Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಭವ್ಯ ಭವಿಷ್ಯಕ್ಕೆ ಭಾಷ್ಯ ಬರೆದು ಜೀವಚ್ಛವವಾಗಿ ಮಲಗಿರುವ ಅವರನ್ನು ಕೊನೆಗೂ ನೆನಪು ಮಾಡಿಕೊಳ್ಳುತ್ತಿದ್ದಾರಲ್ಲಾ, ಅಷ್ಟೇ ಸಮಾಧಾನ!

ಭವ್ಯ ಭವಿಷ್ಯಕ್ಕೆ ಭಾಷ್ಯ ಬರೆದು ಜೀವಚ್ಛವವಾಗಿ ಮಲಗಿರುವ ಅವರನ್ನು ಕೊನೆಗೂ ನೆನಪು ಮಾಡಿಕೊಳ್ಳುತ್ತಿದ್ದಾರಲ್ಲಾ, ಅಷ್ಟೇ ಸಮಾಧಾನ!

Happy birthday Atal Bihari Vajpayee. You don’t need to have a thousand schemes named after you to be loved and remembered as a great PM!

– ಅಭಿಜಿತ್ ಮಜೂಮ್ದಾರ್

ಮೊನ್ನೆ ಡಿಸೆಂಬರ್ 25ರಂದು ಇಂಥದ್ದೊಂದು ಟ್ವೀಟ್ ಮಾಡಿದವರು ಸಾಮಾನ್ಯ ವ್ಯಕ್ತಿಯಲ್ಲ. ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವ “ಹಿಂದುಸ್ತಾನ್ ಟೈಮ್ಸ್” ಪತ್ರಿಕೆಯ ಸಂಪಾದಕ. ಈ ಪತ್ರಿಕೆ 1924ರಲ್ಲಿ ಆರಂಭವಾಗಿದ್ದರಿಂದ ಇದುವರೆಗೂ ಕಾಂಗ್ರೆಸ್ ಪರ ಧೋರಣೆಯನ್ನೇ ತಳೆಯುತ್ತಾ ಬಂದಿದೆ. ಈಗಂತೂ ಪತ್ರಿಕೆಯ ಮಾಲೀಕರಾದ ಶೋಭಾನಾ ಭಾರ್ತಿಯಾ ಕಾಂಗ್ರೆಸ್ನ ರಾಜ್ಯಸಭಾ ಸಂಸದೆಯಾಗಿದ್ದಾರೆ. ಅಂತಹ ಹಿನ್ನೆಲೆ ಹೊಂದಿರುವ ಪತ್ರಿಕೆಯ ಸಂಪಾದಕರು, “ಹುಟ್ಟುಹಬ್ಬದ ಶುಭಾಶಯಗಳು ಅಟಲ್ ಬಿಹಾರಿ ವಾಜಪೇಯಿ. ನಿಮ್ಮನ್ನು ಪ್ರೀತಿಸಲು ಹಾಗೂ ಮಹಾನ್ ಪ್ರಧಾನಿ ಎಂದು ನೆನೆಯಲು ನಿಮ್ಮ ಹೆಸರಿನಲ್ಲಿ ಸಾವಿರಾರು ಯೋಜನೆಗಳು ಬೇಕಿಲ್ಲ” ಎಂದು ಬಹಳ ಮಾರ್ಮಿಕವಾಗಿ ಹಾಗೂ ನೆಹರು ಕುಟುಂಬಕ್ಕೆ ಕುಟುಕುವಂಥ ಟ್ವೀಟ್ ಮಾಡಲು ನಿಜಕ್ಕೂ ದೊಡ್ಡ ಧೈರ್ಯ ಬೇಕು. “ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ನೀಡಬೇಕು” ಎಂದು ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಜೆಪಿ ಮತ್ತೆ ಒತ್ತಾಯಿಸಿದೆ. ಅಟಲ್ಗೆ ಭಾರತ ರತ್ನ ನೀಡಬೇಕೆನ್ನುವುದನ್ನು ತಾನೂ ಒಪ್ಪುತ್ತೇನೆ ಎಂದು ಉದ್ಯಮಿ ಮೋಹನ್ದಾಸ್ ಪೈ  ಕೂಡ ಹೇಳಿದ್ದಾರೆ. ಅಮೆರಿಕದ ಖ್ಯಾತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅರವಿಂದ ಪಾನಗರಿಯಾ ಅವರು ಕಳೆದ ವರ್ಷ “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆಯಲ್ಲಿ “A forgatten Revolutionary” ಶೀರ್ಷಿಕೆಯಡಿ ಬರೆದ ಲೇಖನದಲ್ಲಿ “ಇನ್ನು ಐವತ್ತು ವರ್ಷಗಳ ನಂತರ ಇತಿಹಾಸಕಾರರು ಆಧುನಿಕ ಭಾರತದ ನಿರ್ಮಾತೃಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಪಿ.ವಿ.ನರಸಿಂಹರಾವ್ ಹಾಗೂ ಮತ್ತೊಬ್ಬರು ಅಟಲ್ ಬಿಹಾರಿ ವಾಜಪೇಯಿ. ಒಂದು ವೇಳೆ ನ್ಯಾಯ ಸಂದಿದ್ದೇ ಆದರೆ ಆ ವೇಳೆಗೆ ಇವರಿಬ್ಬರಿಗೂ “ಭಾರತರತ್ನ” ನೀಡಿ ಈ ದೇಶ ಸಮ್ಮಾನಿಸಿರುತ್ತದೆ” ಎಂದಿದ್ದರು.

ಹಾಗಾದರೆ ಅರವಿಂದ ಪಾನಗರಿಯಾ ಪ್ರತಿಪಾದಿಸಿದಂತೆ ವಾಜಪೇಯಿ ನಿಜಕ್ಕೂ ಭಾರತ ರತ್ನಕ್ಕೆ ಅರ್ಹರಾ? ಅಭಿಜಿತ್ ಮಜೂಮ್ದಾರ್ ಹೇಳಿದಂತೆ ಭಾರತ ಕಂಡ ಮಹಾನ್ ಪ್ರಧಾನಿಯೇ ವಾಜಪೇಯಿ?

ಅಮೆರಿಕದ ಹೆದ್ದಾರಿಗಳನ್ನು “ಫ್ರೀ ವೇಸ್” ಎನ್ನುತ್ತಾರೆ. ಜರ್ಮನಿಯ ಹೆದ್ದಾರಿಗಳನ್ನು “ಅಟೋಬಾನ್ಸ್” ಎಂದು ಕರೆಯುತ್ತಾರೆ. ಇಟಲಿಯ ಹೆದ್ದಾರಿಗಳಿಗೆ “ಅಟೋಸ್ಟ್ರೆಡ್ಸ್” ಎನ್ನಲಾಗುತ್ತದೆ. ಹಾಗಾದರೆ ಭಾರತದ ಹೆದ್ದಾರಿಗಳನ್ನು ಏನೆಂದು ಕರೆಯುತ್ತಾರೆ? ಇಂಥದ್ದೊಂದು ಪ್ರಶ್ನೆಯನ್ನು ನಾವು ಶಾಲೆಯಲ್ಲಿದ್ದಾಗ “ಕ್ವಿಝ್  ಕಾಂಪಿಟಿಷನ್”ನಲ್ಲಿ ಕೇಳುತ್ತಿದ್ದರು. ಆಗ ಗ್ರ್ಯಾಂಡ್ಟ್ರಂಕ್ ಎಂದು ಉತ್ತರಿಸುತ್ತಿದ್ದೆವು. ಆದರೆ, ಈ ಗ್ರಾಂಡ್ ಟ್ರಂಕ್ ಕೂಡಾ ಯಾವುದು, ಯಾರು, ಯಾವ ಕಾಲದಲ್ಲಿ ನಿರ್ಮಿಸಿದ್ದು ಎಂದು ಕೇಳಿದರೆ ಇಡೀ ದೇಶವೇ ತಲೆತಗ್ಗಿಸಬೇಕಾಗಿತ್ತು. ಇಷ್ಟಕ್ಕೂ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು ಶೇರ್ ಶಾ ಸೂರಿ, ಅದೂ 16ನೇ ಶತಮಾನದಲ್ಲಿ. ಹಾಗಿರುವಾಗ ಎತ್ತಿನ ಬಂಡಿಗಳು ನಮ್ಮ ರಸ್ತೆಯನ್ನು ಆಳುತ್ತಿದ್ದ ಕಾಲಘಟ್ಟದ ಅದನ್ನು ಯಾವ ಮಾನದಂಡದ ಮೂಲಕ ಹೆದ್ದಾರಿ ಎಂದು ಹೇಳಲು ಸಾಧ್ಯವಿತ್ತು ಹೇಳಿ? 1947ರಲ್ಲಿ ಸ್ವಾತಂತ್ರ್ಯ ಬಂದ ನಂತರವೂ ಪರಿಸ್ಥಿತಿ ಬದಲಾಗಲಿಲ್ಲ. ಆ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾಶಯರು 16 ವರ್ಷ ದೇಶವನ್ನಾಳಿದರೂ, ಅವರ ಮಗಳು ಇಂದಿರಾ ಗಾಂಧಿ 15 ವರ್ಷ ಪ್ರಧಾನಿ ಗದ್ದುಗೆಯಲ್ಲಿ ಮೆರೆದರೂ ಭಾರತದ ರಸ್ತೆಗಳು ಬದಲಾಗಲಿಲ್ಲ. 1998ರಲ್ಲಿ ಅಂದರೆ ಸ್ವಾತಂತ್ರ್ಯ ಬಂದು 50 ವರ್ಷಗಳು ಕಳೆದ ನಂತರವೂ ಭಾರತದಲ್ಲಿದ್ದ ಚತುಷ್ಪಥ ಅಥವಾ Four-lane ಹೆದ್ದಾರಿಯ ಉದ್ದವೆಷ್ಟೆಂದರೆ ಕೇವಲ 334 ಕಿ.ಮೀ. ಎಂದರೆ ನಂಬುತ್ತೀರಾ? ಭಾರತದ ಸಂಪತ್ತನ್ನು ಸಾಗಿಸಲು ಹಾಗೂ ವ್ಯಾಪಾರ ವಹಿವಾಟಿಗೆ ಅಗತ್ಯವೆಂದು ಭಾವಿಸಿ ಶೇರ್ ಶಾ ಸೂರಿ ನಿರ್ಮಿಸಿದ ಗ್ರಾಂಡ್ ಟ್ರಂಕ್ ರಸ್ತೆ, ಅದೇ ಕಾರಣಕ್ಕಾಗಿ ಬ್ರಿಟಿಷರು ಹಾಕಿದ ರೈಲು ಹಳಿಗಳನ್ನು ಬಿಟ್ಟರೆ ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸುಸಜ್ಜಿತ ರಸ್ತೆಗಳ ನಿರ್ಮಾಣದ ಅಗತ್ಯವಿದೆ ಎಂದು ಯಾರಿಗೂ ಏಕೆ ಅನಿಸಲಿಲ್ಲ? ಇಂಥದ್ದೊಂದು ಹೀನಾಯ ಪರಿಸ್ಥಿತಿ ಕೇವಲ ಕಳೆದ 15 ವರ್ಷಗಳಲ್ಲಿ ಬದಲಾಗಿದ್ದು ಹೇಗೆ?

ಭಾರತದ ರಸ್ತೆಗಳನ್ನು ಬದಲಾಯಿಸಿದ ಮಹಾನ್ ವ್ಯಕ್ತಿ ಯಾರು?

ಅಟಲ್ ಬಿಹಾರಿ ವಾಜಪೇಯಿ! ಆ ಬಗ್ಗೆ ಅನುಮಾನವೇ ಬೇಡ. ಆರ್ಯನ್ನರ ವಲಸೆ, ಮೊಘಲರ ಆಕ್ರಮಣ ಮತ್ತು ದರ್ಬಾರು, ಬ್ರಿಟಿಷರ ಸಾಮ್ರಾಜ್ಯಶಾಹಿತ್ವ ಇವೆಲ್ಲವೂ ಭಾರತದ ನಾಗರಿಕತೆಯ ವಿಕಾಸಕ್ಕೆ ಕಾರಣವಾದರೂ ಅಟಲ್ರ ಪ್ರಭಾವ ಅಮೋಘ ಬದಲಾವಣೆಗೆ ನಾಂದಿಯಾಯಿತು. 1998ರಲ್ಲಿ ಅಟಲ್ ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ ಅಣು ಪರೀಕ್ಷೆಗೆ ಆದೇಶ. ಅದಕ್ಕೂ ಮೊದಲಿದ್ದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. 1962ರಲ್ಲಿ ಚೀನಾದ ಎದುರು ನಾವು ಹೀನಾಯವಾಗಿ ಸೋಲು ಅನುಭವಿಸಿ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದೆವು. ಆ ಮುಖಭಂಗದ ನಂತರ ಜಗತ್ತಿನ ಎದುರು ಎದೆ ಸೆಟೆಸಿ ನಿಲ್ಲುವ ತಾಕತ್ತೇ ನಮ್ಮಿಂದ ದೂರವಾಗಿತ್ತು. ಆದರೆ, 1998 ಮೇ 11ರಂದು ಅಟಲ್ ನಡೆಸಿದ ಅಣುಪರೀಕ್ಷೆ ಇಡೀ ದೇಶವೇ ಬೀದಿಗಿಳಿದು ಪಟಾಕಿ ಸಿಡಿಸಿ, ನವೋತ್ಸಾಹ ಬೀರುವಂತೆ ಮಾಡಿತು. ಯಾವ ಆರ್ಥಿಕ ದಿಗ್ಬಂಧನೆಗೂ ಅಟಲ್ ಸೊಪ್ಪು ಹಾಕಲಿಲ್ಲ. 1974ರಲ್ಲೇ ನಾವು ಅಣುಪರೀಕ್ಷೆ ನಡೆಸಿದ್ದರೂ ಅದರ ಯೋಗ್ಯಾಯೋಗ್ಯತೆ ಬಗ್ಗೆ ಅನುಮಾನಗಳಿದ್ದವು. ಆದರೆ 1998ರ ಪರೀಕ್ಷೆ ಭಾರತ ಕೂಡ ಒಂದು ಕ್ರೆಡಿಬಲ್ ನ್ಯೂಕ್ಲಿಯರ್ಪವರ್ ಎಂಬುದನ್ನು ನಿರೂಪಿಸಿತು. ಲಾಲ್ ಬಹದ್ದೂರ್ ಶಾಸ್ತ್ರಿಯವರ, “ಜೈ ಜವಾನ್, ಜೈ ಕಿಸಾನ್”ಗೆ ಅಟಲ್ “ಜೈ ವಿಜ್ಞಾನ್” ಸೇರಿಸಿದರು. ಈ ದೇಶ ಅಭಿವೃದ್ಧಿ ಕಾಣಬೇಕಾದರೆ ವಿಜ್ಞಾನಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟರು. ಹಾಗಂತ ಅಟಲ್ ಬಡಾಯಿ ಕೊಚ್ಚಿಕೊಳ್ಳುವುದರಲ್ಲೇ ಕಾಲಹರಣ ಮಾಡಲಿಲ್ಲ. 1999ರಲ್ಲಿ ದೇಶದ 4 ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ಹೀಗೆ ದೇಶದ ನಾಲ್ಕೂ ಮೂಲೆಗಳಿಗೆ ಸಂಪರ್ಕ ಕಲ್ಪಿಸುವಂಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮುಂದಾದರು. ಒಂದು ದೇಶ ಬದಲಾಗುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ ಎಂದು ಬಹಳ ವಿಸಿಬಲ್ ಆಗಿ ಕಾಣುವುದೇ ರಸ್ತೆಗಳಲ್ಲಿ.

ಅದಕ್ಕಾಗಿಯೇ ನಾಲ್ಕು ಹಾಗೂ 6 ಪಥಗಳನ್ನು ಹೊಂದಿರುವ “Golden Quadrilateral”  ಅಥವಾ ಸುವರ್ಣ ಚತುಷ್ಪಥದ ನೀಲನಕ್ಷೆ ರೂಪಿಸಿದರು!

ಅದು 13 ರಾಜ್ಯಗಳ ಮೂಲಕ ಹಾದುಹೋಗುವ, ದೇಶದ 75 ಪ್ರಮುಖ ನಗರಗಳನ್ನು ಸ್ಪರ್ಶಿಸುವ 5,846 ಕಿ. ಮೀಟರ್ ಹೆದ್ದಾರಿಯಾಗಿತ್ತು. ದಯವಿಟ್ಟು ನೆನಪಿಡಿ, ಸ್ವಾತಂತ್ರ್ಯ ಬಂದ ನಂತರದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದು ಕೇವಲ 334 ಕಿ.ಮೀಟರ್, ಅಟಲ್ ಕೇವಲ 4 ವರ್ಷಗಳಲ್ಲಿ ಅಂದರೆ 2003 ಡಿಸೆಂಬರ್ನೊಳಗೆ ಪೂರ್ಣಗೊಳಿಸಲು ಹೊರಟಿದ್ದು 5,846 ಕಿ.ಮೀಟರ್ ಹೆದ್ದಾರಿ!! ಅದಕ್ಕಾಗಿ ಅಧಿಕಾರಶಾಹಿಗಳ ಜಂಜಾಟವೇ ಇಲ್ಲದ ಹೊಸ ವ್ಯವಸ್ಥೆಯನ್ನೇ ರೂಪಿಸಿದರು, ತ್ವರಿತವಾಗಿ ಭೂ ಸ್ವಾಧೀನ ನಡೆಯಿತು. ಅದರ ಹೊಣೆಗಾರಿಕೆಯನ್ನು ಸಾರಿಗೆ ಸಚಿವರಾಗಿದ್ದ ತಮ್ಮ ಆಪ್ತ ಸ್ನೇಹಿತ ಹಾಗೂ ಮಾಜಿ ಮೇಜರ್ ಜನರಲ್ ಬಿ.ಸಿ. ಖಂಡೂರಿಯವರಿಗೆ ವಹಿಸಿದರು. ಇಷ್ಟೊಂದು ವ್ಯಾಪ್ತಿಯ ಹೆದ್ದಾರಿಯನ್ನು ಕೇವಲ 4 ವರ್ಷಗಳೊಳಗೆ ಪೂರ್ಣಗೊಳಿಸುವ ಸಲುವಾಗಿ ತುಂಡುಗುತ್ತಿಗೆ ನೀಡಿದರು,  ನೀವು ದುಡ್ಡೊಂದನ್ನೇ ಮಾಡುತ್ತಿಲ್ಲ, ರಾಷ್ಟ್ರ ನಿರ್ಮಾಣ ಕಾರ್ಯವನ್ನೂ ಮಾಡುತ್ತಿದ್ದೀರಿ (You are not only making money, you are building a nation) ಎಂಬುದನ್ನು ಮರೆಯಬೇಡಿ ಎಂದು ಕಾಂಟ್ರ್ಯಾಕ್ಟರ್ಗಳಿಗೆ ಕಿವಿಮಾತು ಹೇಳುವ ಮೂಲಕ ಹೊಣೆಗಾರಿಕೆಯನ್ನು ತುಂಬಲು ಯತ್ನಿಸಿದರು. ಪರೋಕ್ಷ ಎಚ್ಚರಿಕೆಯೂ ಅದರಲ್ಲಿತ್ತು. ಈ ಹೆದ್ದಾರಿಯ ಒಟ್ಟು ವೆಚ್ಚವನ್ನು 60 ಸಾವಿರ ಕೋಟಿ ಎಂದು ಅಂದಾಜು ಮಾಡಲಾಯಿತು. ಆದರೆ, ಅದು 2011ರಲ್ಲಿ ಪೂರ್ಣಗೊಂಡಾಗ ಖರ್ಚಾಗಿದ್ದು 30,858 ಕೋಟಿ ಮಾತ್ರ!

ಹೆದ್ದಾರಿಗಳು ಮಾತ್ರವಲ್ಲ, ಗ್ರಾಮಗಳತ್ತಲೂ ಅಟಲ್ ಮುಖ ಮಾಡಿದರು. ಅವರು ಜಾರಿಗೆ ತಂದ ಪ್ರಧಾನ್ಮಂತ್ರಿ ಗ್ರಾಮ್ ಸಡಕ್ ಯೋಜನೆ ದೇಶದ ಮೂಲೆ ಮೂಲೆಯ ಹಳ್ಳಿ ಹಳ್ಳಿಗಳ ರಸ್ತೆಗಳನ್ನು ಬದಲಿಸಿಬಿಟ್ಟಿತು. ಪಾಶ್ಚಿಮಾತ್ಯರಲ್ಲಿ  Time equals money ಎಂಬ ಮಾತಿದೆ. ಅದನ್ನು ಭಾರತದಲ್ಲಿ ಮನಗಂಡವರು ಮತ್ತು ರಸ್ತೆ ನಿರ್ಮಾಣದ ಮೂಲಕ ಅದನ್ನು ವಾಸ್ತವದಲ್ಲಿ ಚಾಲ್ತಿಗೆ ತಂದವರು ಅಟಲ್ ಹಾಗೂ ಅಟಲ್ ಮಾತ್ರ. ರಸ್ತೆ, ಹೆದ್ದಾರಿ ನಿರ್ಮಾಣದಿಂದ ಸರಕು ಸಾಗಣೆ, ವ್ಯಾಪಾರ ವಹಿವಾಟು ಚುರುಕುಗೊಂಡಿತು, ಹೆದ್ದಾರಿ ಬದಿಯಲ್ಲಿ ಹೋಟೆಲ್ ಉದ್ಯಮ ಕೂಡ ಬೆಳೆಯಿತು, ಭೂಮಿಗೂ ಬೆಲೆ ಬಂತು, ಮಹಾನಗರಗಳ ಹೊರವಲಯದಲ್ಲಿ ಸುಸಜ್ಜಿತ ಉಪನಗರಗಳು ನಿರ್ಮಾಣಗೊಂಡವು. ಅದರಿಂದ ಸಾಫ್ಟ್ವೇರ್ ಹಾಗೂ ಸರ್ವಿಸ್ ಇಂಡಸ್ಟ್ರಿಗೂ ಉತ್ತೇಜನ ದೊರೆಯಿತು.

ಇದರ ನಡುನಡುವೆಯೇ ಅಟಲ್ ತಲೆಯಲ್ಲಿ ಹೊಸದೊಂದು ಯೋಜನೆ ರೂಪ ಪಡೆಯುತ್ತಿತ್ತು!

ಅದೇ ರಾಷ್ಟ್ರೀಯ ನದಿ ಜೋಡಣೆ ಯೋಜನೆ (NRLPU). ಹಿಮಾಲಯದ ವ್ಯಾಪ್ತಿಯಿಂದ ಹುಟ್ಟಿ ಬರುವ ಉತ್ತರ ಭಾರತದ 14 ನದಿಗಳನ್ನು ಕೊಲ್ಲಿ ಸೇರುವ ದಕ್ಷಿಣ ಭಾರತದ 16 ನದಿಗಳೊಂದಿಗೆ ಸೇರಿಸುವ ಯೋಜನೆ ಅದಾಗಿತ್ತು!! ಅದಕ್ಕೆ ತಗುಲುವ ವೆಚ್ಚ 5 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಯಿತು. 2002ರಲ್ಲಿ ಇಂಥದ್ದೊಂದು ಯೋಜನೆಯ ಪ್ರಸ್ತಾಪವನ್ನಿಟ್ಟ ಅಟಲ್, ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಟಿಡಿಪಿ ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನೂ ಒಂದೆಡೆ ಸೇರಿಸಿ ಒಪ್ಪಿಗೆ ಪಡೆದುಕೊಂಡರು. ಅದರ ಅನುಷ್ಠಾನದ ಉಸ್ತುವಾರಿಯನ್ನು ಸುರೇಶ್ ಪ್ರಭು ಅವರಿಗೆ ವಹಿಸಿದರು. 2004ರಲ್ಲಿ ಯೋಜನೆಯ ಆರಂಭ ಹಾಗೂ 2016ರಲ್ಲಿ ಪೂರ್ಣ  ಎಂದು ಸಮಯವನ್ನೂ ನಿಗದಿ ಮಾಡಿದರು. ಆದರೆ 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈ ಮಹಾತ್ವಾಕಾಂಕ್ಷಿ ಯೋಜನೆಯ ಕತ್ತನ್ನೇ ಹಿಸುಕಿತು. ಈ ವಿಚಾರ ಸುಪ್ರೀಂ ಕೋರ್ಟ್ನ ಗಮನಕ್ಕೆ ಬಂತು. ಮನಮೋಹನ್ ಸರ್ಕಾರದ ಧೂರ್ತತೆಯ ಬಗ್ಗೆ ಕುಪಿತಗೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ  ಎಸ್.ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠ 2012, ಫೆಬ್ರವರಿ 27ರಂದು ನೀಡಿದ ತೀರ್ಪಿನಲ್ಲಿ 2016ರೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಜತೆಗೆ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದೆ. ಒಂದು ವೇಳೆ ಅಟಲ್ ಕನಸಿನ ಈ ಯೋಜನೆ ಅನುಷ್ಠಾನಗೊಂಡರೆ ಈ ದೇಶದ ಶೇ.80ರಷ್ಟು ನೀರಾವರಿ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ.

ಇನ್ನು  ಹೌಸಿಂಗ್ ಲೋನ್/ಮನೆ ಕಟ್ಟಲು ಸಾಲ!

ಮನೆ ಕಟ್ಟಿ, ಮದುವೆ ಮಾಡಿ ನೋಡು ಎಂಬ ಮಾತಿದೆ. ಮಂದಿ ಹೈರಾಣವಾಗಿ ಬಿಡುತ್ತಾರೆ. ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೊದಲು ಮನೆ ಕಟ್ಟುವುದೆಂದರೆ ನಿವೃತ್ತಿಯಾದ ನಂತರ ಬರುವ ಪಿಎಫ್, ಗ್ರಾಚ್ಯುಟಿಯಿಂದ ಎಂದಾಗಿತ್ತು. ಹಾಗೆ ಬಂದ ಹಣದಲ್ಲಿ ಮನೆ ಕಟ್ಟಿ ನೆಮ್ಮದಿಯಾಗಿ ಕೊನೆಕಾಲ ಕಳೆಯಬೇಕು, ಅಲ್ಲಿಯವರೆಗೂ ದನದಂತೆ ದುಡಿಯುವುದೊಂದೇ ಮಾರ್ಗ ಎಂಬ ನಂಬಿಕೆಯಿತ್ತು. ಇಂಥದ್ದೊಂದು ಕಲ್ಪನೆಯನ್ನು ಬದಲಾಯಿಸಿದವರೇ ಅಟಲ್. ಒಂದು ಕಡೆ ನಮ್ಮ ಆಗಸ ಅಥವಾ ವಾಯುಯಾನವನ್ನು ಖಾಸಗಿಯವರಿಗೆ ತೆರೆದರೆ, ಮತ್ತೊಂದೆಡೆ “ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್”ನಡಿ ಹೌಸಿಂಗ್ಲೋನ್ ಅನ್ನು ಕಡ್ಡಾಯ ಮಾಡಿ ಬ್ಯಾಂಕ್ಗಳು ವ್ಯಾಪಕವಾಗಿ ಮನೆ ಸಾಲ ನೀಡುವಂತೆ ಮಾಡಿದರು. ಸರ್ಕಾರಿ ನೌಕರರು ಮಾತ್ರವಲ್ಲ, ಖಾಸಗಿ ಹಾಗೂ ಸ್ವಉದ್ಯೋಗಿಗಳಿಗೂ ಮರುಪಾವತಿ ಸಾಮರ್ಥಕ್ಕೆ ಅನುಗುಣವಾಗಿ ಸಾಲ ದೊರೆಯುವಂತೆ ಮಾಡಿದರು. ಇಪ್ಪತ್ತಾರು, ಇಪ್ಪತ್ತೆಂಟು ವರ್ಷದ ಯುವಕ/ಯುವತಿಯರೂ ಕಂತಿನ ಸಾಲ ಪಡೆದು ಸ್ವಂತ ಮನೆಯ ಕನಸು ಕಾಣುವಂತಾಯಿತು, ಶೇ.6ರ ಬಡ್ಡಿ ದರದಲ್ಲಿ ಸಾಲ ಸಿಗುತ್ತಿತ್ತು. ಅದರಿಂದಾಗಿ ಕನ್ಸ್ಟ್ರಕ್ಷನ್ ಕ್ಷೇತ್ರಕ್ಕೆ ದೊಡ್ಡ ಚಾಲನೆ ದೊರೆಯಿತು.

ಎಷ್ಟೋ ಬಾರಿ ಒಳ್ಳೆಯ ನಾಯಕರು, ಒಳ್ಳೆಯ ಕೆಲಸ ಮಾಡಿದವರು ಚುನಾವಣೆಯಲ್ಲಿ ಸೋತುಬಿಡುತ್ತಾರೆ. 2004ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಸೋಲುವಂಥ ಯಾವ ಕೆಲಸವನ್ನೂ ಮಾಡಿರಲಿಲ್ಲ. ನಿಜ ಹೇಳಬೇಕೆಂದರೆ ಕೃಷ್ಣ ಕಾಲದಲ್ಲಿ ಆದಷ್ಟು ಒಳ್ಳೆಯ ಕೆಲಸಗಳು ಕಳೆದ 20 ವರ್ಷಗಳಲ್ಲಿ ಎಂದೂ ಆಗಿಲ್ಲ. ಆದರೂ ಸೋತರು. ಅಟಲ್ ಹಾಗೂ ಕೃಷ್ಣ ಇಬ್ಬರೂ ಸತತ ಮೂರು ವರ್ಷ ಬರ ಎದುರಿಸಿದ್ದರು. ಅದರಿಂದ ವ್ಯತಿರಿಕ್ತ ಪರಿಣಾಮವುಂಟಾಯಿತು. ಚುನಾವಣೆಯಲ್ಲಿ ಗೆಲ್ಲಲು ಒಳ್ಳೆಯ ಕೆಲಸಕ್ಕಿಂತ ಇನ್ನುಳಿದ ಲೆಕ್ಕಾಚಾರಗಳೇ ಬಹಳಷ್ಟು ಸಲ ಪ್ರಮುಖಪಾತ್ರ ವಹಿಸುತ್ತವೆ. ತಮ್ಮ ಮೂರೂವರೆ ವರ್ಷ ಅಧಿಕಾರಾವಧಿಯಲ್ಲಿ ಯಡಿಯೂರಪ್ಪನವರು ಮಾಡಿದ್ದೆಲ್ಲ ಬೇಡದ ಕೆಲಸವೇ ಆಗಿದ್ದರೂ, ಅವರ ಅವಧಿಯಲ್ಲಿ ನಡೆದ ಎಲ್ಲ ಉಪ ಚುನಾವಣೆಗಳಲ್ಲೂ ಜಯಿಸಿದ್ದರು. ಅಣಕವೆಂದರೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು 145 ಸೀಟುಗಳಾದರೆ, ಬಿಜೆಪಿ 138 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ನಮ್ಮ  “ಸಿಕ್”ಯುಲರ್ ಮಾಧ್ಯಮಗಳು ಸೋನಿಯಾ ಗಾಂಧಿಯವರೇ ವಿಜಯಿಯೆಂದು ಬಿಂಬಿಸಿದವು. ಮಿತ್ರಪಕ್ಷಗಳ ಆಯ್ಕೆಯಲ್ಲಿ ಬಿಜೆಪಿ ಎಡವಿತ್ತು ಅಷ್ಟೇ.

ಇದೇನೇ ಇರಲಿ, ವಾಜಪೇಯಿ ಸರ್ಕಾರದಲ್ಲಿ ಎಂಥೆಂಥ ಮಂತ್ರಿಗಳಿದ್ದರೆಂದರೆ ಸುರೇಶ್ ಪ್ರಭು, ಖಂಡೂರಿ, ರಾಮ್ನಾಯ್ಕ್, ಅರುಣ್ ಜೇಟ್ಲಿ, ಅರುಣ್ ಶೌರಿ, ಮುರಸೋಳಿ ಮಾರನ್, ಜಸ್ವಂತ್ ಸಿಂಗ್ ಮುಂತಾದವರಿದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಇಂತಹ ಒಬ್ಬ ಯೋಗ್ಯ ಹಾಗೂ ಜನಪರ ವ್ಯಕ್ತಿ ಇದ್ದರೆ ಹೆಸರಿಸಿ ನೋಡೋಣ? ಜನರ ಮೂಗಿಗೆ ತುಪ್ಪ ಒರೆಸುವ ಕೆಲಸ ಬಿಟ್ಟರೆ ದೇಶದ ಪ್ರಗತಿಗೆ ಕಾರಣವಾಗುವ ಇಂಥ ಒಂದು ಕಾರ್ಯಕ್ರಮ, ಯೋಜನೆಯನ್ನು ಕಳೆದ 8 ವರ್ಷಗಳಲ್ಲಿ ಸೋನಿಯಾ ಗಾಂಧಿ ನಿಯಂತ್ರಿತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದಾಹರಣೆ ಕೊಡಿ ನೋಡೋಣ? ನಿಮಗೆ ಗೊತ್ತಾ, ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ನಿರ್ಮಾಣವಾದ ಹೆದ್ದಾರಿಯ ಒಟ್ಟು ಉದ್ದ 47, 795 ಕಿ.ಮೀ. ಅದರಲ್ಲಿ ಶೇ.50ರಷ್ಟು ಅಂದರೆ 23,814 ಕಿ.ಮೀ. ನಿರ್ಮಾಣ ಮಾಡಿದ್ದು ವಾಜಪೇಯಿಯವರ 6 ವರ್ಷಗಳ ಸರ್ಕಾರ! ಯುಪಿಎ 10 ವರ್ಷಗಳಲ್ಲಿ ನಿರ್ಮಾಣ ಮಾಡಿದ್ದು ಕೇವಲ 16 ಸಾವಿರ ಕಿ.ಮೀ. ಇವತ್ತು ಕಾಂಗ್ರೆಸ್ಸಿಗರು ರೈಟ್ ಟು ಎಜುಕೇಜುಕೇಶನ್ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಅದು ಅಟಲ್ ದೇಶದ 576 ಜಿಲ್ಲೆಗಳಲ್ಲಿ ಆರಂಭಿಸಿದ ಸರ್ವ ಶಿಕ್ಷಾ ಅಭಿಯಾನದ ಹೊಸ ಅವತಾರವಷ್ಟೇ. ಇನ್ನು ಅಟಲ್ ಗದ್ದುಗೆಯಿಂದಿಳಿದಾಗ ದೇಶದ ಆರ್ಥಿಕ ಅಭಿವೃದ್ಧಿ ದರವನ್ನು ಶೇ.4.2ರಿಂದ 8.4ಕ್ಕೇರಿಸಿ(2003-2004) ಹೋಗಿದ್ದರು. ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ಬಂದಿರುವ ಕಾಂಗ್ರೆಸ್ ಅದನ್ನು ಶೇ.5ಕ್ಕಿಂತ ಕಡಿಮೆಗೆ ಇಳಿಸಿ, ಅರ್ಥ ವ್ಯವಸ್ಥೆಯನ್ನು ಹಾಳುಗೆಡವಿ ಹೊರನಡೆಯಲಿದೆ. ಇನ್ನೊಂದು ಬಹುಮುಖ್ಯ ವಿಷಯ ಕೇಳಿ, ಮಾಹಿತಿ ಹಕ್ಕು ಕಾಯಿದೆಯನ್ನು ತಂದಿದ್ದೇ ನಾವು ಎಂದು ಕಾಂಗ್ರೆಸ್ಸಿಗರು ಬೊಬ್ಬೆಹಾಕುತ್ತಾರೆ. ಆದರೆ ವಾಸ್ತವದಲ್ಲಿ 2003ರಲ್ಲಿ ಅಟಲ್ ಸರ್ಕಾರ ಹೊರತಂದ “ಮಾಹಿತಿ ಸ್ವಾತಂತ್ರ್ಯ”ವೇ(ಫ್ರೀಡಂ ಆಫ್ ಇನ್ಫರ್ಮೇಶನ್) 2005ರಲ್ಲಿ ಕಾಯಿದೆಯಾಯಿತು ಅಷ್ಟೇ. ಅಟಲ್ ಅವಧಿಯಲ್ಲಿ ಅಂದರೆ 1998-2004ವರೆಗೂ ನಮ್ಮ ರೂಪಾಯಿ ಮೌಲ್ಯ ಕುಸಿದಿದ್ದು ಕೇವಲ 4 ರೂಪಾಯಿ (41.25-45.31). ಆದರೆ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರ ಒಂಭತ್ತೂವರೆ ವರ್ಷ ಆಡಳಿತದಲ್ಲಿ ರೂಪಾಯಿ ಮೌಲ್ಯ 21 ರೂ.ವರೆಗೂ ಕುಸಿದು ಈಗ 17-18 ರೂ.ಗಳ ಆಸುಪಾಸಿನಲ್ಲಿದ್ದು, ಜನ ಹಾಗೂ ಅರ್ಥ ವ್ಯವಸ್ಥೆಯನ್ನು ಹೈರಾಣಾಗಿಸಿದೆ.

ಇಂತಹ ಸಂದರ್ಭದಲ್ಲಾದರೂ ನಮ್ಮ ಪತ್ರಕರ್ತ ಮಹಾಶಯರಲ್ಲಿ ಕೆಲವರಾದರೂ ಸೋನಿಯಾ ಭಜನೆಯನ್ನು ಬಿಟ್ಟು ವಾಜಪೇಯಿಯವರನ್ನು ನೆನಪಿಸಿಕೊಳ್ಳುತ್ತಿದ್ದಾರಲ್ಲಾ, ಅವರು ಮಹಾನ್ ಪ್ರಧಾನಿ ಎನ್ನುತ್ತಿದ್ದಾರಲ್ಲಾ ಅಷ್ಟೇ ಸಮಾಧಾನ!

9 Responses to “ಭವ್ಯ ಭವಿಷ್ಯಕ್ಕೆ ಭಾಷ್ಯ ಬರೆದು ಜೀವಚ್ಛವವಾಗಿ ಮಲಗಿರುವ ಅವರನ್ನು ಕೊನೆಗೂ ನೆನಪು ಮಾಡಿಕೊಳ್ಳುತ್ತಿದ್ದಾರಲ್ಲಾ, ಅಷ್ಟೇ ಸಮಾಧಾನ!”

  1. marula siddesha says:

    Atail ji you are a true politician and you have a spacial place in our heart…belated birthday wishes..

  2. praveen says:

    achala namm atal.namo bjp, namo bharat

  3. sandhya says:

    Kudos Mr Pratap.. The article emphasizes the great deeds of our beloved ex prime minister.. Its indeed pleasure to go through all your articles… keep up your good work..

  4. dilraj says:

    awesome article……..atalji one and only best pm of india…….shame on UPA……..

  5. Siddu says:

    Dear Sir,

    Sri Atalji is one of the best PM in indian political History.

  6. lakshmana says:

    ಪ್ರಿಯ ಪ್ರತಾಪ್ ಸಿಂಹ ರವರೇ ಈ ಅಂಕಣ ಓದಿ ನನಗೆ ಬಹಳ ಸಂತೋಷವಾಯಿತು. ಈ ನಿಮ್ಮ ಬರಹ ನೂರಕ್ಕೆ ಸಾವರದಷ್ಟು ನಿಜ. ನಾನು ಹಾಸನದ ಹೊಳೆನರಸೀಪುರದವನು. ನಾನು ನಮ್ಮ ಹಳ್ಳಿಯಿಂದ ಶಾಲೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕಿತ್ತು. ಸುಮಾರು ನಾಲ್ಕು ಮೈಲಿ. ಅದು ರಾಜ್ಯ ಹೆದ್ದಾರಿಯಲ್ಲಿ. ನಮ್ಮ ಊರಿನಿಂದ ಬೆಂಗಳೂರಿಗೆ ಬರಲು ಬಸ್ಸಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರಯಾಣ ಬೆಳಸಬೇಕಿತ್ತು. ಅಂದು ಪ್ರಯಾಣಿಸಿದರೆ ಒಂದು ದಿವಸ ವಿಶ್ರಾಂತಿ ಪಡೆಯಬೇಕಿತ್ತು. ಇಂದು ನಮ್ಮ ಉರಿನಿಂದ ಬೆಂಗಳೂರಿಗೆ ಒಂದು ದಿವಸಕ್ಕೆ ಎರಡು ಭಾರಿ ಪ್ರಯಾಣ ಬೆಳಿಸಿ ನೆಮ್ಮದಿಯಿಂದ ರಾತ್ರಿ ನಿದ್ರೆ ಮಾಡಬಹುದು. ಬೆಂಗಳೂರು ಮಂಗಳೂರು ರಸ್ತಯಲ್ಲಿ ಪ್ರಯಾಣಿಸಬೇಕಾದರೆ ನಮ್ಮ ಪ್ರೀತಿಯ ವಾಜಪೇಯಿ ರವರನ್ನು ನೆನೆಯದೇ ಪ್ರಯಾಣಿಸುವುದಿಲ್ಲ. ಅಂದು ನೆನೆಯದೇ ಪ್ರಯಾಣಿಸಿದೆ ನನಗೆ ನಿದ್ದೆ ಬರುವುದಿಲ್ಲ. ಆದರೆ ಇಂತಹ ರಸ್ತೆಯನ್ನು ಹೊಂದುವ ಭಾಗ್ಯ ಹೊಳೆನರಸೀಪುರದ ಹಳ್ಳಿಮೈಸುರು ಹೋಬಳಿ ಹಾಗೂ ಅರಕಲಗೂಡು ತಾಲ್ಲೂಕಿನ ಜನರಿಗೆ ಇಲ್ಲ. ಇಲ್ಲಿಯ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಎರಡು ಅಡಿಯ ಗುಂಡಿಗಳು ಬಿದ್ದಿವೆ. ಬೆಂಗಳೂರಿನಿಂದ ಅರಕಲಗೂಡಿಗೆ ನಿರಾಯಸವಾಗಿ ಪ್ರಯಾಣ ಮಾಡಿಬಹುದು. ನಂತರದ ರಸ್ತೆಗಳು ನರಕಮಯ. ನಾವು ಭಾರತಲ್ಲಿದ್ದೇವೆಯೋ ಅಥವಾ ಅಭಿವೃದ್ದಿ ಹೊಂದದ ಆಪ್ರಿಕಾದ ಕಾಡು ದಾರಿಯಲ್ಲಿ ಸಾಗುತ್ತಿದ್ದೇವೆಯೋ ಎಂಬ ಅನುಭವ ಉಂಟಾಗುತ್ತದೆ. ಈ ಪ್ರದೇಶಗಳು ಅಭಿವೃದ್ದಿ ಹೊಂದದೇ ಇರಲು ಕಾರಣ ಈ ಪ್ರದೇಶಗಳಿಂದ ದೇವೇಗೌಡರು ಮತ್ತು ಅವರ ಮಕ್ಕಳಿಗೆ ಮತಗಳು ದೊರೆಯದೇ ಇರುವುದಕ್ಕಾಗಿ. ಈ ದೇಶಕ್ಕೆ ಕರ್ನಾಟಕದಿಂದ ಪ್ರಪ್ರಥಮ ಪ್ರಧಾನಿಯನ್ನು ನೀಡಿದ ಜಿಲ್ಲೆಯ ದಯನೀಯ ಸ್ಥಿತಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ರಾಮನಾಥಪುರಕ್ಕೆ , ಕೊಣನೂರಿಗೆ ಹೋಗಲು ಜನರು ಹರಸಾಹಸವನ್ನೇ ಪಡೆಯಬೇಕು. ಇಲ್ಲಿನ ಹೆಣ್ಣುಮಕ್ಕಳು ಗರ್ಬಿಣಿಯರಾದರೆ ಹಾಸನ ನಗರಕ್ಕೆ, ಇಲ್ಲವೆ ಅರಕಲಗೂಡು ನಗರಕ್ಕೆ ಚಿಕಿತ್ಸೆಗೆ ಬರಬೇಕು. ಅದರು ಸುಮಾರು 60 ಕಿ.ಮೀ. ನಿಂದ 80 ಕಿ.ಮೀ. ವರೆಗೆ ಪ್ರಯಾಣಿಸಿ. ಆ ಹೆಣ್ಣುಮಕ್ಕಳ ನೋವು ನಮ್ಮ ರಾಜಕಾರಣಿಗಳಿಗೆ ತಟ್ಟುವುದಿಲ್ಲವೇ?.

    ಗಿರೀಶ್ ಕಾರ್ನಾಡರ ಯಯಾತಿ ನಾಟಕದಲ್ಲಿ ಪುರುವು ಯಯಾತಿಗೆ ಯವ್ವನವನ್ನು ನೀಡುತ್ತಾನೆ. ಮರುಜನ್ಮದಲ್ಲಿ ನನಗೆ ಅಷ್ಟಾಗಿ ನಂಬಿಕೆ ಇಲ್ಲ. ಆದರೆ ಪುರುವು ಯಯಾತಿಗೆ ತನ್ನ ಯವ್ವನ ನೀಡುವ ಹಾಗೆ ನಾನು ವಾಜಪೇಯಿಯವರಿಗೆ ನನ್ನ ಯವ್ವನ ಹಸ್ತಾಂತರಿಸಲು ಸಿದ್ದ. ಏಕೆಂದರೆ ವಾಜಪೇಯಿಯವರು ಈ ದೇಶದ ನಾಯಕನಾಗಿ ಇನ್ನೂ 50 ವರ್ಷಗಳ ಕಾಲ ಇರಬೇಕು ಎನ್ನುವ ಬಯಕೆ. ಅವರೊಬ್ಬರಿದ್ದರೆ ಈ ದೇಶ ಸುಭಿಕ್ಷ, ರಕ್ಷೆ, ಎಲ್ಲವೂ.

    ಧನ್ಯವಾಧಗಳು.

  7. krishnananda p.r says:

    Pratap ji nice article

  8. Suresh Patil says:

    Great resonality.

  9. Suresh Patil says:

    Great personality.