Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್!

ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್!

ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್!

ಅದುವರೆಗೆ ತಣ್ಣಗಿದ್ದ ಕ್ರೀಡಾಲೋಕಕ್ಕೆ 80ರ ದಶಕದ ಆರಂಭದಲ್ಲಿ ಹೊಸ ಅಲೆಯೊಂದು ಅಪ್ಪಳಿಸಿತು. ಒಂದು ರೀತಿಯ ಕ್ರೇಜ್, ಮೇನಿಯಾ ಆವರಿಸಿಕೊಂಡಿತು. ಅದಕ್ಕೆ ಒಂದು ಕಾರಣ, ಟಿವಿ ಪೆಟ್ಟಿಗೆ ಮನೆಮನೆಗೆ ಬಂದು ಕ್ರೀಡಾಪ್ರೇಮಿಗಳ ಕುತೂಹಲವನ್ನು ಏರಿಸಿದ್ದು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆ ಹೊತ್ತಲ್ಲಿ ಟಿವಿ ಪ್ರವೇಶಿಸಿರದಿದ್ದರೂ ರೇಡಿಯೋ ಕಾಮೆಂಟರಿ ಗಳು ಕ್ರೀಡೆಗಳ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ್ದವು. ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತೊಂದು ಕಾರಣ ಆ ಎಂಬತ್ತರ ದಶಕದಲ್ಲಿ ಹುಟ್ಟಿಕೊಂಡ ಕ್ರೀಡಾ ದಿಗ್ಗಜರು. ವಿವಿಧ ಕ್ರೀಡೆಗಳ ದೈತ್ಯ ಪ್ರತಿಭೆಗಳು ಕ್ರೀಡಾಪ್ರೇಮಿಗಳಲ್ಲಿ ಹುಚ್ಚು ಹಿಡಿಸಿದ್ದರು. ಜನ ಅವರ ಮೋಡಿಗೆ ಒಳಗಾಗಿದ್ದರು. ಆ ಹೊತ್ತಲ್ಲಿ ಫಟ್ಬಾಲಿಗೆ ಒಬ್ಬ ಮರಡೋನಾ ಸಿಕ್ಕಿದ್ದ. ಕ್ರಿಕೆಟಿಗೆ ರಿಚರ್ಡ್ಸ್, ಕಪಿಲ್, ಗವಾಸ್ಕರ್, ಹೇಡ್ಲಿಗಳು ಸಿಕ್ಕಿದ್ದರು.

ಟೆನ್ನಿಸ್ನಲ್ಲಿ ಬೇಕರ್, ಎಡ್ಬರ್ಗ್, ಸಾಂಪ್ರಾಸ್, ಸ್ಟೆಫಿಗ್ರಾಫಗಳು ಉದಯಿಸಿ ದ್ದರು. ಅಂಥ ಹೊತ್ತಲ್ಲಿ ವಿಶ್ವದ ಹಾಕಿ ಜಗತ್ತಿನಲ್ಲಿ ನಕ್ಷತ್ರವೊಂದು ಉದಯಿಸಿತು. ಆ ನಕ್ಷತ್ರ ಇಡೀ ಹಾಕಿ ರಂಗವನ್ನೇ ಆಕರ್ಷಿಸಿತು. ಬರೋಬ್ಬರಿ ಒಂದು ದಶಕಗಳ ಕಾಲ ಆ ನಕ್ಷತ್ರ ಹೊಳೆಯುತ್ತಲೇ ಇತ್ತು. ಆ ಹೊಳೆಯುವ ಹಾಕಿ ನಕ್ಷತ್ರದ ಹೆಸರು ಮೊಹಮದ್ ಶಾಹಿದ್. 1980ನೇ ಇಸವಿ. 19 ವರ್ಷದ ವಾರಾಣಸಿಯ ಹುಡುಗ ಮೊಹಮದ್ ಶಾಹಿದ್ ಭಾರತೀಯ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆಯಾದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಜಲಂಧರ್, ಭಟೀಂಡಾ, ಅಮೃತಸರ, ಮೆಡ್ರಾಸ್, ಕೂರ್ಗ್ ಗಳ ಪ್ರತಿಭೆಗಳನ್ನು ಬಿಟ್ಟು ಕಾಶಿಯ ಗಲ್ಲಿಯ ಹುಡುಗನನ್ನು ಆರಿಸಲಾಗಿದೆ ಎಂದು ಕೆಲವು ಹಾಕಿ ತಜ್ಞರು ಕಿಚಾಯಿಸಿದರು. ಇನ್ನು ಕೆಲವರು ಈ ಹುಡುಗನಿಗೆ ಇನ್ನೂ ಹಾಲು ಬತ್ತಿಲ್ಲ ಎಂದು ತಮಾಷೆ ಮಾಡಿದರು. ಅಂತಾರಾಷ್ಟ್ರೀಯ ಹಾಕಿ ಆಡುವುದೆಂದರೆ ಕಾಶಿಯ ಗಲ್ಲಿಯಲ್ಲಿ ತಿರುಗಿದಂತಲ್ಲ ಎಂದು ಕೆಲವರು ಕುಗ್ಗಿಸಿದರು. ತಂಡದಲ್ಲೂ ಒಂದು ರೀತಿಯ ಅಸಮಾಧಾನವಿತ್ತು.
ಆದರೆ ಹುಡುಗ ಶಾಹಿದ್ ಮೌನಿಯಾಗಿದ್ದ. ಊಟದ ಟೇಬಲ್  ನಲ್ಲಿ  ಕುಳಿತಿದ್ದರೂ ಆತನ ಕಾಲು ನೆಲದಲ್ಲಿ ಗೆರೆ ಎಳೆಯುತ್ತಿತ್ತು, ಬೆಳಗಿನ ಜಾಗಿಂಗ್ ನಲ್ಲೂ  ಆತನ ಮೊಳಕೈ ಅಭ್ಯಾಸವೆಂಬಂತೆ ತಿರುಗುತ್ತಿದ್ದವು. ಆತ ಲಯಬದ್ಧವಾಗಿ ಓಡುತ್ತಿದ್ದ. ಇದ್ದಕ್ಕಿದ್ದಂತೆ ಒಂದಿಂಚೂ ಕದಲದಂತೆ ಧಡಕ್ಕನೆ ನಿಂತು ಬಿಡುತ್ತಿದ್ದ. ಶಿಬಿರದಲ್ಲಿ ಆತನ ವಿಚಿತ್ರ ವರ್ತನೆಯನ್ನು ಗಮನಿಸುತ್ತಿದ್ದ ಕೋಚ್ ಈ ಹುಡುಗನಲ್ಲಿ ಏನೋ ಒಂದು ಇದೆ ಎಂದುಕೊಂಡರು. ಜೂನಿಯರ್ ತಂಡ ವಿಶ್ವಕಪ್ ಆಡಲು ಫನ್ಸ್ಗೆ ತೆರಳಿತು. ಆ ಹುಡುಗ ಮೊಹಮದ್ ಶಾಹಿದ್ ಮೊದಲ ಪಂದ್ಯದ ಮೋಡಿ ಮಾಡಿದ. ಆತನ ಅಸಾಧಾರಣವಾದ ಡ್ರಿಬ್ಲಿಂಗ್, ಎದುರಾಳಿಗಳನ್ನು ವಂಚಿಸುವ ತಂತ್ರ, ಅತಿಯಾದ ವೇಗವನ್ನು ಕಂಡ ಯುರೋಪಿಯನ್ ಕಾಮೆಂಟೇಟರ್ಗಳು ಇವನೊಬ್ಬ ‘ಮ್ಯಾಜೀಶಿಯನ್’ ಎಂದು ಕರೆದರು. ಪಂದ್ಯಾವಳಿಯಲ್ಲಿ ಭಾರತ ಯಶಸ್ವಿಯಾಗಲಿಲ್ಲ.

ಶಾಹಿದ್ ಗೋಲುಗಳ ಸಂಖ್ಯೆಯಿಂದ ಗಮನ ಸೆಳೆಯಲಿಲ್ಲ. ಆದರೆ ಆತನ ಮೋಡಿ ಮಾಡುವ ಡ್ರಿಬಲ್, ಅಂದದ ಪಾಸುಗಳು, ಓಟದ ಲಹರಿ, ಚೆಂಡನ್ನು ಹಿಟ್ ಮಾಡುವ ಶೈಲಿ, ಫ್ಲಿಕ್ ಮಾಡುವ ರೀತಿ, ಬೇಟೆಗಾರನಂತೆ ಚೆಂಡನ್ನು ಹಿಂಬಾಲಿಸುವ ಹಠ, ಎದುರಾಳಿಗಳ ಕೈಯಿಂದ ಚೆಂಡನ್ನು ಕಸಿಯಲು ಅರೆಬಗ್ಗುವಲ್ಲಿ, ನುಗ್ಗುವಲ್ಲಿ ಕಾಣುವ ತನ್ಮಯತೆ, ಮೈಚಳಿ ಬಿಟ್ಟು ಆಡುವ ಗಂಭೀರತೆಗಳು ಒಬ್ಬ ಅನುಭವಿ ಆಟಗಾರನ ಗುಣದಂತೆ ಕಾಣುತ್ತಿತ್ತು. ಆಯ್ಕೆಯ ಹೊತ್ತಲ್ಲಿ ಶಾಹಿದ್ ಬಗ್ಗೆ ಮಾತಾಡಿದವರೆಲ್ಲರೂ ಬೆರಗಾದರು. ಅಷ್ಟೇ ಅಲ್ಲ, ಶಾಹಿದ್ ಆಟವನ್ನು ಆಗಿನ ಭಾರತೀಯ ಸೀನಿಯರ್ ತಂಡ ಕೂಡಾ ಗಮನಿಸಿತು. ಈತ ದೊಡ್ಡವರೊಡನೆಯೂ ಆಡಬಲ್ಲ ಎಂಬುದನ್ನು ಹಿರಿಯ ಆಟಗಾರರು ಗುರುತಿಸಿದ್ದರು. ಆತನ ಪ್ರತಿಭೆಗೆ ಮತ್ತಷ್ಟು ಶಿಸ್ತಿನ ಅಗತ್ಯವಿದೆ ಎಂಬುದನ್ನು ಆಯ್ಕೆ ಸಮಿತಿ ಮನಗಂಡಿತು.

ಅದಾದ ಒಂದೇ ವರ್ಷದಲ್ಲಿ ಮೊಹಮದ್ ಶಾಹಿದ್ ಕೌಲಾಲಂಪುರ್ ನಲ್ಲಿ    ನಡೆದ ನಾಲ್ಕು ದೇಶಗಳ ಟೂರ್ನಿಗೆ ಆಯ್ಕೆಯಾದ. ನಾಚಿಕೆ ಸ್ವಭಾವದ ಶಾಹಿದ್ ಹಿರಿಯರ ಜತೆ ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಿದ. ಅಂದಿನ ಭಾರತೀಯ ತಂಡದಲ್ಲಿದ್ದ ಘಟಾನುಘಟಿ ಆಟಗಾರರಾದ ಮಾರ್ಟಿನ್ ಕಾರ್ವಾಲೋ, ಝಾಫರ್ ಇಕ್ಬಾಲ್, ಹರ್ದೀಪ್ ಸಿಂಗ್ ಅವರನ್ನು ಆಗಷ್ಟೇ 20 ತುಂಬಿದ ಶಾಹಿದ್ ಬೆರಗಿನಿಂದ ನೋಡುತ್ತಿದ್ದ. ಅಕ್ಷರಶಃ ಮೊಹಮದ್ ಶಾಹಿದ್ ಸ್ಥಿತಿ ದೋಣಿಯಲ್ಲಿ ಕೂರಿಸಿ ಕಡಲಲ್ಲಿ ಬಿಟ್ಟಂತಿತ್ತು. ಹುಟ್ಟುಹಾಕುವ ಶಕ್ತಿಯಿದ್ದರಷ್ಟೇ ಇಲ್ಲಿ ದಡ ಸೇರಬಹುದು ಎಂಬ ಸತ್ಯ ಶಾಹಿದ್  ಗೆ  ಗೊತ್ತಿತ್ತು. ಜತೆಗೆ ಆ ಶಕ್ತಿಯೂ ಆತನಿಗಿತ್ತು. ಶಾಹಿದ್  ನ  ಅಂಜಿಕೆಯನ್ನು ಮನಗಂಡ ಸೀನಿಯರ್ ಆಟಗಾರರು ಕೌಲಾಲಂಪುರದಲ್ಲೂ ಶಾಹಿದ್ ನನ್ನು     ಸೆಂಟರ್ ಫಾರ್ವರ್ಡ್ ಆಟಗಾರನನ್ನಾಗಿ ಮೈದಾನಕ್ಕಿಳಿಸಿಬಿಟ್ಟಿದ್ದರು. ಶಾಹಿದ್ ನೀರಿಗಿಳಿದ.
ಮೊದಲ ಬಾರಿ ಸಿಕ್ಕಿದ ಚೆಂಡನ್ನು ಸೆಂಟ್ರಲ್ ಲೈನಿನಿಂದ ಕೇವಲ ಹದಿನೈದೇ ಸೆಕೆಂಡುಗಳಲ್ಲಿ ಶತ್ರುಗಳ ಡಿ ಒಳಗೆ ತಲುಪಿಸಿ ಬಂದ! ನೆರೆದಿದ್ದ ಪ್ರೇಕ್ಷಕರು ಸಣ್ಣ ಹುಡುಗನ ವೇಗಕ್ಕೆ ಚಪ್ಪಾಳೆಗಳ ಸುರಿಮಳೆ ಸುರಿಸಿದರು. ಚೆಂಡು ಕೈಗೆ ಸಿಕ್ಕೊಡನೆ ಶಾಹಿದ್ ಬಿಟ್ಟ ಬಾಣದಂತೆ ಓಡುತ್ತಿದ್ದ. ಆತನ ವೇಗ ಎಷ್ಟಿತ್ತೆಂದರೆ ಒಮ್ಮೊಮ್ಮೆ ಆತನ ವೇಗಕ್ಕೆ ಇತರರು ಜತೆಯಾಗದೆ ಡಿಯೊಳಗೆ ಹಲವು ಪಾಸುಗಳು ಕೈಬಿಟ್ಟುಹೋಗುತ್ತಿದ್ದವಂತೆ. ಕೌಲಾಲಂಪುರ ದಲ್ಲೂ ಕೂಡಾ ಕಾಮೆಂಟೇಟರುಗಳು ಆತನನ್ನು ‘ಅಥ್ಲೆಟ್’ ಎಂದು ಕರೆದರು!

ಅದೇ ವರ್ಷ ಪಾಕಿಸ್ತಾನದ ಕರಾಚಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯುವುದಿತ್ತು. ಅದಕ್ಕೂ ಮೊಹಮದ್ ಶಾಹಿದ್ ಸೆಂಟ್ರಲ್ ಫವರ್ಡ್ ಆಟಗಾರರಾಗಿ ಆಯ್ಕೆಯಾದರು. ಇಡೀ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಪ್ರಪಂಚ ಎದುರು ನೋಡುತ್ತಿತ್ತು.

ಪಾಕಿಸ್ತಾನದಲ್ಲೂ ಈ ಸಣ್ಣ ವಯಸ್ಸಿನ ಆಟಗಾರನ ಸುದ್ದಿ ಕುತೂಹಲ ಕೆರಳಿಸಿತ್ತು. ಅದರಲ್ಲೂ ಒಬ್ಬ ಮುಸಲ್ಮಾನ ಪ್ರತಿಭೆ ಭಾರತ ತಂಡದಲ್ಲಿರುವುದನ್ನು ಕಂಡು ಪಾಕಿಸ್ತಾನದ ಜನ ಹೊಟ್ಟೆಕಿಚ್ಚು ಪಡುತ್ತಿದ್ದರು. ಪಾಕಿಸ್ತಾನಿ ಪತ್ರಿಕೆಗಳು ಆತನ ಬಗ್ಗೆ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿದ್ದವು. ಭಾರತಫಪಾಕಿಸ್ತಾನ ಪಂದ್ಯದಲ್ಲಿ ಈ ಹುಡುಗ ಅಪಾಯಕಾರಿಯಾಗ ಬಹುದು ಎಂದು ಪಾಕಿಸ್ತಾನದ ವಿಮರ್ಶಕರು ಅಂಕಣ ಬರೆದರು. ಪಂದ್ಯದ ಮುನ್ನಾ ದಿನದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಮೊಹಮದ್ ಶಾಹಿದ್ ಹಾಜರಿರಲೇಬೇಕೆಂದು ಪಟ್ಟು ಹಿಡಿದರು. ನಾಚಿಕೆ ಸ್ವಭಾವದ ಶಾಹಿದ್ ಮುದುಡುತ್ತಾ ಪತ್ರಿಕಾಗೋಷ್ಠಿಯಲ್ಲಿ ಕುಳಿತ. ಆತನಿಗೆ ತೂರಿಬಂದ ಮೊದಲ ಪ್ರಶ್ನೆಯೇ ‘ಒಬ್ಬ ಮುಸಲ್ಮಾನನಾಗಿ ಪಾಕಿಸ್ತಾನದ ವಿರುದ್ಧ ಆಡಲು ನಿಮಗೇನನ್ನಿಸುತ್ತದೆ?’ ಅದುವರೆಗೆ ಆವರಿಸಿಕೊಂಡಿದ್ದ ಎಲ್ಲಾ ಮುಜುಗರಗಳ ಕಟ್ಟು ಬಿಚ್ಚಿದ ಮೊಹಮದ್ ಶಾಹಿದ್ ಅಷ್ಟೇ ಬಿರುಸಾಗಿ ‘ನಾನು ಹುಟ್ಟಿದ್ದು ಕಾಶಿಯಲ್ಲಿ, ಕರಾಚಿಯಲ್ಲಲ್ಲ.
ಹಾಗಾಗಿ ಒಬ್ಬ ಭಾರತೀಯನಿಗೆ ಪಾಕಿಸ್ತಾನದ ವಿರುದ್ಧ ಆಡುವಾಗ ಏನನ್ನಿಸುತ್ತದೋ ಹಾಗೇ ಅನ್ನಿಸುತ್ತದೆ’ ಎಂದು ಉತ್ತರಿಸಿದ್ದರು.

ಮರುದಿನದ ಪಂದ್ಯ ನಿರೀಕ್ಷೆಯಂತೆ ಪೈಪೋಟಿಯಿಂದ ಕೂಡಿತ್ತು. ಭಾರತೀಯ ತಂಡದಲ್ಲಿ ಸೆಂಟ್ರಲ್ ಫಾವರ್ಡ್ ಎಕ್ಸ್ ಪ್ರೆಸ್ ವೇಗದಲ್ಲಿ ಸಾಗುತ್ತಿದ್ದರೆ ಪಾಕಿಸ್ತಾನ ತಂಡದಲ್ಲಿ ಅತಿರಥ ಮಹಾರಥರ ಪಡೆಯೇ ಇತ್ತು. ಡ್ರ್ಯಾಗ್ ಫ್ಲಿಕ್ಕರ್ ದೈತ್ಯ ಮತ್ತು ಪಾಕಿಸ್ತಾನ ತಂಡದಲ್ಲಿ ಆಗ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಹೊಂದಿದ್ದ ಹಸನ್ ಸರ್ದಾರ್ ಎಂಬ ಆಟಗಾರ ಇದ್ದ. ವಿಶ್ವ ಶ್ರೇಷ್ಠ ಗೋಲ್ ಕೀಪರ್ ಶಾಹೀದ್ ಆಲಿ ಖಾನ್ ಇದ್ದ. ಲೆಫ ಔಟ್ ನಲ್ಲಿ ಅತಿ ವೇಗದ ಮುಂಪಡೆ ಆಟಗಾರ ಹನೀಫ ಖಾನ್ ಇದ್ದ. ಭಾರತೀಯ ತಂಡ ಮೈದಾನಕ್ಕಿಳಿದಾಗ ಪಾಕಿಸ್ತಾನದ ಸಮರ್ಥಕರು ವಿನಾ ಕಾರಣ ‘ಮೊಹಮದ್ ಶಾಹಿದ್ ಮುರ್ದಾಬಾದ್’, ‘ಮೊಹಮದ್ ಶಾಹಿದ್ ಕಾಫಿರ್ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು.
ಯುವಕ ಕಣ್ಣಲ್ಲಿ ನೀರಿಳಿಸುತ್ತಲೇ ಮೈದಾನಕ್ಕಿಳಿದ. ಭಾರತೀಯ ತಂಡದ ಮತ್ತೊಬ್ಬ ಆಟಗಾರ ಝಾಫರ್ ಇಕ್ಬಾಲ್, ಶಾಹಿದ್ನ ಬೆನ್ನಿಗೆ ಕೈಹಾಕಿ ‘ಇವರಲ್ಲಿ ಇದು ಇದ್ದಿದ್ದೇ. ಮಿಲ್ಖಾ ಸಿಂಗ್ ನನ್ನೇ ಇವರು ಬಿಡಲಿಲ್ಲ. ಇನ್ನು ನಮ್ಮನ್ನು ಬಿಟ್ಟಾರಾ? ಕೋಪಿಸಿಕೊಳ್ಳಬೇಡ. ನಿನ್ನ ಕೋಪವನ್ನು ಮೈದಾನದಲ್ಲಿ ತೋರಿಸು’ ಎಂದರು.

ಕರಾಚಿಯಲ್ಲಿ ಶಾಹಿದ್ ಮೋಡಿ ಮಾಡಿದರು. ಅಂದಿನ ಪಂದ್ಯದಲ್ಲಿ ಶಾಹಿದ್ ವೇಗ ಎಂದಿಗಿಂತ ಹೆಚ್ಚಿತ್ತು. ಅವರ ವೇಗ ಮತ್ತು ಡ್ರಿಬ್ಲಿಂಗ್ ಅನ್ನು ಟ್ಯಾಕಲ್ ಮಾಡಲು ಪಾಕಿಸ್ತಾನಿಗಳು ಒದ್ದಾಡಿದರು. ಡಿ ಒಳಗೆ ಅವರು ನೀಡುತ್ತಿದ್ದ ಲಾಂಗ್ ಪಾಸು ಗಳಿಂದ ಪಾಕಿಸ್ತಾನಿ ಪ್ರೇಕ್ಷಕರ ಎದೆ ಒಡೆದಂತಾಗುತ್ತಿತ್ತು. ಹಲವು ಹಿಟ್ ಗಳು ಗೋಲು ಪೆಟ್ಟಿಗೆಯ ಅಂಚಿನಲ್ಲಿ ದಾಟುತ್ತಿದ್ದವು. ಲೆಫ್ಟ್ ಔಟಿನಲ್ಲಿ ದೇವರಿದ್ದಂತೆ ಎಂದು ಹೊಗಳಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಹನೀಫ ಖಾನ್ ಚೆಂಡಿಗೆ ಒದ್ದಾಡುವಂತಾದ. ಮೊದಲ ವಿರಾಮದ ನಂತರ ಪಾಕಿಸ್ತಾನ ರಣತಂತ್ರವೊಂದನ್ನು ಹೆಣೆಯಿತು. ಇಬ್ಬರು ಆಟಗಾರರು ಮೊಹಮದ್ ಶಾಹಿದ್ರನ್ನು ಸುತ್ತುವರಿದು ಆಡತೊಡಗಿದರು.
ಅಲ್ಲೂ ಪಾಕಿಸ್ತಾನ ಎಡವಿತು. ಏಕೆಂದರೆ ಅವರನ್ನು ಸುತ್ತುವರಿದರೂ ಅವರ ವೇಗಕ್ಕೆ ಎದುರಾಳಿಗಳು ಸಾಟಿಯಾಗಲಿಲ್ಲ. ಪಂದ್ಯ ಕೊನೆಗೊಂಡಾಗ ಪಾಕಿಸ್ತಾನ ಭಾರತದ ವಿರುದ್ಧ 2- 1ರಲ್ಲಿ ಸೋಲೊಪ್ಪಿಕೊಂಡಿತ್ತು. ವಿಜಯದ ಎರಡೂ ಗೋಲುಗಳ ಪಾಸನ್ನು ಮೊಹಮದ್ ಶಾಹಿದ್ ನೀಡಿದ್ದರು!

ಈ ಪಂದ್ಯ ಭಾರತ ಮತ್ತು ಪಾಕಿಸ್ತಾನದಾದ್ಯಂತ ಸಂಚಲನ ಹುಟ್ಟಿಸಿತ್ತು. ಪಾಕಿಸ್ತಾನದಲ್ಲಿ ರೇಡಿಯೋ ಕಾಮೆಂಟರಿ ಕೇಳುತ್ತಿದ್ದ ಕೆಲವು ಜನರು ಮೊಹಮದ್ ಶಾಹಿದ್ ಎಂಬ ಹೆಸರನ್ನು ಪದೇ ಪದೆ ಕೇಳುತ್ತಾ ಇವನೊಬ್ಬ ಪಾಕಿಸ್ತಾನಿ ಆಟಗಾರ ಎಂದೇ ಭಾವಿಸಿ ವಿಜಯೋತ್ಸವವನ್ನೂ ಆಚರಿಸಿಬಿಟ್ಟಿದ್ದರು! ಗೆಲವಿನ ನಂತರ ಪತ್ರಿಕಾಗೋಷ್ಠಿಗೆ ಹಾಜರಾಗುವಂತೆ ಕೋಚ್ ಶಾಹಿದ್ ರನ್ನು   ಆಹ್ವಾನಿಸಿದರು. ಹಿಂದಿನ ಪತ್ರಿಕಾಗೋಷ್ಠಿಯ ಕಹಿ ನೆನಪಿಗೆ ಹೆದರಿದ ಶಾಹಿದ್ ಅದರಲ್ಲಿ ಪಾಲ್ಗೊಳ್ಳಲು ನಿರಾಕರಿಸಿ ಡ್ರೆಸ್ಸಿಂಗ್ ರೂಮಿಗೆ ತೆರಳಿದ. ಪಂದ್ಯಾವಳಿಯಲ್ಲಿ ಶಾಹಿದ್ಗೆ ‘ಬೆಸ್ಟ್ ಫಾರ್ವರ್ಡ್ ಆಟಗಾರ’ ಪಟ್ಟ ನೀಡಲಾಯಿತು.

ಕರಾಚಿ ಪ್ರವಾಸದಿಂದ ಮೊಹಮದ್ ಶಾಹಿದ್ ಭಾರತದಲ್ಲಿ ಮನೆಮಾತಾದರು. ಭಾರತಕ್ಕೆ ಚಾಂಪಿಯನ್ ಟ್ರೋಫಿ ಸಿಗದಿದ್ದರೂ ಉತ್ತಮ ಫವರ್ಡ್ ಆಟಗಾರನೊಬ್ಬ ಸಿಕ್ಕಿದ್ದ.ನಂತರ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿತಂಡ ಚಿನ್ನದ ಪದಕ ಪಡೆಯಲೂ ಶಾಹಿದ್ ಕಾರಣರಾದರು. ಲೀಗ್ ಹಂತದಲ್ಲಿ ಶಾಹಿದ್ ಹೆಚ್ಚು ಗೋಲು ಗಳಿಸದಿದ್ದರೂ ಗಳಿಸಿದ ಬಹುತೇಕ ಎಲ್ಲಾ ಗೋಲುಗಳಿಗೆ ಫಿನಿಶಿಂಗ್ ಮಾಡಬಲ್ಲ ಪಾಸುಗಳನ್ನು ಶಾಹಿದ್ ನೀಡಿದ್ದರು. ಆಗ ಪ್ರಬಲ ತಂಡ ಸ್ಪೇನ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿ ಚಿನ್ನದ ಪದಕ ಪಡೆಯಲು ಕಾರಣರಾದರು. ಆ ಗೋಲು ಶಾಹಿದ್ ರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.
ಏಕೆಂದರೆ ಆ ಕೊನೆಯ ನಿಮಿಷದವರೆಗೂ ಭಾರತ ಚಿನ್ನದ ಪದಕದ ಆಸೆಯನ್ನೇ ಇಟ್ಟು ಕೊಂಡಿರಲಿಲ್ಲ! 1985ರಲ್ಲಿ ಪ್ರತಿಷ್ಠಿತ ಅಜ್ಲಾನ್ ಷಾ ಕಪ್ ಮತ್ತು 86ರಲ್ಲಿ ಪಾಕಿಸ್ತಾನದಲ್ಲಿ ನಡೆದ ನಾಲ್ಕು ದೇಶಗಳ ಟೂರ್ನಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ ಶಾಹಿದ್ ಎರಡೂ ಕಪ್ ಗಳನ್ನು ಗೆದ್ದು ಭಾರತೀಯ ಹಾಕಿಯ ಗೌರವವನ್ನು ಹೆಚ್ಚಿಸಿದ್ದರು. ಮೊಹಮದ್ ಶಾಹಿದ್ ಭಾಗವಹಿಸಿದ ಎ ಟೂರ್ನಮೆಂಟು ಗಳಲ್ಲಿ ಭಾರತ ಪದಕ ಪಡೆಯದೇ ಇರಬಹುದು ಆದರೆ 80ರ ದಶಕದಲ್ಲಿ ಭಾರತೀಯ ಹಾಕಿಗೆ ಬಹುದೊಡ್ಡ ಕಿರೀಟವನ್ನು ಶಾಹಿದ್ ಕೊಟ್ಟರು. ಅದೇ ವಿಶ್ವ ಹಾಕಿ ರಂಗದ ಪ್ರಖ್ಯಾತ ‘ಇಂಡಿಯನ್ ಡ್ರಿಬ್ಲಿಂಗ್’ ಎಂಬ ಹೊಸ ಬಿರುದು. ಶಾಹಿದ್ ಅವರಿಗಿಂತ ಮೊದಲೇ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಅತ್ಯದ್ಭುತ ಡ್ರಿಬಲ್ ಗಳಿದ್ದರೂ ಅದಕ್ಕೊಂದು ಆಕರ್ಷಣೆಯನ್ನು, ಚಾಕಚಕ್ಯತೆಯನ್ನು, ಸೌಂದರ್ಯವನ್ನು ಕೊಟ್ಟವರು ಮೊಹಮದ್ ಶಾಹಿದ್.
ಹಲವು ವರ್ಷಗಳ ಕಾಲ ವಿಶ್ವ ಹಾಕಿಯ ಆಲ್ ಸ್ಟಾರ್ಸ್ ಟೀಮ್  ನಲ್ಲಿ ಸ್ಥಾನ ಪಡೆದ ಕೆಲವೇ ಕೆಲವು ಏಷ್ಯನ್ ಆಟಗಾರರಲ್ಲಿ ಶಾಹಿದ್ ಒಬ್ಬರು. ಅದಕ್ಕೆ ಕಾರಣ ಅವರ ಅಸಾಧಾರಣವಾದ ಡ್ರಿಬಲ್. ಒಂದು ವೇಳೆ 80ರ ದಶಕದಲ್ಲಿ ಮೊಹಮದ್ ಶಾಹಿದ್ ಹಾಕಿ ಮೈದಾನಕ್ಕಿಳಿಯದಿರುತ್ತಿದ್ದರೆ ಇಂದು ‘ಇಂಡಿಯನ್ ಡ್ರಿಬಲ್’ ಎಂಬ ಹೆಸರಿನ ಬದಲು ‘ಪಾಕಿಸ್ತಾನಿ ಡ್ರಿಬಲ್’ ಎಂಬ ಹೆಸರು ಹಾಕಿಯಲ್ಲಿ ಶಾಶ್ವತವಾಗಿರುತ್ತಿತ್ತು. ಇವರ ಡ್ರಿಬಲ್ ಮತ್ತು ಎದುರಾಳಿಗಳನ್ನು ವಂಚಿಸುವ, ದಿಕ್ಕು ತಪ್ಪಿಸುವ ತಂತ್ರ ಅಂದು ಎಷ್ಟೊಂದು ಖ್ಯಾತವಾಗಿತ್ತೆಂದರೆ ಭಾರತದ ವಿರುದ್ಧ ಆಡುವ ತಂಡಗಳು ಮೈದಾನದಲ್ಲಿ ‘ಶಾಹಿದ್ ಜೋನ್’ ಎಂಬ ವಿಶೇಷ ರಣತಂತ್ರವನ್ನು ರೂಪಿಸುತ್ತಿದ್ದರು. ಶಾಹಿದ್ ಅಂತಾರಾಷ್ಟ್ರೀಯ ಹಾಕಿ ಆಡಿದಷ್ಟು ದಿನವೂ ಅಂತಾರಾಷ್ಟ್ರೀಯ ಹಾಕಿಗೆ ಸರಿಯಾದ ‘ಶಾಹಿದ್ ಜೋನ್’ ರೂಪಿಸಲು ಆಗಲೇ ಇಲ್ಲ. ಭಾರತೀಯ ಹಾಕಿಯ ಎರಡು ಪೀಳಿಗೆಯ ನಡುವಿನ ಕೊಂಡಿಯಂತಿದ್ದ  ಶಾಹಿದ್ ಅನೇಕ ಯುವ ಆಟಗಾರರಿಗೆ ಪ್ರೇರಣೆಯಾದರು. ನಾವು ಧ್ಯಾನ್ ಚಂದ್ ಆಟವನ್ನು ನೋಡಿಲ್ಲ. ಆದರೆ ಅವರ ಹಾಕಿಯ ಮಾಂತ್ರಿಕತೆಯನ್ನು ಕೇಳಿದ್ದೇವೆ.ಅಂಥ ಮಾಂತ್ರಿಕತೆಗೆ ಮತ್ತಷ್ಟು ವೇಗ ತುಂಬಿದವರು ಮೊಹಮದ್ ಶಾಹಿದ್.

ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ಎರಡೇ ವರ್ಷದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನವಾಯಿತು. ಆದರೆ 1999ರ ಬೀಜಿಂಗ್ ಏಷ್ಯನ್ ಗೇಮ್ಸ್ ನಲ್ಲಿ ತಮ್ಮ ಕೊನೆಯ ಪಂದ್ಯ ಆಡಿದ ಮೇಲೆ ಮೊಹಮದ್ ಶಾಹಿದ್ ಹೆಚ್ಚು ಸುದ್ದಿಯಾಗಲಿಲ್ಲ. ಏಕೆಂದರೆ ಅದಾಗಲೇ ಭಾರತೀಯ ಹಾಕಿಯಲ್ಲಿ ರಾಜಕೀಯ ವಕ್ಕರಿಸಿಕೊಂಡಿತ್ತು. ಪ್ರತಿಭೆಗಳು ಬಣಗಳ ನಡುವೆ ಒದ್ದಾಡಿ ಒಡೆದು ಹೋಗಿದ್ದವು. ಹಾಕಿಯನ್ನೇ ಉಸಿರಾಡುತ್ತಿದ್ದ ಶಾಹಿದ್ ಯಾವ ಬಣಗಳೊಡನೆಯೂ ಗುರುತಿಸಿಕೊಳ್ಳದೆ ತಟಸ್ಥವಾಗು ಳಿದರು. ಅದೇ ಹೊತ್ತಿಗೆ ಭಾರತೀಯ ಹಾಕಿಯಲ್ಲಿ ಸೋಲುವ ಸರಣಿಗಳು ಆರಂಭವಾಗಿದ್ದವು. ಒಂದು ಕಾಲದಲ್ಲಿ ಇಂಡಿಯನ್ ಡ್ರಿಬ್ಲಿಂಗ್ ಗಳಿಂದ ಎದುರಾಳಿಗಳನ್ನು ಹೆದರಿಸುತ್ತಿದ್ದ ಭಾರತೀಯ ಹಾಕಿಯಲ್ಲಿ ಈಗ ಲಾಂಗ್ ಪಾಸ್ ಗಳು, ಆಧುನಿಕ ನಿಯಮಗಳಿಂದ ಚಾಕಚಕ್ಯತೆಗಳು ಮರೆಯಾಗಿದ್ದವು.
ಭಾರತೀಯ ಹಾಕಿಗೆ ವಿದೇಶಿ ಕೋಚ್ ಗಳನ್ನು ನೇಮಿಸುವ ಶೋಕಿಯೂ ಆರಂಭವಾಗಿತ್ತು. ವಿಚಿತ್ರ ಎಂದರೆ ಅಂದು ಯಾವ ವಿದೇಶಿ ಆಟಗಾರರು ಶಾಹಿದ್ ಜೋನ್ ರಚಿಸಿ ಭಾರತೀಯ ಹಾಕಿ ತಂಡವನ್ನೆದುರಿಸಲು ಹೆದರುತ್ತಿದ್ದರೋ ಅಂಥವರೇ ಭಾರತ ತಂಡಕ್ಕೆ ತರಬೇತುದಾರರಾಗಿ ಬಂದರು.

ಅಂಥ ಮೊಹಮದ್ ಶಾಹಿದ್ ಎಂದೆಂದೂ ಭಾರತೀಯ ಹಾಕಿ ರಂಗದ ಶಾಹಿದ್ ಆಗಿ ಉಳಿಯುತ್ತಾರೆ. ಕೆಲವೇ ದಿನಗಳಲ್ಲಿ ಭಾರತೀಯ ಹಾಕಿ ತಂಡ ಒಲಿಂಪಿಕ್  ನಲ್ಲಿ ಮೈದಾನಕ್ಕಿಳಿಯಲಿದೆ. ಒಲಿಂಪಿಕ್ ನಲ್ಲಿ ಭಾರತ ನಿರೀಕ್ಷಿಸುವ ಒಂದು ಪದಕ ಮೊಹಮದ್ ಶಾಹಿದ್ ಅವರಿಗೆ ಶ್ರದ್ಧಾಂಜಲಿಯಾಗಲಿ ಎಂದು ಹಾರೈಸೋಣ.

mohammed saahid

Comments are closed.