Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ!

ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ!

ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ!

ಅಮೆರಿಕದಂದು ರಿಮೋಟ್ ವಿಲೇಜ್ . ಆ ದೂರದ, ದುರ್ಗಮ ಹಳ್ಳಿಯಬ್ಬಳು ಹಣ್ಣು ಹಣ್ಣು ಮುದುಕಿಯಿದ್ದಾಳೆ. ಮುದುಕಿಗೆ ಎರಡೂ ಕಣ್ಣು ಕಾಣುವುದಿಲ್ಲ. ಕುರುಡು, ಆದರೆ ಅಜ್ಜಿಗೆ ಅದ್ಭುತವಾದ ಗ್ರಹಣ ಶಕ್ತಿ ಇರುತ್ತದೆ. ‘ಅಜ್ಜಿ ಹಾಗೆ.. ಅಜ್ಜಿ ಹೀಗೆ…’ ಅಂತೆ ಪ್ರತೀತಿ ಇರುತ್ತದೆ. ಆದರೂ ಅಲ್ಲಿನ ಸ್ಥಳೀಯ ಚರ್ಚ್‌ನಲ್ಲಿ ಬಿಳಿಯರದ್ದೇ ದರ್ಬಾರು. ಕರಿಯ ಜನಾಂಗಕ್ಕೆ ಸೇರಿದ ಆ ಅಜ್ಜಿ ಬಗ್ಗೆ ಸಹಜವಾಗಿಯೇ ಬಿಳಿಯರ ಮುಖ ಕೆಂಪಾಗಿರುತ್ತದೆ. ಒಂದು ದಿನ ಅಜ್ಜಿ ಮನೆಯಲ್ಲಿರುತ್ತಾಳೆ. ಐವರು ಶ್ವೇತ ವರ್ಣೀಯ ಹುಡುಗರು ಅಜ್ಜಿ ಮನೆಗೆ ಬರುತ್ತಾರೆ. ಅವರಬ್ಬ ತನ್ನ ಕೈಯನ್ನು ಮುಂದೆ ಚಾಚಿ.. ‘ಏ ಮುದುಕಿ, ನನ್ನ ಕೈಯಂದು ಹಕ್ಕಿ ಇದೆ. ಅದು ಸತ್ತಿದೆಯೋ, ಬದುಕಿದೆಯೋ? ಹೇಳು’ ಎನ್ನುತ್ತಾನೆ. ಕಣ್ಣೇ ಕಾಣದ ಅಜ್ಜಿ ಹೇಗೆ ತಾನೇ ಅಂತಹ ಪ್ರಶ್ನೆಗೆ ಉತ್ತರಿಸಲು ಸಾಧ್ಯ? ಆದರೆ ಅಜ್ಜಿಗೆ ಆ ಹುಡುಗರ ಉದ್ದೇಶ ಅರ್ಥವಾಗುತ್ತದೆ. ಕರಿಯಳಾದ ತನ್ನನ್ನು ಅವಮಾನಿಸಲು, ಕುರುಡಿಯಾಗಿರುವ ತನ್ನ ದೈಹಿಕ ಊನವನ್ನು ಹಂಗಿಸಲು, ಅವಹೇಳನ ಮಾಡಲು ಬಂದಿದ್ದಾರೆ ಎಂಬುದು ಗೊತ್ತಾಗುತ್ತದೆ.

ಅಜ್ಜಿ ಒಂದು ನಿಮಿಷ ಏನನ್ನೂ ಮಾತಾಡುವುದಿಲ್ಲ. ಆಕೆಗೆ ನಗು ಬರುತ್ತದೆ. ‘ನಿನ್ನ ಕೈಯಲ್ಲಿರುವ ಹಕ್ಕಿ ಸತ್ತಿದೆಯೋ, ಬದುಕಿದೆಯೋ ನನಗೆ ಗೊತ್ತಿಲ್ಲ. ಆದರೆ ಅದು ನಿನ್ನ ಕೈಯಲ್ಲಿರುವುದಂತೂ ನಿಜ. ಒಂದು ವೇಳೆ ಸತ್ತಿದ್ದರೆ, ಅದು ಸತ್ತ ರೂಪದ ನಿನಗೆ ಸಿಕ್ಕಿರಬಹುದು ಇಲ್ಲವೇ ನೀನೇ ಸಾಯಿಸಿರಬಹುದು. ಅಕಸ್ಮಾತ್ ಬದುಕಿದ್ದರೆ ಈಗಲೂ ಅದನ್ನು ನೀನು ಸಾಯಿಸಬಹುದು ಇಲ್ಲವೇ ಬದುಕಲು ಬಿಡಬಹುದು. ಎಲ್ಲವೂ ನಿನ್ನ ಕೈಯಲ್ಲಿದೆ’ ಎಂದು ಅಜ್ಜಿ ಹೇಳುತ್ತಾಳೆ. 1993ರಲ್ಲಿ ಸಾಹಿತ್ಯಕ್ಕಾಗಿನ ನೊಬೆಲ್ ಪ್ರಶಸ್ತಿ ಪಡೆಯುವಾಗ ಕರಿಯ ಜನಾಂಗಕ್ಕೆ ಸೇರಿದ ಅಮೆರಿಕದ ಟೋನಿ ಮಾರಿಸನ್ ಹೇಳಿದ ಕಥೆಯ ಸಾರಾಂಶವಿಷ್ಟೆ. ಭಾಷೆ, ವಿದ್ಯೆ ಅನ್ನೋದು ಕೂಡ ನಮ್ಮ ಕೈಯ ಇದೆ. ನಮ್ಮನ್ನು ಮೀರಿದ್ದಲ್ಲ. ನಮ್ಮ ಕಲ್ಪನೆ ಮತ್ತು ಪರಿಶ್ರಮದ ಆಧಾರದ ಮೇಲೆ ಅವು ರೂಪ ತಳೆಯುತ್ತವೆ. ಅಂದರೆ ಭಾಷೆಗೆ, ವಿದ್ಯೆಗೆ ಕರಿ-ಬಿಳಿ ತೊಗಲೆಂಬ ಭೇದವಿಲ್ಲ. ಜಾತಿ-ಧರ್ಮಗಳಿಲ್ಲ. ಮತದ ತಾರತಮ್ಯವಿಲ್ಲ. ಬೆಂಗಳೂರಿನಿಂದ 66 ಕಿ.ಮೀ ದೂರದಲ್ಲಿರುವ ಸಿದ್ದಗಂಗಾ ಮಠದೊಳಕ್ಕೆ ಕಾಲಿಟ್ಟರೆ ಹೀಗನಿಸದೇ ಇರದು. ಇದು ಮಠವೋ, ಬಡಬಗ್ಗರ ಕಾಲೊನಿಯೋ, ವಿದ್ಯಾಕೇಂದ್ರವೋ ಅಥವಾ 109ನೇ ವರ್ಷಕ್ಕೆ ಕಾಲಿಡುತ್ತಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳೆಂಬ ಅನ್ನದಾತನ, ವಿದ್ಯಾದಾತನ ನೆಲೆವೀಡೋ ಎಂಬ ಗೊಂದಲಗಳು ಕಾಡುತ್ತವೆ. ಆದರೆ ಎಲ್ಲವೂ ಸತ್ಯ.
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹತವೇ ಕಣ್ತೆರೆದಿದೆ

ಎಂಬ ಡಾ. ಜಿ.ಎಸ್. ಶಿವರುದ್ರಪ್ಪನವರ ನಾಲ್ಕು ಸಾಲುಗಳೇ ಸಾಕು ಸಿದ್ದಗಂಗಾ ಮಠದ ಮಹಾತ್ಮೆಯನ್ನು ಸಾರಲು. ಇದು ಹೆಸರಿಗೆ ಲಿಂಗಾಯತರ ಮಠವಾಗಿದ್ದರೂ ಅನ್ನ ಮತ್ತು ವಿದ್ಯಾದಾನಕ್ಕೆ ಜಾತಿ ಎಂದೂ ಅಳತೆಗೋಲಾಗಿಲ್ಲ!ಹೆಳವ, ಬೆಸ್ತ, ಅಂಬಿಗ, ಗೊಲ್ಲ, ಯಾದವ ಮುಂತಾದ ಜಾತಿಗಳು ಸೇರಿದ 610, ಅಗಸ, ಧೋಬಿ, ಈಡಿಗ, ಕುಂಬಾರ, ದೇವಾಂಗ, ರಜಪೂತ್, ಕ್ಷತ್ರಿಯ ಜನಾಂಗಕ್ಕೆ ಸೇರಿದ 2039, ಅದರಲ್ಲೂ ಕುರುಬ ಜನಾಂಗಕ್ಕೆ ಸೇರಿದ 1138, ಒಕ್ಕಲಿಗ, ಕಮ್ಮ, ನಾಯ್ಡು, ರೆಡ್ಡಿ ಮುಂತಾದ 3ನೇ ಎ ಕೆಟಗರಿಗೆ ಸೇರಿದ 930, ಲಿಂಗಾಯತ, ಮರಾಠ, ಕ್ರೈಸ್ತ, ಜೈನ ಹಾಗೂ ವೈಷ್ಣವ ಜನಾಂಗಕ್ಕೆ ಸೇರಿದ 3006 ಬ್ರಾಹ್ಮಣ, ಮೊದಲಿಯಾರ್, ವೈಶ್ಯ ಜಾತಿಗೆ ಸೇರಿದ 67, ಪರಿಶಿಷ್ಟ ಜಾತಿಗೆ ಸೇರಿದ 552 ಹಾಗೂ 68 ಮುಸಲ್ಮಾನರೂ ಸೇರಿದಂತೆ ಎಂಟು ಸಾವಿರಕ್ಕೂ ಅಧಿಕ ಮಕ್ಕಳಿಗೆ ಊಟ, ವಸತಿ ಮತ್ತು ವಿದ್ಯೆಯನ್ನು ಮಾತ್ರ ಉಚಿತವಾಗಿ ನೀಡುತ್ತಿಲ್ಲ. ಶೇ.50 ಮಕ್ಕಳು ದಿಕ್ಕು-ದಿಸೆಯಿಲ್ಲದ, ಅಪ್ಪ-ಅಮ್ಮ ದೂರ ಮಾಡಿದ ಅನಾಥರೇ ಆಗಿದ್ದರೂ ಪ್ರೀತಿಗೆ ಎಂದೂ ಕೊರತೆ ಮಾಡಿಲ್ಲ.

ಶ್ರೀ ಶಿವಕುಮಾರ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಕಿರಿಯರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಾರಕ್ಕೊಮ್ಮೆ ಸ್ವತಃ ನೂರಾರು ಮಕ್ಕಳಿಗೆ ಬಿಸಿನೀರಿನ ಸ್ನಾನ ಮಾಡಿಸುತ್ತಾರೆ. ಅನಾಥರಾಗಿದ್ದರೂ ಅನಾಥ ಪ್ರಜ್ಞಾ ಮಕ್ಕಳನ್ನು ಕಾಡಲು ಬಿಟ್ಟಿಲ್ಲ. ಪ್ರತಿ ದಿನ ಸಾಯಂಕಾಲ ಬಿಳಿ ಪಂಚೆ, ಕೆಂಪು ಉತ್ತರೀಯ ಹಾಗೂ ಹಣೆಗೆ ವಿಭೂತಿ ಧರಿಸಿದ ಮಕ್ಕಳು ಜಾತಿ-ಮತಗಳ ಭೇದವಿಲ್ಲದೆ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಹಾಗಂತ ಕಟ್ಟುಪಾಡುಗಳನ್ನು ಹಾಕಿಲ್ಲ. ಶಿಸ್ತಿನ ಹೆಸರಿನಲ್ಲಿ ಮಕ್ಕಳ ಉಸಿರುಕಟ್ಟಿಸುವುದಿಲ್ಲ. ಅದಕ್ಕೇ ಹೇಳಿದ್ದು ಇದು ಮಠವೋ ಬಡಬಗ್ಗರ ಕಾಲೊನಿಯೋ ಎಂಬ ಅನುಮಾನ ಕಾಡುತ್ತದೆ ಎಂದು. ಪ್ರತೀ ಭಾನುವಾರ ಇಷ್ಟಬಂದ ಆಟವಾಡುವ, ಎಂದರಲ್ಲಿ ಕುಣಿದು ಕುಪ್ಪಳಿಸುವ, ಟೀವಿ ನೋಡುವ ಮುಕ್ತ ಸ್ವಾತಂತ್ರ್ಯವನ್ನು ಮಕ್ಕಳಿಗೆ ಕಲ್ಪಿಸಲಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ, ಮೇಲುಕೀಳೆಂಬ ಭೇದವಿಲ್ಲದೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಸಲಾಗುತ್ತದೆ.

ಪ್ರಸ್ತುತ 66 ಮುಸ್ಲಿಂ ವಿದ್ಯಾರ್ಥಿಗಳೂ ಸಂಸ್ಕ್ರತ ವ್ಯಾಸಂಗ ಮಾಡುತ್ತಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು. ಪ್ರಥಮಾ, ಕಾವ್ಯ, ಸಾಹಿತ್ಯ, ವಿದ್ವನ್ಮಧ್ಯಮಾ ಹಗೂ ವಿದ್ವದುತ್ತಮಾ ತರಗತಿಗಳಲ್ಲಿ ಒಟ್ಟು 6075 ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದಾರೆ. ವೇದ-ಉಪನಿಷತ್ತುಗಳನ್ನು ಬೋಧಿಸಲಾಗುತ್ತದೆ.ಆದರೆ ವಿದ್ಯೆಯೊಂದನ್ನೇ ಇಲ್ಲಿ ಕಲಿಸುವುದಿಲ್ಲ.ಕಚೇರಿಯಲ್ಲಿ ಕುಳಿತು ಕಡತಗಳನ್ನು ತಿರುವಿ ಹಾಕುವ ಗುಮಾಸ್ತರನ್ನೋ, ಅಧಿಕಾರಿಗಳನ್ನೋ ಮಾತ್ರ ಇಲ್ಲಿ ರೂಪಿಸುತ್ತಿಲ್ಲ. ಮಕ್ಕಳಿಗೆ ಪ್ರಾಯೋಗಿಕ ಕೃಷಿ ಪಾಠವಿದೆ. ಮಕ್ಕಳೇ ಕೃಷಿ ಮಾಡುತ್ತಾರೆ. ದವಸ-ದಾನ್ಯ ಬೆಳೆಯುತ್ತಾರೆ. ಮುಂದೊಂದು ದಿನ ಕಚೇರಿಯಲ್ಲಿ ಕೆಲಸ ಸಿಗದಿದ್ದರೂ ದುಡಿದು ತಿನ್ನುವ ಮಾರ್ಗವನ್ನು ಮಠದಲ್ಲಿ ತೋರಿಸುತ್ತಾರೆ. ಹಾಗಾಗಿಯೇ ಪರೀಕ್ಷೆಯಲ್ಲಿ ಫೆಲಾದರೆಂದು ಮಠದಿಂದ ಹೊರಹಾಕುವುದಿಲ್ಲ. ಜತೆಗೆ ಮಕ್ಕಳನ್ನು ಮಠಕ್ಕೆ ಬಿಡಲು ಕರೆದುಕೊಂಡು ಬಂದು ವಾಪಾಸ್ ಕರೆದುಕೊಂಡುಹೋದ ಪ್ರಸಂಗವನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಜಗತ್ತೇದೂರಮಾಡಿದವರಿಗೂ ಮಠದ ಬಾಗಿಲು ಮಾತ್ರ ಸದಾ ತೆರೆದೇ ಇರುತ್ತದೆ. ಮಠದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದ ಬಡ ಮತ್ತು ಅನಾಥ ಮಕ್ಕಳೇ ಕಂಡುಬರುತ್ತಾರೆ. ಅದರಲ್ಲೂ ಗುಲ್ಬರ್ಗ ಮತ್ತು ಬಳ್ಳಾರಿಯದ್ದೇ ಮೇಲುಗೈ. ಸಾಕಲು ಕಷ್ಟವಾಗುತ್ತದೆ ಎಂದು ಮಠಕ್ಕೆ ಬಿಟ್ಟು ಗುಳೇ ಹೋಗುವ ಇಲ್ಲಿನ ಜನರು ಏಳೆಂಟು ವರ್ಷಗಳಾದರೂ ಮಕ್ಕಳ ಮುಖ ನೋಡಲೂ ಬರುವುದಿಲ್ಲ. ಅಂತಹ ಮಕ್ಕಳನ್ನು ಸ್ವಂತ ಕುಡಿಗಳೆಂಬಂತೆ ಸಾಕಿ-ಸಲಹಿ, ವಿದ್ಯೆ ನೀಡಿ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಮಹತ್ಕಾರ್ಯ ಮಠದಲ್ಲಿ ನಡೆಯುತ್ತಿದೆ. ಪುಕ್ಕಟೆ ಎಂದ ಮಾತ್ರಕ್ಕೆ ಯಾವುದೂ ಇಲ್ಲಿ ಕಳಪೆಯಾಗಿಲ್ಲ. ನಮ್ಮ ಮನೆಗಳಿಗಿಂತಲೂ ಯೋಗ್ಯ ಕೊಠಡಿಗಳನ್ನು ಮಕ್ಕಳಿಗೆ ಕಟ್ಟಿಸಿಕೊಡಲಾಗಿದೆ. ಊಟದ ಹಾಲ್ ಕೂಡ ಅಷ್ಟೇ ಸುಸಜ್ಜಿತವಾಗಿದೆ. ಅತ್ಯಾಧುನಿಕ ಗ್ರಂಥಾಲಯ, ಕಂಪ್ಯೂರ್ಟ ಕೇಂದ್ರಗಳಿವೆ. ಇಲ್ಲಿ 8 ಸಾವಿರಕ್ಕೂ ಅಧಿಕ ಮಕ್ಕಳಿಗೆ ಮಾತ್ರವಲ್ಲ, ನಿತ್ಯವೂ ಮಠಕ್ಕೆ ಭೇಟಿ ಕೊಡುವ ಸಾವಿರಾರು ಭಕ್ತಾದಿಗಳಿಗೂ, ಪ್ರವಾಸಿಗಳಿಗೂ ದಿನದ ಇಪ್ಪತ್ನಾಲ್ಕು ಗಂಟೆಗಳು ಊಟದ ಸೌಲಭ್ಯವಿದೆ!ಅಷ್ಟು ಮಾತ್ರವಲ್ಲ.

ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು, ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ, ಸಿದ್ಧಗಂಗಾ ಪಾಲಿಟೆಕ್ನಿಕ್, ಸಿದ್ಧಗಂಗಾ ಕಾಲೇಜ್ ಆಫ್ ಫಾರ್ಮಸಿ, ಸಿದ್ಧಗಂಗಾ ಸ್ಕೂಲ್ ಆಫ್ ನರ್ಸಿಂಗ್, ಐಟಿಐ, ಡಿ ಎಡ್ ಕಾಲೇಜುಗಳು, ಪ್ರಥಮ ದರ್ಜೆ ಕಾಲೇಜುಗಳು, ಪದವಿಪೂರ್ವ ಕಾಲೇಜುಗಳು, ಸಂಸ್ಕ್ರತ ಕಾಲೇಜು, ಪ್ರೌಢಶಾಲೆಗಳು,ನರ್ಸರಿ ಶಾಲೆಗಳು, ಅಂಧ ಮಕ್ಕಳ ಪಾಠಶಾಲೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ ಸೇರಿದಂತೆ 123 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾದಾನ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿರುವ ಏಕೈಕ ಕನ್ನಡ ಪಂಡಿತ ತರಬೇತಿ ಸಂಸ್ಥೆಯೂ ಸಿದ್ಧಗಂಗಾದ್ದೇ ಆಗಿದೆ. ಹೀಗೆ ಶಿವಕುಮಾರ ಸ್ವಾಮಿಗಳು ಪ್ರಸ್ತುತ ಸುಮಾರು 45 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ! ಕಾಯಕವೇ ಕೈಲಾಸ ಎಂದ ಬಸವಣ್ಣನೇನಾದರೂ ಇಂದು ಬದುಕಿದ್ದರೆ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಸಿದ್ಧಗಂಗಾ ಮಠದ ಬಗ್ಗೆ ಖಂಡಿತ ಹೆಮ್ಮೆ ಪಡುತ್ತಿದ್ದರು. ಮಠಕ್ಕೆ 600 ವರ್ಷಗಳ ಇತಿಹಾಸವಿದೆ. ಶ್ರೀ ಗೋಸಲ ಸಿದ್ಧೇಶ್ವರರು ಅದರ ಸ್ಥಾಪಕರು . ಸಿದ್ಧಗಂಗಾವನ್ನು ತಮ್ಮ ಕಾರ್ಯುಕ್ಷೇತ್ರವನ್ನಾಗಿಸಿಕೊಂಡು ಧರ್ಮಪ್ರಚಾರ ಮಾಡಿದವರು. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಲ್ಲ ಸಂಚರಿಸಿದ ಇವರ ಪ್ರಭಾವದಿಂದಲೇ ಕರ್ನಾಟಕದಲ್ಲಿ ಜಂಗಮ ಪರಂಪರೆ ಬೆಳೆದಿದ್ದು.

ಇದರ ನಂತರ ಅದರಲ್ಲೂ 18ನೇ ಶತಮಾನದಿಂದೀಚೆಗೆ ಶ್ರೀ ನಂಜುಂಡಸ್ವಾಮಿ, ಶ್ರೀ ರುದ್ರಸ್ವಾಮಿ, ಶ್ರೀ ಸಿದ್ಧಲಿಂಗಸ್ವಾಮಿ, ಶ್ರೀ ಉದ್ವಾನಸ್ವಾಮಿಗಳು ಬಂದುಹೋಗಿದ್ದಾರೆ. ಆದರೆ 1930ರಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದು ಮಠಾಧಿಶರಾದ ಶ್ರೀ ಶಿವಕುಮಾರ ಸ್ವಾಮೀಜಿ ವಿಶಿಷ್ಟವೆನಿಸುತ್ತಾರೆ. ಮಕ್ಕಳಲ್ಲಿ ದೇವರಿದ್ದಾನೆ ಎಂಬ ಮಾತನ್ನು ನೀವು ಒಪ್ಪುವುದಾದರೆ, ಅನ್ಯರ ಮಕ್ಕಳ ಅಭ್ಯುದಯದ ಜೀವನದ ಸರ್ವಸ್ವ ಕಾಣುತ್ತಿರುವ ಶಿವಕುಮಾರ ಸ್ವಾಮೀಜಿಗಳನ್ನು ಒಮ್ಮೆಯಾದರೂ ನೋಡಲೇಬೇಕು. ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಒಂದು ಸರಕಾರ ತೋರಬೇಕಾದ ಸಾಮಾಜಿಕ ಕಾಳಜಿಯನ್ನು ಸ್ವಾಮೀಜಿ ತೋರುತ್ತಿದ್ದಾರೆ. ಬೂದಿ, ವಾಚು, ಉಂಗುರ ಕೊಡುವ, ಮಾಂತ್ರಿಕ ಶಕ್ತಿಯ ಮೂಲಕ ರೋಗ ಗುಣಪಡಿಸುತ್ತೇನೆ ಎನ್ನುವ ಸೋಗಲಾಡಿಗಳು, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಕಟ್ಟಿ ಕಾಲೇಜೇ ಕಾಮಧೇನು ಎಂಬಂತೆ ವರ್ತಿಸುವ ಸ್ವಾಮೀಜಿಗಳೇ ನಮ್ಮ ಸುತ್ತಲೂ ಇರುವ ಇಂತಹ ಪರಿಸ್ಥಿತಿಯಲ್ಲೂ ಶ್ರೀ ಶಿವಕುಮಾರ ಸ್ವಾಮೀಜಿಯಂತಹವರು ಇರುವುದು ನಮ್ಮ ಅದೃಷ್ಟ.ದೇಹ ಕುಗ್ಗಿದೆ, ಧ್ವನಿ ತಗ್ಗಿದೆ. ಆದರೆ ಅವರ ಪ್ರೀತಿಗೆ, ಕಾಳಜಿಗೆ, ಉತ್ಸಾಹಕ್ಕೆ, ಸ್ಪೂರ್ತಿಗೆ ಮುಪ್ಪು ಬಂದಿಲ್ಲ. ಹಾಗಾಗಿಯೇ ನಿತ್ಯವೂ 10 ರಿಂದ 12 ಸಾವಿರ ಜನರಿಗೆ ಹಗಲು ರಾತ್ರಿಯೆನ್ನದೆ ಅನ್ನಸಂತರ್ಪಣೆ ನಡೆಯುತ್ತಿದೆ.
ಅಂತಹ ಶ್ರೀ ಶಿವಕುಮಾರ ಸ್ವಾಮಿಗಳು ಏಪ್ರಿಲ್ 1ರಂದು 109ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಹ್ಯಾಪಿ ಬರ್ತ್‌ಡೇ!

shivakumara swamiji

Comments are closed.