Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಬಂದೇ ಬಿಟ್ಟಿತು ಪುತ್ತರಿ, ಉಳಿದವರಿಗೆ ಸಂಕ್ರಾಂತಿ, ತಮಿಳರಿಗೆ ಪೊಂಗಲ್, ಅಸ್ಸಾಮಿಗೆ ಬಿಹು, ಪಂಜಾಬಿಗೆ ಬೈಸಾಕಿ!

ಬಂದೇ ಬಿಟ್ಟಿತು ಪುತ್ತರಿ, ಉಳಿದವರಿಗೆ ಸಂಕ್ರಾಂತಿ, ತಮಿಳರಿಗೆ ಪೊಂಗಲ್, ಅಸ್ಸಾಮಿಗೆ ಬಿಹು, ಪಂಜಾಬಿಗೆ ಬೈಸಾಕಿ!

ಬಂದೇ ಬಿಟ್ಟಿತು ಪುತ್ತರಿ, ಉಳಿದವರಿಗೆ ಸಂಕ್ರಾಂತಿ, ತಮಿಳರಿಗೆ ಪೊಂಗಲ್, ಅಸ್ಸಾಮಿಗೆ ಬಿಹು, ಪಂಜಾಬಿಗೆ ಬೈಸಾಕಿ!

ಇಳೆ, ಮಳೆಯಿಂದ ತೊಯ್ದು ಹದವಾದಾಗ ಆರಂಭವಾಗುವಾಗುವ ಬಿತ್ತನೆ ಅಥವಾ ನಾಟಿ ಪೈರಾಗಿ ಬೆಳೆದು ತೆನೆ ಮೂಡಿ, ಹಾಲುಗಟ್ಟಿ ಮಾಗಿ ಕಟಾವಿಗೆ ಬಂದಾಗ ಆರಂಭವಾಗುತ್ತದೆ ವರ್ಷದ ಕೂಳು ಕೊಡುವ ಭೂತಾಯಿಗೆ ಧನ್ಯತೆಯನ್ನು ವ್ಯಕ್ತಪಡಿಸುವ ಹಬ್ಬ. ಬರುವ 13ನೇ ತಾರೀಖು ನಮ್ಮ ಕೊಡಗಿನಲ್ಲಿ ಈ ಹಬ್ಬ ಪುತ್ತರಿ ಅಥವಾ ಹುತ್ತರಿಯಾಗಿ ಆಚರಣೆಯಾಗುತ್ತದೆ, ಉಳಿದ ಭಾಗಗಳಲ್ಲಿ ಮಕರ ಸಂಕ್ರಾಂತಿಯಾಗಿ, ಅಸ್ಸಾಮಿನಲ್ಲಿ ಬಿಹುವಾಗಿ, ತಮಿಳುನಾಡಿನಲ್ಲಿ ಪೊಂಗಲ್ ಆಗಿ, ಉತ್ತರ ಭಾರತದಲ್ಲಿ ಲೋಹ್ರಿಯಾಗಿ, ಪಂಜಾಬಿನಲ್ಲಿ ಬೈಸಾಕಿಯಾಗಿ ಆಚರಣೆಯಾದರೆ ಅಮೆರಿಕ, ಕೆನಡಾ, ಗ್ರೆನೇಡಾಗಳಲ್ಲೂ ಥ್ಯಾಂಕ್ಸ್‌ಗಿವಿಂಗ್ ಹೆಸರಿನಲ್ಲಿ ನಡೆಯುತ್ತದೆ!
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ
ಅಲ್ಲೆ ಆ ಕಡೆ ನೋಡಲಾ
ಅಲ್ಲೆ ಕೊಡಗರ ನಾಡೆಲಾ
ಅಲ್ಲೆ ಕೊಡಗರ ಬೀಡೆಲಾ
ಮಂಗಳೂರು ಮೂಲದ ಮಡಿಕೇರಿಯಲ್ಲಿ ಕಾಲೇಜು ಉಪನ್ಯಾಸಕರಾಗಿದ್ದ ಕವಿ ಪಂಜೆ ಮಂಗೇಶರಾಯರು ಕೊಡಗನ್ನು ಹಾಡಿದ್ದು ಹೀಗೆ. ಕೆಲವೇ ಕೆಲವು ಪ್ಯಾರಾಗಳಲ್ಲಿ ಅವರು ಕೊಡಗಿನ ಚಿತ್ರವನ್ನು ಕಟ್ಟಿಕೊಟ್ಟ ಈ ಕವನ ‘ಹುತ್ತರಿ ಹಾಡು’ ಎಂದೇ ಜನಜನಿತ. ಕೊಡಗಿನ ಪಾಲಿಗೆ ಈ ಹಾಡು ಇಂದಿಗೂ ಜನರ ಹೆಮ್ಮೆ. ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕವನಗಳ ಸಾಲಲ್ಲಿ ಪಂಜೆಯವರ ಈ ಕವನ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕವಿ ಅಲ್ಲಿ ಹುತ್ತರಿಯ ಬಗ್ಗೆ ಹೆಚ್ಚೇನೂ ಹೇಳದಿದ್ದರೂ ಆವರು ಅ ಕವನಕ್ಕೆ ‘ಹುತ್ತರಿ ಹಾಡು’ ಎಂದೇ ಹೆಸರಿಟ್ಟರು. ಕೊಡಗಿನ ಮಹಿಮೆಯನ್ನು, ಹಿರಿಮೆಯನ್ನು, ಸೌಂದರ್ಯವನ್ನು ಹೊಗಳುತ್ತಾ ಹೊಗಳುತ್ತಾ ಕವಿಗೆ ಹುತ್ತರಿಯೇ ನೆನಪಾಯಿತು. ಹುತ್ತರಿ ಕವಿಯ ಭಾವವನ್ನೂ ಮೀಟಿತ್ತು. ಕಾಡಿದ ಹುತ್ತರಿ ಕಾವ್ಯಕ್ಕೆ ಸ್ಪೂರ್ತಿಯಾಯಿತು.
ಹುತ್ತರಿ ಮತ್ತೆ ಬಂದಿದೆ. ವರ್ಷದಲ್ಲಿ ಹಬ್ಬಗಳೆಷ್ಟೇ ಬರಲಿ ಕೊಡಗಿಗೆ ಸಂಭ್ರಮವನ್ನು ಹೊತ್ತು ತರುವುದು ಅವರ ‘ಪುತ್ತರಿ’ (ಹುತ್ತರಿ) ಮಾತ್ರ. ಕೊಡಗಲ್ಲಿ ಯಾವ ಹಬ್ಬಗಳೇ ಬರಲಿ ಅದು ಪ್ರತಿ ಹಬ್ಬದಲ್ಲೂ ಪುತ್ತರಿಯನ್ನು ಕಾಯುತ್ತದೆ. ತಮ್ಮ ಹಳೆಯ ನೆನಪುಗಳೆಲ್ಲವೂ ಪುತ್ತರಿಯ ದಿನಾಂಕದ ಸುತ್ತಮುತ್ತಲೇ ತಿರುಗುತ್ತಿರುತ್ತವೆ. ಹಾಗಾಗಿ ಪ್ರತೀ ಪುತ್ತರಿ ಕೊಡಗಿನವನ ಬಾಳಲ್ಲಿ ನೆನಪಿನ ಹಾಯಿದೋಣಿ.
ಕೊಡಗಿನ ಆರಾಧ್ಯ ದೇವರು ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ಹುತ್ತರಿ ಆಚರಣೆಯ ದಿನಾಂಕ ನಿಗದಿಯಾಗುತ್ತಲೇ ಪುತ್ತರಿಯ ಸಿದ್ಧತೆಗಳು ಜಿಲ್ಲೆಯಲ್ಲಿ ಶುರುವಾಗುತ್ತವೆ ಎನ್ನಬಹುದು. ಕೃಷಿ ಪ್ರಧಾನ ಸಮಾಜ ವ್ಯವಸ್ಥೆಯ ಕೊಡಗು ತನ್ನ ಬೆಳೆಯನ್ನು ಮನೆತುಂಬಿಸಿಕೊಳ್ಳುವ ಶುಭ ಮುಹೂರ್ತ ಈ ಪುತ್ತರಿ. ತನ್ನ ವರ್ಷದ ದುಡಿಮೆಯನ್ನು ಜನತದಿಂದ ಕಾಪಾಡಿಕೊಳ್ಳುತ್ತಾ ಪ್ರಕೃತಿಯೊಡನೆ ಸೆಣಸುತ್ತಾ, ಅರಸ ಕರೆದಾಗ ದಂಡಿನಲ್ಲಿ ಪ್ರಾಣದ ಹಂಗು ತೊರೆದು ಸೆಣಸುತ್ತಾ ಬದುಕಿದ ಕೊಡಗಿನ ರೈತ ಪುತ್ತರಿಯಂದು ತನ್ನ ಬೆಳೆಯನ್ನು ತಂದು ಪೈರಿಗೆ ಪೂಜೆ ಸಲ್ಲಿಸಿ ಊರವರೊಂದಿಗೆ ಪುತ್ತರಿಯಂದು ಸಂಭ್ರಮಿಸುತ್ತಾನೆ.
ಕೊಡಗಿನಲ್ಲಿ ಕೃಷಿ ಸಂಸ್ಕೃತಿ ಯಾವಾಗ ಆರಂಭವಾಯಿತೋ ಅಂದಿನಿಂದಲೇ ಪುತ್ತರಿ ಎಂಬ ಸಂಭ್ರಮ ಶುರುವಾಯಿತು ಎನ್ನುತ್ತಾರೆ ಜನಪದ ವಿದ್ವಾಂಸರು. ಕೊಡವ ಕಾಲೆಂಡರಿನ ‘ಬಿರ್ಚ್ಯಾರ್’ ಎಂಬ ಎಂಟನೆ ತಿಂಗಳ ರೋಹಿಣಿ ನಕ್ಷತ್ರದಂದು ತಾನು ಬೆಳೆದ ಭತ್ತವನ್ನು ಮನೆಗೆ ಕೊಡಗಿನ ರೈತ ಮನೆ ತುಂಬಿಸಿಕೊಳ್ಳುತ್ತಾನೆ. ತನ್ನ ವರ್ಷದ ಶ್ರಮವನ್ನು ಸಾರ್ಥಕ ಪಡಿಸಿಕೊಳ್ಳುತ್ತಾನೆ. ಕೊಡಗಿನ ಪ್ರತೀ ಆಚರಣೆಗಳೂ ಪರಿಸರಕ್ಕೆ ಹತ್ತಿರದ ಸಂಬಂಧವನ್ನು ಹೊಂದಿರುವುದು ವಿಶೇಷ. ಎಲ್ಲಾ ಭಾರತೀಯ ಹಬ್ಬಗಳೂ ಕೃಷಿ ಮತ್ತು ಪರಿಸರದ ಸುತ್ತ ತಿರುಗಿದರೆ ಕೊಡಗಿನ ಎಲ್ಲಾ ಹಬ್ಬಗಳೂ ಕೃಷಿ ಮತ್ತು ಪರಿಸರದ ಸುತ್ತ ತಿರುಗುತ್ತವೆ. ಪರಿಸರದ ನಂಟನ್ನು ಹೊಂದಿರುತ್ತವೆ. ಆಕಾಶವೇ ಬಾಯಿ ಬಿಟ್ಟಂತೆ ಸುರಿಯುವ ಮಳೆಯ ನಡುವೆ ಕೊಡಗಿನ ರೈತ ಭತ್ತವನ್ನು ನಾಟಿ ಮಡುವ ಸಾಹಸ ಒಬ್ಬ ಯೋಧನ ಸಾಹಸವನ್ನು ನೆನಪಿಗೆ ತರುತ್ತವೆ. ನಂತರ ಆದನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ಆಚರಿಸುವ ಬೇಟೆಯ ಹಬ್ಬ ಅಥವಾ ಆಯುಧ ಪೂಜೆ ‘ಕೈಲು ಮೂಹೂರ್ತ’, ಬೆಳೆ ಬೆಳೆಯುತ್ತಾ ಅದರ ಪೋಷಣೆಯ ‘ತುಲಾ ಸಂಕ್ರಮಣ’ ಕಳೆದು ತನ್ನ ಬೆಳೆ ಎದೆ ಎತ್ತರಕ್ಕೆ ಬೆಳೆದು ಕಟಾವಿನ ಸಮಯವನ್ನು ಆಚರಿಸುವ ಹೊತ್ತು ಈ ಸಂಭ್ರಮದ ಪುತ್ತರಿ.
ಕೊಡಗು ಪುತ್ತರಿಗೆ ಸಿದ್ಧವಾಗುವ ವಿಧಾನವೇ ಒಂದು ದೃಶ್ಯ ಕಾವ್ಯ. ವಾರಕ್ಕೆ ಮುಂಚೆಯೇ ಆತ ಪುತ್ತರಿಗೆ ಸರಿಯಾಗಿ ಬಾಳೆಯನ್ನು ಹಣ್ಣು ಮಾಡುವ ತುರಾತುರಿಯಲ್ಲಿರುತ್ತಾನೆ. ಪುತ್ತರಿಗೆಂದು ಕೊಡಗಲ್ಲಿ ವಿಶೇಷ ಸಂತೆಗಳು ನಡೆಯುತ್ತವೆ. ಭತ್ತವನ್ನು ಬೇಯಿಸುವ ಕೆಲಸ ನಡೆಯುತ್ತವೆ. ಬೇಯಿಸಿದ ಭತ್ತವನ್ನು ಒಣಗಿಸಿ ಕುಟ್ಟಿ ಕಲ್ಲಲ್ಲಿ ರುಬ್ಬಿ ಹುಡಿ ಮಾಡಿ ಪುತ್ತರಿಯಂದು ಮಾತ್ರ ತಯಾರಿಸಲಾಗುವ ರುಚಿಕರ ‘ತಂಬುಟ್ಟು’ ಹುಡಿಯನ್ನು ತಯಾರಿಸುವ ಗಡಿಬಿಡಿಯಲ್ಲಿ ಕೊಡಗಿನ ಮಹಿಳೆಯರಿರುತ್ತಾರೆ. ಮನೆಗೆ ಸುಣ್ಣಬಣ್ಣವನ್ನು ಬಳಿದು ಸಿಂಗರಿಸಲಾಗುತ್ತದೆ. ಪೈರು ತೆಗೆಯುವ ಗದ್ದೆಗೆ ಚಪ್ಪರ ಹಾಕುವ, ಗದ್ದೆಗೆ ತೋರಣ ಕಟ್ಟುವ ಸಂಭ್ರಮಕ್ಕೆ ಮಕ್ಕಳು ತೊಡಗುತ್ತಾರೆ. ಪೇಟೆಯಲ್ಲಿ ಪಟಾಕಿ ಮಳಿಗೆಗಳೇಳುತ್ತವೆ. ಪೈರು ತೆಗೆಯುವ ಶುಭ ಮೂಹೂರ್ತಕ್ಕೆ ಈಡು ಹೊಡೆಯಲು ಮನೆಯ ಹಿರಿಯರು ಕೋವಿಗಳನ್ನು ಶುಚಿಗೊಳಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ಪುತ್ತರಿ ಹತ್ತಿರ ಬಂದಂತೆಲ್ಲಾ ಕೊಡಗಿನ ಜನರು ಎಲ್ಲವನ್ನೂ ಮರೆತೇಬಿಟ್ಟಿದ್ದಾರೇನೋ ಎಂಬಂತೆ ಪುತ್ತರಿಯ ಮಾತಲ್ಲೇ ಮುಳುಗಿಹೋಗಿರುತ್ತಾರೆ.
ಆ ಹೊತ್ತಲ್ಲಿ ಎಲ್ಲವೂ ಪುತ್ತರಿಮಯ ಆಗಿಹೋಗಿರುತ್ತದೆ. ಗದ್ದೆಯಿಂದ ತಂದ ಪೈರನ್ನು ಮನೆಯ ಬಾಗಿಲಿಗೆ ತೋರಣ ಕಟ್ಟಿ, ಆಯುಧ, ಆಭರಣಗಳಿಗೂ ಕಟ್ಟಲು ಒಂದು ಬಗೆಯ ಕಾಡು ಗಿಡದ ನಾರನ್ನು ಬಳಸಲಾಗುತ್ತದೆ. ಬೇರೆ ಹೊತ್ತಲ್ಲಿ ಕೇವಲ ಕಾಡು ಗಿಡವಾದ ಅದಕ್ಕೂ ಪುತ್ತರಿ ಹೊತ್ತಲ್ಲಿ ‘ಪುತ್ತರಿ ನಾರು’ ಎಂಬ ಪಟ್ಟ. ಪುತ್ತರಿಗೆ ಮಾತ್ರ ತಿನ್ನುವ ಒಂದು ಬಗೆಯ ಕಾಡುಗೆಣಸಿನ ಹೆಸರೂ ‘ಪುತ್ತರಿ ಗೆಣಸು’. ಪುತ್ತರಿಗೆ ಮಾಡುವ ಕೆಲಸವೆಲ್ಲವೂ ‘ಪುತ್ತರಿ ಕೆಲಸ’. ಪುತ್ತರಿಗೆ ಮಾಡುವ ಮಧ್ಯ-ಮಾಂಸಗಳಿಲ್ಲದ ಅಡಿಗೆ ‘ಪುತ್ತರಿ ಗದ್ದಾಳ’ (ಪುತ್ತರಿ ಭಕ್ಷ್ಯ) ಹೀಗೆ ಸಕಲವನ್ನೂ ಪುತ್ತರಿ ಆವರಿಸಿಕೊಳ್ಳುತ್ತದೆ. ಊರಿಗೆ ಊರೇ ಸಂಭ್ರಮ-ಸಡಗರ, ಮಿಲಿಟರಿಯವರ ರಜೆ ಮೀಸಲಾಗುವುದು ಪುತ್ತರಿಗೆಂದೆ. ಹೊರ ಊರಲ್ಲಿರುವ ಮಕ್ಕಳು ಮನೆಗೆ ಬರುವ ಹೊತ್ತೂ ಪುತ್ತರಿ. ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳಿಗೆ ಉದಾಹರಣೆಯಂತಿರುವುದು ಈ ಪುತ್ತರಿ.
ಉತ್ತರ ಕೊಡಗಿನ ನಾಪೋಕ್ಲು ಸಮೀಪದ ಪಾಡಿ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ದೇವರ ಗದ್ದೆಯಲ್ಲಿ ಪೈರು ತೆಗೆಯುವವರೆಗೆ ಸಮಸ್ತ ಕೊಡಗು ಕಾಯುತ್ತದೆ. ತನ್ನ ಶ್ರಮವನ್ನು ದೇವರಿಗೆ ಅರ್ಪಿಸಿದ ನಂತರ ಪ್ರತೀ ಕುಟುಂಬಗಳೂ ಒಗ್ಗೂಡಿ ಒಡ್ಡೋಲಗದೊಂದಿಗೆ ಸಾಂಪ್ರದಾಯಿಕ ಉಡುಪನ್ನು ಧರಿಸಿ ಗದ್ದೆಗೆ ತೆರಳಿ ಈಡು ಹೊಡೆದು ಹೊಸ ಪೈರನ್ನು ಮನೆ ತುಂಬಿಸಿಕೊಳ್ಳುತ್ತಾರೆ. ಹಬ್ಬದೂಟದ ನಂತರ ಊರವರೆಲ್ಲರೂ ಸೇರಿ ‘ಮಂದ್’ ಎಂಬಲ್ಲಿ ಸೇರಿ ಕೋಲಾಟವಾಡುವ ಸಂಪ್ರದಾಯ ಇಂದಿಗೂ ಕೊಡಗಲ್ಲಿದೆ. ಹಬ್ಬವನ್ನು ಯಾವೆಲ್ಲಾ ರೀತಿಯಲ್ಲಿ ಸಂಭ್ರಮಿಸಬಹುದೋ ಅದ್ಯಾವುದನ್ನೂ ಪುತ್ತರಿ ಕಳೆದುಕೊಳ್ಳುವುದಿಲ್ಲ. ಪುತ್ತರಿ ಕಳೆದ ಮೇಲೆ ಕೊಡಗು ಒಂದು ವಿಧದ ಸಪ್ಪೆಯನ್ನು ಅನುಭವಿಸುತ್ತದೆ. ಮತ್ತೆ ಪುತ್ತರಿಗೆ ಕಾಯುತ್ತದೆ. ಸಂಭ್ರಮದಿಂದ ಬಂದ ಪುತ್ತರಿ ಹೇಳದೇ ಕೇಳದೇ ಹೊರಟುಹೋಯಿತು ಎಂಬ ಕೊಡವ ಭಾಷೆಯ ಗಾದೆ ಅನ್ವರ್ಥವಾದಂತೆನಿಸುತ್ತದೆ. ಕೊಡವ ಭಾಷೆಯ ಸಾಹಿತ್ಯ ರತ್ನಗಳಾದ ಖ್ಯಾತ ಸಂಶೋಧಕ ಡಾ. ಐ. ಮಾ ಮುತ್ತಣ್ಣನವರ ‘ಕೊಡಗಿನ ನೆನಪುಗಳು’, ನಡಿಕೇರಿಯಂಡ ಚಿಣ್ಣಪ್ಪನವರ ಜನಪದ ಸಾಹಿತ್ಯಗುಚ್ಛ ‘ಪಟ್ಟೋಲೆ ಪಳಮೆ’, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ ನಾಟಕಗಳ ಹಾಡುಗಳಲ್ಲಿ ಕಾಣುವ ಪುತ್ತರಿ ಇಂದಿಗೂ ಬದಲಾಗಿಲ್ಲ. ಕೃಷಿ ಸಂಸ್ಕೃತಿ, ಶ್ರಮ ಸಂಸ್ಕೃತಿ, ಯೋಧತನ, ಕೊಡಗಿನ ಜನರ ಪರಿಸರ ಪ್ರೇಮ ಇರುವವರೆಗೂ ಪುತ್ತರಿ ಬದಲಾಗುವುದೂ ಇಲ್ಲ. ನಾನಾ ವರದಿಗಳು ಕೊಡಗಿನ ಪರಿಸರ ರಕ್ಷಣೆಯ ಹೆಸರಲ್ಲಿ ಬರುತ್ತಿದ್ದರೂ ಕೊಡಗಿನ ಆಚರಣೆಗಳ ಮುಂದೆ ಅವೆಲ್ಲವೂ ಕುಬ್ಜವಾದಂತೆನಿಸುತ್ತವೆ.
ಪರಿಸರ ರಕ್ಷಣೆಯ ಸುತ್ತಲೂ ತಿರುಗುವ ಕೊಡಗಿನ ಆಚರಣಗಳೆಲ್ಲವೂ ಪರಿಸರ ರಕ್ಷಣೆಗೆ ವರದಿಗಳ ಹಂಗಿಲ್ಲ ಎಂದೇ ಸಾರುತ್ತವೆ.
ನೈಜ ಕೊಡಗು ಅರ್ಥವಾಗಬೇಕೆಂದರೆ ಪುತ್ತರಿಗೆ ಕೊಡಗಿಗೆ ಬರಬೇಕು. ಕೊಡಗಿನ ಆತಿಥ್ಯ ಸವಿಯಬೇಕೆಂದರೆ ಪುತ್ತರಿಯಲ್ಲಿ ಭಾಗಿಯಾಗಬೇಕು. ನಾನೂ ಕೊಡಗಿನವನಾದ ಮೇಲೆ ಬಂದ ಮೊದಲ ಪುತ್ತರಿ ಇದು. ದೆಹಲಿಯ ಚಳಿಗಾಲದ ಅಧಿವೇಶನದಲ್ಲೂ ಪುತ್ತರಿ ಸೆಳೆಯುತ್ತಿದೆ. ಪಚ್ಚೆ ಬಾಳೆಯಲ್ಲಿ ಮಾಡಿದ ತಂಬಿಟ್ಟು ನೆನಪಾಗುತ್ತಿದೆ. ಪೈರು ತೆಗೆಯುವಾಗ ಈಡು ಹೊಡೆಯುವ ಆಸೆಯಾಗುತ್ತಿದೆ. ‘ಮಂದ’ನ ಪುತ್ತರಿ ಕೋಲಾಟವನ್ನು ಊರವರೊಂದಿಗೆ ನಿಂತು ನೋಡಬೇಕೆನಿಸುತ್ತಿದೆ. ಡಿಸೆಂಬರ್ 13ರಂದು ಮತ್ತೆ ಬಂದಿದೆ ಪುತ್ತರಿ ಸಂಭ್ರಮ.

puttari-article

Comments are closed.