Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!

ಪ್ರತೀ ವರ್ಷ ಎಪ್ರಿಲ್ – ಮೇ ನಲ್ಲಿ ಕೊಡಗಿನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿವೆ.
ರಾಜಾ ಅಜ್ಲಾನ್ ಮುಹಿಬುದ್ದೀನ್ ಷಾ ಇಬ್ನಿ ಅಲ್ಮರ್ಹುಂ ಸುಲ್ತಾನ್ ಯೂಸೆ- ಇಜ್ಜುದ್ದೀನ್ ಷಾ ಘಫರುಹು.ಹೆಸರೇ ಇಷ್ಟು ಉದ್ದ. ‘ಡಿ’ಯಿಂದ ‘ಡಿ’ ವರೆಗಿನ ಹಾಕಿ ಮೈದಾನದಂತೆ! ಅಲ್ಲದೆ ಆತ ರಾಜ ಬೇರೆ. ಮಲಯಾದ ಪೆರಾಕ್ ಪ್ರಾಂತವನ್ನು ಅವರ ವಂಶಸ್ಥರು ಆಳುತ್ತಿದರು. ಶ್ರೀಮಂತ ಕುಳ. ನಮ್ಮಲ್ಲಿ ಮೈಸೂರು, ಇಂಧೋರ್, ಗ್ವಾಲಿಯರ್, ಪುಣೆಗಳು ಹೇಗೋ ಮಲಯಾದಲ್ಲಿ ಪೆರಾಕ್ ಹಾಗೆ. ಪೆರಾಕಿನ ಸುಲ್ತಾನರು ನಮ್ಮ ಒಡೆಯರ ಹಾಗೆ ಜನಾನುರಾಗಿಗಳು. ಸುಲ್ತಾನನಾದರೂ ರಾಜಾ ಅಜ್ಲಾನ್ ಷಾನಿಗೆ ಹಲವು ಸಂವೇದನಾಶೀಲರಿಗಿರುವ ಹುಚ್ಚುಗಳಿದ್ದವು. ಆತ ಕವನ ಗೀಚುತ್ತಿದ್ದ, ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಬ್ರಿಟನ್ ಲೈಬ್ರರಿಯಲ್ಲಿ ಕಲಾಕೃತಿಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದ. ಮಲಯಾದಿಂದ ಬ್ಯಾರಿಸ್ಟರ್ ಓದಲು ಇಂಗ್ಲೆಂಡಿಗೆ ಕಳುಹಿಸಿದ್ದರೂ ಅಜ್ಲಾನ್ ಷಾ ಬ್ಯಾರಿಸ್ಟರ್ ಪದವಿಯ ಜೊತೆಗೆ ಹಾಕಿಯ ಹುಚ್ಚನ್ನು ಹಿಡಿಸಿಕೊಂಡು ಮಲಯಾಕ್ಕೆ ಬಂದ. ಮಲಯಾಕ್ಕೆ ಮರಳಿ ಬಂದವನೇ ಅಜ್ಲಾನ್ ಓರಗೆಯ ಹುಡುಗರನ್ನು ಕಟ್ಟಿಕೊಂಡು ಹಾಕಿ ಆಡತೊಡಗಿದ. ಅವರದ್ದೇ ತಂಡ ಕಟ್ಟಿದ. ಮಲಯಾದ್ವೀಪಗಳು ಯೂರೋಪಿಯನ್ ಕಾಲೊನಿಗಳಾಗಿದ್ದರೂ ಅಲ್ಲಿ ಕ್ರಿಕೇಟ್ ಹುಚ್ಚು ಹಿಡಿಯುವುದನ್ನು ರಾಜಾ ಅಜ್ಲಾನ್ ತಪ್ಪಿಸಿದ. ಆತನ ಹಾಕಿಯ ಹುಚ್ಚಿಗೆ ಬ್ರಿಟಿಷರೂ ನೀರೆರೆದರು.
ಕ್ರಮೇಣ ಜನರಿಗೂ ಹಾಕಿಯ ಹುಚ್ಚು ಹಿಡಿಯಿತು. ಹೀಗೆ ಸದಾ ಹಾಕಿಯ ಗುಂಗಲ್ಲಿರುತ್ತಿದ್ದ ರಾಜಾ ಅಜ್ಲಾನ್ ಷಾ ತನ್ನ ದೇಶದ ತಮಿಳು ಜನರಲ್ಲಿದ್ದ ಚಾಕಚಕ್ಯತೆ, ದೇಹದಾಢ್ಯತೆಗಳನ್ನು ಮೊಟ್ಟಮೊದಲು ಗುರುತ್ತಿಸಿ ಇವರಲ್ಲಿ ಹಾಕಿ ಆಡಬಲ್ಲ ದೈತ್ಯ ಪ್ರತಿಭೆಗಳಿವೆ ಎಂಬುದನ್ನು ಗಮನಿಸಿದ. ಮಲಯಾದಲ್ಲಿ ಕಾರ್ಮಿಕ ವರ್ಗವಾಗಿದ್ದ ತಮಿಳರನ್ನು ಕೀಳಾಗಿ ಕಾಣದೆ ಅಜ್ಲಾನ್ ಅವರಿಗೆ ಹಾಕಿ ತರಬೇತಿಯನ್ನು ನೀಡಲಾರಂಭಿಸಿದ. ಅವರನ್ನು ಉತ್ತಮ ಆಟಗಾರರನ್ನಾಗಿ ಮಾರ್ಪಡಿಸಿದ. ಮಲೇಷ್ಯಾ ತಂಡದಲ್ಲಿ ಆಡಿದ ಹರ್ನಾಲಾಲ್ ಸಿಂಗ್, ಕೀವನ್ ರಾಜ್, ಷಣ್ಮುಗನಾಥನ್, ಲೋಗನ್ ರಾಜ್, ಯೋಗೇಶ್ವರನ್, ಕೆವಿಂದರ್ ಸಿಂಗ್, ಹರ್ವಿಂದರ್ ಸಿಂಗ್ ಮೊದಲಾದ ಹೆಸರುಗಳು ಕಾಣುವುದರ ಹಿಂದೆ ಮತ್ತು ದೂರದ ಮಲೇಷಿಯಾದಲ್ಲೂ ಸಿಂಗ್ ಸಭಾ ಎಂಬ ಹಾಕಿ ಕ್ಲಬ್ ಹುಟ್ಟುವಲ್ಲಿ ಈ ಅಜ್ಲಾನ್ ಷಾನ ಹಾಕಿಪ್ರೇಮವಿದೆ. ಜೊತೆಗೆ ರಾಜಾ ಅಜ್ಲಾನ್ ಷಾ ಮಲಯಾದಲ್ಲಿ ಹಲವು ಟೂರ್ನಾ ಮೆಂಟುಗಳನ್ನು ಏರ್ಪಡಿಸಿ ಹಾಕಿಯನ್ನು ಜನಪ್ರಿಯ ಗೊಳಿಸಿದ. ಪರಿಣಾಮ ಮಲಯಾ ಹಾಕಿಯ ಕೋಟೆಯಾಗಿ ಬೆಳೆಯತೊಡಗಿತು. ಏಷ್ಯನ್ ಹಾಕಿಯ ಗರ್ಭಗುಡಿ ಯಾಯಿತು. ಪ್ರತಿವರ್ಷ ನಡೆಯುವ ಅಜ್ಲಾನ್ ಷಾ ಹಾಕಿ ಟೂರ್ನಿ ಜಗತ್ತಿನ ಪ್ರತಿಷ್ಠಿತ ಹಾಕಿ ಟೂರ್ನಿಯಾಯಿತು.
ಆತನನ್ನು ಏಷ್ಯಾದ ಹಾಕಿ ಪಿತಾಮಹನೆಂದು ಜಗತ್ತು ಕರೆಯಿತು.ಟ್ರೂಲಿ ಏಷ್ಯಾ ಎಂಬ ಜಾಹೀರಾತನ್ನಿಟ್ಟುಕೊಂಡು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಡೀ ವಿಶ್ವದ ಗಮನವನ್ನು ಸೆಳೆದ ಮಲೇಷಿಯಾ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಿಂದ ಟ್ರೂಲಿ ಏಷ್ಯಾ’ ಹೆಸರನ್ನು ಕಳೆದ 25 ವರ್ಷಗಳಿಂದ ಗಟ್ಟಿಮಾಡಿಕೊಂಡಿದೆ. ಇದಕ್ಕೆ ಕಾರಣ ಕೇವಲ ಒಬ್ಬ ವ್ಯಕ್ತಿ ಎನ್ನುವುದು ವಿಶೇಷ. ಆತ ಇದೇ ಸುಲ್ತಾನ ಅಜ್ಲಾನ್ ಷಾ.ನಮ್ಮ ಕರ್ನಾಟಕದಲ್ಲೂ ಹಾಕಿ ಎಂದಾಗ ಒಬ್ಬ ವ್ಯಕ್ತಿ ಮಲಯಾದ ರಾಜಾ ಅಜ್ಲಾನ್ ಷಾನಂತೆ ಗಮನ ಸೆಳೆಯುತ್ತಾರೆ. ಅವರಂತೆ ಇವರೂ ಶ್ರೀಮಂತರು, ಮಾಡುತ್ತಿದ್ದ ಕೆಲಸವೇ ಬೇರೆ. ಬೆರೆಯುತ್ತಿದ್ದ ಜನಗಳೇ ಬೇರೆ. ಆದರೂ ಇವರಿಗೆ ಹಾಕಿಯ ಹುಚ್ಚು ಹಿಡಿಯಿತು. 25 ವರ್ಷ ಪೂರೈಸಿ ಇತಿಹಾಸ ನಿರ್ಮಿಸಿದ ಅಜ್ಲಾನ್ ಷಾ ಟೂರ್ನಿಯಂತೆ ಇವರೂ ಒಂದು ಟೂರ್ನಿಯನ್ನು ಪ್ರಾರಂಭಿಸಿದರು. ಆ ಟೂರ್ನಿಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನವರೆಗೆ ಕೊಂಡೊಯ್ದರು.ಅವರು ಕೊಡವ ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪನವರು.ಪಾಂಡಂಡ ಕುಟ್ಟಪ್ಪನವರು ನಿವೃತ್ತ ಬ್ಯಾಂಕ್ ಅಧಿಕಾರಿಗಳು. ಕೊಡಗಿನ ಹಾಕಿಯ ಶಾಶ್ವತ ಅಸ್ತಿತ್ವಕ್ಕಾಗಿ ‘ಕೊಡವ ಹಾಕಿ ಅಕಾಡೆಮಿ’ಯನ್ನು ಸ್ಥಾಪಿಸಿದವರು. ರಾಜಾ ಅಜ್ಲಾನ್ ಷಾನಂತೆ ಹಾಕಿ ಬೆಳೆಯಬೇಕು ಎಂದು ಹುಚ್ಚುಹತ್ತಿಸಿಕೊಂಡವರು. ತಮ್ಮ ಕೈಯಿಂದ ಹಣ ಹಾಕಿ 60 ತಂಡಗಳ ಹಾಕಿ ಟೂರ್ನಿಯನ್ನು ನಡೆಸಿದವರು. 1997ರಲ್ಲಿ ಕುಟ್ಟಪ್ಪನವರು ಮೊದಲಬಾರಿಗೆ ಕೊಡಗಿನಲ್ಲಿ ‘ಪಾಂಡಂಡ ಕಪ್’ ಹಾಕಿ ಹಬ್ಬವನ್ನು ಆರಂಭಿಸಿದರು. ಅವರ ಭರವಸೆಗಳು ಹುಸಿಯಾಗಲಿಲ್ಲ.
ಕಾಲದಿಂದ ಕಾಲಕ್ಕೆ ತಂಡಗಳ ಸಂಖ್ಯೆ ಹೆಚ್ಚಾಗಿ 285 ತಂಡಗಳವರೆಗೂ ಮುಟ್ಟಿತು ಮತ್ತು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲೂ ಅದು ದಾಖಲಾಯಿತು. ಇದೀಗ ಕುಟ್ಟಪ್ಪನವರು ಪ್ರಾರಂಭಿಸಿದ ಹಾಕಿ ಹಬ್ಬ 20 ವರ್ಷಗಳನ್ನು ಪೂರೈಸಿದೆ. ಪ್ರತೀ ವರ್ಷ ಒಂದೊಂದು ಕುಟುಂಬಸ್ಥರು ಅತಿಥ್ಯಕ್ಕೆ ಮುಗಿಬೀಳತೊಡಗಿದ್ದಾರೆ. ಪಂದ್ಯಾವಳಿಗಳಿಗೆ ಉತ್ಸವದ ಕಳೆ ತರಲೂ ಕುಟ್ಟಪ್ಪನವರು ನಿರ್ಧರಿಸಿದರು.ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟವಾಡಿದವರೂ ತಮ್ಮ ಕುಟುಂಬವನ್ನು ಪ್ರತಿನಿಧಿಸಿ ಕ್ರೀಡಾಕೂಟವನ್ನು ರಂಗೇರಿಸುತ್ತಿದ್ದಾರೆ. ಹೀಗೆ ನೋಡನೋಡುತ್ತಲೇ ಹಾಕಿ ವೈಭವವನ್ನು ಕಾಣತೊಡಗಿತು. ಪ್ರತೀ ವರ್ಷ ಎಪ್ರಿಲ್ – ಮೇ ನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿವೆ. ಬದಲಾಗುವ ನಿಯಮಗಳು, ಶಿಸ್ತುಗಳು, ಮಾಧ್ಯಮಗಳ ಹೊರತಾಗಿಯೂ ಆಟಗಾರನ ಅರಿವಿಗೆ ಬರತೊಡಗಿದೆ.
ಕ್ರೀಡೆಯೊಂದು ಏಲಜ್ಞಬದಲಾವಣೆ ತರಬಹುದು ಎಂಬುದಕ್ಕೆ ಅಜ್ಲಾನ್ ಷಾ ಕಪ್ ಮತ್ತು ಕೊಡವ ಹಾಕಿ ಉತ್ಸವದಷ್ಟು ಯೋಗ್ಯ ಉದಾಹರಣೆ ಬಹುಶಃ ವಿಶ್ವದಲ್ಲಿ ಬೇರೆ ಇರಲಿಕ್ಕಿಲ್ಲ.ಏಕೆಂದರೆ ಅಜ್ಲಾನ್ ಷಾ ಟೂರ್ನಿಯಿಂದ ಮಲೇಷಿಯಾ ಪ್ರವಾಸೋದ್ಯಮದ ಹೊರತಾಗಿಯೂ ಹಾಕಿಯ ಕಾರಣಕ್ಕೆ truely asiaಆಗುತ್ತದೆ. ಹಾಗೆಯೇ ಕೊಡವ ಹಾಕಿಹಬ್ಬದಿಂದ ಕರ್ನಾಟಕ the nursery of Indian hockey ಆಗುತ್ತದೆ. ಹೇಗೆ ಮಲೇಷಿಯಾದಲ್ಲಿ ರಾಜಾ ಅಜ್ಲಾನ್ ಷಾ ಹಾಕಿ ಯೂರೋಪ್ ಕೇಂದ್ರಿತವಾಗುವುದನ್ನು ತಪ್ಪಿಸಿ ಏಷ್ಯನ್ ಹಾಕಿಯನ್ನು ಜನಪ್ರಿಯಗೊಳಿಸಿದರೋ ಹಾಗೆ ಪಾಂಡಂಡ ಕುಟ್ಟಪ್ಪನವರು ಹಾಕಿ ಹಬ್ಬದಿಂದ ಕರ್ನಾಟಕದ ಹಾಕಿಯನ್ನು ಜನಪ್ರಿಯಗೊಳಿಸಿದ್ದಾರೆ.ಕೊಡಗಿನ ಹಾಕಿ ಈ ಪಟ್ಟಕ್ಕೆ ಬಂದ ಕಥೆ ಮತ್ತು ಪಾಂಡಂಡ ಕುಟ್ಟಪ್ಪನವರ ಸಾಧನೆಯ ಹಿಂದೆ ರೋಮಾಂಚನಕಾರಿ ಇತಿಹಾಸವಿದೆ.ಬ್ರಿಟೀಷರ ಕಾಲದ ಕೊಡಗಿಗೆ ಹೇಗೋ ಹಾಕಿಯ ಹುಚ್ಚು ಹಿಡಿದಿತ್ತು. ಭಾರತೀಯ ಹಾಕಿಗೆ ಅಮೂಲ್ಯ ರತ್ನಗಳನ್ನು ಕೊಡಗು ಕೊಡುತ್ತಲೂ ಇತ್ತು. ಹಿಂದಿನ ಮಹಾಮಹಾ ಆಟಗಾರರಾದ ಮಾಳೆಯಂಡ ಮುತ್ತಪ್ಪನವರು, ಪೈಕೇರ ಕಾಳಯ್ಯನವರು, ಮಹಾ ತಡೆಗೋಡೆ ಅಂಜಪರವಂಡ ಸುಬ್ಬಯ್ಯನವರು, ಹಾಕಿ ಮಾಂತ್ರಿಕ ಭಾರತ ತಂಡದ ಯಶಸ್ವೀ ನಾಯಕ ಗೋವಿಂದನವರು, ಮಾಜಿ ಕ್ಯಾಪ್ಟನ್ ಮನೆಯಪಂಡ ಸೋಮಯ್ಯನವರು, ಮೊಳ್ಳೆರ ಗಣೇಶ್‌ರವರು, ಅರ್ಜುನ್ ಹಾಲಪ್ಪನವರು, ಒಲಂಪಿಯನ್ ಚೆಪ್ಪುಡಿರ ಪೂಣಚ್ಚನವರು, ಅಂತಾರಾಷ್ಟ್ರೀಯ ತಂಡವೊಂದರ ಕೋಚ್ ಆಗಿ ಮಿಂಚಿದ್ದ ಮತ್ತು ಭಾರತ ತಂಡದ ಬೆನ್ನೆಲುಬು ಎಂದೇ ಖ್ಯಾತರಾಗಿದ್ದ ಕೂತಂಡ ಪೂಣಚ್ಚನವರು, ಭಾರತ ತಂಡದ ಅತ್ಯುತ್ತಮ ಪೆನಾಲ್ಟಿ ಕಾರ್ನರ್ ಸ್ಪೆಶಲಿಸ್ಟ್ ಆಗಿದ್ದ ಬಲ್ಲಚಂಡ ಲೆನ್ ಅಯ್ಯಪ್ಪನವರು, ಸಿಡಿಗುಂಡಿನಂತೆ ಚೆಂಡನ್ನು ಹಿಟ್ ಮಾಡುವ ಪಳಂಗಂಡ ಅಮರ್ ಅಯ್ಯಮ್ಮನವರು, ಸ್ಕೋರ್ ಬೋರ್ಡಿನಲ್ಲಿ ಕಡ್ಡಾಯವಾಗಿ ಕಾಣಿಸುವ ರಘುನಾಥ್ ಮತ್ತು ಸುನಿಲ್ರವರಿಂದ ಹಿಡಿದು ಭರವಸೆಯ ಹೊಸ ಆಟಗಾರರಾದ ನಿಕ್ಕಿನ್ ತಿಮ್ಮಯ್ಯ, ಕಿರಿ ವಯಸ್ಸ ಭಾರತ ತಂಡ ಪ್ರತಿನಿಧಿಸಿದ ಆಲೇಮಾಡ ಚೀಯಣ್ಣ, ಸಣ್ಣುವಂಡ ಉತ್ತಪ್ಪ…
ಹೀಗೆ ಕೊಡಗಿನ ಹಾಕಿರತ್ನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಇವಿಷ್ಟೇ ಅಲ್ಲ…ದೇಶದ ಪ್ರಮುಖ ಹಾಕಿ ತಂಡಗಳಾದ ಸರ್ವಿಸಸ್, ಎಂಇಜಿ, ಎಎಸಿ, ರೈಲ್ವೆ, ಏರ್ ಇಂಡಿಯಾ, ಕೆನರಾ ಬ್ಯಾಂಕ್, ಎಸ್.ಬಿ.ಐ, ಹೆಚ್.ಎ.ಎಲ್., ಟಾಟಾ ತಂಡಗಳಲ್ಲಿ ಕೂಡ ಕೊಡಗಿನ ಆಟಗಾರದ್ದೇ ಪಾರುಪತ್ಯ. ದೇಶದಲ್ಲಿ ಯಾವುದೇ ಹಾಕಿ ತಂಡವಿರಲಿ ಅಲ್ಲಿ ಒಂದಾದರೂ ಕೊಡಗಿನ ಹೆಸರು ಇಲ್ಲದಿದ್ದರೆ ಕೇಳಿ. ಇವಲ್ಲದೆ ರಾಜ್ಯದ ಎಲ್ಲ ಹಾಕಿ ಕ್ಲಬ್ಬುಗಳಿರಲಿ ಒಂದಾದರೂ ಅಪ್ಪಣ್ಣ, ಬೋಪಣ್ಣ ಹೆಸರುಗಳು ಇದ್ದೇ ಇರುತ್ತವೆ. ಕರ್ನಾಟಕದ ಯೂನಿವರ್ಸಿಟಿ ತಂಡಗಳಲ್ಲಿ ಒಮ್ಮೊಮ್ಮೆ ಸಂಪೂರ್ಣ ಕೊಡಗಿನ ಆಟಗಾರರೇ ಇರುವ ವಿಚಿತ್ರವೂ ಇದೆ. ಇದಕ್ಕೆ ಕಾರಣವೂ ಸರಳವಾಗಿದೆ. ಚೀನಾದಲ್ಲಿ ಪುಟ್ಟಮಕ್ಕಳನ್ನು ಒಲಂಪಿಕ್‌ಗೆ ತಯಾರು ಮಾಡುವಂತೆ ನಮ್ಮ ಕೊಡಗು ಹಾಕಿ ಆಟಗಾರರನ್ನು ತಯಾರು ಮಾಡುತ್ತದೆ. ಇಲ್ಲಿ ಪ್ರೈಮರಿಗೆ ಹೋಗುವ ಬಾಲಕನ ಕೈಯಲ್ಲೂ ಹಾಕಿ ಸ್ಟಿಕ್, ಶಾಲೆಗೆ ರಜೆ ಬಂತೆಂದರೆ ಹಾಕಿ ಶಿಬಿರ, ಊರ ಮೈದಾನದಲ್ಲಿ ಸಂಜೆ ಹಾಕಿ ಪಂದ್ಯ! ಸರ್ವವೂ ಇಲ್ಲಿ ಹಾಕಿಮಯ. ಏಕೆಂದರೆ ಇಲ್ಲಿ ಹಾಕಿ ಎಂದರೆ ಎಲ್ಲವೂ. ಜೀವನದಲ್ಲಿ ಒಮ್ಮೆಯಾದರೂ ಹಾಕಿ ಆಡಲಾರದವನನ್ನು ನೀವು ಕೊಡಗಲ್ಲಿ ಕಾಣಲಾರಿರಿ. ಅಷ್ಟರಮಟ್ಟಿಗೆ ಹಾಕಿ ಇಲ್ಲಿನ ಜನರ ಉಸಿರು. ಹೇಗೆ ಕೊಡಗಿನ ಜನರು ತೋಟದ ಕಾಫಿಗೆ ಪ್ರಾಮುಖ್ಯತೆ ಕೊಡುತ್ತಾರೋ ಗ್ರೌಂಡಿನ ಹಾಕಿಗೂ ಅಷ್ಟೇ ಪ್ರಾಮುಖ್ಯವನ್ನು ಕೊಡುತ್ತಾರೆ. ಬ್ರಿಟೀಷರು ಪರಿಚಯಿಸಿದ ಕಾಫಿ ಮತ್ತು ಹಾಕಿ ಕೊಡಗಿನಲ್ಲಿ ಸಮ್ರೃದ್ಧ -ಸಲನ್ನೇ ಬಿಟ್ಟಿತು. ಕಾಲಕಾಲಕ್ಕೆ ಕಾಫಿಯ ಕಾಳಜಿ ಮಾಡುವಂತೆ ಇಲ್ಲಿನ ಜನ ಹಾಕಿಯ ಕಾಳಜಿಯನ್ನು ಮಾಡಲು ಮರೆಯಲಿಲ್ಲ. ಇಂದಿಗೂ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಒಂದಾದರೂ ಹಾಕಿ ಕ್ಲಬ್ಬುಗಳಿರುವುದನ್ನು ನೋಡಬಹುದು.
ಮಡಿಕೇರಿಯ ಬ್ಲೂಸ್ಟಾರ್, ಸೋಮವಾರಪೇಟೆಯ ಡಾಲಿನ್ ಮತ್ತು ವಾಂಡರರ್ಸ್ , ವೀರಾಜಪೇಟೆಯ ಟವರ್ಸ್  , ನಾಪೋಕ್ಲುವಿನ ಶಿವಾಜಿ, ಗೋಣಿಕೊಪ್ಪದ ಬಿಬಿಸಿ, ಅಮ್ಮತ್ತಿಯ ಸ್ಪೋರ್ಟ್ಸ ಕ್ಲಬ್ ಹೀಗೆ ದೇಶದ ಅತ್ಯುತ್ತಮ ಹಾಕಿಕ್ಲಬ್ಬುಗಳು ಕೊಡಗಿನಲ್ಲಿವೆ. ಹೇಗೆ ಕಾಫಿ ಇಲ್ಲಿನ ಜನರ ಅವಿಭಾಜ್ಯ ಅಂಗವೋ ಹಾಕಿಯೂ ಅವರ ಜೀವನದ ಅವಿಭಾಜ್ಯ ಅಂಗ. ಇಲ್ಲಿ ಮನೆಗೊಂದು ಕೋವಿ ಇರುವಂತೆ ಮನೆಗೆ ಕನಿಷ್ಠ ಒಂದಾದರೂ ಹಾಕಿ ಸ್ಟಿಕ್ ಇದ್ದೇ ಇರುತ್ತದೆ. ಇರಬೇಕೆಂಬ ನಂಬಿಕೆಯೂ ಕೊಡವರಲ್ಲಿದೆ. ಅದಿಲ್ಲದ ಕೊಡವರ ಮನೆಗಳನ್ನು ನೀವು ಕಾಣಲಾರಿರಿ.ಹಾಕಿಯನ್ನು ಕೊಡಗಿನ ಜನ ಆರಾಧಿಸಿಕೊಂಡು ಬಂದ ಮತ್ತು ಅದನ್ನು ತಮ್ಮ ಜನಜೀವನದಲ್ಲಿ ಅಳವಡಿಸಿಕೊಂಡು ಬಂದ ಪ್ರೇರಣಾದಾಯಿ ಉದಾಹರಣೆಗಳೆಷ್ಟೋ ಇಲ್ಲಿ ಸಿಗುತ್ತವೆ. ಕೊಡಗಿನಲ್ಲಿ ಹಾಕಿ ಜನಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾದ ಸಂಗತಿಯೆಂದರೆ, ಹಾಕಿಯನ್ನು ಅರ್ಥೈಸಿಕೊಳ್ಳದೆ ಕೊಡಗನ್ನು ಅರ್ಥೈಸಿಕೊಳ್ಳಲಾಗದು ಎಂಬಷ್ಟು. ಕೊಡಗಿನ ಪಲ್ಸ್ ಅನ್ನು ತಿಳಿಯಬೇಕೆಂದರೆ ಕಾಫಿಯಂತೆ ಹಾಕಿಯನ್ನೂ ಅರಿಯಬೇಕು. ಕೊಡಗಿನ ಇತಿಹಾಸದ ಹಿಂದೆ ಕಂಡೂ ಕಾಣದಂತೆ ಈ ಹಾಕಿಯ ಕಥೆ ಬೆರೆತುಕೊಂಡಿದೆ. ಒಂದು ಪುಟ್ಟ ಜಿಲ್ಲೆ ಹಾಕಿಯನ್ನು ಈ ಪರಿಯಲ್ಲಿ ಹಚ್ಚಿಕೊಳ್ಳಬಹುದೇ ಎಂದು ಆಶ್ಚರ್ಯವೂ ಆಗುತ್ತದೆ. ಏಕೆಂದರೆ ಕೊಡಗು ಭಾರತೀಯ ಹಾಕಿಗೆ ತಮ್ಮಲ್ಲಿಂದ ಮಹಾನ್ ಆಟಗಾರರನ್ನು ಕೊಟ್ಟಿತು. ಅದೂ ಬಹು ದೀರ್ಘ ಸಮಯದವರೆಗೆ.
ಫಿಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರು ಮೊದಲು ಹಾಕಿಯಿಂದಲೇ ಬ್ರಿಟೀಷ್ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದರು ಎಂಬುದು ಇತಿಹಾಸದ ಒಂದು ಮಹತ್ವದ ಸಂಗತಿ. ಕಾಲದ ಪ್ರವಾಹದಲ್ಲಿ ಎಲ್ಲವೂ ಮಗ್ಗುಲು ಬದಲಿಸಿಕೊಂಡರೂ ಕೊಡಗಿನಲ್ಲಿ ಹಾಕಿ ಬದಲಾಗಲೇ ಇಲ್ಲ.1861ರಲ್ಲಿ ಯುರೋಪಿನಲ್ಲಿ ಪ್ರಾರಂಭವಾದ ಹಾಕಿಯನ್ನು ಬ್ರಿಟೀಷರು ತಮ್ಮ ವಸಹಾತುಗಳಿಗೆ ಕೊಂಡೊಯ್ದರು. ಆರಂಭದಲ್ಲಿ ಕಲ್ಕತ್ತಾ, ಪಂಜಾಬ್, ಮುಂಬೈಗಳಲ್ಲಿ ಹಾಕಿ ಕ್ಲಬ್ಬುಗಳು ಶುರುವಾದವು. ಆದರೆ ಅ ಹಾಕಿ ಕೇವಲ ಕ್ಲಬ್ಬುಗಳಿಗೆ ಮಾತ್ರ ಸೀಮಿತವಾಯಿತು. ಆದರೆ ಕೊಡಗು ಮತ್ತು ಪಂಜಾಬು ಹಾಕಿಯನ್ನು ಮಗುವಿನಂತೆ ತಬ್ಬಿಕೊಂಡಿತು. ಬ್ರಿಟಿಷರ ನೆಚ್ಚಿನ ಟೈನಿ ಮಾಡಲ್ ಸ್ಟೇಟ್ ಆಗಿದ್ದ ಕೊಡಗಿನ ಮಡಿಕೇರಿಗೆ ಹಾಕಿ 1885-86ರ ಹೊತ್ತಿನಲ್ಲಿ ಹಾಕಿ ಕಾಲಿಟ್ಟಿತು. ಯುರೋಪಿನಿಂದ ತರಿಸಿದ ಚೆಂಡು ಮತ್ತು ಸ್ಟಿಕ್‌ಗಳು ಇಲ್ಲಿ ಈ ಪರಿಯಲ್ಲಿ ಮೋಡಿ ಮಾಡುತ್ತವೆ ಎಂದು ಯಾವ ಬ್ರಿಟೀಷ್ ಅಧಿಕಾರಿಯೂ ಅಂದುಕೊಂಡಿರಲಿಲ್ಲ. ನೋಡ ನೋಡುತ್ತಲೇ ಹಾಕಿಯ ಕಲರವ ಕೊಡಗಿಗೆ ಪಸರಿಸಿತು. ದನ ಮೇಸುವ ಹುಡುಗರೂ ಹಾಕಿ ಆಡತೊಡಗಿದರು. ಮರದ ಕೊಂಬೆಗಳೇ ಹಾಕಿ ಸ್ಟಿಕ್ಕುಗಳಾದವು. ಕಾಡು ಕಾಯಿಗಳೇ ಚೆಂಡುಗಳಾದವು. ಇನ್ನೊಂದೆಡೆ ಕೊಡವರ ಮಾರ್ಷಲ್ ಗುಣವನ್ನು ಅರಿತಿದ್ದ ಬ್ರಿಟಿಷರು ಸೈನ್ಯದಲ್ಲಿ ಕೊಡವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸತೊಡಗಿದರು. ಹಾಕಿಯ ಶಿಸ್ತು, ಹೊಸ ನಿಯಮಗಳು ಊರೊಳಗೂ ಬಂದವು.
ಬ್ರಿಟಿಷ್ ಅಧಿಕಾರಿಗಳೂ ಕೊಡವರೊಡನೆ ಹಾಕಿಯ ಹುಚ್ಚನ್ನು ಹಿಡಿಸಿಕೊಂಡರು. ಅದಕ್ಕೆ ಉದಾಹರಣೆ ಮಡಿಕೇರಿಯ ಖ್ಯಾತ ಮ್ಯಾನ್ಸ್ ಕಾಂಪೌಂಡ್’ ಎಂಬ ಹಾಕಿ ಮೈದಾನ. ಬ್ರಿಟಿಷ್ ಕಾಫಿ ಬೆಳೆಗಾರನಾಗಿದ್ದ ಮ್ಯಾನ್ ಎಂಬಾತ ಹಾಕಿಯ ಹುಚ್ಚಿನಿಂದ ಎಕರೆಗಟ್ಟಲೆ ಕಾಫಿ ತೋಟವನ್ನು ಬೋಳು ಮಾಡಿ ಮೈದಾನವನ್ನೇ ಮಾಡಿಬಿಟ್ಟಿದ್ದ! ಅದೇ ಇಂದಿನ ಮ್ಯಾನ್ಸ್ ಕಾಂಪೌಂಡ್. ಈ ಮ್ಯಾನ್ಸ್ ಕಾಂಪೌಂಡ್ ಇಂದು ನೂರಾರು ಹಾಕಿಯ ಪ್ರತಿಭೆಗಳನ್ನು ತಯಾರು ಮಾಡುತ್ತಿದೆ. ಇಂದು ಮ್ಯಾನ್ ಮತ್ತು ಆತನ ಕುಟುಂಬ ಮಡಿಕೇರಿಯಲ್ಲಿ ಇಲ್ಲದಿರಬಹುದು. ಆದರೆ ಆತನ ಹೆಸರನ್ನು ಹೊತ್ತ ಹಾಕಿ ಮೈದಾನ ಹಾಕಿಯ ತರಬೇತಿ ತಾಣವಾಗಿ ಆತನ ಆಶಯವನ್ನು ಇಂದಿಗೂ ಈಡೇರಿಸುತ್ತಿದೆ. ಬ್ರಿಟಿಷ್ ಕಾಲದಲ್ಲಿ ಪ್ರತೀ ಆದಿತ್ಯವಾರ ಈ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿತ್ತು. ದಕ್ಷಿಣ ಕೊಡಗಿನಿಂದಲೂ ಕೊಡವರನ್ನು ಕರೆಸಿಕೊಂಡು ಬ್ರಿಟಿಷರು ತಂಡಗಳನ್ನು ಕಟ್ಟುತ್ತಿದ್ದರು. ಹಿರಿಯ ಅಧಿಕಾರಿಗಳ ಪ್ರವಾಸ, ಕೆಲವರ ಸ್ಮರಣಾರ್ಥ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಆ ಹೊತ್ತಿಗೆ ವೃತ್ತಿಪರ ಹಾಕಿ ಕೊಡಗಿಗೆ ಕಾಲಿಟ್ಟಾಗಿತ್ತು. 19ನೇ ಶತಮಾನದ ಕೊನೆಯ ಭಾಗದಲ್ಲಿ ಪಟ್ಟಡ ಸೋಮಯ್ಯ ಎಂಬ ಮಹಾನ್ ಆಟಗಾರರೊಬ್ಬರು ಎತ್ತಿನ ಗಾಡಿಯಲ್ಲಿ ತಂಡವನ್ನು ಕಟ್ಟಿಕೊಂಡು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಹಾಕಿ ಆಡಲು ಹೋಗುತ್ತಿದ್ದರು! ಕೊಡಗಿನ ಜನರ ಹಾಕಿಯ ಮೇಲಿನ ನಿಷ್ಠೆ, ಬದ್ಧತೆ, ಆಸಕ್ತಿ ಅಂಥದ್ದು. ಅದೆಂದೂ ಕೊನೆಯಾಗಲಿಲ್ಲ. ಬದಲಿಗೆ ಅದು ಹೆಚ್ಚೇ ಆಯಿತು. ಕ್ರಮೇಣ ಕೊಡಗಿನ ಅಲ್ಲಲ್ಲಿ ಹಾಕಿ ಕ್ಲಬ್ಬುಗಳು ಆರಂಭವಾದವು.
60ರ ದಶಕದಲ್ಲಿ ಕೊಡಗಿನ ಪ್ರೈಮರಿ ಶಾಲಾ ಮೇಷ್ಟ್ರುಗಳೇ ಒಂದು ತಂಡಕಟ್ಟಿಕೊಂಡು ದೇಶದ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರು. ಹಲವು ಅಂತಾರಾಷ್ಟ್ರೀಯ ತಂಡಗಳೊಟ್ಟಿಗೆ ಆಡಿದ ಶ್ರೇಯಸ್ಸು ಈ ಕೂರ್ಗ್ ಟೀಚರ್ಸ್ ಟೀಮ್’ನದ್ದು. ಒಮ್ಮೆ ಮದರಾಸಿನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಇಪ್ಪತ್ತು ಗೋಲುಗಳನ್ನು ಭಾರಿಸಿದ ದಾಖಲೆಯನ್ನೂ ಈ ಸ್ಥಳೀಯ ತಂಡ ಮಾಡಿತ್ತು! ಈ ತಂಡದ ಕೆಲವು ಸದಸ್ಯರು ಅನಂತರ ಭಾರತ ತಂಡವನ್ನೂ ಪ್ರತಿನಿಧಿಸಿದ್ದರು. ಇಲ್ಲಿನ ಹಾಕಿಯ ಹುಚ್ಚಿಗೆ ಇದಕ್ಕಿಂತ ಇನ್ನೇನು ಉದಾಹರಣೆ ತಾನೇ ಬೇಕು? ಇಲ್ಲಿ ಹಾಕಿ ಎಂದರೆ ಇಂಥ ಹಲವು ಅದ್ಭುತಗಳ ಕಂತೆ. ಹಾಕಿ ಎಂದರೆ ಸಾಕ್ಷಾತ್ ಸಮರ. ಹಾಕಿ ಎಂದರೆ ಉಳಿದೆಲ್ಲದರ ಮೈಮರೆವು. ಕೊಡಗಿನ ಹಾಕಿಯ ಇಂಥ ಗುಣಗಳಿಗೆ ಆಧುನಿಕ ಕಾಲದಲ್ಲಿ ನೀರೆರೆದು ಪೋಷಿಸಿದವರು ಅದೇ ಪಾಂಡಂಡ ಕುಟ್ಟಪ್ಪನವರು.ಅಂಥ ಹಾಕಿ ಹಬ್ಬಕ್ಕೆ ಇದೀಗ 20 ನೇ ವರ್ಷ. ಅಂತಾರಾಷ್ಟ್ರೀಯ ಗುಣಮಟ್ಟದ ಅಂಪೈರುಗಳು. ಸುಸಜ್ಜಿತ ಎರಡು ಮೈದಾನಗಳು. ಶಿಸ್ತು, ಸಮಯಪಾಲನೆ. ಪ್ರತೀ ತಂಡಕ್ಕೂ ಮ್ಯಾನೇಜರು ಮತ್ತು ಕೋಚ್‌ಗಳು, ಉತ್ಸಾಹ, ಬೆಂಬಲಿಗರು. ಕೇಕೆ, ನಗು, ಉಸ. ಲಿಂಗಭೇದವಿಲ್ಲ, ವಯಸ್ಸಿನ ಭೇದವಿಲ್ಲ, ವೃತ್ತಿಭೇದವಿಲ್ಲ. ಕೆಲವು ತಂಡಗಳಲ್ಲಿ ನ್ಯೂಟ್ರಿಶನ್ ಮತ್ತು ವೈದ್ಯರುಗಳು!
ಎಪ್ಪತ್ತಕೂ ಹೆಚ್ಚಿನ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರು. ಆಡಲೆಂದೇ ಮಿಲಿಟರಿಯಿಂದ ಬಂದಿರುವ ಯೋಧರು. ದೊಡ್ಡವರೊಂದಿಗೆ ಮೈದಾನಕ್ಕಿಳಿದ ಪುಟ್ಟಪುಟ್ಟ ಮಕ್ಕಳು, ಅಣ್ಣಂದಿರೊಡಗೂಡಿ ಆಡುವ ತಂಗಿಯರು, ಗಂಡ ಹೆಂಡಿರಿರುವ ತಂಡಗಳು. ಇಂಥ ನೂರಾರು ಕೌತುಕಗಳಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನ ಸಾಕ್ಷಿಯಾಗುತ್ತಿದೆ. ಎ ಟಿವಿಯಲ್ಲಿ ಕಂಡಿದ್ದ ಆಟಗಾರನ ಆಟವನ್ನು ಜನ ಪ್ರತ್ಯಕ್ಷ ನೋಡುವಂತಾಗಿದೆ.ಅತ್ತ ಮಲಯಾದಲ್ಲಿ ವಿಶ್ವಕಪ್‌ನಷ್ಟೇ ಪ್ರತಿಷ್ಠಿತವೆನಿಸುವ ಅಜ್ಲಾನ್ ಷಾ ಟೂರ್ನಿ ಮುಗಿದಿದೆ. ಇತ್ತ ಕೊಡಗಿನಲ್ಲಿ ಅಜ್ಲಾನ್ ಷಾ ಟೂರ್ನಿಗಿಂತಲೂ ದೊಡ್ಡ ಶಾಂತೇಯಂಡ ಕಪ್’ ಹಾಕಿ ಉತ್ಸವ ನಡೆಯುತ್ತಿದೆ. ಎರಡೂ ಪದ್ಯಾವಳಿಯ ಹಿಂದೆ ಕಾಣುವುದು ಕೇವಲ ಒಬ್ಬ ವ್ಯಕ್ತಿಯ ಹುರುಪು. ಎರಡೂ ಹಾಕಿಯ ದಂತ ಕಥೆಗಳು. ಇಬ್ಬರೂ ಹಾಕಿಯ ಉದ್ಧಾರಕರು. ಅಂಥ ಪರಂಪರೆಯನ್ನು 20 ವರ್ಷದಲ್ಲಿ ಸ್ಮರಣೀಯತೆಯಿಂದ, ಅಚ್ಚುಕಟ್ಟುತನದಿಂದ ನಡೆಸಿಕೊಂಡುಹೋಗುತ್ತಿರುವ ಗೆಳೆಯ ಶಾಂತೇಯಂಡ ರವಿ ಕುಶಾಲಪ್ಪನವರ ಶ್ರಮ, ಏಷ್ಯನ್ ಹಾಕಿಯ ಸೊಗಡು ಎಲ್ಲವನ್ನೂ ನೋಡಲು ಮಡಿಕೇರಿಗೇ ಹೋಗಬೇಕು.

hockey

Comments are closed.