Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು!

ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು!

ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು!

ಡಿಸೆಂಬರ್ 14, 1971. ಭಾರತೀಯ ವಾಯು ಸೇನೆಗೆ ಆ ದಿನ ಎಂದರೆ ಅದೇನೋ ಹರುಷ ಜತೆಗೆ ಅಷ್ಟೇ ಬೇಸರ ಸಹ. ನೀವು ಯಾವೊಬ್ಬ ಯೋಧನನ್ನಾದರೂ ಕೇಳಿ. ಈ ವ್ಯಕ್ತಿಯ ಬಗ್ಗೆ ಗೊತ್ತಿಲ್ಲದೇ ಇರಲಿಕ್ಕೆ ಸಾಧ್ಯವೇ ಇಲ್ಲ. ನಮಗೆ ಈಗಲೂ ವಿವೇಕಾನಂದರ, ಚಂದ್ರಶೇಖರ್ ಆಜಾದ್ ಅವರ ಕಥೆಗಳನ್ನು ಕೇಳಿದರೆ ಹೇಗೆ ಪುಳಕಿತರಾಗುತ್ತೇವೆಯೋ, ಎನ್‍ಸಿಸಿಯಲ್ಲಿ ಏರ್‍ ಪೊರ್ಸ್ ವಿಂಗ್‍ನಲ್ಲಿರುವ  ಈ ವ್ಯಕ್ತಿಯ ಬಗ್ಗೆ ಕೇಳಿದರೆ ಅಷ್ಟೇ ಕುತೂಹಲ, ಖುಷಿ. ವಾಯುಸೇನೆಯವರಿಗಂತೂ ಈತ ರೋಲ್ ಮಾಡೆಲ್. ನಾನು ಆ ರೀತಿ ಶೌರ್ಯವಂತನೋ ಇಲ್ಲವೋ ಗೊತ್ತಿಲ್ಲ, ಆತನಿಗೆ ಸಿಕ್ಕಂಥ ಅವಕಾಶ ನಂಗೆ ಸಿಗುತ್ತೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಆದರೆ ಸಾವು ಎಂಬುದೇನಾದರೂ ಬಂದರೆ ಸಾಧಾರಣವಾಗಿ ಸಾಯೋದು ಬೇಡ, ನಿರ್ಮಲ್‍ಜಿತ್ ಸಿಂಗ್ ಸೆಖೋನ್ ರೀತಿಯಾದರೂ ಪ್ರಾಣ ಕೊಡಬೇಕು ಎಂದು ಇಂದಿಗೂ ಕನಸು ಕಾಣುವವರು ಸೇನೆಯಲ್ಲಿದ್ದಾರೆ. ಆತ ಹುತಾತ್ಮನಾಗಿ ದಶಕಗಳೇ ಕಳೆದರೂ ಫ್ಲೈಯಿಂಗ್ ಆಫೀಸರ್ ನಿರ್ಮಲ್‍ಜಿತ್ ಸಿಂಗ್ ಸೆಖೋನ್ ಎಂಬ ಹೆಸರು ಕೇಳಿದರೂ ಸಾಕು ರೋಮ ರೋಮಗಳೆಲ್ಲ ಎದ್ದು ನಿಲ್ಲುತ್ತವೆ. ಆ ವ್ಯಕ್ತಿಯೊಬ್ಬ ಪಾಕಿಸ್ತಾನೀಯರ ಜತೆ ಸೆಣಸಾಡಲು ಒಂದು ಕ್ಷಣ ಹಿಂದೇಟು ಹಾಕಿದ್ದರೂ, ಪಾಕ್ ಸೇನೆ ಭಾರತದೊಳಕ್ಕೆ ನುಗ್ಗಿ ದರ್ಬಾರ್ ಶುರು ಮಾಡಿಕೊಂಡುಬಿಡುತ್ತಿದ್ದರು. ಪಾಕಿಸ್ತಾನಕ್ಕೆ ಭಾರತದೊಳಕ್ಕೆ ನುಗ್ಗುವಷ್ಟು ತಾಕತ್ತು ಮತ್ತು ಅದಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳಿತ್ತಾ ಎಂದು ನೀವು ಕೇಳಬಹುದು. ಹೌದು, ಅಂಥ ಶಸ್ತ್ರಾಸ್ತ್ರ ಇತ್ತು. ಉತ್ತರ ಅಮೆರಿಕದ ಎಫ್-86 ಸೇಯ್ಬರ್ ಫೈಟರ್ ಜೆಟ್‍ಗಳು ಪಾಕಿಸ್ತಾನೀಯರ ದೊಡ್ಡ ನಂಬಿಕೆ, ಆಸ್ತಿ, ಶಸ್ತ್ರಾಸ್ತ್ರ. ಎಜಾರ್ ಶ್ಮೂ ಡಿಸೈನ್ ಮಾಡಿದ ಈ ಯುದ್ಧ  ವಿಮಾನ ಭಾರತದ ವಿರುದ್ಧ 1965 ಮತ್ತು 1971ರ ಯುದ್ಧದಲ್ಲಿ ಬಳಸಿದ ದೊಡ್ಡ ಅಸ್ತ್ರ.
ಅವತ್ತು 1971ರ ಡಿಸೆಂಬರ್ 14. ಅರ್ಧ ದಿನ ಕಳೆದ ಮೇಲೆ, ಪಾಕಿಸ್ತಾನದ ವಿಂಗ್ ಕಮಾಂಡರ್ ಶಾರ್ಬತ್ ಅಲಿ ಚೇಂಜಝಿ ನೇತೃತ್ವದಲ್ಲಿ ಲೆಫ್ಟಿನೆಂಟ್ ಎಚ್ ಕೆ ದೊತಾನಿ, ಅಮ್ಜದ್ ಅಂದ್ರಭಿ ಮತ್ತು ಮಾರೂಫ್ ಮಿರ್, ನಾಲ್ಕು ಎಫ್-86 ಯುದ್ಧ ವಿಮಾನಗಳಲ್ಲಿ 226ಕೆಜಿಯ ಎರಡು ಬಾಂಬ್ ಮತ್ತು ಒಂದು ದಾಳಿಗೆ ಸಾಕಾಗುವಷ್ಟು ಗುಂಡುಗಳನ್ನು ತುಂಬಿಕೊಂಡು ಪೇಶಾವರ್‍ನಿಂದ ಟೇಕ್ ಆಫ್ ಆಗುತ್ತಾರೆ. ಶ್ರೀನಗರದಿಂದ ಮುನ್ನೂರಿಪ್ಪತ್ತು ಕಿಲೋಮೀಟರ್ ದೂರದಲ್ಲಿರುತ್ತಿದ್ದಂತೆ ಆಪರೇಷನ್‍ಗೆ ತೊಂದರೆಯಾಗದಿರಲಿ ಎಂದು ಲೆಫ್ಟಿನೆಂಟ್ ಸಲೀಮ್ ಬೇಗ್ ಮತ್ತು ರಹೀಮ್ ಯುಸುಫ್‍ಝಾಯ್ ತಲಾ ಒಂದೊಂದರಂತೆ ಎರಡು ಎಫ್-86 ವಿಮಾನದಲ್ಲಿ ಹೆಚ್ಚುವರಿ 760 ಲೀಟರ್ ಇಂಧನ ತುಂಬಿಸಿ, ಎಮ್3 ಮಷೀನ್ ಗನ್‍ಗಳನ್ನು ಕಳುಹಿಸಲಾಗಿತ್ತು.
ಎಲ್ಲ ವಾಯುನೆಲೆಗಳಲ್ಲೂ, ಬಾರ್ಡರ್‍ಗಳಲ್ಲೂ ವಿಮಾನ ಹಾರಾಟವನ್ನು ಪತ್ತೆಹಚ್ಚಲು ಒಂದು ಸಿಮೆಂಟ್ ಸೂರಿನಡಿಯಲ್ಲಿ ಇಂಟರ್‍ಸೆಪ್ಟರ್ ಇಟ್ಟಿರುತ್ತಾರೆ. ಅದಕ್ಕೆ ಬ್ಲಾಸ್ಟ್ ಪೆನ್ಸ್ ಎನ್ನುತ್ತಾರೆ. ಇದು ಅಸಹಜ ಹಾರಾಟವನ್ನು ಪತ್ತೆ ಹಚ್ಚಿ ಸೇನೆಗೆ ಅಲರ್ಟ್ ಮಾಡುತ್ತದೆ. ವಾಯು ಸೇನೆಯ ಭಾಷೆಯಲ್ಲಿ ಇದಕ್ಕೆ  operational Readliness Platform  (ORP ) ಎನ್ನುತ್ತಾರೆ. ಆದರೆ ಕಾಶ್ಮೀರದ ಕಣಿವೆಯಲ್ಲಿ ಅಂಥ ಇಂಟರ್‍ಸೆಪ್ಟರ್ ಆಗ ಇದ್ದಿರದ ಕಾರಣ, ಅತ್ಯಂತ ಎತ್ತರದಲ್ಲಿ ಒಂದು ಪೋಸ್ಟ್ ನಿರ್ಮಿಸಿಕೊಂಡು  ಅಲ್ಲಿ ಯೋಧರನ್ನು ಕಾವಲಿಟ್ಟು ಅವರ ಮಾಹಿತಿ ಪಡೆಯುತ್ತಿದ್ದರು. ನಾಲ್ಕು ಯುದ್ಧ ವಿಮಾನಗಳ ಅಸಹಜ ಹಾರಾಟ ಕಂಡ ಯೋಧರು, ತಕ್ಷಣ ಮಾಹಿತಿ ನೀಡಿದರು.
ಶ್ರೀನಗರದ ವಾಯುನೆಲೆಗೆ ಈ ವಿಷಯ ತಲುಪಿದ ಕೂಡಲೇ Operational Readliness  Platform ದಲ್ಲಿದ್ದ  ಜಿಮ್ಯಾನ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಫ್ಲೈಟ್ ಲೆಫ್ಟಿನೆಂಟ್ ಬಲ್ದೀರ್ ಸಿಂಗ್ ಘುಮನ್, ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖೋನ್ ತಯಾರಾಗಿ ನಿಂತಿದ್ದರು. ನಮ್ಮ ಬಳಿ ಆಗ ಇದ್ದಿದ್ದು ಜಿನ್ಯಾಟ್ ಎಂಬ ಯುದ್ಧ ವಿಮಾನ ಮಾತ್ರ. ಇದು ಎಫ್-86 ವಿಮಾನಕ್ಕಿಂತ ಎಷ್ಟೋ ಪಟ್ಟು ಕೆಳಮಟ್ಟದ್ದಾಗಿತ್ತು. ಆದರೆ ನಿರ್ಮಲ್‍ಜಿತ್ ಸಿಂಗ್‍ರ ಉತ್ಸಾಹ ಮಾತ್ರ ಕುಸಿಯಲಿಲ್ಲ. ಆಗ ರಾತ್ರಿ ಎಂಟು ಗಂಟೆ ದಾಟಿತ್ತು. ನಮ್ಮ ದೇಶದ ನಿಯಮವೇನೆಂದರೆ, ನಾವು ಮೊದಲು ದಾಳಿ ಮಾಡುವುದಿಲ್ಲ. ನಮ್ಮತ್ತ ಒಂದು ಗುಂಡು ಬಿದ್ದರೂ ಸಾಕು ನಾವು ಪ್ರತಿಕ್ರಿಯೆ ನೀಡಲು ಶುರು ಮಾಡಬಹುದಿತ್ತು. ಹೊತ್ತಿಕೊಳ್ಳಬೇಕಿದ್ದ ಆ ಒಂದು ಕಿಡಿಗಾಗಿ ಎಲ್ಲರೂ ಕಾದು ಕುಳಿತಿದ್ದರು. ಪಾಕಿಸ್ತಾನದಿಂದ ಬಂದ ವಿಮಾನಗಳು ದಾಳಿ ಮಾಡಲು ಶುರು ಮಾಡಿಕೊಂಡಿತು. ಈಗ ಭಾರತದ ಸರದಿ. ನಿರ್ಮಲ್‍ಜಿತ್ ಸಿಂಗ್ ಮನಸ್ಸಲ್ಲಿ ಆಕ್ರೋಶ ಕ್ಷಣ ಕ್ಷಣವೂ ಹೆಚ್ಚಾಗುತ್ತಿತ್ತು. ಇನ್ನೇನು ನಮ್ಮ ವಿಮಾನ ಹಾರಾಟ ಶುರು ಮಾಡುವುದಕ್ಕೆ ಎರಡು ನಿಮಿಷವಿದೆ ಎನ್ನುವಷ್ಟರಲ್ಲಿ ಒಂದು ಸಮಸ್ಯೆ ಎದುರಾಯಿತು. Operational Readliness Platform  ಇಂದ ಜಿನ್ಯಾಟ್ ವಿಮಾನ ಹಾರಾಟಕ್ಕೆ ಹಸಿರುನಿಶಾನೆ ಸಿಕ್ಕಲಿಲ್ಲ. ಆ ಕ್ಷಣ ಹೇಗಿತ್ತು ಎಂದರೆ, ವಿಮಾನ ಹಾರಾಟ ಮಾಡಲೇಬೇಕು ಆದರೆ, ಬ್ಯಾಟರಿ ಸಂಬಂಧಿತ ದೋಷದಿಂದ ಹಾರಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೂ ಹೇಗೋ ಮಾಡಿ ಹಾರಾಟ ಶುರು ಮಾಡಿಯೇ ಬಿಟ್ಟರು ನಿರ್ಮಲ್‍ಜಿತ್ ಸಿಂಗ್ ಮತ್ತು ಬಲ್ದೀರ್ ಸಿಂಗ್. ಇಲ್ಲೊಂದು ಸಮಸ್ಯೆಯಿತ್ತು. ನಮ್ಮ ಜಿ-ನ್ಯಾಟ್ ಯುದ್ಧವಿಮಾನ ರಾತ್ರಿಯಲ್ಲಿ ಚಲಿಸುವಂಥ ತಂತ್ರಜ್ಞಾನ ಹೊಂದಿರಲಿಲ್ಲ. ರಷ್ಯಾದಿಂದ ಆಮದು ಮಾಡಿಕೊಂಡಿದ್ದ ವಿಮಾನವದು. ನಮ್ಮ ವೈಮಾನಿಕ ಸೈನಿಕರು ಅದನ್ನು `ಅವಳು’ ಎಂದೇ ಸಂಬೋಧಿಸುತ್ತಿದ್ದ ಜಿ-ನ್ಯಾಟ್ ಬಳಸಿಯೇ ಸೆಖೋನ್ ಹೋರಾಟಕ್ಕಿಳಿದ್ದಿದ್ದ. ಪಾಕಿಸ್ತಾನದ ವಿಮಾನಗಳು ನಮ್ಮ ಗಡಿಭಾಗಗಳಲ್ಲೆಲ್ಲ ಕಡೆಯೂ ಬಾಂಬ್ ಮತ್ತು ಗುಂಡಿನ ದಾಳಿ ಶುರು ಹಚ್ಚಿಕೊಂಡಿತ್ತು. ಇನ್ನು ಆ ರಾತ್ರಿಯಲ್ಲಿ ಕಣ್ಣಿಗೆ ಏನೂ ಗೋಚರವಾಗದಷ್ಟು  ಮಂಜು ಆವರಿಸಿತ್ತು. ಅದು ಅಲ್ಲಿದ್ದ ಎಲ್ಲರಿಗೂ ಗೊತ್ತಿದ್ದರೂ ನಿರ್ಮಲ್‍ಜಿತ್ ಸಿಂಗ್‍ನ ಬಿಸಿ ರಕ್ತ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಿಮಾನವನ್ನು ಸ್ವಲ್ಪ ಕೆಳಮಟ್ಟದಲ್ಲೇ ಹಾರಾಟ ಮಾಡಿ, ಟೇಕ್ ಆಫ್ ಆಗಿ ಕೇವಲ ಇಪ್ಪತ್ತೇ ಸೆಕೆಂಡಿನಲ್ಲಿ ಪಾಕ್‍ನ ಸೇಯ್ಬರ್ ವಿಮಾನಗಳನ್ನು ಪತ್ತೆ ಹಚ್ಚಿದ್ದ.  ಪಾಕಿಸ್ತಾನ ಸೇಯ್ಬರ್‍ಗಳು ಗೇಟ್‍ವೇಯತ್ತ ವೇಗವಾಗಿ ಧಾವಿಸಲು ಆರಂಭಿಸಿದವು. ಬುದ್ಧಿವಂತಿಕೆಯಿಂದ ಸೇಯ್ಬರ್‍ನ ಹಿಂದೆ ಹಾರಾಟ ಶುರು ಮಾಡಿದ ನಿರ್ಮಲ್‍ಜಿತ್ ಸಿಂಗ್, ಪಾಕ್‍ನ ಸೇಯ್ಬರ್ ಇನ್ನೇನು ಎಟುಕುತ್ತವೆ ಎನ್ನುವಾಗಲೇ ಆತ ” I am behind two sabres . I won’t let the bastards get away  (ನಾನು ಎರಡು ಸೇಯ್ಬರ್‍ಗಳ  ಹಿಂದಿದ್ದೇನೆ.  ಈ ಸೂ… ಮಕ್ಕಳು ತಪ್ಪಿಸಿಕೊಂಡು ಹೋಗಲು ಬಿಡಲ್ಲ’ ಎಂದು ರೇಡಿಯೋದಲ್ಲಿ ಘರ್ಜಿಸಿದ್ದ. ಇನ್ನೊಂದು ಬದಿಯಲ್ಲಿದ್ದ ಜಿಮ್ಯಾನ್ ಬಲ್ದೀರ್ ಸಿಂಗ್ ” Good show Brother , where are you ?   (ಒಳ್ಳೇದಾಯ್ತು, ಈಗ ನೀನೆಲ್ಲಿದ್ದೀಯ)’ ಎಂದು ಕೇಳುತ್ತಾನೆ. ಇವರಿಬ್ಬರು ಈ ಮಾತುಕತೆಯನ್ನು ಆಲಿಸುತ್ತಿದ್ದ ಕ್ಯಾಪ್ಟನ್, ಹವಾಮಾನ ವೈಪರೀತ್ಯದ ಕುರಿತು ಗಮನಿಸಿ ಸ್ವಲ್ಪ ವಿರಾಮ ತೆಗೆದುಕೊ ಎಂದು ಸೆಖೋನ್‍ಗೆ ಸೂಚಿಸಿದ್ದರು. ಆದರೆ ಸೆಖೋನ್‍ನ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಆತ ವಿಮಾನವನ್ನು ಹಾರಿಸಲೇಬೇಕು ಎಂದು ನಿರ್ಧರಿಸಿದಂತಿದ್ದ, ಒಂದು ಸೇಯ್ಬರ್ ಹಿಂದಿದ್ದ, ಇನ್ನೊಂದು ಸೇಯ್ಬರ್ ಸಹ ಮುನ್ನುಗ್ಗುತ್ತಿತ್ತು. `ನಾನು ಎರಡು ಸೇಯ್ಬರ್ ಹತ್ತಿರವಿದ್ದೇನೆ ನನಗೆ ಯಾವುದೇ ಅಪಾಯವಿಲ್ಲ. ಒಂದು ಪಕ್ಕದಲ್ಲಿದೆ, ಇನ್ನೊಂದು ಜಿ-ನ್ಯಾಟ್‍ನ ತುದಿಯಲ್ಲಿದೆ’ ಎಂದು ಮತ್ತೆ ರೇಡಿಯೋದಲ್ಲಿ ಉದ್ಗರಿಸಿದ. ನಮ್ಮವರು ಸ್ವಲ್ಪ ನಿರಾಳರಾದಂತಾದರು. ಆದರೆ ಯಾರು ಏನೇ ಹೇಳಿದರೂ ಸುಮ್ಮನಾಗದ ನಿರ್ಮಲ್‍ಜಿತ್ ಸಿಂಗ್, ಪಾಕ್ ಸೇಯ್ಬರ್ ಮೇಲೆ ಗುಂಡಿನ ದಾಳಿಗರೆಯಲು ಶುರು ಮಾಡಿದ. ಆತನ ಗುರಿ ತಪ್ಪಿರಲಿಲ್ಲ, ಒಂದು ಸೇಯ್ಬರ್ ಧ್ವಂಸವಾಗಿತ್ತು. ಅತ್ತ ಅಂದ್ರಾಬಿ ಸಹ ಗುಂಡಿನ ದಾಳಿ ನಡೆಸಿದರು. ಇಬ್ಬರೂ ಸಮಯಕ್ಕೆ ತಕ್ಕ ಹಾಗೆ ಗುಂಡು ಹಾರಿಸಿದ್ದರಿಂದ ಪಾಕಿಸ್ತಾನಕ್ಕೆ ಮೊದಲ ಪೆಟ್ಟು ಬಿದ್ದಿತ್ತು. ಅಷ್ಟು ಸಾಮಥ್ರ್ಯವಿಲ್ಲದ ಜಿನ್ಯಾಟ್ ವಿಮಾನದಲ್ಲೇ ಶತ್ರು ಸೈನ್ಯ ಬೆನ್ನತ್ತಿದ್ದ ನಿರ್ಮಲ್‍ಜಿತ್ ಸಿಂಗ್ ಬಲಿಷ್ಠ ಸೇಯ್ಬರ್‍ಗಳನ್ನು ಹೊಡೆದುರುಳಿಸಿದ್ದ. ಅಷ್ಟಕ್ಕೂ ಅವನ  ನೇತೃತ್ವದಲ್ಲಿ ಒಂದಲ್ಲ-ಎರಡಲ್ಲ ಮೂರು ಯುದ್ಧ ವಿಮಾನ ಹೊಡೆದುರುಳಿಸಲಾಗಿತ್ತು.
ಆದರೆ, ಎಲ್ಲ ಸಮಯದಲ್ಲೂ ಹಾಗಾಗುವುದಿಲ್ಲ. ಅದೃಷ್ಟ ಸದಾ ನಿರ್ಮಲ್ ಜತೆಯೇ ಇರುವುದಿಲ್ಲ ನೋಡಿ, ಸೇಯ್ಬರ್ ವಿಮಾನ ಬರುತ್ತಿರುವುದನ್ನು ನೋಡಿ ಬಲ್ದೀರ್ ಸಿಂಗ್ ವಿಮಾನವನ್ನು ಎಡಬದಿಗೆಳೆದುಕೊಂಡು ಬಿಡುತ್ತಾನೆ. ಸೇಯ್ಬರ್‍ನಿಂದ ಹೊರಟ ಗುಂಡು ಒಂದೊಂದಾಗಿ ನಿರ್ಮಲ್‍ಜಿತ್ ಇರುವ ವಿಮಾನ ಹೊಕ್ಕುತ್ತಿರುತ್ತದೆ. ಆದರೂ ಕೊನೇ ಕ್ಷಣದವರೆಗೂ ನಿರ್ಮಲ್ ಫೈರ್ ಮಾಡುತ್ತಲೇ ಇದ್ದ. ಪಾಕ್‍ನ ಅಷ್ಟೂ ವಿಮಾನಗಳನ್ನು ಧ್ವಂಸ ಮಾಡುತ್ತೇನೆ ಎಂದು ಶಪಥ ಮಾಡಿ ಬಂದಿದ್ದ ನಿರ್ಮಲ್ ಕೆಲಸ ಮುಗಿಸಿದ್ದ. ತಾನಿದ್ದ ವಿಮಾನ ಇನ್ನೇನು ಕೆಳಗೆ ಬೀಳುತ್ತಿರುವಾಗ ಅದರಿಂದ ಹೊರಗೆ ಹಾರಿ ಪ್ಯಾರಾಚೂಟ್ ಎಳೆಯುತ್ತಾನೆ. ಆದರೆ, ಅದು ಸರಿಯಾಗಿ ತೆರೆದುಕೊಳ್ಳದೇ, ನಿರ್ಮಲ್‍ಗೂ ಅದನ್ನು ಸರಿಯಾಗಿ ನಿಭಾಯಿಸಲಾಗದೇ ವಿಮಾನದ ಜತೆಯಲ್ಲೇ ಚೂರು ಚೂರಾಗಿ ಹೋದ. ಜಿ-ನ್ಯಾಟ್‍ಗೆ ಶತ್ರುಸೈನ್ಯದ ಬರೋಬ್ಬರಿ 37 ಗುಂಡುಗಳು ತಗುಲಿದ್ದವು. ಅದರಲ್ಲೊಂದಿಷ್ಟು ಗುಂಡು ನಿರ್ಮಲ್‍ಜಿತ್ ಸಿಂಗ್‍ರ ದೇಹ ಹೊಕ್ಕಿದ್ದವು.
ಅದೇ ಡಿಸೆಂಬರ್ 14, 1971ರಂದು ಪಾಕಿಸ್ತಾನದ ನಾಲ್ಕು ಬಲಿಷ್ಠ ಸೇಯ್ಬರ್ ವಿಮಾನಗಳು ಭಾರತದ ಸೈನಿಕರ ಎದುರು ಸೋತು ಬಿದ್ದಿದ್ದವು. ಅತ್ತ ನಿರ್ಮಲ್‍ಜಿತ್ ಸಿಂಗ್ ಸಹ ಯುದ್ಧದಲ್ಲಿ ಹೋರಾಡಿ, ತಾಯಿ ನೆಲದ ಋಣ ತೀರಿತು ಎಂಬಂತೆ ಸತ್ತು ಮಲಗಿದ್ದ. ಆತನ ಪ್ರೀತಿಯ ಜಿ-ನ್ಯಾಟ್ ಸಹ ಮಕಾಡೆ ಮಲಗಿತ್ತು. ಯಾವ ವಾಯುನೆಲೆಗೆ ಸೇರಿ ಅಪಾರ ಹೆಸರು ಮಾಡಬೇಕು ಎಂದು ಬಯಸಿದ್ದ ನಿರ್ಮಲ್‍ಜಿತ್ ಸಿಂಗ್ ಸೇನೆ ಸೇರಿ ಮೂರೇ ವರ್ಷಕ್ಕೇ ಮೃತಪಟ್ಟಿದ್ದ. ಆದರೇನಂತೆ ಪರಮವೀರ ಚಕ್ರ ಪಡೆದ ದೇಶದ ಮೊದಲ ವೈಮಾನಿಕ ಅಧಿಕಾರಿ ಎನಿಸಿದ್ದ. ಆ ಅಧಿಕಾರಿಗೆ ಅದೆಷ್ಟು ಅವಸರವಿತ್ತೋ ಗೊತ್ತಿಲ್ಲ, ಜೀವನವಿಡೀ ಇದ್ದು ಸಾಧಿಸಬೇಕಾದುದ್ದನ್ನು ಮೂರೇ ವರ್ಷದಲ್ಲಿ ಸಾಧಿಸಿಬಿಟ್ಟಿದ್ದ.
ಆಗ ಫ್ಲೈಯಿಂಗ್ ಆಫೀಸರ್ ಆಗಿದ್ದ  ಎಂ.ಪಿ. ಅನಿಲ್‍ಕುಮಾರ್ ನಿರ್ಮಲ್‍ಜಿತ್ ಸಿಂಗ್ ಬಗ್ಗೆ ಭಾವುಕರಾಗಿ `ಆ ದಿನ ಅವನದ್ದಾಗಿರಲಿಲ್ಲ, ಆದರೆ ಆತ ಅದನ್ನು ತನ್ನ ಸ್ವಂತ ಮಾಡಿಕೊಂಡ. ವೈಮಾನಿಕ ದಾಳಿಯಲ್ಲಿ ಆತ ತೋರಿಸಿದ ಶೌರ್ಯ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ’ ಎಂದಿದ್ದರು. ಆತನನ್ನು ಸಹೋದ್ಯೋಗಿಗಳು ಪ್ರೀತಿಯಿಂದ `ಬ್ರದರ್’ ಎಂದು ಕರೆಯುತ್ತಿದ್ದರು. ಆತನ ಶೌರ್ಯದ ನಾನು ಕೇಳಿದಾಗ ಹೆಮ್ಮೆಯೆನಿಸಿತು. ಆತ ಸ್ನೇಹಿತರೊಂದಿಗೆ ಮುಕ್ತವಾಗಿ ಬೆರೆಯುವ ಗುಣ ಹೊಂದಿದ್ದ. ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯದ ಹುಚ್ಚನಾಗಿದ್ದ ಆತ ಎಂದು ಎಂ.ಪಿ. ಅಶೋಕ್ ಕುಮಾರ್ ನೆನೆಪಿಸಿಕೊಳ್ಳುತ್ತಾರೆ. ಇಂಥ ಬಹಳಷ್ಟು ಸಂಗತಿಗಳು ರೆಡಿಫ್.ಕಾಂನಲ್ಲಿ ಐದಾರು ವರ್ಷಗಳ ಹಿಂದೆ ಸ್ವಾರಸ್ಯಕರವಾಗಿ ಹೇಳಿದ್ದನ್ನು ಮೊನ್ನೆ ಡಿಸೆಂಬರ್ 14ರಂದು ನೆನಪು ಮಾಡಿಕೊಳ್ಳಬೇಕಾಗಿ ಬಂತು.
ಇಂಥ ವೀರ ಯೋಧ ನಿರ್ಮಲ್‍ಜಿತ್ ಸಿಂಗ್ ಸೆಖೋನ್ 1945ರ ಜುಲೈ 17ರಂದು ಭಾರತದ ಸೈನಿಕರ ರಾಜಧಾನಿ ಅಥವಾ ಮಾತೃಭೂಮಿ ಎಂದೇ ಖ್ಯಾತಿಯಾದ ಪಂಜಾಬ್‍ನಲ್ಲಿ ಜನಿಸಿದ್ದು. ಅವರ ತಂದೆ ಸರ್ದಾರ್ ತ್ರಿಲೋಕ್ ಸಿಂಗ್ ಸಹ ವಾಯುದಳದಲ್ಲಿ ಲೆಫ್ಟಿನೆಂಟ್ ಆಗಿದ್ದವರು. ಸಹಜವಾಗಿಯೇ ಮಗ ನಿರ್ಮಲ್ ಸಿಂಗ್ ಸಹ ಸೇನೆ ಸೇರುವ ಬಯಕೆ ಹೊಂದಿದ್ದ. ಅದರಲ್ಲೂ ತಂದೆಯಂತೆಯೇ ವಾಯುದಳ ಸೇರಲು ಹಂಬಲಿಸಿದ್ದ. ಕೊನೆಗೆ 1968ರಲ್ಲಿ ವೈಮಾನಿಕ ಅಧಿಕಾರಿಯಾಗಿ ಸೇರಿದ. ಸೇರಿದ ಮೂರನೇ ವರ್ಷಕ್ಕೇ ಪಾಕ್ ದಾಳಿಯಲ್ಲಿ ಭಾರತ ಎಂದೆಂದಿಗೂ ಮರೆಯದ ಹೀರೋ ಸಹ ಆಗಿಬಿಟ್ಟ. ಸೈನಿಕರಿಗೆ ಸಿಗುವ ಅತ್ಯುನ್ನತ ಗೌರವವಾದ `ಪರಮವೀರ ಚಕ್ರ’ ಪಡೆದು ತಂದೆಗೆ ತಕ್ಕ ಮಗ ಎನಿಸಿಕೊಂಡ. ಯೋಧ ಎಂಬ ಪದಕ್ಕೆ ಅರ್ಥ ತಂದುಕೊಟ್ಟ. ಸಾಯುವಾಗ  ಅವನ ವಯಸ್ಸು ಕೇವಲ 26! ಆ ಪೋರ ಇಡೀ ದೇಶವನ್ನೇ ರಕ್ಷಿಸಿ, ಧನ್ಯವಾದವನ್ನೂ ತೆಗೆದುಕೊಳ್ಳದೇ ಹೋಗಿಬಿಟ್ಟ.
ಪ್ರತಿವರ್ಷ ಡಿಸೆಂಬರ್ 16 ಬಂತೆಂದರೆ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾವನ್ನು ವಿಮೋಚನೆ ಮಾಡಿದ್ದನ್ನು ನೆನಪಿಸಿಕೊಂಡಾಗ ಹೆಮ್ಮೆಯಿಂದ ಎದೆಯುಬ್ಬುತ್ತದೆ. ಆದರೆ ಮರುಕ್ಷಣವೇ ಸೆಖೋನ್ ನೆನಪಾಗಿ ಅದೇ ಎದೆ ದುಃಖದಿಂದ ಮಡುಗಟ್ಟುತ್ತದೆ.

nirmaljith-singh-af

Comments are closed.