Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೆಟ್ಟ ಕಾರಣಕ್ಕಾಗಿ ಸುದ್ಧಿಯಾಗುವಂಥ ಸ್ಥಿತಿ ತಲುಪಿತೇ ನಮ್ಮ ಕರ್ನಾಟಕ?

ಕೆಟ್ಟ ಕಾರಣಕ್ಕಾಗಿ ಸುದ್ಧಿಯಾಗುವಂಥ ಸ್ಥಿತಿ ತಲುಪಿತೇ ನಮ್ಮ ಕರ್ನಾಟಕ?

ಕೆಟ್ಟ ಕಾರಣಕ್ಕಾಗಿ ಸುದ್ಧಿಯಾಗುವಂಥ ಸ್ಥಿತಿ ತಲುಪಿತೇ ನಮ್ಮ ಕರ್ನಾಟಕ?

ಯಾಸಿನ್ ಭಟ್ಕಳ್
ರಿಯಾಝ್ ಭಟ್ಕಳ್
ಇಕ್ಬಾಲ್ ಭಟ್ಕಳ್
ಇದೀಗ ಇವರ ಸಾಲಿಗೆ ಮಹಮ್ಮದ್ ಶಫೀ ಅರ್ಮರ್ ಹೊಸದಾಗಿ ಸೇರಿಕೊಂಡಿದ್ದಾನೆ! ಇವರೆಲ್ಲರ ನಡುವಿನ ಒಂದು ಸಾಮ್ಯತೆಯೇನೆಂದರೆ, ಎಲ್ಲರೂ ಕರ್ನಾಟಕದವರೇ. ಅದರಲ್ಲೂ ಭಟ್ಕಳದವರು. ಏಕೆ ಇವರ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆಯೆಂದರೆ, ಮೊನ್ನೆ ತಾನೆ ಅಮೆರಿಕ ಮಹಮ್ಮದ್ ಶಫೀ ಅರ್ಮರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಅಷ್ಟು ಮಾತ್ರವಲ್ಲ ಕುಖ್ಯಾತ ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‌ನ ಮೊದಲ ಭಾರತೀಯ ನೇತಾರ ಎಂಬ ಅಂಶವನ್ನೂ ಅಮೆರಿಕ ಹೊರ ಹಾಕಿದೆ.
ಈ ಮಹಮ್ಮದ್ ಶಫಿಯನ್ನು ‘ಛೋಟೆ ಮೌಲಾ’, ‘ಅಂಜಾನ್ ಭಾಯಿ’ ಹಾಗೂ ‘ಯೂಸಫ್ ಅಲ್ ಹಿಂದಿ’ ಎಂದು ಕರೆಯಲಾಗುತ್ತದೆ. ಮೂವತ್ತು ವರ್ಷದ ಶಫಿ ವಿರುದ್ಧ ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್ ಕೂಡ ಇದೆ. ಇಂಡಿಯನ್ ಮುಜಾಹಿದ್ದೀನ್‌ನ ಸದಸ್ಯರ ವಿರುದ್ಧ ಭಾರತದ ಗುಪ್ತಚರ ಸಂಸ್ಥೆಗಳು ಕಠಿಣ ಕ್ರಮ ತೆಗೆದುಕೊಳ್ಳಲಾರಂಭಿಸಿದ ನಂತರ ತನ್ನ ಹಿರಿಯ ಸಹೋದರನ ಜತೆಗೆ ಶಫೀ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಇವತ್ತು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಅದರಲ್ಲೂ ಐಸಿಸ್‌ಗೆ ಭಾರತದಿಂದ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಜಾಲವನ್ನೇ ಈತ ನಡೆಸುತ್ತಿದ್ದಾನೆ. ಇದು ಇಂಡಿಯನ್ ಮುಜಾಹಿದ್ದೀನ್‌ನ ಸ್ಥಾಪಕ ರಿಯಾಜ್ ಭಟ್ಕಳ್ ಮತ್ತು ಆತನ ಸಹೋದರರ ಜತೆ ಸಂಬಂಧ ಹಳಸಿದ ನಂತರ ಪಾಕಿಸ್ತಾನ ಸೇರಿ ಅನ್ಸರ್ ಉಲ್ ತವಹಿದ್ ಎಂಬ ಭಯೋತ್ಪಾದಕ ಸಂಘಟನೆ ಆರಂಭಿಸಿದ ಶಫೀ ಇಂದು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಯುವಕರ ತಲೆ ಕೆಡಿಸಿ ಐಸಿಸ್‌ಗೆ ಕಳುಹಿಸುವ ಒಂದು ದೊಡ್ಡ ಜಾಲವನ್ನೇ ಹರಡಿದ್ದಾನೆ.
ಇಷ್ಟೇ ಅಲ್ಲದೇ, ಭಾರತದಿಂದ ಹೊರಗೂ ದಾಳಿಗೆ ಸಂಚು ರೂಪಿಸುವುದು, ಶಸ್ತ್ರಾಸ್ತ್ರಗಳನ್ನು ಪಡೆಯುವುದು ಮತ್ತು ಉಗ್ರರಿಗೆ ತರಬೇತಿ ಕೊಡುವ ಕ್ಯಾಪ್‌ಗಳನ್ನು ಹಾಕಲು ಜಾಗಗಳನ್ನು ಹುಡುಕಲೂ ಐಸಿಸ್ ಪರ ಒಲವಿರುವವರನನ್ನು ಈತ ಸಾಕಿಕೊಂಡಿದ್ದಾನೆ. ಇದೇ ಮೊದಲ ಬಾರಿಗೆ ಅಮೆರಿಕ ಐಸಿಸ್‌ಗೆ ಕೆಲಸ ಮಾಡುವ ಭಾರತೀಯನೊಬ್ಬನ ವಿರುದ್ಧ ದಿಗ್ಬಂಧನೆ ಹೇರಿರುವುದು ಹಾಗೂ ಆ ವ್ಯಕ್ತಿ ದುರದೃಷ್ಟವಶಾತ್ ಕರ್ನಾಟಕದವನೇ ಆಗಿರುವುದು ನಮ್ಮ ರಾಜ್ಯ ಎತ್ತ ಸಾಗುತ್ತಿದೆ ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಇಷ್ಟಕ್ಕೂ ಈ ಭಟ್ಕಳ್ ಬ್ರದರ್ಸ್‌ ಮತ್ತು ಮಹಮ್ಮದ್ ಶಫೀ ಯಾರೆಂದುಕೊಂಡಿರಿ? 2013ರಲ್ಲಿ ಬಿಹಾರದ ಬಳಿಯ ನೇಪಾಳದ ಗಡಿಯಲ್ಲಿ ‘ಇಂಡಿಯನ್ ಮುಜಾಹಿದ್ದೀನ್’ ಎಂಬ ಭಯೋತ್ಪಾದಕ ಸಂಘಟನೆಯ ಸಹಸಂಸ್ಥಾಪಕ ಯಾಸಿನ್ ಭಟ್ಕಳನನ್ನು ಬಂಧಿಸಿರುವ ವಿಷಯ ಹೊರಬಿದ್ದ ನಂತರ ಸತತವಾಗಿ ಈ ಹೆಸರುಗಳು(ಭಟ್ಕಳ್) ನಮ್ಮ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇ ಪದೆ ಪ್ರಸ್ತಾಪವಾಗುತ್ತಿವೆ.
ಯಾಸಿನ್ ಭಟ್ಕಳ್ ಎಂತಹ ಖತರ್‌ನಾಕ್ ಮನುಷ್ಯ ಎಂಬುದನ್ನು ವಿವರಿಸಲಾಗುತ್ತಿದೆ. ಆತನ ಬಂಧನ ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ಎಷ್ಟು ದೊಡ್ಡ ಯಶಸ್ಸು ಎಂಬುದನ್ನು ಬಿಡಿಸಿ ಹೇಳಲಾಗುತ್ತಿದೆ. ‘ರಾ’, ‘ಐಬಿ’, ‘ಸಿಬಿಐ’ನ ಮುಖ್ಯಸ್ಥರಾಗಿದ್ದವರು, ಅವುಗಳಲ್ಲಿ ಸೇವೆ ಸಲ್ಲಿಸಿದವರೂ ಯಾಸಿನ್ ಬಂಧನ ಬಹುದೊಡ್ಡ ಯಶಸ್ಸು ಎಂದು ಬಣ್ಣಿಸುತ್ತಿದ್ದಾರೆ. ದುರದೃಷ್ಟವಶಾತ್ ಆತನ ಮೂಲ, ಹಿನ್ನೆಲೆಯನ್ನು ಕೆದಕುವಾಗ ಕರ್ನಾಟಕದ ಹೆಸರು ಪದೇಪದೆ ಪ್ರಸ್ತಾಪವಾಗುತ್ತಿದೆ! ಏಕಾಗಿ ಭಯೋತ್ಪಾದನೆಯಂಥ ದೇಶದ್ರೋಹದ ವಿಷಯ ಬಂದಾಗ ಕರ್ನಾಟಕದ ಹೆಸರು ಇತ್ತೀಚೆಗೆ ಮತ್ತೆ ಮತ್ತೆ ಕೇಳಿ ಬರುತ್ತಿದೆ?! ಕರ್ನಾಟಕದಂಥ ಶಾಂತಿಪ್ರಿಯ ರಾಜ್ಯದಲ್ಲಿ ಇಂಥ ದೇಶದ್ರೋಹಿ ಗಳು ಜನಿಸಿದ್ದಾದರೂ ಹೇಗೆ ಹಾಗೂ ಯಾವಾಗಿನಿಂದ?
1990ರ ದಶಕದ ಕೊನೆಯ ಭಾಗದಲ್ಲಿ ಬೆಂಗಳೂರಿನ ಬಳಿಯ ಕಾಲೇಜೊಂದರ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎಚ್‌ಎಎಲ್‌ನಲ್ಲಿ ಇಂಟರ್ನಿ ಯಾಗಿದ್ದಾಗ ಸೂಕ್ಷ್ಮ ಮಾಹಿತಿ ಕದ್ದು ಪಾಕಿಸ್ತಾನಕ್ಕೆ ರವಾನಿಸುವಾಗ ಸಿಕ್ಕಿಬಿದ್ದಿದ್ದ. ನಂತರ ಮತ್ತೆ ಕರ್ನಾಟಕ ಕೆಟ್ಟ ಕಾರಣಕ್ಕಾಗಿ ಸುದ್ದಿಯಾ ಗಿದ್ದು 2007ರಲ್ಲಿ, ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಆಗ ಪ್ರಸ್ತಾಪಗೊಂಡ ಹೆಸರುಗಳು ಕಫೀಲ್, ಸಬೀಲ್ ಹಾಗೂ ಬಿಲಾಲ್. ಈ ಕಫೀಲ್ ಹಾಗೂ ಸಬೀಲ್ ಅಹ್ಮದ್ ನಮ್ಮ ಐತಿಹಾಸಿಕ ಬೇಲೂರು ಬಳಿಯ ನಾಗೇನಹಳ್ಳಿಗೆ ಸೇರಿದ ಡಾ. ಮಕ್ಬೂಲ್ ಅಹ್ಮದ್ ಮಕ್ಕಳು. ಬಿಲಾಲ್ ಇರಾಕಿ. ಉದ್ಯೋಗ ಅರಸಿ ಇಂಗ್ಲೆಂಡ್ ಸೇರಿದ್ದರೂ ತಲೆಯೊಳಗೆ ತುಂಬಿಕೊಂಡಿದ್ದ ಧರ್ಮಾಂಧತೆಯನ್ನು ಕಫೀಲ್ ಹಾಗೂ ಬಿಲಾಲ್ ಬಿಟ್ಟಿರಲಿಲ್ಲ. ವೃತ್ತಿಯಿಂದ ಏರೋನಾಟಿಕಲ್ ಎಂಜಿನಿಯರ್ ಆಗಿದ್ದ ಕಫೀಲ್ ತುಂಬಾ ಬುದ್ಧಿವಂತ. ಬಿಲಾಲ್ ವೈದ್ಯ. ಆದರೆ ಆ ಬುದ್ಧಿಯನ್ನು ಅನ್ಯಧರ್ಮೀಯರ ವಿನಾಶಕ್ಕೆ ಬಳಸಲು ಮುಂದಾದರು.
ಅದೇ ವೇಳೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನ ಹಾಗೂ ಇರಾಕ್ ಮೇಲೆ ದಾಳಿ ಮಾಡುವುದಕ್ಕೆ ಸಾಥ್ ಕೊಟ್ಟಿದ್ದ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಕೂಡ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ ಖೈದಾಕ್ಕೆ ಸೇರಿದ ಅಥವಾ ಅದರ ಜತೆ ಸಂಪರ್ಕ ಹೊಂದಿರುವ ಸಂಘಟನೆಗಳು ಬ್ರಿಟನ್‌ನಲ್ಲಿಯೂ ಸಕ್ರಿಯವಾಗಿವೆ ಎಂಬ ಗುಪ್ತಚರ ಮಾಹಿತಿಯೂ ಬಂದಿತ್ತು. ಇತ್ತ ಬ್ರಿಟನ್‌ನ ಅಮಾಯಕರನ್ನು ಕೊಲ್ಲಲು ಮುಂದಾಗುವಂಥ ಯಾವ ಕಾರಣ ಈ ಕಫೀಲ್ ಹಾಗೂ ಬಿಲಾಲ್‌ಗಿತ್ತು ಎಂಬುದನ್ನು ಆ ಭಗವಂತನೇ ಬಲ್ಲ. ಆದರೆ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದ ಕಫೀಲ್ ಒಂದು ಹಳೇ ವಾಹನವನ್ನು ಖರೀದಿ ಮಾಡಿ ವಿಧ್ವಂಸಕ ಕೃತ್ಯಕ್ಕೆ ಮುಂದಾದ 2007, ಜೂನ್ 28. ಅಂದು ತಾವಿದ್ದ ಗ್ಲಾಸ್‌ಗೋನಿಂದ ಲಂಡನ್‌ಗೆ ಕಫೀಲ್ ಹಾಗೂ ಬಿಲಾಲ್ ಎರಡು ವಾಹನಗಳಲ್ಲಿ ತೆರಳಿದರು. ಒಂದು ಕಾರನ್ನು ಕಾಕ್ಸ್‌‌ಪರ್ ರಸ್ತೆಯಲ್ಲಿ, ಮತ್ತೊಂದನ್ನು ಟೈಗರ್  ಟೈಗರ್ ಎಂಬ ನೈಟ್ ಕ್ಲಬ್ ಬಳಿ ನಿಲ್ಲಿಸಿ ಕೂಡಲೇ ಗ್ಲಾಸ್ ಗೋಗೆ ವಾಪಸಾದರು. ಇತ್ತ ನೈಟ್‌ಕ್ಲಬ್‌ನಲ್ಲಿ ರಾತ್ರಿಯೆಲ್ಲಾ ಹೊಟ್ಟೆಗೆ ಹುಯ್ದುಕೊಂಡು ಪಕ್ಕದಲ್ಲೇ ಇದ್ದ ಚರಂಡಿಯ ಪಾಲಾಗಿದ್ದ ಕುಡುಕನೊಬ್ಬ.
ಆತನಿಗೆ ಚಿಕಿತ್ಸೆ ನೀಡಲು ಮರುದಿನ ತುರ್ತುಸೇವಾ ಕರ್ಮಿಗಳು ಬಂದರು. ಅವರಿಗೆ ಬಳಿಯಲ್ಲೇ ನಿಂತಿದ್ದ ಕಾರಿನಿಂದ ಹೊಗೆ ಬರುತ್ತಿರುವುದು ಕಂಡಿತು. ಅವರು ಮಾಹಿತಿ ನೀಡಿದ ನಂತರ ಆಗಮಿಸಿದ ಟ್ರಾಫಿಕ್ ಪೊಲೀಸರು ವಾಹನವನ್ನು ದೂರ ಒಯ್ದರು. ಇತ್ತ ಕಾಕ್ಸ್‌‌ಪರ್ ರಸ್ತೆಯಲ್ಲಿದ್ದ ಕಾರೂ ಹಾಗೇ ನಿಂತಿತ್ತು. ಆ ಕಾರುಗಳಲ್ಲಿ ಕಫೀಲ್, ಬಿಲಾಲ್ ಬಾಂಬುಗಳನ್ನು ಇಟ್ಟಿದ್ದರು! ಅವುಗಳಿಗೆ ಮೊಬೈಲ್ ಫೋನ್‌ಗಳನ್ನು ಅಳವಡಿಸಿದ್ದರು!! ಕರೆ ಮಾಡಿದ ಕೂಡಲೇ ಸ್ಫೋಟಗೊಳ್ಳುವಂತೆ ಅವುಗಳನ್ನು ರೂಪಿಸಲಾಗಿತ್ತು. ಆ ಕಾರಣಕ್ಕಾಗಿಯೇ ಗ್ಲಾಸ್‌ಗೋಗೆ ತೆರಳಿದ ಕೂಡಲೇ ಕಫೀಲ್, ಬಿಲಾಲ್ ಎರಡೂ ಕಾರುಗಳಲ್ಲಿದ್ದ ಮೊಬೈಲ್‌ಗಳಿಗೆ ಪದೇ ಪದೆ ಕರೆ ಮಾಡಿದ್ದಾರೆ. ಅದೃಷ್ಟವಶಾತ್, ತಾಂತ್ರಿಕ ಕಾರಣಗಳಿಂದಾಗಿ ಅವೆರಡೂ ಬಾಂಬ್‌ಗಳು ಅಂದು ಸ್ಫೋಟಗೊಂಡಿರಲಿಲ್ಲ. ಹೀಗಾಗಿ, ಕದ್ದುಮುಚ್ಚಿ ಮಾಡುವ ಕೆಲಸ ಬೇಡ ಎಂಬ ನಿರ್ಧಾರಕ್ಕೆ ಬಂದ ಕಫೀಲ್, ಬಿಲಾಲ್ ಆತ್ಮಹತ್ಯಾ ದಾಳಿಗೇ ಮುಂದಾದರು!
ಗ್ಯಾಸ್ ತುಂಬಿದ ಕ್ಯಾನ್‌ಗಳನ್ನು ಜೀಪಿನಲ್ಲಿಟ್ಟುಕೊಂಡು ಹೊರಟ ಕಫೀಲ್ ವಿಮಾನ ನಿಲ್ದಾಣಕ್ಕೆ ಡಿಕ್ಕಿ ಹೊಡೆಸಲು ಮುಂದಾದ. ಆಗಲೂ ಯೋಜನೆ ಕೈಕೊಟ್ಟಿತು. ಉರಿಯುವ ಜ್ವಾಲೆ ಕಫೀಲ್‌ನನ್ನೇ ಸುಟ್ಟಿತು. ಮೂರು ತಿಂಗಳು ಆಸ್ಪತ್ರೆಯಲ್ಲಿದ್ದು ಕೊನೆಗೂ ಮೃತ್ಯುವಿನ ಪಾಲಾಗಬೇಕಾಯಿತು. ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಲಾಲ್‌ನನ್ನು ಬಂಧಿಸಿ ಜೀವಾವಧಿ ಶಿಕ್ಷೆ ನೀಡಿದರೆ, ಕಫೀಲ್‌ನ ಕಿರಿಯ ಸಹೋದರ ಸಬೀಲ್‌ನನ್ನೂ ವೃಥಾ ಬಂಧಿಸಿದ ಪೊಲೀಸರು ಕೊನೆಗೆ ಬಿಡುಗಡೆ ಮಾಡಿದರು. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಇಂಗ್ಲೆಂಡ್‌ನ ಸಿಮ್ ಅನ್ನು ಕಫೀಲ್‌ಗೆ ನೀಡಿದ್ದ ಮತ್ತೊಬ್ಬ ಸಂಬಂಧಿ ಹಾಗೂ ಕರ್ನಾಟಕದವರೇ ಆದ ಡಾ. ಮೊಹಮದ್ ಹನೀಫ್‌ರನ್ನೂ ತಪ್ಪಾಗಿ ಆಸ್ಟ್ರೇಲಿಯಾ ಬಂಧಿಸಿ ಮುಖಭಂಗಕ್ಕೊಳಗಾಯಿತು. ಇದೇನೇ ಇರಲಿ, ದುರದೃಷ್ಟವಶಾತ್, ಒಬ್ಬ ಪ್ರತಿಭಾನ್ವಿತ ಎಂಜಿನಿಯರ್ ಆಗಿದ್ದ ಕಫೀಲ್ ಅಹ್ಮದ್ ಭಾರತದ ಮೊದಲ ಜಾಗತಿಕ ಜಿಹಾದಿ ಎನಿಸಿಬಿಟ್ಟ!
ಅಲ್ಲಿಂದ ಆರಂಭವಾಯಿತು ನೋಡಿ ಕರ್ನಾಟಕ ಕೆಟ್ಟ ವಿಚಾರಕ್ಕಾಗಿ ಸುದ್ದಿಯಾಗುವುದು. 1. 2008, ಜುಲೈ 25ರಂದು ಬೆಂಗಳೂರು ಸರಣಿ ಸ್ಫೋಟ 2. 2010, ಏಪ್ರಿಲ್ 17ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸ್ಫೋಟ 3. 2011 ಜೂನ್ 13ರಂದು ಕೆಎಫ್‌ಡಿಗೆ ಸೇರಿದ ಕಿರಾತಕರು ತಮ್ಮ ಭಯೋತ್ಪಾದಕರ ಚಟುವಟಿಕೆಗೆ ಹಣ ಸಂಗ್ರಹಿಸಲು ಮೈಸೂರು ಬಳಿಯ ಹುಣಸೂರಿನ ಸುಧೀಂದ್ರ ಹಾಗೂ ವಿಘ್ನೇಶ್ ಎಂಬ ವಿದ್ಯಾರ್ಥಿಗಳನ್ನು ಅಪಹರಿಸಿ, ಸುಲಿಗೆಗೆ ಯತ್ನಿಸಿ ವಿಫಲ ಗೊಂಡಾಗ ಇಬ್ಬರನ್ನೂ ಅಮಾನುಷವಾಗಿ ‘ಕಲಾಲ್’ ಮೂಲಕ ಕೊಂದು ಚಿಕ್ಕಬಳ್ಳಾಪುರ ಬೈಪಾಸ್ ಬಳಿ ಬಿಸಾಡಿ ಹೋದರು. 4. 2012, ಅಗಸ್ಟ್‌ 27ರಂದು ಗಣ್ಯರು, ಪತ್ರಕರ್ತರ ಮೇಲಿನ ಭಯೋತ್ಪಾದಕ ದಾಳಿ ಪಿತೂರಿ ಬಯಲು 5. 2013, ಏಪ್ರಿಲ್ 17ರಂದು ಮಲ್ಲೇಶ್ವರಂನಲ್ಲಿ ಸ್ಫೋಟ ಈ ಎಲ್ಲ ಘಟನೆಗಳಿಗೂ ಮೊದಲೇ, ಅಂದರೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ದಲ್ಲಿ ದಕ್ಷಿಣ ಭಾರತ ಚರ್ಚ್‌ಗಳ ಮೇಲೆ ದಾಳಿ ನಡೆಸಿ ಹಿಂದುಗಳ ಮೇಲೆ ಗೂಬೆ ಕೂರಿಸಲು ಅಂಜುಮಾನ್ ದೀನ್‌ದಾರ್ ಎಂಬ ಮುಸ್ಲಿಂ ಸಂಘಟನೆ ಪ್ರಯತ್ನಿಸಿತ್ತು. ಆನಂತರ ಹಂಪಿಯಲ್ಲಿ ಭಯೋತ್ಪಾದಕನೊಬ್ಬ ಸಿಕ್ಕಿ ಬಿದ್ದಿದ್ದ.
2005, ಡಿಸೆಂಬರ್ 28ರಂದು ಭಾರತೀಯ ವಿಜ್ಞಾನ ಮಂದಿರದ ಮೇಲೆ ಭಯೋತ್ಪಾದಕ ದಾಳಿಯೂ ನಡೆದಿತ್ತು. ಮತ್ತದೇ ಪ್ರಶ್ನೆ ಮೂಡುತ್ತಿದೆ, ನಮ್ಮ ರಾಜ್ಯ ಸಾಗುತ್ತಿರುವುದಾದರೂ ಎತ್ತ? ಇದೆಲ್ಲ ಏನನ್ನು ಸೂಚಿಸುತ್ತದೆ? ಪುಣೆಯ ಜರ್ಮನ್ ಬೇಕರಿ ಸ್ಫೋಟ, ಹೈದರಾಬಾದ್‌ನ ದಿಲ್‌ಸುಕ್ ನಗರದಲ್ಲಿ ನಡೆದ ಸ್ಫೋಟ, ಅಹ್ಮದಾಬಾದ್, ಸೂರತ್, ವಾರಾಣಸಿ, ಮುಂಬೈ, ಚಿನ್ನಸ್ವಾಮಿ ಹಾಗೂ ಮಲ್ಲೇಶ್ವರಂ, ಭೋದ್ ಗಯಾ ಸ್ಫೋಟಗಳು ಪ್ರಸ್ತಾಪವಾದಾ ಗಲೆಲ್ಲ ಭಟ್ಕಳದ ಯಾಸಿನ್, ರಿಯಾಝ್, ಇಕ್ಬಾಲ್ ಹೆಸರು ಕೇಳಿಬರುತ್ತಿವೆ. ಇಂಥ ವ್ಯಕ್ತಿಗಳು ಏಕಾಗಿ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗುತ್ತಿದ್ದಾರೆ? ಹಿಂದುಗಳ ತಾರತಮ್ಯದ ವಿರುದ್ಧ ಸಿಡಿದೆದ್ದಿದ್ದಾರೆ ಎನ್ನುವುದಕ್ಕೆ ಭಟ್ಕಳದಲ್ಲಿ ಮುಸ್ಲಿಮರೇ ಬಹುಸಂಖ್ಯಾತರು ಹಾಗೂ ಅಲ್ಲಿ ನಡೆಯುವುದು ಅವರದ್ದೇ ದರ್ಬಾರು. ಹಾಗಿದ್ದರೂ ಯಾಸಿನ್, ರಿಯಾಝ್, ಇಕ್ಬಾಲ್ ನಂಥವರು ಏಕೆ ಭಟ್ಕಳ ಹಾಗೂ ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದಾರೆ? ಇಲ್ಲಿರುವುದು ಮನಸ್ಥಿತಿಯೊಳಗಿನ ದೋಷ ಹಾಗೂ ಗಡಿಯಾಚೆಗಿರುವ ನಿಷ್ಠೆ, ಪ್ರೇರಣೆ! ಇಂತಹ ಬೆಳವಣಿಗೆಗಳ ನಡುವೆಯೇ ನಮ್ಮ ರೆಹಮಾನ್ ಖಾನ್ ಮಹಾಶಯರು ದುರುಳ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ವಿವಿ ತೆರೆಯಲು ಹೊರಟಿದ್ದರು.
ಒಂದು ಅಲಿಗಢ ವಿಶ್ವವಿದ್ಯಾಲಯ ಅಖಂಡ ಭಾರತವನ್ನು ಮೂರು ಹೋಳಾಗಿಸಿತು. ಜಾಮಿಯಾ, ಉಸ್ಮಾನಿಯಾದಲ್ಲಿ ಏನಾಗುತ್ತಿದೆ ಎಂಬುದನ್ನು ದೇಶ ಆತಂಕದಿಂದ ನೋಡುವಂತಾಗಿದೆ. ಇನ್ನು ಜಾಮಿಯಾದಲ್ಲಂತೂ ಜಾಮಿಯಾ ಮಿಲಿಯಾ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಷನ್ ಎಂಬ ಸಂಘಟನೆ ಕಟ್ಟಿಕೊಂಡು ನಮ್ಮ ಪೊಲೀಸರನ್ನೇ ಅಪರಾಧಿ ಗಳನ್ನಾಗಿ ಮಾಡಲು ಹೊರಟಿದ್ದರು. ಇಂಥವರಿಂದ ಪಾಠ ಕಲಿತವರು ಉಗ್ರರಾಗಿ ಬಾಟ್ಲಾಹೌಸ್‌ನಲ್ಲಿ ಅಡಗದೆ ಅಬ್ದುಲ್ ಕಲಾಂರಾಗುತ್ತಾರೇನು? ಇಂಥ ಯೂನಿವರ್ಸಿಟಿಯನ್ನು ಶ್ರೀರಂಗನ ಪಾದತಲದಲ್ಲಿ ಸ್ಥಾಪಿಸಿ ಯಾಸಿನ್, ರಿಯಾಝ್, ಇಕ್ಬಾಲರನ್ನು ಸೃಷ್ಟಿಸುವ ಉದ್ದೇಶವನ್ನು ಬಹುಶಃ ರೆಹಮಾನ್ ಖಾನ್ ಸಾಹೇಬರು ಹೊಂದಿದ್ದರೇನೋ?
ಇಂಥ ಘಟನೆಗಳು ಜನರ ಸ್ಮತಿಪಟಲದಲ್ಲಿ ಹಸಿಯಾಗಿರುವಾಗಲೇ ಮಹಮ್ಮದ್ ಶಫೀ ಎಂಬ ಮತ್ತೊಬ್ಬ ಜಾಗತಿಕ ಭಯೋತ್ಪಾದಕ ಕರ್ನಾಟಕದಲ್ಲೇ ಹುಟ್ಟಿ ಬೆಳೆದು ರಾಕ್ಷಸ ಸ್ವರೂಪ ಪಡೆದಿದ್ದಾನೆ ಎಂಬ ಅಂಶ ಕರ್ನಾಟಕ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. ಎಂತಹ ವಿಪರ್ಯಾಸ ನೋಡಿ? ಒಂದು ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಎಂಬ ಜಗದ್ವಿಖ್ಯಾತ ಎಂಜಿನಿಯರ್‌ಗೆ ಜನ್ಮ ನೀಡಿದ್ದ ಕರ್ನಾಟಕದಲ್ಲಿ ಕಫೀಲ್ ಅಹ್ಮದ್‌ನಂಥ ಧರ್ಮಾಂಧ ಎಂಜಿನಿಯರ್‌ಗಳೂ, ಯಾಸಿನ್ ಭಟ್ಕಳ್‌ನಂಥ ದೇಶದ್ರೋಹಿಗಳೂ ಜನಿಸುತ್ತಿದ್ದಾರೆ ಹಾಗೂ ಮಹಮ್ಮದ್ ಶಫೀಯಂಥ ಜಾಗತಿಕ ಉಗ್ರರೂ ಜನಿಸಿ ಇಡೀ ರಾಜ್ಯವೇ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗುವ ದುಸ್ಥಿತಿ ಎದುರಾಗಿದೆ!

Comments are closed.