Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಪ್ಪತ್ತು ಸಾವಿರ ಎನ್‌ಜಿಒಗಳ ಲೈಸನ್ಸ್ ರದ್ದು, ಮತಾಂತರ ಮತ್ತು ದೇಶವಿರೋಧಿಗಳಿಗೆ ಮೋದಿ ಗುದ್ದು!

ಇಪ್ಪತ್ತು ಸಾವಿರ ಎನ್‌ಜಿಒಗಳ ಲೈಸನ್ಸ್ ರದ್ದು, ಮತಾಂತರ ಮತ್ತು ದೇಶವಿರೋಧಿಗಳಿಗೆ ಮೋದಿ ಗುದ್ದು!

ಇಪ್ಪತ್ತು ಸಾವಿರ ಎನ್‌ಜಿಒಗಳ ಲೈಸನ್ಸ್ ರದ್ದು, ಮತಾಂತರ ಮತ್ತು ದೇಶವಿರೋಧಿಗಳಿಗೆ ಮೋದಿ ಗುದ್ದು!

ಡಿಸೆಂಬರ್ 27ಕ್ಕೆ ಮಾಧ್ಯಮಗಳಲ್ಲಿ ಒಂದು ವರದಿ ಪ್ರಕಟವಾಗುತ್ತದೆ. ಅದನ್ನು ನೋಡಿ ಕಳ್ಳಬೆಕ್ಕುಗಳ ಎದೆ ಒಡೆದು ಹೋಗುತ್ತವೆ. ‘ಭಾರತದಲ್ಲಿರುವ 33,000 ಎನ್‌ಜಿಓಗಳ ಪರಿಶೀಲನೆ ಮಾಡಿ, 20,000 ಎನ್‌ಜಿಒಗಳು ಎಫ್‌ಸಿಆರ್ ಎ (Foreign Contribution Regulation Act) ನಿಯಮಗಳನ್ನು ಉಲ್ಲಂಸಿದ್ದರಿಂದ ಅವುಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ.’ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಿಂದ ಇಂಥ ಒಂದು ಮಾತು ಕೇಳಿದೊಡನೆಯೇ, ಲಕ್ಷಾಂತರ ಮತಾಂತರಿಗಳು, ದೇಶದ್ರೋಹಿಗಳು, ಮಿಷನರಿಗಳು ವಿಷ ಹೊರ ಹಾಕಲೂ ಆಗದೆ, ಒಳಗಿಟ್ಟುಕೊಳ್ಳಲೂ ಆಗದೇ ಪರದಾಡಿದರು. ಎನ್‌ಜಿಒಗಳು ರದ್ದಾದರೆ ಮತಾಂತರಿಗಳು, ದೇಶದ್ರೋಹಿಗಳಿಗೇನು ಮಂಡೆಬಿಸಿ ಎಂದು ಕೇಳಬಹುದು.
ಆದರೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಇತರ ಬದುಕುವ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿಗಾಗಿ ಕೆಲಸ ಮಾಡುತ್ತವೆ ಎಂದುಕೊಳ್ಳುವ ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳ ಸಾಮ್ರಾಜ್ಯದ ಅಸಲಿ ಕಥೆಗಳ ಬಗ್ಗೆ ಸಾಮಾನ್ಯ ಮನುಷ್ಯನಿಗೆ ಏನೆಂದರೆ ಏನೇನೂ ತಿಳಿದಿಲ್ಲ. ಏಕೆಂದರೆ ಸದಾ ಜನಸಾಮಾನ್ಯನ ಬೆನ್ನ ಹಿಂದೆ ಇರುತ್ತೇವೆ ಎಂದು ಹೇಳಿಕೊಳ್ಳುವ ಇವು ಸಾಮಾನ್ಯನನ್ನು ಎಲ್ಲಿಡಬೇಕೋ ಅಲ್ಲೇ ಇಟ್ಟಿವೆ. ಅಲ್ಲದೆ ಲಾಭರಹಿತ ಚಟುವಟಿಕೆ ನಡೆಸುತ್ತಿದ್ದೇವೆ ಎಂದುಕೊಳ್ಳುವ ಬಹುತೇಕ ಎನ್‌ಜಿಒಗಳ ನಡೆ ಯಾಕೋ ಯಾವಾಗಲೂ ತೀರಾ ನಿಗೂಢವಾಗಿಯೇ ಇರುತ್ತವೆ.
ಹಾಗಾಗಿ ಈ ಸರಕಾರೇತರ ಸಂಸ್ಥೆಗಳ ಬಗ್ಗೆ ಜನ ತಿಳಿದುಕೊಂಡ ಸಂಗತಿಗಳು ತೀರಾ ಕಡಿಮೆ. ಮೊನ್ನೆ ತಾನೇ ಕೇಂದ್ರ ಸರಕಾರ ಇಪ್ಪತ್ತು ಸಾವಿರ ಎನ್ ಜಿಒಗಳ ಪರವಾನಗಿಯನ್ನು ರದ್ದು ಮಾಡಿದಾಗ ಇದೇಕೆ ಎಂದು ಕೆಲವರಿಗೆ ಅನಿಸಿರಲೂಬಹುದು. ಪರವಾನಗಿ ರದ್ದು ಸರಿಯೇ ಎಂಬ ಪ್ರಶ್ನೆ ಮೂಡಿರಲೂಬಹುದು. ಎನ್‌ಜಿಒಗಳಿಂದ ಆಡಳಿತಕ್ಕೆ, ದೇಶಕ್ಕೆ ಆದ ಪ್ರಯೋಜನಗಳೇನು ಎಂಬ ಜಿಜ್ಞಾಸೆಗಳೂ ಆರಂಭವಾಗಿರಬಹುದು. ಪರವಾನಗಿ ರದ್ದು ದೇಶದ ಆರ್ಥಿಕ, ಸಾಮಾಜಿಕ ರಂಗಕ್ಕೆ ಹೊಡೆತ ಬೀಳಲಿದೆಯೇ? ಅವುಗಳ ಕಾರ್ಯಗಳಿಗೆ ಹರಿದು ಬರುವ ಸಂಪನ್ಮೂಲಗಳ ಮೂಲವೆಲ್ಲಿದೆ? ಹಾಗಾದರೆ ಸರಕಾರದ ನಿರ್ಧಾರಕ್ಕೆ ಕಾರಣಗಳೇನು? ಎಂಬ ಗೊಂದಲಗಳೂ ಮೂಡಿರಬಹುದು. ಎನ್‌ಜಿಒಗಳೆಂದರೆ ಹಾಗೆ. ಆವು ಜನರನ್ನು ಹಾಗೆ ಇಟ್ಟಿವೆ. ಜಾಗತಿಕವಾಗಿ ಇಂದು 10 ದಶಲಕ್ಷ ಎನ್‌ಜಿಒಗಳು ವಿವಿಧ ಧ್ಯೇಯೋದ್ದೇಶವಿಟ್ಟು ಕಾರ್ಯಾಚರಿಸುತ್ತಿವೆ.
ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತೀ 400 ಜನರಿಗೆ ಒಂದು ಎನ್‌ಜಿಒ ಕಾರ್ಯಾಚರಿಸುತ್ತಿದೆ! ಅಂದರೆ ನಾವು ಸೇರುವ ಮದುವೆ, ಸಭೆ, ಸಣ್ಣ ಕಾರ್ಯಕ್ರಮಗಳಿಗೆ ಸೇರುವ ಸಣ್ಣ ಸಂಖ್ಯೆಯ ಗುಂಪಿನಷ್ಟು ಜನಕ್ಕೂ ಒಂದೊಂದು ಎನ್‌ಜಿಒಗಳಿವೆ! ಸ್ಥಳೀಯ ಸಂಸ್ಥೆಗಳಿಂತಲೂ ನಮ್ಮಲ್ಲಿ ಎನ್‌ಜಿಒಗಳಿವೆ. ನಮ್ಮ-ನಿಮ್ಮೆಲ್ಲರ ಉದ್ಧಾರದ ನೆಪದಲ್ಲೂ ಎನ್‌ಜಿಒಗಳಿವೆ ಎಂದರೆ ಆಶ್ಚರ್ಯವಾಗುತ್ತದಲ್ಲವೇ? ತಮಾಷೆ ಯೆಂದರೆ ಸಮಾಜ ತನ್ನ ಪಾಡಿಗೆ ಮುಂದೆ ಸಾಗುತ್ತಿದೆ. ಆದರೆ ನಮ್ಮ ತಲೆಯೆಣಿಸುತ್ತಾ ಯಾವುದೋ ಒಂದು ಸಂಸ್ಥೆ ನಡೆಯುತ್ತಿದೆ. ಇನ್ನು ಈ ಎನ್‌ಜಿಒಗಳು ಅದೆಷ್ಟು ಶ್ರೀಮಂತವೆಂದರೆ ಇವುಗಳ ಸಂಪತ್ತನ್ನು ದೇಶವೊಂದರ ಪಟ್ಟಿಯಲ್ಲಿಟ್ಟರೆ ಐದನೆಯ ದೊಡ್ಡ ಜಿಡಿಪಿ ಹೊಂದಿರುವ ದೇಶಗಳ ಸಾಲಿನಲ್ಲಿ ಅವು ನಿಲ್ಲುತ್ತದೆ. ಹಾಗಾದರೆ ಪ್ರತೀ 400 ಜನಕ್ಕೆ ಒಂದು ಎನ್‌ಜಿಒ ಇರುವ ಭಾರತದಲ್ಲಿ ಅದರ ಸಂಪತು ಇನ್ನೆಷ್ಟಿರಬಹುದು? 2015ರಲ್ಲಿ ಪ್ರಪಂಚದ ಶೇ.31.5 ರಷ್ಟು ಜನರು ಸ್ವಯಂಪ್ರೇರಿತರಾಗಿ ಈ ಎನ್‌ಜಿಒಗಳಿಗೆ ದೇಣಿಗೆಗಳನ್ನು ನೀಡಿದ್ದರು. ಅಂದರೆ ದಾನಿಗಳು ಸ್ವಯಂಪ್ರೇರಿತ ರಾಗಿ ಶ್ರೀಮಂತ ಸಾಮ್ರಾಜ್ಯವೊಂದನ್ನು ಕಟ್ಟಿದ್ದರು.
ಎನ್‌ಜಿಒಗಳಲ್ಲಿ ಕೆಲಸ ಮಾಡುವವರಲ್ಲಿ ಶೇ.75ರಷ್ಟು ಉದ್ಯೋಗಿಗಳು ಮಹಿಳೆಯರೇ ಇದ್ದಾರೆ. ಎನ್‌ಜಿಒಗಳು ಹೆಚ್ಚಿರುವ ದೇಶಗಳೆಲ್ಲವೂ ಇಂದಿಗೂ ಮುಂದುವರಿಯುತ್ತಿರುವ/ಅಬಿವೃದ್ಧಿಶೀಲ ದೇಶಗಳು ಎಂದೇ ಕರೆಸಿಕೊಳ್ಳುತ್ತಿವೆ. ಇವಿಷ್ಟು ಎನ್‌ಜಿಒಗಳ ಬಗ್ಗೆ ಸಾಮಾನ್ಯರಿಗೆ ಅಚ್ಚರಿ ಹುಟ್ಟಿಸಿರುವ ಮಾಹಿತಿಗಳು. ಮುಂದುವರಿಯುತ್ತಿರುವ ದೇಶಗಳಲ್ಲಿ ಎಲ್ಲವನ್ನೂ ಅಭಿವೃದ್ಧಿ ಪಡಿಸುತ್ತೇವೆ ಎಂದುಕೊಂಡು ಹಲವು ವಿದೇಶಿ ಸಂಸ್ಥೆಗಳು ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳ ದೇಶಗಳಿಗೆ ಲಗ್ಗೆ ಇಟ್ಟವು. ಆದರೆ ಅರೆಶತಮಾನಗಳು ಕಳೆದರೂ ಅಲ್ಲಿನ ದೇಶಗಳನ್ನು ಅವು ಕರೆಯುವ, ಭಾವಿಸುವ ದಾಟಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಿಲ್ಲ. ಇನ್ನೂ ಅವುಗಳಿಗಿರುವ ಮುಂದುವರಿಯುತ್ತಿರುವ ಎನ್ನುವ ಹಣೆಪಟ್ಟಿ ಹೋಗಿಲ್ಲ. ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಏಕಾಗಿ ಈ ಎನ್ ಜಿಒಗಳು ಎಂಬ ಪ್ರಶ್ನೆಗಳು ಮೂಡುವ ಹೊತ್ತಿಗೆ ಅವು ತಮ್ಮ ಬುಡವನ್ನು ಭದ್ರಪಡಿಸಿಕೊಂಡಾಗಿದ್ದವು. ಅವುಗಳ ಸಂಶಯಾಸ್ಪದ ನಡೆಗಳು, ಆಡಳಿತ ವಿರೋಧಿ ವರ್ತನೆಗಳನ್ನೂ ಕೆಲವು ವಿದೇಶಿ ಮೂಲದ ಎನ್‌ಜಿಒಗಳು ಇಟ್ಟುಕೊಂಡಾಗ ಕೆಲವರು ಅವುಗಳ ಬಗ್ಗೆ ಧ್ವನಿ ಎತ್ತಲಾರಂಭಿಸಿದ್ದರು.
ಕೆಲವು ವಿದೇಶಿ ಮೂಲದ ಎನ್ ಜಿಒಗಳ ಆಕ್ಷೇಪಣೀಯ ವರ್ತನೆಗಳಿಂದ ಪ್ರಾಮಾಣಿಕ ಉದ್ದೇಶ ಹೊಂದಿರುವ ಎನ್‌ಜಿಒಗಳು ಮುಖ ತಗ್ಗಿಸುವಂತಾದವು. ಆಗಲೂ ಇಲ್ಲಿನ ಉದ್ಧಾರಕ್ಕೆ ಬಂದ ಎನ್ ಜಿಒಗಳೇಕೆ ಹೀಗೇಕೆ ವರ್ತಿಸುತ್ತವೆ ಎಂಬುದು ಯಾರಿಗೂ ಸ್ಪಷ್ಟವಾಗಲಿಲ್ಲ. ಅವುಗಳ ಹಣದ ಮೂಲ ತಿಳಿಯಲಿಲ್ಲ. ಹಾಗಾದರೆ ನಿಜಕ್ಕೂ ಈ ಎನ್‌ಜಿಒಗಳ ಪರಿಕಲ್ಪನೆ ಎಲ್ಲಿಯದ್ದು? ಅಸಲಿಗೆ ಅವುಗಳೇಕೆ ಇಲ್ಲಿವೆ? ಅಸಲಿ ಉದ್ದೇಶವೇನು? ಎಂಬುದರ ಹುಡುಕಾಟ ಆರಂಭವಾಯಿತು. ಆ ಹುಡುಕಾಟದ ಹಾದಿಯಲ್ಲಿ ಹಲವು ಭಯಾನಕ ಸತ್ಯಗಳು ತೆರೆದುಕೊಂಡವು. ಒಮ್ಮೆ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಎನ್ ಜಿಒಗಳನ್ನು ಉಲ್ಲೇಖಿಸುತ್ತಾ, ಬಹಿರಂಗವಾಗಿ ನಾವು ಜಗತ್ತಿನ ಮೂಲೆ ಮೂಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವೇನು ಕತ್ತಲಲ್ಲಿ ಕೆಲಸ ಮಾಡುತ್ತಿಲ್ಲ, ಬಹಿರಂಗವಾಗಿಯೇ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಜಾರ್ಜ್ ನಿನ ಪ್ರೊಫೇಸರಾಗಿದ್ದ ಅಲ್ಲೆನ್ ವಿನ್ಸ್‌ಟನ್ ಈಗ ನಾವು ಮಾಡುತ್ತಿರುವ ಹಲವು ಪ್ರಯೋಗಗಳನ್ನು ಸಿಐಎ 25 ವರ್ಷಗಳ ಹಿಂದೆಯೇ ಮಾಡಿತ್ತು ಎಂದು ಅಮೆರಿಕ ತಂತ್ರಗಾರಿಕೆಯನ್ನು ಕೊಚ್ಚಿಕೊಂಡಿದ್ದರು. ಅಂದರೆ ಈ ಎನ್‌ಜಿಒ ಎಂಬುದು ಅಮೆರಿಕದ ಕಲ್ಪನೆಯ ಕೂಸು.
1940ರಲ್ಲಿ ಅಮೆರಿಕ ವಿವಿಧ ದೇಶಗಳಲ್ಲಿ ತನ್ನ ಬೇಹುಗಾರಿಕೆ ಜಾಲವನ್ನು ಹುಟ್ಟುಹಾಕಲು ಬೆಳೆಸಿದ ಸಂಸ್ಥೆಗಳೇ ಮುಂದೆ ಎನ್‌ಜಿಒಗಳಾಗಿ ಬದಲಾದವು ಎಂಬ ವಾದವೂ ಇದೆ. ಅದಕ್ಕೆ ಪೂರಕವಾಗಿ ಎನ್‌ಜಿಒಗಳೆಂಬ ಲಾಭರಹಿತ ಸಂಸ್ಥೆಗಳು ಯತೇಚ್ಚವಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ಎಕನಾಮಿಕ್ ಹಿಟ್ಮನ್‌ಗಳಾಗಿ ನುಗ್ಗಿದ ಸಾಕ್ಷಿಗಳೂ ಇವೆ. ಅಲ್ಲಿನ ನಾಗರಿಕ ದಂಗೆಗಳು ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ ಅಲ್ಲಿನ ಸೂಕ್ಷ್ಮವನ್ನು ಅರಿಯಲು ಇಂಥ ಸಂಸ್ಥೆಗಳ ತಂತ್ರಗಾರಿಕೆಯನ್ನು ಅನುಸರಿಸಿದವು. ಅಂಥ ತಂತ್ರಗಾರಿಕೆಯ ಫಲವೇ ಈ ಎನ್‌ಜಿಗಳು ಎಂಬ ವಾದವನ್ನೂ ಹಲವರು ಇಡುತ್ತಾರೆ. ಅಂದರೆ ಇವೆಲ್ಲವುಗಳ ಅಂತಿಮ ಗುರಿ ಜಗತ್ತನ್ನು ತನ್ನ ಬೆರಳಲ್ಲಿ ಕುಣಿಸುವಂತೆ ಮಾಡುವುದು. ತನ್ನ ಧೋರಣೆಯನ್ನು ಹರಡುವುದು, ವಿಶ್ವದ ದೊಡ್ಡಣ್ಣನ ಸ್ಥಾನವನ್ನು ಅಲಂಕರಿಸುವುದು. ಮುಂದೆ ಅದೇ ತಂತ್ರವನ್ನು ಹಲವು ಶ್ರೀಮಂತ ದೇಶಗಳು ಅನುಸರಿಸಿದವು.
ಶ್ರೀಮಂತ ದೇಶಗಳ ನೀತಿಗಳೇ ಮುಂದೆ ಎಲ್ಲಾ ವಿದೇಶಿ ಎನ್ ಜಿಒಗಳ ಪ್ರಣಾಳಿಕೆಗಳಾಗಿ ಬದಲಾದವು. ಅಂದರೆ ಇಂದು ನಾವು ಕಾಣುವ ಯಾವುದೇ ವಿದೇಶಿ ಮೂಲದ ಎನ್‌ಜಿಒಗಳ ಉದ್ದೇಶ ಮತ್ತು ಗುರಿ ಶ್ರೀಮಂತಿಕೆಯ ಅಹಂಕಾರದಿಂದ ಪಡಿಮೂಡಿದ ಅಚ್ಚುಗಳಂತೆಯೇ ಕಾಣುತ್ತವೆ. ಎಲ್ಲಾ ವಿದೇಶಿ ಎನ್‌ಜಿಒಗಳೂ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ವಾತಾವರಣವನ್ನೇ ಮುಖ್ಯ ಉದ್ದೇಶಗಳಾಗಿ ಇಟ್ಟುಕೊಳ್ಳುತ್ತವೆ. ಮಕ್ಕಳ ಹಕ್ಕುಗಳು, ಮಹಿಳಾ ಹಕ್ಕುಗಳು, ಬಡತನ, ರೋಗಮುಕ್ತ ಸಮಾಜ, ಸಮಾನತೆ, ಸಹಭಾಳ್ವೆ, ಪರಿಸರಗಳನ್ನು ತಾವು ತೆರಳುವ ದೇಶಗಳಿಗೆ ಅವು ಹೊತ್ತೊಯ್ಯುತ್ತವೆ. ಅಂಥ ವಾತಾವರಣ ತಾವು ಲಗ್ಗೆ ಇಡುವ ದೇಶಗಳಲ್ಲಿ ಇರದಿದ್ದರೂ ಅದರ ವಿರುದ್ಧ ಹೋರಾಟ, ಜಾಗೃತಿ ಎನ್ನುವ ಧೋರಣೆ ಈ ಎನ್‌ಜಿಒಗಳದ್ದು. ಅಂಥಲ್ಲಿ ಸಹಜವಾಗಿ ವಿದೇಶಿ ಹಿತಾಸಕ್ತಿ ಕೆಲಸ ಮಾಡುತ್ತವೆ.
ಶಿಕ್ಷಣವನ್ನು ಅಳವಡಿಸುತ್ತೇವೆ ಎಂದು ಧಾವಿಸುವ ಎನ್‌ಜಿಒಗಳು ತಮ್ಮ ದೇಶದ ಶಿಕ್ಷಣ ಪದ್ಧತಿ, ತನ್ನ ದೇಶದ ಸಮಾನತೆಯ ವ್ಯಾಖ್ಯಾನ, ತನ್ನ ದೇಶ ಅಂದುಕೊಳ್ಳುವ ಬಡತನ, ತಮ್ಮ ನಾಗರಿಕ ಹಕ್ಕುಗಳು, ತನ್ನ ದೇಶದ ಕಾನೂನು, ಅಲ್ಲಿನ ಸಾಮಾಜಿಕ ಮನಸ್ಥಿತಿ, ತನ್ನ ದೇಶದ ಸಮಸ್ಯೆಗಳನ್ನೇ ತಲೆತುಂಬಿಕೊಂಡು ಆಯಾಯ ದೇಶಗಳನ್ನು ನೋಡತೊಡಗುತ್ತದೆ. ಇಂಥ ಇತಿಹಾಸ ಹೊಂದಿರುವ ವಿದೇಶಿ ಮೂಲದ ಎನ್‌ಜಿಒಗಳ ಚಟುವಟಿಕೆ ಮತ್ತು ವರ್ತನೆಗಳನ್ನು ನೋಡಿದರೆ ನಿಜಕ್ಕೂ ಭಾರತಕ್ಕೆ ಅಂಥವುಗಳ ಆವಶ್ಯಕತೆ ಇದೆಯೇ ಎನಿಸತೊಡಗುತ್ತವೆ. ಅಷ್ಟಕ್ಕೂ ಇಲ್ಲಿ ಈ ವಿದೇಶಿ ಹಣ ಹರಿದುಬರುವ ಎನ್‌ಜಿಒಗಳಿಂದ ಸಾಧಿಸಿದ ಒಂದಾದರೂ ಮೈಲಿಗಲ್ಲನ್ನು ತೋರಿಸಲಾಗುವುದಿಲ್ಲ?
ನಾಯಿಕೊಡೆಗಳಂತೆ ಹುಟ್ಟಿರುವ ಎನ್‌ಜಿಒಗಳ ಅಬ್ಬರವನ್ನು ನೋಡಿದರೆ ಈ ಹೊತ್ತಿಗೆ ಭಾರತದಲ್ಲಿ ಎಲ್ಲರೂ ಬಡತನ ಮುಕ್ತರಾಗಿ ಅಲ್ಲದಿದ್ದರೂ ಕನಿಷ್ಟ ಎಲ್ಲರೂ ಬ್ಯಾಂಕ್ ಖಾತೆಯನ್ನಾದರೂ ಹೊಂದಿರಬೇಕಿತ್ತು. ದೇಶದ ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ಪಡೆದಿರಬೇಕಿತ್ತು, ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಬ್ರಹತ್ ಜನಜಾಗ್ರತಿಯಾಗಬೇಕಿತ್ತು. ದೇಶದ ಎಲ್ಲಾ ಅಡುಗೆ ಮನೆಗಳೂ ಹೊಗೆಮುಕ್ತವಾಗಬೇಕಿತ್ತು, ಪರಿಸರ ರಕ್ಷಣೆ ಸರಕಾರಗಳ ಯೋಜನೆಗಳ ಹೊರತಾಗಿಯೂ ಅನುಷ್ಠಾನವಾಗಬೇಕಿತ್ತು, ವನವಾಸಿಗಳು ತಮ್ಮ ಹಕ್ಕುಗಳನ್ನು ಯಾವತ್ತೋ ಪಡೆದಿರಬೇಕಿತ್ತು. ಆದರೆ ಆಶ್ಚರ್ಯ!
ಗ್ರಾಮೀಣ ಭಾರತದ ಅಡುಗೆ ಮನೆ ಹೊಗೆ ಮುಕ್ತವಾಗಲು ನರೇಂದ್ರ ಮೋದಿ ಪ್ರಧಾನಿಯಾಗಬೇಕಾಯಿತು. ಹೆಣ್ಣುಮಕ್ಕಳ ಶಿಕ್ಷಣ ಜಾಗ್ರತಿಗೆ, ಹೆಣ್ಣು ಭ್ರೂಣ ಹತ್ಯೆ ತಡೆಯಲು ನರೇಂದ್ರ ಮೋದಿ ಬರುವವರೆಗೂ ಯಾವ ಎನ್‌ಜಿಒಗಳಿಗೂ ಸಾಧ್ಯವಾಗಲಿಲ್ಲ. ಇನ್ನು ಅಂಥ ಸರಕಾರೇತರ ಸಂಸ್ಥೆಗಳು ಇದ್ದರೆಷ್ಟು ಬಿಟ್ಟರೆಷ್ಟು? ಕೆಲವು ಹಳೆಯ ಉದಾಹರಣೆಗಳನ್ನೇ ನೋಡಿ ಪ್ರಿಸನ್ ಮಿನಿಷ್ಟ್ರಿ ಆಫ್ ಇಂಡಿಯಾ ಸರಕಾರೇತರ ಸಂಸ್ಥೆಯ ಹೆಸರು ಕೇಳಿದೊಡನೆಯೇ ಒಮ್ಮೆ ಗೊಂದಲ ಉಂಟಾಗುತ್ತದೆ. ಇದನ್ನು ಯಾವುದೋ ಸರಕಾರದ ಒಂದು ಅಂಗಸಂಸ್ಥೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಪ್ರಿಸನ್ ಮಿನಿಷ್ಟ್ರಿ ಆಫ್ ಇಂಡಿಯಾದ ಉದ್ದೇಶವೇ ಬೇರೆ. ದೇಶದ ಬಹುತೇಕ ಎಲ್ಲಾ ಜೈಲುಗಳಿಗೆ ಲಗ್ಗೆ ಇಟ್ಟಿರುವ ಈ ಸಂಸ್ಥೆ, ಖೈದಿಗಳ ಮನಪರಿವರ್ತನೆಯ ಹೆಸರಲ್ಲಿ ಮತಪರಿವರ್ತನೆ ಮಾಡುತ್ತಿದೆ ಎಂಬ ಆಪಾದನೆಯನ್ನು ಹೊತ್ತುಕೊಂಡಿದೆ.
ಖೈದಿಗಳ ಏಕತಾನತೆ, ಖಿನ್ನತೆ, ಜಡತ್ವ, ಮಾನಸಿಕ ವೇದನೆ ಮೊದಲಾದವನ್ನು ಹೋಗಲಾಡಿಸು ವುದು, ಬಿಡುಗಡೆಗೊಂಡ ಖೈದಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಅದರ ಉದ್ದೇಶ ಎಂದು ಅದು ಹೇಳಿಕೊಳ್ಳುತ್ತದೆ. ಕೆಲ ವರ್ಷಗಳ ಹಿಂದೆ ದೆಹಲಿ ಮೂಲದ  India policy foundation ಎಂಬ ಸಂಸ್ಥೆ ಈ ಬಗ್ಗೆ ಅಧ್ಯಯನವೊಂದನ್ನು ಮಾಡಿ ಈ ಎನ್‌ಜಿಒದ ನಿಗೂಢ ನಡೆಯನ್ನು ವರದಿ ಮಾಡಿತ್ತು. Gospel for asia ಎಂಬ ವೆಬ್‌ಸೈಟೊಂದಿದೆ. ಭಾರತದಿಂದ ಈ ಜಾಲತಾಣವನ್ನು ನೋಡಿದರೆ ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡ ಚಿತ್ರ ಮತ್ತು ಅದರ ಕೆಳಗೆ ಮಕ್ಕಳ ಪೌಷ್ಠಿಕತೆ, ಭವಿಷ್ಯ, ಶಿಶು ಮರಣ ಮೊದಲಾದ ಸಂಗತಿಗಳ ಬಗ್ಗೆ ಪ್ರಸ್ತಾಪವಿದೆ. ಆದರೆ ಅದೇ ವೆಬ್‌ಸೈಟನ್ನು ವಿದೇಶದಿಂದ ನೋಡಿದರೆ ಅಲ್ಲಿರುವುದೆಲ್ಲವೂ ಸುವಾರ್ತೆಗಳು!
ದೇಶದಿಂದ ಮತಪ್ರಚಾರಕ್ಕಾಗಿ ಹಣತರುವುದು ಮತ್ತು ಭಾರತದಲ್ಲಿ ಕಾಳಜಿಯ ಮುಖ ಹೊತ್ತು ಅದನ್ನು ಅನುಷ್ಠಾನ ಮಾಡುವುದು ಅದರ ಉದ್ದೇಶ. ಇಂಗ್ಲೆಂಡ್ ಮೂಲದ ಮತ್ತೊಂದು ಸಂಘಟನೆ action aid ಭಾರತದ ಮಕ್ಕಳಿಗೆ ಶೌಚಾಲಯವಿಲ್ಲ, ಪೌಷ್ಠಿಕ ಆಹಾರವಿಲ್ಲ ಎಂಬ ನೆಪವೊಡ್ಡಿ ಭಾರತದ ವಿವಿಧ ಎನ್ ಜಿಒಗಳಿಗೆ ಹಣ ಸರಬರಾಜು ಮಾಡುತ್ತದೆ. ಹಾಗಾದರೆ ಇನ್ನೂ ಆ ಎನ್‌ಜಿಒಗೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲವೇಕೆ? 2006-11ರ ಅವಧಿಯಲ್ಲಿnorth Karnataka Jesuit educational and charitable society  ಎಂಬ ಎನ್ ಜಿಒ 236 ಕೋಟಿ ರು. ವಿದೇಶಿ ದೇಣಿಗೆಯನ್ನೂ,  children fund inc ಎಂಬ ಎನ್‌ಜಿಒ 174 ಕೋಟಿ ರು.ಗಳನ್ನೂ, the church council for child and youth care ಕೂಡಾ 174 ಕೋಟಿ ರು. ವಿದೇಶಿ ದೇಣಿಗೆಯನ್ನು ಪಡೆದಿದೆ ಎಂದು ಈ ವರದಿ ತಿಳಿಸುತ್ತದೆ. ಇಷ್ಟೊಂದು ಬೃಹತ್ ಮೊತ್ತದ ತೆರಿಗೆ ಮುಕ್ತ ಹಣದ ಹೊರೆಯನ್ನು ಹೊರುವವರು ಯಾರು? ಇದು ಕಪ್ಪು ಹಣದ ಕೇಂದ್ರವಾದರೇ ಇದ್ದೀತೇ?
ದೇಶದಲ್ಲಿ ಕೆಲವು ಎನ್‌ಜಿಒಗಳ ಧ್ಯೇಯೋದ್ದೇಶಗಳನ್ನು ನೋಡಿದರೆ ಇಲ್ಲಿ ನಿಜಕ್ಕೂ ಇಂಥ ಸಮಸ್ಯೆಗಳು ಇವೆಯೇ ಎಂದು ಅಚ್ಚರಿಯಾಗುತ್ತದೆ. ವಿದೇಶಿ ಮೂಲದ ಎನ್‌ಜಿಒ ಒಂದು ಭಾರತದಲ್ಲಿ ಕಪ್ಪುು ಬಣ್ಣದ ಜನರು ಸಾಕಷ್ಟು ಕೀಳರಿಮೆಯನ್ನು ಅನುಭವಿಸುತ್ತಿದ್ದಾರೆಂದೂ, ಕಪ್ಪುವರ್ಣ ದೇಶದ ಜಾಗತಿಕ ಸಮಸ್ಯೆಯೆಂದೂ ಪ್ರಚಾರ ಮಾಡುತ್ತಿದೆ. ಅಮೆರಿಕ ಅಥವಾ ಯೂರೋಪುಗಳಂತೆ ವರ್ಣಭೇದದ ಸಮಸ್ಯೆಯನ್ನು ಅನುಭವಿಸಿದ ಉದಾಹರಣೆಗಳನ್ನು ನಾವೆಂದಾದರೂ ಭಾರತದಲ್ಲಿ ಕಂಡಿದ್ದೇವೆಯೇ? ಅಥವಾ ಕೇಳಿದ್ದೇವೆಯೇ? ವರ್ಣಭೇದ ಭಾವನೆಯಿಂದ ಘಟಿಸಿದ ಒಂದಾದರೂ ಆವಾಂತರ ನಮಗೆ ನೆನಪಿದೆಯೇ? ಹಾಗಾದರೆ ನಮ್ಮ ದೇಶಕ್ಕೆ ಅಂಥದ್ದೊಂದು ಎನ್‌ಜಿಒದ ಆವಶ್ಯಕತೆಯೇನಿದೆ? ಹಾಗಾದರೆ ಅದು ಹುಟ್ಟಿಕೊಂಡ ಅಸಲಿ ಉದ್ದೇಶವಾದರೂ ಏನು? ದೇಶದಲ್ಲಿ ಅತ್ಯಂತ ಹೆಚ್ಚು ಕ್ರಿಶ್ಚಿಯನ್ ಮತಾಂತರಕ್ಕೆ ಹಣ ಸಂದಾಯ ಮಾಡುತ್ತಿರುವುದೇ ಈ ಎನ್‌ಜಿಒಗಳು. ನೀವು ಮತಾಂತರದ ಮಾಫಿಯಾ ನೋಡಬೇಕೆಂದರೆ ತಮಿಳುನಾಡು, ಕೇರಳ ಕಡೆ ಹೋಗಬೇಕು.
ಮಿಷನರಿಗಳ ಸಾರ್ವಜನಿಕ ಕಾರ್ಯಕ್ರಮಕ್ಕೆ ಬರುವ ಅರ್ಧಕ್ಕರ್ಧ ಜನ ಮೈಮೇಲೆ ದೆವ್ವ ಬಂದವರಂತೆ ಆಡಿ ಸಮೂಹ ಸನ್ನಿ ಸೃಷ್ಟಿ ಮಾಡಿ, ಆ ನಾಟಕದ ದೆವ್ವ ಬಂದವರಿಗೆಲ್ಲ ಸರಿ ಮಾಡುವಂತೆ ಮಾಡಿ, ಇತರರ ತಲೆಯನ್ನೂ ಹಾಳು ಮಾಡುತ್ತಾರೆ. ಇವರಿಗೆಲ್ಲ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ಸಹ ಎನ್‌ಜಿಒಗಳು ಫಿಕ್ಸ್ ಮಾಡುತ್ತವೆ. ಇವರೆಲ್ಲರ ಮುಖ್ಯ ಗುರಿ ಹಿಂದೂಗಳನ್ನು ಮತಾಂತರ ಮಾಡುವುದು ಮತ್ತು ಅದೊಂದೇ! ಈ ಕೆಲಸದಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ಇನ್ನೂ 3,000 ಎಂಜಿಒಗಳ ಪರವಾನಗಿಯನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ. ಇಂಥ ಸರಕಾರೇತರ ಸಂಸ್ಥೆಗಳನ್ನು ರದ್ದು ಮಾಡಿದರೆ ತಪ್ಪೇನು?
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಎಂಬ ಎನ್‌ಜಿಒ ಕಾರ್ಯಕ್ರಮ ದಲ್ಲಿ ಭಾರತ ವಿರೋಧಿ ಘೋಷಣೆ ಏಕೆ ಮೊಳಗುತ್ತವೆ? ಗ್ರೀನ್ ಪೀಸ್ ನಡೆಸುವ ಪರಿಸರ ಹೋರಾಟದ ಹಿಂದೆ ಪರಿಸರ ರಕ್ಷಣೆಗೂ ಹೆಚ್ಚಾಗಿ ಆಡಳಿತ ವಿರೋಧಿ ಧೋರಣೆಗಳೇ ಏಕಿರುತ್ತವೆ? ಪ್ರೊಟೆಕ್ಟ್ ದ ಹ್ಯೂಮನ್, ಸೇವ್ ಗರ್ಲ್ ಚೈಲ್ಡ್, ಡಾರ್ಕ್ ಈಸ್ ಬ್ಯೂಟಿಫುಲ್ ಎಂಬ ನಾನಾ ಘೋಷಣೆಗಳು ಅನಾವಶ್ಯಕವಾಗಿ ಏಕೆ ಕೇಳಿಬರುತ್ತವೆ? ದೇಶದ ಬಲ ಹೆಚ್ಚಿಸುವ ಅಭಿವೃದ್ಧಿ ಕಾರ್ಯಗಳು ಶಂಕುಸ್ಥಾಪನೆಯಾದ ಕೂಡಲೇ ವಿದೇಶಿ ಮೂಲದ ಎನ್‌ಜಿಒಗಳು ರಣಹದ್ದುಗಳಂತೆ ಎಗರೆಗರಿ ಬೀಳುತ್ತವೇಕೆ? ಸರಕಾರ ವಿರೋಧಿ ನಕ್ಸಲರಿಗೆ ಬೆಂಬಲ, ಕಾನೂನು ವಿರೋಧಿ ಕೃತ್ಯಗಳಿಗೆ ಬೆಂಬಲ ನೀಡುವ ಎನ್‌ಜಿಒಗಳನ್ನು ನಿಷೇಧಿಸದೇ ಅವುಗಳಿಗೆ ಬಿರುದು ಕೊಡಬೇಕೆ?
ಭಾರತದಲ್ಲಿ ಎನ್‌ಜಿಒಗಳು ಸೃಷ್ಟಿಸಿದ ಆವಾಂತರಗಳು ಇವಿಷ್ಟೇ ಅಲ್ಲ. ಡೋಂಗಿ ಸೆಕ್ಯುಲರಿಸಮ್ಮಿನ ಅರಚಾಟಕ್ಕೆ ಈ ಎನ್‌ಜಿಒಗಳ ಪಾತ್ರ ಬಹಳ ದೊಡ್ಡದು. ಕಪ್ಪು ಬಣ್ಣವಿರಲಿ, ಬಡತನವಿರಲಿ, ಮಹಿಳಾ ಹಕ್ಕುಗಳಿರಲಿ ಅವೆಲ್ಲದರ ಬಗ್ಗೆ ಹೋರಾಟ-ಜಾಗ್ರತಿ ಮೂಡಿಸುತ್ತೇವೆಂದುಕೊಳ್ಳುವ ಎಲ್ಲಾ ಎನ್‌ಜಿಒಗಳ ಅಂತಿಮ ವಾದ ಭಾರತದಲ್ಲಿ ಏನೆಂದರೆ ಏನೂ ಸರಿ ಇಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಅದಕ್ಕೆ ಕಾರಣ ಭಾರತದ ಸಾಂಪ್ರದಾಯಿಕತೆ, ಇಲ್ಲಿನ ಸಂಸ್ಕೃತಿ. ಹಾಗಾಗಿ ಆ ಸಂಸ್ಕೃತಿಯನ್ನು ಮೀರುವುದೇ ಸಮಾನತೆಗೆ ಇರುವ ಮುಖ್ಯ ದಾರಿ ಎನ್ನುವುದು! ಇಂಥ ಎನ್ ಜಿಒಗಳು ಎಂದಾದರೂ ಭಾರತದ ಇತಿಹಾಸ-ಪರಂಪರೆಯನ್ನು ಅಧ್ಯಯನ ಮಾಡಿತ್ತೇ ಎಂದರೆ ಅದೂ ಇಲ್ಲ. ಅವರಿಗೆ ಅದರ ಬಗ್ಗೆ ಕಿಂಚಿತ್ ಜ್ಞಾನವೂ ಇರುವುದಿಲ್ಲ. ದೇಶದ ಪರಂಪರೆಯನ್ನು ವಿರೋಧಿಸುವ ದೇಶದ ಹಲವು ಗುಂಪುಗಳು ಅಂಥ ಎನ್ ಜಿಒಗಳೊಡನೆ ನಂಟು ಹೊಂದಿ ದೇಶದ ವ್ಯವಸ್ಥೆಯನ್ನು ಕಿತ್ತು ತಿನ್ನತೊಡಗುತ್ತಿದ್ದವು.
ಈಗ ಅಂಥ ಎನ್‌ಜಿಒಗಳ ಕೈ ಕತ್ತರಿಸಿ ಹಾಕಲಾಗಿದೆ. ದೇಶ ಮೊದಲು ಎನ್ನುವ ನಾಯಕ ಮಾಡುವುದನ್ನೇ ಮೋದಿ ಸರಕಾರ ಮಾಡಿದೆ. ಎನ್‌ಜಿಒಗಳು ಇಂದು ಎಂಥೆಂಥಾ ಸಿಹಿ ಮಾತುಗಳನ್ನಾಡುತ್ತಿವೆಯೋ ಅವೆಲ್ಲವನ್ನೂ ಮೋದಿ ಸರಕಾರ ಈಗಾಗಲೇ ಭಾಗಶಃ ಈಡೇರಿಸಿಯಾಗಿದೆ. ಇನ್ನು ಅಂಥವುಗಳ ಉಪಸ್ಥಿತಿಯೇಕೆ? ಇನ್ನೂ ಅಂಥ ಎನ್‌ಜಿಒಗಳು ಇದ್ದರೆ ಸರಕಾರ ತಾನು ನಿರುಪಯೋಗಿ ಎಂದು ಒಪ್ಪಿಕೊಂಡಂತೆ ಮತ್ತು ಸರಕಾರದ ಅಂಗಗಳಿಗೆ ಅವು ಸೆಡ್ಡು ಹೊಡೆದಂತೆ. ಈಗಾಗಲೇ ಹಲವು ದೇಶಗಳು ಅಂಥ ವಿದೇಶಿ ಮೂಲದ ಎನ್‌ಜಿಒಗಳನ್ನು ದೇಶದ ಹಿತದೃಷ್ಟಿಗೆ ಆಕ್ಷೇಪಣೀಯ ಎಂಬ ಕಾರಣಕ್ಕೆ ದೇಶದಿಂದ ಹೊರಗಟ್ಟಿದೆ. ಈಗ ಭಾರತದ ಪಾಳಿ. ಆಡಳಿತದ ರಚನೆಯಲ್ಲಿ ಮೂಗು ತೂರಿಸುವ, ಸರಕಾರಗಳ ತಲೆ ಮೇಲೆ ಕೂರುವ ಆದರೆ ಸಮಸ್ಯೆಯನ್ನು ಸದಾ ಜೀವಂತ ಇರಿಸುವ ಎನ್‌ಜಿಒಗಳು ಏಕ್ ಭಾರತ್, ಶ್ರೇಷ್ಠ ಭಾರತ್ ತತ್ತ್ವಕ್ಕೆ ಸದಾ ವಿರುದ್ಧ. ಅಲ್ಲವೇ? ಮೋದಿ ಕೊಟ್ಟ ಏಟಿಗೆ 20,000 ಎನ್‌ಜಿಒಗಳು ಕಾಲು ಮುರಿದುಕೊಂಡು ಬಿದ್ದಿವೆ. ಎಲ್ಲ ನಾಟಕಗಳನ್ನು ಬಂದ್ ಮಾಡಿ, ತಮ್ಮ ದೇಶದತ್ತ ಮುಖ ಮಾಡಿವೆ. ಇದು ಬರೀ ಟ್ರೇಲರ್ ಅಷ್ಟೇ ಸಿನಿಮಾ ಇನ್ನು ಬಾಕಿದೆ.

ngo-ban-20k

Comments are closed.