Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕನ್ನಡ ಚಿತ್ರಪ್ರೇಮಿ ಯಾವತ್ತೂ ಮದ್ರಾಸಿನ ಮರ್ಜಿಗೆ ಬೀಳಲಿಲ್ಲ, ಏಕೆಂದರೆ…?

ಕನ್ನಡ ಚಿತ್ರಪ್ರೇಮಿ ಯಾವತ್ತೂ ಮದ್ರಾಸಿನ ಮರ್ಜಿಗೆ ಬೀಳಲಿಲ್ಲ, ಏಕೆಂದರೆ…?

ಕನ್ನಡ ಚಿತ್ರಪ್ರೇಮಿ ಯಾವತ್ತೂ ಮದ್ರಾಸಿನ ಮರ್ಜಿಗೆ ಬೀಳಲಿಲ್ಲ, ಏಕೆಂದರೆ…?
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಪಡೆಯಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾವಂತನ ಕನಸ್ಸು. ಇನ್ನು ಕೆಲವರಿಗೆ ಶ್ರಮವಿಲ್ಲದೆ ಗೌರವ ಡಾಕ್ಟರೇಟ್ ಪಡೆಯುವ ಆಸೆ. ಹೀಗೆ ತಮ್ಮ ಹೆಸರಿನ ಮುಂದೆ ಡಾ. ಎಂದು ಸೇರಿಸಿಕೊಳ್ಳಲು ಕೆಲವರು ಪಡುವ ಪರಿಪಾಟಲುಗಳು ಆಗಾಗ ವಿವಾದಗಳನ್ನು ಸೃಷ್ಟಿಸಿದ್ದನ್ನು ನೋಡಿದ್ದೇವೆ. ವಶೀಲಿಯಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದನ್ನೂ ನೋಡಿದ್ದೇವೆ. ಕೆಲವರಿಂದ ಆ ಪದವಿಯ ಗೌರವ ಹೆಚ್ಚಾಗಿದ್ದನ್ನೂ, ಕೆಲವರಿಂದ ಆ ಪದವಿಯ ಬಗೆಗಿನ ಗೌರವ ಕಡಿಮೆಯಾಗಿದ್ದನ್ನೂ ನೋಡಿದ್ದೇವೆ.
ಹಾಗೆಯೇ ಗೌರವ ಡಾಕ್ಟರೇಟಿನ ಗೌರವ ಹೆಚ್ಚಾಗುವಂತೆ ಮಾಡಿದ ಮಹಾನುಭಾವರನ್ನು ನೆನಪು ಮಾಡಿಕೊಂಡಾಗ ಮೊದಲು ನೆನಪಿಗೆ ಬರುವವರು ಕನ್ನಡದ ಹೆಮ್ಮೆಯ ಡಾ. ರಾಜ್ ಕುಮಾರ್ ಅವರು. ಒಬ್ಬ ಸಾಮಾನ್ಯ ರೈತನ ಮಗ, ಕುಗ್ರಾಮವೊಂದರಲ್ಲಿ ಹುಟ್ಟಿದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜರಾಗಿದ್ದ ಅವರಿಗೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ನಮ್ಮ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟನ್ನು ಕರೆದು ಕೊಟ್ಟು ತನ್ನ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಹೌದು, ಮೈಸೂರು ವಿಶ್ವವಿದ್ಯಾಲಯದ ಆ ಗೌರವ ಡಾಕ್ಟರೇಟನ್ನು ರಾಜ್‌ಕುಮಾರರಿಗೆ ನೀಡಿ ತನ್ನ ಗೌರವವನ್ನೂ ಹೆಚ್ಚಿಸಿಕೊಂಡಿತು. ಏಕೆಂದರೆ ಎಲ್ಲಾ ವಿಶ್ವವಿದ್ಯಾಲಯಗಳು ಪ್ರತೀ ವರ್ಷ ಹಲವಾರು ಸಾಧಕರಿಗೆ ಗೌರವ ಡಾಕ್ಟರೇಟುಗಳನ್ನು ಪ್ರದಾನ ಮಾಡುತ್ತವೆ. ಗೌರವ ಡಾಕ್ಟರೇಟು ಪಡೆದವರಲ್ಲಿ ಬಹುತೇಕರು ಮರುದಿನದಿಂದಲೇ ತಮ್ಮ ಹೆಸರಿನ ಮುಂದೆ ಡಾ. ಸೇರಿಸಿ ವಿಸಿಟಿಂಗ್ ಕಾರ್ಡು, ರಬ್ಬರ್‌ಸ್ಟಾಂಪ್‌ಗಳನ್ನು ಪ್ರಿಂಟ್ ಮಾಡಿಸುವ ತುರಾತುರಿಯಲ್ಲಿರುತ್ತಾರೆ.
ಬಹುತೇಕ ಸಂದರ್ಭದಲ್ಲಿ ಇವರ ಡಾ ಅನ್ನು ಊರಿಗೇ ಸಾರಿದರೂ ಊರು ಮಾತ್ರ ಅವರನ್ನು ಹಾಗೆ ಭಾವಿಸಿರುವುದಿಲ್ಲ. ಸಮಾಜದೆದುರಲ್ಲಿ ಆತನ ಬಿಂಬವೇನಿರುತ್ತದೋ ಅದನ್ನೇ ಸಮಾಜ ಪ್ರತಿಬಿಂಬಿಸುತ್ತದೆ. ಆದರೆ ರಾಜ್‌ಕುಮಾರರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನಿಸಿದ ಮರುಕ್ಷಣದಿಂದಲೇ ಅವರನ್ನು ರಾಜ್ಯದ ಜನ ಡಾ. ರಾಜ್ ಕುಮಾರ್ ಎಂದು ಕರೆಯಲಾರಂಭಿಸಿದರು. ಏಕೆಂದರೆ ಅದನ್ನು ರಾಜ್‌ಕುಮಾರರು ತೀವ್ರ ಮುಜುಗರದಿಂದಲೇ ಸ್ವೀಕರಿಸಿದ್ದರು, ಸ್ವೀಕರಿಸಿದ ನಂತರ ಅವರು ಒಂದೆಡೆ ನಾನು ನಾಲ್ಕನೆ ಕ್ಲಾಸ್ ಓದಿದವನು. ಇವೆಲ್ಲಾ ದೊಡ್ಡದೊಡ್ಡವರಿಗೆ ಕೊಡುವಂಥಾದ್ದು. ನಾನೇನೂ ಎಂಎ ಓದಿದವನಲ್ಲ. ಊರಲ್ಲಿ ಎಮ್ಮೆ ಮೇಯಿಸುತ್ತಿದ್ದವನು ಎಂದು ಎಲ್ಲರೆದುರೇ ಹೇಳಿಬಿಟ್ಟಿದ್ದರು ತುಂಬಿದ ಕೊಡ ತುಳಕದು ಎಂಬಂತೆ. ಅಷ್ಟಕ್ಕೂ ತನ್ನ ಕೊಡ ತುಂಬಿದೆ ಎಂದು ಸ್ವತಃ ಅವರಿಗೇ ತಿಳಿದಿರಲಿಲ್ಲ!
ರಾಜ್ಯದ ಜನರಿಗೆ ರಾಜ್‌ಕುಮಾರರ ಡಾಕ್ಟರೇಟ್ ಟೋಪಿಗಿಂತ ಅವರ ಮುಗ್ಧ ಮಾತುಗಳು ಸೆಳೆದವು. ಜನ ತಮ್ಮ ಮನದ ಮಾತುಗಳನ್ನು ಅವರ ಬಾಯಿಂದ ಕೇಳಿದ್ದರು. ದೊಡ್ಡವರಾದರೂ ಈ ರಾಜ್‌ಕುಮಾರ್ ಸಾಮಾನ್ಯರಲ್ಲಿ ಸಾಮಾನ್ಯರು ಎಂಬುದನ್ನು ಜನ ಮತ್ತೊಮ್ಮೆ ಗಮನಿಸಿದ್ದರು. ಅದರ ಪರಿಣಾಮ ಅವರ ಹೆಸರಿನ ಮುಂದೆ ಡಾ ಎಂಬುದು ಕಡ್ಡಾಯವಾಯಿತು. ಅದು ಮತ್ತೆಂದೂ ಮಾಯವಾಗಲಿಲ್ಲ. ಜನ ಅವರ ಹೆಸರಿರುವವರೆಗೂ ಆ ಡಾ ಕೂಡಾ ಶಾಶ್ವತವೆಂಬಂತೆ ಮಾಡಿಬಿಟ್ಟರು. ಡಾ.ರಾಜ್ ಕುಮಾರ್ ಕನ್ನಡಿಗರ ಮನಸ್ಸಲ್ಲಿ ಇಂದಿಗೂ ದೊಡ್ಡವರಾಗಿರುವುದಕ್ಕೆ ಅವರ ಈ ಗುಣವೇ ಕಾರಣ. ಅವರ ನಟನೆ, ಅವರ ಗಾಯನಕ್ಕಿಂತಲೂ ಅವರು ಜನರನ್ನು ಸೆಳೆದಿರುವುದು ಅವರ ಈ ಸಾತ್ವಿಕ, ಮುಗ್ಧ ಮನಸ್ಸುಗಳಿಂದಲೇ.
ಒಬ್ಬ ಮೇರು ನಟನಾಗಿದ್ದರೂ ಜನ ಅವರನ್ನು ಸ್ಟಾರ್‌ಗಿರಿಗಿಂತಲೂ ಹೆಚ್ಚಿನ ಪ್ರೀತಿಯನ್ನು, ಗೌರವವನ್ನು ಕೊಟ್ಟರು. ಅವರಿಗೆ ನಟಸಾರ್ವಭೌಮ, ವರನಟ, ಕರುನಾಡ ಕುಲತಿಲಕ, ಕನ್ನಡ ಕಂಠೀರವ, ಕನ್ನಡದ ಮಾಣಿಕ್ಯ, ಮುತ್ತುರಾಜ ಮುಂತಾದ ಬಿರುದಾವಳಿಗಳಿದ್ದರೂ ಜನ ಅವರನ್ನು ಕರೆದದ್ದು ಅಣ್ಣಾವ್ರು ಎಂದೇ. ಬಹುಶಃ ಜಗತ್ತಿನ ಯಾವ ನಟನಿಗೂ ಸಿಗದಷ್ಟು ಬಿರುದುಗಳು ರಾಜಕುಮಾರರಿಗಿತ್ತು. ಅಲ್ಲದೆ ಜಗತ್ತಿನ ಬೇರಾವ ನಟನಿಗೂ ಸಿಗದ ಅಣ್ಣನ ಸ್ಥಾನವನ್ನು ಜನ ಅವರಿಗೆ ಕೊಟ್ಟರು. ಅದಕ್ಕೆ ಕಾರಣ ಅವರ ಮಗುವಿನಂಥ ಮನಸ್ಸು. ಎತ್ತರಕ್ಕೇರಿದಾಗ ಬೀಳುವ ಸಂಭವ ಹೆಚ್ಚು. ಜತೆಗೆ ಬಿದ್ದ ಆಘಾತವೂ ಹೆಚ್ಚು. ಆದರೆ ರಾಜಕುಮಾರರರು ಎಷ್ಟೇ ಎತ್ತರಕ್ಕೇರಿದರೂ ಬೀಳದಿರುವಂತೆಯೇ ಬದುಕಿದರು. ಜನ ಆ ಬದುಕನ್ನು ಇಷ್ಟಪಟ್ಟರು.
ಇಷ್ಟಕ್ಕೂ ರಾಜಕುಮಾರ್ ಎಂಬ ನಟ ಕನ್ನಡಕ್ಕೆ ತಂದುಕೊಟ್ಟ ಮಾನ್ಯತೆಯನ್ನಾದರೂ ಜನ ಹೇಗೆ ಮರೆತಾರು?
ರಾಜ್‌ಕುಮಾರರು ಚಿತ್ರರಂಗಕ್ಕೆ ಬಂದ ಕಾಲಮಾನದಲ್ಲಿ ದಕ್ಷಿಣ ಭಾರತದಲ್ಲೇ ದಿಗ್ಗಜ ನಟರನೇಕರಿದ್ದರು. ಪಕ್ಕದ ತಮಿಳು ಮತ್ತು ತೆಲುಗು ಚಿತ್ರರಂಗ ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿತ್ತು. ಅಲ್ಲದೆ ಅಣ್ಣಾದೊರೈ, ಶಿವಾಜಿ ಗಣೇಶನ್, ಎನ್‌ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಮೊದಲಾದವರ ಸುವರ್ಣಯುಗಗಳು ನಡೆಯುತ್ತಿದ್ದವು. ಕರ್ನಾಟಕದಲ್ಲೂ ಅವರ ಹವಾ ನಡೆಯುತ್ತಿತ್ತು. ಆದರೆ ಆ ಹೊತ್ತಿನ ಕನ್ನಡ ಚಿತ್ರರಂಗದ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಿತ್ತು. ಮಹಾಸಾಗರದಂತಿದ್ದ ತಮಿಳು ಮತ್ತು ತೆಲುಗು ಚಿತ್ರರಂಗದ ಸಹಕಾರಗಳಿಲ್ಲದೆ ಕನ್ನಡ ಚಿತ್ರಗಳು ಹೊರಬರುವುದನ್ನು ಊಹಿಸಿಕೊಳ್ಳುದೇ ಕಷ್ಟ ಎಂಬ ಪರಿಸ್ಥಿತಿಯಿತ್ತು. ಸ್ಟುಡಿಯೋಗಳಿಂದ ಹಿಡಿದು ಸಕಲ ತಂತ್ರಜ್ಞರವರೆಗೆ ಎಲ್ಲವೂ ಮದ್ರಾಸಿನ ಮರ್ಜಿಯಿದ್ದರೆ ಮಾತ್ರ ಈಡೇರುತ್ತಿದ್ದವು.
ಕನ್ನಡದ ಚಿತ್ರರಂಗ ಸಂಪೂರ್ಣ ಮದ್ರಾಸ್ ಕೇಂದ್ರಿತವಾಗಿತ್ತು. ಅಂಥ ಹೊತ್ತಲ್ಲಿ ಕನ್ನಡ ಚಿತ್ರರಂಗವನ್ನು ಉಳಿದ ಭಾಷೆಗಳೂ ದಿಟ್ಟಿಸುವಂತೆ ಮಾಡಿದವರು ಒಬ್ಬನೇ ಒಬ್ಬ ಡಾ. ರಾಜಕುಮಾರ್. ಅದಾಗಲೇ ಜನಪ್ರಿಯತೆಯ ಉತ್ತುಂಗಕ್ಕೇರಿದವರ ನಡುವೆ ತನ್ನ ನೆಲೆಯನ್ನೂ ತನ್ನವರಿಗೆ ನೆಲೆಯನ್ನೂ ಕಲ್ಪಿಸಿದ ಸಾಹಸವೊಂದೇ ಅವರನ್ನು ಅಣ್ಣಾವ್ರು ಎಂಬ ಉಪಾದಿ ಅನ್ವರ್ಥವಾಗುವಂತೆ ಮಾಡುತ್ತದೆ. ಅಂಥ ಸಂದರ್ಭದಲ್ಲೇ ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳನ್ನು ಕೊಟ್ಟು ಇಡೀ ಚಿತ್ರರಂಗವೇ ಕನ್ನಡದತ್ತ ನೋಡುವಂತೆ ಮಾಡಿದವರಿಗೆ ಕನ್ನಡದ ಜನ ಅಣ್ಣನ ಸ್ಥಾನಕ್ಕಿಂತ ಹೆಚ್ಚಿನ ಪ್ರೀತಿ ಇನ್ನೇನು ಕೊಡಲು ಸಾಧ್ಯ? ತೆಲುಗು ಚಿತ್ರರಂಗದ ಪೌರಾಣಿಕ-ಐತಿಹಾಸಿಕ ಚಿತ್ರಗಳ ತಜ್ಞತೆಯನ್ನು ಮೀರಿಸಲು ನಿರ್ದೇಶಕರಷ್ಟೇ ಕಾರಣರಾದವರು ಈ ಅಣ್ಣಾವ್ರು. ನೆರೆಯ ರಾಜ್ಯಗಳ ಚಿತ್ರರಂಗದಲ್ಲಿ ಅದಾಗಲೇ ಇದ್ದ ಅಹಂ ಅನ್ನು ಇಳಿಸಲು ಸಾಧ್ಯವಾಗಿದ್ದು, ಅಹಮಿಕೆಯೇ ಇಲ್ಲದ ಅಣ್ಣಾವ್ರಿಂದ ಮಾತ್ರ. ಇಳಿಯರಾಜಾ, ಅನಿಲ್ ಕಪೂರರಂಥ ಮೇರು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಬರುವಂತೆ ಮಾಡಲು ಕಾರಣವಾಗಿದ್ದೇ ಡಾ.ರಾಜ್ ಕುಮಾರರ ಚಿತ್ರಗಳ ಯಶಸ್ಸು. ಈ ಮೂಲಕ ಕನ್ನಡ ಚಿತ್ರರಂಗಕ್ಕೂ ಭವಿಷ್ಯವಿದೆ, ಇಲ್ಲೂ ಪ್ರತಿಭೆಗಳಿವೆ ಎಂದು ಅನ್ಯ ಭಾಷಿಕರೂ ಗುರುತಿಸುವಂತಾದರು.
ಕೆಲವರು ಯಶಸ್ಸು ಶೀಘ್ರವಾಗಿ ಬರಲಿ ಎಂದು ಹಪಾಹಪಿಸುತ್ತಾರೆ. ಆದರೆ ಯಶಸ್ಸು ಕೆಲವರಿಗೆ ಮಾತ್ರ ಶೀಘ್ರವಾಗಿ ಬರುತ್ತದೆ. ಅದು ಹೆಚ್ಚು ಶ್ರಮವನ್ನು ಬೇಡುತ್ತದೆ. ಭ್ರಮೆಯಲ್ಲಿರುವವರನ್ನು ಯಶಸ್ಸು ಒದ್ದೋಡಿಸುತ್ತದೆ. ಡಾ. ರಾಜ್‌ಕುಮಾರರಲ್ಲಿ ಅಂಥ ದಣಿವರಿಯದ ಶ್ರಮವಿತ್ತು. ಜತೆಗೆ ಯಶಸ್ಸಿನ ಗುಂಗಲ್ಲಿ ಅವರು ಯಾವ ಕೆಲಸವನ್ನೂ ಮಾಡಲಿಲ್ಲ. ಯಶಸ್ಸು ಬಂದಾಗ ತನ್ನೊಬ್ಬನದ್ದೇ ಶ್ರಮ ಎಂದೂ ಬೀಗಲಿಲ್ಲ. ತನ್ನ ಎಲ್ಲಾ ಯಶಸ್ಸನ್ನು ಅವರು ಜನರಿಗೆ ಅರ್ಪಿಸಿಬಿಟ್ಟರು. ಜನರನ್ನೇ ದೇವರು ಎಂದರು. ಈ ಮುತ್ತುರಾಜನನ್ನು ಡಾ. ರಾಜ್ ಕುಮಾರ್ ಮಾಡಿದ್ದು ನೀವೇ ಅಂದರು. ಎಲ್ಲೂ ತನ್ನ ಯಶಸ್ಸನ್ನು ತಾನು ಎನ್ನದೆ ನೀವೇ ಎಂದು ಎದೆಯಾಳದಿಂದ ಹೇಳುತ್ತಿದ್ದ ರಾಜ್‌ಕುಮಾರರ ಮಾತನ್ನು ಯಾರೂ ಸಂದೇಹಿಸಲಿಲ್ಲ. ಏಕೆಂದರೆ ಅವರ ಮಾತು ಮತ್ತು ಮನಸ್ಸುಗಳ ನಡುವೆ ಪರದೆಯಿಲ್ಲ ಎಂಬುದು ಎಂಥವರಿಗಾದರೂ ತಿಳಿದುಬಿಡುತ್ತಿತ್ತು.
ಆ ಹೊತ್ತಿಗೆ ಅವರಿಗೆ ರಾಜ್ಯದಲ್ಲಿ ಪ್ರಬಲ ರಾಜಕಾರಣಿಗಳಿಗಿಂತಲೂ ಹೆಚ್ಚಿನ ಜನಪ್ರಿಯತೆಯಿತ್ತು. ಯಾವುದೋ ಪಕ್ಷವನ್ನು ಸೇರಿ ಅಥವಾ ಹೊಸ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಬರುವ ಎಲ್ಲಾ ಶಕ್ತಿಯೂ ರಾಜ್‌ಕುಮಾರರಿಗಿತ್ತು. ಆ ದಾರಿಯಲ್ಲಿ ಅವರು ಯಶಸ್ವಿಯಾಗಲಾರರು ಎಂಬುದಕ್ಕೆ ಯಾವೊಂದು ಸಣ್ಣ ಕಾರಣಗಳೂ ಇರಲಿಲ್ಲ. ಏಕೆಂದರೆ ಅಂದಿನ ಅವರ ವರ್ಚಸ್ಸು ಹಾಗಿತ್ತು. ನೆರೆಯ ಆಂಧ್ರಪ್ರದೇಶದಲ್ಲಿ ನಂದಮೂರಿ ತಾರಕ ರಾಮರಾವು (ಎನ್‌ಟಿಆರ್) ಆರೇ ತಿಂಗಳ ಅವಧಿಯಲ್ಲಿ ಹೊಸ ಪಕ್ಷವನ್ನೇ ಕಟ್ಟಿ ಮುಖ್ಯಮಂತ್ರಿಯೂ ಆಗಿದ್ದರು. ಇತ್ತ ತಮಿಳುನಾಡಿನಲ್ಲಿ ಅಣ್ಣಾದೊರೈ, ಶಿವಾಜಿ ಗಣೇಶನ್ ಕೂಡಾ ರಾಜಕೀಯದ ಹೊಸ ಅಲೆಯನ್ನೇ ರಾಜ್ಯದಲ್ಲಿ ಮೂಡಿಸಿದ್ದರು. ಅದೇ ಹೊತ್ತಲ್ಲಿ ಕರ್ನಾಟಕದಲ್ಲಿ ರಾಜ್ ಕುಮಾರರಿಗೆ ಬಹುದೊಡ್ಡ ತಾರಾಸ್ಥಾನವಿತ್ತು. ಅವರ ಒಂದು ಮಾತಿಗೆ ರಾಜ್ಯ ರಾಜಕಾರಣದ ಚಿತ್ರಣವೇ ಬದಲಾಗುತ್ತಿತ್ತು. ಆದರೆ ರಾಜ್‌ಕುಮಾರ್ ರಾಜಕೀಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿಬಿಟ್ಟರು.
ಅನೇಕರ ಅಪೇಕ್ಷೆಯ ಮೇರೆಗೆ ಗೋಕಾಕ್ ಹೋರಾಟದಲ್ಲಿ ಭಾಗವಹಿಸಿದ್ದೊಂದು ಬಿಟ್ಟರೆ ರಾಜಕೀಯದಿಂದ ಮಾರು ದೂರದಲ್ಲೇ ಅವರು ಉಳಿದುಬಿಟ್ಟರು. ಮನಃಶಾಸ್ತ್ರದ ಪ್ರಕಾರ ಕೂಡ ಇದೊಂದು ಗಟ್ಟಿ ನಿಲುವು. ಏಕೆಂದರೆ ಸ್ಟಾರ್‌ಡಂ ಅನ್ನು ಉಳಿಸಿಕೊಳ್ಳಲು ಏನಕೇನ ಪ್ರಯತ್ನಿಸುವುದು, ಅದಕ್ಕಾಗಿ ನಾನಾ ದೊಂಬರಾಟಗಳನ್ನಾಡುವುದು, ಖಿನ್ನತೆಗೆ ಹೊರಟುಹೋಗುವುದು ಎಲ್ಲಾ ಕಾಲದ ಸಂಗತಿ. ಆದರೆ ರಾಜ್ ಕುಮಾರರು ಆ ಯಾವ ಹಂತವನ್ನೂ ಮುಟ್ಟಲಿಲ್ಲ. ಏಕೆಂದರೆ ಅವರಾರು ಎಂಬುದು ಅವರಿಗೇ ತಿಳಿದಿರಲಿಲ್ಲ. ಅಥವಾ ತಾನಾರು ಎಂಬುದನ್ನು ಅವರು ವಿಶ್ಲೇಷಣೆಗೆ ಒಡ್ಡಿದ್ದೇ ಬೇರೊಂದು ದಿಕ್ಕಿನಲ್ಲಿ. ಹಾಗಾಗಿ ಪಕ್ಷ ಪ್ರೇಮದ ಸಂದರ್ಭವೇ ಅವರಿಗೆ ಎದುರಾಗಲಿಲ್ಲ. ರಾಜಕೀಯ ಮುಖ್ಯವಾಗಲಿಲ್ಲ. ತಾನೊಬ್ಬ ನಟ, ತನಗೆ ಗೊತ್ತಿರುವುದು ಚಿತ್ರರಂಗವೊಂದೇ ಎಂಬಂತೆ ಉಳಿದ ಅವರೊಬ್ಬರು ನಿಜವಾದ ಕರ್ಮಯೋಗಿ.
ಕೆಲವರ ವ್ಯಕ್ತಿತ್ವ ಸಮಾಜದಲ್ಲಿ ಅವರಿಗೊಂದು ಸ್ಥಾನವನ್ನು ಕಲ್ಪಿಸುತ್ತದೆ. ಆದರೆ ಆ ಸ್ಥಾನ ಆ ವ್ಯಕ್ತಿತ್ವವನ್ನೇ ಹಾಳುಮಾಡುವ ಸಂಭವವೂ ಹೆಚ್ಚಿರುತ್ತದೆ. ಸ್ಥಾನ ಎಂಬುದು ತಂತಿಯ ಮೇಲಿನ ನಡಿಗೆಯಂತೆ. ಯಾವುದೋ ಹೊತ್ತಲ್ಲಿ ಅಲ್ಲಾಡಿಸಿಬಿಡುತ್ತದೆ. ಬೀಳಿಸಿಯೂಬಿಡುತ್ತದೆ. ಮತ್ತೆಂದೂ ಏಳಲಾರದಂತೆ ಮಾಡಿಬಿಡುತ್ತದೆ. ಅಂಥಲ್ಲಿ ವ್ಯಕ್ತಿತ್ವ ಕಲ್ಪಿಸಿದ ಸ್ಥಾನವನ್ನು ಜತನದಿಂದ ಕಾಪಾಡುವುದು ಕೆಲವರಿಗಷ್ಟೇ ಸಾಧ್ಯವಾಗುತ್ತದೆ. ಅಂಥ ಕೆಲವರಲ್ಲಿ ಒಬ್ಬರು ಡಾ. ರಾಜ್ ಕುಮಾರ್. ಎಪ್ರಿಲ್ 24ಕ್ಕೆ ಅವರ ಜನ್ಮದಿನ. ಡಾ. ರಾಜ್ ಮೇರು ನಟ-ಗಾಯಕನಿಗಿಂತ ಒಂದು ಮಹಾ ವ್ಯಕ್ತಿತ್ವ ಎಂಬ ಕಾರಣಕ್ಕೂ ಅವರನ್ನು ನೆನೆಯೋಣ.

Comments are closed.