Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಟೆಲಿಗ್ರಾಮ್ ಗೆ ಆದ ಗತಿಯೇ ಅಂಚೆಯಣ್ಣನಿಗೂ ಆದೀತು ಅನ್ನುವಷ್ಟರಲ್ಲಿ ಬಂದರು ಮೋದಿಯಣ್ಣ!

ಟೆಲಿಗ್ರಾಮ್ ಗೆ ಆದ ಗತಿಯೇ ಅಂಚೆಯಣ್ಣನಿಗೂ ಆದೀತು ಅನ್ನುವಷ್ಟರಲ್ಲಿ ಬಂದರು ಮೋದಿಯಣ್ಣ!

ಟೆಲಿಗ್ರಾಮ್ ಗೆ ಆದ ಗತಿಯೇ ಅಂಚೆಯಣ್ಣನಿಗೂ ಆದೀತು ಅನ್ನುವಷ್ಟರಲ್ಲಿ ಬಂದರು ಮೋದಿಯಣ್ಣ!

ಓಲೆಯ ಹಂಚಲು ಹೊರಡುವೆ ನಾನು ತೇಲಲು ಮುಗಿಲಲಿ ಬಿಳಿ ಭಾನು ಮನೆಯಲಿ ನೀವು ಬಿಸಿಲಲಿ ನಾನು ಕಾಗದ ಬಂತು ಕಾಗದವು… ಸೊಗಸಿನ ಸುದ್ದಿಯ ತರುವೆನು ನಿಮಗೆ ಮಸಣದ ವಾರ್ತೆಯ ತರುವೆನು ತಮಗೆ ಎಲ್ಲಾ ಸುದ್ದಿಗಳೊಂದೇ ನಮಗೆ ಕಾಗದ ಬಂತು ಕಾಗದವು… ಹಳೆ ತಲೆಮಾರಿನವರಿಗಂತೂ ದಿನಕರ ದೇಸಾಯಿಯವರ ಈ ಪದ್ಯ ನೆನಪಿರಲೇಬೇಕು. ಅಂಚೆ ಬರಲಿ, ಬಾರದಿರಲಿ. ಅಂಚೆಯಣ್ಣ ದಿನಕ್ಕೊಮ್ಮೆ ಮಾತ್ರ ಬಂದು ನಕ್ಕು ಹೋಗಲಿ ಎಂದು ನಾಡೋಜ ಚೆನ್ನವೀರ ಕಣವಿಯವರು ಅಂಚೆಯಣ್ಣನ ಬಗ್ಗೆ ಮನದುಂಬಿ ಬರೆದ ವಾಕ್ಯಗಳಂತೂ ಸ್ಮತಿಪಟಲದಿಂದ ಯಾವತ್ತೂ ಹೊರಹೊಗುವುದಿಲ್ಲ. ಕೈ ಚೀಲ ಸೈಕಲ್ಲು ಮನೆ ಮುಂದಕೆ ಬೆಲ್ಲು ಹೊಡೆದು ಕರೆವಾ ಗೆಳೆಯ ಅಂಚೆಯಣ್ಣ. ಹೊತ್ತು ಭಾವದ ಕೋಶ ಹೊರಗೆ ಖಾಕಿಯ ವೇಷ ತೆಗೆದು ಕೈಗಿಡುವನು ಭಾವ ಬಣ್ಣ.
ಹಿಂದೆ ನಾ ಚಿಕ್ಕವನು, ಅಂಚೆಯವ ಸಿಕ್ಕವನು ಕೊಡುತ್ತಿದ್ದ ಕೈಗೆ ಕೌತುಕದ ಪತ್ರ ಸುಖ ದುಃಖ ಸಾಲುಗಳ ಜೀವನದ ಸೋಲುಗಳ ಹೊರೆಹೊತ್ತು ಬರುತ್ತಿತ್ತು, ಬರೆದಿರಲು ಮಿತ್ರ. ಈ ಕವಿತೆ ಕೂಡ ನೆನಪಿರಬೇಕಲ್ಲಾ…?! ಎಂಥೆಂಥಾ ಕವಿಗಳಿಗೂ ವಸ್ತುವಾದವನು, ಪ್ರೇರಣೆ ಕೊಟ್ಟವನು ಈ ಅಂಚೆಯಣ್ಣ. ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ ಅಥವಾ ‘ಪೋಸ್ಟ್‌ ಮ್ಯಾನ್’ ಬರೇ ಒಂದು ಟಪಾಲು ಬಟವಾಡೆಯ ವೃತ್ತಿಯವನಾಗಿದ್ದವನಲ್ಲ. ಅವನು ಮನುಷ್ಯರಿಂದ ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ ಎಂದು ಕವಿ ಜಯಂತ್ ಕಾಯ್ಕಿಣಿ ಅವರು ಹೇಳುತ್ತಾರೆ.
ಸಣ್ಣ ಊರುಗಳಲ್ಲಂತೂ ಅವನು ಪ್ರತಿ ಮನೆಯ ಅಂತರಂಗದ ಸದಸ್ಯ. ಇಂಟರ್‌ವ್ಯೂವ್ ಕರೆ, ನಮ್ಮ ಮಗ ಪಾಸಾಗಿದ್ದಾನೆ ಎಂಬ ಎಸ್ಸೆಸ್ಸೆಲ್ಸಿ ರಿಸಲ್ಟು, ಮದುವೆ-ಮುಂಜಿ, ಕೋರ್ಟು-ವಾರೆಂಟು, ಹುಟ್ಟು-ಸಾವು, ರೋಗ-ರುಜಿನ ಎಲ್ಲವನ್ನೂ ಹಂಚಿಕೊಂಡು ಮನೆಯಿಂದ ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊಂಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾಂಡಲ್ಲಿಗೆ ಸಿಕ್ಕಿಸಿಕೊಂಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕಂಡು ಫಕ್ಕನೇ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನೆಂಟ. ಸಮಾಜದ ಕ್ರಿಯಾಶೀಲ ಸದಸ್ಯ. ಬೆವರು ಸುರಿಸಿ ಸೈಕಲು ಏರಿದಾತ ತನ್ನ ಪ್ರಾಮಾಣಿಕತೆಯನ್ನು ತೋರಿಸುತ್ತಾನೆ. ಅಂಚೆಯಣ್ಣ ಸೈಕಲ್ ಏರಿ ಬರುತ್ತಿದ್ದರೆ, ಆತನ ಹಿಂದೆ ಮಕ್ಕಳ ಹಿಂಡೇ ಓಡಿಬರುತ್ತಿತ್ತು. ಯಾರ ಮನೆಗೆ ಪತ್ರ ಬಂದರೂ, ಓಣಿಗೆಲ್ಲಾ ಸಂಭ್ರಮ ಸಡಗರ. ಪುಟ್ಟ ಪತ್ರ. ಅದರ ಮೇಲೆ ನಾಲ್ಕಾಣೆ ಸ್ಟಾಂಪಿನ ಮುದ್ರೆ. ಕೆಳಗೆ ಶ್ರೀಯುತರಿಗೆ ಎನ್ನುವ ವಿಳಾಸ.
ಒಡೆದು ಓದಿದರೆ ಅಕ್ಷರಗಳಲ್ಲಿ ಅನಾವರಣಗೊಂಡಿರುವ ಭಾವನೆಗಳ ಅಂತರಂಗ. ಅಂಗೈಯಗಲದ ಪತ್ರದ ತುಂಬೆಲ್ಲಾ ಸವಿ ಸವಿ ನೆನಪುಗಳು. ಮನೆಯವರಿಗೆ ಗೊತ್ತಾಗಬಾರದೆಂಬ ಕಾರಣಕ್ಕೆ ಹಿಂಬದಿಯಲ್ಲಿ ಹುಡುಗಿಯ ಹೆಸರು ಹೊತ್ತು ಬರುತ್ತಿದ್ದ ಪಡ್ಡೆಗಳ ಪ್ರೇಮಪತ್ರಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು ಬಿಡಿ. ಇವತ್ತು ಇ-ಮೇಲು, ಮೆಸೆಂಜರ್, ವಾಟ್ಸಾಪ್ ಗಳು ಪ್ರೇಮ ಸಂದೇಶವನ್ನು ಎಷ್ಟೇ ರವಾನಿಸಿದರೂ ಲವ್ ಲೆಟರ್ ಗೆ ಸಾಟಿಯಿಲ್ಲ ಬಿಡಿ! ಒಂದು ಪತ್ರ ಕಟ್ಟಿಕೊಡುವ ಭಾವನಾ ಪ್ರಪಂಚವನ್ನು ಎರಡು ನಿಮಿಷದ ಫೋನ್ ಕರೆಯಾಗಲಿ, ಸೆಕೆಂಡ್ ಗಳಲ್ಲಿ ಕಳುಹಿಸುವ ಮೆಸೇಜುಗಳಾಗಲಿ ತುಂಬಲು ಸಾಧ್ಯವಿಲ್ಲ. ಪತ್ರದಲ್ಲಿ ಕಲ್ಮಶವಿರುವುದಿಲ್ಲ. ಪತ್ರದೊಂದಿಗೆ ಪತ್ರ ಬರೆದವನ ಮನಸ್ಸು ಕೂಡ ಎದುರಿಗೆ ಬಂದು ನಿಲ್ಲುತ್ತದೆ. ಸರಿಯೋ ತಪ್ಪೋ, ಇದ್ದುದನ್ನು ಇದ್ದಂತೆ ಹೇಳಿಬಿಡುವ ಹೃದಯ ವೈಶಾಲ್ಯತೆ ಪತ್ರಕ್ಕಿದೆ. ಅಲ್ಲಿ ಅನಾವರಣಗೊಂಡ ಅಕ್ಷರಗಳಲ್ಲಿ ಭಾವನಾತ್ಮಕ ಸೆಲೆ ತುಂಬಿರುತ್ತದೆ. ಆದ್ದರಿಂದಲೇ ಪತ್ರ ಆಪ್ತವಾಗುತ್ತದೆ.
ತಿಂಗಳುಗಟ್ಟಲೆ ಜತನದಿಂದ ಕಾಪಾಡಿಕೊಂಡು ಮತ್ತೆ ಮತ್ತೆ ಓದಿ ಸಂತಸ ಪಡುತ್ತಿದ್ದೆವು. ಹೀಗೆ ಅಂಚೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಲೆಟರ್ಸ್‌ ಟು ಇಂದಿರಾ ಎಂದೇ ಖ್ಯಾತವಾಗಿರುವ ನೆಹರು ಅವರು ಮಗಳು ಇಂದಿರಾಗೆ ಬರೆದ ಪತ್ರಗಳು ಇವತ್ತು ಸಾರಸ್ವತ ಲೋಕದ ಅಮೂಲ್ಯ ಭಾಗವಾಗಿ ಬಿಟ್ಟಿವೆ. ಬ್ರಿಟನ್ನಿನ ಹಾರ್ಡಿಗೆ ಬರೆದ ಪತ್ರಗಳು ಶ್ರೀನಿವಾಸ ರಾಮಾನುಜನ್ ಎಂಬ ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞನನ್ನು ಬೆಳಕಿಗೆ ತಂದವು. ಓದುಗರ ಓಲೆಗಳು ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತಿದ್ದವು. ಆದರೆ… ಇ-ಮೇಲ್, ಕೊರಿಯರ್, ಮೆಸೆಂಜರ್, ವಾಟ್ಸಾಪ್, ಸ್ಕೈಪ್, ವಿಡಿಯೋ ಕಾಲ್, ವೈಬರ್ ಬಂದ ಮೇಲೆ ಯಾರು ತಾನೇ ಇನ್ ಲ್ಯಾಂಡ್ ತೆಗೆದುಕೊಂಡು, ತಲೆಕೆಡಿಸಿಕೊಂಡು ಬರೆದು, ಅಂಚೆ ಡಬ್ಬಿಯನ್ನು ಹುಡುಕಿ ಹಾಕಿ, ಉತ್ತರಕ್ಕಾಗಿ ವಾರಗಟ್ಟಲೆ ಕಾಯುತ್ತಾರೆ ಹೇಳಿ?!
ಗೆಳೆಯರ ಜನ್ಮದಿನಕ್ಕೆಂದೋ, ಮದುಮಗಳ ಶುಭ ಹಾರೈಕೆಗೆಂದೂ, ಅಸ್ಥೆಯಿಂದ ಬರೆಯುತ್ತಿದ್ದ ಪತ್ರಗಳು ಕೂಡ ಈಗ ಹಿಂದಿನ ಶತಮಾನದ ಫ್ಯಾಶನ್ ಆಗಿದೆ. ರೈಲ್ವೆ ಹಾಗೂ ಅಂಚೆ ಇಲಾಖೆಗಳು ಬ್ರಿಟಿಷರು ಭಾರತಕ್ಕೆ ನೀಡಿದ ಬಹುದೊಡ್ಡ ಕೊಡುಗೆಗಳು. ಇದರಿಂದಾಗಿಯೇ ಭಾರತದಲ್ಲಿ ಒಂದು ಸಂಪರ್ಕ ಕ್ರಾಂತಿ ಪ್ರಾರಂಭವಾಯಿತು ಎನ್ನಬಹುದು. ಬ್ರಿಟಿಷರ ಮೂಲಕ 1766ರಲ್ಲಿಯೇ ನಮ್ಮ ದೇಶಕ್ಕೆ ಅಂಚೆ ವ್ಯವಸ್ಥೆಯು ಪರಿಚಯಗೊಂಡಿದ್ದರೂ ಸಹ ಸಾರ್ವಜನಿಕರ ಉಪಯೋಗಕ್ಕೆ 1837ರಲ್ಲಿ ನೀಡಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಹ ಅಂಚೆಯು ಬಹು ಮುಖ್ಯ ಪಾತ್ರವನ್ನು ವಹಿಸಿತ್ತು. ಪತ್ರ ಚಳವಳಿಯ ಮುಖಾಂತರವೇ ಇಡೀ ದೇಶದ ಜನರು ಒಗ್ಗೂಡಲು ಸಹಕಾರಿಯಾಯಿತು. ಸ್ವಾತಂತ್ರ್ಯಾ ನಂತರದಲ್ಲಿ ಅಂಚೆಯನ್ನು ಒಂದು ಇಲಾಖೆಯನ್ನಾಗಿ ಮಾಡಲಾಯಿತು.
90ರ ದಶಕದವರೆಗೆ ಅಂಚೆ ಇಲಾಖೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅಂಗಳದಲ್ಲಿ ಆಟವಾಡಿಕೊಂಡಿರುತ್ತಿದ್ದ ಮಕ್ಕಳು ಒಂದು ಖಾಕಿಯನ್ನು ಕಂಡರೆ ಹೆದರಿ ಒಳಗೆ ಓಡುತ್ತಿದ್ದರು ಅದೇ ಮತ್ತೊಂದು ಖಾಕಿಯನ್ನು ಕಂಡರೆ ಮನೆಯ ಒಳಗಿಂದ ಓಡಿ ಬಂದು ರಸ್ತೆಯಲ್ಲಿ ನಿಲ್ಲುತ್ತಿದ್ದರು. ಪೊಲೀಸರು ಧರಿಸುತ್ತಿದ್ದ ಖಾಕಿಗೂ ಅಂಚೆ ಅಣ್ಣನ ಖಾಕಿಗೂ ಇದ್ದ ವ್ಯತ್ಯಾಸವದು. ಗ್ರಾಮದ ಪ್ರತಿ ವ್ಯಕ್ತಿ, ಹಿರಿಯ-ಕಿರಿಯ, ಹೆಣ್ಣು-ಗಂಡು, ಬಡವ-ಶ್ರೀಮಂತ ಅನ್ನುವ ಭೇದವಿಲ್ಲದೆ ಸರ್ವರಿಗೂ ಮಿತ್ರನಾಗಿದ್ದವನು ನಮ್ಮ ಪೋಸ್ಟ್‌ ಮ್ಯಾನ್. ಗ್ರಾಮೀಣ ಭಾಗದಲ್ಲಿನ ಅಂಚೆ ಸೇವೆ ಜನರ ನಿತ್ಯದ ಸಂಪರ್ಕ ಮಾಧ್ಯಮವೇ ಆಗಿತ್ತು. ಅದರಲ್ಲೂ ಸಾಕ್ಷರತೆ ಕಡಿಮೆ ಇದ್ದ ಕಾಲದಲ್ಲಿ ಅನೇಕ ಸಂಪರ್ಕ-ವಿಚಾರ ವಿನಿಮಯಗಳು ಪತ್ರದ ಮುಖೇನವೇ ಆಗುತಿತ್ತು. ಆಗ ತಾನೆ ನಗರ ಸೇರುತ್ತಿದ್ದ ಮಗ, ತಂದೆ-ತಾಯಿಯ ಆರೋಗ್ಯದ ಕುರಿತು ವಿಚಾರಿಸಿಕೊಳ್ಳಲು ಪತ್ರ ಬರೆಯುತ್ತಿದ್ದ.
ಆತನ ಪತ್ರಕ್ಕೆ ಉತ್ತರವನ್ನು ತಂದೆತಾಯಿ ಅನೇಕ ಸಲ ಪೋಸ್ಟ್‌ ಮ್ಯಾನ್ ಹತ್ತಿರವೇ ಬರೆಸುತ್ತಿದ್ದರು. ಮಗ ಕಳುಹಿಸುತ್ತಿದ್ದ ಮನಿ ಆರ್ಡರ್ ಅನ್ನು ಆಸ್ಥೆಯಿಂದ ತಂದೆ-ತಾಯಿಗೆ ತಲುಪಿಸಿ ಅವರ ಮುಖದಲ್ಲಿ ನಗು ಮೂಡಿಸುತ್ತಿದ್ದಿದ್ದೇ ಅಂಚೆ ಸೇವೆ. ಆದರೆ ಕೆಲವು ತುರ್ತು ಸಂದೇಶಗಳನ್ನು ರವಾನಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಂಚೆಯಲ್ಲೇ ಟೆಲಿಗ್ರಾಂನ್ನು ಪರಿಚಯಿಸಲಾಯಿತು. ಸಣ್ಣ ಸುತ್ತಿಗೆಯಂತಹ instrumentನ್ನು ಮೆಲ್ಲಗೆ ಬಡಿದು ‘ಕಟ್ಟ- ಕಡ’ ‘ಕಟ್ಟ- ಕಡ’ ಎಂಬ ಎರಡೇ ಸ್ವರವನ್ನು ವಿವಿಧ telegram ನಲ್ಲಿ ಹೊರಡಿಸಿ ಎಂತೆಂತದೋ ವಿಷಯವನ್ನು ಠಿಛ್ಝಿಿಛಿಜ್ಟಞ ಮೂಲಕ ಕಳಿಸುತ್ತಿದ್ದ, ಅದೇ ‘ಕಟ್ಟ- ಕಡ’ವನ್ನು ಆಲಿಸಿಯೇ ಎಲ್ಲೆಲ್ಲಿಂದಲೋ ಬಂದ ಸಮಾಚಾರವನ್ನು ಬರೆದು ಕೊಳುತ್ತಿದ್ದ ಅಂಚೆಯವರು ನನ್ನ ಬಾಲ್ಯದ ಮನಸ್ಸಿಗೆ ಐನ್‌ಸ್ಟಿನ್‌ನಷ್ಟೇ ಮೇಧಾವಿಯಾಗಿ ಕಾಣಿಸಿದ್ದರು! ತನಗೆ ಬಂದಿರುವ ಅಂಚೆಯನ್ನು ಓದುವಷ್ಟು ವಿದ್ಯೆಯನ್ನಾದರೂ ಕಲಿಯಬೇಕು ಎಂದು ಹಿರಿಯರು ಕಿವಿಮಾತು ಹೇಳುತ್ತಿದ್ದರು.
ನಮ್ಮ ದೇಶದ ಜನರಲ್ಲಿ ಬರೆಯುವ ಹಾಗೂ ಓದುವ ಹವ್ಯಾಸವನ್ನು ಹೆಚ್ಚಿಸಿದ ಕೀರ್ತಿಯೂ ಅಂಚೆ ಇಲಾಖೆಗೆ ಸಲ್ಲುತ್ತದೆ. ಪತ್ರಿಕೆಗಳಲ್ಲಿ, ವಾರ ಪತ್ರಿಕೆಗಳಲ್ಲಿ ಬರುತ್ತಿದ್ದ ಸುದ್ದಿಗಳು, ಕಥೆಗಳು ಹಾಗೂ ಧಾರಾವಾಹಿಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಪ್ರಾಯ, ವಿಮರ್ಶೆಗಳು ಬರುತ್ತಿದ್ದವು. ಎಷ್ಟೋ ಪತ್ರಿಕೆಗಳು ಅಂಚೆಯ ಮೂಲಕವೇ ಮನೆ ಮನೆಗೆ ರವಾನೆಯಾಗುತ್ತಿದ್ದವು. ಅನೇಕರ ಬರವಣಿಗೆಯ ಕಲೆ ಶುರುವಾಗಿದ್ದೇ ಪತ್ರ ಬರೆಯುವ ಮೂಲಕ. ಅಲ್ಲದೇ ಅನೇಕ ಹದಿಹರೆಯದ ಪ್ರೇಮಿಗಳ ಸಂವಹನ ಸೇತುವೆ ಕೂಡ ಅಂಚೆಯೇ ಆಗಿತ್ತು. ಗುಟ್ಟಾಗಿ ಪ್ರೇಮ ಪತ್ರಗಳನ್ನು ಕಳಿಸುವುದು, ಪಡೆದುಕೊಳ್ಳುವುದೂ ದೊಡ್ದ ಸಾಹಸವಾಗಿತ್ತು. ಆದರೆ ಆಗಲೂ ಪ್ರೇಮಿಗಳ ಆಪ್ತಮಿತ್ರನಂತೆ ಸಹಾಯ ಮಾಡುತಿದ್ದುದ್ದು ಅದೇ ಪೋಸ್ಟ್‌ ಮಾಸ್ಟರ್. ಈಗ ಬ್ಯಾಂಕ್, ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ಹೆಲ್ಪ್‌ ಡೆಸ್ಕ್‌ ನೋಡಿರುತ್ತೀರಿ.
ಪದೇ ಪದೆ ಸಹಾಯ ಕೇಳಿದರೆ ಸಿಡುಕುವುದನ್ನೂ ಗಮನಿಸಿರುತ್ತೀರಿ. ಆದರೆ ಅಂಚೆ ಕಚೇರಿಯಲ್ಲಿ ಹಾಗಿರಲಿಲ್ಲ. ಪ್ರತ್ಯೇಕ ಹೆಲ್ಪ್‌ ಡೆಸ್ಕ್‌ ಇರದಿದ್ದರೂ ಅವರೇ ಹೆಲ್ಪ್‌ ಮಾಡಲು ಬರುತ್ತಿದ್ದರು. ಅಂಚೆ ಸೇವೆ ಪಡೆದುಕೊಳ್ಳಲು ಹೋಗುವವರು ಬಹುತೇಕರು ಅನಕ್ಷರಸ್ಥರೇ ಆಗಿರುತ್ತಿದ್ದರು. ಅಲ್ಲಿ ಹೋಗುವ ಎಲ್ಲರಿಗೂ ಸಹಾಯ ಮಾಡಬೇಕಾದ ಅನಿವಾರ್ಯ ಅಲ್ಲಿಯ ಪೋಸ್ಟ್‌ ಮ್ಯಾನ್ ಅಥವಾ ಪೋಸ್ಟ್‌ ಮಾಸ್ಟರ್ ಅವರಿಗಿತ್ತು. ಮನಿ ಆರ್ಡರ್ ಮಾಡುವುದು, ವಿಳಾಸ ಬರೆಯುವುದು, ಸ್ಟ್ಯಾಂಪ್ ಅಂಟಿಸುವುದು ಎಲ್ಲದಕ್ಕೂ ಅವರನ್ನು ಕರೆಯುತ್ತಿದ್ದರೂ ಒಂದು ದಿನವೂ ರೇಗದೇ ಸಿಡುಕದೇ ಎಲ್ಲರಿಗೂ ಸಹಾಯ ಮಾಡುತಿದ್ದುದ್ದು ಅಲ್ಲಿಯ ಪೋಸ್ಟ್‌ ಮ್ಯಾನ್/ಮಾಸ್ಟರ್. ಅಂತಹ ಸೇವಾ ಭಾವನೆಯನ್ನು ಅವರಲ್ಲಿ ಬೆಳೆಸಿದ್ದು ಅಂಚೆ ಸೇವೆ. ಅಂತಹ ಅತ್ಯುತ್ತಮ ಸೇವೆಯೇ ಜನರು ಅಂಚೆಯೊಂದಿಗೆ ಆಪ್ತತೆ ಬೆಳೆಸಿಕೊಳ್ಳಲು ಕಾರಣವಾಗಿದ್ದು. ಹೀಗೆ 90ರ ದಶಕದವರೆಗೆ ಪ್ರತಿಯೊಬ್ಬನಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದ ಅಂಚೆ ಇಲಾಖೆ ಆಧುನಿಕ ಸಂಪರ್ಕ ಕ್ರಾಂತಿಯ ಹೊಡೆತಕ್ಕೆ ಸಿಲುಕಿತು.
ಟೆಲಿಫೋನ್‌ಗಳು ಬರುತ್ತಿದ್ದಂತೆಯೆ ಅಂಚೆಯ ಬಳಕೆ ಕಡಿಮೆಯಾಗುತ್ತ ಬಂದಿತು. ಯಾವಾಗ ಇಂಟರ್ನೆಟ್ ಬಳಕೆ ಹೆಚ್ಚುತ್ತಾ ಹೋಯಿತೊ, ಇ-ಮೇಲ್ ಗಳ ಜೊತೆ ಸ್ಪರ್ಧೆಗಿಳಿಯುವ ತಾಕತ್ತು ಅಂಚೆಯ ಬಳಿ ಇಲ್ಲದಾಯಿತು. ಈ ಮಧ್ಯೆ ಟೆಲಿಗ್ರಾಮ್ ಅಧಿಕೃತವಾಗಿ ಅಂತ್ಯಗೊಂಡಿತು. ಮುಂದಿನ ಸರದಿ ಅಂಚೆಯಣ್ಣನದ್ದೇ ಎಂದು ಎಲ್ಲರೂ ಭಾವಿಸಿದರು, ಅಷ್ಟರಲ್ಲಿ ಮೋದಿಯಣ್ಣ ಬಂದರು! 2014ರ ಲೋಕಸಭೆ ಚುನಾವಣೆ ವೇಳೆ ಹಾಗೂ ಅದಕ್ಕೆ ಮೊದಲು ದೇಶಾದ್ಯಂತ 441 ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ ಆಗಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಈಗಿನ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಬೇಕು, ಹೇಗೆ ರೈಲ್ವೆಗೆ ಕಾಯಕಲ್ಪ ಕೊಡಬೇಕು, ಹೇಗೆ ರೇಡಿಯೋ ರೀಚನ್ನು ಬಳಸಿಕೊಳ್ಳಬಹುದು, ಅಂಚೆ ಇಲಾಖೆಯಂಥ ಒಂದು ದೊಡ್ಡ ನೆಟ್‌ವರ್ಕ್ ಹೇಗೆ ಉಪಯೋಗಕ್ಕೆ ಬರಬಲ್ಲದು ಎಂದೆಲ್ಲ ದೇಶದ ಮುಂದೆ ತನ್ನ ಕಲ್ಪನೆಯನ್ನು ತೆರೆದಿಡಲಾರಂಭಿಸಿದರು.
ಅವರು ಬರೀ ಕನಸ್ಸು ಬಿತ್ತಲಿಲ್ಲ, ಪ್ರಧಾನಿಯಾದ ಕೂಡಲೇ ಸಾಕಾರಗೊಳಿಸಲು ಮುಂದಾದರು. ಖಾಸಗಿ ಎಫ್.ಎಂ. ಚಾನೆಲ್‌ಗಳ ಆರ್ಭಟಕ್ಕೆ ತತ್ತರಿಸಿಹೋಗಿದ್ದ ರೇಡಿಯೋವನ್ನು ಮನ್ ಕಿ ಬಾತ್ ಒಂದೇ ಕಾರ್ಯಕ್ರಮದ ಮೂಲಕ ಮೇಲೆತ್ತಿದರು. ಇನ್ನು ಯಾವ ಬ್ಯಾಂಕು, ಕೊರಿಯರ್ ತಲುಪಲಾಗದ ಸ್ಥಳದಲ್ಲೂ ಇದ್ದ ಅಂಚೇ ಕಚೇರಿಗಳಿಗೆ ಸಂಜೀವಿನಿಯಾದರು. ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಂಚೆ ಇಲಾಖೆ ಮುಖಾಂತರ ಆರಂಭಿಸಿ ಮೊದಲಿಗೆ ಸ್ವಲ್ಪ ಜೀವನದಾನ ನೀಡಿದರು. ಆ ಮೂಲಕ ಅಂಚೆ ಇಲಾಖೆಯನ್ನು ಮುಚ್ಚುವುದಾಗಲಿ, ಗಾತ್ರ ಕಡಿತಗೊಳಿಸುವ ಪ್ರಶ್ನೆಯಾಗಲಿ ಇಲ್ಲ ಎಂಬ ಆತ್ಮಸ್ಥೈರ್ಯವನ್ನು ಉದ್ಯೋಗಿಗಳಿಗೆ ನೀಡಿದರು. ಅಂಚೆ ಇಲಾಖೆಯಲ್ಲಿ ಹಲವು ಹೊಸತನಗಳನ್ನು ತರಲಾಯಿತು. ಜನಸ್ನೇಹಿ ಹಾಗೂ ಬಹು ಉಪಯೋಗಿ ಕೇಂದ್ರಗಳನ್ನಾಗಿ ಅಂಚೆ ಕಚೇರಿಯನ್ನು ಬದಲಾವಣೆ ಮಾಡುವಲ್ಲಿ ಯಶಸ್ವಿಯಾಯಿತು.
ಪತ್ರ ರವಾನೆಗೆ ವಾರಗಟ್ಟಲೆ ತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿ 24 ಗಂಟೆಯಲ್ಲಿ ತಲುಪುವಂತೆ ಸ್ಪೀಡ್ ಹೆಚ್ಚಿಸಲಾಯಿತು. ಸುಕನ್ಯಾ ಸಮೃದ್ಧಿಯ ಯೋಜನೆಯ ನಂತರ ಹಲವು ಸೇವಾ ಯೋಜನೆಗಳನ್ನು ಪೋಸ್ಟ್‌ ಆಫೀಸ್ ಮುಖಾಂತರವೇ ಪ್ರಾರಂಭಿಸಲು ಮುಂದಾದರು. ನಮ್ಮ ದೇಶದಲ್ಲಿ 675 ಜಿಲ್ಲೆಗಳಿವೆ. ಜಿಲ್ಲಾ ಹೆಡ್ ಪೋಸ್ಟ್‌ ಆಫೀಸ್‌ಗಳನ್ನು ಯಾಕೆ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನಾಗಿ ಮಾಡಬಾರದು ಎಂಬ ಯೋಚನೆ ಹೊಳೆಯಿತು! ಅದೇ ಇನ್ಫ್ರಾಸ್ಟ್ರಕ್ಚರ್, ಅದೇ ಸಿಬ್ಬಂದಿ, ಭರಪೂರ ಬಳಕೆ. ಅಂಥ ಯೋಚನೆಯ ಫಲವೇ ಪೋಸ್ಟ್‌ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರ (POPSK)! ಬಹಳ ಖುಷಿಕೊಡುವ ಸಂಗತಿಯೆಂದರೆ ಮೊಟ್ಟ ಮೊದಲ ಪೋಸ್ಟ್‌ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭವಾಗಿದ್ದೇ ನಮ್ಮ ಮೈಸೂರಿನಲ್ಲಿ!! ಕಳೆದ ವರ್ಷ ಮೈಸೂರು-ಚಾಮರಾಜನಗರ ಜಿಲ್ಲೆಗಳಿಂದ 45 ಸಾವಿರ ಪಾಸ್‌ಪೋರ್ಟ್‌ಗಳನ್ನು ಮಾಡಿಸಲಾಯಿತು. ಈ 45 ಸಾವಿರ ಜನ ಬೆಂಗಳೂರಿಗೆ ಕನಿಷ್ಟ 2-3 ಬಾರಿ ಅಲೆದಿದ್ದಾರೆ. ಈಗ ಮನೆ ಬಾಗಿಲಲ್ಲೇ ಪೋಸ್ಟ್‌ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರವಿದೆ.
ದಿನಕ್ಕೆ 150-200 ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಅಂದರೆ ವರ್ಷಕ್ಕೆ 45-50 ಸಾವಿರ ಜನರು 2-3 ಸಾರಿ ಬೆಂಗಳೂರಿಗೆ ಅಲೆಯುವುದು ತಪ್ಪಿದೆ. ಜನ ಮೋದಿ ಮೋದಿ ಅಂಥ ಯಾಕೆ ಜಪಿಸುತ್ತಾರೆಂದರೆ ಇಂತಹ ಅವರ ಜನಸ್ನೇಹಿ ಕೆಲಸದಿಂದಲೇ! ಈ ಮಧ್ಯೆ ಮತ್ತೊಂದು ಹೊಸ ಯೋಚನೆ ಬಂತು, ಇಂಡಿಯಾ ಪೋಸ್ಟ್‌‌ಲ್ ಪೇಮೆಂಟ್ ಬ್ಯಾಂಕ್ (IPPB)! ಆ ಬ್ಯಾಂಕ್‌ನ ಮೊದಲ ಪ್ರಯೋಗವೂ ನಮ್ಮ ಮೈಸೂರಿನಲ್ಲೇ ನಡೆದಿದೆ! ಜಿಲ್ಲೆಗೆ ಒಂದರಂತೆ ಈಗಾಗಲೇ 675 ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಿರುವ ಪೋಸ್ಟ್‌ ಆಫೀಸ್ ಬ್ಯಾಂಕ್‌ಗಳು ಎಲ್ಲಾ ಬ್ಯಾಂಕಿಂಗ್ ಫೆಸಿಲಿಟಿಯನ್ನು ನೀಡುವಂತೆ ಮಾಡಲಾಗಿದೆ. ಎಟಿಎಂಗಳನ್ನು ತೆರೆಯಲಾಗುತ್ತಿದ್ದು, ಈ ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಎಟಿಎಂ ಕಾರ್ಡ್‌ಗಳು ನಿರ್ವಹಿಸುವಂತೆ ಮಾಡಲಾಗುತ್ತಿದೆ!! ಹಾಗೆಯೇ ಕೇಂದ್ರ ಸರಕಾರದ ಈ ಹೊಸ ಯೋಜನೆಯನ್ವಯ ಎಟಿಎಂ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಅಂದರೆ ಮನೆ ಮನೆಗೆ ಬರುವ ಅಂಚೆಯಣ್ಣ ಮನೆಗೆ ಎಟಿಎಂ ತರಲಿದ್ದಾನೆ.
ಪೋಸ್ಟ್‌ ಮ್ಯಾನ್‌ಗಳ ಕೈಗೆ ಪುಟ್ಟ ಯಂತ್ರವೊಂದು ಬರಲಿದೆ. ಈ ಯಂತ್ರದ ಮೂಲಕ ಹಣ ಪಾವತಿ, ಠೇವಣಿ, ಹಣ ವರ್ಗಾವಣೆ, ವಿಮಾ ಕಂತು ಸೇರಿದಂತೆ ಹಲವು ಬ್ಯಾಂಕಿಂಗ್ ಸೌಲಭ್ಯಗಳು ದೊರೆಯಲಿವೆ. ಮುಖ್ಯವಾಗಿ ಗ್ರಾಮೀಣ ಭಾಗದ ಜನತೆಗೆ ಚಿಕ್ಕ ಚಿಕ್ಕ ಕೆಲಸಗಳಿಗೂ ಪಟ್ಟಣಕ್ಕೆ ಓಡಾಡುವ ಕೆಲಸ ತಪ್ಪಲಿದೆ. ಈ ಯೋಜನೆಗೆ ದೇಶದ ಎಲ್ಲಾ ಬ್ಯಾಂಕ್‌ಗಳು ಕೈಜೋಡಿಸಿರುವುದರಿಂದ ಯಾವುದೇ ಬ್ಯಾಂಕ್‌ನ ಕೆಲಸಗಳನ್ನು ಅಂಚೆಯಣ್ಣನ ಮೂಲಕ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಗೆ ಕೇಂದ್ರ ಸರಕಾರವು ಆವರ್ತ ನಿಧಿಯಾಗಿ ರೂ. 800 ಕೋಟಿಯನ್ನು ನೀಡಿದೆ. ದೇಶಾದ್ಯಂತ ಇರುವ ಎರಡೂಮುಕ್ಕಾಲು ಲಕ್ಷ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್‌ಗಳ ಮೂಲಕ ಕಲ್ಪಿಸಿರುವ ಇಂಟರ್‌ನೆಟ್ ಸೌಲಭ್ಯ ಅಂಚೆ ಕಚೇರಿಗಳನ್ನೂ ತಲುಪಿದೆ.
ಬೇಟಿ ಬಚಾವೊ ಬೇಟಿ ಪಡಾವೊ ಆಂದೋಲನದಲ್ಲಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಅವರ ಭವಿಷ್ಯದ ವಿದ್ಯಾಭ್ಯಾಸ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೋಷಕರಿಗೆ ನೆರವಾಗಲು ಭಾರತ ಸರಕಾರ ಆರಂಭಿಸಿ ರುವ ಸುಕನ್ಯ ಸಮೃದ್ಧಿ ಯೋಜನೆ ಖಾತೆಯನ್ನು ಭಾರತದ ಯಾವುದೇ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ. ಮೈಸೂರು ವಿಭಾಗವೊಂದ ರಲ್ಲೇ ಇಲ್ಲಿಯವರೆಗೆ 41,588 ಖಾತೆಗಳನ್ನು ತೆರೆಯಲಾಗಿದೆ. ಕೋರ್ ಸಿಸ್ಟಮ್ ಇಂಟಿಗ್ರೇಷನ್ ಹಾಗೂ ಕೋರ್ ಬ್ಯಾಂಕಿಂಗ್ ಸಿಸ್ಟಮ್‌ನ್ನು, ಕೇಂದ್ರೀಕೃತ ನಿರ್ವಹಣೆ, ಟ್ರ್ಯಾಕಿಂಗ್, ಸೆಕ್ಯುರಿಟಿ, ಟ್ರಾನ್ಸ್ಫರೆನ್ಸಿಯನ್ನು ತರುವ ಉದ್ದೇಶದಿಂದ ಅಂಚೆ ಇಲಾಖೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇನ್ಶುರೆನ್ಸ್‌ ಸರ್ವಿಸ್‌ನ್ನು ಸಹ ಅಂಚೆ ಇಲಾಖೆಯಲ್ಲಿ ತರಲಾಗಿದ್ದು, ಪೋಸ್ಟಲ್ ಲೈಫ್ ಇನ್ಶುರೆನ್ಸ್‌ ಹಾಗೂ ರೂರಲ್ ಪೋಸ್ಟಲ್ ಲೈಫ್ ಇನ್ಶುರೆನ್ಸ್‌ ಎಂಬ ಎರಡು ಬಗೆಯ ಪ್ರಕಾರಗಳಿದ್ದು, ಖಾಸಗಿ ಇನ್ಶುರೆನ್ಸ್‌ ಕಂಪನಿಗಳು ನೀಡುವ ಎಲ್ಲಾ ತರಹದ ಸ್ಕೀಮ್‌ಗಳನ್ನು ನೀಡಲಾಗಿದೆ.
ಅಂಚೆ ಇಲಾಖೆಯಲ್ಲಿ ಇಷ್ಟಿಷ್ಟೇ ಬದಲಾವಣೆ ತರುತ್ತಾ ಇದೀಗ ಅಂಚೆಯಣ್ಣನಿಗೆ ಸ್ಮಾರ್ಟ್ ಫೋನ್ ಒದಗಿಸಲು ಯೋಜನೆ ಬಂದಿದೆ. ಈ ಸ್ಮಾರ್ಟ್ ಫೋನ್‌ನಲ್ಲಿ ಪೋಸ್ಟ್‌ ಮ್ಯಾನ್ ಮೊಬೈಲ್ ಅಪ್ಲಿಕೇಶನ್ ಅಳವಡಿಸಲಾಗಿದ್ದು, ಸ್ಪೀಡ್ ಪೋಸ್ಟ್‌, ರಿಜಿಸ್ಟರ್ಡ್ ಪೋಸ್ಟ್‌, ಸರಕು (ಪಾರ್ಸೆಲ್), ಎಲೆಕ್ಟ್ರಾನಿಕ್ ಮನಿ ಆರ್ಡರ್‌ನ ಸ್ಥಿತಿಗತಿ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುತ್ತದೆ. ಸರಕು ಕಳುಹಿಸುವ ಮತ್ತು ಸ್ವೀಕರಿಸುವ ವ್ಯಕ್ತಿಯ ಮೊಬೈಲ್‌ಗೆ ಎಸ್‌ಎಂಎಸ್ ಬರುತ್ತದೆ. ಸರಕು ರವಾನೆ ಮಾಡಲು ವಿಳಾಸಕ್ಕೆ ತೆರಳುವ ಅಂಚೆಯಣ್ಣ ಇದರ ಸಹಕಾರದಿಂದಲ್ಲಿ ಗ್ರಾಹಕ ರಿಂದ ಡಿಜಿಟಲ್ ಸಹಿ ಪಡೆದುಕೊಳ್ಳಬಹುದು. ಮೈಸೂರಿನ ಅಂಚೆ ತಂತ್ರಜ್ಞಾನದ ಉತ್ಕೃಷ್ಠ ಕೇಂದ್ರದಲ್ಲಿ (ಸಿಇಪಿಟಿ) ಇಲಾಖೆಯ ಸಿಬ್ಬಂದಿಯೇ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿರುವುದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಇಷ್ಟೆ ಅಲ್ಲದೇ ಅಟಲ್ ಪಿಂಚಣಿ ಯೋಜನಾ, ಪ್ರಧಾನ ಮಂತ್ರಿ ಸ್ವಾಸ್ಥ್ಯ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ, ಸಂಧ್ಯಾ ಸುರಕ್ಷಾ ಯೋಜನಾ ಹೀಗೆ ಹಲವು ಯೋಜನೆಗಳನ್ನು ಅಂಚೆ ಇಲಾಖೆಯ ಮೂಲಕ ಜೋಡಿಸಲಾಗಿದೆ.
ಅಂಚೇ ಕಚೇರಿಗಳಲ್ಲಿ ಕೇವಲ 50 ರುಪಯಿಗಳಿಗೆ ಉಳಿತಾಯ ಖಾತೆ ಹಾಗೂ 10 ರೂ.ಗಳಿಗೆ ಆರ್ .ಡಿ ಖಾತೆ ತೆರೆಯಲಾಗುತ್ತದೆ. ಆಧಾರ್ ಸರ್ವಿಸ್ ಸಹ ಇನ್ನು ಅಂಚೆ ಕಚೇರಿಗಳಲ್ಲಿ ಪ್ರಾರಂಭಗೊಳ್ಳಲಿದೆ. ಭಾರತೀಯ ಅಂಚೆ ಸೇವೆಯು ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲ ಹೊಂದಿದೆ ಮತ್ತು ಇದರ 1,55,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 1,39,000 ಗ್ರಾಮೀಣ ಅಂಚೆ ಕಚೇರಿಗಳು. ಮೈಸೂರು ವಿಭಾಗದಲ್ಲಿಯೇ 2 ಹೆಡ್ ಪೋಸ್ಟ್‌ ಆಫೀಸ್‌ಗಳು, 63 ಸಬ್ ಆಫೀಸ್‌ಗಳು, 202 ಹಳ್ಳಿಗಳಲ್ಲಿ ಗ್ರಾಮೀಣ ಅಂಚೆ ಕಚೇರಿಗಳು ಇವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಚೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಅಷ್ಟು ಮಾತ್ರವಲ್ಲ, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ ಫರ್ ಹಾಗೂ ಇಂದಿನ ಆನ್‌ಲೈನ್ ಮಾರ್ಕೆಟ್‌ನಲ್ಲಿ ಪ್ರಮುಖ ಕಂಪನಿಗಳಾದ ಅಮೆಝಾನ್, ನಾಪ್ಟೋಲ್, ಫ್ಲಿಪ್ಕಾರ್ಟ್, ಮಿಂಟ್ರಾ, ಹೋಮ್ ಶಾಪ್‌ಗಳಂತಹ ಕಂಪನಿಗಳು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಗಳನ್ನು ಮಾಡಿಕೊಳ್ಳುತ್ತಿವೆ.
ನಮ್ಮ ದೇಶದಲ್ಲಿ ಈಗಾಗಲೇ 24,000ಕ್ಕೂ ಹೆಚ್ಚು ಸಂಸ್ಥೆಗಳು, ಕಂಪನಿಗಳು ಅಂಚೆ ಇಲಾಖೆಯೊಂದಿಗೆ ಕೈಜೋಡಿ ಸಿವೆ. ನೀವು ಇಂಟರ್ನೆಟ್‌ನಲ್ಲಿ ಖರೀದಿಸುವ ವಸ್ತುಗಳು ಇನ್ನುಮುಂದೆ ಅಂಚೆಯಣ್ಣನಿಂದ ಕ್ಯಾಶ್ ಆನ್ ಡೆಲಿವರಿಗೊಳ್ಳಲಿದೆ. ಮೊನ್ನೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಹೊಸ ಪೋಸ್ಟ್‌ ಆಫೀಸ್ ಉದ್ಘಾಟನೆಗೆ ಹೋದಾಗ, 2020ರ ಹೊತ್ತಿಗೆ ತಂತ್ರಜ್ಞಾನ ಮುಂದುವರಿದಂತೆ ಅಂಚೆ ಇಲಾಖೆಯನ್ನೇ ರದ್ದು ಮಾಡಬಹುದು ಎಂದು ಹೆಮ್ಮೆಯ ಮಾಜಿ ರಾಷ್ಟ್ರಪತಿ ದಿವಂಗತ ಕಲಾಂಗೇ ಅನಿಸಿದ್ದ ಅಂಚೆ ಕಚೇರಿಗೆ ಭವ್ಯ ಭವಿಷ್ಯ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಯವರ ದೂರದೃಷ್ಟಿ ಮತ್ತು ಕಾರ್ಯತತ್ಪರತೆಯ ಬಗ್ಗೆ ನಿಮಗೆ ಹೇಳಬೇಕೆನಿಸಿತು.

Comments are closed.