Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಭೋಗಿಗಳೇ ತುಂಬಿರುವ ರಾಜಕಾರಣದಲ್ಲಿ ಯೋಗಿಯೊಬ್ಬ ಮುಖ್ಯಮಂತ್ರಿಯಾದ ಕಥೆ!

ಭೋಗಿಗಳೇ ತುಂಬಿರುವ ರಾಜಕಾರಣದಲ್ಲಿ ಯೋಗಿಯೊಬ್ಬ ಮುಖ್ಯಮಂತ್ರಿಯಾದ ಕಥೆ!

ಭೋಗಿಗಳೇ ತುಂಬಿರುವ ರಾಜಕಾರಣದಲ್ಲಿ ಯೋಗಿಯೊಬ್ಬ ಮುಖ್ಯಮಂತ್ರಿಯಾದ ಕಥೆ!

————————————————-
ಮೊದಲೆಲ್ಲ ಶಾಲೆ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಮುಂದೆ ಏನಾಗಬೇಕು ಅಂದುಕೊಂಡಿದ್ದೀಯಾ ಎಂದರೆ, ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಎನ್ನುತ್ತಿದ್ದರು. ಬರಬರುತ್ತಾ ಸಾಫ್ಟ್ ‍ವೇರ್ ಕ್ಷೇತ್ರ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ, ಎಲ್ಲರ ಬಾಯಲ್ಲೂ ನಾನೂ ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು ಎಂಬ ಮಾತು ಬರಲಾರಂಭಿಸಿತು. ಅದರಲ್ಲೂ ಹೆಗಲಿಗೆ ಒಂದು ಲ್ಯಾಪ್‍ಟಾಪ್ ಬ್ಯಾಗನ್ನು ಸಿಕ್ಕಿಸಿಕೊಂಡು ವಾಹನ ಏರಿದರಂತೂ ಜನ ಒಮ್ಮೆ ಮೆಚ್ಚುಗೆಯಿಂದ, ಬುದ್ಧಿವಂಥ ಎಂಬ ಭಾವನೆಯಿಂದ ನೋಡುವಂತಾಯಿತು. ಈಗಂತೂ ಇವೆಲ್ಲ ಬಿಟ್ಟು ನಮ್ಮ ಯುವ ಜನಾಂಗ ಸ್ವಂತ ಕಂಪನಿ ಮಾಡಿ ಸಿಇಓ ಆಗಬೇಕು ಎಂದು ಬಯಸುತ್ತದೆ.
ಆದರೆ ಯಾರೊಬ್ಬರೂ ನಾನು ರಾಜಕಾರಣಿಯಾಗಬೇಕು ಎಂದು ಹೆಚ್ಚಾಗಿ ಹೇಳುವುದಿಲ್ಲ!
ನಮ್ಮ ಭ್ರಷ್ಟ ರಾಜಕಾರಣಿಗಳನ್ನು ಬಿಟ್ಟು, ಯಾವ ಅಪ್ಪ-ಅಮ್ಮನನ್ನು ಕೇಳಿದರೂ ರಾಜಕಾರಣಿಯಾಗು ಅಂತ ಸುತಾರಾಂ ತಮ್ಮ ಮಕ್ಕಳಿಗೆ ಹೇಳುವುದಿಲ್ಲ. ಏಕೆ? ಅಚ್ಚೇ ದಿನ್ ಆಯೇಗಾ ಅಂತ ಚುನಾವಣೆಯುದ್ದಕ್ಕೂ ಪ್ರಧಾನಿ ಮೋದೀಜಿ ಹೇಳಿದ್ದರು. ಖಂಡಿತ ಅಂತಹ ಒಳ್ಳೆಯ ದಿನಗಳು ಈಗ ಬಂದಿವೆ. ಒಳ್ಳೆಯ ದಿನಗಳು ಬಂದರಷ್ಟೇ ಸಾಲದು, ಒಳ್ಳೆಯವರಿಗೆ ಒಳ್ಳೆಯ ಕಾಲ ಬರಬೇಕು, ಒಳ್ಳೆಯವರು ರಾಜಕಾರಣಕ್ಕೆ ಬರಬೇಕು ಎಂದು ನೋಟುರದ್ದತಿಯನ್ನೂ ಮಾಡಿ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದರು. ಆದರೂ ಜನರಲ್ಲಿ ಮಾತ್ರ, ಒಳ್ಳೆಯವರಿಗೆ ರಾಜಕೀಯದಲ್ಲಿ ಸ್ಥಳವಿಲ್ಲ, ಸ್ಥಾನಮಾನ ಸಿಗೋಲ್ಲ ಎಂಬ ಭಾವನೆ ನೆಲೆಗೊಂಡಿದೆ. ಇಷ್ಟಕ್ಕೂ ಇವತ್ತಿನ ರಾಜಕೀಯ, ಟಿಕೆಟ್ ಹಂಚಿಕೆ ಯಾವ ರೀತಿ ನಡೆಯುತ್ತಿದೆ ನೀವೇ ಹೇಳಿ? ಚುನಾವಣೆ ಸಮೀಪಿಸುತ್ತಿದೆ ಎಂದ ಕೂಡಲೇ ಯಾವುದೇ ಪಕ್ಷದ ಉನ್ನತ ನಾಯಕರ ಹಿಂದೆ ತಿರುಗವ ಚೇಲಾ ಪಡೆ ದಿನೇ ದಿನೆ ದೊಡ್ಡದಾಗುತ್ತಾ ಹೋಗುತ್ತದೆ. ಅಧಿಕಾರಕ್ಕೆ ಬರುವ ಪಕ್ಷವೆಂದರಂತೂ ಗದ್ದುಗೆ ಏರುವ ಮೊದಲೇ ನಾಯಕರ ಕಾರಿನ ಹಿಂದೆ ಮುಂದೆ ಉದ್ದದ ಕಾನ್ವೋಯ್ ಸೃಷ್ಟಿಯಾಗಿ ಬಿಡುತ್ತದೆ. ಯಾರಾದರೂ ನಾಯಕರ ಹಿಂದೆ ಹೋದರಷ್ಟೇ ಟಿಕೆಟ್ಟು, ರಾಜಕೀಯ ಭವಿಷ್ಯ ಎಂಬ ಭಾವನೆ ನೆಲೆಗೊಂಡಿದೆ. ಇನ್ನು ಚುನಾವಣೆ ಬಂತೆಂದರೆ ರಿಯಲ್ ಎಸ್ಟೇಟೋ ಅಥವಾ ಇನ್ನಾವುದೋ ದಂಧೆ ಮಾಡಿಕೊಂಡಿದ್ದವರು ನನಗೆ ಟಿಕೆಟ್ ಕೊಟ್ಟರೆ 25 ಕೋಟಿ ಖರ್ಚು ಮಾಡುತ್ತೇನೆ, ಪಕ್ಷಕ್ಕೂ ಇಷ್ಟು ಕೊಡುತ್ತೇನೆ, ಟಿಕೆಟ್ ಕೊಡಿಸಿದ್ದಕ್ಕೆ ನಿಮಗೂ ಇಷ್ಟು ಕೊಡುತ್ತೇನೆ ಎನ್ನುತ್ತಾರೆ. ನಮ್ಮ ನಾಯಕರೂ ಅಷ್ಟೇ ಹತ್ತಾರು ವರ್ಷ ಸಂಘಟನೆಗೆ ದುಡಿದವನನ್ನು ಬಿಟ್ಟು ಯಾರು ದೊಡ್ಡು ಖರ್ಚು ಮಾಡುತ್ತೇನೆ ಎಂದು ಬರುತ್ತಾರೋ ಅವರಿಗೇ ಮಣೆ ಹಾಕಲು ಮುಂದಾಗುತ್ತಾರೆ. ಟಿಕೆಟ್ ತೆಗೆದುಕೊಂಡು, ಹಣ ಸುರಿದು ಗೆದ್ದ ಮೇಲೆ ಮಂತ್ರಿಯಾಗುವ ಉಮೇದು ಶುರುವಾಗುತ್ತದೆ. ಆಗಲೂ ಪೇಮೆಂಟ್ ಮೇಲೆ ಕೆಲವರು ಸಚಿವ ಸ್ಥಾನ ಪಡೆದುಕೊಂಡು ಬಿಡುತ್ತಾರೆ. ಇನ್ನು ಕೆಲವರಂತೂ ಕೋಟಿ ಕೋಟಿ ಲೂಟಿ ಮಾಡಿದರೂ ಮುಖ್ಯಮಂತ್ರಿಯಾಗುವ ಕನಸ್ಸು ಕಾಣುತ್ತಾರೆ. ಮತ್ತೆ ಕೆಲವರು ದಾಢಸಿತನದ ಲವಲೇಶವೂ ಇಲ್ಲದಿದ್ದರೂ ಎಲ್ಲರನ್ನೂ ಮೆಚ್ಚಿಸುವಂತೆ, ಬೆಣ್ಣೆಯಿಂದ ಕೂದಲು ತೆಗೆದಂತೆ ಮಾತನಾಡುವ ಮೂಲಕ, ಹೊಂದಾಣಿಕೆ ರಾಜಕಾರಣದ ಮೂಲಕ, ಎಲ್ಲೂ ವಿವಾದಕ್ಕೆ ಎಡೆಯಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಎಲ್ಲರ ಬಾಯಲ್ಲೂ ತಾನೇ ಸಕಲಗುಣ ಸಂಪನ್ನ ಎಂದನಿಸಿಕೊಂಡು ಮುಖ್ಯಮಂತ್ರಿಯಾಗಬೇಕೆಂದು ತಯಾರಿ ನಡೆಸುತ್ತಿರುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ, ಇಂಥ ತೋರಿಕೆ ರಾಜಕಾರಣದಲ್ಲಿ ಒಂದು ಪಕ್ಷಕ್ಕೆ, ಸಿದ್ಧಾಂತಕ್ಕೆ ಇಟ್ಟುಕೊಂಡಿರುವ ಅಪ್ರತಿಮ ನಿಷ್ಠೆ, ಬದ್ಧತೆ, ಶುದ್ಧಹಸ್ತತೆ, ಪರಿಶ್ರಮದಿಂದ ಮುಖ್ಯಮಂತ್ರಿಯಾಗುವ ಕನಸ್ಸು ಕಾಣುವುದಕ್ಕಾದರೂ ಆಗುತ್ತದೆಯೇ? ಅದರಲ್ಲೂ ನೀವೊಬ್ಬ ರಾಷ್ಟ್ರವಾದಿಯಾಗಿದ್ದರೆ, ಹಿಂದುಗಳ ಮೇಲೆ ನಡೆಯುವ ಆಕ್ರಮಣಕ್ಕೆ ಪ್ರತಿಯಾಗಿ ಅದೇ ಭಾಷೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿಕೆ ಕೊಟ್ಟ ಹಿನ್ನೆಲೆ ಇದ್ದರಂತೂ ನಿಮ್ಮ ರಾಜಕೀಯ ಭವಿಷ್ಯ ಕ್ಷೇತ್ರ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ. ನಿಮ್ಮ ನೇರವಂತಿಕೆ, ನಿಷ್ಠುರ ಮಾತುಗಳು, ಹಿಂದುತ್ವಕ್ಕೆ ಇಟ್ಟುಕೊಂಡಿರುವ ಬದ್ಧತೆ ಹೊರಗಿನವರನ್ನು ಬಿಡಿ, ಪಕ್ಷದೊಳಗೇ ಇರುವವರಿಗೂ ಅಪಥ್ಯವಾಗಿ ಬಿಡುತ್ತವೆ. ಮಾಧ್ಯಮಗಳ ದೃಷ್ಟಿಯಲ್ಲಂತೂ ನೀವು ಖಳನಾಯಕನೇ.
ಇನ್ನು ಮೊದಲನೇ ಸಲ ಸಂಸದರಾದವರೇ ಮಂತ್ರಿಯಾಗಿದ್ದರೂ ಐದು ಸಲ ಸತತವಾಗಿ, ಒಂದಕ್ಕಿಂತ ಮತ್ತೊಂದು ಚುನಾವಣೆಯಲ್ಲಿ ಲಕ್ಷ ಲಕ್ಷ ಮತ ಹೆಚ್ಚು ಅಂತರದಿಂದ ಗೆದ್ದರೂ ಕೇಂದ್ರ ಮಂತ್ರಿಯಾಗುವುದಕ್ಕೇ ಸಾಧ್ಯವಾಗದ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗುತ್ತಾರೆ ಅಂತ ಯಾರೂ ತಾನೇ ಊಹಿಸಿದ್ದರು ಸ್ವಾಮಿ? ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಯುಕ್ತಿ ಮಾಡಿದ ನಂತರ ಒಬ್ಬೊಬ್ಬ ಪತ್ರಕರ್ತ ಮಹಾಶಯರೂ ಕೊಟ್ಟ ಹೇಳಿಕೆಗಳನ್ನು, ಮಾಡಿದ ಟ್ವೀಟ್‍ಗಳನ್ನು ನೋಡಿದರೆ ಇಷ್ಟೊಂದು ದ್ವೇಷಿಸುವ ಮಾಧ್ಯಮಗಳಿರುವಾಗ ಒಬ್ಬ ಅಪ್ಪಟ ರಾಷ್ಟ್ರಭಕ್ತ, ಶುದ್ಧ ಸಂಸದ ಮುಖ್ಯಮಂತ್ರಿಯಾಗುವುದೆಂದರೆ ಸಾಮಾನ್ಯ ಮಾತೇ?
ಬಹುಶಃ 12 ವರ್ಷಗಳ ಕಾಲ ಮಾಧ್ಯಮಗಳ ಸತತ ದ್ವೇಷದ ಜ್ವಾಲೆಯಲ್ಲಿ ಬೆಂದರೂ ಅರಳಿದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಕಾಂಗ್ರೆಸ್ಸಿನ ದ್ವೇಷಕ್ಕೆ ಬಲಿಯಾಗಿ ಜೈಲಿಗೆ ಹೋಗಿ ಬಂದ ಅಮಿತ್ ಶಾ ಅವರಿಗೆ ಮಾತ್ರ ಯೋಗಿ ಆದಿತ್ಯನಾಥರ ನೋವು, ಯೋಗ್ಯತೆ, ಬದ್ಧತೆ ಗೊತ್ತಿತ್ತು. ಹಾಗಾಗಿ ಮುಖ್ಯಮಂತ್ರಿ ಮಾಡಿದರು. ಬಹುಶಃ ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಮೋದಿಯವರು ಪ್ರಧಾನಿಯಾದ ಕ್ಷಣದ ನಂತರ ಅತಿ ಹೆಚ್ಚು ಖುಷಿಕೊಟ್ಟ ಸಂದರ್ಭ ಯೋಗಿ ಮುಖ್ಯಮಂತ್ರಿಯಾಗಿದ್ದು.
ಆ ಯೋಗಿಯದ್ದೇನು ಸಾಮಾನ್ಯ ಹೋರಾಟವೇ?
ಪ್ರಧಾನಿ ಮೋದಿ ಹಾಗೂ ಯೋಗಿಯವರ ಜೀವನದ ಬಗ್ಗೆ ಯೋಚನೆ ಮಾಡಿದಾಗಲೆಲ್ಲ, ಜೋಶುವಾ ಗ್ರಹಾಂ ಅವರ “I survived because the fire inside burned brighter than the fire around  me”  ಅಂದರೆ ನನ್ನೊಳಗಿನ ಜ್ವಾಲೆ ಸುತ್ತಲಿನ ಕಿಚ್ಚಿಗಿಂತ ಹೆಚ್ಚು ಪ್ರಜ್ವಲಿಸಿದ್ದರಿಂದ ನಾನು ಉಳಿದೆ ಎಂಬ ಮಾತು ನೆನಪಿಗೆ ಬರುತ್ತದೆ. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥರ ಜೀವನದಲ್ಲಿ ನಡೆದ ಒಂದು ಸಂಗತಿಯನ್ನು ಹೇಳಲೇಬೇಕು.
ಅದು 2007ರ ಮಾರ್ಚ್ 12ನೇ ತಾರೀಖು. ಆ ಘಟನೆ ಇನ್ನೂ ನೆನಪಿದೆ. ಲೋಕಸಭೆಯಲ್ಲಿ ಯೋಗಿ ಆದಿತ್ಯನಾಥರು ಸಣ್ಣ ಮಕ್ಕಳಂತೆ ಬಿಕ್ಕಳಿಸುತ್ತಾ ಅಳುತ್ತಿದ್ದರು. ಮುಲಾಯಂ ಸಿಂಗ್ ಯಾದವ್ ಸರಕಾರವಿದ್ದಾಗ ಕೋಮುಗಲಭೆಗಳಿಗೇನು ಕೊರತೆಯೇ ಇರಲಿಲ್ಲ. ಇನ್ನು ಉತ್ತರಪ್ರದೇಶದ ಪೂರ್ವಾಂಚಲದಲ್ಲಂತೂ ಕೋಮುಗಲಭೆಗಳೇ ಹೆಚ್ಚು. ಇದೇ ಪೂರ್ವಾಂಚಲದಲ್ಲಿ ನಡೆದ ಗಲಭೆಯಲ್ಲಿ ಅಜಿತ್ ಸಿಂಗ್ ಎಂಬುವವನೊಬ್ಬ ಮೃತಪಟ್ಟಿದ್ದ. ಅವನ ಶವ ಸಂಸ್ಕಾರ ಆಝಮ್‍ಗಢದಲ್ಲಿ ನೆರವೇರುತ್ತಿತ್ತು. ಕೊನೇ ಬಾರಿ ಅವನನ್ನು ಕಂಡು ಬರಲು ಹೋಗುತ್ತಿದ್ದಾಗ ಗುಂಪೊಂದು ಅವರ ಕಾರ್ ಮೇಲೆ ದಾಳಿ ಮಾಡಿತು. ಈ ಸಮಯದಲ್ಲಿ ಯೋಗಿ ಆದಿತ್ಯನಾಥರ ರಕ್ಷಣಾ ಪಡೆ ಮತ್ತು ಬೆಂಬಲಿಗರಿಗೆ ಬಹಳ ಪೆಟ್ಟಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಾಗ ಯೋಗಿಜೀಯವರ ರಕ್ಷಣಾ ಪಡೆ ಗುಂಡಿನ ದಾಳಿ ಶುರು ಮಾಡಿತ್ತು. ಆದಿತ್ಯನಾಥರ ಮೇಲೆ ದಾಳಿ ಮಾಡಲು ಬಂದ ಗುಂಪಲ್ಲಿರುವ ವ್ಯಕ್ತಿಗೆ ಗುಂಡು ತಗುಲಿ ಆತ ಮೃತಪಟ್ಟ. ಶಾಂತಿಭಂಗದ ಪ್ರಕರಣದಲ್ಲಿ 12 ತಾಸು ಜೈಲಿಗೆ ಕಳುಹಿಸಬಹುದು. ಆದರೆ ಯೋಗಿಯವರನ್ನು ಮುಲಾಯಮ್ ಸಿಂಗ್ ಸರಕಾರ 11 ದಿನಗಳ ಕಾಲ ಜೈಲಿಗಟ್ಟಿತ್ತು. ಜೈಲು ವಾಸ ಮುಗಿಸಿ ಬಂದ ನಂತರ ಮೊದಲು ಲೋಕಸಭೆಯಲ್ಲಿ ಮಾತಾಡಲು ಅವಕಾಶ ಸಿಕ್ಕಾಗ ಮಾತೇ ಹೊರಡಲಿಲ್ಲ. ಕಣ್ಣೀರು ಮಾತಾಡಿತ್ತು. ಸಮಾಜಕಲ್ಯಾಣಕ್ಕಾಗಿ ತನ್ನ ಕುಟುಂಬವನ್ನು ತೊರೆದು, ಸರ್ವವನ್ನೂ ತ್ಯಜಿಸಿದವನ ಮೇಲೆ ಶಾಂತಿಭಂಗ ಇತ್ಯಾದಿ ಪ್ರಕರಣ ದಾಖಲಿಸಿ, 11 ದಿನಗಳ ಕಾಲ ಜೈಲಿನಲ್ಲಿ ಕೊಳೆಸಿದರೆ ಹೇಗಾಗಬೇಡ ಅವರಿಗೆ?
ಇದರ ಹಿಂದಿನ ಕಾರಣ ಇಷ್ಟೇ, ಪೂರ್ವಾಂಚಲದಲ್ಲಿ ನಡೆಯುತ್ತಿರುವ ಕೋಮುಗಲಭೆಗಳ ವಿರುದ್ಧ ಯೋಗೀಜೀ ಧ್ವನಿ ಎತ್ತಿದ್ದರು. ಭಾರತ-ನೇಪಾಲ ಗಡಿ ಪ್ರದೇಶದಲ್ಲಿ ಐಎಸ್‍ಐ ಚಟುವಟಿಕೆಗಳ ವಿರುದ್ಧ ಆದಿತ್ಯನಾಥರ ಧ್ವನಿ ಪ್ರಬಲವಾಗಿತ್ತು. ಇದು ಉಗ್ರರಿಂದ ಹಿಡಿದು, ರಾಜಕಾರಣಿಗಳವರೆಗೂ ಎಲ್ಲರನ್ನೂ ನಡುಗಿಸಿತ್ತು. ಸಾಧ್ವಿ ಪ್ರಗ್ಯಾ ಸಿಂಗರನ್ನೇ ಒಳಗೆ ಹಾಕಿ ರುಬ್ಬುತ್ತಿರುವಾಗ, ಆದಿತ್ಯನಾಥರು ಯಾವ ಲೆಕ್ಕ, ಜೈಲಿಗಟ್ಟಿದರು. ಇದರ ಬಗ್ಗೆ ಮಾತಾಡುತ್ತಾ ಅವರು ಅತ್ತಿದ್ದನ್ನು ನಾವು ನೋಡಿದ್ದೇವೆ.
ಆದರೆ…
ಅದೇ ಮಾರ್ಚ್ ತಿಂಗಳು, ಹತ್ತೇ ಹತ್ತು ವರ್ಷಗಳಲ್ಲಿ ಪರಿಸ್ಥಿತಿಯೇ ಉಲ್ಟಾ. ಮುಲಾಯಂ ಸಿಂಗ್ ಪುತ್ರ ಅಖಿಲೇಶರ ಸರಕಾರವನ್ನು ನೆಲಕ್ಕೆಡವಿ, 2017ರ ಮಾರ್ಚ್ 19ಕ್ಕೆ ಯೋಗಿ ಆದಿತ್ಯನಾಥರು ಎಲ್ಲರ ಮುಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಎಂಥವರಿಗೂ ಮೈನವಿರೇಳಿಸುವಂತಿತ್ತು. ಒಬ್ಬ ಸನ್ಯಾಸಿಯ ಹಠ ಎಂದರೆ ಇದು.
ಏಕೆಂದರೆ, ಈ ಹಠಯೋಗಿಯವರ ಜನ್ಮಜಾತಕವೇ ಅಂಥದ್ದು!
ಅಜಯ್ ಸಿಂಗ್ ಬಿಶ್ತ್ ರ ಮಗನಾದ ಆದಿತ್ಯನಾಥ ಹುಟ್ಟಿದ್ದು 1972ರ ಜೂನ್ 5ರಂದು. ಉತ್ತರಾಖಂಡದ ಪಾಂಚೂರು ಎಂಬಲ್ಲಿ. ಆದಿತ್ಯನಾಥ ಚಿಕ್ಕವರಾಗಿದ್ದಾಗ ಎಲ್ಲ ಮಕ್ಕಳಂತೆ ಆಟ, ಪಾಠ ಎಲ್ಲವೂ ಸಾಗುತ್ತಿತ್ತು. ಹುಚ್ಚುಕೋಡಿ ಮನಸ್ಸು, ಅದು ಹದಿನಾರರ ವಯಸ್ಸು ಎನ್ನುತ್ತಾರೆ. ಆದರೆ ಆದಿತ್ಯನಾಥರ ಮನಸ್ಸು ಮಾತ್ರ ಎಳೆಯುತ್ತಿದ್ದದ್ದು ಯೋಗಿಯಾಗುವುದರ ಬಗ್ಗೆ. ಆಗಲಿಂದಲೇ ಪುಸ್ತಕ, ಪ್ರವಚನಗಳ ಗೀಳು ಹತ್ತಿಸಿಕೊಂಡಿದ್ದರು. ಆಗಿನ ಕಾಲದ ಹುಡುಗರನ್ನು ಅವರ ತಂದೆ-ತಾಯಂದಿರು, ಯಾವ ಬೀದಿಯಲ್ಲಿ ಪೋಲಿ ಅಲೆಯುತ್ತಿದ್ದಾರೆ ಎಂದು ಹುಡುಕಬೇಕಿತ್ತು. ಆದರೆ ಆದಿತ್ಯನಾಥ ಮಾತ್ರ ಮನೆಯಲ್ಲಿಲ್ಲದಿದ್ದರೆ, ಇರುತ್ತಿದ್ದುದ್ದೇ ಗೋರಖನಾಥ ದೇವಾಲಯದಲ್ಲಿ. ಹಾಗಿತ್ತು ಅವರ ಬಾಲ್ಯ. ಇಲ್ಲಿಂದ ಮುಂದೇನಾಗುತ್ತದೆ ಎಂದು ಊಹಿಸುವುದು ಬಹಳ ಕಷ್ಟವೇನಲ್ಲ. ತಮ್ಮ 21ನೇ ವಯಸ್ಸಿಗೆ ಕುಟುಂಬವನ್ನು ತ್ಯಜಿಸಿ, ಗೋರಖನಾಥ ದೇವಾಲಯದ ಮುಖ್ಯ ಅರ್ಚಕರಾದ ಅವೈದ್ಯನಾಥ ಅವರ ಶಿಷ್ಯರಾದರು.
ಅವೈದ್ಯನಾಥರು ಕೇವಲ ಒಬ್ಬ ಮುಖ್ಯ ಅರ್ಚಕ ಎಂದು ನೀವು ಭಾವಿಸಿದ್ದರೆ ತಪ್ಪಾದೀತು. ಏಕೆಂದರೆ, ಅವರು ಹಿಂದೂ ಮಹಾಸಭಾದಿಂದ ಲೋಕಸಭೆ ಸದಸ್ಯರಾಗಿದ್ದರು. ಕೊನೆಗೆ ಅಲ್ಲಿಂದ ಬಿಜೆಪಿಗೆ ಸೇರಿದರು. ಇವರ ನಂತರ ಮಠಕ್ಕೆ ಉತ್ತರಾಧಿಕಾರಿಯಾದದ್ದು ಅವೈದ್ಯನಾಥರ ಶಿಷ್ಯರಾದ ದಿಗ್ವಿಜಯನಾಥರು. ಅಚ್ಚರಿಯೆಂಬಂತೆ, ದಿಗ್ವಿಜಯನಾಥರು ಸಹ ಹಿಂದೂ ಮಹಾಸಭಾದಿಂದ ಲೋಕಸಭೆಯ ಸದಸ್ಯರಾದರು. ಈ ಮಠದ ಪರಂಪರೆ ಹೇಗಿದೆಯೆಂದರೆ, ಅಲ್ಲಿ ಯಾವಾಗಲೂ ತಮ್ಮ ಶಿಷ್ಯವರ್ಗವನ್ನು ಸತತ ತರಬೇತಿ ನೀಡುತ್ತಲೇ ಇರುತ್ತಾರೆ. ವೇದ, ಮಂತ್ರ, ಉಪನಿಷತ್ತು ಮತ್ತು ಪುರಾಣಗಳ ಜತೆಗೆ ಎಲ್ಲ ವಿಷಯದಲ್ಲೂ ಅವರನ್ನು ತಯಾರು ಮಾಡುತ್ತಾರೆ. ಯುವಕರಾಗಿದ್ದಾಗಲೇ ತಯಾರಿ ಆರಂಭವಾಗುವುದರಿಂದ, ಒಂಥರಾ ಕಾದ ಕಬ್ಬಿಣಕ್ಕೆ ರೂಪ ಕೊಟ್ಟಂತೆ. ಆಮೇಲೆ ಅದೆಂದೂ ಬಾಗುವುದಿಲ್ಲ. ಅಂಥ ಗರಡಿಯಿಂದ ಹೊರ ಬಂದವರೇ ಯೋಗಿ ಆದಿತ್ಯನಾಥರು. 1998 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಭಾರಿ ಸಂಸದರಾದಾಗ ಅವರಿಗೆ ವಯಸ್ಸು 26 ಎಂದರೆ, ಆಗಲೇ ಅವರ ಕೀರ್ತಿ ಎಷ್ಟಿದ್ದಿರಬಹುದು ನೀವೇ ಊಹಿಸಿ. ಇದರಲ್ಲಿ ಬಹಳ ಮುಖ್ಯವಾದದ್ದೇನೆಂದರೆ, ಪ್ರತೀ ಬಾರಿ ಚುನಾವಣೆಯಲ್ಲೂ ಯೋಗಿ ಆದಿತ್ಯನಾಥರು ಹೆಚ್ಚೆಚ್ಚು ಮತಗಳಿಂದ ಗೆಲ್ಲುತ್ತಲೇ ಬಂದರು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಐದು ಸಲ ಆರಿಸಿ ಬಂದರೂ ಅವರನ್ನು ಎಲ್ಲೂ ತಾನು ಮುಖ್ಯಮಂತ್ರಿಯಾಗಬೇಕೆಂದು ಹಪಾಹಪಿಸಲೇ ಇಲ್ಲ. ಆದರೆ ಸಂಸದರಾಗಿದ್ದುಕೊಂಡು ತನ್ನ ಕೆಲಸ ಮಾತ್ರ ಬಿಡಲಿಲ್ಲ. ಕೆಲ ಮಾತುಗಳನ್ನಾಡಿದ್ದರಿಂದ ಮಾಧ್ಯಮಗಳು ಅವರನ್ನು ದೊಡ್ಡ ಕೋಮುವಾದಿ ಎಂದೆಲ್ಲ ಬಣ್ಣಿಸಿದ್ದವು. ಆದರೆ ಅದಕ್ಕೆಲ್ಲ ಕ್ಯಾರೇ ಎನ್ನದ ಯೋಗಿ, ತಮ್ಮವರ ರಕ್ಷಣೆಗೆ ಸದಾ ನಿಂತಿರುತ್ತಿದ್ದರು. ಆ ಪುಣ್ಯಾತ್ಮ ಪ್ರತೀ ಸಲ ರಾಮ್ ಮಂದಿರ್ ವಹೀ ಬನಾಯೇಂಗೆ ಎಂದಾಗಲೂ ಶತ್ರುಗಳ ಎದೆಯಲ್ಲಿ ಭಯ ಇದ್ದೇ ಇತ್ತು. ಮಾಧ್ಯಮಗಳು ಈ ವಿಚಾರದಿಂದಲೇ ಅವರನ್ನು ಹುರಿದು ಮುಕ್ಕಲು ಬಂದರೂ, ಇವರ ಉತ್ತರ ಮಾತ್ರ ಒಂದೇ.
ಇಂಥ ಯೋಗಿ ಅಧಿಕಾರಕ್ಕೆ ಬಂದಾಗಿನಿಂದ ಒಂದು ಕ್ಷಣ ಸುಮ್ಮನೆ ಕುಳಿತಿಲ್ಲ,
ನೀವೆಲ್ಲ ತಮಿಳಿನಲ್ಲಿ ಅರ್ಜುನ್ ಸರ್ಜಾ ಹಾಗೂ ಹಿಂದಿಯಲ್ಲಿ ಅನಿಲ್ ಕಪೂರ್ ಅಭಿನಯದ `ನಾಯಕ್’ ಚಿತ್ರ ನೋಡಿರುತ್ತೀರಿ. ಆತ ಅಧಿಕಾರಕ್ಕೆ ಬರುತ್ತಿದ್ದಂತೆ ವ್ಯವಸ್ಥೆಯನ್ನೇ ಬದಲಾಯಿಸುತ್ತಾನೆ. ಅರ್ಜುನ್ ಸರ್ಜಾ ರೀಲ್ ನಾಯಕನಾದರೆ, ರಿಯಲ್ ನಾಯಕರಾಗಿ ಯೋಗಿ ಸಿಡಿದೆದ್ದಿದ್ದಾರೆ.  ಬೇರೆ ರಾಜಕಾರಣಿಗಳು ಅಧಿಕಾರಕ್ಕೆ ಬಂದ ಒಂದು ವರ್ಷ ಮಜಾ ಉಡಾಯಿಸುವುದರಲ್ಲೇ ಸಮಯ ಹಾಳು ಮಾಡುತ್ತಾರೆ, ಆದರೆ ಆದಿತ್ಯನಾಥರು, ರಾಜಕಾರಣಿಯಲ್ಲ ಹಠಯೋಗಿ. ಅವರು ಅಧಿಕಾರಕ್ಕೆ ಬಂದು ಆರು ದಿನಗಳಾಯಿತು. ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ನೋಡಿ:
1. ಆ್ಯಂಟಿ ರೋಮಿಯೋ ಸ್ಕ್ವಾಡ್: ಹುಡುಗಿಯರನ್ನು ಚುಡಾಯಿಸುವವರನ್ನು ಹತ್ತಿಕ್ಕಲು ಪ್ರತೀ ಜಿಲ್ಲೆಯಲ್ಲೂ ವಿಶೇಷ ತಂಡ ರಚನೆ. ಲಖನೌ ಭಾಗದ ಹನ್ನೊಂದು ಜಿಲ್ಲೆಗಳಲ್ಲಿ ಪೆÇಲೀಸರು ಆದೇಶ ನೀಡಿಯಾಗಿದೆ. ಇವುಗಳನ್ನು ಐಜಿಯವರೇ ಖುದ್ದು ನಿರ್ವಹಿಸುತ್ತಾರೆ.
2. ಯುಪಿಪಿಎಸ್‍ಸಿ ಪರೀಕ್ಷೆಯ ಫಲಿತಾಂಶಕ್ಕೆ ತಡೆ: ಯುಪಿಪಿಎಸ್‍ಸಿ ಭ್ರಷ್ಟಾಚಾರದ ಕೂಟವಾಗಿದ್ದರಿಂದ, ಅದರ ಫಲಿತಾಂಶವನ್ನೇ ತಡೆಹಿಡಿದಿದ್ದಾರೆ.
3. ಅನಧೀಕೃತ ಕಸಾಯಿಖಾನೆಗಳ ತೆರವು: ಘಾಜಿಯಾಬಾದ್, ಅಲಹಾಬಾದ್ ಮುಂತಾದ ಪ್ರದೇಶದಲ್ಲಿ ಪಾರ್ಥೇನಿಯಂನಂತೆ ಬೆಳೆದು ನಿಂತಿದ್ದ ಕಸಾಯಿಖಾನೆಗಳನ್ನು ಬಂದ ಮೊದಲ ದಿನವೇ ಮುಚ್ಚಿಸಿದ್ದಾರೆ.
4. ಗೋವು ಕಳ್ಳ ಸಾಗಣೆಗೆ ತಡೆ: ಗೋವು ಕಳ್ಳ ಸಾಗಣೆ ಕಂಡುಬಂದಲ್ಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಖಡಕ್ ಆದೇಶ.
5. ಭೂಮಿ ಅನುದಾನ: ಅಯೋಧ್ಯೆಯಲ್ಲಿ ರಾಮ್ ಮ್ಯೂಸಿಯಂ ನಿರ್ಮಾಣಕ್ಕೆ 25 ಎಕರೆ ಭೂಮಿ ನೀಡುವ ಬಗ್ಗೆ ಚರ್ಚೆ. ಇದಕ್ಕೆ ಕೇಂದ್ರ ಸರಕಾರ 154 ಕೂಟಿ ಅನುದಾನ ನೀಡಿದ್ದಾರೆ.
6. ತಿಮಿಂಗಿಲದಂತೆ ಬಾಯಿ ತೆಗೆದುಕೊಂಡು ಹಣ ನುಂಗುತ್ತಿದ್ದ ಭ್ರಷ್ಟ, ಕರ್ತವ್ಯದ್ರೋಹಿ ಪೆÇಲೀಸರ ಅಮಾನತು.
ಆರು ದಿನಗಳಲ್ಲಿ, ಆರು ನಿರ್ಧಾರಗಳು! ಅರ್ಥಾತ್, ಒಂದು ಕ್ಷಣ ಸಹ ದಂಡ ಮಾಡಲಿಲ್ಲ. ಪಾರ್ಟಿ ಮಾಡುತ್ತಾ ಕೂರಲಿಲ್ಲ, ಬದಲಿಗೆ ವಿಜಯೋತ್ಸದ ನೆಪದಲ್ಲಿ ದಾದಾಗಿರಿ ಮಾಡುವವರನ್ನು ಒಳಗೆ ತಳ್ಳಿ ಎಂಬ ಖಡಕ್ ಆದೇಶ ಕೊಟ್ಟರು. ದೇಶದ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಿಂದ ಇನ್ನೇನನ್ನು ನಿರೀಕ್ಷಿಸುತ್ತೀರಿ ಸ್ವಾಮಿ?
ಬಹುಶಃ ಕಟ್ಟರ್‍ವಾದಿಯೆಂಬ ಹಣೆಪಟ್ಟಿ ಹೊತ್ತ ಇನ್ಯಾರೇ ಮುಖ್ಯಮಂತ್ರಿಯಾಗಿದ್ದರೂ ಇಮೇಜನ್ನು ಸೌಮ್ಯವಾದಿಯಂತೆ ಪರಿವರ್ತಿಸಿಕೊಳ್ಳಲು ಮೊದಲು ಪ್ರಯತ್ನಪಡುತ್ತಿದ್ದರು. ಆದರೆ ರಾಜಕಾರಣದಲ್ಲಿ ಭೋಗಿಗಳು, ಸೋಗಲಾಡಿಗಳೇ ಹೆಚ್ಚಾಗಿ ತುಂಬಿದ್ದರೂ ಒಬ್ಬ ಅಪ್ಪಟ ರಾಷ್ಟ್ರವಾದಿ ಯೋಗಿ ಸ್ವಂತ ಇಮೇಜಿಗಿಂತ ರಾಜ್ಯದ ಇಮೇಜನ್ನು ಎತ್ತರಿಸಲು ಹೊರಟಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಇಂಥ ಹಠಯೋಗಿಯೇ ಸರಿ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾವಿಸಿದ್ದರಲ್ಲಿ ಈಗ ಯಾವ ಆಶ್ಚರ್ಯವೂ ಕಾಡುತ್ತಿಲ್ಲ.

20170325_070816

Comments are closed.