Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸರಿಹೋಗಲು ಬೇಡದ ಷರಿಯಾ ಶೋಕಿಗ್ಯಾಕೆ?

ಸರಿಹೋಗಲು ಬೇಡದ ಷರಿಯಾ ಶೋಕಿಗ್ಯಾಕೆ?

ಸರಿಹೋಗಲು ಬೇಡದ ಷರಿಯಾ ಶೋಕಿಗ್ಯಾಕೆ?

ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಅಂತಿಮವಾಗಿ ಎಲ್ಲಿಗೆ ಮುಟ್ಟುತ್ತದೆ ಎಂಬುದಕ್ಕೆ ಪಶ್ಚಿಮ ಬಂಗಾಳದ ಕೆಲವು ಘಟನೆಗಳೇ ಸಾಕ್ಷಿ. ಕಳೆದೊಂದು ವರ್ಷದಿಂದ ಪ.ಬಂಗಾಳದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನೇ ನೋಡಿ.
ಹೌರಾ, ಭೀರ್‌ಭೂಮ್‌ಗಳಲ್ಲಿ ಹಿಂದೂ ಮನೆಗಳಿಗೆ ಬೆಂಕಿ.
ವರ್ಧಮಾನ್ ಜಿಲ್ಲೆಯ ಕಾಟ್ವಾ ಶನಿದೇವಸ್ಥಾನ ಧ್ವಂಸ.
ಧೂಲಾಗಢದಲ್ಲಿ ಈದ್ ಉನ್ ನಬಿ ದಿನ ಹಿಂದೂಗಳ ಮೇಲೆ ಏಕಾಏಕಿ ದಾಳಿ.
ಸಕರಾಯಿಲ್ ಮತ್ತು ಪೋಚ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಗಲಭೆಗಳಿಂದ ಹಿಂದುಗಳ ವಲಸೆ.
ಮಾಲ್ಡಾದಲ್ಲಿ ಹೆಚ್ಚಿದ ನಕಲಿ ನೋಟುಗಳ ದಂಧೆ.
ವರ್ಧಮಾನ್‌ನಲ್ಲಿ ಬಾಂಬ್ ತಯಾರಿಕಾ ಕಾರ್ಖಾನೆಯಲ್ಲಿ ಸ್ಪೋಟ.
ನಂತರ ಬಸಿರ್ಹಾಟ್‌ನಲ್ಲಿ ಬೆಂಕಿ.
ಇವು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಂಭವಿಸಿದ ಕೋಮುಗಲಭೆಗಳ ಪಟ್ಟಿಗಳಲ್ಲ. ಕೇವಲ ಒಂದು ವರ್ಷದ ಅವಧಿಯಲ್ಲಿ ನಡೆದ ಭೀಕರ ಕೋಮು ಗಲಭೆಗಳು. ಎಲ್ಲವೂ ದೇಶವನ್ನು ಬೆಚ್ಚಿ ಬೀಳಿಸಿದ ಪ್ರಕರಣಗಳು. ಪ್ರತೀ ವರ್ಷ ಬಂಗಾಳದಲ್ಲಿ ದುರ್ಗಾಪೂಜೆಯ ಹೊತ್ತಲ್ಲಿ ಬೆಂಕಿ ಹತ್ತಿಕೊಳ್ಳುತ್ತವೆ. ನವರಾತ್ರಿ ಮುಗಿಯುವವರೆಗೂ ಏನೂ ಘಟಿಸಿಲ್ಲ ಎಂದುಕೊಳ್ಳುತ್ತಿದ್ದಂತೆಯೇ ಕಾಳಿ ವಿಸರ್ಜನೆಯ ಹೊತ್ತಲ್ಲಿ ಇದ್ದಕ್ಕಿದ್ದಂತೆ ಗಲಭೆಗಳು ಹೊತ್ತಿಕೊಳ್ಳುತ್ತದೆ. ಶಾಂತಿಯುತ ಮೊಹರಂ ಮೆರವಣಿಗೆ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದಾಗಲೇ ಮೆರವಣಿಗೆ ಏಕಾಏಕಿ ಉನ್ಮತ್ತಗೊಳ್ಳುತ್ತವೆ. ಪ್ರವಾದಿಯವರ ಜನ್ಮದಿನದಂಥಾ ಪವಿತ್ರ ದಿನದಂದೂ ಮೆರವಣಿಗೆಗಳು ಉದ್ರೇಕಗೊಂಡು ದೊಂಬಿ, ಹಿಂದು ಮನೆ-ಅಂಗಡಿಗಳ ಲೂಟಿಗಳು ನಡೆಯುತ್ತವೆ.
ಯಾವ ಬಂಗಾಳವನ್ನು ನಾವು, ಇಂದು ಬಂಗಾಳ ಆಲೋಚಿಸುವುದನ್ನು ನಾಳೆ ಭಾರತ ಆಲೋಚಿಸುತ್ತದೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೆವೋ ಅಂಥಾ ಬಂಗಾಳದಲ್ಲಿ ಒಂದಾದನಂತರ ಒಂದು ಕೋಮು ಗಲಭೆಗಳು ನಡೆಯುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆ ಈಗಿನ ಬಸಿರ್ಹಾಟ್ ಗಲಭೆಗಳು. ಈ ಗಲಭೆ ಕೂಡ ಹಿಂದಿನ ಗಲಭೆಗಳ ಸ್ವರೂಪದಲ್ಲೇ ನಡೆದವು, ಎಂದಿನಂತೆ ಹಿಂದೂ ಮನೆಗಳ ಧ್ವಂಸ, ಲೂಟಿ, ವಾಹನಗಳಿಗೆ ಬೆಂಕಿ, ಎಲ್ಲಾ ಮುಗಿದ ಮೇಲೆ ಪೊಲೀಸರ ನಿಯೋಜನೆ, ರಾಜಕೀಯ ಹೇಳಿಕೆ, ಸಂತ್ರಸ್ತರ ಮೇಲೆ ಮೊಕದ್ದಮೆ, ಮಮತಾ ಬ್ಯಾನರ್ಜಿಯ ಓಲೈಕೆ ಭಾಷಣ.
ಆದರೆ ಬಸಿರ್ಹಾಟ್ ಪ್ರಕರಣ ಮುಸಲ್ಮಾನ ಪ್ರೇರಿತ ಕೋಮುಗಲಭೆಯ ಹೊಸದೊಂದು ಆಯಾಮವನ್ನು ತೆರೆದಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪ್ರವಾದಿಯವರ ಬಗೆಗಿನ ಅವಹೇಳನಕಾರಿ ಹೇಳಿಕೆಯಿಂದ ಮುಸಲ್ಮಾನರ ಭಾವನೆಗಳಿಗೆ ನೋವುಂಟುಮಾಡಿದೆಯೆಂದೂ, ಆರೋಪಿಯನ್ನು ಮುಸಲ್ಮಾನರ ಕೈಗೊಪ್ಪಿಸಬೇಕೆಂದೂ, ಆತನನ್ನು ಇಸ್ಲಾಮಿ ಷರಿಯಾ ಪ್ರಕಾರ ತಾವೇ ಶಿಕ್ಷೆ ವಿಧಿಸುತ್ತೇವೆಂದೂ ಗಲಭೆಕೋರರು ದೊಂಬಿಯನ್ನು ಮುಂದುವರಿಸಿದರು. ಅಂದರೆ ದಂಗೆಕೋರರು ತಾವು ಎಂದೆಂದಿಗೂ ಈ ನೆಲದ ಕಾನೂನನ್ನು ಒಪ್ಪಲಾರೆವು, ತಾವು ನಿರ್ಧರಿಸಿದ್ದು ಮಾತ್ರ ಕಾನೂನು ಎಂಬ ಬೆದರಿಕೆಯನ್ನು ದೇಶದ ಸಂವಿಧಾನಕ್ಕೆ, ಸಾರ್ವಭೌಮತ್ವಕ್ಕೆ ಒಡ್ಡಿದ್ದಾರೆ! ಪರೋಕ್ಷವಾಗಿ ಇದು ಅರಬ್ ರಾಷ್ಟ್ರವಾದವನ್ನು ಹೇರಬೇಕು ಎಂದಂತೆ.
ಪ್ರವಾದಿಯವರ ಬಗೆ ಅವಹೇಳನಕಾರಿ ಹೇಳಿಕೆ ಪ್ರಕರಣ ನಿಸ್ಸಂಶಯವಾಗಿ ಮುಸ್ಲಿಮರ ಭಾವನೆಗಳಿಗೆ ನೋವು ತರುವಂಥ ಸಂಗತಿಯೆ. ಅಂಥ ವ್ಯಕ್ತಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುವುದರಲ್ಲೂ ತಪ್ಪಿಲ್ಲ. ಏಕೆಂದರೆ ಅಂಥ ವ್ಯಕ್ತಿ ಕಠಿಣ ಶಿಕ್ಷೆಗೆ ಅರ್ಹನಾದವನು. ಆದರೆ ಮುಸಲ್ಮಾನರು ತಮ್ಮ ನೋವನ್ನು ಹಿಂಸೆಯಿಂದಲೇ ಪ್ರಕಟಿಸುತ್ತೇವೆಂದು ಜಿದ್ದಿಗೆ ಬಿದ್ದಿರುವುದು ಎಷ್ಟರಮಟ್ಟಿಗೆ ಸರಿ? ಅವಹೇಳನಕಾರಿ ಹೇಳಿಕೆ ಪ್ರಕಟಿಸಿದವನನ್ನು ಷರಿಯಾ ಪ್ರಕಾರ ಗಲಭೆಕೋರರ ಸುಪರ್ದಿಗೆ ನೀಡಬೇಕೆಂಬ ಹೇಳಿಕೆ ಭಯೋತ್ಪಾದಕ ಮಾನಸಿಕತೆಯಲ್ಲದೆ ಬೇರೇನು? ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಹಿಂದಿನ ಎಲ್ಲಾ ಗಲಭೆಗಳ ಸ್ವರೂಪವನ್ನು ಗಮನಿಸಿದರೂ ಹಲವು ಸ್ವಾಮ್ಯತೆಗಳು ಕಂಡುಬರುತ್ತದೆ. ಕೋಮು ಗಲಭೆಗಳಲ್ಲಿ ನಡೆದ ಹಿಂಸೆಯಲ್ಲಿ ಏಕರೂಪತೆ ಕಂಡುಬರುತ್ತದೆ. ಈ ಹಿಂದೆ ಬಂಗಾಳದಲ್ಲಿ ಕಾರಣವಿಲ್ಲದೆ ಗಲಭೆಗಳು ನಡೆದಿದ್ದನ್ನೂ ನೋಡಿದ್ದೇವೆ.
ಅಗಲೂ ಅವುಗಳ ಸ್ವರೂಪ ಹೀಗೇ ಇತ್ತು ಮತ್ತು ಬಸಿರ್ಹಾಟ್ ಗಲಭೆಗಳಲ್ಲಿ ಇಸ್ಲಾಂ ಭಾವನೆಗಳಿಗೆ ನೋವಾಗುವ ಕಾರಣವೊಂದಿದ್ದಾಗಲೂ ಗಲಭೆಗಳ ಸ್ವರೂಪದಲ್ಲಿ ಏನೇನೂ ವ್ಯತ್ಯಾಸಗಳು ಕಾಣಲಿಲ್ಲ. ಅಂದರೆ ಅಸಲಿಗೆ ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆಗಳು ನಡೆಯಲು ಕಾರಣಗಳೇ ಬೇಕಿಲ್ಲ. ಅಥವಾ ಕಾರಣಗಳು ಗೌಣವಾಗಿ ನೆಪವೊಂದೇ ಸಾಕಾಗುತ್ತವೆ! ಪ್ರವಾದಿಯವರ ಜನ್ಮ ದಿನದಂಥ ಪವಿತ್ರ ದಿನದಂದು ಗಲಭೆಗಳೇಳಲು ಮುಸಲ್ಮಾನ ಭಾವನೆಗಳು, ಆ ಭಾವನೆಗಳಿಗಾದ ನೋವು ಕಾರಣವಾಗಿತ್ತೇ? ಹಿಂದುಗಳು ಕಾಳಿ ವಿಸರ್ಜನೆ ಮಾಡುವ ಹೊತ್ತಲ್ಲಿ ಮುಸಲ್ಮಾನರ ಯಾವ ಭಾವನೆಗಳಿಗೆ ನೋವಾಗಿತ್ತು? ಮಾಲ್ಡಾದ ಕಾಳಿ ಚೌಕಿನಲ್ಲಿ ನಕಲಿ ನೋಟಿನ ದಂಧೆಗೆ ಮತೀಯ ಲೇಪ ಹಚ್ಚುವ ಕೆಲಸದ ಹಿಂದೆ ಯಾವ ಧಾರ್ಮಿಕ ಭಾವನೆಯಿತ್ತು? ಭಾವನೆಗಳಿಗಾದ ನೋವಿನ ನೆಪದಿಂದ ಆರೋಪಿಯನ್ನು ಇಸ್ಲಾಮಿ ಕಾನೂನಿನ ಪ್ರಕಾರ ದಂಡಿಸಬೇಕೆನ್ನುವವರ ಅಸಲಿ ಉದ್ದೇಶವೇನು?
ಭಾರತೀಯ ದಂಡ ಸಂಹಿತೆಯೂ ಧಾರ್ಮಿಕ ಭಾವನೆಗಳಿಗಾದ ನೋವಿನ ಕಾರಣ ನೀಡಿ ಶಿಕ್ಷೆ ವಿಧಿಸುತ್ತದೆ. ಆದರೆ ಬಂಗಾಳ ಮತ್ತು ಇದೀಗ ಬಂಗಾಳದ ಹೊರತಾಗಿಯೂ ಹಲವು ಮುಸಲ್ಮಾನ ಮುಖಂಡರು ಬಸಿರ್ಹಾಟ್ ಪ್ರಕರಣವನ್ನು ಇಸ್ಲಾಂ ಕಾನೂನು ಮೂಲಕ ಶಿಕ್ಷಿಸಬೇಕೆನ್ನುವುದು ತಮಾಷೆಯೆನಿಸುತ್ತದೆ. ಏಕೆಂದರೆ ಭಾರತದಲ್ಲಿ ಎಲ್ಲಾ ಮುಸಲ್ಮಾನರು, ಇಸ್ಲಾಂ ಪಂಡಿತರು ಷರಿಯಾ ಕಾನೂನು ಪ್ರಕಾರ ಬದುಕುತ್ತಿಲ್ಲ. ಕೆಲವು ಷರಿಯಾ ಕಾನೂನುಗಳು ಇಂಥವರಿಗೆ ಭಾರೀ ಭಾರವೆನಿಸಿವೆ. ಆದರೆ ಬಸಿರ್ಹಾಟ್ ಷರಿಯಾ ಪ್ರಕಾರ ನಡೆಯಬೇಕು!?
ಕೆಲವು ಉದಾಹರಣೆಗಳನ್ನೇ ನೋಡಿ.  ಅಪರಾಧ ಪ್ರಕರಣಗಳ ಆರೋಪಿಗಳಿಗೆ ಷರಿಯಾ ಪ್ರಕಾರ ಶಿಕ್ಷೆ ವಿಧಿಸಲು ಇದುವರೆಗೆ ಯಾರೊಬ್ಬ ಧಾರ್ಮಿಕ ಮುಖಂಡನೂ ಪ್ರಯತ್ನ ಪಟ್ಟಿಲ್ಲವೇಕೆ? ಷರಿಯಾ ಪ್ರಕಾರ ಒಬ್ಬ ಜೇಬುಗಳ್ಳನಿಗೂ ಕಠಿಣ ಶಿಕ್ಷೆ ಇದೆ. ಆದರೆ ಈ ಎಲ್ಲಾ ಕ್ರಿಮಿನಲ್‌ಗಳಿಗೆ ಮುಸ್ಲಿಂ ಕಾನೂನು ಮಂಡಳಿಗಳು ಕಠಿಣ ಶಿಕ್ಷೆಯನ್ನೇಕೆ ವಿಧಿಸುತ್ತಿಲ್ಲ? ಬಸಿರ್ಹಾಟ್‌ನಲ್ಲಿ ಅಮಾಯಕರ ಮೇಲೆ ಹಲ್ಲೆಯಾಯಿತು, ಸಾರ್ವಜನಿಕ ಸೊತ್ತುಗಳು ನಾಶವಾದವು. ಪ್ರವಾದಿಯವರ ಚಿಂತನೆ ಪ್ರಕಾರ ಅವೂ ಕೂಡಾ ಘೋರ ಅಪರಾಧ ಎನಿಸಿಕೊಳ್ಳುತ್ತವೆ. ಅಲ್ಲೇಕೆ ಷರಿಯಾ ಲಾಗೂ ಆಗುತ್ತಿಲ್ಲ? ಧಾರ್ಮಿಕ ನಂಬಿಕೆ, ಭಾವನೆಗಳ ಪ್ರಶ್ನೆಯನ್ನು ಒಂದು ಘಟನೆಗೆ ಸೀಮಿತ ಮಾಡಿ ಅನುಕೂಲಸಿಂಧುವಾಗಿ ಬಳಸಿಕೊಳ್ಳುವುದನ್ನು ಹದೀಸ್ ಕೂಡಾ ಒಪ್ಪುವುದಿಲ್ಲ. ಅಂಥಲ್ಲಿ ಗಲಭೆಕೋರರ ಅಸಲಿ ಉದ್ದೇಶವೇನು?
ಷರಿಯಾ ಅಥವ ಇಸ್ಲಾಮಿ ನ್ಯಾಯ. ಕೆಲವರ್ಷಗಳಿಂದ ವಿಶ್ವದಲ್ಲಿ ಅತೀ ಹೆಚ್ಚು ಚರ್ಚೆಯಾದ ಒಂದು ಸಂಗತಿ. ಅದರ ಕುರಿತು ಹಲವು ದೇಶಗಳಲ್ಲಿ ಹಲವು ವ್ಯಾಖ್ಯಾನಗಳಿವೆ. ಪ್ರವಾದಿಯವರ ಕ್ಷೇತ್ರ ಮತ್ತು ಇಸ್ಲಾಮಿನ ವ್ಯಾಪ್ತಿಗೆ ತಕ್ಕಂತೆ ಅದು ಬದಲಾಗಿದೆ. ವ್ಯತ್ಯಾಸಗೊಂಡಿವೆ. ಇಸ್ಲಾಮಿನ ಪ್ರಾರಂಭದ ಕಾಲದಲ್ಲಿ ಅದೊಂದು ಸ್ವತಂತ್ರ ಶಾಖೆ ಅಥವಾ ಶಾಸ್ತ್ರವಾಗಿರಲಿಲ್ಲ ಎಂಬುದನ್ನೂ ವಿಧ್ವಾಂಸರು ಒಪ್ಪುತ್ತಾರೆ. ಇಸ್ಲಾಂ ಪಂಡಿತರ ಪ್ರಕಾರ ಷರಿಯಾ ಅಥವಾ ಷರಿಯತ್‌ನಲ್ಲಿ ದಾನಗಳು (ಖೈರಾತ್), ಪ್ರಾರ್ಥನೆ (ನಮಾಜ್), ಶೌಚ(ಗುಸಲ್) ಕ್ರಮಗಳು, ಸಾಮಾಜಿಕ ಜೀವನದ ಮದುವೆ (ನಿಖಾ), ವಿಚ್ಛೇದನ (ತಲಾಖ್), ಉತ್ತರಾಧಿಕಾರ(ವಿರಾಸತ್)ಗಳಲ್ಲಿ ಅನುಸರಿಸಬೇಕಾದ ಅನೇಕ ತತ್ತ್ವಗಳನ್ನು ದಾಖಲಿಸಲಾಗಿದೆ. ಇಸ್ಲಾಮಿನಲ್ಲಿ ಧರ್ಮ ಮತ್ತು ಕಾನೂನು ಒಟ್ಟೊಟ್ಟಿಗೆೇ ಸಾಗುತ್ತವೆ. ಇವೆಲ್ಲಾ ಕ್ರಮಗಳು ಆಚರಣೆಗೆ ಬಂದಿರುವ ಮೂಲವನ್ನು ಕೆದಕಿದರೆ ಈ ನಿಯಮಗಳು ಇಸ್ಲಾಮಿ ಪೂರ್ವದಲ್ಲಿ ಅರಬ್ಬಿ ಸಮಾಜದಲ್ಲಿ ಅಸ್ತಿತ್ವದಲ್ಲಿದವು ಎಂಬುದೂ ಇಂದು ಗುಟ್ಟಾಗುಳಿದಿಲ್ಲ. ಕ್ರಮೇಣ ಮಹಮದರು ಆ ನಿಯಮಗಳನ್ನು ತಮ್ಮ ಬೋಧನೆಯಲ್ಲಿ ತಳುಕಿ ಹಾಕಿ ನಿಯಮಗಳನ್ನು ರೂಪಿಸಿದರು. ಮುಂದೆ ಕೆಲವು ನಿಯಮಗಳು ಸೇರ್ಪಡೆಯಾಗಿ, ನಂಬಿಕೆಯ ಭಾಗವಾಗಿ ಇಂದಿಗೂ ಕೆಲವು ದೇಶಗಳಲ್ಲಿ ಆಚರಣೆಯಲ್ಲಿವೆ.
ಇಲ್ಲಿ ಮೂಡುವ ಪ್ರಶ್ನೆಯೆಂದರೆ ಷರಿಯತ್ ಅನ್ನು ಧರ್ಮದ ಒಂದು ಭಾಗವಾಗಿ ಸ್ವೀಕರಿಸಬೇಕೋ ಅಥವಾ ಒಂದು ವ್ಯವಸ್ಥೆಯನ್ನು ಧಿಕ್ಕರಿಸಲು ಪರ್ಯಾಯವಾಗಿ ಸ್ವೀಕರಿಸಬೇಕೋ ಎನ್ನುವುದು. ಇಸ್ಲಾಂ ವಿವಾಹ ಪದ್ಧತಿ ಧಾರ್ಮಿಕ ಚೌಕಟ್ಟಿನದಾಗಿರಬಹುದು, ಆದರೆ ಸಾಂವಿಧಾನಿಕ ಚೌಕಟ್ಟಿನಲ್ಲಿ ವಿವಾಹ ವಿಚ್ಛೇದನ ಕೇವಲ ಧಾರ್ಮಿಕತೆಗೆ ಸೀಮಿತವಾದ ಸಂಗತಿಯಲ್ಲ. ಸೆಕ್ಯುಲರ್ ವ್ಯವಸ್ಥೆಯಲ್ಲಿ ಅದು ಸಲ್ಲದೂ ಕೂಡಾ. ಹಾಗೆಯೇ ಕಾನೂನು ನಿಯಮಗಳು, ಕಾನೂನು ಪಾಲಕರು, ನ್ಯಾಯಮೂರ್ತಿಗಳು, ಪೀಠಗಳೆಂಬ ವ್ಯವಸ್ಥೆ ಇರುವಲ್ಲಿ, ಬಹು ಸಂಸ್ಕೃತಿಯ ಸಮಾಜದಲ್ಲಿ ಅದು ವೈಜ್ಞಾನಿಕವೂ ಅಲ್ಲ. ಹಾಗೆಂದೇ ಎಲ್ಲಾ ಮುಸಲ್ಮಾನ ದೇಶಗಳಲ್ಲಿ ಪ್ರವಾದಿಯರ ಕಾಲದಲ್ಲಿ ಆಚರಣೆಯಲ್ಲಿದ್ದ ಷರಿಯಾ ಆಚರಣೆಯಲ್ಲಿಲ್ಲ. ಆದರೆ ಬಂಗಾಳದ ಮುಸ್ಲಿಮರಿಗೆ ಮಾತ್ರ ಸ್ಥಳೀಯ ಕಾನೂನನ್ನು ಮುರಿಯುವ ಧಾವಂತ?
ಆದರೆ ಬಸಿರ್ಹಾಟ್ ಪ್ರಕರಣವನ್ನು ಷರಿಯಾ ಪ್ರಕಾರವಾಗಿ ನಿರ್ಧರಿಸಬೇಕೆನ್ನುವವವರು ಎಲ್ಲಾ ಪ್ರಕರಣಗಳಿಗೂ ಷರಿಯಾ ಲಾಗೂ ಆಗಬೇಕು ಎಂದು ಹೇಳಲಾರರು. ಏಕೆಂದರೆ ಭಾರತದಂಥ ರಾಜಕಾರಣ ಮತ್ತು ತುಷ್ಟೀಕರಣ ಮೇರೆ ಮೀರಿರುವ ದೇಶದಲ್ಲಿ ಎಲ್ಲಾ ಸಂಗತಿಗಳಿಗೂ ಷರಿಯಾ ಲಾಗೂ ಆಗುವುದಾದರೆ ಇಸ್ಲಾಂ ಮೂಲಭೂತವಾದಿಗಳ, ಮತದ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುವವರ ಆಟ ನಡೆಯಲಾರದು. ಹಾಗಾಗಿ ಷರಿಯಾ ಎಂಬ ಹುಯಿಲು ಸ್ವಘೋಷಿತ ಮುಸಲ್ಮಾನ ನಾಯಕನ ಅಬ್ಬರ ಮಾತ್ರವಾಗಿ, ಗಲಭೆಗೆ ಹೇತುವಾಗಿ ಮತಾಂಧರ ಆರ್ಭಟಕ್ಕೆ ಮಾತ್ರ ಸೀಮಿತವಾಗುತ್ತಿದೆ. ಭಾರತದ ಬಹುತೇಕ ಇಸ್ಲಾಮಿ ಪಂಡಿತರು ಸಾಮಾನ್ಯ ಮುಸಲ್ಮಾನರಲ್ಲಿ ಷರಿಯಾ ಎಂದರೆ ಇಷ್ಟೇ ಎನ್ನುವ ಧೋರಣೆಯನ್ನು ತಲೆಯಲ್ಲಿ ತುಂಬಿಬಿಟ್ಟಿದ್ದಾರೆ. ಅವರು ಷರಿಯಾದಲ್ಲಿರುವ ತಲಾಖ್ ಬಗ್ಗೆ ಸಂಪೂರ್ಣ ವಿವರಗಳನ್ನು ಬಚ್ಚಿಡುತ್ತಾರೆ, ವಕ್ಫ್‌ ಬಗ್ಗೆ ಷರಿಯಾ ಏನನ್ನುತ್ತದೆ ಎಂಬುದಕ್ಕೆ ಅವರು ಉತ್ತರ ಹೇಳಲಾರರು. ಷಫಾ ಹಕ್ಕಿನ ಬಗೆ, ಅಲ್ ಫರಾಯಿದ್ ಎಂಬ ಉತ್ತರಾಧಿಕಾರದ ಬಗೆ ಷರಿಯಾ ಏನು ಹೇಳುತ್ತದೆ ಎಂಬುದನ್ನು ಯಾವ ಧಾರ್ಮಿಕ ಮುಖಂಡನೂ, ಮುಸ್ಲಿಂ ರಾಜಕಾರಣಿಯೂ ಹೇಳುವುದಿಲ್ಲ. ಪರಿಣಾಮ ಸಾಮಾನ್ಯ ಮುಸಲ್ಮಾನನಲ್ಲಿ ಷರಿಯಾ ಎಂದರೆ ಕೇವಲ ಬಂಗಾಳದಲ್ಲಿ ಯುವಕನನ್ನು ಶಿಕ್ಷಿಸಲು, ತ್ರಿವಳಿ ತಲಾಖಿನ ಸಮರ್ಥನೆಗಾಗಿ, ಕಾಶ್ಮೀರದಂಥ ಪ್ರದೇಶದಲ್ಲಿ ಇಸ್ಲಾಮಿ ರಾಜ್ಯ ಸ್ಥಾಪನೆಗಾಗಿ ಇರುವಂಥಾ ನಿಯಮ ಎಂಬ ಭಾವನೆ ಮೂಡಿದೆ.
ವಕ್ಫ್‌ ನಿಯಮವನ್ನೇ ತೆಗೆದುಕೊಳ್ಳಿ. ವಕ್ಫ್‌ ಎಂಬುದು ಇಸ್ಲಾಮಿ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನದ ಒಂದು ಅಂಗ. ಅರಬ್ ಸ್ಥಾನದ ರಾಷ್ಟ್ರಗಳಿಗೂ ಉಳಿದ ಮುಸಲ್ಮಾನ ದೇಶಗಳ ವಕ್ಫ್‌ ನಿಯಮಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಧರ್ಮಾರ್ಥ ಉದ್ದೇಶಗಳಿಗಾಗಿ ಶೇಖರಿಸಲ್ಪಡುವ ದತ್ತಿಗಳೇ ಈ ವಕ್ಫ್‌‌ಗಳು. ದೀನರಿಗೆ ಸಹಾಯಾರ್ಥವಾಗಿ ವಕ್ಫ್‌‌ಗಳು ಬಳಕೆಯಾಗಬೇಕು ಎಂದು ಇಸ್ಲಾಮಿ ಕಾನೂನು ಹೇಳುತ್ತದೆ. ಆದರೆ ಭಾರತದ ಹಲವು ರಾಜ್ಯಗಳಲ್ಲಿ ವಕ್ಫ್‌ ಮಂಡಳಿ ಅಥವಾ ವಕ್ಫ್‌ ಬೋರ್ಡ್‌ಗಳು ಭ್ರಷ್ಟಾಚಾರದ ಕೊಂಪೆಗಳು. ಅಲ್ಲದೆ ಕೆಲವು ರಾಜ್ಯಗಳಲ್ಲಿ ಷಿಯಾ ಮತ್ತು ಸುನ್ನಿಗಳಿಗೆ ಪ್ರತ್ಯೇಕವಾದ ವಕ್ಫ್‌ ಬೋರ್ಡ್‌ಗಳಿವೆ. ಮದರಸಾಗಳನ್ನು ತೆರೆಯುವುದು ಮತ್ತು ಹಜ್ ಯಾತ್ರೆಗೆ ಹಣ ಒದಗಿಸುವುದನ್ನು ಬಿಟ್ಟರೆ ಈ ವಕ್ಫ್‌ ಮಂಡಳಿಗಳಿಗೆ ಬೇರೇನೂ ಕೆಲಸವಿಲ್ಲ. ಮುಸಲ್ಮಾನ ದೀನರಿಗೆ ಚಿಕ್ಕಾಸೂ ಪ್ರಯೋಜನವಾಗದ ಈ ವಕ್ಫ್‌ ಮಂಡಳಿಗಳು ನಿಜಕ್ಕೂ ಷರಿಯಾ ಪ್ರಕಾರ ನಡೆಯುತ್ತಿದೆಯೇ? ಹಜ್ ಯಾತ್ರೆಯನ್ನು ಸ್ವಸಂಪಾದನೆಯಿಂದ ಮಾಡಬೇಕು ಎಂಬ ಬೋಧನೆ ಇರುವಾಗ ವಕ್ಫ್‌‌ಗಳು ಆಧುನಿಕ ವ್ಯವಸ್ಥೆಯಲ್ಲಿ ಇಸ್ಲಾಮಿ ವಿರೋಧಿಯಗಲಿಲ್ಲವೇ? ಬಂಗಾಳದ ಪ್ರಕರಣ ಷರಿಯಾ ಪ್ರಕಾರ ಇತ್ಯರ್ಥವಾಗಬೇಕಾದರೆ ವಕ್ಫ್‌ ಕೂಡಾ ಷರಿಯಾ ಪ್ರಕಾರವೇ ನಡೆಯಲಿ. ಅದರಲ್ಲಿ ಮುಲಾಜೇಕೆ?
ಷರಿಯತ್ತಿನ ಇಜ್ತಿಹಾದ್ ಪದ್ಧತಿಯ ಪ್ರಕಾರ ಈಗಿನ ಇಸ್ಲಾಮಿನಲ್ಲಿರುವ ಬಹುಪತ್ನಿತ್ವ ಮತ್ತು ಏಕಪಕ್ಷೀಯ ತಲಾಖನ್ನು ನಿಷೇಧಿಸಬಹುದು. ಆದರೆ ಯಾವ ಮುಸಲ್ಮಾನ ಧರ್ಮಾಧಿಕಾರಿಯೂ ಷರಿಯತ್ ಅನುಸಾರವಾಗಿ ಅದನ್ನು ಅನುಷ್ಠಾನ ಮಾಡಲು ಮುಂದೆ ಬರುತ್ತಿಲ್ಲ. ಷರಿಯತ್ ಪ್ರಕಾರ ಲಾಟರಿ, ಜೂಜಾಡುವುದು, ಮದ್ಯಪಾನಗಳು ಸಂಪೂರ್ಣ ನಿಷೇಧ. ಪಂಡಿತರು ಅದನ್ನು ಷರಿಯಾ ಪ್ರಕಾರ ಇಸ್ಲಾಮಿನಲ್ಲಿ ಏಕೆ ಅನುಷ್ಠಾನಕ್ಕೆ ತರುತ್ತಿಲ್ಲ? ಮದರಸಾ ಪದ್ಧತಿಯ ಬಗೆಗೂ ಷರಿಯತ್‌ನಲ್ಲಿ ಸುಧೀರ್ಘ ಉಲ್ಲೇಖಗಳಿವೆ. ಮದರಸಾಗಳಲ್ಲಿ ಸದಾಚಾರ, ತರ್ಕ, ಛಂದಸ್ಸು, ಅಲಂಕಾರ, ಸಾಹಿತ್ಯ, ಚರಿತ್ರೆ, ಸೃಜನಶೀಲ, ಸಾಹಿತ್ಯ ವಿಮರ್ಶೆಗಳನ್ನು ಕಲಿಸಬೇಕು ಎಂದಿದೆ. ಆದರೆ ಭಾರತದ ಯಾವ ಮದರಸಗಳಲ್ಲೂ ಇವುಗಳ ತರಬೇತಿಯಾಗುತ್ತಿಲ್ಲ. ಮದರಸಗಳು ಮತಾಂಧತೆಯನ್ನು ತುಂಬಿಸುವ ಕಾರ್ಖಾನೆಗಳಾಗುತ್ತಿದೆ. ಮದರಸ ವ್ಯವಸ್ಥೆ ಷರಿಯಾ ಪ್ರಕಾರ ಜಾರಿಯಗಬಾರದೇಕೆ?
ಅಲ್ಲದೆ ಕುರಾನ್ ಮತ್ತು ಹದೀಸ್ ಪ್ರಕಾರ ಇಸ್ಲಾಮಿನಲ್ಲಿ ಇನ್ನೂ ಕೆಲ ನಿಯಮಗಳಿವೆ. ವ್ಯಭಿಚಾರಕ್ಕೆ ಕಲ್ಲು ಹೊಡೆದು ಕೊಲ್ಲುವುದು ಅಥವಾ ನೂರು ಚಾಟಿ ಏಟುಗಳನ್ನು ಹೊಡೆಯುವುದು. ಗೌರವಾನ್ವಿತ ಮಹಿಳೆಯ ಮೇಲೆ ಸುಳ್ಳು ವ್ಯಭಿಚಾರದ ಆರೋಪ ಮಾಡಿದರೆ 80 ಚಾಟಿ ಏಟುಗಳು, ಶರಾಬು ಕುಡಿಯುವುದಕ್ಕೆ 80 ಚಾಟಿ ಏಟು, ಕಳ್ಳತನಕ್ಕೆ ಬಲಗೈ ಕತ್ತರಿಸುವುದು. ಒಬ್ಬನನ್ನು ಅಂಗವಿಕಲಗೊಳಿಸಿದರೆ ಆರೋಪಿಯನ್ನು ಅಂಗವಿಕಲಗೊಳಿಸುವುದು, ಅವಿವಾಹಿತ ಸಂಭೋಗಕ್ಕಾಗಿ ನೂರು ಛಡಿ ಏಟು ಅಥವಾ ಕೆಲವು ಸಂದರ್ಭಗಳಲ್ಲಿ ಕಲ್ಲು ಹೊಡೆಯುವ ಶಿಕ್ಷೆಗಳೂ ಇವೆ. ಪಂಡಿತರು ಇಂಥಾ ಶಿಕ್ಷೆಯನ್ನೂ ಅಳವಡಿಸಬೇಕೆಂದು ಗಲಭೆ ಹೂಡುವರೇ? ಕಳ್ಳತನ, ವ್ಯಭಿಚಾರಗಳು ಷರಿಯಾ ಅಡಿಯಲ್ಲಿ ಬರಬೇಕು ಎನ್ನದ ಮೇಲೆ ಭಾವನೆಗಳ ಮೇಲಾದ ನೋವಿಗೆ ಮಾತ್ರ ಷರಿಯಾ ಪ್ರಕಾರ ಶಿಕ್ಷೆ ನೀಡಬೇಕೆಂದು ಹೇಳುವುದು ಇಸ್ಲಾಮಿಗೆ ಮಾಡುವ ಮಾಡುವ ವಂಚನೆಯಲ್ಲವೇ? ತಮ್ಮ ಮೂಗಿನ ನೇರಕ್ಕೆ ಇಸ್ಲಾಮನ್ನು, ಅದರ ನಿಯಮಗಳನ್ನು ಹೇಳುವ ಶೋಕಿಯನ್ನು ಕೆಲವರು ಇನ್ನಾದರೂ ಬಿಡಬೇಡವೇ?

Comments are closed.