Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇನ್ನೂ ಟಿಪ್ಪು ಜಯಂತಿ ಬೇಕೆ?

ಇನ್ನೂ ಟಿಪ್ಪು ಜಯಂತಿ ಬೇಕೆ?

ಇನ್ನೂ ಟಿಪ್ಪು ಜಯಂತಿ ಬೇಕೆ?

ದುರ್ಗದ ಮದಕರಿ ನಾಯಕ
ನಮಗೆಲ್ಲರಿಗೂ ಆತ ಪರಿಚಯವಾಗಿದ್ದು ತರಾಸು ಅವರ ದುರ್ಗಾಸ್ತಮಾನದಿಂದ. ಆದರೆ ಅದಕ್ಕೂ ಮೊದಲು ವೀರ ಮದಕರಿಯ ಹೋರಾಟ ಕರ್ನಾಟಕದ ಇತಿಹಾಸದ ರೋಚಕ ಘಟ್ಟ. ನಾಡು ಕಂಡ  ಅತಿದೊಡ್ಡ ಕುಟಿಲತೆಗೆ, ಕ್ರೌರ್ಯಕ್ಕೆ ಮತ್ತು ಕೃತಘ್ನತೆಗೆ ದೊಡ್ಡ ಪುರಾವೆ.

ಮೈಸೂರು ಒಡೆಯರ ಸೇನೆಯಲ್ಲಿ ಒಬ್ಬ ಸಾಮಾನ್ಯ ಕುದುರೆ ಲಾಯ ತೊಳೆಯುವ ಆಳಾಗಿದ್ದ ಮನುಷ್ಯ ತನ್ನ ಧಣಿಗೇ ದ್ರೋಹ ಬಗೆದು ರಾಜ್ಯ ಲಪಟಾಯಿಸಿದ ಟಿಪ್ಪುವಿನ ಅಪ್ಪ ಹೈದರಾಲಿಯ ಇತಿಹಾಸದ ದೊಡ್ಡ ಕುರುಹಿಗೆ ಸಾಕ್ಷಿ ಈ ದುರ್ಗ. ಆತನ ಬಲವಂತದ ಮತಾಂತರಗಳಿಗೆ ಮೊದಲು ಮುನ್ನುಡಿಯಾಗಿದ್ದು ದುರ್ಗದ ಕೋಟೆ. ಈ ಯಕಶ್ಚಿತ್ ಕೂಲಿ ನಂತರ ಮೈಸೂರು ಮಾತ್ರವಲ್ಲದೆ ಇಡೀ ದಕ್ಷಿಣ ಭಾರತವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವವರೆಗೆ ಬೆಳೆದುಬಂದ ದಾರಿಯನ್ನು ನಾವು ನೆನಪಿಸಿಕೊಳ್ಳಲೇಬೇಕು. ಹೈದರಾಲಿಯ ನಯ-ನಾಜೂಕುತನ ಕ್ರಮೇಣ ಆತನನ್ನು ಸೈನ್ಯದ ಒಂದು ಸಣ್ಣ ತುಕಡಿಯ ನಾಯಕನನ್ನಾಗಿ ಮಾಡುತ್ತದೆ. ವಿಚಿತ್ರ ಎಂದರೆ ಈತ ಸೈನ್ಯದ ಮಹಾ ಪರಾಕ್ರಮಿ ಯೋಧರಾದ ಬೇಡ ಅಥವಾ ವಾಲ್ಮೀಕಿಗಳ ನಾಯಕನೂ ಆಗುತ್ತಾನೆ! ವಾಲ್ಮೀಕಿ ಸೈನ್ಯದ ಶೌರ್ಯ, ಬದ್ಧತೆ, ಸಂಸ್ಥಾನದ ಬಗೆಗಿನ ನಿಷ್ಠೆಗಳಿಗೆ ಒಬ್ಬ ನಾಜೂಕಯ್ಯ ಕ್ರೂರಿ ಅಧಿಪತಿಯಾಗುತ್ತಾನೆ! ಸೈನ್ಯದ ಮುಗ್ದತೆಯೇ ಈತನಿಗೆ ಬಂಡವಾಳವಾಗಿ ಕ್ರಮೇಣ ಹೈದರಾಲಿ ಇದೇ ಬೇಡರನ್ನು ಲೂಟಿ ಮಾಡಲೂ ತೊಡಗುತ್ತಾನೆ. ಹೇಗೆ ಕೊಡಗಿನಲ್ಲಿ ಕೊಡವರನ್ನು ಹೈದರ್ ಮತ್ತು ಟಿಪ್ಪು ಮತಾಂತರ, ಲೂಟಿ ಮಾಡುತ್ತಾನೋ ಹಾಗೆ ಹಳೆ ಮೈಸೂರಿನಲ್ಲಿ ಬೇಡ ಯಾನೆ ವಾಲ್ಮೀಕಿಗಳ ದೌರ್ಜನ್ಯಕ್ಕೆ ಹೈದರ್ ಇಳಿಯುತ್ತಾನೆ. ಬಿದನೂರೆಂಬ ಬೇಡರ ಭದ್ರ ಕೋಟೆಯನ್ನೂ ಆತ ಆಕ್ರಮಣ ಮಾಡುತ್ತಾನೆ. ಪ್ರಬಲ ಪಾಳೆಪಟ್ಟು ಆಗಿದ್ದ, ವಿಜಯನಗರದ ಸಾಮಂತರಾಗಿದ್ದ ಚಿತ್ರದುರ್ಗವನ್ನೂ ಆಕ್ರಮಣ ಮಾಡುತ್ತಾನೆ. ಬೇಡರಿಂದಲೇ ನಾಯಕನಾದ ಮತಾಂಧ ಹೈದರಾಲಿ ಬೇಡರ ಸಂಸ್ಥಾನವನ್ನೇ ನಾಶಮಾಡುತ್ತಾನೆ. ಆದರೆ ಹೈದರಾಲಿಗೆ ಏನೇ ಆದರೂ ಚಿತ್ರದುರ್ಗವನ್ನು ಸುಲ್ಕಭಕ್ಕೆ ಆಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ. ದುರ್ಗಮ ಕೋಟೆ ಮತ್ತು ವಾಲ್ಮೀಕಿಗಳ ಪರಾಕ್ರಮದೆದುರು ಅವನ ಆಟ ನಡೆಯಲಿಲ್ಲ. ಇದೇ ವೇಳೆ ಮರಾಠರ ಸೇನೆ ಹೈದರಾಲಿಯ ಮೇಲೆ ದಂಡೆತ್ತಿ ಬರುತ್ತಿದೆ ಎಂಬ ಸುದ್ಧಿ ಗೊತ್ತಾಗಿ ಹೈದರನಿಗೆ ಗಾಬರಿಯಾಗುತ್ತದೆ. ಅವಸರವಸರವಾಗಿ ಮದಕರಿನಾಯಕನೊಡನೆ ಸಂಧಾನ ಕುದುರಿಸಿದ ಹೈದರಾಲಿ ಚಿಲ್ಲರೆ ಕಪ್ಪ ಪಡೆದು ಚಿತ್ರದುರ್ಗದಿಂದ ಹೊರಡುತ್ತಾನೆ. ಆದರೆ ವೀರ ಬೇಡರ ಪಡೆ ಹೈದರಾಲಿಯಿಂದ ಸಾಕಷ್ಟು ಅನುಭವಿಸಿತ್ತಲ್ಲಾ . ಬೇಡರ ಮನೆಮನೆಯೂ ಆತನ ವಿರುದ್ಧ ಹೋರಾಡಲು ಎದ್ದುಬಿಟ್ಟಿತ್ತು. ವೀರ ಬೇಡರು ಮರಾಠರ ಬೆಂಬಲಕ್ಕೆ ನಿಂತಿತ್ತು. ಇದರಿಂದ ಹೈದರ್ ಸಿಟ್ಟಿಗೆದ್ದ. ಇನ್ನು ಏನೇ ಮಾಡಿದರೂ ಚಿತ್ರದುರ್ಗದ ಬೇಡರನ್ನು ನೇರ ಯುದ್ಧದಲ್ಲಿ ಸೋಲಿಸಲಾಗದು ಎಂದರಿತ ಹೈದರ್ ತನ್ನ ಎಂದಿನ ಇಸ್ಲಾಂ ತಂತ್ರಕ್ಕಿಳಿದ. ಹಿಂದೂಗಳ ಭೋಳೆ ಸ್ವಭಾವದ ಲಾಭ ಎತ್ತಿದ. ಚಿತ್ರದುರ್ಗದ ಬೇಡರ ಸೈನ್ಯ ಎಷ್ಟೇ ಧರ್ಮಭೀರುಗಳಾಗಿದ್ದರೂ ಅವರ ಸೈನ್ಯದಲ್ಲಿ ಮೂರು ಸಾವಿರದಷ್ಟು ಮುಸಲ್ಮಾನ ಸೈನಿಕರಿದ್ದರು! ಹೈದರ್ “ತಾಳಿಕೋಟೆ ಮಾದರಿ” ಅನುಸರಿಸಿದ. ಅದುವರೆಗೆ ಸಂಸ್ಥಾನಕ್ಕೆ ನಿಷ್ಠರಾಗಿದ್ದ ಮುಸಲ್ಮಾನ ಸೈನಿಕರು ಸಂಸ್ಥಾನಕ್ಕೆ ದ್ರೋಹ ಬಗೆದರು. ಮೂರು ಸಾವಿರ ಯೋಧರು ಕೋಟೆಯೊಳಗಿದ್ದುಕೊಂಡೇ ತಮ್ಮ ರಾಜನ ವಿರುದ್ಧ ದ್ರೋಹವೆಸಗಿದರು. ವೀರ ಮದ
ಕರಿ ಯುದ್ಧದಲ್ಲಿ ವೀರಮರಣವನ್ನಪ್ಪಿದ.

ಅಷ್ಟಾದರೂ ಹೈದರಾಲಿಯ ಸಿಟ್ಟು ಶಮನಗೊಳ್ಳಲಿಲ್ಲ. ಬೇಡರನ್ನು ಕರುಣೆಯೇ ಇಲ್ಲದೆ ಸಾಯಿಸಿದ. ಪಟ್ಟಣವನ್ನು ಕೊಳ್ಳೆಹೊಡೆದ. ಲೂಟಿ ಮಾಡತೊಡಗಿದ. ಸುಮಾರು 20 ಸಾವಿರ ಮಂದಿ ಬೇಡರನ್ನು ಶ್ರೀರಂಗಪಟ್ಟಣದ ಗಂಜಾಂಗೆ ಕರೊದೊಯ್ದು ಮತಾಂತರ ಮಾಡಿದ. ಇದಕ್ಕೂ ಮೊದಲು ಮಲಾಬಾರ್ ಸೀಮೆಯಲ್ಲಿ ಹೈದರ್ ನಾಯರ್‍ಗಳನ್ನು ಇದೇ ರೀತಿ ಕೊಳ್ಳೆ ಹೊಡೆದು ಮತಾಂತರ ಮಾಡಿದ್ದ. ಆಗಿನ್ನೂ ಟಿಪ್ಪು  ನವಾಬನಾಗಿರಲಿಲ್ಲ. ಆದರೆ ತಂದೆಯೊಡನೆ ಈ ಎಲ್ಲಾ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದ. ಮುಂದೆ ಇದೇ ಮಾದರಿಯನ್ನು ಕೊಡಗಿನಲ್ಲಿ ಅನುಸರಿಸಿದ.

ಕಾಲ ಉರುಳಿತು. ದುರ್ಗ ಹಂಪಿಯಂತಾಯಿತು. ಬೇಡರು ಕ್ರಮೇಣ ತಮ್ಮ ನೋವನ್ನು ಮರೆಯತೊಡಗಿತದರು. ಆದರೆ ಕಳೆದ ವರ್ಷದಿಂದ ವಾಲ್ಮೀಕಿ ಜನಾಂಗದ ನೋವು ಮರುಕಳಿಸಿದೆ. ಏಕೆಂದರೆ ಯಾವ ಹೈದರ್ ತಮ್ಮ ಜನರನ್ನು ಬಲವಂತದಿಂದ ಮತಾಂತರ ಮಾಡಿದನೋ, ಚಿತ್ರ ಹಿಂಸೆ ನೀಡಿ ಕೊಂದನೋ, ಯಾವ ಹೈದರ್ ಸೇನೆಯನ್ನು ಏಕಾಂಗಿಯಾಗಿ ಓಬವ್ವನೆಂಬ ವೀರರಮಣಿ ಸದೆಬಡಿದಿದ್ದಳೋ ಅವರ ಸ್ವಾಭಿಮಾನ ಈಗ ಗರಿಗೆದರಿ  ನಿಂತಿದೆ.
ಏಕೆಂದರೆ ಅಂಥ ಹೈದರ್ ಮಗ ಟಿಪ್ಪುಸುಲ್ತಾನನ ಜನ್ಮದಿನವನ್ನು ಸರ್ಕಾರ ತಾನೇ ಮುಂದೆ ನಿಂತು ಆಚರಿಸುತ್ತಿದೆ. ದುರ್ಗದ ವಾಲ್ಮೀಕಿಗಳಿಗೆ, ಛಲವಾದಿ ಓಬವ್ವನ ಸಂತತಿಗಳ ಮನಸ್ಸು ಹೇಗಾಗಬೇಕು? ಸುಮಾರು 80 ಸಾವಿರ ಜನರನ್ನು ಕಳೆದುಕೊಂಡ ಕೊಡವರು, ವಾಲ್ಮೀಕಿಗಳು ಮತ್ತು ಛಲವಾದಿಗಳು ನೆಮ್ಮದಿ ಪಡಲು ಹೇಗೆ ತಾನೇ ಸಾಧ್ಯ? ಇವರ ನೋವಿಗೆ ಯಾವ ಸಮಾಧಾನವನ್ನು ಹೇಳೋಣ?

ಮೊದಲೆಲ್ಲಾ ಟಿಪ್ಪು ಕ್ರೌರ್ಯಕ್ಕೆ ಕೊಡಗು ಮತ್ತು ಕೊಡವರು ಎದ್ದು ನಿಲ್ಲುತ್ತಿದ್ದರು. ಆದರೆ ಈಗ ಚಿತ್ರದುರ್ಗ ಜಾಗೃತವಾಗುತ್ತಿದೆ. ಆತನ ಕ್ರೂರ ಇತಿಹಾಸಕ್ಕೆ ಕೊಡಗಿನಷ್ಟೇ ದುರ್ಗವೂ ಸಾಕ್ಷಿಯಾಗಿದೆ. ಕೊಡವರ ಇತಿಹಾಸ ಟಿಪ್ಪು ಉಲ್ಲೇಖವಿಲ್ಲದೆ ಹೇಗೆ ಕೊನೆಯಾಗುವುದಿಲ್ಲವೋ ಹಾಗೆಯೇ ದುರ್ಗದ ಇತಿಹಾಸವೂ ಕೊನೆಯಾಗುವುದಿಲ್ಲ. ನಾನು ಸಂಸದನಾದ ಮೇಲೆ ಕೊಡಗಿನ ಎಲ್ಲಾ ಊರುಗಳಿಗೂ ಭೇಟಿ ಕೊಟ್ಟಿದ್ದೇನೆ. ಮೊನ್ನೆ ತಾನೇ ದುರ್ಗಕ್ಕೂ ಭೇಟಿಕೊಟ್ಟು ಅವರ ನೋವನ್ನು ಕಣ್ಣಾರೆ ಕಂಡಿದ್ದೇನೆ. ಕೊಡಗಿನ ಇತಿಹಾಸವನ್ನು ತಡಕಾಡಿದರೆ ಈಗಲೂ ಟಿಪ್ಪು ಕಾಲದಲ್ಲಿ ಮತಾಂತರವಾದ ಒಂದು ಕಾಲದ ಕೊಡವರು ಕಾಣಸಿಗುತ್ತಾರೆ. ಅವರು ಇಂದಿಗೂ ಕೊಡವ ಮಾಪಿಳ್ಳೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ತೀರಾ ಇತ್ತೀಚಿನ ವರ್ಷಗಳವರೆಗೂ ಕೊಡವ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದ ಕೊಡವ ಮಾಪಿಳ್ಳೆಗಳು, ಕೊಡವರಂಥದ್ದೇ ಐನ್‍ಮನೆಗಳು, ಕೊಡವ ಆಯುಧಗಳು, ಕಂಚಿನ ದುಡಿಗಳು, ಕೊಡವ ಆಭರಣಗಳನ್ನು ಹೊಂದಿರುವ ಇವರಿಗೆ ಇವತ್ತಿಗೂ ಕೊಡವ ಕುಟುಂಬಗಳಿಗೆ ಇರುವಂತೆ ಮನೆಹೆಸರುಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ ಆಲೀರ, ಚೀರಂಡ, ಚಿಮ್ಮಚೀರ (ಈ ಹೆಸರಿನ ಕೊಡವ ಕುಟುಂಬಗಳೂ ಇವೆ), ದುದ್ದಿಯಂಡ, ಕದ್ದಡಿಯಂಡ, ಕೊಳುಮಂಡ, ದೇವಣಗೇರಿ ಗ್ರಾಮದಲ್ಲಿ ಪುಲಿಯಂಡ, ವೀರಾಜಪೇಟೆ ಸುತ್ತಮುತ್ತ ಕೂವಲೇರ, ಈತಲ್ತಂಡ, ಮೀತಲ್ತಂಡ, ಕುಪ್ರೋ ಕಪ್ಪಂಜೀರ, ಮಡಿಕೇರಿ ತಾಲೂಕಿನಲ್ಲಿ ಕಾಳೇರ, ಚೆಕ್ಕೇರ, ಚೆರ್ವುಕಾರಂಡ, ಮಣಿಯಂಡ, ಬಲಸೋಜಿಕಾರಂಡ, ಮಂಡೇಯಂಡ ಹೆಸರಿನ ಮನೆಗಳಿವೆ. ಇನ್ನೂ ಒಂದು ವಿಚಿತ್ರವೆಂದರೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿರುವ ಮಾಪಿಳ್ಳೆಗಳ ಮನೆತನದ ಹೆಸರು ಹರಿಶ್ಚಂದ್ರ!   ನಾನು ಈ ಎಲ್ಲಾ ಊರುಗಳಿಗೆ ಹೋಗಿದ್ದೇನೆ. ದುರದೃಷ್ಟವೆಂದರೆ ಕಳೆದ ವರ್ಷ ಟಿಪ್ಪು ಜಯಂತಿಯನ್ನು ಕುಟ್ಟಪ್ಪನವರನ್ನು ಕೊಂದಾಗ ಈ ಎಲ್ಲಾ  ಮನೆತನಗಳು ಮೌನ ವಹಿಸಿದ್ದವು. ಮತ್ತು ಮತಾಂಧ ಸಂಘಟನೆಗಳಿಗೆ ಬೆಂಬಲ ಸೂಚಿಸಿದ್ದವು! ಟಿಪ್ಪುವಿನಿಂದ ಮತಾಂತರವಾದವರ ಪೀಳಿಗೆಗಳನ್ನು ಅಂದು ಕೊಡವರು ಸಮಾಜದಿಂದ ಹೊರಗಿಟ್ಟರು. ಅದರ ಫಲವನ್ನು ಇಂದು ಸಮಾಜ ಅನುಭವಿಸುತ್ತಿದೆ. ಅಂಥ ಕಳ್ಳಬೆಕ್ಕು ಯಾವ ಕೋನದಿಂದ ಹುಲಿ?

ಆತನಲ್ಲಿ ಹುಲಿಯ ಗುಣಗಳಿಗಿಂತ ನರಭಕ್ಷಕ ತೋಳದ ಲಕ್ಷಣಗಳೇ ಹೆಚ್ಚಾಗಿ ಕಾಣಿಸುತ್ತವೆ.

ಕ್ರಮೇಣ ಕೊಡವರಿಗೆ ಟಿಪ್ಪುವನ್ನು ಮಟ್ಟಹಾಕುವುದು ಅನಿವಾರ್ಯವಾಯಿತು. ಅಲ್ಲದೆ ಆತ ಊರ ಹೆಸರುಗಳನ್ನು ಬದಲಾಯಿಸಿದ್ದ. ಕೊಡಗಿನ ಸಮಾಜದಲ್ಲಿ ಬಹುದೊಡ್ಡ ಸ್ಥಿತ್ಯಂತರವೂ ಆಯಿತು. ಇವರೆಲ್ಲ ಒಗ್ಗೂಡಿ ಟಿಪ್ಪುವಿನ ಈ ದೌರ್ಜನ್ಯಗಳಿಂದ ಮುಕ್ತಿ ಕೊಡುವಂತೆ ಬ್ರಿಟಿಷರನ್ನು ಕೇಳಿಕೊಂಡರು. ಮಂಗಳೂರು ಒಪ್ಪಂದವನ್ನು ಟಿಪ್ಪು ಉಲ್ಲಂಘಿಸಿರುವುದನ್ನು ನೆನಪಿಸಿದರು. ಈ ಅವಧಿಯಲ್ಲಿ `ಇಸ್ಲಾಂ’ ಹೆಸರಿನಲ್ಲಿ ಹಲವಾರು ಬಾರಿ ನಿಜಾಮನಲ್ಲಿಗೆ, ಉತ್ತರ ಭಾರತದ ಹಲವು ಮುಸಲ್ಮಾನ ದೊರೆಗಳಿಗೆ ಮತ್ತು ಮೊಘಲ್ ದೊರೆಗೂ ರಾಯಭಾರಿಗಳನ್ನು ಕಳಿಸಿ ಇಂಗ್ಲಿಷರನ್ನು ಓಡಿಸಲು ತನಗೆ ಸಹಕಾರ ಬೇಕೆಂದು ಟಿಪ್ಪು ಕೇಳಿದ್ದ. ಅದೇ ವೇಳೆ ಇರಾನ್ (ಪರ್ಷಿಯಾ), ಅಪ್ಘಾನಿಸ್ತಾನ, ಟರ್ಕಿ ಮೊದಲಾದ ದೇಶಗಳ ಮುಸ್ಲಿಂ ದೊರೆಗಳನ್ನು ಭಾರತಕ್ಕೆ ದಾಳಿ ಮಾಡಲು ಆಹ್ವಾನಿಸಿದ್ದ. ಆ ಮೂಲಕ ಇಲ್ಲಿನ ಕಾಫಿರರನ್ನು (ಹಿಂದುಗಳು) ಸೋಲಿಸಿ, ಇಂಗ್ಲಿಷರನ್ನು ದೇಶ ಬಿಟ್ಟೋಡಿಸುವ ತಂತ್ರ ರೂಪಿಸಿದ್ದ. ಫ್ರೆಂಚರಲ್ಲಿಯೂ ಸಂಧಾನ ಕುದುರಿಸುವ ಯತ್ನ ಮಾಡುತ್ತಿದ್ದ. ಇದೆಲ್ಲವನ್ನೂ ಇಂಗ್ಲಿಷರು ಗಮನಿಸುತ್ತಿದ್ದರು. ಇಲ್ಲಿ ಟಿಪ್ಪು ಹಾವಳಿ ಮಿತಿ ಮೀರಿತು. ಪೂರ್ತಿ ದಕ್ಷಿಣ ಭಾರತದ ರಾಜರು, ನವಾಬರು, ಆಳರಸರ ಪೈಕಿ ಟಿಪ್ಪುಗೆ ಒಬ್ಬನೇ ಒಬ್ಬ ಸ್ನೇಹಿತ, ಮಿತ್ರ ಇರಲಿಲ್ಲ. ಎಲ್ಲರೂ ವಿರುದ್ಧವಿದ್ದರು. ಎಲ್ಲಕ್ಕಿಂತಲೂ ವಿಪರ್ಯಾಸವೆಂದರೆ ಅವನ ರಾಜ್ಯದೊಳಗಿನ ಸಾಮಂತ ಅರಸರು, ಪಾಳೇಗಾರರು ಮತ್ತು ಅವನ ಸೈನ್ಯದೊಳಗಿನ, ಸರ್ಕಾರದಲ್ಲಿನ ಹಲವು ಅಧಿಕಾರಿಗಳೇ ಟಿಪ್ಪುವಿನ ನಿರಂಕುಶ, ಮತೀಯವಾದಿ ಆಡಳಿತಕ್ಕೆ ವಿರುದ್ಧವಿದ್ದರು. ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡರೆ ಟಿಪ್ಪು ಬ್ರಿಟಿಷರ ವಿರುದ್ಧ, ಈ ದೇಶವನ್ನು ಅವರ ಕಪಿಮುಷ್ಟಿಯಿಂದ ಬಿಡುಗಡೆ ಮಾಡಲು ಹೋರಾಟ ನಡೆಸಿದನೆಂದು ಅನಿಸುತ್ತದೆಯೇ? ಇಡೀ ದಕ್ಷಿಣ ಭಾರತದ ಇದ್ದಬದ್ದ ರಾಜರುಗಳೆಲ್ಲ ಪರಕೀಯ ಬ್ರಿಟಿಷರನ್ನು ಓಲೈಸಲು, ಅವರ ಆಶ್ರಯ ಪಡೆಯಲು ನೇರವಾಗಿ ಟಿಪ್ಪುವಿನ ದೌರ್ಜನ್ಯಗಳೇ ಕಾರಣವೆಂದು ಅನಿಸುವುದಿಲ್ಲವೇ? ಈಗ ಟಿಪ್ಪುವನ್ನು ಹಾಡಿಹೊಗಳುತ್ತಾ ಹುಯಿಲೆಬ್ಬಿಸುವವರು, ಟಿಪ್ಪುವನ್ನು ಮಹಾನ್ ದೇಶಪ್ರೇಮಿ ಎಂದು ಬಣ್ಣಿಸುವುದಾದರೆ ಅಂದು ಬ್ರಿಟಿಷರ ಜೊತೆಗೆ ಸೇರಿಕೊಂಡ ಈ ಎಲ್ಲ ರಾಜರು, ನವಾಬರು, ಪಾಳೇಗಾರರು ದೇಶದ್ರೋಹಿಗಳೇ? ಸ್ವಭಾವತಃ ವೀರರಾಗಿರುವ ಕೊಡವರು, ನಾಯರ್ಗಳೆಲ್ಲ ಬೇರೆ ವಿಧಿ ಇಲ್ಲದೆ ಬ್ರಿಟೀಷರ ಜೊತೆಗೂಡಿ ಟಿಪ್ಪು ಮಟ್ಟಹಾಕುವ ಕೆಲಸಕ್ಕಿಳಿದರು. ವಿಪರ್ಯಾಸವೆಂದರೆ ಇಂದಿಗೂ ಅದೇ ಕೊಡವರು ಟಿಪ್ಪು ಸಂತತಿಯವರ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇಂದಿಗೂ ಕೊಡವನೊಬ್ಬ ಅದೇ ಟಿಪ್ಪು ಸಂತತಿಯ ಜನರಿಂದ ಸಾಯುತ್ತಿದ್ದಾರೆ. ಅಂಥವನ ಜನ್ಮ ದಿನಾಚರಣೆಯನ್ನು ಆಚರಿಸಬೇಕಾದ ಅವಶ್ಯಕತೆ ಏನಿದೆ?

ಇಂಥ ವ್ಯಕ್ತಿಯನ್ನು ಯಾವ ಮಾನದಂಡ ಇಟ್ಟುಕೊಂಡು ಮೈಸೂರು ಹುಲಿ, ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತೀರಿ? ಯಾವ ಕಾರಣ ಇಟ್ಟುಕೊಂಡು ಆತನ ಜನ್ಮದಿನಾಚರಣೆ ಆಚರಣೆ ಮಾಡುತ್ತೀರಿ? ಟಿಪ್ಪು ಜನ್ಮ ದಿನಾಚರಣೆ ಮಾಡುವುದೆಂದರೆ ಧರ್ಮಕ್ಕಾಗಿ ಹೋರಾಡಿ ಸತ್ತ ಅಪ್ಪಚ್ಚಿ ಮಂದಣ್ಣ, ಕುಲ್ಲೇಟಿ ಪೊನ್ನಣ್ಣ, ಕನ್ನಂಡ ದೊಡ್ಡಯ್ಯ, ವೀರ ಮದಕರಿ, ಛಲವಾದಿ ಓಬವ್ವ, ವೀರ ಕೊಡವರನ್ನು ಅವಮಾನಿಸಿದಂತೆ ಅಲ್ಲವೇ? ಆತನ ಜನ್ಮ ದಿನ ಆಚರಿಸುವ ಕಾಂಗ್ರೇಸ್ ಸರ್ಕಾರ ಯಾವ ಮುಖ ಇಟ್ಟುಕೊಂಡು ಕೊಡವರ, ಛಲವಾದಿಗಳ, ವಾಲ್ಮಿಕಿಗಳ ಮುಂದೆ ವೋಟು ಕೇಳಲು ಹೋಗುತ್ತದೆ?

ಇಷ್ಟಕ್ಕೂ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಏನು?

ಇಷ್ಟಾಗಿಯೂ ಕಳೆದ ವರ್ಷ ಮೂರು ಹೆಣ ಬಿದ್ದರೂ ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ನಾಡಿದ್ದು ನವೆಂಬರ್ 10ರಂದು ಟಿಪ್ಪು ಜಯಂತಿಯನ್ನು ಮಾಡಲು ಹೊರಟಿದ್ದಾರೆ! ನಾವು ಇತ್ತೀಚೆಗೆ ವಾಲ್ಮೀಕಿ ಜಯಂತಿ ಆಚರಿಸಿದೆವು, ವರ್ಷಕ್ಕೊಮ್ಮೆ ಗಾಂಧಿ ಜಯಂತಿ, ವಿವೇಕ ಜಯಂತಿ, ಬುದ್ಧ ಜಯಂತಿ, ಬಸವ ಜಯಂತಿ, ಕನಕ ಜಯಂತಿ, ಕೆಂಪೇಗೌಡ ಜಯಂತಿ, ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತೇವೆ. ಇಂಥ ಒಂದೊಂದು ಜಯಂತಿಗಳ ಹಿಂದೆಯೂ ಒಂದೊಂದು ಮಹಾನ್ ಚೇತನಗಳಿವೆ, ಒಂದು ಸಾತ್ವಿಕ ಕಾರಣವಿದೆ, ಒಂದು ಮೌಲ್ಯ, ಭಕುತಿ, ಶ್ರದ್ಧೆಯಿದೆ, ಅವರಿಂದ ಇಡೀ ಸಮಾಜ ಉಪಕೃತವಾಗಿರುವ ಹಿನ್ನೆಲೆ ಇದೆ. ಆದರೆ ಮೈಸೂರಿನ ಮಗನಾಗಿ, ಕುಡಿಯುವ ನೀರು, ತಿನ್ನುವ ಅನ್ನ, ಸೇವಿಸುವ ಗಾಳಿಯಲ್ಲೂ ಯದುವಂಶದ ಋಣವನ್ನಿಟ್ಟುಕೊಂಡಿದ್ದರೂ ನಾಲ್ವಡಿ ಕೃಷ್ಣರಾಜರ ಜಯಂತಿಯನ್ನು ನಾಡಿನಾದ್ಯಂತ ಮಾಡಬೇಕು ಎಂದೆನಿಸದೇ ಯದುವಂಶಕ್ಕೆ ದ್ರೋಹ ಬಗೆದು ಆಡಳಿತ ಕಿತ್ತುಕೊಂಡ ಹೈದರನ ಮಗನ ಜಯಂತಿ ಮಾಡಬೇಕೆನಿಸಿತಲ್ಲಾ ಸಿದ್ದರಾಮಯ್ಯನವರೇ, ನಿಮ್ಮ ಭಾವ, ಭಕುತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ!

ಇಷ್ಟಕ್ಕೂ ನಿಮ್ಮ ಹೀರೋ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಯಾವುವು? ಕರ್ನಾಟಕದ ಸುಪುತ್ರ ಎಂದು ಹೊಗಳಲು ಆತ ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಯಾವುದು? ಪರ್ಷಿಯನ್ ಭಾಷೆಯ ಹೇರಿಕೆಯೇ? ಅದನ್ನು ಡಾ. ಭೈರಪ್ಪನವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು, ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ ಎನ್ನುತ್ತಾರೆ ಭೈರಪ್ಪ. ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಿಸಿ ಭಾಷೆಯನ್ನು ತಂದವರಾರು? ಕಂದಾಯ ಇಲಾಖೆಯಲ್ಲಿ ಹಾಸುಹೊಕ್ಕಾಗಿರುವ ಖಾತೆ, ಖಿರ್ದಿ, ಪಹಣಿ, ಖಾನೀಸುಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮಲ್ದಾರ, ಶಿರಸ್ತೇದಾರ ಈ ಪದಗಳು ಎಲ್ಲಿಂದ ಬಂದವು?

ಕೆಲವೇ ದಿನಗಳಲ್ಲಿ ನಾವು ಕರ್ನಾಟಕ ರಾಜ್ಯೋತ್ಸವನ್ನು ಆಚರಿಸುತ್ತಿದ್ದೇವೆ. ರಾಜ್ಯೋತ್ಸವದ ಹತ್ತು ದಿನಗಳಲ್ಲಿ ಕನ್ನಡವನ್ನು ಕೊಂದವನ ಜಯಂತಿ. ಇದಕ್ಕೇನನ್ನಬೇಕು? ಕನ್ನಡದ ಜನ ಅತ ಇಟ್ಟ ಯಾಮ್‍ಸುಬ(ಕರಾವಳಿ ಭಾಗಕ್ಕೆ), ತರನ್‍ಸುಬಾ (ಮಲೆನಾಡಿಗೆ), ಘಬ್ರಾ ಸುಬಾ(ಬಯಲು ಸೀಮೆಗೆ) ಅನ್ನು ಶಾಸ್ವತ ಮಾಡುವುದೇ? ಹೀಗೆ ಹೆಸರಿಟ್ಟವನ ಸರ್ಕಾರಿ ಜಯಂತಿ ಮಾಡುವ ಮೊದಲು ಈ ಪ್ರದೇಶಗಳ ಹೆಸರನ್ನು ಅಧಿಕ್ರತ ಮಾಡಬೇಕಲ್ಲವೇ? ವೋಟಿಗಾಗಿ ವಾಲ್ಮೀಕಿಗಳನ್ನು, ಛಲವಾದಿಗಳನ್ನು, ಕೊಡವರನ್ನು ಹೊಗಳುವವರು ನೇರಾ ನೇರವಾಗಿ ಟಿಪ್ಪು ದ್ವೇಷಿಗಳು ಎಂದು ಬಹಿರಂಗ ಹೇಳಿಕೆ ಕೊಡಬೇಕಲ್ಲವೇ? ಅದನ್ನು ಹೇಳಲು ಕಾಂಗ್ರೆಸಿಗೆ ಹೆದರಿಕೆಯೇ? ತಾಕತ್ತಿದ್ದರೆ ವಾಲ್ಮಿಕಿಗಳನ್ನು, ಕೊಡವರನ್ನು, ಛಲವಾದಿಗಳನ್ನು ಟಿಪ್ಪು ವಿರೋಧಿಗಳೆಂದು ಕಾಂಗ್ರೆಸ್ ಹೇಳಲಿ. ನಾನಿಲ್ಲಿ ಜಾತಿ ವಿಷಯವನ್ನು ಮಾತ್ರ ಹೇಳುತ್ತಿಲ್ಲ. ಸರ್ಕಾರಿ ದಾಖಲೆ, ಕಡತಗಳಲ್ಲಿ, ಆಡಳಿತದ ವ್ಯವಹಾರಗಳಲ್ಲಿ ಕನ್ನಡ ವಿರೋಧಿ ಕೆಲಸವನ್ನೂ ಟಿಪ್ಪು ಮಾಡಿದ್ದ. ಇದೇ ರೀತಿ ಊರುಗಳ ಹೆಸರನ್ನೂ ಬದಲಿಸಿದ. ತಾನು ಹುಟ್ಟಿದ ಊರು ದೇವನಹಳ್ಳಿಯನ್ನು `ಯುಸಫಾಬಾದ್’ ಎಂದು ಬದಲಿಸಿದ. ಚಿತ್ರದುರ್ಗವನ್ನು `ಫಾರೂಕ್‍ಯಾಬ್ ಹಿಸಾರ್’ (ಶುಭಕರವಾಗಿ ವಶಪಡಿಸಿ ಕೊಳ್ಳಲಾದ ಕೋಟೆ) ಅಂತ ಬದಲಿಸಿದ. `ಗುತ್ತಿ’ಗೆ ಟಿಪ್ಪು `ಫಝ್  ಹಿಸಾರ್’, ಹಾಗೆಯೇ ಸದಾಶಿವಗಢಕ್ಕೆ `ಮಜೀದಾಬಾದ್’, ಮಂಗಳೂರಿಗೆ `ಜಮಾಲಾಬಾದ್’ ಮುಂತಾದ ಹೆಸರುಗಳನ್ನಿಟ್ಟ. ಮೈಸೂರು ನಝರಾಬಾದ್ ಆಯಿತು. ಮಡಿಕೇರಿಗೆ ಟಿಪ್ಪು ಇಟ್ಟ ಹೆಸರು ಜಾಫರಾಬಾದ್, ಸಕಲೇಶಪುರ ಮಂಜ್ರಾಬಾದ್ ಆಯಿತು. ಟಿಪ್ಪು ಜನ್ಮದಿನ ಕನ್ನಡದ ಕೊಲೆ ಮಾಡಿದ ದಿನ ಅಲ್ಲವೇ?ಇವೆಲ್ಲವನ್ನೂ ಡಾ. ಚಿದಾನಂದ ಮೂರ್ತಿಗಳೋ, ಭೈರಪ್ಪನವರೋ ಹೇಳಿದ್ದಲ್ಲ. ಈ ಎಲ್ಲಾ ಊರಿನ ಪ್ರತೀ ಜನರೂ ಅದನ್ನು ಇಂದಿಗೂ ಹೇಳುತ್ತಾರೆ. ಟಿಪ್ಪುವಿನ “ಕನ್ನಡ ಪ್ರೇಮ”ದ ಇತಿಹಾಸ ಇನ್ನೂ ಇದೆ. ದೂರವನ್ನು ಆಳತೆ ಮಾಡುವ ವಿಧಾನದಲ್ಲಿಯೂ ಟಿಪ್ಪು ಧರ್ಮವನ್ನು ತಂದ. ಆ ಕಾಲದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ `ಕೋಸ್’ ಎಂಬ ಅಳತೆ ಸಾಮಾನ್ಯ ಇಂಗ್ಲಿಷ್ ಕ್ರಮದಲ್ಲಿ ಎರಡು ಮೈಲಿಯಷ್ಟು ದೂರವಾಗುತ್ತಿತ್ತು. ಟಿಪ್ಪು ಈ ಕೋಸ್‍ಗಳ ಅಳತೆಯನ್ನು ಬದಲಿಸಿದ. ಕೈಯ ಒಂದು ಹೆಬ್ಬೆರಳು ಎಷ್ಟು ಅಗಲವಾಗಿರುತ್ತದೋ ಅದಕ್ಕೆ ಸರಿಯಾಗಿ ಹೊಸ ಅಳತೆ ನಿಗದಿಯಾಯಿತು. 24 ಹೆಬ್ಬೆರಳುಗಳ ಅಗಲ ಎಷ್ಟಿರುತ್ತದೋ ಅದರ ಎರಡರಷ್ಟು ಉದ್ದ ಒಂದು ಘಟಕವಾಯಿತು. ಇಸ್ಲಾಂ ಧಾರ್ಮಿಕ `ಕಲ್ಮಾಹ್’ದಲ್ಲಿ ಇಪ್ಪತ್ನಾಲ್ಕು ಅಕ್ಷರಗಳಿವೆ ಎಂಬುದೇ ಇದಕ್ಕೆ ಆಧಾರ. ಇನ್ನು ತನ್ನದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದ ಟಿಪ್ಪು ಅವುಗಳಿಗೆ ಮುಸ್ಲಿಂ ಸಂತರ ಹೆಸರನ್ನಿಟ್ಟ. ತಾಮ್ರದ ನಾಣ್ಯಗಳಿಗೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ನಕ್ಷತ್ರಗಳ ಹೆಸರಿಟ್ಟ. ಆಗಿನ ಕಾಲದಲ್ಲಿ ಚಲಾವಣೆಯಲ್ಲಿದ್ದ `ಪಗೋಡ’ ಎಂಬ ಹೆಸರಿನ ನಾಣ್ಯಗಳಿಗೆ `ಅಹ್ಮದಿ’ ಅಂತ ಹೆಸರಿಟ್ಟ. ಇದು ಪ್ರವಾದಿಯವರ ಅನೇಕ ಹೆಸರುಗಳೊಲ್ಲೊಂದು. ಎರಡು ಪಗೋಡಾ ಬೆಲೆ ಇರುವ ನಾಣ್ಯಕ್ಕೆ `ಸಾದಿಕ್’ ಎಂಬ ಹೆಸರಿಟ್ಟ. ಇದು ಮೊದಲ ಖಲೀಫರ ಹೆಸರು. ಒಂದು ಪೈಸೆ ನಾಣ್ಯಕ್ಕೆ `ಝೆಹ್ರಾ’, ಎರಡು ಪೈಸೆ ನಾಣ್ಯಕ್ಕೆ `ಔತ್ಮಾನೀ’? ಇತ್ಯಾದಿ ಹೊಸ ಹೆಸರುಗಳನ್ನಿಡುತ್ತಾ ಹೋದ. ಕೆಲವೊಮ್ಮೆ ತಾನೇ ಇಟ್ಟ ಹೆಸರುಗಳನ್ನು ಮತ್ತೆ ಬದಲಾಯಿಸಿ ಹೊಸ ಹೆಸರಿಟ್ಟ. ಫರೂಕಿ, `ಜಾಫಾರ್ ‘ ಇತ್ಯಾದಿ ಹೆಸರಿನ ನಾಣ್ಯಗಳೂ ಇದ್ದವು. `ಹೈದರಿ’ ಎಂಬ ಹೆಸರಿನ ರೂಪಾಯಿ ಇತ್ತು. `ಇಮಾಮಿ’ ಎಂಬ ನಾಣ್ಯವೂ ಇತ್ತು. ಇಂಥ ಸಾವಿರಾರು ಉದಾಹರಣೆ ಕೊಡಬಹುದು. ಇಂಥ ವ್ಯಕ್ತಿಯನ್ನು ಕನ್ನಡದ ಕುವರ ಎನ್ನುತ್ತಾರಲ್ಲಾ ಇವರ ದುರ್ಬುದ್ಧಿಗೆ ಏನನ್ನಬೇಕು ಹೇಳಿ? ಆತ ಜನ್ಮ ದಿನ ಆಚರ್ಣೆಯನ್ನು ಕನ್ನಡ ನಾಡು ಆಚರಿಸುತ್ತದಲ್ಲಾ ಇದಕ್ಕೇನನ್ನಬೇಕು?

ಕುಟ್ಟಪ್ಪನವರ ಅಂತಿಮ ಯಾತ್ರೆಗೆ ನಾನೂ ಹೋಗಿದ್ದೆ. ಆ ಕ್ಷಣ ಇನ್ನೂ ಮನಸ್ಸಲ್ಲಿದೆ. ಅಂಥ ಮತ್ತೊಂದು ಕ್ಷಣಕ್ಕೆ ಸರ್ಕಾರ ಯೋಜಿಸಿದೆಯೇ? ಈಗ ಕೊಡಗು ಮಾತ್ರವಲ್ಲ ದುರ್ಗದ ಮಾತೆಯರೂ ಓಬವ್ವಳಂತೆ ಟಿಪ್ಪು ಜಯಂತಿಯ ವಿರುದ್ಧ ನಿಂತಿದ್ದಾರೆ. ಸರ್ಕಾರ ಇನ್ನಾದರೂ ಅರಿತುಕೊಂಡರೆ ಒಳ್ಳೆಯದು.

 tippu

Comments are closed.