Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ

ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ

ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ

ನಾವು ಬೆಳಗ್ಗೆ ಎದ್ದ ಕೂಡಲೇ ಬಳಸುವ ಬ್ರಸ್ಸು, ಟೂತ್ ಪೇಸ್ಟ್, ಸಾಬೂನಿನಿಂದ ಹಿಡಿದು ಚಪಾತಿ ಹಿಟ್ಟಿನವರೆಗೂ ಮನೆಬಳಕೆಯ ಎಲ್ಲ ವಸ್ತುಗಳ ಉತ್ಪಾದನೆಯಲ್ಲಿ ಭಾರತೀಯ ಮಾರುಕಟ್ಟೆಯನ್ನೇ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ವಿದೇಶಿ ಕಂಪನಿಗಳಾದ ಹಿಂದೂಸ್ಥಾನ್ ಲೀವರ್ ಲಿಮಿಟೆಡ್ ಮತ್ತು ಐಟಿಸಿಯನ್ನು ಹೆಡೆಮುರಿ ಕಟ್ಟುವುದು ಅಥವಾ ಹಿಂದಕ್ಕೆ ಹಾಕುವುದನ್ನು ಮತ್ತೊಂದು ಬಹುರಾಷ್ಟ್ರೀಯ ಕಂಪನಿಗೂ ಕೂಡಾ ಊಹಿಸಿಕೊಳ್ಳಲೂ ಸಾಧ್ಯವಾಗದ ಮಾತಾಗಿತ್ತು. ಇನ್ನು ಭಾರತೀಯ ಕಂಪನಿಯೊಂದು ಅಂಥ ಸಾಹಸಕ್ಕೆ ಕೈಹಾಕುವುದನ್ನು ದುಸ್ಸಪ್ನದಲ್ಲೂ ಕೂಡಾ ಕಾಣಲು ಸಾಧ್ಯವಿರಲಿಲ್ಲ. ಆದರೂ ಒಬ್ಬ ವ್ಯಕ್ತಿ ಮಾತ್ರ ಅಂಥ ಕನಸ್ಸನ್ನು ಕಂಡರು. ಆ ಕನಸ್ಸನ್ನು ಸಾಕಾರಗೊಳಿಸಲು ಬೆನ್ನುಬಿದ್ದರು. ಇಡೀ ದೇಶವನ್ನೇ ತಿರುಗಿ ಜನರಲ್ಲಿ ಜಾಗೃತಿ ಮೂಡಿಸಿದರು. ಸ್ವದೇಶಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಅದರ ಫಲವೇ ಐದೇ ವರ್ಷಗಳಲ್ಲಿ ನಂಬರ್ 1 ದೇಶೀಯ ಕಂಪನಿಯೊಂದು ಹೊರಹೊಮ್ಮಿತು!
ಅದು ಪತಂಜಲಿ.

ಷೇರು ಮಾರುಕಟ್ಟೆಯಲ್ಲಿ ಅದನ್ನು  FMCG ಎನ್ನಲಾಗುತ್ತದೆ. ಅಂದರೆ FAST MOVING CONSUMER GOODS.

ಅರ್ಥಾತ್ ಗ್ರಹೋಪಯೋಗಿ ಸರಕುಗಳು. ಷೇರು ಮಾರುಕಟ್ಟೆಯಲ್ಲಿ ಉಳಿದ ಸರಕುಗಳದ್ದು ಒಂದು ತೂಕವಾದರೆ FMCGಯದ್ದು ಇನ್ನೊಂದು ತೂಕ. ಭಾರತದಲ್ಲಂತೂ ಅದು ಇಡೀ ಮಾರುಕಟ್ಟೆಯನ್ನು ಆವರಿಸಿಕೊಳ್ಳುವಂಥ, ಮಾರುಕಟೆಯ ಸ್ವರೂಪವನ್ನೇ ಬದಲಿಸುವಂಥಾ ಶಕ್ತಿಯನ್ನು ಹೊಂದಿದೆ. ಏಕೆಂದರೆ ಭಾರತ ಜಗತ್ತಿನಲ್ಲೇ  ಅತ್ಯಂತ ಹೆಚ್ಚು ಯುವಕರಿರುವ ದೇಶ. ಅಲ್ಲದೆ ದೇಶದಲ್ಲಿ ಹೂಡಿಕೆಗೆ ಮೂಲಸೌಕರ್ಯಗಳ ಕೊರತೆ ಸದ್ಯದಲ್ಲಿ ಇಲ್ಲ. ನಗರಗಳ ಜನಸಂಖ್ಯೆ ಏರುತ್ತಿದೆ. ದೇಶದ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚುತ್ತಿದೆ. ಪರಿಣಾಮ ಭಾರತದ FMCG  ವಲಯದ ಗಾತ್ರ 25 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿದೆ. ಪ್ರತಿ ವರ್ಷ 10 ರಿಂದ 12 ಶೇಕಡಾದಷ್ಟು ಇದರ ಗಾತ್ರ ಹೆಚ್ಚುತ್ತಲೇ ಇದೆ. 2011-12ರ ಅವಧಿಯಲ್ಲಿ ಡಿಪಾರ್ಟ್ ಮೆಂಟಲ್ ಸ್ಟೋರ್‍ಗಳು, ಹೈಪರ್ ಮಾರ್ಕೆಟ್‍ಗಳು ಮತ್ತು ಸೂಪರ್ ಮಾರ್ಕೆಟ್‍ಗಳ ಸಂಖ್ಯೆಗಳಲ್ಲಿ ವಿಪರೀತ ಹೆಚ್ಚಳವಾಗಿದೆ.

ಅಲ್ಲದೆ ಈ ವಲಯದಲ್ಲಿ ತೀವ್ರವಾದ ಪೈಪೋಟಿಯನ್ನೂ ಭಾರತದಲ್ಲಿ ಕಾಣುತ್ತಿದ್ದೇವೆ . ಆದರೆ ಈ ಸರಕುಗಳ ಅಧಿಪತ್ಯ ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಯಲ್ಲೇ ಹೆಚ್ಚು ಇರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.
ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬೆಳೆದ ಪರಿಯದ್ದು ಒಂದು ದೊಡ್ಡ ಕಥೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದ ಯಾವ ದೇಶೀಯ ಕಂಪನಿಗಳನ್ನೂ ಅವರು ಸುಮ್ಮನೆ ಬಿಟ್ಟ ಉದಾಹರಣೆ ಇಲ್ಲ. ಒಂದು ತಂಪು ಪಾನೀಯವೋ ಅಥವಾ ಟೂತ್ ಪೇಸ್ಟೋ ಅಥವಾ ಇನ್ನಾವುದೋ ಉತ್ಪನ್ನಗಳನ್ನು ನಾವು ಬಳಸುತ್ತಿದ್ದಾಗಲೇ ಅವು ಬಹುರಾಷ್ಟೀಯರ ತೆಕ್ಕೆಗೆ ಜಾರಿರುತ್ತವೆ. ಅವು ಇನ್ನೂ ದೇಶಿ ಕಂಪನಿಗಳಾಗಿ ಉಳಿದಿವೆ ಎನ್ನುವುದನ್ನು ಕೂಡಾ ಬಹುರಾಷ್ಟ್ರೀಯರು ಜಾಹೀರಾತುಗಳ ಮೂಲಕ ಬಿಂಬಿಸಿದ ಉದಾಹರಣೆಗಳಿವೆ. ಅಂದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶಿ ಉತ್ಪನ್ನಗಳ ಹೆಸರಲ್ಲಿ ಭಾರತೀಯ ಗ್ರಾಹಕರು ಮತ್ತು ಅವರಿಂದ ಲಾಭ ಬೇಕಾಗಿದೆ. ಹಲವು ದೇಶೀಯ ಕಂಪನಿಗಳಿಗೆ ಬಹುರಾಷ್ಟ್ರೀಯರ ಗುಟ್ಟು ತಿಳಿದಿತ್ತಾದರೂ ಅವರು ನಿಸ್ಸಾಯಕರಾಗಿದ್ದರು. ವ್ಯವಸ್ಥಿತವಾಗಿ ದೇಶಿ ಕಂಪನಿಗಳನ್ನು ಹಣಿಯುವ ಕೆಲಸವನ್ನು ಮಾಡಲಾಗಿತ್ತು. ಅದು ನಿತ್ಯೋಪಯೋಗಿ ಸರಕುಗಳಾಗಿರಬಹುದು, ಔಷಧಿಗಳಾಗಿರಬಹುದು, ತಂಪು ಪಾನೀಯಗಳಾಗಿರಬಹುದು, ಚಿಲ್ಲರೆ ವ್ಯಾಪಾರಗಳಾಗಿರಬಹುದು. ಹಲವು ಮಹತ್ತ್ವಾಕಾಂಕ್ಷಿ ದೇಶಿ ಉದ್ದಿಮೆಗಳು ಬಹುರಾಷ್ಟ್ರೀಯರ ತಂತ್ರಗಳಿಗೆ ಬಲಿಯಾದವು.

ಅಂಥ ಬಹುರಾಷ್ಟ್ರೀಯರಿಗೆ ತಲೆ ಕೆಡುವಂತೆ ಮಾಡಿದವರು ಬಾಬಾ ರಾಮ್ ದೇವ್. ಒಮ್ಮೆ ಹಳೆಯದನ್ನು ನೆನಪಿಸಿಕೊಳ್ಳಿ. ಈ ಕೋಲಾಗಳು (ಪೆಪ್ಸಿ ಮತ್ತು ಕೋಕ್) ಭಾರತಕ್ಕೆ ಬಂದಾಗ ನಮ್ಮ ದೇಶೀಯ ಮಾಲಿಕತ್ವದ ಥಂಪ್ಸಾಪನ್ನು ತಿಪ್ಪರಲಾಗ ಹಾಕಿದರೂ ಹಿಂದಕ್ಕೆ ಹಾಕಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು 500, 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿದಾಗ ಅದನ್ನು ಅಂತರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆ ತಜ್ಞ ಫಿಲಿಪ್ ಕೋಟ್ಲರ್ ಅದ್ಭುತ ಕ್ರಮ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಈ ಫಿಲಿಫ್ ಕೋಟ್ಲರ್ ಮಾರುಕಟ್ಟೆಯಲ್ಲಿ ಎಂಥೆಂಥ ತಂತ್ರಗಾರಿಕೆ ನಡೆಯುತ್ತಿದೆ ಎಂಬುದನ್ನು ಪುಸ್ತಕವೊಂದರಲ್ಲಿ ವಿವರಿಸುತ್ತಾ, “  if you  cant fight him,you join him  ’’ ಎಂಬ ನೀತಿಯನ್ನು ಬಹುರಾಷ್ಟ್ರಿಯ  ಕಂಪನಿಗಳು ಅನುಸರಿಸುತ್ತಿವೆ ಎಂದಿದ್ದರು. ಆದರೆ ನಮ್ಮ ಥಂಪ್ಸಪ್ ಜೊತೆ ಸೆಣಸಲಾಗದ ಕೋಕ್ ಕಂಪನಿ “ if you cant fight him you buy   him’’ ಎಂಬಂತೆ ಯದ್ವಾತದ್ವಾ ತಲೆ ಕೊಟ್ಟು ಥಂಪ್ಸಪನ್ನೇ ಖರೀದಿ ಮಾಡಿಬಿಟ್ಟರು. ಇಂಥ ನೀತಿ ಅನುಸರಿಸುವ ಬಹುರಾಷ್ಟ್ರೀಯ ಕಂಪನಿಗಳ ದುಡ್ಡಿನ ಬಲದ ಮುಂದೆ ನಮ್ಮ ದೇಶೀಯ ಕಂಪನಿಗಳ ಜಂಘಾಬಲವೇ ಉಡುಗಿಹೋಗಿತ್ತು, ಬಾಬಾ ರಾಮ್‍ದೇವ್ ಬರುವವರೆಗೆ!

ಅದು ಪತಂಜಲಿ.
ಇದೊಂದು ಕಂಪನಿ ಈಗ ವಿದೇಶಿ ಕಂಪೆನಿಗಳೂ ಮೂಗಿನ ಮೇಲೆ ಬೆರಳಿಡುವಂತೆ ಬೆಳೆದಿದೆ. ಬೆಳೆಯುತ್ತಲೇ ಇದೆ. ಗ್ರಹೋಪಯೋಗಿ ಸರಕುಗಳ ವಲಯದಲ್ಲಿ ಏಕಚಕ್ರಾಧಿಪತ್ಯವನ್ನು ಸಾಧಿಸುವ ಲಕ್ಷಣಗಳು ಈಗಲೇ ಕಾಣುತ್ತಿವೆ. ಷೇರುಪೇಟೆಯಲ್ಲೂ ಈ ಸಂಸ್ಥೆಯದ್ದೇ   ಸದ್ದು ಕೇಳಿಬರುತ್ತಿದೆ. ಸಾಂಪ್ರದಾಯಿಕ ಗ್ರಹೋಪಯೋಗಿ ಸರಕುಗಳ ಷೇರುಗಳು ಮಕಾಡೆ ಮಲಗುತ್ತಿವೆ. ಸಮಸ್ತ FMCG  ವಲಯದ ಚಿತ್ತ ಈಗ ಅದರತ್ತ ನೆಟ್ಟಿದೆ. ಷೇರುಮಾರುಕಟ್ಟೆ ಪಂಡಿತರೇ ಮಾರುಕಟ್ಟೆಯಲ್ಲಿ ಹೊಸ ಅಲೆಯೊಂದು ಹುಟ್ಟಿದೆ ಎಂಬುದನ್ನು ಅಚ್ಚರಿಯಿಂದ ಗಮನಿಸುತ್ತಿದ್ದಾರೆ. ಪ್ರಮುಖವಾಗಿ ಟೂತ್‍ಪೇಸ್ಟ್, ಸಾಬೂನು ಮತ್ತು ಜೇನುತುಪ್ಪಗಳ ಮಾರಾಟದಲ್ಲಿ ಇಡೀ ಮಾರುಕಟ್ಟೆ ಪತಂಜಲಿಯತ್ತ್ತ ನೋಡುತ್ತಿದೆ.

ಯೋಗ ಗುರು ಬಾಬಾ ರಾಮ್ ದೇವ್‍ರವರ ಪತಂಜಲಿ ಆಯುರ್ವೇದ ಉತ್ಪನ್ನಗಳು 2016-17ರ ಆರ್ಥಿಕ ವರ್ಷದಲ್ಲಿ 10,000 ಕೋಟಿಯ ವ್ಯವಹಾರವನ್ನು ನಡೆಸಿ ಮಾರುಕಟ್ಟೆ ಜಗತ್ತಿನ ಕಣ್ಣನ್ನು ಭಾರತದತ್ತ ನೋಡುವಂತೆ ಮಾಡಿದೆ. ಕಳೆದ ವರ್ಷ ಇದರ ವ್ಯವಹಾರ 5000 ಕೋಟಿಯಷ್ಟಿತ್ತು ಎಂದರೆ ಕಳೆದೊಂದು ವರ್ಷದಲ್ಲಿ ಅದರ ಬೆಳವಣಿಗೆಯ ಪರಿಯನ್ನು ಅಂದಾಜು ಮಾಡಬಹುದು. ಪತಂಜಲಿ ಉತ್ಪನ್ನಗಳ ಈ ಸಾಧನೆಗೆ ಮಾರುಕಟ್ಟೆ ಕಡಿಮೆ ಬೆಲೆ ಮತ್ತು ಬ್ರಾಂಡ್ ಗ್ಯಾರೆಂಟಿಯನ್ನು ಕೊಡುತ್ತದಾದರೂ ಅವೆಲ್ಲಕ್ಕೂ ಮಿಗಿಲಾಗಿ ನಮಗೆ ಕಾಣುವುದು ಸ್ವಾಮಿ ರಾಮದೇವರ ಸ್ವದೇಶಿ ಶ್ರದ್ಧೆ. ಮತ್ತು ಅದನ್ನು ಗ್ರಾಹಕರಲ್ಲಿ ಬಿತ್ತಿದ ಅಚಲ ಶ್ರಮ. ಕಳೆದ ಮೂರು ತಿಂಗಳಿನಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜಿನಲ್ಲಿ ಗ್ರಹೋಪಯೋಗಿ ಸರಕುಗಳ ಷೇರು ಇಂಡೆಕ್ಸ್ ಶೇ 2ರಷ್ಟಿದ್ದರೆ ಈಗ ಅದರ ಇಂಡೆಕ್ಶ್ ಪ್ರಮಾಣ 0.50 ಆಗಿದೆ. ಗ್ರಹೋಪಯೋಗಿ ಸರಕುಗಳಲ್ಲಿ ಹಲವು ವರ್ಷಗಳಿಂದ ಪ್ರಸಿದ್ಧ ಏಳು ಸರಕುಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು  ಹೊಂದಿದ್ದವು. ಮತ್ತು ಆ ಕಂಪನಿಗಳೆಲ್ಲವೂ ತಮಗೆ ಪ್ರತಿಸ್ಪರ್ಧಿಯಾಗುವ ಇನ್ನೊಂದು ಕಂಪನಿಯ ಆಗಮನದ ನಿರೀಕ್ಷೆಯಲ್ಲಿ ಇರಲೇ ಇಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಅವು ಆಡಿದ್ದೇ ಆಟ ಎಂಬಂತಾಗಿತ್ತು. ಆದರೆ ಪತಂಜಲಿ ಅವುಗಳ ನಂಬಿಕೆಗಳೆಲ್ಲವನ್ನೂ ಬುಡಮೇಲು ಮಾಡಿಬಿಟ್ಟಿದೆ. ಒಂದು ಕಾಲದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮಾಡಿದಂತೆ ಪತಂಜಲಿ ಕೂಡಾ ಬೆಲೆಯೊಡನೆ ಆಟವಾಡಿತು. ಗುಣಮಟ್ಟಕ್ಕೆ ಪ್ರಾಮುಖ್ಯತೆ ಕೊಟ್ಟಿತು. ಮಾರುಕಟ್ಟೆಯಲ್ಲಿ ಗೆರಿಲ್ಲಾ ತಂತ್ರವನ್ನು ಅನುಸರಿಸಿತು. ದಶಕಗಳ ಕಾಲ ಯಾವ ವಿದೇಶಿ ಕಂಪನಿಗಳು ಭಾರತೀಯ ಕಂಪನಿಗಳನ್ನು ಹಣಿಯಲು ಯಾವ ಯಾವ ತಂತ್ರಗಳನ್ನು ಅನುಸರಿಸಿತ್ತೋ ಅದೇ ತಂತ್ರವನ್ನು ಪತಂಜಲಿ ವಿದೇಶಿ ಕಂಪನಿಗಳ ವಿರುದ್ಧ ಪ್ರಯೋಗಿಸಿತು. ವರ್ಷಗಟ್ಟಲೆ ಮೆರೆದ ಕಂಪನಿಗಳಿಗೆ ನಡುಕ ಹುಟ್ಟಿದ್ದೇ ಆವಾಗ. ಕೆಲವು ಕಂಪನಿಗಳು ಹೊಸ ಪ್ರತಿಸ್ಪರ್ಧಿಯನ್ನು ಹಣಿಯಲು ಸಾರಿಗೆ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸಿತ್ತಾದರೂ ಪತಂಜಲಿ ನೆಲಕಚ್ಚಲಿಲ್ಲ.

ಪತಂಜಲಿ ಯಶಸ್ಸಿನ ಹಿಂದೆ ರಾಮ್‍ದೇವರ ಪಾತ್ರವೆಷ್ಟಿದೆಯೋ ಅಷ್ಟೇ ಪಾತ್ರವಿರುವ ಮತ್ತೊಬ್ಬ ವ್ಯಕ್ತಿ ಅದರ ಕಾರ್ಯನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ. 44ರ ಹರೆಯದ ಬಾಲಕೃಷ್ಣ ಈಗ ಭಾರತದ ಶ್ರೀಮಂತ ಉದ್ಯಮಿಗಳಲೊಬ್ಬರು. ಇವರ ಯಶಸ್ಸು ಕೂಡ ಒಂದು ವಿಚಿತ್ರ. ಏಕೆಂದರೆ ಎಲ್ಲಾ  ಸಿಇಒಗಳಂತೆ ಇವರು ಸೂಟು ಧರಿಸಲಾರರು. ಕಂಪ್ಯೂಟರ್ ಬಳಸಲಾರರು, ಇಂಗ್ಲಿಷ್ ಮಾತಾಡಲಾರರು. ಪ್ರಾಚೀನ ಆಯುರ್ವೇದಕ್ಕೆ ಎಂಥ ಮಾರ್ಕೆಂಟಿಂಗ್ ಎಕ್ಸಿಕ್ಯುಟಿವ್‍ಗಳಿರಬೇಕೆಂದು ಸಾಮಾನ್ಯರಿಗನಿಸುತ್ತದೋ ಅಂಥ ಸಿಇಒ ಈ ಆಚಾರ್ಯ ಬಾಲಕೃಷ್ಣ. ಅಂದರೆ ಪ್ರಾಚೀನದ ಜೊತೆಗೆ ಆಧುನಿಕತೆಯ ಸ್ಪರ್ಶ ನೀಡಿ ಕಂಪನಿಯನ್ನು ವಿಶ್ವವಿಖ್ಯಾತ ಮಾಡಿದವರು ಈ ದೇಸೀ ಬಾಲಕೃಷ್ಣ. ದೇಶೀ ಕಂಪನಿಯೊಂದು ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವಾಗ ಏನೇನನ್ನು ಎದುರಿಸಬೇಕೋ ಅವೆಲ್ಲವನ್ನೂ ಪತಂಜಲಿ ಮತ್ತು ಅದರ ಸಿಇಒ ಅನುಭವಿಸಿದೆ. ಬಾಲಕೃಷ್ಣರ ಮೇಲೆ ಮೋಸದ ಜಾಲವನ್ನು ಸೆಣೆದು ಹೆಸರಿಗೆ ಮಸಿ ಬಳಿಯುವ ತಂತ್ರವನ್ನು ಕೂಡ ಕಾಣದ ಕೈಗಳು ಮಾಡಿದವು. ವಂಚನೆ ಪ್ರಕರಣವನ್ನು ದಾಖಲಿಸಿದವು. ಸಿಬಿಐವರೆಗೂ ಪ್ರಕರಣವನ್ನು  ಕೊಂಡೊಯ್ದವು. ಆದರೂ ಸತತ ದುಡಿಮೆ, ಆಯುರ್ವೇದದ ಮೇಲಿನ ಪ್ರೀತಿ ಅವರನ್ನು ಈ ಮಟ್ಟಕ್ಕೆ ಮುಟ್ಟಿಸಿದೆ. ಇವೆಲ್ಲ ಸವಾಲುಗಳ ನಡುವೆಯೂ ಪತಂಜಲಿ ವಿವಿಧ ಪ್ರಯೋಗಗಳನ್ನು ನಡೆಸಿತು. ಚಾಕಲೇಟುಗಳಿಂದ ಹಿಡಿದು ಔಷಧಿ, ಪೇಯಗಳವರೆಗೂ ಪತಂಜಲಿಯನ್ನು ಎತ್ತರಕ್ಕೇರಿಸಿದ ಕೀರ್ತಿ ಅವರದ್ದು.
ಅಷ್ಟಕ್ಕೂ ಪತಂಜಲಿ ಈ ಪರಿಯಲ್ಲಿ ಜನಪ್ರೀಯವಾಗುವುದಕ್ಕೆ ಕಾರಣಗಳೇನು?

ಅದಕ್ಕೆ ಕಾರಣಗಳನ್ನು ಹುಡುಕುವಲ್ಲಿ ಬಹುರಾಷ್ಟ್ರೀಯ ಕಂಪನಿಗಳೂ ಸೋತಿವೆ. ಏಕೆಂದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಗ್ರಾಹಕರ ದೌರ್ಬಲ್ಯಗಳೇ ಅಸ್ತ್ರಗಳಾಗಿದ್ದವು. ಅಂದರೆ ವಿದೇಶಿ ಸರಕುಗಳಿಗೆ ಮತ್ತು ಬ್ರಾಂಡ್‍ಗಳಿಗೆ ಭಾರತೀಯ ಗ್ರಾಹಕರು ಹಾತೊರೆಯುತ್ತಾರೆ ಎಂಬುದು ಬಹುರಾಷ್ಟ್ರೀಯ ಕಂಪನಿಗಳಿಗೆ ಚೆನ್ನಾಗಿ ತಿಳಿದಿತ್ತು. ಪರಿಣಾಮ ರಾತ್ರೋರಾತ್ರಿ ಸ್ವದೇಶಿ ಕಂಪನಿಗಳು ಬಹುರಾಷ್ಟ್ರೀಯರ ತೆಕ್ಕೆಗೆ ಜಾರಿಕೊಳ್ಳುತ್ತಿತ್ತು. ಬಹುರಾಷ್ಟ್ರೀಯರು ಕೈಹಾಕಿದ ಯಾವ ಸ್ವದೇಶಿ ಕಂಪನಿಗಳೂ ದೇಶದಲ್ಲಿ ಉಳಿಯುತ್ತಿರಲಿಲ್ಲ.
ಅಷ್ಟಕ್ಕೂ ಪತಂಜಲಿ ಉತ್ಪನ್ನಗಳ ಯಶಸ್ಸಿನ ಗುಟ್ಟೇನು ಎಂದು ನೋಡಿದರೆ ಸೋಜಿಗ ಹುಟ್ಟುತ್ತದೆ. ಏಕೆಂದರೆ ಪತಂಜಲಿಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಸಿನಿಮಾ ನಟ-ನಟಿಯರು, ಕ್ರಿಕೇಟ್ ತಾರೆಯರು ಕಾಣಿಸಿಕೊಳ್ಳುವುದಿಲ್ಲ. ಉತ್ಪನ್ನಗಳ ಪೊಟ್ಟಣಗಳಲ್ಲಿ ಬಾಬಾ ರಾಮ್‍ದೇವ್ ಅವರ ಚಿತ್ರವೊಂದನ್ನು ಬಿಟ್ಟು ಬೇರೇನೂ ಇರುವುದಿಲ್ಲ. ಪತಂಜಲಿಯ ಜನಪ್ರಿಯತೆಗೆ ಇದೊಂದೇ ಕಾರಣ. ಜಾಹೀರಾತುಗಳಿಗೆ ಕೋಟಿಗಟ್ಟಲೆ ಸುರಿಯುವ ಬಹುರಾಷ್ಟ್ರೀಯ ಕಂಪನಿಗಳನ್ನು ಪತಂಜಲಿ ಜಾಹೀರಾತಿಲ್ಲದೆ ದಾಟಿ ಮತ್ತಷ್ಟು ಹೆದರಿಸಿಬಿಟ್ಟಿತು. ಹಾಗಾದರೆ ದೇಶದ ಜನ ಒಬ್ಬ ಸಂನ್ಯಾಸಿಯ ಮೇಲೆ ಅಷ್ಟೊಂದು ನಂಬಿಕೆ ಇಡುವವರು ಅಂದಾಯಿತು. ಜೊತೆಗೆ ಬಹುರಾಷ್ಟ್ರೀಯರ ಅಬ್ಬರದ ನಡುವೆಯೂ ನಮ್ಮ ಜನರಲ್ಲಿ ಸ್ವದೇಶಿ ಪ್ರೇಮ ಇದೆಯೆಂದಾಯಿತು. ಇಂದು ಪತಂಜಲಿಯ ವೇಗ ಅದೆಷ್ಟು ಜೋರಾಗಿದೆಯೆಂದರೆ ದೇಶದ ಎಲ್ಲಾ ಜಿಲ್ಲೆ  ಗಳಲ್ಲೂ ಅದರ ಮಳಿಗೆಗಳಿವೆ. ಎಲ್ಲಾ ಗ್ರಾಮಗಳಲ್ಲೂ ಮಳಿಗೆಗಳು ಮುಟ್ಟಬೇಕೆಂಬ ಗುರಿಯನ್ನು ಪತಂಜಲಿ ಹಾಕಿಕೊಂಡಿದೆ. ದೇಶದ ಎಲ್ಲಾ ಗ್ರಾಮಗಳಲ್ಲೂ ಪತಂಜಲಿ ಮುಟ್ಟಲು ಸಾಧ್ಯ ಎಂಬುದು ಅವರ ವಿಶ್ವಾಸ. ಏಕೆಂದರೆ ಒಂದು ಕಾಲದಲ್ಲಿ ಯೋಗವನ್ನು ಊರೂರುಗಳಿಗೂ ಮುಟ್ಟಿಸಿದವರು ಈ ರಾಮದೇವರು.
ಬಾಬಾ ರಾಮದೇವರು ಹುಟ್ಟಿದ್ದು 1965ರಲ್ಲಿ. ಹರ್ಯಾಣದ ಒಂದು ಪುಟ್ಟ ಗ್ರಾಮದಲ್ಲಿ. ಪೂರ್ವಾಶ್ರಮದ ಹೆಸರು ರಾಮಕೃಷ್ಣ ಯಾದವ್. ಆನಂತರ ಸಂನ್ಯಾಸ ಸ್ವೀಕರಿಸಿ ಬಾಬಾ ರಾಮದೇವರಾದರು. ಆರಂಭದಲ್ಲಿ ಹರ್ಯಾಣದ ಜಿಂದ್ ಜಿಲ್ಲೆಯ  ಗುರುಕುಲದಲ್ಲಿ ಕಲಿಯುತ್ತಿದ್ದ ಗ್ರಾಮಸ್ಥರಿಗೆ ಯೋಗ ಹೇಳಿಕೊಡುತ್ತಿದ್ದರು. ನಂತರ ಹರಿದ್ವಾರಕ್ಕೆ ತೆರಳಿ ಭಾರತೀಯ ಶಾಸ್ತ್ರಗಳನ್ನು ಅಭ್ಯಸಿಸಿದರು. ರಾಮಕೃಷ್ಣ ಯಾದವ್ ಈಗ ಯೋಗಗುರುವಾದರು.

1995ರಲ್ಲಿ ದಿವ್ಯಯೋಗ ಮಂದಿರ ಟ್ರಸ್ಟನ್ನು ಸ್ಥಾಪಿಸಿ ಯೋಗದ ಪ್ರಚಾರಕ್ಕೆ ಮುಂದಾದರು. ಖಾಸಗಿ ವಾಹಿನಿಯೊಂದು ಅವರನ್ನು ಯೋಗ ಕಲಿಕೆಗೆ ಆಹ್ವಾನಿಸಿದ ನಂತರ ರಾಮ ದೇವ್, ಯೋಗ ಮತ್ತು ಆ ಚಾನಲ್ ಎಲ್ಲರ ಅದೃಷ್ಟವೂ  ಬದಲಾಯಿತು. ಜನ ರಾಮದೇವರ ಯೋಗವನ್ನು ಕಾಯತೊಡಗಿದರು. ಅದರ ಪ್ರಭಾವವನ್ನು ಪ್ರತ್ಯಕ್ಷ ಅನುಭವಿಸಿದರು. ಸೂರ್ಯನಮಸ್ಕಾರ ಜನಪ್ರೀಯವಾಯಿತು. ಅವರ ಮಾತುಗಳನ್ನು ಜನ ನಂಬಿದರು. ಅನಂತರ ರಾಮದೇವ್ ವಿದೇಶಗಳಿಗೂ ಯೋಗ ಕಲಿಸಿ ಬಂದರು. ಯೋಗದೊಂದಿಗೆ ಆಯುರ್ವೇದ, ಭಾರತೀಯ ನಂಬಿಕೆಗಳ ಪ್ರಚಾರವೂ ನಡೆಯತೊಡಗಿತು. ಆ ನಂಬಿಕೆಗಳ ಫಲವೇ ಪತಂಜಲಿಯ ಯಶಸ್ಸು. ಪ್ರತೀ ಉತ್ಪನ್ನಗಳ ಪ್ರಚಾರದಲ್ಲೂ ರಾಮದೇವ್ ಇದರ ಗುಣಮಟ್ಟಕ್ಕೆ ನಾನೇ ಗ್ಯಾರಂಟಿ ಎಂದರು, ಅಷ್ಟೇ. ಅದರ ವೇಗವನ್ನು ತಡೆಯಲು ಯಾವ ವಿದೇಶಿ ಕಂಪನಿಗಳಿಗೂ ಸಾಧ್ಯವಾಗಲಿಲ್ಲ.
80ರ ದಶಕದ ನಂತರ ಒಂದು ದೇಶಿ ಕಂಪನಿ ಹೀಗೆ ಬೆಳವಣಿಗೆ ಹೊಂದಿರಲಿಲ್ಲ. ಕೆಲವೊಂದು ಬೆಳೆಯುವ ಭರವಸೆಯನ್ನು ತೋರಿಸಿತ್ತಾದರೂ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಆದರೆ ಪತಂಜಲಿ ಹಾಗಲ್ಲ. ಅದು ಪ್ರತೀ ಮನೆಗೂ ಇಂದು ಮುಟ್ಟಿದೆ. ಪತಂಜಲಿಯ ಒಂದಾದರೂ ಉತ್ಪನ್ನಗಳಿಲ್ಲದ ಮನೆಯನ್ನು ಇಂದು ನಾವು ಕಾಣಲಾರೆವು.

ಮರೆಯುವ ಮುನ್ನ ಮತ್ತೊಂದು ಮಾತು ಇವತ್ತು ದೇಶವೇ ಕೊಂಡಾಡುತ್ತಿರುವ ಪ್ರಧಾನಿ ಮೋದಿಯವರಿಗೆ 500, 1000ನೋಟನ್ನು ನಿಷೇಧ ಮಾಡಿ ಎಂದು ಮೊದಲು ಐಡಿಯಾ ಕೊಟ್ಟಿದ್ದೇ ಬಾ ರಾಂ ದೇವ್. ಅವ್ರು ಸ್ವದೇಶಿ ಬಗ್ಗೆ ಮಾತನಾಡಲಾರಂಬಿಸಿದಾಗ ಬಹಳ ಜನ ಮೂಗು ಮುರಿಯುತ್ತಿದ್ದರು. ಜಾಲಿ (ನಕಲಿ)ನೋಟಿನ ಬಗ್ಗೆ ಧ್ವನಿ ಎತ್ತಿದಾಗ ಇವರಿಗೇನು ಗೊತ್ತು ಅಥಶಾಸ್ತ್ರ ಎಂದು ಅಣಕಿಸಿದವರಿದ್ದರು. ಹೀಗೆ ಗೇಲಿ ಮಾಡಿದವರ ಮುಂದೆಯೇ ಬೆಳೆಯಿತೊಂದು ಪತಂಜಲಿ ಮತ್ತು ಜಾಲಿ ನೋಟಿನ ಅಮೋಘ ಕಥೆ!

patanjali

Comments are closed.