Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

ಮಡಿಕೇರಿಯ ಶ್ರೀಮಂತ ದಂಪತಿಯೊಬ್ಬರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಪ್ರಿನ್ಸಿಪಾಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಬ್ರಿಟಿಷರು ಮತ್ತು ಆಂಗ್ಲೋ ಇಂಡಿಯನ್ನರಿಗೆಂದೇ ಕಟ್ಟಲಾಗಿದ್ದ ಶಾಲೆಗೆ ಮಕ್ಕಳನ್ನು ಸೇರಿಸಲು ಬಂದಿದ್ದರು. ಎಂಥೆಂಥಾ ಶಿಫಾರಸ್ಸುಗಳಿದ್ದರೂ ಅದುವರೆಗೆ ಯಾವೊಬ್ಬ ಭಾರತೀಯನಿಗೂ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಹುಡುಗರಿಬ್ಬರು ಆಫೀಸಿನ ಹೊರಗೆ ಗೋಡೆಗೊರಗಿ ನಿಂತು ಬಿಳಿಯ ಹುಡುಗರನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ದೇಸೀ ಹುಡುಗರನ್ನು ಯಾವುದೋ ಅನ್ಯಗ್ರಹಜೀವಿಗಳಂತೆ ನೋಡುತ್ತಾ ಬಂದ ಬಿಳಿಹುಡುಗರ ಒಂದು ತಂಡಕ್ಕೆ ಈ ದೇಸೀ ಅಣ್ಣತಮ್ಮಂದಿರನ್ನು ರೇಗಿಸಬೇಕೆನಿಸಿತು. ಒಬ್ಬ ಹುಡುಗ ಏನು ನೀಗ್ರೋಗಳನ್ನೂ ಇಲ್ಲಿ ಸೇರಿಸಿಕೊಳ್ಳುತ್ತಾರೋ? ಎಂದ. ಅಷ್ಟೇ, ಅಣ್ಣತಮ್ಮಂದಿರಿಬ್ಬರು ಆ ಬಿಳಿ ಹುಡುಗರ ಮೇಲೆ ಬಿದ್ದರು. ನೆಲಕ್ಕೆ ಬೀಳಿಸಿ ಗುದ್ದತೊಡಗಿದರು. ಗಲಾಟೆಯ ಸದ್ದಿಗೆ ಪ್ರಿನ್ಸಿಪಾಲರು ಹೊರಗೆ ಬಂದರು. ಪೋಷಕರಿಗೆ ಈ ಹುಡುಗರು ಇಲ್ಲೂ ತುಂಟತನ ಶುರುಮಾಡಿದರೇ, ಇನ್ನು ಪ್ರವೇಶ ಖಂಡಿತಾ ಸಿಗುವುದಿಲ್ಲ ಎಂದುಕೊಂಡರು. ಆದರೆ ಪ್ರವೇಶಕ್ಕೆ ಮಡಿಕೇರಿಯ ಪ್ರತಿಷ್ಠಿತ ಬ್ರಿಟಿಷರ ಶಿಫಾರಸ್ಸುಇತ್ತು. ಹುಡುಗರು ದಾಖಲಾದರು. ಎಲ್ಲರೂ ಬಿಳಿಯರೇ. ಇಬ್ಬರು ಮಾತ್ರ ಭಾರತೀಯರು. ಆದರೂ ಹಳೆಯ ಗುದ್ದು ಈ ಹುಡುಗರಿಗೆ ಸ್ಟಾರ್‌ಗಿರಿಯನ್ನು ತಂದುಕೊಟ್ಟಿತ್ತು. ಬಿಷಪ್ ಕಾಟನ್ ಎಂದರೆ ಬ್ರಿಟಿಷ್ ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಾಲೆ. ಆದರೆ ಈ ಹುಡುಗರು ತಮ್ಮ ಎಂದಿನ ತುಂಟತನವನ್ನು ಇಲ್ಲೂ ಪ್ರದರ್ಶನ ಮಾಡತೊಡಗಿದರು. ಗೋಡೆ ಹಾರಿ ಸೈಕಲ್ ಸವಾರಿ ಮಾಡುತ್ತಿದ್ದರು. ಪೇಟೆ ಸುತ್ತುತ್ತಿದ್ದರು. ಡ್ಯಾನ್ಸ್ ಪಾರ್ಟಿಗಳಿಗೆ ಹೋಗುತ್ತಿದ್ದರು. ಪ್ರಿನ್ಸಿಪಾಲರು ಹುಡುಗರು ಕೆಟ್ಟುಹೋಗುತ್ತಿದ್ದಾರೆ. ಹೀಗೆ ಮುಂದುವರಿದರೆ ಅವರ ಭವಿಷ್ಯ ಕತ್ತಲಾಗಲಿದೆ. ಭೂಮಿಗೆ ಭಾರವಾಗಿ ಬದುಕುವವರಾಗುತ್ತಾರೆ ಎಂದು ಪೋಷಕರಿಗೆ ಖಾರವಾಗಿ ಪತ್ರ ಬರೆದರು. ಪೋಷಕರು ಮಕ್ಕಳು ತಮ್ಮ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದರು ಎಂದು ಕೊರಗಿದರು. ಬೆಂಗಳೂರಿಗೆ ಬಂದು ಬುದ್ಧಿ ಹೇಳಿ ಹೋದರು.ಆದರೇನು ಬಂತು? ಅಣ್ಣತಮ್ಮಂದಿರು ಸುಧಾರಿಸಲಿಲ್ಲ. ತುಂಟತನದೊಂದಿಗೇ ಶಾಲೆಯ ಆಟ-ಪಾಟ-ಓಟಗಳಲ್ಲಿ ಹೆಸರು ಮಾಡಿದ್ದರು. ಪ್ರಿನ್ಸಿಪಾಲರು ಒಮ್ಮೆ ಇವರ ಓದು ಮುಗಿದರೆ ಸಾಕು ಎಂದು ಗೊಣಗುತ್ತಿದ್ದರು. ಆದರೆ ಕಾಲ ಏನನ್ನು ತಾನೇ ಬದಲು ಮಾಡದು? ಭಾರತೀಯರಿಗೆ ಪ್ರವೇಶವಿಲ್ಲ ಎಂಬ ನಿಯಮದ ಕಾಲೇಜಿಗೆ ಮುಂದೆ ಭಾರತೀಯರೇ ಘನತೆಯನ್ನು ತಂದರು. ಯಾವ ಹುಡುಗರನ್ನು ಭೂಮಿಗೆ ಭಾರವಾಗುವವರು ಎಂದುಕೊಂಡಿದ್ದರೋ ಅದೇ ಹುಡುಗರನ್ನು ಮುಂದೆ ಅದೇ ಪ್ರಿನ್ಸಿಪಾಲರು ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳು ಎಂದು ಎದೆಯುಬ್ಬಿಸಿ ಹೇಳುವ ಕಾಲವೂ ಬಂತು.ಆ ಹುಡುಗರು ಯಾರೆಂದುಕೊಂಡಿರಿ? ಅವರಲ್ಲಿ ಒಬ್ಬ ಬ್ರಿಟಿಷ್ ಆರ್ಮಿಯ ರೆಜಿಮೆಂಟ್ ಅಧಿಕಾರಿಯಾಗಿ, ಮುಂದೆ ನೇತಾಜಿ ಸೇನೆಯಲ್ಲಿ ಕರ್ನಲ್ ಆಗಿ ಬಲಿದಾನ ಮಾಡಿದ ಪೊನ್ನಪ್ಪ. ಇನ್ನೊಬ್ಬರು ಮಹಾಯೋಧ ಜನರಲ್ ತಿಮ್ಮಯ್ಯ. ಕೊಡಗಿನ ಜನರ ಪ್ರೀತಿಯ ಡುಬ್ಬು. ಮಿಲಿಟರಿಯ ಅಕ್ಕರೆಯ ಟಿಮ್ಮಿ.

ಮನೆಯಲ್ಲಿ ಸುಖವೈಭೋಗ, ಬಾಯಲ್ಲಿ ಚಿನ್ನದ ಚಮಚ. ಹೊರನೋಟಕ್ಕೆ ಬ್ರಿಟಿಷ್ ಸಂಸ್ಕೃತಿಯ ಮೋಹಿ. ಆದರೆ ಆಂತರ್ಯದಲ್ಲಿ ಅಪ್ಪಟ ಕೊಡವ ಸಂಪ್ರದಾಯವಾದಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಿತಪ್ರಜ್ಞ. ಸೈನಿಕರ ಸ್ನೇಹಿತ ಮತ್ತು ತಂದೆ-ತಾಯಿ-ಗುರು ಎಲ್ಲವೂ. ಸಾಧಾರಣ ಸೈನಿಕನನ್ನೂ ಬಾಯ್ ಎನ್ನದೆ ಜಂಟಲ್ ಮ್ಯಾನ್ ಎಂದು ಕರೆಯುವ ಹಿರಿಯ. ಅಧಿಕಾರಿಯಾದರೂ ಯೋಧರೊಡನೆ ತೆರಳುವ ದೊಡ್ಡತನ. ಜನರಲ್ ಎಂಬ ಅಹಮ್ಮುಗಳನ್ನು ಬಿಟ್ಟು ಸೈನಿಕರೊಡನೆ ತಮಾಷೆ ಮಾತಾಡುವ ಆಪ್ತ. ಸಾಕ್ಷಾತ್ ಬ್ರಹ್ಮಗಿರಿಯೇ ಎದ್ದುಬಂದಂಥಾ ಶರೀರ. ಕಾರ್ಯದಲ್ಲಿ ರಾಜನಂಥಾ ಗಾಂಭೀರ್ಯ.ಇವಿಷ್ಟು ಹೊರನೋಟಕ್ಕೆ ಕಾಣುವ ತಿಮ್ಮಯ್ಯ. ಆದರೆ ಪ್ರಾಮಾಣಿಕವಾದ ಒಬ್ಬ ವ್ಯಕ್ತಿ ಉನ್ನತ ಹುದ್ದೆಯಲ್ಲಿದ್ದರೂ ಎಷ್ಟೊಂದು ಪಾಡುಪಡಬಲ್ಲ ಎಂಬುದಕ್ಕೆ ಜನರಲ್ ತಿಮ್ಮಯ್ಯನವರ ಬದುಕು ಒಂದು ಉದಾಹರಣೆ. ಸದಾ ದೇಶದ ಸೈನ್ಯ, ಸೈನಿಕರ ಬಗ್ಗೆ ಧ್ಯಾನಿಸಿದವನಿಗೆ ಸಿಕ್ಕಿದ್ದು ಸದಾ ಅವಮಾನ, ಕಿರಿಕಿರಿಗಳು. ಮಂದಬುದ್ಧಿಯ ಆಡಳಿತದಿಂದ ಒಬ್ಬ ಪ್ರತಿಭಾನ್ವಿತ, ದೇಶಭಕ್ತ ಯೋಧ ತನ್ನ ಕಣ್ಣಮುಂದೆ ನನ್ನ ಸೈನಿಕರು ಸಾಯುವುದನ್ನು ನೋಡಲಾರೆ ಎಂದು ವಿದೇಶಕ್ಕೆ ಹೊರಟುಹೋದ. ತನ್ನ ಕನಸ್ಸಿನ ಸೈನ್ಯ ಕಟ್ಟಲೂ ಆ ಯೋಧನಿಗೆ ಆಡಳಿತ ಬಿಡಲಿಲ್ಲ. ಮುಂದೆ ಅವರ ಅನುಪಸ್ಥಿತಿ ದೇಶಕ್ಕೆ ಮುಳುವಾಗಿ ಕಂಡಿತು. ಅದು ಇತಿಹಾಸ.ತಿಮ್ಮಯ್ಯನವರು ಶ್ರೇಷ್ಠ ಎನಿಸುವುದು ಕೇವಲ 60ರ ದಶಕದ ತಿಮ್ಮಯ್ಯ ಎಪಿಸೋಡ್‌ನ ಕಾರಣಕ್ಕೆ ಮಾತ್ರ ಅಲ್ಲ. ಮೊದಲ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಮೆರೆದ ಸಾಹಸವನ್ನು ನಮ್ಮ ದೇಶವೇನು ಸಮ ವಿಶ್ವವೇ ಬೆರಗಿನಿಂದ ನೋಡಿತು.1948ನೇ ಇಸವಿಯ ಬೇಸಿಗೆ. ಜಮ್ಮು-ಕಾಶ್ಮೀರಕ್ಕೆ ಪಾಕಿಸ್ತಾನ ಸೈನ್ಯವನ್ನು ನುಗ್ಗಿಸಿತ್ತು.

ಬುಡಕಟ್ಟು ಜನರನ್ನು ಪ್ರಚೋದಿಸಿ ಭಾರತದ ವಿರುದ್ಧ ಛೂಬಿಡಲಾಗಿತ್ತು. ಗೆರಿ ಯುದ್ಧತಂತ್ರ, ಪ್ರತಿಕೂಲ ಹವಾಮಾನ, ಜೊತೆಗೆ ಭಾರತೀಯ ಸೈನ್ಯದಲ್ಲಿ ಸಾಕಷ್ಟು ಯೋಧರು ಮತ್ತು ಯುದ್ಧಸಾಮಗ್ರಿಗಳ ಕೊರತೆ. ಪೂರ್ವ ತಯಾರಿಯೂ ಇಲ್ಲ. ತಿಮ್ಮಯ್ಯ ಹೆಚ್ಚುವರಿ ಸೈನ್ಯಕ್ಕೆ ದೆಹಲಿಗೆ ಬೇಡಿಕೆ ಇಟ್ಟರು. ಮಂತ್ರಿಮಂಡಳ ಎಂದಿನಂತೆ ಉದಾಸೀನ ಮಾಡಿತು. ಇನ್ನು ಉಳಿದಿರುವುದು ತಂತ್ರಮಾರ್ಗವೊಂದೇ ಎನ್ನುವುದನ್ನು ತಿಮ್ಮಯ್ಯ ಅರ್ಥಮಾಡಿಕೊಂಡರು.

ಮುಖಾಮುಖಿಯಾಗುವುದಕ್ಕಿಂತ ದೊಮ್ಮಾಲ್-ಮುಜಫರಾಬಾದ್ ಕಡೆಯಿಂದ ನುಗ್ಗುವುದೊಂದೇ ಪರಿಹಾರ ಎಂದುಕೊಂಡರು. ಜೊಜಿಲಾಕಣಿವೆಯನ್ನು ವಶಪಡಿಸಿಕೊಂಡರೆ ಮಾತ್ರ ಭಾರತಕ್ಕೆ ಲೇಹ್-ಲಡಾಕ್‌ಗಳು ಉಳಿಯುತ್ತವೆ ಎಂಬುದು ತಿಮ್ಮಯ್ಯನವರಿಗೆ ಗೊತ್ತಿತ್ತು. ಆದರೆ ಅದು ಕಷ್ಟದ ಕೆಲಸ. ಜೋಜಿಲಾ 11000 ಅಡಿ ಎತ್ತರದಲ್ಲಿತ್ತು. ಟ್ಯಾಂಕರುಗಳನ್ನು ಹತ್ತಿಸುವುದು ಸಾಧ್ಯವಿಲ್ಲದ ಮಾತು. ಆದರೆ ತಿಮ್ಮಯ್ಯ ಸೈನಿಕರಿಗೆ ಅದು ಸಾಧ್ಯ ಎಂದು ಧೈರ್ಯ ತುಂಬಿದರು. ಎಲ್ಲರೂ ಒಮ್ಮೆ ಬೆಚ್ಚಿಬಿದ್ದರು. ಏಕೆಂದರೆ ಟ್ಯಾಂಕರು ಏರದ ಜಾಗದಲ್ಲಿ ಸುಮಾರು 450 ಕಿ.ಮೀ ದೂರ ಗುಟ್ಟಿನಲ್ಲಿ ನಮ್ಮ ಸೈನ್ಯ ಸಾಗಬೇಕಿತ್ತು. ಇದುವರೆಗೆ ಅಂಥ ಸಾಹಸ ಪ್ರಪಂಚದಲ್ಲೆಲ್ಲೂ ನಡೆದಿಲ್ಲ. ನಡೆಯಲು ಸಾಧ್ಯವಿಲ್ಲ ಎಂದು ಕೆಲವರು ಅಡ್ಡಮಾತು ಆಡಿದರು. ಆದರೆ ತಿಮ್ಮಯ್ಯ ಮುನ್ನುಗ್ಗುವಂತೆ ಆಜ್ಞಾಪಿಸಿದರು. ಗುರಿ ಮುಟ್ಟಿದರು. ಲೇಹ್ ವಶವಾಯಿತು. ಇಂದಿಗೂ ಈ ಘಟನೆ ವಿಶ್ವದ ಸಮರ ಇತಿಹಾಸದಲ್ಲಿ ಸ್ಮರಣೀಯ ದಾಖಲೆ. ಇದರ ಸುದ್ದಿಯನ್ನು ಕೇಳಿದ ಪ್ರಪಂಚದ ಹಲವು ಮಿಲಿಟರಿ ಮುಖಂಡರು ಮೂಗಿನ ಮೇಲೆ ಬೆರಳಿಟ್ಟರು. ಲೇಹ್‌ನಲ್ಲಿ ಹಳೆಯದಾಗಿದ್ದ ವಿಮಾನ ನಿಲ್ದಾಣವನ್ನು ದುರಸ್ತಿ ಮಾಡಿಸಿದರು.ಅಂದು ತಿಮ್ಮಯ್ಯ ನೆಟ್ಟ ಭಾರತದ ಧ್ವಜ ಇಂದಿಗೂ ಲೇಹ್ನಲ್ಲಿ ಹಾರುತ್ತಿದೆ. ತಿಮ್ಮಯ್ಯರ ಈ ವಿಜಯದಿಂದ ಅವರು ವಿಶ್ವಾದ್ಯಂತ ಹೆಸರಾದರು.

ತಿಮ್ಮಯ್ಯನವರ ನಿರ್ಧಾರಗಳನ್ನು ಹತ್ತಿರದಿಂದ ಕಂಡಿದ್ದ ವಿಶ್ವಸಂಸ್ಥೆ, 1953ರಲ್ಲಿ ಕೊರಿಯಾ ಬಿಕ್ಕಟ್ಟನ್ನು ನಿಭಾಯಿಸಲು ತಟಸ್ಥ ದೇಶಗಳ ಪರವಾಗಿ ತಿಮ್ಮಯ್ಯನವರನ್ನು ದೂತರನ್ನಾಗಿ ಕಳುಹಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿತು. ಕೊರಿಯಾದ ಇತ್ತಂಡಗಳ ಪರವಾಗಿ ಬಲಾಢ್ಯ ದೇಶಗಳಿದ್ದವು. ಸುಮಾರು ಒಂದೂವರೆ ಲಕ್ಷ ಯುದ್ಧ ಕೈದಿಗಳ ಸಮಸ್ಯೆಯನ್ನು ಜಗತ್ತು ನಿಭಾಯಿಸಲಾರದೆ ಒದ್ದಾಡುತ್ತಿತ್ತು. ಆದರೆ ತಿಮ್ಮಯ್ಯ ಅದನ್ನು ಭಾರತೀಯ ರಾಜಿ ತೀರ್ಮಾನ ಶೈಲಿಯಲ್ಲಿ ಮುಗಿಸಿ ಬೆಟ್ಟದಂಥ ಸಮಸ್ಯೆಯನ್ನು ಕರಗಿಸಿದರು. ಇದನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಐಸೆನ್ ಹೋವರ್ ‘ಸೂಕ್ಷ್ಮವಾದ ಸಮಸ್ಯೆಯನ್ನು ನಿಭಾಯಿಸಿದ ತಿಮ್ಮಯ್ಯ ಚಾಲಾಕಿ’ ಎಂದು ಬಣ್ಣಿಸಿದರು. ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ‘ಇದು ತಾಳ್ಮೆಯ ಮತ್ತು ಚಮತ್ಕಾರಿ ನಡೆ’ ಎಂದು ಭಾರತದ ಬೆನ್ನುತಟ್ಟಿದರು. ಈ ಮೂಲಕ ಇಡೀ ವಿಶ್ವ ಭಾರತವನ್ನು ನೋಡಿತು. ತಿಮ್ಮಯ್ಯನವರ ಸಾಧನೆಯನ್ನು ಪರಿಗಣಿಸಿದ ಸರ್ಕಾರ ಪದ್ಮಭೂಷಣವನ್ನು ನೀಡಿ ಸನ್ಮಾನಿಸಿತು.1956ರಲ್ಲಿ ವೆಸ್ಟರ್ನ್ ಕಮಾಂಡಿನ ಅಧಿಕಾರ ವಹಿಸಿಕೊಂಡ ತಿಮ್ಮಯ್ಯ ನಾಗಾಗಳ ಮನಸ್ಸನ್ನು ಕದ್ದು ಸ್ನೇಹ ಸಂಪಾದಿಸಿದರು.

ಈಶಾನ್ಯ ರಾಜ್ಯಗಳನ್ನು ಹತ್ತಿರ ತರುವ ಉದ್ದೇಶದಿಂದ ಕುಮಾವೂನಿಗಳ ಪಡೆಯನ್ನು ಕಟ್ಟಿದರು. ಆಗಲೇ ತಿಮ್ಮಯ್ಯನವರಿಗೆ ಚೀನಾ ಕಡೆಯಿಂದ ಏನೋ ನಡೆಯುತ್ತಿದೆ ಎಂಬ ವಾಸನೆ ಹೊಡೆಯಲಾರಂಭಿಸಿತ್ತು. ಈಶಾನ್ಯ ರಾಜ್ಯಗಳಲ್ಲಿ ನೆಹರೂ ಯುಗದಲ್ಲಿ ಏನೇನು ಸುಧಾರಣೆಗಳಾದವೋ ಅವೆಲ್ಲವೂ ತಿಮ್ಮಯ್ಯನವರ ಸಾಧನೆಗಳು. ತಿಮ್ಮಯ್ಯನವರು ವೆಸ್ಟರ್ನ್ ಕಮಾಂಡಿಗೆ ವರ್ಗವಾಗದೇ ಇರುತ್ತಿದ್ದರೆ ಇಂದು ಈಶಾನ್ಯ ರಾಜ್ಯಗಳು ಹೀಗಿರುತ್ತಿರಲಿಲ್ಲ ಎಂಬುದನ್ನು ಇಂದಿಗೂ ಮಿಲಿಟರಿ ಅಧಿಕಾರಿಗಳು, ರಕ್ಷಣಾ ತಜ್ಞರು ಹೇಳುತ್ತಾರೆ ಎಂದರೆ ತಿಮ್ಮಯ್ಯನವರ ಕಾರ್ಯವನ್ನು ಅಳೆಯಬಹುದು. 1957ರಲ್ಲಿ ತಿಮ್ಮಯ್ಯ ಚೀಫ್ ಆಫ್ ಆರ್ಮಿ ಸ್ಟಾಫ್ ಅಗಿ ಅಧಿಕಾರ ವಹಿಸಿಕೊಂಡರು. ನೂತನ ಜನರಲ್ ಆದ ತಿಮ್ಮಯ್ಯನವರ ತಲೆಯಲ್ಲಿ ಚೀನಾ ಅಪಾಯ ಒಂದೇ ಸಮನೆ ಗಿರಕಿ ಹೊಡೆಯುತ್ತಿತ್ತು. ಚೀನಾವನ್ನು ಎದುರಿಸಲೆಂದೇ ಒಳಗೊಳಗೇ ಕಾರ್ಯತಂತ್ರಗಳನ್ನು ರೂಪಿಸತೊಡಗಿದರು. ಕುಮಾವೂನ್ ರೆಜಿಮೆಂಟನ್ನು ಬಲಪಡಿಸಿದರು. ವಿದೇಶಗಳನ್ನು ಸುತ್ತಿಬಂದರು. ಇಂಗ್ಲೆಂಡಿಗೆ ತೆರಳಿ ಆಗಿನ ಕಾಲದಲ್ಲಿ ಹಿಮಾಲಯ ಏರಿದ್ದ ಸರ್ ಜಾನ್ ಹಂಟ್ ಅವರನ್ನು ಭೇಟಿಯಾಗಿ ಬಂದರು. ಹಿಮಪರ್ವತಗಳನ್ನು ಏರುವ ತರಬೇತಿ ಪಡೆದರು. ಸ್ಕೀಯಿಂಗ್ ಉಪಕರಣ, ಯುದ್ಧ ಉಡುಪುಗಳ ಬಗ್ಗೆ ತಜ್ಞತೆ ಪಡೆದರು.

ಮರಳಿ ಬಂದವರು ದೇಶದ ಎಲ್ಲಾ ವಿಶ್ವವಿದ್ಯಾಲಯಗಳೂ ಸೇರಿದಂತೆ 200 ಮೌಂಟನೀರಿಂಗ್ ಮತ್ತು ಸ್ಕೀಯಿಂಗ್ ಕ್ಲಬ್‌ಗಳನ್ನು ತೆರೆದರು. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಯುದ್ಧಮಾಡಲು ಮತ್ತಷ್ಟು ತಿಳಿಯುವ ಆವಶ್ಯಕತೆ ಇದೆ ಎಂದು ಅವಕಾಶಕ್ಕಾಗಿ ತಿಮ್ಮಯ್ಯ ಎದುರುನೋಡುತ್ತಿದ್ದರು. ಅದೇ ವರ್ಷ ರೋಮಿನಲ್ಲಿ ಒಲಂಪಿಕ್ ನಡೆಯುತ್ತಿತ್ತು. ಶೀತಪ್ರದೇಶದಲ್ಲಿ ಕ್ರೀಡಾಪಟುಗಳು ದೇಹದ ಸ್ಥಿರತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ನೋಡಲು ಸ್ವತಃ ರೋಮ್ಗೆ ತೆರಳಿದರು. ಈ ಎಲ್ಲಾ ತಯಾರಿಗಳನ್ನು ತಿಮ್ಮಯ್ಯ ಕೇವಲ ಸಂಶಯದ ದೃಷ್ಟಿಯಿಂದ ಮಾಡಿರಲಿಲ್ಲ. 1950ರ ಹೊತ್ತಿಗಾಗಲೇ ಚೀನಾ ಭಾರತದ ಗಡಿಯೊಳಗೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು.

ರಾಜಕೀಯ ಮುಖಂಡರು ಕಣ್ಣಿಲ್ಲದವರಾದಮೇಲೆ ಮೇಲೆ ನಮ್ಮ ದೇಶವನ್ನು ಸೈನ್ಯವೊಂದು ಮಾತ್ರ ರಕ್ಷಣೆ ಮಾಡಬಲ್ಲದು ಎಂದು ತಿಮ್ಮಯ್ಯ ನಂಬಿದ್ದರು. ಚೀನಾದ ಚಟುವಟಿಗಳನ್ನು ಕೂಲಂಕಷವಾಗಿ ಗಮನಿಸುತ್ತಿದ್ದ ತಿಮ್ಮಯ್ಯನವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ತಿಳಿದುಹೋಗಿತ್ತು. ಅದೇ ಹೊತ್ತಲ್ಲಿಕೈಲಾಸ ಮಾನಸಸರೋವರದಲ್ಲಿ ಸ್ವಾಮಿ ಪ್ರಣವಾನಂದ ಎಂಬವರು ಚೀನಾ ಮುನ್ನುಗ್ಗುತ್ತಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. The Current Weekly ಹಿಮಾಲಯದಲ್ಲಿ ಚೀನಾದ ಹಸ್ತಕ್ಷೇಪವನ್ನು ಎಚ್ಚರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿತು. ಆದರೆ ಭಾರತೀಯ ಕಮ್ಯುನಿಸ್ಟರು ಅದರ ವಿರುದ್ಧ ವಾಕ್ಸಮರಗಳನ್ನು ಮಾಡುತ್ತಿದ್ದರು. ಅದಕ್ಕೆ ಹೆದರಿದಂತೆ ಕಂಡ ನೆಹರೂ ಬಾಯಿಮುಚ್ಚಿಕೊಂಡು ಕುಳಿತಿದ್ದರು. ಆಗ ಕಮ್ಯುನಿಸ್ಟರ ವಿರುದ್ಧ ದೇಶದಲ್ಲಿ ಗುಡುಗಿದವರು ಒಬ್ಬನೇ ಒಬ್ಬ ಯೋಧ ಜನರಲ್ ಕಾರ್ಯಪ್ಪ. 1959ರಲ್ಲಿ ‘ದೇಶಕ್ಕೆ ಶತ್ರುಗಳು ಪಾಕಿಸ್ತಾನಿಗಳಲ್ಲ. ಭಾರತದೊಳಗಿನ ಕಮ್ಯುನಿಸ್ಟರು’ ಎಂದಿದ್ದರು ಮಾಜಿ ಕಮಾಂಡರ್ ಇನ್ ಚೀಫ್ ಜನರಲ್ ಕಾರ್ಯಪ್ಪ. ಅವರ ಹೇಳಿಕೆ ತಿಮ್ಮಯ್ಯನವರ ಶಕ್ತಿಯನ್ನು ಹೆಚಿಸಿತು. ಸರ್ಕಾರಕ್ಕೆ ಸುದೀರ್ಘವಾದ ವರದಿಯೊಂದನ್ನು ತಯಾರು ಮಾಡಿ ಕಳುಹಿಸಿದರು. ಆದರೆ ನೆಹರೂ ಮತ್ತು ಕೃಷ್ಣ ಮೆನನ್ ಜೋಡಿ ಆ ವರದಿಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮೆನನ್ ಅಂತೂ ತಿಮ್ಮಯ್ಯನವರನ್ನು ‘ಬ್ರಿಟಿಷ್ ಕಾಲದ ಮನುಷ್ಯ’ ಎಂದು ಹಂಗಿಸಿದರು. ತಿಮ್ಮಯ್ಯನವರ ವರದಿಯನ್ನಿಟ್ಟುಕೊಂಡು ರಾಜಗೋಪಾಲಾಚಾರಿಯವರು ನೆಹರೂ ವಿರುದ್ಧ ಹೋರಾಟ ಸಂಘಟಿಸಿದರು. ಅದಕ್ಕೂ ನೆಹರೂ ಕ್ಯಾರೇ ಅನ್ನಲಿಲ್ಲ. ಕೊನೆಗೆ ಬೇಸತ್ತರಾಜಗೋಪಾಲಾಚಾರಿ ಸ್ವತಂತ್ರ ಪಾರ್ಟಿ ಕಟ್ಟಿದರು. ನೆಹರೂರ ಈ ಉದಾಸೀನವನ್ನು ಪಾಕಿಸ್ತಾನ ಕೂಡ ಹಂಗಿಸಿ ಮಾತನಾಡಿತು. ‘ನಾವಿಬ್ಬರೂ ಕೂಡಿ ರಕ್ಷಣಾ ಒಪ್ಪಂದ ಮಾಡಿಕೊಳ್ಳೋಣ’ ಎಂದು ಕಾಲೆಳೆಯಿತು. ಆ ಮಾತೂ ಕೂಡಾ ನೆಹರೂಗೆ ನಾಟಲಿಲ್ಲ.ಇತ್ತ ತಿಮ್ಮಯ್ಯ ಬೇಸತ್ತುಹೋದರು.

3000 ಜನ ದೆಹಲಿಯ ವಿದ್ಯಾರ್ಥಿಗಳು ತಿಮ್ಮಯ್ಯನವರನ್ನು ಭೇಟಿಯಾಗಿ ನಮ್ಮನ್ನು ಗಡಿಗೆ ಕಳುಹಿಸಿ ಎಂದು ಬೇಡಿಕೊಂಡರು. ಅಂಥ ಸಂದರ್ಭವನ್ನು ಕೂಡ ತಿಮ್ಮಯ್ಯ ದುರುಪಯೋಗಪಡಿಸಿಕೊಳ್ಳದೆ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಕಳುಹಿಸಿದರು. ಇನ್ನು ತನ್ನ ದೇಶವನ್ನು, ಸೈನ್ಯವನ್ನು ರಕ್ಷಣೆ ಮಾಡಲು ದೇವರಿಂದಲೂ ಸಾಧ್ಯವಿಲ್ಲ ಎಂದ ತಿಮ್ಮಯ್ಯ ನೇರ ನೆಹರೂ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನು ಒಗೆದು ಬಂದರು. ಆಗ ಮಾತ್ರ ನೆಹರೂ ಬೆವತುಹೋದರು. ದೇಶಾದ್ಯಂತ ತಿಮ್ಮಯ್ಯ ಪರ ಧ್ವನಿ ಏಳುತ್ತಿತ್ತು. ನೆಹರೂ ಈಗ ಬೇಡಿಕೆ ಪರಿಶೀಲಿಸುವ ನಾಟಕವಾಡತೊಡಗಿದರು. ತಿಮ್ಮಯ್ಯ ಇನ್ನೆರಡು ವರ್ಷದಲ್ಲಿ ನಿವೃತ್ತರಾಗುತ್ತಾರೆ ಎಂಬ ಸಂಗತಿ ತಿಳಿದಿದ್ದ ನೆಹರೂ ನಾಜೂಕಿನಿಂದ ಅವರನ್ನು ಸಾಗಹಾಕಿದರು. ತಿಮ್ಮಯ್ಯ ರಾಜೀನಾಮೆ ಹಿಂತೆಗೆದುಕೊಂಡರು. ಚೀನಾ ಕೂಡಾ ಅದನ್ನು ಕಾಯುತ್ತಿತ್ತು. ತಿಮ್ಮಯ್ಯ ಜನರಲ್ ಆಗಿರುವವರೆಗೆ ಭಾರತ ಅಪಾಯಕಾರಿ ಎಂದು ಚೀನಾ ಭಾವಿಸಿ ಸಮಯ ಕಾಯುತ್ತಿತ್ತು. ಮುಂದೆ ತಿಮ್ಮಯ್ಯ ನಿವೃತ್ತರಾದರು. ನಡೆಯಬಾರದ್ದು ನಡೆಯಿತು.9-4-1961ರ ಶಂಕರ್ಸ್ ವೀಕ್ಲಿ ತಿಮ್ಮಯ್ಯನವರ ವ್ಯಂಗ್ಯಚಿತ್ರವನ್ನು ಬಿಡಿಸಿ ಅವರಿಗೆ ಗೌರವಾರ್ಪಣೆ ಸಲ್ಲಿಸಿ ‘ನಮ್ಮ ದೇಶದ ದುರದೃಷ್ಟವೆಂದರೆ ಯೋಗ್ಯ ರಕ್ಷಣಾ ಸಚಿವರು ಸಿಗದೇ ಇದ್ದುದು. ತಿಮ್ಮಯ್ಯನವರೊಂದಿಗೆ ಮೆನನ್ ಕೈಜೋಡಿಸಿದ್ದಿದ್ದರೆ ನಮ್ಮ ಸೈನ್ಯವನ್ನು ಎದುರಿಸುವ ತಾಕತ್ತು ಜಗತ್ತಿನ ಯಾವ ಶಕ್ತಿಗೂ ಇರುತ್ತಿರಲಿಲ್ಲ. ತಿಮ್ಮಯ್ಯ ರಾಜಕೀಯ ಬಲಿಪಶುವಾದರು’ ಎಂದು ಬರೆಯಿತು. ಅಂದರೆ ತಿಮ್ಮಯ್ಯ ಸೈನ್ಯ ಬಿಟ್ಟೊಡನೆ ದೇಶಕ್ಕೆ ಚೀನಾದ ಅಪಾಯ ಮತ್ತು ಭಾರತದ ಸೋಲು ಖಚಿತ ಎಂಬುದು ತಿಳಿದುಹೋಗಿತ್ತು. ಮುಂದೆ ಚೀನಾ ಆಕ್ರಮಣ ಮಾಡಿದಾಗ ನೆಹರೂ ರೇಡಿಯೋದಲ್ಲಿ ನಮ್ಮ ಸೈನ್ಯ ಅಸಹಾಯಕ ಪರಿಸ್ಥಿತಿಯಲ್ಲಿದೆ ಎಂದು ಬಿಕ್ಕಿದ್ದರು. ತಿಮ್ಮಯ್ಯನವರ ಮಾತು ಕೇಳದೇ ಇದ್ದ ತಪ್ಪಿಗೆ ನೆಹರೂವೇನೋ ಬಿಕ್ಕಿದರು. ಆದರೆ ದೇಶ ಅದರಿಂದ ಬಹಳಷ್ಟನ್ನು ಕಳೆದುಕೊಂಡಿತ್ತು.ಆದರೆ ಕೃಷ್ಣ ಮೆನನ್ ತಮ್ಮ ಚಾಳಿ ಮುಂದುವರಿಸಿದರು.

ತಿಮ್ಮಯ್ಯನವರ ಬಗ್ಗೆ ನೆಹರೂಗೆ ಕಿವಿಯೂದುತ್ತಲೇ ಇದ್ದರು. ಈ ಮೆನನ್ ಎಂಥಾ ಮನುಷ್ಯನೆಂದರೆ, ಒಮ್ಮೆ ವಿಮಾನ ನಿಲ್ದಾಣದಲ್ಲಿ ತಮ್ಮೊಡನಿದ್ದ ಮಿಲಿಟರಿ ಅಧಿಕಾರಿಗಳೊಡನೆ ಮಾತಾಡುತ್ತಾ ಮೆನನ್ ಒಬ್ಬ ಅಧಿಕಾರಿಯ ಹೆಗಲ ಮೇಲೆ ಕೈ ಇಟ್ಟು ದೂರಕ್ಕೆ ಕರೆದುಕೊಂಡುಹೋದರು. ನೀನು ಉತ್ತಮ ಅಧಿಕಾರಿ, ನಿನಗೆ ಮಿಲಿಟರಿಯಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಆತನನ್ನು ಉಬ್ಬಿಸಲು ನೋಡಿದರು. ಆ ತಿಮ್ಮಯ್ಯ ಇzನ, ಅವನು ಹೇಗೆ? ಎಂದು ದಾಳ ಹಾಕಿದರು. ಆಅಧಿಕಾರಿಗೆ ಉರಿದುಹೋಯಿತು. ಮುಖಕ್ಕೆ ಹೊಡೆದಂತೆ ‘ಅವರು ನನ್ನ ಮೇಲಧಿಕಾರಿ. ಅವರ ಬಗ್ಗೆ ಮಾತಾಡುವ ಅರ್ಹತೆ ನನಗಿಲ್ಲ’ ಎಂದು ಉತ್ತರಿಸಿದರು. ಆ ಚಾಲಾಕಿ ಅಧಿಕಾರಿ ಸ್ಯಾಮ್ ಮಾಣಿಕಶಾ ಈ ವಿಷಯವನ್ನು ಇಷ್ಟಕ್ಕೇ ಬಿಡಲಿಲ್ಲ. ಪತ್ರಕರ್ತರಿಗೆ ಸಂಗತಿಯನ್ನು ತಿಳಿಸಿಬಿಟ್ಟಿದ್ದರು. ಪುನಃ ಮೆನನ್ ಟೀಕೆಗೊಳಗಾದರು. ಮೆನನ್ ಇದರಿಂದ ಮತ್ತಷ್ಟು ಕುದಿಯತೊಡಗಿದರು. ಅದೇ ಹೊತ್ತಲ್ಲಿ ಅಮೆರಿಕನ್ ಲೇಖಕ ಇವಾನ್ಸ್ ತಿಮ್ಮಯ್ಯನವರ ಜೀವನಚರಿತ್ರೆಯನ್ನು ಬರೆಯಲು ಭಾರತಕ್ಕೆ ಬಂದಿದ್ದ. ಬಿಡುಗಡೆಗೆ ಮುನ್ನವೇ ಪುಸ್ತಕ ಸುದ್ದಿಯಾಗತೊಡಗಿತು. ಮೆನನ್ ಅದಕ್ಕೂ ಅಡ್ಡಗಾಲು ಹಾಕಿದರು. ತಿಮ್ಮಯ್ಯ ಸರಕಾರಿ ಮಾಹಿತಿಯನ್ನು ದಾಖಲಿಸಿದ್ದಾನೆ ಎಂದು ಬೊಬ್ಬೆ ಹಾಕತೊಡಗಿದರು. ಪುಸ್ತಕದ ಪರ ಪಾರ್ಲಿಮೆಂಟಿನಲ್ಲೂ ಚರ್ಚೆಯಾಯಿತು. ಆದರೆ ಪುಸ್ತಕ ಪ್ರಕಾಶನಕ್ಕೆ ತಿಮ್ಮಯ್ಯ ಅನುಮತಿ ಕೊಟ್ಟ ದಾಖಲೆಗಳಿರಲಿಲ್ಲ. ಇವಾನ್ಸ್ ಅಮೆರಿಕಾದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ಆದರೂ ಮೆನನ್ ತಿಮ್ಮಯ್ಯನವರನ್ನು ಬೆಂಬಿಡದೆ ಕಾಡಿದರು. ‘ತಿಮ್ಮಯ್ಯ 30-1-1961ರಂದು ಕ್ಷಿಪ್ರಕ್ರಾಂತಿ ನಡೆಸಿ ಲಿಮಿಟರಿ ಆಡಳಿತ (Coup D’Etat) ತರಲು ಸಂಚುಹೂಡಿದ್ದರು ಎಂದು ಸುದ್ದಿಹಬ್ಬಿಸಿದರು (INDIA CHINA WAR-NEVILLE MAXWELL).

ಅಷ್ಟರಹೊತ್ತಿಗೆ ಮೆನನ್ ಎಂಥ ಮನುಷ್ಯ ಎಂಬುದು ದೇಶಕ್ಕೆ ತಿಳಿದುಹೋಗಿತ್ತು. ಆತನ ಸಂಚು ಫಲಿಸಲಿಲ್ಲ. ವಿದೇಶದ ತಿಮ್ಮಯ್ಯ ಅಭಿಮಾನಿಗಳು ಮೆನನ್ ಮೇಲೆ ಒಂದು ಕಣ್ಣಿಟ್ಟೇ ಇದ್ದರು.ಮೈಕಲ್ ಬ್ರೇಚರ್ ಎಂಬ ವಿಶ್ವರಾಜಕೀಯದ ವಿಶ್ಲೇಷಣೆಗಾರ ಮತ್ತು ತಿಮ್ಮಯ್ಯ ಅಭಿಮಾನಿ ತನ್ನ India and World Politics ಪುಸ್ತಕದ ಸಿದ್ಧತೆಯಲ್ಲಿದ್ದಾಗ ಕೃಷ್ಣ ಮೆನನ್‌ರಲ್ಲಿ ತಿಮ್ಮಯ್ಯನವರ ಬಗ್ಗೆ ಮೊಚನು ಬಾಣಗಳ ಪ್ರಶ್ನೆಗಳನ್ನು ಎಸೆದರು. ಬ್ರೇಚರ್‌ನ ಯಾವ ಪ್ರಶ್ನೆಗೂ ಮೆನನ್ ಸರಿಯಾದ ಉತ್ತರವನ್ನು ಕೊಡದೆ ತಿಣುಕಾಡಿದರು. ತಿಮ್ಮಯ್ಯ ಮತ್ತು ಮೆನನ್ ನಡುವೆ ನಡೆದಿರುವುದನ್ನೆ ತಿಳಿದಿದ್ದ ಬ್ರೇಚರ್ ಅದನ್ನು ಪುಸ್ತಕದಲ್ಲಿ ಉಖಿಸಿ, ‘ತಿಮ್ಮಯ್ಯನವರ ಸಾಧನೆಯ ಬಗ್ಗೆ ಮೆನನ್ ಹೊಟ್ಟೆಯುರಿ ಪಡುತ್ತಿದ್ದಾರೆ. ಅವರು ಕೀಳರಿಮೆಯಿಂದ ಬಳಲುತ್ತಿದ್ದಾರೆ. ತಿಮ್ಮಯ್ಯ ಒಬ್ಬ ಶಾಂತಿದೂತ. ಸ್ವತಂತ್ರ ಭಾರತದಲ್ಲಿ ತಿಮ್ಮಯ್ಯನವರಿಗೆ ಸರಿಸಾಟಿಯಾದ ವ್ಯಕ್ತಿ ಮತ್ತೊಬ್ಬ ಇಲ್ಲ’ ಎಂದು ಬರೆಯುತ್ತಾರೆ. ಈ ಪುಸ್ತಕ ಪ್ರಕಟಣೆಯ ನಂತರ ಭಾರತದ ರಾಜಕಾರಣ ವಿದೇಶಿಯರಿಗೆ ತಮಾಷೆಯ ಸರಕಾಗುತ್ತದೆ.

ಇನ್ನೊಮ್ಮೆ ಆಚಾರ್ಯ ಕೃಪಲಾನಿ ಸಂಸತ್ತಿನಲ್ಲಿ ಮೆನನ್ ಮುಂದೆಯೇ ಅವರು ತಿಮ್ಮಯ್ಯನವರನ್ನು ನಡೆಸಿಕೊಂಡ ಬಗೆಯನ್ನು ಆಕ್ರೋಶಭರಿತರಾಗಿ ಮಾತಾಡುತ್ತಾ ಮೆನನ್ ಮುಖದ ನೀರಿಳಿಸುತ್ತಾರೆ.ಎಂಥಾ ವಿಪರ್ಯಾಸ ನೋಡಿ! ಅವೆ ನಡೆದು ಅರ್ಧ ಶತಮಾನದ ನಂತರ ಕೂಡಾ ತಿಮ್ಮಯ್ಯ ವಿಶ್ವಾದ್ಯಂತ ಮಹಾವ್ಯಕ್ತಿಯಾಗಿ ಗೌರವ ಕಾಪಾಡಿಕೊಂಡಿದ್ದಾರೆ. ಆದರೆ ಕೃಷ್ಣ ಮೆನನ್ ‘ತಿಮ್ಮಯ್ಯ ಎಪಿಸೋಡ್’ ನಿಂದ ಮಾತ್ರ ನೆನಪಿಗೆ ಬರುತ್ತಾರೆ. ಸ್ವಂತವೆನ್ನುವ ಐಡೆಂಟಿಟಿಯೇ ಇಲ್ಲದ ಮನುಷ್ಯರಾಗಿ ಮೆನನ್ ಕಾಣುತ್ತಾರೆ. ಮಹಾತ್ಮ ರಾಮನಿಗೂ ರಾಕ್ಷಸ ಮಾರೀಚನಿಗೂ ಇರುವ ವ್ಯತ್ಯಾಸದಂತೆ ಇವರಿಬ್ಬರು ಕಾಣುತ್ತಾರೆ.ಭಾರತ ತಿಮ್ಮಯ್ಯನವರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೂ ವಿಶ್ವಸಂಸ್ಥೆ ಅವರಿಗೆ ಯೋಗ್ಯ ಸ್ಥಾನವನ್ನು ನೀಡಿತು.
1964ರಲ್ಲಿ ವಿಶ್ವಸಂಸ್ಥೆ ತಿಮ್ಮಯ್ಯನವರನ್ನು ಸೈಪ್ರಸ್ ದೇಶದ ಸೇನಾ ಮುಖಂಡನಾಗಿ ನೇಮಕ ಮಾಡಿತು. ಆಂತರಿಕ ಹೋರಾಟದಿಂದ ಮತ್ತು ಗ್ರೀಕಿನ ಉಪಟಳದಿಂದ ಸೈಪ್ರಸನ್ನು ತಿಮ್ಮಯ್ಯ ರಕ್ಷಿಸಿದರು. ಹಲವು ದೇಶಗಳು ಅವರನ್ನು ಸೈನಿಕ ತರಬೇತಿಗಾಗಿ ಕರೆಸಿಕೊಂಡವು. ಇಸ್ರೇಲ್, ರಷ್ಯಾ, ಇಂಗ್ಲೆಂಡ್, ಈಜಿಪ್ಟ್‌ಗಳ ಸೈನ್ಯಕ್ಕೆ ಮಾರ್ಗದಶನ ಮಾಡಿದರು. ಇಂಥ ಭಾಗ್ಯ ಪಡೆದ ಭಾರತದ ಮೊಟ್ಟಮೊದಲ ಭಾರತೀಯ ಯೋಧ ನಮ್ಮ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ. ಬ್ರಿಟಿಷ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ Distinguished Service Order (DSO) ಪಡೆದ ಮೊದಲ ಭಾರತೀಯ ಜನರಲ್ ಕೆ. ಎಸ್. ತಿಮ್ಮಯ್ಯ.

1945ರಿಂದ 1965ರವರೆಗೆ ಭಾರತದಲ್ಲಿ ಮತ್ತು ವಿದೇಶದಲ್ಲಿ ಅತಿಹೆಚ್ಚು ಚಾಲ್ತಿಯಲ್ಲಿದ್ದ ಹೆಸರು ತಿಮ್ಮಯ್ಯನವರದ್ದು. ಇದು ಅವರ ಕ್ರಿಯಾಶೀಲತೆಗೆ ಸಾಕ್ಷಿ. ಸೈನಿಕ ಕಾರ್ಯಾಚರಣೆ ಸಮಯದಲ್ಲಿ ಹೆಡ್‌ಕ್ವಾರ್ಟರ್‌ಗಳಲ್ಲಿ ಕೂರದೆ ಸೈನಿಕರೊಂದಿಗೆ ತೆರಳಿದ ಏಕೈಕ ಭಾರತೀಯ ಜನರಲ್ ತಿಮ್ಮಯ್ಯ. ಆದರೆ ದೇಶಕ್ಕೆ ಗೌರವ ತಂದುಕೊಟ್ಟ, ಸೈನ್ಯವನ್ನು ಕಟ್ಟಿ ಬೆಳೆಸಿದ ಮಡಿಕೇರಿಯ ತಿಮ್ಮಯ್ಯನವರ ಮನೆ ‘ಸನ್ನಿಸೈಡ್’ ಇಂದಿಗೂ ತಿಮ್ಮಯ್ಯ 60ರ ದಶಕದಲ್ಲಿ ಅನುಭವಿಸಿದ ಅವಮಾನಕ್ಕೆ ಸಾಕ್ಷಿಯೋ ಎಂಬಂತೆ ಹರುಕುಮುರುಕಾಗಿ ನಿಂತಿದೆ. ತಿಮ್ಮಯ್ಯನವರ ಕುಟುಂಬಸ್ಥರು ಒಂದು ಕಾಲದಲ್ಲಿ ವೈಭವದಿಂದ ಮೆರೆದ ಆ ಮನೆಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು.ನಮ್ಮ ಸರ್ಕಾರ ಅದನ್ನು ಸ್ಮಾರಕ ಮಾಡಬಹುದಿತ್ತು, ಇಲ್ಲ ಮ್ಯೂಸಿಯಂ ಮಾಡಬಹುದಿತ್ತು. ಅದನ್ನೊಂದು ತೀರ್ಥಕ್ಷೇತ್ರದಂತೆ ಪರಿವರ್ತಿಸಬಹುದಿತ್ತು. ಆದರೆ ನಮ್ಮ ರಾಜ್ಯ ಸರ್ಕಾರ ಅದನ್ನು ಭ್ರಷ್ಟಾಚಾರದ ಗರ್ಭಗುಡಿಯಂತಿರುವ ಆರ್‌ಟಿಒ ಕಚೇರಿಯಾಗಿ ಮಾಡಿತು. ಜೀವನದುದ್ದಕ್ಕೂ ಪ್ರಾಮಾಣಿಕತೆ, ದೇಶಭಕ್ತಿ, ನೇರನುಡಿ, ಬಲಶಾಲಿ ಸೈನ್ಯ, ವಿಶ್ವದ ಶಾಂತಿಗೆ ಬದುಕು ಮುಡಿಪಿಟ್ಟ ಮಹಾತ್ಮನನ್ನು ನಾವು ನೋಡಿಕೊಂಡ ರೀತಿ ಇದು.

ಮಾರ್ಚ್ 31 ಭಾರತದ ಹೆಸರನ್ನು ವಿಶ್ವಕ್ಕೆ ಸಾರಿದ, ಭಾರತದ ಗೌರವವನ್ನು ಹೆಚ್ಚಿಸಿದ ಆ ಮಹಾಯೋಧನ ಜನ್ಮ ದಿನ. ದೇಶಭಕ್ತಿಯ ಪಾಠ ಹೇಳಿಕೊಡಲು ಶಾಲಾ-ಕಾಲೇಜುಗಳಿಗೆ ಸೈನಿಕರನ್ನು ಕಳುಹಿಸಿಕೊಡಬೇಕೆಂದು ಕೇಂದ್ರ ಸರ್ಕಾರ ಯೋಚಿಸುತ್ತಿರುವ ಸಂದರ್ಭದಲ್ಲಿ ಮಹಾಯೋಧ ತಿಮ್ಮಯ್ಯ ನೆನಪಾದರು!

 

giikk

Comments are closed.