Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಟಿವಿ ನೋಡಿ, ನಿದ್ದೆ ಮಾಡಿ ಅನ್ನೋಕೆ, ಮಕ್ಕಳ ಸೃಷ್ಟಿಗೆ ನಿತ್ಯವೂ ‘ಶ್ರಮ’ಪಡಬೇಕಾ ಸಾರ್!

ಟಿವಿ ನೋಡಿ, ನಿದ್ದೆ ಮಾಡಿ ಅನ್ನೋಕೆ, ಮಕ್ಕಳ ಸೃಷ್ಟಿಗೆ ನಿತ್ಯವೂ ‘ಶ್ರಮ’ಪಡಬೇಕಾ ಸಾರ್!

population

ಟಿವಿಯಿಂದ ಎಲ್ಲಕ್ಕಿಂತ ಮಿಗಿಲಾದ ಒಂದು ಲಾಭವಿದೆ! ಒಂದು ವೇಳೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಿದರೆ ಜನ ನಡುರಾತ್ರಿಯವರೆಗೂ ಟಿವಿ ನೋಡಿ, ಮಲಗಿಕೊಂಡು ಬಿಡುತ್ತಾರೆ. ಮಕ್ಕಳನ್ನು ಮಾಡಲು ಅವರಿಗೆ ಸಮಯಾವಕಾಶವೇ ಸಿಗುವುದಿಲ್ಲ!! ಎಲ್ಲಿ ವಿದ್ಯುತ್ ಇಲ್ಲವೋ ಅಲ್ಲಿ ಮಕ್ಕಳು ಹುಟ್ಟಿಸುವುದನ್ನು ಬಿಟ್ಟರೆ ಬೇರೇನೂ ಕೆಲಸವಿರುವುದಿಲ್ಲ!!! ಇದನ್ನು ಲಘುವಾಗಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. I am serious. ಟಿವಿ ಬಹುದೊಡ್ಡ ಪರಿಣಾಮ ಬೀರಬಲ್ಲದು. ಜನಸಂಖ್ಯಾಸ್ಫೋಟ ಸಮಸ್ಯೆಯನ್ನು ನಿವಾರಿಸಲು ಇದೊಂದು ಪರಿಣಾಮಕಾರಿ ಮಾರ್ಗ. ಜನಸಂಖ್ಯೆ ಹೆಚ್ಚಳ ಸಮಸ್ಯೆಯನ್ನು ಟಿವಿ ಮೂಲಕ ೮೦ ಪರ್ಸೆಂಟ್ ಕಡಿಮೆ ಮಾಡಬಹುದು”.

ಇದು ಜೋಕಲ್ಲ.

ಇಲ್ಲಾ… ಇಲ್ಲಾ… ಇದು ಜೋಕೇ ಇರಬೇಕು ಎಂದು ದಯ ವಿಟ್ಟು ಭಾವಿಸಬೇಡಿ. ಜುಲೈ 11 ತಾರೀಖು ವಿಶ್ವ ಜನಸಂಖ್ಯಾ ದಿನ. ಪ್ರತಿ ವರ್ಷವೂ ಆ ದಿನದಂದು ಜಗತ್ತಿನಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಸಭೆ-ಸಮಾರಂಭಗಳು ಜರುಗುತ್ತವೆ. ಮೊನ್ನೆ 2009, ಜುಲೈ 11ರಂದು ನಡೆದ ಅಂತಹದ್ದೇ ‘ವಿಶ್ವ ಜನಸಂಖ್ಯಾ ದಿನಾಚರಣೆ’ಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್, “ಒಂದು ವೇಳೆ ಎಲ್ಲ ಗ್ರಾಮಗಳಿಗೂ ವಿದ್ಯುತ್ ಒದಗಿಸಿದರೆ ಜನ ನಡುರಾತ್ರಿವರೆಗೂ ಟಿವಿ ನೋಡಿ, ಮಲಗಿಕೊಂಡು ಬಿಡುತ್ತಾರೆ, ಮಕ್ಕಳನ್ನು ಮಾಡಲು ಅವಕಾಶವೇ ಇಲ್ಲದಂತಾಗುತ್ತದೆ” ಎಂದು ಹೇಳುತ್ತಿದ್ದರೆ ಯಾರಿಗೂ ನಂಬಿಕೆಯೇ ಬರುತ್ತಿರಲಿಲ್ಲ. ಇವರೇನೋ ಜೋಕ್ ಮಾಡುತ್ತಿರಬೇಕೆಂಬ ಅನುಮಾನ ಕಾಡ ತೊಡಗಿತ್ತು. ಅದನ್ನರಿತ ಆಜಾದ್, “ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ” ಎಂದು ವೇದಿಕೆಯಲ್ಲೇ ಸ್ಪಷ್ಟೀಕರಣವನ್ನೂ ಕೊಟ್ಟುಬಿಟ್ಟರು. ಅಷ್ಟೇ ಅಲ್ಲ, ಟಿವಿಯಿಂದ ಜನಸಂಖ್ಯಾ ಹೆಚ್ಚಳವನ್ನು ಹೇಗೆ 80 ಪರ್ಸೆಂಟ್  ಕಡಿಮೆ ಮಾಡಬಹುದು ಎಂಬ ತಮ್ಮ ಹೇಳಿಕೆಯನ್ನು ಕೂಲಂಕಷವಾಗಿ ವಿವರಿಸಲೂ ನಿಂತರು. “ಹಿಂದಿನ ಕಾಲದಲ್ಲಿ ಜನರಿಗೆ ಸೆಕ್ಸ್ ಬಿಟ್ಟರೆ ಬೇರಾವ ಮನರಂಜನೆಯೂ ಇರಲಿಲ್ಲ. ಹಾಗಾಗಿ ಹತ್ತಾರು ಮಕ್ಕಳನ್ನು ಹುಟ್ಟಿಸುತ್ತಿದ್ದರು. ಇಂದು ಟಿವಿಯೇ ಮನರಂಜನೆಯ ಅತಿದೊಡ್ಡ ಮೂಲವಾಗಿದೆ. ಆದಕಾರಣ, ಪ್ರತಿ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಮಾಡುವುದು ಬಹುಮುಖ್ಯ. ಆ ಮೂಲಕ ನಡುರಾತ್ರಿವರೆಗೂ ಜನ ಟಿವಿ ವೀಕ್ಷಿಸುವಂತೆ ಮಾಡಬಹುದು. ಧಾರಾವಾಹಿಗಳು ಮುಗಿಯುವ ಹೊತ್ತಿಗೆ ತುಂಬಾ ಸಮಯವಾಗಿರುತ್ತದೆ. ಜನರು ಆಯಾಸದಿಂದಾಗಿ  ಸೆಕ್ಸ್ ಮಾಡದೇ ಮಲಗಿಕೊಳ್ಳುತ್ತಾರೆ. ಮಕ್ಕಳನ್ನು ಮಾಡಲು ಅವಕಾಶವೇ ಸಿಗುವುದಿಲ್ಲ”.

ಅಲ್ಲಾ, ಹೀಗೂ ಹೇಳಲು ಸಾಧ್ಯವಿದೆಯೇ ಎಂದು ಆಶ್ಚರ್ಯ ಪಡಬೇಡಿ.

ಪಾಪ, ನಮ್ಮ ಆಜಾದ್ ಸಾಹೇಬರು ರಾತ್ರಿ ಹತ್ತೂವರೆ ಹನ್ನೊಂದು ಗಂಟೆ ನಂತರ ಯಾವತ್ತೂ ಟಿವಿ ನೋಡಿಲ್ಲ ಅಂತ ಕಾಣುತ್ತೆ! ಒಂದು ವೇಳೆ ಎಂಟಿವಿ, ಎಎಕ್ಸ್‌ಎನ್, ಎಚ್‌ಬಿಒ, ಎಫ್‌ಟಿವಿ, ಝೀ ಟ್ರೆಂಡ್ಝ್ ಮುಂತಾದ ಇಂಗ್ಲಿಷ್ ಚಾನೆಲ್‌ಗಳನ್ನು, ವಿವಿಧ ಭಾಷಾ ಚಾನೆಲ್‌ಗಳಲ್ಲೂ ರಾತ್ರಿ ವೇಳೆ ‘ಮಾತ್ರ’ ಪ್ರಸಾರವಾಗುವ ಹಾಡುಗಳನ್ನು ವೀಕ್ಷಿಸಿದ್ದರೆ ಟಿವಿಯೇ ಜನಸಂಖ್ಯೆ ಹೆಚ್ಚಳಕ್ಕೆ ಮುಖ್ಯಕಾರಣ ಎಂದುಬಿಡುತ್ತಿದ್ದರೋ ಏನೋ?! “Spiltsvilla’, “Banned Ads’, “Midnight Hot’, ‘ಮಿಡ್‌ನೈಟ್ ಮಸಾಲ’ ಹಾಗೂ ರಾತ್ರಿಯಷ್ಟೇ ಪ್ರಸಾರವಾಗುವ ಇನ್ನಿತರ ಕಚಗುಳಿಯಿಕ್ಕುವ ಹಾಡುಗಳು ಮುಪ್ಪು ಬಂದವರಿಗೂ ಹುರುಪು ತುಂಬುವಂತಿರುತ್ತವೆ ಆಜಾದ್ ಸಾಬ್! ಅದರಲ್ಲೂ ಡಿಶ್ ಟಿವಿಗಳು ಬಂದ ಮೇಲಂತೂ ಗ್ರಾಹಕರು ನೇರವಾಗಿ ಸೆಟಲೈಟ್ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ. ಕಾಸು ಹೆಚ್ಚು ಕೊಟ್ಟಷ್ಟೂ ಹೆಚ್ಚು ಚಾನೆಲ್‌ಗಳು ಸಲೀಸಾಗಿ ಲಭ್ಯವಾಗುತ್ತವೆ. ಸರಕಾರ ಲಂಗು-ಲಗಾಮು ಹಾಕುವುದಕ್ಕೂ ಸಾಧ್ಯವಿಲ್ಲ. ಸಮಾಜ ಈ ಪರಿ ಅಧಃಪತನಕ್ಕಿಳಿಯಲು, ಜನ ದಾರಿ ತಪ್ಪಲು ಹಾಗೂ ವಿವಾಹೇತರ ಸಂಬಂಧಗಳಿಗೆ ಧಾರಾವಾಹಿಗಳೇ ಕಾರಣ, ಮಕ್ಕಳು ಓದನ್ನು ಬಿಟ್ಟು ಕಾಲಹರಣ ಮಾಡಲು ಟಿವಿಯೇ ಕಾರಣ ಎಂದು ದೂರುವವರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರ ಸಲಹೆ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿದೆ.

ಅದಿರಲಿ, ಈ ಟಿವಿಗೂ ಸೆಕ್ಸ್‌ಗೂ ಏನು ಸಂಬಂಧ? ಅಕಸ್ಮಾತ್ ಟಿವಿ ಕಾರ್ಯಕ್ರಮ, ಧಾರಾವಾಹಿಗಳಿಗೆ ಜನ ದಾಸರಾದರೂ, ಯಾರಾದರು ವಾರದ ೭ ದಿನಗಳೂ ಟಿವಿ ನೋಡಿ ಮಲಗಿ ಕೊಳ್ಳಲು ಸಾಧ್ಯವೆ? ಅಷ್ಟಕ್ಕೂ ಮಕ್ಕಳ ಸೃಷ್ಟಿಗೆ ನಿತ್ಯವೂ ‘ಶ್ರಮ’ ಪಡಬೇಕಾ ಸಾರ್?!
ಹಾಸ್ಯ ಹಾಗಿರಲಿ, ಜನಸಂಖ್ಯಾಸ್ಫೋಟವೆಂಬುದು ಖಂಡಿತ ನಮ್ಮ ದೇಶ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದು. ಮುಂದೊಂದು ದಿನ ಅದೇ ಮುಖ್ಯ ಸಮಸ್ಯೆಯಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಇವೆ. 2000ದಲ್ಲಿ ಶತಕೋಟಿ ಜನಸಂಖ್ಯೆಯನ್ನು ದಾಟಿದ ಭಾರತದ ಹಾಲಿ ಜನಸಂಖ್ಯಾ ಪ್ರಮಾಣ 115 ಕೋಟಿ. ಇದೇ ವೇಗದಲ್ಲಿ ನಾವು ‘ಜನೋತ್ಪಾದನೆ’ ಯನ್ನು ಮುಂದುವರಿಸಿದರೆ 2030ರ ವೇಳೆಗೆ 153 ಕೋಟಿ ಜನಸಂಖ್ಯೆ ಯನ್ನು ದಾಟಲಿದ್ದೇವೆ. ಅದೇ ವೇಳೆಗೆ ಚೀನಾದ ಜನಸಂಖ್ಯೆ 146 ಕೋಟಿಯನ್ನು ತಲುಪಿ, 2030ರಿಂದ ಕುಸಿತ ಕಾಣಲಿದೆ. ಅಷ್ಟಕ್ಕೂ ‘ಕುಟುಂಬಕ್ಕೊಂದೇ ಮಗು’ ನೀತಿಯನ್ನು ಚೀನಾ 1979ರಲ್ಲೇ ಜಾರಿಗೆ ತಂದಿದೆ! ಚೀನೀ ನಾಯಕರಿಗೆ ಅಂತಹ ದೂರದೃಷ್ಟಿಯಿತ್ತು. ಹಾಗಾಗಿ ೩೦ ವರ್ಷಗಳ ಹಿಂದೆಯೇ ‘ಒಂದೇ ಮಗು’ ನೀತಿಯನ್ನು ಜಾರಿಗೆ ತಂದರು. ಮೊದಲಿಗೆ, ಹೆರಿಗೆ ಆಸ್ಪತ್ರೆಯಲ್ಲೇ ನಡೆಯುವಂತೆ ಮಾಡಿದರು. ಯಾರಾದರೂ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದರೆ ಮಗು ಹುಟ್ಟಿದ ಕೂಡಲೇ ನೆತ್ತಿಗೆ ಅಯೋಡಿನ್ ಚುಚ್ಚುಮದ್ದು ಕೊಟ್ಟು ಕ್ರೂರವಾಗಿ ಸಾಯಿಸುತ್ತಿದ್ದರು. ಅದರಿಂದಲೂ ಬದುಕುಳಿದವರನ್ನು ‘ಅಯೋಡಿನ್ ಬೇಬೀಸ್’ ಎನ್ನುತ್ತಿದ್ದರು. ಒಂದೇ ಮಗುವನ್ನು ಮಾಡಿಕೊಂಡ ಪೋಷಕರು ಹಾಗೂ ಮಗುವಿಗೆ ವಿಶೇಷ ಸವಲತ್ತು ಗಳನ್ನು ನೀಡುತ್ತಾರೆ. ಒಂದಕ್ಕಿಂತ ಹೆಚ್ಚು ಮಕ್ಕಳು ಬೇಕೆಂದವರು ಸರಕಾರಕ್ಕೆ ದಂಡತೆತ್ತು, ಅನುಮತಿ ಪಡೆದುಕೊಂಡು ಮಕ್ಕಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಂತಹ ನೀತಿಗಳನ್ನು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಖಂಡಿತ ಜಾರಿಗೆ ತರಲು ಸಾಧ್ಯವಿಲ್ಲ, ಸಾಧುವೂ ಅಲ್ಲ.

ಹಾಗಂತ ಸುಮ್ಮನಿರುವುದಕ್ಕಾದರೂ ಸಾಧ್ಯವಿದೆಯೇ?

ಇದೇ ಪ್ರಮಾಣದಲ್ಲಿ ನಮ್ಮ ಜನಸಂಖ್ಯೆ ಬೆಳೆಯುತ್ತಾ ಹೋದರೆ 2050ಕ್ಕೆ 180 ಕೋಟಿ, 2100ರ ವೇಳೆಗೆ 2 ಶತಕೋಟಿ ದಾಟಿ ಅಂತಹ ಸಾಧನೆಗೈದ ಜಗತ್ತಿನ ಏಕೈಕ ರಾಷ್ಟ್ರ ಭಾರತವಾಗುವ ಸಾಧ್ಯತೆ ಇದೆ ಎಂದು ಎಲ್ಲ ಅಂದಾಜು, ಲೆಕ್ಕಾಚಾರಗಳೂ ಹೇಳುತ್ತಿವೆ. ಅಂತಹ ಸನ್ನಿವೇಶ ಊಹಿಸುವುದಕ್ಕೂ ಭಯ ಹುಟ್ಟಿಸುವಂತಿದೆ. ಈಗಿನ ಪರಿಸ್ಥಿತಿಯನ್ನೇ ತೆಗೆದುಕೊಳ್ಳಿ. ಜಗತ್ತಿನ ಒಟ್ಟು ಭೂಭಾಗದಲ್ಲಿ ಭಾರತದ ಪ್ರಮಾಣ ಶೇ.2.5. ಆದರೆ ಜನಸಂಖ್ಯೆ ಮಾತ್ರ 17 ಪರ್ಸೆಂಟ್!! ಬಾಂಗ್ಲಾ ಅತಿಕ್ರಮಣ ಕಾರರಿಂದಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳು ತುಂಬಿ ತುಳುಕಲಾರಂಭಿಸಿದ್ದರೆ,  ಅನ್ಯರಾಜ್ಯದವರು ತಮ್ಮ ಅನ್ನ, ಉದ್ಯೋಗ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಸಂಘರ್ಷ, ಪ್ರಾದೇಶಿಕ ಮನೋಭಾವಗಳು ದೇಶದೊಳಗೇ ಆರಂಭವಾಗಿವೆ. “ಸಂಪನ್ಮೂಲ ಹಾಗೂ ಜನಸಂಖ್ಯೆ ನಡುವಿನ ಅಸಮತೋಲನವೇ ನಕ್ಸಲಿಸಂನಂತಹ ಸಾಮಾಜಿಕ ಸಮಸ್ಯೆಗೆ ಕಾರಣ. ಬಡತನ, ನಿರುದ್ಯೋಗ, ಬೆಲೆ ಹೆಚ್ಚಳ ಹಾಗೂ ಕಾನೂನು ವ್ಯವಸ್ಥೆಯ ಕುಸಿತ ಇವುಗಳಿಗೂ ಜನಸಂಖ್ಯಾಸ್ಫೋಟ ಕಾರಣವಾಗಿದೆ. ಇದು ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟವಾಗಿ ಪರಿಣಮಿಸಿದೆ. ಆಸ್ಟ್ರೇಲಿಯಾ, ಅಮೆರಿಕ, ಕೊಲ್ಲಿ ರಾಷ್ಟ್ರಗಳು ತಮ್ಮ ಜನರ ಉದ್ಯೋಗವನ್ನು ಕಾಪಾಡಿಕೊಳ್ಳುವ ಸಲುವಾಗಿ ಭಾರತೀಯರನ್ನು ಹಿಂದಕ್ಕಟ್ಟುತ್ತಿದ್ದಾರೆ. ಒಂದು ವರ್ಷದಿಂದಲೂ ಇಂತಹ ಬೆಳವಣಿಗೆ ಕಂಡು ಬರುತ್ತಿದೆ” ಎಂಬ ಗುಲಾಮ್ ನಬಿ ಆಜಾದ್ ಮಾತಿನಲ್ಲಿ ಖಂಡಿತ ಹುರುಳಿದೆ. ಅವರು ಮೂಲತಃ ಒಬ್ಬ ಸಮಚಿತ್ತ ರಾಜಕಾರಣಿ. ಬಹಳ ವರ್ಷಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮೇಲುಸ್ತುವಾರಿ ವಹಿಸಿಕೊಂಡು ಚಾಕಚಕ್ಯತೆ ತೋರಿದವರು. ಮುಫ್ತಿ ಮೊಹಮದ್ ಸಯೀದ್ ಹಾಳುಗೆಡವಿದ್ದ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾದ ನಂತರವೇ. ಅಮರನಾಥ್ ಭೂಮಿ ಹಸ್ತಾಂತರದಿಂದಾಗಿ ಅಧಿಕಾರ ಕಳೆದುಕೊಂಡರೂ ಅವರೊಬ್ಬ ಸಂವೇದನಾಶೀಲ ವ್ಯಕ್ತಿ. ಆದರೆ ಕುಟುಂಬ ಯೋಜನೆ ಅಥವಾ ಜನಸಂಖ್ಯಾ ನಿಯಂತ್ರಣದ ಬಗ್ಗೆ ಅವರು ಆಡಿರುವ ಮಾತುಗಳಲ್ಲಿ ಮಾತ್ರ ಸಂವೇದನೆಯಾಗಲಿ, ತರ್ಕವಾಗಲಿ ಇಲ್ಲ. “ಟಿವಿ ನೋಡಿ, ಸೆಕ್ಸ್ ಮರೆಯಿರಿ, ಮೂವತ್ತು ವರ್ಷವಾಗುವವರೆಗೂ ಮದುವೆಯಾಗಬೇಡಿ” ಎಂಬ ಸಲಹೆಗಳು ಒಬ್ಬ ಜವಾಬ್ದಾರಿಯುತ ಹಾಗೂ ಸಮಸ್ಯೆಯ ಗಾಂಭೀರ್‍ಯವನ್ನು ಬಲ್ಲ ವ್ಯಕ್ತಿ ಕೊಡುವಂಥವುಗಳಲ್ಲ.

ಹಾಗಾದರೆ ಏನು ಮಾಡಬೇಕು?

1950ರಲ್ಲಿ ಒಟ್ಟು ಸಂತಾನೋತ್ಪತಿ ದರ(TFR- Total fertility rate), ಅಂದರೆ ಒಬ್ಬ ಮಹಿಳೆಗೆ ಜನಿಸುವ ಮಕ್ಕಳ ಪ್ರಮಾಣ 6 ಇತ್ತು. 2000ರಲ್ಲಿ ‘ರಾಷ್ಟ್ರೀಯ ಜನಸಂಖ್ಯಾ ನೀತಿ’ಯನ್ನು ಜಾರಿಗೆ ತಂದ ವಾಜಪೇಯಿಯವರ ಸರಕಾರ, 2010ರ ವೇಳೆಗೆ ಈ ದರವನ್ನು 2.1ಕ್ಕೆ ಇಳಿಸುವ ಗುರಿ ಹಾಕಿ ಕೊಂಡಿತು. ಆದರೆ 2009 ಬಂದರೂ TFR 2.8ರಲ್ಲಿದೆ. ಇದೇ ಪ್ರಮಾಣ ಮುಂದುವರಿದರೆ 2030ಕ್ಕೆ ಜನಸಂಖ್ಯೆ 150 ಕೋಟಿ ದಾಟುವುದು ಖಂಡಿತ. ಆದರೂ ತಮಿಳುನಾಡು, ಕೇರಳ ಹಾಗೂ ದೇಶದ ವಿವಿಧ ಮಹಾನಗರಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣ ಆಶಾದಾಯಕ ಪ್ರಮಾಣದಲ್ಲಿ ಕುಸಿದಿದೆ ಹಾಗೂ ಕುಸಿಯುತ್ತಿದೆ. “ಕುಟುಂಬ ಯೋಜನೆಯನ್ನು ಬಲವಂತವಾಗಿ ಅನುಷ್ಠಾನಗೊಳಿಸಲಾಗದು” ಎಂಬ ಆಜಾದ್ ಮಾತು ಒಪ್ಪುವಂಥದ್ದೇ ಆಗಿದ್ದರೂ, “”Survival of the First child is the biggest anti population measure”  ಎಂಬ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಹಿಂದೆಲ್ಲ ಹತ್ತಾರು ಮಕ್ಕಳನ್ನು ಹುಟ್ಟಿಸುತ್ತಿದ್ದರು ಎಂಬುದು ವಾಸ್ತವಾಂಶವೇ ಆಗಿದ್ದರೂ ಬದುಕುಳಿಯುತ್ತಿದ್ದುದು ಐದಾರು ಮಾತ್ರ. ಈಗಿನಂತೆ ವೈದ್ಯಕೀಯ ಸೇವೆಗಳಿರಲಿಲ್ಲ. ಎಲ್ಲಿ ಮಕ್ಕಳು ಮಡಿದಾವೋ ಎಂಬ ಭಯ ಹಾಗೂ ಸಂತಾನ ನಿಯಂತ್ರಣ ಮದ್ದು ಮತ್ತು ಮಾರ್ಗಗಳ ಕೊರತೆಯಿಂದಾಗಿ ಲಂಗು-ಲಗಾಮಿಲ್ಲದೆ ಮಕ್ಕಳನ್ನು ಹೆರುತ್ತಿದ್ದರು. ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ವೈದ್ಯಕೀಯ ಸೇವೆಗಳಿಲ್ಲದೆ ಎಷ್ಟೋ ಮಕ್ಕಳು ಸಾಯುತ್ತವೆ, ಸಂತಾನ ನಿಯಂತ್ರಣ ಮಾರ್ಗಗಳೂ ಅವರಿಗೆ ಗೊತ್ತಿಲ್ಲ. ಈ ದೃಷ್ಟಿಯಿಂದ, “ಮೊದಲ ಮಗುವಿನ ಪ್ರಾಣ ರಕ್ಷಣೆಯೇ ಅತಿದೊಡ್ಡ ಜನಸಂಖ್ಯಾ ನಿಯಂತ್ರಣ ತಂತ್ರ” ಎಂಬ ಅಮರ್ತ್ಯ ಸೇನ್ ಮಾತನ್ನು ನೋಡಬೇಕು ಹಾಗೂ ಗ್ರಾಮೀಣ ಮತ್ತು ಬಡಜನರಿಗೆ ವೈದ್ಯಕೀಯ ಸೇವೆ ತಲುಪುವಂತೆ ಮಾಡಬೇಕು.

1. ಶಿಶು ಮರಣ ಪ್ರಮಾಣ ಕಡಿತ, 2. ಪೋಷಕರಲ್ಲಿ ಅರಿವು ಮೂಡಿಸುವುದು, 3. ಮಹಿಳಾ ಜಾಗೃತಿ, 4. ಇನ್‌ಸ್ಟಿಟ್ಯೂಶನಲ್ ಡೆಲಿವರಿ ಅಂದರೆ ಆಸ್ಪತ್ರೆ ಅಥವಾ ವೈದ್ಯರ ನಿಗಾದಡಿ ಹೆರಿಗೆ, 5. ಬಾಲ್ಯ ಹಾಗೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹ ತಡೆ, 6. ಬಡತನ ನಿವಾರಣೆ.

ಈ ರೀತಿಯ Pro-active  ಅಥವಾ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೀವೇ ನೋಡಿ, ವಿದ್ಯಾವಂತರಾರೂ ಒಂದು ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ. ನಮಲ್ಲಿ “One Child Policy” ಇಲ್ಲದಿದ್ದರೂ ಪಟ್ಟಣಗಳಲ್ಲಿ ಜನ ಸ್ವಯಿಚ್ಛೆಯಿಂದ ಒಂದು-ಎರಡು ಮಕ್ಕಳಿಗೆ ಪೂರ್ಣ ವಿರಾಮ ಹಾಕಿ ಬಿಡುತ್ತಾರೆ. ಹೆಚ್ಚು ಮಕ್ಕಳನ್ನು ಮಾಡಿಕೊಂಡರೆ ದೇಶಕ್ಕಿಂತ ತಮಗೆ ಮೊದಲ ಹೊರೆ ಎಂದು ಅವರಿಗೆ ಗೊತ್ತು. ನಮ್ಮ ದೇಶದ ದೊಡ್ಡ ಸಮಸ್ಯೆಯೆಂದರೆ ಸಾಕಲು ತಾಕತ್ತಿಲ್ಲದವರು ಆರೆಂಟು ಹುಟ್ಟಿಸಿ ಬೀದಿಗೆ ಬಿಟ್ಟು ಬಿಡುತ್ತಾರೆ. ಅವರಿಗೆ ಮಕ್ಕಳೇ ಆದಾಯದ ಮೂಲವೆನಿಸಿ ಬಿಡುತ್ತದೆ. ಗುಲಾಂ ನಬಿ ಆಜಾದ್ ಅವರು ಜಾಗೃತಿ ಮೂಡಿಸಬೇಕಾಗಿರುವುದು ಈ ವರ್ಗದ ಜನರಿಗೇ ಹೊರತು ಟಿವಿ ನೋಡುವವರಿಗಲ್ಲ. ಅವರಿಗೆ ಸಮಸ್ಯೆ, ಹೊರೆ ಎರಡರ ಅರಿವೂ ಇರುತ್ತದೆ.

ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕಾದರೆ ಪೋಷಕ ರಲ್ಲಿ ಅರಿವು ಮೂಡಿಸುವುದೂ ಅಷ್ಟೇ ಮುಖ್ಯ. ಬಡ ವರ್ಗದವರಲ್ಲಿಯೂ ಎಷ್ಟೋ ಜನರಿಗೆ ಹೆಚ್ಚು ಮಕ್ಕಳು ಬೇಕೆಂಬ ಇಚ್ಛೆಯಿಲ್ಲದಿದ್ದರೂ ಸಂತಾನ ನಿಯಂತ್ರಣ ಮಾರ್ಗ ಗಳು ಗೊತ್ತಿರುವುದಿಲ್ಲ. ಕೇಳಿ ತಿಳಿದುಕೊಳ್ಳಲು ನಾಚಿಕೆ, ಮುಜುಗರಗಳು ಅಡ್ಡಬರುತ್ತವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಆರೋಗ್ಯ ಜಾಗೃತಿ ಸೇವೆಯನ್ನು ಗ್ರಾಮೀಣ ಪ್ರದೇಶ ಗಳಿಗೆ ವಿಸ್ತರಿಸಬೇಕಾದುದು ಮುಖ್ಯವಲ್ಲವೆ? ಕಾಂಡೋಮ್ ಹಾಗೂ ಇನ್ನಿತರ ಸಂತಾನನಿರೋಧಕ ಸಾಧನಗಳು ಎಲ್ಲೆಡೆ ಉಚಿತವಾಗಿ ಲಭ್ಯವಾಗುವಂತೆ ಮಾಡಬಾರದೇಕೆ? ಇವುಗಳ ಜತೆ ಮಹಿಳಾ ಸಶಕ್ತೀಕರಣವೂ ಮುಖ್ಯ. ಹೆರುವ ಮಹಿಳೆಯ ಸಶಕ್ತೀಕರಣವಾದರೆ ಗಂಡ ಹೇಳಿದ್ದಕ್ಕೆಲ್ಲ ಆಕೆ ತಲೆಯಾಡಿಸ ಬೇಕಾಗಿ ಬರುವುದಿಲ್ಲ. ಮಹಿಳೆ ಸ್ವಾವಲಂಬಿಯೂ ಆಗಬಹುದು, ಮಕ್ಕಳು ಇಷ್ಟೇ ಸಾಕು ಎಂದು ಗಂಡಸಿಗೆ ಪ್ರತಿಯಾಗಿ ಹೇಳುವ ಸಾಮರ್ಥ್ಯವನ್ನೂ ಪಡೆದುಕೊಳ್ಳಬಲ್ಲಳು. ಇನ್ನು ವಿದ್ಯಾವಂತ ರಿರಬಹುದು, ಅನಕ್ಷರಸ್ಥರಿರಬಹುದು ಸಂತಾನ ನಿಯಂತ್ರಣದ ವಿಷಯ ಬಂದಾಗ ಮಹಿಳೆಯೇ ಶಸ್ತ್ರಚಿಕಿತ್ಸೆಗೊಳಪಡಬೇಕು. ಗಂಡಸರೇಕೆ ವ್ಯಾಸೆಕ್ಟಮಿ ಮಾಡಿಸಿಕೊಳ್ಳಬಾರದು? ಭಾರತದಲ್ಲಿ ವ್ಯಾಸೆಕ್ಟಮಿಗೊಳಗಾಗುವ ಗಂಡಸರ ಪ್ರಮಾಣ ೦.೨ ಪರ್ಸೆಂಟ್‌ಗಿಂತಲೂ ಕಡಿಮೆ ಇದೆ. ಮಕ್ಕಳನ್ನು ಹೆರುವುದು, ಸಾಕಿ-ಸಲಹುವುದರಿಂದ ಹಿಡಿದು ಶಸ್ತ್ರಚಿಕಿತ್ಸೆವರೆಗೂ ಎಲ್ಲ ಕಷ್ಟವನ್ನು ಹೆಣ್ಣೇ ಏಕೆ ಅನುಭವಿಸಬೇಕು? ಸರಕಾರ ಈ ಬಗ್ಗೆಯೂ ಗಮನಹರಿಸಿ ಸಂತಾನ ನಿಯಂತ್ರಣದಲ್ಲಿ ಗಂಡಸರ ಭಾಗವಹಿಸು ವಿಕೆಯನ್ನು ಹೆಚ್ಚಿಸಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಲಭ್ಯವಾದರೆ ಜನಸಂಖ್ಯೆ ತಾನಾಗಿಯೇ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ಜಾತಿ/ವರ್ಗ/ಧರ್ಮ ಆಧಾರಿತ ಮೀಸಲು ಹಾಗೂ ಇನ್ನಿತರ ಸೌಲಭ್ಯಗಳನ್ನು ಒಂದು ಅಥವಾ ಎರಡೇ ಮಕ್ಕಳು ಮಾಡಿಕೊಂಡವರಿಗೂ ವಿಸ್ತರಿಸಬಾರದೇಕೆ?

ಅದಕ್ಕೂ ಮೊದಲು, ‘ವೋಟ್ ಬ್ಯಾಂಕ್ ಪಾಲಿಟಿಕ್ಸ್’ ಬಿಟ್ಟು, ಮಕ್ಕಳನ್ನು ಹೆಚ್ಚು ಹೆಚ್ಚು ತಯಾರು ಮಾಡಿದರೆ ತಮ್ಮ ಧರ್ಮೋದ್ಧಾರವಾಗುತ್ತದೆ ಎಂದು ಭಾವಿಸುವವರ ಮನಸ್ಥಿತಿಗೆ ಚಿಕಿತ್ಸೆ ಕೊಡಿ. “ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ಅವಕಾಶವಿಲ್ಲ” ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಖಲೀದ್ ರಶೀದ್ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಬಾಂಗ್ಲಾದೇಶ, ಇಂಡೋನೇಷ್ಯಾ ಹಾಗೂ ಕೊಲ್ಲಿಯಂತಹ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಕುಟುಂಬ ಯೋಜನೆಗಳು ಚಾಲ್ತಿಯಲ್ಲಿವೆ. ಅಲ್ಲೆಲ್ಲೂ ಧರ್ಮ ಅಡ್ಡಿಬಂದಿಲ್ಲ. ಭಾರತದಲ್ಲೇ ಎಲ್ಲರೂ ಏಕೆ ತಗಾದೆ ತೆಗೆಯು ತ್ತಾರೆ? ಜನಸಂಖ್ಯೆಯನ್ನು ನಿಯಂತ್ರಣ ಮಾಡಿ ಎಂದು ಖಂಡಿತ ಯಾವ ಧರ್ಮಗಳೂ ಹೇಳಿಲ್ಲ. ಏಕೆಂದರೆ ಧರ್ಮಗಳು ಹುಟ್ಟಿದಾಗ ಜನಸಂಖ್ಯಾಸ್ಫೋಟ ಒಂದು ಸಮಸ್ಯೆಯಾಗಿರಲಿಲ್ಲ. ಅಂದಮಾತ್ರಕ್ಕೆ ಅವರು ಜನಸಂಖ್ಯೆ ನಿಯಂತ್ರಣದ ಬಗ್ಗೆ ವಿರೋಧ ಹೊಂದಿದ್ದರು ಎಂದು ಹೇಳುವುದು ಸರಿಯಲ್ಲ. ತಮಗೆ ಮೀಸಲು ಹಾಗೂ ಇತರ ಸವಲತ್ತು, ಸೌಲಭ್ಯ ಕೊಡಿ ಎಂದು ತಮ್ಮ ಸಮುದಾಯದ ಪರವಾಗಿ ಒತ್ತಾಯಿಸಬಹುದಾದರೆ ಒಬ್ಬ ಗೌರವಾನ್ವಿತ ಮುಸ್ಲಿಂ ನಾಯಕನಾಗಿ ತನ್ನ ಸಮುದಾಯದವರಿಗೆ ಕಿವಿ ಮಾತನ್ನೂ ಹೇಳಬಹುದಲ್ಲವೆ? ಅಷ್ಟಕ್ಕೂ 2001ರ ಜನಗಣತಿ ಪ್ರಕಾರ ಅತಿವೇಗದಲ್ಲಿ ಹೆಚ್ಚಾಗುತ್ತಿರುವುದು ಮುಸ್ಲಿಮರ ಜನಸಂಖ್ಯೆ ಮಾತ್ರ. ಹಿಂದೂ ಹಾಗೂ ಕ್ರೈಸ್ತರಿಬ್ಬರ ಸಂಖ್ಯೆಯೂ ಕುಸಿಯುತ್ತಿದೆ. ಹಿಂದೂಗಳಲ್ಲೂ ಧರ್ಮಗುರುಗಳಿದ್ದಾರೆ. ಅವರಲ್ಲಿ ಕೆಲವರು ಲಂಪಟರಿದ್ದಾರೆ, ಮೋಸಗಾರರು, ಅನೈತಿಕ ಸಂಬಂಧವಿಟ್ಟು ಕೊಂಡವರು, ಶ್ರೀಕೃಷ್ಣನ ಪದತಲದಲ್ಲೇ ಅಕ್ರಮವಾಗಿ ಹೆಂಡತಿ ಇಟ್ಟುಕೊಂಡವರು, ಅನಧಿಕೃತವಾಗಿ ಮಕ್ಕಳು ಮಾಡಿಕೊಂಡಿ ರುವವರೂ ಇದ್ದಾರೆ. ಆದರೆ ಅವರ್‍ಯಾರೂ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ, ನಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅಷ್ಟಕ್ಕೂ ಧರ್ಮಗುರುಗಳನ್ನು ದೇವರ ಏಜೆಂಟ ರಾಗಲು ಎಂದಿಗೂ ಬಿಡಬಾರದು. ಜನಸಂಖ್ಯೆ ನಿಯಂತ್ರಣ ವಿಚಾರದಲ್ಲೂ ಧರ್ಮಗುರುಗಳು ಹಾಗೂ ಏಜೆಂಟರು ಮೂಗು ತೂರಿಸಲು ಅವಕಾಶ ಮಾಡಿಕೊಡಬೇಡಿ ಹಾಗೂ ಅವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವೂ ಇಲ್ಲ. ಒಟ್ಟಾರೆ, ಒಬ್ಬ ಜವಾಬ್ದಾರಿಯುತ ಸಚಿವರಾಗಿ ‘ಸೆಕ್ಸ್ ಮಾಡದೆ ಇರುವುದೇ ಸಂತಾನ ನಿಯಂತ್ರಣ ಮಾರ್ಗ’ ಎಂಬಂತೆ ಹೇಳಿಕೆ ನೀಡುವುದು, ಆ ಮೂಲಕ ಸೆಕ್ಸ್ ಅನ್ನು ಮಕ್ಕಳನ್ನು ತಯಾರಿ ಸುವ ಪ್ರಕ್ರಿಯೆ ಎಂಬಂತೆ ಬಿಂಬಿಸುವುದನ್ನು ಮೊದಲು ನಿಲ್ಲಿಸಿ. ಯಾವುದೇ ಒತ್ತಡ, ಹೇರಿಕೆಗಳಿಲ್ಲದೆ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಸಕಾರಾತ್ಮಕ ಮಾರ್ಗಗಳಿವೆ.

ಅವುಗಳ ಬಗ್ಗೆ ಯೋಚಿಸಿ ಸಾರ್.

9 Responses to “ಟಿವಿ ನೋಡಿ, ನಿದ್ದೆ ಮಾಡಿ ಅನ್ನೋಕೆ, ಮಕ್ಕಳ ಸೃಷ್ಟಿಗೆ ನಿತ್ಯವೂ ‘ಶ್ರಮ’ಪಡಬೇಕಾ ಸಾರ್!”

  1. Rachana says:

    Hi Pratap,
    Correct agi heliddira….E Muslim jana saako arhate ilde sumne maklanna maadi bidtare… These kids are the biggest threat to social security/economic stability. These are the potential robbers…pick pocketers……terrorists…
    Population Control SHOULD start with a MUSLIM family… Only then, we can see the results….

  2. Ganesh says:

    good article, i don’t think TV makes big difference in population control

    thanks

  3. kathyayini says:

    I surely agree with your point,
    i just want to tell that every one should b made aware of this
    instead of blaming them….
    if this human resource is used properly for the betterment we can reach heights..
    by this article atleast literates ll become aware of things..
    and if every one make aware of the other person who cant reach here about things, v can actually solve the problem is wat i feel.
    thanks for the wonderful article
    mr. pratap

    regards
    kathyayini

  4. it was the audition of a reality show.a man,who was the participant,introducing himself said that he is the father of 11 children and the husband of 2 wives……
    he was smiling,he was so proud about himself,he’s a Muslim…….
    if Gulam Nabi was really serious about the increasing population of India,then he wouldn’t have given such silly suggestion for its control.if he is really concerned about our country’s welfare then let he dare to tell the Muslims who live in small towns or slum areas to adopt population controlling measures…….i don’t know why still people call them as ‘minorities’……..
    i agree,it’s not fair to say that only Muslims are responsible for the increasing population,but as i know,no religion says to produce children as many as possible except Islam…….

  5. vinayraj says:

    hi pratap..good article….nimma lekhana tarkadinda koodide………..

  6. Poornima says:

    Hi Pratap,

    Good article. Yes the people should be educated first.They should be able tro think practically. Then only the population explosion will be controlled.

  7. Arjun gowda says:

    Good one Prathap….I am your fan…

  8. Krishnaprasad says:

    Good article Pratap, yes I agree that there are greater number of muslims who beleive or brainwashed to believe that birth control is against Islam.However this trend seems to be decreasing among educated urban Muslims. So, as you rightly said education seems to be the only solution.

    You should also have mentioned one more major contributor to our population explosion ( I am surprised how did you miss this one) – obsession about having a male child.Many parents end up having 3 to 4 female children before giving up their try. This obsession pervades all classes and religions of our society.

  9. gururaj says:

    ಸತ್ಯವಾದ ಮಾತು ಪ್ರತಾಪ್ ಸರ್ ಆದರೆ ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟೋರು ಯಾರು