Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ತೊಟ್ಟಿಲು ಕಾದ ಅಪ್ಪನಿಗೆ ಯಾವತ್ತೂ ಬರಬಾರದು ಮಗನ ಹೆಣ ಕಾಯುವ ಹೊತ್ತು!

ತೊಟ್ಟಿಲು ಕಾದ ಅಪ್ಪನಿಗೆ ಯಾವತ್ತೂ ಬರಬಾರದು ಮಗನ ಹೆಣ ಕಾಯುವ ಹೊತ್ತು!

ತೊಟ್ಟಿಲು ಕಾದ ಅಪ್ಪನಿಗೆ ಯಾವತ್ತೂ ಬರಬಾರದು ಮಗನ ಹೆಣ ಕಾಯುವ ಹೊತ್ತು!

ಅಮ್ಮಾ ನಿನ್ನ ಎದೆಯಾಳದಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊ ನೀ ಕರುಳ ಬಳ್ಳಿ-ಒಲವೂಡುತ್ತಿರುವ ತಾಯೆಬಿಡದ ಬುವಿಯ ಮಾಯೆ?

ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ತಮ್ಮ ಕವಿತೆಯೊಂದರಲ್ಲಿ ಹಿಡಿದಿಟ್ಟ ರೀತಿ ಇದು. ಮಗುವೊಂದು ಜಾರಿ ಬಿದ್ದಾಗ ಬಾಯಲ್ಲಿ ಬರುವ ಮೊದಲನೇ ಕೂಗು ಅದೇ ‘ಅಮ್ಮಾ?’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ’ ಎಂದು ಬಹಳ ಅರ್ಥಪೂರ್ಣವಾಗಿ ಬರೆಯುತ್ತಾರೆ. ಮಗುವಿನ ಆ ಧ್ವನಿ ಕೇಳಿದ ಕೂಡಲೇ ಅದೆಲ್ಲಿದ್ದರೂ ಅಮ್ಮ ಓಡಿ ಬರುತ್ತಾಳೆ, ‘ಅಯ್ಯೋ ಮಗನೇ ಬಿದ್ದಾ?’, ‘ಮಗಳೇ ಪೆಟ್ಟಾಯ್ತಾ?’ ಅಂತ ಎತ್ತಿ ಎದೆಗವುಚಿಕೊಳ್ಳುತ್ತಾಳೆ. ಆ ಅಪ್ಪುಗೆಯಲ್ಲಿ ಅದೆಂಥ ಆಪ್ತತೆ, ಭದ್ರತೆ, ನೋವು ಮರೆಸುವ ಶಕ್ತಿ! ಇನ್ನು ಅಪ್ಪನಾದವನು…? ಹರೆಯದಲ್ಲಿ ಒರಟನಾಗಿ ಕಾಣುವ, ಬಾಲ್ಯದಲ್ಲಿ ವಿಲನ್ ಎನಿಸುವ ಅಪ್ಪನೂ ಕೂಡಾ ಜಾರಿಬಿದ್ದ ಮಗುವಿಗೆ ಹಾರಿಬರುತ್ತಾನೆ.

ಇದಲ್ಲದೆ ಬೇಂದ್ರೆಯವರ ‘ನೀ ಹಿಂಗೆ ನೋಡಬೇಡಾ ನನ್ನಾ…’ ಕವನ ಬಿಂಬಿಸುವ ಧ್ವನಿ ಆಮ್ಮನಿಗಿಂತ ಅಪ್ಪನ ಮನಸ್ಸನ್ನು ತೋರಿಸುತ್ತದೆ.
ಅಂದರೆ ಬೇಂದ್ರೆಯಂಥಾ ಬೇಂದ್ರೆಯಜ್ಜನಿಗೇ ಪುತ್ರಶೋಕವನ್ನು ಸಹಿಸಲಾಗಲಿಲ್ಲ! ಮತ್ತು ಕವನದಲ್ಲಲ್ಲದೇ ಆ ಕವಿಗೆ ಬೇರಾವ ರೀತಿಯಲ್ಲೂ ಆ ಶೋಕವನ್ನು ಹೇಳಲಾಗಲಿಲ್ಲ. ಪುತ್ರಶೋಕವೆಂದರೆ ಆಂಥದ್ದೇ? ಆ ಶೋಕ ಅಷ್ಟೊಂದು ತೀವ್ರವೇ?

ಪ್ರೈಮರಿ ಶಾಲೆಯ ಒಂದು ಪಾಠ ನಮಗೆಲ್ಲಾ ನೆನಪಿರಬಹುದು. ರಾಜನ ಮೀಸೆ ಎಳೆಯುವ ಧೈರ್ಯ ಯಾರಿಗಿದೆ? ಎಂದು ಮಂತ್ರಿಯೊಬ್ಬ ಪ್ರಶ್ನೆ ಮಾಡುತ್ತಾನೆ. ರಾಜನ ಮೀಸೆ ಎಳೆದವನಿಗೆ ಮರಣದಂಡನೆಯ ಶಿಕ್ಷೆಯನ್ನಲ್ಲದೆ ಇನ್ನಾವ ಶಿಕ್ಷೆಯನ್ನೂ ನೀಡಬಾರದು ಎಂದು ಆಸ್ಥಾನದ ಸರ್ವರೂ ಹೇಳುತ್ತಾರೆ. ಆದರೆ ರಾಜಾ ಅಕ್ಬರನ ಮಂತ್ರಿ ಬೀರಬಲ್ಲ ರಾಜನ ಮೀಸೆ ಎಳೆದವನ ಬಾಯಿಗೆ ಮಿಠಾಯಿಯನ್ನು ಕೊಡಬೇಕು ಎನ್ನುತ್ತಾನೆ. ಹೌದಲ್ಲಾ! ರಾಜನ ಮೀಸೆ ಎಳೆದವನಿಗೆ ಮಿಠಾಯಿಯನ್ನಲ್ಲದೆ ಇನ್ನೇನನ್ನು ಕೊಡಬೇಕು? ರಾಜನ ಮೀಸೆ ಎಳೆಯುವ ಹಕ್ಕು, ಧೈರ್ಯ ರಾಜನ ಮಗನಿಗಲ್ಲದೆ ಇನ್ನಾರಿಗೆ ತಾನೇ ಇದ್ದೀತು? ಆತನಿಗೆ ಮಿಠಾಯಿ ಯನ್ನಲ್ಲದೆ ಇನ್ನೇನನ್ನು ತಾನೇ ಕೊಡಬೇಕು? ಆತ ರಾಜನಾದರೂ ಅಪ್ಪನೇ ತಾನೇ? ಅಪ್ಪನೆಂಬವನು ರಾಜನಾದರೂ ಮಕ್ಕಳ ಮುಂದೆ ಆತ ಗುಲಾಮನೇ ತಾನೇ? ಯಾವ ಅಪ್ಪತಾನೇ ಮಗುವಿನ ಮುಂದೆ ಮಂಡಿಯೂರಿಲ್ಲ? ಯಾವ ಅಪ್ಪ ತಾನೇ ಪುಟ್ಟ ಕಂದನಿಗಾಗಿ ನಿದ್ದೆಗೆಟ್ಟಿಲ್ಲ? ಯಾವ ಅಪ್ಪ ತಾನೇ ತನ್ನ ಕಂದನಿಗಾಗಿ ಪಾಡುಪಟ್ಟಿಲ್ಲ?

ಅಪ್ಪ ಎಂಬ ಆತ ರಾಜನೇ ಆಗಿರಲಿ, ಸೇವಕನೇ ಆಗಿರಲಿ ಅಪ್ಪ ಎಂದರೆಲ್ಲರಿಗೂ ಒಂದೇ. ಊರಿಗೆ ದೊರೆಯಾದರೂ ಆತ ತಾಯಿಗೆ ಮಗ ಎಂಬ ನಾಣ್ಣುಡಿ ಹೇಳುತ್ತೇವೆ.
ಆದರೆ ಆ ದೊರೆಯೂ ಒಬ್ಬ ಅಪ್ಪ ಎನ್ನುವುದನ್ನು ಸಮಾಜ ಅಷ್ಟು ಸುಲಭಕ್ಕೆ ಹೇಳುವುದಿಲ್ಲ. ಆಸ್ಪತ್ರೆಯ ಹೆರಿಗೆ ವಾರ್ಡಿನ ಹೊರಗೆ ಚಡಪಡಿಸುವ ಅಪ್ಪ, ಮಗುವಿನ ಮೊದಲ ಅಳುವಿಗೆ ಹೊಸ ಹುಟ್ಟನ್ನು ಧರಿಸುತ್ತಾನೆ. ತಾಯಿಗೆ ಹೇಗೆ ಹೆರಿಗೆ ಎನ್ನುವುದು ಮರುಜನ್ಮವೋ ತಂದೆಗೂ ಅದು ಮರುಜನ್ಮ. ಬಟ್ಟೆಯಲ್ಲಿ ಸುತ್ತಿದ ಪುಟ್ಟ ಜೀವವನ್ನು ಕೈಯಲ್ಲಿ ಹಿಡಿದ ಘಳಿಗೆ ಪ್ರತೀ ಮನುಷ್ಯನಿಗೂ ಜೀವಮಾನದ ಸಾರ್ಥಕ ಕ್ಷಣ. ಆ ಕ್ಷಣದ ಪುಳಕಕ್ಕೆ ಬಡವ-ಬಲ್ಲಿದನೆಂದ ವ್ಯತ್ಯಾಸವಿಲ್ಲ. ಆತನಿಗೆ ಜೀವನದಲ್ಲಿ ಏನೋ ಒಂದು ಅಮೂಲ್ಯ ಸಂಪತ್ತನ್ನು ಗಳಿಸಿದ ಭಾವ. ಆ ಭಾವ ಹುಟ್ಟದ ಅಪ್ಪನೇ ಈ ಪ್ರಪಂಚದಲ್ಲಿಲ್ಲ.
ತೊಟ್ಟಿಲಲ್ಲಿ ಮಲಗಿ ತನ್ನ ಪಾಡಿಗೆ ನಗುವ, ಇದ್ದಕ್ಕಿದ್ದಂತೆ ಅಳುವ ಮಗು ವನ್ನು ನೋಡುವ ಅಪ್ಪನೊಳಗೆ ಹುಟ್ಟುವ ಭಾವಸೆಲೆಯನ್ನು ಯಾವ ಕವಿಯೂ ಇದುವರೆಗೆ ಕಟ್ಟಿಕೊಟ್ಟಿಲ್ಲ. ಮಲಗಿದ ಮಗು ನಿದ್ರೆ ಮಾಡುತ್ತಿದ್ದರೆ ಅಪ್ಪನಾದವನ ಅರ್ಧ ಮನಸ್ಸು ತೊಟ್ಟಿಲಲ್ಲಿರುತ್ತದೆ. ತೂಗುವ ತೊಟ್ಟಿಲಲ್ಲಿ ಮತ್ತೆ ಮಗುವಾಗುವ ಆ ಕ್ಷಣವನ್ನು ಅನುಭವಿಸಿದವರೇ ಬಲ್ಲರು. ಇನ್ನೂ ಪ್ರಪಂಚ ಕಾಣದ ಮಗುವಿನ ಕಣ್ಣಲ್ಲಿ ಅಪ್ಪ ತನ್ನ ನಾಳೆಯನ್ನು, ತನ್ನ ಭವಿಷ್ಯವನ್ನು ಕಾಣುತ್ತಾನೆ. ತಾಯಿಯಾ ದವಳು ತನ್ನ ಹುಟ್ಟುವ ಮಗುವಿಗೆ ಕುಲಾವಿ ಹೊಲಿಸಿದರೆ ಅಪ್ಪನಾದವನು ಅದಾಗಲೇ ಮಗು ತನ್ನ ಎದೆಯೆತ್ತರಕ್ಕೆ ಬೆಳೆದಂತೆ, ಆ ಮಗು ತನ್ನ ಗೆಳೆಯನಾದಂತೆ, ತನ್ನ ಸರ್ವಸ್ವವೂ ಆದಂತೆ ಕನಸ್ಸು ಕಾಣುತ್ತಿರುತ್ತಾನೆ.

ಅಂಥ ಮಕ್ಕಳ ಬದುಕನ್ನು ರೂಪಿಸುವ ಅಪ್ಪನಿಗೆ ಮಕ್ಕಳು ಸರದಿ ಮುರಿದು ಹೊರಟರೆ ಏನಾಗಬೇಡ? ಮಗು ತೊಟ್ಟಿಲಲ್ಲಿ ಮಲಗಿದ್ದರೂ ಹೊಲಸಾಗಲು ಬಿಡದೆ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಅಪ್ಪನಿಗೇ ಮಕ್ಕಳ ಹೆಣ ಕಾಯುವ ಪರಿಸ್ಥಿತಿ ಬಂದರೆ ಏನಾಗಬೇಡ? ತನ್ನ ಮತ್ತೊಂದು ಜೀವ ಎಂದುಕೊಂಡ ತನ್ನ ಕುಡಿಗಳೇ ಚಿತೆಯಲ್ಲಿ ಮಲಗಿದರೆ ಏನನ್ನಿಸಬೇಡ? ಅಂಥ ಹೊತ್ತಲ್ಲಿ ಅಪ್ಪ ಮತ್ತೆ ಮತ್ತೆ ಸಾಯುತ್ತಾನೆ. ದಿನೇ ದಿನೆ ಸಾಯುತ್ತಾನೆ. ಯಾವ ಅಪ್ಪ-ಅಮ್ಮಂದಿರಿಗೂ ಬರಬಾರದ ಅತ್ಯಂತ ಕೆಟ್ಟ ಪರಿಸ್ಥಿತಿ ಈ ಪುತ್ರಶೋಕ. ಇದಕ್ಕಿಂತ ಕೆಟ್ಟ ಸಮಯ ಇನ್ನಾವುದಿದೆ? ಪುತ್ರಶೋಕವೆಂಬುದು ಗಾದೆ ಹೇಳಿದಂತೆ ನಿರಂತರ. ತೊಂಭತ್ತು ದಾಟಿದ ಮುದುಕರೂ ಪುತ್ರಶೋಕದಿಂದ ಮಕ್ಕಳಂತೆ ಅತ್ತಿದ್ದನ್ನು ನಾವು ನೋಡಿದ್ದೇವೆ.
ಪ್ರಪಂಚವನ್ನು ಸಾಕಷ್ಟು ಕಂಡ ಮಹಾ ವ್ಯಕ್ತಿಗಳೂ ಪುತ್ರಶೋಕದಿಂದ ಅಲ್ಲಾಡಿಹೋಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನ ಅಂತಿಮಸಂಸ್ಕಾರವನ್ನು ನೋಡಿದಾಗ ಯಾಕೋ ಇವೆಲ್ಲವೂ ನೆನಪಾದವು.

ಸಿದ್ದರಾಮಯ್ಯರಂಥಾ ಸಿದ್ದರಾಮಯ್ಯರೇ ಅಂದು ಅಲ್ಲಾಡಿ ಹೋದರು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅಂದಿನ ಅವರ ಸ್ಥಿತಿಯ ಬಗ್ಗೆ ಕೆಲವರು ಕಣ್ಣೀರಾದರು. ಸಿದ್ಧಾಂತ ಬೇರೆಯಾಗಿದ್ದರೂ ಅಂದು ಬಿಜೆಪಿಯ ಸದಾನಂದ ಗೌಡರು ಸಿದ್ದರಾಮಯ್ಯನವರಿಗೆ ಸಮಾನ ಮನಸ್ಕರಾದರು. ಅಂದರೆ ಸದಾನಂದ ಗೌಡರಿಗೂ ಸಿದ್ದರಾಮಯ್ಯನವರಿಗೂ ಪುತ್ರಶೋಕವೆಂದರೆ ಏನೇನೂ ವ್ಯತ್ಯಾಸವಿಲ್ಲ. ಇಬ್ಬರ ಶೋಕವೂ ಒಂದೇ! ಇಂದಿರಾಗಾಂಧಿಗೂ, ಜನಾರ್ದನ ಪೂಜಾರಿಯವರಿಗೂ ಮನಸ್ಸು ಒಂದೇ. ಎಲ್ಲರೂ ಪುತ್ರಶೋಕದಿಂದ ಬಳಲಿದವರೇ. ಎಲ್ಲರೂ ನಿರಂತರವೆನ್ನುವ ಶೋಕ ಹೊತ್ತವರೆ! ಹಾಗಾದರೆ ಪುತ್ರಶೋಕವೆಂಬುದು ಅಷ್ಟೊಂದು ಕಠಿಣವೇ? ಅದಕ್ಕೆ ಸಿದ್ಧಾಂತಗಳ ಹಂಗಿಲ್ಲವೇ? ಜಾತಿಯ, ಅಂತಸ್ತಿನ ಹಂಗಿಲ್ಲವೇ?

ಒಂದು ಕ್ಷಣ ಸಿದ್ದರಾಮಯ್ಯನವರ ಬದುಕನ್ನು ನೋಡೋಣ.
ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕರು, ಸಮಾಜವಾದಿ ಅನುಷ್ಠಾನಕರು, ಅಹಿಂದದ ಮುಂದಾಳುಗಳು, ಒರಟು ಮನುಷ್ಯ. ಇವೆಲ್ಲವನ್ನೂ ಒಮ್ಮೆ ಬದಿಗಿಟ್ಟು ನೋಡೋಣ. ಅವರು ಮುಖ್ಯಮಂತ್ರಿ ಎಂಬುದನ್ನೂ ಮರೆಯೋಣ. ಎಲ್ಲಕ್ಕಿಂತಲೂ ಮೊದಲು ಅವರು ಮಗನಿಗೆ ಅಪ್ಪ ತಾನೇ? ಸಿದ್ದರಾಮಯ್ಯನವರ ಮುಲಾಜಿಲ್ಲದ ಸ್ವಭಾವ ಸುಮ್ಮಸುಮ್ಮನೆ ಗಳಿಸಿಕೊಂಡಿದ್ದೇ? ಸಿದ್ದರಾಮನ ಹುಂಡಿಯಿಂದ ವಿಧಾನಸೌಧದವರೆಗೆ ಅವರ ಬೆಳವಣಿಗೆಯನ್ನು ನೋಡಿದರೆ ಅವರ ಒರಟುತನದ ನಡುವೆ ಒಬ್ಬ ಟಿಪಿಕಲ್ ಭಾರತೀಯ ಅಪ್ಪ ನಮಗೆ ಕಾಣಿಸುತ್ತಾರೆ. ಅವರ ಸಿದ್ಧಾಂತಗಳೇನೇ ಇರಲಿ. ಅವರ ಸಮಾಜವಾದಿ ಗುಣ ಅತ್ತಲಿರಲಿ. ಮಗನ ಚಿತೆಯ ಎದುರು ಕಂಡ ಸಿದ್ದರಾಮಯ್ಯನವರು ನಮಗೆ ಒರಟ ಮುಖ್ಯಮಂತ್ರಿಯನ್ನು ತೋರಿಸಿತ್ತೇ? ಆಂದು ಕಂಡ ಮುಖ್ಯಮಂತ್ರಿಗಳ ಮುಖ ಎಂಥವರ ಕಣ್ಣಲ್ಲೂ ನೀರು ಜಿನುಗಿಸಿತ್ತು.
ಸಿದ್ದರಾಮಯ್ಯನವರಿಗೆ ಏನು ತಾನೇ ಇತ್ತು? ಜಾತಿಯ ಬಲವಿರಲಿಲ್ಲ, ದೊಡ್ಡವರ ಬೆಂಬಲವಿರಲಿಲ್ಲ. ಆದರೂ ಸಣ್ಣ ಹಳ್ಳಿಯಿಂದ ಬದುಕು ಕಟ್ಟಿಕೊಂಡ ಅವರ ಬದುಕು ಎಂಥವರಿಗೂ ಅಚ್ಚರಿ ಹುಟ್ಟಿಸುತ್ತದೆ. ಕೃಷಿಕ ಎಂಬ ಪಟ್ಟವನ್ನು ಜನ ಕೊಟ್ಟರೂ ಬಡತನ ಕೃಷಿಯೊಡನೆ ಪುಕ್ಕಟೆಯಾಗಿ ಎಲ್ಲರಂತೆ ಬಂದಿತ್ತು. ಹೊಸದನ್ನು ಕಲಿಯುವ ಹುಮ್ಮಸ್ಸು, ಏರಬೇಕು, ಎತ್ತರಕ್ಕೇರಬೇಕು. ಜಾತಿಯ ಸಂಕೋಲೆ ಯನ್ನು ಕಿತ್ತೊಗೆಯಬೇಕು ಎಂಬ ಅವರ ಹಠವನ್ನು ಯಾರಾದರೂ ಅಲ್ಲಗಳೆಯಲಾಗುತ್ತದೆಯೇ? ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಶ್ರಮದಿಂದ ವಕೀಲನಾಗುವುದು, ರಾಜಕಾರಣಿಯಾಗುವುದು, ಜನರ ನಾಯಕನಾಗುವುದನ್ನು ಜನ ಹೊಗಳಬಹುದು. ಜನ ಅವರನ್ನು ಮತ್ತೊಬ್ಬ ದೇವರಾಜ ಅರಸು ಎಂದು ಕರೆದಿರಲೂಬಹುದು. ಆದರೆ ಹೊರನೋಟಕ್ಕೆ ಕಾಣುವ ಅವರ ಒರಟುತನದಲ್ಲಿ ಒಂದು ಹೂವಿನ ಮನಸ್ಸೂ ಇದೆ ಎನ್ನುವುದನ್ನು ಜನ ಅವರ ಮಗನ ಹೆಣದ ಮುಂದೆ ನೋಡಬೇಕಾದುದು ದುರಂತ. ಅವರ ಬದುಕನ್ನು ಕೂಲಂಕುಶವಾಗಿ ನೊಡಿದರೂ ಹೋರಾಟ ಇಲ್ಲದ ದಿನ ಯಾವುದಿತ್ತು? ಲೆಕ್ಕಕ್ಕುಂಟು ಆದರೆ ತಿನ್ನಲಿಲ್ಲ ಎನ್ನುವ ಆಸ್ತಿ, ಆದರೆ ಎದೆಯಲ್ಲಿ ಸಿದ್ಧಾಂತದ ಛಲ.
ಕಾಲಭಾಹಿರ ಸಿದ್ಧಾಂತವಾದರೂ ತನ್ನದು ಸರಿ ಎನ್ನುವ ಉದ್ಧಟತನ, ತಾನು ನಡೆದಿದ್ದೇ ದಾರಿ ಎನ್ನುವ ತಾಕತ್ತು ಎಷ್ಟು ರಾಜಕಾರಣಿಗಳಿಗೆ ಸಿದ್ಧಿಸುವ ಗುಣ? ಹೇಗೆ ಯಡಿಯೂರಪ್ಪನವರು ತಾವು ನಂಬಿದ ಸಿದ್ಧಾಂತಕ್ಕೆ ನಿಷ್ಠರಾಗಿ ಅಂಟಿಕೊಂಡರೋ ಹಾಗೆ ತಮ್ಮ ಸಿದ್ಧಾಂತಕ್ಕೆ ಅಂಟಿಕೊಂಡವರು ಸಿದ್ದರಾಮಯ್ಯನವರು. ಅದರ ನಡುವೆ ಮನೆ ಮಕ್ಕಳು ಎಂಬುದೂ ಇತ್ತ. ಎಲ್ಲಾ  ಅಪ್ಪಂದಿರಂತೆ ತಾನು ಪಟ್ಟ ಕಷ್ಟ ಮಕ್ಕಳು ಪಡಬಾರದು ಎಂದು ಸಾಕಿದರು. ಉತ್ತಮ ವಿದ್ಯಾಭ್ಯಾಸ ಕೊಡಿಸಿದರು. ಸುಖದ ಬದುಕನ್ನು ಎಲ್ಲಾ ಅಪ್ಪಂದಿರಂತೆ ಅವರೂ ಕೊಟ್ಟರು. ಇದರ ನಡುವೆ ರಾಜಕಾರಣದಲ್ಲೂ ಬೆಳೆದರು. ಜೆಡಿಎಸ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾದರೂ ನಂತರ ಪಕ್ಷ ಬಿಟ್ಟರು. ಕಾಂಗ್ರೆಸಿಗೆ ಸೇರಿದರು. ಮೂಲ ಕಾಂಗ್ರೆಸಿಗರು ವಲಸಿಗ ಎಂದು ಕರೆದರೂ ಮುಂದೆ ಅದೇ ಪಕ್ಷದ ನಾಯಕರಾದರು. ಅದೇ ಪಕ್ಷದಿಂದ ಮುಖ್ಯಮಂತ್ರಿಯೂ ಆದರು. ಅಂಥ ವ್ಯಕ್ತಿ ಮೊನ್ನೆ ಮಗನ ಹೆಣದ ಮುಂದೆ ನಿಂತಾಗ ರಾಜ್ಯದ ಜನರ ಎದೆ ಭಾರವಾಗಿತ್ತು.
ಮೂರುದಶಕದ ಹಿಂದೆ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಕಾದಂತೆ ಕಾದ ಅದೇ ಸಿದ್ದರಾಮಯ್ಯನವರು ಮಗನ ಹಣೆವನ್ನು ಮೂರು ದಿನ ಕಾದರು!

ಮಕ್ಕಳೆಲ್ಲರೂ ಏಕೆ ಹೀಗೆ ಸರದಿ ಮುಗಿದು ಹೋಗುತ್ತಾರೆ? ಹೋರಾಟಗಾರ ಅಪ್ಪನ ಸ್ಥಿತಿ ಮಗನಿಗೆ ತಿಳಿಯದೇ ಇದ್ದದ್ದೇ ಕಾರಣವೇ? ಅಪ್ಪನ ಪ್ರಭಾವಳಿ ಮಕ್ಕಳನ್ನು ಹಾಳುಮಾಡಿತೇ? ಬದುಕನ್ನು ಅಪ್ಪಂದಿರಂತೆ ಅರಿಯಲು ಎಡವಿದರೇ? ಅಥವಾ ವಿಧಿಯಾಟವೇ? ಪುತಶೋಕಂ ನಿರಂತರಂ ಎನ್ನುವುದು ದ್ವಾಪರಯುಗದಿಂದಲೇ ಇದೆ. ಆದರೆ ಪುತ್ರಶೋಕಂ ಕ್ಷಣಾತ್ಯತ್ವ ತತ್ವೇ ಚಿತ್ತಮಧಾರಯೇತ್ (ಪುತ್ರಶೋಕವನ್ನು ಕ್ಷಣಿಕ ಎಂದುಕೋ, ನಿನ್ನ ಬುದ್ಧಿಯ ಸ್ಥಿರತೆಯನ್ನು ತಂದುಕೋ) ಎನ್ನುವ ಮಾತೂ ಇದೆ. ಪುತ್ರಶೋಕ ದಶರಥನನ್ನೇ ಬಿಡಲಿಲ್ಲ. ಪುತ್ರವಿಯೋಗವಾಗದೆಯೂ ದಶರಥ ನಿಧನನಾದ.

ಕೆಲವರ್ಷಗಳ ಹಿಂದೆ ಆಗ ಲೋಕಾಯುಕ್ತ ಎಸ್ಪಿ ಆಗಿದ್ದ ಕೆ. ಮಧುಕರ್ ಶೆಟ್ಟಿಯವರನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋಗಿದ್ದೆ. ಅವರು ನಯಾಪೈಸೆ ಲಂಚವನ್ನೂ ಮುಟ್ಟದ ಕರ್ನಾಟಕದ ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು.
ಭ್ರಷ್ಟ ಅಧಿಕಾರಿಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರೂ ಹೇಗೆ ತಪ್ಪಿಸಿಕೊಳ್ಳುತ್ತಾರೆಂಬುದಕ್ಕೆ ಇತ್ತೀಚೆಗೆ ತಲೆದೋರುತ್ತಿರುವ ಒಂದು ವಿಚಿತ್ರ ಸವಾಲಿನ ಬಗ್ಗೆ ವಿವರಿಸಿದರು.

“ನೋಡಿ? ಅಪ್ಪ-ಅಮ್ಮ ಎರಡೋ, ಮೂರೋ ಎಕರೆ ಹೊಲ ಗದ್ದೆಗಳಲ್ಲಿ ಕಷ್ಟ ಪಟ್ಟು ದುಡಿದು, ಮಕ್ಕಳನ್ನು ಓದಿಸಿ, ಮೇಲೆ ತರುತ್ತಾರೆ. ಅದೇ ಮಕ್ಕಳು(ಕೆಲವರು) ಸರಕಾರಿ ಕೆಲಸಕ್ಕೆ ಸೇರಿ, ಒಳ್ಳೆಯ ಸಂಪಾದನೆ ಮಾಡಿ ಮದುವೆಯಾದ ನಂತರ ಎಷ್ಟು ಬದಲಾಗುತ್ತಾರೆಂದರೆ ಹಳ್ಳಿಯಿಂದ ಮಗನ್ನು ನೋಡಲು ಅಪ್ಪ-ಅಮ್ಮ ಬಂದರೆ ಹೆಂಡತಿ ಕಿರಿಕಿರಿ ಮಾಡುತ್ತಾಳೆ, ಇಲ್ಲವೆ ಟಾಯ್ಲೆಟ್ ಗಲೀಜು ಮಾಡುತ್ತಾರೆ ಎಂದು ಔಟ್‌ಹೌಸ್‌ನಲ್ಲಿ ಇರಿಸುತ್ತಾರೆ. ಅಣಕವೆಂದರೆ ಲೋಕಾಯುಕ್ತ ದಾಳಿಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡಾಗ ಮಕ್ಕಳಿಗೆ ಮತ್ತೆ ನೆನಪಾಗುವುದು, ಕಷ್ಟಕಾಲದಲ್ಲಿ ಮತ್ತೆ ಸಹಾಯಕ್ಕೆ ಬರುವುದು ಅಪ್ಪ-ಅಮ್ಮನ ಆ ಮೂರು ಎಕರೆ ಜಮೀನೇ! ಅಂದರೆ ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಬಂಗಲೆ ಕಟ್ಟಿಸಿರುವುದು ಅಪ್ಪನ ಮೂರು ಎಕರೆ ಕೃಷಿ ಭೂಮಿಯಲ್ಲಿ ಗಳಿಸಿದ ಆದಾಯದಿಂದಲೇ ಎನ್ನುತ್ತಾರೆ.
ಇತ್ತೀಚೆಗೆ ಬಹಳಷ್ಟು ಪ್ರಕರಣಗಳಲ್ಲಿ ಭ್ರಷ್ಟ ಅಧಿಕಾರಿಗಳು ಕೊಡುತ್ತಿರುವ ಅತ್ಯಂತ ಸ್ಟ್ರಾಂಗ್ ಡಿಫೆನ್ಸ್ ಇದೇ” ಎಂದರು. ಅಪ್ಪನನ್ನು ವಿಚಾರಿಸಿದರೆ, ‘ಹೌದು ಸ್ವಾಮಿ? ಹೊಲದಲ್ಲಿ ಶೇಂಗಾ ಹಾಕಿದ್ದಾ, ಪಕ್ಕದ ಸೂರ್ಯಕಾಂತಿ ಬೀಜ ಬೆಳೆದಿದ್ದಾ, ಅದರ ಬುಡದ ಎಳ್ಳು ಹಾಕಿದ್ದಾ, 10 ಲಕ್ಷ ಲಾಭ ಬಂತು’ ಎನ್ನುತ್ತಾರೆ! ಅಂದರೆ ಮಕ್ಕಳು ಹೆತ್ತವರನ್ನು ಅನಾಥಾಶ್ರಮಕ್ಕೆ ಕಳಿಸಬಹುದು. ಆಸ್ತಿ ವಿಷಯಕ್ಕೆ ಕ್ಯಾತೆ ತೆಗಿಯಬಹುದು, ಆದರೆ ಪೋಷಕರು ಇದುವರೆಗೂ ಮಕ್ಕಳ ವಿರುಧ್ದ ಹೋದ ಒಂದೇ ಒಂದು ಉದಾಹರಣೆ ಇಲ್ಲ ಯಾಕೆ? ಎಲ್ಲವನ್ನೂ ಮಾಡಿದ್ದು ಮಕ್ಕಳಿಗಾಗಿ ಎನ್ನುವ ಅಪ್ಪ ಕೊನೆ ಘಳಿಗೆವರೆಗೂ ಮಕ್ಕಳಿಗಾಗಿ ಹಾತೊರೆಯುತ್ತಾನೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಪ್ಪಂದಿರನ್ನೋ ಕೆಟ್ಟ ಅಮ್ಮಂದಿರನ್ನೋ ಎಂದಾದರೂ ನೀವು ಕಂಡಿದ್ದೀರಾ? ಪೋಷಕರು ತನ್ನ ಬೆವರು ಹರಿಸಿ ಬೆಳೆಸುವುದು ಮಕ್ಕಳಿಗಾಗಿ ಹೊರತು ಇನ್ನಾರಿಗೆ? ಅಂಥ ಮಕ್ಕಳೇ ಸರದಿ ಮುರಿದುಹೋದರೆ ಯಾವ ಪೋಷಕರಿಗಾದರೂ ಏನನ್ನಿಸಬೇಕು?

2006ರ ಡಿಸೆಂಬರ್‌ನಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ಉಪ ಚುನಾವಣೆ ಎದುರಿಸುತ್ತಿದ್ದರು.ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಜತೆಜತೆಯಾಗಿ ಸಿದ್ದರಾಮಯ್ಯನವರ ವಿರುದ್ಧ ಪ್ರಚಾರಕ್ಕೆ ಧುಮುಕಿದ್ದರು. ಕುಮಾರಸ್ವಾಮಿ ಅವರಿಗಂತೂ ಸಿದ್ದರಾಮಯ್ಯನವರ ರಾಜಕೀಯ ಅಂತ್ಯಸಂಸ್ಕಾರ ಮಾಡಬೇಕೆಂಬ ತವಕವಿತ್ತು. ಇಡೀ ಆಡಳಿತ ಯಂತ್ರ ಸಿದ್ದರಾಮಯ್ಯನವರನ್ನು ಸೋಲಿಸಲು ಸಿದ್ಧವಾಗಿ ನಿಂತಿತ್ತು. ಇಂತಹ ಅಬ್ಬರಕ್ಕೂ ಅಂಜದೆ, ಆಗಿನ ರಾಜ್ಯ ಸರಕಾರದ ದರ್ಪವನ್ನು ಸೋಲಿಸಿ ಮರು ಆಯ್ಕೆಯಾದ ಸಿದ್ದರಾಮಯ್ಯನವರು ಮೊನ್ನೆ ಮಗನ ಶವದ ಮುಂದೆ ಸೋತು ನಿಂತಿದ್ದನ್ನು ಕಂಡು ಮನಸ್ಸು ಆರ್ದ್ರವಾಯಿತು!

 rakesh siddaramaiah

Comments are closed.