Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹೊಸ ಸಿಇಒ ಬಗ್ಗೆ ಬರೆಯುವ ನೆಪ, ಮತ್ತೆ ಟಾಟಾ ಕೊಡುಗೆಯ ಜಪ!

ಹೊಸ ಸಿಇಒ ಬಗ್ಗೆ ಬರೆಯುವ ನೆಪ, ಮತ್ತೆ ಟಾಟಾ ಕೊಡುಗೆಯ ಜಪ!

ಹೊಸ ಸಿಇಒ ಬಗ್ಗೆ ಬರೆಯುವ ನೆಪ, ಮತ್ತೆ ಟಾಟಾ ಕೊಡುಗೆಯ ಜಪ!

ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ ಜಲವಿದ್ಯುತ್ ಉತ್ಪಾದನೆ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರ ಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ ಪೂಜಾರಿಯೊಬ್ಬರ ಮಗ. ಅವರೇ ಜೆ.ಎನ್. ಟಾಟಾ ಅಥವಾ ಜೆಮ್‌ಸೆಟ್‌ಜಿ ನಸರ್ ವಾನ್‌ಜಿ ಟಾಟಾ ಅವರ ಒಂದೊಂದು ಕನಸ್ಸಿನ ಹಿಂದೆಯೂ ಒಂದೊಂದು ಘಟನೆಗಳಿವೆ. ಒಮ್ಮೆ ಅವರು ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಹೋಗಿದ್ದರು, ಜವಳಿ ತಯಾರಿಸುವ ಯಂತ್ರದ ಖರೀದಿಗಾಗಿ. ಅದೇ ಮ್ಯಾಂಚೆಸ್ಟರ್‌ನಲ್ಲಿ ಥಾಮಸ್ ಕಾರ್ಲೈಲ್‌ನ ಭಾಷಣವಿತ್ತು.
ಅದನ್ನು ಆಲಿಸಲು ಜೆ.ಎನ್. ಟಾಟಾ ಕೂಡ ಹೋಗಿದ್ದರು. ಭಾಷಣವೇನೋ ಮುಗಿಯಿತು, ಆದರೆ ಹೊರಬರುವಷ್ಟರಲ್ಲಿ ಟಾಟಾ ಕಂಗಳಲ್ಲಿ ಭಾರತದ ಕೈಗಾರಿಕಾ ಕ್ಷೇತ್ರಕ್ಕೇ ಒಂದು ಮಹತ್ತರ ತಿರುವು ನೀಡುವಂಥ ಕನಸೊಂದು ಮೂಡಿತ್ತು. ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪನೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಇವತ್ತು ಒಂದು ವೆಲ್ಡಿಂಗ್ ಅಂಗಡಿ ಆರಂಭಿಸುವುದಕ್ಕೇ ಹಿಂದೂ ಮುಂದೂ ಯೋಚನೆ ಮಾಡಬೇಕು. ಅಂಥದ್ದರಲ್ಲಿ 1880ರಲ್ಲೇ ಭಾರೀ ಬಂಡವಾಳ ಹೂಡಿಕೆ ಬೇಕಾದ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಟಾಟಾ ಯೋಚಿಸಿದರು. ಒಬ್ಬನೇ ಮಗನಾದ ಜೆ.ಎನ್. ಟಾಟಾಗೆ ತಂದೆಯಂತೆ ಅರ್ಚಕನಾಗಬಹುದಿತ್ತು. ಆದರೆ ಅವರು ವ್ಯಾಪಾರೋದ್ಯಮದತ್ತ ಆಕರ್ಷಿತರಾದರು.
1868ರಲ್ಲಿ ಖಾಸಗಿ ವ್ಯಾಪಾರ ಸಂಸ್ಥೆಯೊಂದನ್ನು ಪ್ರಾರಂಭಿಸಿದಾಗ ಜೆ.ಎನ್. ಟಾಟಾಗೆ 29 ವರ್ಷ. ಕೈಯಲ್ಲಿದ್ದುದು 21 ಸಾವಿರ ರು. ಆದರೆ ಪರಿಶ್ರಮಕ್ಕೆ, ದೂರದೃಷ್ಟಿಗೆ, ಹಂಬಲಕ್ಕೆ, ಸಾಧಿಸುವ ಛಲಕ್ಕೆ ಎಂದಿಗೂ ಕೊರತೆಯಿರಲಿಲ್ಲ. ಇತ್ತ ಬ್ರಿಟಿಷರು ನಮ್ಮ ಗುಡಿಕೈಗಾರಿಕೆಗಳನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುತ್ತಿದ್ದರು. ಏಕೆಂದರೆ ಬ್ರಿಟನ್‌ನಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಭಾರತದಲ್ಲಿ ಮಾರುಕಟ್ಟೆ ಬೇಕಿತ್ತು. ಇಂತಹ ಘೋರ ಅನ್ಯಾಯದ ಬಗ್ಗೆ ಜೆ.ಎನ್. ಟಾಟಾ ಹೋರಾಟಕ್ಕಿಳಿಯಲಿಲ್ಲ. ಆದರೆ ಯೂರೋಪ್ ಪ್ರವಾಸ ಕೈಗೊಂಡರು. ಜವಳಿ ಉದ್ಯಮಕ್ಕೆ ಹೆಸರಾಗಿದ್ದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಭೇಟಿ ನೀಡಿದರು. ಕಾರ್ಖಾನೆಗಳನ್ನು ಜಾಲಾಡಿ ದರು. ಸ್ವದೇಶಕ್ಕೆ ಮರಳಿದ್ದೇ ತಡ, 1877ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ‘ಎಂಪ್ರೆಸ್ ಮಿಲ್ಸ್’ ಕಾರ್ಖಾನೆ ಪ್ರಾರಂಭ ಮಾಡಿದರು. ಹೀಗೆ ಆಧುನಿಕ ತಂತ್ರಜ್ಞಾನ ಭಾರತಕ್ಕೆ ಬಂತು.
ಅದು ‘ಸ್ವದೇಶಿ ಮಿಲ್’ಗಳೆಂದೇ ಖ್ಯಾತಿ ಪಡೆಯಿತು. ದೇಶದಲ್ಲೇ ಹತ್ತಿ ಬಟ್ಟೆಗಳು ಸಿದ್ಧಗೊಳ್ಳತೊಡಗಿದವು. ವಿದೇಶಿ ಸರಕುಗಳನ್ನು ತಿರಸ್ಕರಿಸಿ ಎಂಬ ಕರೆಯನ್ನು ಟಾಟಾ ನೀಡಿದ ವಿಧಾನ ಅದು. ಸ್ವದೇಶಿ ಚಳವಳಿಯನ್ನು ಕೃತಿಯಲ್ಲಿ ತೋರಿದ ಕೀರ್ತಿ ಜೆ.ಎನ್. ಟಾಟಾಗೆ ಸಲ್ಲಬೇಕು. ಇನ್ನೊಂದು ಘಟನೆ ಕೇಳಿ, ಒಮ್ಮೆ ತಮ್ಮ ಇಬ್ಬರು ಬ್ರಿಟಿಷ್ ಸ್ನೇಹಿತರ ಜತೆ ಜೆ.ಎನ್. ಟಾಟಾ ಪ್ರತಿಷ್ಠಿತ ಹೋಟೆಲ್ಲೊಂದಕ್ಕೆ ಹೊರಟಿದ್ದರು. ಶ್ವೇತವರ್ಣೀಯರಾದ ಬ್ರಿಟಿಷರಿಗೇನೋ ನಗುಮುಖದ ಸ್ವಾಗತ ದೊರೆಯಿತು. ಆದರೆ ಭಾರತೀಯನೆಂಬ ಏಕೈಕ ಕಾರಣಕ್ಕೆ ಟಾಟಾ ಅವರನ್ನು ಹೊರದಬ್ಬಲಾಯಿತು. ಅದರ ಮೆಟ್ಟಿಲಿನಿಂದ ಕೆಳಗಿಳಿಯುವಾಗಲೇ ವಿಶ್ವದರ್ಜೆಯ ಹೋಟೆಲ್ ಗಳನ್ನು ನಿರ್ಮಿಸುವ, ನಡೆಸುವ ತಾಕತ್ತು ಭಾರತೀಯರಿಗೂ ಇದೆ ಎಂಬುದನ್ನು ಸಾಬೀತುಪಡಿಸುವ ಸಂಕಲ್ಪ ಮಾಡಿದರು. 1902ರಲ್ಲಿ ‘ತಾಜ್ ಗ್ರೂಪ್ ಆಫ್ ಹೋಟೆಲ್ಸ್’ ಪ್ರಾರಂಭವಾಯಿತು.
1903ರಲ್ಲಿ ‘ಹೋಟೆಲ್ ತಾಜ್‌ಮಹಲ್’ ಸಿದ್ಧಗೊಂಡಾಗ ಟಾಟಾ ಬರೀ ಆಡುವವರಲ್ಲ, ಮಾಡಿಯೂ ತೋರುವವರು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಹಾಗಂತ ಟಾಟಾ ಕೇವಲ ಒಬ್ಬ ಶುದ್ಧ ಉದ್ಯಮಿಯಾಗಿರಲಿಲ್ಲ. ಆಳುವ ಸರಕಾರಕ್ಕೇ ಇರದಿದ್ದ ಸಾಮಾಜಿಕ ಕಾಳಜಿ ಅವರಲ್ಲಿತ್ತು. ಆದ್ದರಿಂದಲೇ 1886ರಷ್ಟು ಹಿಂದೆಯೇ ‘ನಿವೃತ್ತಿ ವೇತನ ನಿಧಿ’ ಯನ್ನು ಆರಂಭಿಸಿದರು. 1895ರಲ್ಲಿ ಅಪಘಾತ ಪರಿಹಾರ ಯೋಜನೆ ಆರಂಭವಾಯಿತು. ಇಂತಹ ಪ್ರಯತ್ನ ಭಾರತದಲ್ಲೇ ಮೊದಲನೆಯದಾಗಿತ್ತು. 1892ರಲ್ಲೇ ಟಾಟಾ ದಾನ ದತ್ತಿ ಸಂಸ್ಥೆ ಸ್ಥಾಪನೆ ಮಾಡಿ, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಸ್ಕಾಲರ್‌ಷಿಪ್ ಆರಂಭಿಸಿದರು. ಒಂದು ಕಾಲಕ್ಕೆ ಎಂತಹ ಪರಿಸ್ಥಿತಿ ಸೃಷ್ಟಿಯಾಯಿತೆಂದರೆ ಪ್ರತಿಷ್ಠಿತ ಭಾರತೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೊರಬರುತ್ತಿದ್ದ ಐವರಲ್ಲಿ ಇಬ್ಬರು ಟಾಟಾ ವಿದ್ಯಾರ್ಥಿವೇತನ ಪಡೆದವರಾಗಿರುತ್ತಿದ್ದರು! ಈ ನಡುವೆ 1893ರಲ್ಲಿ ‘ಎಂಪ್ರೆಸ್ ಆಫ್ ಇಂಡಿಯಾ’ ಹಡಗು ಜಪಾನ್‌ನಿಂದ ಅಮೆರಿಕದತ್ತ ಪಯಣ ಆರಂಭಿಸಿತ್ತು.
ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಸ್ಥಾಪಿಸುವ ಆಸೆಯಿಂದ ತಾಂತ್ರಿಕ ಸಹಕಾರ ಯಾಚಿಸುವ ಸಲುವಾಗಿ ಟಾಟಾ ಅಮೆರಿಕಕ್ಕೆ ಹೊರಟು ನಿಂತಿದ್ದರು. ಇತ್ತ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ವಾಮಿ ವಿವೇಕಾನಂದರೂ ಅದೇ ಹಡಗೇರಿದ್ದರು! ಅಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಅಮೆರಿಕವನ್ನು ಸೇರುವ ವೇಳೆಗೆ ಜೆ.ಎನ್. ಟಾಟಾ ವಿವೇಕಾನಂದರ ಸ್ವಾವಲಂಬನೆ ತತ್ತ್ವಕ್ಕೆ ಮಾರು ಹೋಗಿದ್ದರು. ಅದು ಹೊಸ ಶಕೆಯ ಆರಂಭಕ್ಕೆ ನಾಂದಿಯಾಯಿತು. ವಿವೇಕಾನಂದರ ಆಶಯದಂತೆ ಎಲ್ಲ ವಿಧದ ವೈಜ್ಞಾನಿಕ ಸಂಶೋಧನೆಗೆ ಅವಕಾಶ ಕಲ್ಪಿಸುವ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು. ಭಾರತಕ್ಕೆ ವಾಪಸ್ಸಾದ ಟಾಟಾ, 1898 ಡಿಸೆಂಬರ್ 31ರಂದು ಲಾರ್ಡ್ ಕರ್ಝನ್ ಮುಂದೆ ರೂಪುರೇಷೆಯನ್ನಿಟ್ಟರು. ಆದರೆ ಆತ ಅಡ್ಡಗಾಲು ಹಾಕಿದ. ಆದರೂ ಛಲ ಬಿಡದ ಟಾಟಾ ಬ್ರಿಟನ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತಾವವನ್ನಿಟ್ಟರು.
ಮನವಿಯ ಮೇರೆಗೆ ಕೂಡಲೇ ಭಾರತ ಪ್ರವಾಸ ಕೈಗೊಂಡ ನೊಬೆಲ್ ಪ್ರಶಸ್ತಿ ವಿಜೇತ ವಿಲಿಯಂ ರಾಂಸೆ ಬೆಂಗಳೂರಿನ ಮಲ್ಲೇಶ್ವರ ಬಳಿ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ವನ್ನು ನಿರ್ಮಿಸಲು ಸಮ್ಮತಿ ಸೂಚಿಸಿದ. ದುರದೃಷ್ಟವಶಾತ್ ಆಸೆ ಕೈಗೂಡುವ ಮೊದಲೇ 1904, ಮೇ 19ರಂದು ಜೆ.ಎನ್. ಟಾಟಾ ನಮ್ಮನ್ನಗಲಿದರು. ಆದರೇನಂತೆ ಅವರ ಉತ್ತರಾಧಿಕಾರಿಗಳಾಗಿ ಬಂದ ಸರ್ ದೊರಾಬ್ಜಿ ಟಾಟಾ, ಜೆ.ಆರ್.ಡಿ. (ಜಹಾಂಗೀರ್ ರತನ್‌ಜಿ ದಾದಾ ಭಾಯಿ ಟಾಟಾ) ಟಾಟಾ, ಜೆ.ಎನ್. ಟಾಟಾರ ಪರಂಪರೆಯನ್ನು ಮುಂದುವರಿಸಿದರು. 1907ರಲ್ಲಿ ಬಿಹಾರದ ಜೆಮ್‌ಷೆಡ್‌ಪುರದಲ್ಲಿ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ಟೆಸ್ಕೋ) ಸ್ಥಾಪನೆ ಮಾಡುವುದರೊಂದಿಗೆ ಜೆ. ಎನ್. ಟಾಟಾ ಅವರ ಕನಸುಗಳಲ್ಲೊಂದನ್ನು ಸಾಕಾರಗೊಳಿಸಿದರು.
1910ರಲ್ಲಿ ಟಾಟಾ ಜಲವಿದ್ಯುತ್ ಪೂರೈಕೆ ಕಂಪನಿ ಜನ್ಮ ತಳೆಯುವುದರೊಂದಿಗೆ ಬಾಂಬೆಗೆ ಕೈಗೆಟುಕುವ ಬೆಲೆಯಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಕನಸೂ ಈಡೇರಿತು. ಅಷ್ಟೇ ಅಲ್ಲ, 1911ರಲ್ಲಿ ಬೆಂಗಳೂರಿನ ಮಲ್ಲೇಶ್ವರ ಬಳಿ 372 ಎಕರೆ ವಿಸ್ತಾರದಲ್ಲಿ ಭವ್ಯ ಭಾರತೀಯ ವಿಜ್ಞಾನ ಮಂದಿರ ಹೊರಹೊಮ್ಮಿತು. ಅದು ಈ ದೇಶದ ವೈಜ್ಞಾನಿಕ ಶಕೆಯನ್ನೇ ಆರಂಭಿಸಿತು. ಈ ದೇಶ ಕಂಡ ಮಹಾನ್ ವಿಜ್ಞಾನಿಗಳಾದ ಸಿ.ವಿ. ರಾಮನ್, ಹೋಮಿ ಜೆ. ಭಾಭಾ, ವಿಕ್ರಂ ಸಾರಾಭಾಯ್, ಜೆ.ಸಿ. ಘೋಷ್, ಎಂ.ಎಸ್ ಥಾಕರ್, ಎಸ್. ಭಗವಂತಮ್, ಸತೀಶ್ ಧವನ್, ಸಿ.ಎನ್.ಆರ್. ರಾವ್ ಮತ್ತು ನಮ್ಮ ರಾಜಾರಾಮಣ್ಣ ಇವರೆಲ್ಲರೂ ಟಾಟಾ ಕೂಸಾದ ಐಐಎಸ್‌ಸಿನ ಜತೆ ಗುರುತಿಸಿಕೊಂಡವರೇ ಆಗಿದ್ದಾರೆ. ಇತ್ತ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು.
ನೆಹರು ಪ್ರಧಾನಿ ಗದ್ದುಗೆಯ ಕನಸು ಕಾಣುತ್ತಿದ್ದರು. ‘ರಾಷ್ಟ್ರಪಿತ’ ಗಾಂಧೀಜಿ ಕೋಮು ಸೌಹಾರ್ದತೆಯ ಮಂತ್ರ ಪಠಿಸುತ್ತಿದ್ದರು. ಆದರೆ ಜೆ. ಆರ್.ಡಿ. ಮತ್ತು ಅವರ ಪ್ರಾಣ ಸ್ನೇಹಿತ ಹೋಮಿ ಜೆ. ಭಾಭಾ ‘ಅಣು ತಂತ್ರಜ್ಞಾನ’ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಲಂಡನ್‌ನ ಕಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡುತ್ತಿದ್ದ ರಾಜಾರಾಮಣ್ಣನವರನ್ನು ಭೇಟಿ ಮಾಡಿದ ಹೋಮಿ ಭಾಭಾ, ನ್ಯೂಕ್ಲಿಯರ್ ಸೈನ್ಸ್ ಓದುವಂತೆ ಪ್ರೇರೇಪಣೆ ನೀಡಿದರು. ಅಷ್ಟೇ ಅಲ್ಲ, ಜೆ.ಎನ್. ಟಾಟಾ ಸ್ಕಾಲರ್‌ಷಿಪ್ ಕೊಡಿಸಿ ರಾಜಾರಾಮಣ್ಣನವ ರನ್ನು ಅಣುವಿಜ್ಞಾನಿಯಾಗಿಸಿ ಸ್ವದೇಶಕ್ಕೆ ಕರೆತಂದರು. ಅದೇ ರಾಮಣ್ಣ ಈ ದೇಶದ ನಿಜವಾದ ಅಣುಜನಕರಾದರು! ಕೇವಲ ಅಮೆರಿಕ, ರಷ್ಯಾಗಳಿಗೆ ಸಾಧ್ಯವಿದ್ದ ‘ನ್ಯೂಕ್ಲಿಯರ್ ರಿಯಾಕ್ಟರ್’ ಅನ್ನು ನಾವೇ ರೂಪಿಸುತ್ತೇವೆ ಎಂದು ಹೋಮಿ ಭಾಭಾ ಮುಂದಾದಾಗ ಸಕಲ ಪ್ರೋತ್ಸಾಹ ನೀಡುವುದನ್ನು ಬಿಟ್ಟು ಪ್ರಧಾನಿ ನೆಹರು ವಿರೋಧ ವ್ಯಕ್ತಪಡಿಸಿದರು. ಆದರೂ ಜೆ.ಆರ್.ಡಿ. ಟಾಟಾ ಧೃತಿಗೆಡಲಿಲ್ಲ. ಅಂತಹ ತಂತ್ರಜ್ಞಾನ ರೂಪಿಸಲು ಬೇಕಾಗಿದ್ದ ಸಕಲ ಸವಲತ್ತುಗಳನ್ನು, ಹಣಕಾಸು ಸೌಲಭ್ಯವನ್ನು ಸ್ವತಃ ಪೂರೈಸಿದರು.
ಆ ಪ್ರಯತ್ನದ ಫಲವಾಗಿ ಮೊದಲ ಅಣು ರಿಯಾಕ್ಟರ್ ರೂಪುಗೊಂಡಿತು. ಅದು ದೇಶದ ಅಣ್ವಸ್ತ್ರ ತಯಾರಿಕೆಗೆ ಭಾಷ್ಯ ಬರೆಯಿತು. ಇಂದು ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಿದ್ದರೆ, ನಮ್ಮ ದೇಶದ ವಿರುದ್ಧ ದಾಳಿ ಮಾಡಲು ಶತ್ರುಗಳು ಹಿಂದೇಟು ಹಾಕುತ್ತಿದ್ದರೆ ಅದಕ್ಕೆ ಟಾಟಾ ಕಂಪನಿ ಕೂಡ ಕಾರಣ. ಅದು ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದ ಕಂಪನಿ. ಒಂದಾನೊಂದು ಕಾಲದಲ್ಲಿ ಅಮೆರಿಕದಲ್ಲೊಂದು ಮಾತಿತ್ತು “What is good for General Motors is good for America”. ಆದರೆ ನಮ್ಮ ಟಾಟಾ ಮಾತ್ರ “What is good for India is good for TATA’  ಎಂದು ಭಾವಿಸಿರುವ ಕಂಪನಿ. ಇಂಥ ಕಂಪನಿ ಬಗ್ಗೆ ಹೊಸ ಸಿಇಒ ಚಂದ್ರಶೇಖರನ್ ನೆಪದಲ್ಲಿ ಮತ್ತೊಮ್ಮೆ ಬರೆಯಬೇಕೆನಿಸಿತು. ನಟರಾಜನ್ ಚಂದ್ರಶೇಖರನ್. ಈಗ ಟಾಟಾ ಸಮೂಹದ ಹೊಸ ಸಿಇಒ. ಜನವರಿ 12ಕ್ಕೆ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಇದ್ದ ಸಿಇಒ ಸೈರಸ್ ಮಿಸ್ಟ್ರಿ ಅವರನ್ನು ಅಕ್ಟೋಬರ್ 24ರಂದು ಸಿಇಒ ಸ್ಥಾನದಿಂದ ಟಾಟಾ ಕಂಪನಿ ವಜಾ ಮಾಡಿತ್ತು.
ಇದಾದ ನಂತರ ಬಂದವರೇ ನಟರಾಜನ್ ಚಂದ್ರಶೇಖರನ್. ಬೇರೆ ಇನ್ಯಾವುದೋ ಕಂಪನಿಗೆ ಸಿಇಒ ಬಂದರೆ ಅದು ಸುದ್ದಿಯಾಗುತ್ತಿರಲಿಲ್ಲ. ಆದರೆ ಟಾಟಾ ವಿಷಯದಲ್ಲಿ ಹಾಗಲ್ಲ. ದೊಡ್ಡ ಸುದ್ದಿ ಇದು. ಇದಕ್ಕೆ ಕಾರಣವೂ ಇದೆ. ನೀವು ಒಂದು ವಿಚಾರವನ್ನು ಗಮನಿಸಿ, ಟಾಟಾ ಸಂಸ್ಥೆಗೆ ಇದುವರೆಗೂ ಸಿಇಒ ಆದವರೆಲ್ಲರೂ ಪಾರ್ಸಿಗಳೇ. ಟಾಟಾ ಕಂಪನಿಯೇನು ಕುಟುಂಬದ ವ್ಯವಹಾರವಾಗಿರದಿದ್ದರೂ ಪಾರ್ಸಿಯಲ್ಲದವರನ್ನು ಸಿಇಒ ಆಗಿ ನೇಮಕ ಮಾಡಿಕೊಂಡಿರಲಿಲ್ಲ. ಆದರೆ ವಿಶೇಷವೆಂಬಂತೆ ಮೊದಲ ಬಾರಿ ಕಂಪನಿಯ ಇತಿಹಾಸದಲ್ಲೇ ಪಾರ್ಸಿಯಲ್ಲದವನೊಬ್ಬನನ್ನು ಸಿಇಒ ಆಗಿ ನೇಮಕ ಮಾಡಿದೆ.
ಚಂದ್ರಶೇಖರ್ ಯಾರಿಗೇನು ಕಡಿಮೆಯಿಲ್ಲ. ಅವರೂ ಒಳ್ಳೆಯ ಹಿನ್ನೆಲೆಯುಳ್ಳವರೇ. ಅವರ ಯಶೋಗಾಥೆ ಸಿನಿಮಾ ರೀತಿಯಲ್ಲಿದೆ. 1987ರಲ್ಲಿ ಸಾಧಾರಣ ಕಂಪ್ಯೂಟರ್ ಎಂಜಿನಿಯರ್ ಆಗಿ ಟಿಸಿಎಸ್ ಸೇರಿದ್ದರು. ಆದರೆ 2009ರಷ್ಟರ ಹೊತ್ತಿಗೆ ಅವರ ಸ್ಥಾನ ಬದಲಾಗಿತ್ತು. ಯಾವುದೋ ಟೀಂ ಲೀಡರ್ ಅಥವಾ ಇನ್ಯಾವುದೋ ಹೆಡ್ ಆಗಿ ಅಲ್ಲ. ಬದಲಿಗೆ ಸಿಇಒ ಆಗಿ. ತಾನು ಕೆಲಸ ಮಾಡಿದ ಕಂಪನಿಯಲ್ಲೇ ಸಿಇಒ ಆಗುತ್ತಾಾರೆ ಎಂದರೆ ಅದಕ್ಕಿಂತ ಸಾಧನೆ ಮತ್ತೊಂದು ಬೇಕಾ? ಆ ಸ್ಥಾನಕ್ಕೇರಬೇಕಾದರೆ ಅವರು ಕಂಪನಿಗೆ ಎಷ್ಟು ದಿನ ಬೆವರೊಂದೇ ಅಲ್ಲದೇ ರಕ್ತ ಸುರಿಸಿದ್ದಿರಬಹುದು? ಟಿಸಿಎಸ್‌ನ ಸಿಇಒ ಆದಮೇಲೆ ಸುಮ್ಮನೆ ಕೂರದೇ ಸತತ ಪ್ರಯತ್ನದಿಂದ ಕಂಪನಿಯನ್ನು ಉನ್ನತಮಟ್ಟಕ್ಕೆ ಕರೆದೊಯ್ದು, ಶೇರ್ ಮಾರುಕಟ್ಟೆಯಲ್ಲೂ ಕಂಪನಿಯನ್ನು ಒಳ್ಳೆಯ ಸ್ಥಾನದಲ್ಲಿರಿಸಿದವರು.
ಇನ್ನು ಟಾಟಾ ಕಂಪನಿಯ ಬಗ್ಗೆ ಹೇಳುವುದಾದರೆ, ಇದು ಬೇರೆಲ್ಲ ಕಂಪನಿಗಿಂತ ರಾಷ್ಟ್ರೀಯತಾವಾದದಲ್ಲಿ ಎತ್ತಿದ ಕೈ. ಜಗತ್ತಿನಲ್ಲಿ ಇನ್ಯಾವುದೇ ಸಮಸ್ಯೆಯಿರಲಿ, ಇದಕ್ಕೆ ದೇಶ ಮೊದಲು. ಮಿಕ್ಕಿದ್ದು ಆಮೇಲೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರಕಾರ ಎಲ್ಲ ಹಿಂದುಳಿದ ಅಥವಾ ಅಲ್ಪಸಂಖ್ಯೆಯಲ್ಲಿರುವ ಸಮುದಾಯಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಮೀಸಲು ಕೊಡಲು ತೀರ್ಮಾನಿಸಿದರು. ಈ ಮೀಸಲಿನ ಜತೆಗೆ ವಿಶೇಷ ಸ್ಥಾನಮಾನವನ್ನೂ ಕೊಟ್ಟರು. ಆದರೆ ಒಂದು ಸಮುದಾಯ ಮಾತ್ರ ಇದನ್ನು ಸುತಾರಾಂ ಒಪ್ಪಲಿಲ್ಲ. ನಮಗೆ ಮೀಸಲು ಬೇಡ. ನಾವೇನು ವಿಶೇಷ ಅಲ್ಲ.
ಇತರ ದೇಶವಾಸಿಗಳಂತೆ ನಾವೂ ಬದುಕುತ್ತೇವೆ ಎಂದು ಹೇಳಿ, ಮೀಸಲನ್ನೇ ವಿರೋಧಿಸಿದ ಸಮುದಾಯ ಎಂದರೆ ಅದು ಪಾರ್ಸಿ ಸಮುದಾಯ. ಸಾಮಾನ್ಯವಾಗಿ ಭಾರತ ರತ್ನ ಕೊಡುವುದು ದೇಶ ಸೇವೆ ಮಾಡಿದವರಿಗೆ ಅಥವಾ ದೇಶಕ್ಕೆ ಕೀರ್ತಿ ತಂದಂಥ ವ್ಯಕ್ತಿಗಳಿಗೆ. ಉದ್ಯಮಿಗಳಿಗಂತೂ ಭಾರತರತ್ನ ಕೊಡುವ ಮಾತೇ ಇಲ್ಲ. ಆದರೆ ಜೆಆರ್‌ಡಿ ಟಾಟಾ ಅವರಿಗೆ ಭಾರತ ರತ್ನ ಗೌರವ ನೀಡಿದ್ದಾರೆ ಎಂದರೆ, ಟಾಟಾ ಕಂಪನಿ ದೇಶಸೇವೆಯಲ್ಲಿ ತನ್ನನ್ನು ತಾನು ಎಷ್ಟು ತೊಡಗಿಸಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ !

tata

Comments are closed.