Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪ್ರಧಾನಿ ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ’ ಕ್ಕೆ ರಾಹುಲ್ ಸಾಕು

ಪ್ರಧಾನಿ ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ’ ಕ್ಕೆ ರಾಹುಲ್ ಸಾಕು

ಪ್ರಧಾನಿ  ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ’ ಕ್ಕೆ ರಾಹುಲ್ ಸಾಕು

ನಮ್ಮ ಹಳಬರಲ್ಲಿ ಕೆಲ Notions/presumptionsಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ದು ‘ಕರ್ಲಾನ್ ಬೆಡ್’. ಮಿನರಲ್‌ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ 501 ಬಾರ್ ಸೋಪು ಕೇಳುತ್ತಾರೆ. ಅಂಗಡಿಯವನು ಕರ್ಲಾನ್ ಬದಲು ಸ್ಲೀಪ್‌ವೆಲ್ ಕೊಟ್ಟರೂ, ಬಿಸ್ಲರಿ ಬದಲು ಕಿನ್ಲೇ ಕೊಟ್ಟರೂ, 501 ಬಾರ್ ಸೋಪು ಬದಲು ರಿನ್ ಕೊಟ್ಟರೂ ಜನ ಮರು ಮಾತನಾಡದೇ ತೆಗೆದುಕೊಂಡು ಹೋಗುತ್ತಿದ್ದರು. ಕಾರಣ, ಅವರಿಗೆ ಮಿನರಲ್‌ವಾಟರ್ ಎನ್ನುವುದಕ್ಕೆ ಬಿಸ್ಲರಿ ಎನ್ನುತ್ತಾರೇನೋ ಎನ್ನುವಷ್ಟು ಆಯಾ ಬ್ರಾಂಡ್‌ಗಳು ಮನಸ್ಸಿನಲ್ಲಿ ಮನೆ ಕಟ್ಟಿಕೊಂಡಿದ್ದವು. ಹಾಗೆಯೇ, ಕಾಂಗ್ರೆಸ್ ಸಹ. ಹಳಬರಲ್ಲಿ ಈಗಲೂ ವೋಟ್ ಮಾಡುವಾಗ ಅವರ ಬಳೊ ಹೋಗಿ ‘ಯಾರಿಗೆ ವೋಟ್ ಮಾಡ್ಬೇಕು ಅನ್ಕಂಡಿದ್ಯಪ್ಪಾ?’ ಎಂದು ಕೇಳಿ ನೋಡಿ… ಅವರು ಹೇಳುವುದು ‘ಇನ್ಯಾರಿಗೆ? ಕಾಂಗ್ರೆಸ್‌ಗೆ. ಕೈ ಇಲ್ಲದೇ ಮನ್ಸ ಬದುಕಕ್ಕಾಯ್ತದಾ?’ ಎನ್ನುತ್ತಿದ್ದರು.

ನಾವು ಸಣ್ಣವರಿದ್ದಾಗಿನ ಕಾಲವದು. ಕಾಂಗ್ರೆಸ್‌ನಿಂದ ಎಲೆಕ್‌ಟ್ರಿಕ್ ಕಂಬ ಚುನಾವಣೆಗೆ ನಿಂತರೂ ಗೆಲ್ಲುತ್ತದೆ ಎಂಬ ಮಾತಿತ್ತು. ಆಗಿನ ಸ್ಥಿತಿಯೂ ಹಾಗೇ ಇತ್ತು. ಆದರೆ ಈಗ ಕಾಲ ಬದಲಾಗಿದೆ.

ಜನ, ಅವರ ಮನೋಭಾವ, ನಿರೀಕ್ಷೆಗಳು ಬದಲಾಗಿವೆ. ಈಗ ಕಾಂಗ್ರೆಸ್‌ನ ಸ್ಥಿತಿ ನೋಡಿದರೆ ಹಳೆಯ ಮರವೊಂದು ನಿಧಾನಕ್ಕೆ ಒಣಗುತ್ತಿರುವಂತೆ ಭಾಸವಾಗುತ್ತಿದೆ. ಸ್ವಲ್ಪ ಗಮನಿಸಿದರೆ ಆ ಮರಕ್ಕೆ ಒಬ್ಬ ಜೋತುಬಿದ್ದು ಜೋಕಾಲಿ ಆಡುತ್ತಿದ್ದಾನೆ. ಆತ ರಾಹುಲ್ ಗಾಂಧಿಯಂತೆ ನಿಮಗೆ ಕಂಡರೆ ನನ್ನನ್ನು ದೂರಬೇಡಿ.ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮ ದೇಶದಲ್ಲಿ ಕಾಂಗ್ರೆಸ್ ಅನ್ನೋ ಒಂದು ಪಕ್ಷ ಇತ್ತು. ಅದು ಮೊದಮೊದಲು ಬಹಳ ಜನಪರ ಪಕ್ಷ ಅನ್ನೋ ಸೋಗು ಹಾಕಿ ಜನರನ್ನು ಹಾಗೂ ಮತಗಳನ್ನು ಸೆಳೆಯುತ್ತಿತ್ತು. ಕೊನೆಗೆ ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ, ಹಗರಣಗಳ ಮೇಲೆ ಹಗರಣಗಳ ಮೇಲೆ ಹಗರಣ ಮಾಡಿ, ಅವರ ಬಂಡವಾಳ ಅವರೇ ಬಯಲು ಮಾಡಿಕೊಂಡ್ರು. ಆ ಪಕ್ಷದಲ್ಲಿ ರಾಹುಲ್ ಎಂಬ ನಿನ್ನ ಥರಾನೇ, ಆದರೆ 40 ವರ್ಷದ ಮಗು ಇತ್ತು. ಗಾಂಧಿ ವಂಶ ಅಲ್ಲದಿದ್ದರೂ ಗಾಂಧಿ ಎಂದು ಹೆಸರಿಟ್ಟುಕೊಂಡು ದೇಶ ಆಳಿದವರು,
ಅಳಿದುಹೋದ್ರು…

ಎಂಬ ರೀತಿಯ ಕತೆಗಳನ್ನು ತಾಯಂದಿರು ಮಕ್ಕಳಿಗೆ ಹೇಳುವ ಕಾಲ ಬಂದರೂ ಬರಬಹುದು. ಈ ಕತೆಯೇನಾದರೂ ಹೇಳುವ ಪ್ರಸಂಗ ನಿರ್ಮಾಣವಾದರೆ ಅದರಲ್ಲಿ ರಾಹುಲ್ ಗಾಂಧಿಯೇ ವಿಲನ್ !

ಕೇರಳ ಮತ್ತು ಅಸ್ಸಾಮ್‌ನಲ್ಲಿ ನಡೆದ ಚುನಾವಣೆ ಇದನ್ನು ಖಚಿತಪಡಿಸಿದೆ. ಈಗ ದೇಶದಲ್ಲಿ ಕರ್ನಾಟಕ, ಉತ್ತರಾಖಂಡ, ಹಿಮಾಚಲಪ್ರದೇಶ, ಮೇಘಾಲಯ, ಮಣಿಪುರ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರಕಾರವಿದೆ. ಅದರಲ್ಲಿ ಕರ್ನಾಟಕ ಬಿಟ್ಟರೆ ಉಳಿದೆಲ್ಲವೂ ಅತ್ಯಂತ ಚಿಕ್ಕ ರಾಜ್ಯಗಳು.
ಈ ಪರಿ ಸೋಲಿಗೆ ಕಾರಣವೂ ಕಾಂಗ್ರೆಸ್‌ಗೆ ಸ್ಪಷ್ಟವಾಗಿದೆ.
ರಾಹುಲ್ ಗಾಂಧಿ!

ಸಂಸತ್ತಿನಲ್ಲಿ 44 ಸದಸ್ಯಬಲಕ್ಕೆ ಕುಸಿದು, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಾಂಗ್ರೆಸ್ ವರ್ತಿಸಿದ ರೀತಿ, ಅದರ ಉಪಾಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡ ಸಂಗತಿಗಳು ಕೂಡ ಕಾಂಗ್ರೆಸ್ ಅವನತಿಗೆ ಕೊಡುಗೆ ಕೊಟ್ಟಿವೆ. ರಾಹುಲ್ ಗಾಂಧಿ ಹೆಚ್ಚು ಕಡಿಮೆ ಎಡಪಕ್ಷಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜೆನ್‌ಯು ವಿವಾದ, ರೋಹುತ್ ವೇಮುಲ ಆತ್ಮಹತ್ಯೆ, ‘ಭಾರತ್ ಮಾತಾಕಿ ಜೈ’ ವಿವಾದ ಎಲ್ಲದರಲ್ಲೂ ರಾಹುಲ್ ಗಾಂಧಿ ಚುರುಕಾಗಿ ಭಾಗವಹಿಸಿದ್ದರು. ರಾಜ್ಯಸಭೆಯಲ್ಲಂತೂ ಸರಕಾರದ ಒಂದು ಮಸೂದೆಯೂ ಪಾಸಾಗದಂತೆ ಮಾಡಲು ಹರ ಸಾಹಸ ಮಾಡಿದರು. ಅನಗತ್ಯವಾಗಿ ಗದ್ದಲ ಎಬ್ಬಿಸಿ ಅಧಿವೇಶನಕ್ಕೆ ಅಡ್ಡಿ ಮಾಡಿದರು.
ಈ ಎಲ್ಲ ರಣನೀತಿಗಳೂ ಕಾಂಗ್ರೆಸ್‌ಗೆ ಮಾರಕವಾಗಿ ಪರಿಣಮಿಸಿರುವುದು ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ.

ಯಾಕಂದರೆ ಜನ ರಾಹುಲ್ ಗಾಂಧಿಗಿಂತ ಬುದ್ಧಿವಂತರು!
ಮೋದಿ ಪ್ರಧಾನಿ ಆಭ್ಯರ್ಥಿಯಾಗುವುದಕ್ಕಿಂತ ಮೊದಲೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಅಲ್ಲಿಂದಲೇ ಅವರ ಅವನತಿ ಆರಂಭವಾಗಿದ್ದು. 2014ರ ನಂತರ ಕಾಂಗ್ರೆಸ್ ಇದುವರೆಗೂ 6 ರಾಜ್ಯಗಳನ್ನು ಕಳೆದುಕೊಂಡಿದೆ. ಅಲ್ಲೆಲ್ಲ ರಾಹುಲ್ ಗಾಂಧಿ ಪ್ರಚಾರಕ್ಕೆ ತೆರಳಿದ್ದರು ಎಂಬುದು ಗಮನಾರ್ಹ. ವಿಚಿತ್ರವೆಂದರೆ ಬಿಹಾರದ ಚುನಾವಣೆ ಪ್ರಚಾರದಿಂದ ರಾಹುಲ್ ಗಾಂಧಿಯನ್ನು ದೂರವೇ ಇಡಲಾಗಿತ್ತು. ಆರ್‌ಜೆಡಿ ನಾಯಕಲಾಲೂಪ್ರಸಾದ್ ಯಾದವ್ ಇದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲಿ ಕಾಂಗ್ರೆಸ್ ಫಲಿತಾಂಶ ಪರವಾಗಿಲ್ಲ.ಹೀಗಿದ್ದ ಕಾಂಗ್ರೆಸ್ ಇಂದು ಧೂಳಿಪಟ ಆಗುವುದಕ್ಕೆ ಕಾರಣ ಅವರ ನೂತನ ನಾಯಕ ರಾಹುಲ್ ಗಾಂಧಿಯೇ ಹೊರತು ಇನ್ಯಾರೂ ಅಲ್ಲ.

ಮನಮೋಹನ್ ಸಿಂಗ್‌ರನ್ನು ಮೊದಲಿಗೆ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿರಲಿಲ್ಲ.
ಸೋನಿಯಾಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಸ್ವತಃ ಸೋನಿಯಾ ಗಾಂಧಿಯೇ ಶಿಫಾಸರಸು ಮಾಡಿಕೊಂಡಿದ್ದರು. ವಿದೇಶಿಯೊಬ್ಬರು ಪ್ರಧಾನಿಯಾಗುವುದು ಎಷ್ಟು ಸಮಂಜಸ? ಈಗಾಗಲೇ ಒಮ್ಮೆ ಭಾರತ ವಿದೇಶಿಯರಿಗೆ ದೇಶ ಕೊಟ್ಟಿದರ ಪರಿಣಾಮ ಹೇಗಿತ್ತು ಎನ್ನುವುದನ್ನು ವರ್ಷ ವರ್ಷ ಆಗಸ್ಟ್ 15ರಂದು ನೆನೆಯುವಂತಾಗಿದೆ. ಇನ್ನು ಇಟಲಿಯ ಸೋನಿಯಾ ಕೈಲಿ ದೇಶ ಕೊಡವುದು ಎಷ್ಟು ಸರಿ? ಎಂದು ಬಿಜೆಪಿ ತಕರಾರು ತೆಗೆಯುತ್ತಿದ್ದಂತೆ ಮತ್ತು ಅದಕ್ಕೆ ಜನ ಬೆಂಬಲ ವ್ಯಕ್ತವಾಗುತ್ತಿದ್ದಂತೆ, ಪಕ್ಕದಲ್ಲಿ ಕುಳಿತಿದ್ದ ಮನಮೋಹನ್ ಸಿಂಗ್‌ರನ್ನು ಪ್ರಧಾನಿಯಾಗಿ ಮಾಡಲಾಯಿತು. ಇಲ್ಲದಿದ್ದರೆ ಸೋನಿಯಾ ನಮ್ಮ ಪ್ರಧಾನಿಯೂ ಆಗಿಬಿಡುತ್ತಿದ್ದರು.

ಇತಿಹಾಸದಿಂದ ಒಂದು ಚೂರೂ ಬುದ್ಧಿ ಕಲಿಯದ ಕಾಂಗ್ರೆಸ್, ಎಲ್ಲೋ ಆಟವಾಡಿಕೊಂಡಿದ್ದ ರಾಹುಲ್ ಗಾಂಧಿಯನ್ನು ತಂದು ಇವರೇ ಮುಂದಿನ ಯುವರಾಜ ಎಂದರೆ, ಜನ ಒಪ್ಪಿಕೊಳ್ಳುವುದಾದರೂ ಹೇಗೆ? ಯುವರಾಜನಾಗಲು ಗಾಂಧಿ ಕುಟುಂಬದಲ್ಲಿ ಹುಟ್ಟಿದವ ಎಂಬ ಒಂದು ಅರ್ಹತೆ ಸಾಕೇ? ಪ್ರಧಾನಿ ಅಭ್ಯರ್ಥಿಯಾದವರ ಬಳಿ ದೇಶವನ್ನಾಳುವ ಅರ್ಹತೆ ಬಿಡಿ ದೇಶದ ಜನರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಾದರೂ ಇರಬೇಡವೇ? ಒಳ್ಳೆ ‘ಬಚ್ಚಾ’ಗಳ ಹಾಗೆ ಮಾತನಾಡುವ, ಜೋಕರ್‌ನಂತೆ ಪ್ರಶ್ನೆ ಕೇಳುವ,ವಿದ್ಯಾರ್ಥಿಗಳಿಂದ ನಗೆಪಾಟಲಿಗೀಡಾಗುವ ವ್ಯಕ್ತಿ ದೇಶವನ್ನಾಳಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲವೇ ?

ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ, ಅವರು ಸಾಕಷ್ಟು ಕಡೆ ತಿರುಗಿ ಜನರನ್ನು ಸಂಘಟಿಸಿದರು. ಹೋದ ಕಡೆಯಲ್ಲ ಭಾಷಣ ಮಾಡುವಾಗ ಕಾಂಗ್ರೆಸ್ ಬಗ್ಗೆ ಇಲ್ಲ ಸಲ್ಲದ್ದು ಹೇಳಲಿಲ್ಲ. ಅವರ ಮಾತಲ್ಲಿ ದೇಶ, ಅಭಿವೃದ್ಧಿ ಕುರಿತ ಹೊಸ ಐಡಿಯಾಗಳಿದ್ದವು. ಜನರನ್ನುಹುರಿದುಂಬಿಸುವ ಮಾತುಗಳಿದ್ದವು. ಭವಿಷ್ಯದ ಬಗ್ಗೆ ಕನಸುಗಳಿದ್ದವು. ಆದರೆ ರಾಹುಲ್ ಗಾಂಧಿ ಮೋದಿ ಬಗ್ಗೆ ಪ್ರತಿ ಬಾರಿ ಮಾತಾಡುವಾಗಲೂ ಟೀಕಿಸುತ್ತಿದ್ದರು. ಒಮ್ಮೆ ಗುಜರಾತ್‌ನ ರ‍್ಯಾಲಿಯೊಂದರಲ್ಲಿ ಮಾತಾಡುವಾಗ ‘ಈ ದೇಶಕ್ಕೆ ಹೆಚ್ಚು ಹಾಲು ಗುಜರಾತ್‌ನಿಂದ ಹೊರ ಹೋಗುತ್ತದೆ. ಆ ಹಾಲು ಕೊಡುವವರ‍್ಯಾರು ಎಂದುಕೊಂಡಿದೀರಾ? ನೋಡಿ ಇಲ್ಲಿ ಕುಳಿತಿರುವ ಮಹಿಳೆಯರೇ ಈ ಹಾಲನ್ನು ಕೊಟ್ಟಿದ್ದಾರೆ’ ಎಂಬುದನ್ನು ಕೇಳಿದಾಗ ಅಲ್ಲಿದ್ದ ಮಹಿಳೆಯರಿಗೆ ತೀವ್ರ ಮುಜುಗರಕ್ಕೀಡಾಗಿದ್ದರು.

ರಾಹುಲ್ ಗಾಂಧಿ ಸಾಮರ್ಥ್ಯ, ಬುದ್ದಿಮತ್ತೆ, ಚಾಕಚಕ್ಯತೆ ಎಲ್ಲವನ್ನೂ ಅಳೆಯಲು ‘ಟೈಮ್ಸ್ ನೌ’ ಚಾನೆಲ್ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ನಡೆಸಿದ ರಾಹುಲ್ ಸಂದರ್ಶನ ಕಾರ್ಯಕ್ರಮವೊಂದೇ ಸಾಕು.

ಬಟ್ಟೆ ಹಾಕಿಕೊಂಡೇ ಬೆತ್ತಲಾಗುವುದು ಅಂದರೆ ಅದೇ ಅಲ್ಲವೇ?

ಇಂತಹ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಿ ಮೋಜು ನೋಡಲು ಕಾಂಗ್ರೆಸಿಗರಿಗೆ ಮನಸಿರಬಹುದು, ಆದರೆ ನಮ್ಮ ದೇಶದ ಜನರಿಗೆ ಸುತಾರಾಂ ಇಷ್ಟವಿಲ್ಲ.
ಅದಕ್ಕೇಜನ ಮೋದಿಯವರ ಪರ ನಿಂತರು.

ರಾಹುಲ್ ಗಾಂಧಿ ಜನರನ್ನು ಸಂಘಟಿಸುವ ಮಾತು ಪಕ್ಕಕ್ಕಿರಲಿ, ಸ್ವತಃ ಅವರ ಪಕ್ಷದ ನಾಯಕರ ಬಗ್ಗೆ ಅವರಿಗೇ ಗೊತ್ತಿರುವುದಿಲ್ಲ. ಹೀಗೆ ಕಾರ್ಯಕ್ರಮವೊಂದಕ್ಕೆ ಹೋದಾಗ, ‘ಇಲ್ಲಿನ ನಾಯಕರು ನಮ್ಮ ಪಕ್ಷಕ್ಕೆ ಬಹಳ ಸಹಾಯ ಮಾಡಿದ್ದಾರೆ… ಇವರು ಯಾರು ಎಂದರೆ’ ಎಂದು ಹೇಳಿ ಜೇಬಿನಿಂದ ಕೆಲ ಚೀಟಿಗಳನ್ನು ಓದುತ್ತಾ, ಕೊನೆಗೆ ಅದೂ ಸರಿಯಾಗಿ ಅರ್ಥವಾಗದೇ ಚಡಪಡಿಸಿದ್ದನ್ನು ಟಿವಿಗಳು ದಿನಕ್ಕೆ 100 ಸಲ ತೋರಿಸಿದ್ದಾರೆ.

ರಾಹುಲ್ ಗಾಂಧಿಯನ್ನು ವಿರೋಧಿಸುವ ಪ್ರಮೇಯ ಬಿಜೆಪಿಗೆ ಬರಲೇ ಇಲ್ಲ. ಬದಲಿಗೆ ಸ್ವತಃ ರಾಹುಲ್ ಬಿಜೆಪಿಗೆ ಪ್ರಚಾರ ಕೊಟ್ಟರು. ತನಗಿಂತ ಮೋದಿ ಹೇಗೆ ಅರ್ಹರು ಎಂಬುದನ್ನು ಒಂದೊಂದೇ ತಲೆ ಬುಡ ಇಲ್ಲದ ಮಾತುಗಳಿಂದ ಸಾಬೀತು ಮಾಡಿದರು. ಪ್ರತಿ ಬಾರಿ ರಾಹುಲ್ ಬಿಜೆಪಿ ವಿರುದ್ಧ ಭಾಷಣ ಮಾಡಿದಾಗಲೂ ಏನಾದರೊಂದು ಎಡವಟ್ಟು ಮಾಡಿಕೊಂಡು, ಅದು ಭಾಷಣಕ್ಕಿಂತ ‘ಕಾಮಿಡಿ ವಿತ್ ರಾಹುಲ್ ಗಾಂಧಿ’ ಥರ ಆಗುತ್ತಿತ್ತು. ಜನರ ಅವರ ಮಾತನ್ನು ಬಹಳ ಸೀರಿಯಸ್ಸಾಗಿ ಕೇಳುವುದನ್ನೇ ನಿಲ್ಲಿಸಿ ಬಿಟ್ಟರು.ರಾಹುಲ್ ಗಾಂಧಿ ಟಿವಿಯಲ್ಲಿ ಮಾತನಾಡುವುದನ್ನು ಕಂಡರೆ ಸಾಕು ಜನರ ಮುಖದಲ್ಲಿ ಏನೋ ಹರುಷ. ಅವರ ಒಂದೊಂದು ಮಾತನ್ನು ಕೇಳಿ ಹೊಟ್ಟೆ ತುಂಬ ನಕ್ಕವರಿದ್ದಾರೆ. ಇಂದಿಗೂ ನೀವು ಯೂಟ್ಯೂಬ್‌ನಲ್ಲಿ‘” Rahul Gandhi ‘’ ಎಂದು ಟೈಪ್ ಮಾಡಿದರೆ ಸಾಕು ಅವರ ಕಾಮಿಡಿ ಭಾಷಣದ ತುಣುಕಗಳೇ ಹೆಚ್ಚು ಸಿಗುತ್ತವೆ.

ಯೂಟ್ಯೂಬ್ ತನಕ ಹೋಗಲು ಇಷ್ಟವಿಲ್ಲದಿದ್ದರೆ,‘Rahul Gandhi is a ’ ಎಂದು ಗೂಗಲ್ ಮಾಡಿ…

Rahul Gandhi is a Joker, Rahul Gandhi is a amul baby, Rahul Gandhi is a batman ಎಂದುಗೂಗಲ್ಲೇ ಹೇಳಿಬಿಡುತ್ತದೆ. ಅಂದರೆ ಗೂಗಲ್ಲಿಗೂ ರಾಹುಲ್ ಬಗ್ಗೆ ಗೊತ್ತಿದೆ.
ಹಾಗೆಯೇ ‘” Narendra Modi is a ’ ಎಂದು ಟೈಪ್ ಮಾಡಿದರೆ… “

Narendra Modi is a good prime minister, Narendra Modi is a Left Hander, Narendra Modi is a Dalit ’ ಎಂದು ಬರುತ್ತದೆ. ಜನರಿಗೂ ಖಾತ್ರಿಯಾಯಿತು. ರಾಹುಲ್‌ಗೆ ವೋಟ್ ಮಾಡಿದರೆ ಗತಿಯೇನೆಂಬುದು. ರಾಹುಲ್ ಗೂ ಪ್ರಧಾನಿ ಮೋದಿ ಅವರಿಗೂ ಯಾವುದೇ ಹೋಲಿಕೆಯೇ ಸಲ್ಲ. ಆದರೂ ಮಾತಿಗೆ ಹೇಳಬೇಕಾಯಿತು.

ಅಸಲಿಗೆ, ಮುಗ್ಧ ರಾಹುಲ್ ಗಾಂಧಿಯನ್ನು ಚುನಾವಣಾ ಅಖಾಡಕ್ಕಿಳಿಸಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂಬುದನ್ನು ಇನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಅದರ ಪರಿಣಾಮವೇ ಕಾಂಗ್ರೆಸ್ ಭಾರತದ ಶೇ.7ರಷ್ಟು ಕಡೆ ಮಾತ್ರ ಇದೆ. ಅದರ ಶೇ.5ರಷ್ಟು ಕರ್ನಾಟಕದಲ್ಲೇ ಇದೆ! ಆದರೆ ಇದನ್ನೊಪ್ಪದ ಕಾಂಗ್ರೆಸ್, ಭಾರತ ಮ್ಯಾಪ್‌ನ ಚಿತ್ರ ಬಿಡಿಸಿ, ಕರ್ನಾಟಕದ ಚಿತ್ರವನ್ನು ಅರ್ಧ ಭಾರತಕ್ಕೆ ಎಳೆದು, ಉತ್ತರಾಖಂಡದ ಚಿತ್ರವನ್ನು ಇನ್ನೊಂದರ್ಧ ಭಾರತಕ್ಕೆ ಎಳೆದು ಮಿಜೋರಾಮ್, ಮಣಿಪುರ್ ಮತ್ತು ಮೇಘಾಲಯವನ್ನು ಈಶಾನ್ಯ ಭಾರತವನ್ನು ತುಂಬುವ ಹಾಗೆ ಚಿತ್ರ ಬರೆದು ‘ಕಾಂಗ್ರೆಸ್ ಇನ್ನು ಅರ್ಧ ಭಾರತದಲ್ಲಿದೆ’ ಎಂದು ಘೋಷಿಸಿಕೊಳ್ಳುತ್ತಿರುವುದನ್ನು ನೋಡಿದರೆ ಕಾಂಗ್ರೆಸಿನವರಿಗೆat least ಭಾರತದ ಭೂಪಟದಲ್ಲಾದರೂ ಇರಬೇಕೆಂಬ ತವಕ, ಚಡಪಡಿಕೆ ಇದೆ ಎನ್ನುವುದು ತಿಳಿಯುತ್ತದೆ.

ಟಿವಿ ಚಾನೆಲ್‌ಗಳು ನಡೆಸಿರುವ ಸಮೀಕ್ಷೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಜನರು ಮತ ಹಾಕಿರುವುದು. ಇದನ್ನು ನೋಡಿ ಸಿದ್ದರಾಮಯ್ಯನವರ ಚಡಪಡಿಕೆ ಮತ್ತಷ್ಟು ಹೆಚ್ಚಿರಬಹುದು. ಇಂಥ ವೈಫಲ್ಯದ ನಂತರ ಯಾರೇ ನಾಯಕರಾಗಿದ್ದರೂ ರಾಜೀನಾಮೆ ನೀಡುತ್ತಿದ್ದರು. ಆದರೆ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ನಡೆದಿರುವ ಸುದ್ದಿ ಬರುತ್ತಿದೆ.

ಆಲೋಚನೆ ಮಾಡಿ. ನಾಯಕನಾಗುವುದಕ್ಕೆ ಕೆಲವು ನಾಯಕತ್ವದ ಗುಣಗಳಿರಬೇಕು. ಅದರ ಪ್ರಕಾರ ಆಲೋಚಿಸಿದರೆ, ಇವರಿಗೆ ಮಾತಾಡುವ ಕಲೆ ಇದೆಯಾ? ಇಲ್ಲ. ಸಂಘಟನಾ ಚಾತುರ್ಯ ಇದೆಯಾ? ಇಲ್ಲ. ‘ಮಮ್ಮಿ’ ಹೇಳಿದ ಹಾಗೇ ಎಲ್ಲವೂ ಮಾಡುತ್ತಾರೆ. ಚೀಟಿಯಲ್ಲಿ ಬರೆದುಕೊಟ್ಟಂತೆ ಓದುತ್ತಾರೆ. ಸಂಜೆಯೇ ಆಗಿದ್ದರೂ ಚೀಟಿಯಲ್ಲಿ ಇದ್ದಂತೆ ಮಾರ್ನಿಂಗ್ ಎಂದೇ ಓದುತ್ತಾರೆ. ಬರೆದುಕೊಳ್ಳದೆ ಪಕ್ಷದವರ ಹೆಸರನ್ನೂ ಹೇಳಲಾರರು. ಇನ್ನು ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದಾದರೂ ತಿಳಿದಿದೆಯಾ? ಅದೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಾಗ ಅದರ ಬಗ್ಗೆ ಸೋನಿಯಾ ಗಾಂಧಿ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದರು. ಅವರ ಹಿಂದೆಯೇ ನಿಂತಿದ್ದ ರಾಹುಲ್ ಬಹಳ ಖುಷಿಯಾದವರಂತೆ ಹಲ್ಲು ಗಿಂಜುತ್ತಿದ್ದರು.

ಈ ವೀಡಿಯೋ ಮತ್ತು ಫೋಟೊ ಟ್ವಿಟ್ಟರ್‌ನಲ್ಲಿ ಬಹಳ ಹರಿದಾಡಿತ್ತು. ಇಂಥ ರಾಹುಲ್‌ಗೆ ಪಕ್ಷ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ಕಾಂಗ್ರೆಸ್ ಪೂರ್ತಿ ರಾಹುಲ್ ತಲೆಗೇ ಕಟ್ಟುತ್ತಿದೆ. ಸೋಲನ್ನು ಮಾತ್ರ ರಾಹುಲ್‌ಗೆ ನೀಡುತ್ತಿಲ್ಲ. ಕೇರಳದಲ್ಲಿ ಮತ್ತು ಅಸ್ಸಾಮ್‌ನಲ್ಲಿ ಸೋತ ಕಾಂಗ್ರೆಸ್ ‘ಈ ಸೋಲನ್ನು ರಾಹುಲ್ ಗಾಂಧಿ ಮೇಲೆ ಹಾಕುವುದು ಸರಿ ಅಲ್ಲ’ ಎಂದು ಈಗಾಗಲೇ ಮಾತುಗಳು ಆರಂಭವಾಗಿವೆ.

ಇನ್ನು ಎಷ್ಟು ದಿನ ರಾಹುಲ್‌ರನ್ನು ಬಚಾವ್ ಮಾಡಲು ಸಾಧ್ಯ ?

ರಾಹುಲ್‌ರ ಸಂಘಟನಾ ಶಕ್ತಿ ಬಗ್ಗೆ ಒಂದು ಮಾತು ಹೇಳಬೇಕಿದೆ. ತಮಿಳು ನಾಡಿನಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಜಿ. ಕೆ. ಮೂಪನಾರ್ ಪುತ್ರ ಜಿ ಕೆ ವಾಸನ್‌ರನ್ನು ರಾಹುಲ್ ತಮ್ಮ ಪಕ್ಷದಲ್ಲಿ ಉಳಿಸಿಕೊಳ್ಳಲು ವಿಫಲರಾದರು. ವಾಸನ್ ಅವರದ್ದೇ ಪಕ್ಷ ಕಟ್ಟಿಕೊಂಡರು. ಉತ್ತರಾಖಂಡದಲ್ಲಿ 9 ಶಾಸಕರು ಕಾಂಗ್ರೆಸ್‌ನವರ ಸಹವಾಸವೇ ಬೇಡ ಎಂದು ಗುಳೆ ಹೊರಟಿದ್ದರು.
ಅವರು ಹೋಗಿದ್ದರೆ, ಉತ್ತರಾಖಂಡವೂ ಕಾಂಗ್ರೆಸ್ ಮುಕ್ತ ಆಗುತ್ತಿತ್ತು. ಪಂಜಾಬಿನ ಅಮರೀಂದರ್ ಸಿಂಗ್ ವಿಚಾರದಲ್ಲೂ ರಾಹುಲ್ ಇಂಥದ್ದೇ ಧೋರಣೆ ತೋರಿದ್ದಾರೆ.

ಕಾಂಗ್ರೆಸ್‌ನ ಇಂದಿನ ಈ ಸ್ಥಿತಿಗೆ ಬೇಸತ್ತು ಪಕ್ಷದ ದಿಗ್ವಿಜಯ್ ಸಿಂಗ್ ‘ಕಾಂಗ್ರೆಸ್‌ಗೆ ಒಂದು ಮೇಜರ್ ಸರ್ಜರಿ ಆಗಬೇಕಿದೆ’ ಎಂದಿದ್ದಾರೆ. ಈಗ ರಾಹುಲ್ ತಮ್ಮ ಪಕ್ಷವನ್ನು ಅಧೋಗತಿಗೆ ಇಳಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಮೋದಿಯೇ ಇಳಿದು ಬರಬೇಕಿಲ್ಲ. ರಾಹುಲ್ ಗಾಂಧಿ ಒಬ್ಬರೇ ಅದಕ್ಕೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆಯೂ ಕೊಡಲಿದ್ದಾರೆ ಎಂಬ ನಂಬಿಕೆ ನಮಗಿದೆ.

RG

Comments are closed.