ್ನೂ 13 ತಿಂಗಳುಗಳೇ ಬೇಕಾದವು. ಅಂತಹ ನಿಜಾಮನ ಆಡಳಿತ ಹೇಗಿದ್ದಿರಬಹುದು ಎಂಬುದು ಊಹಿಸಿ. ನಿಜಾಮನ ಸರಕಾರ, ರಝಾಕರ ಕಿರುಕುಳ, ಆಡಳಿತ ಭಾಷೆ ಪರ್ಷಿಯನ್. ಇಂತಹ ಅಪಾಯಗಳಿದ್ದ ಕಾಲದಲ್ಲೂ ಪಟ್ಟದ್ದೇವರು ಹೊರಗೆ ಉರ್ದು ಬೋರ್ಡ್ ನೇತುಹಾಕಿ ಕನ್ನಡ ಕಲಿಸತೊಡಗಿದರು. 1936ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ಕೊಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡಾಗ, “ಶಾಲೆ ತೊಗೊಂಡು ನಮಗೆ ಏನ್ ಮಾಡೋದಿದೆ. ನಾವೇನು ಪಾಟೀಲರಲ್ಲ, ಗೌಡರಲ್ಲ, ಕುಲಕರ್ಣೇರೂ ಅಲ್ಲ. ಹೊಲ-ಮನಿ, ದನ-ಕರು ನೋಡಿಕೊಂಡಿದ್ದರೆ ಸಾಕು” ಎಂಬ ತಿರಸ್ಕಾರದ ಮಾತುಗಳು ಎದುರಾದವು. ಆಗ “ಮನುಷ್ಯರಿಗೆ ಶಿಕ್ಷಣ ಭಾಳ್ ಜರೂರಿ ಅದ. ಪ್ರಾಣಿಗಳಿಗೆ ಶಿಕ್ಷಣ ಬೇಕಿಲ್ಲ. ಮನುಷ್ಯರಾದ ನಾವು ನಾಲ್ಕು ಅಕ್ಷರ ಕಲಿಯಬೇಕು. ಬುದ್ಧಿವಂತರಾಗಲು ಶಿಕ್ಷಣ ಬೇಕು. ವಿದ್ಯೆಯಿಂದಲೇ ಬುದ್ಧಿ ಬರುತ್ತದೆ. ಎಷ್ಟು ದಿನ ನಿರಕ್ಷರಿಗಳಾಗಿ ಇರುತ್ತೀರಿ” ಎಂದು ಜನರಿಗೆ ಬುದ್ಧಿಮಾತು ಹೇಳಿದರು.

ಭೂಮಿ ನಿನ್ನದಲ್ಲ
ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ
ನಿನ್ನೊಡವೆ ಎಂಬುದು eನರತ್ನ

ಎಂಬ ಅಲ್ಲಮ ಪ್ರಭುವಿನ ವಚನದ ಸಂದೇಶವನ್ನು ಸಾಕಾರ ಗೊಳಿಸಲು ಮುಂದಾದರು. ಅದರ ಫಲವೇ ‘ಪುಷ್ಠಿ ಫಂಡ್’. ಕುದುರೆಯನ್ನೇರಿದ ಚನ್ನಬಸವ ಪಟ್ಟದ್ದೇವರು ಊರೂರು ಅಲೆದರು, ಮನೆಮನೆ ತಿರುಗಿದರು. ಪ್ರತಿಯೊಬ್ಬರು ಒಂದು ಹಿಡಿ(ಮುಷ್ಠಿ) ಅಕ್ಕಿ, ಜೋಳ, ರಾಗಿ ಏನನ್ನಾದರೂ ಕೊಡಲೇಬೇಕು. ಹಾಗೆ ಸಂಗ್ರಹಿಸಿದ ದವಸ-ಧಾನ್ಯಗಳಲ್ಲಿ ಒಂದಿಷ್ಟನ್ನು ಮಾರಾಟ ಮಾಡಿ ಅದರಿಂದ ಬಡಮಕ್ಕಳಿಗೆ ಅಕ್ಷರ ದಾಸೋಹ, ಉಳಿದ ಧಾನ್ಯದಿಂದ ಅನ್ನದಾಸೋಹ ಕಾರ್ಯ ಆರಂಭಿಸಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದು, ಬೆಳಸಿದ್ದೇ ಹೀಗೆ. ಅಪ್ಪಾರಾವ್ ಶಟ್‌ಕಾರ, ನಾರಾಯಣ ಖೇಡ್ ಅವರಂತಹ ಮಹನೀಯರು ಧಾರಾಳವಾಗಿ ಸಹಾಯವನ್ನೂ ನೀಡಿದರು. ಇವತ್ತು ನರ್ಸರಿಯಿಂದ ಎಂಜಿನಿಯರಿಂಗ್ ಕಾಲೇಜಿನವರೆಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ 32 ಶಾಲಾ-ಕಾಲೇಜುಗಳಿವೆ. 1962ರಲ್ಲಿ ಭಾಲ್ಕಿಯವರೇ ಆದ ಭೀಮಣ್ಣ ಖಂಡ್ರೆ ಟ್ರಸ್ಟ್‌ನ ಅಧ್ಯಕ್ಷರಾದರು. ಅವರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟ ಪಟ್ಟದ್ದೇವರು ನಿರುಮ್ಮಳವಾದರು. ಶಾಸಕ, ಮಂತ್ರಿ ಹೀಗೆ ರಾಜಕೀಯದಲ್ಲೂ ಮೇಲೇರುತ್ತಾ ಹೋದ ಭೀಮಣ್ಣ ಖಂಡ್ರೆ ಸದ್ದಿಲ್ಲದೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನೇ ಲಪಟಾಯಿಸಿ ತಮ್ಮದಾಗಿಸಿಕೊಂಡರು! ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮೀಜಿ ಹಕ್ಕುಪ್ರತಿಪಾದನೆ ಮಾಡದೆ, ಸೇವೆ ಮಾಡುವವನಿಗೆ ಸ್ವತ್ತಿನ ಹಂಗೇಕೆ ಎಂದು ಸುಮ್ಮನಾದರು. ಆದರೆ ಭಾಲ್ಕಿಯ ಜನ ಸುಮ್ಮನಾಗಲಿಲ್ಲ. ಭೀಮಣ್ಣ ಖಂಡ್ರೆಯವರನ್ನು ಸತತ ಎರಡು ಬಾರಿ ಸೋಲಿಸಿ ಅವರ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಿದರು. ಇತ್ತ ಭಾಲ್ಕಿ ಹಿರೇಮಠ ಸಂಸ್ಥಾನದ ಉತ್ತರಾಧಿಕಾರಿಗಳಾಗಿ ಬಂದ ಹಾಗೂ ಹಾಲಿ ಯತಿಗಳಾದ ಬಸವಲಿಂಗ ಪಟ್ಟದ್ದೇವರು ಹಬ್ಬ-ಜಾತ್ರೆ ಮಾಡಿಕೊಂಡು ಸುಖಾಸುಮ್ಮನೆ ಕುಳಿತುಕೊಳ್ಳದೆ 1992ರಲ್ಲಿ ‘ಹಿರೇಮಠ ಸಂಸ್ಥಾನ ವಿದ್ಯಾಪೀಠ(ಟ್ರಸ್ಟ್)’ ಸ್ಥಾಪನೆ ಮಾಡಿದರು. ಇವತ್ತು ಈ ಸಂಸ್ಥೆಯಡಿ 17 ಪ್ರಾಥಮಿಕ ಶಾಲೆಗಳು, 10 ಪ್ರೌಢಶಾಲೆಗಳು, 12 ಕಾಲೇಜುಗಳಿವೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ೪೦೦ಕ್ಕೂ ಹೆಚ್ಚು ಬಡ, ನಿರ್ಗತಿಕ, ಅನಾಥ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ವ್ಯವಸ್ಥೆಯಿದೆ. ಹುಟ್ಟುತ್ತಲೇ ತೊಟ್ಟಿ ಸೇರಿ ನಾಯಿಪಾಲಾಗುವ ಹಸುಳೆಗಳೂ ಅಲ್ಲಿ ಹೊಸ ನಂಟು, ಹೊಸ ಬದುಕು ಕಂಡುಕೊಳ್ಳುತ್ತಿವೆ. ‘ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಉದ್ಯೋಗ ಸ್ಥಳೀಯವಾಗಿ ಸಿಗುವಂತೆ ಮಾಡುವುದೇ ನಿಜವಾದ ಅಭಿವೃದ್ಧಿ, ಪ್ರಗತಿ’ ಎನ್ನುತ್ತಾನೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಜೋಸೆಫ್ ಸ್ಟಿಗ್ಲಿಟ್ಝ್. ಬೀದರ್‌ನಂತಹ ಕರ್ನಾಟಕದ ಒಂದು ಮೂಲೆಯಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿರುವ ಭಾಲ್ಕಿ ಸಂಸ್ಥಾನ ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿದೆ.

ಕಟ್ಟಬೇಕು ಉರುಳಿಹೋಗದ ಕಟ್ಟಡ
ಕಟ್ಟಿದ್ದಾರೆ ಬಸವಲಿಂಗ ಪಟ್ಟದ್ದೇವರ ಗುರುಕುಲ

ಬನ್ನಿರಿ ಮಕ್ಕಳೇ ಅರಳುವ ಹೂಗಳೇ
ವಿದ್ಯೆಯ ಮಂದಿರ ತೆರೆದಿದೆ ನಿಮಗಾಗಿ
ಗುರುಗಳೇ ತೈಲವಾಗಿ ನೀವೆಲ್ಲ ಬತ್ತಿಯಾಗಿ ವಿದ್ಯೆಯ ಜ್ಯೋತಿ
ಬೆಳಗಲು ಬನ್ನಿರಿ ಗುರುಕುಲಕ್ಕೆ

ಇವತ್ತು ಬಸವಲಿಂಗ ಪಟ್ಟದ್ದೇವರ ಬಗ್ಗೆ ಹೊಸ ಪದ್ಯಗಳು ರಚನೆಯಾಗುತ್ತಿವೆ. ಚನ್ನಬಸವ ಪಟ್ಟದ್ದೇವರು ಅಗಲಿ ೧೦ ವರ್ಷಗಳಾದರೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ಉತ್ತರಾಧಿಕಾರಿಯಾಗಿ ಬಂದಿರುವ ಬಸವಲಿಂಗ ಪಟ್ಟದ್ದೇವರೂ ಸಾಗುತ್ತಿದ್ದಾರೆ. ಈ 3R’s ಅಂದರೆ ರೀಡಿಂಗ್, ರೈಟಿಂಗ್, ಅರಿತ್‌ಮಿಟಿಕ್ಸ್(ಓದು-ಬರಹ-ಲೆಕ್ಕ) ಇಂತಹ ಮೂಲ ಶಿಕ್ಷಣ ನೀಡಬೇಕಾದುದು ನಮ್ಮ ಮಠಮಾನ್ಯಗಳ ಕರ್ತವ್ಯ ಹಾಗೂ ಜವಾಬ್ದಾರಿ. ಅದನ್ನು ಮರೆತಿರುವ, ಜಾತಿ ರಾಜಕೀಯ ಹಾಗೂ ವೋಟಿನ ದಲ್ಲಾಳಿ ಕೆಲಸದಲ್ಲಿ ತೊಡಗಿರುವ ನಮ್ಮ ಕರ್ನಾಟಕದ ಕೆಲ ಮಠಗಳು ಭಾಲ್ಕಿ ಹಿರೇಮಠ ಸಂಸ್ಥಾನವನ್ನು ಕಂಡು ಹೊಸ ವರ್ಷದಲ್ಲಾದರೂ ತಮ್ಮ ಮೂಲ ಜವಾಬ್ದಾರಿಯನ್ನ ರಿತುಕೊಳ್ಳಬೇಕು.
Happy New Year!

10 Responses to “ಏನು ಬರೆಯಲಿ ಚೆನ್ನ, ಹೇಗೆ ತೋರಲಿ ನಿನ್ನ?”

  1. Prabhu says:

    It is nice article still the people r doing such wonderful Job

  2. manjunath says:

    we really miss such Guru…..

  3. Raj says:

    Thanks for writing column on pattadevaru.

  4. Arpana says:

    Nice article. My mom had liked this article very much.

  5. Yallarling says:

    1st time I read such an article in news paper on my hometown………. thanks for writing such articles………
    I expect few more articles based on Bidar district……..

  6. murali says:

    good,nice article sir thank u very muchj

  7. mahantesh biradar says:

    wondrwrfull artical on channa pattadevru and i miss to channa pattadevru. Thank you sir

  8. mahesh yadawad says:

    superb artcle sir

  9. mahesh bomma says:

    thank u pratap simha ji,he is our guruji we studied our high school in our swamiji gurukul school,thanks for ur article

  10. siddu dana says:

    In bidar the only one great man our dr.c.b.p devaru