Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ!

ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ!

ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ!

ಕೆಲವರ್ಷಗಳ ಹಿಂದೆ ಅಂಕಣವೊಂದರಲ್ಲಿ ಹೀಗೆ ಬರೆದಿದ್ದೆ. ಅದಕ್ಕೆ ನಾನು ಈಗಲೂ ಬದ್ಧ ಎನ್ನುವುದಕ್ಕಿಂತಲೂ ಆ ಲೇಖನದ ವಸ್ತು ಈಗಲೂ ಹಾಗೇ ಇದೆ ಎನ್ನುವುದು ಹೆಚ್ಚು ಸೂಕ್ತ. ಅಂದು ನಾನು ಬರೆದಿದ್ದು ಇಷ್ಟು. ನಮ್ಮ ಹಳಬರಲ್ಲಿ ಕೆಲ Notions presumpons  ಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ಅದು ‘ಕರ್ಲಾನ್ ಬೆಡ್’. ಮಿನರಲ್‌ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ 501 ಬಾರ್ ಸೋಪು ಕೇಳುತ್ತಾರೆ. ಅಂಗಡಿಯವನು ಕರ್ಲಾನ್ ಬದಲು ಸ್ಲೀಪ್‌ವೆಲ್ ಕೊಟ್ಟರೂ, ಬಿಸ್ಲರಿ ಬದಲು ಕಿನ್ಲೇ ಕೊಟ್ಟರೂ, 501 ಬಾರ್ ಸೋಪು ಬದಲು ರಿನ್ ಕೊಟ್ಟರೂ ಜನ ಮರು ಮಾತನಾಡದೇ ತೆಗೆದುಕೊಂಡು ಹೋಗುತ್ತಿದ್ದರು.
ಕಾರಣ, ಅವರಿಗೆ ಮಿನರಲ್‌ವಾಟರ್ ಎನ್ನುವುದಕ್ಕೆ ಬಿಸ್ಲರಿ ಎನ್ನುತ್ತಾರೇನೋ ಎನ್ನುವಷ್ಟು ಆಯಾ ಬ್ರಾಂಡ್‌ಗಳು ಮನಸ್ಸಿನಲ್ಲಿ ಮನೆ ಕಟ್ಟಿಿಕೊಂಡಿದ್ದವು. ಹಾಗೆಯೇ, ಕಾಂಗ್ರೆಸ್ ಸಹ. ಹಳಬರಲ್ಲಿ ಈಗಲೂ ವೋಟ್ ಮಾಡುವಾಗ ಅವರ ಬಳಿ ಹೋಗಿ ‘ಯಾರಿಗೆ ವೋಟ್ ಮಾಡ್ಬೇಕು ಅನ್ಕಂಡಿದ್ಯಪ್ಪಾ?’ ಎಂದು ಕೇಳಿ ನೋಡಿ… ಅವರು ಹೇಳುವುದು ಇನ್ಯಾರಿಗೆ? ಕಾಂಗ್ರೆಸ್‌ಗೆ. ‘ಕೈ ಇಲ್ಲದೇ ಮನ್ಸ ಬದುಕಕ್ಕಾಯ್ತದಾ?’ಎನ್ನುತ್ತಿದ್ದರು. ನಾವು ಸಣ್ಣವರಿದ್ದಾಗಿನ ಕಾಲವದು. ಕಾಂಗ್ರೆಸ್‌ನಿಂದ ಎಲೆಕ್‌ಟ್ರಿಕ್ ಕಂಬ ಚುನಾವಣೆಗೆ ನಿಂತರೂ ಗೆಲ್ಲುತ್ತದೆ ಎಂಬ ಮಾತಿತ್ತು. ಆಗಿನ ಸ್ಥಿತಿಯೂ ಹಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಂಗ್ರೆಸ್ ದೇಶದಲ್ಲಿ ದಯನೀಯ ಸ್ಥಿತಿಯಲ್ಲಿದೆ. ಕಾಂಗ್ರೆಸಿನಲ್ಲಿ ನಾಯಕರಾರು ಎಂದು ನೋಡಿದರೆ ತೂಕದ ಕಲ್ಲು ಮೇಲೇಳದಷ್ಟು ಕುಸಿದುಹೋಗಿದೆ. ಆ ಬಿಸ್ಲೆರಿ ಮಾನಸಿಕತೆ ಹುಟ್ಟಿದ ಕಾಲವನ್ನೊಮ್ಮೆ ನೋಡಿ.
1951ರ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆದಿದ್ದವು. ಎಲ್ಲೆಲ್ಲೂ ನಿರೀಕ್ಷೆಯಂತೆ ಕಾಂಗ್ರೆಸ್ ಗೆಲುವು ಸಾಧಿಸಿತು. ಕಾರಣ ಆಗಷ್ಟೆ ಸ್ವಾತಂತ್ರ್ಯ ಸಿಕ್ಕಿ ದೇಶದ ಜನಕ್ಕೆ ಕಾಂಗ್ರೆಸ್ ಎಂಬ ಪ್ರತಿಮೆಯೇ ಬೇರೆಯಾಗಿತ್ತು. ಒಟ್ಟು 4,500 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಅಚ್ಚರಿಯಿಂದ ಗಮನಿಸಿದ ವಿಶ್ವ ಇದೊಂದು ದಾಖಲೆ ಎಂದು ಪರಿಗಣಿಸಿದ್ದರು. ಬರೋಬ್ಬರಿ 2,24,000 ಚುನಾವಣಾ ಕೇಂದ್ರಗಳು ಮತ್ತು ಎರಡು ದಶಲಕ್ಷ ಮತಪೆಟ್ಟಿಗೆಗಳಲ್ಲೂ ಒಂದು ಪಕ್ಷ ಗೆಲ್ಲುವುದೆಂದರೆ ಅಂದಿನ ಕಾಂಗ್ರೆಸಿನ ಬಗ್ಗೆ ಜನರಿಗೆ ಎಂಥಾ ಭರವಸೆಯಿದ್ದಿರಬೇಕು? 1967ರ ಚುನಾವಣೆಯ ನಂತರ ಕಾಂಗ್ರೆಸಿನ ಸೋಲಿನ ಇತಿಹಾಸ ಪ್ರಾರಂಭವಾಯಿತು.
ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಮೋಸಗೊಳಿಸುವುದು ಸಾಧ್ಯವಿಲ್ಲವಲ್ಲಾ. 1967ರಲ್ಲಿ ಬಿಹಾರ, ಕೇರಳ, ಒರಿಸ್ಸಾ, ಮದ್ರಾಸ್, ಪಂಜಾಬ್ ಮತ್ತು ಪ.ಬಂಗಾಳಗಳಲ್ಲಿ ಕಾಂಗ್ರೆಸೇತರ ಮುಖ್ಯಮಂತ್ರಿಗಳು ನೇಮಕವಾಯಿತು. ಹಳೆಯ ದೊಡ್ಡ ಪಕ್ಷವೆಂಬ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ಬಹುತೇಕ ರಾಜ್ಯಗಳಲ್ಲಿ ಶೇ.60ರಷ್ಟು ಸೀಟುಗಳನ್ನು ಗೆಲ್ಲುವಲ್ಲಿ ವಿಫಲವಾಯಿತು. ಹಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಕೂಡಾ ಜಾರಿಯಾಯಿತು. ಜತೆಗೆ ಇಂದಿರಾ ಗಾಂಧಿ ಕಾಂಗ್ರೆಸಿನ ಆಂತರಿಕ ಕಿತ್ತಾಟಗಳಿಂದ 1970ರ ಮುಂಚಿತವಾಗಿ ಚುನಾವಣೆಗಳನ್ನು ನಡೆಸಲು ನಿರ್ಧರಿಸಿಬಿಟ್ಟಿದ್ದರು. ಕ್ರಮೇಣ ಜನ, ಅವರ ಮನೋಭಾವ, ನಿರೀಕ್ಷೆಗಳು ಬದಲಾಗುತ್ತಾ ಹೋದಂತೆ ಕಾಂಗ್ರೆಸ್‌ನ ಸ್ಥಿತಿ ಹಳೆಯ ಮರವೊಂದು ನಿಧಾನಕ್ಕೆ ಒಣಗುತ್ತಿರುವಂತೆ ಭಾಸವಾಗುತ್ತಿದೆ.
ಹಳೆಯ ಮಾತು ಈಗ ನೆನಪಾಗಿದ್ದಕ್ಕೆ ಕಾರಣವಿದೆ. ಇಂದು ಪ್ರತೀ ವರ್ಷ ಒಂದಲ್ಲಾ ಒಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುತ್ತವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆದ ಶೇ. 90ರಷ್ಟು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನನುಭವಿಸಿದೆ. ಉತ್ತರ ಪ್ರದೇಶದ ಸೋಲು ಅದನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಜತೆಗೆ ಖಾಸಗೀ ಸಂಸ್ಥೆಗಳು ನಡೆಸುವ ಸಮೀಕ್ಷೆಗಳೂ ಅದನ್ನು ಅದುರುವಂತೆ ಮಾಡುತ್ತಿದೆ. ಮುಂಬರುವ ಗುಜರಾತ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳೆರಡೂ ಕಾಂಗ್ರೆಸಿನ ಮಾಡು ಇಲ್ಲವೇ ಮಡಿ ಕದನದಂತಿದೆ. ಏಕೆಂದರೆ ನರೇಂದ್ರಮೋದಿಯನ್ನು ಇನ್ನಿಲ್ಲದಂತೆ ಟೀಕಿಸುತ್ತಾ ಬಂದ ಕಾಂಗ್ರೆಸಿಗೆ ಗುಜರಾತಿನಲ್ಲಿ ಬಿಜೆಪಿಯ ಸೋಲು ನೇರ ನರೇಂದ್ರ ಮೋದಿಯವರ ಸೋಲು ಎಂದುಕೊಳ್ಳುವುದು, ಪ್ರಧಾನ ಮಂತ್ರಿಗಳ ರಾಜಿನಾಮೆಯನ್ನು ಕೇಳುವುದು.
ಇನ್ನೊಂದು ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ಮತ್ತು ಕೇಂದ್ರ ಕಾಂಗ್ರೆಸಿಗೆ ಲಾಭದಾಯಕವಾದ ರಾಜ್ಯ ಕರ್ನಾಟಕವೊಂದೇ. ಅದನ್ನು ಏನಕೇನ ಉಳಿಸಿಕೊಳ್ಳಬೇಕು ಎಂಬ ಧಾವಂತ. ಕರ್ನಾಟಕ ಮತ್ತು ಗುಜರಾತಿನಲ್ಲಿ ಬಿಜೆಪಿಯನ್ನು ಸೋಲಿಸಿ 2018ಕ್ಕೆ ನಡೆಯುವ ಏಳು ರಾಜ್ಯಗಳ, 2019ಕ್ಕೆ ನಡೆಯುವ 10 ರಾಜ್ಯಗಳ, 2020 ನಡೆಯುವ 3 ರಾಜ್ಯಗಳ, 2021ಕ್ಕೆ ನಡೆಯುವ 1 ರಾಜ್ಯ ಹಾಗೂ 2019ರ ಲೋಕಸಭಾ ಚುನಾವಣೆಗಳನ್ನು ಗೆದ್ದು ಕಣ ಗಟ್ಟಿ ಮಾಡಿಕೊಳ್ಳಬೇಕು. ಮೋದಿ-ಅಮಿತ್ ಷಾರವರ ಕಾಂಗ್ರೆಸ್ ಮುಕ್ತ ಭಾರತ ಯೋಜನೆ ಈಗಾಗಲೇ ಯಶಸ್ವಿಯಾಗಿ ಕಾಂಗ್ರೆಸಿಗೆ ದೇಶದಿಂದಲೂ ಮತ್ತು ವಿದೇಶದಿಂದಲೂ ಹರಿದುಬರುತ್ತಿದ್ದ ಸಂಪನ್ಮೂಲದ ಬಾಗಿಲು ಮುಚ್ಚಿಹೋಗಿದೆ. ಕಾರ್ಪೊರೇಟ್ ದಿಗ್ಗಜರು ಕಾಂಗ್ರೆಸನ್ನು ತ್ಯಜಿಸಿ ವರ್ಷಗಳಾಗಿವೆ. ಹಾಗಾಗಿ ಕಾಂಗ್ರೆಸಿನಲ್ಲೊಬ್ಬರು ಯಾತ್ರೆ ಹೊರಟಿದ್ದಾರೆ. ಗುಂಡುಕಲ್ಲನ್ನು ಹೊತ್ತು ಮಾಡುವ ಯಾತ್ರೆ ಎಂದಾದರೂ ಯಶಸ್ವಿಯಾಗಲು ಸಾಧ್ಯವೇ?
ಕಾಂಗ್ರೆಸಿಗೆ ತನ್ನ ಈ ಪರಿಯ ಸೋಲಿಗೆ ಅಸಲಿ ಕಾರಣ ಸ್ಪಷ್ಟವಾಗಿಲ್ಲದೇ ಇಲ್ಲ. ರಾಹುಲ್ ಗಾಂಧಿ! ಸಂಸತ್ತಿನಲ್ಲಿ 44 ಸದಸ್ಯಬಲಕ್ಕೆ ಕುಸಿದು, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಾಂಗ್ರೆಸ್ ವರ್ತಿಸಿದ ರೀತಿ, ಅದರ ಉಪಾಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡ ಸಂಗತಿಗಳು ಕೂಡ ಕಾಂಗ್ರೆಸ್ ಅವನತಿಗೆ ಕೊಡುಗೆ ಕೊಟ್ಟಿವೆ. ರಾಹುಲ್ ಗಾಂಧಿ ಹೆಚ್ಚು ಕಡಿಮೆ ಎಡಪಕ್ಷಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜೆನ್‌ಯು ವಿವಾದ, ರೋಹುತ್ ವೇಮುಲ ಆತ್ಮಹತ್ಯೆ, ‘ಭಾರತ್ ಮಾತಾಕಿ ಜೈ’ ವಿವಾದ ಎಲ್ಲದರಲ್ಲೂ ರಾಹುಲ್ ಗಾಂಧಿ ಚುರುಕಾಗಿ ಭಾಗವಹಿಸಿದ್ದರು. ರಾಜ್ಯಸಭೆಯಲ್ಲಂತೂ ಸರಕಾರದ ಒಂದು ಮಸೂದೆಯೂ ಪಾಸಾಗದಂತೆ ಮಾಡಲು ಹರ ಸಾಹಸ ಮಾಡಿದರು. ಅನಗತ್ಯವಾಗಿ ಗದ್ದಲ ಎಬ್ಬಿಸಿ ಅಧಿವೇಶನಕ್ಕೆ ಅಡ್ಡಿ ಮಾಡಿದರು. ಈ ಎಲ್ಲ ರಣನೀತಿಗಳೂ ಕಾಂಗ್ರೆಸ್‌ಗೆ ಮಾರಕವಾಗಿ ಪರಿಣಮಿಸಿರುವುದು ಚುನಾವಣೆ ಫಲಿತಾಂಶದಿಂದ ಸಾಭೀತಾಗಿದೆ. ಯಾಕಂದರೆ ಜನ ರಾಹುಲ್ ಗಾಂಧಿಗಿಂತ ಬುದ್ಧಿವಂತರು!
ಮೋದಿ ಪ್ರಧಾನಿ ಆಭ್ಯರ್ಥಿಯಾಗುವುದಕ್ಕಿಂತ ಮೊದಲೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಅಲ್ಲಿಂದಲೇ ಅವರ ಅವನತಿ ಆರಂಭವಾಯಿತು. ಕಾಂಗ್ರೆಸ್ ಸೋತಲ್ಲೆಲ್ಲಾ ರಾಹುಲ್ ಗಾಂಧಿ ಪ್ರಚಾರಕ್ಕೆ ತೆರಳಿದ್ದರು ಎಂಬುದು ಗಮನಾರ್ಹ. ವಿಚಿತ್ರವೆಂದರೆ ಬಿಹಾರದ ಚುನಾವಣೆ ಪ್ರಚಾರದಿಂದ ರಾಹುಲ್ ಗಾಂಧಿಯನ್ನು ದೂರವೇ ಇಡಲಾಗಿತ್ತು. ಆರ್‌ಜೆಡಿ ನಾಯಕ ಲಾಲೂಪ್ರಸಾದ್ ಯಾದವ್ ಇದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲಿ ಕಾಂಗ್ರೆಸ್ ಫಲಿತಾಂಶ ಪರವಾಗಿಲ್ಲ. ಹೀಗಿದ್ದ ಕಾಂಗ್ರೆಸ್ ಇಂದು ಧೂಳಿಪಟ ಆಗುವುದಕ್ಕೆ ಕಾರಣ ಅವರ ನೂತನ ನಾಯಕ ರಾಹುಲ್ ಗಾಂಧಿಯೇ ಹೊರತು ಇನ್ಯಾರೂ ಅಲ್ಲ. ಇತಿಹಾಸದಿಂದ ಒಂದು ಚೂರೂ ಬುದ್ಧಿ ಕಲಿಯದ ಕಾಂಗ್ರೆಸ್, ಎಲ್ಲೋ ಆಟವಾಡಿಕೊಂಡಿದ್ದ ರಾಹುಲ್ ಗಾಂಧಿಯನ್ನು ತಂದು ಇವರೇ ಮುಂದಿನ ಯುವರಾಜ ಎಂದರೆ, ಜನ ಒಪ್ಪಿಕೊಳ್ಳುವುದಾದರೂ ಹೇಗೆ? ಯುವರಾಜನಾಗಲು ಗಾಂಧಿ ಕುಟುಂಬದಲ್ಲಿ ಹುಟ್ಟಿದವ ಎಂಬ ಒಂದು ಅರ್ಹತೆ ಸಾಕೇ? ಪ್ರಧಾನಿ ಅಭ್ಯರ್ಥಿಯಾದವರ ಬಳಿ ದೇಶವನ್ನಾಳುವ ಅರ್ಹತೆ ಬಿಡಿ ದೇಶದ ಜನರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಾದರೂ ಇರಬೇಡವೇ?
ಭಾರತದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳಿಂದ ನಗೆಪಾಟಲಿಗೀಡಾಗುವ ವ್ಯಕ್ತಿ ಇದೀಗ ವಿದೇಶ ತಿರುಗುತ್ತಿದ್ದಾರೆ! ಕಳೆದ ವಾರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭಾರತದಲ್ಲಿ ವಂಶಾಡಳಿತ ಎಲ್ಲಾ ಕಾಲದಲ್ಲೂ ಇರುವಂಥದ್ದೇ ಎಂದು ವಿದೇಶದಲ್ಲಿ ಮಾನ ಕಳೆದು, ಭಾರತದಲ್ಲಿ ನಗೆಪಾಟಲಾದ ವ್ಯಕ್ತಿದೇಶವನ್ನಾಳಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲವೇ? ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ, ಅವರು ಸಾಕಷ್ಟು ಕಡೆ ತಿರುಗಿ ಜನರನ್ನು ಸಂಘಟಿಸಿದರು. ಹೋದ ಕಡೆ ಭಾಷಣ ಮಾಡುವಾಗ ಕಾಂಗ್ರೆಸ್ ಬಗ್ಗೆ ಇಲ್ಲ ಸಲ್ಲದ್ದು ಹೇಳಲಿಲ್ಲ. ಅವರ ಮಾತಲ್ಲಿ ದೇಶ, ಅಭಿವೃದ್ಧಿ ಕುರಿತ ಹೊಸ ಐಡಿಯಾಗಳಿದ್ದವು. ಜನರನ್ನು ಹುರಿದುಂಬಿಸುವ ಮಾತುಗಳಿದ್ದವು. ಭವಿಷ್ಯದ ಬಗ್ಗೆ ಕನಸುಗಳಿದ್ದವು. ಆದರೆ ರಾಹುಲ್ ಗಾಂಧಿ ಮೋದಿ ಬಗ್ಗೆ ಪ್ರತಿ ಬಾರಿ ಮಾತಾಡುವಾಗಲೂ ಟೀಕಿಸುತ್ತಿದ್ದರು. ರಾಹುಲ್ ಗಾಂಧಿಯವರ ನಾರ್ವೆ ಮತ್ತು ಅಮೆರಿಕಾ ಪ್ರವಾಸದಲ್ಲಿ ಅವರು ಮಾತಾಡಿದ ರೀತಿಯನ್ನೇ ಗಮನಿಸಿ. ವಂಶಾಡಳಿತದ ಮಾತಾಡಿದ ನೆನಪು ಜನರಲ್ಲಿ ಮಾಸುವ ಮುನ್ನವೇ ಟೈಮ್ಸ್‌ ಸ್ಕ್ವಯರಿನಲ್ಲಿ ಅನಿವಾಸಿಗಳನ್ನುದ್ದೇಶಿಸಿ ಮಾತಾಡಿದರು.
ಮಾತಾಡುತ್ತಾ ಆಡುತ್ತಾ ದೇಶದ ಮಾಹಾಪುರುಷರನ್ನೆಲ್ಲಾ ಅನಿವಾಸಿಗಳೆಂದುಬಿಟ್ಟರು. ನಿಜಕ್ಕೂ ಅವರಿಗೆ ನಿವಾಸಿಗೂ, ಅನಿವಾಸಿಗೂ ವ್ಯತ್ಯಾಸ ತಿಳಿದಿಲ್ಲವೇ ಎಂಬ ಸಂಶಯ ಬರುತ್ತದೆ. ಆದರೆ ಮೋದಿಯವರು ವಿಶ್ವದ ಎಲ್ಲೇ ಹೋಗಲಿ ಅನಿವಾಸಿಗಳಿಗೆ ದೇಶವನ್ನು ವಿವರಿಸುತ್ತಾರೆ. ಯಾವ ಕಾರಣದಿಂದಲೋ ದೇಶದ ಬಗ್ಗೆ ವ್ಯತಿರಿಕ್ತ ಭಾವನೆಗಳನ್ನು ಬೆಳೆಸಿಕೊಂಡು ತಾಯಿಬೇರಿನಿಂದ ದೂರವಿದ್ದವರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಾರೆ. ಅನಿವಾಸಿಗಳು ಅವರ ಮಾತಿಗೆ ಕಾಯುತ್ತಾರೆ ಮತ್ತು ಸಮ್ಮೋಹನಕ್ಕೊಳಗಾದವರಂತೆ ಮಾತು ಕೇಳುತ್ತಾರೆ. ಆದರೆ ರಾಹುಲ್ ಗಾಂಧಿಯವರ ಮಾತು ಅನಿವಾಸಿಗಳಿಗೆ ಮಾತ್ರವಲ್ಲ, ಸ್ವತಃ ಅವರ ಪಕ್ಷದ ನಾಯಕರಿಗೂ ಅರ್ಥವಾಗಿರುವುದಿಲ್ಲ. ಪ್ರತಿ ಬಾರಿ ರಾಹುಲ್ ಬಿಜೆಪಿ ವಿರುದ್ಧ ಭಾಷಣ ಮಾಡಿದಾಗಲೂ ಏನಾದರೊಂದು ಎಡವಟ್ಟು ಮಾಡಿಕೊಂಡು, ಅದು ಭಾಷಣಕ್ಕಿಂತ ‘ಕಾಮಿಡಿ ವಿತ್ ರಾಹುಲ್ ಗಾಂಧಿ’ ಥರ ಆಗುತ್ತಿತ್ತು. ವಿದೇಶಿ ವಿವಿಗಳಲ್ಲಿ ಮಾತಾಡಲು ಪಕ್ವತೆ ಬೇಕು. ಅದು ಅನುಭವ ಮತ್ತು ಅಧ್ಯಯನಗಳಿಂದ ಹುಟ್ಟಬೇಕು. ಇವೆರಡರಲ್ಲಿ ಯಾವುದು ರಾಹುಲ್ ಗಾಂಧಿಗಿದೆ? ಮಾತಾಡುವ ಕಲೆ ಇದೆಯಾ? ಸಂಘಟನಾ ಚಾತುರ್ಯ ಇದೆಯಾ? ಚೀಟಿಯಲ್ಲಿ ಬರೆದುಕೊಟ್ಟಂತೆ ಓದುತ್ತಾರೆ.
ಸಂಜೆಯೇ ಆಗಿದ್ದರೂ ಚೀಟಿಯಲ್ಲಿ ಇದ್ದಂತೆ ಮಾರ್ನಿಂಗ್ ಎಂದೇ ಓದುತ್ತಾರೆ. ಬರೆದುಕೊಳ್ಳದೆ ಪಕ್ಷದವರ ಹೆಸರನ್ನೂ ಹೇಳಲಾರರು. ಇನ್ನು ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದಾದರೂ ತಿಳಿದಿದೆಯಾ? ಅದೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಾಗ ಅದರ ಬಗ್ಗೆ ಸೋನಿಯಾ ಗಾಂಧಿ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದರು. ಅವರ ಹಿಂದೆಯೇ ನಿಂತಿದ್ದ ರಾಹುಲ್ ಬಹಳ ಖುಷಿಯಾದವರಂತೆ ಹಲ್ಲು ಗಿಂಜುತ್ತಿದ್ದರು. ಆ ವೀಡಿಯೋ ಮತ್ತು ಫೋಟೋ ಟ್ವಿಟ್ಟರ್‌ನಲ್ಲಿ ಬಹಳ ಹರಿದಾಡಿತ್ತು. ಈಗ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ರಾಹುಲ್ ಮಾತಾಡಿದ ಭಾಷಣ ಕೂಡಾ ಸ್ಮೈಲಿ ಜತೆಗೆ ಹರಿದಾಡುತ್ತಿದೆ. ಇಂಥ ರಾಹುಲ್‌ಗೆ ಪಕ್ಷ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ಕಾಂಗ್ರೆಸ್ ಪೂರ್ತಿ ರಾಹುಲ್ ತಲೆಗೇ ಕಟ್ಟುತ್ತಿದೆ. ಸೋಲನ್ನು ಮಾತ್ರ ರಾಹುಲ್‌ಗೆ ನೀಡುತ್ತಿಲ್ಲ. ಕೇರಳದಲ್ಲಿ ಮತ್ತು ಅಸ್ಸಾಮ್‌ನಲ್ಲಿ ಸೋತ ಕಾಂಗ್ರೆಸ್ ‘ಈ ಸೋಲನ್ನು ರಾಹುಲ್ ಗಾಂಧಿ ಮೇಲೆ ಹಾಕುವುದು ಸರಿ ಅಲ್ಲ’ ಎಂದು ಈಗಾಗಲೇ ಮಾತುಗಳು ಆರಂಭವಾಗಿವೆ.ಇನ್ನು ಎಷ್ಟು ದಿನ ರಾಹುಲ್‌ರನ್ನು ಬಚಾವ್ ಮಾಡಲು ಸಾಧ್ಯ? ಇತ್ತ ಚುನಾವಣೆಯಲ್ಲೂ ಸಲ್ಲದವರು ಅತ್ತ ವಿದೇಶದಲ್ಲಾದರೂ ಸಲ್ಲುತ್ತಾರೆ ಎಂದು ಊಹಿಸುವುದು ಕಷ್ಟ. ಈಗ ರಾಹುಲ್ ತಮ್ಮ ಪಕ್ಷವನ್ನು ಅಧೋಗತಿಗೆ ಇಳಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಮೋದಿಯೇ ಇಳಿದು ಬರಬೇಕಿಲ್ಲ. ರಾಹುಲ್ ಗಾಂಧಿ ಒಬ್ಬರೇ ಅದಕ್ಕೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆಯೂ ಕೊಡಲಿದ್ದಾರೆ ಎಂಬ ನಂಬಿಕೆ ನಮಗಿದೆ. ಅವರು ಮತ್ತಷ್ಟು ವಿಶ್ವವಿದ್ಯಾಲಯಗಳಿಗೆ ಹೋಗುತ್ತಿರಲಿ, ಭಾಷಣ ಮಾಡುತ್ತಿರಲಿ. ಅಷ್ಟೇ ಸಾಕು.

Comments are closed.