Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೇವಲ 56 ಇಂಚಿನ ಎದೆಯಲ್ಲ, ಎದೆಗಾರಿಕೆಯೂ ಇದೆ

ಕೇವಲ 56 ಇಂಚಿನ ಎದೆಯಲ್ಲ, ಎದೆಗಾರಿಕೆಯೂ ಇದೆ

ಕೇವಲ 56 ಇಂಚಿನ ಎದೆಯಲ್ಲ, ಎದೆಗಾರಿಕೆಯೂ ಇದೆ

ಆ ಭರವಸೆಗೆ ಈಗ ಮೂರು ವರ್ಷಗಳು.
ದೇಶಕ್ಕೆ ದೇಶವೇ ಆಶಾಭಾವನೆಯಿಂದ ಕಾದು, ಸುನಾಮಿಯಂಥಾ ಅಲೆಯೊಂದು ಎದ್ದು, ಎದುರಾಳಿಗಳ ಹಂಗಿಸುವ ಮಾತುಗಳೆಲ್ಲವನ್ನೂ ಕೇಳಿಯೂ ಸಿಕ್ಕ ಮಹಾವಿಜಯಕ್ಕೆ ಮೂರು ವರ್ಷಗಳಾಗಿ ಬಿಟ್ಟಿತೇ ಎಂದು ಅಚ್ಚರಿಪಡುವಷ್ಟು ಆ ವಿಜಯ ಇಂದಿಗೂ ಹಚ್ಚ ಹಸಿರು. ದೇಶವನ್ನೇ ತುದಿಗಾಲಲ್ಲಿ ನಿಲ್ಲಿಸಿದ ಆ ದಿನ, ಮಹಾನಿರೀಕ್ಷೆಗಳನ್ನು ಈಡೇರಿಸುವ ಭಾರೀ ಹೊರೆ ಹೊತ್ತ ಆ ವಿಜಯ, ಕೋಟ್ಯಂತರ ಜನರ ಎದೆಯಲ್ಲಿ ಹುರುಪು ಹುಟ್ಟಿಸಿದ ಆ ವಿಜಯ, ಹುರುಪಿನ ಕೆಲಸಕ್ಕೆ, ಇದುವರೆಗಿನ ಚುನಾವಣೆಯಲ್ಲಿ ಕಾಣದ ಚೈತನ್ಯಕ್ಕೆ ಸಾಕ್ಷಿಯಾದ ಆ ವಿಜಯಕ್ಕೆ ನೂರಾರು ವ್ಯಾಖ್ಯಾನಗಳನ್ನು ಕೊಡುತ್ತಾ ಹೋಗಬಹುದು.
ಪಂಡಿತರಿಗೂ, ವಿಶ್ಲೇಷಕರಿಗೂ, ಪಾಮರರಿಗೂ, ದೇಶದ ಎಲ್ಲರಿಗೂ ವಿಸ್ಮಯಕಾರಿಯಾದ ಆ ಅಭೂತಪೂರ್ವ ವಿಜಯದ ಸುದ್ದಿಯನ್ನು ಆಸ್ವಾದಿಸುವ ಭರದಲ್ಲಿ ದೇಶ ಕೆಲವು ದಿನಗಳು ಮೂಕವಾಯಿತು. ಎಲ್ಲಿಯವರೆಗೆ ಎಂದರೆ ನರೇಂದ್ರ ಮೋದಿಯವರು ದೇವಸ್ಥಾಾನದ ಪೌಳಿಗೆ ಕಾಲಿಡುವಂತೆ ಸಂಸತ್ ಭವನದ ಮೆಟ್ಟಿಲಿಗೆ ಹಣೆಯೊತ್ತಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಘೋಷಿಸುವವರೆಗೂ ದೇಶವಾಸಿಗಳು ಆ ವಿಜಯದ ಅಬ್ಬರದ ಅರ್ಥವನ್ನು ತಿಳಿಯದಾದರು. ವಿಕಾಸದ ಘೋಷಮಂತ್ರವಾಗಿ ಮೊಳಗಿದ ಪ್ರಧಾನಿಗಳ ಆ ವಾಕ್ಯ ದೇಶಕ್ಕೆ ಭವಿಷ್ಯವಾಣಿಯಂತೆ ಕೇಳಿತು.
ಅದೇ ಮೊದಲು. ಮುಂದೆ ಆ ಘೋಷ ಮೂಲೆಮೂಲೆಗಳಲ್ಲಿ ಮೊಳಗಿತು. ಅಲೆಅಲೆಯಾಗಿ ತೇಲಿತು. ಆ ಅಲೆಯಲ್ಲಿ ದೇಶವೇ ತೇಲಿತು. ವಿಜಯಕ್ಕೆ ಎಷ್ಟೊಂದು ವ್ಯಾಖ್ಯಾನಗಳೋ ಆ ವಿಜಯವನ್ನು ಕಾಪಿಟ್ಟುಕೊಳ್ಳುವ ಶಕ್ತಿಗೂ ಅಷ್ಟೇ ವ್ಯಾಖ್ಯಾನಗಳು. ವಿಜಯ ಎಂದರೆ ಹಾಗೆ. ಏಕೆಂದರೆ ಅದನ್ನು ಪಡೆಯುವುದು ಅಷ್ಟೊಂದು ಸುಲಭವಲ್ಲ. ಪಡೆದ ವಿಜಯವನ್ನು ಉಳಿಸಿಕೊಳ್ಳುವುದೂ ಅಷ್ಟೊಂದು ಸುಲಭದ ಮಾತಲ್ಲ. ಈ ಮೂರು ವರ್ಷಗಳಲ್ಲಿ ಅಂದಿನ ವಿಜಯ ಅದೇ ತಾಜಾತನದಲ್ಲಿರುವುದು ಆ ವಿಜಯದ ಛಾಯೆ ಇಂದಿಗೂ ಉಳಿದಿರುವುದಕ್ಕೆ, ಅಂದಿನ ನಿರೀಕ್ಷೆಗಳು ಈಡೇರುತ್ತಿರುವುದಕ್ಕೆ, ಅದೇ ಚೈತನ್ಯ ಇನ್ನೂ ಉಳಿದಿರುವುದಕ್ಕೆ ಸಾಕ್ಷಿಯಲ್ಲವೇ?
ಅಂದು ಕೆಲವರು ಆರ್‌ಐಪಿ ಭಾರತ (ಭಾರತ ದಿವಂಗತ) ಎಂದರು, ಕೆಲವರು ಭಾರತದ ದುರದೃಷ್ಟ ಎಂದರು, ಇನ್ನು ಕೆಲವರು ಭಾರತದ ಕೆಟ್ಟ ದಿನಗಳು ಆರಂಭವಾದವು ಎಂದು ದಾರ್ಶನಿಕರಂತೆ ನುಡಿದರು. ಆದರೆ ಮೂರೇ ಮೂರು ವರ್ಷಗಳಲ್ಲಿ ಏನೇನಾಗಿ ಹೋಯಿತು ಎಂದು ನೋಡಿದರೆ ಅಚ್ಚರಿಯಾಗದಿರದು. ಇಂದು ದೇಶ ಮಾತ್ರವಲ್ಲ, ವಿಶ್ವವೇ ಬೆರಗಾಗುವಂತೆ ಭಾರತ ಎದ್ದು ನಿಂತಿದೆ. ಸಾವಿರದೊಂಬೈನೂರ ನಲ್ವತ್ತೇಳರಿಂದಲೂ ಭಾರತ ಒಂದು ಬಡದೇಶವೆಂತಲೋ, ಭಾರತ ಅಭಿವೃದ್ಧಿಶೀಲ ದೇಶವೆಂದೋ ಹೇಳುತ್ತಾ ಬಂದ ವಾಕ್ಯಗಳು ಕಳೆದ ಮೂರು ವರ್ಷಗಳಿಂದ ಬಲ ಕಳೆದುಕೊಂಡಂತೆ ಬಿದ್ದಿವೆ. ಏಕೆಂದರೆ ನರೇಂದ್ರ ಮೋದಿ ಆಡಳಿತದ ಈ ಅವಧಿಯಲ್ಲಿ ಎಲ್ಲವೂ ದೇಶದ ಸ್ವಾಭಿಮಾನ ಮತ್ತು ಶಕ್ತಿಪ್ರದರ್ಶನದ ಕೆಲಸಗಳೇ ನಡೆದಿವೆ.
ಈ ಮೊದಲು ಪ್ರಜ್ಞಾವಂತರು ಅಧಿಕಾರಿಗಳಿಗೋ, ಮಾಧ್ಯಮಗಳಿಗೋ, ಪ್ರಾಮಾಣಿಕ ರಾಜಕಾರಣಿಗಳಿಗೋ ಅಹವಾಲುಗಳನ್ನು ಸಲ್ಲಿಸುತ್ತಿದ್ದರೆ ಅಥವಾ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರೆ ಇಂದು ಜನರು ನೇರವಾಗಿ ಪ್ರಧಾನಮಂತ್ರಿಗಳಿಗೇ ಮನವಿ ಸಲ್ಲಿಸುವಷ್ಟು, ನೇರ ಪ್ರಧಾನಮಂತ್ರಿಗಳಿಂದಲೇ ಉತ್ತರ ಪಡೆಯುವಷ್ಟು ದೇಶ ಮುಂದುವರಿದಿದೆ. ಅಂದರೆ ಸಾಮಾನ್ಯ ನಾಗರಿಕನಿಗೂ ಆಡಳಿತದ ಸುಲಲಿತತೆ ಅನುಭವಕ್ಕೆ ಬಂದಿದೆ. ಇಂದು ಪ್ರತಿಯೊಬ್ಬ ಬಡವನೂ ಬ್ಯಾಂಕ್ ಖಾತೆ ಹೊಂದಿದ್ದಾನೆ. ಹೆಣ್ಣು ಮಕ್ಕಳ ಬದುಕು ಭದ್ರವಾಗಿದೆ. ಅಂದರೆ ಮೂರು ವರ್ಷಗಳ ಆಡಳಿತ ಜನರ ನಿರೀಕ್ಷೆಗಳನ್ನು ಈಡೇರಿಸುತ್ತಿದೆ ಎಂದರ್ಥವಲ್ಲವೇ? ಅಚ್ಛೇದಿನ್ ಬರುತ್ತಿದೆ ಎಂದರ್ಥವಲ್ಲವೇ? ಮೂರು ವರ್ಷಗಳ ಹಿಂದಿನ ಆಡಳಿತಗಾರರನ್ನೊಮ್ಮೆ ನೆನಪಿಸಿಕೊಳ್ಳಿ. ದೇಶದ ಯಾವ ಭಾಗದಲ್ಲಿ ತಾನೇ ಉತ್ತಮ ಸಂಗತಿ ಕಾಣುತ್ತಿತ್ತು? ದಿನಬೆಳಗಾದರೆ ಹಗರಣಗಳು, ಗಗನಕ್ಕೇರುತ್ತಿದ್ದ ಅಗತ್ಯವಸ್ತುಗಳ ಬೆಲೆ, ವಿದೇಶಗಳಲ್ಲಿ ಲೆಕ್ಕಕ್ಕಿಲ್ಲದಂತಿದ್ದ ದೇಶದ ಗೌರವ ಬಿಟ್ಟರೆ ಇನ್ನೇನಿತ್ತು? ಕಳೆದ ಏಳು ದಶಕಗಳಲ್ಲಿ ಆಗದ ಕೆಲಸಗಳನ್ನು ಈ ಮೂರು ವರ್ಷಗಳು ಈಡೇರಿಸಿವೆ ಎಂದರೆ ಅದು ಅಚ್ಛೇದಿನ್ ಅಲ್ಲವೇ? ಯಾವ ಪ್ರಧಾನಮಂತ್ರಿ ಪ್ರಮಾಣವಚನ ಸ್ವೀಕರಿಸಿ ತಾನೊಬ್ಬ ದೇಶದ ನೌಕರ ಎಂದಿದ್ದನ್ನು ನಾವು ನೋಡಿದ್ದೇವೆ? ನರೇಂದ್ರ ಮೋದಿಯವರ ಸ್ಥಾನದಲ್ಲಿರುವ ಯಾವ ಪ್ರಧಾನಮಂತ್ರಿ ತಾನೇ ‘ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎನ್ನಲು ಸಾಧ್ಯ?
ಸುತ್ತಲೂ ಟೀಕಾಕಾರರ ನಡುವೆಯೇ ಇದ್ದ ಯಾವ ಸಾಮಾನ್ಯ ಮನುಷ್ಯನಿಗೆ ಇಂಥ ಮಾತಾಡಲು ಸಾಧ್ಯ? ಈ ಮೂರು ವರ್ಷಗಳಲ್ಲಿ ತೆಗಳುವ ಯಾವ ಮಾತನ್ನೂ ಟೀಕಾಕಾರರು ಮೋದಿಯವರ ಮೇಲೆ ಪ್ರಯೋಗಿಸದೆ ಬಿಡಲಿಲ್ಲ. ವಿದೇಶ ಪ್ರವಾಸ ಕೈಗೊಂಡಾಗ ಸೂಟುಬೂಟಿನ ಸರಕಾರ ಎಂದು ನಿಂದಿಸಿದರು. ಬಟ್ಟೆಯ ಬೆಲೆಯ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಮೋದಿಯವರು ವಿದೇಶ ಪ್ರವಾಸವನ್ನು ರಜೆ ಕಳೆಯಲು ಮಾಡಲಿಲ್ಲ ಎಂಬುದು ಸಮಸ್ತ ದೇಶಕ್ಕೆ ಗೊತ್ತಾಗಿತ್ತು. ಏಕೆಂದರೆ ಅದರ ಫಲವನ್ನು ದೇಶ ಉಣ್ಣುತ್ತಿತ್ತು. ವಿಶ್ವದ ಆರು ಖಂಡಗಳನ್ನು ಸುತ್ತಿ, 57 ದೇಶಗಳಿಗೆ ಭೇಟಿ ಕೊಟ್ಟ ಪ್ರಧಾನಿಗಳ ವಿದೇಶಿ ಪ್ರವಾಸ ಎಂದಾದರೂ ವ್ಯರ್ಥವಾಗಿದ್ದಿದೆಯೇ? ಅಮೆರಿಕದ ಮೇಡಿಸನ್ ಚೌಕದ ಅವರ ಕಾರ್ಯಕ್ರಮವನ್ನು ಅಮೆರಿಕವಷ್ಟೆ ಅಲ್ಲ, ವಿಶ್ವವೇ ಅಚ್ಚರಿಯಿಂದ ಗಮನಿಸಿತು.
ಅದು ಎಷ್ಟರಮಟ್ಟಿಗೆ ಪ್ರಚಾರ ಪಡೆಯಿತೆಂದರೆ ಮೆಡಿಸನ್ ಸ್ಕ್ವಯರ್ ಮರುದಿನ ಪತ್ರಿಕೆಗಳು ಮೋದಿ ಸ್ಕ್ವಯರ್ ಎಂದು ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದವು. ವ್ಯಾಟಿಕನ್ನಿನ ಪೋಪರಿಗಷ್ಟೇ ಸಿಗುವ ಸ್ವಾಗತವನ್ನು ಅವರು ಅಮೆರಿಕ ಮತ್ತು ಯುರೋಪಿನ ದೇಶಗಳಲ್ಲಿ ಪಡೆದರು. ಹೋದಲ್ಲೆಲ್ಲಾ ವಿದೇಶಾಂಗ ವ್ಯವಹಾರದ ಚರ್ಚೆಗಳು, ವ್ಯಾಪಾರ ವಹಿವಾಟು, ರಕ್ಷಣಾ ಒಪ್ಪಂದದ ಜತೆಗೆ ಭಾರತೀಯ ಮನಸ್ಸೊಂದು ತವರು ನೆಲದಿಂದ ದೂರವಿದ್ದು ತಾಯ್ನೆಲಕ್ಕಾಗಿ ತುಡಿಯುತ್ತಿದೆ ಎಂಬುದನ್ನು ಮೋದಿಯವರು ಮರೆಯಲಿಲ್ಲ. ಹೋದಲ್ಲೆಲ್ಲಾ ಭಾರತೀಯರ ದಂಡು ಮೋದಿಯವರ ಸುತ್ತ ನೆರೆಯುತ್ತಿದ್ದುದನ್ನು ಭಾರತೀಯ ಈ ಹಿಂದೆ ಕಂಡದ್ಯಾವಾಗ? ಅಷ್ಟೇ ಏಕೆ ಯಾವ ದೇಶದ ಮುಖ್ಯಸ್ಥನಿಗೆ ಈ ಗೌರವ ಸಿಕ್ಕೀತು? ಗೌರವವಷ್ಟೇ ಅಲ್ಲ, ಭಾರತಕ್ಕೆ ಇದರಿಂದ ಬಂಡವಾಳವೂ ಹರಿದುಬಂತು. ಈ ರೀತಿ ದೂರದಲ್ಲಿದ್ದವರನ್ನು ಹತ್ತಿರಕ್ಕೆ ಕರೆತಂದ ಸಾಧನೆಯೇನು ಸಾಮಾನ್ಯವೇ? ಕೊಲ್ಲಿ ದೇಶಗಳ ಜನರಿಂದ ವಹಿವಾಟು ಕುದುರಿಸಿದ ರಾಜತಾಂತ್ರಿಕರು ಜಗತ್ತಿನೆಲ್ಲೆಡೆ ಕಾಣಬಹುದು. ಆದರೆ ಅವರ ಹೃದಯ ಗೆದ್ದ ಮತ್ತೊಬ್ಬ ರಾಜತಾಂತ್ರಿಕ ಇದ್ದರೆ ಎಲ್ಲಾದರೂ ತೋರಿಸಿಕೊಡಿ.
ಖಂಡಾಂತರಗಳ ಮಾತೇಕೆ? ಮೋದಿ ಪ್ರಧಾನಮಂತ್ರಿಯಾಗುವವರೆಗೂ ಭಾರತದ ನೆರೆಕರೆಯೇ ಸರಿ ಇರಲಿಲ್ಲ. ಪಕ್ಕದ ಶ್ರೀಲಂಕಾವೂ ಪಾಕಿಸ್ತಾನದ ಬೆನ್ನಹಿಂದೆ ನಿಂತು ಗುಡುಗುತಿತ್ತು. ನೇಪಾಳವೂ ಬಗಲಿನ ಕೆಂಡವಾಗುವತ್ತ ಸಾಗಿತ್ತು. ಬಾಂಗ್ಲಾ ಯಾರದ್ದೋ ಕುಮ್ಮಕ್ಕಿನಿಂದ ಬಡಬಡಿಸುತ್ತಿತ್ತು. ಆದರೆ ಇವೆಲ್ಲವೂ ಇನ್ನು ಮುಂದೆ ನಡೆಯಲಾರದು ಎಂಬುದು ಮೋದಿಯವರು ಪ್ರಮಾಣ ಸ್ವೀಕರಿಸಿದ ದಿನದಂದೇ ಜಗತ್ತಿಗೇ ತಿಳಿದುಬಿಟ್ಟಿತು. ಚಕ್ರವರ್ತಿಯ ಪಟ್ಟಾಭಿಷೇಕಕ್ಕೆ ಕಪ್ಪಕಾಣಿಕೆಯೊಡನೆ ಆಗಮಿಸಿದ ಸಾಮಂತ ಅರಸರಂತೆ ನೆರೆಕರೆಯ ಆಡಳಿತ ಮುಖ್ಯಸ್ಥರೆಲ್ಲರೂ ಆಗಮಿಸಿದ್ದರು! ಇದು 56 ಇಂಚಿನ ಎದೆಯ ತಾಕತ್ತು! ಆದರೆ ಪ್ರಧಾನಿಗಳು ನೆರೆಕರೆಯನ್ನೇನೂ ಬಡಿದು ಬಗಲಲ್ಲಿ ಇಟ್ಟುಕೊಳ್ಳಲಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯವನ್ನು ನೆರೆಕರೆಗೂ ಹಬ್ಬಿಸಿದರು. ನೇಪಾಳ, ಭೂತಾನ್, ಶ್ರೀಲಂಕಾ, ಬಾಂಗ್ಲಾಗಳಿಗೆ ಭೇಟಿ ಕೊಟ್ಟರು. ಹೋದಲ್ಲೆಲ್ಲಾ ಜನರ ಮನಸನ್ನು ಗೆದ್ದರು. ನೆರೆ ದೇಶಗಳಿಗೆ ಹೋದಾಗಲೆಲ್ಲಾ ಏನಾದರೊಂದು ಉಡುಗೊರೆ ನೀಡಿ ಬಂದರು. ಪರಿಣಾಮ ಇನ್ನೇನು ಸಂಬಂಧ ಸರಿ ಹೋಗುವ ಲಕ್ಷಣವಿಲ್ಲ ಎಂಬಂತಿದ್ದ ನೇಪಾಳದಲ್ಲಿ ಭೀಕರ ಭೂಕಂಪವಾದಾಗ ಹಿರಿಯಣ್ಣನಂತೆ ನೇಪಾಳದ ಸುಧಾರಣೆಗೆ ನಿಂತರು. ಉಪಗ್ರಹ ನೆರವು, ಮಿಲಿಟರಿ ನೆರವು ನೀಡಿದರು. ದೇಶದ ಎರಡನೆ ಶತ್ರು ಚೀನಾ ಎಂದೇ ಬಿಂಬಿತವಾಗಿದ್ದ ಹೊತ್ತಲ್ಲಿ ಚೀನಾಕ್ಕೆ ಹೋಗಿ ಬಂದರು, ಚೀನಾ ಅಧ್ಯಕ್ಷರನ್ನು ಗಾಂಧಿ ನಾಡಿನಲ್ಲಿ ಸ್ವಾಗತಿಸಿ ಭಾರತವನ್ನು ಪರಿಚಯಿಸಿದರು. ಜಗತ್ತು ಇದನ್ನೂ ಕೂಡಾ ಅಚ್ಚರಿಯಿಂದ ನೋಡಿತು. ವಿದೇಶಾಂಗ ವಿಶ್ಲೇಷಕರು ಚೀನಾ ಪ್ರವಾಸವನ್ನೂ ಟೀಕಿಸಿದಾಗ, ನೇರ ಜಪಾನಿಗೆ ತೆರಳಿದರು. ಮೋದಿಯವರ ಈ ನಡೆ ಚೀನಾಕ್ಕೂ, ವಿಶ್ಲೇಷಕರಿಗೂ ಇಂದಿಗೂ ಅರ್ಥವಾಗಲಿಲ್ಲ. 56 ಇಂಚಿನ ಎದೆಯ ತಾಕತ್ತೆಂದರೆ ಇದು.
ಮೋದಿಯವರ ಯಾವುದೇ ನಡೆಯಲ್ಲಿ ಹೊರನೋಟಕ್ಕೆ ಕಂಡಷ್ಟೇ ಸಂಗತಿಗಳಿರುವುದಿಲ್ಲ. ಅವರ ಎಲ್ಲಾ ನಡೆಗಳಿಗೆ ಅನೇಕ ಆಯಾಮಗಳಿರುತ್ತವೆ. ಭಾರತ ಕಂಡ ಸುವರ್ಣಯುಗಗಳ ಕಾಲದಲ್ಲೆಲ್ಲಾ ಇದ್ದವರು ಮೋದಿಯಂಥಾ ವ್ಯಕ್ತಿತ್ವದ ರಾಜರೇ ಮತ್ತು ಅಂಥದ್ದೇ ವ್ಯಕ್ತಿತ್ವದ ಮುಖಂಡರೇ. ದಕ್ಷಿಣದ ರಾಜೇಂದ್ರ ಚೋಳನೂ ಅಂಥವನೇ, ಕೃಷ್ಣದೇವರಾಯನೂ ಆಂಥವನೇ, ಉತ್ತರದ ಚಂದ್ರಗುಪ್ತ ಮೌರ್ಯನೂ ಅಂಥವನೇ ಮತ್ತು ಶಿವಾಜಿ-ಬಾಜೀರಾಯರೂ ಅಂಥವರೇ! ಹಾಗಾಗಿ ಅವರೆಲ್ಲರನ್ನೂ ಕ್ಲುಪ್ತ ಅವಧಿಯಲ್ಲಿ ನಾಯಕ ಎಂದು ಸಮಾಜ ಒಪ್ಪಿಕೊಂಡಿತ್ತು. ಮೋದಿಯವರ ಎಲ್ಲ ನಡೆಗಳನ್ನು ನೋಡಿದರೆ ಇತಿಹಾಸದ ಹೋಲಿಕೆಗಳು ಕಂಡು ಬರುತ್ತವೆ. ಕೊಲ್ಲಿ ರಾಷ್ಟ್ರದಲ್ಲಿ ವ್ಯಾಪಾರ ಕುದುರಿಸಲು ತೆರಳಿ ದೇವಸ್ಥಾನ ನಿರ್ಮಾಣಕ್ಕೆ ಒಪ್ಪಿಗೆ ಪಡೆದಿದ್ದು, ಬಾಂಗ್ಲಾದಲ್ಲಿ ಸೌಹಾರ್ದದ ಹೆಸರಿನಲ್ಲಿ ತೆರಳಿ ಅರೆ ಶತಮಾನದ ಗಡಿ ವಿವಾದವನ್ನು ಪರಿಹರಿಸಿಕೊಂಡಿದ್ದು, ಶ್ರೀಲಂಕಾದ ಬೌದ್ಧ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶತಮಾನಗಳಿಂದ ಬೇರೂರಿದ್ದ ಭಾರತ ವಿರೋಧಿ ಭಾವನೆಗಳನ್ನು ತೊಡೆದು ಹಾಕಿದ್ದು ಎಲ್ಲವೂ ಒಬ್ಬ ಮಹಾ ವ್ಯಕ್ತಿತ್ವವನ್ನು ಮತ್ತೆ ನೋಡಿದಂತೆನಿಸಿದರೆ ಅತಿ ಎನಿಸುವುದಿಲ್ಲ.
ಪಾಕಿಸ್ತಾನ ನಿರ್ಮಾಣವಾದ ಮೇಲಿಂದ ಶಾಂತಿ-ಸೌಹಾರ್ದದ ಹೆಸರಿನಲ್ಲಿ ನಡೆದ ಪ್ರಹಸನಗಳೇನು ಕಡಿಮೆ ಇದ್ದವು. ಅವೆಷ್ಟೋ ಶೃಂಗಸಭೆಗಳು, ದ್ವಿಪಕ್ಷೀಯ ಮಾತುಕತೆಗಳು, ಒಪ್ಪಂದಗಳು ನಡೆಯಲಿಲ್ಲ ಹೇಳಿ. ಆದರೆ ಮೋದಿ ಪಾಕ್ ಪ್ರಧಾನಿಗಳ ಮಗಳ ಮದುವೆಯ ನೆಪದಲ್ಲಿ ಪಾಕಿಸ್ತಾನಕ್ಕೆ ಹೋದರಲ್ಲಾ, ಅದೇನು ಸುಖಾಸುಮ್ಮನೆಯೇ? ಈ ಒಂದು ಭೇಟಿಯಿಂದ ಹಳೆಯ ಅವೆಷ್ಟೋ ಒಣ ಚರ್ಚೆಗಳಿಗೆ ಏಕಾಏಕಿ ವಿರಾಮ ಬೀಳುವ ವಾತಾವರಣವನ್ನು ನಿರ್ಮಿಸಿಬಿಟ್ಟರು. ಶತ್ರು ದೇಶವನ್ನು ಆಹ್ವಾನಿಸುವುದು ಧೈರ್ಯವಂತನ ಲಕ್ಷಣ. ಅಂಥ ಧೈರ್ಯಶಾಲಿಗಳನ್ನು ಪ್ರಪಂಚ, ಯುದ್ಧೋತ್ಸಾಹಿ, ಸರ್ವಾಧಿಕಾರಿ, ನಿರಂಕುಶ ಎಂದೆಲ್ಲಾ ಕರೆದಿದೆ. ಆದರೆ ಮೋದಿಯವರು ಎಂದಿಗೂ ಅಂಥಾ ನಡೆಯನ್ನು ಅನುಸರಿಸಲಿಲ್ಲ. ನೇರವಾಗಿ ಶತ್ರುದೇಶದ ಒಳಹೊಕ್ಕು ಬಂದರು. ಒಂದು ಸಂದೇಶವನ್ನು ಪಾಕಿಸ್ತಾನಕ್ಕಲ್ಲ, ಅದರ ಹಿಂದಿರುವ ಶಕ್ತಿಗಳಿಗೂ ರವಾನಿಸಿ ಬಂದರು. ಹಾಗಾಗಿ ನರೇಂದ್ರ ಮೋದಿಯವರನ್ನು ಧೈರ್ಯಶಾಲಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಮಹಾಪರಾಕ್ರಮಿ ಎನ್ನಲೇಬೇಕು. 56 ಇಂಚಿನ ಎದೆಗಿಂತಲೂ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು.
ಅದಕ್ಕೆ ಎದೆಗಾರಿಕೆ ಅಲ್ಲದೆ ಮತ್ಯಾವ ಪದವನ್ನೂ ಹೇಳಬೇಕೆನಿಸುವುದಿಲ್ಲ.  ಕಾಶ್ಮೀರದ ವಿಷಯದಲ್ಲಿ ವಿವಾದ ಮಾಡಿಕೊಂಡ ನಂತರ ಗಿಲ್ಗಿಟ್-ಬಾಲ್ಟಿಸ್ತಾನ್‌ಗಳ ಮಾತೆತ್ತಲೂ ಭಾರತ ಹಿಂಜರಿಯುತ್ತಿತ್ತು. ಆದರೆ ಗಿಲ್ಗಿಟ್-ಬಾಲ್ಟಿಸ್ತಾನ್‌ನಾಚೆ ಬಲೂಚಿಸ್ಥಾನ್ ಎಂದವರಿಗೆ ಎದೆಗಾರಿಕೆ ಎನ್ನದೆ ಇನ್ನೇನನ್ನಬೇಕು? ಯಾವ ಜಪಾನ್ ಎಂದರೆ ಚೀನಾದಂಥ ಚೀನಾ ಕಣ್ಣು ಕೆಂಪು ಮಾಡಿಕೊಳ್ಳುತ್ತದೋ ಅಂಥಾ ಜಪಾನಿನಲ್ಲಿ ನಿಂತು ಸಾಮ್ರಾಜ್ಯಶಾಹಿ ಧೋರಣೆ ಹೆಚ್ಚು ದಿನ ನಡೆಯುವುದಿಲ್ಲ ಎನ್ನುವುದು ಎದೆಗಾರಿಕೆಯಲ್ಲವೇ? ಸುಲಭಕ್ಕೆ ಒಂದು ಸೂಜಿ ರಫ್ತು ಮಾಡಲೂ ಹಿಂದೆ ಮುಂದೆ ನೋಡುವ ಜಪಾನಿನಂಥಾ ದೇಶದಿಂದ ಯುರೇನಿಯಂ ಅನ್ನು ಭಾರತಕ್ಕೆ ಕೊಡಲು ಒಪ್ಪಿಸಲು ಸಾಧ್ಯವಾಗಿದ್ದು ಕೇವಲ ಎದೆಗಾರಿಕೆಗೆ ಮಾತ್ರ. ತನ್ನ ಸಿದ್ಧಾಂತ, ತಾನು ನಂಬಿ ಬೆಳೆದಿದ್ದ ತತ್ತ್ವದಾಚೆಗೂ ನಿಂತು ಫಿಡಲ್ ಕ್ಯಾಸ್ಟ್ರೋ ಎಂಬ ಕಮ್ಯುನಿಸ್ಟನ ಬಗ್ಗೆ ಎರಡು ಒಳ್ಳೆಯ ಮಾತಾಡಲು ಬೇಕಾಗಿರುವುದು ಎದೆಗಾರಿಕೆಯಲ್ಲವೇ?
ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ನೋಟುಬಂಧಿ ಮಾಡಲು ಬೇಕಾಗಿರುವುದು ಎದೆಗಾರಿಕೆಯಲ್ಲವೇ? ಆಕಾರ ಪಟೇಲ್ ಎಂಬ ಚಿಂತಕರೇ ನೋಟ್‌ಬಂಧಿಯ ಬಗ್ಗೆ ‘ಇಂಥ ಒಂದು ಧೀಮಂತ ಯೋಜನೆಯನ್ನು ಜಗತ್ತಿನ ಯಾವ ನಾಯಕನೂ ಮಾಡಲು ಇಚ್ಛಿಸಲಾರ. ಅದನ್ನು ಯಶಸ್ವಿಯಾಗಿ ನಿಭಾಯಿಸಲು ಮೋದಿಯಂಥವರಿಗೆ ಮಾತ್ರ ಸಾಧ್ಯ’ ಎಂದು ಬರೆದರು. ರಾತ್ರಿ ಕಳೆಯುವುದರೊಳಗೆ ಜಾಲಿ ನೋಟಿನ ವಿರುದ್ಧ ಯುದ್ಧ ಹೂಡಿ ಶ್ರೀಮಂತರನ್ನೂ, ಬಡವರನ್ನೂ ಒಂದೇ ತೂಕಕ್ಕಿಟ್ಟ ಸಾಧನೆ ಮೋದಿಯವರಲ್ಲದೆ ಇನ್ನಾರಿಗೂ ಸಾಧ್ಯವಾಗಲಿಲ್ಲ. ಅಲ್ಲದೆ ಅಮಾನ್ಯೀಕರಣದ ಸಂದರ್ಭವಾದರೂ ಎಂಥದ್ದಿತ್ತು? ಒಂದೆಡೆ ನಿರಂತರ ಪ್ರವಾಸ, ನಾನಾ ಯೋಜನೆಗಳ ಕೆಲಸ, ಇನ್ನೊಂದೆಡೆ ಕಾಂಗ್ರೆಸ್ ಮುಕ್ತ ಭಾರತದ ಕನಸು. ಮುಂದೆ ಕೆಲವೇ ತಿಂಗಳುಗಳಲ್ಲಿ ದೊಡ್ಡ ರಾಜ್ಯಗಳ ಚುನಾವಣೆಗಳು ಎದುರಿತ್ತು. ಎಂಥಾ ರಾಜಕಾರಣಿಯಾದರೂ ಆ ಹೊತ್ತಲ್ಲಿ ನಾಜೂಕಿನ ನಡೆಯನ್ನು ಪಾಲಿಸುತ್ತಿದ್ದರು. ಆದರೆ ಮೋದಿಯವರಿಗೆ ದೇಶ ಮುಖ್ಯವಾಗಿತ್ತು. ಅಮಾನ್ಯೀಕರಣವಾಯಿತು.
ಜನ ನಮ್ಮ ಕಾಲಮಾನದಲ್ಲಿ ಇಂಥದ್ದೊಂದು ಜರುಗಿತಲ್ಲಾ ಎಂದು ಸಂತಸಪಟ್ಟರು. ಜೊತೆಜೊತೆಗೆ ಚುನಾವಣೆಗಳನ್ನೂ ಗೆದ್ದರು! ಇದುವರೆಗಿನ ಸಿದ್ಧ ಮಾದರಿಯ ಆಡಳಿತ ವಿಧಾನಗಳ ಕಾಲ ಮುಗಿಯಿತು ಎಂಬ ಸಂದೇಶವನ್ನು ದೇಶಕ್ಕೆ ಹೇಳಿದವರು ನಮ್ಮ ಪ್ರಧಾನಿಗಳು. ಇಲ್ಲದಿದ್ದರೆ ಉತ್ತರ ಪ್ರದೇಶದಲ್ಲಿ ವಿವಾದಾತ್ಮಕ ಎಂದು ಮಾಧ್ಯಮಗಳಿಂದ ಬಿಂಬಿತರಾಗಿದ್ದ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಏಕೆ ನೇಮಿಸುತ್ತಿದ್ದರು? ಮೋದಿ ಪ್ರಧಾನಮಂತ್ರಿಗಳಾದ ನಂತರ ಭಾಜಪದ ಮುಖ್ಯಮಂತ್ರಿಗಳೆಲ್ಲರೂ ಅಂಥವರೇ. ಜನರು ಕನಸಲ್ಲೂ ಊಹಿಸದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿಸಿ ಅದರಲ್ಲೂ ಯಶಸ್ಸು ಕಾಣಲು ಬರೀ ಎದೆಗಲ್ಲ, ಎದೆಗಾರಿಕೆಗೆ ಮಾತ್ರ ಸಾಧ್ಯ. ಬ್ರಿಕ್ಸ್ ಬ್ಯಾಂಕಿನಿಂದ ಮುದ್ರಾ ಬ್ಯಾಂಕಿನವರೆಗಿನ ಚಿಂತನೆ, ಸೈನಿಕರೊಂದಿಗೆ ಹಬ್ಬದಾಚರಣೆಯಿಂದ ದಕ್ಷಿಣ ಏಷ್ಯಾ ದೇಶಗಳಿಗೆ ಜಿ-ಸ್ಯಾಟ್ ಕೊಡುಗೆ, ರಾಫೆಲ್ ಖರೀದಿಯಿಂದ ತೊಡಗಿ ಸ್ವಚ್ಛ ಭಾರತ್ ಅಭಿಯಾನದವರೆಗೆ ಒಬ್ಬ ಮನುಷ್ಯ ಕೈಹಾಕಿ ಯಶಸ್ವಿಯಾಗುವುದೆಂದರೆ ಅದನ್ನು ಎದೆಗಾರಿಕೆ ಎನ್ನದೇ ಇನ್ನೇನನ್ನಬೇಕು?
ನಿಜ, ಇವೆಲ್ಲವನ್ನೂ ಎದೆಗಾರಿಕೆ ಅಲ್ಲ ಎಂದು ಟೀಕಿಸಬಹುದಿತ್ತು. ಏಕೆಂದರೆ ಈ ಮೂರು ವರ್ಷಗಳ ಹಿಂದೆ ಎಲ್ಲವೂ ಸರಿ ಇದ್ದಿದ್ದರೆ, ಹಿಂದಿನ ಪ್ರಧಾನಮಂತ್ರಿಗಳು ಸಾಕಷ್ಟು ವಿದೇಶ ಪ್ರವಾಸ ಮಾಡಿ ಅಡಿಗಲ್ಲು ಹಾಕಿದ್ದಿದ್ದರೆ, ಹಿಂದಿನ ಸರಕಾರ ನೆರೆಹೊರೆಯನ್ನು ಚೆನ್ನಾಗಿಟ್ಟುಕೊಂಡಿದ್ದರೆ, ಸೈನಿಕರ ಸ್ಥೈರ್ಯಕ್ಕೆ ಬೆಲೆ ನೀಡಿದ್ದರೆ, ಹಿಂದಿನ ಸರಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದರೆ, ಬಡವರನ್ನು ಬ್ಯಾಂಕಿನಿಂದ ದೂರ ಇಡದೇ ಇರುತ್ತಿದ್ದರೆ, ಡಿಜಿಟಲ್ ಜಗತ್ತಿನೊಡನೆ ಜನರನ್ನು ಬೆಸೆದಿದ್ದರೆ ಎದೆಗಾರಿಕೆ ಅತಿಶಯೋಕ್ತಿ ಎನ್ನಬಹುದಿತ್ತು. ಆದರೆ ಹಿಂದಿನ ಸರಕಾರ ಉದ್ಯೋಗ ಖಾತ್ರಿ ಹೆಸರಿನಲ್ಲಿ ಗ್ರಾಮೀಣ ಭಾರತೀಯನ ಕೈಗೆ ಗುದ್ದಲಿ ಹಿಡಿಸಿ ಮಣ್ಣಗೆಯಲು ಬಿಟ್ಟಿತ್ತು, ಪಟ್ಟಣವಾಸಿಯ ನಾಗರಿಕ ಪ್ರಜ್ಞೆಯನ್ನೇ ಕಸಿದುಕೊಂಡಿತ್ತು.  ಹಾಗಾಗಿ ಇದು ಬರೀ 56 ಇಂಚಿನ ಎದೆಯಲ್ಲ. ಅದರ ಜತೆಗೆ ಎದೆಗಾರಿಕೆಯೂ ಇದೆ.

Comments are closed.