Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!

ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!

ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!

ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಿಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ ಮಾಡಿದ ವ್ಯಕ್ತಿ ಡಾ. ಸುಬ್ರಹ್ಮಣ್ಯನ್ ಸ್ವಾಮಿ! ಹಾಗಂತ ಖ್ಯಾತ ಅಂಕಣಕಾರ ಆರ್. ಜಗನ್ನಾಥನ್ ಮೊನ್ನೆ ಹೇಳಿದ್ದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ! ನಿಮಗೊಂದು ವೈಯಕ್ತಿಕ ಅನುಭವವನ್ನು ಹೇಳಬೇಕು.

ಗುರುವಾರ ಅಗಸ್ಟಾ ವೆಸ್ಟ್ ಲ್ಯಾಂಡ್  ಹೆಲಿಕಾಪ್ಟರ್ ವಿಚಾರ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗುವುದಿತ್ತು. ಮಧ್ಯಾಹ್ಮ 3.30ಕ್ಕೆ ಸ್ವಾಮಿ ಮಾತನಾಡಲಿದ್ದಾರೆ ಎಂದು ಹಿರಿಯ ಪತ್ರಕರ್ತರಾದ ಆರ್. ಗೋಪಾಲನ್ ಹೇಳಿದರು. ನಾನು ಹಾಗೂ ಬೀದರ್ ಸಂಸದ ಭಗವಂತ ಖೂಬಾ ಅವರು ರಾಜ್ಯಸಭೆಗೆ ಧಾವಿಸಿ 3 ಗಂಟೆಯಿಂದಲೇ ಕಾದೆವು. ಗಂಟೆ ನಾಲ್ಕಾದರೂ ಸ್ವಾಮಿ ಹೆಸರನ್ನು ಉಪಸಭಾಪತಿ ಕರೆಯುತ್ತಿಲ್ಲ. ಕಾದು ಕಾದು ಬೇಸತ್ತು ಕಾಫಿಗಾಗಿ ಸೆಂಟ್ರಲ್ ಹಾಲ್ ಗೆ ಬಂದೆವು. ಕಾಂಗ್ರೆಸಿನ ಬಹುತೇಕ ರಾಜ್ಯಸಭಾ ಸದಸ್ಯರು ಸೆಂಟ್ರಲ್ ಹಾಲ್ ನಲ್ಲೇ ಇದ್ದರು.
ಬಂದು ಒಂದೆರಡು ನಿಮಿಷವಾಗುವಷ್ಟರಲ್ಲಿ ಸೆಂಟ್ರಲ್  ನಲ್ಲಿದ್ದ ಅಷ್ಟೂ ಜನ ರಾಜ್ಯಸಭೆ ಸದಸ್ಯರು ಉಸೈನ್ ಬೋಲ್ಟ್ ಪರಕಾಯ ಪ್ರವೇಶ ಮಾಡಿದಂತೆ ಓಡಲಾರಂಭಿಸಿದರು. ಹಾಗಂತ ಸೆಂಟ್ರಲ್ ಹಾಲ್ ನಲ್ಲಿ ಯಾರೂ ಬಾಂಬು ಇಟ್ಟಿರಲಿಲ್ಲ, ಆದರೆ ರಾಜ್ಯಸಭೆಯಲ್ಲಿ ಸ್ವಾಮಿ ಬಾಂಬ್ ಹಾಕಿಬಿಡುತ್ತಾರೆ, ತಮ್ಮ ಅಧಿನಾಯಕಿಯನ್ನು ರಕ್ಷಣೆ ಮಾಡಬೇಕೆಂದು ಕಾಂಗ್ರೆಸಿಗರು ಭಯದಿಂದ ಓಡಿದರೆ, ಲೋಕಸಭೆ ಸದಸ್ಯರು ಟೀವಿ ಮುಂದೆ ನೆರೆದರು. ಡಾ. ಸ್ವಾಮಿ ಅಂದರೆ ಇದೇ! ಅವರನ್ನು Maverick ಎನ್ನಿ, Eccentric ಅಂತ ಕರೆಯಿರಿ, ವಿವಾದಪ್ರಿಯ ಎಂದರೂ ತಪ್ಪಿಲ್ಲ. ಅವರು ಈ ಎಲ್ಲವೂ ಹೌದು.

ಅಟಲ್ ಬಿಹಾರಿ ವಾಜಪೇಯಿ, ಜಯಲಲಿತಾ, ರಾಮಕೃಷ್ಣ ಹೆಗಡೆ, ವಿಪಿ ಸಿಂಗ್, ಚಂದ್ರಶೇಖರ್ರಿಂದ ಎ. ರಾಜಾ, ಟಿ.ಅರ್. ಬಾಲು, ಕರುಣಾನಿಧಿ, ಚಿದಂಬರಂ ಹಾಗೂ ಸೋನಿಯಾ ಗಾಂಧಿವರೆಗೆ ಯಾರನ್ನೂ ಕಾಡದೇ ಬಿಟ್ಟಿಲ್ಲ, ಬಿಡುವ ಜಾಯಮಾನವೂ ಅವರದ್ದಲ್ಲ. ಈ ಸುಬ್ರಹ್ಮಣ್ಯನ್ ಸ್ವಾಮಿಯವರು How to Make Enemies and Antagonise People? ಎಂಬ ಪುಸ್ತಕವನ್ನೇ ಬರೆಯಬಹುದು ಎಂದು ಪತ್ರಕರ್ತ ಪ್ರೇಮ್ ಪಣಿಕ್ಕರ್ ಒಮ್ಮೆ ಕಿಚಾಯಿಸಿದ್ದರು. ಈ ವ್ಯಕ್ತಿ ಯಾವಾಗ ನಿಮ್ಮ ಸ್ನೇಹಿತರಾಗಿರುತ್ತಾರೆ, ಯಾವಾಗ ನಿಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ, ಸ್ವತಃ ಅವರೂ ಸೇರಿದಂತೆ! ಒಮ್ಮೆ, ಎಲ್ ಟಿ ಟಿಇ ಬಗ್ಗೆ ಮೃದುಧೋರಣೆ ತೋರುತ್ತಿರುವ ಮುಖ್ಯಮಂತ್ರಿ ಜಯಲಲಿತಾ ನನ್ನ ಕೊಲೆಗೈಯ್ಯಲು ಒಂದು ಡಜನ್ಗೂ ಹೆಚ್ಚು ಭಾರಿ ಪ್ರಯತ್ನಿಸಿದ್ದಾರೆ, ಪಿತೂರಿ ನಡೆಸಿದ್ದಾರೆ ಎಂದು ಗುರುತರ ಆರೋಪಡಿದ್ದ ಅವರು, 1998ರ ವೇಳೆಗೆ ಜಯಲಲಿತಾ ಅವರ ಪರಮಾಪ್ತರಾಗಿ ಬಿಟ್ಟಿದ್ದರು! ಅಷ್ಟೇಕೆ, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮೊಟ್ಟಮೊದಲ ಬಾರಿಗೆ ಸ್ಥಿರ ಸರಕಾರ ರಚಿಸಲು ಮುಂದಾದಾಗ ಎನ್ ಡಿ ಎ ಮೈತ್ರಿಕೂಟ ಸೇರಿದ ಎಐಎಡಿಎಂಕೆ ಧುರೀಣೆ ಜಯಲಲಿತಾ ಅವರು ಸುಬ್ರಹ್ಮಣ್ಯನ್ ಸ್ವಾಮಿಯವರನ್ನು ಕ್ಯಾಬಿನೆಟ್ ಗೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಇಟ್ಟು ಬಿಟ್ಟರು! ಬಿಜೆಪಿಗೆ ಒಂಥರಾ ಬಿಸಿ ತುಪ್ಪವಾಗಿ ಬಿಟ್ಟಿತು.

ಆದರೆ ಸುಬ್ರಹ್ಮಣ್ಯನ್ ಸ್ವಾಮಿಯಂಥವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದೆಂದರೆ ಬಗಲಿಗೆ ಕೆಂಡ ಕಟ್ಟಿ ಕೊಂಡಂತೆ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತಿತ್ತು. ಈ ಮನುಷ್ಯ ಸುಮ್ಮನೆ ಇರುವವರಲ್ಲ, ಸ್ನೇಹಿತರಾಗಿದ್ದಾಗ ಸಾಕ್ಷ್ಯ ಕಲೆಹಾಕಿ ಸ್ನೇಹ ಕಡಿದುಹೋದ ಮೇಲೆ ಮೈಮೇಲೆ ಎಗರಿ ಬರುತ್ತಾರೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡ ವಾಜಪೇಯಿ, ಸರಕಾರ ರಚಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಸುಬ್ರಹ್ಮಣ್ಯನ್ ಸ್ವಾಮಿ ಮಾತ್ರ ಬಿಲ್ಕುಲ್ ಬೇಡವೆಂದರು. ಅಂತಿಮವಾಗಿ ಸರಕಾರವೇನೋ ರಚನೆಯಾಯಿತು, ಅದರ ಬೆನ್ನಲ್ಲೇ ಸುಬ್ರಹ್ಮಣ್ಯನ್ ಸ್ವಾಮಿ ಅವರ ಟೀಕಾ ಪ್ರಹಾರವೂ ಆರಂಭವಾಯಿತು. ‘ಬಿಜೆಪಿ ಸರಕಾರ ಅಮೆರಿಕದ ಎನ್ರಾ ನ್ ಗೆ  ಅನುಮತಿ ಕೊಟ್ಟಿದ್ದೇಕೆ? ಹದಿಮೂರು ದಿನಗಳ ಕಾಲ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಾಜಪೇಯಿಯವರೇ ಎನ್ರಾನ್ ಯೋಜನೆಗೆ ಯೆಸ್ ಎಂದರು, ಏಕೆ? ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಿಜೆಪಿಗರು ಕೋಕಾ ಕೋಲಾ ಕುಡಿಯುವುದೇಕೆ? ಕೋಲಾ ಬದಲು ನಿಂಬೆ ರಸ ಹೀರಬಹುದಿತ್ತಲ್ಲವೆ?’ ಇಂತಹ ಹತ್ತಾರು ಪ್ರಶ್ನೆಗಳನ್ನು ಹಾಕಿ ಬಿಜೆಪಿಯನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡುಮಾಡಲು ಪ್ರಯತ್ನಿಸಿದರು. ಅದಕ್ಕೂ ಮೊದಲು ವಿ.ಪಿ. ಸಿಂಗ್ ಅವರನ್ನು ಹಣಿಯುವುದಕ್ಕಾಗಿ ಯಾವ ವ್ಯಕ್ತಿಯ ವಿರುದ್ಧ ಆ ಹಿಂದೆ ತೀವ್ರ ಹೋರಾಟ ನಡೆಸಿದ್ದರೋ ಅದೇ ಚಂದ್ರಶೇಖರ್ ಅವರ ಪಕ್ಷ ವಹಿಸಿದ್ದರು. ಸುಬ್ರಹ್ಮಣ್ಯನ್ ಸ್ವಾಮಿಯವರ ನಿಘಂಟಿನಲ್ಲಿ ನಿಷ್ಠೆ, ಬದ್ಧತೆಗಳಿಗೆ ಸ್ಥಾನವೇ ಇರಲಿಲ್ಲ. ಇಂತಹ ವಿಚಿತ್ರ, ಕೆಲವೊಮ್ಮೆ ವಿಕ್ಷಿಪ್ತ ಮನಃಸ್ಥಿತಿಗಳ ನಡುವೆಯೂ ಅವರು ಸರಕಾರಗಳನ್ನು ಮುಜುಗರಕ್ಕೀಡುಮಾಡಿದ್ದು, ಪತನಕ್ಕೆ ಕಾರಣವಾಗಿದ್ದು ಇದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಬೆಳಕಿಗೆ ತಂದು ರಾಮಕೃಷ್ಣ ಹೆಗಡೆಯವರ ಸರಕಾರ ಬೀಳುವುದಕ್ಕೆ ಕಾರಣರಾಗಿದ್ದೇ ಸುಬ್ರಹ್ಮಣ್ಯನ್ ಸ್ವಾಮಿ. ಅವರು ಹೊಸ ಹೊಸ ಪದಗುಚ್ಚಗಳನ್ನು ಹುಟ್ಟು ಹಾಕಿದ್ದೂ ಇದೆ.

ರಾಮಕೃಷ್ಣ ಹೆಗಡೆಯವರ ಮನಃಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರು ” Intellectual Constipation ‘’ನಿಂದ ನರಳುತ್ತಿದ್ದಾರೆ ಎಂದಿದ್ದರು. ಅವರನ್ನು ಯಾರೂ ತನ್ನ ಸ್ನೇಹಿತನೆಂದು ಭಾವಿಸುವುದಕ್ಕಾಗಲಿ, ನಂಬುವುದಕ್ಕಾಗಲಿ, ವಿಶ್ವಾಸವಿಡುವುದಕ್ಕಾಗಲಿ ಸಾಧ್ಯವಿಲ್ಲ ಎಂಬಂಥ ಪರಿಸ್ಥಿತಿ ತಾವೇ ಸೃಷ್ಟಿಸಿಕೊಂಡಿದ್ದರು. ಒಂದು ಹಂತದಲ್ಲಂತೂ ಅವರೊಬ್ಬ ಸಿನಿಕ ಎಂದೇ ದೇಶವಾಸಿಗಳು ಭಾವಿಸುವಂತಾಗಿತ್ತು. ಇಂತಹ ಸುಬ್ರಹ್ಮಣ್ಯನ್ ಸ್ವಾಮಿ ಒಮ್ಮೆಲೆ ಬದಲಾಗಿಬಿಟ್ಟರೆ?!

ಅಂಥದ್ದೊಂದು ಅನುಮಾನ ಕಾಡಲಾರಂಭಿಸಿದೆ. ಅವರ ಹಳೆಯ ತಿಕ್ಕಲುತನಗಳ ನಡುವೆಯೂ ಅವರನ್ನು ನಾವು ಇಷ್ಟಪಡಲು ಸಾಕಷ್ಟು ಕಾರಣಗಳು ಇವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೊಸದೊಂದು ಸೂಚನೆಯೇ ನಮಗೆ ಸಿಗುತ್ತಿದೆ.
ಎಪ್ಪತ್ತಾರು ವರ್ಷದ ಅವರ ನಡತೆಯಲ್ಲಿ ಆಹ್ಲಾದಕರ, ಆಪ್ಯಾಯಮಾನವಾದ ಬದಲಾವಣೆಗಳು ಕಂಡುಬಂದಿವೆ. ಅದರಿಂದ ಸಮಾಜ ಮತ್ತು ದೇಶಕ್ಕೆ ಆಗಾಧ ಒಳಿತಾಗುತ್ತಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಪಿಎಚ್ ಡಿಯನ್ನೂ ಮಾಡಿರುವ, ಇಬ್ಬರು ನೊಬೆಲ್ ಪುರಸ್ಕೃತರ ಜತೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಸುಬ್ರಹ್ಮಣ್ಯನ್ ಸ್ವಾಮಿ ಅವರ ಜ್ಞಾನ, ತಿಳಿವಳಿಕೆಯ ಲಾಭ ದೇಶ ಮತ್ತು ಸಮಾಜಕ್ಕೆ ಲಭ್ಯವಾಗುವ ಎಲ್ಲ ಸಂಕೇತಗಳೂ ಗೋಚರಿಸುತ್ತಿವೆ. ಅವರು ರಾಜಕೀಯದೊಳಗಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ‘ಕ್ರುಸೇಡರ್?’ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಗಿಂತ ಒಬ್ಬ ಸುಬ್ರಹ್ಮಣ್ಯನ್ ಸ್ವಾಮಿ ಸೋನಿಯಾ-ಮನಮೋಹನರ ಕೇಂದ್ರ ಸರಕಾರಕ್ಕೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದ್ದರು.ಇಂದಿಗೂ ಸೋನಿಯಾ ಹಾಗೂ ಅವರ ಕಾಂಗ್ರೆಸ್ ಹೆದರುವುದು ನರೇಂದ್ರ ಮೋದಿಯವರ ಮೌನಕ್ಕೆ, ಸುಬ್ರಹ್ಮಣ್ಯನ್ ಸ್ವಾಮಿಯವರ ಮುಂದಿನ ನಡೆ ಏನೆಂಬ ಊಹೆಗೆ. ಇಷ್ಟಕ್ಕೂ ಅವರು ಯುಪಿಎ ಸರಕಾರವನ್ನು ಮಟ್ಟಹಾಕಿದ್ದು, ಸೊಕ್ಕಡಗಿಸಿದ್ದು, ನಿದ್ದೆಗೆಡಿಸಿದ್ದು ಸಾಮಾನ್ಯ ಸಂಗತಿಯೇ?

1.  ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ವೋಟು ಬೇಡಿದ್ದು, ಕೊನೆಗೆ ಅಧಿಕಾರದ ಗದ್ದುಗೆ ಏರಿದ್ದು ಬಿಜೆಪಿ. ಆದರೆ ಅದೇ ರಾಮನ ಸೇತುವೆಯನ್ನು ಯುಪಿಎ ಸರಕಾರ ಹಾಗೂ ಕರುಣಾನಿಧಿಯವರ ತಮಿಳುನಾಡು ಸರಕಾರ 2007ರಲ್ಲಿ ನಾಶಪಡಿಸಲು ಹೊರಟಾಗ ಬಿಜೆಪಿ ಬೊಬ್ಬೆ ಹಾಕಿತೇ ಹೊರತು, ಬೇರೇನನ್ನೂ ಮಾಡಲಿಲ್ಲ. ಅಂದು ರಾಮಸೇತುವಿನ ರಕ್ಷಣೆಗೆ ಮುಂದಾಗಿದ್ದು ಇದೇ ಸ್ವಾಮಿ. ಸೇತು ಸಮುದ್ರ ಹಡಗು ಕಾಲುವೆ ಯೋಜನೆಯನ್ನು ಕೈಬಿಡುವಂತೆ ಸುಬ್ರಹ್ಮಣ್ಯನ್ ಸ್ವಾಮಿಯವರು 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದರು. ಆದರೆ ಅವರ ಪತ್ರವನ್ನು ಪ್ರಧಾನಿ ನಿರ್ಲಕ್ಷಿಸಿದಾಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸ್ವಾಮಿ, ಯೋಜನೆಗೆ ತಡೆಯಾಜ್ಞೆ ತಂದರು!

2. 1962ರ ಯುದ್ಧದ ನಂತರ ಭಾರತ-ಚೀನಾ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿತ್ತು. ಚೀನಾದ ಜತೆ ಮತ್ತೆ ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡಿದ್ದು ಮೊರಾರ್ಜಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ. ಆದರೆ ಟಿಬೆಟ್ ನಲ್ಲಿರುವ ಹಿಂದು ಧರ್ಮದ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಗೆ 1981ರಲ್ಲಿ ಚೀನಾ ಅವಕಾಶ ನೀಡುವಂತೆ ಮಾಡಿದ್ದು ಸುಬ್ರಹ್ಮಣ್ಯನ್ ಸ್ವಾಮಿಯವರ ಮನವೊಲಿಕೆ ಪ್ರಯತ್ನ.

3. ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧ ಆರಂಭಿಸಿದ್ದು ಮಾಜಿ ಪ್ರಧಾನಿ ನರಸಿಂಹ ರಾವ್, ಅದನ್ನು ಗಟ್ಟಿಗೊಳಿಸಿದ್ದು, ರಕ್ಷಣಾ ಒಪ್ಪಂದಗಳವರೆಗೂ ಕೊಂಡೊಯ್ದಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ 1982ರಲ್ಲಿ ಇಸ್ರೇಲ್ ಗೆ  ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ ಭಾರತೀಯ ರಾಜ ಕಾರಣಿ ಸುಬ್ರಹ್ಮಣ್ಯನ್ ಸ್ವಾಮಿ. ಆಗಿನ ಖ್ಯಾತ ಇಸ್ರೇಲಿ ನಾಯಕ ಇಝೆಲ್ ರಬಿನ್, ಪ್ರಧಾನಿ ಮೆನಕಿಮ್ ಬೆಗಿನ್ ಅವರನ್ನು ಭೇಟಿಯಾಗುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಸ್ಥಾಪನೆಗೆ ಪೂರಕ ಪ್ರಯತ್ನ ಮಾಡಿದರು.

4. ಇವೆಲ್ಲಕ್ಕಿಂತ ಮುಖ್ಯವಾಗುವುದು 2ಜಿ ಹಗರಣದ ಆಳ ಮತ್ತು ಹರವನ್ನು ತೆರೆದಿಡುವಲ್ಲಿ ಸ್ವಾಮಿ ವಹಿಸಿದ ಪಾತ್ರ. ಟೆಲಿಕಾಂ ಮಾಜಿ ಸಚಿವ ಎ. ರಾಜ ರಾಜಿನಾಮೆ ನೀಡಿದ್ದು 2011ರಲ್ಲಾಗಿದ್ದರೂ ಸುಬ್ರಹ್ಮಣ್ಯನ್ ಸ್ವಾಮಿ 2008ರಿಂದಲೇ ಆತನ ಹಿಂದೆ ಬಿದ್ದಿದ್ದರು, ಹಗರಣವನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದರು. ರಾಜ ಅವರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು 2008ರಲ್ಲಿ ಬರೆದ 5 ಪತ್ರಗಳನ್ನು ಪ್ರಧಾನಿ ಕಸದ ಬುಟ್ಟಿಗೆ ಎಸೆದಾಗ, ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುಪ್ರೀಂಕೋರ್ಟ್ ರಾಜ ಸೇರಿದಂತೆ ಉದ್ಯಮ ಸಂಸ್ಥೆಗಳ ದೊಡ್ಡ ದೊಡ್ಡ ತಲೆಗಳ ಪಾತ್ರವನ್ನೂ ತಲಾಷ್ ಮಾಡಬೇಕೆಂದು ಸಿಬಿಐಗೆ ನಿರ್ದೇಶನ ನೀಡಿತು. ಅಲ್ಲದೆ ಸಿಬಿಐ ತನಿಖೆ ಮೇಲೆ ತಾನೇ ನಿಗಾ ಇಟ್ಟಿತು.
ಅದರ ಪರಿಣಾಮವೇ ಇಂದು ಎಲ್ಲರೂ ತಿಹಾರ್ ಜೈಲು ಸೇರಿರುವುದು. ಹಾಗಂತ ಸ್ವಾಮಿ ಸುಮ್ಮನಾಗಲಿಲ್ಲ. ಆಗ ಗೃಹ ಸಚಿವರಾಗಿದ್ದ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ರಾಜಾ ಜತೆ ಸಮಾನ ಪಾಲುದಾರ ಎಂದು ಚಿದಂಬರಂ ಅವರನ್ನೂ ಕಟಕಟೆಗೆ ಎಳೆದು ತರಲು ಸ್ವಾಮಿ ಮುಂದಾಗಿದ್ದಾರೆ. ಶಿವಗಂಗಾದಿಂದ ಅಕ್ರಮವಾಗಿ ಚುನಾಯಿತರಾಗಿದ್ದಾರೆಂದು ಚಿದಂಬರಂ ಆಯ್ಕೆಯನ್ನು ಪ್ರಶ್ನಿಸಿ ಕೋರ್ಟ್ ಗೂ  ಹೋಗಿದ್ದರು. ಸೋನಿಯಾ ಗಾಂಧಿಯವರನ್ನೂ ಬಿಟ್ಟಿಲ್ಲ. ಸೋನಿಯಾ ಗಾಂಧಿಯವರನ್ನು ಒಬ್ಬ ಭ್ರಷ್ಟ ಮಹಿಳೆ ಎಂದು ಕರೆಯುವ, ಹಾಗೆ ಕರೆದೂ ಜಯಿಸುವ ತಾಕತ್ತು ಈ ದೇಶದಲ್ಲಿ ಯಾರಿಗಾದರೂ ಇದ್ದರೆ ಅದು ಸುಬ್ರಹ್ಮಣ್ಯನ್ ಸ್ವಾಮಿಯವರಿಗೆ ಮಾತ್ರ!

ಸಾವಿರಾರು ಕೋಟಿ ರು. ಗಳನ್ನು ಆಕೆ ನುಂಗಿದ್ದಾರೆ ಎಂದು ಸ್ವಾಮಿ ಬಹಿರಂಗ ಆಪಾದನೆ ಮಾಡಿದ್ದಾರೆ. ಹೊಸ ದೆಹಲಿಯಲ್ಲಿರುವ ಅವರ ನಿವಾಸದ ಮೇಲೆ ಕಾಂಗ್ರೆಸಿಗರು ದಾಳಿ ಮಾಡಿದಾಗಲೂ ಸ್ವಾಮಿ ಸುಮ್ಮನಾಗಲಿಲ್ಲ.

ಈ ಮಧ್ಯೆ ಮುಂಬೈ ಭಯೋತ್ಪಾದಕ ದಾಳಿಯ ನಂತರ ಡಿಎನ್ಎ ಪತ್ರಿಕೆಗೆ ಬರೆದ ‘ಹೌ ಟು ವೈಪ್ ಔಟ್ ಇಸ್ಲಾಮಿಕ್ ಟೆರರ್ರಿಸಂ’ ಎಂಬ ಅವರ ಲೇಖನ ‘ಸಿಕ್ ’ಯುಲರ್  ವಾದಿಗಳಿಂದ ತೀವ್ರ ಟೀಕೆಗೆ ಒಳಗಾದರೂ ಸ್ವಾಮಿ ಸತ್ಯವಾದ ಮಾತುಗಳನ್ನಾಡಿದ್ದರು. ಕೇರಳದಲ್ಲಿ ತಲೆಯೆತ್ತುತ್ತಿರುವ ಇಸ್ಲಾಮಿಕ್ ಬ್ಯಾಂಕಿಂಗ್ ವಿರುದ್ಧ ಹೋರಾಡಿದ್ದೂ ಸ್ವಾಮಿಯವರೇ ಹೊರತು ಬಿಜೆಪಿಯಲ್ಲ. ಯುಪಿಎ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್ಎಸಿ) ಮುಖ್ಯಸ್ಥೆಯಾಗಿದ್ದ ಸೋನಿಯಾ ಗಾಂಧಿಯವರ ವಿರುದ್ಧ ದೆಹಲಿಯಲ್ಲಿ ಎಫ್-ಐಆರ್ ದಾಖಲಿಸಿದ್ದು ಮಾತ್ರವಲ್ಲ, ಎನ್ಎಸಿ ತರಲು ಹೊರಟಿರುವ ಕೋಮುಹಿಂಸಾಚಾರ ತಡೆ ಕಾಯಿದೆ ಹಿಂದುಗಳಿಗೆ ಹೇಗೆ ಮಾರಕವಾಗಲಿದೆ ಮತ್ತು ಹಿಂದುಗಳನ್ನು ಹಣಿಯುವ ಉದ್ದೇಶ ಹೊಂದಿದೆ ಎಂಬುದನ್ನು ತಮ್ಮ ದೂರಿನಲ್ಲಿ ಪರಿ ಪರಿಯಾಗಿ ವಿವರಿಸಿದರು.

ಹೀಗೆ ಅವರೊಬ್ಬ ಹಿಂದುಪರ ‘ಕ್ರೆಡಿಬಲ್ ವಾಯ್ಸ್’ಆಗಿ ಹೊರಹೊಮ್ಮಿದರು. ಹಾಗಾಗಿ ರಾಷ್ಟ್ರವಾದಿಗಳ ಮನಸು ಮತ್ತು ಹೃದಯಕ್ಕೆ ಹತ್ತಿರವಾಗಿದ್ದಾರೆ. ಪ್ರಜಾತಾಂತ್ರಿಕ ಮಾರ್ಗದ ಮೂಲಕ, ಕೋರ್ಟ್ ಗೆ ಎಳೆಯುವ ಮೂಲಕ ಭ್ರಷ್ಟರನ್ನು ಮಟ್ಟಹಾಕುತ್ತಿದ್ದಾರೆ, ನಡುಕ ಹುಟ್ಟಿಸುತ್ತಿದ್ದಾರೆ. ಅವರ ಪಾಲಿಗೆ ‘ಸ್ವಾಹಾ’ ಕಾರ್ಯವನ್ನು ಬಯಲಿಗೆಳೆಯುವುದೇ ‘ಸ್ವಾಮಿ’ಕಾರ್ಯ!
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಮ್ಮ-ಮಗನನ್ನು ಕಟಕಟೆಗೆ ತಂದು ನಿಲ್ಲಿಸಿದ್ದ ಸ್ವಾಮಿ, ಅಗಸ್ಟಾ ವೆಸ್ಟ್  ಲ್ಯಾಂಡ್  ಪ್ರಕರಣವನ್ನಿಟ್ಟುಕೊಂಡು ಬುಡವನ್ನೇ ಅಲುಗಾಡಿಸುತ್ತಿದ್ದಾರೆ. ಇದುವರೆಗೂ ಅಭಿವೃದ್ಧಿ ಕಾರ್ಯ ಮಾಡಲು ಲೋಕಸಭೆಯಲ್ಲಿ ಗುಜರಾತಿನ ಸಿಂಹ ಮಾತ್ರವಿತ್ತು. ಈಗ ಭ್ರಷ್ಟರ ಎದೆಯಲ್ಲಿ ನಡುಕವನ್ನುಂಟು ಮಾಡಲು ರಾಜ್ಯಸಭೆಗೆ ಹುಲಿಯೂ ಬಂದಿದೆ ಸ್ವಾಮಿ!

 

subamanian swamy

Comments are closed.