Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು?

ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು?

ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು?

ಇಂಧೋರ್, ಗ್ವಾಲಿಯರ್, ಸಿಂಧ್‌ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್‌ಎಂವಿ ರೂಪಿಸಿದರು. ಅದಕ್ಕೆಲ್ಲಾ ಮಾದರಿ, ಪ್ರೇರಣೆಯಾಗಿದ್ದು ನಮ್ಮ ಮೈಸೂರು. ಜನನಿಬಿಡ ಪಟ್ಟಣಗಳಾದರೂ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್‌ನಗರಗಳು ಕುಡಿಯುವ ನೀರಿನ ಕೊರತೆ ಅನುಭವಿಸದೆ ಇರುವುದಕ್ಕೆ ಕಾರಣ ಮೈಸೂರು ಮಾದರಿ.
ಮೊದಲು ಮೈಸೂರುನಂತರ ಚಂಡೀಗಢಕಳೆದ ಎರಡು ವರ್ಷಗಳಿಂದ ಹೊರಬೀಳುತ್ತಿರುವ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಸ್ವಚ್ಛನಗರಿ ಎಂದು ನಮ್ಮ ಮೈಸೂರು ಹೆಗ್ಗಳಿಕೆಯನ್ನು ಪಡೆಯುತ್ತಾ ಬರುತ್ತಿದೆ. ವಾಸ್ತವದಲ್ಲಿ ಮೈಸೂರಿನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದ್ದರೂ ಕಳೆದ ಎರಡೂ ಸಲದಿಂದ ಇಂಥದ್ದೊಂದು ಹೆಗ್ಗಳಿಕೆ ಪಾತ್ರವಾಗಿರುವುದು ಮಾತ್ರ ನಮಗೆ ಹೆಮ್ಮೆಯನ್ನು ಮೂಡಿಸಿದೆ. ಅದರಲ್ಲೂ ಫ್ರೆಂಚ್ ವಾಸ್ತುಶಿಲ್ಪಿ ಲೀಕಾರ್ಬೂಸರ್, ಪೋಲೆಂಡ್‌ನ ವಾಸ್ತಶಿಲ್ಪಿ ಮಸೀಜ್ ನೊವಿಕಿ ಹಾಗೂ ಅಮೆರಿಕದ ಯೋಜಕ ಆಲ್ಬರ್ಟ್ ಮೇಯರ್‌ರಂಥ ಮೂವರು ಜಗದ್ವಿಖ್ಯಾತರು ರೂಪಿಸಿದ ಚಂಡೀಗಢವನ್ನು ಹಿಂದಿಕ್ಕಿ ಈ ಪುರಸ್ಕಾರವನ್ನು ಪಡೆದಿದೆ ಎಂದರೆ ಮೈಸೂರಿನ ಬಗ್ಗೆ ನಮಗೆ ಕೋಡು ಮೂಡದೇ ಇದ್ದೀತೆ! ಇಂಥದ್ದೊಂದು ಖ್ಯಾತಿಗೆ ಕಾರಣವೇನು? ಕಳೆದ ಎರಡು ಸಲದಿಂದಲೂ ಮೈಸೂರು ಅತ್ಯಂತ ಸ್ವಚ್ಛನಗರಿ ಎಂಬ ಖ್ಯಾತಿಗೆ ಭಾಜನವಾಗಲು ಮೂಲ ಕಾರಣ ಯಾರು? ಮೈಸೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಪಾಲಿಕೆಯ ಆಡಳಿತ ಮಂಡಳಿ ಹಾಗೂ ಸ್ವಭಾತಃ ಸ್ವಚ್ಛತೆಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ನಮ್ಮ ಮೈಸೂರಿನ ಜನಕ್ಕಷ್ಟೇ ಈ ಹೆಗ್ಗಳಿಕೆ ಸಲ್ಲಬೇಕೋ? ಅಥವಾ ಇದೆಲ್ಲಕ್ಕೂ ಮೂಲಪ್ರೇರಣೆ ಇನ್ನಾರೋ ಇದ್ದಾರೆಯೇ? ನಮ್ಮ ದೇಶದಲ್ಲಿ ಹಲವು ರಾಜವಂಶಗಳು ಆಳ್ವಿಕೆ ನಡೆಸಿವೆ. ಸುವರ್ಣಯುಗವನ್ನೂ ಕಂಡಿವೆ. ಜಗತ್ತಿನ ಮಹಾಮಹಾ ಸಾಮ್ರಾಜ್ಯಗಳೆಂದು ಹೆಸರು ಪಡೆದ ರಾಜವಂಶಗಳು ಈ ದೇಶದಲ್ಲಿ ಆಗಿಹೋಗಿವೆ. ಆದರೆ ಅವುಗಳ ಕಾಲಾನಂತರ ತಮ್ಮ ಕುರುಹುಗಳನ್ನು ಶತಮಾನಗಳ ನಂತರವೂ ಬಿಟ್ಟುಹೋದ ರಾಜವಂಶಗಳು, ಸಾಮ್ರಾಜ್ಯಗಳು ಎಷ್ಟಿವೆ ಹೇಳಿ? ಕೆಲವು ಪರಿಸ್ಥಿತಿಯ ಹೊಡೆತಕ್ಕೆ ಬಿದ್ದು ಹಾಳುಬಿದ್ದವು. ಕೆಲವು ಸಾಮ್ರಾಜ್ಯಗಳ ಕೆತ್ತನೆಗಳು ಮಾತ್ರ ಉಳಿದುಕೊಂಡವು. ಕೆಲವು ಕಡೆ ರಾಜವಂಶಸ್ಥರು ಮಾತ್ರ ಉಳಿದುಕೊಂಡರು.
ಚೋಳ-ಪಾಂಡ್ಯರಂಥ ಅರಸರು ವಿದೇಶಗಳೊಂದಿಗೆ ಸಂಪರ್ಕ ಸಾಧಿಸಿದರಾದರೂ ಇಂದು ಅವರ ಕುರುಹುಗಳಾಗಿ ಕೋಟೆಗಳೂ ಇಲ್ಲ, ಅರಮನೆಗಳೂ ಇಲ್ಲ. ಆದರೆ ಬೃಹತ್ ದೇವಾಲಯಗಳು ಅವರ ನೆನಪನ್ನು ತರಿಸುತ್ತವೆ. ಮಧ್ಯಯುಗದ ನಂತರ ದೇಶದ ಬಹುಭಾಗವನ್ನಾಳಿದ ನವಾಬರ ಮತ್ತು ನಿಜಾಮರ ರಾಜಧಾನಿಗಳನ್ನು ನೋಡಿದರೆ ಅವರ ಕಾಲದ ಅನಿಶ್ಚಿತತೆ, ಗೊಂದಲ, ಕಲಹ, ಅಭಿವೃದ್ಧಿಯ ಕೊರತೆಗಳು ಇಂದಿಗೂ ಗೋಚರವಾಗುತ್ತವೆ. ಇಕ್ಕಟ್ಟಾದ ಓಣಿಗಳು, ಗಲೀಜು ಬೀದಿಗಳು, ಅವ್ಯವಸ್ಥಿತ ಕಟ್ಟಡಗಳು ಎಲ್ಲವೂ ಆ ಸಾಮ್ರಾಜ್ಯದ ಸಂಸ್ಕಾರಗಳನ್ನು ಸಾರುತ್ತವೆ. ನೀವೇ ಹೇಳಿ, ಸುಲ್ತಾನರ ದಿಲ್ಲಿ, ನಿಜಾಮರ ಹೈದರಾಬಾದ್ ಹೇಗಿವೆ?ಮೈಸೂರನ್ನು ಕೇಂದ್ರ ಸರ್ಕಾರ ದೇಶದ ಅತ್ಯಂತ ಸ್ವಚ್ಛ ನಗರ ಎಂದು ಘೋಷಿಸಿದಾಗ ಮೈಸೂರಿನ ಒಡೆಯರು, ಅದರಲ್ಲೂ ಮುಮ್ಮಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಬಹುವಾಗಿ ನೆನಪಾಗತೊಡಗಿದರು. ಇಷ್ಟಕ್ಕೂ ಸ್ವಚ್ಛತೆಯ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ, ಅನುದಾನಗಳನ್ನು ನೀಡಿದರೂ ಮೈಸೂರು ವ್ಯವಸ್ಥಿತ ನಗರವಾಗಿಲ್ಲದೇ ಇದ್ದಿದ್ದರೆ ಈ ಪಟ್ಟ ಮೈಸೂರಿಗೆ ಬರುತ್ತಿತ್ತೇ? ಮತ್ತೆ ಮತ್ತೆ ಒಡೆಯರು, ದಿವಾನರು ನೆನಪಾಗುತ್ತಾರೆ.
ಆಳಿದ ಮಹಾಸ್ವಾಮಿಗಳ ದೂರದೃಷ್ಟಿತ್ವ, ದಾರ್ಶನಿಕ ಆಡಳಿತ ಪ್ರವೃತ್ತಿ, ರಾಜ್ಯದ ಭವಿಷ್ಯದ ಬಗೆಗಿನ ಪ್ರೇಮ, ಜನಾನುರಾಗಿತನಗಳು ಇಂದಿಗೂ ಮೈಸೂರನ್ನು ಕಾಪಾಡುತ್ತಿವೆಯ ಎನಿಸುತ್ತವೆ. ವಿಶಾಲವಾದ ರಸ್ತೆಗಳು, ಟ್ರಾಫೀಕಿನ ಕಿರಿಕಿರಿಯಿಲ್ಲದ ಸುಲಲಿತ ಓಡಾಟ, ಎಂಥಾ ಮಳೆಬಿದ್ದರೂ ನೀರು ಸರಾಗ ಹರಿದುಹೋಗುವಂತಹ ಚರಂಡಿ, ನೆರಳು ನೀಡುವ ಮರಗಳು, ಸುಂದರ ಕಟ್ಟಡಗಳು, ಗೋಪುರಗಳು, ಅಗ್ರಹಾರಗಳು, ಹಳೆಯದಾದರೂ ಹೂತೋಟದಂತಿರುವ ಶಿಕ್ಷಣಸಂಸ್ಥೆಗಳು ಮೈಸೂರಲ್ಲಿ ಇಲ್ಲದೇ ಇರುತ್ತಿದ್ದರೆ, ಅದನ್ನು ಒಡೆಯರು ಕಟ್ಟದೇ ಇರುತ್ತಿದ್ದರೆ ಮೈಸೂರು ದೇಶದ ಅತ್ಯಂತ ಸ್ವಚ್ಛ ನಗರವಾಗುತ್ತಿತ್ತೇ? ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಆಡಳಿತದ ಕಾಯಕಲ್ಪ ಆರಂಭವಾಯಿತು. ಮಹಾಮಾತೃ ಶ್ರೀಲಕ್ಷ್ಮಮ್ಮಣ್ಣಿಯವರು ಇರುವವರೆಗೂ ಅವರ ಉಸ್ತುವಾರಿಯಲ್ಲಿ ಮೈಸೂರು ಸುಮಾರು ಅರೆಶತಮಾನಗಳ ಕಾಲದಿಂದ ನಿಂತುಹೋಗಿದ್ದ ಕೆಲವು ಆಚರಣೆಗಳು ಮತ್ತೆ ಆರಂಭವಾದವು. ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂಬ ಬಿರುದು ಬರಲು ಲಕ್ಷ್ಮಮ್ಮಣ್ಣಿಯವರ ಶ್ರಮ ದೊಡ್ಡದು. ಮುಮ್ಮಡಿಯವರು ಪ್ರಾಪ್ತ ವಯಸ್ಕರಾದ ನಂತರ ಅವರಿಂದಲೂ ಮೈಸೂರು ಅಭಿವೃದ್ಧಿಯ ದಾರಿಯಲ್ಲಿ ಸಾಗತೊಡಗಿತು.
ಬಹುಶಃ ಆಧುನಿಕ ಮೈಸೂರು ನಗರ ನಿರ್ಮಾಣದ ಬುನಾಧಿ ಆರಂಭವಾಗಿದ್ದು ಇ.ಸಾಮ್ರಾಜ್ಯಾದ್ಯಂತ ಹಲವು ಅರಮನೆಗಳ ನಿರ್ಮಾಣ, ಚಾಮುಂಡೇಶ್ವರಿ, ನಂಜುಂಡೇಶ್ವರ ಸೇರಿದಂತೆ ಹಲವು ಖ್ಯಾತ ದೇವಾಲಯಗಳ ಗೋಪುರಗಳ ನಿರ್ಮಾಣ, ರಂಗನಾಥ ಸೇರಿದಂತೆ ಹಲವು ದೇವಸ್ಥಾನಗಳ ಜೀರ್ಣೋದ್ದಾರಗಳು, ಕಾವೇರಿ-ಲೋಕಪಾವನಿ, ಅರ್ಕಾವತಿ ನದಿಗಳಿಗೆ ಸೇತುವೆ, ಪಶ್ಚಿಮವಾಹಿನಿ ಮತ್ತು ಕಪಿಲಾ ನದಿದಂಡೆಗಳಲ್ಲಿ ಸ್ನಾನಘಟ್ಟಗಳು, ಕಾರಂಜಿಕೆರೆ-ಕಾಂತರಾಜ ಕಲ್ಯಾಣಿ ನಿರ್ಮಾಣ ಮಾಡಿದ ಶ್ರೇಯಸ್ಸು ಮುಮ್ಮಡಿ ಕೃಷ್ಣರಾಜ ಒಡೆಯರದ್ದು. ಆ ನಿರ್ಮಾಣಗಳು ಮೈಸೂರನ್ನು ವ್ಯವಸ್ಥಿತ ನಿರ್ಮಾಣವಾಗಿಸಲು ಕಾರಣವಾಗಿದೆ. ಒಂದು ವೇಳೆ ಅವರ ನಿರ್ಮಾಣ ಕಾರ್ಯಗಳು ನಡೆಯದೇ ಇರುತ್ತಿದ್ದರೆ ಇಂದು ಮೈಸೂರು ಹೀಗಿರುತ್ತಿರಲಿಲ್ಲ. 1850ರ ಹೊತ್ತ ಮೈಸೂರಿನಲ್ಲಿ ಇವೆಲ್ಲವೂ ನಿರ್ಮಾಣವಾಯಿತು ಎಂಬುದು ನಮ್ಮ ಅರಸರ ದೂರದರ್ಷಿತ್ವಕ್ಕೆ ಸಾಕ್ಷಿ. ಇಂಥ ಆಳಿದ ಮಹಾಸ್ವಾಮಿಗಳ ಕೊಡುಗೆಗಳನ್ನು ನಾವು ಹೇಗೆ ಮರೆಯೋಣ? ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಬ್ರಿಟಿಷರು ಅಧಿಕಾರವನ್ನು ಕಿತ್ತುಕೊಂಡಿದ್ದರೂ, ತಾವು ಬ್ರಿಟಿಷರು ಕೊಡುತ್ತಿದ್ದ ವಾರ್ಷಿಕ ಮೂರೂವರೆ ಲಕ್ಷ ರಾಜಧನದಿಂದಬದುಕುತ್ತಿದ್ದರೂ ಮುಮ್ಮಡಿಯವರ ಜನಾನುರಾಗಿತನದಲ್ಲಿ ಜುಗ್ಗತನ ಕಾಣಲಿಲ್ಲ. ರಾಜಧನವನ್ನು ಅವರು ಜನರಿಗಾಗಿ ವಿನಿಯೋಗಿಸಿದ್ದರು. ಅವರ ಕಾಲದ ಬಹುದೊಡ್ಡ ಕೊಡುಗೆ ಎಂದರೆ 1862ರಲ್ಲಿ ಸ್ಥಾಪನೆಯಾದ ಮೈಸೂರು ನಗರ ಸಭೆ.
ಇಂದಿನ ಮಹಾನಗರಪಾಲಿಕೆ! ಮೈಸೂರನ್ನು ದೇಶವೇ ಗುರುತಿಸುವಂತೆ ಮಾಡಿದ ಕಾರ್ಯಕ್ಕೆ ಶತಮಾನಗಳ ಹಿಂದೆಯೇ ಅಡಿಗಲ್ಲು ಹಾಕಲಾಗಿತ್ತು ಎಂಬುದು ನಮ್ಮ ನಾಡಿನ ಹೆಮ್ಮೆ. ನಗರದಲ್ಲಿ ಆರು ಪುರಾಗ್ರಹಾರಗಳನ್ನು ನಿರ್ಮಿಸಿದ ಶ್ರೇಯಸ್ಸೂ ಮುಮ್ಮಡಿಯವರದ್ದು. ಇಂದಿನ ನಗರವ್ಯಾಪ್ತಿಗೆ ಬರುವ ಲಿಂಗಾಂಬಾ ಅಗ್ರಹಾರ ಮತ್ತು ಚೆಲುವಾಂಬಾ ಅಗ್ರಹಾರಗಳು ಅವುಗಳಲ್ಲಿ ಸೇರಿತ್ತು. ವ್ಯವಸ್ಥಿತ ಅಗ್ರಹಾರಗಳು ಹೇಗಿರಬೇಕು ಎಂಬುದಕ್ಕೆ ಈ ಅಗ್ರಹಾರಗಳು ಮಾದರಿಯಾಗಿದೆ. ನಮ್ಮ ದೊಡ್ಡಾಸ್ಪತ್ರೆ ಕೆ. ಆರ್ ಆಸ್ಪತ್ರೆ, ಜನರು ಇಂದಿಗೂ ಭಕ್ತಿಗಳಿಂದ ನಡೆದುಕೊಳ್ಳುವ ಮೂರು ಮಠ(ಪರಕಾಲ ಮಠ, ಗವಿಮಠ, ಅನ್ನದಾನದ ಮಠ)ಗಳ ನಿರ್ಮಾಣದಲ್ಲೂ ಮುಮ್ಮಡಿಯವರ ನಗರ ನಿರ್ಮಾಣಚಾತುರ್ಯವನ್ನು ಕಾಣಬಹುದು. ಮಠಗಳ ನಿರ್ಮಾಣವೆಂದು ಅರಸರು ಕೇವಲ ನಾಲ್ಕು ಗೋಡೆಗಳನ್ನು ಎಬ್ಬಿಸಿ ಮಾಡು ಹೊದೆಸುವ ಕೆಲಸವನ್ನು ಮಾತ್ರ ಮಾಡಲಿಲ್ಲ. ನಗರದ ಪ್ರತೀ ನಿರ್ಮಾಣಗಳೂ ನಗರ ಸೌಂದರ್ಯಕ್ಕೆ ಕಿರೀಟದಂತಿರಬೇಕು ಎಂದು ಭಾವಿಸಿದ್ದರು.
ಅದರ ಕುರುಹಾಗಿ ಇಂದಿನ ಮೈಸೂರಿನಲ್ಲಿ ನಮಗೆಯೂರೋಪಿಯನ್ ಅಯೋನಿಕ್, ಕಾರಿಂಥಿಯನ್, ಗಾಥಿಕ್ ಶೈಲಿಯ ಹಲವು ಕಟ್ಟಡಗಳು ಎದ್ದವು. ಅಂಥ ಕಟ್ಟಡಗಳು ನಗರದ ಮೆರುಗನ್ನು ಇಂದಿಗೂ ಕಾಪಾಡಿಕೊಂಡಿವೆ. ಮಧ್ಯಯುಗದ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ವಾಸ್ತುಶಿಲ್ಪಗಳು ಹೇಗೆ ಇಂದಿಗೂ ಆ ದೇಶಗಳ ಸೌಂದರ್ಯಪ್ರeಯ ಪ್ರತೀಕದಂತಿದೆಯೋ ಮೈಸೂರು ಕೂಡಾ ಆ ಸ್ಥಾನದಲ್ಲಿ ನಿಲ್ಲುತ್ತದೆ.
ಆ ಪರಂಪರೆಯನ್ನು ಮುಂದುವರಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು!
1902ರಲ್ಲಿ ಶಿವನಸಮುದ್ರ ಜಲಧಾರೆಯಿಂದ ವಿದ್ಯುತ್ ತಯಾರಿಸಿ ತಂದರು. ಕನ್ನಂಬಾಡಿ ಕಟ್ಟೆ ಕಟ್ಟಿ ನೀರು ಕೊಟ್ಟರು. 1907ರಲ್ಲಿ ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಆರಂಭಿಸಿದರು. 1913ರಲ್ಲಿ ಮೈಸೂರು ಬ್ಯಾಂಕು ಆರಂಭಿಸಿದರೆ 1916ರಲ್ಲಿ ಮೈಸೂರು ವಿವಿ ಆರಂಭಿಸಿ ವಿದ್ಯಾದಾನಕ್ಕೆ ಕೈಹಾಕಿದರು. ಅದೇ ವರ್ಷ ಯುವರಾಜ ಕಾಲೇಜು ಆರಂಭವಾಯಿತು. ಒಂದು ವರ್ಷದ ನಂತರ ಮಹಾರಾಣಿ ಕಾಲೇಜು, ಮರುವರ್ಷವೇ ಮೈಸೂರು ರೈಲ್ವೇ ನಿಲ್ದಾಣ ತಲೆಯೆತ್ತಿದವು. ಮೈಸೂರು ಅರಸರ ಸ್ವಚ್ಛತೆ ಮತ್ತು ಆರೋಗ್ಯ ಕಾಳಜಿಯ ಪ್ರಮುಖ ಅಂಶವೆಂದರೆ ದೇಶದ ಮೊಟ್ಟಮೊದಲ ಬಾರಿಗೆ ‘ದಿ ಪ್ರಿವೆನ್ಷನ್ ಆಫ್ ಜುವೆನೈಲ್ ಸ್ಮೋಕಿಂಗ್ ಆಕ್ಟ್’ (ಬಾಲಕರು ಧೂಮಪಾನ ನಿಷೇಧ) ಎಂಬ ಕಾಯ್ದೆಯನ್ನು 1911ರ ಜಾರಿಮಾಡಿದ್ದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸುವುದು ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂದೆಯ ಅನುಮತಿಪತ್ರವಿಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಮತ್ತು ಅಂಥವರನ್ನು ಶಿಕ್ಷೆಗೆ ಗುರಿಪಡಿಸಬಹುದು ಎಂದು ಆ ಕಾಯ್ದೆಯಲ್ಲಿ ಉಖಿಸಲಾಗಿತ್ತು. ಇದೇ ರೀತಿ ದೇವದಾಸಿ ಪದ್ದತಿ, ಬಸವಿ ಬಿಡುವುದು, ಗೆಜ್ಜೆಪೂಜೆ ಮೊದಲಾದ ಅನಿಷ್ಟ ಆಚರಣೆಗಳನ್ನು ನಿಷೇಧಿಸುವ ಕಾಯ್ದೆಯನ್ನು 1910ರ ಅವಧಿಯಲ್ಲಿ ನಾಲ್ವಡಿಯವರು ಜಾರಿಮಾಡಿದ್ದರು. ಸ್ವಚ್ಛನಗರವೆಂದರೆ ಮಾದರಿ ಸಮಾಜ ಎಂಬ ಮಹೋನ್ನತ ಕಲ್ಪನೆ ನಮ್ಮ ಅರಸರದ್ದು. ಮೈಸೂರನ್ನು ಸುಂದರ ನಗರ ಎಂದು ಕರೆಯಲು ಇಲ್ಲಿನ ಅರಮನೆಗಳ ಸೌಂದರ್ಯದ ಪಾತ್ರವೂ ಇದೆ. 14 ಅರಮನೆಗಳಿರುವ ನಗರ ದಕ್ಷಿಣ ಭಾರತದ ಬೇರೆ ಇಲ್ಲವೆಂದು ಇತಿಹಾಸ ತಜ್ಞರು ಹೇಳುತ್ತಾರೆ.
ಆಗಿನ ಕಾಲದ ನಿರ್ಮಾಣವಾದ ಉದ್ಯಾನಗಳು, ಕಾರಂಜಿಗಳು, ಒಳಚರಂಡಿ, ಅರಮನೆಯ ನೌಕರರಿಗಾಗಿ ಕಟ್ಟಲ್ಪಟ್ಟಿದ್ದ ನೀರಿನ mಂಕುಗಳು, ಪೈಪುಗಳು ಒಡೆಯರ ನಗರಾಬಿವೃದ್ಧಿ ಕೌಶಲಕ್ಕೆ ಹಿಡಿದ ಕೈಗನ್ನಡಿ. ಚಾಮರಾಜ ಒಡೆಯರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಖ್ಯಾತಿ ಉತ್ತುಂಗಕ್ಕೇರಿತು. ಖ್ಯಾತ ದಿವಾನರುಗಳ ಶ್ರಮದಿಂದ ಸಾಮ್ರಾಜ್ಯ ಅಭಿವೃದ್ಧಿಯನ್ನು ಹೊಂದತೊಡಗಿತು. ಜತೆಗೆ ರಾಜಧಾನಿಯ ಸೌಂದರ್ಯ ಮತ್ತು ಸ್ವಚ್ಛತೆಯ ಗುಣಮಟ್ಟಗಳು ಹೆಚ್ಚತೊಡಗಿದವು. ರಾಜಧಾನಿ ಮೈಸೂರಿನಲ್ಲಿ ಎಲ್ಲವೂ ವ್ಯವಸ್ಥಿತವಾಗಿ ಬೆಳೆದವು, ಆರೋಗ್ಯಇಲಾಖೆ, ಅಂಚೆ, ಶಿಕ್ಷಣ, ಕಾರ್ಖಾನೆಗಳು, ರೈಲು, ನೀರಾವರಿ, ವಿದ್ಯುತ್, ಗಿರಣಿಗಳು, ಆ ಕಾಲದಲ್ಲಿ ದೇಶದ ಖ್ಯಾತವಾದವು. ಒಮ್ಮೆ ನಗರದಲ್ಲಿ ಪ್ಲೇಗ್ ಬಂದಾಗ ಇಡೀ ಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ, ಅಶೋಕಪುರಂಗಳಿಂದ ಜನರನ್ನು ಸ್ಥಳಾಂತರ ಮಾಡಿ ನಗರ ನೈರ್ಮಲ್ಯವನ್ನು ಮೈಸೂರು ಮೆರೆದಿತ್ತು. ಸಾಮ್ರಾಜ್ಯದ ಎ ನಗರಗಳು ವ್ಯವಸ್ಥಿತವಾಗಿ ಬೆಳೆದವು.
ಇಂದಿಗೂ ನಂಜನಗೂಡು ಸಮೀಪದ ಕಳಲೆ ಸಂಸ್ಥಾನದ ನಗರ ಚೌಕಟ್ಟನ್ನು ನೋಡಿದ ಎಂಜಿನಿಯರುಗಳೇ ಇದೊಂದು ವ್ಯವಸ್ಥಿತ ಮತ್ತು ಅಧ್ಬುತ ನಗರವಾಗಿತ್ತು ಎಂದು ಬಣ್ಣಿಸುತ್ತಾರೆ. ಮೈಸೂರು ನಗರಕ್ಕೆ ನೀಡಿದ ನಗರಾಬಿವೃದ್ಧಿಯ ಮುತುವರ್ಜಿಯಷ್ಟೇ ಅವರಿಗೆ ಸಾಮ್ರಾಜ್ಯದ ಎಲ್ಲ ನಗರಗಳ ಮೇಲೂ ಇತ್ತು ಎಂಬುದಕ್ಕೆ ಕಳಲೆ ಒಂದು ಉದಾಹರಣೆ. ಅಡ್ಡಾದಿಡ್ಡಿಯಾಗಿ, ಮನಸೋ ಇಚ್ಛೆ ಕಟ್ಟಿ ಬೆಳೆಸಿದ್ದರೆ ಇಂದು ಮೈಸೂರು ವಿಚಿತ್ರವಾಗಿ, ಅತ್ಯಂತ ಕೊಳಕಾಗಿ ಸುಲ್ತಾನರ ಓಲ್ಡ್ ದಿಲ್ಲಿ, ನಿಜಾಮರ ಓಲ್ಡ್ ಹೈದರಾಬಾದ್‌ನಂತೆ ಕಿಷ್ಕಿಂದೆಯಾಗಿ ಇರುತ್ತಿತ್ತು. ಆದರೆ…. ತಮ್ಮ ಅರಮನೆಗಳನ್ನು ಕಟ್ಟಿದ್ದಷ್ಟೇ ಮುತುವರ್ಜಿಯಿಂದ ಒಡೆಯರು ನಗರವನ್ನೂ ಕಟ್ಟಿದ್ದರ ಪರಿಣಾಮ ಇಂದು ಮೈಸೂರಿಗೆ ಸ್ವಚ್ಛ ನಗರ ಎಂಬ ಪಟ್ಟ ಸಿಕ್ಕಿದೆ. ಮೈಸೂರು ನಗರದ ಬಹುತೇಕ ಸುಧಾರಣೆಗಳು ನಾಲ್ವಡಿಯವರ ಕಾಲದಲ್ಲಿ ನಡೆಯಿತಾದರೂ ಅದರ ಮುಂದುವರಿಕೆ ಮತ್ತು ವಿಸ್ತಾರವಾದದ್ದು ಸರ್.ಎಂ.ವಿಶ್ವೇಶ್ವರಯ್ಯನವರು ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ. ಅವರಿಬ್ಬರು ನಗರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಯೋಜನೆಯನ್ನು ಹಾಕಿಕೊಂಡರು.
ಅಮೆರಿಕ, ಯೂರೋಪ್, ಲಂಡನ್ ಮತ್ತು ಫ್ರಾನ್ಸ್‌ಗಳ ನಗರ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದ ವಿಶ್ವೇಶ್ವರಯ್ಯನವರು ಮೈಸೂರಿನ ಒಳಚರಂಡಿ ಮತ್ತು ನೀರಾವರಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದರು. ಮೈಸೂರಿನ ಪ್ರಾಥಃಸ್ಮರಣೀಯ ದಿವಾನರುಗಳಾದ ಸರ್.ಶೇಷಾದ್ರಿ ಅಯ್ಯರ್, ವಿ.ಪಿ.ಮಾಧವ ರಾವ್ ಅವರುಗಳು ಈ ಯೋಜನೆಯನ್ನು ಮತ್ತಷ್ಟು ಸುಧಾರಿಸಿದರು. ಅವರ ಶ್ರಮವಿಲ್ಲದೇ ಇರುತ್ತಿದ್ದರೆ ಇಂದಿನ ಮೈಸೂರಿಗೆ ಉತ್ತಮ ನಗರವೆಂಬ ಪಟ್ಟ ಎಲ್ಲಿತ್ತು? ವಿಶ್ವೇರಯ್ಯನವರ ನಿವೃತ್ತಿಯ ನಂತರ ಅವರ ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾಡಿದ ನಗರಾಭಿವೃದ್ಧಿ ಕಾರ್ಯ ದೇಶಾದ್ಯಂತ ಹೆಸರಾಯಿತು. ಬಾಂಬೆ ಸರಕಾರ ಅವರನ್ನು ನಗರಾಭಿವೃದ್ಧಿ ಮತ್ತು ಉಪನಗರಗಳ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ವಿನಂತಿ ಮಾಡಿಕೊಂಡಿತು. ಆ ಹೊತ್ತಲ್ಲಿ ಬಾಂಬೆ ನಗರ ಪಾಲಿಕೆಯ ಸ್ಥಿತಿ ತೀರಾ ಹದಗೆಟ್ಟಿತ್ತು. ಅಂಥಾ ಪಾಲಿಕೆಯನ್ನು ವಿಶ್ವೇಶ್ವರಯ್ಯನವರು ಮೇಲಕ್ಕೆತ್ತಿದರು. ಮುನ್ಸಿಪಲ್ ರೀಸರ್ಚ್ ಬ್ಯೂರೋವನ್ನು ರಚನೆ ಮಾಡಿ, ಅಮೆರಿಕಾ ಮಾದರಿಯಲ್ಲಿ ನಗರ ನಿರ್ಮಾಣಕ್ಕೆ ಸೂಚನೆಗಳನ್ನು ಕೊಟ್ಟರು. ಮುಂಬೈಯ ಮಾರ್ಕೆಟ್ ಮತ್ತು ಅಂಧೇರಿ ಭಾಗಗಳು ಇಂದು ಹೀಗಿರುವುದಕ್ಕೆ ಮೂಲ ಕಾರಣ ವಿಶ್ವೇಶ್ವರಯ್ಯನವರು ಮತ್ತು ಅದಕ್ಕೆ ಮಾದರಿಯಾಗಿದ್ದು ನಮ್ಮ ಮೈಸೂರು.
ಬಾಂಬೆ ಮಾದರಿಯ ಯಶಸ್ವಿನಿಂದ 1924ರಲ್ಲಿ ಕರಾಚಿ ನಗರ ನಿರ್ಮಾಣ ಮತ್ತು ಸುಧಾರಣೆಗೆ ಸರ್.ಎಂವಿಯವರನ್ನು ವಿನಂತಿ ಮಾಡಲಾಯಿತು. ಕರಾಚಿಯಲ್ಲೂ ಮೈಸೂರು ಮಾದರಿ ಯಶಸ್ವಿಯಾಯಿತು. ಇವಿಷ್ಟೇ ಅಲ್ಲ. ಮೈಸೂರಿನ ನೀರು ಸರಬರಾಜಿನಂತೆ ಖಾನ್ ದೇಶದ ಧುಲಿಯಾದಲಿ, ಗುಜರಾತಿನ ಸೂರತ್‌ನಲ್ಲಿ, ಮಹಾರಾಷ್ಟ್ರದ ನಾಸಿಕ್, ಪುಣೆ, ನಮ್ಮ ಧಾರವಾಡ, ವಿಜಯಪುರ, ಬೆಳಗಾವಿ. ನೆರೆಯ ಕೊಲ್ಲಾಪುರಗಳಲ್ಲೂ ಯಶಸ್ವಿಯಾಯಿತು. ಜತೆಗೆ ನಗರ ಯೋಜನೆ ರೂಪಿಸಿಕೊಡಬೇಕೆಂಬ ಇಂಧೋರ್, ಗ್ವಾಲಿಯರ್, ಸಿಂಧ್‌ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್‌ಎಂವಿಯವರು ರೂಪಿಸಿದರು. ಅದಕ್ಕೆಲ್ಲಾ ಮಾದರಿಯಾಗಿದ್ದು, ಪ್ರೇರಣೆಯಾಗಿದ್ದು ನಮ್ಮ ಮೈಸೂರು.
ಜನನಿಬಿಡ ಪಟ್ಟಣಗಳಾದರೂ ಸ್ವಚ್ಛತೆಯಿಂದ ಕಾಣುವ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್ನಗರಗಳು ಇಂದೂ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸದೆ ಇರುವುದಕ್ಕೆ ಕಾರಣ ಕೂಡಾ ನಮ್ಮ ಮೈಸೂರು ಮಾದರಿ. ಮೈಸೂರು ಮಾದರಿಯನ್ನು ದೇಶಾದ್ಯಂತ ಕಂಡು ಬೆರಗಾದ ಬ್ರಿಟಿಷರು ‘ಮೈಸೂರು ಮಾದರಿಯ ಇಂಥ ಯೋಜನೆಗಳು ಮಿಲಾನ್, ಡುಸ್ಸೆಲ್ ಡ್ರಾಫ್, ಲಂಡನ್ ಮತ್ತು ಫ್ರಾನ್ಸಿನ ಗುಣಮಟ್ಟದ್ದು’ ಎಂದು ಹೊಗಳಿದರು. ಹಾಗಾಗಿಯೇ ನಮ್ಮ ರಾಜಕಾರಣಿಗಳು ನರ್ಮ್ ಹೆಸರಲ್ಲಿ ದುಡ್ಡನ್ನು ನುಂಗಿಹಾಕಿದರು, ರಾಜಪಥದ ಹೆಸರಲ್ಲಿ ರಾಜಾರೋಷವಾಗಿ ಕೊಳ್ಳೆಹೊಡೆದರು, ಮೈಸೂರು ಯೋಜಿತ ನಗರ ಚಂಡೀಗಢವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ”Victory has a Thousand Fathers, but defeat is an Orphan” ಎಂದು ಕ್ಯೂಬಾ ಸೋಲಿನ ನಂತರ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನೆಡಿ ಹೇಳಿದ್ದರು. ಅದೇ ರೀತಿ ಮೈಸೂರಿಗೆ ಸ್ವಚ್ಛನಗರ ಎಂಬ ಕಿರೀಟ ಬಂದ ಕೂಡಲೇ ಯಾರ‍್ಯಾರೋ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಆ ಖ್ಯಾತಿಯ ಹಿಂದಿರುವ ನಿಜವಾದ ಒಡೆಯರು ಯಾರೆಂದು ಈಗ ತಿಳಿಯಿತೇ?!

sm

Comments are closed.